Thursday, March 6, 2014

ದಕ್ಕನಿ ಶೈಲಿ ಚಿತ್ರಗಳು



ದಕ್ಕನಿ ಚಿತ್ರಕಲೆಯಲ್ಲಿ ದೃಶ್ಯ ಸಂಸ್ಕೃತಿಯ ಅಂಶಗಳು
                                                                          - ಅನಿತ. ಎಚ್.ಸಿ

೧೬ ಮತ್ತು ೧೯ನೇ ಶತಮಾನದ ನಡುವೆ ಬೆಳೆದು ಬಂದಿರುವ ಆಸ್ಥಾನ ಚಿತ್ರಕಲೆಯನ್ನು ಶೈಲಿ, ಪ್ರದೇಶದ ಆಧಾರದ ಮೇಲೆ ನಾಲ್ಕು ಭಾಗಗಳಾಗಿ ವಿಂಗಡಿಸಿದೆ. (ಸ್ಟೀವನ್. ೧೯೯೭: ೭) ಅವುಗಳಲ್ಲಿ ದೆಹಲಿ ಕೇಂದ್ರ ಸ್ಥಾನವಾಗಿರುವ ಮೊಘಲ್ ಶೈಲಿ, ಮಧ್ಯಭಾರತದಲ್ಲಿ ಬೆಳೆದು ಬಂದ ದಕ್ಕನಿ ಶೈಲಿ, ಹಿಂದು ರಾಜಪೂತ್ ಶೈಲಿ ಮತ್ತು ಪಂಜಾಬ್ ಪ್ರಾಂತ್ಯಗಳಲ್ಲಿ ಪಹಾಡಿ ಚಿತ್ರಕಲಾಶೈಲಿಗಳೆಂದು ಕರೆಯಲಾಗಿದೆ. ಪ್ರಸ್ತುತ ಅಧ್ಯಯನಕ್ಕಾಗಿ ದಕ್ಕನಿ ಚಿತ್ರಕಲಾ ಶೈಲಿಯನ್ನು ಆಯ್ದುಕೊಳ್ಳಲಾಗಿದೆ. ದಕ್ಕನಿ ಕಲಾಕೃತಿಗಳನ್ನು ದೃಶ್ಯಸಂಸ್ಕೃತಿಯ ಅಂಶಗಳ ಆಧಾರದ ಮೇಲೆ ವಿಶ್ಲೇಷಿಸಲಾಗಿದೆ.
ಕಲಾವಿದರು ರಾಜಾಶ್ರಯದಲ್ಲಿದ್ದುದರ ಪರಿಣಾಮವಾಗಿ ಕಲಾಕೃತಿಗಳಲ್ಲಿ ಹಿಂದು, ಪರ್ಷಿಯನ್ ಮತ್ತು ಮುಸ್ಲಿಂ ಧರ್ಮ ಮತ್ತು ಸಾಂಸ್ಕೃತಿಕ ಅಂಶಗಳ ದಟ್ಟ ಪ್ರಭಾವವನ್ನು ಕಾಣಬಹುದು. ಮುಂದಿನ ಭಾಗದಲ್ಲಿ ಮುಸ್ಲಿಂ ರಾಜರ ಆಳ್ವಿಕೆಯಲ್ಲಿದ್ದ ಪ್ರಾಂತ್ಯಗಳಾದ ದಕ್ಕನಿ ಪ್ರದೇಶದಲ್ಲಿನ ಚಿತ್ರಕಲಾ ಬೆಳವಣಿಗೆಯನ್ನು ವಿವರಿಸಲಾಗಿದೆ.
ಬಿಜಾಪುರ, ಬೀದರ್, ಗೋಲ್ಕಂಡ ಮತ್ತು ಅಹಮದಾಬಾದ್ ಪ್ರಾಂತ್ಯಗಳು ೧೫ನೇ ಶತಮಾನದ ಅಂತ್ಯದಲ್ಲಿ ಬಹಮನಿ ಮತ್ತು ಅದಿಲ್ ಶಾಹಿ ಸುಲ್ತಾನರಿಂದ ಆಡಳಿತಕ್ಕೆ ಒಳಪಟ್ಟ ಪ್ರದೇಶಗಳಾಗಿದ್ದವು. ಸುಮಾರು ೧೭ನೇ ಶತಮಾನದ ಹೊತ್ತಿಗೆ ದಕ್ಕನಿ ಶೈಲಿಯು ಉಚ್ಛ್ರಾಯ ಸ್ಥಿತಿಯಲ್ಲಿತ್ತು ಎಂಬುದಕ್ಕೆ ಆಯಾ ಕಾಲದಲ್ಲಿ ರಚನೆಯಾದ ಕಲಾಕೃತಿಗಳು ಸಾಕ್ಷಿಯಾಗಿವೆ. ವಿಜಯನಗರ ಸಂಸ್ಥಾನವು ಪತನಗೊಂಡ ನಂತರ ಕಲಾವಿದರು ರಾಜಾಶ್ರಯವನ್ನು ಹುಡುಕಿಕೊಂಡು ಬೀದರ್, ಬಿಜಾಪುರ, ಮೈಸೂರು, ತಾಂಜಾವೂರು ಪ್ರಾಂತ್ಯಗಳಿಗೆ ವಲಸೆ ಹೋದರು. ಹೀಗೆ ಸ್ಥಳಾಂತರಗೊಂಡ ಕಲಾವಿದರು ಅಯಾ ಪ್ರದೇಶದಲ್ಲಿ ಅದಿಕಾರದಲ್ಲಿದ್ದ ರಾಜರ, ಅಧಿಕಾರಿ ವರ್ಗದವರ ಮತ್ತು ಶ್ರೀಮಂತ ವ್ಯಾಪಾರಿಗಳನ್ನು ಆಶ್ರಯಿಸಿ ಅಲ್ಲಿನ ಕಲಾಬೆಳವಣಿಗೆಗೆ ಕಾರಣರಾದರು.
ದಕ್ಕನಿ ಚಿತ್ರಕಲಾ ಶೈಲಿಯಲ್ಲಿ ವಿಜಯನಗರ ಮತ್ತು ಪರ್ಷಿಯನ್ ಶೈಲಿಗಳ ಮಿಶ್ರಣ ಕಂಡುಬರಲು ಈ ರೀತಿಯ ವಲಸೆ ಕಾರಣವಾಗಿದೆಯೆಂದು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ. ಕಲಾಕೃತಿಗಳಲ್ಲಿ ಕಂಡುಬರುವ ಮಾನವ ಆಕಾರಗಳು ವಿಜಯನಗರದ ಶೈಲಿಯಾದರೆ, ಚಿತ್ರದ ಸಂಯೋಜನಾ ವಿಧಾನ, ಮುನ್ನೆಲೆ ಮತ್ತು ಹಿನ್ನೆಲೆಗಳ ವಿಂಗಡಣೆ, ಉದ್ಯಾನವನಗಳು, ಅರಮನೆಗಳ ವಾಸ್ತು ವಿನ್ಯಾಸ, ಅಲಂಕಾರಿಕ ವಿನ್ಯಾಸಗಳು ಪರ್ಷಿಯನ್ ಶೈಲಿಯ ಪ್ರಭಾವವೆಂದು ಗುರುತಿಸಲಾಗಿದೆ.  ದಕ್ಕನಿ ಸಂಸ್ಥಾನದ ರಾಜರು, ರಾಣಿಯರ ವ್ಯೆಕ್ತಿ ಚಿತ್ರಣ, ದರ್ಬಾರಿನ ವೈಭವ, ಯುದ್ಧದ ಚಿತ್ರಣ, ಐತಿಹಾಸಿಕ ಘಟನೆಗಳು, ನೃತ್ಯಗಾರ್ತಿಯರು, ಅರಸರ ದೈನಂದಿನ ಚಟುವಟಿಕೆಗಳು, ಕ್ರೀಡೆ, ಬೇಟೆ, ಹೀಗೆ ಅರಸರನ್ನು ಕೇಂದ್ರೀಕರಿಸಿ ಚಿತ್ರಿಸಿದ ಕಲಾಕೃತಿಗಳೇ ಸಾಕಷ್ಟು ಸಂಖ್ಯೆಯಲ್ಲಿವೆ. ಮುಂದಿನ ಭಾಗದಲ್ಲಿ ಕಲಾಕೃತಿಗಳನ್ನು ಆಧರಿಸಿ ದೃಶ್ಯಸಂಸ್ಕೃತಿಯ ಅಂಶಗಳನ್ನು ವಿಶ್ಲೇಷಿಸಲು ಪ್ರಯತ್ನಿಸಲಾಗಿದೆ.

