Monday, October 1, 2012

ಸತ್ಯ ಕೇಳಿದ್ದಕ್ಕೆ ಸಚೇಲ ಸ್ನಾನ


ಕೆಲಸಕ್ಕೆ ಸೇರಿದ ಎರಡೆ ವರ್ಷಕ್ಕೆ ಬಿಎಡ್‌ ತರಬೇತಿಗೆ ನಿಯೋಜನೆಯಾಯಿತು. ತರಬೇತಿ ಪಡೆದ ಶಿಕ್ಷಕರ ಕೊರತೆ ಇರುವುದರಿಂದ ಆಗ ಸರ್ಕಾರದ ಖರ್ಚಿನಲ್ಲೆ ವೇತನ ನೀಡಿ ಒಂದು ವರ್ಷದ ತರಬೇತಿಗೆ ಕಳುಹಿಸುತಿದ್ದರು. ಬಳ್ಳಾರಿಯ ಕೊಟ್ಟೂರೇಶ್ವರ ಶಿಕ್ಷಣ ಕಾಲೇಜು ಆಗ ಬಹಳ ಹೆಸರು ವಾಸಿ. ಅಲ್ಲಿನ ಪ್ರಿನ್ಸಿಪಾಲ ಗಂಗಪ್ಪನವರ ನೇತೃತ್ವದಲ್ಲಿ ಅದು ವಿಶ್ವವಿದ್ಯಾಲಯದಲ್ಲೆ ಮೊದಲ ಹತ್ತು ಸ್ಥಾನಗಳಲ್ಲಿ ಅರ್ಧಕರ್ಧ ಪಡೆಯುತಿತ್ತು. ಬಿಎಡ್‌ನ ಪಾಠ ಪ್ರವಚನ ಬಹು ಬಿಗಿಯಾಗಿತ್ತು. ಬೆಳಗ್ಗೆ ಹತ್ತು ಗಂಟೆಯಿಂದ ತರತಿಯಲ್ಲಿ ಪಾಠ ಕೇಳಿ ಮಧ್ಯಾಹ್ನದ ಮೇಲೆ ನಾವೆ ಹೈಸ್ಕೂಲಿನಲ್ಲಿ ಪಾಠಬೋಧನೆಯ ಅಭ್ಯಾಸ ಮಾಡಬೇಕಿತ್ತು. ನಮ್ಮಲ್ಲಿ ಬಹುತೇಕ ಅದೆ ಪದವಿ ಪಡೆದವರು ಟೀಚಿಂಗ್‌ ಪ್ರಾಕ್ಟೀಸ್ ಎಂದರೆ ನಮ್ಮ ಗೆಳೆಯರಿಗೆ ಅನೇಕರಿಗೆ ಹಿಂಜರಿಕೆ. ಹೊಸ ವಾತಾವರಣ ನಗರದ ಮಕ್ಕಳು. ಪಾಠ ಮಾಡುವುದೆಂದರೆ ಕೈಕಾಲು ನಡುಕ. ಕೆಲವರು ಬೋರ್ಡಿನ ಕಡೆ ತಿರುಗಿ ಬರೆಯಲು ಶುರು ಮಾಡಿದರೆ ವಿದ್ಯಾರ್ಥಿಗಳ ಕಡೆ ತಿರುಗುತ್ತಲೆ ಇರಲಿಲ್ಲ. ಇನ್ನೂ ಕೆಲವರು ಉರುಹಚ್ಚಿಕೊಂಡು ಬಂದು ಎತ್ತು ಉಚ್ಚೆ ಹೊಯದಂತೆ ಬಿಟ್ಟೂಬಿಡದೆ ಎಲ್ಲವನ್ನೂ ಒಪ್ಪಿಸುತಿದ್ದರು. ಪ್ರಶ್ನೆ ಕೇಳುವ ರೀತಿಯಂತೂ ದೇವರಿಗೆ ಪ್ರೀತಿ. ಮೊದ ಮೊದಲು ಅಭಾಸಗಳಾದರೂ ಸುಮಾರು ಮೂರು ತಿಂಗಳ ಕಾಲ ಪ್ರಾಧ್ಯಾಪಕರ ಮಾರ್ಗದರ್ಶನ ಮತ್ತು ಸಹಪಾಠಿಗಳ ಟೀಕೆ ಟಿಪ್ಪಣಿಗಳಿಂದ ಉತ್ತಮ ಶಿಕ್ಷಕರಾಗಿ ರೂಪುಗೊಳ್ಳುತಿದ್ದರು. ಅದಕ್ಕೆಂದೆ ಮೊದಲು ಪಾಠ ಟಿಪ್ಪಣಿ ಬರೆಯಬೇಕು. ಅದನ್ನು ಅನುಮೋದನೆ ಪಡೆದು ಅದಕ್ಕೆ ಅಗತ್ಯವಾದ ಪಾಠೋಪಕರಣದ ಸಮೇತ ತರಗತಿಗೆ ಹೋಗಬೇಕು.
