Thursday, May 1, 2014

ತಂದೆ ತಿಳಿಯದ- ಮೂವರು ಮಾತೆಯರ ಕಂದ

ಲಿಂಗ ಎಂಬುದು ಈಗ ವ್ಯಾಕರಣದಲ್ಲಿ ಮಾತ್ರ  ! 
ಜೇನು ಹುಳಕುರಿತು ಅಧ್ಯಯನ ಮಾಡುವಾಗ ತಿಳಿಯಿತು   ಜೇನು ಗೂಡಿನಲ್ಲಿ ಮೂರು ರೀತಿಯ ಹುಳುಗಳು ಇರುತ್ತವೆ. ರಾಣಿ ಜೇನುಹುಳು,ಗಂಡು ಜೇನುಹುಳು ಮತ್ತು ಕೆಲಸಗಾರ ಜೇನುಹುಳುಗಳು ಎಂದು. ಅವು ತಾವು ಮಾಡುವ ಕೆಲಸಕ್ಕೆ ಅನುಗುಣವಾಗಿ ತುಸು ಮಾರ್ಪಾಟು ಹೊಂದಿರುತ್ತವೆ..ಈಗಲೂ ತುಂಬಿದ ಸಂಸಾರವನ್ನು ಜೇನುಗೂಡಿನಂಥಹ ಸಂಸಾರ ಎನ್ನುವ ಹೇಳಿಕೆ ಕೊಡುವ ವಾಡಿಕೆ ಇದೆ. ಆದರೆ ಮಾನವ ಸಮಾಜದಲ್ಲೂ ಇದೇರೀತಿಯ ವರ್ಗೀಕರಣ ಇನ್ನೊಂದು ರೂಪದಲ್ಲಿ ಬರಬಹುದು ಎಂದು ನಿನ್ನೆ ಅಮೇರಿಕಾದಲ್ಲಿ ಪತ್ರಿಕೆಯೊಂದರಲ್ಲಿನ ಸುದ್ದಿಯ ತುಣಕನ್ನು ಓದಿದಾಗ ಅನಿಸಿತು.
ಸುದ್ದಿ ಬಹಳ ಸರಳವಾದುದು. ಸಲಿಂಗ ವಿವಾಹ ಕುರಿತಾದದ್ದು.ಈಗ ನಾಲ್ಕುವರ್ಷದ ಹಿಂದೆ ನಾನು ಅಮೇರಿಕಾಕ್ಕೆ ಬಂದಾಗಲೇ ಅಧ್ಯಕ್ಷ ಬರಾಕ್‌ಒಬಾಮ ಸಲಿಂಗವಿವಾಹ ಕಾನೂನು ಬದ್ದ ಎಂದು ಘೋಷಣೆಮಾಡಿ ಆಧುನಿಕರ ಪ್ರೀತಿಗೆ ಪಾತ್ರರಾಗಿದ್ದರು. ನಂತರ ಅನೇಕ ರಾಷ್ಟ್ರಗಳು ಅದೇಹಾದಿ ಹಿಡಿದು ಕಾನೂನು ರಚನೆ ಮಾಡಿ ಸಲಿಂಗ ಪ್ರೇಮಿಗಳೂ ಸಾಮಾನ್ಯರಂತೆ ಸಂಸಾರ ಮಾಡುವ ಅವಕಾಶ ದೊರಕಿಸಿದವು. ಅಂದರೆ ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಯನ್ನು, ಒಬ್ಬ ಪುರುಷ ಇನ್ನೊಬ್ಬಪುರುಷನನ್ನೂ ಮದುವೆಯಾಗಿ ಸಂಸಾರ ಹೂಡಲು ಕಾನೂನಿನ ಸಮಾಜದ  ಸಮ್ಮತಿ ದೊರೆಯಿತು.
