Monday, September 17, 2012

ಹೀಗೊಂದು ಪ್ರಾರ್ಥನಾ ಪ್ರಸಂಗ




ಹೀಗೊಂದು ಪ್ರಾರ್ಥನಾ ಪ್ರಸಂಗ


http://www.kendasampige.com/images/trans.gif
ನಮ್ಮ ಕಾಲೇಜಿಗೆ ಹೊಸದಾಗಿ ರಾಜ್ಯ ಶಾಸ್ತ್ರ ಉಪನ್ಯಾಸಕರು ವರದಿ ಮಾಡಿಕೊಂಡರು. ಅವರು ಮೂಡಬಿದ್ರೆಯವರು. ಮೈಸೂರು ವಿಶ್ವ ವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು   ಉತ್ತಮ ಅಂಕಗಳೊಂದಿಗೆ ಪಡೆದವರು. ಸಧೃಡ ಮೈಕಟ್ಟು. ಕೆಂಪನೆಯಮೈ ಬಣ್ಣ. ಬಹಳ ಟಿಪ್ ಟಾಪ್‌ ಉಡುಪು. ನಯವಾದ ಮಾತು. ಬಂದ ಕೆಲವೆ ದಿನಗಳಲ್ಲಿ ತಮ್ಮ ಪಾಠದಿಂದ ವಿದ್ಯಾರ್ಥಿಗಳಲ್ಲಿ ಒಳ್ಳೆಯ ಹೆಸರುಗಳಿಸಿದರು. ತುಂಬಾ  ಆಕರ್ಷಕ ವ್ಯಕ್ತಿತ್ವದ ಅವರು ಹಳ್ಳಿಯ ಜೀವನಕ್ಕೆ ಬೇಗ  ಹೊಂದಿಕೊಂಡರು. ಯಾವುದೇ ಕೆಲಸ ವಹಿಸಿದರೂ ಅಚ್ಚುಕಟ್ಟಾಗಿ ಮಾಡುವರು. ಎರಡು ವರ್ಷದಿಂದ ಇದ್ದ ಉಪನ್ಯಾಸಕರ ಕೊರತೆಯನ್ನು ಅವರು  ಸಮರ್ಥವಾಗಿ ತುಂಬಿದರು..
ಯಾವುದರಲ್ಲೂ ಬೆರಳು ತೋರಿಸದ ಹಾಗಿದ್ದ ಅರಿಫುಲ್ಲಾ ಬೇಗ್‌ ಒಂದು ವಿಷಯದಲ್ಲಿ ಮಾತ್ರ ಎಲ್ಲರ ಕಣ್ಣಿಗೆ ಎದ್ದು ಕಾಣುವಂತಾದರು. ಅವರು  ನಿತ್ಯ ಶಾಲಾ ಪ್ರಾರ್ಥನೆಗೆ ಬರುತ್ತಲೆ ಇರಲಿಲ್ಲ. ನಮ್ಮದು ಸಂಯುಕ್ತ ಪದವಿ ಪೂರ್ವಕಾಲೇಜು. ಹೈಸ್ಕೂಲು ಮತ್ತು ಕಾಲೇಜುಗಳು ಎರಡೂ ಇದ್ದವು. ಬೆಳಗಿನ ಪ್ರಾರ್ಥನೆ ಎಲ್ಲರಿಗೂ ಕಡ್ಡಾಯ. ವಿದ್ಯಾರ್ಥಿಗಳಿಗಂತೂ ತಡವಾದರೆ ಶಿಕ್ಷೆಯಾಗುತಿತ್ತು. ಸಿಬ್ಬಂದಿಗೂ ಪ್ರಾರ್ಥನೆ ಕಡ್ಡಾಯ.  ಯಾವಾಗಲಾದರೂ ಒಮ್ಮೆ  ಬಾರದಿದ್ದರೂ ಅದನ್ನು ದೊಡ್ಡದು ಮಾಡುತ್ತಿರಲಿಲ್ಲ. ಆದರೆ ಬೇಗ್‌ ಅವರು ನಿತ್ಯವೂ ಪ್ರಾರ್ಥನೆಗೆ ಗೈರು ಹಾಜರಾಗುವುದರಿಂದ ಎಲ್ಲರ ಬಾಯಿಗೆ ತುತ್ತಾದರು. ಈ ಅಂಶ ನನ್ನ ಗಮನಕ್ಕೂ ಬಂದಿತು. ಬಂದ ಹೊಸದು, ಮನೆಗೆಲಸದ ಗಡಿಬಿಡಿ.  ಅಡುಗೆ ಊಟ ಎಂದು ತಡವಾಗಿರಬಹುದು ಎಂದು ಅಂದು  ಕೊಂಡೆ. ಒಂದೆರಡು ವಾರ ಕಾಲಾವಕಾಶ ನೀಡಿದರೆ ಎಲ್ಲ ತಹಬದಿಗೆ ಬರಬಹುದು ಎಂಬ  ನಂಬಿಕೆ ನನ್ನದು. ನಂತರ ತಿಳಿಯಿತು. ಅವರು ದೊಡ್ಡದಾದ ಮನೆ ಹಿಡಿದಿದ್ದರೂ ಅಡುಗೆ ಮಾಡಿಕೊಳ್ಳುತ್ತಿರಲಿಲ್ಲ. ಹೋಟೆಲ್‌ನಲ್ಲಿ ಊಟ ಮಾಡುತ್ತಿರುವುದಾಗಿ ತಿಳಿಯಿತು. ಮನೆಯಲ್ಲಿ ಕಾಡಿ ಬೇಡುವ ಹೆಂಡತಿ ಇಲ್ಲ, ಅತ್ತು ಕರೆಯುವ ಮಕ್ಕಳಿಗೆ ಅನಾರೋಗ್ಯ ಎನ್ನುವ ಹಾಗಿಲ್ಲ. ಒಳ್ಳೆ ಗುಂಡ್ರಗೋವಿಯಹಾಗಿರುವರು.
