Monday, October 1, 2012

ಹೊಡೀರಿ ಸಾರ್ ತಿರುಗಿ ತಿರುಗಿ

ನಾನು ಸಿನೆಮಾದ ಹಾಡಿನ ಕುರಿತು ಹೇಳ ಹೊರಟಿಲ್ಲ. ವೃತ್ತಿಜೀವನದ ಮೊದಲಲ್ಲಿ ಆಚರಿಸಿದ ಶಿಕ್ಷಕರ ದಿನಾಚರಣೆಯೊಂದರ ನೆನಪು ದಾಖಲಿಸಿರುವೆ. ಡಾ. ಸರ್ವಪಲ್ಲಿ ರಾಧಾಕೃಷ್ಣ ನಮ್ಮ ದೇಶದ ಹೆಮ್ಮೆಯ ವ್ಯಕ್ತಿಗಳಲ್ಲಿ ಒಬ್ಬರು. ಶಿಕ್ಷಕರಾಗಿ ವೃತ್ತಿಜೀವನ ಪ್ರಾರಂಭಿಸಿ ತಮ್ಮ ಅಧ್ಯಯನ, ಅಧ್ಯಾಪನಗಳಿಂದ ಹಂತ ಹಂತವಾಗಿ ಮೇಲೇರಿ ರಾಷ್ಟ್ರದ ಪ್ರಥಮಪ್ರಜೆಯಾದವರು. ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸುತ್ತಿರುವುದು `ಆಚಾರ್ಯ ದೇವೋಭವಎಂಬ ಭಾರತೀಯರ ನಂಬುಗೆಗೆ ಇಂಬುಕೊಡುವ ನಡೆ. ನಾನು ಕೆಲಸಕ್ಕೆ ಸೇರಿದ ಹೊಸತರಲ್ಲಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸುವ ಯೋಜನೆ ಹಾಕಿದರು. ಕಾರ್ಯಕ್ರಮದ ಅಂಗವಾಗಿ ಕ್ರೀಡಾಸ್ಪರ್ಧೆ ಏರ್ಪಡಿಸಲಾಗಿತ್ತು.
ನಮ್ಮ ಭಾಗದಲ್ಲಿ ಶಿಕ್ಷಕರಾದ ಕೂಡಲೆ ಹೊರಾಂಗಣದ ಆಟಗಳಿಗೆ ತಿಲಾಂಜಲಿ. ಬೆರಳೆಣಿಕೆಯಷ್ಟು ಜನ ಬ್ಯಾಟಮಿಂಟನ್‌ ಆಡುತ್ತಿದ್ದೆವು. ಆದರೆ ಬಹುಪಾಲು ಜನರು ಒಳಾಂಗಣ ಆಟಕ್ಕೆ ಹೆಸರುವಾಸಿ. ಶಿಕ್ಷಕರಾಗಿ ಕೆಲಸಕ್ಕೆ ಸೇರಿದಾಗಲೆ ಆಟದ ದೀಕ್ಷೆಯಾಗುತ್ತಿತ್ತು. ಮೊದಲ ತಿಂಗಳ ಸಂಬಳ ಬಂದ ನಂತರ ಸಂತೋಷ ಕೂಟ ನೀಡಲು ಒತ್ತಾಯ ಬರುತ್ತಿತ್ತು. ಮನೆಯ ಔತಣ ಬಯಸುತ್ತಿರಲಿಲ್ಲ. ಹೋಟೆಲಿನ ತಿಂಡಿ ಬೇಡವೆನಿಸುತಿತ್ತು. ರುಚಿಯ ಮಾತಲ್ಲ. ಮುಖ್ಯವಾದ ಕಾರಣ ಔತಣದ ಹೆಸರಲ್ಲಿ ದಿನಪೂರ್ತಿ ಹೊರಗೆ ಖುಷಿಯಾಗಿ ಕಾಲ ಕಳೆಯುವ ಹಂಬಲ. ಅದಕ್ಕೆಂದೆ ಶಾಲೆಯ ಎಲ್ಲರೂ ರಜೆಯ ದಿನ ಹತ್ತಿರದ ಯಾವುದಾದರೂ ಜಾಗಕ್ಕೆ ಬೆಳಗ್ಗೆಯೇ ಹೋಗಿ ಸಂಜೆಗೆ ಹಿಂತಿರುಗುತ್ತಿದ್ದೆವು. ಜತೆಯಲ್ಲಿ ಅಡುಗೆ ಪಾತ್ರೆಗಳು ಒಂದು ತಿಂಡಿ ಮತ್ತು ಊಟಕ್ಕೆ ಬೇಕಾದ ಸಕಲ ಸಾಮಗ್ರಿಗಳನ್ನು ಒಯ್ಯುತ್ತಿದ್ದರು. ಹೇಳಿ ಕೇಳಿ ನಾವಿದ್ದ ಊರು ಮಹಾನ್‌ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಸ್ಥಳದ ಒಂದು ಭಾಗ. ಹತ್ತಿರದಲ್ಲೆ ಹರಿಯುತ್ತಿದ್ದ ನದಿ. ಪುರಂದರ ಮಂಟಪ, ಮಾಲ್ಯವಂತ, ಶಂಭುನಾಥ, ನರಹರಿ ತೀರ್ಥ, ರಘುನಂದನ ತೀರ್ಥ ಬುಕ್ಕಸಾಗರದ ನಾಗಪ್ಪ, ಹೇಮಗಿರಿ ಹನುಮಪ್ಪ ಒಂದೆ ಎರಡೆ. ಹೋದ ತಕ್ಷಣ  ಮಂಡಾಳು ಡಾಣಿ ಮತ್ತು ಹಿಟ್ಟು ಹಚ್ಚಿದ ಮೆಣಸಿನಕಾಯಿ ಉಪಾಹಾರ. ನಂತರ ಕನಾತ ಹಾಸಿದರೆ ಮುಗಿಯಿತು ಅಡುಗೆ ಮುಗಿಯುವವರೆಗೆ ಆಟ. ಅಡುಗೆಗೆ ಭಟ್ಟರ ಜತೆ. ಜವಾನರು ಸಹಾಯ ಮಾಡುತ್ತಿದ್ದರು.