ದಕ್ಕನಿ ಚಿತ್ರ ಕಲಾಕೃತಿಗಳು

ಚಿತ್ರ - ೦೧. ರಾಗಿಣಿ,
ಬಿಜಾಪುರ. ಕ್ರಿ. ಪೂ.೧೫೯೫,

ಕಲಾಕೃತಿಯ ಸಂಯೋಜನೆಯಲ್ಲಿ ಸಮಾನಾಂತರ ಮುನ್ನೆಲೆಯಿದೆ. ಹಿನ್ನೆಲೆಯಲ್ಲಿ ಉದ್ಯಾನವಿದೆ. ಅರಮನೆಯ ಮುಂಬಾಗದಲ್ಲಿ ಕುಳಿತಿರುವಂತೆ ಚಿತ್ರಿಸಲಾಗಿದೆ. ಗಾಢವಾದ ಕೆಂಪು ವರ್ಣವು ಪ್ರಧಾನವಾಗಿದ್ದು, ಸಂಯೋಜನೆಗೆ ಸರಿಹೊಂದುವಂತೆ ಹೆಂಗಳೆಯರ ವಸ್ತ್ರಗಳನ್ನು ಪೇಲ ವರ್ಣಗಳಿಂದ ಚಿತ್ರಿಸಿದ್ದಾರೆ. ಕುಳಿತಿರುವ ಮಂಟಪವು ಸರಳ ವಾಸ್ತು ವಿನ್ಯಾಸ ಹೊಂದಿದೆ. ಅಲಂಕಾರಿಕ ಅಂಶಗಳು ಹೆಚ್ಚಾಗಿಲ್ಲ. ಆಕಾರಗಳು ಲಯಭದ್ಧವಾಗಿದ್ದರೂ ಸೂಕ್ಮತೆ ಕಂಡುಬರುವುದಿಲ್ಲ. ರಾಣಿಯು ವೀಣಾವಾದನದಲ್ಲಿ ನಿರತವಾಗಿರುವಂತೆ
ಚಿತ್ರಿಸಲಾಗಿದೆ.

ಸುಲ್ತಾನ್ ಅಬ್ದುಲ್ ಕುತುಬ್ ಶಾ. 
ಬಿಜಾಪುರ


ಕ್ರಿ. ಪೂ. ೧೯೪೦. ಸಂಗ್ರಹ: ನ್ಯಾಷನಲ್ ಮ್ಯೂಸಿಯಂ, ದೆಹಲಿ.
ಕಲಾಕೃತಿಯು ಪರ್ಷಿಯನ್ ಶೈಲಿಯನ್ನು ಸಂಪೂರ್ಣವಾಗಿ ಹೋಲುತ್ತಿದೆ. ಸಂಯೋಜನೆಯಲ್ಲಿ ಮುನ್ನೆಲೆಯನ್ನು ಮಾತ್ರ ಕಾಣುವಂತೆ ಚಿತ್ರಿಸಲಾಗಿದೆ. ಹಿನ್ನೆಲೆಯು ಸಮಾನಾಂತರವಾಗಿದ್ದು ನಿರ್ಧಿಷ್ಟತೆಯಿಲ್ಲ. ಅರಮನೆಯ ಮುಂಬಾಗದಲ್ಲಿ ಕುಳಿತಿರುವಂತೆ ಚಿತ್ರಿಸಲಾಗಿದೆ. ವರ್ಣಗಳ ಸಂಯೋಜನೆಯಿಂದ ವಿವಿಧ ಆಯಾಮಗಳನ್ನು ಸೃಷ್ಟಿಸಲಾಗಿದೆ. ವಾಸ್ತು ವಿನ್ಯಾಸ ಕಂಡುಬರುವುದಿಲ್ಲ. ಅಂಗ ವಿನ್ಯಾಸ ಲಯಬದ್ಧವಾಗಿದೆ. ಕುತುಬ್ ಶಾಹನ ಪಾರ್ಶ್ವ ಭಾಗ ಕಾಣುವಂತೆ ಚಿತ್ರಿಸಲಾಗಿದೆ.
 ಗೋಲ್ಕಂಡ. ೧೬೯೦-೧೭೦೦.-ರಾಗ ಬಸಂತ್.
 ಕಲಾಕೃತಿಯ ಸಂಯೋಜನೆಯು ಮುನ್ನೆಲೆ ಮತ್ತು ಹಿನ್ನೆಲೆಗಳನ್ನು ಸ್ಪಷ್ಟವಾಗಿ ಕಾಣಬಹುದು. ಅರಮನೆಯ ಮುಂದಿನ ಉದ್ಯಾನವನದಲ್ಲಿ ರಾಗ ಬಸಂತ್‌ನ ಹಾಡಿನೊಂದಿಗೆ ನರ್ತನ ಮಾಡುತ್ತಿರುವ ದೃಶ್ಯವಿದೆ. ಮುಂಬಾಗವು ಕಡು ವರ್ಣಗಳಿಂದ ಕೂಡಿದ್ದು ಹಿನ್ನಲೆಯಲ್ಲಿ ಬಣ್ಣವು ತಿಳಿಯಾದಂತೆ, ಮಬ್ಬಾಗಿರುವಂತೆ ರಚಿಸಲಾಗಿದೆ. ಗಾಢವಾದ ಕೆಂಪುವರ್ಣವು ಚಿತ್ರದ ಬಹುತೇಕ ಭಾಗವನ್ನು ಆವರಿಸಿಕೊಂಡಿದೆ. ಆಕಾರಗಳನ್ನು ಉಜ್ವಲವಾಗಿರುವಂತೆ ಮಾಡಲು ಉಡುಪುಗಳನ್ನು ತಿಳಿಬಣ್ಣಗಳಿಂದ ಚಿತ್ರಿಸಿದ್ದಾರೆ. ವಾಸ್ತು ವಿನ್ಯಾಸವು ಅಷ್ಟಾಗಿ ಕಂಡುಬರುವುದಿಲ್ಲ. ಅಲಂಕಾರಿಕ ವಿನ್ಯಾಗಳನ್ನು ಸ್ವಲ್ಪ ಮಟ್ಟಿಗೆ ಗುರುತಿಸಬಹುದು. ಅಂಗ ವಿನ್ಯಾಸಗಳಲ್ಲಿ ಹಿಂದಿನ ಕಲಾಕೃತಿಗಳಿಗಿಂತ ಸುಧಾರಣೆ ಕಂಡುಬಂದಿದೆ.