ಅದಕ್ಕೆ ಒಂದು ದಿನ ಸುಮ್ಮನೆ ಕೇಳಿದೆ.ಏನ್ರಿ ಬೇಗ್‌  ನಿಮ್ಮ ಬೆಳಗಿನ ಕಾರ್ಯಕ್ರಮ ಏನು ? ನೀವು ಸೂರ್ಯವಂಶಿಯರಾ ಎಂದೆ.
ಅದೇನು ಸಾರ್‌ ಸೂರ್ಯವಂಶ ಎಂದರೆ ಕುತೂಹಲದಿಂದ ಕೇಳಿದರು.
ಅಷ್ಟೂ ಗೊತ್ತಿಲ್ಲವೇನ್ರಿ. ಸೂರ್ಯ ವಂಶದವರು ಎಂದರೆ ಅವರು ಯಾವಾಗಲೂ ಸೂರ್ಯ ಹುಟ್ಟಿ ಬಿಸಿಲು ಬೀಳುವ ತನಕ ಮಲಗಿರುವರು, ಎಂದು ವಿವರಣೆ ನೀಡಿದೆ. 
ಅವರು ಖೊಖಾಡಿಸಿ ನಕ್ಕರು .ಇಲ್ಲ ಸಾರ್ನಾನು ಸೂರ್ಯ ಹುಟ್ಟುವ ಮುಂಚೆಯೆ ಏಳುವೆ. ಅದು ನನ್ನ ಚಿಕ್ಕಂದಿನ ಅಭ್ಯಾಸ. ನಂತರ ಲಘು ವ್ಯಾಯಾಮ ಮಾಡುವೆ. ಒಂದೂ ದಿನವೂ ಬಿಡುವುದಿಲ್ಲ. ಅದರಿಂದ ಮೈ ಹಗುರ ಎನಿಸುವುದು. ದಿನವೆಲ್ಲ ಚಟುವಟಿಕೆಯಿಂದ  ಚುರುಕಾಗಿ  ಇರಬಹುದು,” ಎಂದರು
 
ತುಂಬಾ ಒಳ್ಳೆಯ ಅಭ್ಯಾಸ , ಎಂದು ಮೆಚ್ಚುಗೆ ಸೂಚಿಸಿದೆ. ಎಲ್ಲ ಹೊಂದಿಕೆಯಾಗಿದೆಯಾ ? ಪ್ರಶ್ನೆ ಹಾಕಿದೆ.
ಏನೂ ತೊಂದರೆ ಇಲ್ಲ ಎಲ್ಲ ಅನುಕೂಲವಾಗಿದೆ” , ಎಂದು ಉತ್ತರಿಸಿದರು.
ಹಾಗಿದ್ದರೂ ಅವರು ತಡವಾಗಿ ಕಾಲೇಜಿಗೆ ಬರುವುದು ಮುಂದುವರಿದಿತ್ತು.
ಮುಂದಿನ ಶಿಕ್ಷಕರ ಸಭೆಯಲ್ಲಿ ಎಲ್ಲರೂ ತರಗತಿಗಳು ಪ್ರಾರಂಭವಾಗುವ ಮೊದಲೆ ಕಾಲೇಜಿನ ಆವರಣದಲ್ಲಿರ ಬೇಕು ಎಂದು ಸೂಚನೆ ನೀಡಿದೆ.
