Tuesday, October 23, 2012

ಮುಂಜಾನೆ ನಾನೆದ್ದು ಯಾರ ಯಾರ ನೋಡಲಿ !



ನಮಗೆಲ್ಲ “ಮುಂಜಾನೆ ನಾನೆದ್ದು ಯಾರುಯಾರ ನೆನೆಯಲಿ ಎಳ್ಳು ಜೀರಿಗೆ ಬೆಳೆಯುವ , ಎಳ್ಳು ಜೀರಿಗೆ ಬೆಳೆಯುವ ಭೂತಾಯಿ ನೆನೆವೇನೆ”  ಎಂಬ ಜನಪದ ಗೀತೆ ಬಹು ಪರಿಚಿತ ಇನ್ನು ಅನೇಕ ಜನರಿಗೆ ಬೆಳಗಾದೊಡನೆ ಮೈಮುರಿದು ಏಳುವ ಮೊದಲೆ  ದೇವರುಗಳ ಸುಪ್ರಭಾತ ಕೇಳುವ  ಹವ್ಯಾಸ.ಇರಬಹುದು. ಆದರೆ ಬೆಳಗಾಗೆದ್ದು ಮೊದಲು  ನೋಡುವ  ಮಾತು ಕೇಳಿ ಹುಬ್ಬು ಏರಿಸಿ ಬೇಡಿ
ಈಗಲೂ ಕೆಲವು ಸಂಪ್ರದಾಯಸ್ಥರು ಹಾಸಿಗೆಯಿಂದ ಏಳುವ ಮುಂಚೆ ಎರಡು ಅಂಗೈಗಳನ್ನು ಗಸಗಸ ತಿಕ್ಕಿ  ಮುಖದ ಎದುರು ಹಿಡಿದು ’” ಕರಾಗ್ರೆ ವಸತೇ ಲಕ್ಷ್ಮೀ, ಕರಮಧ್ಯ ಸರಸ್ವತಿ ಕರಮೂಲೆ  ಸ್ಥಿತೆಗೌರಿ ಪ್ರಭಾತೆ ಕರದರ್ಶನಂ” ಎಂದು ಹೇಳಿಕೊಳ್ಳುವವರು. ಬಹುಶಃ ಬೆಳಗಿನಿಂದ ಮಲಗುವ ತನಕ ಕೈನಿಂದ ಮಾಡುವ ಕೆಲಸಗಳ ಮುನ್ಸುಚನೆಯೇ ಅದು ಎಂದುಕೊಂಡಿರುವೆ. ಹಣ ಎಣಿಸುವುದು ತುದಿ ಬೆರಳುಗಳಿಂದ, ಪುಸ್ತಕ ಹಿಡಿದು ಓದುವುದು ಅಂಗೈನಲ್ಲಿ  ಶಕ್ತಿ ಪ್ರದರ್ಶನಕ್ಕಂತೂ ಕರಮೂಲವೆ ಕಾರಣ.ಈಗ ಅದೂ ಕಾಣೆಯಾಗುತ್ತಿರುವ ಅಭ್ಯಾಸ.ಅನೇಕರ ಬೆಳಗು  ಶುರುವಾಗುವುದು ಬೆಡ್‌ಕಾಫಿಯಿಂದ.ತರುವವರು ಅರ್ಧಾಂಗಿಯಾಗಿದ್ದರೆ ಮಡದಿಯದೆ ಮೊದಲ ಮುಖದರ್ಶನ.ಜತೆಗೆ  ಶುದ್ಧ ಸೋಮಾರಿ ಎದ್ದೇಳುವುದು ಎಷ್ಟು ಹೊತ್ತು ಎಂಬ ಸುಪ್ರಾಭಾತವೂ ಕೇಳಿಬಂದರೂ ಅಚ್ಚರಿ ಇಲ್ಲ. ಇನ್ನು ಈಗಿನ ಐಟಿ ಯುವಕರಿಗೆ ಸುಪ್ರಭಾತದ ಅಗತ್ಯವೆ ಇಲ್ಲ ಅವರು ಮಲಗುವುದು ಯಾವಾಗಲೋ , ಏಳುವುದು ಯಾವಗಲೋ.  ಬಿ.ಪಿ.ಒ.ಗಳಲ್ಲಿ ಕೆಲಸ ಮಾಡುವವರಂತೂ ಜಗವೆಲ್ಲ ಮಲಗಿರಲು “ಇವನೊಬ್ಬ ಎದ್ದ, ಜಗವೆಲ್ಲ ಎದ್ದಿರಲು ಇವ ಮಲಗಲು ಸಿದ್ಧ”   ಎಂಬ ನುಡಿಗೆ ಅನುಗುಣವಾಗಿ ಬದುಕುವವರು ಅವರಿಗೆ ಹಗಲು ಇರುಳುಗಳ ನಡುವಿನ ಅಂತರ ಝಣ ಝಣ ಎಣಿಸುವ ಹಣದ ನಾದದಲ್ಲಿ ಮರೆತೇ ಹೋಗಿರುವುದು. 
ಶ್ರೀ ಪೆರಂಬುದೂರಿನ ರಾಮಾನುಜ ದೇವಾಲಯ

ಮಧ್ಯವಯಸ್ಕರು ಆಗಾಗ ಗೊಣಗುವದೂ  ಉಂಟು ಬೆಳಗ್ಗೆ ಎದ್ದು ಯಾರ ಮುಖ ನೋಡಿದೆನೋ ದಿನವೆಲ್ಲಾ ಹಿಡಿದ ಕೆಲಸ ಹಾಳು ಎಂದು ಹಿಡಿಶಾಪ ಹಾಕುವರು, ಅದಕ್ಕೆ ಕೆಲವರು ದೇವರ ಫೋಟೋ, ಇಲ್ಲವಾದರೆ ಕನಿಷ್ಟ ಕ್ಯಾಲಂಡರ್‌ ಅನ್ನಾದರೂ ಹಾಸಿಗೆಯಲ್ಲಿ ಕಣ್ಣು  ಬಿಟ್ಟಾಗ ತಕ್ಷಣ ಕಣ್ಣಿಗೆ  ಬೀಳುವಂತೆ ಹಾಕಿಕೊಂಡಿರುವರು, ಅಷ್ಟಾದರೂ  ಅಧ್ವಾನವಾದರೆ ನಮ್ಮ ಕರ್ಮ ಎಂದುಕೊಂಡು ಸುಮ್ಮನಾಗುವರು. ಆದರೆ ಆಧುನಿಕ ಯುವಜನರಿಗೆ  ಆ ಅನುಕೂಲವೂ ಇಲ್ಲ ಅವರು ಬೆಳಗ್ಗೆ ಎದ್ದಕೂಡಲೆ ಹಲ್ಲು ಉಜ್ಜಲು ಕನ್ನಡಿಯಮುಂದೆ ನಿಲ್ಲುವುದರಿಂದ, ಏನಾದರೂ ಆಗಬಾದ್ದು ಆದರೆ ಬೆಳಗಾಗೆದ್ದು  ಯಾವ ದರಿದ್ರ ಮುಖ ನೋಡಿದೆನೋ ಏನೋ ಎಂದು  ಕೊಂಡರೆ,  ತಮ್ಮನ್ನು ತಾವೆ ಬೈದುಕೊಂಡಂತಾಗುವುದು.
ಇನ್ನು ನಾವು ಪೂಜಿಸುವ ದೇವರುಗಳನ್ನು ಗಮನಿಸಿದರೆ ಅವರಿಗೆ ಹೆಚ್ಚು  ಆಯ್ಕೆಯೇ ಅವಕಾಶವೆ ಇಲ್ಲ. ವಾರ ತಿಥಿ ನೋಡಿ ಆಯುಷ್ಕರ್ಮ  ಮಾಡಿಸಿಕೊಳ್ಳುವ ಅದೇ ಹಳೆಯ ಪೂಜಾರಿಯ ಎಳ್ಳು ಅಕ್ಕಿ ಬೆರತಂತೆ ಇರುವ ಕಪ್ಪು ಬಿಳುಪಿನ ಮೋಟು ಕೂದಲಗಡ್ಡದ ಮುಖವನ್ನೇ ನೋಡಬೇಕು. ಇನ್ನು ಹೆಸರಾಂತ ದೇವರಾದರೆ ಉದಾಹರಣೆಗೆ ನಮ್ಮ ತಿರುಪತಿಯ ವೆಂಕಟೇಶ್ವರನ ಫಜೀತಿ ಹೇಳ ತೀರದು ದರ್ಶನಕ್ಕೆ ಬರುವ ಭಕ್ತ ಸಮೂಹ ಮಲಗಲು ಬಿಟ್ಟರೆ ತಾನೆ ಏಳುವ ಪ್ರಶ್ನೆ. ತಡರಾತ್ರಿ  ಮೂರರ ಮೇಲೆ  ಶಯನೋತ್ಸವ ಮಾಡಿಸುವರು,ಲಾಲಿಹಾಡು ಕೇಳುತ್ತಾ  ಕಣ್ಣು ಮುಚ್ಚುವದರೊಳಗೆ  ಮೂರೂವರೆಗೇ ಶುರುವಾಗುತ್ತದೆ ಸುಪ್ರಭಾತ. “ಕೌಶಲ್ಯ ಸುಪ್ರಜಾ ರಾಮ ಸಂಧ್ಯಾ ಪ್ರವರ್ಧತೆ, ಉತ್ತಿಷ್ಠ ನರ ಶಾರ್ದೂಲ ಕರ್ತವ್ಯಂ ದೈವಮಾತ್ಮಿಕಂ” ಎಂದು ಗಾನಕೋಕಿಲೆ ಸುಬ್ಬಲಕ್ಷ್ಮೀಯೆ ಉಲಿದರೂ ಮಲಗಿದ್ದ ದೇವರಿಗೆ ಏನು,   ಯಾರಿಗೇ ಆದರೂ ಅದು ಕರ್ಣಕಠೋರ. ದೇವರೇನಾದರೂ ಆಧುನಿಕ ವ್ಯಕ್ತಿಯಾಗಿದ್ದರೆ ಭೃಗು ಋಷಿ ಎದೆಗೆ ಪಾದತಾಡನ ಮಾಡಿದಾಗ  ತನಗೆ ಅವಮಾನವಾಯಿತೆಂದು ದೂರವಾಗಿ ಹೋದ  ಮೊದಲ ಮಡದಿ ಲಕ್ಷ್ಮಿ ದೇವಿಯ ಜೊತೆ ಎರಡನೆ ಹೆಂಡತಿಯಾದ ದೇವಿ ಪದ್ಮಾವತಿಯು ಖಂಡಿತವಾಗಿ ಲಾಯರನಿಂದ  ಡಿವೋರ್ಸ ನೋಟೀಸು ಕಳುಹಿಸುತಿದ್ದಳು.
ಶ್ರೀರಾಮಾನುಜಾಚಾರ್ಯರು




ತುಸು ಅನುಕೂಲ ಇರುವ ದೇವಸ್ಥಾನದ  ಹತ್ತಿರ ಇರುವ ಮನೆಯ ಜನರಿಗೆ ಅಲರಾಂ ಇಡುವ ತೊಂದರೆಯೆ ಇಲ್ಲ. ಬೆಳಗಾಗುವದೆ ತಡ ಧ್ವನಿವರ್ಧಕದ ಮೂಲಕ ಕಿವಿಗಪ್ಪಳಿಸುತ್ತದೆ ಭಕ್ತಿ ಗೀತಗಳ ಸರಮಾಲೆ. ಮಸೀದಿ ಹತ್ತಿರವಿದ್ದರೂ ಅಷ್ಟೆ ಪ್ರಾರ್ಥನೆಗೆ ಬರಲು ಮುಲ್ಲಾನ ಕರೆ  ಬಡಿದೆಬ್ಬಿಸುವುದು,
ಹಳ್ಳಿಗಳಲ್ಲಿ ಬೆಳಗಾಗುವುದರ ಸೂಚನೆ ಕೋಳಿ ಕೂಗುವುದು ಎಂದಿತ್ತು. ಅದರಲ್ಲೂ ಮುಂಗೋಳಿ ಕೂಗಿದ ತಕ್ಷಣ ಹಿರಿತಲೆಗಳು ಎದ್ದು ಕೆಲಸ ಶುರು ಮಾಡಿಕೊಳ್ಳುತ್ತಿದ್ದರು. ಹೈನಿದ್ದವರ ಮನೆಯಲ್ಲಿ ಸರಬರ ಬೆಣ್ಣೆ ತೆಗೆಯಲು ಮೊಸರು ಕಡೆಯುವ ಕೆಲಸ ಸಾಗುತಿತ್ತು . ನಂದಿನಿ ಬಂದ ಮೇಲೆ ಹಾಲು , ಮೊಸರಿನ  ಪಾಕೆಟ್‌ ಮತ್ತು ತುಪ್ಪದ ಬಾಟಲಿಗಳು ಬಂದು ಮೊಸರಿನ ಮಂಗಮ್ಮ ಈಗ ಯಾರು ಎಂದು ಕೇಳುವರು ಹೊಸ ಪೀಳಿಗೆಯ ಜನ.. ಈಗ  ಹಳ್ಳಿಗಳಲ್ಲಿ ಜನ ಕೋಳಿಸಾಕುವುದು ಕಡಿಮೆಯಾಗಿದೆ. ಸಾವಿರಾರು ಕೋಳಿಗಳನ್ನು ಸಾಕುವ ಪೌಲ್ಟ್ರಿ ಫಾರಂನಲ್ಲಿನ ಸಂಕರ ಕೋಳಿಗಳಿಗೆ ಕೂಗುವುದೆ ಗೊತ್ತಿಲ್ಲ.  