Tuesday, October 16, 2012

ಹಸ್ತ ಪ್ರತಿ ಅಧ್ಯಯನ ರಂಗದ ದೊಡ್ಡಣ್ಣ – ಪ್ರೊ. ಬಿಎಸ್ ಸಣ್ಣಯ್ಯ


ಶ್ರವಣಬೆಳಗೊಳದಲ್ಲಿ ೨೦೧೧ರ್ಷ ಡಿಸೆಂಬರ್ ೧೯ ರಿಂದ ೨೩ ರ ವರೆಗೆ  ನಡೆದ ಹಸ್ತ ಪ್ರತಿ ಆಧ್ಯಯನಕ್ಕೆ ಸಂಬಂಧಿಸಿದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸುವ ಅವಕಾಶ ನನಗೆ ದೊರೆತಿತ್ತು. ನಾನು ಅಲ್ಲಿಗೆ ಹೋದಾಗ ಎಲ್ಲರ ಹುಬ್ಬುಗಳು ಮೇಲೇರಿದ್ದವು. ಅದರಲ್ಲಿ ಭಾಗವಹಿಸಿದವರು ಬಹುತೇಕ ಯುವ ಕನ್ನಡ ಮತ್ತು ಇತಿಹಾಸದ ಅಧ್ಯಾಪಕರು. ಎಪ್ಪತ್ತರ ಅಂಚಿಗೆ ಬಂದ ನಾನು ಇನ್ನೂ ಅಧ್ಯಯನ ಮಾಡಲು ಬಂದುದು ಅವರೆಲ್ಲರ ಕುತೂಹಲಕ್ಕೆ ಮೊದಲು ಕಾರಣವಾದರೂ ಮೂರುದಿನ ಕಳೆಯುವದರಲ್ಲಿ ಇಳಿವಯಸ್ಸಿನಲ್ಲಿಯ ಚುರುಕುತನ ಮತ್ತು ಆಸಕ್ತಿ ಅವರಲ್ಲಿ  ಅಚ್ಚರಿ ಮತ್ತು ಮೆಚ್ಚುಗೆ ಮೂಡಿಸಿತು.ನನಗೂ ಅವರೆಲ್ಲರ ಸಾಂಗತ್ಯ ವಿದ್ವತ್‌ಪೂರ್ಣ ಉಪನ್ಯಾಸಗಳು ನವ ಚೇತನ ಮೂಡಿಸಿದವು  ಆದರೆ ಇದೆಲ್ಲಕ್ಕಿಂತ ನನಗೆ ಖುಷಿಯಾದುದು ಅಲ್ಲಿನ ಅಧ್ಯಯನ ಪೀಠದ ನಿರ್ದೇಶಕರ ವ್ಯಕ್ತಿತ್ವ.
 ಪ್ರೊ.ಬಿ.ಎಸ್.ಸಣ್ಣಯ್ಯನವರ ಸುಮಾರು ಅರ್ಧ ಶತಕಕ್ಕೂ ಮೀರಿದ ಸಾಹಿತ್ಯ ಮತ್ತು ಸಂಪಾದನ ಕ್ಷೇತ್ರದ ಅನುಭವ ಪ್ರತಿಹಂತದಲ್ಲೂ ಎದ್ದುಕಾಣುತಿತ್ತು.ಅವರಿಂದ ಸಂಪಾದಿತ ಗ್ರಂಥಗಳನ್ನು ನಾನು ನಾಲಕ್ಕು ದಶಕಗಳ ಹಿಂದೆಯೆ ಅವಲೋಕಿಸಿದ್ದೆ. ಆದರೆ ಐದು ದಿನಗಳ ಕಾಲ ಅವರೊಡನೆ  ಒಡನಾಡುವ ಭಾಗ್ಯ ಈಗ ದೊರಕಿತ್ತು.
ವಿಚಾರ ಸಂಕಿರಣದಲ್ಲಿ ಹಸ್ತಪ್ರತಿಗಳ ಸಂಗ್ರಹ , ಸಂರಕ್ಷಣೆ ಮತ್ತು ಸಂಪಾದನೆಯನ್ನು ಕುರಿತು ಆ ಕ್ಷೇತ್ರದ ಉದ್ದಾಮ ವಿದ್ವಾಂಸರು ಉಪನ್ಯಾಸ  ಮತ್ತು ಪ್ರಾತ್ಯಕ್ಷಿಕೆಗಳನ್ನು ನೀಡಿದರು .ಕೆಳದಿಯ  ಖಾಸಗಿ ಸಂಗ್ರಹಾಲಯದ ಡಾ.ವೆಂಕಟೇಶ್‌ ಕೆಳದಿ ಅವರಿಂದ  ಹಿಡಿದು ಕಾಂಪ್ಯೂಟರ್‌ ಮೂಲಕ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸಂಶೋಧನೆ ಮಾಡುತ್ತಿರುವ ಹಂಪಿಯ ಕನ್ನಡ  ವಿಶ್ವ ವಿದ್ಯಾಲಯದ ಹಸ್ತ ಪ್ರತಿ ವಿಭಾಗದ ಮುಖ್ಯಸ್ಥ ಶ್ರೀ ವೀರೇಶ ಬಡಿಗೇರ ಅವರೆಲ್ಲರ  ವಿವರಣೆಗೂ ಮುಕುಟ ಪ್ರಾಯವಾದುದು ಶ್ರೀ ಸಣ್ಣಯ್ಯನವರ ಮಂಗಳ ವಾಕ್ಯದ ನುಡಿಗಳು.
