Thursday, October 11, 2012

ಕನ್ನಡವೆ ಎನ್ನುಸಿರು ಎಂದು ಬದುಕಿದ ಪ್ರೊ. ಡಿ.ಲಿಂಗಯ್ಯ



ಪ್ರೊ. ಲಿಂಗಯ್ಯನವರ ಪರೋಕ್ಷ ಪರಿಚಯ ಅವರ ಪುಸ್ತಕ ಗಳ ಮೂಲಕ ಹಲವು ದಶಕಗಳಿಂದ ಇದೆ. ಮತ್ತು ಮೌಲ್ಯ ಮಾಪನಕ್ಕೆ   ಬಂದಾಗ  ಹಲವು ಕನ್ನಡ ಕಾರ್ಯಕ್ರಮಗಳಲ್ಲಿ ಅವರನ್ನು  ನೋಡಿದ ನೆನಪು.  ಪ್ರತ್ಯಕ್ಷ ಪರಿಚಯ ಮಾತ್ರ  ಮೂರು ವರ್ಷಗಳಿಂದ ಈಚೆಗೆ. ಹಳೆಯ ಬೆಂಗಳೂರಿನ ಭಾಗವಾದ ಬಸವನಗುಡಿಗೆ ಹೊಂದಿಕೊಂಡಿರುವ   ನರಸಿಂಹರಾಜಾ ಕಾಲನಿಯಲ್ಲಿ ವಾಸಕ್ಕೆ ಬಂದಾಗಿನಿಂದ.  ಪಕ್ಕದ ರಸ್ತೆಯಲ್ಲೆ ಬಿ.ಎಂ.ಶ್ರೀ ಪ್ರತಿಷ್ಠಾನದ ಹೆಸರು ಹೊತ್ತ ಸುಂದರ ಭವನ. ಅಲ್ಲಿನ ಉಚಿತ ವಾಚನಾಲಯಕ್ಕೆ ಆಗಾಗ  ಭೇಟಿ  ನೀಡುವುದು ವಾಡಿಕೆ ಮತ್ತು ಅಲ್ಲಿ ನಡೆವ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ  ವೇದಿಕೆಯ ಮೇಲೆ ಕುಳಿತ ಎತ್ತರದ ನಿಲುವಿನ ಸಾಧಾರಣ ಮೈಕಟ್ಟಿನ ತಿಳಿ ಬಣ್ಣದ ಅಚ್ಚುಕಟ್ಟಾಗಿ ಉಡುಪು  ಧರಿಸಿದ,ಅತಿಥಿಗಳನ್ನು, ಪರಿಚಿತರನ್ನು ಸದಾ ಮುಗುಳುನಗೆಯಿಂದ ಮೃದು ಮಾತಿನಿಂದ ಸ್ವಾಗತಿಸುವ  ವ್ಯಕ್ತಿ ಯಾರಿರಬಹುದೆಂಬ  ಕುತೂಹಲ. ಅವರನ್ನು ಹಿಂದೆ ಅನೇಕ  ಸಾಹಿತ್ಯ ಕಾರ್ಯಕ್ರಮಗಳಲ್ಲಿ ನೋಡಿದ ನೆನಪು ಸಹಾಯಕ್ಕೆ ಬರಲಿಲ್ಲ. .. ಒಂದೆರಡು ಸಮಾರಂಭದಲ್ಲಿ ಹಾಜರಿ ಹಾಕಿದ ನಂತರ  ಕುತೂಹಲ ತಣಿಯಿತು.  ಅವರ ವಾಗ್‌ವೈಖರಿ  ಅಸದಳ . ಪುಸ್ತಕದ ಬಿಡುಗಡೆ ಇರಲಿ, ಖ್ಯಾತ ನಾಮರ ಜಯಂತಿಯೆ ಇರಲಿ, ಕಥೆಗಾರ, ಕಾದಂಬರಿಕಾರ, ಕವಿ, ಜಾನಪದ ತಜ್ಞ , ಹಸ್ತ ಪ್ರತಿ ತಜ್ಞರ ಸನ್ಮಾನವಿರಲಿ, ವಿಷಯ ಯಾವುದೆ ಇದ್ದರೂ ಅವರ ಅಧ್ಯಕ್ಷೀಯ ಭಾಷಣ ಎಂದರೆ  ತಲಸ್ಪರ್ಶಿವಿಚಾರ ಪೂರಿತ ಮಾತುಗಳ ಮಳೆ. ಅದರ ಸ್ವಾದ ಕೇಳಿಯೆ ತಿಳಿಯ ಬೇಕು.
        ನಾನು “ ಆರರಿಂದ ಅರವತ್ತು “ ಎಂಬ ಸರಣಿಯನ್ನು ಕೆಂಡ ಸಂಪಿಗೆಯಯಲ್ಲಿ  ಪ್ರಕಟಿಸುವಾಗ ಶಿವಪುರದ ಸತ್ಯಾಗ್ರಹಕ್ಕೆ ಸಂಬಂಧಿಸಿದ ಕೆಲವು ಮಾಹಿತಿ ತಿಳಿಯಲು ಅವರ ಬಳಿ ಹೋದಾಗ ಸುಮಾರು ಒಂದು ಗಂಟೆ ಕಾಲ ಎಲ್ಲ ವಿವರಗಳನ್ನು ಆಗಿಂದಾಗಲೆ ತಿಳಿಸಿದರು. ಅಷ್ಟು ಪ್ರಖರ ಅವರ ಜ್ಞಾಪಕ ಶಕ್ತಿ.ಅಷ್ಟು ಸರಳ ಅವರ ನಡೆ.