ಆಟದಲ್ಲಿ ಹಿರಿಯ ಕಿರಿಯ ಎಂಬ ಭೇದಭಾವ ಇರುತ್ತಿರಲಿಲ್ಲ. ನಿವೃತ್ತಿ ಅಂಚನ್ನು ತಲುಪಿದ ಮುಖ್ಯೋಪಾಧ್ಯಾಯರಿಂದ ಹಿಡಿದು ಕಳೆದ ತಿಂಗಳು ಕೆಲಸಕ್ಕೆ ವರದಿ ಮಾಡಿಕೊಂಡ ಹೊಸ ಹುಡುಗನ ತನಕ ಎಲ್ಲರದು ಒಂದು ಕೈ ಇರುತಿತ್ತು ಆಟದಲ್ಲಿ. ಮಾಸ್ತರು, ಗುಮಾಸ್ತ ಎಂಬ ವ್ಯತ್ಯಾಸವೆ ಇಲ್ಲ. ಆಟ ಬರದಿದ್ದವರು ಮಾತ್ರ ಆಟಗಾರರ ಹಿಂದೆ ಕುಳಿತು ಕಲಿಕೆಯ ಪ್ರಕ್ರಿಯೆಯಲ್ಲಿ ಮಗ್ನರಾಗಿರುವರು. ೨೮, ಅಂದರ್‌ ಬಾಹರ್‌, ಕತ್ತೆ ಆಟ ಹೀಗೆ ಹಲವು ವಿಧ ಇದ್ದರೂ ಸಾಮಾನ್ಯವಾಗಿ ಎಲ್ಲರೂ ರಮ್ಮಿ ಆಡುವವರೆ.
ಆದರೆ ಬಾಜಿ ಹಣ ಮಾತ್ರ ವಿಭಿನ್ನ. ಡ್ರಾಪಿಗೆ ಒಂದು, ಐದು, ಹತ್ತು ರೂಪಾಯಿ ಇತ್ಯಾದಿ. ದಿನವೆಲ್ಲ ಆಡಿದರೂ ಬಂದರೆ ಹತ್ತು ಹೋದರೆ ಇಪ್ಪತ್ತು ಎಂದು ಮಿತಿ ಹಾಕಿಕೊಂಡವರು ಅನೇಕ.  ಅದು ತಲುಪಿದ ತಕ್ಷಣ ಆಟ ಬಿಟ್ಟು ಏಳುತ್ತಿದ್ದರು. ಗೆದ್ದವರು ಎದ್ದರೆ ಆಟ ಮುಂದುವರಿಸಲು ಒತ್ತಾಯ ಇರುತಿತ್ತು. ಹಣ ಖಾಲಿಯಾದರೆ ಕೈಸಾಲ ಕೊಡುವವರೂ ಇದ್ದರು. ಅಲ್ಲಿ ಬಹಳ ನಿಯತ್ತು. ಇಸ್ಪೇಟ್‌ ಸಾಲ ಮಾತ್ರ ತಪ್ಪದೆ ತೀರಿಸುತ್ತಿದ್ದರು. ಅಡುಗೆ ಮುಗಿದು ಅದರ  ಘಮ ಘಮ ವಾಸನೆ ಮೂಗಿಗೆ ಬಡಿಯುತ್ತಿದ್ದಂತೆ ಇಸ್ಪೀಟು ಎಲೆ ಬಿಟ್ಟು ಊಟದ ಎಲೆ ಮುಂದೆ ಬರುತ್ತಿದರು. ಸಾವಧಾನವಾಗಿ ಊಟ ಮಾಡಿ ಮತ್ತೆ ಸಂಜೆ ತನಕ ಆಟವಾಡಿ ಮನೆಯ ಕಡೆ ಮುಖ ಮಾಡುತ್ತಿದ್ದರು. ಮೊದಲಲ್ಲಿ ನನಗೆ ಇಸ್ಪೇಟಿನ ೧ ರಿಂದ ೧೦ ಸಂಖ್ಯೆ ಬಿಟ್ಟು ಬೇರೇನೂ ತಿಳಿಯುತ್ತಿರಲಿಲ್ಲ. ಎಕ್ಕಾ, ನೈಲಾ ಎಂದಾಗ ಕಣ್ಣು ಕಣ್ಣು ಬಿಡುತ್ತಿದ್ದೆ. ನನ್ನನ್ನು ಎಳಸು ಎಂದು ಎಲ್ಲರೂ ಹಾಸ್ಯ ಮಾಡುತಿದ್ದರು. ಹತ್ತು ರೂಪಾಯಿ ಹೋಯಿತು, ಇಪ್ಪತ್ತು ರೂಪಾಯಿ ಸೋತೆ ಎಂದು ಹಲುಬಿದಾಗ ಹಾಗೆಲ್ಲ ಹೇಳಬಾರದು. ಅದು ನಷ್ಟವಲ್ಲ. ಹತ್ತು ರೂಪಾಯಿ ಅನುಭವ, ಇಪ್ಪತ್ತು ರೂಪಾಯಿ ಅನುಭವ ಬಂದಿದೆ ಎಂದು ತಿಳಿ ಹೇಳುತ್ತಿದ್ದರು. ಅದು ಏಕೋ ಆ ಕಾಲದಲ್ಲಿ ಕಾರ್ಡ್ಸ ಕಲ್ಚರ್ ಸಮಾಜದಲ್ಲಿ ಸರ್ವವ್ಯಾಪಿಯಾಗಿತ್ತು. ಬಹುಶಃ ಸಾಕಷ್ಟು ಸವಡು ಮತ್ತು ಬೇರೆ ಹವ್ಯಾಸ ಇಲ್ಲದೆ ಇರುವುದೆ ಕಾರಣವಿರಬಹುದು. ಊರ ಹಿರಿಯರೆ ಅದರಲ್ಲಿ ಸಕ್ರಿಯವಾಗಿ ಭಾಗಿಗಳಾಗಿದ್ದೂ ಉಂಟು. ಮದುವೆ ಮುಂಜಿ ಮೊದಲಾದ ಮಾರಂಭಗಳಲ್ಲಿ ಒಂದು ಪ್ರತ್ಯೇಕ ಕೋಣೆಯಲ್ಲಿ ಕುಳಿತು ಆಡುವವರು. ಮದುಮಕ್ಕಳಿಗೆ ಅಕ್ಷತೆ ಹಾಕಲೂ ಮಿಜಿ ಮಿಜಿ ಮಾಡುತ್ತಿದ್ದರು. ಇನ್ನು ದೀಪಾವಳಿ ಬಂದರಂತೂ ಮುಗಿಯಿತು. ಲಕ್ಷ್ಮಿ ಪೂಜೆಯ ರಾತ್ರಿ ಪ್ರಾರಂಭವಾದ ಆಟ ಬೆಳಗಾಗುವವರೆಗೂ ಎಡೆ ಬಿಡದೆ ಸಾಗುತಿತ್ತು. ಅದೂ ಅಂಗಡಿಯಲ್ಲಿ ಕೂಡಿಸಿ ಪೂಜೆ ಸಲ್ಲಿಸಿದ ಲಕ್ಷ್ಮಿಯ ಎದುರು. ಆ ದಿನ ಜಾಗರಣೆ ಮಾಡಬೇಕು. ಅಂದು ಗೆದ್ದರೆ ವರ್ಷ ಪೂರ್ತಿ ಲಾಭ ಎನ್ನುವ ನಂಬಿಕೆ ಬೇರೆ. ಹಿರಿಯರ ಹೆದರಿಕೆ ಇಲ್ಲದೆ ಕಾನೂನಿನ ಕಾಟವಿಲ್ಲದೆ ಡಾಣಾ ಡಂಗುರವಾಗಿ ಜೂಜಾಟ ಸಾಗುತಿತ್ತು. ಅಂಗಡಿ ಹಜಾರದಲ್ಲಿ ಮಾತ್ರವಲ್ಲ ಬೀದಿ ದೀಪದ ಕೆಳಗೂ ಆಡುವವರಿಗೆ ಕಡಿಮೆ ಇರಲಿಲ್ಲ.
