ಸಮಯ ರಾತ್ರಿ ಹತ್ತು
ಮೀರಿತ್ತು. ರವೀಂದ್ರ ಕಲಾಕ್ಷೇತ್ರದಲ್ಲಿ ಆಕಾಶವಾಣಿ ಸಂಗೀತೋತ್ಸವದಲ್ಲಿ ವಿದ್ವಾನ್ಗಣಪತಿ ಭಟ್
ಹಾಸಣಗಿ ಅವರ ಸಂಗೀತ ಕಾರ್ಯಕ್ರಮ.ಅಟೋ ಸಿಗಲಿಲ್ಲ. ಸರಿ ಬಂದ ಸಿಟಿ ಬಸ್ಹತ್ತಿ ರಾಮಕೃಷ್ಣ ಮಠ
ವೃತ್ತದಲ್ಲಿ ಇಳಿದು ಅಲ್ಲಿಂದ ನರಸಿಂಹರಾಜಾ ಕಾಲೊನಿಯ ಮನೆಗೆ ನಡೆದೆ ಹೋದರಾಯಿತು ಎಂದು ಹೊರಟೆವು.
ಸದಾ ಗಿಜಿಗುಟ್ಟುವ ಗಾಂಧಿ ಬಜಾರ ಆಗಲೆ ಭಣ ಗುಟ್ಟುತಿತ್ತು.ಜನಸಂಚಾರ ಕಡಿಮೆ. ಅಲ್ಲೊಂದು
ಇಲ್ಲೊಂದು ಕಾರ್ ಭುರ್ ಎಂದು ಸಂಚಾರಿ ದೀಪದ ಹಂಗಿಲ್ಲದೆ ಜೋರಾಗಿ ಹಾರ್ನಹಾಕುತ್ತಾ ಹೊರಟಿದ್ದವು.
ಇನ್ನು ದ್ವಿಚಕ್ರವಾಹನಗಳ ಭರಾಟೆಯಂತೂ ಹೇಳುವ ಹಾಗೆ ಇಲ್ಲ. ಎಲ್ಲರಿಗೂ ಮನೆ ಸೇರುವ ಆತುರ. ರಸ್ತೆ
ಬದಿಯ ಹೂವಿನ ಹಣ್ಣಿನ ಅಂಗಡಿಯವರು, ಫುಟ್ಪಾತ್ನಲ್ಲಿನ ವ್ಯಾಪಾರ ಮಾಡುವವರು ಗಂಟು ಮೂಟೆ
ಕಟ್ಟಿಯಾಗಿತ್ತು.ಚನ್ನೈ ನಿಂದ ಬಂದ ಮಗ , ವಾರದ ರಜೆಇರುವ ಮಗಳು ಜೊತೆಯಾಗಿ ಮಾತನಾಡುತ್ತಾ ಬೆಣ್ಣೆ
ಗೋವಿಂದಪ್ಪ ಸರ್ಕಲ್ಗೆ ಬಂದೆವು..ನಿವೃತ್ತರ ಸ್ವರ್ಗ ಎಂದು ಹೆಸರಾಗಿದ್ದ ಬೆಂಗಳೂರು ಇತ್ತೀಚೆಗೆ
ಮೊದಲಿನ ಪ್ರಶಾಂತತೆಯನ್ನು ಕಳೆದುಕೊಂಡಿದೆ. ಐಟಿ ಬಿಟಿಯ ಕಟಿಪಿಟಿ, ಬಿಪಿಒಗಳ
ಭರಾಟೆಯಲ್ಲಿ ರಾತ್ರಿ ಯಲ್ಲಿಯೆ ದೂರದ ಅಮೇರಿಕಾದ ಕರೆಗ ಉತ್ತರಿಸುವ ಕೆಲಸ ಬಹಳ
ಯುವಜನರಿಗೆ ಕಣ್ಣು ತುಂಬ ನಿದ್ದೆ ಕಸಿದು ಕೈತುಂಬ
ಕಾಸು ಕೊಡುವ ಕೆಲಸ ಕೊಟ್ಟಿದೆ.ಪಾರ್ಥನ ಹೆಸರು ಪೀಟರ್, ಸೌಮ್ಯಳ ಹೆಸರು ಶಾಲಿ ಎಂದುಹೊಸ ನಾಮಕರಣ.
ಅಮೇರಿಕಾದ ಗ್ರಾಹಕರ ವಿಚಾರಣೆಗೆ ಅವರದೆ ಭಾಷೆಯ ದಾಟಿಯಲ್ಲಿ ಪಟಪಟನೆ ಉಲಿಯುತ್ತಾ ಮಧ್ಯ ಮಧ್ಯ
ಕಣ್ಣು ರೆಪ್ಪೆ ಕೂಡಿದರೆ, ಎದ್ದು ಹೋಗಿ ಕಾಫಿ ಕುಡಿಯುವ, ನಾಲಕ್ಕು ಹೆಜ್ಜೆ ಹಾಕಿ ಮಧ್ಯ ರಾತ್ರಿಯ ತಂಗಾಳಿಗೆ ಮುಖ ಒಡ್ಡಿ ಮತ್ತೆ ಕಿವಿಗೆ
ಇಯರ್ಪೋನುಹಾಕಿ ಬರುವ ಕರೆಗಳನ್ನು ಸ್ವೀಕರಿಸಿ ಸಂದೇಹ ನಿವಾರಿಸುವ ಯುವಕರ ರಾತ್ರಿಪಾಳಿಯ ಕಾಲ್
ಸೆಂಟರ್ಗಳು ಬಹು ಮಹಡಿ ಕಟ್ಟಡಗಳಲ್ಲಿ ಕಚೇರಿಗಳಲ್ಲಿದ್ದ ಬೆಳಕು ಈಗ ಅಲ್ಲಿ ಇಲ್ಲಿ ಕಾಣುತ್ತಿದೆ. ಹೀಗಾಗಿ ಸಾಮಾನ್ಯ ಹೋಟೇಲು ದರ್ಶಿನಿ
,ಅಂಗಡಿ ಮುಂಗಟ್ಟು ಮುಚ್ಚಿದರೂ ಸಂಗೀತ ಹೊರ ಹೊಮ್ಮಿಸುವ ತಾರಾ ಹೋಟೇಲುಗಳ ಮುಂದೆ ಕಾರು, ಬೈಕುಗಳ ಸಮಾವೇಶ
ಸೇರುವುದು ಸಾಮಾನ್ಯ. ಆದರೆ ಇನ್ನು ಬೆಂಗಳೂರಿನ ಹಳೆಯಸಂಪ್ರದಾಯದ ಜನರೆ ಹೆಚ್ಚಿರುವ ಗಾಂಧಿ ಬಜಾರ್ನಲ್ಲಿ
ಆ ಹಾವಳಿ ಕಡಿಮೆ. ನ್ಯೂಯಾರ್ಕಅನ್ನು ನಿದ್ರಿಸದ ನಗರ ಎಂದು ಕರೆಯುವರು. ಈಗ ಬೆಂಗಳೂರು ಸ್ವಲ್ಪ
ಮಟ್ಟಿಗೆ ಅದೆ ಹಾದಿ ಹಿಡಿದರೂ ಕೆಲವು ಪ್ರದೇಶಗಳು ನಿದ್ರೆಯ ಮಡಿಲಿಗೆ ಜಾರುತ್ತವೆ.ಗಾಂಧಿ
ಬಜಾರಿನಲ್ಲಿ ಬಿಪಿಒ ಗಳ, ಕಾಲ್ಸೆಂಟರ್ಗಳ ದಟ್ಟಣೆ ಇಲ್ಲ. ತಾರಾ ಹೋಟೇಲುಗಳ ಮೆರಗೂ ಕಡಿಮೆ.
ಹಾಗಾಗಿ ಬಹುತೇಕ ರಸ್ತೆಗಳು ಬಿಕೋ ಎನ್ನುತಿದ್ದವು.ನಾವು ಬಸ್ಸಿನಿಂದ ಇಳಿದು ಡಿವಿಜಿ ರಸ್ತೆಯಲ್ಲಿ
ತಿರುವು ತೆಗೆದುಕೊಂಡು ಮನೆಯ ಕಡೆ ಮುಖ ಮಾಡುವಾಗ ಸೋದೆ ಮಠದವಿರವ ಗೋವಿಂದಪ್ಪ ರಸ್ತೆಯ ಸರ್ಕಲ್ಲಿನಲ್ಲಿ
ಜನ ಸೇರಿದ್ದು ಕಾಣಿಸಿತು. ಗಣೇಶೋತ್ಸವ ಒಂಬತ್ತಕ್ಕೆ ಕೊನೆ. ಅದೂ ನಾಲಕ್ಕಾರು ಕಾರುಗಳು ಹತ್ತಾರು
ಬೈಕುಗಳು ಬಾಗಿಲುಮುಚ್ಚಿದ ಅಂಗಡಿಯಮುಂದೆ ನಿಲುಗಡೆ ಮಾಡಿ ಟಿಪ್ಟಾಪ್ ಉಡುಪು ಧಾರಿಗಳಾದ
ಮೇಲ್ವರ್ಗದ ಜನ ತಮ್ಮ ಸಂಗಾತಿಗಳ ಸಮೇತರಾಗಿ ಕಾಯುತಿದ್ದರು.
ಒಂದಿಬ್ಬರು ಮಕ್ಕಳು ಮರಿಗಳನ್ನು
ಜೊತೆಗಿಟ್ಟುಕೊಂಡು ನಿಂತಿರುವುದು ಕಂಡು ಬಂದಿತು. ಕುತೂಹಲದಿಂದ ಹೋಗಿ ನೋಡಿದೆವು. ಅದೇ ಸಮಯದಲ್ಲಿ ಅಲ್ಲಿಯೆ ನಿಂತ
ತಳ್ಳುಗಾಡಿಯಲ್ಲಿ ಬಿಸಿಬಿಸಿ ತಿಂಡಿ ತಯಾರಿಸುವ ಸಿದ್ಧತೆ ಆಗತಾನೆ ನಡೆದಿತ್ತು ನೀಲಿ ಜ್ವಾಲೆಯ
ಮೇಲೆ ಕರಿಯ ಹಂಚು ,ಪಕ್ಕದಲ್ಲೆ ತಾಜಾ ಇಡ್ಲಿ ತಯಾರಿಸುವ ಅಲ್ಯುಮಿನಿಯಂನ ಆಯತಾಕಾರದ ಬಿಳಿ ಪಾತ್ರೆಯ ಪಕ್ಕದಲ್ಲಿ ಹಿಟ್ಟು
ಕಲೆಸುವುದು ಕಾಣಿಸಿತು. ಬೆಂಗಳೂರಿನಲ್ಲಿ ತಳ್ಳುಗಾಡಿಯಲ್ಲಿ ತಿಂಡಿಗೆ ಮುಕುರವ ಜನಕ್ಕೇನೂ
ಕಡಿಮೆಇಲ್ಲ.ಆದರೆ ರಾತ್ರಿ ಹತ್ತೂವರೆಗೆ ದೋಸೆ ಚುಂಯ್ ಎನಿಸುವ. ಮತ್ತು ಅದಕ್ಕಾಗಿ ಕಾರಿನಲ್ಲಿ
ಬಂದು ಕಾಯುವ ಪರಿ ತುಸು ಅಚ್ಚರಿ ಮೂಡಿಸಿತು.ಕುತೂಹಲದಿಂದ ಹತ್ತಿರ ಹೋಗಿ ವಿಚಾರಿಸಲಾಗಿ ಬೆಣ್ಣೆ
ಗೋವಿಂದಪ್ಪನ ವೃತ್ತದಲ್ಲಿ ರಾತ್ರಿ ಹತ್ತರಿಂದ ೨ ತಾಸು ಕಾರ್ಯ ನಿರ್ವಹಿಸುವ ಈ ಸಂಚಾರಿ ಹೋಟೇಲು ಬಹುಪ್ರಖ್ಯಾತ
ಎಂದು ತಿಳಿಯಿತು. ಅದೂ ಇಂದು ನಿನ್ನೆಯದಲ್ಲ. ಸುಮಾರು ಮೂರುನಾಲಕ್ಕು ದಶಕದಿಂದ ನಡೆಸಿಕೊಂಡ
ಹೆಗ್ಗಳಿಕೆ ಅದರದು.ತುಸು ದೊಡ್ಡದೆ ಆದ ತಳ್ಳುಗಾಡಿ. ಅದಕ್ಕೆ ಕಾರಿನ ಚಕ್ರದಷ್ಟೆ ದೊಡ್ಡದಾದ
ನಾಲಕ್ಕು ಗಾಲಿಗಳು. ತಾತ್ಕಾಲಿಕ ವಿದ್ಯುತ್ ಸೌಲಭ್ಯವೂ ಇದೆ. ಮೂರು ನಾಲಕ್ಕು ಗ್ಯಾಸ್ ಒಲೆಗಳು.
ಸರಿ ಸುಮಾರು ಎಂಟುಹತ್ತು ಜನ ಕೆಲಸಗಾರರು,ಬಂದ
ತಕ್ಷಣ ಸಿದ್ಧವಾಗಿದ್ದ ರೈಸ್ಭಾತ್ಗೆ ಜನ ಮುತ್ತಿದರು.. ಅದೂ ದೊಸೆಯ ಹೆಂಚು ಕಾಯುವ ಮತ್ತು
ಇಡ್ಲಿ ಬೇಯುವ ತನಕ ಮಾತ್ರ ಲಭ್ಯ.. ಅರ್ಧ ಗಂಟೆಯಲ್ಲಿ ರೈಸ್ ಭಾತ್ಖಾಲಿ. ಹೆಂಚಿನ ಮೇಲೆ ದೊಸೆ
ಚುಂಯ್ ಎನ್ನುವಷ್ಟರಲ್ಲಿ ನೂರಾರು ಪ್ಲೇಟು ಭಾತ್ ಖರ್ಚಾಗಿರುತ್ತದೆ. ಆನಂತರ ಬೇಕೆಂದರೂ ಸಿಗದು.