ಪ್ರತಿಷ್ಠಾನವು ನಡೆಸುತಿದ್ದ ಹಸ್ತಪ್ರತಿ ಅಧ್ಯಯನದ ತರಗತಿಗೆ ನಾನು ಸೇರಿದ ಮೇಲೆ ಜತೆಗೆ  ರಾಮಚಂದ್ರಾಪುರ ಮಠದಲ್ಲಿ ನಡೆಸಿದ ಹಸ್ತಪ್ರತಿ ಆಧ್ಯಯನ ಸಮಾವೇಶದಲ್ಲಿ ಭಾಗವಹಿಸಿದಾಗ ಅವರ ಬಹು ಮುಖ ಪ್ರತಿಭೆಯ ಸರಳ ವ್ಯಕ್ತಿತ್ವದ  ಪರಿಚಯವಾಯಿತು. ಅವರು  ರಚಿಸಿರುವುದು ಸುಮಾರು ಎಂಬತ್ತಕ್ಕೂ ಹೆಚ್ಚು ಕೃತಿಗಳು, ಅದೂ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿನ ಅವರ  ಸಾಧನೆ ಮಾಡಿರುವುದು  ಮೆಚ್ಚಿಗೆ ಮೂಡಿಸಿತು.
ಲಿಂಗಯ್ಯನವರದು  ಸತತ  ಐದು ದಶಕಗಳ ನಿರಂತರ ಸಾಹಿತ್ಯ ಸೇವೆಯ. ಕಾಲೇಜು ಕಟ್ಟೆ ಹತ್ತಿದಾಗಲೆ ವಿದ್ಯಾರ್ಥಿ ದೆಶೆಯಲ್ಲೆ   ೧೯೬೨ರಲ್ಲಿ  ಮೊದಲ ನಾಟಕ “ ದಡ್ಡ ಶಿಖಾಮಣಿ “  ಪ್ರಕಟ, ಅವರದೆ  ದಿನಕರ  ಪ್ರಕಟನಾಲಯ . ಅದರಲ್ಲೆ ಬಹುಪಾಲು ಅವರ ಕೃತಿಗಳ ಪ್ರಕಟನೆ.ಸತತ ಸಾಹಿತ್ಯ ಸೇವೆ ಕೆಂಗಲ್‌ ಕುರಿತಾದ ಅವರ ಗ್ರಂಥ  ಮೊದಲು  ಕರ್ಮವೀರದಲ್ಲಿ ಸತತ ಒಂದುವರ್ಷ ಸರಣಿಯಲ್ಲಿ ಪ್ರಕಟಿತವಾಯಿತು. ಅದು ಇತಿಹಾಸ ಪ್ರಜ್ಞೆ , ಸಾಮಾಜಿಕ ಕಳಕಳಿ ಮತ್ತು ಸರಳ ಶೈಲಿಯಿಂದ ಸಾವಿರಾರು ಓದುಗರ ಮನ ಸೆಳೆಯಿತು. ಅವರ ಅಂತಿಮ ಕೃತಿಯೂ ಅವರ ನೆಚ್ಚಿನ ಜಾನಪದಲೋಕದ ದಿಗ್ಗಜ ಎಸ್‌.ಕೆ ಕರೀಂಖಾನರ ಬದುಕು ಮತ್ತು ಬರಹಗಳ  ಕುರಿತದ್ದು.ಅವರ ಐದು ದಶಕಗಳ  ಅವಧಿಯಲ್ಲಿ ನಾಲ್ಕು ನಾಟಕಗಳು, ಮೂರು ಕಥಾ ಸಂಗ್ರಹಗಳು, ನಾಲ್ಕು, ವಿಮರ್ಶಾಗ್ರಂಥಗಳು, ಹನ್ನೆರಡು ಕವನ ಸಂಗ್ರಹಗಳು, ಐದು  ವ್ಯಕ್ತಿಚಿತ್ರಗ್ರಂಥಗಳು, ಐದು  ಜೀವನ ಚರಿತ್ರೆಗಳು, ನಾಲ್ಕು ಪ್ರಬಂಧ ಸಂಕಲನಗಳು ಮೂರು ಸ್ವಾತಂತ್ರ್ಯ ಚಳುವಳಿ ಸಂಬಂಧಿತ ಗ್ರಂಥಗಳು  ಎರಡು ಕಾದಂಬರಿಗಳು, ೨೧ ಜಾನಪದ ಸಂಬಂಧಿತ ಕೃತಿಗಳು.  ೨೦ ಸಂಪಾದಿತ ಗ್ರಂಥಗಳು, ಇನ್ನು ನೂರಾರು ಕಿರುಲೇಖನಗಳು, ಸಾಕ್ಷ್ಯ ಚಿತ್ರಗಳಿಗೆ ಸಾಹಿತ್ಯ, ರಚನೆ ಮತ್ತು ದೂರದರ್ಶನಗಳಲ್ಲಿ ಸಂವಾದಗಳು  ಅವರ ಆಸಕ್ತಿಯ ಪಾಂಡಿತ್ಯದ ವ್ಯಾಪ್ತಿಗೆ ಸಾಕ್ಷಿಯಾಗಿವೆ.
