Thursday, September 13, 2012

ಘಟ್ಟದ ತಪ್ಪಲಲ್ಲೂ ಬಿಡದ ಹುಟ್ಟುಗುಣ


 ಘಟ್ಟದ ತಪ್ಪಲಲ್ಲೂ ಬಿಡದ ಹುಟ್ಟುಗುಣ
ರಿಪ್ ವ್ಯಾನ್ ವಿನ್ ಕಲ್', ಕತೆಗಾರ ಇರ್ವಿನ್ ವಾಶಿಂಗ್ ಟನ್ ಇಲ್ಲಿಗೆ ಬಂದೆ ಇರಲಿಲ್ಲವಂತೆ. ಹರೆಯದ ಹುಡುಗ ಬೆಟ್ಟದ ಮೇಲೆ ಕುಡಿದು ಮಲಗಿದ ಎದ್ದು ನೋಡಿದಾಗ ಮಾರುದ್ದ ಬಿಳಿ ಗಡ್ಡತಲೆಯಲ್ಲ ಬೋಳು. ಹಣ್ಣು ಹಣ್ಣು ಮುದುಕ. ಕೆಳಗಿಳಿದು ಬಂದರೆ ಊರೆಲ್ಲ ಪೂರ್ಣ ಬೇರೆ... ಪರಿಚಿತರಿಲ್ಲವೇ ಇಲ್ಲ. ಮನೆ ಹುಡುಕಿ ಹೋದಾಗ ಹರೆಯದವ ಅವನ ಮೊಮ್ಮಗನಂತೆ...' ಈ ಕತೆ ದೇಶ, ಕಾಲ, ಭಾಷೆ ಮೀರಿ ಜನಪ್ರಿಯ. ಇಲ್ಲಿ ದೊರಕುವ ಮದ್ಯ ಮತ್ತು ಬರುವ ನಿದ್ದೆ ನೋಡಿದರೆ ಕತೆ ನಿಜ ಎನಿಸಿತು. ಸುತ್ತಮುತ್ತ ನೋಡಿದರೆ ಸರ್ವಜನಾಂಗದ ಸುಂದರ ತೋಟ ಕಾಣಿಸಿತು. ಬಿಳಿಯರು, ಕರಿಯರು, ಕಂದು, ಕೆಂಪು, ಹಳದಿ, ಕಕೆಶಿಯನರು, ಆಫ್ರಿಕಾನರು, ದೇಸಿಗಳು, ಮುಂಗೊಲಿಯ ಮೂಲದವರು, ವರ್ಣ, ಜನಾಂಗ ಭೇದವಿಲ್ಲದೆ ಎಲ್ಲ ಒಂದೆಡೆ  ಇದ್ದಾರೆ.
ಇನ್ನು ಭಾಷೆಗಳು ಹಲವು ಬಗೆಯ ಇಂಗ್ಲಿಷ್, ಫ್ರೆಂಚ್, ಸ್ಪ್ಯಾನಿಶ್, ಇಟ್ಯಾಲಿಯನ್, ಕೊರಿಯನ್ ಅಲ್ಲಲ್ಲಿ ಹಿಂದಿ. ಮಿನಿ ವಿಶ್ವ ಸಂಸ್ಥೆಯೇ ಅಲ್ಲಿದೆ ಎನಿಸಿತು. ಎಲ್ಲ ಹರೆಯದ ಹುರುಪಿನ ಜೋಡಿಗಳು. ಅಲ್ಲೊಬ್ಬ, ಇಲ್ಲೊಬ್ಬ ಮಕ್ಕಳು. ಸಾಕು ನಾಯಿಗಳು