ಚಕಚಕನೆ ಕೆಲಸ ಮಾಡುವರು. ಅವರೆಲ್ಲ ಹೆಸರಾಂತ ಹೋಟೇಲ್ ಒಂದರ ಅನುಭವಿ ಕೆಲಸಗಾರರು. ತಮ್ಮ ನಿತ್ಯದ
ಕಾಯಕ ಮುಗಿಸಿ ಇಲ್ಲಿ ರಾತ್ರಿ ಹತ್ತರ ಮೇಲೆ ಎರಡುತಾಸು ಬಿಸಿಬಿಸಿ ತಿಂಡಿ ಆಗಿಂದಾಗಲೆ ತಯಾರಿಸಿ
ನೀಡುವರು. ಅವರಕೈ ರುಚಿ ಯಾವ ತಾರಾ ಹೋಟೇಲಿಗೂ ಸರಿ ದೊರೆಯಾಗಿರುವುದು. ಜೊತೆಗೆ ಬೆಲೆಯೂ
ದುಬಾರಿಯಲ್ಲ. ಅದಕ್ಕೆಂದೆ ಜನ ಕಾದು ನಿಂತು ಟೋಕನ್ ಪಡೆಯುವರು. ಹಂಚಿನಿಂದ ಕೈಗೆ ಬರುವ
ತಿಂಡಿಯನ್ನು ಉಫ್ ಉಫ್ ಎನ್ನುತ್ತಾ ಸವಿಯುವರು.ಅಲ್ಲಿ
ಹೆಚ್ಚಿನ ವೈವಿಧ್ಯಮಯ ತಿಂಡಿಗಳಿಲ್ಲ. ಒಂದು ರೈಸ್ಬಾತ್ , ಹಬೆಯಾಡುವ ಇಡ್ಡಲಿ ಮತ್ತು ಒಂದೆರಡು
ವಿಧದ ಬಿಸಿ ಬಿಸಿ ದೋಸೆ ಮಾತ್ರ ಲಭ್ಯ.ಯಾವುದೆ ಕರಿದ ದಿನಿಸು ಇಲ್ಲ. ಮೂರು ಇಡ್ಡಲಿ. ರೈಸ್ಭಾತಿಗೆ
೨೦ ರೂಪಾಯಿ. ಯಾವುದೆ ದೋಸೆಗೆ ಇಪ್ಪತ್ತೈದುರೂಪಾಯಿ.ಅಲ್ಲಿ ಮುಚ್ಚಿದ ಅಂಡಿಯ ಕಿರುಕಟ್ಟೆಯ
ಮೇಲೆ . ಫುಟ್ ಪಾತ್ನಲ್ಲಿ ಬದಿಗೆ ನಿಲ್ಲಿಸಿದ
ಕಾರಿನಲ್ಲಿಯೆ ಕುಳಿತು ಬಿಸಿಬಿಸಿ ತಿಂಡಿಯನ್ನು ತಡಮಾಡದೆ ತಿಂದು ಜಾಗ ಖಾಲಿ ಮಾಡುವವರು ಬಹಳ. ಜೊತೆಗೆ
ಒಂದೆರಡು ಪ್ಲೇಟು ರೈಸ್ಭಾತ್ ಕಟ್ಟಿಸಿಕೊಂಡು ಮನೆಗೆ ಹೋಗವವರೂ ಇದ್ದರು. ತಟ್ಟೆ
ಪ್ಲೇಟುಗಳಿಗಿಂತ ಅದರಲ್ಲಿಟ್ಟ ತಿಂಡಿತಿನಿಸು ಸವಿಯಾಗಿದ್ರೆ ಶುಚಿಯಾಗಿದ್ದರೆ ಸಾಕು ರಸ್ತೆ
ಬದಿಯಾದರೂ ಅವರು ನಿಗದಿಮಾಡಿದ ಹೊತ್ತಿಗೆ ಬಂದು ಕಾದು ನಿಂತು ಎಲೆಯಲ್ಲಿ ನೀಡುವ ತಿಂಡಿ ತಿನ್ನುವ
ಪರಿ ನೋಡಿ ಬಾಯಿ ರುಚಿಗೆ, ಬೆಲೆಕೊಡುವ ರಸಿಕರು ಬೆಂಗಳೂರಿನಲ್ಲಿ ಇನ್ನೂ ಇದ್ದಾರೆ ಎಂಬುದು
ಖಚಿತವಾಯಿತು.ಎರಡು ತಾಸಿನ ಕೆಲಸ.. ಸುಮಾರು ನಲವತ್ತು
ಸಾವಿರ ಆದಾಯ. ಖರ್ಚುಕಳೆದು ಎಲ್ಲರಿಗೂ ಲಾಭ ಹಂಚಿಕೆ. ಆದಾಯ ಸಾವಿರಕ್ಕೆ ಕಡಿಮೆಇಲ್ಲ. ನಾವು ಅಲ್ಲಿನ ತಿಂಡಿ
ಸವಿದು ಮನೆಯತ್ತ ಹೆಜ್ಜೆಹಾಕಿದೆವು. ಮನೆ ಮುಟ್ಟಿದಾಗಲೂ ಬಾಯಲ್ಲಿ ತಿಂಡಿಯ ರುಚಿಯಘಮಲು ಇನ್ನೂ ಇತ್ತು . ಬೆಣ್ಣೆ ಗೋವಿಂದಪ್ಪನ ವೃತ್ತದಲ್ಲಿನ
ರಾತ್ರಿ ಹತ್ತರ ಮೇಲೆ ಜನರ ಹಸಿವು ತಣಿಸುವ . ತಳ್ಳು ಗಾಡಿಯ ತಿಂಡಿ ಬೆಂಗಳೂರಿನ ಪರಂಪರೆಯ
ಭಾಗವಾಗಿ ಹೋಗಿರುವ ಕಾರಣ ಆಗ ನಮಗೆ ಗೊತ್ತಾಯಿತು.
Sunday, September 30, 2012
Friday, September 28, 2012
ಸಾಸರಿನಿಂದ ನಾ ಕುಡಿವೆ
ಮುಂದೆ ನಾ
ಉಳಿಸುವುದು ಇಲ್ಲ
ಆದರೂ ನನಗಿಲ್ಲ
ಯಾವುದೇ ಚಿಂತೆ
ಸುಖಿಯಾಗಿ
ನಾನಿರಲು ಬೇರೆ ಏಕಂತೆ ?
ಬಾಳದಾರಿಯಲ್ಲಿ
ನಾ ನಡೆಯುತಿರುವಾಗ
ಬಿತ್ತಿದಕಿಂತಲು ಪಡೆದ
ಫಲ ಬಹಳ
ಕಪ್ಪಿನಲ್ಲಿ
ಹಾಲು ತುಂಬಿ ತುಳುಕಿದೆ ತಾನು
ನನ್ನ ಬಳಿ ಹಣ
ಬಹಳ ಏನಿಲ್ಲ
ಕೆಲವು ಸಲ ಜೀವನ
ನಡೆವುದೇ ಕಠಿನ
ಬಂದ ಬಂದವರು ನೀಡುತಿರೆ ಭರವಸೆ
ಬೇಕೇನು ಬದುಕಿಗೆ ಬೇರೆ ಭರವಸೆ .
