Friday, November 9, 2012

ಇದ್ದಲ್ಲಿಗೆ ಸಿದ್ಧ ಆಹಾರ. ಭಾಗ ೨


 ಭಾಗ- ೨
ಆಹಾರದ ಪ್ಯಾಕೆಟ್‌ಗಳನ್ನು ಹಿಡಿದು ಪಟ್ಟಯಲ್ಲಿರುವ ಮನೆಗಳಿಗೆ ಹೋದೆವು.ನಾವು ಹೋದ ಅನೇಕ ಮನೆಯಲ್ಲಿ ಅನೇಕರು ಗಾಲಿ ಕುರ್ಚಿಯಲ್ಲೆ ಕುಳಿತು ಬಾಗಿಲು ತೆರೆದರು. ಒಂದೆರಡು ಕಡೆ ಬಾಗಿಲುತಟ್ಟಿದಾಗ  ಬಂದು ತೆರೆಯಲು ಆಗದು ಎಂದು ಕೆಲವರು ಹಾಗೆ ಮುಂದು ಮಾಡಿದ್ದರು ಒಬ್ಬಿಬ್ಬ ಮಹಿಳೆಯರು ಸಿದ್ದ ಆಹಾರ ಪಡೆದು ತಕ್ಷಣವೇ ಬಾಗಿಲು ಹಾಕಿಕೊಂಡರೆ ಕೆಲವರು ಮಾತಿಗೆ ನಿಲ್ಲಿಸಿ ಕೊಳ್ಳುತಿದ್ದರು ಅದರಲ್ಲೂ ಗಾಲಿ ಕುರ್ಚಿಯಲ್ಲಿದ್ದವರಿಗೆ ಏನೋ ಹೇಳ ಬೇಕೆಂಬ ತುಡಿತ ಇದ್ದಂತೆ ಕಾಣುತಿತ್ತು ಬಂದಿರುವುದು ಅವರಿಗೆ ಸಮಾಧಾನ ತಂದಂತಿತ್ತು. ಷಾನ್ ಅವರಿಗೆ ಆತ್ಮೀಯನಾಗಿದ್ದಂತೆ ಅನಿಸಿತು. ಅವರು ತಮ್ಮ ಕಷ್ಟ ಕೋಟಲೆಗಳನ್ನು ಹಂಚಿಕೊಳ್ಳುತಿದ್ದರು ಅವನು ತಾಳ್ಮೆಯಿಂದ ಹೇಳುವುದನ್ನೆಲ್ಲಾ ಕೇಳುತ್ತಾ ಒಂದೆರಡು ಸಮಾಧಾನದ ನುಡಿ ಹೇಳುತಿದ್ದ. ಅಷ್ಟಕ್ಕೆ ಅವರ ಮೊಗದಲ್ಲಿ ನಗೆ ಮೂಡುತಿತ್ತು. ಅವರ ಸಂತೋಷಕ್ಕೆ ನಾವು ಕೊಟ್ಟ ಆಹಾರದ ಪೊಟ್ಟಣಕ್ಕಿಂತ ಅವರ ಮಾತು ಕೇಳಿದ, ದುಗುಡ ದುಮ್ಮಾನಗಳಿಗೆ ಕಿವಿಯಾದದ್ದೆ ಹೆಚ್ಚಿನ ಕಾರಣ ಎನಿಸಿತು ಕೆಲವರಂತೂ ಹೆಚ್ಚುವರಿಯಾಗಿ ಡೊನಟ್ ಕೊಟ್ಟದ್ದಕ್ಕೆ ಬಹಳ ಸಂತೋಷಪಟ್ಟರು.ಇವರು ನನ್ನ ಗೆಳೆಯ ಎಂದು ಪರಿಚಯ ಮಾಡಿಕೊಟ್ಟಾಗ ಮನಸಾರೆ ಅಭಿನಂದನೆ ಸಲ್ಲಿಸಿದರು.
