Sunday, March 16, 2014

ಕನ್ನಡದ ಕಣ್ವ ಬಿ. ಎಂ. ಶ್ರೀಕಂಠಯ್ಯ







                               ಹೊಸ ಗನ್ನಡದ ಹರಿಕಾರ ಬಿ. ಎಂ.ಶ್ರೀ.


                                                


                                                 ಕರುಣಾಳು ಬಾ ಬೆಳಕೆ
                                                 ಮುಸುಕಿದೀ ಮಬ್ಬಿನಲ್ಲಿ
                                                 ಕೈ ಹಿಡಿದು ನಡೆಸೆನ್ನನು
                                                 ಇರುಳುಕತ್ತಲೆಯ ಗವಿ
                                                 ಮನೆದೂರ ಕನಿಕರಿಸು
                                                 ಕೈಹಿಡಿದು ನಡೆಸೆನ್ನನು
     ಈ ಗೀತೆಯನ್ನು ಕೇಳದ ಕನ್ನಡಿಗರು ಅತಿ ವಿರಳ.  ಇದು ಮೇಲು ನೋಟಕ್ಕೆ  ನಿಸ್ಸಾಹಯಕನೋರ್ವನ ಆರ್ತ ಬೇಡಿಕೆ ಯಂತೆ ಕಂಡರೂ ಇನ್ನೊಂದು ಅರ್ಥದಲ್ಲಿ ಅದು ಕನ್ನಡ ನಾಡಿನ, ನುಡಿಯ, ಜನಸಾಮಾನ್ಯರ ಮನದಳಲು ಎನ್ನಲೂ ಸಾಧ್ಯ. ಅಂದು  ಆಗ ಕನ್ನಡ ನಾಡಿನಲ್ಲಿ  ಭಾಷೆ ಬಳಸುವ  ಎರಡು ಪ್ರತ್ಯೇಕ  ಸಮುದಾಯಗಳು ಇದ್ದವು. .ಸುಶಿಕ್ಷಿತ ನಗರವಾಸಿಗಳು ಮತ್ತು ಶೈಕ್ಷಣಿಕವಾಗಿ ನಿರ್ಲಕ್ಷಿತ ಗ್ರಾಮ್ಯ ಭಾಷೆ ಬಳಸುವ ಇತರರು. ನಗರದಲ್ಲೂ  ಎರಡು ವರ್ಗಗಳಿದ್ದವು  ಒಂದು ಪರಂಪರಾಗತ ವಿದ್ವತ್‌ವರ್ಗ ಇನ್ನೊಂದು ಇಂಗ್ಲಿಷ್‌ ಕಲಿತ ಆಧುನಿಕ ವರ್ಗ. ಮೊದಲನೆಯವರಿಗೆ ಸಂಸ್ಕೃತವೇ ಸರ್ವಸ್ವ. ಅದು ದೇವ ಭಾಷೆ ಕನ್ನಡ ಬಳಸುವುದ ಮೈಲಿಗೆ. ಇನ್ನೊಂದು ಆಧುನಿಕ ವರ್ಗ’ ಅದಕ್ಕೆ  