Friday, November 23, 2012

ಅಮೇರಿಕಾದ ಅನುಭವ-೧



                            ಪ್ರದಾನ
      ಅಂದು ಬೆಳಗ್ಗೆ  ನಾರ್ಥ ಬ್ರನ್ಸವಿಕ್‌  ಲೈಬ್ರರಿಗೆ   ಯಥಾರೀತಿ ಗೆ ಹೊರಟಿದ್ದೆ. ಹಾದಿಯಲ್ಲಿ  ದೊಡ್ಡ ಅಕ್ಷರದ ಬ್ಯಾನರ್‌ಕಾಣಿಸಿತು. ಬಹುಶಃ ಗರಾಜ ಸೇಲ್‌ಇರಬಹುದು ಎಂದುಕೊಂಡೆ. ಇಲ್ಲಿ ಕೊಳ್ಳುಬಾಕ ಸಂಸ್ಕೃತಿಯ ಪರಿಣಾಮವಾಗಿ ಸಂಗ್ರಹವಾದ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಲಾರದೆ ಗರಾಜ ಸೇಲು, ಯಾರ್ಡ ಸೇಲು ಎಂದು  ಬೇಸಿಗೆಯ ಶನಿವಾರ ಭಾನುವಾರ ಕಾಸಿಗೆ ಎರಡು ಕೊಸರಿಗೆ ಒಂದು ಕೊಟ್ಟು ಕೈತೊಳೆದುಕೊಳ್ಳುವುದು  ಸಾಮಾನ್ಯ. ಆದರೆ ಹತ್ತಿರ  ಹೋಗಿ ನೋಡಿದಾಗ ಗೊತ್ತಾಯಿತು ಅಲ್ಲಿ ನಡೆಯುತ್ತಿದ್ದುದು  ಮಾರಾಟವಲ್ಲ.  ಅಲ್ಲಿ ದೊಡ್ಡ ಅಕ್ಷರದಲ್ಲಿ ಬರೆದಿದ್ದರು  "Give Away"   "ಅಗತ್ಯವಿರುವ ಮನೆಗಳಿಗೆ ಉಚಿತವಾಗಿ  ಕೊಂಡೊಯ್ಯಿರಿ,"
 ಅಷ್ಟೆ ಅಲ್ಲ ಹತ್ತಿರ ಹೋದಾಗ ಗೊತ್ತಾಯಿತು ಅದು  ಒಂದು ಅಭಿಯಾನ ಎಂದು. ಅಲ್ಲಿ  ಹಾಕಿದ ಮೇಜುಗಳ ಮುಂದೆ ಮೂವರು ಕುಳಿತಿದ್ದರು. ಅವರು ಒಂದು ಕರಪತ್ರ, ಅವರ ವಿಜಿಟಿಂಗ್‌ಕಾರ್ಟು ಜೊತೆಗೆ ಒಂದು ಪೆನ್‌.ನೀಡಿದರು. ನಂತರ ಅಲ್ಲೆ ಇದ್ದ ಪುಸ್ತಕದಲ್ಲಿ ಹೆಸರು ವಿಳಾಸ ಬರೆಯಲು ವಿನಂತಿಸಿದರು.ಅಲ್ಲಿರುವ ವಸ್ತುಗಳಲ್ಲಿ  ಮನೆಗೆ ಯಾವುದು ಅಗತ್ಯವಿದೆಯೋ ಅದನ್ನು ಕೊಂಡೊಯ್ಯುವಂತೆ ವಿನಂತಿಸಿದರು. ಜತೆಗೆ ಅಗತ್ಯವಿರುವ ದೊಡ್ಡ ಪ್ಲಾಸ್ಟಿಕ್‌ಚೀಲವನ್ನು ನೀಡಿದರು. ನನಗೆ ತುಸು ಕಕಮಕವಾಯಿತು. ಅದು  ಬಿ.ಸಿ.ಸಿ ಯವರ ಸೇವಾ ಕೆಲಸ. ಅಂದರೆ "ಬ್ರನ್ಸವಿಕ್‌ನ ಚರ್ಚ ಫಾರ್ ಕ್ರಿಸ್ತ " ಅವರ ಕಾರ್ಯಕ್ರಮ.
