Thursday, March 13, 2014

ಬಿ. ಎಂ. ಶ್ರೀ ಪ್ರತಿಷ್ಠಾನದ ಸಂಸ್ಥಾಪಕ - ಪ್ರೊ.ಎಂ.ವಿ. ಸೀ

ಪ್ರೊ.ಎಂ.ವಿ. ಸೀ

ಕಾಲೇಜಿನಲ್ಲಿ ಓದುತಿದ್ದಾಗ ಅರವತ್ತರ ದಶಕದಲ್ಲಿ  ಧೂಮಲೀಲೆ ಎಂಬ ಲಲಿತ ಪ್ರಬಂಧ ಪಠ್ಯವಾಗಿತ್ತು. ಅದರಲ್ಲಿನ ವರ್ಣನೆ ಓದಿ ನಾವೆಲ್ಲ ಕಾಲೇಜು ಹುಡುಗರು ಧೂಮಪಾನವನ್ನು ಇಷ್ಟು ರಮ್ಯವಾಗಿ ವರ್ಣೀಸಿರುವ ಲೇಖಕರು ದಿನಕ್ಕೆ ಎಷ್ಟು ಸಿಗರೇಟು ಸೇದುತ್ತಿರಬಹುದು ಎಂದು ಚರ್ಚಿಸಿದ್ದೆವು.  ನಮ್ಮ ಕಲ್ಪನೆಯಪ್ರಕಾರ ಅವರೊಬ್ಬ ಸೂಟು ಬೂಟುಧಾರಿಯಾದ ಕೈನಲ್ಲಿ ಸಿಗರೇಟು ಹಿಡಿದ ಅಪ್‌ಟು ಡೇಟ್‌  ಅಪ್ಪಯ್ಯ ಎಂದುಕೊಂಡಿದ್ದೆವು.  ಒಂದೊಮ್ಮೆ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಎಂ. ವಿ. ಸೀ  ನೋಡಿದಾಗ ನಮಗೆ ಕಂಡಿದ್ದು ದೋತಿ, ತುಂಬ ತೋಳಿನ ಅಂಗಿ, ಕೋಟು ,ಕತ್ತಿನಲ್ಲಿ ಮಫ್ಲರ್‌ ತಲೆಯ ಮೇಲೆ ಮೇಲೊಂದೊ ಟೋಪಿ. ಧರಿಸಿದ,ತೆಳುಮೈಕಟ್ಟಿನ ಸಾಧಾರಣ ಎತ್ತರದ ವ್ಯಕ್ತಿ.  ನಮ್ಮ ಬಾಲಿಶ ಯೋಚನೆ ನಗುತಂದಿತ್ತು. ರತ್ನನ ಪದಗಳಲ್ಲಿ ಹೆಂಡ ಕುಡುಕ ರತ್ನನ ಅನಾವರಣ ಮಾಡಿದ್ದ  ಜಿ.ಪಿ ರಾಜರತ್ನಂ ಅವರಂತೆ ಇವರ ಪ್ರಬಂಧವೂ ಸ್ವಾನುಭವದ ಪ್ರತೀಕವಲ್ಲ ಎಂಬ ಅರಿವಾಯಿತು.ಅವರ ಅಭಿನಂದನ ಗ್ರಂಥ ’ಆಸ್ವಾದ’ ದಲ್ಲಿ ಹೇಳಿದಂತೆ’ ಬರಹಗಾರನ ಬದುಕಿಗೂ ಮತ್ತು ಬರಹಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ.  ಎಂಬುದು ಅವರ ವಿಷಯದಲ್ಲಿ  ಸತ್ಯವಾದ ಮಾತು.

