Tuesday, September 25, 2012

ಕನ್ನಡವೆ ಎನ್ನುಸಿರು ಎಂದು ಬದುಕಿದ ಪ್ರೊ. ಡಿ.ಲಿಂಗಯ್ಯ:ಅಪ್ಪಾಜಿರಾಯರ ಸ್ಮರಣೆ    
ಎಚ್. ಶೇಷಗಿರಿರಾವ್
ಶುಕ್ರವಾರ, 21 ಸೆಪ್ಟೆಂಬರ್ 2012 (00:00 IST) 
ಪ್ರೊ. ಡಿ ಲಿಂಗಯ್ಯ
ಬೆಂಗಳೂರಿಗೆ   ಬಂದ ಹೊಸದು. ಹಳೆಯ ಬೆಂಗಳೂರಿನ ಭಾಗವಾದ ಬಸವನಗುಡಿಗೆ ಹೊಂದಿಕೊಂಡಿರುವ   ನರಸಿಂಹರಾಜಾ ಕಾಲನಿಯಲ್ಲಿ ವಾಸ.  ಪಕ್ಕದ ರಸ್ತೆಯಲ್ಲೆ ಬಿ.ಎಂ.ಶ್ರೀ ಪ್ರತಿಷ್ಠಾನದ ಹೆಸರು ಹೊತ್ತ ಸುಂದರ ಭವನ. ಅಲ್ಲಿನ ಉಚಿತ ವಾಚನಾಲಯಕ್ಕೆ ಆಗಾಗ  ಭೇಟಿ  ನೀಡುವುದು ವಾಡಿಕೆ ಮತ್ತು ಅಲ್ಲಿ ನಡೆವ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ  ವೇದಿಕೆಯ ಮೇಲೆ ಕುಳಿತ ಎತ್ತರದ ನಿಲುವಿನ ಸಾಧಾರಣ ಮೈಕಟ್ಟಿನ ಸಾದ ಬಣ್ಣದ ಅಚ್ಚುಕಟ್ಟಾಗಿ ಉಡುಪು  ಧರಿಸಿದ,ಅತಿಥಿಗಳನ್ನು, ಪರಿಚಿತರನ್ನು ಸದಾ ಮುಗುಳುನಗೆಯಿಂದ ಮೃದು ಮಾತಿನಿಂದ ಸ್ವಾಗತಿಸು ವ್ಯಕ್ತಿ ಯಾರಿರಬಹುದೆಂಬ  ಕುತೂಹಲವು . ಒಂದೆರಡು ಸಮಾರಂಭದಲ್ಲಿ ಹಾಜರಿ ಹಾಕಿದ ನಂತರ ತಣಿಯಿತು.  ಅವರ ವಾಗ್‌ವೈಖರಿ  ಅಸದಳ . ಪುಸ್ತಕದ ಬಿಡುಗಡೆ ಇರಲಿ, ಖ್ಯಾತ ನಾಮರ ಜಯಂತಿಯೆ ಇರಲಿ, ಕಥೆಗಾರ, ಕಾದಂಬರಿಕಾರ, ಕವಿ, ಜಾನಪದ ತಜ್ಞ , ಹಸ್ತ ಪ್ರತಿ ತಜ್ಞರ ಸನ್ಮಾನವಿರಲಿ, ವಿಷಯ ಯಾವುದೆ ಇದ್ದರೂ ಅವರ ಅಧ್ಯಕ್ಷೀಯ ಭಾಷಣ ಎಂದರೆ  ತಲಸ್ಪರ್ಶಿವಿಚಾರ ಪೂರಿತ ಮಾತುಗಳ ಮಳೆ. ಅದರ ಸ್ವಾದ ಕೇಳಿಯೆ ತಿಳಿಯ ಬೇಕು.