ಅದೆಲ್ಲದರ ಜತೆ ಪಾಠ ಮಾಡುವಾಗ ಪ್ರಾಧ್ಯಾಪಕರು ಮತ್ತು ಸಹಪಾಠಿಗಳು ಗಮನಿಸುವರು. ಅವರಿಗೆ ಅಂಕ ನೀಡುವರು. ಅದು ಅಂತರ್‌ಮೌಲ್ಯಮಾಪನಕ್ಕೆ ಸೇರುತಿತ್ತು, ತುಸು ಚುರುಕಾಗಿರುವ ಸಹಪಾಠಿಗಳಿಗೆ ಪಾಠದ ಚರ್ಚೆಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಸದೆ ಇರಲು ಕಾಫಿ ತಿಂಡಿ ಆಮಿಷವೂ ಇರುತಿತ್ತು. ಆ ಅವಧಿಯಲ್ಲಿ ಮೀನಾಕ್ಷಿ ಭವನದ ದೋಸೆ ಸಂಜೆ ಖಾಯಂ. ಪ್ರತಿಫಲವಾಗಿ ಪಾಠದ ಟೀಕೆಯನ್ನು ಪ್ರಾಧ್ಯಾಪಕರು ಹೋದ ನಂತರ ಮಾತ್ರ ತಿಳಿಸಲು ಕೋರುತಿದ್ದರು.
ವಿಶೇಷವಾಗಿ ಪಾಠ ಪ್ರಾರಂಭ ಮಾಡುವಾಗ ಅಂದಿನ ವಿಷಯವನ್ನು ಮಕ್ಕಳ ಬಾಯಿಂದಲೆ ಹೊರಡಿಸಬೇಕು ಎಂಬುದು ವಾಡಿಕೆ. ಅದೆ ಬಹು ತಲೆನೋವಿನ ಕೆಲಸ. ವಿದ್ಯಾರ್ಥಿಗಳಿಗೂ ಗೊತ್ತು ನಾವು ತರಬೇತಿಗೆ ಬಂದವರು ಎಂದು. ಅದಕ್ಕೆ ಉತ್ತರ ಗೊತ್ತಿದ್ದರೂ ಹೇಳುತ್ತಿರಲಿಲ್ಲ. ಕೆಲವರು ಅಸಂಬದ್ಧ ಉತ್ತರ ಕೊಡುತಿದ್ದರು. ತರಗತಿಯ ನಿರ್ವಹಣೆಗೂ ಅಂಕಗಳು ಇದ್ದವು. ಕೆಲವು ಕಿಲಾಡಿಗಳು ವಿದ್ಯಾರ್ಥಿಗಳಿಗೆ ಮೊದಲೆ ಚಾಕಲೇಟು ಕೊಟ್ಟು ಸರಿ ಮಾಡಿಕೊಂಡಿರುವರು. ಅದರ ಪರಿಣಾಮ ಪ್ರಶ್ನೆ ಕೇಳುವ ಮೊದಲೆ ಉತ್ತರ ಬರುತಿತ್ತು. ಇನ್ನು ಪೀಠಿಕೆಯಂತೂ ಅನೇಕ ಸಲ ನಗು ಉಕ್ಕಿಸುತಿತ್ತು. ಪಾಠ ಪ್ರಾರಂಭಿಸುವಾಗ, ``ತಿಳಿದಿರುವುದರಿಂದ ತಿಳಿಯದಿರುವುದರ ಕಡೆ ಹೋಗಬೇಕು, ಸಾಮಾನ್ಯದಿಂದ ನಿರ್ದಿಷ್ಟದ ಕಡೆಗೆ ಸಾಗಬೇಕು’’ ಎಂಬುದು ಬೋಧನೆಯ ಮೂಲತತ್ವ. ಮಗುವಿಗೆ ತಿಳಿದಿರುವದನ್ನು ಆಧಾರವಾಗಿಟ್ಟುಕೊಂಡು ಅದರ ಮೇಲೆ ಹೊಸದನ್ನು ಕಲಿಸಬೇಕು. ಆದರೆ ನಮ್ಮ ಗೆಳೆಯರ ಕಸರತ್ತು ಅತಿರೇಕಕ್ಕೆ ಹೋಗುತಿತ್ತು. ತಿರುಳಿಗಿಂತ ಸಿಪ್ಪೆಗೆ ಪ್ರಾಧಾನ್ಯ ಸಿಗುತಿತ್ತು.
