Monday, November 19, 2012

ಸಹಜೀವನ


                                 
ಹಳ್ಳಿ ಎಂದರೆ  ಎಂದರೆ ಸಹಬಾಳ್ವೆಗೆ ಇನ್ನೊಂದು ಹೆಸರಾಗಿತ್ತು. ಜನ ಮತ್ತು ದನ ಮಾತ್ರವಲ್ಲ ಕ್ರಿಮಿಕೀಟಗಳುಧಾರಾಳವಾಗಿ ಮನೆಯಲ್ಲಿ ಸಹಜೀವನ ನಡೆಸುತ್ತಿದ್ದವು. ಇಲಿ ಹೆಗ್ಗ ಣ, ನೊಣ ,ತಗಣಿ .ಸೊಳ್ಳೆ, ಉಣ್ಣೆ ಮತ್ತು ಕೂರಿಳ ಕಾಟ ಹೇಳ ತೀರದು.. ಆದರೆ ಒಂದು ಸಲ ತಗಣಿಗಳೆ  ನಮ್ಮ ಮನೆ ಉಳಿಸಿದ್ದು ಮಾತ್ರ  ನನಗೆ ಚೆನ್ನಾಗಿ  ನೆನಪಿದೆ. ಅಂದು ರಾತ್ರಿ ಕಳ್ಳರು ಬಂದು ನಮ್ಮ ಮನೆಯ ಗೋಡೆಯಲ್ಲಿನ  ಕಿಟಕಿಯ ಸರಳನ್ನು ಬಗ್ಗಿಸಿ ಮುರಿದಿರುವರು. ಇನ್ನೇನು ಒಳಗೆ  ಇಳಿಯಬೇಕು. ನಮ್ಮಅಮ್ಮ ಎದ್ದು  ಕೈ ನಲ್ಲಿ  ಚಿಮಣೀ  ಬುಡ್ಡಿ  ಹಿಡಿ ದು ತಗಣಿ ಕೊಲ್ಲುವ  ಕಾಯಕದಲ್ಲಿರುವುದು ಕಾಣಿಸಿದೆ. ಕಂಬದಿಂದ ಕಂಬಕ್ಕೆ ಗೋಡೆಯಿಂದ  ಗೋ ಡೆಗೆ ಓಡಾಡುತ್ತಾ ತಮ್ಮಕೆಲಸ ಮುಂದುವರಿಸಿದ್ದಾರೆ.  ಕಳ್ಳರು ಕಿಟಕಿಯಿಂದ ಒಳಗೆ ಧುಮುಕಿದ್ದರೆ   ಆ ಮಾತೆ ಬೇರೆ  ಇತ್ತು. ಹಲ್ಲೆ ಮಾಡಿ ಹೆದರಿಸಿ ಕಳ್ಳತನ ಮಾಡಬಹುದಾಗಿತ್ತು.  ಆದರೆ ಇನ್ನೂ ಮನೆಯೊಳಗೆ ಇಳಿದಿಲ್ಲ.  ಹಾಗಾಗಿ  ಧೈರ್ಯ  ಸಾಲದೆ  ಕಾಯುತ್ತಾ ಕುಳಿತಿರುವರು.. ಕೋಳಿ ಕೂಗುವ  ತನಕ ಅಮ್ಮ ದೆವ್ವದ ತರಹ ಒಂದು ಕೈನಲ್ಲಿ ದೀಪ ಹಿಡಿದು  ಮನೆ ತುಂಬ ಓಡಾಡುತ್ತಲೆ ಇದ್ದಾರೆ. ಕಳ್ಳರು  ಅಮ್ಮನಿಗೆ ಶಾಪ  ಹಾಕಿದರೋ,  ತಗಣಿಗೆ  ಶಾಪ  ಹಾಕಿದರೋ  ತಿಳಿಯದು.ಕಿಟಕಿಯ ಸರಳನ್ನು ಅಲ್ಲಿಯೆ ಬಿಟ್ಟು  ಪೆಂಟಿ ಕಿತ್ತಿದ್ದಾರೆ. ಬೆಳಗ್ಗೆ  ತಿಪ್ಪೆಗುಂಡಿಗೆ ಹೆಂಡಿಗಸ  ಹಾಕುವವರು ನಮ್ಮ  ಗೋಡೆಯ ಪಕ್ಕದ ಓಣಿಯಲ್ಲೆ ಹೋಗಬೇಕು.ಅವರು ನೋಡಿದರೆ ಮುರಿದ ಕಿಟಕಿ ಒಂದು  ಹಾರೆ ಮತ್ತು ಒಂದೆರಡು ಕಣಗ ಅಲ್ಲಿ ಬಿದ್ದಿವೆ.ಅವರು ಬಂದು ಹೇಳಿದಾಗಲೆ  ನಮಗೆ  ಗೊತ್ತಾಗಿದೆ.  ನಮ್ಮಮನೆ  ಕಿಟಕಿ  ಮುರಿದು ಕಳ್ಳತನಕ್ಕೆ ಪ್ರಯತ್ನವಾಗಿದೆ  ಎಂದು. ಅಂತೂ  ದೇವರು  ತಗಣಿ ರೂಪದಲ್ಲಿ ಬಂದು  ನಮ್ಮನ್ನು ಕಾಪಾಡಿದ. ಎಂದು ತುಪ್ಪದ ದೀಪ ಹಚ್ಚಿದರು. ಹಾಗೆಂದು ತಗಣಿಗೆ ಮಾತ್ರ ಕರುಣೆ ತೋರಿಸಲಿಲ್ಲ.