 ಗೋಲ್ಕಂಡ. ಕ್ರಿ. ಶ. ೧೬೮೩.ದ ಈ
ಶಾಹಬಾಜ್ ಖಾನ್ ಕಾಂಬೋ ಹುಕ್ಕ ಸೇದುತ್ತಿರುವುದು
ಚಿತ್ರದ ಸಂಯೋಜನೆಯಲ್ಲಿ ಮುನ್ನೆಲೆಗೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ವಿಷಯಕ್ಕೆ ಹೆಚ್ಚು ಒತ್ತು ನೀಡಲು ಈ ಕ್ರಮ ಅನುಸರಿಸಿರುವುದು ತಿಳಿದು ಬರುತ್ತದೆ. ಉದ್ಯಾನವನದಲ್ಲಿ ಸುಖಾಸೀನನಾಗಿರುವಂತೆ ಚಿತ್ರಸಲಾಗಿದೆ. ಅವನ ಸೇವಕರು ಹತ್ತಿರದಲ್ಲಿದ್ದು ಶಹನಾಜನ ಆಜ್ಞೆಗಳನ್ನು ಸ್ವೀಕರಿಸಲು ಸನ್ನದ್ಧರಾಗಿರುವಂತೆ ಚಿತ್ರ ಸಂಯೋಜನೆ ಮಾಡಲಾಗಿದೆ. ವರ್ಣಗಳ ಸಂಯೋಜನೆಗೆ ಸರಿಹೊಂದುವಂತೆ ತಿಳಿ ಹಳದಿ ಮತ್ತು ಕೆಂಪು ವರ್ಣಗಳನ್ನು ಬಳಸಿರುವುದರಿಂದ ಆಕಾರಗಳಲ್ಲಿ ವಿವಿಧ ಆಯಾಮಗಳನ್ನು ಸೃಷ್ಟಿಸಲಾಗಿದೆ. ವಾಸ್ತು ವಿನ್ಯಾಸ ಹೆಚ್ಚಾಗಿ ಕಂಡು ಬರುವುದಿಲ್ಲ. ಅಂಗಾಂಗಗಳು ಪ್ರಮಾಣ ಬದ್ಧವಾಗಿದ್ದು ಹಿಂದಿನ ಕಲಾಕೃತಿಗಳಿಗಿಂತ ಸುಧಾರಿಸಿದಂತೆ ಕಾಣುತ್ತದೆ.
ರಾಜಕುಮಾರ ಸಂಗೀತ ಆಲಿಸುತ್ತಿರುವುದು.
ಗೋಲ್ಕಂಡ. ಕ್ರಿ. ಶ. ೧೭೧೦ - ೨೦.ರ
 ಈಕಲಾಕೃತಿಯ ಸಂಯೋಜನೆಯಲ್ಲಿ ಮುನ್ನೆಲೆ ಮತ್ತು ಹಿನ್ನೆಲೆಗಳ ಸ್ಪಷ್ಟ ಚಿತ್ರಣವಿದೆ. ರಾಜಕುಮಾರನು ಉದ್ಯಾನವನದಲ್ಲಿ ಕುಳಿತಿರುವಂತೆ ಚಿತ್ರಿಸಲಾಗಿದ್ದು, ಸಂಗೀತದ ಜೊತೆಗೆ ನಿಸರ್ಗದ ಚೆಲುವನ್ನೂ ಆಸ್ವಾದಿಸುತ್ತಿರುವಂತೆ ಚಿತ್ರಿಸಲಾಗಿದೆ. ವಾಸ್ತು ವಿನ್ಯಾಸ ವಿಲ್ಲ. ವರ್ಣಗಳ ಸಂಯೋಜನೆಯು ಸಂಗೀತದಂತೆಯೇ ಮನಸ್ಸಿಗೆ ಆಹ್ಲಾದವನ್ನುಂಟು ಮಾಡುತ್ತದೆ. ಹೆಚ್ಚಾಗಿ ತಿಳಿವರ್ಣಗಳಿಂದ ಕೂಡಿದೆ. ಅಂಗಾಂಗಗಳು ಸಪೂರವಾಗಿದ್ದು ಪಾಶ್ವ ಭಾಗವನ್ನು ಮಾತ್ರ ಕಾಣುವಂತೆ ಚಿತ್ರಿಸಲಾಗಿದೆ.