ಆದರೆ ನಿನ್ನೆ ಬಂದ ಸುದ್ದಿ  ಮಾನವನ ಮನಸ್ಸು ಕಾನೂನಿಗಿಂತ ವೇಗ ಕೆಲಸಮಾಡುವುದು ಎಂಬುದನ್ನು ಸಿದ್ಧ ಮಾಡಿತು. ತಂತ್ರಜ್ಞಾನದ ಅಧ್ಯಯನಕ್ಕೆ ಹೆಸರಾದ ರಾಜ್ಯ ಒಂದರಲ್ಲಿ ಒಂದು ಸಲಿಂಗವಿವಾಹ ಜರುಗಿದೆ. ಅದು ಇತ್ತೀಚೆಗೆ ವಿಶೇಷವೇನೂ ಅಲ್ಲ. ಆದರೆ ದಂಪತಿಗಳು ಎಂದರೆ ಇಬ್ಬರು ಎಂಬ ಮಾತು ಹುಸಿಯಾಗಿದೆ. ಚರ್ಚಿನಲ್ಲಿ ಶಪಥ ತೆಗದುಕೊಂಡಾಗ ಅಲ್ಲಿ ಇಬ್ಬರು ಇರಲಿಲ್ಲ ಮೂವರು ಇದ್ದರು. ಮೂವರೂ ಮಹಿಳೆಯರೇ. ಕೇಟ್‌ ಎಂಬ ನಲವತ್ತು ವರ್ಷದ ಮಹಿಳೆಯು ಲಿನ್‌ ಎಂಬ ೨೭ ವರ್ಷದ ಮಹಿಳೆಯನ್ನು ವಿಧಿಬದ್ಧವಾಗಿ ಮೂರುವರ್ಷದ ಹಿಂದೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದರು. ಈಗ ಈ ಇಬ್ಬರೂ ಇನ್ನೊಬ್ಬ ೨೪ ವರ್ಷದ ಯುವತಿ ಜೇನ್‌ಳನ್ನು  ಜೀವನ ಸಂಗಾತಿಯನ್ನಾಗಿ ಸ್ವೀಕರಿಸಿದ್ದಾರೆ.
.ಮದುವೆ ಚರ್ಚಿನಲ್ಲಿ ನಡೆಯಿತು.ಆಗ ಮೊದಲೇ ದಂಪತಿಗಳಾಗಿದ್ದ ಇಬ್ಬರೂ ವೈವಾಹಿಕ ಶ್ವೇತಉಡುಪು ಧರಿಸಿ ಅಲಂಕೃತರಾಗಿ ಬಂದದ್ದರು.. ಅವರಿಬ್ಬರನ್ನು ಅವರ ತಂದೆ ತಾಯಿ ವೇದಿಕೆಗೆ ಕರೆತಂದರು. ಕೆಲವೇಕ್ಷಣಗಳಲ್ಲಿ ಇನ್ನೊಬ್ಬ ಮದುವೆಮಗಳು ಶ್ವೇತ ಗೌನ್‌ಧಾರಿಯಾಗಿ   ತನ್ನ ಸಖಿಯೊಂದಿಗೆ ಪ್ರತ್ಯಕ್ಷಳಾದಳು. ಮೊದಲಿನ ಇಬ್ಬರೂ ಅವಳನ್ನು ಚುಂಬಿಸಿ ಸ್ವಾಗತಿಸಿದರು. ಮೂವರೂ ಉಂಗುರ ಬದಲಾಯಿಸಿ ಕೊಂಡರು. ಪಾದ್ರಿ ಬೋಧಿಸಿದ ದಾಂಪತ್ಯದ ಶಫಥ ಸ್ವೀಕರಿಸಿದರು.ಅದಕ್ಕೆ ಚರ್ಚಿನಲ್ಲಿ ನೆರೆದಿದ್ದ ಬಂಧುಗಳೂ ಮತ್ತು ಸ್ನೇಹಿತರು ಸಾಕ್ಷಿಗಳಾಗಿ ಚಪ್ಪಾಳೆ ತಟ್ಟಿ ಅನುಮೋದನೆ ಸೂಚಿಸಿದರು.ಮೂವರು ಮಹಿಳೆಯರ ಮದುವೆ ಎಂಬ ಹೊಸ ದಾಖಲೆ ಬರೆದರು.