ನನಗೆ ಆ ವಿದ್ಯೆ ಯಾಕೋ ಕರಗತವಾಗಲಿಲ್ಲ. ನೂರಾರು ಪುಟದ ಪುಸ್ತಕವನ್ನು ಒಂದೆ ಸಲ ಓದಿ ಮುಗಿಸುವ ನನಗೆ ಆ ೧೩ ಪುಟಗಳನ್ನು ಪೂರ್ಣ ಅರಿಯುವುದು ಹತ್ತು ವರ್ಷ ಶ್ರಮಿಸಿದರೂ ಸಾಧ್ಯವಾಗಲಿಲ್ಲ. ಪ್ರಾಂಶುಪಾಲನಾದ ಮೇಲೆ ಸೈದ್ಧಾಂತಿಕ ಕಾರಣ ನೀಡಿ  ಸಮಯ ಮತ್ತು ಹಣದ ಅಪವ್ಯಯ ತಪ್ಪಿಸಿಕೊಂಡೆ.
ಜೂಜಾಡುವುದ ಮನುಷ್ಯನ ಮೂಲಪ್ರವೃತ್ತಿಯಲ್ಲಿ ಒಂದು ಎನ್ನಬಹುದು. ಇದರಿಂದ ಕಷ್ಟ ನಷ್ಟ ಅನುಭವಿಸಿದವರು ಕಣ್ಣೆದುರೆ ಇದ್ದರೂ ಸಾಲ ಮಾಡಿ ಆಟವಾಡುವರು. ಗೆದ್ದರೆ ಅದೃಷ್ಟವಿದೆ ಎಂದು, ಸೋತವರು ಕಳೆದುಕೊಂಡಲ್ಲಿ ಹುಡುಕಬೇಕು ಎಂದೂ ಆಟ ಮುಂದುವರಿಸುವರು. ಒಂದೆ ಆಟ ಎಂದು ಕುಳಿತವರು ಗಂಟೆಗಟ್ಟಲೆ ಆಡುವರು. ಕೊನೆ ಆಟ ಎಂಬುದೆ ಇರದು. ತಿಂಗಳ ವೇತನದ ಪಾಸ್‌ ಪುಸ್ತಕ ಅಡ ಇಟ್ಟು ಸಾಲ ಪಡೆವವರೂ ಇದ್ದರು. ಸಾಧುಪ್ರಾಣಿ ಎನಿಸಿದ್ದ ಗೆಳೆಯನೊಬ್ಬ ಇದರಿಂದಲೆ ಮನೆ ಮಾರಿಕೊಂಡ. ಆದರೆ ಅದು ಏಕೋ ಈ ಆಟಕ್ಕೆ ಸಾಮಾಜಿಕ ಕಳಂಕ ಅಷ್ಟಾಗಿ ಅಂಟಿರಲಿಲ್ಲ. ಹೆಚ್ಚಿನ ಮೊತ್ತದ ಪಣ ಇಟ್ಟು ಆಡುವವನನ್ನು ಬಹಳ ಧೈರ್ಯವಂತ ಎಂದು ಮೆಚ್ಚುವವರೂ ಇದ್ದರು. ಅವರಿಗೆಲ್ಲ ಧರ್ಮರಾಯ, ನಳ ಮಹರಾಜರೆ ಆದರ್ಶ.
ಈಗ ನೆನಸಿಕೊಂಡರೆ ನಾಚಿಕೆ ಎನಿಸುವುದು. ಅಪ್ಪ ಅಮ್ಮಂದಿರ ಎದುರೆ, ಅತ್ತೆ ಮಾವನ ಮನೆಯಲ್ಲಿಯೇ ಎಗ್ಗಿಲ್ಲದೆ ಇಸ್ಪೀಟು ಅಡುತ್ತಿದ್ದೆವಲ್ಲ, ಎಂದು.
ಈ ಆಟ ವಿಶ್ವವ್ಯಾಪಿ. ಅಮೇರಿಕಾದಲ್ಲಿ ಲಾಸ್‌ವೆಗಾಸ್‌ನಲ್ಲಿನ ಕೆಜಿನೋಗಳು ಬಹು ಪ್ರಸಿದ್ದಿ. ಅದರ ಮಿನಿರೂಪವಾದ ಅಟ್ಲಾಂಟಿಕ್‌ ಸಿಟಿಗೆ ಹೋಗಿದ್ದೆವು. ಅದೂ ಕ್ಯಾಜಿನೋಗಳಿಗೆ ಪ್ರಖ್ಯಾತ. ಕಳೆದ ಸಲ ಚಂಡಮಾರುತ ಅಪ್ಪಳಿಸಿದಾಗ ಸಾಗರದ ಅಲೆಯ ಹೊಡೆತಕ್ಕೆ ನಲುಗಿದ ನಗರದಲ್ಲಿ ಮೂರು ದಿನ ಎಲ್ಲ ಬಂದ್‌. ದಿನ ಒಂದಕ್ಕೆ  ಬಿಲಿಯನ್‌ಗೂ ಹೆಚ್ಚು ನಷ್ಟ ಎಂದರೆ ಜೂಜಿನ ಮೋಜಿನ ಜನಪ್ರಿಯತೆ ತಿಳಿಯುವುದು. ಅಲ್ಲಿ ಹೋದಾಗ ಅಲ್ಲಿ ಕಾರ್ಡ ಗೇಮ್ಸನ ವಿಶ್ವರೂಪ ಕಂಡೆ. ಗಂಡು ಹೆಣ್ಣು ಭೇದವಿಲ್ಲದೆ ಆಡುವರು. ನನಗೂ ಅದೃಷ್ಟ ಪರೀಕ್ಷೆ ಮಾಡಿ ಎಂದು ಒತ್ತಾಯ ಮಾಡಿದರು. ಏಕೋ ಮನಸ್ಸುಬರಲಿಲ್ಲ.