ಗೋಲ್ಕಂಡ. ಕ್ರಿ. ಶ. ೧೭೦೦. ರಾಜಕುಮಾರನುಹೋಳಿ ಆಡುತ್ತಿರುವುದು.
ಕಲಾಕೃತಿಯ ಸಂಯೋಜನೆಯಲ್ಲಿ ಮುನ್ನೆಲೆ ಮತ್ತು ಹಿನ್ನೆಲೆಗಳ ಸ್ಪಷ್ಟ ಚಿತ್ರಣವಿದೆ. ರಾಜಕುಮಾರನು ಉದ್ಯಾನವನದಲ್ಲಿ ಹೋಳಿ ಆಡುತ್ತಿರುವಂತೆ ಚಿತ್ರಿಸಲಾಗಿದ್ದು, ವಾದ್ಯಗಾರರು ಸಂಗೀತವನ್ನು ನುಡಿಸುತ್ತಿದ್ದಾರೆ. ವಾಸ್ತು ವಿನ್ಯಾಸ ಮತ್ತು ಉದ್ಯಾನವನ ಚಿತ್ರಣವಿದೆ.   ವರ್ಣಗಳ ಸಂಯೋಜನೆಯಿಂದ ಹೋಳಿಯ ಚಿತ್ರಣ ಕಂಡು ಬರುತ್ತದೆ. ಹೆಚ್ಚಾಗಿ ತಿಳಿವರ್ಣಗಳಿಂದ ಕೂಡಿದ್ದುಅಲ್ಲಲ್ಲಿ ಕೆಂಪು ವರ್ಣವನ್ನು ಬಳಸಲಾಗಿದೆ.  ಅಂಗಾಂಗಗಳು ಸಪೂರವಾಗಿದ್ದು ಪಾಶ್ವ ಭಾಗವನ್ನು ಮಾತ್ರ ಕಾಣುವಂತೆ ಚಿತ್ರಿಸಲಾಗಿದೆ.
                 
                                                                                 ಮದ್ಯ ಸೇವಿಸುತ್ತಿರುವ ಹೆಂಗಳೆಯರು.

ಚಿತ್ರದ ಸಂಯೋಜನೆಯಲ್ಲಿ ಮುನ್ನೆಲೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಹೆಂಗಳೆಯರು ಉದ್ಯಾನವನದಲ್ಲಿ ಸುಖಾಸೀನನಾಗಿರುವಂತೆ ಚಿತ್ರಸಲಾಗಿದೆ. ಸೇವಕಿಯರು ಹತ್ತಿರದಲ್ಲಿದ್ದು ಮದ್ಯ ಸರಬರಾ
  