 ದೇವರ ಕೆಲಸ ಎಂದರೆ ನಾವೆಲ್ಲ ದಾನ, ಧರ್ಮ, ದಕ್ಷಿಣೆ, ಕಾಣಿಕೆ ಗಳದೆ ದರ್ಬಾರು.ಭಕ್ತರು ಕೈಲಾದಷ್ಟನ್ನು ಕೊಟ್ಟು ಕೃತಾರ್ಥರಾಗವರು. ಆದರೆ ಇಲ್ಲಿ ಅವರೆ ಕೊಡುತಿದ್ದಾರೆ.ಇದು ತುಸು ವಿಚಿತ್ರವಾಗಿ ಕಂಡಿತು.ಅಲ್ಲಿ ನೋಡಿದಾಗ ಮಕ್ಕಳ ಆಟದ ಸಾಮಾನು,ಪುಸ್ತಕಗಳು, ಬಟ್ಟೆ ಬರೆ, ಕೊಡುಗೆ, ಅಲಂಕಾರಿಕ ಸಾಮಗ್ರಿ, ವಿಸಿಡಿ,ಪೀಠೋಪಕರಣಗಳು ಪ್ರಿಂಟರ್‌, ಟಿವಿ ,ಇತರೆ  ಎಲೆಕ್ಟ್ರಾನಿಕ್‌ವಸ್ತುಗಳನ್ನು ಮೇಜಿನ ಮೇಲೆ ಒಪ್ಪವಾಗಿ ಜೋಡಿಸಿರುವುರು.  ಇದು ಬಡ ಬಗ್ಗರಿಗೆ ಇರುವ ಕಾರ್ಯ ಕ್ರಮ ಎಂದುಕೊಂಡು ನಾನು ಅಲ್ಲಿಂದ ಕಾಲು ಕಿತ್ತೆ.   ಒಂದು ಗಂಟೆಯನಂತರ ವಾಪಸ್ಸು ಬರುವಾಗ ನೋಡಿದರೆ ಜನ ಕಿಕ್ಕಿರಿದಿದ್ದಾರೆ, ಅಲ್ಲಿ ಕಾರುಗಳು ಸಾಲು ಗಟ್ಟಿ  ನಿಂತಿವೆ.ಹರೆಯದವರು, ಹೆಂಗಸರು ಮಕ್ಕಳು ವಯಸ್ಸಾದವರು ಅಮೇರಿಕನರು, ಆಫ್ರಿಕನರು , ಸ್ಪಾನಿಷ್ ಜನ,   ದೇಸಿಯರು ಎಲ್ಲ ಸೇರಿದ್ದಾರೆ. ಅಲ್ಲಿಂದ ಇಲ್ಲಿಗೆ ಓಡಾಡುತ್ತಾ  ಆಯ್ದು ಕೊಳ್ಳುತಿದ್ದಾರೆ.ಅವರಗೆ ಸಹಾಯ ಮಾಡಲು ಆರೆಂಟು ಜನ ಸ್ವಯಂ ಸೇವಕರು ನಗುನಗುತ್ತಾ ಬಯಸಿದ ವಸ್ತುಗಳನ್ನು ಕಾರಿನೊಳಗೆ ಸಾಗಿಸಲು ಸಹಾಯ ಮಾಡುತಿದ್ದಾರೆ. ಅಲ್ಲಿದ್ದ  ಸ್ವಯಂ ಸೇವಕಿ ಶ್ರೀಮತಿ ಕ್ಯಾರಿನ್‌ ಅವರನ್ನು ಮಾತನಾಡಿಸಿದಾಗ ಗೊತ್ತಾಯಿತು. ಅದು ಬೇಡದ , ಹಳೆಯ ವಸ್ತುಗಳನ್ನು ದಾನ ಮಾಡುವ ಮೇಳವಲ್ಲ. ಸಮುದಾಯದಲ್ಲಿನ ಮನೆಗಳವರು ತಮ್ಮಲ್ಲಿನ ಹೆಚ್ಚಿನ ವಸ್ತುಗಳನ್ನು ಅವುಗಳ ಅಗತ್ಯವಿರುವವರೊಂದಿಗೆ ಹಂಚಿಕೊಳ್ಳುವ ಸೇವಾ ಕಾರ್ಯ. ಸರಳ ಜೀವನನ ಆ ಎಲ್ಲರ ಗುರಿ. ತಮ್ಮ ಸುತ್ತಮುತ್ತ ಇರುವರೆಲ್ಲ ನೆಮ್ಮದಿಯಾಗಿರಲು ತಮ್ಮ ಕೊಡುಗೆ ನೀಡಲು ಅವರು ಸದಾ ಸಿದ್ದ. ಅದರಂದ ಅವರು ಗೃಹ ಬಳಕೆಗೆ ಅತ್ಯವಾದ ಹೆಚ್ಚುವರಿ ವಸ್ತುಗಳನ್ನು ಮಕ್ಕಳ ಆಟಿಎ, ಪುಸ್ತಕ , ಡಿವಿಡಿ , ವಿಸಿಡಗಳನ್ನು ಸಂಗ್ರಹಿಸಿ ಈ ನೀಡುವ ಕಾರ್ಯ ಕ್ರಮ ಹಮ್ಮಕೊಂಡಿದ್ದರು. ಮೊದಲೆ ಫ್ಯಾಷನ್‌ಯುಗ. ಅತ್ಯಾಧುನಿಕವಾದುದು ಪೇಟೆಯಲ್ಲಿ ಬಂದ ತಕ್ಷಣ ಕೊಳ್ಳುವ ತನಕ. ಅವು ಬಂದ ಮೇಲೆ ಮೊದಲು ಇದ್ದದು ಸುಸ್ಥಿತಿಯಲ್ಲಿ ಇದ್ದರೂ  ಬೇಡ. ಅಂಥಹ ಅನೇಕ  ಕುರ್ಚಿ, ಮೇಜು, ಫೋರ್ಕ್,  ಚಮಚ ಬಟ್ಟಲು , ಪ್ಲೇಟು , ಮೊದಲಾದ ಗೈಹೋಪಯೋಗಿ ಸಾಮಾನುಗಳು ಅಲಂಕಾರಿಕ ವಸ್ತುಗಳು . ಪುಸ್ತಕ. ವಿಸಿಡಿ . ಡಿವಿಡಿ ಇದ್ದವು. ಅಲ್ಲಿ ಜಾತಿ ಮತ ಬಣ್ಣದ  ಬೇಧ ಇಲ್ಲ. ಯಾರಾದರೂ ಸರಿ ಅಲ್ಲಿಗೆ ಹೋಗಿ ಪಡೆಯಬಹುದು. ನಗು ನಗುತ್ತಾ ಕೊಟ್ಟು ನಮಸ್ಕಾರ ಹೇಳುವರು.ಮಾಲ್‌ಗೆ  ಹೋಗಿ ಸಾಮಾನು ತಂದಂತೆ. ಆದರೆ ಒಂದೆ ವ್ಯತ್ಯಾಸ. ಇಲ್ಲಿ ಬಿಲ್ಲು ಇಲ್ಲ . ಹಣ ಪಾವತಿ ಅಗತ್ಯವೂ ಇಲ್ಲ.  ಎಲ್ಲ ಸಾಮಗ್ರಿಗಳು ಇವೆ ಎಂದಲ್ಲ. ಬಹುತೇಕ ಇದ್ದವು.   ಅವೂ ಸುಸ್ಥಿತಿಯಲ್ಲಿಯೆ. ಕೆಲವು ಸಿದ್ಧ ಹಾರಪದಾರ್ಥಗಳು ಅಂದರೆ ಬೇಗ ಕೆಡಲಾರದವೂ ಕೂಡ ಅಲ್ಲಿ ಸಾಲಾಗಿಟ್ಟಿದ್ದರು. ಕೋಕ್‌, ಕೆಚಪ್‌, ಜ್ಯೂಸ್‌ಬಾಟಲಿಗಳು ಕ್ಯಾನುಗಳು ಇದ್ದವು.
ಅಲ್ಲಿನ ನಿರ್ವಾಹಕಿ ಶ್ರೀಮತಿ ಕ್ಯಾರಿನ್‌ರನ್ನು ಕೇಳಿದೆ. ಇದು ಹೇಗೆ ಸಾಧ್ಯ? ಕೆಲವು ಹೊಚ್ಚ ಹೊದವೂ  ಇವೆಯಲ್ಲ? ಎಂದು.