ನಮ್ಮಲ್ಲಿಯೂ ಇಬ್ಬರ ಹೆಂಡಿರ ಮುದ್ದಿನ ಗಂಡನ ಮೂವರ ಸಂಸಾರ  ಇಲ್ಲದಿಲ್ಲ. ಆದರೆ ಮೂವರೂ ಮಹಿಳೆಯರೇ ಆದ್ದರಿಂದ ಇಲ್ಲಿ  ತುಸು ಗಲಿಬಿಲಿ. ಅವರಲ್ಲಿ ಕೆಸದ ನಿರ್ವಹಣೆಯನ್ನು ಬಹಳ ಸರಳವಾಗಿ ಹಂಚಿಕೊಂಡಿದ್ದಾರೆ.   ಕೇಟ್‌ ಈ ಕುಟುಂಬದ ಬ್ರೆಡ್‌ ವಿನ್ನರ್‌. ಹಣದ ಹೊಣೆ ಅವಳದು. ಅಂದರೆ ರಕ್ಕೆ೪೦ಗಂಟೆ ಕೆಲಸ ಮಾಡಿ ಹಣ ಗಳಿಸುವಳು. ಕಾಂಪ್ಯೂಟರ್‌ ಇಂಜನಿಯರ್‌ ವೃತ್ತಿ. ಗಳಿಕೆ ಸಾಕಷ್ಟಿದೆ. ಮೂವರ ಸಂಸಾರ ಭಾರ ಹೊರಬಹುದು. ೨೭ವರ್ಷದ ಮಹಿಳೆ ಲಿನ್‌ ಅಡುಗೆ ಮಾಡುವಳು. ೨೪ ವರ್ಷ ಜೇನ್‌ಳದು ಉಳಿದೆಲ್ಲ ಕೆಲಸಗಳ ನಿರ್ವಹಣೆ.  ಅಂದರೆ ಜೇನು ಹುಳುಗಳಂತೆ ಕೆಲಸದ ಹಂಚಿಕೆ ಮಾಡಿಕೊಂಡಿರುವರು. ಮೂವರೂ ಒಟ್ಟಿಗೆ ಒಂದೆ ಹಾಸಿಗೆಯಲ್ಲಿ ಮಲಗುತ್ತಾರೆ. ಬೇಸಿಗೆಯಲ್ಲಿ ತುಸು ಶೆಖೆಯಾಗುವುದು ಎಂದವರ ಹೇಳಿಕೆ.  ಸಂಸಾರಿಕ ಎಲ್ಲ ಕಾರ್ಯಕ್ರಮಗಳನ್ನೂ ಮೂವರು ಒಟ್ಟಿಗೆ ಮಾಡುವರು,  ಕೆಲವುಸಲ ಇಬ್ಬರಿಬ್ಬರು ನಿರ್ವಹಿಸುವರು. ಸಾಮಾನ್ಯ ಕೌಟುಂಬಿಕ ತೀರ್ಮಾನಗಳನ್ನು ಒಟ್ಟಿಗೇ ತೆಗೆದುಕೊಳ್ಳುವರು. ಜೊತೆಗೆ ಇಬ್ಬಿಬ್ಬರು ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡು ಹೊಂದಾಣಿಕೆ ಕಾಪಾಡಿಕೊಳ್ಳುವರು.
ಈಗ ೨೭ ವರ್ಷದ  ಮಹಿಳೆ ಗರ್ಭಿಣಿ. !. ಅಚ್ಚರಿ ಬೇಡ.ಪುರುಷ ಸಂಪರ್ಕವಿಲ್ಲದೆ ವಂಶಾಭಿವೃದ್ಧಿ ಸಾಧ್ಯ.  ಮೂವರ ಒಪ್ಪಿಗೆಯ ಮೇಲೆ  ಅಪರಿಚಿತ ವ್ಯಕ್ತಿಯ ವೀರ್ಯದಾನ ಪಡೆದು  ಮಗು ಪಡೆಯುಲಾಗುತ್ತಿದೆ. ಜನಿಸುವ ಮಗುವಿಗೆ, ಮೂವರೂ ಹೊಣೆಗಾರರು..ಹುಟ್ಟುವ ಮಗುವಿಗೆ ತಾಯಂದಿರು ಮೂವರು ತಂದೆ ಅನಾಮಿಕ. ಮೂವರು ತಾಯಂದಿರ ಪರಿಕಲ್ಪನೆ ಭಾರತದಲ್ಲೂ ಇದೆ. ಹೆತ್ತ ತಾಯಿ, ಮಲತಾಯಿ ಮತ್ತು ಸಾಕುತಾಯಿ  ಎಂದು.  ಮುಂದೆ ಮಗುವಿಗೆ ತೊಂದರೆ ಆಗಬಾರದೆಂದು  ಮೂವರ ಆಸ್ತಿಯನ್ನು ಕಾನೂನಿನ ಪ್ರಕಾರ ವಿತರಣೆ ಮಾಡಲು ವಕೀಲರು ವ್ಯವಸ್ಥೆ ಮಾಡುತಿದ್ದಾರೆ. ಜನಿಸಲಿರುವ ಮಗುವಿಗೆ ಕಾತುರದಿಂದ ಕಾಯುತಿದ್ದಾರೆ ಮೂವರು ತಾಯಂದಿರು.