ಮಾತ್ರ ಸಾಕಷ್ಟು. ಎಲ್ಲ ಸರ್ವ ಸನ್ನದ್ಧರಾಗೇ ಬಂದಿದ್ದಾರೆ. ಅಲ್ಲಿ ಇದ್ದ ಎರಡು ಮರಗಳಿಗೆ ಬಿಗಿದ ಹ್ಯಾಮಕ್ಕಿನಲ್ಲಿ (ಹ್ಯಾಮಕ್ ಎಂದರೆ, ಎರಡು ಮರಗಳಿಗೆ ಕಟ್ಟಿದ ಹಗ್ಗದಿಂದ ಮಾಡಿದ ಬಲೆ, ತೊಟ್ಟಿಲ ತರ ಉಪಯೋಗಿಸುತ್ತಾರೆ. ಒಂದು ನಿಸರ್ಗದ ನಡುವೆ ಅಂತರಿಕ್ಷದಲ್ಲಿ ಮಲಗಿದ ಅನುಭವ.) ಮಲಗಿ ಮುಗಿಲು ನೋಡುವವರು, ಕೆಲವರಾದರೆ, ಮರದ ಟೊಂಗೆಗೆ ನೇತು ಬಿಟ್ಟ ಜೋಕಾಲಿಯಲ್ಲಿ ತೂಕಡಿಸುವವರು, ಟೆಂಟ್ ಮುಂದೆ ಮರದ ಕೆಳಗೆ ಹಾಕಿದ ಮಡಿಚುವ ಆರಾಮ ಕುರ್ಚಿಯಲ್ಲಿ ಕುಳಿತು ಓದುವವರು ಹಲವರು. ಇದ್ದ ಜಾಗದಲ್ಲೇ ಶಟಲ್ ಆಡಿದರೆ, ಊಟದ ಮೇಜಿನ ಮೇಲೆ ಕೇರಂ, ಚೆಸ್. ನಿಧಾನವಾಗಿ ಕತ್ತಲು ಕವಿದಂತೆ ಚಳಿಗಾಳಿ ಶುರುವಾಯಿತು. ಕ್ಯಾಂಪ್ ಫೈರ್ ಹಾಕಲು ಗಡಿಬಿಡಿ ಮೊದಲಾಯಿತು. ಒಣ ಕಟ್ಟಿಗೆ ಹೇರಿಕೊಂಡ ವಾಹನ ಹಾಜರು. ಮಟ್ಟಸವಾಗಿ ಕೊರೆದ ಸುಮಾರು ಗಾತ್ರದ ದುಂಡನೆ, ನಿಗೂಳಾದ, ದಿಂಡುಗಳು. ಇವನ್ನು ಸುಡುವುದೇ... ಎಂದು ಕಣ್ಣು ಕಣ್ಣು ಬಿಟ್ಟೆವು. ಕಡ್ಡಿ ಪುರಲೇ ಕೊಂಬೆ, ರೆಂಬೆ ಸುಡುವ ನಮಗೆ, ಮನೆ ಮುಟ್ಟಿಗೆ ಯೋಗ್ಯವಾದ ಅವುಗಳನ್ನು ಸುಡುವುದಕ್ಕೆ, ನೋಟಿನ ಕಟ್ಟಿಗೇ ಬೆಂಕಿ ಹಚ್ಚಿದಷ್ಟು ಬಾಧೆಯಾಯಿತು. ಸುತ್ತಲು ನೋಡಿದಾಗ ಮುಗಿಲು ಮುಟ್ಟುವ ನಿಸೂರಾದ ಓಕ್ ಮರಗಳ ಗುಂಪು ತುಸು ನೆಮ್ಮದಿ ತಂದಿತು.