.   ಎಂ.ವಿ.ಸಿ ಎಂದೇ ಸಾಹಿತ್ಯ ಲೋಕದಲ್ಲಿ ಪ್ರಸಿದ್ಧರಾದವರು  ಮೈಸೂರು  ವೆಂಕಟದಾಸಪ್ಪ  ಸೀತಾರಾಮಯ್ಯ ನವರು ಕವಿ,ನಾಟಕಕಾರ, ಕಥೆಗಾರ, ಕಾದಂಬರಿಕಾರ, ಪ್ರಬಂಧಕಾರ, ಅನುವಾದಕ, ಸಂಶೋಧಕ  ಪ್ರಕಾಶಕ ಮತ್ತು ಕನ್ನಡ ಪರಿಚಾರಕ,  ವಾಮನಾಕಾರದ ಆಕೃತಿಯ ಸಾಧನೆ ಮಾತ್ರ ತ್ರಿವಿಕ್ರಮನ ತರಹ ಎಲ್ಲ ರಂಗದಲ್ಲಿ ವ್ಯಾಪಿಸಿತ್ತು   
                  ಸೀತಾರಾಮಯ್ಯನವರು ಜನಿಸಿದುದು ೯-೯- ೧೯೦೯ ರಂದು ಮೈಸೂರಿನ ರಾಮಚಂದ್ರ ಆಗ್ರಹಾರದಲ್ಲಿ ಅಲ್ಲಿರುವವರೆಲ್ಲ ಅರಮನೆಯ ಆಶ್ರಯದಲ್ಲಿರುವ ಬಡ ಬ್ರಾಹ್ಮಣ ಕುಟುಂಬಗಳು. ಇವರ ತಂದೆ ವೆಂಕಟದಾಸಪ್ಪನವರದು ಅರಮನೆಯಲ್ಲಿ ಗುಮಾಸ್ತೆಯ ಕೆಲಸ. ಚಿಕ್ಕ ಸಂಬಳ. ಎಂಟು ಮಕ್ಕಳ ದೊಡ್ಡ ಸಂಸಾರ. ಜೊತೆಗೆ ಸದಾ ಬರುವ ಬಂಧು ಬಾಂಧವರು, ವಾರಾನ್ನದ ಹುಡುಗರು. ಅಂತೂ ಇಂತೂ ಸಂಸಾರದ ರಥ ಸಾಗುತಿತ್ತು. ಆರ್ಥಿಕವಾಗಿ ಅನುಕೂಲವಿಲ್ಲದಿದ್ದರೂ  ಮನೆಯಲ್ಲಿ ಬಹು ಸುಸಂಸ್ಕೃತ ವಾತಾವರಣ. ಪುರಾಣ, ಹರಿಕಥೆ, ಸಂಗೀತ, ಭಜನೆ  ಹೀಗೆ ಎಳೆಯ ಮನಕ್ಕೆ ಸಂಗೀತದ ವಾತಾವರಣ. ಮನೆಯಲ್ಲಿ  ನಡೆಸುತಿದ್ದ ಭಜನೆಗೆ ಸಹಾಯವಾಗಲಿ ಎಂದು ಚಿಕ್ಕಂದಿನಲ್ಲೇ ಮೃದಂಗದ ಕಲಿಕೆ. ನಂತರ ಅದನ್ನು ಅಭಿವೃದ್ದಿ ಪಡಿಸಿಕೊಂಡು ವಿದ್ವಾಂಸರ ಕಚೇರಿಗೂ ಪಕ್ಕವಾದ್ಯ ನಡೆಸುವಷ್ಟು ಪ್ರಾವೀಣ್ಯ. ಆಧುನಿಕ ಶಿಕ್ಷಣದ ಅಗತ್ಯ ಅರಿತಿದ್ದ ಕೆಲವೇ ಜನರಲ್ಲಿ ಇವರ ತಂದೆಯವರೂ ಒಬ್ಬರು. ಅದಕ್ಕೆಂದೆ ಆಗ ತಾನೇಪ್ರಾರಂಭವಾಗಿದ್ದ ಸರ್ಕಾರಿ ಶಾಲೆಗೆ ಸೇರಿಸಿದರು. ಅಲ್ಲಿಂದ ಬನುಮಯ್ಯ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ. ಪರಿಣಾಮ ಇಂಗ್ಲಿಷ್‌ನಲ್ಲೂ ಪರಿಣತೆ. ಅವರಿಗೆ ಆಗಲೇ ಬರೆಯುವ ಹಂಬಲ. ಅದಕ್ಕೆ ಪುಟ ಕೊಟ್ಟದ್ದು ಅವರ ಹದಿನಾರನೆಯ ವಯಸ್ಸಿನಲ್ಲಿ ಹುಟ್ಟು ಹಬ್ಬದ ಕೊಡುಗೆ ಯಾಗಿ ಬಂದ ತಿನಂ ಶ್ರೀ ಅವರು ನೀಡಿದ ಬಿ, ಎಂ.ಶ್ರೀ ಯವರು ಆಗತಾನೆ ಹೊರತಂದ  “ಇಂಗ್ಲಿಷ್‌ ಗೀತೆಗಳು “ ಪುಸ್ತಕ.