ಇತ್ತೀಚೆಗಂತೂ ಕೆಂಟುಕಿ ಚಿಕನ್‌ ಮತ್ತು ಸುಗುಣ ಚಿಕನ್‌ ಬಂದಿರುವುದರಿಂದ ಧಿಡೀರ್‌ ಕೋಳೀ ಮಾಂಸ ಸಿಗುವಾಗ, ಅಲ್ಲದೆ ಜನರೆ ಕೋಳೀಗೂಡಿನಂತಹ ಮನೆಗಳಲ್ಲಿ ಬದುಕುವುದರಿಂದ ಕೋಳಿ ಸಾಕಣೆ ಕಳೆದು ಹೋದ ಉಪವೃತ್ತಿಯಾಗಿದೆ. ಕೃಷಿ ಕುಟುಂಬಗಳು ಮಾತ್ರವಲ್ಲದೆ ಗ್ರಾಮಂತರ ಪ್ರದೇಶದಲ್ಲಿ ಪ್ರತಿಕುಟುಂಬವೂ ನಾಲಕ್ಕಾರು ಕೋಳಿ ಒಂದೆರಡು ದನ ಸಾಕುವ ಪ್ರವೃತ್ತಿಯು ಇಂದು ಇಲ್ಲದಾಗಿ ಆ ವೃತ್ತಿಯೂ ಜಾಗತೀಕರಣದ ಪ್ರಭಾವಕ್ಕೆ ಒಳಗಾಗಿದೆ. ಇನ್ನು ಸುಪ್ರಭಾತ ಕೇಳಲು ದೇವಸ್ಥಾನದ ಹತ್ತಿರವೇ ಇರಬೇಕೆಂದಿಲ್ಲ. ಟಿವಿ, ರೇಡಿಯೋಗಳು ಬೇಕೆಂದವರ ಮನೆಯಲ್ಲಿ ಒಂದೇಕೆ ಹನ್ನೊಂದು ವಿವಿಧ ಸುಪ್ರಭಾತ ಬಿತ್ತರಿಸುತ್ತವೆ.  ಐ.ಪಾಡು ಮತ್ತು ಮೊಬೈಲುಗಳಂತೂ ಮಲಗಿದವರ ತಲೆ ದಿಂಬಿನಡಿಯಲ್ಲೆ ಇಲ್ಲವಾದರೆ ಕಿವಿಯಲ್ಲೆ ಗುಣುಗುಡುತ್ತವೆ.


ದೇಗುಲದ ಪ್ರದಕ್ಷಿಣೆ ಮಾಡುತ್ತಿರುವ ಗಜರಾಜ


 

ಇಷ್ಟೆಲ್ಲ ಯೋಚನಾ ಲಹರಿಗೆ ಕಾರಣ ಇತ್ತೀಚೆಗೆ ದೇವಸ್ಥಾನ  ಒಂದರಲ್ಲಿ  ನೋಡಿದ ಒಂದು ದೃಶ್ಯ..ಮಂಡ್ಯ ಜಿಲ್ಲೆಯ ಮೇಲು ಕೋಟೆಗೆ ಬಂದು ಹೊಯ್ಸಳಅರಸ ವಿಷ್ಣುವರ್ಧನನ ಗುರುವಾದ ಶ್ರೀ ರಾಮಾನುಜರ ಹುಟ್ಟೂರಾದ ಶ್ರೀ ಪೆರಂಬುದೂರಿಗೆ ಭೇಟಿ ನೀಡಿದೆವು. ಅದೂ ಚುಮು ಚುಮುಮುಂಜಾನೆ. ಮೇಲೆ ಜತೆಗೆ ಜಿನಜಿನಿ ಮಳೆಬೇರೆ. ಈ ಸಲ ಚೆನ್ನೈನ  ಮನೆಯಲ್ಲಿ ದಸರಾ ಹಬ್ಬಕ್ಕೆ ಎಲ್ಲರೂ ಸೇರಿದ್ದೆವು.ಸರಿ ಎಲ್ಲರೂ ಬಂದ ಮೇಲೆ ಯಾಕೆ ಒಂದ ಸುತ್ತು ಪ್ರವಾಸ ಹೋಗಬಾರದೆಂದು  ಬಾಡಿಗೆ ಕಾರು ಗೊತ್ತುಮಾಡಿದೆವು. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ಮಳೆಹಿಡಿದುಕೊಂಡಿತು.  ಧೈರ್ಯಮಾಡಿ ಹೊರೆಟೆವು. ಶ್ರೀ ಪೆರಂಬೂರು ತಲುಪಿದಾಗ ಬೆಳಗಿನ  ಆರೂವರೆ ಗಂಟೆ.ಶ್ರೀ ಪೆರಂಬೂರು ಎಂದರೆ ನಮಗೆ ಏನೋ ಒಂದು ರೀತಿಯ ಆಸಕ್ತಿ. ನಮ್ಮ ಮೇಲುಕೋಟೆಗೆ ಬಂದು ನೆಲಸಿದ ರಾಮಾನುಜಾಚಾರ್ಯರ ಜನ್ಮ ಸ್ಥಳ. ಶ್ರೀ ವೈಷ್ಣವರ ಯಾತ್ರಾಸ್ಥಳ. ಹೇಗಿದ್ದರೂ ಹೈವೇ ಪಕ್ಕದಲ್ಲೆ ಇದೆ. ಅರ್ಧ ಗಂಟೆಯಲ್ಲಿ ನೋಡಿದರಾಯಿತುಎಂದು ಕೊಂಡು ಹೋದವರಿಗೆ  ತುಸು ನಿರಾಶೆಯೆ ಆಯಿತು.ದೇವಸ್ಥಾನದ ಬಾಗಲು ತೆರೆದಿತ್ತು.ದೇವರ ದರ್ಶನ ಮಾಡಿ ಹೊರಡೆವ ನಮ್ಮ ಯೋಜನೆ ತಡೆಯಾಯಿತು. ನಮ್ಮಂತೆ ಇನ್ನೂ ಅನೇಕರು ಕಾದುನಿಂತಿದ್ದರು. ಆದರೆ ಯಾರಿಗೂ ಪ್ರವೇಶನೀಡಿರಲಿಲ್ಲ.ಕಾರಣ ಕೇಳಿದಾಗ ನೈರ್ಮಾಲ್ಯದರ್ಶನ ಮೊದಲು ಮಾನವರಿಗೆ ಅಲ್ಲ ಎಂಬ ಉತ್ತರ ಬಂದಿತು.ಅಷ್ಟರಲ್ಲೆ ಅಲ್ಲಿಗೆ ಆನೆಯೊಂದು ಬಂದಿತು. ನಮಗೆ ಆನೆಯಾದರೂ ನೋಡಲು ಸಿಕ್ಕಿತಲ್ಲ ನೋಡಲು ಎಂದು ನಮ್ಮೊಡನಿದ್ದ ಮಕ್ಕಳಿಗೆ ಗಜರಾಜನ ದರ್ಶನ ಮಾಡಿಸಿದೆವು.ನಂತರ ತಿಳಿಯಿತು ಗಜರಾಜನ ಪ್ರವೇಶದ ನಂತರವೆ ನಮಗೆಲ್ಲ ದೇವಾಲಯದ ಪ್ರವೇಶ ಎಂದು ನಮಗಂತೂ ಅಚ್ಚರಿ. ಆನೆ ಏನೂ ಚಿಕ್ಕದಲ್ಲ. ಆಗಲೆ ನಡುವಯಸ್ಸಿನದು. ಅದಕ್ಕೆ ತಕ್ಕಂತೆ ಬೃಹತ್ತಾಗಿ ಬೆಳೆದಿತ್ತು.ನಾವು ದೇವಾಲಯದ ಗರ್ಭಗುಡಿಗೇ ಅದರ ಪ್ರವೇಶ ಎಂದಂದಾಗ ಅರೆ ಕ್ಷಣ ದಂಗಾದೆವು. ಇದು  ದೇವಸ್ಥಾನದ ಒಳಗೆ ಅದೂ ಆರೆಂಟು ಮೆಟ್ಟಿಲು ಹತ್ತಿ ಒಳ ಹೋಗುವದು ಎಂದರೆ ಕುತೂಹಲದ ವಿಷಯವೆ. 