ಅಗ್ನಿ ದೇವನಿಗೆ ಹವಿಸ್ಸಿನಂತೆ  ಹಾಕಲು ಎಣ್ಣೆ  ಕ್ಯಾನ್. ಎಲ್ಲದಕ್ಕೂ ಕಾಸು. ಬೆಲೆ ಕೇಳುವ ಹಾಗಿಲ್ಲ ಹೇಳಿದಷ್ಟು. ಅಗ್ನಿ ದೇವ ಚಕ್ಕನೆ ಪ್ರತ್ಯಕ್ಷನಾದ. ಕೆಂಡದ ಕುಂಡದ ಮುಂದೆ ಎಲ್ಲ ದುಂಡಗೆ ಕುಳಿತೆವು. ನಾವು  ಹಿರಿಯರು ಆಗಲೇ ಬೆಚ್ಚನೆ ಉಡುಪು ಧರಿಸಿದ್ದೆವು. ತಾಳಲಾರದ ಚಳಿ. ಕೆಂಡದಲ್ಲಿ ಕೈ ಇಟ್ಟರೆ ಮಾತ್ರ ಮೈ ತುಸು ಬಿಸಿಯಾಗಬಹುದು ಎನಿಸಿತು. ಉಟ್ಟ ಬಟ್ಟೆ ಸುಟ್ಟೀತು ಎಂದು  ಸುಮ್ಮನಾದೆವು.  ನಮ್ಮವರು ಮೆಕ್ಕೆ ತೆನೆ ತಂದಿದ್ದರು. ಅವನ್ನು ಹದವಾಗಿ ಸುಟ್ಟು ಬಿಸಿ ಬಿಸಿ ಕಾಳನ್ನು ಬಿಡಿಸಿ ತಿನ್ನ ತೊಡಗಿದೆವು. ನಮ್ಮ ಯುವ ಗೆಳೆಯರು ಉದ್ದನೆ ಲೋಹದ ಕಡ್ಡಿ ತೆಗೆದು ಅದಕ್ಕೆ ಪೊಟ್ಟಣ ದಲ್ಲಿದ್ದ ಏನನ್ನೋ ತೆಗೆದು ಸುಡತೊಡಗಿದರು. ಅದು ಸುಯ್ಯ್ ಎಂದಾಗ ಹಿಂತೆಗೆದು ಚಪ್ಪರಿಸತೊದಗಿದರು. ನಮಗೂ ತಿನ್ನಲು ಹೇಳಿದರು. ಹೇಳಿ ಕೇಳಿ ಶುದ್ದ ಸಸ್ಯಾಹಾರಿಗಳು, ಮೊದಲೇ ಅನುಮಾನದ ಪ್ರಾಣಿಗಳು. ಏನೇ ತಿನ್ನುವ ಮೊದಲು ಅದರಲ್ಲಿ ಮಾಂಸದ  ಅಂಶ ಇಲ್ಲ ಎಂದು ಖಾತ್ರಿ ಮಾಡಿಕೊಳ್ಳುತಿದ್ದೆವು. ತೊಂದರೆ ಏಕೆಂದು ಎಲ್ಲಿಯೇ ಹೋದರು ಬುತ್ತಿಯ ಗಂಟು, ನೀರಿನ ಶೀಸೆ ನಮ್ಮ ಸಂಗಾತಿ. ಈ ರೀತಿ ಮಾಂಸ ಸುಡುವರೆಂದು ಎಲ್ಲೋ ಓದಿದ ನೆನಪು. ಈ ಗೊಡವೆಯೇ ಬೇಡ ಎಂದು ತಲೆ ಆಡಿಸಿದೆವು. ಮಾರನೆ ದಿನ ಬೆಳಕಿನಲ್ಲಿ ಅದರ ಮೇಲಿದ್ದ ಬರಹ ಓದಿದೆ. ಅದು 'ಲಶ್  ಮೇಲೋಎಂದು ಹೆಸರಿನ ಸಕ್ಕರೆಯ ತಯಾರಿ.  ಹೇಗಿದ್ದರೂ ಸಿಹಿರಕ್ತದ ನಾವು ತಿನ್ನುವ ಹಾಗಿಲ್ಲ. ಬೇಡ ಎಂದಿದ್ದು ಒಳ್ಳೆಯದೇ ಆಯಿತು ಎಂದು ಸಂತಸಪಟ್ಟೆ. ಹೊಟ್ಟೆ ಆಗಲೇ ತಾಳ ಹಾಕ ಹತ್ತಿತು.