ಅಲ್ಲಿಂದ ಪ್ರಾರಂಭವಾಯಿತು ಅವರ ಕಾವ್ಯ ಯಾತ್ರೆ. ಇಂಗ್ಲಿಷ್‌ ಸಾಹಿತ್ಯದ ಆಳವಾದ ಅಧ್ಯನ, ಥಾಮಸ್  ಹಾರ್ಡಿ, ಆಲಿವರ್‌ಸ್ಕಲ್ಸ  ಚಾರ್ಲ್ಸ, ಡಿಕನ್ಸ ಮೊದಲಾದಬರಹಗಾರ ಕೃತಿಗಳು ಅಚ್ಚು ಮೆಚ್ಚು.,ಸ್ವಂತ  ಕವನಗಳ ರಚನೆ, ಅನುವಾದ ಎಲ್ಲವಕ್ಕೂ ಇಂಟರ್‌ ಮಿಡಿಯಟ್‌ನಲ್ಲಿ ತಿ. ನಂ.ಶ್ರೀ ಯವರ ಮಾರ್ಗದರ್ಶನ.ಎಲ್ಲ ಪದವಿಯಲ್ಲಿ ಪುತಿನ, ಡಿ ಎಲ್‌ಎನ್, ಟಿ. ಎಸ್‌ ವೆಂಕಣ್ಣಯ್ಯಮೊದಲಾದವರ ಮಾರ್ಗದರ್ಶನ  ಸಾಹಿತ್ಯ ಚಟುವಟಿಕೆಗಳಲ್ಲೂ ಮಿಂಚಿದರು. ಭಾಷಣ,ಪ್ರಬಂಧ  ನಾಟಕ ಎಲ್ಲದರಲ್ಲೂ ಮುಂದು. ನಾಟಕದಲ್ಲಂತೂ ನಾಯಕಿ ಪಾತ್ರ ಅವರಿಗೇ ಮೀಸಲು.ಹಗಲಲ್ಲಿ ಶ್ಯಾಮಲ ವರ್ಣದ ಸಣಕಲು ಹುಡುಗ ಬಣ್ಣಹಚ್ಚಿ ರಂಗದ ಮೆಲೆ ಬಂದರೆ ಸುರ ಸುಂದರಿ.  ಸಹಪಾಠಿ ಹುಡುಗೆಯರಿಗೂ ಅಸೂಯೆ ಯಾಗುತಿತ್ತುಅವರನ್ನು ನೋಡಿ. . ಇನ್ನೂ ಕಾಲೇಜಿನಲ್ಲಿ ಕಲಿಯುತ್ತಿದ್ದಾಗಲೇ ಸಾಹಿತ್ಯದ ಸಾಧನೆ ಶುರುಮಾಡಿದವರು. ಗುರುಗಳಾದ ತಿ.ನಂ.ಶ್ರೀ ಮತ್ತು ಟಿ.ಎಸ್‌ವೆಂಕಣ್ಣಯ್ಯನವರ ಪ್ರೇರಣೆಯಿಂದ ಬರೆದ ಕವನಗಳು ಪ್ರಬುದ್ಧ ಕರ್ನಾಟಕದಲ್ಲಿ ಪ್ರಕಟಗೊಳ್ಳ ತೊಡಗಿದವು.ಅಂದು ಜೀವನ ಪತ್ರಿಕೆಯಲ್ಲಿ ಪ್ರಕಟವಾದ ಅವರ ಕಥನ ಕವನನ “ ಆ ಚಿತ್ರ’ ಚಿನ್ನದ ಪದಕ ಪಡೆದು ಅವರ ಕಾವ್ಯ ಕಲಾಪಕ್ಕೆ ಹೊಸ ಹುರುಪು ತಂದಿತು.ನವೋದಯ ಕಾಲದ ಕುವೆಂಪು , ಪುತಿನ,  ಬೇಂದ್ರೆ ಗೋಕಾಕ, ಮುಗುಳಿಯವರ ಸಾಲಿಗೆ ಇವರೂ ತಮ್ಮ ಸತತ ಕೃಷಿಯಿಂದ ಸೇರ್ಪಡೆಯಾದರು.
ಅವರಿಗೆ ಚಿಕ್ಕವಯಸ್ಸಿನಲ್ಲಿಯೇ ಮದುವೆ. ತಂದೆಯ ಒತ್ತಾಯಕ್ಕೆ ಮಣಿದು ೧೭ನೆಯ ವರ್ಷದಲ್ಲಿಯೇ ಮದುವೆ ಹುಡಗಿ ಸಾವಿತ್ರಮ್ಮ ಇನ್ನೂ ಹನ್ನೆರಡುವರ್ಷದವಳು. ಬೇಗ ಮದುವೆಯಾದರೂ  ಒಂದು ವಿಷಯದಲ್ಲಿ ಹಠವಾದಿ ಶಿಕ್ಷಣ ಮುಗಿದ ಮೆಲೆಯೇ ಹೆಂಡತಿಯನ್ನು ಮನೆ ತುಂಬಿಸಿಕೊಳ್ಳುವುದು.ಅದರಿಂದ ಅವರ  ಎಂ. ಎ ಮುಗಿಯುವವರೆಗೆ  ಅಧ್ಯಯನದಲ್ಲಿ, ಸಾಹಿತ್ಯ ಸಾಧನೆಯಲ್ಲಿ ತಲ್ಲೀನ. ಅವರು ೧೯೩೩ ಎಂ ಎ. ಪದವಿ ಪಡೆದರು. ಮನೆ ನಡೆಸುವಲ್ಲಿ ತಂದೆಗೆ ಸಹಾಯ ಮಾಡುವ  ಮನಸ್ಸು. ಆದರೆ ಜೊತೆಗೆ ಹೆಂಡತಿಯನ್ನು ಮನೆ ತುಂಬಿಸಿಕೊಳ್ಳಲು ಒತ್ತಡ. 