ಹೈದ್ರಾಬಾದ್. ಕ್ರಿ. ಶ. ೧೭೫೦. ನೃತ್ಯಗಾರ್ತಿಯರು.
ಚಿತ್ರದ ಸಂಯೋಜನೆಯಲ್ಲಿ ಮುನ್ನೆಲೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಹೆಂಗಳೆಯರು ಉದ್ಯಾನವನದಲ್ಲಿ ಸುಖಾಸೀನನಾಗಿರುವಂತೆ ಚಿತ್ರಸಲಾಗಿದೆ. ಸೇವಕಿಯರು ಹತ್ತಿರದಲ್ಲಿದ್ದು ಮದ್ಯ ಸರಬರಾಜು ಮಾಡುತ್ತಿರುವಂತೆ ಚಿತ್ರ ಸಂಯೋಜನೆ ಮಾಡಲಾಗಿದೆ. ವರ್ಣಗಳ ಸಂಯೋಜನೆಗೆ ಸರಿಹೊಂದುವಂತೆ ತಿಳಿ ಹಳದಿ ಮತ್ತು ಕೆಂಪು ವರ್ಣಗಳನ್ನು ಬಳಸಿರುವುದರಿಂದ ಆಕಾರಗಳಲ್ಲಿ ವಿವಿಧ ಆಯಾಮಗಳನ್ನು ಸೃಷ್ಟಿಸಲಾಗಿದೆ. ವಾಸ್ತು ವಿನ್ಯಾಸ ಹೆಚ್ಚಾಗಿ ಕಂಡು ಬರುವುದಿಲ್ಲ. ಅಂಗಾಂಗಗಳು ಪ್ರಮಾಣ ಬದ್ಧವಾಗಿದ್ದು ಹಿಂದಿನ ಕಲಾಕೃತಿಗಳಿಗಿಂತ ಸುಧಾರಿಸಿದಂತೆ ಕಾಣುತ್ತದೆ.                                                                                                                                                              ಕಲಾಕೃತಿಯ ಸಂಯೋಜನೆಯಲ್ಲಿ ಮುನ್ನೆಲೆ ಮತ್ತು ಹಿನ್ನೆಲೆಗಳ ಸ್ಪಷ್ಟ ಚಿತ್ರಣವಿದೆ. ನೃತ್ಯ ಗಾರ್ತಿಯರು ಅರಮನೆಯ ಮುಂಬಾಗದಲ್ಲಿ  ನೃತ್ಯದಲ್ಲಿ ಮೈಮರೆತಿರುವಂತೆ ಚಿತ್ರಿಸಲಾಗಿದ್ದು, ವಾಸ್ತು ವಿನ್ಯಾಸ ಮತ್ತು ಉದ್ಯಾನವನ ಚಿತ್ರಣವಿದೆ.  ವರ್ಣಗಳ ಸಂಯೋಜನೆಯಲ್ಲಿ ಕೆಂಪು ಮತ್ತು ಹಳದಿ, ಅಲ್ಲಲ್ಲಿ ಬಿಳಿಬಣ್ಣವಿದ್ದುಹೆಚ್ಚಾಗಿ ತಿಳಿವರ್ಣಗಳಿಂದ ಕೂಡಿದೆ.  ಅಂಗಾಂಗಗಳು ಸಪೂರವಾಗಿದ್ದು ಪಾಶ್ವ ಭಾಗವನ್ನು ಮಾತ್ರ ಕಾಣುವಂತೆ, ನೃತ್ಯದ ಭಂಗಿ ಆಕರ್ಷಕವಾಗಿರುವಂತೆ ಚಿತ್ರಿಸಲಾಗಿದೆ. 

