Friday, November 16, 2012

ಧೋನಿ , ನಾಟ್‌ ಔಟ್- ಚಿತ್ರ ವಿಮರ್ಶೆ


ಸಿನೆಮಾ  ಆಧುನಿಕ ಸಮಾಜದಲ್ಲಿ ಪ್ರಮುಖ ಮನರಂಜನಾ ಮಾದ್ಯಮ. ತಮಿಳುನಾಡಿನಲ್ಲಂತೂ ಜನರ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ಬಹುಶಃ ತಮ್ಮ ನೆಚ್ಚಿನನಾಯಕರು  ರೀಲ್‌ಲೈಫಿನಲ್ಲಿ ಸೃಷ್ಟಿಸಿದ  ಆದರ್ಶಸಮಾಜವನ್ನು ರಿಯಲ್‌ ಲೈಫ್‌ನಲ್ಲೂ ಮಾಡಲಿ ಎಂದು ಅಧಿಕಾರದ ಗದ್ದುಗೆ ಏರಿಸಿದ  ಜನರಲ್ಲಿ ತಮಿಳರು ಮೊದಲಿಗರು. ಎಂಜಿಆರ್‌ ತಮ್ಮ  ನಟನೆಯಿಂದ ರಾಜ್ಯದ ಕೊಟ್ಯಾನುಕೋಟಿ ಜನರನ್ನು ಮಂತ್ರ ಮುಗ್ದರನ್ನಾಗಿಸಿ ಮುಖ್ಯಮಂತ್ರಿಯ ಗದ್ದುಗೆ ಏರಿದ ಮೊದಲ ನಟ.ಅವರ ವಾರಸುದಾರಿಣಿಯಾದ ಜಯಲಲಿತ ಈಗಲೂ ಮತ್ತೆ ಮೂರನೆ ಬಾರಿ ಅಧಿಕಾರಕ್ಕೆ ಬಂದಿದ್ದಾರೆ.ಕಳೆದ ನಾಲಕ್ಕು ದಶಕದಿಂದ ರಾಜಕೀಯರಂಗದಲ್ಲಿ ಲೇಖನಿಯ ಬಲದಿಂದಲೇ ತಮ್ಮಕುಟುಂಬವನ್ನೆ ರಾಜಕೀಯದಲ್ಲಿ ನೆಲೆಯೂರಿಸಿದ ಕರುಣಾನಿಧಿ ಬಂದಿರುವುದೂ ಸಿನೆಮಾರಂಗದಿಂದಲೇ.ಕ್ರಾಂತಿಕಾರ ನಾಯಕರ ದನಿಯಾದವರು ಅವರು.ಅವರ ಚಿತ್ರಕಥೆ ಮತ್ತು ಸಂಭಾಷಣೆ ಅಷ್ಟು ಪ್ರಭಾವಶಾಲಿ. ದ್ರಾವಿಡ ಚಳುವಳಿಯ ಧೃವತಾರೆ ಅಣ್ಣಾದುರೈ ಕೂಡಾ ಸಿನಿಮಾಕ್ಕೆ ಸಂಭಾಷಣೆ ಬರೆದೆ ಸಮಾಜಸೇವೆಗೆ ಕಾಲಿಟ್ಟವರು. ಈ ಬದಲಾವಣೆಯಿಂದ ಸುಧಾರಣೆ ಎಷ್ಟರ ಮಟ್ಟಿಗೆ ಆಗಿದೆ ಎಂಬುದು ಚರ್ಚೆಗೆ ಅವಕಾಶನೀಡಿದರೂ ಅದರ ಪ್ರಭಾವವಂತೂ ವಿವಾದಾತೀತ.