ತಗಣಿಗಳೆಲ್ಲ ಪ್ರಖ್ಯಾತವಾದವು  ರೈಲಿನಲ್ಲಿನ ತಗ ಣಿಗಳು. ಒಂದು ಸಲ ರೈಲುಪ್ರಯಾಣ  ಮಾಡಿದರೆ  ಮುಗಿಯಿತು.ಹೆದ್ದುಮ್ಮಿಯಂತಹ ತಗಣಿಗಳು ಮನೆಯಲ್ಲಿ. ಹಲವರ ರಕ್ತದ ರುಚಿ  ಕಂಡ ಅವು ಗಾತ್ರದಲ್ಲಿ ದೊಡ್ಡದಾಗಿರುತಿದ್ದವು. ತಗಣಿನಿವಾರಕ ಔಷಧಿಗಳು ಆಗ ಬಹಳ ವಿರಳ.  ತಗಣಿ ಎಣ್ಣೆ ಇದ್ದರೆ ಕುಡಿದು ಸಾಯುವ ಘಟನೆಗಳೆ ಕೇಳಿಬರುತಿದ್ದವು.ಮನೆಯ  ಜನರಿಗೆ ರೋಗ ಬಂದರೆ ದೇವರಿಟ್ಟಂತೆ ಆಗುವುದು ಎಂಬ ಜನ ತಗಣಿ ಕೊಲ್ಲುವ ಔಷಧಿ ತರುವರೆ. ಅದೂ ಹಾಳು ಪ ಟ್ಟಣದಂತಹ ಮನೆಗಳು.ಅದರಲ್ಲಿ ಕಿಕ್ಕಿರಿದು ತುರುಕಿದ ಸಾಮಾನುಗಳು.ಕಟ್ಟಿಗೆಯ ಕುರ್ಚಿ ಮಂಚ, ಮೇಜು, ಕಂಬ ತೊಲೆ ಅದರೊಂದಿಗೆ ಗೋಡೆಯಲ್ಲಿನ ಬಿರುಕುಗಳೂ ತಗಣಿಗಳ ವಾಸಸ್ಥಾನ. ಯಾವ ಗೋಡೆನೋಡಿದರೂ ಬಿಳಿಯ ಮಧ್ಯ ಕೆಂಪು ಸಾರಿಸಿದಂತೆ ಗುರುತು. ಅದು ನಿದ್ದೆಗಣ್ಣಲ್ಲಿ ಎದ್ದು ಕೈಗೆ ಸಿಕ್ಕ ತಗಣಿಯ  ಒರೆದಾಗಿನ ಫಲ ಅದು. ಆಗ ಇನ್ನೂ ಟಿಕ್‌ 20 ಯಂತಹ ಪರಿಣಾಮಕಾರಿ ರಸಾಯನಿಕಗಳು ಇರಲಿಲ್ಲ.