ಪ್ರತಿಷ್ಠಾನವು ನಡೆಸುತಿದ್ದ ಹಸ್ತಪ್ರತಿ ಅಧ್ಯಯನದ ತರಗತಿಗೆ ನಾನು ಸೇರಿದ ಮೇಲೆ ಜತೆಗೆ ಅವರೊಂದಿಗೆ ರಾಮಚಂದ್ರಾಪುರ ಮಠದಲ್ಲಿ ನಡೆಸಿದ ಹಸ್ತಪ್ರತಿ ಆಧ್ಯಯನ ಸಮಾವೇಶದಲ್ಲಿ ಭಾಗವಹಿಸಿದಾಗ ಅವರ ಬಹು ಮುಖ ಪ್ರತಿಭೆಯ ಸರಳ ವ್ಯಕ್ತಿತ್ವದ  ಪರಿಚಯವಾಯಿತು. ಸುಮಾರು ಎಂಬತ್ತಕ್ಕೂ ಹೆಚ್ಚು ಕೃತಿಗಳ, ಅದೂ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಧನೆ ಮಾಡಿರುವುದು  ಮೆಚ್ಚಿಗೆ ಮೂಡಿಸಿತು.
ಈ ಸಾಹಿತ್ಯ ಸೇವೆ ಸತತ  ಐದು ದಶಕಗಳ ನಿರಂತರ ಸೇವೆಯ ಫಲ. ಕಾಲೇಜು ಕಟ್ಟೆ ಹತ್ತಿದಾಗಲೆ ವಿದ್ಯಾರ್ಥಿ ದೆಶೆಯಲ್ಲೆ ೧೯೬೨ರಲ್ಲಿ  ಮೊದಲ ನಾಟಕ “ ದಡ್ಡ ಶಿಖಾಮಣಿ “  ಪ್ರಕಟ, ಸತತ ಸಾಹಿತ್ಯ ಸೇವೆ  ಜಾನಪದಲೋಕದ ದಿಗ್ಗಜ ಎಸ್‌.ಕೆ ಕರೀಂಖಾನರ ಬದುಕು ಮತ್ತು ಬರಹಗಳ  ಕುರಿತ ಬೃಹತ್‌ ಕೃತಿ ಅವರ ಅಂತಿಮ ಕಾಣಿಕೆ ಈಗ ಪ್ರಕಟನೆಗೆ ಸಿದ್ಧವಾಗಿದೆ. ಈ ಅವಧಿಯಲ್ಲಿ ನಾಲ್ಕು ನಾಟಕಗಳು, ಮೂರು ಕಥಾ ಸಂಗ್ರಹಗಳು, ನಾಲ್ಕು, ವಿಮರ್ಶಾಗ್ರಂಥಗಳು, ಡಜನ್‌ ಕವನ ಸಂಗ್ರಹಗಳು, ಐದು  ವ್ಯಕ್ತಿಚಿತ್ರಗ್ರಂಥಗಳು, ಐದು  ಜೀವನ ಚರಿತ್ರೆಗಳು, ನಾಲ್ಕು ಪ್ರಬಂಧ ಸಂಕಲನಗಳು ಮೂರು ಸ್ವಾತಂತ್ರ್ಯ ಚಳುವಳಿ ಸಂಬಂಧಿತ ಗ್ರಂಥಗಳು  ಎರಡು ಕಾದಂಬರಿಗಳು, ೨೧ ಜಾನಪದ ಸಂಬಂಧಿತ ಕೃತಿಗಳು.  ೨೦ ಸಂಪಾದಿತ ಗ್ರಂಥಗಳು, ಇನ್ನು ನೂರಾರು ಕಿರುಲೇಖನಗಳು, ಸಾಕ್ಷ್ಯ ಚಿತ್ರಗಳಿಗೆ ಸಾಹಿತ್ಯ, ರಚನೆ ಮತ್ತು ದೂರದರ್ಶನಗಳಲ್ಲಿ ಸಂವಾದಗಳು  ಅವರ ಆಸಕ್ತಿಯ ಪಾಂಡಿತ್ಯದ ವ್ಯಾಪ್ತಿಗೆ ಸಾಕ್ಷಿಯಾಗಿವೆ.