ಮಾರನೆ ದಿನ  ಅವರು ಪ್ರಾರ್ಥನೆಗೆ ಮೊದಲೆ ಕಾಲೇಜಿಗೆ ಬಂದರು. ಆದರೆ ಸಿಬ್ಬಂದಿಯ ಕೊಠಡಿಯಲ್ಲಿ ಕುಳಿತಿದ್ದರು ಪ್ರಾರ್ಥನೆಗೆ ಹಾಜರಾಗಲಿಲ್ಲ.
ಮರುದಿನ ಪ್ರಾರ್ಥನಾ ನಂತರ ಆಡುವ ಎರಡು ನುಡಿಯಲ್ಲಿ ಒಂದು ಮಾತು ಹೇಳಿದೆ.ಪ್ರಾರ್ಥನೆ ಶಿಕ್ಷಣದ ವಿಭಾಜ್ಯ ಅಂಗ, ಎಲ್ಲ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ತಪ್ಪದೆ ಪ್ರಾರ್ಥನೆಯಲ್ಲಿ ಪಾಲುಗೊಳ್ಳ ಬೇಕು.
ಮರುದಿನ ಆ ಉಪನ್ಯಾಸಕರು ಯಥಾ ರೀತಿ ಗೈರು.  ಬೋಧಕರ ಸಾಲನ್ನು ಗಮನಿಸಿದೆ. ಅವರೊಬ್ಬರನ್ನು ಬಿಟ್ಟು ಎಲ್ಲರೂ ನಿಂತಿದ್ದರು.
ಪ್ರಾರ್ಥನೆಯ ನಂತರ ಅವರನ್ನು ಛೇಂಬರಿಗೆ ಕರೆಸಿದೆ.
ಯಾಕ್ರಿ ತಡವಾಗಿ  ಬಂದಿರಿ ? ಎಂದೆ.
ಇಲ್ಲ ಸಾರ್‌ ತಡವಾಗಿ ಬಂದಿಲ್ಲ. ಮೊದಲೆ ಬಂದಿದ್ದೆ ಎಂದರು.
ಪ್ರಾರ್ಥನೆಯ ಸಮಯದಲ್ಲಿ ನೀವು ಕಾಣಲಿಲ್ಲ, ಎಂದು ನುಡಿದೆ.
ಇಲ್ಲ ಸಾರ್‌, ಆ ಸಮಯದಲ್ಲೆ ಇದ್ದೆ. ಪಕ್ಕದಲ್ಲಿ ಮರದ ಕೆಳಗೆ ನಿಂತಿದ್ದೆ”, ಎಂದು ಉತ್ತರಿಸಿದರು.
ನನಗೆ ಇದು ಯಾಕೋ ಅತಿಯಾಯಿತು ಎನಿಸಿತು. ಮೊದಲೆ ಬಂದಿರುವಿರಿ ಎನ್ನುವಿರಿ. ನಿಜವಿರಬಹುದುಮರದ ಕೆಳಗೆ ಏಕೆ ನಿಂತಿರಿ  ? ಆದರೆ ಪ್ರಾರ್ಥನೆಗೆ ಏಕೆ ಹಾಜರಾಗಲಿಲ್ಲ ? ಕೇಳಿದೆ.
ಸಾರ್‌ , ನಾನು ಕಾಲೇಜಿನಲ್ಲಿ ಪ್ರಾರ್ಥನೆಮಾಡುವುದಿಲ್ಲ. ಮನೆಯಲ್ಲಿಯೆ ಮಾಡಿ ಬರುವೆ”. ಎಂದರು.
ಮನೆಯಲ್ಲಿ ಮಾಡುವುದು  ನಿಮ್ಮ ವೈಯುಕ್ತಿಕ ಪ್ರಾರ್ಥನೆ. ಅದನ್ನು ಮಾಡುವುದು ಬಿಡುವುದು ನಿಮಗೆ ಸಂಬಂಧಪಟ್ಟ  ಮಾತಾಯಿತು . ಇಲ್ಲಿನದು ಹಾಗಲ್ಲ. ಕಾಲೇಜಿನದು ಸಾಮೂಹಿಕ ಪ್ರಾರ್ಥನೆ.  ಇದು ಶೈಕ್ಷಣಿಕ ಚಟುವಟಿಕೆಯ  ಆರಂಭದ ಸಂಕೇತ. ಎಲ್ಲರೂ ಭಾಗವಹಿಸಬೇಕು.
ನಾನು ಮನೆಯಲ್ಲೆ   ನಮಾಜು ಮಾಡಿರುವೆ” , ಎಂದರು.