ನಗರದವರನ್ನು ನೋಡಿ ಸೊಳ್ಳೆ ಪರದೆ ಕಟ್ಟಿಕೊಂಡರೆ ಬೆಳಗಾದಾಗ ನೋಡಿದರೆ ಮೇಲಿನ ಮೂಲೆಯಲ್ಲಿ ಕುಪ್ಪೆ ಕುಪ್ಪೆ ತಗಣಿ.  ತಗಣಿ ಮನಯೊಡೆದ ಕಥೆ ಹೇಳಿ ನಮ್ಮವರು ನಗುತಿದ್ದರು ಹಳ್ಳಿಯ ಸಾಹುಕಾರರೊಬ್ಬರು ಪ್ಯಾಟೆಯ ಚಂದುಳ್ಳ ಹುಡುಗಿಯನ್ನು ಮದುವೆಯಾಗಿ ಹಳ್ಳಿಯ ತಮ್ಮ ಭವ್ಯವಾದ ಮನೆಗೆ ಕರೆತಂದರು. ಅವರ ಮಲಗುವ ಕೋಣೆಯಲ್ಲಿ ಚಪ್ಪರ ಗಾಲಿನಮಂಚ, ನಾಲಕ್ಕಾರು ಕುರ್ಚಿಗಳು ಜೊತೆಗೆರಡು ಮೇಜು ಅದರ ಮೇಲೆ ಮೆತ್ತನೆಯಲೇಪು.ಆಹ ಅರಮನೆ ಅಂದಕೊಂಡಳು ನಗರದ ನಾರಿ.ಪೆಟ್ರೊಮ್ಯಾಕ್ಸದೀಪ, ತಟ್ಟೆ ತಟ್ಟೆ ತಿಂಡಿ  ಹೂವು ಹಣ್ಣು ಸ್ವರ್ಗ ಭೂಮಿಗೆ ಇಳಿದು ಬಂದಿತ್ತು ರಾತ್ರಿಹಾಡು ಹಸೆ ಮುಗಿಸಿ ಒಳಗೆ ಕಳುಹಿಸದಾಗ ಶುರವಾಯಿತು ತಗಣಿಯ ಕಡಿತ.ರಾತ್ರಿಯೆಲ್ಲಾ ಸುಖದ ಅಮಲಿನಲ್ಲಿರಬೇಕಾದವರು ಮೈಎಲ್ಲಾ ಕೆಂಪಾಗಿಸಿಕೊಂಡು ನಿದ್ದೆ ಇಲ್ಲದೆ ತಗಣಿಯ ಬೇಟೆಯಲ್ಲಿ ಕಾಲ ಕಳೆದಿದ್ದರು. ಆ ಹುಡುಗಿ ಬೆಳಗಾದೊಡನೆ ತವರಿಗೆ ಹೊರಟವಳು ನಗರದಲ್ಲಿ ಮನೆ ಮಾಡಿದರೆ ಮಾತ್ರ ಬರುವೆ ಎಂದು ಹಟ ಹಿಡಿದಳು. ಅನಿವಾರ್ಯವಾಗಿ  ಅಲ್ಲೆ ಹೋಗಿ ಇರಬೇಕಾಯಿತು ಹೊಸ ದಂಪತಿಗಳು.
 ಇನ್ನು ಚಿಕ್ಕವರು ದೊಡ್ಡವರು ಎಂಬ ಭೇದ ಇಲ್ಲದೆ ಎಲ್ಲ ಹೆಂಗಸರ  ತಲೆಯಲ್ಲೂ ಮನೆ ಮಾಡಿರುವ ಕೀಟ ಎಂದರೆ  ಹೇನು. ಎಲ್ಲರೂ ತಲೆ ಪರಪರ ಕೆರೆಯುವವರೆ. ಹೆಣ್ಣು ಹುಡುಗೆಯರಿಗೆ ಮಂಡಿ  ಮಟ್ಟ  ಕೂದಲು. ಅದರ  ಆರೈಕೆಗೆ ಹೊತ್ತು ಸಾಲದು.  ಅನುಕೂಲವಿದ್ದವರು ವಾರಕೊಮ್ಮೆ ಎಣ್ಣೆ  ನೀರು  ಹಾಕಿಕೊಂಡು  ತಲೆ ಸ್ನಾನ  ಮಾಡುವರು.ನಂತರ ಬಿಸಿಲಲ್ಲಿ  ತಲೆ ಒಣಗಿಸಿ ಕೊಂಡು ಜಾಕಣಿಯಲ್ಲಿ ಕೆಂಡಹಾಕಿ ಅದರಲ್ಲಿ ಹಾಲು ಮಡ್ಡಿ ಸಾಂಬ್ರಾಣಿ  ಹಾಕಿದರೆ ದಟ್ಟವಾದ ಸುವಾಸನೆಯ ಹೊಗೆ ಬರುವುದು.ಅದರ ಮೇಲೆ  ಕವಚಿದ ದೊಡ್ಡ ಬಿದಿರ ಬುಟ್ಟಿಯ ಮೇಲೆ  ಕೂದಲು ಹರವಿ ಒಣಗಿಸುವರು. ಅವರಿಗೆ  ಹೇನಿನ ಸಮಸ್ಯೆ ಇರತ್ತಿರಲಿಲ್ಲ. ಆದರೆಜನ ಸಾಮಾನ್ಯರಿಗೆ  ಮಾತ್ರ ಅದರ ಕಾಟ ತಪ್ಪಿದ್ದಲ್ಲ. ಕೂದಲಿದ್ದ ಮೇಲೆ  ಹೇನು ಇರುವುದು ಸಾಮಾನ್ಯ ಎಂಬದನ್ನು ಒಪ್ಪಿಕೊಂಡಿದ್ದರು.