ಸಮಾರೋಪ
ದಕ್ಕನಿ ಚಿತ್ರಕಲಾ ಶೈಲಿಯ ಬೆಳವಣಿಗೆಯಲ್ಲಿ ಮೂರು ಪ್ರಮುಖ ಘಟ್ಟಗಳನ್ನು ಕಲಾವಿದರ ಮೇಲಾದ ಪ್ರಭಾವಗಳನ್ನು ಆಧರಿಸಿ ಮಾಡಲಾಗಿದೆ. ೧೬ನೇ ಶತಮಾನದಲ್ಲಿ ಬಿಜಾಪುರ ಪ್ರಾಂತ್ಯವನ್ನು ಆಳುತ್ತಿದ್ದ ಅದಿಲ್ ಶಾಹಿ ಆಸ್ಥಾನದಲ್ಲಿ ಮೊದಲ ಹಂತವನ್ನು ಗುರುತಿಸಲಾಗಿದೆ. ಸೈನಿಕನಾಗಿದ್ದ ಅದಿಲ್ ಶಾಹನು ರಾಜನಾದ ನಂತರ ಬಿಜಾಪುರ ಸಂಸ್ಥಾನವನ್ನು ಸ್ಥಾಪಿಸಿದನು. ಇವನ ಕೋರಿಕೆಯ ಮೇರೆಗೆ ಇರಾನ್, ಪರ್ಷಿಯನ್ ಮತ್ತು ಟರ್ಕಿ ದೇಶಗಳಿಂದ ಕಲಾವಿದರನ್ನು, ಲಿಪಿಗಾರರನ್ನು ಮತ್ತು ವಿದ್ವಾಂಸರನ್ನು ತನ್ನ ಆಸ್ಥಾನಕ್ಕೆ ಕರೆಸಿಕೊಂಡು ಕಲಾ ಬೆಳವಣಿಗೆಗೆ ಅಡಿಪಾಯ ಹಾಕಿದನು. ಈ ರೀತಿ ಆಮದಾದ ಕಲಾವಿದರು ಇಸ್ಲಾಂ ಶೈಲಿಯನ್ನು ಆಧಾರಿಸಿ, ಅದರಲ್ಲಿನ ವೈಶಿಷ್ಟಗಳನ್ನು ಕಲಾಕೃತಿಗಳಲ್ಲಿ ಮೂಡಿಸಿದರು.
ಅದಿಲ್ ಶಾಹಿಯ ನಂತರ ಬಂದ ಅನೇಕ ಶಾಹಿಮನೆತನದ ಅರಸರು ಕಲಾವಿದರಿಗೆ ಪ್ರೋತ್ಸಹ ನೀಡಿದುದರ ಫಲವಾಗಿ ಸಚಿತ್ರ ಗ್ರಂಥಗಳನ್ನು ರಚಿಸಿದರು. ಇದರಿಂದಾಗಿ ವಿಜಯನಗರ ಅರಸರ ಆಳ್ವಿಕೆ ಕಾಲದಲ್ಲಿ ಸುಸ್ಥಿತಿಯಲ್ಲಿದ್ದ ಭಿತ್ತಿಚಿತ್ರ ಪರಂಪರೆ ಕ್ರಮೇಣ ಕಾಣದಾಯಿತು. ಈ ಕಾಲದಲ್ಲಾಗಲೇ ಕಾಗದವನ್ನು ಭಾರತದಲ್ಲಿಯೇ ತಯಾರಿಸಲು ಪ್ರಾರಂಭಿಸಿದುದು ಕೂಡ ಪರಂಪರೆ ನಶಿಸಲು ಕಾರಣವಾಯಿತು. ದಕ್ಕನಿ ಶೈಲಿಯ ಬೆಳವಣಿಗೆಯಿಂದ ಮೊಘಲ್ ಮತ್ತು ರಾಜಪೂತ್ ಶೈಲಿಗಳು ಕೂಡ ಇದೇ ಹಾದಿಯಲ್ಲಿ ಸಾಗಿದವು. ಇದರಿಂದ ದಕ್ಕನ್ ಶೈಲಿಯ ಉಗಮವಾದುದಲ್ಲದೇ ಉತ್ತರ ಭಾರತದಲ್ಲಿ ವಿಶಿಷ್ಟ ಕಲಾಶೈಲಿಯ ಬೆಳವಣಿಗೆಗೆ ಕಾರಣವಾಯಿತು.