ನಾನು ಬರಿ ಆಫ್ರಿಕನ್ ಅಮೇರಿಕನ್ನರು ಮಾತ್ರ ಈ ಸೌಲಭ್ಯ ಪಡೆಯುವರು , ಅದರಲ್ಲೂ ಬಡವರು ಮಾತ್ರ ಎಂದುಕೊಂಡಿದ್ದು ನನ್ನ ಭಾವನೆ ಸುಳ್ಳಾಯಿತು. ಅವರಲ್ಲಿ ಅಮೇರಿಕನ್ನರೂ ಇದ್ದರು. ಇದಕ್ಕೆ ಹೆಚ್ಚಾಗಿ ಆರ್ಥಿಕ ಸ್ಥಿತಿಯ ಜೊತೆ ಸಾಮಾಜಿಕ ಕಾರಣವೂ ಇದೆ ಎಂದುವಿವರಣೆ ದೊರೆಯಿತು
ವಿರ್ಲ ಫೋರ್ಡ  ಎಂಬ ಹಣ್ಣು ಹಣ್ಣು ಮುದುಕರ ಮನೆಗೆ ಹೋದೆವು. ಅವರದು ಮೂರು ಬೆಡ್‌ರೂಮ್‌ ಮನೆ. ಎರಡು ಗರೇಜ್‌ ಇದ್ದವು. ಒಂದರಲ್ಲಿ ಬೆಲೆಬಾಳುವ ಕಾರೂ ಇದ್ದಿತು. ಮನೆ ಒಂದು ಮಿನಿ ಬಂಗಲೆ.  ಕಡು ಬಡವರಿಗೆ ಕೊಡಬೇಕಾದ ದಾನವನ್ನು ಉಳ್ಳವರೂ ಪಡೆಯುವರಲ್ಲ ಎಂದು ಆಶ್ಚರ್ಯವಾಯಿತು. ನಮ್ಮಲ್ಲಿನ  ಸರಕಾರದ ಯೋಜನೆಗಳು ಅಪಾತ್ರರ ಪಾಲಾಗುವುದಲ್ಲ ಹಾಗೆ ಇಲ್ಲಿಯೂ ಆಗಿರಬಹುದು. ಎಲ್ಲಿ ಹೋದರೂ ಮಾನವರೆಲ್ಲ ಒಂದೆ ತಾನೆ. ಎಂದುಕೊಂಡೆ.  ಆದರೆ ನನ್ನ ಗೆಳೆಯ ಬಾಗಿಲು ಕರೆ ಗಂಟೆ ಒತ್ತಿದ ಕೂಡಲೆ ಕಮ್ ಇನ್ ಎಂಬ ದನಿ ಕೇಳಿಸಿತು.  ಇಬ್ಬರೂ ಒಳಗೆ ಹೋದೆವು ಸಾಧಾರಣವಾಗಿ ಸುಸ್ಥಿತಿಯಲ್ಲಿ ಹಾಲು ಅಲ್ಲಿ ಹಳೆಯಕಾಲದ ಮೇಜು ಕುರ್ಚಿಗಳೂ ಇದ್ದವು ಆದರೆ ಮೇಜಿನ ತುದಿಯಲ್ಲಿ ಗಾಲಿಕುರ್ಚಿಯಲ್ಲಿ ತೀರಾ ವಯಸ್ಸಾದ  ಮುದುಕರೊಬ್ಬರು ಕುಳಿತಿದ್ದರು. ಅದು ಅವರದೆ ದನಿ. ಬಿಳಿತಲೆ,ಸೊರಗಿದ ದೇಹ.  ಒಂದು ಕಾಲದಲ್ಲಿ ಬಹುಸುಂದರವಾಗಿದ್ದ ಮೊಗ . ಸುಮಾರಾಗಿ ಬೆಲೆ ಬಾಳುವ ಉಡುಪು ಧರಿಸಿದ್ದಾರೆ. ಆದರೆ ಅವರಿಗೆ ನಾವು ತಂದ ಎರಡು  ಊಟ ಕೊಡುತಿದ್ದೇವೆ. ಅವರಿಗೆ ಮತ್ತು ಅವರ ಹೆಂಡತಿಗೆ. ಅವರ ಹೆಂಡತಿ ಕಾಣಲಿಲ್ಲ.  