ಅದಕ್ಕೆ ಒಂದೆ ಹಾದಿ ಎಂದರೆ  ಪುರುಸೊತ್ತು  ಇದ್ದಾಗಲೆಲ್ಲ ತಲೆ ನೋಡ ವುದು. ಅದರಲ್ಲೂ ಹಿರಿಯಹೆಂಗಸರು  ಹೆಣ್ಣು ಹುಡುಗಿಯರನ್ನುತಮ್ಮ ಮುಂದೆ  ಕೂಡಿಸಿ  ಕೊಂಡು ಅವರ ತಲೆಯನ್ನು  ತಮ್ಮ   ಮೊಣಕಾಲ ನಡುವೆ ಸಿಗಿಸಿಕೊಂಡು ಕೂದಲ ನಡುವಿನ ಹೇನನ್ನು ಹೆಕ್ಕಿ  ಹೆಕ್ಕಿ ಕುಕ್ಕುವರು .ಅದಕ್ಕೆ  ಗಂಟೆ ಗಟ್ಟಲೆ  ಕಾಲ ವ್ಯಯ ಮಾಡುವರು. ಕೆಲವರು ಸಾಕಿದ  ಕೋತಿಗಳ  ಮುಂದೆ ತಲೆಬಾಗಿಸಿ  ಕೂತರೆ ಸಾಕು ಅವು   ಹೆಕ್ಕಿ ಹೆಕ್ಕಿ  ತಿನ್ನುವವು. ಅವು ತೀರ ಹೆಚ್ಚಾದರೆ ದೇವರಿಗೆ ಹರಸಿಕೊಂಡು ಮಂಡೆ ಕೊಡುವರು. ಹೇನಿನ ಹಣಿಗೆ  ಎಲ್ಲರ ಮನೆಯಲ್ಲಿ ಇರಲೆ ಬೇಕು.ಹೇನಿನ  ಮೊಟ್ಟೆಗಳನ್ನು  ಸೀರು ಎನ್ನುವರು.ಅವು ಬೆಳ್ಳಗೆ ಸಾಸಿವೆಗಿಂತ ಚಿಕ್ಕವು ಕೂದಲಿಗೆ ಅಂಟಿ ಕೊಂಡಿರುವ..ಅವನ್ನು ತೆಗೆಯಲು ವಿಶೇಷವಾದ ಸೀರು  ಹಣಿಗೆಯೆಬೇಕು. ಅಗಿನ್ನೂ ಔಷಧಿಗಳು ಬಂದಿರಲಿಲ್ಲ. ಸೀತಾಫಲದ ಬೀಜವನ್ನುಪುಡಿ ಮಾಡಿ ಕೊಬ್ಬರಿ  ಎಣ್ಣೆಯಲ್ಲಿ ಬೆರಸಿ  ರಾತ್ರಿ ಚೆನ್ನಾಗಿ ತಲೆಗೆ ಹಚ್ಚಿಕೊಂಡು  ಬೆಳಗ್ಗೆ ಎರೆದು ಕೊಂಡರೆ ಅವುಗಳು ಸಕುಟುಂಬವಾಗಿ ನಾಶವಾಗುವವು.

ಸೊಳ್ಳೆ ಹಳ್ಳಿ ಜೀವನದ  ಅವಿಭಾಜ್ಯ ಅಂಗ. ಕತ್ತಲಾಯಿತೆಂದರೆ ಗಂಯ್‌ ಎಂದು ಮುತ್ತುವವು. ಅವನ್ನು ಕಡಿಮೆ ಮಾಡಲು ಸಂಜೆ ಬೇವಿನ ಹೊಗೆ ಹಾಕುವರು. ಇತ್ತೀಚೆಗೆ ಸರ್ಕಾದವರೆ ಡಿಡಿ ಟಿ ಸಿಂ ಪಡಿಸುತಿದ್ದರು.
. ಆದರೆ ಹಳ್ಳಿಯಲ್ಲಿ  ಅವರಿಗೆ ಅಸಹಕಾರ. ಅವುಗಳಿಂದ ಮನೆಯಲ್ಲಿರುವ ಕಾಳು ಕಡಿ ಹಾಳಾಗಬಹುದು ಎಂಬ ಭಯ. ಆದ್ದರಿಂದ ದನದ ಕೊಟ್ಟಿಗೆಯಲ್ಲಿ  ತುಸು ಹೊಡೆಸಿದ   ಶಾಸ್ತ್ರ ಮಾಡಿ ಕೈಮುಗಿದು  ಕಳುಹಿಸುವರು. ಮತ್ತೆ  ಯಥಾ ರೀತಿ ಸೊಳ್ಳೆಗಳ  ಸಾಮ್ರಾಜ್ಯ. ತುಸು ಅನುಕೂಲಸ್ಥರು  ಸೊಳ್ಳೆ ಪರದೆ ಬಳಸುತಿದ್ದರು.