ಅವರಿಗೆ ಎಂಬತ್ತರ ಮೇಲೆ ವಯಸ್ಸಾದರೂ ಬೆಳಗಿನಿಂದ ಹಿಡಿದು ಬೈಗಿನವರೆಗೆ ವಿಚಾರಸಂಕಿರಣದಲ್ಲಿ ಹಾಜರಿರುತ್ತಿದ್ದ ಕೆಲವೆ ಆಸಕ್ತರಲ್ಲಿ ಅವರು ಎದ್ದು ಕಾಣುತಿದ್ದರು.ಮಧ್ಯಮಧ್ಯ ಅವರು ಮೈಸೂರಿನ ಅಧ್ಯಯನ ಪೀಠದಲ್ಲಿ ಮತ್ತು ಪ್ರಾಚ್ಯ ಸಂಶೋಧಾನಾ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವಾಗಿನ ಅನುಭವದ, ಕಥನಗಳು ರಸವತ್ತಾಗಿದ್ದವು.ದೇಶಾದ್ಯಂತ ಹಸ್ತಪ್ರತಿ ಸಂಗ್ರಹಿಸಲು ಮಳೆ ಚಳಿ ಎನ್ನದೆ ಅವರು  ಬಸ್ಸು.ಎತ್ತಿನ ಗಾಡಿ , ಸೈಕಲ್ಲು  ಕೆಲವು ಬಾರಿ ನಡೆದೆ ಹೋಗುತಿದ್ದ ಅವರ ಪರಿಶ್ರಮ  ಮತ್ತು ಬದ್ಧತೆ ಈ ರಂಗದಲ್ಲಿನ ಹೊಸಬರಿಗೆ ಸ್ಪೂರ್ತಿ ದಾಯಕವಾಗಿದ್ದಿತು.
ಎಲ್ಲ ಉಪನ್ಯಾಸಗಳ ಕೊನೆಗೂ ಅವರು ನೀಡುತ್ತಿರುವ ಪ್ರತಿಕ್ರಿಯೆಯು ಅವರ ಆಳವಾದ ಅಧ್ಯಯನ ಮತ್ತು ಅನುಭವದ ರಸಪಾಕ. ಅವರು ಆಗಾಗ ನೀಡುತಿದ್ದ ಸಾಹಿತ್ಯ ಕೃತಿಗಳ ಪದ್ಯಗಳ ಉದಾಹರಣೆಗಳಂತೂ ರೋಮಾಂಚನ ಗೊಳಿಸುವಂತಿದ್ದವು. ರನ್ನನ ಸಾಹಸಭೀಮ ವಿಜಯದಲ್ಲಿ ವೈಶಂಪಾಯನ ಸರೋವರದಿಂದ ಮೇಲೆದ್ದು ಬರುವ ಸುಯೋಧನನ ಠೀವಿಯನ್ನು ವರ್ಣಿಸುವಾಗಿನ ಅವರ ಗತ್ತು ಗಾಂಭಿರ್ಯದಿಂದ  ನಮಗಂತೂ ಅವರು ಗಧೆ ಇಲ್ಲದ ಆಧುನಿಕ ಉಡುಪಿನ ದುರ್ಯೋಧನನಂತೆ ಕಂಡರು.
 ಆ ಸಮಯದಲ್ಲಂತೂ ನಮ್ಮಲ್ಲಿ ಅನೇಕರಿಗೆ ಅವರು ಹಸ್ತಪ್ರತಿಗಳ ಮಧ್ಯ ಕಳೆದು ಹೋದ ದೊಡ್ಡ ಕವಿಚೇತನವಾಗಿ ಕಂಡರು ಅವರು ಗತಸಾಹಿತ್ಯ ಮತ್ತು ಸಂಸ್ಕೃತಿ ಪುನರುತ್ಥಾನದಲ್ಲೆ ಸಾರ್ಥಕತೆ ಪಡೆದಿರುವರು, ಆ ರಂಗಕ್ಕೆ ಎಣೆಯಿಲ್ಲದ ಕೊಡುಗೆ ನೀಡಿರುವರು .ಶಿಬಿರದಲ್ಲಿನ ಎಲ್ಲರಿಗೂ ಆಧ್ಯಯನಕ್ಕೆ ಉತ್ತೇನ ನೀಡುತ್ತಾ ತಮ್ಮಿಂದ ಎಲ್ಲ ಸಹಕಾರ ಸಹಾಯಗಳನ್ನು ನೀಡಲು ಭರವಸೆ ನೀಡಿರುವುದು ಅವರ ಕಳಕಳಿಯ ದೋತ್ಯಕವಾಗಿದೆ. ಆದರೂ ಸೃಜನಶೀಲ ಸಾಹಿತ್ಯಕ್ಕಂತೂ ತುಂಬಲಾಗದ  ನಷ್ಟವಾಗಿದೆ ಎನಿಸಿತು
 ಹೆಸರು  ಮಾತ್ರ  ಸಣ್ಣಯ್ಯ ಆದರೆ ವಿದ್ವತ್ತು, ಸಾಧನೆ ಮತ್ತು ವ್ಯಕ್ತಿತ್ವದಲ್ಲಿ  ದೊಡ್ಡಯ್ಯ – ಬಹು ದೊಡ್ಡ ಅಯ್ಯ.
.
  

No comments:

Post a Comment