 ಇತ್ತೀಚೆಗೆ ಸಿನಿಮಾ ಮಾದ್ಯಮವನ್ನು ಸಾಮಾಜಿಕ ಸಮಸ್ಯೆಗಳ ಅನಾವರಣಕ್ಕೆ ಬಳಸುತ್ತಿರುವ ಸಂಖ್ಯೆ ತಮಿಳಿನಲ್ಲಿ  ಬೆಳೆಯುತ್ತಿದೆ. ಅದರಲ್ಲೂ ಕನ್ನಡಿಗನೊಬ್ಬ ತಮಿಳು, ತೆಲಗು ಸಿನೆಮಾಗಳ ಅನಿವಾರ್ಯ ಅಂಗವಾಗಿ ಹೆಸರು ಮತ್ತು ಹಣಮಾಡಿ ಈಗ ಸದಭಿರುಚಿಯ ಚಿತ್ರನಿರ್ಮಾಣಕ್ಕೆ ಮುಂದಾಗಿ ಅನ್ನಕೊಟ್ಟ ರಂಗಕ್ಕೆ ರಂಗುತರುವ ಕೆಲಸ ಮಾಡುತ್ತಾ ಛಾಪು ಮೂಡಿಸಿರುವ ಅತಿ ವಿರಳರಲ್ಲಿ ಪ್ರಕಾಶ್‌ರಾಜ್‌ (ಕನ್ನಡದ ಪ್ರಕಾಶ್‌ರೈ) ಒಬ್ಬರು.ಅವರ ಇತ್ತೀಚಿನ ಕಾಣಿಕೆ ದೋನಿ, ನಾಟ್‌ಔಟ್‌ ಸಿನೆಮಾ ವೀಕ್ಷಕರಲ್ಲಿ ಕಿರು ಅಲೆಯನ್ನೇ ಎಬ್ಬಿಸಿದೆ. ಹಿಂದಿಯಲ್ಲಿ ಬಂದ ಅಮೀರ್‌ಖಾನರ  ತಾರೆ ಜಮೀನ್‌ಪರ್ “  ಮತ್ತು ತ್ರೀ ಈಡಿಯಟ್ಸನಲ್ಲಿರುವಂತೆ ಹೆಸರಾಂತ ನಾಯಕ ನಟರಿಲ್ಲ, ಬೆಡಗಿನ ನಟಿಯರು ನಾಪತ್ತೆ, ಅದ್ಧೂರಿಯ ಸೆಟ್‌ಗಳಿಲ್ಲ. ಹೊರಾಂಗಣ ಚಿತ್ರೀಕರಣಕ್ಕೆ ವಿದೇಶಿ ಲೋಕೇಷನ್‌ಗೆ ಹೋಗಿಲ್ಲ, ಕುಣಿತ ಮಣಿತ ಹೊಡೆದಾಟ ಇಲ್ಲ. ಆದರೆ ನಟರೆಲ್ಲ ತೆಲುಗು ರಂಗಭೂಮಿಯ ಹಿನ್ನೆಲೆಯಿಂದ ಬಂದು ಸಿನೆಮಾದಲ್ಲಿ ಹೆಸರು ಮಾಡಿದವರು..ಆದರೆ ಸಮಾಜದಲ್ಲಿನ ಮೂಲಭೂತ ಶಿಕಷ್ಣ ಸಮಸ್ಯೆಯಗಂಭೀರತೆಯನ್ನು  ಈ ಚಿತ್ರ ವಿಶ್ಲೇಷಿಸುತ್ತದೆ ಮೊದಲಿಂದ ಕೊನೆ ತನಕ ಚಿತ್ರದ ಕೇಂದ್ರಬಿಂದು ಪ್ರಕಾಶ್‌ರಾಜ್ ಅಂದರೆ ನಮ್ಮ ಕನ್ನಡದ ಪ್ರಕಾಶರೈ.ಜೊತೆಗೆ ಕೋಮಾದಲ್ಲಿರುವ ಮಗನ ಪಾತ್ರದಲ್ಲಿ ಕಮರ್ಶಿಯಲ್‌ಚಿತ್ರಗಳ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್‌ ಪುತ್ರ. ಚಿತ್ರ ಮೊದಲಾಗುವುದೇ ಹೆಸರಾಂತ್‌ ಖಾಸಗಿ ಕಾನ್ವೆಂಟ್‌ನಲ್ಲಿ ಓದುತ್ತಿರುವ 