ಇನ್ನು  ಕೂರೆ ಸೀರೆಗೆ ಅಂಟುವ ಪರೋಪ ಜೀವಿ. ಅತಿ ಬಡತನದಿಂದ ಹೆಚ್ಚು ಸೀರೆ ಇರದವರು ಅದನ್ನು ಪದೇ  ಪದೇ ವಗೆಯುಲಾಗುತ್ತಿರಲಿಲ್ಲ. ಆಗ  ಅಲ್ಲಿ ಕೂರಿ ಬೀಳುತಿದ್ದವು. ಅದರಿಂದಲೆ  ಶುಚಿಯಾಗಿ  ಇಟ್ಟುಕೊಂಡರೆ  ಅದರ  ನಿವಾರಣೆಯಾಗುತಿತ್ತು. ಖರೆ ಎಂದರೆ ಬಡತನದ ಇನ್ನೊಂದು ಹೆಸರು.ಕೂರೆ.
 ಇನ್ನುಉಣ್ಣೆ ದನಗಳಿಗೆ ಕಾಡುವ ಪರೋಪಜೀವಿ.ಅದು  ಮನುಷ್ಯರಿಗೂ ಹತ್ತುತಿತ್ತು. ಇನ್ನು ಇಲಿ    ಹೆಗ್ಗಣಗಳ ಕುರಿತು  ಹೇಳುವ ಹಾಗೆ ಇಲ್ಲ.ಮಣ್ಣಿ ಮನೆಯಲ್ಲಿ ಮಾಳಿಗೆಯಲ್ಲಿ  ಇಲಿಗಳ ಓಡಾಟವಾದರೆ ನೆಲದ ಕೆಳಗೆ   ಹೆಗ್ಗಣಗಳ ದಾಳಿ. ಅವುಗಳು  ತೋಡುವ  ಗುದ್ದು ಪುಟ್ಟಿಗಟ್ಟಲೆ   ಮಣ್ಣು ಹಾಕಿದರೂ ತುಂಬುತ್ತಿರಲಿಲ್ಲ. ದವಸ ಧಾನ್ಯಗಳು ಅವುಗಳ ಹಾವಳಿಗೆ ಈಡಾಗುವುದು  ಬಹಳ . ಅದರಿಂದ ಎಲ್ಲರ ಮನೆಯಲ್ಲಿ  ಬೆಕ್ಕು ಸಾಕುವರು. ಹಾಲು ಹೈನು ಸಮೃದ್ಧಿ ಇದ್ದಮನೆಯಲ್ಲಿ ಅವಕ್ಕೆ ಹಾಲು ಮೊಸರು ಬೆಣ್ಣೆ ಕದಿಯುವುದು. ಸುಲಭ. ಅದಕ್ಕೆ ಕಷ್ಟಪಟ್ಟು ಇಲಿ ಹಿಡಿದು ಮಾಂಸಾಹಾರಿಗಳಾಗುವುದಕ್ಕಿಂತ ಹಾಲು ಮೊಸರು ಕುಡಿದು ಸಸ್ಯಾಹಾರಿಗಳಗಿರುವ ಬೆಕ್ಕುಗಳೆ ಜಾಸ್ತಿ.
ಹಂದಿಗಳಂತೂ ನಮ್ಮೂರಲ್ಲಿ ಅರೋಗ್ಯ ಇಲಾಖೆಯ ಕೆಲಸವನ್ನುಬಹುಚೆನ್ನಾಗಿ ಮಾಡುವವು.ಯಾರ ಮನೆಯಲ್ಲೂ ಕಕ್ಕಸು  ಇಲ್ಲ.  ಎಲ್ಲರೂ ಹೊರಗಡೆಗೆ  ಹೋಗುವರು. ಗಂಡಸರು ಬಯಲ ಕಡೆ ಇಲ್ಲವೆ ಹೊಲಕ್ಕೆ ಹೋದರೆ , ತಿಪ್ಪೆಗುಂಡಿಯೇ ಹೆಂಗಸರ ಸಾಮೂಹಿಕ ಸಂಡಾಸು. ಅಲ್ಲಿ ಹಂದಿಗಳ  ಹಾವಳಿ ಹೇಳ ತೀರದು ಕೂಡುವುದೆ ತಡ  ಓಡಿ ಬರುವವು.  ಅವಕ್ಕೆ  ಬಹು  ಆತುರ.  ಬಿಸಿಬಿಸಿ ಯಾದ್ದನ್ನು ತಿನ್ನುವ ಹಂಬಲ. ಅದಕ್ಕೆ ಕೆಲವರು  ಕೈನಲ್ಲಿ  ಕೋಲು  ಹಿಡಿದು  ಹೋಗುವವರೂ  ಇದ್ದರು. ಅದರೆ ಅವುಗಳಿಗೆ  ಹೊಡೆಯುವ ಮಾತೆ ಇಲ್ಲ .  ಹೆದರಿಸಲು ಮಾತ್ರ ಕೋಲು . ಆದರೆ ಅವು ಅಕಸ್ಮಾತ್‌ ಮನೆ  ಹೊಕ್ಕರೆ  ಮತ್ತೆ  ಹೊರಗೆ   ಹೋಗುವ ಅವಕಾಶ ಬಹು ಕಡಿಮೆ.   ಅಂದರೆ ಅವನ್ನು ಕೊಂದು ತಿನ್ನುತ್ತಿದ್ದರು ಎಂದಲ್ಲ.  