ವಿಚಾರಿಸಿದಾಗ ಅನಾರೋಗ್ಯದಿಂದ  ಆಸ್ಪತ್ರೆಯಲ್ಲಿ ಇರುವುದಾಗಿತಿಳಿಸಿದರು. ಈಗ ತುಸು ಗುಣ ಮುಖವಾಗಿದೆ  ನಾವು ಹೋಗುವ ಮೊದಲು ದೂರವಾಣಿಯ ಆಸ್ಪತ್ರೆಯಿಂದ ಕರೆಬಂದಿತ್ತು. ಇಲ್ಲಿ ಒಂದು ಅನುಕೂಲ ಇದೆ. ಅರೋಗ್ಯ ಸೇವೆಯಸೌಲಭ್ಯವಿದೆ.  ಹಿರಿಯ ನಾಗರೀಕರಿಗೆ ತುಸುವೆ ತೊಂದರೆಯಾದರೂ ತಕ್ಷಣ ಆಂಬ್ಯುಲೆನ್ಸ ಬಂದು ಸೂಕ್ತ ಚಿಕಿತ್ಸೆ ಒದಗಿಸುವರು.  ಆದರೆ ಇವರಿಗೆ ಹೆಂಡತಿಯನ್ನು ನೋಡಲು ಅಲ್ಲಿ ಹೋಗಲು ಆಗಿಲ್ಲ. ಕಾರು ಇದೆ. ಆದರೆ ಕರೆದೊಯ್ಯುವವರು ಯಾರು ?
ವಾರಾಂತ್ಯದಲ್ಲಿ ಹತ್ತಿರದ ಊರಲ್ಲಿರುವ ಮಗಳು ಬಂದು ಕರೆದು ಕೊಂಡು ಹೋಗುವಳು ಆಗ ನೋಡಿಕೊಂಡು ಬರುವೆ ಎಂದು ತಿಳಿಸಿದರು. ನಂತರ ಅವರ ಬಗ್ಗೆ ವಿವರ ತಿಳಿಯಿತು. ಅವರು ಉತ್ತಮ ಆದಾಯದ ಉದ್ಯೋಗದಲ್ಲಿದ್ದರು. ಸಾಕಷ್ಟು ಹಣವಿದೆ. ಸ್ವಂತ ಮನೆಯೂ ಇದೆ. ಆದರೆ ಇದ್ದ ಇಬ್ಬರು ಮಕ್ಕಳೂ ದೂರದಲ್ಲಿದ್ದಾರೆ. ಇವರಿಗೆ ೯೦ವರ್ಷ , ಹೆಂಡತಿಗೆ ೮೫ ವರ್ಷತುಂಬ ಕಷ್ಟದಿಂದ ಮನೆಯಲ್ಲೆ ಓಡಾಡಬಲ್ಲರು. ಆದರೆ ಹೊರಗೆ ಹೋಗಲಾಗುವುದಿಲ್ಲ. ಇನ್ನು ಕಾರು ಚಾಲನೆ ಆಗದ ಮಾತು. ಎದ್ದು ಅಡುಗೆ ಮಾಡುವ ಯೋಚನೆಯೂ ಸಾಧ್ಯವಿಲ್ಲ. ಸಿದ್ಧ ಆಹಾರವನ್ನು ಫ್ರಿಫ್ರಜ್‌ನಿಂದ ದ ತೆಗೆದು ಮೈಕ್ರೋ ವೇವ್‌ನಲ್ಲಿ ಬಿಸಿ ಮಾಡಿಕೊಂಡು ತಿನ್ನಲು ಸಾಧ್ಯವಾಗುವುದೆ ಅವರ ಪುಣ್ಯ. ಅದಕ್ಕೆ   ಅವರಿಗೂ ಈ ಛಾರಿಟಿ ಊಟ. ಬಿಸಿನೂಟವನ್ನು ಈಗ ಮಾಡುವರು. ಉಳಿದದ್ದೂ ಫ್ರಿಜ್‌ನಲ್ಲಿ ಇಟ್ಟು ಮಾರನೆ ದಿನ ಬಳಸುವರು.