Sunday, September 30, 2012

ಟಯೋಟ ಕಾರಲ್ಲಿ ಕುಳಿತು ತಳ್ಳುಗಾಡಿಯ ತಿಂಡಿಗೆ ಕಾಯುವರು



ಸಮಯ ರಾತ್ರಿ ಹತ್ತು ಮೀರಿತ್ತು. ರವೀಂದ್ರ ಕಲಾಕ್ಷೇತ್ರದಲ್ಲಿ ಆಕಾಶವಾಣಿ ಸಂಗೀತೋತ್ಸವದಲ್ಲಿ ವಿದ್ವಾನ್‌ಗಣಪತಿ ಭಟ್‌ ಹಾಸಣಗಿ ಅವರ ಸಂಗೀತ ಕಾರ್ಯಕ್ರಮ.ಅಟೋ ಸಿಗಲಿಲ್ಲ. ಸರಿ ಬಂದ ಸಿಟಿ ಬಸ್‌ಹತ್ತಿ ರಾಮಕೃಷ್ಣ ಮಠ ವೃತ್ತದಲ್ಲಿ ಇಳಿದು ಅಲ್ಲಿಂದ ನರಸಿಂಹರಾಜಾ ಕಾಲೊನಿಯ ಮನೆಗೆ ನಡೆದೆ ಹೋದರಾಯಿತು ಎಂದು ಹೊರಟೆವು. ಸದಾ ಗಿಜಿಗುಟ್ಟುವ ಗಾಂಧಿ ಬಜಾರ ಆಗಲೆ ಭಣ ಗುಟ್ಟುತಿತ್ತು.ಜನಸಂಚಾರ ಕಡಿಮೆ. ಅಲ್ಲೊಂದು ಇಲ್ಲೊಂದು ಕಾರ್ ಭುರ್‌ ಎಂದು ಸಂಚಾರಿ ದೀಪದ ಹಂಗಿಲ್ಲದೆ ಜೋರಾಗಿ ಹಾರ್ನಹಾಕುತ್ತಾ ಹೊರಟಿದ್ದವು. ಇನ್ನು ದ್ವಿಚಕ್ರವಾಹನಗಳ ಭರಾಟೆಯಂತೂ ಹೇಳುವ ಹಾಗೆ ಇಲ್ಲ. ಎಲ್ಲರಿಗೂ ಮನೆ ಸೇರುವ ಆತುರ. ರಸ್ತೆ ಬದಿಯ ಹೂವಿನ ಹಣ್ಣಿನ ಅಂಗಡಿಯವರು, ಫುಟ್‌ಪಾತ್‌ನಲ್ಲಿನ ವ್ಯಾಪಾರ ಮಾಡುವವರು ಗಂಟು ಮೂಟೆ ಕಟ್ಟಿಯಾಗಿತ್ತು.ಚನ್ನೈ ನಿಂದ ಬಂದ ಮಗ , ವಾರದ ರಜೆಇರುವ ಮಗಳು ಜೊತೆಯಾಗಿ ಮಾತನಾಡುತ್ತಾ ಬೆಣ್ಣೆ ಗೋವಿಂದಪ್ಪ ಸರ್ಕಲ್‌ಗೆ ಬಂದೆವು..ನಿವೃತ್ತರ ಸ್ವರ್ಗ ಎಂದು ಹೆಸರಾಗಿದ್ದ ಬೆಂಗಳೂರು ಇತ್ತೀಚೆಗೆ ಮೊದಲಿನ ಪ್ರಶಾಂತತೆಯನ್ನು ಕಳೆದುಕೊಂಡಿದೆ. ಐಟಿ ಬಿಟಿಯ ಕಟಿಪಿಟಿ,  ಬಿಪಿಒಗಳ  ಭರಾಟೆಯಲ್ಲಿ ರಾತ್ರಿ ಯಲ್ಲಿಯೆ ದೂರದ ಅಮೇರಿಕಾದ ಕರೆಗ ಉತ್ತರಿಸುವ ಕೆಲಸ ಬಹಳ ಯುವಜನರಿಗೆ ಕಣ್ಣು ತುಂಬ ನಿದ್ದೆ ಕಸಿದು  ಕೈತುಂಬ ಕಾಸು ಕೊಡುವ ಕೆಲಸ ಕೊಟ್ಟಿದೆ.