ಪ್ರೊ. ಡಿ ಲಿಂಗಯ್ಯ  ಹುಟ್ಟಿದ್ದು  ೧೯೩೯ ರಲ್ಲಿ ಶ್ರೀರಂಗಪಟ್ಟಣ ತಾಲೂಕಿನ ಪೀ ಹಳ್ಳಿಯ ರೈತ ಕುಟುಂಬದಲ್ಲಿ ತಂದೆ ದೇವೆಗೌಡ ಚಿಕ್ಕ ರೈತ. ತಾಯಿ ಸಿದ್ದಮ್ಮ, ಬಡ ಕುಟುಂಬ. ಕೃಷಿ ಕೆಲಸದಲ್ಲಿ ಸಹಾಯ ಮಾಡುತ್ತಾ ಶಿಕ್ಷಣ ಮುಂದುವರಿಸಿದರು. ೧೯೬೮ ರಲ್ಲಿ ಮೈಸೂರು  ವಿಶ್ವ ವಿದ್ಯಾನಿಲಯದಲ್ಲಿ ಕನ್ನಡ ಎಂ ಎ. ಪದವಿ. ಆಗಲೆ ಕವಿತರೊಂದಿಗೆ ಮದುವೆ.  ಎರಡು ಹೆಣ್ಣು ಮತ್ತು ಒಬ್ಬ ಗಂಡು ಮಗನನ್ನು ಹೊಂದಿದ ಚಿಕ್ಕ ಸಂಸಾರ ಅವರದು. ಅವರ ವೃತ್ತಿ ಪ್ರಾಂಭವಾದುದು ವಿಶ್ವೇಶ್ವರಯ್ಯ  ಪದವಿ ಕಾಲೇಜಿನಲ್ಲಿ. ಮೊದಲು ಉಪನ್ಯಾಸಕರಾಗಿ ಹಂತ ಹಂತವಾಗಿ ಮೇಲೇರಿ ಪ್ರಾಧ್ಯಾಪಕ  ನಂತರ ಪ್ರಾಚಾರ್ಯರಾಗಿ ಸೇವೆ. ೧೯೯೭ರಲ್ಲಿ ನಿವೃತ್ತಿಯಾದುದೂ ಅಲ್ಲಿಯೆ. ಸಾವಿರಾರು ವಿದ್ಯಾರ್ಥಿಗಳಿಗೆ ನೆಚ್ಚಿನ  ಕನ್ನಡ ಮೇಷ್ಟ್ರು. ನೂರಾರು ಸಹೋದ್ಯೋಗಿಗಳಿಗೆ ಆತ್ಮೀಯ ಒಡನಾಡಿ ಲಕ್ಷಾಂತರ ಓದುಗರ ಮನೆಯಲ್ಲಿ ಮನದಲ್ಲಿ ನೆಚ್ಚಿನ  ಸಾಹಿತಿ.
ವೃತ್ತಿ ಮತ್ತು ಪ್ರವೃತ್ತಿಗಳು ಪರಸ್ಪರ ಪೂರಕವಾದ ಸೌಭಾಗ್ಯ ಅವರದು. ಹಳ್ಳಿಗಾಡಿನಿಂದ ಬಂದ ಅವರಿಗೆ ಜಾನಪದ ಸಂಸ್ಕೃತಿ ರಕ್ತಗತ. ಹಳ್ಳಿಯ ಜನ ಹೃದಯಕ್ಕೆ ಹತ್ತಿರ. ಅಂತೆಯೆ ತಮ್ಮ ಸಮಯವನ್ನು ಗ್ರಾಮೀಣ ಸೊಗಡಿನ ಅನಾವರಣಕ್ಕೆ ಮೀಸಲಿರಿಸಿದರು. ಅವಿರತ ಕ್ಷೇತ್ರ ಕಾರ್ಯ  ಮಾಡಿ, ಜನಪದ ಗೀತೆಗಳು, ಜನಪದ ಕಾವ್ಯಗಳು, ಪ್ರಾಣಿ ಕಥೆಗಳು ಹೀಗೆ ಸುಮಾರು ೨೧ ಪುಸ್ತಕಗಳನ್ನು ಪ್ರಕಟಿಸಿರುವ ಹಿರಿಮೆ ಇವರದು. ಲಿಂಗಯ್ಯನವರು ಕೃಷಿ ಮಾಡದ ಸಾಹಿತ್ಯ ಕ್ಷೇತ್ರವನ್ನು ಕನ್ನಡದಲ್ಲಿ ಹುಡುಕುವುದು ಕಷ್ಟ, ಎನ್ನುವುದು ಕ್ಲೀಷೆಯಲ್ಲ. ನಾಟಕ, ಕಥೆ, ಕವನ, ಜೀವನ ಚರಿತ್ರೆ,bವ್ಯಕ್ತಿಚಿತ್ರಗಳು, ಪ್ರಬಂಧ ಮತ್ತು ಗ್ರಂಥ ಸಂಪಾದನಾ ಕ್ಷೇತ್ರದಲ್ಲಿ ತಮ್ಮ ಹೆಜ್ಜೆ  ಗುರುತು ಮೂಡಿಸಿರುವರು.