ಈಗಿರುವ ಕಾನೂನಿ ಪ್ರಕಾರ ಯಾವುದೇ ಲಿಂಗದವರಾಗಿರಲಿ ಇಬ್ಬರು ವ್ಯಕ್ತಿಗಳ ಮದುವೆ ನ್ಯಾಯ ಸಮ್ಮತ. ಆದರೆ ಈ ಮೂವರು ನಾವು ಕಾನೂನಿಗಾಗಿ ಮದುವೆಯಾಗಿಲ್ಲ. ಪ್ರೀತಿಗಾಗಿ ಮದುವೆಯಾಗಿರವೆವು. ನಮಗೆ ಯಾವುದರ ಹಂಗೂ ಇಲ್ಲ. ಎನ್ನುವರು. .  ಇದು ನಿಜಕ್ಕೂ ಒಪ್ಪತಕ್ಕ ಮಾತು .ಬೇರೆಯಾರೂ ಈ ಕುರಿತು ತಲೆ ಕೆಡಿಸಿಕೊಂಡಿಲ್ಲ .ಕಾರಣ ಅನ್ಯರ ಬದುಕಿನ ಬಗ್ಗೆ ಇಲ್ಲಿ ಕುತೂಹಲ ಕಡಿಮೆ. ಇತರರಿಗೆ ತೊಂದರೆಯಾಗದಂತೆ ವೈಯುಕ್ತಿಕ ಬದುಕು ರೂಪಿಸಿಕೊಳ್ಳುವ ಹಕ್ಕು ಎಲ್ಲರಿಗೂ ಇದೆ. ಅಲ್ಲಿನ ಸ್ಥಳೀಯ ಅಧಿಕಾರಿಗಳೂ ಈ ಪ್ರೇಮ ಪಕ್ಷಿಗಳ ತಂಟೆಗೆ ಹೋಗಿಲ್ಲ. ಅವರಾಗಿ ಬಂದು ಕಾನೂನು ಪ್ರಕಾರ ನಾವು ಮೂವರೂ ದಂಪತಿಗಳು ಎಂಬ ಅಧಿಕೃತ ಪ್ರಮಾಣ ಪತ್ರಕ್ಕೆ  ಬೇಡಿಕೆ ಸಲ್ಲಿಸಿದಾಗ ಪರಿಶೀಲನೆ ಮಾಡಬಹುದು ಎಂದವರ ವಾದ. . ಈಗ ಅದರ ಗೊಡವೆ ಬೇಡ ಎಂದು ಕಂಡರೂ ಕಾಣದಂತೆ ಕುಳಿತಿದ್ದಾರೆ. ಇಲ್ಲಿನದು ಮುಕ್ತ ಸಮಾಜ. ಯಾರಿಗೂ ಇನ್ನೊಬ್ಬರ ಗೊಡವೆ ಬೇಡ. ಈ ಕುರಿತು ನ್ಯಾ ನಿರ್ಣಯ ಸಲ್ಲ.ಸರಿ ತಪ್ಪು ಹೇಳಲು ನಾವು ಯಾರು?. ಬಹುಪತ್ನಿತ್ವ, ಬಹುಪತಿತ್ವ, ಸಲಿಂಗ ವಿವಾಹದಂತೆ ಇದೂ.ಒಂದು
 ತಂದೆ ಒಬ್ಬನೇ ಆಗಿರದಿರಬಹುದು      , ಆದರೆ ತಾಯಿ ಮಾತ್ರ ಒಬ್ಬಳೇ ಎಂಬುದು ನಂಬಿಕೆ. ಅದಕ್ಕೆ ಪೌರಾಣಿಕ ಆಧಾರಗಳೂ ಇವೆ. ಧರ್ಮರಾಯನು ಯಮನ ಮಗನೂ ಹೌದು , ಪಾಂಡು ಪುತ್ರನೂ ಹೌದು. ಅವನಿಗೆ ಇಬ್ಬರು ಪಿತೃಗಳು. ಅದನ್ನು ಸಮಾಜ ಒಪ್ಪಿತ್ತು. ದರ್ಮಸಮ್ಮತವೂ ಆಗಿತ್ತು. ಆದರೆ ತಾಯಿ ಮಾತ್ರ ಒಬ್ಬಳೇ ಅವಳು ಕಂತಿದೇವಿ.