ನಿವೃತ್ತರಾಗಿ ಮೂವತ್ತು ವರ್ಷದ ಮೇಲಾಗಿದೆ. ಆದಾಯ ಬರಬರುತ್ತಾ ಇಳಿಮುಖವಾಗಿದೆ. ಅಸಿಸ್ಟೆಡ್ ಲಿವಿಂಗ್ ಹೋಗಲು ಮನಸ್ಸಿಲ್ಲ .ಜತೆಗೆ ಹೆಂಡತಿ ಇದ್ದಾಳೆ . ಹೇಗೋ ಜೊತೆಯಾಗಿ ಕಾಲಕಳೆಯುವರು. ಅದಕ್ಕೆ ಅವರಿಗೆ ಆಗಾಗ ಸಿದ್ಧ ಆಹಾರ ದೊರೆತರೆ ಅದನ್ನೆ ಇಟ್ಟುಕೊಂಡು ಎರಡು ಮೂರುದಿನ ತಿನ್ನುವರು. ನಂತರ ದಿಢೀರ್ ಆಹಾರವಿದ್ದೆ ಇದೆಅವರಿಗೆ ನಾವು ತಂದು ಎರಡು ಊಟಗಳನ್ನು ಕೊಟ್ಟೆವು. ಅವರು ಒಂದನ್ನು ಮಾತ್ರ  ತೆಗೆದುಕೊಂಡು ಇನ್ನೊಂದನ್ನು ನಯವಾಗಿ ನಿರಾಕರಿಸಿದರು.  ಒತ್ತಾಯ ಮಾಡಿದರೂ ಒಪ್ಪಲಿಲ್ಲ. "ನನ್ನದು ಮಾತ್ರ ಕೊಡಿ . ನನ್ನ ಹೆಂಡತಿ ಮನೆಯಲ್ಲಿ ಇಲ್ಲ . ಅದಕ್ಕೆ ಅವಳ ಪಾಲಿನದು ಬೇಡ." ಅವರ ನೇರವಂತಿಕೆ ನೋಡಿ ಮೆಚ್ಚುಗೆಯಾಯಿತು.
ಇಲ್ಲಿನ ದೃಶ್ಯ ನನಗೆ ಚೆನ್ನೈನಲ್ಲಿ  ಎನ್ ಆರ್ ಐ ಹಿರಿಯನಾಗರೀಕರ ನೆನಪುತಂದಿತು. ಮೈಲಾಪುರದಲ್ಲಿ ಅನೇಕ ಪ್ರತಿಷ್ಠಿತ ಬಡಾವಣೆಗಳಲ್ಲಿ  ಭೂತ ಬಂಗಲೆಯಂಥಹ ಮನೆಗಳಲ್ಲಿ ಒಬ್ಬರೋ ಇಬ್ಬರೋ ವಯಸ್ಸಾದ ಹಿರಿಯರು. ಅವರ ಮಕ್ಕಳೆಲ್ಲಾ ಅಮೇರಿಕಾ, ಇಂಗ್ಲೆಂಡ್ ಮುಂತಾದ ವಿದೇಶಗಳಲ್ಲಿ.  ಅವರಿಗೆ ಯಾವುದಕ್ಕೂ ಕೊರತೆಯೆ ಇಲ್ಲ. ಆದರೆ ನೋಡಿಕೊಳ್ಳಲು ಆತ್ಮೀಯರೆ ಇಲ್ಲ. . ಅವರದೇನಿದ್ದರೂ ಕಾಂಪ್ಯೂಟರಿನಲ್ಲಿ  ವಾರಂತ್ಯದಲ್ಲಿ  ಮಾತನಾಡಿದರೆ ಮುಗಿಯಿತು.