ಅವರ ಕಾಣಿಕೆ ಬರಿ  ಸಾಹಿತ್ಯಕ್ಕೆ ಸೀಮಿತವಾಗದೆ ಜನಪರ  ಚಳುವಳಿಗಳಲ್ಲೂ ವ್ಯಕ್ತವಾಗಿದೆ. ಕನ್ನಡಪರ ಚಳುವಳಿಯಲ್ಲಿ ಅವರದು ಸದಾ ಎದ್ದು ಕಾಣುತಿದ್ದರು. ಅವರು ಬರಿ ಪತ್ರಿಕಾ ಹೇಳಿಕೆ ನೀಡಿ ಪ್ರತಿಭಟಿಸುವ ಕಾಗದದ ಹುಲಿಯಲ್ಲ. ೧೯೬೭ ರಿಂದ ೨೦೦೭ ರ ವರೆಗೆನ ಹಲವಾರು ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗಿಗಳು.೧೯೮೨ ರಲ್ಲಿ ಗೋಕಾಕ ಚಳುವಳಿಯಲ್ಲಿ ಸರಕಾರದ ವಿಳಂಬ ನೀತಿ ಪ್ರತಿಭಟಿಸಿ ಕನ್ನಡ ಸಾಹಿತ್ಯ ಪರಿಷತ್ತಿನ  ಗೌ. ಕಾರ್ಯದರ್ಶಿ ಸ್ಥಾನಕ್ಕೆ ರಾಜಿನಾಮೆನೀಡಿದ್ದರು. ಜನಪರ ನಿಲುವಿನಿಂದಾಗಿ ಅವರು ಜನಪ್ರಿಯರೂ ಆಗಿದ್ದರು ಹಾಗಾಗಿ ಅನೇಕ ಸಾಹಿತ್ಯ ಸಂಘಟನೆಗಳಲ್ಲಿ  ಪದಾಧಿಕಾರಿಯಾಗಿ ಕೊನೆಯುಸಿರು ಇರುವವರೆಗೆ ಶ್ರಮಿಸಿದರು.
ಅವರ ಬಹುಮುಖ ಪ್ರತಿಭೆ ಪ್ರಶಸ್ತಿಗಳು ಅವರ ಬೆನ್ನು ಹತ್ತಿ ಬಂದವು. ರಾಜ್ಯ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಚುಂಚ ಶ್ರೀ ಪ್ರಶಸ್ತಿ ಅವರಿಗೆ ಬಂದ ಹತ್ತಕ್ಕೂ ಹೆಚ್ಚು ಪ್ರಶಸ್ತಿಗಳಲ್ಲಿ ಮುಖ್ಯವಾದವು.