ನಾನು ನಿಮ್ಮ ನಮಾಜಿನ ವಿಷಯ ಅಲ್ಲ ಹೇಳುತ್ತಿರುವುದು.
ನಾನು ಭಾಗವಹಿಸಲು ಆಗುವುದಿಲ್ಲ. ಅದು ಧರ್ಮ ವಿರೋಧ. ಆದ್ದರಿಂದ ನಾನು ಬೇರೆ ಯಾವುದೆ ಪ್ರಾರ್ಥನೆ ಮಾಡುವುದಿಲ್ಲ” , ಎಂದರು.
ಇದು ಧಾರ್ಮಿಕ ಪ್ರಾರ್ಥನೆ ಅಲ್ಲ. ಮಂದಿರ ಮಸೀದಿ ಮತ್ತು ಇಗರ್ಜಿಗಳಲ್ಲಿ ಮಾಡುವ ಪ್ರಾರ್ಥನೆಗೂ ಇದಕ್ಕೂ ಸಂಬಂಧವಿಲ್ಲ. ಒಂದುವೇಳೆ ಜೀವನದಲ್ಲಿ ಪ್ರಾರ್ಥನೆಯನ್ನೆ ಮಾಡುವುದಿಲ್ಲ ಎನ್ನುವ ವಿಚಾರವಾದಿಗಯಾಗಿದ್ದರೂ ಇಲ್ಲಿ ಭಾಗವಹಿಸಬೇಕು. ಇಲ್ಲಿನ ಪ್ರಾರ್ಥನೆ ಎಂದರೆ  ನಾಡಗೀತೆ  ಮತ್ತು ರಾಷ್ಟ್ರಗೀತೆಯ ಗಾಯನ. ಅದಕ್ಕೆ ಗೌರವ ಕೊಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಇದು ಖಂಡಿತ ಧರ್ಮವಿರೋಧಿಯಲ್ಲ.ಡಾ. ಝಕೀರ್‌ ಹುಸೇನ್‌. ಡಾ.ಫಕೃದ್ದೀನ್‌ ಅಲಿ ಅಹಮದ್‌, ಡಾ ಜೆ. ಅಬ್ದುಲ್‌ಕಲಾಂನಂಥಹ ಮಹಾನ್‌ ನಾಯಕರೂ  ಧರ್ಮಭೀರುಗಳೆ. ಅವರು  ಕೆಂಪುಕೋಟೆಯ ಮೇಲೆ ನಿಂತು ಲಕ್ಷಾಂತರ ಜನರ ಜೊತೆ ರಾಷ್ಟ್ರಗೀತೆ ಹಾಡಿದ್ದಾರೆ. ಜಮಿಯಾ ಮಿಲಿಯಾಅಲೀಗರ್‌ ಮುಸ್ಲಿಂ ಯೂನಿವರ್ಸಿಟಿಗಳಲ್ಲೂ ರಾಷ್ಟ್ರ ಗೀತೆ ಮೊಳಗುತ್ತದೆ. ತಪ್ಪು ತಿಳುವಳಿಕೆ ಬಿಡಿ.  ನಾಳೆಯಿಂದ ಪ್ರಾರ್ಥನೆ ತಪ್ಪಿಸ ಬೇಡಿ, ಎಂದೆ.
ಇಲ್ಲ ಸಾರ್‌, ನಾನು ಪ್ರಾರ್ಥನೆಯಲ್ಲಿ ಭಾಗವಹಿಸುವುದು ಸಾಧ್ಯವೇ ಇಲ್ಲಎಂದು ಕಡ್ಡಿಮುರಿದಂತೆ ಉತ್ತರಿಸಿದರು.  ನನಗೆ ತಲೆ ಬಿಸಿಯಾಯಿತು. ಯಾಕೋ ಇದು ಅತಿಯಾಯಿತು ಅಂದುಕೊಂಡೆ. ಅಲ್ಲಿ ಸೇರಿದ್ದ ಇತರ ಸಿಬ್ಬಂದಿ ಏನಾಗುವುದೋ ಎಂದು ಕುತೂಹಲದಿಂದ ಕಾಯುತಿದ್ದರು. ಇನ್ನು ಹೆಚ್ಚು ಮಾತನಾಡುವುದರಲ್ಲಿ ಅರ್ಥವಿಲ್ಲ ಎನಿಸಿತು. 