ವಿಜ್ಞಾನದ ಪಾಠವನ್ನು ಗೆಳೆಯ ಬಹು ಧೈರ್ಯದಿಂದ ಪ್ರಾರಂಭಿಸಿದ.
ನಿಮಗೆಲ್ಲ ರಾಮಾಯಣ ಗೊತ್ತಾ?
ಗೊತ್ತು ಸಾರ್‌ ಒಟ್ಟಿಗೆ ಉತ್ತರಿಸಿದರು ಮಕ್ಕಳು.
ರಾಮನ ಹೆಂಡತಿಯ ಹೆಸರು ಏನು?
ಸೀತೆ.
ಸೀತೆಯ ತಂದೆಯ ಹೆಸರು ಏನು?
ಜನಕ.
ಗುಡ್‌ ವೆರಿ ಗುಡ್‌, ಗಾಳಿಯಲ್ಲಿ ಜನಕ ಎಂದು ಕೊನೆಯಾಗುವ ಅನಿಲವಿದೆ ಹೇಳಿ.
ಆಮ್ಲಜನಕ.
ಸಾರಜನಕ.
ಮತ್ತೊಂದು ಅನಿಲ ನೀರಿನ ಹುಟ್ಟಿಗೆ ಕಾರಣವಾದದ್ದು.
ನೀರು ಜನಕ. ನೀನು ಹೇಳಿದ್ದು ಸರಿ ಆದರೆ ಅದು ನೀರು ಜನಕ ಅಲ್ಲ, ಜಲ ಜನಕ ಅದರ ತಯಾರಿಕೆ ಮತ್ತು ಗುಣ ಲಕ್ಷಣಗಳ ಬಗ್ಗೆ ಈದಿನ ತಿಳಿಯೋಣ.
ಪುರಾಣದ ಜನಕನನ್ನು ವಿಜ್ಞಾನಕ್ಕೆ ತಳಕು ಹಾಕಿದ್ದ.
ಇನ್ನೊಬ್ಬ ಗೆಳೆಯ ಮಕ್ಕಳಿಗೆ ಇಷ್ಟವಾದ ಪ್ರಶ್ನೆಗಳನ್ನೆ ಕೇಳಿದ.
ನಿಮಗೆ ಯಾವ ತಿಂಡಿ ಇಷ್ಟ?
ಇಡ್ಲಿ, ಪೂರಿ, ದೋಸೆ ಹೀಗೆ ಪಟ ಪಟ ಉತ್ತರ ಬಂದವು,
ದೋಸೆಗಳಲ್ಲಿ ಅನೇಕ ವಿಧ ಇವೆ ಹೇಳುವಿರಾ?
ರವಾದೋಸೆ, ಖಾಲಿ ದೋಸೆ, ಮಸಾಲೆ ದೋಸೆ, ಬೆಣ್ಣೆದೋಸೆ ಹೀಗೆ ಉತ್ತರಗಳು ಪೈಪೋಟಿಯ ಮೇಲೆ ಬಂದವು?
ನಮ್ಮ ರಾಜ್ಯದಲ್ಲಿ ಬೆಣ್ಣೆ ದೋಸೆಗೆ ಒಂದು ನಗರ ಪ್ರಖ್ಯಾತಿಯಾಗಿದೆ ಅದು ಯಾವುದು?
ದಾವಣಗೆರೆ.
ಅದರ ಪಕ್ಕದಲ್ಲೆ ಒಂದು ದೊಡ್ಡ ಊರಿದೆ ಅದರ ಹೆಸರು ಹೇಳಿ.
ಹರಿಹರ.
ವೆರಿ ಗುಡ್‌.
ಬೋರ್ಡಿನ ಕಡೆ ತಿರುಗಿ ಹರಿಹರ’’ ಎಂದು ಶೀರ್ಷಿಕೆ ಬರೆದ.
ನಮಗೆಲ್ಲ ಅಚ್ಚರಿ. ಕನ್ನಡ ತರಗತಿಯಲ್ಲಿ ಭೂಗೋಲದ ಬಗ್ಗೆ ಪಾಠ ಮಾಡುತ್ತಿರುವನಲ್ಲ, ಎಂದು.
ಮಂದಹಾಸ ಬೀರುತ್ತಾ ವಿದ್ಯಾರ್ಥಿಗಳಿಗೆ ಹೇಳಿದ.
ಈ ದಿವಸ ನಾವು ಹರಿಹರ ಕವಿಯ ರಗಳೆಯೊಂದನ್ನು ಕಲಿಯೋಣ.
ಆದಿಕವಿಯ ಹೆಸರು ಹೊರಡಿಸಿದ ಒಬ್ಬ ಅಭ್ಯರ್ಥಿಯ ಪ್ರಯತ್ನ ಈಗಲೂ ನಗು ತರಿಸುವುದು.