ಪ್ರೊ. ಡಿ ಲಿಂಗಯ್ಯ  ಹುಟ್ಟಿದ್ದು  ೧೯೩೯ ರಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪೀ ಹಳ್ಳಿಯ ರೈತ ಕುಟುಂಬದಲ್ಲಿ ತಂದೆ ದೇವೆಗೌಡ ಸಣ್ಣ ರೈತ. ತಾಯಿ ಸಿದ್ದಮ್ಮ,  ಇವರಿಗೆ ಇಬ್ಬರು ಸೋದರರು ಮತ್ತು ಇಬ್ಬರು ಸೋದರಿಯರು . ಸಾಧಾರಣ  ಕುಟುಂಬ. ಕೃಷಿ ಕೆಲಸದಲ್ಲಿ ಸಹಾಯ ಮಾಡುತ್ತಾ ಶಿಕ್ಷಣ ಮುಂದುವರಿಸಿದರು.ಮಂಡ್ಯದ ಮೈಶುಗರ್‌ ಶಾಲೆಯಲ್ಲಿ ಶಿಕ್ಷಣ .  ಮಂಡ್ಯ ಜಿಲ್ಲೆಏಕೈಕ ಅಪ್ಪಟ ಕನ್ನಡ ಮಾತನಾಡುವ ಪ್ರದೇಶ. ಅಲ್ಲಿನವರಿಗೆ ಅನ್ಯಭಾಷೆಯ ಗಾಳಿ  ಕೂಡಾ ಸೋಕುವುದಿಲ್ಲ ಮೇಲಾಗಿಮಂಡ್ಯ ಜನಪದ ಸಾಹಿತ್ಯದ ಕಣಜ ಅಲ್ಲಿ ೪೦ ವಿಧದ ಜಾನಪದ ಕುಣಿತಗಳಿವೆಹಲವು ಜನಪದಪ್ರಕಾರಗಳು ಇವೆ. ಇನ್ನು ಸಾಹಿತ್ಯದ ಬೆಳೆಯಂತೂ ಬಹು ಹುಲಸು. ಅಲ್ಲಿನ ಕ.ರಾ.ಕೃಅವರು ಜಾನಪದ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದವರು. ಹೀಗಾಗಿ ಲಿಂಗಯ್ಯನವರ ಮೇಲೆ ಜಾನಪದದ ಪ್ರಭಾವ ಗಾಢವಾಗಿತ್ತು.
 ವಿದ್ಯಾರ್ಥಿ ಇದ್ದಾಗಲೇ ಸಾಹಿತ್ಯದ ಒಲವು. ಓರಿಗೆಯ ಹುಡುಗರು ಆಡುತಿದ್ದಾಗ , ಗೆಳೆಯರು ಹಳ್ಳಿಯ ಕಾಲುವೆಯಲ್ಲಿ ಈಜುತಿದ್ದಾಗ ಇವರು ಪುಸ್ತಕ ಹಿಡಿದು ಕೂಡುತಿದ್ದರು  ಆದರೆ ದೈಹಿಕ ದೃಢತೆಗೆ ಪ್ರಾಮುಖ್ಯತೆ ಕೊಡುವರು. ನಿತ್ಯ ಲಘು ವ್ಯಾಯಾಮ ಮತ್ತು ನಡೆದಾಟ ಕೊನೆಯವರೆಗೂ ಅಭ್ಯಾಸ ಮಾಡಿಕೊಂಡಿದ್ದರು. ಇಂಟರ್‌ ಮಿಡಿಯಟ್‌ ಮಂಡ್ಯದ ಸರ್ಕಾರಿ ಕಾಲೇಜಿನಲ್ಲಿ. ಆಗ ಅವರಿಗೆ ಹಂ.ಪಾ. ನಾಗರಾಜಯ್ಯ ಗುರುಗಳಾಗಿ ದೊರೆತರು. ಅವರ ಸತತ ಪ್ರೋತ್ಸಾಹದಿಂದ ಸಾಹಿತ್ಯದಲ್ಲಿ ಆಸಕ್ತಿ ಕುದುರಿತು. ಹಂಪನಾ ಅವರೊಡಗಿನ  ಸಂಬಂಧ ಕೊನೆತನಕ ಉಳಿದು ಬೆಳೆಯಿತು. ಅವರ ಉತ್ತೇಜನದ ಫಲವಾಗಿ ಬೆಂಗಳೂರಿಗೆಉದ್ಯೋಗಕ್ಕೆ ಬಂದಾದ ಮೇಲೆ ಕನ್ನಡ ಸಾಹಿತ್ಯ ಪರಿಷತ್ತಿನ ಕೆಲಸಕ್ಕೆ ಮುಂದಾದರು  ಜಿ. ನಾರಾಯಣರು ಅಧ್ಯಕ್ಷರಾಗಲು ದುಡಿದರು. ಮತ್ತು ಜ್ವಾಲನಯ್ಯವರ ಅವಧಿಯಲ್ಲಿ ಸಕ್ರಿಯವಾಗಿ ಕನ್ನಡದ ಕೆಲಸದಲ್ಲಿ ತೊಡಗಿಸಿ ಕೊಂಡರು.ಹಂಪನಾ ಅವರ ಅವಧಿಯಲ್ಲಿ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾದ ಮೇಲೆ ಕನ್ನಡದ ಕೆಲಸದ ವ್ಯಾಪ್ತಿ ನಾಡಿನಾದ್ಯಂತ ವಿಸ್ತರಿಸಿತು. ಜಾನಪದ ವಿಭಾದ ಪೂರ್ಣ ಹೊಣೆ ನಿರ್ವಹಿಸಿದರು.