ಈ ಸಮಸ್ಯೆಯನ್ನು ಬಗೆಹರಿಸಲೇಬೇಕಿತ್ತು. ಹಾಗೆಯೇ ಬಿಟ್ಟರೆ ಇನ್ನೂ ಅನೇಕರಿಗೆ ಅಶಿಸ್ತಿನಿಂದ ವರ್ತಿಸಲು ಅವಕಾಶ. ಕಠಿಣ ಕ್ರಮ ತೆಗೆದುಕೊಂಡರೆ ಅವರು ಅಲ್ಪಸಂಖ್ಯಾತರು. ಅವರಿಗೆ ಬೇಕೆಂದೆ ತೊಂದರೆ ನೀಡುತಿದ್ದಾರೆ ಎಂಬ ಆಪಾದನೆ. ಸುಮ್ಮನಿದ್ದರೆ ಒಬ್ಬರಿಗೆ ಒಂದು ಇನ್ನೊಬ್ಬರಿಗೆ ಒಂದು ಎಂಬ ಆರೋಪ. ಅತ್ತ ದರಿ ಇತ್ತ ಪುಲಿ ಎಂಬ ಪರಿಸ್ಥಿತಿ. ವಿದ್ಯಾರ್ಥಿಗಳಿಗೂ ತಪ್ಪು ಸಂಕೇತ ರವಾನೆ ಯಾಗುವುದು. ಇದೆ ವಾದ ಮಂಡಿಸಿ ಅವರೂ ಪ್ರಾರ್ಥನೆಗೆ ರಿಯಾಯತಿ ಕೇಳಬಹುದು.
ದಿನವೆಲ್ಲಾ ಇದೇ ಚಿಂತೆ ನನ್ನನ್ನು ಕಾಡಿತು, ಕೊನೆಗೆ ಒಂದು ನಿರ್ಧಾರಕ್ಕೆ ಬಂದೆ. ಸಂಸ್ಥೆಯಲ್ಲಿ ಶಿಸ್ತು ಅತಿ ಮುಖ್ಯ.  ಈ ವಿಷಯದಲ್ಲಿ ರಾಜಿ ಮಾಡಿಕೊಳ್ಳಬಾರದು, ಆದದ್ದಾಗಲಿ ಸಮಸ್ಯೆಯನ್ನು ಪರಿಹರಿಸಲು ನಿರ್ಧರಿಸಿದೆ.
ನಮ್ಮಲ್ಲಿ ಹಾಜರಿ ಪುಸ್ತಕವನ್ನು ಪ್ರಾರ್ಥನೆಗೆ ತುಸು ಮುಂಚೆ ಶಿಕ್ಷಕರ ಕೋಣೆಯಲ್ಲಿ ಮೇಜಿನ ಮೇಲೆ ಇರಿಸಲಾಗುತಿತ್ತು. ತರಗತಿಗಳು ಪ್ರಾರಂಭವಾದ ತುಸು ಹೊತ್ತಿನ ನಂತರ ಅದನ್ನು ತಂದು ನನ್ನ ಮೇಜಿನ ಮೇಲೆ ಇಡಲಾಗುತಿತ್ತು. ಅಕಸ್ಮಾತ್ತಾಗಿ ತಡವಾಗಿ ಬಂದವರು ಸಹಿಮಾಡದೆ ಇದ್ದವರು ನನ್ನ ಕೋಣೆಗೆ ಬಂದು ಸಹಿಮಾಡಬೇಕಿತ್ತು.  ಯಾವಗಲೋ ಒಮ್ಮೆ ಯಾರಾದರೂ ತಡವಾಗಿ ಬಂದರೆ ನನ್ನ ಕೋಣೆಗೆ ಬರುವರು, ನಮಸ್ಕಾರ ಎನ್ನುವರು. ನಾನೂ ನಮಸ್ಕಾರ ಎಂದು ಹಾಜರಿ ಪುಸ್ತಕ ಕೊಡುವೆ. ಸಾಧಾರಣವಾಗಿ ಏಕೆ ತಡವಾಯಿತು ಎಂದು ಕೇಳುತ್ತಿರಲಿಲ್ಲ. ಅವರು  ನನ್ನ ಎದುರಲ್ಲೆ ಸಹಿ  ಮಾಡಿ  ತರಗತಿಗೆ ಹೋಗುತಿದ್ದರು. ಸಹಜವಾಗಿ ಯಾರೂ ಪದೇಪದೆ ತಡಮಾಡಿ ಬರುತ್ತಿರಲಿಲ್ಲ.