ದೇವರ ಪ್ರಥಮ ದರ್ಶನಕ್ಕೆ ದೇಗುದಲ್ಲಿ ಹೋಗುತ್ತಿರುವ ಗಜರಾಜ ಮತ್ತು ಗೋ ಮಾತೆ

ರಾಜ ಸೊಂಡಿಲು ಎತ್ತಿ ಘೀಳಿಟ್ಟು ತನ್ನ ಗೌರವ ಸಲ್ಲಿಸಿದಮೊದಲು ಆದಿಕೇಶವನ ನಂತರ ರಾಮಾನುಜರ ಅರ್ಚನೆಯಾಯಿತು. ನಂತರ ಹಾಲನ್ನು ತೀರ್ಥಎಂದು ಮತ್ತು ಹಾಲಿನಲ್ಲಿ ಮಾಡಿದ ಗೋಧಿ ರೊಟ್ಟಿಯ ತುಣುಕುಗಳನ್ನು ಪ್ರಸಾದವೆಂದು ನೀಡಲಾಯಿತು. ರಾಮಾನುಜರ ಕಾಲದಿಂದಲೂ ಈ ಆಚರಣೆ ಇದೆ ಎಂದು ಭಕ್ತರು ಹೇಳಿದರು.ಪ್ರಸಾದವೆಂದರೆ ಸಿಹಿಪೊಂಗಲ್‌, ಮೊಸರನ್ನ ಪುಳಿಯೋಗರ ಇತ್ಯಾದಿಗಳೆಂದು ತಿಳಿದಿದ್ದ ನಮಗೆ ಆಶ್ಚರ್ಯವೇ ಆಶ್ಚರ್ಯ. ಬೆಳಗಿನ ವಿಶ್ವರೂಪದರ್ಶನದ ಸಮಯದಲ್ಲಿ ಸದಾ ಇದೇ ಪದ್ದತಿ ಎಂದು ಕೆಲಭಕ್ತರು ತಿಳಿಸಿದರು. ಫೂಜೆ ಮುಗಿಯುವುದರಲ್ಲಿ ಗೋಮಾತ್ರವಿಸರ್ಜನೆ ಆಯಿತು. ಹಾಗಾದಾಗ ಮಾತ್ರ ಆವರಣ ಸುದ್ಧಿಯಾಗಿದೆ ಎಂದು ಸಂಕೇತ ಬಂದಂತೆ. ಮುಂದಿನ ವಿಧಿವಿಧಾನಗಳು ಶುರುವಾಗಲು ಗೋಮೂತ್ರದ ಅಗತ್ಯವಾಗಿ ಇರಲೇಬೇಕಂತೆ. ಮತ್ತು ಅದು ತಪ್ಪದೇ ಆಗುವುದು ಎಂದು ತಿಳಿದು ಬಂತು. ಬಹುಶಃ ಹಸುವೂ ಈ ಆಚರಣೆಗ  ಹೊಂದಿಕೊಂಡು ತಪ್ಪದೆ ಗೋಮಾತ್ರ ವಿಸರ್ಜಿಸಬಹುದೆಂದು ಕೊಂಡೆವು. ರಷ್ಯಾದ ಮನಶಾಸ್ತ್ರಜ್ಞ ಪಾವಲೋವ್‌ ನಾಯಿಯ ಮೇಲೆ ಮಾಡಿದ್ದ ಪ್ರಯೋಗದ ಪುನರಾವರ್ತನೆ ಇದಾಗಿರಬಹುದೆ ಎನಿಸಿತು.
ಇನ್ನು ಬೆಳಗಾಗೆದ್ದು ನೋಡುವ ಮಾತಿಗೆ ಬಂದರೆ ಯಥಾ ರೀತಿ ಟಿ.ವಿಯದೇ ಪಾರುಪತ್ಯ. ಏನುನೋಡುವುದು? ದೇವರು ದೇವಿಯರ ದರ್ಶನ ಮಾಡುವುದೋ ಕುಣಿಯುವ ಕಾಮಿನಿಯರತ್ತ ಕಣ್ಣು ಹಾಯಿಸುವುದೋ  ಎನ್ನುವುದು  ಅವರವರ ಅಭಿರುಚಿಗೆ ಬಿಟ್ಟ ವಿಚಾರವಾಗಿದೆ.
ಮುಂಜಾನೆ ಎದ್ದು ಯಾರ ಯಾರ ನೋಡಲಿ ಎಂಬ ವಿಚಾರ ಗಾಳಿಪಟದಂತೆ ಮನದಾಗಸದಲ್ಲಿ ಹಾರಾಡಿದೆ.