ಆಂಗ್ಲರ,ನಡೆ,ನುಡಿ, ಉಡುಗೆ, ತೊಡುಗೆ, ಅಚಾರ, ವಿಚಾರದ  ಅನುಕರಣೆಯೇ ಜೀವನದ ಪರಮ ಗುರಿ. ಇವೆರಡರ ನಡುವೆ ಕನ್ನಡ ಭಾಷೆ  ಕಸುವು ಕಳೆಸುಕೊಂಡಿತ್ತು,ಹಳ್ಳಿಗರ, ಅನಕ್ಷರಸ್ಥರ ಮತ್ತು ಅಡುಗೆ ಮನೆಯಲ್ಲಿ ಬಳಸುವ ಭಾಷೆ ಎಂದು ಕಡೆಗಣಿಸಲ್ಪಟ್ಟಿತ್ತು. ಸಾಮಾಜಿಕವಾಗಿ ಮಾತ್ರ ಅಲ್ಲ ಸಾಹಿತ್ಯಿಕವಾಗಿಯೂ ನೆಲಕಚ್ಚಿತ್ತು. ಅದೂ ವಿಶೇಷವಾಗಿ ಹಳೆ ಮೈಸೂರು  ಪ್ರಾಂತ್ಯದಲ್ಲಿ. ಮುಂಬೈ ಕರ್ನಾಟಕದಲ್ಲಿ ಮರಾಠಿ ಮೆರೆದರೆ ಹೈದ್ರಾಬಾದ್‌ಕರ್ನಾಟಕದಲ್ಲಿ ಉರ್ದು ರಾಜ ಭಾಷೆ.ತನ್ನ ಮನೆಯಲ್ಲಿಯೇ ನೆಲೆ ಕಳೆದುಕೊಂಡಿದ್ದ ಕನ್ನಡದ ಕಹಳೆಯೂದಿ 1911 ರಲ್ಲಿಯೇ ಕನ್ನಡ ತಲೆ ಎತ್ತುವ ಬಗೆ ಹೇಗೆ ಎಂಬ ಅಂದಿಗೂ ಇಂದಿಗೂ ಪ್ರಸ್ತುತವಾಗಿರುವ  ಭಾಷಣ ಮಾಡಿ ತಮ್ಮ  ಬರಹ  ಮತ್ತು ಭಾಷಣದ ಮೂಲಕ ಕನ್ನಡ ನಾಡಿನ ಹಳ್ಳಿಗಳಲ್ಲೂ ಜಾಗೃತಿ ಮೂಡಿಸಲು ದುಡಿದ  ಧೀಮಂತ  ಬಿ. ಎಂ ಶ್ರೀ.
 ಕನ್ನಡ ಸಾಹಿತ್ಯವು ಕಾಲದಿಂದ ಕಾಲಕ್ಕೆ ಒಂದೆರಡು ಶತಮಾನಗಳಿಗೆ ಒಮ್ಮೆ ಹೊಸ ಅಯಾಮ ಪಡೆದಿದೆ. ಚಂಪೂ ಯುಗ, ವಚನ ಯುಗ, ಷಟ್ಪದಿ ಯುಗ ಹೀಗೆ ಹಲವು ಹೊಸ ಹೊರಳು ಪಡೆದಿರುವ ಕನ್ನಡವು ಹತ್ತೊಂತ್ತನೆಯ ಶತಮಾನದ ಆದಿಯಲ್ಲಿ ಸಂಸ್ಕೃತದ ಪ್ರಭಾವದಿಂದ ಹೊರಬಂದು ಇಂಗ್ಲಿಷ್‌ನ ಪ್ರಭಾವದಿಂದ ಆಧುನಿಕತೆಯತ್ತ ಮುಖ ಮಾಡಿ, ಹಳತನ್ನು ಕಳಚಿ ಹೊಸತನ್ನು ಅರಸುತಿದ್ದ  ಸಂಕ್ರಮಣ ಕಾಲ. ಎಲ್ಲರಿಗೂ ಆಳರಸರ ಭಾಷೆಯಾದ ಇಂಗ್ಲಿಷ್‌ ಮೋಹ. ಆಳರಸರ ಕೃಪೆಗೆ ಬೇಕೇ ಬೇಕಾಗಿತ್ತು ಇಂಗ್ಲಿಷ್‌.   ಕೊನೆಯುಸಿರು ಎಳೆಯುತಿದ್ದ ಕನ್ನಡ ಭಾಷೆಗೆ  ಜೀವ ತುಂಬಿ, ಅಷ್ಟಾದಶ ವರ್ಣನೆ ಬಿಟ್ಟು, ಛಂದಸ್ಸಿನ ಬಂಧ ಸಡಲಿಸಿ, ಪೌರಾಣಿಕ ಮತ್ತು ಚಾರಿತ್ರಿಕ ವಸ್ತುಗಳನ್ನು ಹೊಸದೃಷ್ಟಿಯಿಂದ ನೊಡಿ  ಓದುವ ಕಾವ್ಯವನ್ನು ಹಾಡುವ ಕವನವಾಗಿಸಿದ ಹಿರಿಮೆ ಅವರದು. ಹೊಸ ಹಾದಿಗೆ ಶ್ರೀಕಾರ ಹಾಕಿದುದು  ಅವರ ಅನುವಾದ ಕೃತಿ” ಇಂಗ್ಲಿಷ್‌ಗೀತೆಗಳು”
ಬಿ.ಎಂ. ಶ್ರೀ.ಯವರ ಪೂರ್ಣ ಹೆಸರು ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ.ಅವರ ಮೂಲಸ್ಥಳ ಬೆಳ್ಳೂರು.  ಅವರು ಜನಿಸದುದು ೦೩- ೧-೧೮೮೪ ರಂದು ತಾಯಿ  ಭಾಗೀರಥಮ್ಮನವರ  ತೌರೂರಾದ ತುಮುಕೂರು ಜಿಲ್ಲೆಯ ಸಂಪಿಗೆ ಗ್ರಾಮದಲ್ಲಿ. ತಂದೆ ಮೈಲಾರಯ್ಯ . ಶ್ರೀರಂಗಪಟ್ಟಣದಲ್ಲಿ ವಕೀಲರು. ತಾಯಿ ಭಾಗಿರಥಮ್ಮ.ಅವರಿಗೆ ಐದು ಜನ ಮಕ್ಕಳು. ಮೂರು ಗಂಡು ಮತ್ತು ಎರಡು ಹೆಣ್ಣು. ಬಾಲ್ಯದ ಹೆಚ್ಚು ಅವಧಿ ಶ್ರೀರಂಗ ಪಟ್ಟಣದಲ್ಲಿಯೇ ಕಾವೇರಿ ತಟದಲ್ಲಿ  , ಹಚ್ಚ ಹಸಿರು ತೋಟಗದ್ದೆಗಳಲ್ಲಿಯೇ ಕಳೆಯಿತು. ಅವರ ಪ್ರಾಥಮಿಕ ಶಿಕ್ಷಣವು ಅಲ್ಲಿಯೇ ಆಯಿತು.ನಂತರ ಮೈಸೂರಿನಲ್ಲಿ. ಪದವಿ ಬೆಂಗಳೂರು ಮತ್ತು ಮದ್ರಾಸಿನಲ್ಲಿ ಕಾನೂನು ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದರು. ತಂದೆಗೆ ಮಗ ವೈದ್ಯನಾಗಲಿ ಎಂಬ ಆಸೆ. ಆದರೆ ತಂದೆಯಂತೆಯೇಇಂಗ್ಲಿಷ್‌ ಮತ್ತು  ಕಾನೂನುಪದವಿ ಪಡೆದರು ಆದರೆ ನ್ಯಾಯವಾದಿ ಆಗಲಿಲ್ಲ. ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ೧೯೦೯  ರಲ್ಲಿ ಇಂಗ್ಲಿಷ್‌ ಅಧ್ಯಾಪಕರಾದರು.  ಹಿರಿಯಣ್ಣ, ರಾಧಾಕೃಷ್ಣ ರಂಥ^ ಘನ ವಿದ್ವಾಂಸರೊಡನೆ ಕೆಲಸಮಾಡಿದರು. ಆಗ ಅವರು ಇಂಗ್ಲಿಷ್‌ನವರ  ತುಣಕಿನಂತೆ ಮಾತು ಕಥೆ , ವ್ಯವಹಾರ  ಉಡುಗೆ ತೊಡುಗೆ ಎಲ್ಲವೂ. ಆ  ಕಾಲದಲ್ಲಿ ವಿದ್ಯಾವಂತರಲ್ಲಿ ಇಂಗ್ಲಿಷ್‌ರ ಅನುಕರಣೆ ಪ್ರಚಲಿತ. ಬಿಳಿಯ ಮನುಷ್ಯನೊಬ್ಬ ಹೊಗಳಿದರೆ ವೈಕುಂಟಕ್ಕೆ ರಹದಾರಿ ಎಂದುಕೊಂಡ ಸಮಯ. ಅಷ್ಟು ದಾಸ್ಯಭಾವ.