ಈಗ ಅದೇಕೋ ಶಿಕ್ಷಕರಲ್ಲಿ ಅದರ ಹಾವಳಿ ಕಡಿಮೆಯಾಗಿದೆ. ನಗರಗಳಲ್ಲಿ ಪ್ರತಿಷ್ಠಿತ ಕ್ಲಬ್‌ಗಳಲ್ಲಿ ಬ್ರೀಫ್‌ ಕೇಸ್‌ ತುಂಬ ಹಣ ತಂದು ಆಡುವರಂತೆ. ಆದರೆ ಇದು ವಿರಳ. ಕಾರಣ ಸಮಯದ ಅಭಾವ ಮತ್ತು ಮನರಂಜನೆ ಮಾಧ್ಯಮಗಳ ಬಾಹುಳ್ಯ. ಎಲ್ಲಕ್ಕೂ ಮಿಗಿಲಾಗಿ ಈಗ ಸಾಮಾಜಿಕ ಸಭ್ಯತೆಯಾಗಿ ಗಂಡು ಹೆಣ್ಣು ಎನ್ನದೆ ಕುಡಿತವು ಒಪ್ಪಿತವಾಗಿರುವುದು ನೋಡಿದರೆ ಕಾಲದಿಂದ ಕಾಲಕ್ಕೆ ಬದಲಾಗುವ ಮೌಲ್ಯಗಳ ಬಗ್ಗೆ  ಬೆರಗು ಮೂಡುತ್ತದೆ. 
ಶಿಕ್ಷಕರ ದಿನಾಚರಣೆಯನ್ನು ತುಸು ಹೊಸ ಬಗೆಯಲ್ಲಿ ಮಾಡಬೇಕೆಂದು ಯೋಜಿಸಲಾಯಿತು. ಆ ದಿನ ಎಲ್ಲ ಶಿಕ್ಷಕರಿಗೆ ಆಟೋಟಗಳ ಸ್ಪರ್ಧೆಯ ಮಾತು ಬಂತು. ಆಟೋಟಗಳ ವಿಭಾಗಕ್ಕೆ ಬಂದರೆ, ನಮ್ಮ ದೈಹಿಕ ಶಿಕ್ಷಣ ಶಿಕ್ಷಕರು ಎಲ್ಲ ಬಹುಮಾನ ಬಾಚಿ ಬಿಡುವರು. ಅಲ್ಲದೆ ಐವತ್ತು ವರ್ಷದವರು ಇಪ್ಪತ್ತೈದರ ಯುವಕನ ಜತೆ ಆಡಲು ಸಾಧ್ಯವೇ ಎಂಬ ಪ್ರಶ್ನೆ ಬಂದಿತು. ಇನ್ನು ನಮ್ಮಲ್ಲಿದ್ದ ಇಬ್ಬರು ಮಹಿಳೆಯರಿಗೂ ಸಮಾನ ಅವಕಾಶ ನೀಡಬೇಕು. ಇವೆಲ್ಲ ಷರತ್ತು ಪೂರೈಸುವ ಆಟ ಯಾವುದು ಎಂಬ ಚಿಂತನೆ ಮೊದಲಾಯಿತು. ಅಳೆದೂ, ಸುರಿದು ಕೊನೆಗೆ ವಯಸ್ಸು ಮತ್ತು ಲಿಂಗದ ಹಂಗಿಲ್ಲದ ಮೂರು ಆಟಗಳನ್ನು ನಿಗದಿಯಾದವು. ಸಂಗೀತ ಕುರ್ಚಿ, ಕತ್ತೆ ಬಾಲ ಗುರುತಿಸುವುದು ಮತ್ತು ಮಡಿಕೆ ಒಡೆಯುವ ಸ್ಪರ್ಧೆ.
ಸಂಗೀತ ಕುರ್ಚಿ ಸಾಂಗವಾಗಿ ಸಾಗಿತು. ಭಾಗವಹಿಸುವವರಿಗಿಂತ ಒಂದು ಕುರ್ಚಿ ಕಡಿಮೆ ಇರುವುದು, ಸಂಗೀತ ನಿಂತರೆ ಮುಂದಿರುವ ಕುರ್ಚಿಯಲ್ಲಿ ಕುಳಿತುಕೊಳ್ಳಬೇಕು. ಯಾವುದೆ ಕಾರಣಕ್ಕೂ ಹಿಂದೆ ಹೋಗುವ ಹಾಗಿಲ್ಲ. ಅಲ್ಲಿ ನಮ್ಮ ಕ್ರಾಫ್ಟ್ ಮೇಷ್ಟ್ರು ಹೆಡ್ ಮೇಷ್ಟ್ರನ್ನು ಸೋಲಿಸಿ ಕೊನೆಗೂ ಕುರ್ಚಿಯಲ್ಲಿ ಕುಳಿತು ಗೆದ್ದರು.  
