Wednesday, November 7, 2012

ಅಭಯ ನೀಡಿದ ಅಂಬೇಡ್ಕರ್:






ಹೊಸ ಕಾಲೇಜಿಗೆ ಪ್ರಿನ್ಸಿಪಾಲನಾಗಿ  ಬಂದು ಒಂದುವಾರ ಆಗಿರಬಹುದು, ವಿದ್ಯಾರ್ಥಿಗಳ ಒಂದು ಗುಂಪು ನನ್ನನ್ನು ಕಾಣಲು ಬಂತು. ಅವರು ತುಸು ಉದ್ವೇಗಕ್ಕೆ ಒಳಗಾದಂತೆ ಇದ್ದರು. ಕಾರಣ ತಿಳಿಯಲಿಲ್ಲ. ಏನುವಿಷಯ? ಏಕೆ ಬಂದಿರಿ?, ಕೇಳಿದೆ. ಅವರೆಲ್ಲ ನಮ್ಮ ಕಾಲೇಜಿನಲ್ಲಿ ಅಂಬೇಡ್ಕರ್ ಶತಮಾನೋತ್ಸವವನ್ನು ಆಚರಿಸಬೇಕೆಂಬ  ಬೇಡಿಕೆ ಇಡಲು ಬಂದಿದ್ದರು. ನನಗೆ ಆಗ ನೆನಪಾಯಿತು ೧೯೯೫ ಡಾ. ಬಾಬಾ ಸಾಹೇಬ್ಅಂಬೇಡ್ಕರ್ ಅವರ ಜನ್ಮ ಶತಮಾನೋತ್ಸವ ಎಂದು. ಈವರೆಗೆ ನಾನು ಕೆಲಸ ಮಾಡಿದ ಯಾವುದೇ ಕಾಲೇಜಿನಲ್ಲಿ ಅಂಬೇಡ್ಕರ್ ಜಯಂತಿ ಎಂದರೆ ಒಂದು ದಿನ ರಜೆ . ಯಾವುದೆ ಆಚರಣೆ ಇರಲಿಲ್ಲ. ಇಲ್ಲಿನ ಹೊಸ ಬೇಡಿಕೆ ಕುರಿತು ತೀರ್ಮಾನ ತಕ್ಷಣ ಹೇಳುವುದು ಹೇಗೆ.? ಅದಕ್ಕೆ ಒಂದೆರಡು ದಿನಗಳಲ್ಲಿ ಸಹೋದ್ಯೋಗಿಗಳ ಜೊತೆ ಸಮಾಲೋಚನೆ ಮಾಡಿ  ತಿಳಿಸುವೆ ಎಂದು ಸಮಾಧಾನ ಮಾಡಿ ಕಳುಹಿಸಿದೆ.
ಸಂಜೆ ಉಪನ್ಯಾಸಕರ ಸಭೆ ಕರೆದು ವಿಷಯ ತಿಳಿಸಿದೆ. ಮೊದಲೇ ಇಲ್ಲಿನ ವಾತಾವರಣ ಚೆನ್ನಾಗಿಲ್ಲ. ಇದುವರೆಗೂ ಆ ರೀತಿಯ ಯಾವುದೆ ಕಾರ್ಯಕ್ರಮ ಮಾಡಿಲ್ಲ. ಸುಮ್ಮನೆ ಹಣ ಖರ್ಚು. ಕಾಲೇಜಿನ ಸುತ್ತ ಮುತ್ತ ಇರುವ ಜನರಿಂದ  ಗಲಭೆ, ಗೊಂದಲ ಆಗಬಹುದು. ಅವರನ್ನು ನಿಯಂತ್ರಿಸುವುದು ಕಷ್ಟ, ಹಿಂದಿನವರು ಉದ್ದೇಶಪೂರ್ವಕವಾಗಿ ತೊಂದರೆ ನೀಡಲು ವಿದ್ಯಾರ್ಥಿಗಳನ್ನು ಪ್ರಚೋದಿಸಿ ಕಳುಹಿದ್ದಾರೆ. ಒಪ್ಪಿಗೆ ನೀಡಿದರೆ ಅವರ ಸಂಚಿಗೆ ಬಲಿಯಾಗಬೇಕಾಗುವುದು. ಎಚ್ಚರಿಕೆಯಿಂದ ಇರುವುದು ಅಗತ್ಯ. ಸಮಾರಂಭ ಮಾಡಿದರೆ ಗಲಭೆ ಎಬ್ಬಿಸಿ ಶಾಂತಿಭಂಗಮಾಡಿ ಕೆಟ್ಟಹೆಸರು ತರುವುದು, ಮಾಡದಿದ್ದರೆ ದಲಿತ ವಿರೋಧಿ ಎಂದು ಪಟ್ಟ ಕಟ್ಟುವ ಹುನ್ನಾರ. ಅವರು ಹಾಕಿದ ಬಲೆಗೆ ಬೀಳುವುದು ಬೇಡ ಎಂದು ಸಲಹೆ ನೀಡಿದರು. ಒಂದಂತೂ ನಿಜ. ಬಹುಸಂಖ್ಯಾತ ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸದೆ ಇರುವುದು  ದಲಿತ ವಿರೋಧಿ ಧೋರಣೆಯೆ ಎಂದು ನನಗೂ ಅನಿಸಿತು. ಅಲ್ಲದೆ ಡಾ. ಅಂಬೇಡ್ಕರ್ ದಲಿತನಾಯಕರು ಮಾತ್ರ ಅಲ್ಲ ಸಂವಿಧಾನ ನಿರ್ಮಾತೃವಾದ ರಾಷ್ಟ್ರೀಯನಾಯಕರು. ಅಲ್ಲದೆ ಇದು ಅವರ ಜನ್ಮ ಶತಮಾನೋತ್ಸವ. ಆದರೆ  ಕಾಲೇಜಿನ ಪರಿಸ್ಥಿತಿ ಬಹಳ ಶೋಚನೀಯವಾಗಿತ್ತು. ಬೋಧಕವರ್ಗದವರು ತಟಸ್ಥರಾಗಿ ಉಳಿದರು. ಯಾರೂ ಏನನ್ನೂ ಹೇಳುವ ಸ್ಥಿತಿಯಲ್ಲಿ ಇರಲಿಲ್ಲ.ಬಹುತೇಕರಿಗೆ ಅದು ಅಸಹನೆಯ ವಿಷಯವಾಗಿತ್ತು. ಆದ್ದರಿಂದ ಬಹಳ ಜನ ಆತಂಕಕ್ಕೊಳಗಾದರು. ಸರಿ  ನಿರ್ಧಾರ ತೆಗೆದುಕೊಳ್ಳುವ ಹೊಣೆ ಪೂರ್ಣ ನನ್ನದೆ ಆಯಿತು.
ಮನೆಯಲ್ಲಿ ಬಹಳ ಹೊತ್ತು ಇದೇ ಯೋಚನೆ ಮಾಡಿದೆ. . ರಾತ್ರಿ ನಿದ್ದೆ ಬರಲಿಲ್ಲ. ಇದು ಒಂದು ರೀತಿಯ ಸವಾಲು. ಕೊನೆಗೆ  ಮಕ್ಕಳನ್ನೆ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದರೆ ಉತ್ತಮ ಎನಿಸಿತು.
ಮಾರನೆದಿನ ದಲಿತ ಉಪನ್ಯಾಸಕರನ್ನೂ ಕೂಡಿಸಿಕೊಂಡು ದಿನಾಚರಣೆ ಬೇಡಿಕೆ ಇಟ್ಟ ವಿದ್ಯಾರ್ಥಿಗಳು ಹಾಗೂ ತರಗತಿಯ ಪ್ರತಿನಿಧಿಗಳ ಸಭೆ ಸೇರಿಸಲಾಯಿತು.
ಸಭೆಯಲ್ಲಿ ಮೊದಲನೆಯದಾಗಿ ಸಂವಿಧಾನ ಶಿಲ್ಪಿಯ ಶತಮಾನೋತ್ಸವದ ಪ್ರಸ್ತಾವನೆ ಮಾಡಿರುವುದಕ್ಕಾಗಿ ಅವರನ್ನು ಅಭಿನಂದಿಸಿದೆ. ಅದು ಕಾಟಾಚಾರದ ಸರ್ಕಾರಿ ಆಚರಣೆಯಾಗದೆ ನಮ್ಮೆಲ್ಲರ ಗೌರವ ಸೂಚಿಸುವ ಸಮಾರಂಭವಾದರೆ ಸಾರ್ಥಕ ಎಂದು ತಿಳಿಸಿದೆ. ಅದನ್ನು ವಿಶೇಷವಾಗಿ ವಿಜೃಂಭಣೆಯಿಂದ ಆಚರಿಸುವ ಅಗತ್ಯವನ್ನು ಒತ್ತಿ ಹೇಳಿದೆ.