 “.ಮಾತೃತ್ವ ಖಚಿತ, ಪಿತೃತ್ವ ಕತಿಥ”   ಎಂಬ ಮಾತಿದೆ. ಅದು ನಿಜವೇ . ತಾಯಿ ಹೇಳಿದರೆ ತಾನೆ ತಂದೆ ಯಾರೆಂದು ಗೊತ್ತಾಗುವುದು  ಆದರೆ ಅದು ಮುಂದುವರಿದು   “ತಾಯಂದಿರ ಸಹಿತ, ತಂದೆರಹಿತ“  ಪರಿಕಲ್ಪನೆ ಮೂರ್ತವಾಗುವ ಕಾಲ ಸನ್ನಿಹಿತವಾಗಿದೆ ಎನ್ನಿಸುವುದು.
 ಒಂದು ಸಮಾಜಕ್ಕೆ ಅಸಹಜ ಎನಿಸಿದ್ದು ಇನ್ನೊಂದಕ್ಕೆ ಸರ್ವಸಮ್ಮತ ಆಚರಣೆ.   ಇಲ್ಲಿ ಏಕೆ ಹೀಗೆ ಎಂದಾಗ ಅನಿವಾಸಿಯೊಬ್ಬರ ವಿವರಣೆ ತುಸುತೃಪ್ತಿಕರವಾಗಿತ್ತು. ಇದು ವಲಸೆಗಾರರ ದೇಶ. ಇಲ್ಲಿನ ಸಮಾಜಕ್ಕೆ ಶತಶತಮಾನಗಳ ಪರಂಪರೆಇಲ್ಲ. ಬಹುರಾಷ್ಟ್ರೀಯತೆ, ಬಹುಸಂಸ್ಕೃತಿ ವಿಭಿನ್ನನಂಬಿಕೆ  ಮತ್ತು ಸಾಮಾಜಿಕ ಆಚರಣೆಗಳು ಇಲ್ಲಿನ ವಿಶೇಷತೆ.  ಹೊಸದನ್ನು ಅರಿಯುವ ಕುತೂಹಲ ಅಳವಿಡಿಸುವ ಹಂಬಲ,.ಸ್ವಾನುಭವಕ್ಕೆ ಆದ್ಯತೆ.ಮೇಲಾಗಿ.ಇಲ್ಲಿ  ಅಮಿತ ಮುಕ್ತತೆ.  ಕಟ್ಟುಪಾಡು ಕಡಿಮೆ  .ಅನ್ವೇಷಿಸಿ ಅನುಭವಿಸುವ ಆಸೆ.ಅದರ ಪರಿಣಾಮ ಹೊಸದೆನಾದರೂ ಆದರೆ ಅದು ಮೊದಲಾಗುವುದು ಅಮೇರಿಕಾದಲ್ಲಿ.
.ಇದೆಲ್ಲವನ್ನೂ ಗಮನಸಿದಾಗ  “ಮಾನವ ಜಾತಿ  ಒಂದೆ ವಲ ”  ಎಂಬ ಆದಿಕವಿಯ ಮಾತಿಗೆ   ಹೊಸ ಅರ್ಥ ಸ್ಪುರಿಸುತ್ತದೆ. ನಿಜ ಮಾವರೆಲ್ಲ  ಒಂದೇ ಜಾತಿಮತ ಅಷ್ಟೇ ಏಕೆ ? ಗಂಡು ಹೆಣ್ಣೂ ಎಂಬ ಬೇಧವೂ ಇಲ್ಲ.  ಈ ರೀತಿಯ ಬೆಳವಣಿಗೆ ಆಗಬಹುದೆಂಬ ಮುಂದಾಲೋಚನೆ ನಮ್ಮ ಪುರಾತನರಿಗೆ ಇದ್ದಿತ್ತೇ, ಮಹಾಭಾರತದಲ್ಲಿಯೇ ಶಿಖಂಡಿ ಮತ್ತು ಬೃಹನ್ನಳೆಯ ಪ್ರಕರಣಗಳು ಇವೆ  .ಗಂಡು ಹೆಣ್ಣಾಗುವುದು, ಹೆಣ್ಣು ಗಂಡಾಗುವ ಅನೇಕ ನಿದರ್ಶನಗಳು ಪುರಾಣಗಳಲ್ಲಿ ಬರುತ್ತವೆ   ಸಮದ್ರ ಮಂಥನ ಮಾಡಿದಾಗ ಬಂದ ಅಮೃತ ಹಂಚಲು   ಮಹಾವಿಷ್ಣುವು  ಮೋಹಿನಿಯ ರೂಪ ತಳೆದದ್ದು,  ಅವಳ ಸೌಂದರ್ಯಕ್ಕೆ ಶಿವನು ಮರುಳಾದ  ಕಥೆ ಗೊತ್ತಿರುವದೇ ಆಗಿದೆ. ಅಂದರೆ ಲಿಂಗಪರಿವರ್ತನೆಯ ಸುಳಿವು ಇದಾಗಿರುವಂತೆ ತೋರುವುದು.