ಕತ್ತೆಗೆ ಬಾಲ ಬರೆಯುವ ಸ್ಪರ್ಧೆ ಬಹಳ ನಗು ಹುಟ್ಟಿಸಿತು. ಕಣ್ಣಿಗೆ ಬಟ್ಟೆ ಕಟ್ಟಿ ಕೈನಲ್ಲಿ ಬಣ್ಣದ ಸೀಮೆಸುಣ್ಣ ಕೈಗೆ ಕೊಟ್ಟು ಕಳಿಸುವರು. ಅಲ್ಲಿ ನಿಲ್ಲಿಸಿರುವ ಕಪ್ಪುಹಲಗೆಯ ಮೇಲೆ ಕತ್ತೆಯ ಚಿತ್ರ ಬರೆದಿರುವರು. ಬಾಲ ಮಾತ್ರ ಇರುವುದಿಲ್ಲ. ಬಾಲವನ್ನು ಸರಿಯಾದ ಜಾಗದಲ್ಲಿ ಬರೆದವರೆ ಬಹುಮಾನಿತರಾಗುವರು.
ಮೊದಲ ಸರದಿ ನಮ್ಮ ಮುಖ್ಯೋಪಾಧ್ಯಾಯರದು ಅವರು ಬಹಳ ಲೆಕ್ಕಾಚಾರದವರು. ಸರಸರನೆ ನಡೆದು ಸರಿಯಾಗಿ ಬೋರ್ಡಿನ ಅಂಚಿನಲ್ಲಿರುವ ಮಧ್ಯ ಭಾಗದಲ್ಲಿ ಬಾಲ ಬಿಡಿಸಿದರು. ಎಲ್ಲರೂ ಘೊಳ್ಳನೆ ನಕ್ಕರು. ಅವರು ಕಣ್ಣಿಗೆ ಕಟ್ಟಿದ ಬಟ್ಟೆ ಬಿಚ್ಚಿ ನೋಡಿದಾಗ ಅವರಿಗೂ ನಗೆ ತಡೆಯಲಾಗಲಿಲ್ಲ. ಅವರ ಅಂದಾಜು ಸರಿಯಾಗೆ ಇತ್ತು. ಆದರೆ ಎಡಬಲ ವ್ಯತ್ಯಾಸವಾಗಿತ್ತು ಅಷ್ಟೆ. ಕತ್ತೆಯ ಬಾಲವನ್ನು ಅದರ ಬಾಯಿಗೆ ಜೋಡಿಸಿದ್ದರು. ಮುಂದಿನ ಸರದಿ ವಿಜ್ಞಾನದ ಶಿಕ್ಷಕರದು. ಅವರು ನಿದಾನವಾಗಿ ಹೆಜ್ಜೆ ಇಡುತ್ತಾ ಸಾಗಿ ಬಾಲ ಬಿಡಿಸಿದರು. ಅವರು ಕಣ್ಣು ಬಿಚ್ಚಿ ನೋಡಿದಾಗ ಕತ್ತೆಗೆ ನಾಲಕ್ಕು ಕಾಲಿನ ಬದಲು ಐದು ಕಾಲು ಮೂಡಿತ್ತು. ಮೇಡಮ್ಮ ಅವರ ಸರದಿ ಬಂದಿತು. ಬೇಡ ಬೇಡ ಎನ್ನತ್ತಾ ಕಣ್ಣು ಕಟ್ಟಿಸಿಕೊಂಡರು. ಹೆಜ್ಜೆಯ ಮೆಲೆ ಹೆಜ್ಜೆ ಇಡುತ್ತಾಹೋಗಿ ಬಾಲ ಬಿಡಿಸಿದರು. ಅವರು ಸರಿಯಾಗಿ ಕತ್ತೆಯ ಬೆನ್ನ ಮಧ್ಯದಲ್ಲಿ ಬಾಲ ಮೂಡಿಸಿದ್ದರು. ಯಾರೂ ಸರಿಯಾಗಿ ಬಾಲ ಬರೆಯಲೇ ಇಲ್ಲ. ಕೊನೆಗೆ ಕತ್ತೆಯ ಹಿಂಭಾಗದ ಹತ್ತಿರ ಬರೆದವರನ್ನೆ ವಿಜಯಿ ಎಂದು ಘೋಷಿಸಲಾಯಿತು.