ಮಾರನೆ ದಿನ ಯೋಚನೆ ಮಾಡಿದೆ. ಪ್ರಾರ್ಥನೆಯಾದ ತಕ್ಷಣ  ಹಾಜರಿ ಪುಸ್ತಕವನ್ನು ನನ್ನ ಕೋಣೆಗೆ ತರಿಸಿಕೊಂಡೆ. ಅದನ್ನು ಮೇಜಿನ ಮೇಲೆ ಇಡಲಿಲ್ಲ.  ಹಾಜರಿ ಪುಸ್ತಕವನ್ನು ನನ್ನ ಕಪಾಟಿನಲ್ಲಿ ಇಟ್ಟುಕೊಂಡೆ. ದಿನದಂತೆ ಆ  ವ್ಯಕ್ತಿ ಪ್ರಾರ್ಥನೆಗೆ ಬರಲಿಲ್ಲ. ನಂತರ ಸಿಬ್ಬಂದಿ ಕೋಣೆಗೆ ಹೋದರು. ಅಲ್ಲಿ ಹಾಜರಿ ಪುಸ್ತಕ ಇಲ್ಲ. ಅವರಿವರನ್ನು ಹಾಜರಿ ಪುಸ್ತಕ ಎಲ್ಲಿ ಎಂದು ಕೇಳಿದಾಗ, ಪ್ರಿನ್ಸಿಪಾಲರ ಕೋಣೆಗೆ ಹೋಗಿದೆ ಎಂದು ಗೊತ್ತಾಗಿದೆ.
ಅವರು ಸಾವಕಾಶವಾಗಿ ನನ್ನ ಕೋಣೆಗೆ ಬಂದರು.
'ನಮಸ್ಕಾರ ಸಾರ್‌ಎಂದರು.
ನಾನೂನಮಸ್ಕಾರಎಂದೆ. ಮೇಜಿನ ಮೇಲೆ ಕಣ್ಣಾಡಿಸಿದರು. ಹಾಜರಿ ಪುಸ್ತಕ ಕಾಣಲಿಲ್ಲ. ಸರ್‌ , ಹಾಜರಿ ಪುಸ್ತಕ ಕಾಣುತ್ತಿಲ್ಲಎಂದರು.
ಅದೂ ಎಲ್ಲಿಯೂ ಹೋಗಿಲ್ಲ , ನನ್ನ ಹತ್ತಿರ ಇದೆ, ಎಂದು ಉತ್ತರಿಸಿದೆ.
ಕೊಡಿ ಸಾರ್‌ , ಸಹಿ ಮಾಡುವೆ. ಮೊದಲ ಅವಧಿಯಲ್ಲೆ ತರಗತಿ ಇದೆ. ತಡವಾಗುವುದು”, ಎಂದರು.
ಕೊಡುವುದಿಲ್ಲ, ಎಂದೆ.
ಏನು ಸಾರ್‌ ಹಾಗೆಂದರೆ. ನಾನು ಕಾಲೇಜಿಗೆ ಬಂದರೂ ಹಾಜರಿ ಪುಸ್ತಕ ಕೊಡುವುದಿಲ್ಲ ಎಂದರೆಹೇಗೆಮುಖ ಕೆಂಪು ಮಾಡಿಕೊಂಡು ಕೇಳಿದರು.
ನೀವು ಪ್ರಾರ್ಥನೆಗೆ ಬರುತ್ತಿಲ್ಲ. ಅದು  ಶೈಕ್ಷಣಿಕ ಚಟುವಟಿಕೆಯ ಪ್ರಮುಖ ಅಂಗ. ಅದಕ್ಕೆ ಹಾಜರಾಗದಿದ್ದರೆ  ಆ ದಿನ ಗೈರು ಹಾಜರಾದಂತೆ”, ಎಂದು ಶಾಂತವಾಗಿ ವಿವರಣೆ ನೀಡಿದೆ.
ನೀವು ಹೀಗೆ ಮಾಡುವುದು  ಸರಿಯಲ್ಲ.  ಇದು ಕಾನೂನು ಬಾಹಿರ” , ಎಂದು ಗಡುಸಾಗಿ ಹೇಳಿದರು.
ರಾಷ್ಟ್ರಗೀತೆಯನ್ನು ಹಾಡುವುದಿಲ್ಲ  ಎಂದರೆ ರಾಷ್ಟ್ರಕ್ಕೆ ಅಪಮಾನ ಮಾಡಿದಂತೆ  ಹೀಗೆ ಅಗೌರವ ತೋರಿಸುವುದು ಶಿಕ್ಷಾರ್ಹ ಅಪರಾಧ.  ಈ ಬಗ್ಗೆ ಈ ದಿನವೆ  ಮೇಲಾಧಿಕಾರಿಗಳಿಗೆ ವರದಿಮಾಡಬಹುದುಎಂದೆ.   ಆ ವ್ಯಕ್ತಿ ತುಸು ಮೆತ್ತಗಾದ.