ನಮ್ಮ  ಕಡೆ ಹಂದಿ ಮಾಂಸ ಹೆಚ್ಚು  ಜನ ಪ್ರಿಯಅಲ್ಲ.. ಅದನ್ನು ಮನೆಯಿಂದ ಹೊರಗೆ ಬಿಡದಿರಲು ಕಾರಣ ಅದು  ಲಕ್ಷ್ಮಿಯ ಸ್ವರೂಪ ಎಂಬ ಭಾವನೆ.. ಮನೆಗೆ ಬಂದ ಮಹಾಲಕ್ಷ್ಮಿಯನ್ನು ಹೊರಗೆ ಬಿಟ್ಟರೆ ಬಡತನ ಬರುವುದು  ಖಂಡಿತ..    .ಅದು ಮನೆಯಲ್ಲೆ ಇರಬೇಕು.ಅದಕ್ಕೆಅದನ್ನು ಹೊಡೆದು ಮನೆಯಲ್ಲಿಯೆ ಹೂತು ಹಾಕುವರು. ನಮ್ಮಲ್ಲಿ  ಅತಿ ಸಿರಿವಂತಿಕೆ ಇದ್ದವರನ್ನುಅವರ ಮನೆಯಲ್ಲಿ ಲಕ್ಷ್ಮಿ ಕಾಲು ಮುರಿದು ಕೊಂಡು ಬಿದಿದ್ದಾಳೆ  ಎನ್ನುವರು.  ಇದಕ್ಕೆ  ವಿರುದ್ಧವಾದ ನಂಬಿಕೆ  ಎಂದರೆ  ಕಾಗೆಯ ಬಗ್ಗೆ.   ಅದು .ತಲೆಗೆ ಕುಕ್ಕಿದರೆ ತಲೆ ಸ್ನಾನ ಮಾಡಿ ದೇವರಿಗೆ ದೀಪ ಹಚ್ಚಬೇಕು ಎನ್ನುವ  ಆಚರಣೆ.  ಕಾಗೆ  ಮನೆ ಹೊಕ್ಕರೆ ಕೇಡು ಕಟ್ಟಿಟ್ಟ ಬುತ್ತಿ  ಅದಕ್ಕೆ  ಮನೆಯನ್ನೇ  ಕೆಲದಿನ ಖಾಲಿ ಮಾಡುವರು.ಕಾಗೆಯನ್ನು ಕುರಿತ ಇನ್ನೊಂದು  ವಿಚಿತ್ರ ಕಲ್ಪನೆ ಎಂದರೆ ಕಾಗೆ ಕೂಟವನ್ನು ಅಂದರೆ  ಗಂಡು ಹೆಣ್ಣು ಕಾಗೆಗಳು ಒಂದಾಗುವುದನ್ನು  ಕಂಡರೆ  ಬಹಳ  ಕೇಡು ಎಂಬುದು ದೃಢವಾದ ನಂಬಿಕೆ.ಅದಕ್ಕೆ ಪರಿಹಾರವೆಂದರೆ ನಮ್ಮ ಆತ್ಮೀಯರಿಗೆ ಕಾಗೆ  ನೋಡಿದವರು ಸತ್ತು ಹೋಗಿರುವರು  ಎಂದು ಸುದ್ದಿ ಕಳುಹಿಸುವುದು.  ಅವರು ಅಳುತ್ತಾ ಕರೆಯುತ್ತಾ  ಬಂದು ನೋಡಿದರೆ ಸತ್ತಿರುವನು ಎನ್ನಲಾದವನು ನಗುತ್ತಾ ಕುಳಿತಿರುವ. ನಿಜ ವಿಷಯ ತಿಳಿದು ಅಳುತ್ತಾ ಬಂದವರು  ನಗುತ್ತಾ ಹೋಗುವರು.  ನಮ್ಮಪರಿಸರವನ್ನುಶುಚಿ ಮಾಡುವ ಪಕ್ಷಿ  ಕಾಗೆ. ಅದು ನಿಸರ್ಗದ ಝಾಡಮಾಲಿ. ಆದರೆ  ಅದರ ಬಗ್ಗೆ ಈ ಪಾಟಿ ಹೆದರಿಕೆಗೆ .ಕಾರಣ ಅದು ನವಗ್ರಹಗಳಲ್ಲಿ  ಅತಿ ಕ್ರೂರ ಎಂದು ಭಾವಿಸಲಾದ ಶನಿದೇವರ  ವಾಹನವಾಗಿದೆ  ಎಂಬ ನಂಬಿಕೆ  ಕಾರಣ. ಇನ್ನು ಒಂದು ಹೆಚ್ಚು ರೂಢಿಯಲ್ಲಿದ್ದ ಅಚರಣೆ  ಹಲ್ಲಿ ಶಾಸ್ತ್ರ. ಹಲ್ಲಿ ಮೈ ಮೇಲೆ ಬಿದ್ದರೆ ಅಪಶಕುನ ಎಂದು ಗಾಢವಾಗಿ ನಂಬಿದ್ದರು. ಅದೂ ದೇಹದ ಯಾವ ಭಾಗದಲ್ಲಿ ಬಿದ್ದರೆ ಯಾವ  ಫಲ ಎಂದು ಹೇಳುವ ಹಿರಿಯರು ಇದ್ದರು.  ಹಲ್ಲಿ ಮೇಲೆ ಬಿದ್ದರೆ ತಲೆ ಸ್ನಾನ ಮಾಡಿ ದೇವರಿಗೆ ನಮಸ್ಕಾರ ಮಾಡಬೇಕು. ಅದರಲ್ಲೂ ಯಾರಾದರೂ ಕಂಚಿಗೆ ಹೋಗಿ ಅಲ್ಲಿನ ದೇಗುಲದಲ್ಲಿರುವ ಬಂಗಾರದ ಹಲ್ಲಿ ಮುಟ್ಟಿ ಬಂದವರಿದ್ದರೆ ಅವರಿಗೆ ನಮಸ್ಕಾರ ಮಾಡಿದರೆ ದೋಷ ಪರಿಹಾರ .