 ಅದಕ್ಕೆ ಅವರು ನೀಡಿದ ಉತ್ತರ ಸಮಾಧಾನ ತಂದಿತು. ಅಲ್ಲಿ ಕ್ರಿಸ್‌ಮಸ್‌ಗೆ, ಹುಟ್ಟುಹಬ್ಬಕ್ಕೆ ಹಾಗೂ ಅನೇಕ ಸಂಭ್ರಮಾಚರಣೆ  ಸಮಯದಲ್ಲಿ  ಕೊಡುಗೆ ನೀಡುವುದು ಸಾಮಾನ್ಯ. ಅನೇಕ ಸಲ ಇರುವ ವಸ್ತುಗಳೆ ಮೂರು ನಾಲಕ್ಕು ಸೆಟ್‌ ಬರುವವು.ಅವನ್ನು ಹಾಗೆ ಇಟ್ಟು ಕೊಳ್ಳುವುದಕ್ಕಿಂತ ಅದರ ಅಗತ್ಯವಿರುವವರಿಗೆ ಕೊಟ್ಟರೆ ತೃಪ್ತಿಯಾಗುವುದು. ಅಲ್ಲಿನ ಅನೇಕ ವಸ್ತುಗಳು ಆ ಮನೋಭಾವದವರ ಕೊಡುಗೆಯ ಫಲ..
ಅನೇಕರಿಗೆ ಸರಳ ಜೀವನದ ಹಂಬಲ. ಹೆಚ್ಚುವರಿಯಾಗಿ ಕಾಣಿಕೆಯಾಗಿ ಬಂದವನ್ನು ಬೇಡ ಎಂದರೆ ಕೊಡಲು ಬಂದವರ  ಮನಸ್ಸಿಗೆ ನೋವು.   ಸರಿ ಹಾಗೆ ಬಂದುದನ್ನು ಹೀಗೆ ವಿನಿಯೋಗ ಮಾಡಿದರೆ ಇಬ್ಬರಿಗೂ ನೆಮ್ಮದಿ.
ಈ  ಕೊಂಡೊಯ್ಯುವ ಕೆಲಸ ನಾಲಕ್ಕು ಗಂಟೆಯ ವರೆಗೆ ನೆಡೆದೆ ಇತ್ತು.  ಸಂಜೆ ಅವರನ್ನು ವಿಚಾರಿಸಿದೆ. ಅವರ ಪ್ರಕಾರ ಯೇಸುವಿನಂತೆ ಮಾನವ ಜನಾಂಗವನ್ನು ಪ್ರಿತಿಸುವುದು, ಅವರ ಸೇವೆ ಮಾಡುವುದು ಮತ್ತು ಅವರಿಗೆ ನೆಮ್ಮದಿ ಕೊಡುವುದೆ ಅತಿ ಮುಖ್ಯ.  ಉಳ್ಳವರು ಅಗತ್ಯವಿರುವವಿರಿಗೆ ನೆರವು ನೀಡುವುದೆ ಧರ್ಮ.
ಅದಕ್ಕನುಗುಣವಾಗಿ ಅವರು ಕಾರ್ಯಕ್ರಮಗಳನ್ನು ರೂಪಿಸುವರು.ಅದರಲ್ಲಿ ಕಾರು ವಾಷಿಂಗ್‌ಕಾರ್ಯ ಕ್ರಮವೂ ಇದೆ. ಅವರು ನೀರಿನ, ವ್ಯಾಕ್ಯೂಮಿನ  ಮತ್ತು ಸಾಬೂನಿನ ವ್ಯವಸ್ಥೆ ಮಾಡುವರು. ಯಾರು ಬೇಕಾದರೂ  ಸ್ವಯಂ ಸೇವಕರಾಗಿ ಬಂದವರ  ಕಾರುಗಳ ಶುಚಿ ಮಾಡಬಹುದು.. ಅದು ಸೇವೆ. ಕಾರಿನ ಮಾಲಕರು ಸ್ವಾಭಾವಿಕವಾಗಿ ಸ್ವಂತ ಖುಷಿಯಿಂದ  ಬರುವರು.. ಹೊರಗೆ ಕಾರು ತೊಳೆಸಿದರೆ. ಕನಿಷ್ಟ ೧೫  ಡಾಲರು ಶುಲ್ಕ ಕೊಡುವರು. ಇಲ್ಲಿ ಧರ್ಮದ ಕೆಲಸ. ಸ್ವಾಬಾವಿಕವಾಗಿಯೆ ಎಲ್ಲರೂ ಧಾರಾಳವಾಗಿ ಹಣದ ಕೊಡುಗೆ ನೀಡುವರು. ಅಲ್ಲಿ ನನಗೆ ಬಹು ಕಂಡ ಮೋಜಿನ ಸಂಗತಿ  ಎಂದರೆ ಕೆಲವರು ಮಕ್ಕಳ ಸಮೇತ ಕಾರಿನಲ್ಲಿ  ಬಂದರು. ಅಲ್ಲಿ  ಅವರ ಮಕ್ಕಳೆ ಕುಣಿದಾಡುತ್ತಾ  ಕಾರು ತೊಳೆದರು. ನಂತರ ಅಲ್ಲಿರುವ ಕಾಣಿಕೆ ಡಬ್ಬಿಯಲ್ಲಿ ಕಾಸು ಹಾಕಿ ಖುಷಿಯಿಂದ ಹೋದರು.   ಮನೆಯಲ್ಲಿ ಮಾಡು ಎಂದರೆ ಗೊಣಗುವ ಮಕ್ಕಜಳು ಇಲ್ಲಿ ಇತರರನ್ನು ನೋಡಿ ಆಡಾಡುತ್ತಾ ಕಾಯಕದ ಗೌರವ ಕಲಿಯುವರು. ಮಕ್ಕಳು ಮಾಡುವರಲ್ಲ ಎಂಬ ನೆಮ್ಮದಿ  ತಾಯಿತಂದೆಯರಿಗೆ.ಸಂಗ್ರಹವಾದ  ಹಣವನ್ನು ಈ ಬಾರಿ ಜೋಪ್ಲಿನ್‌ನಲ್ಲಿನ ಬಿರುಗಾಳಿ ಸಂತ್ರಸ್ತರ ಸಹಾಯಾರ್ಥ ಬಳಸಲಾಗುವುದು  ಎಂದು ತಿಳಿಯಿತು
ಅವರ ಇನ್ನಂದು ಜನಪ್ರಿಯ ಕಾರ್ಯ ಕ್ರಮ ಬಾನಿನ ಅಡಿಯಲ್ಲಿ ಬಯಾಸ್ಕೋಪು. ಅಂದರೆ ಬೇಸಿಗೆಯಲ್ಲಿ  ಇಲ್ಲಿನ ಜನ ಸದಾ ಹೊರಗೆ ಇರಲು ಬಯಸುವರು. ಅದಕ್ಕಾಗಿ ಬಯಲಲ್ಲಿ ಕುಟುಂಬ ಸಮೇತ ಹೆಂಗಸರು ಮಕ್ಕಳು ನೋಡಬಹುದಾದ ಸಿನೇಮಾ ಪ್ರದರ್ಶಿಸುವರು. ಒಬ್ಬರಿಗೆ ಒಂದು ಡಾಲರು. ಅದರ ಜೊತೆ ಪ್ರತಿಯೊಬ್ಬರಿಗೂ ಪಾಪ್‌ಕಾರ್ನ್‌ಉಚಿತ.  ಮಜಾ ಎಂದರೆ ನಮ್ಮ ಭಾರತದಲ್ಲಿನ  ಬಯಲಾಟದಂತೆ. ಅಲ್ಲಿ ಕೂಡಾ  ಆಸನ ವ್ಯವಸ್ಥೆ ಇಲ್ಲ. ಬೇಕಾದರೆ ನೋಡುಗರು ಕುರ್ಚಿ ಬೆಂಚು ಒಯ್ಯ ಬಹುದು. ಇಲ್ಲವೆ ಕಾರಿನಲ್ಲೆ ಕುಳಿತು ಸಿನೆಮಾ ನೋಡಬಹುದು.ಸ್ವಟರ್ ಜಾಕೀಟು ಬೇಕಾದರೆ ರಗ್ಗು , ಬ್ಲಾಂಕೆಟ್ ತಂದರೂ ಸರಿ.   