ಅದರಲ್ಲೂ ವೈಯಾಕರಣಿಗಳು ಈ ಕುರಿತು ಮುನ್ಸೂಚನೆ ಕೊಟ್ಟಿರುವರೇಎಂಬ ಯೋಚನೆ ಬಂದಿದೆ. ಲಿಂಗ ಬೇಧವು ಒಂದೊಂದು ಸಮುದಾಯದಲ್ಲಿ ಒಂದೊಂದು ರೀತಿಇದೆ.  .ಹಿಂದಿಯ  ಭಾಷೆಯಲ್ಲಿ  ಎರಡೇ ಲಿಂಗಗಳು.ಸ್ತ್ರೀ ಲಿಂಗ ಮತ್ತು ಪುಲ್ಲಿಂಗ. ಅಲ್ಲಿ ವಂಶಾಭಿವೃದ್ಧಿಗೂ ಲಿಂಗಕ್ಕೂ ಸಂಬಂಧವೇ ಇಲ್ಲ.. ಪ್ರತಿಯೊಂದು ಪದಕ್ಕೂ ಅದು ಕೊನೆಯಾಗುವ ಸ್ವರದ  ಆಧರಿಸಿ ಲಿಂಗನಿರ್ಣಯ ಮಾಡುವರು. ,’ಅ ಕಾರಂತವಾದ ಪದ ಪುಲ್ಲಿಂಗ  ಇ ಕಾರಾಂತ ಪದ ಸ್ತ್ರೀ ಲಿಂಗ ಅದಕ್ಕೇ .(ಕೈ ) ’ ಹಾತ್‌” ಪುಲ್ಲಿಂಗ.   (ಬೆರಳು)’ಅಂಗುಲಿ” ಸ್ತ್ರೀ ಲಿಂಗ. (ಉಗುರು) ’ನಖ”  ಪುಲ್ಲಿಂಗ. ಮಹಿಳೆಯ ’ ಸ್ತನ”;  ಪುಲ್ಲಿಂಗ.  ಇದೇ ತರ್ಕ ಮುಂದುವರಿಸಿ  ( ಮಹಿಳೆ)  ಔರತ್‌ ಪುಲ್ಲಿಂಗ, ( ಮನುಷ್ಯ) ಆದಮಿ ಸ್ತ್ರೀ ಲಿಂಗ. ಎನ್ನಲಾಗದು. ಕೆಲ ವಿನಾಯತಿಗಳೂ ಇವೆ.
 ಕನ್ನಡದಲ್ಲಿ ಮೂರು ಲಿಂಗಗಳು. ಸ್ತ್ರೀಲಿಂಗ, ಪುಲ್ಲಿಂಗ ಮತ್ತು ನಪುಂಸಕ ಲಿಂಗ.
  ಸುಪ್ರೀಂ ಕೋರ್ಟು ಸಹಾ ಇತ್ತೀಚಿನ ತೀರ್ಪಿನಲ್ಲಿ  ನಮ್ಮಂತೆಯೇ  ಮೂರು ರೀತಿಯ ಲಿಂಗವಿಂಗಡಣೆ ಇರಬೇಕೆಂದು ಹೇಳಿದೆ. ಎಂದು  ನಾವು ಬೆನ್ನು ತಟ್ಟಿಕೊಳ್ಳಬಹುದು. ಆದರೆ ತುಸುವೇ ವ್ಯತ್ಯಾಸವಿದೆ.