ಜಯಂತಿ ಮಾಡಲು ನನಗಿರುವ ಉತ್ಸಾಹ ಅವರಿಗೆ ಆಶ್ಚರ್ಯ ಉಂಟುಮಾಡಿತು. ಅವರು ಇದನ್ನು ನನ್ನ ಬಳಿ ತರುವಾಗ ನಾನು ಹಿಂದು ಮುಂದು ನೋಡುವೆ, ಸಮಾರಂಭದ ಆಚರಣೆಯನ್ನು ವಿರೋಧಿಸುವೆ. ಆಗ ದಲಿತ ವಿರೋಧಿ ಎಂದು ಹಣೆ ಪಟ್ಟಿ ಹಚ್ಚಿ ಗೊಂದಲ ಎಬ್ಬಿಸಲು ಸಿದ್ಧರಾಗಿದ್ದರು.ಇದು ಒಂದು ರೀತಿಯಲ್ಲಿ ನನ್ನ ಸತ್ವ ಪರೀಕ್ಷೆಯಾಗಿತ್ತು.
ಅವರ ಒಳಉದ್ದೇಶ ಏನೇ ಇರಲಿ, ಸಂವಿಧಾನ ನಿರ್ಮಾಪಕನಿಗೆ ಗೌರವ ತೋರುವ ಅವಕಾಶವನ್ನು ಬಿಡಬಾರದು ಎಂದು ನಿರ್ಧರಿಸಿದೆ,
ಎಲ್ಲರಿಗೂ ದಿನಾಚರಣೆಯನ್ನು ವಿಶೇಷವಾಗಿ ಆಚರಿಸೋಣ ಎಂದು ತಿಳಿಸಿದೆ. ಬರಿ ಕಾಲೇಜು ಮಟ್ಟದಲ್ಲಿ ಮಾಡಿದರೆ ಸಾಲದು ಅದು ಜಿಲ್ಲೆಯ ಎಲ್ಲರ  ಗಮನ ಸೆಳೆಯುವಂತೆ ಅದ್ಧೂರಿಯಾಗಿ  ಆಚರಿಸಬೇಕು ಎಂಬ ನನ್ನ ಆಶಯ ತಿಳಿಸಿದೆ.
ಅದಕ್ಕಾಗಿ ನಮ್ಮಲ್ಲಿರುವ ಹಿರಿಯ ಉಪನ್ಯಾಸಕರು ಮತ್ತು ಎಲ್ಲ ದಲಿತ ಸಿಬ್ಬಂದಿ ಹಾಗು ವಿದ್ಯಾರ್ಥಿ ಪ್ರತಿನಿಧಿಗಳಿಂದ ಕೂಡಿದ ಸಮಿತಿ ರಚಿಸಿದೆವು.ಎಲ್ಲರೂ ಕುಳಿತು ಯಾವ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳ ಬೇಕೆಂಬುದನ್ನು ಸಮಾಲೋಚನೆ ಮಾಡಲು ಇನ್ನೊಂದು ದಿನ ಗೊತ್ತು ಮಾಡಲಾಯಿತು.
ಇಬ್ಬರು ಸಹೋದ್ಯೋಗಿಗಳ ಜತೆ ದೀರ್ಘವಾಗಿ ಚರ್ಚೆ ಮಾಡಿದೆ. ಮೊದಲನೆಯದಾಗಿ ಕಾರ್ಯಕ್ರಮಕ್ಕೆ ಬೇಕಾದ ಹಣಕಾಸು ಅದು ಅಂಥಹ ದೊಡ್ಡ ಸಮಸ್ಯೆ ಅನಿಸಲಿಲ್ಲ. ಎಲ್ಲ ಸಿಬ್ಬಂದಿ ತಮ್ಮ ಸಹಕಾರದ ಕುರುಹಾಗಿ ವಂತಿಗೆ ನೀಡಬೇಕೆಂದು ಮನವಿಮಾಡಿ ಕೊಂಡೆವು. ಕೆಲವರಿಗೆ ಮನಸ್ಸಿಲ್ಲದಿದ್ದರೂ ದಲಿತ ವಿರೋಧಿ ಹಣೆ ಪಟ್ಟಿ ಬರುವುದೆಂಬ ಭಯದಿಂದ ಒಪ್ಪಿದರು. ನಂತರ ವಿದ್ಯಾರ್ಥಿಗಳು ನೀಡಬೇಕಾದ ವಂತಿಗೆಯ ಹಣದ ನಿರ್ಧಾರವನ್ನು ಅವರಿಗೆ ಬಿಡಲು  ಬಯಸಿದೆವು.  ಅದೇ ಸಮಯದಲ್ಲಿ ಶತಮಾನೋತ್ಸವದ ನೆನಪಲ್ಲಿ ಜಿಲ್ಲಾಮಟ್ಟದ ಯಾವುದಾದರೂ ಒಂದು ಸಾಂಸ್ಕೃತಿಕ ಸ್ಪರ್ಧೆ  ನಡೆಸಿ ಅದನ್ನು ಪ್ರತಿವರ್ಷ ಮುಂದುವರಿಸುವ ಯೋಜನೆ ಹಾಕಲಾಯಿತು.