ಅದು ಅವರವರ ಅನುಕೂಲ. ಒಟ್ಟಿನಲ್ಲಿ ಆರಾಮಾಗಿ ಎಲ್ಲರ ಜತೆ ಕಲೆತು ಮಾತನಾಡುತ್ತಾ ನೋಡಬಹುದು.ನನಗೆ ಆಗ ನಲವತ್ತು ವರ್ಷಗಳ ಹಿಂದೆ ಬೆಂಗಳೂರಿನ ಬನ್ನೇರು ಘಟ್ಟದಲ್ಲಿನ ಡ್ರೈವ್‌ಇನ್‌ಸಿನಿಮಾದ ನೆನಪಾಯಿತು.,ಅಲ್ಲದೆ  ಮೂವತ್ತೈದು ವರ್ಷದ ಹಿಂದೆ ಕರ್ನಾಟಕದಲ್ಲೆ ಮೊದಲ ಬಾರಿಗೆ ಟಿವಿ ಬಂದಾಗ ಹೈದ್ರಾಬಾದಿನಿಂದ  ಪ್ರಸಾರ ವಾಗುತಿದ್ದ ಕನ್ನಡ ಕಾರ್ಯ ಕ್ರಮಗಳನ್ನು ನೋಡಲು ಅನುಕೂಲ ವಾಗುವಂತೆ ಗುಲ್ಬರ್ಗ ಜಿಲ್ಲೆ ಯ ಹಳ್ಳಿಗಳಲ್ಲಿ  ಪ್ರತಿ ಪಂಚಾಯತ್‌ಬೋರ್ಡುಗೆ ಒಂದು ಕಪ್ಪು ಬಿಳುಪು ಟಿವಿ ಕೊಡಲಾಗಿತ್ತು. .ಆಗ ನಾವು ಕೆಂಪುಬಾಳೆಹಣ್ಣಿಗೆ ಪ್ರಸಿದ್ದವಾದ ಕಮಲಾಪುರದಲ್ಲಿದ್ದವು. ಆ ಊರಲ್ಲಿ ಟಿವಿಯನ್ನು ಪ್ರತಿ ಭಾನುವಾರ ರಾತ್ರಿ  ಶಾಲೆಯ ಮುಂದಿನ ಬಯಲಲ್ಲಿ ಇಡಲಾಗಿತಿತ್ತು. ಊರಿನ ಜನರೆಲ್ಲ  ಅಂದು ಅದರಲ್ಲಿ ಬರುವ ಕನ್ನಡ ಸಿನೆಮಾ ನೋಡಲು ಬರುತ್ತಿದ್ದರು. ಆಗಲೂ ಸಹಾ ಇಲ್ಲಿಯಂತೆಯ  ಜನ ತಮ್ಮ ತಮ್ಮ ಕುರ್ಚಿ ತಾವೆ ತಂದು ಹಾಕಿಕೊಂಡು  ಟಿವಿಯಲ್ಲಿ  ಸಿನೇಮಾ ನೋಡಿದ ನಂತರ ಮನೆಗೆ ತೆಗೆದುಕೊಂಡು ಹೋಗುತಿದ್ದರು.
 ಹವಾ ನಿಯಂತ್ರಿತ ಥೇಟರಲ್ಲಿ ಕೂತು ನೋಡುವ ಆಧುನಿಕ ಜನ ಬಯಲಲ್ಲಿ ಜಮಾಯಿಸಿರುವುದು ಕಂಡು ನನಗೆ ಅಚ್ಚರಿಯಾಯಿತು.ಈಗ ಐವತ್ತು ವರ್ಷಗಳ ಹಿಂದೆ ನಮ್ಮ ಹಳ್ಳಿಗಳಲ್ಲೂ ವಾರ್ತಾ ಮತ್ತು ಪ್ರಚಾರ ಇಲಾಖೆಯವರು ಸುದ್ಧಿ ಚಿತ್ರಗಳನ್ನು ಪ್ರದರ್ಶಿಸಿದಾಗ ನೋಡಲು ಹಳ್ಳಿಗರಿಗಿದ್ದ ಹುಮ್ಮಸ್ಸು  ಮರುಕಳಿಸಿದೆ ಎನಿಸಿತು.