ಕರುಣಾಮಯ ದೇವನಿಗೆ
ವಂದನೆ
ದಯೆಯ ಮಳೆಗರೆದಿರುವ ಎನ್ನ ಮೇಲೆ
ಸಾಸರಿ ನಿಂದ ಸುಖವ
ಕುಡಿಯುತಿರುವೆ
ಕಾರಣ ತುಂಬಿ
ತುಳುಕಿದೆ ಬಟ್ಟಲು
ಶಕ್ತಿ ಮತ್ತು
ಧೈರ್ಯ ವದನು ಅವನು
ಬಾಳ ಬಟ್ಟೆಯಲ್ಲಿ
ಹರಡಿದಿರೆ ಮುಳ್ಳುಕಲ್ಲು
ಹೆಚ್ಚೇನು
ಬೇಡಲಿ ಅವನ ನಾನು
ಈಗಾಗಲೇ
ನೀಡಿರುವ ಎಲ್ಲ ತಾನು
ನಮಗೆ ಸದಾ ದೊರಕಲಿ ಪುರುಸೊತ್ತು
ಆಸರೆ ನೀಡಲು ಬಳಲಿದವರಿಗೆ ಹೊರೆಹೊತ್ತು
ಆಗ ನಾವೆಲ್ಲ ಸುಖದಿಂದ ಕುಡಿಯೋಣ
ತುಂಬಿ ತುಳಿಕಿರಲು ಎಲ್ಲರ ಬಟ್ಟಲು ತಾನು
(ಅಂತರ್ಜಾಲದಲ್ಲಿ ಓದಿದ ಕವನ ಒಂದರಿಂದ ಪ್ರೇರಿತ)
Thursday, September 27, 2012
Tuesday, September 25, 2012
ಕನ್ನಡವೆ ಎನ್ನುಸಿರು ಎಂದು ಬದುಕಿದ ಪ್ರೊ. ಡಿ.ಲಿಂಗಯ್ಯ:ಅಪ್ಪಾಜಿರಾಯರ ಸ್ಮರಣೆ | ||||
ಎಚ್. ಶೇಷಗಿರಿರಾವ್ | ||||
ಶುಕ್ರವಾರ, 21 ಸೆಪ್ಟೆಂಬರ್ 2012 (00:00 IST) | ||||
ಪ್ರತಿಷ್ಠಾನವು ನಡೆಸುತಿದ್ದ ಹಸ್ತಪ್ರತಿ ಅಧ್ಯಯನದ ತರಗತಿಗೆ ನಾನು ಸೇರಿದ ಮೇಲೆ ಜತೆಗೆ ಅವರೊಂದಿಗೆ ರಾಮಚಂದ್ರಾಪುರ ಮಠದಲ್ಲಿ ನಡೆಸಿದ ಹಸ್ತಪ್ರತಿ ಆಧ್ಯಯನ ಸಮಾವೇಶದಲ್ಲಿ ಭಾಗವಹಿಸಿದಾಗ ಅವರ ಬಹು ಮುಖ ಪ್ರತಿಭೆಯ ಸರಳ ವ್ಯಕ್ತಿತ್ವದ ಪರಿಚಯವಾಯಿತು. ಸುಮಾರು ಎಂಬತ್ತಕ್ಕೂ ಹೆಚ್ಚು ಕೃತಿಗಳ, ಅದೂ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಧನೆ ಮಾಡಿರುವುದು ಮೆಚ್ಚಿಗೆ ಮೂಡಿಸಿತು. ಈ ಸಾಹಿತ್ಯ ಸೇವೆ ಸತತ ಐದು ದಶಕಗಳ ನಿರಂತರ ಸೇವೆಯ ಫಲ. ಕಾಲೇಜು ಕಟ್ಟೆ ಹತ್ತಿದಾಗಲೆ ವಿದ್ಯಾರ್ಥಿ ದೆಶೆಯಲ್ಲೆ ೧೯೬೨ರಲ್ಲಿ ಮೊದಲ ನಾಟಕ “ ದಡ್ಡ ಶಿಖಾಮಣಿ “ ಪ್ರಕಟ, ಸತತ ಸಾಹಿತ್ಯ ಸೇವೆ ಜಾನಪದಲೋಕದ ದಿಗ್ಗಜ ಎಸ್.ಕೆ ಕರೀಂಖಾನರ ಬದುಕು ಮತ್ತು ಬರಹಗಳ ಕುರಿತ ಬೃಹತ್ ಕೃತಿ ಅವರ ಅಂತಿಮ ಕಾಣಿಕೆ ಈಗ ಪ್ರಕಟನೆಗೆ ಸಿದ್ಧವಾಗಿದೆ. ಈ ಅವಧಿಯಲ್ಲಿ ನಾಲ್ಕು ನಾಟಕಗಳು, ಮೂರು ಕಥಾ ಸಂಗ್ರಹಗಳು, ನಾಲ್ಕು, ವಿಮರ್ಶಾಗ್ರಂಥಗಳು, ಡಜನ್ ಕವನ ಸಂಗ್ರಹಗಳು, ಐದು ವ್ಯಕ್ತಿಚಿತ್ರಗ್ರಂಥಗಳು, ಐದು ಜೀವನ ಚರಿತ್ರೆಗಳು, ನಾಲ್ಕು ಪ್ರಬಂಧ ಸಂಕಲನಗಳು ಮೂರು ಸ್ವಾತಂತ್ರ್ಯ ಚಳುವಳಿ ಸಂಬಂಧಿತ ಗ್ರಂಥಗಳು ಎರಡು ಕಾದಂಬರಿಗಳು, ೨೧ ಜಾನಪದ ಸಂಬಂಧಿತ ಕೃತಿಗಳು. ೨೦ ಸಂಪಾದಿತ ಗ್ರಂಥಗಳು, ಇನ್ನು ನೂರಾರು ಕಿರುಲೇಖನಗಳು, ಸಾಕ್ಷ್ಯ ಚಿತ್ರಗಳಿಗೆ ಸಾಹಿತ್ಯ, ರಚನೆ ಮತ್ತು ದೂರದರ್ಶನಗಳಲ್ಲಿ ಸಂವಾದಗಳು ಅವರ ಆಸಕ್ತಿಯ ಪಾಂಡಿತ್ಯದ ವ್ಯಾಪ್ತಿಗೆ ಸಾಕ್ಷಿಯಾಗಿವೆ. ವೃತ್ತಿ ಮತ್ತು ಪ್ರವೃತ್ತಿಗಳು ಪರಸ್ಪರ ಪೂರಕವಾದ ಸೌಭಾಗ್ಯ ಅವರದು. ಹಳ್ಳಿಗಾಡಿನಿಂದ ಬಂದ ಅವರಿಗೆ ಜಾನಪದ ಸಂಸ್ಕೃತಿ ರಕ್ತಗತ. ಹಳ್ಳಿಯ ಜನ ಹೃದಯಕ್ಕೆ ಹತ್ತಿರ. ಅಂತೆಯೆ ತಮ್ಮ ಸಮಯವನ್ನು ಗ್ರಾಮೀಣ ಸೊಗಡಿನ ಅನಾವರಣಕ್ಕೆ ಮೀಸಲಿರಿಸಿದರು. ಅವಿರತ ಕ್ಷೇತ್ರ ಕಾರ್ಯ ಮಾಡಿ, ಜನಪದ ಗೀತೆಗಳು, ಜನಪದ ಕಾವ್ಯಗಳು, ಪ್ರಾಣಿ ಕಥೆಗಳು ಹೀಗೆ ಸುಮಾರು ೨೧ ಪುಸ್ತಕಗಳನ್ನು ಪ್ರಕಟಿಸಿರುವ ಹಿರಿಮೆ ಇವರದು. ಲಿಂಗಯ್ಯನವರು ಕೃಷಿ ಮಾಡದ ಸಾಹಿತ್ಯ ಕ್ಷೇತ್ರವನ್ನು ಕನ್ನಡದಲ್ಲಿ ಹುಡುಕುವುದು ಕಷ್ಟ, ಎನ್ನುವುದು ಕ್ಲೀಷೆಯಲ್ಲ. ನಾಟಕ, ಕಥೆ, ಕವನ, ಜೀವನ ಚರಿತ್ರೆ,bವ್ಯಕ್ತಿಚಿತ್ರಗಳು, ಪ್ರಬಂಧ ಮತ್ತು ಗ್ರಂಥ ಸಂಪಾದನಾ ಕ್ಷೇತ್ರದಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿರುವರು. ಅವರ ಕಾಣಿಕೆ ಬರಿ ಸಾಹಿತ್ಯಕ್ಕೆ ಸೀಮಿತವಾಗದೆ ಜನಪರ ಚಳುವಳಿಗಳಲ್ಲೂ ವ್ಯಕ್ತವಾಗಿದೆ. ಕನ್ನಡಪರ ಚಳುವಳಿಯಲ್ಲಿ ಅವರದು ಸದಾ ಎದ್ದು ಕಾಣುತಿದ್ದರು. ಅವರು ಬರಿ ಪತ್ರಿಕಾ ಹೇಳಿಕೆ ನೀಡಿ ಪ್ರತಿಭಟಿಸುವ ಕಾಗದದ ಹುಲಿಯಲ್ಲ. ೧೯೬೭ ರಿಂದ ೨೦೦೭ ರ ವರೆಗೆನ ಹಲವಾರು ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗಿಗಳು.೧೯೮೨ ರಲ್ಲಿ ಗೋಕಾಕ ಚಳುವಳಿಯಲ್ಲಿ ಸರಕಾರದ ವಿಳಂಬ ನೀತಿ ಪ್ರತಿಭಟಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌ. ಕಾರ್ಯದರ್ಶಿ ಸ್ಥಾನಕ್ಕೆ ರಾಜಿನಾಮೆನೀಡಿದ್ದರು. ಜನಪರ ನಿಲುವಿನಿಂದಾಗಿ ಅವರು ಜನಪ್ರಿಯರೂ ಆಗಿದ್ದರು ಹಾಗಾಗಿ ಅನೇಕ ಸಾಹಿತ್ಯ ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ಕೊನೆಯುಸಿರು ಇರುವವರೆಗೆ ಶ್ರಮಿಸಿದರು. ಅವರ ಬಹುಮುಖ ಪ್ರತಿಭೆ ಪ್ರಶಸ್ತಿಗಳು ಅವರ ಬೆನ್ನು ಹತ್ತಿ ಬಂದವು. ರಾಜ್ಯ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಚುಂಚ ಶ್ರೀ ಪ್ರಶಸ್ತಿ ಅವರಿಗೆ ಬಂದ ಹತ್ತಕ್ಕೂ ಹೆಚ್ಚು ಪ್ರಶಸ್ತಿಗಳಲ್ಲಿ ಮುಖ್ಯವಾದವು. ಅವರ “ ಬಯಲು ಸೀಮೆಯ ಜನಪದ ಗೀತೆಗಳು” ಕರ್ನಾಟಕ ಸಾಹಿತ್ಯಕಾಡಮಿಯ ಬಹುಮಾನ ಪಡೆದರೆ, ಕರ್ನಾಟಕ ಜಾನಪದ ಕಾವ್ಯವು, ದೇವರಾಜ ಬಹದ್ದೂರ್ ಪ್ರಶಸ್ತಿಗೆ ಭಾಜನವಾಗಿದೆ.”ವಚನ ದವನ “ ಜಾನಪದ ಸಾಹಿತ್ಯ ಅಕಾಡಮಿಯ ಬಹುಮಾನ ಪಡೆದಿದೆ. ”ಸತ್ಯಾಗ್ರಹಿಗಳ ಸಂದರ್ಶನ”, ಕರ್ನಾಟಕ ಗಾಂಧಿ ಪ್ರತಿಷ್ಠಾನ ಪ್ರಶಸ್ತಿ ಪಡೆದಿದೆ. ಅವರ ವ್ಯಾಪಕ ಕ್ಷೇತ್ರಾನುಭವ ಮತ್ತು ಜನಸಂಪರ್ಕದಿಂದಾಗಿ ಅನೇಕ ಪ್ರಶಸ್ತಿ ಸಮಿತಿಗಳ ಸದಸ್ಯರಾಗಿ ದುಡಿದರು. ಹಿರಿಯರಿಗೆ ಮನ್ನಣೆ ನೀಡಿ ಕಿರಿಯರಿಗೆ ಬೆನ್ನುತಟ್ಟಿ ಅರ್ಹರಿಗೆ ಪ್ರಶಸ್ತಿ ನೀಡಿ ಬೆನ್ನು ತಟ್ಟುವಲ್ಲಿ ಸದಾ ಮುಂದು. ಶರಣರ ಸಾವು ಮರಣದಲ್ಲಿ ನೋಡು ಎಂಬ ಮಾತುಬಹು ಪ್ರಸಿದ್ಧ. ಆದರೆ ಅದರ ಪ್ರತ್ಯಕ್ಷದರ್ಶನ ನನಗೆ ಇತ್ತೀಚೆಗೆ ಆಯಿತು. ಬಿ.ಎಂ.ಶ್ರೀ ಪ್ರತಿಷ್ಠಾನವು ಬೆಂಗಳೂರು ಮೂಲದ ವಿಶಿಷ್ಟ ಸಾಂಸ್ಕೃತಿಕ ಸಂಸ್ಥೆ. ಖ್ಯಾತ ಸಾಹಿತಿ ಎಂವಿ ಸೀತಾರಾಮಯ್ಯನವರ ಕನಸಿನ ಕೂಸು. ಅಳಿದು ಹೋಗುತ್ತಿರುವ ಹಸ್ತ ಪ್ರತಿ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಮೊಟ್ಟ ಮೊದಲ ಸಂಸ್ಥೆ. ಹಸ್ತಪ್ರತಿಗಳ ಸಂಗ್ರಹ, ಸಂರಕ್ಷಣೆ ಮತ್ತು ಸಂಪಾದನೆಯ ಗುರಿ ಅದರದು. ಕನ್ನಡಸಾಹಿತ್ಯ ಲೋಕದ ಘಟಾನುಘಟಿಗಳೆಲ್ಲರ ಸಹಯೋಗದ ಭಾಗ್ಯ ಅದಕ್ಕಿದೆ. ಕಳೆದ ವಾರ ಕನ್ನಡದ ಹಿರಿಯ ವಿದ್ವಾಂಸರಾದ ಡಾ. ಜಿ. ನಾಡೋಜ ಪ್ರೊ. ಜಿ.ವೆಂಕಟಸುಬ್ಬಯ್ಯ ನವರು, ಸಾಹಿತ್ಯ ಸಾಧನೆಗಾಗಿ ಇರುವ ಬಿ.