ನಾವು ಕಂಡು ಕೇಳಿ ಅರಿಯದ ವಿಷಯ. ಅನೇಕ ದೇಗುಲಗಳಲ್ಲಿ ಆನೆ ಇರುವುದು ಸಾಮಾನ್ಯ. ಆದರೆ ಅದು ಹೊರಗೆ ನಿಲ್ಲುವುದು. ಆದರೆ ಇಲ್ಲಿ ಅದು  ಸೀದಾ ದೇವರು ಕಾಣುವಂತೆ ಮಧ್ಯರಂಗಕ್ಕೆ ಬರುವುದು. ಆನೆಯನ್ನು ಬಾಗಿಲಬಳಿ ನಿಲ್ಲಿಸಿ ಉತ್ಸವ ಮೂರ್ತಿಯ ದರ್ಶನ ಮಾಡಿಸುವರು ಎಂದುಕೊಂಡಿದ್ದ ನಮ್ಮ ಊಹೆ ತಪ್ಪಾಗಿತ್ತು. 


 ವಾದ್ಯ ಸಮೇತ  ದೇಗುಲದ ಪ್ರದಕ್ಷಿಣೆಗೆ ಹೊಟಿತು. ಜತೆಗೆ ದೇವರ ಮುಖಮಾರ್ಜನಕ್ಕಾಗಿ ನೀರಿನಕುಂಭ ಹೊತ್ತ ಅರ್ಚಕರೂ ಇದ್ದರು.ಆನೆಯು ಗಂಭೀರವಾಗಿ ದೇಗುಲದ ಹೊರಪ್ರಕಾರದ ಒಂದು ಪ್ರದಕ್ಷಿಣೆ ಹಾಕಿತು. ನೋಡ ನೋಡುತ್ತಿರುವಂತೆಯೇ ಎಂಟು ಮೆಟ್ಟಲುಗಳನ್ನೂ ಹತ್ತಿ ಮಧ್ಯರಂಗ ಪ್ರವೇಶಿಸಿತು. ನಂತರವೇ ನಮ್ಮನ್ನೂ ಒಳ ಬಿಟ್ಟರು. ಅಲ್ಲಿ ದೇವರಿಗೆ ಮುಖ ಮಾರ್ಜನಕ್ಕೆ ನೀರಿನ ಜತೆಗೆ ಮುಖವರಸಿಕೊಳ್ಳಲು ರೇಷ್ಮೆ ವಸ್ತ್ರವಿರುವ ತಟ್ಟೆ.ಒಳಗೆ ಹೋದಾಗ ನಮಗೆ ಇನ್ನೂ ಒಂದು ಅಚ್ಚರಿಕಾದಿತ್ತು ಮಧ್ಯರಂಗದಿಂದ ಒಳಗಿನ ಆವರಣದಲ್ಲಿ ಸೀದಾ ದೇವರ ಎದುರಾಗಿ ಹಸು ಒಂದು ಬಂದು ನಿಂತಿತ್ತು. ಆನೆಯನ್ನು ಅದರ ಮಾವುತನು ಮುನ್ನೆಡಿಸಿ ಅದಕ್ಕಾಗಿಯೆ ನಿಗದಿಯಾದ ಒಳಪ್ರಕಾರದಲ್ಲಿ ದೇವರು ಅದನ್ನು ನೋಡುವಂತೆ ನಿಲ್ಲಿಸಿದ. ಆಗ ಅರ್ಚಕರು ಗರ್ಭಗುಡಿಯ ಬಾಗಿಲು ತೆರೆದರು.ಒಳಗೆ ಹೋಗಿ ಪ್ರಾತಃ ಪೂಜೆ ಸಲ್ಲಿಸಿ ನಂತರ ಅಲ್ಲಿರುವ ರೇಷ್ಮೆಯ ತೆರೆಯನ್ನೂ ಸರಿಸಿದರು  . 

ದೇವರ ದರ್ಶನ ಮೊದಲು ಗೋ ಮಾತೆಗೆ ಹಾಗೂ ಗಜರಾಜನಿಗೆ. ತೆರೆ ಸರಿದ ತಕ್ಷಣ ಗಜrA
ಅನೇಕ ದೇವಾಲಯಗಳಲ್ಲಿ ಆನೆ ಹಸುಗಳು ಇವೆ. ಆದರೆ ದೇವರ ಪ್ರಥಮ ದರ್ಶನ ಅವಕ್ಕೆ  ಮೀಸಲು ಎಂಬುದು ಮಾತ್ರ  ಈವರೆಗೆ ನಮಗೆ ಗೊತ್ತಿರಲಿಲ್ಲ.ಕಾರಣ ಕೇಳಿದಾಗ ಮೊದಲಿಂದ ಬಂದ ಸಂಪ್ರದಾಯ ಎಂಬ ಸಿದ್ಧ ಉತ್ತರ ಸಿಕ್ಕಿತು.