17X8  ಎಂದರೆ ಎಷ್ಟು ಎಂದು ಹೇಳಲಾಗದ ಆದರೆ ಅತೀವ ಕ್ರಿಕೆಟ್ ಆಟದ ಗೀಳಿರುವ ಕಾರ್ತಿಕ ಎಂಬ ಬಾಲಕನ ಸಾಂಪ್ರದಾಯಿಕ ಶಿಕ್ಷಣದಲ್ಲಿ ಅನುಭವಿಸುವ ಹಿನ್ನಡೆಯಿಂದ. ತಂದೆ ಮಧ್ಯಮವರ್ಗದ ಸರಕಾರಿ ನೌಕರ. ಎರಡು ಮಕ್ಕಳನ್ನು ಒಂಟಿಯಾಗಿ ಸಾಕುತ್ತಿರುವ ವಿಧುರ. ಅವನ ಜೀವನದ ಒಂದೆ ಗುರಿ ಮಗ ಚೆನ್ನಾಗಿ ಓದಬೇಕು. ನೂರಕ್ಕೆ ನೂರು ಅಂಕ ಪಡೆಯಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಗೆದ್ದು ಒಳ್ಳೆಯ ಸಂಪಾದನೆಯ ನೌಕರಿ ಹಿಡಿಯಬೇಕು ಎಂದು. ಅದಕ್ಕಾಗಿ ಸಾಲ ಸೋಲ ಮಾಡಿ ಬಿಡುವಿನ ವೇಳೆಯಲ್ಲಿ ಉಪ್ಪಿನಕಾಯಿ ವ್ಯಾಪಾರ ಮಾಡಿ, ಜೀವ ಬಿಗಿ ಹಿಡಿದು ಪ್ರತಿಷ್ಠಿತ ಶಾಲೆಯಲ್ಲಿ ಸೇರಿಸಿರುವನು.ಆದರೆ ಮಗನಿಗೆ ಓದಿನಲ್ಲಿ ಆಸಕ್ತಿ ಇಲ್ಲ.ಅವನು ಧೋನಿಯ ಅಭಿಮಾನಿ. ಹುಡುಗ ಕ್ರಿಕೆಟ್‌ ಆಗಸದಲ್ಲಿ ಮಿನುಗಬಹುದಾದ ಭವಿಷ್ಯದ ತಾರೆ ಎಂದು ಕೋಚ್‌ನ ಅಭಿಪ್ರಾಯ. ಆದರೆ ಅದು ತಾನು ಮಾರುವ ಉಪ್ಪಿನಕಾಯಿಯಷ್ಟಾದರೂ ಆದಾಯ ತರುವುದೆ ಎಂಬ ಅನುಮಾನ ತಂದೆಯದು.
 ಶೀರ್ಷಿಕೆಯೇ ಸೊಗಸು. ಚೆಂಡು ಸ್ಟಂಪಗಳಿಗೆ ತಗುಲಿದೆ ಬೇಲ್‌ ಬಿದ್ದವೆ ಆದರ   ಕೆಳಗೆ ನಾಟ್‌ ಅಂತ ಎಂಬ ಬರಹ ನಿಜಕ್ಕೂ ಚಿತ್ರದ ಆತ್ಮವನ್ನೆ ಅನ್ವರ್ಥವಾಗಿಸಿದೆ. ಪ್ರಕಾಶ್‌ರಾಜ್‌ನಿರ್ದೇಶಕ.ಮುಗ್ದ ಘೋಡ್ಸೆ,ರಾಧಿಕಾ ಆಪ್ಟೆ, ನಾಸಿರ್, ಬ್ರಹ್ಮಾನಂದಮ್, ಬಾಲನಟ ಆಕಾಶ್‌ಪುರಿ. ನಟನೆಯಲ್ಲಿ ಒಬ್ಬರನ್ನೊಬ್ಬರು ಮೀರಿಸುವರು