ಎಂ.ಶ್ರೀ ಪ್ರಶಸ್ತಿಯನ್ನು, ಕೆ. ಸತ್ಯನಾರಾಯಣ ಅವರಿಗೆಗೆ ಪ್ರದಾನ ಮಾಡುವ ಸಮಾರಂಭ. ಡಾ. ಚಿದಾನಂದ ಮೂರ್ತಿ, ವೆಂಕಟಾಚಲ ಶಾಸ್ತ್ರಿ, ಎಲ್.ಎಸ್.ಶೇಷಗಿರಿರಾಯರುಗಳನ್ನು ಗೌರವಿಸುವ ಮತ್ತು ಸಭಾಂಗಣ ಸಾಹಿತಿಗಳಿಂದ ವಿದ್ವಾಂಸರಿಂದ ಕಿಕ್ಕಿರಿದಿತ್ತು. ಅವರ ದರ್ಶನ ಪಡೆವ ,ಅನುಭವಾಮೃತ ಸ್ವಾದಿಸುವ ಸವಿಗಳಿಗೆಗಾಗಿ ಕಾತುರದಿಂದ ಕಾಯುತಿತ್ತು ಜನ. ಶತಾಯುಷಿಗಳಿಗೆ ಸನ್ಮಾನವಾಯಿತು, ಈ ಎಲ್ಲ ಕಾರ್ಯಕ್ರಮದ ರೂವಾರಿ ಪ್ರೊ.ಡಿ. ಲಿಂಗಯ್ಯ, ಪ್ರತಿಸ್ಠಾನದ ಅಧ್ಯಕ್ಷರು, ಹೆಮ್ಮೆಯಿಂದ ಬೀಗುತಿದ್ದರು. ಹೀಗೆ ಹಿರಿತಲೆಗಳನ್ನೆಲ್ಲ ಒಟ್ಟು ಗೂಡಿಸಿರುವುದಕ್ಕೆ ಅವರಿಗೆ ಕಣ್ಣುತುಂಬಿ ಬಂದಿತ್ತು. ಶಾಲು ಹೊದಿಸಿ ಹಾರ ಹಾಕಿ ವೇದಿಕೆಯಲ್ಲೆ ಕುಸಿದರು. ವೇದಿಕೆಯ ಮೇಲೆ ಕುಳಿತಿದ್ದವರು ಆತಂಕಕ್ಕೆ ಒಳಗಾದರು. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಎಲ್ಲರೂ ಕಾರ್ಯಕ್ರಮವನ್ನು ಮೊಟಕುಗೊಳಿಸಿ ಮಾಹಿತಿಗಾಗಿ ಆತಂಕದಿಂದ ಎದುರುನೋಡುತ್ತಿರುವಾಗಲೆ ಅವರು ಕಾಲವಶರಾದ ವಾರ್ತೆ ಬಂದಿತು. ಅವರ ತಲೆಮಾರಿನ ಹದ ಕೆಲವೆಗಂಟೆಗಳಲ್ಲಿ ಅವರ ಕಳೆಬರವನ್ನು ಅವರ ಕಾರ್ಯಕ್ಷೇತ್ರದಲ್ಲೆ ಅಂತಿಮ ಗೌರವ ಸಲ್ಲಿಸಲು ತರಲಾಯಿತು. ಸಂತೋಷ ಸಭೆ ಸಂತಾಪ ಸೂಚಕ ಸಭೆಯಾಯಿತು. ಜನಪದ ವಿದ್ವಾಂಸ, ಸಾಹಿತಿ ಮತ್ತು ಉತ್ತಮ ಆಡಳಿತಗಾರರು ತಮ್ಮ ಎಪ್ಪತ್ತನಾಲ್ಕನೆ ವಯಸ್ಸಿನಲ್ಲೂ ಚುರುಕಾಗಿದ್ದ ಅವರ ಆಕಸ್ಮಿಕ ಅಂತ್ಯವನ್ನು ಕಂಡ ಜನರೆಲ್ಲ ಮರುಗಿದರೂ ಎಂಥಹ ಪುಣ್ಯದ ಸಾವು. ಕನ್ನಡದ ಸೇವೆಯಲ್ಲೆ ವೇದಿಕೆಯಲ್ಲೆ ಕಾಲವಶರಾದರು ಎಂದು ಅಶ್ರುತರ್ಪಣ ಅರ್ಪಿಸಿದೆವು. ಅಂತಿಮಗೌರವ ಸಲ್ಲಿಸಲಾಯಿತು. ತಮ್ಮ ಪ್ರೀತಿಯ ಕಾಯಕದ ನಿರ್ವಹಣೆಯಲ್ಲೆ ಕೈಲಾಸ ಸೇರಿದ ಅವರ ಸೇವೆ ಧನ್ಯ ಎನಿಸಿತು. ಎರಡುವರ್ಷದ ಹಿಂದೆ ಖ್ಯಾತ ವಿರ್ಮಶಕ ಡಾ.ಕಿರಂ ನಾಗರಾಜ, ಬೇಂದ್ರೆಕುರಿತು ಸತತ ೨ ತಾಸು ಮಾತನಾಡಿ, ಕೇಳುಗರನ್ನು ಮಂತ್ರ ಮುಗ್ದಗೊಳಿಸಿ ಮನೆಗ ಹೋಗುವ ಹಾದಿಯಲ್ಲೆ ಮರಣವನ್ನಪ್ಪಿದ್ದು ನೆನಪಿಗೆ ಬಂತು. ಅವರ ನೆನಪಿನಲ್ಲಿ ಈಗ ಪ್ರತಿವಾರ ಶನಿವಾರ ಕಿರಂ ನುಡಿ ಮನೆಯಲ್ಲಿ ಸಾಹಿತ್ಯಕಾರ್ಯಕ್ರಮ ,ಸಂವಾದವನ್ನು ಕಲ್ಲು ಮಣ್ಣಿನ ಕಟ್ಟಡ , ಲೋಹದ ಪುತ್ಥಳಿಗಳಿಗಿಂತ ಈ ಮಾದರಿಯ ಸ್ಮರಣೆ ಸ್ವಾಗತಾರ್ಹ.ಪ್ರೊ. ಡಿ ಲಿಂಗಯ್ಯನವರ ಸ್ಮರಣಾರ್ಥ ಅಂತಹ ಸಾಹಿತ್ಯೋಪಾಸನೆ ಜರುಗಲಿ ಎಂಬುದು ಸಾಹಿತ್ಯಾಸಕ್ತರ ಸದಾಶಯ. | ||||
Monday, September 17, 2012
ಹೀಗೊಂದು ಪ್ರಾರ್ಥನಾ ಪ್ರಸಂಗ
|
Thursday, September 13, 2012
ಕರಡಿ ಮರವ ಏರಿತು
ಕರಡಿ
ಮರವ ಏರಿತು
ಕಾರಿನ ಕರಗ ನೋಡಿ ಊರಲ್ಲಿ
ಸುತ್ತ ಹೊರಟೆವು. ನಮ್ಮ
ಶಿಬಿರ ಇರುವದು ಪುಟಾಣಿ ಊರಲ್ಲಿ. ಫಿನಿಶಿಯಾ ಎಂಬ ಪುರಾತನ
ನಾಗರಿಕತೆಯ ಹೆಸರು. ಇಲ್ಲಿ ಬಂದ ಬಗೆ ನಮಗೆ ತಿಳಿಯದು. ಬೆಟ್ಟದ
ಬುಡದಲ್ಲಿ, ನದಿಯ ತಟದಲ್ಲಿ ಕಾಡಿನ ನಡುವೆ ಇರುವ ಸುಂದರ ಗ್ರಾಮ. ಊರಿಗೆ
ಒಂದೇ ಒಂದು ಮುಖ್ಯ ರಸ್ತೆ. ಎರಡು ಬದಿಯಲ್ಲಿ ಕಟ್ಟಿಗೆ ಮನೆಗಳು.