ಮನೆಯಿಂದ ತಂದಿದ್ದ  ದಿಢೀರ್ ಉಪ್ಪಿಟ್ಟು ತಡವಿಲ್ಲದೆ ರೆಡಿಯಾಯಿತು. ಜತೆಗೆ ಚಿಪ್ಸ್, ಉಪ್ಪಿನಕಾಯಿ. ಬಿಸಿ ಬಿಸಿ ಉಪ್ಪಿಟ್ಟು ಹೊಟ್ಟೆ ಸೇರಿತು. ಸುತ್ತಮುತ್ತಲಿನವರ ಹಾಡು, ಕೇಕೆ, ಕುಣಿತ ಸಾಗಿಯೇ ಇತ್ತು. ಎಲ್ಲರೂ ಕಡಿಮೆ ಉಡುಪಿನಲ್ಲೇ ಇದ್ದರು. ಇವರಿಗೆ ಚಳಿಯಾಗದೇನೋ ಎನಿಸಿತು. ನಂತರ ತಿಳಿಯಿತು. ಅವರ ಮೈ ಬಿಸಿಯ ಕಾರಣ. ಹೊರಗಿನ ಬೆಂಕಿಯಲ್ಲ. ಹೊಟ್ಟೆಯಲ್ಲಿ ಸೇರುತ್ತಿದ್ದ ದ್ರವಾಗ್ನಿ ಎಂದು. ಗಂಟೆಗಟ್ಟಲೆ ಕೈನಲ್ಲಿ ಹಿಡಿದು ಬಾಯಿ ಚಪ್ಪರಿಸುತಿದ್ದ ಬಣ್ಣ ಬಣ್ಣದ ಪೇಯಗಳೇ ಖುಷಿಯಿಂದ ಕುಣಿಸುತಿದ್ದವು. ನಮ್ಮ ಗುಂಪಿನ ಯುವಕರು ಕಣ್ಣು ಬಾಯಿ ಬಿಡುತಿದ್ದ ಪರಿ ನೋಡಿ ಕನಿಕರವಾಯಿತು. ಪಾನಕ ಕುಡಿವಾಗ ನೊಣ ಬಂದಂತಗಬಾರದು ಎಂದು ನಾವು, ಹಿರಿಯ ದಂಪತಿಗಳು, ಅವರಿಗೆ ಶುಭ ರಾತ್ರಿ ಹೇಳಿ ಟೆಂಟ್ ಸೇರಿದೆವು. ಹೇಗಿದ್ದರೂ ಕಣ್ಣುಗಳು ಆಗಲೇ ಎಳೆಯುತಿದ್ದವು. ಪವನ ತಲ್ಪದ ಮೇಲೆ ಪವಡಿಸಿದೆವು. ಗಾಳಿ ಗಾದಿಯ ಮೇಲೆ ಮಲಗಿದ್ದು ಅದೇ ಮೊದಲು. ಹೇಗೋ ಹೇಗೋ ಎನಿಸಿತು. ಶೀತ ಆಗಬಾರದು ಎಂದು ಆ ವ್ಯವಸ್ಥೆ. ಹವಾ ಹಾಸಿಗೆಯ ಮೇಲೆ ಮಲಗಿರುವ ನಮಗೇ ಏನೆಲ್ಲಾ ಅನಿಸಿರುವಾಗ ಹಾವಿನ ಹಾಸಿಗೆಯ ಮೇಲೆ ಮಲಗಿರುವ ಹರಿಗೆ ಹೇಗಿದ್ದಿರಬೇಕು  ಎಂದು ಕೊಳ್ಳುತ್ತಾನಿದ್ರಾ ಚೀಲದಲ್ಲಿ ತೂರಿಕೊಂಡೆವು. ಜಿಪ್ ಎಳೆದುಕೊಂದು ಗಪ್ಪಗೆ ಮಲಗಿದ್ದೆ ತಡ ನಿದ್ದೆ ಆವರಿಸಿತು.