ಇವರಿಗೆ ಕನ್ನಡ ಬಾರದು ಎಂಬ ನಂಬಿಗೆ ಮೂಡಿಸುವಷ್ಟು ಕಾಲೇಜಿನಲ್ಲಿ  ಇಂಗ್ಲಿಷ್‌ಬಳಕೆ.  ಕನ್ನಡ ಕ್ಕೆ ನ್ಯಾಯವಾದ ಸ್ಥಾನ ದೊರಕಿಸಿ ಕೊಡಬೆಕೆಂಬ ಭಾವನೆ ಬಲಿಯಿತು ಅದಕ್ಕಾಗಿ ನಡೆಸಿದ ಮೊದಲ ಸಭೆಯ ಕಲಾಪ ಇಂಗ್ಲಿಷ್‌ನಲ್ಲಿ. ಆಗಲೇ ದೊರಕಿತ್ತು ಕನ್ನಡ ದೀಕ್ಷೆ. ಅವರು ೧೯೧೧ ರಲ್ಲಿ ಕನ್ನಡಮಾತು ತಲೆಎತ್ತುವ ಬಗೆ ಕುರಿತು   ಧಾರವಾಡದಲ್ಲಿ ಮಾಡಿದ  ಉಪನ್ಯಾಸ ನಾಡು ನಡೆಯ ಬೇಕಾಗಿದ್ದುದರ ದಿಕ್ಸೂಚಿಯಾಗಿತ್ತು. ಅಂದಿನ ಅನೇಕ ಸಮಸ್ಯೆಗಳು ಇಂದೂ ಪ್ರಸ್ತುತ ಎಂಬುದು ಅದರ ಸರ್ವಕಾಲಿಕ ದೃಷ್ಟಿಕೋನ ಸೂಚಿಸುತ್ತದೆ.  ಅವರಲ್ಲಿ ಕನ್ನಡದ ಕಳಕಳಿ ಬಾಲ್ಯದಿಂದಲೇಇದ್ದು  ಆಗಾಗ ಇಂಗ್ಲಿಷ್‌
 ರಮ್ಯ ಕವಿಗಳ ಹೆಸರಾಂತ ಕವನ ಅನುವಾದಿಸುತಿದ್ದರು, ಅವೆಲ್ಲವೂ ಸಂಕಲನಗೊಂಡು ೧೯೨೩ ರಲ್ಲಿ ಇಂಗ್ಲಿಷ್‌ಗೀತೆಗಳು” ಎಂಬ ಹೆಸರಿನಲ್ಲಿ ಪ್ರಕಟವಾಗಿ ನವೋದಯ ಕಾವ್ಯಕ್ಕೆ ನಾಂದಿ ಹಾಡಿತು.  
ಇಂಗ್ಲೆಂಡಿನಲ್ಲಿ ’ ಲಿರಿಕಲ್‌ಬ್ಯಾಲಡ್‌ ಉಂಟು ಮಾಡಿದ ಸಾಹಿತ್ಯ ಸಂಚಲನ ಕನ್ನಡದಲ್ಲಿ ಇಂಗ್ಲಿಷ್‌ಗೀತೆಗಳು ಮಾಡಿದವು. 'ಬಿ.ಎಂ.ಶ್ರೀಕಂಠಯ್ಯನವರು' ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗಾಗಿ ಅವಿಶ್ರಾಂತವಾಗಿ ದುಡಿದರು. ಹಾಗೂ ಅವರ ಪ್ರೀತಿಯ ವಿದ್ಯಾರ್ಥಿಗಳಾದ 'ಮಾಸ್ತಿ', 'ಕುವೆಂಪು', 'ಎಸ್. ವಿ. ರಂಗಣ್ಣ', 'ತೀ. ನಂ. ಶ್ರೀಕಂಠಯ್ಯ', 'ಜಿ. ಪಿ. ರಾಜರತ್ನಂ', 'ಡಿ. ಎಲ್. 'ನರಸಿಂಹಚಾರ್' ಮುಂತಾದವರಿಗೆ ಕನ್ನಡದಲ್ಲಿ ಸಾಹಿತ್ಯ ರಚನೆ ಮಾಡಲು ಪ್ರೋತ್ಸಾಹಿದರು ಅವರಿಂದ ಪ್ರಭಾವಿತರಾದ . ಕುವೆಂಪು, ಪುತಿನ,ಮಾಸ್ತಿ ,ಮುಗುಳಿ , ಶಿಷ್ಯ ಪ್ರಶಿಷ್ಯರ ಪಡೆಯೇ ಬೆಳೆಯಿತು.
     ಕವನ ಸಂಕಲನ ಹೊಂಗನಸು, ಇಂಗ್ಲಿಷಗೀತೆಗಳು, ಅಶ್ವಥ್ಥಾಮನ್‌, ಪಾಸಿಕರು ಮತ್ತು ಗಧಾಯುದ್ಧ ನಾಟಕಗಳು, ಹಲವು ಪ್ರಬಂಧಗಳ ಸಂಗ್ರಹ ಹೊರತಂದರು.  ಪ್ರತಿಯೊಂದೂ ಮುಂದಿನ ಸಾಹಿತ್ಯಕ್ಕೆ ಮಾರ್ಗದರ್ಶಿಯಾದವು.  ಮೈಸೂರಿನಲ್ಲಿ  ೨೫ ವರ್ಷ ಸೇವೆ ಸಲ್ಲಿಸಿ ಪ್ರಾಧ್ಯಾಪಕರಾಗಿದ್ದರು , ಕುಲಸಚಿವರಾಗಿದ್ದಾಗ ಕನ್ನಡ ಎಂ. ಎ ತರಗತಿ ಪ್ರಾರಂಭಿಸಿದರು.  ಅವರೇ ಪ್ರಥಮ ಕನ್ನಡ ಪ್ರಾಧ್ಯಾಪಕರು. ಕುವೆಂಪು ಮತ್ತು ವೆಂಕಣ್ಣಯ್ಯನವರ ಗುರುಗಳು.
ಒಂದು ನ್ಯಾಯವಾದ ಸ್ಥಾನವನ್ನು ದೊರಕಿಸಿ ಕೊಡಲೇಬೇಕು ಎಂದು ಆಶಿಸಿ , ತಮ್ಮ ಜೀವನವನ್ನು ಕನ್ನಡಕ್ಕಾಗಿ ಮುಡಿಪಾಗಿಟ್ಟವರು ಬಿ. ಎಂ. ಶ್ರೀಕಂಠಯ್ಯನವರು.
ಮೈಸೂರು ಕಾಲೇಜಿನಲ್ಲಿ 1910 ರಿಂದ  ಇಂಗ್ಲಿಷ್ ಅಧ್ಯಾಪಕರಾಗಿ ಸೇರಿ  1930ರಲ್ಲಿ ಪ್ರಾಧ್ಯಾಪಕರಾದರು 1926-1930ರವರೆಗೆ ನಾಲ್ಕು ವರ್ಷಗಳ ಕಾಲ ಕುಲಸಚಿವರಾಗಿದ್ದರು. ಪ್ರಾಥಮಿಕ ತರಗತಿಯಿಂದ ಹಿಡಿದು ಸ್ನಾತಕೋತ್ತರ ತರಗತಿಯವರೆಗ ಪಠ್ಯ ಕ್ರಮ ರೂಪಿಸಿ ಸೂಕ್ತ ಪಠ್ಯ ಪುಸ್ತಗಳ ರಚನೆಗೆ ಕ್ರಮ ತೆಗೆದುಕೊಂಡರು.ಕನ್ನಡ ಎಂ. ಎ. ತರಗತಿ ಪ್ರಾರಂಭಿಸಿದರು.ಆರಂಭಲ್ಲಿ ಕನ್ನಡ ಮತ್ತುಇಂಗ್ಲಿಷ್‌ ಎರಡೂವಿಷಯದಲ್ಲಿ ಪ್ರಾಧ್ಯಾಪಕರಾಗಿ ಪಾಠ ಮಾಡುತಿದ್ದರು ವೆಂಕಣ್ಣಯ್ಯ ಮತ್ತು ಕೃಷ್ಣಶಾಸ್ತ್ರಿಗಳು ಅವರ ಮೊದಲ   ಶಿಷ್ಯರು. 
 