ಪಾರ್ಥನ ಹೆಸರು ಪೀಟರ್‌, ಸೌಮ್ಯಳ ಹೆಸರು ಶಾಲಿ ಎಂದುಹೊಸ ನಾಮಕರಣ. ಅಮೇರಿಕಾದ ಗ್ರಾಹಕರ ವಿಚಾರಣೆಗೆ ಅವರದೆ ಭಾಷೆಯ ದಾಟಿಯಲ್ಲಿ ಪಟಪಟನೆ ಉಲಿಯುತ್ತಾ ಮಧ್ಯ ಮಧ್ಯ ಕಣ್ಣು ರೆಪ್ಪೆ ಕೂಡಿದರೆ, ಎದ್ದು ಹೋಗಿ ಕಾಫಿ ಕುಡಿಯುವ, ನಾಲಕ್ಕು ಹೆಜ್ಜೆ ಹಾಕಿ  ಮಧ್ಯ ರಾತ್ರಿಯ ತಂಗಾಳಿಗೆ ಮುಖ ಒಡ್ಡಿ ಮತ್ತೆ ಕಿವಿಗೆ ಇಯರ್‌ಪೋನುಹಾಕಿ ಬರುವ ಕರೆಗಳನ್ನು ಸ್ವೀಕರಿಸಿ ಸಂದೇಹ ನಿವಾರಿಸುವ ಯುವಕರ ರಾತ್ರಿಪಾಳಿಯ ಕಾಲ್‌ ಸೆಂಟರ್‌ಗಳು ಬಹು ಮಹಡಿ ಕಟ್ಟಡಗಳಲ್ಲಿ ಕಚೇರಿಗಳಲ್ಲಿದ್ದ ಬೆಳಕು ಈಗ ಅಲ್ಲಿ ಇಲ್ಲಿ  ಕಾಣುತ್ತಿದೆ. ಹೀಗಾಗಿ ಸಾಮಾನ್ಯ ಹೋಟೇಲು ದರ್ಶಿನಿ ,ಅಂಗಡಿ ಮುಂಗಟ್ಟು ಮುಚ್ಚಿದರೂ ಸಂಗೀತ ಹೊರ ಹೊಮ್ಮಿಸುವ ತಾರಾ ಹೋಟೇಲುಗಳ ಮುಂದೆ ಕಾರು, ಬೈಕುಗಳ ಸಮಾವೇಶ ಸೇರುವುದು ಸಾಮಾನ್ಯ. ಆದರೆ ಇನ್ನು ಬೆಂಗಳೂರಿನ ಹಳೆಯಸಂಪ್ರದಾಯದ ಜನರೆ ಹೆಚ್ಚಿರುವ ಗಾಂಧಿ ಬಜಾರ್‌ನಲ್ಲಿ ಆ ಹಾವಳಿ ಕಡಿಮೆ. ನ್ಯೂಯಾರ್ಕಅನ್ನು ನಿದ್ರಿಸದ ನಗರ ಎಂದು ಕರೆಯುವರು. ಈಗ ಬೆಂಗಳೂರು ಸ್ವಲ್ಪ ಮಟ್ಟಿಗೆ ಅದೆ ಹಾದಿ ಹಿಡಿದರೂ ಕೆಲವು ಪ್ರದೇಶಗಳು ನಿದ್ರೆಯ ಮಡಿಲಿಗೆ ಜಾರುತ್ತವೆ.ಗಾಂಧಿ ಬಜಾರಿನಲ್ಲಿ ಬಿಪಿಒ ಗಳ, ಕಾಲ್‌ಸೆಂಟರ್‌ಗಳ ದಟ್ಟಣೆ ಇಲ್ಲ. ತಾರಾ ಹೋಟೇಲುಗಳ ಮೆರಗೂ ಕಡಿಮೆ. ಹಾಗಾಗಿ ಬಹುತೇಕ ರಸ್ತೆಗಳು ಬಿಕೋ ಎನ್ನುತಿದ್ದವು.