ನಗರ ನಾಮಾವಳಿ...
ಹುಟ್ಟುಗುಣ ಘಟ್ಟದ ತಪ್ಪಲಿನಲ್ಲೂ ಹೋಗಲಿಲ್ಲ. ಯಥಾರೀತಿ ಬೆಳಗ್ಗೆ ಐದು ಗಂಟೆಗೇ ಎಚ್ಚರವಾಯಿತು. ಟೆಂಟ್ ಬಿಟ್ಟು ಹೊರಬಂದರೆ ಆಗಲೇ ಬೆಳ್ಳಂ ಬೆಳಕು. ಎಲ್ಲೆಡೆ ನೀರವ ಮೌನ. ಹಕ್ಕಿಗಳ ಚಿಲಿ ಪಿಲಿ ಬಿಟ್ಟರೆ ಬೇರೇನೂ ಇಲ್ಲ. ಸುತ್ತಲೂ ಬಣ್ಣ ಬಣ್ಣದ ಟೆಂಟ್ ಗಳೂ ಕೂಡ ನಿದ್ದೆಯ ಮಬ್ಬಿನಲ್ಲಿ  ಇರುವಂತೆ ತೋರಿತು. ಹತ್ತಿರದಲ್ಲಿನ ಕ್ಯಾಂಪ್ ಫೈರ್ ನಿಂದ  ಹೌದೋ ಅಲ್ಲವೋ ಎನ್ನುವಷ್ಟು ಹೊಗೆ. ಸುತ್ತಲೂ ಎತ್ತರದ ಹಸಿರು ಸೂಸುವ ಮರಗಳು. ಅವುಗಳ ನಡುವಿನ ಕಂಡಿಗಳಲ್ಲಿ ಹಾವಸೆಯ ನಡುವಿನ ತಿಳಿ ನೀರಿನಂತೆ ಕಾಣುವ ನೀಲಿ ಆಕಾಶ. ಹತ್ತಿರದಲ್ಲೇ ಜುಳು ಜುಳು ಹರಿಯುವ ತೊರೆಯ ಮಂಜುಳಾ ನಿನಾದ. ಈ ಸೊಬಗ ಸವಿಯಲು ಎರಡು ಕಣ್ಣು, ಎರಡು ಕಿವಿ ಸಾಲದು ಎನಿಸಿತು. ಹಿಂದಿನ ದಿನ ಮಳೆಬಂದದ್ದರಿಂದ ಎಲ್ಲೆಲ್ಲೂ ಕೊಚ್ಚೆ ಕೆಸರು ಮನಸಿಗೆ ಕಿಸಿರು ಆಗಿದ್ದುದು ನಿಜ. ಮೋಡ ಕರಗಿ ಮೂಡಿದ ಹೊಂಬೆಳಕು ನೋಡಿ ಬಂದದ್ದು   ಸಾರ್ಥಕವಾಯಿತು ಎನಿಸಿತು.