ಸಮಯ ಎಂಟುಮೀರಿತ್ತು. ಹೊಟ್ಟೆ ತಾಳ ಹಾಕುತಿತ್ತು. ಉಪಹಾರಕ್ಕೆ ವಿಚಾರಿಸಿದಾಗ ಹತ್ತಿರದಲ್ಲಿಯೇ ಇದ್ದ ರಾಮಾನುಜ ಹೋಟೆಲ್‌ ತೋರಿಸಿದರು.  ಮೇಜಿನ ಮೇಲೆ ಕುಡಿಬಾಳೆ ಎಲೆ ಅದರಲ್ಲಿ ಬಿಸಿಬಿಸಿ ಇಡ್ಲಿ, ವಡೆ, ಜೊತೆಗೆ ಪೊಂಗಲ್‌ ,ಪೂರಿತರಿಸಿ ಹಂಚಿಕೊಂಡು ರುಚಿ ನೋಡಿದೆವು.ಅಲ್ಲಿಒಂದೊಂದೆ ಪೂರಿ ಕೊಡುವ ಅವಕಾಶವಿತ್ತು. ಗುಣ ಮಟ್ಟಚೆನ್ನಾಗಿತ್ತು ಏಳ ಹೊರಟಾಗ ನಾವು ತಿಂದ ತಿಂಡಿಯ ಎಲೆಯನ್ನು ನಾವೆ ಎತ್ತಿ ಹೊರಗಿರುವ ಡ್ರಮ್‌ನಲ್ಲಿ ಹಾಕಲು ತಿಳಿಸಿದರು. ಆಗ ನನಗೆ ಶ್ರೀ ವೈಷ್ಣವರ ಮನೆಗೆ ಹೋದಾಗಿನ ನೆನಪು ಬಂತು.ಅವರ ಮನೆಯಲ್ಲಿ ಎಂಜಲು ಮುಸುರಿಯ ಬಗ್ಗೆ ಕಟ್ಟುನಿಟ್ಟು. ಅವರ ಮನೆಯಲ್ಲಿ ನೀರಿಗೆ ತೀರ್ಥ ಎನ್ನುವರು.ಅದಕ್ಕೆ ಕಾಣುತ್ತೆ ನೀರನ್ನು ಕುಡಿಯುವಾಗಲೂ ದೇವರ ತೀರ್ಥ ಕುಡಿದಷ್ಟೆ ಶ್ರದ್ಧೆ.. ಎಲ್ಲರೂ ನೀರಿನ ಲೋಟವನ್ನು ತುಟಿಗೆ ತಾಗಿಸದೆ ಕುಡಿಯುವರು. ನಾವೂ ಅವರನ್ನು ಅನುಸರಿಸಲು ಹೋಗಿ ನೀರೆಲ್ಲ ಮೈ ಮೇಲೆ ಚೆಲ್ಲಿ ತೀರ್ಥದಿಂದ ಅಭಿಷೇಕವಾಗಿತ್ತು. ಬಾಳೆ ಹಣ್ಣನ್ನೂ ತುಸುವೆ ಸುಲಿದು ಕೈನಿಂದ ಮುರಿದು ತಿನ್ನುತ್ತಿದ್ದರು.ಪೂರ್ತಿ ಹಣ್ಣನ್ನು ಕಚ್ಚುತ್ತಿರಲಿಲ್ಲ. ಅವರು ಬಿಸಿ ಕಾಫಿಯನ್ನು ಕುಡಿವಬಗೆ ನಮಗೆ ಅಚ್ಚರಿ ಮೂಡಿಸುತಿತ್ತು.ಶ್ರೀವೈಷ್ಣವರ ಹೋಟೆಲಿನಲ್ಲಿ ಆಷ್ಟು ಮಡಿವಂತಿಕೆ ಇರಲಿಲ್ಲ.  ಅದು ನಮ್ಮ ಪುಣ್ಯ ಎಂದುಕೊಂಡು ಅಲ್ಲಿಂದ ಹೊರೆಟೆವು.

No comments:

Post a Comment