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ೨೫ ವರ್ಷ ಸೇವೆ ಸಲ್ಲಿಸಿ ೧೯೩೦ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜ್ ಗೆ ವರ್ಗವಾಯಿತು. ಶ್ರೀಯವರು ೧೯೩೮ ರಲ್ಲಿ ಸಾಹಿತ್ಯ ಪರಿಷತ್ತನಿ ಅಧಿಕಾರ ಸ್ವೀಕರಿಸಿದರು. ಕನ್ನಡ ನುಡಿ ಪತ್ರಿಕೆ ಪ್ರಾರಂಭಿಸಿದರು. ಕನ್ನಡ ತಿಳಿವಿನ ಬೆಳಕು ಹರಡಲು “ಕನ್ನಡ ಬಾವುಟ”  ಕವನ ಸಂಕಲನ ಹೊರತಂದರು  ಅದು ೮ನೆಯ  ಶತಮಾನದಿಂದ ಆಧುನಿಕ ಕಾಲದ ವರೆಗಿನ ಸಾಹಿತ್ಯದ  ಪ್ರಥಮ  ಪ್ರಾತಿನಿಧಿಕ ಸಂಕಲನ. ಮಹಿಳಾಶಾಖೆ, ಅಚ್ಚುಕೂಟ ಸ್ಥಾಪಿಸಿದರು  ನಾನು “ಕನ್ನಡದ ಕಾವಲುನಾಯಿ”   ಅಗತ್ಯವಾದರೆ ಬಗುಳುವುದುಂಟು ಆದರೆ ಕಚ್ಚುವುದಿಲ್ಲ.ಹಳೆ ಸಾಹಿತ್ಯದ ಪ್ರಚಾರ, ಹೊಸದರ ಪೋಷಣೆ.ಸಮ್ಮೇಳನ, ಸಾಹಿತ್ಯೋತ್ಸವಗಳನ್ನು ಊರೂರುಗಳಲ್ಲಿ ನಡೆಸಿ ಕನ್ನಡದ ಕಂಪು ನಾಡಿನಾದ್ಯಂತ ಹರಡಿದರು.
ನಿವೃತ್ತಿಯ ಅನಂತರ ಅವರು ೧೯೪೨ರ ವರೆಗೆ ರಾಜ್ಯ ವಯಸ್ಕರ ಶಿಕ್ಷಣ ಸಮಿತಿಯ ಅಧ್ಯಕ್ಷರಾದರು. ಆಗ ಕನ್ನಡ ವನ್ನು ಜನಪ್ರಿಯ ಮಾಡಲು ಲಿಪಿ ಸುಧಾರಣೆಗೂ ಪ್ರಯತ್ನಿಸಿದರು. ತಲೆಕಟ್ಟು, ಧೀರ್ಘ, ಗುಡಿಸಿಗಳಿಂದ ಓದಲುಬರೆಯಲು ಮತ್ತು ಕಲಿಯಲು  ತೊಡಕು,ಅವನ್ನು ನಿವಾರಿಸಿದರೆ ಕಲಿಕೆ ಸುಲಭ ಮುದ್ರಣ ಸರಳ ಎಂದು ಪ್ರತಿಪಾದಿಸಿದರು.ತಮಿಳಿನಂತೆ ಎಲ್ಲವನ್ನೂ ಒಂದೇ ಸಾಲಿನಲ್ಲಿ ಬರೆಯಬಹುದಾಗಿತ್ತು  ದೀರ್ಘ ಚಿಹ್ನೆಗಳನ್ನು ಎಲ್ಲ ಕಡೆ ಒಂದೇ ರೀತಿಬರೆಯುವುದು  ಒತ್ತಕ್ಷರಗಳನ್ನು ಪಕ್ಕದಲ್ಲಿ ಬರೆಯುವುದು ,ಎಲ್ಲ ಮಹಾಪ್ರಾಣಗಳನ್ನು ಅಲ್ಪಪ್ರಾಣಗಳ ಹೊಕ್ಕಳು ಸೀಳಿ ಅಂದರೆ ಪ-ಫ, ದ-ಧ ಡ-ಢ ಗಳಂತೆ ಬರೆಯುವುದು ಒತ್ತಕ್ಷರಗಳನ್ನು ಪಕ್ಕದಲ್ಲಿ ಬರೆಯುವುದು,  ಕನ್ನಡ – ಕನ್‌ನಡ  ತಮ್ಮ- ತಮ್‌ಮ ಹೀಗೆ ನಾಲ್ಕು ಹಂತಗಳಲ್ಲಿ ಬದಲಾವಣೆ ತಂದರೆ ಅಕ್ಷರಗಳ ಸಂಖ್ಯೆ ಕಡಿಮೆಯಾಗಿ ಕಲಿಕೆಯ ಒತ್ತಡ ಕಡಿಮೆ ಮಾಡುವುದು ಅವರ ಉದ್ದೇಶವಾಗಿತ್ತು.
ಈ ಕಾಲೇಜಿನ ಏಳಿಗೆಗಾಗಿ ದುಡಿದು ೧೯೪೪ರಲ್ಲಿ 'ಧಾರವಾಡದ ಕೆ.ಇ.ಬೋರ್ಡ್‌'ನ ಮುಖ್ಯಸ್ಥರಾಗಿ ನೇಮಕಗೊಂಡು ಅವರ 'ಆರ್ಟ್ಸ್ ಕಾಲೆಜ್' ಗೆ 'ಪ್ರಾಂಶುಪಾಲ'ರಾಗಿ ಕೊನೆಯವರೆಗೆ ಅಲ್ಲಿಯೇ ಕೆಲಸ ಮಾಡಿದರು.