ಮಡಿಕೆ ಒಡೆಯುವ ಸ್ಪರ್ಧೆ ಮಾತ್ರ ಮಕ್ಕಳಲ್ಲೂ ಬಹಳ ಕುತೂಹಲ ಹುಟ್ಟಿಸಿತು. ನಿತ್ಯ ತಮ್ಮ ಮೇಲೆ ಬೆತ್ತ ಪ್ರಯೋಗಿಸುವ ಗುರುಗಳ ಗುರಿ ಹೇಗಿದೆ ಎಂದು ನೋಡುವ ಕುತೂಹಲ. ಆಟ ಬಹಳ ಸರಳ. ಒಂದು ವೃತ್ತವನ್ನು ಬರೆದು ಅದರ ನಡುವೆ ಮಡಕೆಯನ್ನು ಇಡುವರು. ಮಣ್ಣಿನ ಮಡಕೆ ಇಲ್ಲದಿದ್ರೆ ಬಕೆಟ್‌ ಅದರೂ ಸರಿ. ಅಲ್ಲಿಂದ ಹತ್ತು ಮೀಟರ್‌ ದೂರದಲ್ಲಿ ಕಣ್ಣೆಗೆ ಬಟ್ಟೆ ಕಟ್ಟಿ ಕೈನಲ್ಲಿ ಕೋಲು ಕೊಟ್ಟು ಬಿಡುವರು. ಅವರು ಹೋಗಿ ವೃತ್ತದ ಮಧ್ಯದ ಮಡಕೆಗೆ ಹೊಡೆಯಬೇಕು ಪ್ರತಿಯೊಬ್ಬರಿಗೂ ಮೂರು ಬಾರಿ ಕೋಲು ಬೀಸಲು ಅವಕಾಶ. ಇದು ಮಕ್ಕಳಿಗೆ ಬಹು ಖುಷಿ ಕೊಡುವ ಆಟ. ತಮ್ಮ ಮೇಷ್ಟ್ರು ಗೊತ್ತು ಗುರಿ ಇಲ್ಲದೆ ಕೋಲು ಬೀಸುವುದು ನೋಡಿ ನಕ್ಕಿದ್ದೆ ನಕ್ಕಿದ್ದು.
ಅಲ್ಲಿ ತಮ್ಮ ನೆಚ್ಚಿನ ಗುರುಗಳಿಗೆ ಸಲಹೆ ನಿಡುವವರೂ ಇರುವರು. ಹಾಗೆ ಮಾಡದಿರಲು ಸೂಚನೆ ಇದ್ದರೂ ಗುಂಪಿನಲ್ಲಿದ್ದಾಗ ಅವರನ್ನು ಹಿಡಿಯುವವರು ಯಾರು? ಮುಂದೆ ಹೋಗಿ... ಹಿಂದೆ ತಿರುಗಿ... ಎಡಕ್ಕೆ ಹೋಗಿ... ಹೊಡೆಯಿರಿ ಎಂದು ಎಲ್ಲರೂ ಅರಚುವವರೆ. ಕಣ್ಣು ಕಟ್ಟಿಕೊಂಡು ಕೋಲು ಹಿಡಿದು ಹೊರಟವರು ಕಕ್ಕಾಬಿಕ್ಕಿ. ಕೊನೆಗೆ ಪಟಾ ಪಟಾ ನೆಲಕ್ಕೆ  ಹೊಡೆದು ಬರುವರು. ಎಲ್ಲರೂ ನಕ್ಕಿದ್ದೆ ನಕ್ಕಿದ್ದು. ನಮ್ಮ ಶಾಲೆಯ ಕನ್ನಡ ಮೇಷ್ಟ್ರಿಗೆ ಇನ್ನೊಂದು ಹೆಸರು ಪುಣ್ಯಕೋಟಿ ಎಂದು. ಅದೂ ಹಿಂದೆ ಬಂದರೆ ಒದೆಯಲಾರದ, ಮುಂದೆ ಬಂದರೆ ಹಾಯಲಾರದ ಸಾಧು ಹಸು. ಮಕ್ಕಳಿಗೆ ಹೊಡೆಯುವ ಮಾತು ಇರಲಿ ಬೈಯ್ಯುವುದೂ ಕಡಿಮೆ. ಅದಕ್ಕೆ ಅವರ ತರಗತಿಯಲ್ಲಿ ಗದ್ದಲವೋ ಗದ್ದಲ. ಎಷ್ಟೋ ಸಲ ಪಕ್ಕದಲ್ಲಿ ಪಾಠ ಮಾಡುತ್ತಿದ್ದವರು ಗಲಾಟೆ ತಡೆಯಲಾರದೆ ಹೋಗಿ ಮಕ್ಕಳನ್ನು ಗದರಿಸಿ ಸುಮ್ಮನಾಗಿಸುತ್ತಿದ್ದರು.