ಇವರ ಸಂಘಟನಾ ಸಾಮರ್ಥ್ಯಕ್ಕೆ ಸಾಹಿತ್ಯಪರಿಷತ್ತಿನ ಪದಾಧಿಕಾರಿ ಹುದ್ದೆ ಸಾಣೆ ಹಿಡಿಯಿತು. ಸಾಹಿತ್ಯ ಲೋಕದ ಹೆಸರಾಂತ ವ್ಯಕ್ತಿಗಳ ಸಂಪರ್ಕಕ್ಕೆ ಅದೆ ಸೋಪಾನವಾಯಿತು.ಅದರ  ಫಲವಾಗಿ ಹಲವಾರು ವ್ಯಕ್ತಿ ಚಿತ್ರಣಗಳು ಮೂಡಿ ಬಂದವು.ಅವರ ಬರಹದಲ್ಲಿ ಗಟ್ಟಿತನ ಬರಲುಕಾರಣ  ಅವರ ಬರವಣಿಗೆ,  ಬರಿ ಓದು ಅಥವ ಅವರಿವರ ಮಾತು ಕೇಳಿ ಬರೆದದ್ದಲ್ಲ. ತಾವೆ ಸ್ವತಃ ಒಡನಾಡಿ  ಬರೆದುದು.
 ಇಂಟರ್‌ಮೀಡಿಯಟ್‌ನಲ್ಲಿ ವಿಜ್ಞಾನ ವಿದ್ಯಾರ್ಥಿಯಾದರೂ ಪದವಿಯಲ್ಲಿ ಕನ್ನಡ ಮುಖ್ಯವಿಷಯ.ಅದೂ  ಮಹರಾಜ ಕಾಲೇಜಿನಲ್ಲಿ  ವ್ಯಾಸಾಂಗ. ಮುಂದೆ ಮಾನಸ ಗಂಗೋತ್ರಿಯ ಆಡಳಿತ ವಿಭಾಗದಲ್ಲಿನ ಅಧ್ಯಯನ ಪೀಠದಲ್ಲಿ ಇವರದೆ ಜಾನಪದ ವಿಷಯದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡಿದ ಪ್ರಥಮ ತಂಡ
 ಘಟಾನು ಘಟಿ ಗುರುವೃಂದದಿಂದ ಮಾರ್ಗದರ್ಶನ  ದೊರೆಯಿತು.ಪ್ರೊ. ಪರಮೇಶ್ವರ ಭಟ್‌,  ಎಚ್‌.ತಿಪ್ಪೆ ರುದ್ರಸ್ವಾಮಿ,ದೇ. ಜವರೇ ಗೌಡ , ವರದರಾಜರಾವ್‌ ,ಹಾ.ಮಾ ನಾಯಕ,ಚಿದಾನಂದ ಮೂರ್ತಿ, ಪ್ರಭುಶಂಕರ್‌, ಸಿಪಿಕೆ ಯವರುಗಳ ಶಿಷ್ಯತ್ವ. ಆಗಾಗ ಡಿಎಲ್‌ಎನ್ ಮತ್ತು ತಿ.ನಂ ಶ್ರೀ ಗಳ ಅತಿಥಿ ಉಪನ್ಯಾಸ ಕೇಳುವ ಭಾಗ್ಯ.   ೧೯೬೭-೬೮-ರಲ್ಲಿ  ಮೈಸೂರು  ವಿಶ್ವ ವಿದ್ಯಾನಿಲಯದಲ್ಲಿ ಕನ್ನಡ ಎಂ ಎ. ಪದವಿ. ಎಲ್ಲ ಗುರುವರ್ಯರ ಮಾರ್ಗದರ್ಶನ ಪಡೆದರೂ ದೆ. ಜವರೇಗೌಡರ ಪಟ್ಟದ ಶಿಷ್ಯರು ಮತ್ತು ಸಿಪಿಕೆಯವರ ಸಾಹಿತ್ಯ ಕೃಷಿಯಿಂದ ಪ್ರಭಾವಿತರು. ಅವರಜೀವನ .ಮತ್ತು ಬರಹದಮೇಲೆ ಅವರಿಬ್ಬರ  ಗಾಢ ಪ್ರಭಾವ.ದೇ. ಜ. ಅವರದೂ ಆತ್ಮೀಯ ಸಂಬಂಧ. ಒಂದೆ ಪ್ರದೇಶದಿಂದ ಮತ್ತು ಹಿನ್ನೆಲೆಯಿಂದ ಬಂದವರೆಂಬ ನಂಟು ಬೇರೆ. ದೇ. ಜ ಅವರ ಸಂಘಟನಾ ಚಾತುರ್ಯವೆ ಲಿಂಗಯ್ಯನವರ ಜೀವನದುದ್ದಕ್ಕೂ ಬೆನ್ನಿಗೆ ನಿಂತಿತು. ಸಿಪಿಕೆಯವರ ಸತತ ಪರಿಶ್ರಮದ ಬರವಣಿಗೆಯಿಂದ ಸ್ಪೂರ್ತಿ ಹೊಂದಿದ ಅವರು  ವಿವಿಧ ರಂಗಗಳಲ್ಲಿ ಅಧ್ಯಯನ ಮತ್ತು ಕೃತಿ ರಚನೆಗೆ ಕಾರಣ.ಅವರ ಸಹಪಾಠಿಗಳಲ್ಲಿ ಅನೇಕರು.