ಶಾಲೆಗೆ ದೂರದಿಂದ ಬರುವ ವಿದ್ಯಾರ್ಥಿಗಳು ಹೇಗೆ ಬರುತ್ತಾರೆ.
ಸೈಕಲ್‌ ಮೇಲೆ, ಉತ್ತರಿಸಿದರು ಮಕ್ಕಳು.
ಸೈಕಲ್‌ ಚಕ್ರಕ್ಕೆ ಗಾಳಿ ಹೋದರೆ ಏನು ಮಾಡುವಿರಿ?
ಗಾಳಿ ತುಂಬಿಸುವೆವು.
ಗಾಳಿ ತುಂಬಲು ಏನು ಬಳಸುವಿರಿ?
ಪಂಪು ಬಳಸುತ್ತೇವೆ.
ಇನ್ನೊಂದು ಸಲ ಹೇಳಿ.
ಪಂಪು, ಒಟ್ಟಿಗೆ ಉತ್ತರ ಬಂತು.
ಕಪ್ಪು ಹಲಗೆಯ ಮೇಲೆ ಪಂಪುಎಂದು ಬರೆದು ಕೊಂಬು ಅಳಿಸಿದ.
ಇದನ್ನು ಓದಿ.
ಪಂಪ, ಎಂದರು.
ಈದಿನ ಆದಿಕವಿ ಪಂಪ ನ ಬಗ್ಗೆ ತಿಳಿದುಕೊಳ್ಳೋಣ.
ಈಗ ನೆನಸಿಕೊಂಡರೆ ಅಸಂಬದ್ಧ ಎನಿಸುವುದು, ಸಾಧಾರಣವಾಗಿ ಬೋಧನೆಯು ಬಹು ಸುಲಭ ಎಂಬ ಭಾವನೆ ಬಹಳ ಜನಕ್ಕಿದೆ. ಯಾರು ಬೇಕಾದರೂ ಪಾಠ ಮಾಡಬಹುದು ಎನ್ನುವವರೂ ಇದ್ದಾರೆ. ವೃತ್ತಿಯನ್ನು ಕೀಳಾಗಿ ಕಾಣುವ ಒಂದು ನಾಣ್ಣುಡಿಯೆ ಚಾಲತಿಯಲ್ಲಿದೆ, “ಸ್ಟೇಷನ್‌ ಮಾಸ್ಟರಿಗೆ ನಿದ್ದಿ ಇಲ್ಲ, ಸ್ಕೂಲು ಮಾಸ್ಟರ್‌ಗೆ ಬುದ್ಧಿ ಇಲ್ಲಅದು ತಪ್ಪು ಕಲ್ಪನೆ. ಮಕ್ಕಳು ಮಾಹಿತಿ ತಂಬುವ ಗೋಣಿಚೀಲ ಅಲ್ಲ. ನಿಜವಾದ ಶಿಕ್ಷಣ ಎಂದರೆ ಬರಿ ಮೂರು  Rಗಳನ್ನು (Reading, writing ಮತ್ತು  Arithmetic)  ಕಲಿಸುವುದು ಮಾತ್ರ ಅಲ್ಲ. ಅವರಿಗೆ ಇನ್ನೊಂದು ಅತಿ ಮುಖ್ಯವಾಗಿ ಬೇಕು ಅದೆ reference skill. ಅಂದರೆ ಪರಾಮರ್ಶನ ಕೌಶಲ್ಯ. ತಮಗೆ ಬೇಕಾದುದನ್ನು ಅರಿತು ಹುಡುಕುವ ಕಲೆ. ಶಿಕ್ಷಕ ಅದನ್ನು ಕಲಿಸಬೇಕು. ತರಬೇತಿಯಲ್ಲಿ ಅದರ ಪರಿಚಯ ನಮಗಾಯಿತು. ಪದವಿಯಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದವರು ಉತ್ತಮ ಶಿಕ್ಷಕರಾಗುವರು ಎಂದು ಹೇಳುವ ಹಾಗಿಲ್ಲ. ವಿದ್ಯಾರ್ಥಿಗಳ ಮಟ್ಟಕ್ಕೆ ಇಳಿದು ಅವರನ್ನು ಕ್ರಮೇಣ ತನ್ನ ಮಟ್ಟಕ್ಕೆ ಏರಿಸಬಲ್ಲವನೆ ಉತ್ತಮ ಶಿಕ್ಷಕ. ಅದು ಇಲ್ಲ, ಇದು ಇಲ್ಲ ಎಂದು ದೂರುತ್ತಾ ಕೂಡುವುದಕ್ಕಿಂತ ಇರುವುದರಲ್ಲೆ ಸಾಧನೆ ಮಾಡುವ ಮನವಿರಬೇಕು. ವಿದ್ಯಾರ್ಥಿಗಳನ್ನು ದಡ್ಡರು ಎಂದು ಹೀಗಳೆದರೆ ಉಪಯೊಗವಿಲ್ಲ, ಜಾಣ ಮಕ್ಕಳಿಗೆ ಕಲಿಯಲು ಶಿಕ್ಷಕನ ಸಹಾಯಕ ಹೆಚ್ಚು ಬೇಕಿಲ್ಲ. ರೋಗ ಹೆಚ್ಚಿರುವಲ್ಲಿ ವೈದ್ಯನ ಅಗತ್ಯವಿರುವುದು, ಕತ್ತಲಿದ್ದಲ್ಲಿ ಬೆಳಕಿನ ಅವಶ್ಯಕತೆ ಇರುವುದು, ಕಲಿಕೆಯಲ್ಲಿ ಹಿಂದುಳಿದವರನ್ನು ಮುಂದೆ ತರುವವನೆ ನಿಜವಾದ ಶಿಕ್ಷಕ. ವಿಷಯ ಪರಿಣಿತಿ, ಸಹೃದಯತೆ, ಪೂರ್ವಸಿದ್ಧತೆ ಮತ್ತು ಪರಿಶ್ರಮವೆ ಬೋಧನೆಯ ಆಧಾರಸ್ತಂಭಗಳು ಎಂದು ತರಬೇತಿಯಲ್ಲಿ ಕಲಿತೆವು. ಕಂಬಳಿಹುಳುಗಳನ್ನು ಬಣ್ಣ ಬಣ್ದ ಚಿಟ್ಟೆಯಾಗಿಸುವ ಪ್ರಕ್ರಿಯೆ ಶಿಕ್ಷಕ ತರಬೇತಿ.
ಬೋಧನೆಯಲ್ಲಿ ಪ್ರಸಂಗಾವಧಾನ ಅತಿ ಮುಖ್ಯ ಎಂಬುದು ನನಗೂ ಅನುಭವವಾಯಿತು.
ಪ್ರಾಕ್ಟಿಕಲ್‌ ಪರೀಕ್ಷೆಗೆ ನಾನು ಭೂಮಿತಿಯನ್ನು ಆಯ್ದುಕೊಂಡಿದ್ದೆ. ತಯಾರಿ ಜೋರಾಗಿಯೆ ಇತ್ತು.
ತರಗತಿಯಲ್ಲಿ ತ್ರಿಭುಜಗಳ ಕುರಿತು ಪೀಠಿಕೆ ಹಾಕಿ ರಚನೆಗೆ ಮುಂದಾದೆ. ಮೇಜಿನ ಮೇಲಿದ್ದ ಜಾಮಿಟ್ರಿ ಬಾಕ್ಸು ತೆರೆದು ಸ್ಕೇಲು ಹುಡುಕಿದೆ. ದುರದೃಷ್ಟವಶಾತ್‌ ಸ್ಕೇಲು ಕಾಣೆಯಾಗಿತ್ತು. ಹತ್ತು ಸೆಕೆಂಡ್‌ ಸುಮ್ಮನೆ ನಿಂತೆ. ನಂತರ ವಿದ್ಯಾರ್ಥಿಗಳ ಕಡೆ ನೋಡಿದೆ. ಎಲ್ಲರಲ್ಲೂ ಜಾಮಿಟ್ರಿ ಬಾಕ್ಸ್ ಇರಲಿಲ್ಲ.
ಸ್ಕೇಲು ಇಲ್ಲದ ಹುಡುಗನ ಕಡೆ ನೋಡಿ ಮೂರು ಸೆಂಟಿಮೀಟರ್‌ ಉದ್ದದ ರೇಖೆಯನ್ನು ಎಳೆ ಎಂದೆ. ಅವನು ಸ್ಕೇಲು ಇಲ್ಲ ಎಂದ. ಸ್ಕೇಲು ಇಲ್ಲದೆ ಇದ್ದರೂ ಎಳಯಬಹುದು, ಎಂದೆ. ಎಲ್ಲರೂ ಅಚ್ಚರಿಯಿಂದ ನೋಡಿದರು. ನಾನು ಮೇಜಿನ ಮೇಲಿದ್ದ ಸೆಟ್‌ಸ್ಕೊಯರ್‌ ತೆಗೆದುಕೊಂಡು ಇದರಲ್ಲೂ ಅಳತೆಪಟ್ಟಿ ಇದೆ. ಇದನ್ನೆ ಬಳಸಿ ಗೆರೆ ಎಳೆ ಎಂದೆ. ಯಾವ ರೀತಿ ಎಳೆಯಬೇಕು ಎಂದು ತೋರಿಸಿದೆ. ಜಾಮಿಟ್ರಿ ಬಾಕ್ಸ್ ತಾರದೆ ಇದ್ದವರು ಪಕ್ಕದವರಿಂದ ಸೆಟ್‌ಸ್ಕೊಯರ್‌ ಪಡೆದು ಗೆರೆ ಎಳೆದರು. ಪಾಠ ಯಶಸ್ವಿಯಾಯಿತು.