ಪ್ರವಾಸಿಗರ ಅಗತ್ಯ ಪೂರೈಸುವ ಸರ್ವ ವಸ್ತು ಭಂಡಾರ, ಹೋಟೆಲ್, ಮೋಟೆಲ್, ವಸತಿ ಗೃಹಗಳು.
ಊರು ಭಿತ್ತಿ ಚಿತ್ರದಂತೆ ಬಹು ಸುಂದರ. ಇದು ಸದ ಪ್ರವಾಸಿಗರ ನೆಚ್ಚಿನ ತಾಣ. ಬೇಸಗೆಯಲ್ಲಿ ಜನ ಜಾತ್ರೆ. ಚಾರಣಿಗರು, ಬೆಟ್ಟ ಏರುವವರು, ಸಾಹಸ ಕ್ರೀಡೆಗಾಗಿ ಕಾರಿನಲ್ಲಿ, ಬಸ್ಸಿನಲ್ಲಿ ಸೈಕಲ್ ಸವಾರರಾಗಿ ವಾರಾಂತ್ಯದಲಿ
ಮುಕುರುವರು. ಚಳಿಗಾಲದಲ್ಲೂ ಸಹಾ ತೆರಪಿಲ್ಲ. ಸ್ಕೀಯಿಂಗ್ ಗೂ
ಇದು ಹೇಳಿ ಮಾಡಿಸಿದ ಜಾಗ. ಆಗ ಮರಗಳೆಲ್ಲ ಬೋಳು ಬೋಳು.
ಅವುಗಳ ನಡುವೆ ಬೆಟ್ಟಗಳ ಇಳಿಜಾರಿನಲ್ಲಿ ಕಾಲಿಗೆ ಹಲಗೆ ಕಟ್ಟಿಕೊಂಡು, ಹಿಮಾವೃತ ಬೆಟ್ಟಗಳನ್ನೂ ದಾಟುವ ಸಾಹಸಿಗರ ಸ್ವರ್ಗ
ಇದು. ಸಕ್ಕರೆ ಬೆಟ್ಟದ ಮೇಲಿನ ಕರಿ ಇರುವೆಗಳ ರೀತಿ ಕಾಣುತ್ತಾರೆ. ವಿಶೇಷ ಉಡುಪು ಧರಿಸಿದ ಆ ಜನ.
ಊರಿನ ಪ್ರಮುಖ ಭಾಗದಲ್ಲಿ ದೊಡ್ಡ ಫಲಕ ಅಲ್ಲಿರುವ ಚಾರಣದ ದಾರಿಗಳ ವಿವರ. ಅವುಗಳ ಅಂತರ, ಎತ್ತರ, ಪ್ರಯಾಸದ ಮಟ್ಟ
ಎಂದರೆ, ಸುಲಭ, ಸಾಧಾರಣ, ಕಷ್ಟ, ಕಡು ಕಷ್ಟ, ಇತ್ಯಾದಿ.
ಎಷ್ಟು ದೂರ ಕಾರಲ್ಲಿ ಹೋಗಬಹುದು, ಹೆಂಗಸರು, ಮಕ್ಕಳು,
ಹಿರಿಯರು ಹೋಗಬಹುದೆ, ಅಲ್ಲಿ ದೊರಕಬಹುದಾದ ಸೌಲಭ್ಯ,
ಬೇಕಾಗುವ ಸಮಯ ಅಗತ್ಯವಾದ ಪೂರ್ವ ತಯಾರಿ, ಎಲ್ಲ
ನಮೂದಿತವಾಗಿದ್ದವು.
ಈ ಉರಿನಲ್ಲಿ ಎಲ್ಲಿಯೂ
ಮೊಬೈಲ್ ಸಂಕೇತ ದೊರಕದು. ಏನಿದ್ದರೂ ಸ್ಥಿರ ದೂರವಾಣಿಯಿಂದ ಮಾತ್ರ ಸಂಪರ್ಕ. ಹೀಗೆ ನಮಗೆ ಆ ದಿನ ಎಲ್ಲಿ
ಹೀಗಿರಬಹುದು ಎನ್ನುವ ಸ್ಥೂಲ ಕಲ್ಪನೆ ಸಿಕ್ಕಿತು. ಆಗಲೇ ಗಂಟೆ ಎಂಟೂವರೆ. ಮಲಗಿದ್ದವರೆಲ್ಲರನ್ನು
ಹೊರಡಿಸಬೇಕೆಂದು ಮನೆ ಕಡೆ ಮುಖ ಮಾಡಿದೆವು.