ಹೆಸರಾಂತ ಬರಹಗಾರರಾಗಿದ್ದಾರೆ. ಶ್ರೀ ಜಯಚಂದ್ರ, ಇವರ ಆತ್ಮೀಯ ಒಡನಾಡಿ.-ಇಬ್ಬರಲ್ಲೂ ನಾಮುಂದು ತಾ ಮುಂದು ಎಂದು  ಸ್ಪರ್ಧಾತ್ಮಕ ಬರವಣಿಗೆ. ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ಪ್ರಾಧ್ಯಾಪಕಾಗಿದ್ದ   ಕೆಆರ್‌ ಬಸವರಾಜ್, ಶೃಂಗೇರಿಯಲ್ಲಿ ಸಿಕ್ಕಾಗ ತಮ್ಮ ಗೆಳೆಯನ ಮೃದು ನುಡಿ, ವಿನಯದ ನಡೆ, ಗರಿ ಮುರಿಯದ ಉಡುಪು, ವಾದ ವಿವಾದಗಳಿಂದ ದೂರವಿರುವ ಗುಣ ನೆನೆದು ಹನಿಗಣ್ಣಾದರು.  ಈಗ ವಿದೇಶ ವಾಸಿಯಾಗಿರುವ  ಪರಮೇಶ್ವರ ಭಟ್ಟರ ಮಗಳಾದ ಶ್ರೀ ಮತಿ ನಾಗರತ್ನ , ರುಜುವಾತು ಪತ್ರಿಕೆಯ  ಕಾರ್ಯ ನಿರ್ವಹಿಸಿದ ಶ್ರೀ ಮತಿ ಸರ್ವ ಮಂಗಳ ಅವರ ಸಹಪಾಠಿಗಳು
ಇವರಿಗಿಂತ ಒಂದು ವರ್ಷ ಕಿರಿಯರಾದ ಶ್ರೀ.ಕೆ. ರಾಮದಾಸ  ಮತ್ತು ಆಲನಹಳ್ಳಿ ಕೃಷ್ಣ ಅವರು ಆಗಲೆ ವಿಚಾರ ವಾದದ ಮೋಡಿಗೆ ಒಳಗಾದವರು. ಅವರೂ ತೇಜಸ್ವಿಯವರ ಪ್ರಬಾ ವಲಯದಲ್ಲಿದ್ದವರು. ಸಾಹಿತ್ಯ ಲೋಕದಲ್ಲಿ ತಮ್ಮದೆ ಆದ ಅಭಿಪ್ರಾಯ ಹೊಂದಿದವರು.ಅವರು ಆಗಾಗ ಲಿಂಗಯ್ಯನವರ ನಿರಂತರ ಕೃಷಿಯನ್ನು ,ಶ್ರದ್ಧೆಯನ್ನೂ  ಕಿಚಾಯಿಸಿದರೂ ಇವರು ಮಾತ್ರ  ತಲೆ   ಕೆಡಿಸಿಕೊಳ್ಳದೆ ತಮ್ಮ ಗುರಿಸಾಧನೆಯಿಂದ ವಿಚಲಿತರಾಗದೆ ಮುಂದುವರಿದರು. ಆ ಗುಣವೆ ಅವರನ್ನು ಕೊನೆ ತನಕ ಸಾಮಾಜಿಕ ವಲಯದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ  ಕೈ ಹಿಡಿದು ನಡೆಸಿತು ಮತ್ತು ಅಪಾರ ಗೆಳೆಯರ ಬಳಗವನ್ನು ಗಳಿಸಿ ಕೊಟ್ಟಿತು.
ಓದುತಿದ್ದಾಗಲೆ ಅಕ್ಕನ ಮಗಳು ಕವಿತಾರೊಂದಿಗೆ ಮದುವೆ. ಅಕ್ಕರೆಯ ಸಂಸಾರ. ಮನೆವಾರ್ತೆಯನೆಲ್ಲ ಮಡದಿಗೆ ಒಪ್ಪಿಸಿ ಸದಾ   ತಾವಾಯಿತು ತಮ್ಮ ಕನ್ನಡದ ಕೆಲಸವಾಯಿತು. ಒಂದೆ ಓದು ಇಲ್ಲವೆ ಬರಹ ಹೊರಗೆ ಹೋದರೂ ಅದೂ ಕನ್ನಡಕಾರ್ಯಕ್ರಮಗಳ ಸಂಘಟನೆ, ನಿರ್ವಹಣೆ ಮತ್ತು  ಪಾಲುಗೊಳ್ಳಲು ಮಾತ್ರ. ಸಿನೆಮಾ , ನಾಟಕದ ಹಂಬಲವಿಲ್ಲ. ಟಿವಿಯನ್ನೂ ಕನ್ನಡ ವಾರ್ತೆನೊಡಲು ಬಳಕೆ.  ಸವಿತಾ ಪ್ರಿಯದರ್ಶಿನಿ ರೂಪಾಪ್ರಿಯದರ್ಶಿನಿ ಇಬ್ಬರು ಹೆಣ್ಣು ಮಕ್ಕಳು ಮತ್ತು ಅನಂತರಾಜು ಒಬ್ಬನೆ  ಗಂಡು ಮಗ. ಐವರ ಚಿಕ್ಕ ಮತ್ತು ಚೊಕ್ಕ ಸಂಸಾರ ಅವರದು. ಅವರದು.