ಇದು ವಿಶೇಷ ಸಂದರ್ಭವಾದ್ದರಿಂದ  ದಲಿತಪರ ಸಂಘ ಸಂಸ್ಥೆಗಳ ಸಹಕಾರ  ಹೇಗೆ ಪಡೆಯಬಹುದು ಎಂಬುದನ್ನು ವಿದ್ಯಾರ್ಥಿ ಪ್ರತಿನಿಧಿಗಳೆ ಯೋಚಿಸಿ ತಿಳಿಸಲು  ಹೇಳಿದೆವು.
ಮತ್ತೆ ಸಭೆ ಸೇರಿಸಲಾಯಿತು.ಅಲ್ಲಿ ಮೊದಲನೆಯದಾಗಿ ನಮ್ಮಲ್ಲಿನ ಎಲ್ಲ ಸಿಬ್ಬಂದಿಯೂ ಶತಮಾನೋತ್ಸವಕ್ಕೆ ತಮ್ಮ ವಂತಿಗೆ ನೀಡುವುದಾಗಿ ಘೋಷಿಸಿದರು ಇದು ಮಕ್ಕಳಲ್ಲಿ ಅಚ್ಚರಿ ಮೂಡಿಸಿತು.  ಜಾತಿ ಮತದ ಬೇಧವಿಲ್ಲದೆ ಸಹಕರಿಸಿರುವುದು ಅವರಿಗೆ ಖುಷಿ ತಂದಿತು. ಎಲ್ಲ ಪ್ರತಿನಿಧಿಗಳೂ ಮಕ್ಕಳಿಂದಲೂ ತರಗತಿವಾರು ವಂತಿಗೆ ಸಂಗ್ರಹಿಸಲು ಮುಂದಾದರು. ಹಣಕಾಸಿನ ವ್ಯವಸ್ಥೆಯಾಯಿತು. ನಂತರ ಅವರಿಗೆ ಕಾಲೇಜಿನ ಸ್ಥಿತಿ ತೋರಿಸಿದೆ. ಸಾವಿರಾರು ಜನ ಬರುವರು. ಸಾಧ್ಯವಾದರೆ ಮಂತ್ರಿಗಳನ್ನೂ ಕರೆಸಬಹುದು. ಕಾಲೇಜು ಈಗಿರುವ ಹೀನ ಸ್ಥಿತಿನೋಡಿದರೆ ಬಂದವರು ಏನೆನ್ನಬಹುದು. ಇದರಿಂದ ಕಾರ್ಯಕ್ರಮಕ್ಕೆ ಶೋಭೆ ಬಾರದು. ಗೋಡೆಯ ಮೇಲಿರುವ ಅಶ್ಲೀಲ ಬರಹ  ಅಳಿಸಬೇಕು. ಕಟ್ಟಡಕ್ಕೆ ಸುಣ್ಣ ಬಣ್ಣ ಮಾಡಿಸಿದರೆ ಚಂದ ಆದರೆ ಇಲಾಖೆಯಿಂದ ಮಾಡಿಸಲು ತಿಂಗಳುಗಳೆ ಆಗಬಹುದು.  ಏನು ಮಾಡೋಣ ಎಂದು ಸಮಸ್ಯೆಯನ್ನು ಅವರ ಮುಂದೆ ಇಟ್ಟೆ. ನೀವೇ ಒಂದು ಪರಿಹಾರ ಹೇಳಿಎಂದು ನನಗೆ ಒತ್ತಾಯಿಸಿದರು.
ಕಾಲೇಜಿನ ಹೊರಭಾಗಕ್ಕೆ ಸುಣ್ಣ ಹಚ್ಚಿಸಲೇಬೇಕು. ಬೇಕಾದರೆ ಹಳದಿಪುಡಿ ಸೇರಿಸ ಬಹುದು. ಅದರ ಖರ್ಚುವೆಚ್ಚ ಕಾಲೇಜಿನಿಂದ ಭರಿಸಬಹುದು. ಆದರೆ ಆ ಕೆಲಸವನ್ನು ಮಾಡಲು ಕೆಲಸಗಾರರ ಕೂಲಿ ಕೊಡುವುದು ನಮಗೆ ಆಗದು. ಜತೆಗೆ ಅವರು ವಾರಗಟ್ಟಲೆ ಕೆಲಸ ಮಾಡುವರು.ಅದಕ್ಕೆ ನಾವೇ ಮಾಡುವುದು ಉತ್ತಮ ಎಂದು ಸೂಚಿಸಿದೆ. ನಮ್ಮಲ್ಲಿನ ಬಹುತೇಕರು ಕೈಮುಟ್ಟಿ ಕೆಲಸ ಮಾಡುವ ಹಿನ್ನೆಲೆಯವರು. ಆಗ ಆರು ಮಂದಿ ವಿದ್ಯಾರ್ಥಿಗಳೆ ತಾವು ಸುಣ್ಣಬಣ್ಣ ಹಚ್ಚುವ  ಕೆಲಸ ಮಾಡುವುದಾಗಿ ಮುಂದೆ ಬಂದರು. ಅವರಿಗೆ ಅಗತ್ಯವಾದ ಸಾಮಗ್ರಿಗಳನ್ನು ಕಾಲೇಜಿನಿಂದಲೆ ಒದಗಿಸಲು ತಿಳಿಸಿದೆ.
