ಅಮೇರಿಕಾದಲ್ಲಿ ಚಾರಣ
ಕಾರಿನ ನಾಡಾದ ಅಮೆರಿಕಾದಲ್ಲಿ ಕಾಲಿಗೆ ಕೆಲಸ ಕಡಿಮೆ. ಕಾಲು ಏಕೆ ಬೇಕೆಂದರೆ ಕಾಲು ಚೀಲ ಹಾಕಿಕೊಳ್ಳಲು, ಟ್ರೆಡ್ ಮಿಲ್ ಮೇಲೆ ನಡೆಯಲು, ಬೇಸಗೆಯಲ್ಲಿ ಸ್ಕೇಟ್ ಮಾಡಲು, ಅಥವಾ ಬರ್ಫದ ಬೆಟ್ಟಗಳಲ್ಲಿ ಸ್ಕೀಯಿಂಗ ಮಾಡಲು, ಡಾನ್ಸ್ ಮಾಡಲು.... ದೈನಂದಿನ ಜೀವನದಲ್ಲಿ ನಡಿಗೆಗೆ ಅವುಗಳ ಉಪಯೋಗ ಕಡಿಮೆಯೆಂದೇ ಹೇಳಬೇಕು. ವೀಲ್ ಛೇರೋ ಅಥವಾ ಅಂಥಾ ಇನ್ಯಾವ ಯಂತ್ರವೋ ಬಳಸುವುದು ಅಷ್ಟು ಸೌಕರ್ಯಕರ ಅಲ್ಲ ಎಂಬ ಕಾರಣಕ್ಕಾಗಿ ಮಾತ್ರ ಆಗೀಗ ಕಾಲು ಬಳಸುತ್ತಾರೆ. ಅನೇಕರ ಪಾಲಿಗೆ ಅದು ಎಕ್ಸರ್ ಸೈಜ್ ಮಾಡಲು ಇರುವ ಮತ್ತೊಂದು ಅಂಗ ಅಷ್ಟೇ.
ಟ್ರೆಡ್ ಮಿಲ್ ಮೇಲೆ ನಡೆದರೆ, ಬೆವರೇನೋ ಬರುತ್ತದೆ. ಆದರೆ ಮನಸಿಗೆ ಮುದ ಸಿಗದು. ಬರೀ ಯಂತ್ರದೊಡನೆ ಸ್ಪರ್ಧೆ. ವರುಷದ ಎಂಟು ತಿಂಗಳು ಕೊರೆವ ಚಳಿ. ಅಂಗಿ ಮೇಲೆ ಅಂಗಿ ಚಳಿರಾಯನ ತಂಗಿ ಎಂದು ಹಾಡುತ್ತಾ, ಆರಾರು ವರಸೆ ಬಟ್ಟೆ ಹಾಕಿದರೂ ಗಡ ಗಡ ನಡುಗು. ಚಂದ್ರಯಾನ ಮಾಡುವ ಗಗನಯಾತ್ರಿಗಳು ನಾವೇ ಎಂಬ ಭ್ರಮೆ ತರಿಸುವ ಉಡುಪು. ಕಾರಿನಲ್ಲಿ ಕಾಲಿಡುವುದಕ್ಕೂ ಕಷ್ಟಪಡಬೇಕು. ಎ.ಸಿ ಮನೆಯಿಂದ ಎ.ಸಿ ಕಾರಿಗೆ ಹೋಗುವುದೇ ಹರ ಸಾಹಸ. ಬೇಸಿಗೆ ಬಂತೆಂದರೆ ಮೈ ಮೇಲಿನ ಬಟ್ಟೆ ಗಳು ಬಹುತೇಕ ಮಟಾಮಾಯ. ಅತಿ ಉಳಿತಾಯ. ಚಡ್ಡಿ ಮೇಲೊಂದು ಬನೀನು. ಗಂಡಸರಿಗೆ ಬನೀನಿನ ಮುಲಾಜೂ ಇಲ್ಲ ಬರಿ ಮೈ. ಸೈಕಲ್ ಸವಾರರ ಸಡಗರ ಹೇಳತೀರದು. ತಡವಾದರೆ ಕೈತಪ್ಪಿತೇನೋ ಎಂಬಂತೆ ಓಡುವ ಜಾಗರ್ಸ್. ಗಾಲಿ ಚಡಾವುಗಳ ಮೇಲೆ ಜಾರುತ್ತಾ ಜಗವೆಲ್ಲಾ ನಮ್ಮದೇ ಎಂಬ ಜಂಬದಿಂದ ಬಳಕುತ್ತಾ ಬಾಗುತ್ತ ಹೋಗುವ ಹದಿ ಹರೆಯದವರ ಚಮತ್ಕಾರಕ ಚಲನೆ ನೋಡಲು ಕಣ್ಣೆರಡು ಸಾಲವು. ಬೇಸಗೆಯಲ್ಲಿ ಸೂರ್ಯನಿಗೂ ಹುಮ್ಮಸ್ಸು. ಬೆಳಗ್ಗೆ ಐದಕ್ಕೆ ಹಾಜರು. ರಾತ್ರಿ ಎಂಟಾದರೂ ಮುಳುಗಲು ಮಿಜಿ ಮಿಜಿ. ಶುಕ್ರವಾರದ ಸಂಜೆ ಎಲ್ಲೆಲ್ಲೂ ಕಾರುಗಳದೆ ಕಾರುಬಾರು. ಬೆನ್ನಿಗೆ ಸೈಕಲ್ ಗಳನ್ನೂ ಬಿಗಿದುಕೊಂಡು, ಮೇಲೆ ಬೋಟುಗಳನ್ನು ಹೇರಿಕೊಂಡು, ಒಳಗೆ ನಾಯಿಕೂಡಿಸಿಕೊಂಡು ಬೆಟ್ಟದ ಬದಿಗೋ, ಕಡಲ ತಡಿಗೋ, ಕಾಡಿನ ನಡುವೆಯೋ ರಜೆಕಳೆಯಲು, ಮಜ ಮಾಡಲು ಧಾವಿಸಲು ಎಲ್ಲರ ಧಾವಂತ. ಪರಿಣಾಮ ಒಂದು ಕಾರಿನ ಹಿಂಬದಿ ಮೂಸುವ ಇನ್ನೊಂದು ಕಾರು. ಕರಿ ಟಾರಿನ ರಸ್ತೆಯಲ್ಲಿ ಬಹು ಬಣ್ಣದ ಗೆರೆ ಎಳೆದಂತೆ ಕಾರುಗಳ ಸಾಲು ಸಾಲು. ಸಂಚಾರವೆಲ್ಲ ಅಸ್ತವ್ಯಸ್ತ. ಮೂರು ಗಂಟೆಯ ಹಾದಿಗೆ ಆರು ತಾಸು ಆಗುವುದು ಸಹಜ.
ವಾರಾಂತ್ಯ ಎಂದರೆ ಎಲ್ಲಿಲ್ಲದ ಪ್ರಧಾನ್ಯ. ವಾರಪೂರ್ತಿ ಕೆಲಸ. ಕಾಯಕವೇ ಕೈಲಾಸ ಎಂಬ ಅಣ್ಣನ ಮಾತು ಇಲ್ಲಿ ನೂರಕ್ಕೆ ನೂರು ನಿಜ. ಐದು ದಿನ ದುಡಿತ. ಕಾರಣ ಇಲ್ಲಿ ತಿಂಗಳ ಸಂಬಳ ಇಲ್ಲ. ಗಂಟೆಗಳಲ್ಲಿ ಲೆಕ್ಕ. ದಿನಕ್ಕೆ ಎಂಟು ಗಂಟೆ. ವಾರಕ್ಕೆ ನಲವತ್ತು ತಾಸು. ತುಸು ತಡವಾದರೂ ಕಾಸಿಗೆ ಖೋತಾ. ಹಾಗಾಗಿ ಹಬ್ಬ, ಹುಣ್ಣಿಮೆ, ತಿಥಿ, ಮಿತಿ, ಸಂಭ್ರಮ, ಸಡಗರ ಹೋಗುವುದು, ಬರುವುದು, ಮೋಜು, ಮಜಾ ಎಲ್ಲವೂ ವಾರಾಂತ್ಯದಲ್ಲಿ. ನಾಮಕರಣ, ಹುಟ್ಟುಹಬ್ಬ, ಪೂಜೆ-ಪುನಸ್ಕಾರ, ಮದುವೆ, ಮುಂಜಿ, ಆರತಕ್ಷತೆ, ಅಷ್ಟೇ ಏಕೆ ಆರಾಧನೆಗೆ, ಹಬ್ಬಕ್ಕೆ ರಾಯರು, ಗಣಪತಿ ಬರಬೇಕೆಂದರೂ, ವಾರಾಂತ್ಯಕ್ಕಾಗಿ ಕಾಯಲೇಬೇಕು. ಜನ ಸೇರುವ ಯಾವುದೇ ಕಾರ್ಯಕ್ರಮವೂ ವಾರಾಂತ್ಯದಲ್ಲೇ ಆಗಬೇಕು. ಇಲ್ಲವಾದರೆ ಮನೆಯವರು ಮಾತ್ರ ಹಾಜರಿ ಹಾಕುವರು. ಅದೂ ರಜೆ ಸಿಕ್ಕರೆ.