ವೃತ್ತಿ ಪ್ರಾರಂಭವಾದುದು ವಿಶ್ವೇಶ್ವರಪುರ  ಪದವಿ ಕಾಲೇಜಿನಲ್ಲಿ. ೧೯೬೮ ರಲ್ಲಿ ಮೊದಲು ಉಪನ್ಯಾಸಕರಾಗಿ ಹಂತ ಹಂತವಾಗಿ ಮೇಲೇರಿ ಪ್ರಾಧ್ಯಾಪಕ  ನಂತರ ಪ್ರಾಚಾರ್ಯರಾಗಿ ಸೇವೆ. ೧೯೯೭ರಲ್ಲಿ ನಿವೃತ್ತಿಯಾದದ್ದೂ. ಅಲ್ಲಿಯೆ. ಸಾವಿರಾರು ವಿದ್ಯಾರ್ಥಿಗಳಿಗೆ ನೆಚ್ಚಿನ  ಕನ್ನಡ ಮೇಷ್ಟ್ರು. ನೂರಾರು ಸಹೋದ್ಯೋಗಿಗಳಿಗೆ ಆತ್ಮೀಯ ಒಡನಾಡಿ ಲಕ್ಷಾಂತರ ಓದುಗರ ಮನೆಯಲ್ಲಿ ಮನದಲ್ಲಿ ನೆಚ್ಚಿನ  ಸಾಹಿತಿ.
 ಆಡಳಿತಗಾರರಾಗಿ ಸೌಮ್ಯಸ್ವಭಾವದ ಇವರು ಶಿಸ್ತಿನ ವಿಷಯ ಬಂದಾಗ ಕಟ್ಟು ನಿಟ್ಟು. ವಿಶ್ವೇಶ್ವರ ಪುರಂ ಕಲೆ ಮತ್ತು ವಾಣಿಜ್ಯ ಕಾಲೇಜು ವಿದ್ಯಾರ್ಥಿಗಳು ಯಾವುದೆ ಚಳುವಳಿಯಲ್ಲಿ ಸದಾ  ಮುಂದು. . ಚಿಕ್ಕ ಕಾರಣಕ್ಕೂ  ತೀವ್ರವಾಗಿ ಪ್ರತಿಕ್ರಿಯಿಸುವರು. ಬಹು ಬೇಗ ಬೀದಿಗಿಳಿದು ಹೋರಾಟಕ್ಕೆ ಅಣಿಯಾಗುವರು. ಅದರಲ್ಲೂ ವಿದ್ಯಾರ್ಥಿ ಸಂಘವಂತೂ ಹೋರಾಟ ಗಾರರ ವೇದಿಕೆ. ಯಾವುದೆ ಚಳುವಳಿಯಲ್ಲೂ ಅವರೆ ಮುಂಚೂಣಿಯಲ್ಲಿರುವರು .ಅನೇಕ ಬಾರಿ ರಾಜಕೀಯ ವಲಯದ ಪ್ರಭಾವವೂ ದಟ್ಟ ವಾಗಿ ಅಲ್ಲಿನ ಚನಾವಣೆ ಒಂದು ಕಿರು ವಿದಾಸಭಾ ಚುನಾವಣೆಯ ತಾಲೀಮು ಎನಬಹುದು.. ಪ್ರಿನ್ಸಿಪಾಲರಾದ ಹೊಸದರಲ್ಲಿ  ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಅಗತ್ಯ ಮನಗಂಡು ವಿದ್ಯಾರ್ಥಿ ಸಂಘದ ಚುನಾವಣೆಗೆ ನಿರ್ಬಂಧ ಹೇರುವ ಕಠಿನ ನಿರ್ಧಾರ ತೆಗದುಕೊಂಡರು. ಅದರ ಪರಿಣಾಮವಾಗಿ ಒಂದು ಗುಂಪು ತೀವ್ರ ಪ್ರತಿಭಟನೆ ಮಾಡಿತು ಬೆದರಿಕೆಯಕರೆ ಬಂದವು, ಮನೆಯ ಹತ್ತಿರ ಗಲಭೆಗೂ ಮುಂದಾದರೂ ಜಗ್ಗದೆ ನಿರ್ಧಾರಕ್ಕೆ ಅಂಟಿಕೊಂಡರು. ಪರಿಣಾಮವಾಗಿ ಅಶಿಸ್ತಿನ ಬೇರು ಒಣಗಿ ಹೋಯಿತು.. ಅವರಿರುವ ವರೆಗೆ  ಹೆಚ್ಚಿನ ಗಲಭೆ ಗಲಾಟೆಗೆ ಅವಕಾಶ ದೊರಕಲಿಲ್ಲ.. ಆ  ಕಾಲೇಜಿನಲ್ಲಿ ಅತ್ಯಂತ ಹೆಚ್ಚು ಕಾಲ ಪ್ರಾಂಶುಪಾಲರಾದ ಹಿರಿಮೆ ಅವರದು.