ಹೊರಗೆ ಬಂದ ಮೇಲೆ ಬಾಹ್ಯ ಪರೀಕ್ಷಕರು ಬಂದು ಕೈ ಕುಲುಕಿದರು. ನಿಮ್ಮ ಹತ್ತಿರ ಅಳತೆ ಪಟ್ಟಿ ಇಲ್ಲದೆ ಇರುವುದು ನಮಗೂ ಗೊತ್ತಾಯಿತು. ಆದರೆ ಕೊರತೆಯನ್ನೆ ನೀವು ಮಕ್ಕಳಿಗೆ ಬೋಧನಾ ಅಂಶವಾಗಿ ಬಳಸಿಕೊಂಡಿರಿ ಎಂದು ಮೆಚ್ಚುಗೆ ಸೂಚಿಸಿದರು.
ನಮ್ಮ ಕಾಲೇಜಿಗೆ ಮೊದಲ ಐದು Rankಗಳು ಬಂದವು. ನನಗೆ ಮೂರನೆ Rank ಒಂದೆ ಅಂಕದಿಂದ ತಪ್ಪಿತು. ನನಗೂ ಗಾಂಧೀಜಿಗೂ ಒಂದು ವಿಷಯದಲ್ಲಿ ಸಾಮ್ಯತೆ ಇದೆ ಎಂದು ಸಮರ್ಥಿಸಿಕೊಳ್ಳುತಿದ್ದ ಕೈಬರಹ ಅದಕ್ಕೆ ಕಾರಣವಾಗಿತ್ತು.
ಅಲ್ಲಿ ವಿದ್ಯಾರ್ಥಿಗೆ ಸತ್ಯ ಹೇಳಲು ಒತ್ತಾಯ ಮಾಡಿ ಪೇಚಿಗೆ ಒಳಗಾದ ಸಂಗತಿ ನನಗೆ ಈಗಲೂ ನಗೆತರಿಸುವುದು. ನನ್ನ ಜೊತೆ ನಮ್ಮ ಹಳ್ಳಿಯ ಹುಡುಗನೊಬ್ಬ ಇದ್ದ. ಬಹಳ ಮುಗ್ದ. ಎಸ್‌ಎಸ್‌ಎಲ್ಸಿ ಫೇಲಾಗಿದ್ದ. ಪಾಠ ಹೇಳಿಸಿಕೊಂಡು ನಿಮ್ಮ ಜೊತೆ ಇರಲಿ ಊರಲ್ಲಿ ಇದ್ದರೆ ಹೊಲದ ಕೆಲಸ ಹಚ್ಚುವರು ಹೇಳಿಕೊಡಲು ನೀವೂ ಇರುವುದಿಲ್ಲ ಎಂದು ಕೇಳಿಕೊಂಡರು. ಸರಿ ಮೂರುತಿಂಗಳು ಇದ್ದು ಅಭ್ಯಾಸ ಮಾಡಲಿ ಎಂದು ಒಪ್ಪಿದೆ. ನನಗೆ ಪಾಠ ಬೋಧನೆಗೆ ವಾರ್ಡಲಾ ಹೈಸ್ಕೂಲಿಗೆ ಹಾಕಿದರು. ಅದಕ್ಕಾಗಿ ಅದೆ ಬೀದಿಯಲ್ಲಿ  ರೂಮು ಬಾಡಿಗೆಗೆ ಪಡೆದೆವು. ಅದು ಹಳೆಯ ಕಾಲದ ಮಣ್ಣಿನ ಮಾಳಿಗೆಯ ಮನೆ. ಮಾಳಿಗೆಯ ಮೇಲೆ ಒಂದು ಹಾಲು. ಮುಂದೆ ಇರುವ ಜಾಗದಲ್ಲಿ ಹೂವಿನ ಕುಂಡಗಳನ್ನಿಟ್ಟಿದ್ದರು. ಅವಕ್ಕೆ ನೀರು ಹಾಕಬೇಕು. ಆದರೆ ನೀರು ಕೆಳಗೆ ಚೆಲ್ಲಬಾರದು ಎಂಬ ಶರತ್ತು, ಕಾರಣ. ನಮ್ಮ ಕೋಣೆಯ ಮುಂದಿನ ಅಂಕಣದ ನೀರು ಹೋಗುವ ಹರನಾಳಿಗೆ ಸೀದಾ ಕೆಳಗಿನ ಮನೆಯ ಕಟ್ಟೆಯ ಮೇಲೆ ಇತ್ತು. ಅಲ್ಲಿ ಸಂಜೆ ಅವರು ಕುಳಿತುಕೊಳ್ಳುವರು. ಅದಕ್ಕೆ ಹರನಾಳಿಗೆಯ ನೀರು ಕಟ್ಟೆಯ ಮೇಲೆ ಬೀಳಬಾರದು ಎಂದು ಅವರ ಎಚ್ಚರಿಕೆ. ನಾವೂ ನೀರು ಬೀಳದಂತೆ ಹುಷಾರಾಗಿದ್ದೆವು.