.ಮನೆಯ ಹೊರಗಿನ ಕೆಲಸಕ್ಕೆ ಒಬ್ಬ ಆಳು ಬಂದು ಶುಚಿ ಮಾಡಿ ಹೋಗುವಳು. ಬೆಳಗ್ಗೆ ಹನ್ನೊಂದು ಗಂಟೆಗೆ ಮಾಮಿ ಮನೆಯಿಂದ ಊಟದ ಡಬ್ಬಿ. ಅಲ್ಲಿ ರಾತ್ರಿಯಂತೂ ಊಟವೆ ಇಲ್ಲ. ಏನೋ ಅಲ್ಪಾಹಾರ.ಟಿವಿ ಆಯಿತು ತಾವಾಯಿತು. ಆಗೀಗ ಕೈ ಕಾಲು ಗಟ್ಟಿಇದ್ದವರು ಸಂಗೀತ ಕಚೇರಿ , ದೇವಸ್ಥಾನ ಎಂದು ಹೋಗುವರು. ಆದರೆ ಅಕ್ಕ ಪಕ್ಕದವರು ಮಾತನಾಡಿಸುವರು. ಆಗೀಗ ನೆಂಟರು , ಗೆಳೆಯರು ಬರುವರು ಅದೆ ಅವರಿಗೆ ದೊಡ್ಡ ಸಂತೋಷದ ಸಂಗತಿ.  ಆದರೆ ಅಮೇರಿಕಾದಲ್ಲಿ ಅದೆಲ್ಲ ಇಲ್ಲ
 ಯಾರಿಗೆ ಯಾರೋ ಪುರಂಧರ ವಿಠಲ.!   .
ಬರುತ್ತಾ ನನ್ನಗೆಳೆಯ ವಿವರಣೆ ನೀಡಿದ. ಐವತ್ತು ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ.ಒಟ್ಟುಕುಟುಂಬ ಇರುತಿದ್ದವು.ಆಗ ಎಲ್ಲರೂ ಒಟ್ಟಿಗೆ ಇರುತಿದ್ದರು. ವಯಸ್ಸಾದವರನ್ನು ನೋಡಿಕೊಳ್ಳುವ ಪ್ರಶ್ನೆಯೆ ಏಳುತ್ತಿರಲಿಲ್ಲ. ಅವರೂ ಕುಟುಂಬದ ಹಿರಿಯ ಸದಸ್ಯರಾಗಿದ್ದರು. ಆದರೆ ವಿದ್ಯೆ ಕಲಿತು ಉದ್ಯೋಗಕ್ಕಾಗಿ ದೂರ ದೂರ ಹೋಗುವುದು ಮೊದಲಾಯಿತು . ಅಲ್ಲದೆ ವಾರಕ್ಕೆ ೬೦-೭೦ ಗಂಟೆ ಕೆಲಸಮಾಡುವ ಗತಿ ಬಂದಿತು. ಇನ್ನು ವಯಸ್ಸಾದ ತಾಯಿತಂದೆಯರನ್ನು ನೋಡಲು ಸಮಯ ಎಲ್ಲಿ.?ಅದಕ್ಕೆ ತಕ್ಕಂತೆ ಸಾಮಾಜಿಕ ಭದ್ರತಾ ಯೋಜನೆಯ ಅಡಿಯಲ್ಲಿ ಹಿರಿಯ ನಾಗರೀಕರಿಗೆ ಹಣ ಕಾಸಿನ ನೆರವು,  ವೈದ್ಯಕೀಯ ಸೌಲಭ್ಯವಿದೆ.  ಯಾವಾಗ ಆರ್ಥಿಕ ಅವಲಂಬನೆ ಇಲ್ಲವಾಯಿತೋ ಆಗಲೆ ಕೌಟುಂಬಿಕ ಸಂಬಂಧಗಳು ಸಡಿಲವಾಗತೊಡಗಿದವು.   ಹದಿನಾರನೆ ವಯಸ್ಸಿಗೆ ಹಕ್ಕಿಯಂತೆ ಹಾರಿ ಹೊರಗೆ ಹೋಗಿ ಸ್ವತಂತ್ರ ಜೀವನ ನಡೆಸಿ ಮನ ಬಂದವರ ಜತೆಇದ್ದು ಜೀವನ ಸಾಗಿಸುವವರಿಗೆ ವಯಸ್ಸಾದ ಹೆತ್ತವರ ನೆನಪಾದರೂ ಇರುವುದು ಹೇಗೆ? ಹತ್ತಿರದಲ್ಲಿದ್ದರೆ, ವರ್ಷಕ್ಕೊಂದು ಸಲ ಮದರ್‌ಸ್ ಡೇ  ದಿನದಂದು ತಾಯಿಗೆ , ಫಾದರ್ಸ ಡೇ ಯಂದುತಂದೆಗೆ ಕೂಡುಗೆ ನೀಡಿ ಶುಭಾಶಯ ಕೋರುವರು.ಸಾಧ್ಯವಾದರೆ ಒಟ್ಟಿಗೆ ಊಟ ಮಾಡುವರು.   ಮತ್ತೆ ಮುಂದಿನ ವರ್ಷದವರೆಗೆ ನೆನಪೆ ಇರುವುದಿಲ್ಲ.ಅದೂ ಹತ್ತಿರದಲ್ಲಿದ್ದರೆ, ಅನುಕೂಲವಾದರೆ. ಇಲ್ಲವಾದರೆ ಒಂದು ಹೂವಿನ ಜತೆ ಪತ್ರ ಕಳುಹಿಸಿದರೆಫೋನು ಮಾಡಿದರೆ ಹೆತ್ತವರು ಹಿರಿಹಿರಿ ಹಿಗ್ಗುವರುಕಾರಣ ಅನೇಕ ತಾಯಿತಂದೆಯರಿಗೆ ತಮ್ಮಮಕ್ಕಳು ಎಲ್ಲಿರುವರು? ಏನು ಮಾಡುವರು ಎಂಬುದೇ  ಗೊತ್ತಿರುವುದಿಲ್ಲ.ಕೆಲವರಿಗಂತೂ ಅವರ ಸಮಾಚಾರ ಸಿಗುವುದು ಪೋಲಿಸರಿಂದ . ಅವರು ಯಾವುದೋ ಅಪರಾಧ ಪ್ರಕರಣದಲ್ಲಿ ಸಿಕ್ಕಹಾಕಿಕೊಂಡು ಜೈಲು ಪಾಲಾದಾಗ ನಡೆಸುವ  ತನಿಖೆಯಿಂದ ತಾಯಿತಂದೆಯರಿಗೆ ವಿಷಯ ತಿಳಿಯುವುದು. ಅದೂ ಅವರು ಒಟ್ಟಿಗೆ  ಇದ್ದರೆ.
ಅನೇಕರಿಗೆ ಹಣಕಾಸಿನ ಕೊರತೆ ಇದೆ ಎಂಬ ಮಾತು ನಿಜ. ಆದರೆ ದುಡಿಯುವವರಿಗೆ  ದುಡ್ಡು ಸಿಕ್ಕೇ ಸಿಗುವುದು. ಸರ್ಕಾರವೆ ಇಲ್ಲಿನ ನಾಗರೀಕರಿಗೆ ೧೮ ತಿಂಗಳು ಕಾಲ ನಿರುದ್ಯೋಗ  ಭತ್ಯ ನೀಡುವುದು. ನಿರ್ಗತಿಕರಾದರೆ  ಫುಡ್‌ಸ್ಟ್ಯಾಂಪ್ಸ  ಕೊಡುವುದು. ಸರ್ಕಾರ ಕೊಡುವ ಈ ಚೀಟಿಗಳನ್ನು ಯಾವ ಅಂಗಡಿಯಲ್ಲಾದರು ಬಳಸಬಹುದು ಆದರೆ ಆಹಾರ ಪದಾರ್ಥಗಳನ್ನು ಮಾತ್ರ  ಕೊಳ್ಳಬಹುದು. ಅಂದರೆ ಇಲ್ಲಿ ಅಮೇರಿಕಾದ ನಾಗರೀಕರು ಹಸಿವಿನಂದ  ಸಾಯುವ ಸಂಭವ ಬಹು ಕಡಿಮೆ.