ಬೆಳಗಿನ ಕಾರ್ಯ ಮುಗಿಸಿ ಎಂದಿನಂತೆ ವಾಯುವಿಹಾರಕ್ಕೆ  ಹೊರಟೆವು. ನಮ್ಮ ಶಿಬಿರದಲ್ಲಿ ಎಲ್ಲಿ ನೋಡಿದರು ಕಾರೆ ಕಾರು. ಕಾಲಿಡಲು ತಾವಿಲ್ಲ. ನೋಡುತ್ತಾ ಹೋದಂತೆಲಾ ನಂಬರ್ ಪ್ಲೇಟಿನ ಮೇಲೆ ಬರೆದ ರಾಜ್ಯಗಳ ಹೆಸರುಗಳು ಕುತೂಹಲ ಕೆರಳಿಸಿದವು. ಗಾರ್ಡನ್ ಸ್ಟೇಟ್, ಎಂಪೈರ್ ಸ್ಟೇಟ್, ಗೋಲ್ಡನ್ ಸ್ಟೇಟ್, ಸಿಲ್ವರ್ ಸ್ಟೇಟ್, --ಕೊಪ್ಪರ್ ಸ್ಟೇಟ್, ಜೆಂ ಸ್ಟೇಟ್, ಕೌಬಾಯ್ ಸ್ಟೇಟ್ ಹೀಗೆ ಹತ್ತಾರು ಸ್ಟೇಟುಗಳ ಹೆಸರು ಹೊತ್ತ ಕಾರುಗಳು ಅಲ್ಲಿದ್ದವು. ಇವು ಯಾವ ದೇಶದಲ್ಲಿನ ರಾಜ್ಯಗಳಪ್ಪ ಎಂದು ಹುಬ್ಬು ಹಾರಿಸಬೇಡಿ. ಇವೆಲ್ಲ ಯು.ಎಸ್.ಎ.ನಲ್ಲಿನ ರಾಜ್ಯಗಳೇ. ನಮ್ಮೂರಲ್ಲಿ ಮನುಷ್ಯರಿಗೆ ಅಡ್ಡ ಹೆಸರು ಇರುವಂತೆ ಇಲ್ಲಿ ರಾಜ್ಯಗಳಿಗೆ. ಉದಾಹರಣೆಗೆ ನ್ಯೂ ಜರ್ಸಿ -ಗಾರ್ಡನ್ ಸ್ಟೇಟ್. ಅಲ್ಲಿ ಎಲ್ಲಿ ನೋಡಿದರೂ ಹಸಿರು. ನ್ಯೂಯಾರ್ಕ್- ಎಂಪೈರ್  ಸ್ಟೇಟ್ಜಗದ ವಾಣಿಜ್ಯ ಸಾಮ್ರಾಜ್ಯ  ಅದೇ ತಾನೇ. ಹೀಗೆ ಐವತ್ತು ರಾಜ್ಯಗಳಿಗೂ ಆ ರಾಜ್ಯದ ಹಿರಿಮೆಯನ್ನು ಸಾರುವ ಹೆಸರು ಇವೆ. ಬೆಳಗಿನ ನಡಿಗೆ ಮುಂದೂಡಿ ಕಾರುಗಳ ನಡುವೆ ಓಡಾಡುತ್ತ ಅವುಗಳ ಮೇಲೆ ಬರೆದಾದ ನುಡಿಗಟ್ಟುಗಳನ್ನೂ ಓದುತ್ತ ಹೋದಂತೆ. ಕೆಲವು ಕಡೆ ವಿಶೇಷ ವಾಕ್ಯಗಳಿದ್ದವು. `All for country country', ‘Live free or die`,  `Liberty for prosperity'.
ಆಗ  ನನಗೆ ಅವು ಏನು ಎಂದು ತಿಳಿಯಲಿಲ್ಲ. ನಂತರ ಗೊತ್ತಾಯಿತು ಪ್ರತಿಯೊಂದು ರಾಜ್ಯಕ್ಕೂ ಅದರದೇ ಅದ ಧ್ವಜ, ಗೀತೆ, ವಿಶೇಷ ನಾಮ ಮತ್ತು ಧ್ಯೇಯ ವಾಕ್ಯಗಳಿವೆ ಎಂದು. ನಮ್ಮಲ್ಲಿ ವಿಧಾನಸೌಧದ ಮೇಲೆ ಬರೆಸಿದ್ದರಲ್ಲ ಆ ತರಹ. ಅದರೆ ಇಲ್ಲಿ ಅವು ಕಡ್ಡಾಯವಾಗಿ ಬಳಸಲಾಗುತ್ತಿದೆ. ಇವು