ಎಂ.ವಿ. ಸೀ  ಮತ್ತ್ತು ಪತ್ನಿ ಸಾವಿತ್ರಮ್ಮ
ಮತ್ತೆ ಗುರುಗಳ ಕೃಪೆ. ಬಿ. ಎಮ್‌. ಶ್ರೀಯವರ ಒತ್ತಾಸೆ ಯಿಂದ ೧೯೩೪ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಾರ್ಯದರ್ಶಿ ಹುದ್ದೆ ದೊರಕಿತು. ವೇತನ ೫೦ ರೂಪಾಯಿ. ಆಗಲೇ ಸಂಸಾರ ಹೂಡಿದರು.ಅವರ ಸಾಹಿತ್ಯಾಸಕ್ತಿಗೆ  ಬಲ ಬಂದಿತು.ಸಾಹಿತಿಗಳ ಸಾಂಗತ್ಯ.ಕೃತಿಗಳ ಅವಲೋಕನ. ಕನ್ನಡ ನುಡಿ ಪತ್ರಿಕೆಯ ಹೊಣೆ. ಕರ್ನಾಟಕಾದ್ಯಂತ ಕನ್ನಡಪರ ಚಟುವಟಿಕೆಗಳಲ್ಲಿ ಸಾಹಿತ್ಯ ಸಮ್ಮೇಳನಗಳಲ್ಲಿ ಸಕ್ರಿಯ ಕಾರ್ಯ.  ಹಾಗಾಗಿ ನಾಡಿನಾದ್ಯಂತದ ಸಾಹಿತಿ ಮಿತ್ರರ ಸಂಪರ್ಕಲಾಭ. ಐದು ವರ್ಷ ಪರಿಷತ್ತಿನ ಕೆಲಸದ ನಂತರ ಸರ್ಕಾರದ ನಿಘಂಟು ಯೋಜನೆಯಲ್ಲಿ ನೌಕರಿ. ನಿಘಂಟು ರಚನೆಯಲ್ಲಿ ವಿದ್ವಾಂಸರ ಮಾರ್ಗರ್ಶನ.ಭಾಷೆ, ವ್ಯಾಕರಣ ಮತ್ತು ಸಾಹಿತ್ಯದ ಗಂಭಿರ ಅಧ್ಯಯನ ಇದೇ ಅವಧಿಯಲ್ಲಿ ಸತತ ಸಾಹಿತ್ಯೋಪಾಸನೆ. ಹಲವಾರು ಕೃತಿಗಳ ಪ್ರಕಟಣೆ.ಅವರ ಸಾಹಿತ್ಯ ಕೃತಿಗಳಿಗೆ ಸಾಕಷ್ಟು ಬೇಡಿಕೆಇದ್ದಿತು. ಅವರ ’ ಭಾಗ್ಯ ಲಕ್ಷ್ಮಿ’  ಎಂಬ ಕೃತಿಯು ಪಠ್ಯ ಪುಸ್ತಕವಾಯಿತು ಪರಿಣಾಮವಾಗಿ ಹಣ ಕಾಸಿನ ಮುಗ್ಗಟ್ಟು ತುಸು ಹಗುರವಾಯಿತು.ಅವರಿಗೆ  ಸರ್ಕಾರಿ ಇಂಟರ್‌ ಮೀಡಿಯಟ್‌  ಕಾಲೇಜಿನಲ್ಲಿ ೧೯೪೬ ರಲ್ಲಿ ಉಪನ್ಯಾಸಕ ಹುದ್ದೆ ದೊರೆಯಿತು. ಅವರ ಅನುಭವ , ಅಧ್ಯಾಪನ ಮತ್ತು ಅಧ್ಯಯನಶೀಲತೆಯಿಂದ ಉತ್ತಮ ಬೋಧಕರೆಂದು  ವಿದ್ಯಾರ್ಥಿಗಳಲ್ಲಿ ಹೆಸರು ಪಡೆದರು ಜೀವನದಲ್ಲಿ ತುಸು ಸ್ಥಿರತೆ ಬಂದಿತು ಅವರು ೧೯೬೬ ರಲ್ಲಿ ನಿವೃತ್ತರಾದಾಗ ನೀಡಿದ ವಿದಾಯ ಹೃದಯಂಗಮವಾಗಿತ್ತು.ಅವರ ವೃತ್ತಿಗೆ ನಿವೃತ್ತಿಯೇ ಹೊರತು ಪ್ರವೃತ್ತಿಗೆ ಅಲ್ಲ. ಅವರು Retired  ಅಲ್ಲ Re-tyred  ಎಂಬ ಮಾತನ್ನು ನಿಜ ಮಾಡಿದರು ಕೆಲವ ದಿನಗಳಲ್ಲಿ ಯು. ಜಿ.ಸಿ ಪ್ರಾಧ್ಯಾಪಕತ್ವ ದೊರೆತು ಮತ್ತೆ ಐದು ವರ್ಷ ಸೇವೆ ಮಾಡಿದರು. ಆದರೆ ಅವರೇ ಹಾಸ್ಯಮಯವಾಗಿ ಹೇಳದಂತೆ ಅದು ಮುದುಕಿಗೆ ಮಗುವಾದಂತೆ ಎನಿಸಿತುಕಾರಣ  ಅವರ ಜೀವನದ ಹೆಚ್ಚಿನ ಸಮಯ  ಅಧ್ಯಯನ, ಸಂಶೋಧನೆಗೆ ಅವಕಾಶವಿರದ ಇಂಟರ್‌ಮೀಡಿಯಟ್‌ ವಿದ್ಯಾರ್ಥಿಗಳಿಗೆ ಪಾಠ ಹೇಳುವಲ್ಲಿಯೇ ಕಳೆದು ಹೋಗಿತ್ತು. ಒಂದು ರೀತಿಯಲ್ಲಿ ಮಾರುವೇಷದ ವರವಾಗಿ ಪರಿಣಮಿಸಿತು. ಅವರಿಗೆ ಅನಾರೋಗ್ಯ.ಕೆಲಸದ ವಿಶೇಷ ಒತ್ತಡ ಬೀಳುತ್ತಿರಲಿಲ್ಲ.ತಮ್ಮ ಹೆಚ್ಚಿನ ಸಮಯವನ್ನು ಸಾಹಿತ್ಯ ರಚನೆಗೆ ಮೀಸಲಿಡಬಹುದಾಗಿತ್ತು.