ನಾವು ಬಸ್ಸಿನಿಂದ ಇಳಿದು ಡಿವಿಜಿ ರಸ್ತೆಯಲ್ಲಿ ತಿರುವು ತೆಗೆದುಕೊಂಡು ಮನೆಯ ಕಡೆ ಮುಖ ಮಾಡುವಾಗ ಸೋದೆ ಮಠದವಿರವ ಗೋವಿಂದಪ್ಪ ರಸ್ತೆಯ ಸರ್ಕಲ್ಲಿನಲ್ಲಿ ಜನ ಸೇರಿದ್ದು ಕಾಣಿಸಿತು. ಗಣೇಶೋತ್ಸವ ಒಂಬತ್ತಕ್ಕೆ ಕೊನೆ. ಅದೂ ನಾಲಕ್ಕಾರು ಕಾರುಗಳು ಹತ್ತಾರು ಬೈಕುಗಳು ಬಾಗಿಲುಮುಚ್ಚಿದ ಅಂಗಡಿಯಮುಂದೆ ನಿಲುಗಡೆ ಮಾಡಿ ಟಿಪ್‌ಟಾಪ್ ಉಡುಪು ಧಾರಿಗಳಾದ ಮೇಲ್ವರ್ಗದ ಜನ ತಮ್ಮ  ಸಂಗಾತಿಗಳ ಸಮೇತರಾಗಿ ಕಾಯುತಿದ್ದರು. ಒಂದಿಬ್ಬರು  ಮಕ್ಕಳು ಮರಿಗಳನ್ನು ಜೊತೆಗಿಟ್ಟುಕೊಂಡು ನಿಂತಿರುವುದು ಕಂಡು ಬಂದಿತು. ಕುತೂಹಲದಿಂದ  ಹೋಗಿ ನೋಡಿದೆವು. ಅದೇ ಸಮಯದಲ್ಲಿ ಅಲ್ಲಿಯೆ ನಿಂತ ತಳ್ಳುಗಾಡಿಯಲ್ಲಿ ಬಿಸಿಬಿಸಿ ತಿಂಡಿ ತಯಾರಿಸುವ ಸಿದ್ಧತೆ ಆಗತಾನೆ ನಡೆದಿತ್ತು ನೀಲಿ ಜ್ವಾಲೆಯ ಮೇಲೆ ಕರಿಯ ಹಂಚು ,ಪಕ್ಕದಲ್ಲೆ ತಾಜಾ ಇಡ್ಲಿ ತಯಾರಿಸುವ ಅಲ್ಯುಮಿನಿಯಂನ  ಆಯತಾಕಾರದ ಬಿಳಿ ಪಾತ್ರೆಯ ಪಕ್ಕದಲ್ಲಿ ಹಿಟ್ಟು ಕಲೆಸುವುದು ಕಾಣಿಸಿತು. ಬೆಂಗಳೂರಿನಲ್ಲಿ ತಳ್ಳುಗಾಡಿಯಲ್ಲಿ ತಿಂಡಿಗೆ ಮುಕುರವ ಜನಕ್ಕೇನೂ ಕಡಿಮೆಇಲ್ಲ.ಆದರೆ ರಾತ್ರಿ ಹತ್ತೂವರೆಗೆ ದೋಸೆ ಚುಂಯ್‌ ಎನಿಸುವ. ಮತ್ತು ಅದಕ್ಕಾಗಿ ಕಾರಿನಲ್ಲಿ ಬಂದು ಕಾಯುವ ಪರಿ ತುಸು ಅಚ್ಚರಿ ಮೂಡಿಸಿತು.ಕುತೂಹಲದಿಂದ ಹತ್ತಿರ ಹೋಗಿ ವಿಚಾರಿಸಲಾಗಿ ಬೆಣ್ಣೆ ಗೋವಿಂದಪ್ಪನ ವೃತ್ತದಲ್ಲಿ ರಾತ್ರಿ ಹತ್ತರಿಂದ ೨ ತಾಸು ಕಾರ್ಯ ನಿರ್ವಹಿಸುವ ಈ ಸಂಚಾರಿ ಹೋಟೇಲು ಬಹುಪ್ರಖ್ಯಾತ ಎಂದು ತಿಳಿಯಿತು. ಅದೂ ಇಂದು ನಿನ್ನೆಯದಲ್ಲ. ಸುಮಾರು ಮೂರುನಾಲಕ್ಕು ದಶಕದಿಂದ ನಡೆಸಿಕೊಂಡ ಹೆಗ್ಗಳಿಕೆ ಅದರದು.