ಒಂದು ದಿನ ಸಂಜೆ ರೂಮಿಗೆ ಬಂದೆವು. ನಾವು ಮೆಟ್ಟಿಲು ಏರಬೇಕು. ಮನೆ ಮಾಲಕ ಗುತ್ತಿ ಕ್ರಿಷ್ಣಾಚಾರ್‌ ನಮ್ಮನ್ನು ತಡೆದು ನಿಲ್ಲಿಸಿದರು.
ನಿಮಗೆ ರೂಮುಕೊಟ್ಟರೆ ಯಾರು ಯಾರನ್ನೋ ಸೇರಿಸಿರುವಿರಿ. ಅವರು, ಮಾಡುವ ಕೆಲಸಕ್ಕೆ ಯಾರು ಜವಾಬ್ದಾರರು?
ಅವರು ಕೋಪದಿಂದ ಕೇಳಿದರು.
ಮೊದಲೆ ಕರ್ಮಠ ಬ್ರಾಹ್ಮಣ. ಮಾಂಸ, ಮದ್ಯ ಬಳಸಬಾರದು, ಗಲಾಟೆಯಾಗಬಾರದು. ಬೇರೆಯವರನ್ನು ಸೇರಿಸಬಾರದು ಹೀಗೆ ಅನೇಕ ಶರತ್ತುಗಳನ್ನು ವಿಧಿಸಿದ್ದರು. ಈಗ ಯಾವ ಶರತ್ತು ಉಲ್ಲಂಘನೆಯಾಗಿದೆಯೋ, ಎಂದು ಗಾಬರಿಯಾದೆ.
ಏನಾಯಿತು ಆಚಾರ್ಯರೆ, ಯಾಕೆ ಅಷ್ಟು ಕೋಪ, ಎಂದೆವು.
ನಾನು ಮೇಲಿನಿಂದ ನೀರು ಹಾಕಬಾರದು ಎಂದು ಹೇಳಿರಲಿಲ್ಲವೆ?
ಹೌದು ಎಂದು ತಲೆಯಾಡಿಸಿದೆ.
ಸಂಜೆ ನಾನು ಕಟ್ಟೆಯ ಮೇಲೆ ಕೂತಿದ್ದೆ. ಸೀದಾ ತಲೆಯ ಮೇಲೆ ನೀರು ಬಿತ್ತು?
ನನಗೆ ಖಚಿತವಾಯಿತು. ಇದು ನಮ್ಮ ಹುಡುಗನ ಕೆಲಸ. ಅವನು ಮುಂದಿನ ಅಂಕಣದಲ್ಲಿ ನೀರು ಚೆಲ್ಲಿರುವ. ಅದು ಹರನಾಳಿಗೆಯ ಮೂಲಕ ಕೆಳಗೆ ಬಿದ್ದಿದೆ.
ಆಯ್ತು ಆಚಾರರೆ, ಹುಡುಗನನ್ನು ವಿಚಾರಿಸುವೆ. ಅವನಿಗೆ ಬುದ್ಧಿ ಹೇಳುವೆ ದಯವಿಟ್ಟು ಈ ಸಲ ಕ್ಷಮಿಸಿರಿ ಎಂದೆ.
ಹೀಗೆ ಬೇರೆ ಹುಡುಗರನ್ನು ಬಿಟ್ಟುಕೊಂಡಿರುವುದರಿಂದಲೆ ಸಮಸ್ಯೆಯಾಗಿದೆ, ನಾನೆ ಬಂದು ಅವನಿಗೆ ಹೇಳುವೆ, ಎಂದರು.
ಮೇಲೆ ಹೋದಾಗ ಬಾಗಿಲು ಹಾಕಿತ್ತು. ಮನೆ ಮುಂದಿನ ಅಂಗಳದಲ್ಲೂ ನೀರು ಚೆಲ್ಲಿದ ಗುರುತು ಇರಲಿಲ್ಲ.