ರೇಖಾಚಿತ್ರ
ಚಿತ್ರ ಕಲೆಯಕಡೆ ಮನವಾಲಿದ್ದೂ ಎಳವೆಯಲ್ಲಿಯೇ. ಅದಕ್ಕೆ ಬಂಧು ಒಬ್ಬರ ಪ್ರಭಾವ.  ಮೊದಮೊದಲು ಮನೆಯ ಪಕ್ಕದಲ್ಲೇ ಇದ್ದ ಅರಮನೆಯ ಗಜ ಶಾಲೆಯ ಆನೆಗಳ ಚಿತ್ರ ರಚನೆ. ಹುಡುಗನ ಕೈಚಳಕಕ್ಕೆ ಮನೆವರ ಮೆಚ್ಚುಗೆ




ಹಾಡುಗಾರ

. ತಾವೇ ಬಣ್ಣ ಕಲಸಿಕೊಂಡು ಹತ್ತಿಯ ಕುಂಚದಿಂದ ವರ್ಣ ಚಿತ್ರ ರಚಿಸುವಷ್ಟು ಪರಿಣತೆ. ಅದನ್ನು ನೋಡಿದ . ಕಲಾವಿದ ವೆಂಕಟಪ್ಪನವರಿಂದ ಕೆಲಕಾಲ. ಮದುವೆಯಾದವರಿಗೆ ಕಲಿಸುವುದಿಲ್ಲ ಎಂಬ ಅವರ ನಿಲುವಿನಿಂದ ಸ್ವಅಧ್ಯಯನ ದಿಂದಲೇ ಪ್ರಬುದ್ದತೆ. ಅವರ ವರ್ಣಚಿತ್ರ ಕುರುಡು ಭಿಕ್ಷುಕ ಮತ್ತು ಬೋಧಿ ದರ್ಶನ ಚಿತ್ರ . ದಸರಾಪ್ರದರ್ಶನದಲ್ಲಿ ಭಾಗವಹಿಸುವಷ್ಟು  ಪ್ರಬುದ್ಧವಾದ  ಚಿತ್ರಕಲೆಗೆ ಜೀವನ ಮೀಸಲಿಡ ಬೇಕೆಂಬ ಹಂಬಲ. ತಿ.ನಂಶ್ರೀ ಮತ್ತು ಟಿ.ಎಸ್‌ವೆಂಕಣ್ಣಯ್ಯನವರಿಂದ ಸಹಾಯ ಪಡೆದು ಶಾಂತಿನಿಕೇತನದಲ್ಲಿ ಉನ್ನತ ಅಧ್ಯಯನಮಾಡಲು ಹೊರಟವರು ಮಧ್ಯದಲ್ಲಿಯೇ ಹಿಂದಿರುಗಿ ಬರಬೇಕಾಯಿತು. ಕೌಟುಂಬಿಕ ಸಮಸ್ಯೆ ಮತ್ತು ಆರೋಗ್ಯ ದ ದೃಷ್ಟಿಯಿಂದ  ಕೊನೆ ಗಳಿಗೆಯಲ್ಲಿ ಹೋಗಲಾಗದಿದ್ದರು ಏಕಲವ್ಯನಂತೆ ಚಿತ್ರ ಕಲೆಯ ಅಭ್ಯಾಸ. ಪರಿಣಾಮ ತಕ್ಕ ಮಟ್ಟಿನ ಪರಿಣತೆ. ಬಾವುಟ, ಕನ್ನಡ ನುಡಿ ಪತ್ರಿಕೆಯ ಮುಖ ಪುಟದ ಚಿತ್ರ, ಸಾಹಿತ್ಯ ಪರಿಷತ್ತಿನ ಲಾಂಛನವನ್ನೂ ಅವರೇ ರಚಿಸಿರುವರು.ಅವರ ಸಮಕಾಲೀನ ಸಾಹಿತಿಗಳಾದ ಜಿ.ಪಿ ರಾಜರತ್ನಂ , ನಾ.ಕಸ್ತೂರಿ ಅವರ ಪಾತಾಳದಲ್ಲಿ  ಪಾಪಚ್ಚಿ   ಪುಸ್ತಕಗಳಿಗೆ ಅವರದೇ  ಚಿತ್ರ ಬರೆದರು.