ತುಸು ದೊಡ್ಡದೆ ಆದ ತಳ್ಳುಗಾಡಿ. ಅದಕ್ಕೆ ಕಾರಿನ ಚಕ್ರದಷ್ಟೆ ದೊಡ್ಡದಾದ ನಾಲಕ್ಕು ಗಾಲಿಗಳು. ತಾತ್ಕಾಲಿಕ ವಿದ್ಯುತ್‌ ಸೌಲಭ್ಯವೂ ಇದೆ. ಮೂರು ನಾಲಕ್ಕು ಗ್ಯಾಸ್‌ ಒಲೆಗಳು. ಸರಿ ಸುಮಾರು  ಎಂಟುಹತ್ತು ಜನ ಕೆಲಸಗಾರರು,ಬಂದ ತಕ್ಷಣ ಸಿದ್ಧವಾಗಿದ್ದ ರೈಸ್‌ಭಾತ್‌ಗೆ ಜನ ಮುತ್ತಿದರು.. ಅದೂ ದೊಸೆಯ ಹೆಂಚು ಕಾಯುವ ಮತ್ತು ಇಡ್ಲಿ ಬೇಯುವ ತನಕ ಮಾತ್ರ ಲಭ್ಯ.. ಅರ್ಧ ಗಂಟೆಯಲ್ಲಿ ರೈಸ್‌ ಭಾತ್‌ಖಾಲಿ. ಹೆಂಚಿನ ಮೇಲೆ ದೊಸೆ ಚುಂಯ್‌ ಎನ್ನುವಷ್ಟರಲ್ಲಿ ನೂರಾರು ಪ್ಲೇಟು ಭಾತ್‌ ಖರ್ಚಾಗಿರುತ್ತದೆ. ಆನಂತರ ಬೇಕೆಂದರೂ ಸಿಗದು. ಚಕಚಕನೆ ಕೆಲಸ ಮಾಡುವರು. ಅವರೆಲ್ಲ ಹೆಸರಾಂತ ಹೋಟೇಲ್‌ ಒಂದರ ಅನುಭವಿ ಕೆಲಸಗಾರರು. ತಮ್ಮ ನಿತ್ಯದ ಕಾಯಕ ಮುಗಿಸಿ ಇಲ್ಲಿ ರಾತ್ರಿ ಹತ್ತರ ಮೇಲೆ ಎರಡುತಾಸು ಬಿಸಿಬಿಸಿ ತಿಂಡಿ ಆಗಿಂದಾಗಲೆ ತಯಾರಿಸಿ ನೀಡುವರು. ಅವರಕೈ ರುಚಿ ಯಾವ ತಾರಾ ಹೋಟೇಲಿಗೂ ಸರಿ ದೊರೆಯಾಗಿರುವುದು. ಜೊತೆಗೆ ಬೆಲೆಯೂ ದುಬಾರಿಯಲ್ಲ. ಅದಕ್ಕೆಂದೆ ಜನ ಕಾದು ನಿಂತು ಟೋಕನ್‌ ಪಡೆಯುವರು. ಹಂಚಿನಿಂದ ಕೈಗೆ ಬರುವ ತಿಂಡಿಯನ್ನು ಉಫ್ ಉಫ್‌  ಎನ್ನುತ್ತಾ ಸವಿಯುವರು.ಅಲ್ಲಿ ಹೆಚ್ಚಿನ ವೈವಿಧ್ಯಮಯ ತಿಂಡಿಗಳಿಲ್ಲ. ಒಂದು ರೈಸ್‌ಬಾತ್‌ , ಹಬೆಯಾಡುವ ಇಡ್ಡಲಿ ಮತ್ತು ಒಂದೆರಡು ವಿಧದ ಬಿಸಿ ಬಿಸಿ ದೋಸೆ ಮಾತ್ರ ಲಭ್ಯ.