ಶುಕ್ರವಾರ ಇಲ್ಲವೇ ಸೋಮವಾರ ರಜೆ ಬಂದರೆ ಖುಷಿಯೋ ಖುಷಿ. ಮೂರು ದಿನ ರಜೆ ದೀರ್ಘ ವಾರಾಂತ್ಯ ಬೇಸಿಗೆಯಾದರೆ ಮುಗಿಯಿತು ಮನೆಯಲ್ಲಿದ್ದವರೇ ಪಾಪಿಗಳು. ನಮ್ಮವರ ಪಾಡೇನೂ ಭಿನ್ನವಲ್ಲ. ಜುಲೈನಲ್ಲಿ ಶುಕ್ರವಾರ ರಜೆ ಬಂತು. ನಡೆವ ಕಾಲಿಗೆ ಕಡಿತ ಶುರು. ಮೂರು ದಿನದ ಚಾರಣಕ್ಕೆ ಯೋಜನೆ. ಮೂರು ಕುಟುಂಬಗಳ ೧೦ ಜನ. ಅದರಲ್ಲಿ ಒಂದು ವರುಷದ ಕೂಸು, ಮತ್ತೊಂದು ಮೂರುವರ್ಷದ ಮಗು, ಕ್ಯಾಟ್ಸ್ ಕಿಲ್ ಪರ್ವತದ ತಪ್ಪಲಿನ ಫೋನಿಸಿಯಾದಲ್ಲಿ ಎರಡು ರಾತ್ರಿ ಕಳೆಯಲು ಯೋಜನೆ. ಮೂರು ದಿನದ ಚಾರಣಕ್ಕೆ ಹದಿಮೂರು ದಿನದ ತಯಾರಿ. ಮೊದಲು ಟೆಂಟ್ ಖರೀದಿ. ಸದಸ್ಯರ ಸಂಖ್ಯೆಗೆ ಅನುಸಾರ. ನಾವು ಆರು ಜನ ಮಲಗಬಹುದಾದ ಟೆಂಟ್ ಕೊಂಡೆವು. ನಂತರ ನಿದ್ರಾಚೀಲಗಳು, ಪವನ ತಲ್ಪ, ಕೈ, ಕಾಲು, ಕುತ್ತಿಗೆಗೆ ಕವಚಗಳು, ಸಿದ್ದ ಆಹಾರ, ಹಾಸಿಗೆ, ಹೊದಿಕೆ, ನೀರು, ಹಣ್ಣಿನ ರಸ, ಬ್ರೆಡ್, ಬಿಸಕತ್ತು, ತರ ತರದ ಉಪಹಾರ. ತಯಾರಿ ನೋಡಿದರೆ ಶಾಶ್ವತವಾಗಿ ಅಲ್ಲೇ ನೆಲಸುವ ಹಾಗೆ ತೋರಿತು. ಒಟ್ಟಿನಲ್ಲಿ ನಲವತ್ತೆಂಟೋ- ಅರವತ್ತೆಂಟೋ ಸಾಮಗ್ರಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದರು. ಪಟ್ಟಿಯನ್ನು ಪದೇ ಪದೇ, ಪರಿಷ್ಕರಿಸಲಾಯಿತು. ಅದನ್ನು ಮತ್ತೆ ಮತ್ತೆ ಓದಿ, ವಿವರಿಸಿ, ಖಚಿತ ಪಡಿಸಿಕೊಳ್ಳಲಾಯಿತು. ಈ ಸಿದ್ಧತೆಯನ್ನು ನೋಡಿದ ಮೇಲೆ ನನಗಂತೂ ನಗೆಯೂ, ಆತಂಕವೂ ಒಟ್ಟೊಟ್ಟಿಗೆ ಬಂದವು. ನೆನಸಿಕೊಂಡಾಗ ಧುತ್ತೆಂದು ಪ್ರತ್ಯಕ್ಷನಾಗಿ, ಟ್ರೆಕ್ಕಿಂಗ್ ಓಗಾಣಾ ನಡೀರೀ ಸಾ... ಎಂದು ಯಾವ ಸಿದ್ಧತೆಯೂ ಇಲ್ಲದೇ, ಕರೆದೊಯ್ಯುತ್ತಿದ್ದ ದುರ್ಗದ ಪೇಂಟರ್ ನಾಗರಾಜನೆಲ್ಲಿ, ಇವರೆಲ್ಲಿ ಎಂಬ ಹೋಲಿಕೆ ಬೇಡವೆಂದರೂ ಬಂತು. ಸಿಕ್ಕಾಪಟ್ಟೆ ಉಡಾಫೆ, ಹುಂಬತನದಂತೆ ಕಂಡರೂ, ಆ ಪೂರ್ವಸಿದ್ಥತೆಯಿಲ್ಲದ, ಅಪೂರ್ವ ಚಾರಣಗಳು ನಿಜಕ್ಕೂ ರೋಚಕವಾಗಿದ್ದವು. ಅಲ್ಲಿ ಆ ಗಳಿಗೆಯಲ್ಲಿ ಹೃದಯಶಸ್ತ್ರ ಚಿಕಿತ್ಸೆ ಒಳಗಾದ, ಅರವತ್ತರ ಅಂಚು ದಾಟಿರುವ ಉತ್ಸುಕನಿಗೆ ದುರ್ಗದ ಬೆಟ್ಟ-ಗುಡ್ಡಗಳಲ್ಲಿ, ಕೊಡಚಾದ್ರಿಯ ಶಿಖರಗಳಲ್ಲಿ, ಸಕಲೇಶಪುರದ ಹಳಿಗಳಲ್ಲಿ, ಶರವಾತಿಯ ಕಣಿವೆಗಳಲ್ಲಿ ಆಸರೆಯಾಗಿದ್ದು ಸಂತಸ ನೀಡಿದ್ದು, ಆ ಉತ್ಸಾಹ, ಆ ಹುಂಬತನ, ಅಡಿಕೆ ಗುರುವಿನ ಕೊಳಲು, ದ್ವಾರಕೀಶ-ಗುರು ಅವರ ಪ್ರಾಕ್ಟಿಕಲ್ ಜೋಕುಗಳ ಜುಗಲ್ ಬಂದಿ.