ಮಾರನೆ ದಿನ  ಕಾಲೇಜಿಗೆ ನಾನು ಬಂದಾಗ ಅಲ್ಲಿನ ದೃಶ್ಯ ನೋಡಿ ನನಗೆ ಒಂದು ಕ್ಷಣ ಕಣ್ಣು ಉಜ್ಜಿ ಕೊಳ್ಳುವಂತಾಯಿತು. ಆರಲ್ಲ ಹನ್ನೆರಡುಜನ ಕೆಲಸ ಮಾಡುತಿದ್ದರು.ನಮ್ಮ ಕಾಲೇಜಿನ ಕಲಿಗಳು ಕಾಲೇಜಿನ ಗೋಡೆಗಳ ಮೇಲಿದ್ದ ಸಾಹಿತ್ಯವನ್ನೆಲ್ಲ ಅಳಿಸಿಹಾಕಿ ಸುಣ್ಣ ಬಣ್ಣ ಹಚ್ಚುತ್ತಿದ್ದರು. ನಾಲ್ವರು ಹೊರಭಾಗದಲ್ಲಿ, ಮೂವರು ಒಳಭಾಗದಲ್ಲಿ ಡಿಸ್ಟೆಂಪರ್ ಹಚ್ಚುತ್ತಿದ್ದರು. ಇಬ್ಬರುಮಾಳಿಗೆಯ ಮೇಲಿಂದ ಇಳಿದು ಸಜ್ಜದ . ಮೇಲ್ಭಾಗದಲ್ಲಿ ಕೆಲಸದಲ್ಲಿ ತೊಡಗಿದ್ದರು. ಉಳಿದವರು ಸಹಾಯಮಾಡುತಿದ್ದರು. ಅದೂ ಯಾರನ್ನು ಬಹಳ ಒರಟರು, ಅಶಿಸ್ತಿಗೆ ಕಾರಣರು ಎಂದು ನನಗೆ ತಿಳಿಸಿದ್ದರೋ ಅವರೆ ಖುಷಿಯಿಂದ ಕೆಲಸ ಮಾಡುತಿದ್ದರು.
ಅಂದೆ ಇನ್ನೊಂದು ವಿಷಯದಲ್ಲಿ ಒಮ್ಮತ ಮೂಡಿಬಂತು. ಈ ಸಮಾರಂಭದ ಸ್ಮರಣಾರ್ಥ ಜಿಲ್ಲಾ ಮಟ್ಟದ ಭಾವ ಗೀತೆ ಸ್ಪರ್ಧೆಯನ್ನು ನಡೆಸಲು ಮತ್ತು ಸ್ಥಳೀಯ ದಲಿತ ಸಂಘಟನೆಗಳು ಎಲ್ಲ ಬಹುಮಾನಗಳನ್ನು ಪ್ರಾಯೋಜಿಸುವುದನ್ನು ಒಪ್ಪಲಾಯಿತು. ಎರಡೇ ದಿನದಲ್ಲಿ ನಮ್ಮವರು ಮೂರು ಅಡಿ ಎತ್ತರದ ದೊಡ್ಡ  ಷೀಲ್ಡ್ ತಂದರು.ಅದನ್ನು ರೋಲಿಂಗ್ಷಲ್ಡ್ ಮಾಡಬೇಕೆಂದು ಪ್ರತಿವರ್ಷ ಸ್ಪರ್ಧೆ ನಡೆಸಬೇಕೆಂದು ಅಂದುಕೊಂಡೆವು. ಅದನ್ನು ಸಂಘಟಿಸಲು ಕನ್ನಡ ಉಪನ್ಯಾಸಕರಿಗೆ ಹೊಣೆ ವಹಿಸಲಾಯಿತು. ಹಾ ,ಹಾ ಎನ್ನುವುದರಲ್ಲಿ ಕಾಲೇಜು ಲಕಲಕ ಹೊಳೆಯತೊಡಗಿತು. ಇಬ್ಬರು ಸಹೋದ್ಯೋಗಿಗಳ ಜೊತೆ ಸ್ಥಳೀಯ ಶಾಸಕರನ್ನು ಬೆಂಗಳೂರಿನ ಶಾಸಕರ ಭವನದಲ್ಲಿ ಕಂಡೆವು. ನಮ್ಮದು ಮೀಸಲು ಕ್ಷೇತ್ರ. ಶಾಸಕರು ಅಂಬೇಡ್ಕರ್ ಶತಮಾನೋತ್ಸವ ಬಗೆಗಿನ ನಮ್ಮ ಯೋಜನೆಯಿಂದ ಉತ್ಸುಕರಾದರು. ಗೃಹ ಮಂತ್ರಿಗಳಾಗಿದ್ದ ಧರ್ಮಸಿಂಗ್ ಅವರನ್ನು ಆಹ್ವಾನಿಸಲು ನಮ್ಮನ್ನೂ ಕರೆದೊಯ್ದರು. ನಮ್ಮೆದುರಿಗೆ ಅವರು ಬರಲೇ ಬೇಕೆಂದು ಒತ್ತಾಯ ಮಾಡಿದರು.ಮಂತ್ರಿಗಳು ಬರುವ ದಿನಾಂಕ ನಿಗದಿಯಾಯಿತು. ಮುಖ್ಯ ಅತಿಥಿಯಾಗಿ  ಬಂಜಗೆರೆ ಜಯಪ್ರಕಾಶ ಅವರನ್ನು ಗೊತ್ತು ಮಾಡಲಾಯಿತು.
ಜಿಲ್ಲಾಮಟ್ಟ ಭಾವಗೀತ ಗಾಯನ ಸ್ಪರ್ಧೆಗೆ  ಸಮಯದ ಕಡಿಮೆ ಇರುವುದರಿಂದ ನಮ್ಮ ಬೋಧಕರನ್ನೆ ಖುದ್ದಾಗಿ ಕಾಲೇಜುಗಳಿಗೆ ಕಳುಹಿಸಿ ಸ್ಪರ್ಧೆಗೆ ಅವರು ಭಾಗವಹಿಸುವಿಕೆಯನ್ನು ಖಚಿತ ಪಡಿಸಿಕೊಳ್ಳಲಾಯಿತು. ಒಟ್ಟು ೧೭ ಕಾಲೇಜುಗಳು ಭಾಗವಹಿಸಿದವು. ಅಂಬೇಡ್ಕರ್ ಜಯಂತಿಯಂದು ಎಲ್ಲರಿಗೂ  ಬಹುಮಾನ ನೀಡುವ ವ್ಯವಸ್ಥೆಯಾಯಿತು. ಅಂದು ಉಪಹಾರದ ವ್ಯವಸ್ಥೆಯಾಯಿತು.ಎಲ್ಲರೂ ಮನಃ ಪೂರ್ತಿಯಾಗಿ ದುಡಿದರು.
ಗೃಹ ಮಂತ್ರಿಗಳೆ ಬಂದುದರಿಂದ ಜಿಲ್ಲಾಮಟ್ಟದ ಅಧಿಕಾರಿಗಳೆಲ್ಲ ಜಮಾಯಿಸಿದರು. ಜಿಲ್ಲಾ ಪೋಲೀಸ್ ವರಿಷ್ಟರು ಎರಡುದಿನ ಮುಂಚೆಯೆ ಭೇಟಿಕೊಟ್ಟು ಬಂದು ವ್ಯವಸ್ಥೆಯ ವಿವರ ಪರಿಶೀಲಿಸಿದರು. ಅಲ್ಲದೆ ಗೃಹಮಂತ್ರಿಗಳಿಗೆ ಪೋಲಿಸರಿಂದ ವಿಶೇಷ ಗೌರವವೆಂದು ಗಾರ್ಡ ಅಫ್ ಆನರ್ ನೀಡುವುದಾಗಿ ತಿಳಿಸಿದರು. ಸಂಜೆ ಆಗುತಿದ್ದಂತೆ ದೀಪಾಲಂಕಾರದಿಂದ ಕಾಲೇಜು ಝಗಮಗಿಸಲಾರಂಭಿಸಿತು. ಪುರಾತನವಾದ ಕಾಲೇಜು ಕಟ್ಟಡವು ಮಿನಿವಿಧಾನ ಸೌಧದಂತೆ ಕಾಣುತಿತ್ತು.