ನಮ್ಮ ಶಿಬಿರದ ಪ್ರವೇಶ ದ್ವಾರದ ಹತ್ತಿರ
ಆಗಲೇ ಜನ ಜಂಗುಳಿ. ರಸ್ತೆಯ ಆಚೆ ಬದಿಯಲ್ಲಿ ನಿಂತು ಏನನ್ನೋ ನೋಡುತ್ತಿದ್ದಾರೆ. ಎಲ್ಲರ ದೃಷ್ಟಿ
ದೂರದ ಮರದ ಮೇಲೆ. ಸಮವಸ್ತ್ರಧಾರಿ ಮಹಿಳೆಯೋಬ್ಬಳು ರಸ್ತೆಯಲ್ಲಿನ
ವಾಹನಗಳ ಒಡಾಟ ನಿಲ್ಲಿಸಿ, ಜನರನ್ನು ನಿಯಂತ್ರಿಸುತ್ತಿದ್ದಾಳೆ. ಆಗಲೇ
ಅಗ್ನಿಶಾಮಕ ವಾಹನದಲ್ಲಿ ಬಂದ ಇಬ್ಬರು ಆ ಮರದ ಸುತ್ತ ನೂರು ಅಡಿಯವರೆಗೆ ಯಾರು ಹೋಗದಂತೆ ಸೂಚನೆ
ಇರುವ ಬಣ್ಣದ ತಡೆ ಟೇಪನ್ನು ಕಟ್ಟಿದರು. ಏನಾಗಿದೆ ಎಂಡು ನಮಗೆ
ಅಚ್ಚರಿ. ಕೇಳಿದಾಗ ತಿಳಿಯಿತು. ಹಿಂದಿನ ರಾತ್ರಿ ಕರಡಿಗಳ ಗುಂಪು
ನಮ್ಮ ಶಿಬಿರಕ್ಕೆ ಭೇಟಿ ನೀಡಿದ್ದವು. ಅವುಗಳ ಪೈಕಿ ಒಂದು ದೊಡ್ಡ ಹೆಣ್ಣು
ಕರಡಿ ಎರಡು ಮರಿಗಳೊಂದಿಗೆ ಮರವೇರಿ ಕುಳಿತಿದೆ. ಕರಡಿ ಬೆಟ್ಟಕೆ ಹೋಯಿತು ಎಂದು
ಶಿಶು ಗೀತೆ ಕೇಳಿದ್ದ ನಾವು ಬೆಟ್ಟದಿಂದ ಇಳಿದು, ಬಯಲಲ್ಲಿ ತಿಂಡಿ
ತಿಂದು, ಮರವೇರಿ ಕುಳಿತ ಕರಡಿಗಳನ್ನು ನೋಡಿದ್ದು ಇದೆ ಮೊದಲು.
ಚಿತ್ರದುರ್ಗದಲ್ಲಿ ಬೆಟ್ಟ
ಇಳಿದು ಬರುವ ಕರಡಿ ದರ್ಶನ ಆಗೀಗ ಆಗುತಿತ್ತು. ಜನ ಕೊಡುವ ಬ್ರೆಡ್ಡು, ಶೇಂಗಾ
ಪಡೆಯಲು ಸಂಜೆಯ ಕಾಲಕ್ಕೆ ಸರಿಯಾಗಿ ಹಾಜರಾಗುತ್ತಿದ್ದ, ಅದಕ್ಕೆ ಜಂಬೂ
ಎಂದು ಹೆಸರಿಟ್ಟಿದ್ದರು. ಒಂದು ಬಾರಿಯಂತೂ, ದುರ್ಗದ ಬೆಟ್ಟ ಗುಡ್ಡಗಳಲ್ಲಿ ಮಿನಿ ಚಾರಣಕ್ಕೆ ಹೋಗಿದ್ದ ನಮ್ಮಿಂದಲೂ ಏನೋ ನಿರೀಕ್ಷಿಸಿ,
ಬೆನ್ನು ಹತ್ತಿ ಬಂತು. ತಪ್ಪಿಸಿಕೊಳ್ಳಲು,
ಬಂಡೆಯೊಂದನ್ನು ಹತ್ತಿ ಕೂರಬೇಕಾಗಿ ಬಂದಿತ್ತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ, ಅದು ನಮ್ಮನ್ನು
ನಿರೀಕ್ಷಿಸುತ್ತ, ಕೆಳಗೆ ಕಾವಲು ಕೂತಿತ್ತು.
ಆದರೆ, ರಸ್ತೆ ಬದಿಯ ಎತ್ತರದ ಮರವನ್ನು ಮರಿಗಳ
ಸಮೇತ ಏರಿ ಕುಳಿತದ್ದನ್ನು ನೋಡಿದ್ದು ಇದೆ ಮೊದಲು. ಅದಕ್ಕೆ
ಗಾಬರಿಯಾಗದಿರಲೆಂದು ಸಂಚಾರದ ದಿಕ್ಕನ್ನೇ ಬದಲಿಸಲಾಗಿತ್ತು. ಬೆಟ್ಟದಲ್ಲಿ
ಕರಡಿ ಇವೆ ಎಂದು ಕೇಳಿದ್ದ ನಮಗೆ ಅವು ನಮ್ಮ ಭೇಟಿಗೆ ಬಂದಿದ್ದವು ಎಂದಾಗ ಹೊರಗೆ ಸಂತೋಷ ತೋರಿಸಿದರೂ,
ಮನದಲ್ಲಿ ಭೀತಿ ಮನೆ ಮಾಡಿತ್ತು. ಆದರೆ ಇದು ಪ್ರವಾಸಿಗಳಿಗೆ ಅನಿರೀಕ್ಷಿತ
ಬೋನಸ್. ಎಲ್ಲರೂ ಕೆಮರ ಕ್ಲಿಕ್ ಮಾಡುವವರೆ. ಟೆಲಿ ಲೆನ್ಸ್ ಇದ್ದವರಿಗೆ ಖುಷಿಯೋ ಖುಷಿ. ಇಲ್ಲದವರು
ಕ್ಲೋಸ್ ಅಪ್ ಚಿತ್ರಕ್ಕಾಗೇ ಕುಳಿತೂ- ನಿಂತೂ, ಮರವೇರಿ ಸರ್ಕಸ್ಸು ಮಾಡಿ
ಉತ್ತಮ ಚಿತ್ರ ಪಡೆವ ಪ್ರಯತ್ನಪಟ್ಟರು.
ನಮ್ಮ ತಂಬೂಗೆ ಬಂದಾಗ ಬೆಳಗಿನಜಾವದ ಜಾಂಬವ ಸೈನ್ಯದ ದಾಂಧಲೆಯ ಪರಿಚಯವಾಯಿತು. ನಡುರಾತ್ರಿ
ಮೀರಿ, ಕುಡಿದು ಕುಪ್ಪಳಿಸಿದ ಜನ ತಿಂಡಿ ತೀರ್ಥಗಳನ್ನೂ ಬಯಲಲ್ಲೇ ಮೇಜಿನ
ಮೇಲೆ ಬಿಟ್ಟಿದ್ದರು. ಅವು ಕರಡಿ ಪಡೆಯ ಪಾಲಿಗಿದ್ದವು. ತಿಂದದ್ದಕ್ಕಿಂತ ಚೆಲ್ಲಾಪಿಲ್ಲಿಯಾದದ್ದೇ
ಹೆಚ್ಚು. ಕರಿ ಕರಡಿ ಶಿಬಿರ ಎಂಬ ಹೆಸರಿಗೆ ನ್ಯಾಯ ಒದಗಿಸಲು ಕರಡಿಗಳೆ ದರ್ಶನ ನೀಡಿದ್ದವು ಅಥವಾ ಪ್ರವಾಸಿಗಳಲ್ಲಿ ರೋಮಾಚಂನ ಹುಟ್ಟಿಸಲು ಮಾಡಿದ
ಮಾರ್ಕೆಟಿಂಗ್ ಟ್ರಿಕ್ಕಾ..? ಇರಲಾರದು ಎಂದೇ ಅಂದುಕೊಂಡೆವು.
Labels:
ಅಮೇರಿಕಾ,
ಕರಗ,
ಚಾರಣ,
ಫಿನಿಷಿಯಾ,
ರಿಪ್ವ್ಯಾನ್ವಿಂಕಲ್,
ಸ್ಕೀಯಿಂಗ್
Subscribe to:
Posts (Atom)