 ಇಲ್ಲಿ ಕೆಲಸ ಮಾಡುವವರಿಗೆ ಆದಾಯ ಬಂದೆ ಬರುವುದು. ಆದರೆ ದುಡಿಮೆ ಮಾಡಿದ ಹಣವನ್ನು ದುರ್ವ್ಯಸನಕ್ಕೆ ಹಾಳು ಮಾಡುವವರೆ ಬಹಳ. ಒಂದು ಸಲ ದುರಭ್ಯಾಸ ಅಂಟಿದರೆ ನಂತರ ತಮ್ಮ ಗೀಳಿನ ಸಲುವಾಗಿ ಹಣಹೊಂದಿಸಲು ಅಪರಾಧಕ್ಕೆ ಎಳಸಿ ವಿಷವರ್ತುಲದಲ್ಲಿ  ಸಿಲುಕುವರುವರು. ಇದಕ್ಕೆಲ್ಲಕಾರಣ  ಒಡೆದ ಕುಟುಂಬಗಳು,ಮುರಿದು ಹೋದ ಸಂಬಂಧಗಳು ಮತ್ತು ನಿರಾಸಕ್ತ ಸಮಾಜ .ಹದಿಹರೆಯದಲ್ಲೆ ಹೇಳಲು ಹಿರಿಯರಿಲ್ಲ . ಕೇಳಲು ಕಿರಿಯರು ತಯಾರಿಲ್ಲ ಅದರ ಪರಣಾಮವೆ ಹೆಚ್ಚಿದ ಅಪರಾಧ ಮತ್ತು ಡ್ರಗ್‌ದುರ್ಬಳಕೆ
 ಅವರು ಹೇಳಿದ ಮಾತು ಮನ ತಟ್ಟಿತು."ಭೌತಿಕ ಅಗತ್ಯಗಳನ್ನು ಹೇಗಾದರೂ ಪೂರೈಸಬಹುದು. ಆದರೆ ಮಾನಸಿಕ ಮತ್ತು ಭಾವನಾತ್ಮಕ ಅಗತ್ಯಗಳ ಕೊರತೆಯಿಂದ ಯುವಪೀಳಿಗೆ ಸೊರಗುತ್ತಿದೆ.ಅವರಿಗೆ ಜೀವನದ ಮೇಲೆ ನಂಬುಗೆಯೆ ಇಲ್ಲವಾಗಿದೆ. ಅದಕ್ಕೆ ನಾವು ಮೊದಲು ಅವರಿಗೆ ದೇವರಲ್ಲಾದರೂ ನಂಬಿಕೆ ಮೂಡಿಸಿದರೆ ಸಮಸ್ಯೆ ತನ್ನಿಂದ ತಾನೆ ಪರಿಹಾರವಾಗುವುದು. ಈಗ ಚರ್ಚಗಳು ಮೊದಲು ಮಾಡಬೇಕಾದದ್ದೂ ಅದೆ ಕೆಲಸ. ಸಾಲ್ವೇಷನ್ ಆರ್ಮಿಯವರು ಈ ದಿಶೆಯಲ್ಲಿ ಕೆಲಸ ಮಾಡುತಿದ್ದಾರೆ. ಆದರೆ ಇವರೆಲ್ಲ ಚರ್ಚಿಗೆ ಬರಬೇಕು ಎಂದು ಕಡ್ಡಾಯ ಮಾಡಲಾಗುವುದಿಲ್ಲ. ಅವರ ಮನಸ್ಸು ಪರಿವರ್ತನೆಗೆ ಪ್ರಯತ್ನ ಮಾಡ ಬೇಕು. ಅನ್ನ ದೇವರಿಗೀಂತ ಇನ್ನು ದೇವರಿಲ್ಲ. ಮೊದಲು ಅದನ್ನು ಕೊಡುವ. ನಂತರ ಇನ್ನೆಲ್ಲ  "    ಸತ್ಯವೆನಿಸಿತು  ಅವರ ಮಾತು




No comments:

Post a Comment