ಮನೆಗೆ ಬಂದ ಮೇಲೆ ಮುಗಿಯಿತು ಅವರದು ಸದಾ ಕನ್ನಡದ  ಧ್ಯಾನ. ಅಧ್ಯಯನ ಬರವಣಿಗೆ ಬಿಟ್ಟು ಬೇರೆ ಹವ್ಯಾಸವೆ  ಇಲ್ಲ. ಮನೆಗ ಯಾರೆ ನೆಂಟರಿಷ್ಟರು ಬಂದರು ಅವರು ತಮ್ಮ ಪಾಡಿಗೆ ತಾವು ಕೋಣೆಯಲ್ಲಿ ವ್ಯಾಸಂಗ ನಿರತರು. ಒಂದೊಂದು ಸಾರಿ ಬಂದವರು ಯಾರೆಂಬ ನೆನೆಪೂ ಅವರಿಗೆ ಇಲ್ಲದಷ್ಟು  ಪರಧ್ಯಾನ.ಮದುವೆ ಮುಹೂರ್ತ, ಗೃಹಪ್ರವೇಶ ಪೂಜೆ ಪುನಸ್ಕಾರ ಎಂದು ಎಲ್ಲಿಗೂ ಹೆಚ್ಚಾಗಿ ಹೋಗರು. ಅತೀವ ಆತ್ಮೀಯರಾದರೆ ಭೇಟಿ ನೀಡಿ ಕೆಲವೆ ಗಂಟೆಗಳಲ್ಲಿ ವಾಪಸ್ಸು ಬರುವರು. . ಮನೆ ದೇವರು ಮಲೆ ಮಾದೇಶ್ವರ.  ನಿತ್ಯ ಪೂಜೆ ಮಾಡುವ ಆಸ್ತಿಕತೆ  ಇರಲಿಲ್ಲ. ಅವರ ಕೋಣೆಯಲ್ಲಿ ತಾಯಿಯ ಪೋಟೋ ಒಂದು ಮಾತ್ರ. ಅದಕ್ಕೆ ಬೆಳಗ್ಗೆ ಎದ್ದು ಕೈ ಮುಗಿದರೆ ಮುಗಿಯಿತು. ನಂತರ ಕನ್ನಡದ ಕೈಂಕರ್ಯ ಕನ್ನಡ ತಾಯಿಯೆ ಎಲ್ಲ. . ಅವರ ಗೆಳೆಯರ ಬಳಗವೂ ಅತಿ ಹಿತ ಮಿತ. ಡಾ. ಜಯಚಂದ್ರ, ಹರಿಹರ ಪ್ರಿಯ,ಎಲ್ಲೆ ಗೌಡರು,ಕ್ಯಾತನಹಳ್ಳಿರಾಮಣ್ನ ಮತ್ತು  ಡಾ.ಮಾದಯ್ಯ  ಅವರ ಆಪ್ತರು.
 ಕಾಲೇಜಿನ ಉದ್ಯೋಗಕ್ಕೆ ಹೋಗುವಾಗ ಬಹುಶಿಸ್ತಿನ ಉಡುಗೆ. ಫುಲ್‌ ಸೂಟು ಇಲ್ಲವೆ ಸಫಾರಿ. ಮನೆಗೆ ಬಂದಾಗ ಖಾದಿ ಧಾರಿ. ಒಳ ಉಡುಪಿನಿಂದ ಹಿಡಿದು ಪಂಚೆಯವರೆಗೆ ಶುಭ್ರ ಬಿಳಿಯ ಖಾದಿ ಬಳಕೆ.. ೧೯೭೪ ರ ಅವಧಿಯಲ್ಲಿ ದ್ವಿಚಕ್ರವಾಹನ ಓಡಿಸುತಿದ್ದರು. ನಂತರ ಅವರ ಪುತ್ರ ನ್ಯಾಷನಲ್‌ ಕಾಲೇಜಿನಲ್ಲಿ ಅಧ್ಯಯನ ಮಾಡುವವರೆಗೆ ಅವನೆ ಇವರ ಸಾರಥಿ.ಅದಾಗದಿದ್ದರೆ ನೆಮ್ಮದಿಯಾಗಿ ಬಿಟಿ ಎಸ್‌ ಬಸ್ಸಿನಲ್ಲಿ ಪಯಣಿಸುತಿದ್ದರು.