ಪ್ರಕೃತಿ ಚಿತ್ರ
 ಎಂ.ವಿ. ಸೀಯವರಿಗೆ  ಎಳವೆಯಲ್ಲಿಯೇ ಮದುವೆ. ಅವರದು ನಾಲ್ವರು ಗಂಡು ಮಕ್ಕಳು ಮತ್ತು ಒಬ್ಬ ಮಗಳಿರುವ ದೊಡ್ಡ ಕುಟುಂಬ. ಜೊತೆಗೆ ಅಸಾಹಯಕರಿಗೆ ಆಶ್ರಯ ಕೊಡುವ ಕರುಣಾ ಹೃದಯ. ಬರುವ ಸಂಬಳದಲ್ಲಿಸಂಸಾರ ನಡೆಸುವದು ದೊಡ್ಡ ಕಸರತ್ತು.
ಅವರ ಜೀವನದೃಷ್ಟಿಯನ್ನು ಅವರ ಕವನಗಳ ಸಾಲಿನ ಮೂಲಕ ವ್ಯಕ್ತಪಡಿಸ  ಬಹುದು “ನಕ್ಕರೆ ಜೀವನ ನಂದನ ವನವೈ , ಅತ್ತರೆ ಅದುವೆ ಶ್ಮಶಾನ,  ಕಲ್ಲಡಿಯ ಹುಲ್ಲು ಗರಿಕೆ ಅದಕ್ಕಿಲ್ಲ ಹೆದರಿಕೆ” ಎಂಬ ಸಾಲುಗಳೇಸಾಕು.ಅವರ ರಸಿಕತೆ ಜೀವನ್ಮುಖಿಧೋರಣೆ ಮತ್ತು ವಿನಯವಿಶ್ವಾಸವನ್ನು ಎತ್ತಿ ತೋರಲು.  ಅವರ ಗದ್ಯ ಬರಹಗಳ ಶೈಲಿ ಎಷ್ಟು ಸುಗಮವಾಗಿ, ಸರಳವಾಗಿ ಬೋಧಪ್ರದವಾಗಿದ್ದವೆಂದರೆ ಎಲ್ಲ ಹಂತದ ಓದುಗರ ಮೆಚ್ಚಿಗೆ ಪಡೆದವು. ಧೂಮಲೀಲೆ, ಮತ್ತು ಮೂಗಿಲುಗಳು ಪಿ. ಯು.ಸಿಗೆ ಪಠ್ಯ ವಾದರೆ ಭಾಗ್ಯ ಲಕ್ಷ್ಮಿ ಎಂಟನೆಯ ತರಗತಿಗೆ ಪಠ್ಯ ವಾಗಿತ್ತು.ರಾಘವ ,ಕವಿ ಮಿತ್ರ  .ಎಂ. ವಿ. ಸೀ, ಸೀತಾರಾಮಯ್ಯ ಹೀಗೆ ಹಲವು ಕಾವ್ಯನಾಮಗಳಲ್ಲಿ ಸಾಹಿತ್ಯ ಕೃಷಿ ಮಾಡಿದರು. ದೈಹಿಕವಾಗಿ ದುರ್ಬಲರಾದರೂ ಮನೋಬಲ ಬಹುಧೃಡ.  ಪ್ರಗತಿಶೀಲ ಚಳುವಳಿಯ ಸಮಯದಲ್ಲಿ ನವೋದಯ ಕಾವ್ಯವನ್ನು “ ಪಲಾಯನ ಕಾವ್ಯ”  ಎಂದು  ಹೀಗಳೆದು ಬರೆದಾಗ ಅದನ್ನು ಪ್ರತಿಭಟಿಸಿ “ಕಾವ್ಯಾಲಾಪ’ ಬರೆದು ಉತ್ತರ ನೀಡಿದರು. 

ಗೋಕಾಕ ಚಳುವಳಿಯಲ್ಲೂ ಸಕ್ರಿಯವಾಗಿದ್ದವರು. ಸಾಹಿತ್ಯ ಪರಿಷತ್‌ನಲ್ಲಿ ಒಂದು ಹಂತದಲ್ಲಿ ಅವ್ಯವಹಾರದ ವಾಸನೆ ಬಂದಾಗ ಚಳುವಳಿ  ಮಾಡಿ ಶ್ಯಾಮಸುಂದರ ವಿಚಾರಣಾ ಆಯೋಗದ ರಚನೆಗೆ ಕಾರಣರಾದವರಲ್ಲಿ ಒಬ್ಬರು.ಕನ್ನಡ ಭಾಷೆ ,ನೆಲ, ಜಲದ ರಕ್ಷಣೆಗೆ ಬಂದಾಗ ಬೀದಿಗಿಳಿಯಲು ಹಿಂಜರಿಯುತ್ತಿರಲಿಲ್ಲ.ಸಾಹಿತ್ಯ ಪರಿಷತ್ತಿನಲ್ಲಿ ದಣಿವರಿಯದ ದುಡಿಮೆ ಜೊತೆಗೆರಾತ್ರಿ ನಿದ್ದೆ ಗೆಟ್ಟು ಸಾಹಿತ್ಯ ರಚನೆಯ ಪರಿಣಾಮ ಮೊದಲೇ ನಾಜೂಕಾದ ಅವರ ದೇಹಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರಿತು. ಅಸ್ತಮಾ, ಸಂಧಿವಾತ, ಹೀಗೆ ಹಲವು ಹನ್ನೊಂದು ವ್ಯಾಧಿಗಳು.ದಿನವೂ ಆಹಾರಕ್ಕಿಂತ ಔಷಧಿಯ ಸೇವನೆಯೇ ಹೆಚ್ಚಾಗಿತ್ತು.ಆದರೆ ಸತತ ಸಾಹಿತ್ಯಾಭ್ಯಾಸ ತಡೆಯಲ್ಲದೇ ಸಾಗಿತ್ತು.