ಬೆಳಗ್ಗೆ  ಕೋಳಿ ಕೋಗಿದ ಕೂಡಲೆ ಏಳುವುದು ವಾಡಿಕೆ.. ಹಿರಿಯರು ಮೊಸರು ಕಡೆದರೆ, ಹರೆಯದವರ ಕೆಲಸ ನೀರು ತರುವುದು. ನೀರು ದೂರದ  ಬಾವಿಯಿಂದ  ತರಬೇಕು. ಗಂಡಸರು ಹೆಗಲ ಮೇಲೆ  ಕೊಡ ಹೊತ್ತರೆ ಹೆಂಗಸರು ತಲೆಯ ಮೇಲೆ ಕೊಡ ಹೊರುವರು. ಅದಾದ  ನಂತರ ಎಲ್ಲರ ಮನೆಯಲ್ಲೂ ಪಟ ಪಟ ರೊಟ್ಟಿ ಬಡಿಯುವ ಸದ್ದು. ಹೊತ್ತು ಹುಟ್ಟುವ ಮೊದಲೆ  ಎತ್ತುಗಳ ಹೆಗಲ ಮೇಲೆ  ನೊಗ ಹಾಕಿ ರಂಟೆ ಕುಂಟೆ ನೇಗಿಲು  ಹೇರಿಕೊಂಡು ಗಳೆ ಹೊಡೆಯಲು ಹೊರಡುವರು. ಎತ್ತಿನ ಕೊರಳ ಗಂಟೆಯ ಗಣ ಗಣ ಸದ್ದು ನಮ್ಮನ್ನು ನಿದ್ದೆಯಿಂದ ಎಬ್ಬಿಸವುದು.  ಸಾಧಾರಣವಾಗಿ ಹೊಲದ ಕೆಲಸ ತಂಪು ಹೊತ್ತಿನಲ್ಲಿಯೇ ಪ್ರಾರಂಭಿಸಿ ಹೊತ್ತು ಏರುವುದರಲ್ಲಿ   ಕೆಲಸ  ಮುಗಿಸುವರು.ಮಧ್ಯಾಹ್ನದ  ಬಿರು ಬಿಸಲಲ್ಲಿ ಬಸವಣ್ಣಗೆ ದಣಿವಾಗ ಬಾರದೆಂಬ ಮುಂದಾಲೋಚನೆ.. ನಮಗೆ ಹೆಚ್ಚುಜಮೀನು ಇರಲಿಲ್ಲ. ಹಾಗಾಗಿ ಆರಂಬ ದ ಅವಶ್ಯಕತೆ ಇರಲಿಲ್ಲ.ಬಾಡಿಗೆ ಗಳೇವು ಪಡೆದು ಬೇಸಾಯ ಸಾಗಿಸುತಿದ್ದೆವು. ಆದರೆ ಒಂದಾದರೂ  ಕರೆಯುವ  ರಾಸು ಇರುತಿತ್ತು. ನಮ್ಮಮನೆಯ ಸುತ್ತ ಮುತ್ತ ರೈತರ ಮನೆಗಳು. ಹಾಗಾಗಿ ನಮಗೂ ಬೇಗ ಏಳುವ ಅಭ್ಯಾಸ. ಅದೂ ಅಲ್ಲದೆ  ಒಂದೊಂದು ದಿನ ಇನ್ನೂ ಮಲಗಿರುವಾಗಲೆ ತಲೆಬಾಗಿಲ ಚಿಲಕ ಕುಟ್ಟಿ ಎಬ್ಬಿಸುವರು. ಬಾಗಿಲು ತೆಗೆದಾಗ:
 ಯಮ್ಮಾ! ಎರಡು  ಬೆಂಕಿ ಕಡ್ಡಿ ಕೊಡು ಒಲೆಹೊತ್ತಿಸಬೇಕು ,ಎಂದು ಕೇಳಿ ಪಡೆಯುವರು.ಅವರ ನಮ್ಮ ನಡುವೆ  ಯಾವುದೆ ಸಂಕೋಚವಿರಲಿಲ್ಲ.  ಭಿನ್ನಬೇಧಗಳ  ಸುಳಿವಿರಲಿಲ್ಲ. ಅವರಲ್ಲಿ ಯಾರಿಗಾದರೂ ಅರಾಮ ಇಲ್ಲದೆ  ಹೋದರೆ,  ಬಾಯಿಕೆಟ್ಟು  ಹೋಗಿದೆ ಉಪ್ಪಿನಕಾಯಿ ಕೊಡಿ  ಎನ್ನುವರು.  ಬಾಣಂತಿ ಇದ್ದರೆ  ಅವರಿಗೆ ಬಾಯಿ ರುಚಿಗೆ ನಮ್ಮ ಮನೆಯ ಬೇಳೆ ಸಾರು ಬೇಕೆ ಬೇಕು. ಹಬ್ಬಹರಿ ದಿನದಲ್ಲಿ  ಹೋಳಿಗೆ ಮಾಡಿದ್ದರೆ ಅವರಿಗೆ ಸಿಹಿ  ಬೇಕಿಲ್ಲ ಆದರೆ ಎರಡು ಸೌಟು ಕಟ್ಟಿನ ಸಾರು  ಕೊಟ್ಟರೆ ತೃಪ್ತರು. ಅವರಿಗೂ ಅಷ್ಟೆ ಅವರ ಹೊಲದಲ್ಲಿ ಬೆಳೆದ ಹೆಸರು ಕಾಯಿ .ಅಲಸಂದಿಕಾಯಿ ,ತೊಗರಿಕಾಯಿ ಹೊಲದಲ್ಲಿನ  ಕಾಯಿಪಲ್ಲೆ  ಮೊದಲು ನಮಗೆ ಕೊಡದೆ ಸಮಾಧಾನವಿಲ್ಲ. ಅವರು. ಕಬ್ಬಿನ ಗಾಣ  ಹಾಕಿದರಂತೂ ಸಾಕು ಎನಿಸುವಷ್ಟು ಕಬ್ಬಿನ ಹಾಲು.ಆದರೆಅದನ್ನು ತರಲು ಪಾತ್ರೆಕೊಡಬೇಕು. ತರುವಾಗ ಅದರಲ್ಲಿ ಕಬ್ಬಿನ ಸಿಪ್ಪೆ ಹಾಕಿದ್ದರೆ ಒಂದು ದಿನ ಇಟ್ಟರೂ ಹಾಲು  ಹುಳಿಯಾಗದು.ಅದಕ್ಕೆ ನಿಂಬೆ ರಸ  , ಶುಂಟಿ ಪುಡಿ ಸೇರಿಸಿ  ಕುಡಿದರೆ ಸ್ವರ್ಗ ಮೂರೆ ಗೇ ಣು. ಮನೆಯಲ್ಲಿ ಯಾರಿಗಾದರೂ  ಕಾಮಣಿಯಾದರೆ ಒಂದು ವಾರ ದಿನಾ ಕಬ್ಬಿನ ರಸ ಕುಡಿದರೆ ಕಣ್ಣಿನ ಹಳದಿ ಮಟಾಮಾಯ. ಇನ್ನು ಕೆನೆಬೆಲ್ಲ, ಕಬ್ಬಿಗೆ ಹಚ್ಚಿದ ಬೆಲ್ಲ ಬಾಯಿಚಪ್ಪರಿಸುವಂತೆ ಇರುತಿದ್ದವು. ಗಾಣ ಮುಗಿದಮೇಲೆ ಮನೆಗೆ ಪುಟ್ಟಿಪುಟ್ಟಿ  ಹೊಸ ಬೆಲ್ಲ ಬರುತಿತ್ತು. ಮಗಿಯಲ್ಲಿ ಹಾಕಿದ್ದ ಕಾಕಂಬಿ ತಿಂಗಳುಗಟ್ಟಲೆ ದೋಸೆಗೆ, ರೊಟ್ಟಿ, ಚಪಾತಿಗೆ ಜೊತೆಯಾಗುತಿತ್ತು.ಅದಕ್ಕೆ ತುಪ್ಪ ಸೇರಿಸಿ ತಿಂದರೆ  ಈಗಿನ ಜಾಮ್,  ಕೆಚಪ್ಪು  ಸಪ್ಪೆ  ಎನುವಷ್ಟು ಸೊಗಸಾಗಿರುತಿತ್ತು. 

No comments:

Post a Comment