ಈ ಎಲ್ಲ ಕಾರ್ಯಕ್ರಮಗಳ ಉದ್ದೇಶ ಜನ ದ್ವೀಪಗಳಂತಾಗದೆ ಎಲ್ಲರೊಡನೆ ಬೆರೆತು ಒಂದಾಗ ಬೇಕೆಂದು
ನನಗೆ ಖುಷಿಯಾದ ಮತ್ತೊಂದು ಸಂಗತಿ ಎಂದರೆ ಅಲ್ಲಿ ಚರ್ಚಿಗೆ ಬನ್ನಿ ಎನ್ನುವಮಾತಿಲ್ಲ. ಧರ್ಮದ ಬಗ್ಗೆ ಪ್ರವಚನ ಇಲ್ಲ. ಎದ್ದು ಕಾಣುವುದು ಜನರನ್ನು ನೆಮ್ಮದಿಯಿಂದ ಇಡಬೇಕೆನ್ನಿಸುವ ಅವರ ಕಳಕಳಿ ಮಾತ್ರ .
ಅವರ ಪ್ರಕಾರ " ಬಡತನ , ನಿರುದ್ಯೋಗ, ಶಿಕ್ಷಣ ವ್ಯವಸ್ಥೆ, ರಾಜಕೀಯ, ತೆರಿಗೆ , ಅಂತರ್‌ಜಾಲಗಳು ಇವು ಯಾವೂ ನಮ್ಮ  ಸಮಸ್ಯೆಗಳಿಗೆ , ನೋವಿಗೂ ಕಾರಣವಲ್ಲ. ನಮ್ಮೆಲ್ಲರ ದುಖಃಕ್ಕೆ ನೋವಿಗೆ ಕಾರಣ ವಿಘಟಿತವಾಗುತ್ತಿರುವ  ಕುಟುಂಬ ವ್ಯವಸ್ಥೆಮುರಿದು ಬಿದ್ದ ಸಂಸಾರ  ಮತ್ತು ಕಾಣೆಯಾಗುತ್ತಿರುವ ಸಾಮಾಜಿಕ ಮೌಲ್ಯಗಳು. .ಜನರು ಈಗ ಹಣ , ವೃತ್ತಿ, ಸುಖ , ವೈಬೋಗಗಳನ್ನೆ ಜೀವನದ ಗುರಿಯಾಗಿಸಕೊಂಡಿರುವರು . ಪರಿಣಾಮ ಒಂದು ಹಂತದವರೆಗೆ ಎಲ್ಲ ಚಂದ . ನಂತರ ಪ್ರತಿಭಟಿಸುವ ಮಕ್ಕಳು, ಉದ್ದೀಪನ ಮದ್ದುಗಳ ದಾಸರಾದ ಯುವಕರು,ನಿರಾಸೆಯ ಮಡುವಿನಲ್ಲಿ ತಾಯಿತಂದೆಯರು ಮತ್ತು ವಿಷಾದಲ್ಲಿ ಮುಳುಗಿ ಏಕಾಂಗಿಗಾಳಗಿರುವ ವೃದ್ಧರು  ಸಮಾಜದಲ್ಲಿ ಹೆಚ್ಚಾಗಿದ್ದಾರೆ. ಅದಕ್ಕಾಗಿ ಪೂರ್ಣ ಸಮುದಾಯವನ್ನು ಒಟ್ಟಿಗೆ ತರುವ ಪ್ರಯತ್ನ ನಮ್ಮ  ಆಶಯ" .
ಅವರು ಏಸುವಿನ ಹೆಸರಲ್ಲಿ  ಮಾಡುವ ಈ ಕೆಲಸವನ್ನು  ಬೇರೆ ಯಾವುದೆ ದೇವರ ಹೆಸರಲ್ಲಿ   ಮಾಡಿದರೂ  ಈಗಿನ ಸಮುದಾಯ ಎದುರಿಸುತ್ತಿರುವ  ಸಮಸ್ಯೆಗಳಿಗೆ ಸುಲಭ ಪರಿಹಾರ ದೊರೆಬಹುದು ಎಂದು .ಎನಿಸಿತು, ನಾವೂ  ಆ ಕಾರ್ಯ ಕ್ರಮದಲ್ಲಿ "Home medicine ,  Redaers digest collection ಮತ್ತು ಅಲ್ಲಿ ಒಂದೆರಡು ಒಳ್ಳೆಯ ಮಕ್ಕಳ ಪುಸ್ತಕಗಳನ್ನು ತೆಗೆದುಕಂಡು ಬರುವಾಗ ವಂದನೆ ಸಲ್ಲಿಸಲು ಹೊಇರಟರೆ ಅವರೆ  ಮುಂದಾಗಿ ಅಭಿನಂದನೆ ತಿಳಿಸಿದರು.


No comments:

Post a Comment