ವೃತ್ತಿ ಮತ್ತು ಪ್ರವೃತ್ತಿಗಳು ಪರಸ್ಪರ ಪೂರಕವಾದ ಸೌಭಾಗ್ಯ ಅವರದು. ಹಳ್ಳಿಗಾಡಿನಿಂದ ಬಂದ ಅವರಿಗೆ ಜಾನಪದ ಸಂಸ್ಕೃತಿ ರಕ್ತಗತ. ಹಳ್ಳಿಯ ಜನ ಹೃದಯಕ್ಕೆ ಹತ್ತಿರ. ಅಂತೆಯೆ ತಮ್ಮ ಸಮಯವನ್ನು ಗ್ರಾಮೀಣ ಸೊಗಡಿನ ಅನಾವರಣಕ್ಕೆ ಮೀಸಲಿರಿಸಿದರು. ಅವಿರತ ಕ್ಷೇತ್ರ ಕಾರ್ಯ  ಮಾಡಿ, ಜನಪದ ಗೀತೆಗಳು, ಜನಪದ ಕಾವ್ಯಗಳು, ಪ್ರಾಣಿ ಕಥೆಗಳು ಹೀಗೆ ಸುಮಾರು ೨೧ ಪುಸ್ತಕಗಳನ್ನು ಪ್ರಕಟಿಸಿರುವ ಹಿರಿಮೆ ಇವರದು. ಲಿಂಗಯ್ಯನವರು ಕೃಷಿ ಮಾಡದ ಸಾಹಿತ್ಯ ಕ್ಷೇತ್ರವನ್ನು ಕನ್ನಡದಲ್ಲಿ ಹುಡುಕುವುದು ಕಷ್ಟ, ಎನ್ನುವುದು ಕ್ಲೀಷೆಯಲ್ಲ. ನಾಟಕ, ಕಥೆ, ಕವನ, ಜೀವನ ಚರಿತ್ರೆ,ವ್ಯಕ್ತಿಚಿತ್ರಗಳು, ಪ್ರಬಂಧ ಮತ್ತು ಗ್ರಂಥ ಸಂಪಾದನಾ ಕ್ಷೇತ್ರದಲ್ಲಿ ತಮ್ಮ ಹೆಜ್ಜೆ  ಗುರುತು ಮೂಡಿಸಿರುವರು.
ಅವರ ಕಾಣಿಕೆ ಬರಿ  ಸಾಹಿತ್ಯಕ್ಕೆ ಸೀಮಿತವಾಗದೆ ಜನಪರ  ಚಳುವಳಿಗಳಲ್ಲೂ ವ್ಯಕ್ತವಾಗಿದೆ. ಕನ್ನಡಪರ ಚಳುವಳಿಯಲ್ಲಿ ಅವರು ಸದಾ ಎದ್ದು ಕಾಣುತಿದ್ದರು. ಹಂಪನಾಅವರ ಪ್ರೇರನಣೆಯಿಂದ ಬೆಂಗಳೂರಿಗೆ ಬಂದ ಹೊಸತರಲ್ಲೆ ಜಿ. ನಾರಾಯಣರನ್ನು ಸಾಹಿತ್ಯ ಪರಿಷತ್ತಿಗೆ ಅದ್ಯಕ್ಷರಾಗಿಸಲು ಶ್ರಮಿಸಿದರು . ವಿಪರ್ಯಾಸವೆಂದರೆ ಅವರ ಅಸಾಹಿತಿಕ ನಡೆಗೆ ರೋಸಿ ೧೯೭೭ರಲ್ಲಿ ಸಮಕಾಲೀನ ವಿಚಾರವೇದಿಕೆಯಿಂದ ಅನೇಕ ಹೆಸರಾಂತ ಸಾಹಿತಿಗಳು ನಡೆಸಿದ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿದರು. ವಿರೋಧಿಗಳ ಕಿರುಕುಳಕ್ಕೂ ಒಳಗಾದರು. ನಂತರ ನಡೆದ ಚುನಾವಣೆಯಲ್ಲಿ ಹಂಪಾನಾ  ಅವರನ್ನು ಬೆಂಬಲಿಸಿದರು ಅವರು ಆಯ್ಕೆಯಾದಾಗ  ನಾಲಕ್ಕುವರ್ಷಗಳ ಕಾಲ ಕಾರ್ಯದರ್ಶಿಯಾಗಿ ದುಡಿದರು. ಅವರು ಬರಿ ಪತ್ರಿಕಾ ಹೇಳಿಕೆ ನೀಡಿ ಪ್ರತಿಭಟಿಸುವ ಕಾಗದದ ಹುಲಿಯಲ್ಲ. ಕನ್ನಡ ಕ್ರೈಸ್ತರ  ಚಳುವಳಿ ಮೊದಲುಗೊಂಡು   ಹಲವಾರು ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗಿಗಳು.೧೯೮೨ ರಲ್ಲಿ ಗೋಕಾಕ ಚಳುವಳಿಯಲ್ಲಿ ಸರಕಾರದ ವಿಳಂಬ ನೀತಿ ಪ್ರತಿಭಟಿಸಿ ಕನ್ನಡ ಸಾಹಿತ್ಯ ಪರಿಷತ್ತಿನ  ಗೌ. ಕಾರ್ಯದರ್ಶಿ ಸ್ಥಾನಕ್ಕೆ ರಾಜಿನಾಮೆನೀಡಿದ್ದರು. ಜನಪರ ನಿಲುವಿನಿಂದಾಗಿ ಅವರು ಜನಪ್ರಿಯರೂ ಆಗಿದ್ದರು ಹಾಗಾಗಿ ಅನೇಕ ಸಾಹಿತ್ಯ ಸಂಘಟನೆಗಳಲ್ಲಿ  ಪದಾಧಿಕಾರಿಯಾಗಿ ಕೊನೆಯುಸಿರು ಇರುವವರೆಗೆ ಶ್ರಮಿಸಿದರು.


No comments:

Post a Comment