ಬಿಜಾಪುರ, ಹೈದ್ರಾಬಾದ್, ಗೋಲ್ಕಂಡ, ಅಹಮದ್ ನಗರದ ಪ್ರಾಂತ್ಯಗಳನ್ನು ಆಳಿದ ಮುಸ್ಲಿಂ ರಾಜರು ಭಾರತೀಯ ನೆಲದಲ್ಲಿ ಶಾಶ್ವತವಾಗಿ ನೆಲೆಯೂರಿದರು. ಇವರ ಕಾಲದಲ್ಲಿ ಕಲಾಕೃತಿಗಳಲ್ಲಿ ಮುಸ್ಲಿಂ, ಪರ್ಷಿಯನ್, ಇರಾನ್ ಮತ್ತು ಟರ್ಕಿ ದೇಶದ, ಸಂಸ್ಕೃತಿಯ ಪ್ರಭಾವವಿದ್ದರೂ ಕೂಡ ಸ್ವಲ್ಪ ಮಟ್ಟಿಗೆ ಭಾರತದ ಕೆಲವು ದೇಶೀಯ ಅಂಶಗಳನ್ನು ಕೂ ಕಲಾಕೃತಿಗಳಲ್ಲಿ ಅಳವಡಿಕೊಳ್ಳಲು ಪ್ರಾರಂಭಿಸಿದರು. ಇವರಲ್ಲಿ ರಾಣಿ ಚಾಂದ್ ಬಿಯ ಹೆಸರನ್ನು ಗುರುತಿಸಬಹುದು. ಇವಳ ಕಾಲದಲ್ಲಿ ರಚನೆಯಾದ ಕಲಾಕೃತಿಗಳಲ್ಲಿ ಭಾರತೀಯ ವಿಷಯಗಳು ಕಂಡುಬರುತ್ತವೆ.
೧೮ನೇ ಶತಮಾನದ ಹೊತ್ತಿಗೆ ಹೈದ್ರಾಬಾದ್‌ನಲ್ಲಿ ದಕ್ಕನಿ ಚಿತ್ರಕಲೆಯು ಮತ್ತೊಂದು ರೀತಿಯ ಬೆಳವಣಿಗೆಯ ಘಟ್ಟವನ್ನು ಕಂಡಿತು. ೧೭ನೇ ಶತಮಾನದ ಆದಿಯಲ್ಲಿ ಔರಂಗಾಜೇಬನ ಮೊಘಲ್ ಸಾಮ್ರಾಜ್ಯವು ಕ್ಷೀಣಿಸಿದ್ದರಿಂದ ಅಲ್ಲಿನ ಕಲಾವಿದರು ಹೈದ್ರಾಬಾದ್ ಪ್ರಾಂತ್ಯಕ್ಕೆ ವಲಸೆ ಬಂದರು.  ಈ ಕಲಾವಿದರು ಮೊಘಲ್ ಶೈಲಿಯ ಜೊತೆಗೆ ಗೋಲ್ಕಂಡ ಶೈಲಿಯನ್ನು ಬೆರೆಸಿದ್ದರಿಂದ ಹೊಸ ಶೈಲಿ ಉಗಮವಾಯಿತೆನ್ನಬಹುದು.  ಇದರಲ್ಲಿ ಮೊದಲ ದಕ್ಕನಿ ಕಲಾಕೃತಿಗಳಲ್ಲಿ ಕಂಡುಬರುವ ಕಲ್ಪನಾ ಶೈಲಿಯ ಅಂಶಗಳು ಮತ್ತು ಅಲಂಕಾರಿಕ ಅಂಶಗಳಲ್ಲದೆ, ಮೊಘಲ್ ಶೈಲಿಯಲ್ಲಿ ಕಾಣುವ ಸೂಕ್ಮ ಕಲೆಗಾರಿಕೆಯನ್ನೂ ಕಾಣಬಹುದು. ಈ ರೀತಿಯ ಸಂಯೋಜನೆಯಿಂದಾಗಿ ದಕ್ಕನಿ ಚಿತ್ರಕಲೆಯಲ್ಲಿ ಪರ್ಷಿಯಾದ ಲಯಬದ್ಧವಾಗಿರುವ, ಸೂಕ್ಮತೆಯಿಂದ ಕೂಡಿದ ಚಿತ್ರಣ, ದಕ್ಕನ್ನಿನ ವೈಭವಯುತವಾದ ಅಂಶಗಳಲ್ಲದೆ, ಟರ್ಕಿ ಮತ್ತು ಯೋರೋಪಿಯನ್‌ನಿಂದ ಪ್ರಭಾವಿತಗೊಂಡ ಹಲವು ಅಂಶಗಳನ್ನು ೧೮ - ೧೯ನೇ ಶತಮಾನದಲ್ಲಿ ರಚನೆಯಾದ ದಕ್ಕನಿ ಕಲಾಕೃತಿಗಳಲ್ಲಿ ಕಾಣಬಹುದು. ಇದರಿಂದಾಗಿ ಈ ಅವಧಿಯಲ್ಲಿ ರಚನೆಯಾದ ಕಲಾಕೃತಿಗಳು ಉತ್ತಮ ಸಂಯೋಜನೆ, ಗಾಢವಾದ ವರ್ಣಗಳಿಂದ ಕೂಡಿದ ಆಕಾರಗಳು ಮತ್ತೊಂದು ಕಾಲ್ಪನಿಕ ಸಾಮ್ರಾಜ್ಯಕ್ಕೆ ಕರೆದೊಯ್ಯುತ್ತವೆ. ಈ ಲಕ್ಷಣಗಳು ಮೊಘಲ್ ಶೈಲಿಯಲ್ಲಿ ಕಂಡುಬರುವುದಿಲ್ಲ. ಆದ್ದರಿಂದ ಭಾರತೀಯ ಚಿತ್ರಕಲಾ ಬೆಳವಣಿಗೆಯ ಹಂತಗಳಲ್ಲ್ಲಿ ದಕ್ಕನಿ ಚಿತ್ರಗಳನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ.




ಆಧಾರಗ್ರಂಥಗಳು
ಕಾರಂತ, ಶಿವರಾಮ. ೨೦೦೭. ಶಿವರಾಮ ಕಾರಂತರ ಸಾಹಿತ್ಯಶ್ರೇಣಿ, ಸಂಪುಟ ೩೦, ಕಲಾ ಪ್ರಬಂಧಗಳು. ಬೆಂಗಳೂರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
ಕೋಸ್ಸಕ್, ಸ್ಟೀವನ್. ೧೯೯೭. ಇಂಡಿಯನ್ ಕೋರ್ಟ್ ಪೇಂಟಿಗ್ಸ್. ನ್ಯೂಯಾರ್ಕ್. ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ‍್ಟ್.
ಕಲಾಕೃತಿಗಳು - ನ್ಯಾಷನಲ್ ಮ್ಯೂಸಿಯಂ. ದೆಹಲಿ.














No comments:

Post a Comment