ಕೃಷ್ಣ ದೇವರಾಜ ಒಡೆಯರ್‌ ನೀಡಿದ ಪ್ರಶಸ್ತಿ ಪತ್ರ

'ಬಿ.ಎಂ.ಶ್ರೀ'ಯವರಿಗೆ ೧೯೩೮ರಲ್ಲಿ ಅವರ ಅವಿಸ್ಮರಣೀಯ ಕೆಲಸಕ್ಕಾಗಿ ಮೈಸೂರಿನ ಮಹಾರಾಜರು `ರಾಜ ಸೇವಾಸಕ್ತ' ಎಂಬ ಬಿರುದನ್ನು ನೀಡಿ ಗೌರವಿಸಿದರು. ೧೯೨೮ರಲ್ಲಿ 'ಗುಲಬರ್ಗಾ'ದಲ್ಲಿ ನಡೆದ '೧೪ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ' ರಾಗಿದ್ದರು. ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ಅದರ ಏಳಿಗೆಗಾಗಿ ಶ್ರಮಿಸಿದರು. ಹೀಗೆ ತಮ್ಮ ಜೀವಿತ ಕಾಲವನ್ನು ಕನ್ನಡ ಸಾಹಿತ್ಯಕ್ಕಾಗಿ ಮೀಸಲಿಟ್ಟ ಬಿ. ಎಂ. ಶ್ರೀ ಅವರನ್ನು `ಕನ್ನಡದ ಕಣ್ವ' ಎಂದು ಕರೆಯಲಾಗುತ್ತದೆ.
ಕನ್ನಡದ ಪ್ರಪ್ರಥಮ ಸಂಭಾವನಾಗ್ರಂಥ
ಕನ್ನಡ ತಾಯಿ ಶ್ರೀಯವರ ಲೇಖನಿ ಮಾತ್ರವಲ್ಲ ಅವರ ನಾಲಿಗೆಯನ್ನೂ ತನ್ನ ಸೇವೆಗೆ ತೊಡಗಿಸಿಕೊಂಡಳು. ಅವರ ಮಾತು ಮುತ್ತು. ಅದರ ಏರಿಳಿತ, ವಿಸ್ತರಣೆ, ಸಂಕ್ಷಿಪತ್ತೆ, ವ್ಯಂಗ್ಯ ವಕ್ರೋಕ್ತಿ ,ಹಾಸ್ಯೋಕ್ತಿ,  ಗಹನವನ್ನು ಸರಳವಾಗಿಸುವ. ನೀರಸವನ್ನು ಸರಸವಾಗಿಸುವ, ಕೇಳುಗರ ಮನವರಿಯುವ ಮಾತುಗಾರಿಕೆ ಅವರದು ಅದೊಂದು ಗಂಗಾಪ್ರವಾಹ.ಮಾತುಗಾರಿಕೆಯೂ. ಸಂಗಿತದಂತೆ, ಸಾಹಿತ್ಯದಂತೆ ಒಂದು ಕಲೆ. ವಾಗ್ಮಿಗಳು ವಿದ್ವಾಂಸರಾಗಿರದಿರಬಹುದು,ವಿದ್ವಾಂಸ ವಾಗ್ಮಿಗಳಾಗದಿರಬಹುದು. ಆದರೆ ಎರಡರ ಸಂಗಮವಾಗಿದ್ದು ಶ್ರೀ ಯವರಲ್ಲಿ ಮಾತ್ರ.ಅದಕ್ಕೆ ಅವರ ಮಾತೆಂದರೆ ಕನ್ನಡದ ಕಲ್ಲುಸಕ್ಕರೆ
  ಅವರಿಗೆ ಇಂಗ್ಲಿಷ್‌ ಮತ್ತು ಕನ್ನಡ ಎರಡೂ ಹೃದಯಕ್ಕೆ ಹತ್ತಿರ ಅವಳ ತೊಡಿಗೆ ಇವಳಿಗೆ ಇಟ್ಟು ನೋಡುವುದ ಅವರ ದೈನಂದಿನ ವಿಲಾಸ. ಛಂದಸ್ಸು ಕಂದ ವೃತ್ತಗಳಿಗೆ ಹೊರತಾದುದುವು. ರಗಳೆ ಷಟ್ಪದಿಗಳ ಮೂರುನಾಲ್ಕು ಐದು ಮಾತ್ರೆಗಳ ಗಣದಿಂದ ಕೂಡಿವೆ.ಅವುಗಳಲ್ಲಿ ಜಾಪದದ ಝಳಕು ಎದ್ದು ಕಾಣುವುದು.
ಬಿ. ಎಂ ಶ್ರೀಯವರಲ್ಲಿ ಅತಿಯಾದ ರಾಜಭಕ್ತಿ. ಮತ್ತು ದೇಶಾದ್ಯಂತ ವ್ಯಾಪಿಸಿದ್ದ ಸ್ವಾತಂತ್ರ್ಯ ಚಳುವಳಿ ಅವರಲ್ಲಿ ಕಂಡುಬರಲಿಲ್ಲ. ದೇಶಭಕ್ತಿಗೆ ಕನ್ನಡದ ಕೆಲಸದಲ್ಲಿ ಪ್ರಾಮುಖ್ಯತೆ ನೀಡಿದಂತೆ ಕಾಣಲಿಲ್ಲ.