ಅವರ “ ಬಯಲು ಸೀಮೆಯ ಜನಪದ ಗೀತೆಗಳು” ಕರ್ನಾಟಕ ಸಾಹಿತ್ಯಕಾಡಮಿಯ ಬಹುಮಾನ ಪಡೆದರೆ, ಕರ್ನಾಟಕ ಜಾನಪದ ಕಾವ್ಯವು, ದೇವರಾಜ ಬಹದ್ದೂರ್‌ ಪ್ರಶಸ್ತಿಗೆ ಭಾಜನವಾಗಿದೆ.”ವಚನ ದವನ “  ಜಾನಪದ ಸಾಹಿತ್ಯ ಅಕಾಡಮಿಯ ಬಹುಮಾನ  ಪಡೆದಿದೆ. ”ಸತ್ಯಾಗ್ರಹಿಗಳ ಸಂದರ್ಶನ”, ಕರ್ನಾಟಕ ಗಾಂಧಿ ಪ್ರತಿಷ್ಠಾನ ಪ್ರಶಸ್ತಿ ಪಡೆದಿದೆ. ಅವರ  ವ್ಯಾಪಕ ಕ್ಷೇತ್ರಾನುಭವ ಮತ್ತು  ಜನಸಂಪರ್ಕದಿಂದಾಗಿ ಅನೇಕ ಪ್ರಶಸ್ತಿ ಸಮಿತಿಗಳ ಸದಸ್ಯರಾಗಿ ದುಡಿದರು. ಹಿರಿಯರಿಗೆ ಮನ್ನಣೆ ನೀಡಿ ಕಿರಿಯರಿಗೆ ಬೆನ್ನುತಟ್ಟಿ  ಅರ್ಹರಿಗೆ ಪ್ರಶಸ್ತಿ ನೀಡಿ ಬೆನ್ನು ತಟ್ಟುವಲ್ಲಿ ಸದಾ ಮುಂದು.
ಅವರ ಅವಿರತ ಶ್ರಮವೆ ಸಂಘಸಂಸ್ಥೆಗಳ ಪಾಲಿಗೆ ಸಂಜೀವಿನಿ. ಎತ್ತರದ ನಿಲುವಿನ ಸಾಧಾರಣ ಮೈಕಟ್ಟಿನ ಮೃದು ಮಾತಿನ ಅವರಲ್ಲಿ ಸಂಘರ್ಷದ ಮಾತೆ ಇಲ್ಲ. ಸಾಮರಸ್ಯದಿಂದ ಎಲ್ಲರೊಡನೆ ಒಂದಾಗಿ  ಹೋಗುವ ಗುಣ ಅವರನ್ನು ಸರ್ವಗ್ರಾಹಿಯನ್ನಾಗಿಸಿತು. ಹಾಗಾಗಿ ಇಳಿವಯಸ್ಸಿನಲ್ಲೂ ಏರು ಜವ್ವನಿಗರು ನಾಚುವ ಉತ್ಸಾಹದ ಕೆಲಸ ಅವರದು. ಸಾಹಿತ್ಯವಲಯದ ಗುಂಪೊಂದರ ಸದಸ್ಯ ಎಂಬ ಮಾತಿಗೆ ಮುಗುಳ್‌ ನಗುತ್ತ ಮಾಡುವ ಕೆಲಸವೆ ಅವರ ಉತ್ತರ.
ಶರಣರ ಸಾವು ಮರಣದಲ್ಲಿ ನೋಡು ಎಂಬ ಮಾತುಬಹು ಪ್ರಸಿದ್ಧ. ಆದರೆ ಅದರ ಪ್ರತ್ಯಕ್ಷದರ್ಶನ ನನಗೆ ಇತ್ತೀಚೆಗೆ ಆಯಿತು. ಬಿ.ಎಂ.