ಸಾರ್ವ ಜನಿಕರೂ ಸಾಕಷ್ಟು ಸಂಖ್ಯೆಯಲ್ಲಿ ಬಂದಿದ್ದರು. ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳೂ ಗೃಹ ಮಂತ್ರಿಗಳ ಸಮಾರಂಭವು ಯಶಸ್ವಿಯಾಗಲೆಂದು ಎಲ್ಲ ರೀತಿಯ ಸಹಕಾರ ನೀಡಿದರು. ಬಂದು ಕೆಲವೆ ದಿನಗಳಾದರೂ ಎಲ್ಲ ಅಧಿಕಾರಿಗಳ ಪರಿಚಯದ  ಅವಕಾಶ ಆಯಾಚಿತವಾಗಿ ನನಗೆ ದೊರೆಯಿತು. ಸಾವಿರಾರು ಜನ ಕಿಕ್ಕಿರಿದು ಸೇರಿದರು. ಮುಖ್ಯ ಅತಿಥಿಗಳು ಅಂಬೇಡ್ಕರ್ ಕುರಿತಾಗಿ ಅಮೋಘವಾಗಿ ಮಾತನಾಡಿದರು. ಗೃಹ ಮಂತ್ರಿಗಳು ಸರ್ಕಾರಿ ಕಾಲೇಜಿನಲ್ಲಿ ಅದ್ಧೂರಿಯಾಗಿ ಸಂವಿಧಾನ ಶಿಲ್ಪಿಯ ಶತಮಾನೋತ್ಸವ ನಡೆದಿದುಕ್ಕೆ ಸಂತಸ ವ್ಯಕ್ತ ಪಡಿಸಿದರು. ಸ್ಥಳೀಯ ಶಾಸಕರಿಗಂತೂ ಖುಷಿಯೋ ಖುಷಿ.. ಗಲಾಟೆಯಾಗಬಹುದು ಎಂಬ ನಮ್ಮ ಸಹೋದ್ಯೋಗಿಗಳ ಭಯ ನಿಜವಾಗಲಿಲ್ಲ. ಅಲ್ಲಿ ನೆರೆದ ಜಿಲ್ಲೆಯ ಎಲ್ಲ ಪೋಲೀಸು ಅಧಿಕಾರಿಗಳ ಸಮೂಹ ನೋಡಿಯೆ ಜನ ದಂಗಾಗಿದ್ದರು. ಜಿಲ್ಲಾ ಮಟ್ಟದ ಭಾವ ಗೀತಾ ಸ್ಪರ್ಧೆಯ ಬಹುಮಾನ ಪಡೆಯಲು ಬೇರೆ ಬೇರೆ ಕಾಲೇಜಿನಿಂದ ಬಂದವರೂ ಸ್ಥಳಿಯ ದಲಿತ ಸಂಘಟನೆಯವರು ನೀಡಿದ್ದ ಮೂರು ಅಡಿ ಎತ್ತರದ ಪರ್ಯಾಫಲಕ ನೋಡಿ ದಂಗಾದರು. ಉಳಿದ ಬಹುಮಾನಗಳನ್ನು ನೋಡಿ ಸಂತಸ ಗೊಂಡರು. ಮಾರನೆ ದಿನ ಎಲ್ಲ ಪತ್ರಿಕೆಗಳಲ್ಲೂ ಸಮಾರಂಭದ ಸುದ್ದಿ ಪ್ರಕಟವಾಯಿತು. ಸ್ಥಳೀಯ ಪತ್ರಿಕೆಗಳಲ್ಲಂತೂ ಸಚಿತ್ರ ವರದಿಗಳು ಬಂದವು. ಈ ವರೆಗೆ ಬೇರೆ ಕಾರಣಗಳಿಂದ ಕುಪ್ರಸಿದ್ಧ ವಾಗಿದ್ದ ನಮ್ಮ ಕಾಲೇಜು ಮೊದಲ ಬಾರಿಗೆ  ಜನರ ಮೆಚ್ಚುಗೆ ಗಳಿಸಿತು.
ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು. ಊರಿನವರಿಗೆಲ್ಲ ಹೊಸ ಪ್ರಾಂಶುಪಾಲರು ಪರವಾ ಇಲ್ಲ ಸಾಕಷ್ಟು ಪ್ರಭಾವ ಶಾಲಿಗಳು, ತರಲೆ ಕಾಲೇಜಿಗೆ ಗೃಹಮಂತ್ರಿಗಳನ್ನೆ ಕರೆಸಿದರು.ಬಾಬಾಅಂಬೇಡ್ಕರ್ ಶತಮಾನೋತ್ಸವವನ್ನು ಯಾರೂ ಮಾಡದಷ್ಟು ಅದ್ಧೂರಿಯಾಗಿ ಮಾಡಿರುವರು ಎಂದು ಮಾತನಾಡಿಕೊಂಡರು.