ಬರಿ ಇಂಗ್ಲಿಷ್ ನಲ್ಲಿ ಮಾತ್ರ ಇಲ್ಲ. ಸ್ಪ್ಯಾನಿಶ್, ಗ್ರೀಕ್, ಲ್ಯಾಟಿನ್, ಫ್ರೆಂಚ್ ಮತ್ತು ಮೂಲ ನಿವಾಸಿ ಇಂಡಿಯನ್ ಭಾಷೆಯಲ್ಲೂ ಇವೆ. ಇದು ವಲಸಿಗರ ದೇಶ. ಅಲ್ಲಿನ ಜನ ಹೆಚ್ಚಾಗಿ ಬಳಸುತಿದ್ದ, ಇಷ್ಟ ಪಟ್ಟ ಭಾಷೆ ಅಲ್ಲಿದೆ. ನ್ಯೂಯಾರ್ಕ್ ನ ಘೋಷ ವಾಕ್ಯ--`ಎಕ್ಸ್ಸೇಲ್ಸೋರ್` (Excelsior) ಎಂಬ ಲ್ಯಾಟಿನ್ ಪದ. ಅದರ ಅರ್ಥ "Ever Upwards" `ಸದಾ ಮೇಲ್ಮುಖ' ಎಂದು. ನ್ಯೂಯಾರ್ಕ್ ನ ಗಗನಚುಂಬಿ ಸೌಧಗಳನ್ನೂ ನೋಡಿದಾಗ ಎಷ್ಟು ಸಮರ್ಪಕ ಎನಿಸದಿರದು. ಅಲ್ಲದೇ, ನ್ಯೂಯಾರ್ಕ್ ನಗರಕ್ಕಂತೂ ನೂರಾರು ಅಡ್ಡ ಹೆಸರುಗಳು. 
ಕೆಲವು ರಾಜ್ಯಗಳ ಘೋಷವಾಕ್ಯಗಳಂತೂ ಕಾವ್ಯಮಯ, ಸ್ಪೂರ್ತಿದಾಯಕ. "(Manly deeds, womanly words," "I lead," "Eureka", "It grows as it goes'", "All for our country", "Live free or die" -ನುಡಿಗಟ್ಟುಗಳು ನಿಜಕ್ಕೂ ಚೇತೋಹಾರಿ. ಅಲ್ಲಿನ ಜನರ ಮನೋಭಾವದ ಪ್ರತಿಬಿಂಬ. 
ಈ ಅಡ್ಡ ಹೆಸರಿನ ಬಳಕೆ ಬರಿ ರಾಜ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಪ್ರತಿ ನಗರಕ್ಕೂ ಒಂದೋ ಎರಡೋ ನಿಕ್ ನೇಮ್. ಅವು ತುಂಬಾ ವಿಚಿತ್ರ ಎನಿಸಿಯಾವು. Biggest little town, Town too tough to die, City too busy to hate, Music city, Magic City, Salt City, Mile Long City, City of Angles, Apple city, Spanish Capital of the world, ಹನುಮನ ಬಾಲದಂತೆ ಬೆಳೆಯುತ್ತದೆ ಪಟ್ಟಿ. ಈ ಹೆಸರಿನ ಹಿಂದೆ ಹುಡುಕುತ್ತ ಹೊರಟರೆ ಭೌಗೋಳಿಕ, ಐತಿಹಾಸಿಕ, ಸಾಂಸ್ಕೃತಿಕ ವಿವರಗಳ ಸುರುಳಿ ಬಿಚ್ಚಿ ಕೊಳ್ಳುತ್ತದೆ. 
ಈ ನಿಕ್ ನೇಮ್ ಗಳ ದಾಳಿಯಿಂದ ಹೆಸರಾಂತ ವ್ಯಕ್ತಿಗಳು ಹೊರತಾಗಿಲ್ಲ. ಇವು ದೇಶದ ಪ್ರಥಮ ಪ್ರಜೆಯನ್ನು ಬಿಟ್ಟಿಲ್ಲ. ಇಂದಿನ ಅಧ್ಯಕ್ಷ ಬರಾಕ್ ಒಬಾಮ, ನೋ ಡ್ರಾಮಾ ಒಬಾಮ, ಹಿಂದಿನ ಅಧ್ಯಕ್ಷ ಬುಷ್- ದುಬ್ಯಾ, ಕ್ಲಿಂಟನ್- ಕಂ ಬ್ಯಾಕ್ ಕಿಡ್ಗೆರಾಲ್ಡ್ ಫೋರ್ಡ್- ಆಕ್ಸಿಡೆಂಟ್ ಪ್ರೆಸಿಡೆಂಟ್ಜಿಮ್ಮಿ ಕಾರ್ಟರ್- ಪೀ ನಟ್ ಪ್ರೆಸಿಡೆಂಟ್ಜಾರ್ಜ್ ವಾಶಿಂಗ್ ಟನ್- ಫಾದರ್ ಆಫ್ ಹಿಜ್ ಕಂಟ್ರಿ, ಥೋಮಸ್ ಜಫಾರ್ಸನ್- ಪೆನ್ ಆಫ್ ರೆವುಲುಶನ್, ಅಬ್ರಹಂ ಲಿಂಕನ್- ಲಿಬರೆಟರ್ಆನೆಸ್ಟ್ ಅಬೆ, ಜೇಮ್ಸ್ ಬುಕನಿನ್-  ಡು ನಥಿಂಗ್ ಪ್ರೆಸಿಡೆಂಟ್, ಕೆಲವು ಸಲ  ವ್ಯಂಗ್ಯವಾಗಿ ಬಹಳ ಸಲ ನೈಜವಾಗಿ ಅವರ ವ್ಯಕ್ತಿತ್ವ ಸಾಧನೆ ಸಾದರಪಡಿಸುತ್ತವೆ.
ಆಟಗಾರರ ನಿಕ್ ನೇಮ್ ಬಹು ಮಜಾ ನೀಡುತ್ತವೆ. ಗಾಲ್ಫ್ ಆಟಗಾರ ವುಡ್ಸ್ -ಟೈಗರ್, ಟೆನ್ನಿಸ್ ಪಟು, ಕೆನ್ ರೋಸ್ವೆಲ್- ಮಸಲ್,   ಅಂಡ್ರ್ಯೂ ಅಗಸ್ಸೇ -ಪಿಸ್ತುಲ್ ಪಿಟೇ, ಈ ರೀತಿ. ನಮ್ಮಲ್ಲೂ ಇದ್ದಾರಲ್ಲ ಬಂಗಾಳದ ಹುಲಿ, ನಜಮ್ ಗಡದ ನವಾಬ್, ಹರ್ಯಾಣ ಹರ್ರಿಕೆನ್, ಮಾಸ್ಟರ್ ಬ್ಲಾಸ್ಟರ್, ಲಿಟಲ್ ಮಾಸ್ಟರ್, ಮೂಗುತಿ ಸುಂದರಿ. 
ಅಮೇರಿಕಾದ ಕಾರಿನ ನಂಬರ್ ಪ್ಲೇಟುಗಳು ಒಡೆಯನ ವೈಯುಕ್ತಿಕ  ವರದ ಜೊತೆ ಜೊತೆ ಆ ಪ್ರದೇಶದ ಮಾಹಿತಿ ನೀಡುತ್ತದೆ. ನಮ್ಮಲ್ಲೂ ಆಟೋಗಳು ಸಂಸ್ಕೃತಿ, ಜ್ಞಾನ ಪ್ರಸಾರದ ಸಂಚಾರಿ ಕೇಂದ್ರಗಳಂತೆ ಕೆಲಸ ಮಾಡುತ್ತವೆಯಲ್ಲವೇ. -ದುರ್ಗದ ಹುಲಿ, ಮಂಡ್ಯದ ಗಂಡು, ಬಿಜಾಪುರ ಬಲಭೀಮ, ಆಟೋ ರಾಜ, ತಾಯಿ ಪ್ರೀತಿ, ತಂದೆ ಆಶೀರ್ವಾದ ಇತ್ಯಾದಿ ಇತ್ಯಾದಿ....

No comments:

Post a Comment