ಶ್ರೀ ಪ್ರತಿಷ್ಠಾನವು  ಬೆಂಗಳೂರು ಮೂಲದ ವಿಶಿಷ್ಟ ಸಾಂಸ್ಕೃತಿಕ ಸಂಸ್ಥೆ. ಖ್ಯಾತ ಸಾಹಿತಿ ಎಂವಿ ಸೀತಾರಾಮಯ್ಯನವರ ಕನಸಿನ ಕೂಸು. ಅಳಿದು ಹೋಗುತ್ತಿರುವ ಹಸ್ತ ಪ್ರತಿ  ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಮೊಟ್ಟ ಮೊದಲ ಸಂಸ್ಥೆ. ಹಸ್ತಪ್ರತಿಗಳ ಸಂಗ್ರಹ, ಸಂರಕ್ಷಣೆ ಮತ್ತು ಸಂಪಾದನೆಯ  ಗುರಿ ಅದರದು. ಕನ್ನಡಸಾಹಿತ್ಯ ಲೋಕದ ಘಟಾನುಘಟಿಗಳೆಲ್ಲರ ಸಹಯೋಗದ ಭಾಗ್ಯ ಅದಕ್ಕಿದೆ. ಕಳೆದ ವಾರ ಕನ್ನಡದ ಹಿರಿಯ ವಿದ್ವಾಂಸರಾದ ಡಾ. ಜಿ. ನಾಡೋಜ ಪ್ರೊ. ಜಿ.ವೆಂಕಟಸುಬ್ಬಯ್ಯ ನವರು, ಸಾಹಿತ್ಯ ಸಾಧನೆಗಾಗಿ ಇರುವ ಬಿ.ಎಂ.ಶ್ರೀ ಪ್ರಶಸ್ತಿಯನ್ನು, ಕೆ. ಸತ್ಯನಾರಾಯಣ ಅವರಿಗೆಗೆ ಪ್ರದಾನ ಮಾಡುವ ಸಮಾರಂಭ. ಡಾ. ಚಿದಾನಂದ ಮೂರ್ತಿ, ವೆಂಕಟಾಚಲ ಶಾಸ್ತ್ರಿ, ಎಲ್‌.ಎಸ್‌.ಶೇಷಗಿರಿರಾಯರುಗಳನ್ನು ಗೌರವಿಸುವ ಮತ್ತು  ಸಭಾಂಗಣ ಸಾಹಿತಿಗಳಿಂದ ವಿದ್ವಾಂಸರಿಂದ ಕಿಕ್ಕಿರಿದಿತ್ತು. ಅವರ ದರ್ಶನ ಪಡೆವ ,ಅನುಭವಾಮೃತ ಸ್ವಾದಿಸುವ ಸವಿಗಳಿಗೆಗಾಗಿ ಕಾತುರದಿಂದ ಕಾಯುತಿತ್ತು ಜನ. ಶತಾಯುಷಿಗಳಿಗೆ ಸನ್ಮಾನವಾಯಿತು, ಈ ಎಲ್ಲ ಕಾರ್ಯಕ್ರಮದ ರೂವಾರಿ  ಪ್ರೊ.ಡಿ. ಲಿಂಗಯ್ಯ, ಪ್ರತಿಸ್ಠಾನದ ಅಧ್ಯಕ್ಷರು, ಹೆಮ್ಮೆಯಿಂದ ಬೀಗುತಿದ್ದರು. ಹೀಗೆ ಹಿರಿತಲೆಗಳನ್ನೆಲ್ಲ ಒಟ್ಟು ಗೂಡಿಸಿರುವುದಕ್ಕೆ ಅವರಿಗೆ ಕಣ್ಣುತುಂಬಿ ಬಂದಿತ್ತು. ಶಾಲು ಹೊದಿಸಿ ಹಾರ ಹಾಕಿ  ವೇದಿಕೆಯಲ್ಲೆ ಕುಸಿದರು.
ವೇದಿಕೆಯ ಮೇಲೆ ಕುಳಿತಿದ್ದವರು ಆತಂಕಕ್ಕೆ ಒಳಗಾದರು. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಎಲ್ಲರೂ ಕಾರ್ಯಕ್ರಮವನ್ನು ಮೊಟಕುಗೊಳಿಸಿ ಮಾಹಿತಿಗಾಗಿ ಆತಂಕದಿಂದ ಎದುರುನೋಡುತ್ತಿರುವಾಗಲೆ ಅವರು ಕಾಲವಶರಾದ ವಾರ್ತೆ ಬಂದಿತು.