ಕನ್ನಡ, ತಮಿಳು. ಸಂಸ್ಕೃತ, ಗ್ರೀಕ್‌ ಮತ್ತು ಇಂಗ್ಲಿಷ್‌ ವಿದ್ವಾಂಸರಾದ ಅವರು ದಣಿವರಿಯದೆ ದುಡಿದರು, ದುಡಿಸಿದರು ನಡೆದರು , ನಡೆಸಿದರು ನುಡಿದರು ನುಡಿಸಿದರು. ಅವರ ಸಂಸಾರಿಕ ಜೀವನ ಸುಖದಾಯಕವಾಗಿರಲಿಲ್ಲ.ಕಿರಿವಯಸ್ಸಿನಲ್ಲಿ  ಸತಿ ದೇವಮ್ಮ ತೀರಿಹೋದರು. ಅವರಿಗೆ ಒಬ್ಬ ಮಗು ಮತ್ತು ಇಬ್ಬರು ಹೆಣ್ಣು ಮಕ್ಕಳು. ಇದ್ದೊಬ್ಬ ಮಗನ ಕಣ್ಣು ಅಜಾಗರೂತೆಯಿಂದ ಹೋಯಿತು. ಒಬ್ಬಮಗಳು ಕಿರಿ ವಯಸ್ಸಿನಲ್ಲಿ ವಿಧವೆಯಾದಳು . ಜೊತೆಗೆ ಅವರಿಗೆ  ಮಧುಮೇಹ ಮತ್ತು ಏರು ರಕ್ತದಒತ್ತಡ. ಅವೆಲ್ಲದರ ನಡುವೆಯೂ  ಕನ್ನಡದ ಕೆಲಸಕ್ಕಾಗಿ ಇನ್ನಿಲ್ಲದೆ ದುಡಿದರು.  ಹಳ್ಳಿ ಪಟ್ಟಣಗಳಿಗೆ 
ಓಡಾಟ. ಕಾಲೇಜು  ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ನಂತರ ನಿವೃತ್ತಿಯಾದರು. ಅವರ ಕಾಣಿಕೆ ಕುರಿತಾದ ನೂರಾರು ಲೇಖನಗಳುಬಂದಿವೆ.      ಹತ್ತಾರು ಗ್ರಂಥಗಳು ರಚಿತವಾಗಿವೆ. ಒಂದಕ್ಕಿಂತ ಅಧಿಕ ಸಂಬಾವನೆ ಗ್ರಂಥಗಳು  ಅವರಿಗೆ ಸಂದಿವೆ. ಇನ್ನೂ ಬರುತ್ತಲಿವೆ..
ಒಂದುವರ್ಷ  ವಯಸ್ಕರ ಶಿಕ್ಷಣಸಂಸ್ಥೆಯ ಅಧ್ಯಕ್ಷರಾದರು.ನಂತರ ಗೆಳೆಯರ ಒತ್ತಾಯಕ್ಕೆ ಮಣಿದು ೧೯೪೪ ರಲ್ಲಿ ಧಾರವಾಡದ ಕಾಲೇಜಿಗೆ ಪ್ರಾಂಶುಪಾಲರು ೧೯೪೬ ಕೆಲಸದಲ್ಲಿರುವಾಗಲೇ ಧಾರವಾಡದಲ್ಲಿ ನಿಧನರಾದರು. ಕನ್ನಡಕ್ಕಾಗಿನ ಅವರ ದನಿ ಮೌನವಾದರೂ ಅದರ ಪ್ರತಿಧ್ವನಿ ಇನ್ನೂ ರಿಂಗಣಿಸುತ್ತಿದೆ.     ಅವರಿಂದ ಪ್ರಭಾವಿತವಾದ ,ಪ್ರಾರಂಭವಾದ  ನವೋದಯ ಸಾಹಿತ್ಯವನ್ನು ಪ್ರಗತಿಶೀಲ, ನವ್ಯ, ಬಂಡಾಯ,ದಲಿತಸಾಹಿತ್ಯಗಳು ಕೆಲ ಕಾಲ ಹಿನ್ನೆಲೆಗೆ ಸರಿಸಿದರೂ  ಮತ್ತೆ ಮರು ಹುಟ್ಟು ಪಡೆದು ಸುಗಮ ಸಂಗೀತದ ರೂಪದಲ್ಲಿ ಜನಮನವನ್ನು ಸೆಳೆಯುತ್ತಿದೆ.ಕನ್ನಡದ ಕಣ್ವ, ನವೋದಯದ ಹರಿಕಾರ, ಆಧುನಿಕ ಕನ್ನಡದ ಆದಿಗುರುವಿನ ಹೆಸರಲ್ಲಿ ಶ್ರೀ ಪ್ರಶಸ್ತಿ ಯನ್ನು  ಈ ವರ್ಷದಿಂದ ಪ್ರದಾನ ಮಾಡುತ್ತಿರುವುದು ಅವರಿಗೆ ಸಲ್ಲಿಸಬಹುದಾದ ದೊಡ್ಡ ಗೌರವ.
   ಬಿ. ಎಂ.ಶ್ರೀಯವರ ಪ್ರಭಾವದಿಂದ  ನವೋದಯ ಕಾವ್ಯಮಾರ್ಗದ  ಹೆಸರಾಂತ ಸಾಧಕರು





   

                                                                 





                       



                                                                    





 












    

1 comment:

  1. I wish you had posted scanned pictures of the Photos and the Title bestowing document. They are rare treasures. Otherwise a well written blog.

    ReplyDelete