ಉತ್ತಮ ನಟನೆಂದು ಖ್ಯಾತಿಪಡೆದ ಪ್ರಕಾಶ್‌ರಾಜ್‌ನ ನಿರ್ದೇಶನದ ಚಿತ್ರ ನಿರೀಕ್ಷೆ ಮೂಡಿಸಿದ್ದು ಸಹಜ.ಚಿತ್ರದ ಕಥೆ ನಮಗೆಲ್ಲರಿಗೂ ಸಂಬಂಧಿಸಿದ , ತಂದೆ ತಾಯಿಗಳಿಗೆ ತಲೆ ನೋವಾಗಿರುವ ಶಿಕ್ಷಣ ವ್ಯವಸ್ಥೆಯ ಕುರಿತದ್ದು’. ಓದು ಎನ್ನುವ  ತಂದೆ, ಆಡುವೆ ಎನ್ನುವ ಮಗನ ನಡುವಿನ ತಾಕಾಲಾಟವೆ ಚಿತ್ರದ ಜೀವಾಳ.  ಸಂಪ್ರದಾಯಿಕಶಿಕ್ಷಣ ನೂರಕ್ಕೆ ನೂರುಅಂಕಗಳು ಸೆಂಟ್‌ ಪರ್ಸೆಂಟ್‌ ಫಲಿತಾಂಶ ಬೇಕೆನ್ನುವ ಶಾಲೆ, ಕನಸು ಮನಸಲ್ಲೂ ಕ್ರಿಕೆಟ್ ತುಂಬಿಕೊಂಡಿರುವ ಮಗ.ತಂದೆಯ ತಳಮಳದಲ್ಲಿ ಮಗ ಉತ್ತಮ ಮಾರ್ಕ ತೆಗೆದುಕೊಂಡಿಲ್ಲ ಎಂದು ಬ್ಯಾಟ್‌ಮುರಿದು ಕೋಪದಿಂದ ದೂಡಿದಾಗ ಗಾಯಗೊಂಡ ಮಗ ಕೋಮಾದಲ್ಲಿ ಹೋಗುವನು. ಫಲಿತಾಂಶಕ್ಕೆ ಕುಂದು ಬರುವುದೆಂದು ಪ್ರತಿಷ್ಠಿತ ಶಾಲೆಯವರು ಟಿ.ಸಿ ಕೊಟ್ಟು ಕೈ ತೊಳೆದುಕೊಳ್ಳುವರು,ಚಿಕಿತ್ಸೆಗೆ ಹಣ ಬೇಕಾದಾಗ ಸಹಾಯಕ್ಕೆ ಬರುವವರು ಅನೈತಿಕ ವ್ಯವಹಾರದಲ್ಲಿ ತೊಡಗಿದವಳೆಂದು ದೂರವಿಟ್ಟಿದ್ದ ಮಗಳ ಗೆಳತಿಯಾದ ನೆರೆ ಮನೆಯ ಯುವತಿ ಹಾಗೂ
ಮೀಟರ್‌ ಬಡ್ಡಿಗೆ ಸಾಲ ನೀಡುವ ಸಾಹುಕಾರ. ಮಕ್ಕಳ ಭವಿಷ್ಯಕ್ಕಾಗಿನ ಮಧ್ಯಮ ವರ್ಗದ ಕಷ್ಟ ಕಾರ್ಪಣ್ಯ,ಹೇಗಾದರೂ ಮಾಡಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಮನೋವೃತ್ತಿಯನ್ನು ಸಹಜವಾಗಿ ಚಿತ್ರಿಸಲಾಗಿದೆ
ಸದ್ಯದ ಶಿಕ್ಷಣದ ಹಲವು ಆಯಾಮಗಳನ್ನು ಅನಾವರಣ ಗೊಳಿಸುವಲ್ಲಿ ನಿರ್ದೇಶಕ ಪ್ರಕಾಶ್‌ರಾಜ್‌ ಗೆದ್ದಿದ್ದಾರೆ,ಇನ್ನು ನಟನಾಗಿ ಮನ ಮುಟ್ಟುವರು.ಆಟಗುಳಿಯಾಗಿ ಆಕಾಶ್‌ಪುರಿ,ಸಹೃದಯಿ ನೆರೆಯವಳಾಗಿ ರಾಧಿಕಾಆಪ್ಟೆ ನೆನಪಲ್ಲಿ ಉಳಿಯುವರು .ಇನ್ನು ತೆಲುಗು ವಾಣಿಜ್ಯ ಚಿತ್ರಗಳ ಅನಿವಾರ್ಯ ಅಂಗವಾಗಿರುವ ನಟರು ತಮಿಳು ಚಿತ್ರದಲ್ಲೂ ತಮ್ಮ ಛಾಪು ಒತ್ತಿದ್ದಾರೆ.