ಅವರ ತಲೆಮಾರಿನ ಹದ  ಕೆಲವೆಗಂಟೆಗಳಲ್ಲಿ  ಅವರ ಕಳೆಬರವನ್ನು ಅವರ ಕಾರ್ಯಕ್ಷೇತ್ರದಲ್ಲೆ ಅಂತಿಮ ಗೌರವ ಸಲ್ಲಿಸಲು ತರಲಾಯಿತು. ಸಂತೋಷ ಸಭೆ ಸಂತಾಪ ಸೂಚಕ  ಸಭೆಯಾಯಿತು. ಜನಪದ ವಿದ್ವಾಂಸ, ಸಾಹಿತಿ ಮತ್ತು   ಉತ್ತಮ ಆಡಳಿತಗಾರರು ತಮ್ಮ ಎಪ್ಪತ್ತನಾಲ್ಕನೆ ವಯಸ್ಸಿನಲ್ಲೂ ಚುರುಕಾಗಿದ್ದ ಅವರ  ಆಕಸ್ಮಿಕ ಅಂತ್ಯವನ್ನು ಕಂಡ ಜನರೆಲ್ಲ ಮರುಗಿದರೂ ಎಂಥಹ ಪುಣ್ಯದ ಸಾವು. ಕನ್ನಡದ ಸೇವೆಯಲ್ಲೆ ವೇದಿಕೆಯಲ್ಲೆ ಕಾಲವಶರಾದರು ಎಂದು ಅಶ್ರುತರ್ಪಣ ಅರ್ಪಿಸಿದೆವು. ಅಂತಿಮಗೌರವ ಸಲ್ಲಿಸಲಾಯಿತು. ತಮ್ಮ ಪ್ರೀತಿಯ ಕಾಯಕದ ನಿರ್ವಹಣೆಯಲ್ಲೆ ಕೈಲಾಸ ಸೇರಿದ ಅವರ ಸೇವೆ ಧನ್ಯ ಎನಿಸಿತು.  ಎರಡುವರ್ಷದ ಹಿಂದೆ ಖ್ಯಾತ ವಿರ್ಮಶಕ ಡಾ.ಕಿರಂ ನಾಗರಾಜ, ಬೇಂದ್ರೆಕುರಿತು ಸತತ  ೨ ತಾಸು ಮಾತನಾಡಿ, ಕೇಳುಗರನ್ನು ಮಂತ್ರ ಮುಗ್ದಗೊಳಿಸಿ ಮನೆಗ ಹೋಗುವ ಹಾದಿಯಲ್ಲೆ ಮರಣವನ್ನಪ್ಪಿದ್ದು ನೆನಪಿಗೆ ಬಂತು. ಅವರ ನೆನಪಿನಲ್ಲಿ ಈಗ ಪ್ರತಿವಾರ ಶನಿವಾರ ಕಿರಂ ನುಡಿ ಮನೆಯಲ್ಲಿ ಸಾಹಿತ್ಯಕಾರ್ಯಕ್ರಮ ,ಸಂವಾದವನ್ನು  ತಪ್ಪದೆ ಸುಚಿತ್ರ ಸೊಸೈಟಿಯವರು ನೆಡಿಸಿಕೊಡುತ್ತಾ ಸಾಹಿತ್ಯ ಸೇವೆ ಮಾಡುತ್ತಿದ್ದಾರೆ. ಅನಂತಮೂರ್ತಿಯವರಿಂದ ಹಿಡಿದು ಯುವ ಸಾಹಿತಿಗಳವರೆಗೆ ಎಲ್ಲ ಹಿರಿ ಕಿರಿಯರಿಗೆ ವೇದಿಕೆ ದೊರಕಿದೆ. ಅವರ ನುಡಿಯಾಲಿಸುವ ಸೌಭಾಗ್ಯ ದೊರಕುತ್ತಿದೆ.
ಕಲ್ಲು ಮಣ್ಣಿನ ಕಟ್ಟಡ , ಲೋಹದ ಪುತ್ಥಳಿಗಳಿಗಿಂತ ಈ ಮಾದರಿಯ ಸ್ಮರಣೆ ಸ್ವಾಗತಾರ್ಹ.ಪ್ರೊ. ಡಿ ಲಿಂಗಯ್ಯನವರ ಸ್ಮರಣಾರ್ಥ ಅಂತಹ ಸಾಹಿತ್ಯೋಪಾಸನೆ ಜರುಗಲಿ ಎಂಬುದು ಸಾಹಿತ್ಯಾಸಕ್ತರ ಸದಾಶಯ.

No comments:

Post a Comment