ಯಾವುದೆ ಕರಿದ ದಿನಿಸು ಇಲ್ಲ. ಮೂರು ಇಡ್ಡಲಿ. ರೈಸ್‌ಭಾತಿಗೆ ೨೦ ರೂಪಾಯಿ. ಯಾವುದೆ ದೋಸೆಗೆ ಇಪ್ಪತ್ತೈದುರೂಪಾಯಿ.ಅಲ್ಲಿ ಮುಚ್ಚಿದ ಅಂಡಿಯ ಕಿರುಕಟ್ಟೆಯ ಮೇಲೆ  . ಫುಟ್‌ ಪಾತ್‌ನಲ್ಲಿ ಬದಿಗೆ ನಿಲ್ಲಿಸಿದ ಕಾರಿನಲ್ಲಿಯೆ ಕುಳಿತು ಬಿಸಿಬಿಸಿ ತಿಂಡಿಯನ್ನು ತಡಮಾಡದೆ ತಿಂದು ಜಾಗ ಖಾಲಿ ಮಾಡುವವರು ಬಹಳ. ಜೊತೆಗೆ ಒಂದೆರಡು ಪ್ಲೇಟು ರೈಸ್‌ಭಾತ್‌ ಕಟ್ಟಿಸಿಕೊಂಡು ಮನೆಗೆ ಹೋಗವವರೂ ಇದ್ದರು. ತಟ್ಟೆ ಪ್ಲೇಟುಗಳಿಗಿಂತ ಅದರಲ್ಲಿಟ್ಟ ತಿಂಡಿತಿನಿಸು ಸವಿಯಾಗಿದ್ರೆ ಶುಚಿಯಾಗಿದ್ದರೆ ಸಾಕು ರಸ್ತೆ ಬದಿಯಾದರೂ ಅವರು ನಿಗದಿಮಾಡಿದ ಹೊತ್ತಿಗೆ ಬಂದು ಕಾದು ನಿಂತು ಎಲೆಯಲ್ಲಿ ನೀಡುವ ತಿಂಡಿ ತಿನ್ನುವ ಪರಿ ನೋಡಿ ಬಾಯಿ ರುಚಿಗೆ, ಬೆಲೆಕೊಡುವ ರಸಿಕರು ಬೆಂಗಳೂರಿನಲ್ಲಿ ಇನ್ನೂ ಇದ್ದಾರೆ ಎಂಬುದು ಖಚಿತವಾಯಿತು.ಎರಡು ತಾಸಿನ ಕೆಲಸ.. ಸುಮಾರು ನಲವತ್ತು  ಸಾವಿರ ಆದಾಯ. ಖರ್ಚುಕಳೆದು ಎಲ್ಲರಿಗೂ ಲಾಭ ಹಂಚಿಕೆ.  ಆದಾಯ ಸಾವಿರಕ್ಕೆ ಕಡಿಮೆಇಲ್ಲ. ನಾವು ಅಲ್ಲಿನ ತಿಂಡಿ ಸವಿದು ಮನೆಯತ್ತ ಹೆಜ್ಜೆಹಾಕಿದೆವು. ಮನೆ ಮುಟ್ಟಿದಾಗಲೂ ಬಾಯಲ್ಲಿ ತಿಂಡಿಯ ರುಚಿಯಘಮಲು  ಇನ್ನೂ ಇತ್ತು . ಬೆಣ್ಣೆ ಗೋವಿಂದಪ್ಪನ ವೃತ್ತದಲ್ಲಿನ ರಾತ್ರಿ ಹತ್ತರ ಮೇಲೆ ಜನರ ಹಸಿವು ತಣಿಸುವ . ತಳ್ಳು ಗಾಡಿಯ ತಿಂಡಿ ಬೆಂಗಳೂರಿನ ಪರಂಪರೆಯ ಭಾಗವಾಗಿ ಹೋಗಿರುವ ಕಾರಣ ಆಗ ನಮಗೆ ಗೊತ್ತಾಯಿತು.

No comments:

Post a Comment