ಆದರೆ ಅವರು ತುಂಬ ಒಳ್ಳೆಯ ಶಿಕ್ಷಕರು. ಪಾಠ ಮಾಡುತ್ತಿದ್ದರೆ ಹೊರಗೆ ಹೋಗುತಿದ್ದವರೂ ನಿಂತು ಕೇಳಬೇಕು. ಅದರಿಂದ ಮಕ್ಕಳಿಗೆ ಅವರ ಮೇಲೆ ತುಸು ಹೆಚ್ಚಿನ ಪ್ರೀತಿ. ನಿತ್ಯ ಬೆತ್ತ ಬೀಸಲು ವಿಫಲರಾದ ಅವರು ಹೇಗೆ ಹೊಡೆಯುವರು ಎಂದು ಎಲ್ಲರ ಕುತೂಹಲ. ಆಟದಲ್ಲಿ ಎಂದೂ ಹೊಡೆಯದ ಅವರು ಇಲ್ಲಾದರೂ ಗೆಲ್ಲ ಬೇಕೆಂಬುದು ಅಲ್ಲಿರುವ ಎಲ್ಲ ವಿದ್ಯಾರ್ಥಿಗಳ ಅವ್ಯಕ್ತ ಆಶೆ. ಅದರಲ್ಲೂ ತುಂಟಾಟದಲ್ಲಿ ಮುಂದಾಗಿದ್ದ ಎಸ್ಪಿಎಲ್‌ ಮೌಲಾ ಸಾಬ್‌ ಅಂತೂ ಯಾರು ಹೇಳಿದರು ಕೇಳದೆ ಅವರನ್ನೆ ಹಿಂಬಾಲಿಸಿ, ಹೀಗೆ ಹೋಗಿ, ಹಾಗೆ ಹೋಗಿ ಎಂದು ಸೂಚನೆ ನೀಡತೊಡಗಿದ. ಅವರು ಕೋಲು ಮೇಲಿತ್ತಿ ಹಿಡಿದು ಮುಂದೆ ಮುಂದೆ ನಡೆದರು. ಆ ಗಡಿಗೆಯನ್ನೂ ದಾಟಿ ಮುಂದೆ ಹೊರಟರು. ಅವರ ಹಿಂದೆ ಇದ್ದ ಅವನಿಗೆ ನಿರಾಶೆಯಾಯಿತು. ಅಯ್ಯೋ ನಮ್ಮ ಗುರುಗಳೂ ಸೋತು ಹೋಗುವರಲ್ಲಾ ಎಂದು ಮರ ಮರ ಮರುಗಿದ. `ಹೊಡೆಯಿರಿ ಸಾರ್ ಹೊಡೆಯಿರಿ, ತಿರುಗಿ ಹೊಡೆಯಿರಿ. ಮುಂದೆ ಹೋಗಬೇಡಿಎಂದು ಕೂಗಿದ.
ಅವರು ಒಂದು ಕ್ಷಣ ನಿಂತರು. ತಟ್ಟನೆ ಹಿಂದಿರುಗಿ ಎತ್ತಿ ಬಾರಿಸಿದರು. ಅದು ಸೀದಾ ಹಿಂದೆ ಇದ್ದ ಹುಡುಗನ ತಲೆಗೆ ಏಟು ಬಿದ್ದಿತು. ಅವನು ಕುಸಿದು ಬಿದ್ದ. ಎಲ್ಲರಿಗೂ ಗಾಬರಿ. ದೇವರ ದಯೆ ಅವನಿಗೆ ಹೆಚ್ಚು ಪೆಟ್ಟಾಗಿರಲಿಲ್ಲ. ತಕ್ಷಣ ಅವನಿಗೆ ನಮ್ಮ ಡ್ರಿಲ್‌ ಮಾಸ್ಟರ್‌ ಪ್ರಥಮ ಚಿಕಿತ್ಸೆ ಕೊಟ್ಟರು. ಆದರೂ ಅವರ ಪೆಟ್ಟು ಮಡಕೆಯ ಹತ್ತಿರವೇ ಬಿದ್ದದ್ದರಿಂದ ಮಡಕೆ ಒಡೆಯದಿದ್ದರೂ ಹುಡುಗನ ತಲೆಗೆ ಹೊಡೆದರೂ ಬಹುಮಾನ ಪಡೆದರು. ಅವರಿಗೆ ಬಹುಮಾನ ಪಡೆಯುವಾಗ ಯಾರಿಗೂ ಬೀಳದಷ್ಟು ಚಪ್ಪಾಳೆ. ಅದರಲ್ಲೂ ತಲೆಗೆ ಪಟ್ಟಿ ಕಟ್ಟಿಕೊಂಡು ಮುಂದೆಯೇ ಕುಳಿತಿದ್ದ ಮೌಲಾ ಸಾಬ್‌ ಖುಷಿಯಿಂದ ಕೇಕೆ ಹಾಕುತ್ತಾ ಎಲ್ಲರಿಗಿಂತ ಜೋರಾಗಿ ಚಪ್ಪಾಳೆ ತಟ್ಟುತ್ತಾ ಇದ್ದ.


No comments:

Post a Comment