ಹಕ್ಕಿಯ ಹಾಡು ಮೊದಲ ಸಂಕಲನ ಅಲ್ಲಿಂದ ಹೂವಾಡಗಿತ್ತಿ ಮೊದಲಾದ  ೨೭ ಕವನ ಸಂಕಲನ, ೮, ಕಥಾ ಸಂಗ್ರಹಗಳು, ೬ ಕಾದಂಬರಿಮಕ್ಕಳ ಕಥಾ ಸಂಗ್ರಹ ೧೦,ಹೂವಿನ ಆಶೆ ಮೊದಲಾದ ನಾಲ್ಕು ನಾಟಕಗಳು, ವಿಮರ್ಶಾಕೃತಿಗಳು, ವ್ಯಕ್ತಿ ಚಿತ್ರಗಳು ೨೪ಅನುವಾದ,  ೬ ಇಂಗ್ಲಿಷ್‌ನಲ್ಲಿ ಲೇಖನಗಳು೨೫, ಲಲಿತ ಪ್ರಬಂಧಗಳು,೪, ಬಾನುಲಿ ಬರಹಗಳು ೨೩, ಪರಿಷತ್ತಿನ ಸುವರ್ಣವರ್ಷದ ಸಂಚಿಕೆ ಚಿನ್ನದ ಹಕ್ಕಿ ಮತ್ತು ವಜ್ರ ಮಹೋತ್ಸವದ  ಕೌಸ್ತುಭ ಸ್ಮರಣ ಸಂಚಿಕೆಗಳ ಸಂಪಾದನೆ ಮಾಡಿ ತಮ್ಮ ಸಾಹಿತ್ಯ ಪ್ರತಿಭೆ ಮೆರೆದರು. ಅವರಿಗೆ   ದೇವರಾಜ ಬಹದ್ದೂರ್‌ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿಪ್ರಶಸ್ತಿ ಪಡೆದರು. ಹಲವಾರು ವಿಚಾರ ಸಂಕೀರ್ಣ,ಸಮ್ಮೇಳನಗಳಲ್ಲಿ ಭಾಗವಹಿಸಿದರು.ಅವರ ಅನೇಕ ಕೃತಿಗಳು ಪಠ್ಯ ಪುಸ್ತಕವಾಗಿದ್ದವು.ಇದಕ್ಕೆಲ್ಲ ಕಾರಣ ಬಾಷೆಯ ಮೇಲಿನ ಪ್ರಭುತ್ವ.ಅವರ ಸಂಗೀತ,ನಾಟಕ, ಚಿತ್ರಕಲೆಯ ಪ್ರಭಾವ  ಮತ್ತು ಸಜ್ಜನಿಕೆಯಲ್ಲಿನ ನಂಬಿಕೆ
ಅಭಿನಂದನ ಗ್ರಂಥ
 ಅವರ ಒಲವು  ಬರಿ ಜನಪ್ರಿಯ ಸಾಹಿತ್ಯದತ್ತ  ಮಾತ್ರವಲ್ಲ. ಶಾಸ್ತ್ರ ಸಾಹಿತ್ಯದಲ್ಲೂ ಗಣನೀಯ ಸಾಧನೆ ಮಾಡಿವರು, ಎ. ಆರ್‌ ಕೃಷ್ಣ ಶಾಸ್ತ್ರಿಗಳ ಒತ್ತಾಸೆಯಿಂದ ಶಾಸ್ತ್ರ ಸಾಹಿತ್ಯದೆಡೆಗೂ ಮನಹರಿಸಿದರು.  ಪ್ರಾಚೀನ ಕನ್ನಡ ವ್ಯಾಕರಣ ವಿಚಾರರತ್ನಾಕರ, ಕವಿರಾಜ ಮಾರ್ಗದ ಸಂಪಾದನೆ  ಕೃತಿಗಳಲ್ಲದೇ, ಛಂದಸ್ಸು, ಕುರಿತಾದ ಲೇಖನಗಳು ವಿದ್ವತ್‌ಪತ್ರಿಕೆಗಳಲ್ಲಿ ಬೆಳಕುಕಂಡವು.