ಸಾರ್‌, ಅದೆಲ್ಲ ಏಕೆ. ನಾನು ನೀವು ವಹಿಸಿದ ಎಲ್ಲ ಕೆಲಸವನ್ನೂ ನಿಷ್ಠೆಯಿಂದ  ಮಾಡುತ್ತಿರುವೆ.  ಪಾಠದ ಬಗ್ಗೆ ಮಕ್ಕಳೂ ಒಳ್ಳೆಯ ಅಭಿಪ್ರಾಯ ಹೊಂದಿರುವರು. ಯಾರನ್ನಾದರೂ ಕೇಳಿ. ನನ್ನ ಕೆಲಸವನ್ನುನೀವೂ ಮೆಚ್ಚಿರುವಿರಿ. ಎಷ್ಟೋ ಸಲ ನೀವೆ ಎಲ್ಲರೆದುರು ಹೊಗಳಿರುವಿರಿ.ಎಂದರು.
ನಿಮ್ಮ ಕೆಲಸದ ಬಗ್ಗೆ ನನ್ನ ತಕರಾರಿಲ್ಲ. ಆದರೆ ನೀವು ಭಾರತೀಯ ನಾಗರಿಕರು ಮೇಲಾಗಿ ಸರ್ಕಾರಿ ನೌಕರರು. ಇಲ್ಲಿ ಜಾತಿ ಧರ್ಮದ ಪ್ರಶ್ನೆ ಬರುವುದಿಲ್ಲ. ಸರಕಾರದ ನಿಯಮಾವಳಿಗಳು ಎಲ್ಲರಿಗೂ ಸಮಾನವಾಗಿ ಅನ್ವಯವಾಗುವವು. ಅವನ್ನು ಮೀರಿದವರು ಶಿಸ್ತಿನ ಕ್ರಮಕ್ಕೆ ಒಳಗಾಗುವರು, ಎಂದು ನುಡಿದೆ.
ಈ ಎಲ್ಲ ಮಾತುಕಥೆಗಳು  ಕೋಪ ತಾಪಗಳಿಲ್ಲದೆ ನಡೆದವು.
ಅವರು ಹತ್ತು ನಿಮಿಷ ಹಾಗೆಯೆ ನಿಂತರು ನಾನು ನನ್ನ ಕೆಲಸದಲ್ಲಿ ತೊಡಗಿದೆ. ಅವರು ಮತ್ತೇನು ಮಾತನಾಡದೆ ಶಿಕ್ಷಕರ ಕೋಣೆಗೆ ಹೋದರು. ನಂತರ ತರಗತಿಗೂ ಹೋದರು.




ನಾನೂ ಆ ವಿಷಯ ಕುರಿತು  ಯಾರೊಡನೆಯೂ ಮಾತನಾಡಲಿಲ್ಲ.ನಾನು ಅವರಿಗೆ ಸಹಿ ಮಾಡಲು ಹಾಜರಿ ಪುಸ್ತಕ ನೀಡದೆ ಇರುವುದು ಕಾನೂನು ಬದ್ಧಕ್ರಮ ಅಲ್ಲ, ಅವರು ಮೇಲಾಧಿಕಾರಿಗಳಿಗೆ ದೂರು ನೀಡಿದರೆ ಕಷ್ಟ. ಸುಮ್ಮನೆ ಏಕೆ ಸಮಸ್ಯೆ. ಮೇಲಾಧಿಕಾರಿಗಳಿಗೆ ದೂರು ನೀಡಿದರೆ ಅವರೆ ಬುದ್ದಿ ಕಲಿಸುವರು. ಎಂದು ಹಿರಿಯ ಸಹಾಯಕರು  ಸೂಚಿಸಿದರು.