ಹಾಗಿದ್ದಾಗ ಆಚಾರರೆ ಏನೋ ತಪ್ಪು ತಿಳಿದುಕೊಂಡಿರುವರು ಎಂದುಕೊಂಡೆ. ಆದರೆ ಯಾವುದಕ್ಕೂ ಒಂದು ಮಾತು ಆ ಹುಡುಗನನ್ನು ವಿಚಾರಿಸಿದರೆ ಸರಿ ಎನಿಸಿತು.
ಬಾಗಿಲು ತೆಗೆದ ಮೇಲೆ ಕೇಳಿದೆ.
ಹೇಮಪ್ಪ, ನೀನು ಮೇಲಿನಿಂದ ನೀರು ಚೆಲ್ಲಬಾರದು ಎಂದು ಹೇಳಿದ್ದೆನಲ್ಲ, ಯಾಕೆ ಇವರ ಮೇಲೆ ನೀರು ಹಾಕಿದೆ?
ಇಲ್ಲ ಸಾರ್‌ ನಾನು ನೀರು ಹಾಕಿಯೆ ಇಲ್ಲ, ಅವನು ಉತ್ತರಿಸಿದ.
ಆಚಾರರಿಗೆ ಮೈ ಎಲ್ಲ ಉರಿಯಿತು. ಏನೂ, ನಾನು ಸುಳ್ಳು ಹೇಳುತ್ತೇನಾ? ನೋಡು ಮೈ ಮೇಲಿನ ಪಂಜೆ ಸಹಾ ಒದ್ದೆಯಾಗಿದೆ? ಮಾಡುವುದೆಲ್ಲ ಮಾಡಿ ಸುಳ್ಳು ಹೇಳುತ್ತಿರುವೆ.
ನಿಜ ಅವರ ಮೈ ಮೇಲೆ ಹೊದ್ದ ಪಂಚೆ ಹಸಿಯಾಗಿತ್ತು.
ನನಗೂ ಕೋಪ ಬಂತು. ತಪ್ಪು ಮಾಡಿದ್ದಲ್ಲದೆ ಸುಳ್ಳು ಬೇರೆ ಹೇಳುತ್ತೀಯಾ? ಕಣ್ಣು ಕೆಂಪಗೆ ಮಾಡಿ ಗದರಿದೆ.
ಇಲ್ಲ ಸಾರ್‌, ನಾನಂತೂ ಸುಳ್ಳು ಹೇಳುತ್ತಿಲ್ಲ. ದೇವರ ಸತ್ಯವಾಗಿಯೂ ನೀರು ಹಾಕಿಲ್ಲ, ಎಂದು ಅಳುದನಿಯಲ್ಲಿ ಹೇಳಿದ.
ಲೇ ಹೇಮಗಾ, ಯಜಮಾನರ ಬಟ್ಟೆ ಒದ್ದೆಯಾಗಿದೆ. ನೀನು ಮೇಲಿನಿಂದ ನೀರು ಹಾಕದಿದ್ದರೆ ಅಕಾಲ ಮಳೆ ಬಂತಾ ಎಂದು ಗದರಿದೆ.
ನಮ್ಮ ಅವ್ವನ ಆಣೆಗೂ ನಾನು ನೀರು ಹಾಕಿಲ್ಲ ಸಾರ್‌.
ಹಾಗಿದ್ದರೆ ಹರ ನಾಳಿಗೆಯಲ್ಲಿ ಗಂಗೆ ಉದ್ಭವವಾಯಿತಾ? ಸತ್ಯ ಹೇಳು. ಒತ್ತಾಯ ಮಾಡಿದೆ.
ನೀರು ಹಾಕಿಲ್ಲ ಆದರೆ ಹರನಾಳಿಗೆಯಲ್ಲಿ ಒಂದಾ ಮಾಡಿದೆ.
ಆಚಾರ್ರು ಹಣೆ ಹಣೆ ಬಡಿದುಕೊಂಡರು. ನೀರು ಎಂದುಕೊಂಡು ಗದರಿದ ಅವರಿಗೆ ಆಘಾತವಾಗಿತ್ತು. ಅಲ್ಲಿಂದಲೆ ಮನೆಯವರಿಗೆ ಕೂಗಿದರು. ನೀರಿನ ಹಂಡೆಗೆ ಉರಿಹಾಕು. ರಂಡೆಗಂಡ ಮೂತ್ರಾಭಿಷೇಕ ಮಾಡಿಸಿದ್ದಾನೆ, ಎರಕೊಳ್ಳಬೇಕು.
ಸತ್ಯ ಕೇಳಿದ ಅವರಿಗೆ ಸಚೇಲ ಸ್ನಾನ. ಹೇಳಿಸಿದ ನಾನು ಮನೆ ಖಾಲಿ ಮಾಡಿದೆ ಎಂದು ಹೇಳಬೇಕಿಲ್ಲ ತಾನೆ.

No comments:

Post a Comment