ನಮ್ಮವಿದ್ಯಾರ್ಥಿಗಳಿಗೂ ಬಹಳ ಸಂತೋಷವಾಯಿತು. ತಮ್ಮ ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತ ಪ್ರಚಾರ ದೊರೆತುದುದು ಅವರಿಗೆ ಬಹಳ ಹೆಮ್ಮೆಯ ವಿಷಯವಾಯಿತು. ಅಲ್ಲದೆ ತಾವೆಲ್ಲ ಸೊಂಟ ಕಟ್ಟಿ ದುಡಿದದ್ದು ಸಾರ್ಥಕವಾಯಿತು ಎಂದು ಖುಷಿಯಿಂದ ಬೀಗಿದರು. ಅವರಿಗೆ ಪ್ರಾಂಶುಪಾಲರ ದಲಿತ ಪರ ಧೋರಣೆಯ  ಬಗ್ಗೆ ಖಾತ್ರಿ ದೊರೆಯಿತು.
ನಮ್ಮ ಬೋಧಕವರ್ಗದವರಿಗೆ ಒಂದು ವಿಷಯ ಅರ್ಥವೇ ಆಗಲಿಲ್ಲ. ಹೊಸ ಪ್ರಾಂಶುಪಾಲರಿಗೆ ಬಂದು ಕೆಲವೇ ದಿನಗಳಲ್ಲಿ ಗೃಹ ಮಂತ್ರಿಗಳನ್ನು ಕರೆಸುವಷ್ಟು ಸಾಮರ್ಥ್ಯ ಹೇಗೆ ಬಂತುಎಂದು ಅಚ್ಚರಿಗೊಂಡರು. ಅವರಿಗೆ ನಾನು ಗುಲ್ಬರ್ಗ ಜಿಲ್ಲೆಯಲ್ಲಿ ಕೆಲಸ ಮಾಡಿರುವುದು ಗೊತ್ತಿತ್ತು. ಆ ಪರಿಚಯದಿಂದ ಕೆಲಸ ಆಗಿಬಹುದು ಎಂದುಕೊಂಡರು. ನಿಜ ಗುಲ್ಬರ್ಗದಲ್ಲಿ ಒಂದೆರಡು ಸಲ  ಮಂತ್ರಿಗಳ ಭೇಟಿಯಾಗಿದ್ದೆ. ಆದರೆ ಅಂಥಹ ಪರಿಚಯವಿರಲಿಲ್ಲ. ಅದನ್ನು ನಾನು ವಿವರಿಸಲು ಹೋಗಲಿಲ್ಲ. ಸ್ಥಳೀಯ ಶಾಸಕರ ಸಹಕಾರ ಪೂರ್ಣ ಪ್ರಮಾಣದಲ್ಲಿ ದೊರೆಯಿತು. ಸಮಸ್ಯಾತ್ಮಕ ಕಾಲೇಜಿನಲ್ಲಿ ಕೆಲಸ ಮಾಡಲು ಒಂದು ಸುಭದ್ರವಾದ ಅಡಿಪಾಯ ನನಗೆ ದೊರೆಯಿತು.
ನಾನು ಸವಾಲಿನಂತೆ ಸ್ವೀಕರಿಸಿ ಸಮಾರಂಭ ಮಾಡಿದುದರಿಂದ ವಿದ್ಯಾರ್ಥಿಗಳ ಪ್ರೀತಿ, ಸಹೊದ್ಯೋಗಿಗಳ ಗೌರವ ಸಾರ್ವಜನಿಕರ ಸಹಾನುಭೂತಿ ಮತ್ತು ಇಲಾಖೆಯ ಮೆಚ್ಚುಗೆ ಸಿಕ್ಕಿತು. ಕಿರಿಕಿರಿ ಮಾಡಬೇಕೆಂದಿದ್ದವರ ಸಂಚು ವಿಫಲವಾಯಿತು. ನನ್ನ ಯೋಜನೆಯಂತೆ ಹಳಿತಪ್ಪಿದ ಕಾಲೇಜನ್ನು ಸರಿದಾರಿಗೆ ತರುವ ಕೆಲಸ ಮಾಡಲು ಬಾಬಾ ಅಂಬೇಡ್ಕರ್ ಜಯಂತಿ ಭೀಮ ಬಲ ತಂದು ಕೊಟ್ಟಿತು.ಅಂಬೇಡ್ಕರ್ ನನ್ನ ಸುಧಾರಣೆಯ ಕಾರ್ಯಕ್ಕೆ  ಅಭಯ ನೀಡಿದರು.
                                                                                                                                ಎಚ್. ಶೇಷಗಿರಿರಾವ್


No comments:

Post a Comment