ಏನೋ ತಿಳುವಳಿಕೆ ಇಲ್ಲದೆ ಹೀಗೆ ಮಾತನಾಡಿದ್ದಾರೆ. ದೂರು ನೀಡುವುದು ಸಲ್ಲದು.ಕಡ್ಡಿಯನ್ನು ಗುಡ್ಡ ಮಾಡುವುದು ಸರಿಯಲ್ಲ. ನಾವು ಒಟ್ಟಿಗೆ ಕೆಲಸ ಮಾಡ ಬೇಕಾದವರು. ಚತುರೋಪಾಯ ಬಳಸಿ ಹಾದಿಗೆ ತರೋಣ. ಸಂಸ್ಥೆಯಲ್ಲಿನ ಶಿಸ್ತು , ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಅಡಚಣೆಯಾದರೆ  ಸುಗಮ ಆಡಳಿತಕ್ಕಾಗಿ ಕಾನೂನೇತರ ಕ್ರಮ ತೆಗೆದುಕೊಳ್ಳಲು ಆಡಳಿತಾಧಿಕಾರಿಗೆ ಅವಕಾಶವಿದೆ.ಕೈ ಮೀರಿದರೆ ಅದು ಬೇರೆಯ ಮಾತು. ಅವರಾಗಿಯೆ ದೂರು ನೀಡಿದರೆ ಇನ್ನೂ ಉತ್ತಮವಾಯಿತು. ತನಿಖೆಗೆ ಬಂದ ಅಧಿಕಾರಿಗಳಿಗೆ ವಿಷಯ ತಿಳಿಯುವುದು. ತಾವು ತೋಡಿದ ಹಳ್ಳಕ್ಕೆ ತಾವೆ ಬೀಳಬೇಕಾಗುವುದು. ಅಧಿಕಾರಿಗಳಿಗೆ ಅವರೆ ಉತ್ತರದಾಯಿಯಾಗುವರು, ಎಂದು ಸಮಾಧಾನಪಡಿಸಿದೆ.
ಮಾರನೆ ದಿನ ಪ್ರಾರ್ಥನೆಯ ಗಂಟೆ ಬಾರಿಸಿತು. ನಾನು ಹೋಗಿ ನಿಂತು ಕೊಂಡೆ. ಉಪನ್ಯಾಸಕರ ಸಾಲನ್ನು ಗಮನಿಸಿದೆ.ಅವರೂ ನಿಂತಿದ್ದರು.
ಪ್ರಾರ್ಥನೆಯು ಆದನಂತರ ಅವರನ್ನು ನನ್ನ ಕೋಣೆಗೆ ಕರೆಸಿದೆ. ಬಂದು ನನ್ನ ಮುಂದೆ ಬಿಮ್ಮನೆ ನಿಂತರು.  ಹಾಜರಿ ಪುಸ್ತಕ ನೋಡಿದೆ . ಅವರು ಆಗಲೆ  ಆ ದಿನದ ಸಹಿ ಮಾಡಿದ್ದರು
ಅವರಿಗೆ ಹಾಜರಿ ಪುಸ್ತಕ ನೀಡಿ,’  ಹಾಜರಿಯಲ್ಲಿ ಸಹಿ ಮಾಡಿ ಎಂದೆ.
ಆಗಲೆ ಸಹಿ ಮಾಡಿರುವೆ”, ಎಂದರು.
ನಿನ್ನೆಯ ದಿನದ ಸಹಿ ಮಾಡಿ ಎಂದೆ.
ಅಲ್ಲಿ ಹಸಿರು ಇಂಕಿನಲ್ಲಿ  ಪ್ರಶ್ನಾರ್ಥಕ ಚಿಹ್ನೆ ಇದೆ, ಎಂದರು.
ಹೌದು , ನಾನೆ ನಿನ್ನೆ ಅದನ್ನು ಹಾಕಿದ್ದೆ.  ಆದರೂ ಪರವಾ ಇಲ್ಲ. ಅದರ ಮೇಲೆ ನಿಮ್ಮ ಸಹಿ ಮಾಡಿ. ನಾನು ದೃಢೀಕರಿಸುವೆ, ಎಂದು ತಿಳಿಸಿದೆ.
ಅವರು ನಿಟ್ಟುಸಿರುಬಿಟ್ಟು ಸಹಿ  ಮಾಡಿದರು. ನಂತರ ತಲೆ ತಗ್ಗಿಸಿಕೊಂಡು ತರಗತಿಗೆ ಹೋದರು.
ಪ್ರಾರ್ಥನೆಯ ಪ್ರಸಂಗ ಸುಖಾಂತ್ಯವಾಯಿತು. ಮೊದಲಿನಷ್ಟೆ ಕಳಕಳಿಯಿಂದ ನಗುನಗುತ್ತಾ ಕಾಲೇಜಿನ ಕೆಲಸ ನಿರ್ವಹಿಸುವಂತಾಯಿತು. ನಾವೆಲ್ಲ ಮೊದಲು ಭಾರತೀಯರು ನಂತರ ಹಿಂದು,ಮುಸ್ಲಿಮ್‌ ,ಸಿಖ್, ಇಸಾಯಿ ,ರಾಷ್ಟ್ರ ಧರ್ಮ ಎಲ್ಲ ಧರ್ಮಕ್ಕೂ ಮಿಗಿಲು ಎಂಬ ಅರಿವು ಅವರಲ್ಲಿ ಮೂಡಿದ್ದು ತುಂಬ ನೆಮ್ಮದಿ ತಂದಿತು

No comments:

Post a Comment