ಎಂ.ವಿ.ಸಿ. ಹೆಸರನ್ನು ಶಾಸ್ವತವಾಗಿಸಿರುವುದು  ಅವರು ಸ್ಥಾಪಿಸಿದ ಬಿ. ಎಂ. ಶ್ರೀ ಸ್ಮಾರಕ ಪ್ರತಿಷ್ಠಾನ.ಅದಕ್ಕಾಗಿ ಗುಬ್ಬಚ್ಚಿಯಂತಿದ್ದ ಅವರು ಗುರುಗಳ ಹೆಸರಿನ ಪ್ರತಿಷ್ಠಾನ ಕಟ್ಟಲು ಹಾರು ಹಕ್ಕಿಯಾದರು. ಜೋಳಿಗೆ ಹಿಡಿದು ಹಣ ಸಂಗ್ರಹಿಸಿದರು ತಮ್ಮದುಡಿಮೆಯನ್ನೂ ಧಾರೆ ಎರೆದರು. ಅವರದು ತಿಮ್ಮಪ್ಪ ದಾಸರ ಮನೆತನ. ಪರಂಪರಾಗತವಾಗಿ ತಾಳೆಗರಿಗಳ ಕಟ್ಟು ಮನೆಯಲ್ಲಿ ಇದ್ದವು. ಅವುಗಳ ಸಂಗ್ರಹಣೆ ಮತ್ತು ಸಂರಕ್ಷಣೆಯತ್ತ ಮನ ತುಡಿಯಿತು. ಯುವ ಮಿತ್ರರ ಸಹಕಾರ ಪಡೆದು ಸುಮಾರಿ ೧೨೦೦ ಹಸ್ತ ಪ್ರತಿಗಳನ್ನು ಸಂಗ್ರಹಿಸಿದರು. ಅವುಗಳ ಅಧ್ಯಯನಕ್ಕೆ ಒತ್ತು ಕೊಟ್ಟರು ಒಂದೂವರೆ ದಶಕ ಮನೆಯೇ ಪ್ರತಿಷ್ಠಾನದ ಕಚೇರಿ.ನಂತರ ಮಾಸ್ತಿಯವರ ಮನೆಯಲ್ಲಿ ಮೂರುವರ್ಷ. ಗೋಖಲೆ ಸಂಸ್ಥೆಯಲ್ಲಿ ಕೆಲವು ವರ್ಷ ನಡೆಸಿದ ನಮತರ ಎನ್‌ಆರ್‌ ಕಾಲನಿ ಯಲ್ಲಿ ಸ್ವಂತ ಕಟ್ಟಡ ನಿರ್ಮಾಣವಾಯಿತು.ನಿವೃತ್ತರಾದ ನಂತರ ಮಕ್ಕಳನ್ನೆಲ್ಲ ಕರೆದು ನಿವೃತ್ತಿ ವೇತನ ಮಾತ್ರ ಮನೆವಾರ್ತೆಗೆ ಸಾಹಿತ್ಯ ಕೃಷಿಯ ಆದಾಯ ಪ್ರತಿಷ್ಠಾನಕ್ಕೆ ಎಂದು ತೀಳಿಸಿದರು. ಅದರಂತೆ ಅವರ ಮಕ್ಕಳೂ ಅವರ ಕೃತಿಗಳ ರಾಯಧನದ ಹಕ್ಕನ್ನು ಅನುಷ್ಠಾನಕ್ಕೆ ಬರೆದು ಕೊಟ್ಟಿರುವರು.’ಆಸ್ವಾದ” ಎಂಬ ಅವರಿಗೆ ಸಲ್ಲಿಸಿದ  ಅಭಿನಂದನ ಗ್ರಂಥ. ಈಗ ಪ್ರತಿಷ್ಠಾನವು ದಿನದಿಂದ ದಿನಕ್ಕೆ ಬೆಳೆದು ಈಗ ರಾಜ್ಯದ ಪ್ರತಿಷ್ಠಿತ ವಿದ್ವತ್‌ಸಂಸ್ಥೆಯಾಗಿದೆ. ಸಂಶೋಧನ ಕೇಂದ್ರವಾಗಿದೆ. ಹಸ್ತ ಪ್ರತಿಗಳ ಡಿಜಿಟಲೀಕರಣ ನಡೆಸುತ್ತಿದೆ.ಈಗ  ಒಂದು ಲಕ್ಷ  ರೂಪಾಯಿ ಮೌಲ್ಯದ ಶ್ರೀ ಪ್ರಶಸ್ತಿಯನ್ನು ಆಯ್ದ ಸಾಹಿತಿಗೆ ನೀಡುತ್ತಿರುವುದು ೧೯೯೦ ರಲ್ಲಿ  ಗತಿಸಿದ ಅವರಿಗೆ ಸಲ್ಲಿಸಬಹುದಾದ ಶ್ರೇಷ್ಠ ಗೌರವ.
(ಬಿ. ಎಂ ಶ್ರೀ ಪ್ರತಿಷ್ಠಾನವು  ಪ್ರದಾನ ಮಾಡುತ್ತಿರುವ  ಶ್ರೀ ಪ್ರಶಸ್ತಿಯ ಹಿನ್ನೆಲೆಯಲ್ಲಿ ಪ್ರಕಟವಾಗುತ್ತಿರುವ ಸರಣಿಯ  ಮೊದಲ ಲೇಖನ )
ಎಚ್‌.ಶೇಷಗಿರಿರಾವ್‌






No comments:

Post a Comment