 ಆದರೆ  ಇಂಗ್ಲಿಷ್‌ನಲ್ಲಿ ನಾಲ್ಕು ಲಿಂಗ ವಿಬೇಧಗಳು  ಇವೆ: ಸ್ತ್ರೀ ಲಿಂಗ, ಪುಲ್ಲಿಂಗ, ನಪುಂಸಕ ಲಿಂಗ ಮತ್ತು ಉಭಯ ಲಿಂಗ..
ಹಿಂದೆ ನಾನು ಎಲ್ಲೋ  ಐದು ರೀತಿಯ ಲಿಂಗ ಬೇಧ ಓದಿದ ನೆನಪು. ಸ್ತ್ರೀ ಲಿಂಗ, ಪುಲ್ಲಿಂಗ, ನಪುಂಸಕ ಲಿಂಗ, ಪುಂ-ಸ್ತ್ರೀ ಲಿಂಗ ಮತ್ತು ಸ್ತ್ರೀ-ಪುಂಲಿಂಗ ಎಂದು.ಅಂದರೆ ಹುಟ್ಟಿನಿಂದ ಗಂಡು ನಂತರ ಹೆಣ್ಣು ಮತ್ತು ಹುಟ್ಟಿನಿಂದ ಹೆಣ್ಣು ನಂತರ ಗಂಡು ಎಂಬ ಎರಡು ಉಪ ವಿಭಜನೆ.ಇದು ಹೆಚ್ಚು ವೈಜ್ಞಾನಿಕ ವಿಭಜನೆ ಎನಿಸುವುದು .
ಇದು  ಇತ್ತೀಚಿನ ಲಿಂಗ ಪರಿವರ್ತನೆಯ ಸುಳಿವಾಗಿರಬಹುದೇ ಎನಿಸುವುದು, ಇದಕ್ಕೂ  ಇಂದಿನ ಪರಿಕಲ್ಪನೆ ಯಾದ LGBT ಗೂ ಏನಾದರೂ ಸಂಬಂಧವಿದೆಯಾ ಎಂಬುದು ಸಂಶೋಧನಾರ್ಹ ಸಂಗತಿ.   ಬಹಶಃ ವ್ಯಕ್ತಿ ನಿರ್ವಹಿಸುವ  ಕಾರ್ಯಕ್ಕೆ ಅನುಗುಣವಾಗಿ ಲಿಂಗ ನಿರ್ಧಾರಿತವಾಗುತ್ತಿರಬಹುದು ಎನಿಸಿದೆ.

ಇದು ಸಸ್ಯಗಳಲ್ಲು ಮತ್ತು ಪ್ರಾಣಿಗಳಲ್ಲೂ  ಕಂಡು ಬರುವ ವಿಶೇಷವಾಗಿದೆ. ಅನೇಕ ಸಸ್ಯಗಳು ಏಕಲಿಂಗಿಗಳು .ಕೆಲವು ದ್ವಿಲಿಂಗಿ.ಗಳು ಇನ್ನೂ  ಕೆಲವು ನಪುಂಸಕಲಿಂಗಿಗಳು. ಅವುಗಳಿಂದ ವಂಶಾಭಿವೃದ್ಧಿ ಆಗದು.ಕಸಿ ಮಾಡುವುದರಿಂದ ಇನ್ನೊಂದು ಬೆಳೆಯುವುದು. ಪ್ರಾಣಿಗಳಲ್ಲೂ ಕ್ಲೌನಿಂಗ್‌ನಿಂದ ವಂಶಾಭಿವೃದ್ಧಿ ಸಾಧ್ಯ. ಅಂದರೆ ಲಿಂಗ ಎನ್ನುವದು ಮಾನವ ನಿರ್ಮಿತವೇ. ಅದು ಭೌತಿಕ ಆಕಾರವನ್ನು ಮಾತ್ರ ಅವಲಂಬಿಸದೆ ಇನ್ನು ವಿಭಿನ್ನ ಅಂಶಗಳನ್ನು ಅವಲಂಬಿಸಿದೆಯೇ ಎನ್ನುವುದು ಚಿಂತನೆ   ವಿಷಯ.

No comments:

Post a Comment