 ಬರಿ ಉಪದೇಶ ನೀಡಬಹುದಾಗಿದ್ದ  ಚಿತ್ರವನ್ನು  ಪ್ರೇಕ್ಷಕರು ಒಂದಲ್ಲ ಒಂದು ಹಂತದಲ್ಲಿ ತಮ್ಮದೆ ಕಥೆ ಎಂಬ ತನ್ಮಯತೆ ಮೂಡಿಸುವುದೇ ಇದರ ಹಿರಿಮೆ. ಚಿತ್ರದ ನಿಜವಾದ ನಾಯಕ ಎಂದರೆ ಮರಾಠಿ ಲೇಖಕ ಮಹೇಶ್‌ ಮಂಜ್ರೇಕರ್‌ ಅವರ ಕಥೆ. ಶಿಕ್ಷಣ ರಂಗದ ಅನೇಕ ಜ್ವಲಂತ ಸಮಸ್ಯೆಳ ಮೇಲೆ ಕ್ಷ ಕಿರಣ ಬೀರುವುದು. ನವಿರಾದ ವಿಶ್ಲೇಷಣೆ, ಅತಿಭಾವುಕತೆ ಇಲ್ಲದ ನೈಜ ದೃಶ್ಯಗಳು, ನಿತ್ಯ ನಾವಾಡುವ ಮಾತಿನಂತಿರುವ ಸಂಭಾಷಣೆ, ಅಬ್ಬರವಿಲ್ಲದ ಸಂಗೀತ. ಚಿತ್ರದ ಮೊದಲರ್ಧ ತಂದೆ, ಮಗ ಮತ್ತು ಶಿಕ್ಷಣದ ಸುತ್ತ ಗಿರಕಿಹೊಡೆಯವುದು. ಅದು ಎಲ್ಲರ ಮನೆಯಕಥೆ. ದ್ವಿತಿಯಾರ್ಧವು ಕಡಿಮೆ ಮಾರ್ಕು ಬಂದವೆಂಬ ಆವೇಶದ ಭರಿತ ವರ್ತನೆಯಫಲವಾಗಿ ಮುಗ್ದ ಮಗುವಿನ ಜೀವ ಬಲಿಯಾಗುವುದನ್ನು ತಡೆಯುವ ಪ್ರಯತ್ನ ಕಣ್ಣಲ್ಲಿ ನೀರು ತರಿಸುವುದು.ಈ ನಡುವೆ ಶಿಕ್ಷಣದ ಬಗೆಗಿನ ಟಿವಿ ಕಾರ್ಯಕ್ರಮ. ಗಾಲಿಕುರ್ಚಿಯಲ್ಲಿದ್ದ ಮಗುವಿನೊಡನೆ ಮುಖ್ಯಮಂತ್ರಿಗೆ ಮಾಡುವ ಮನವಿಯ ತಜ್ಞನರವೈದ್ಯತನಗೂ 17X8  ಮಗ್ಗಿ ಬರುವುದಿಲ್ಲ ಎನ್ನುವು ದೃಶ್ಯಗಳು ನೋಡುಗರ ಮನ ತಟ್ಟುತ್ತವೆ. ಕೊನೆಗೆ ಗುಣಮುಖನಾದ ಕಾರ್ತಿಕ್ ರಾಜ್ಯ ಮಟ್ಟದ ಪಂದ್ಯದಲ್ಲಿ ಕೊನೆ ಬಾಲಿನಲ್ಲಿ ಸಿಕ್ಸರ್‌ ಹೊಡೆದು ಗೆಲವು ಸಿನೀಮಯ ಎನಿಸಿದರೂ ಅದು ಸಾಧ್ಯವಾದರೆ ಎಷ್ಟು ಚೆನ್ನ ಎನಿಸುವುದು.ಫೋಟೋಗ್ರಫಿ, ಹಿನ್ನೆಲೆ ಸಂಗೀತ ಎಲ್ಲವೂ ಪೂರಕವಾಗಿ ಒಟ್ಟಾರೆ ಸಹಜತೆ ಮೂಡಿಸುವವು.


ನಮ್ಮ ನಟನೊಬ್ಬ ಪಕ್ಕದ ರಾಜ್ಯದಲ್ಲಿ ನಟನಾಗಿ , ನಿರ್ಮಾಪಕನಾಗಿ ಮತ್ತು ನಿರ್ದೇಶಕನಾಗಿ ವಿಭಿನ್ನ ಕಥಾವಸ್ತುವನ್ನುತೆಗೆದುಕೊಂಡು ಕೀರ್ತಿ ಪತಾಕೆ ಹಾರಿಸಿರುವುದು ಹೆಮ್ಮೆಯ ಸಂಗತಿ


No comments:

Post a Comment