![]() |
ಕ್ಯಾಟ್ಸ ಕಿಲ್ ಪರ್ವತಗಳು |
ರಸ್ತೆಯಲ್ಲಿ ಇರುವೆ ಸಾಲಿನಂತೆ ಕಾರುಗಳು. ಆಮೆ ವೇಗದಲ್ಲಿ ಚಲನೆ. ನಡುವೆ ಸಂಚಾರ ನಿಯಂತ್ರಣದ ಕೆಂಪು ದೀಪ. ತಂದ ತಿಂಡಿ ತಿನ್ನುತ್ತ , ನೀರು ಕುಡಿಯುತ್ತಾ, ಸಂಗೀತ ಲೋಲರಾದೆವು. ತುಸು ಸಮಯದಲ್ಲೇ ಹಲ್ಲುನೋವಿನ ಗುಳಿಗೆಯ ಅಡ್ಡ ಪರಿಣಾಮದ ಅನುಭವಕ್ಕೆ ಬಂದಿತು. ಹೊಟ್ಟೆ ಗುಡು ಗುಡು ಎನ್ನತೊಡಗಿತು. ಒತ್ತಡ ಹೆಚ್ಚತೊಡಗಿತು. ಕಾರು ನೋಡಿದರೆ ನಡುರಸ್ತೆಯಲ್ಲಿ. ಹಿಂದೆ ಮುಂದೆ. ನೂರಾರು ವಾಹನಗಳು. ಹಿಂದೆ ತಿರುಗಿ ಮನೆಗೆ ಹೋಗುವ ಮಾತು ದೂರುಳಿಯಿತು. ಮಧ್ಯದಲ್ಲಿ ನಿಲ್ಲಿಸುವ ಹಾಗೂ ಇಲ್ಲ. ಕೊನೆಗೆ ಬಾಗಿಲು ತೆರೆಯುವ ಹಾಗೂ ಇಲ್ಲ.. ಆಧುನಿಕತೆ ಬಗ್ಗೆ ಕವನವೊಂದರಲ್ಲಿ ಕವಿಯೊಬ್ಬ ಹೇಳಿದ ಮಾತು ಅನುಭವಕ್ಕೆ ಬಂತು. ಕಾರಿನಲ್ಲಿ ಹೋಗುವವರನ್ನು ಬೋನಿನಲ್ಲಿನ ಪ್ರಾಣಿಗಳು ಎಂದಿದ್ದ. ಹತ್ತಾರು ವರುಷದ ಹಿಂದೆ ಬರೆದ ಕವಿವಾಣಿ ಸತ್ಯಸ್ಯ ಸತ್ಯ. ನಾಗರಿಕತೆಯ ನಾಡಲ್ಲಿ ಬೇಕಾದಾಗ ಕಾರಿನಿಂದ ಹೊರಬರಲೂ ಆಗದ ಅಸಹಾಯಕರು ನಾವು. ಪಕ್ಕದಲ್ಲೇ ಇದ್ದ ಮೊಮ್ಮಗನನ್ನು ನೋಡಿ ಅಸೂಯೆಯಾಯಿತು. ಅವನು ಸದಾ ಹಗ್ಗಿ ಧಾರಿ. ಅವನು ಯಾವಾಗ ಬೇಕಾದರೂ ವಿಸರ್ಜನೆ ಮಾಡಬಹುದು. ಹಗ್ಗಿ ಬಿಚ್ಚಿದಾಗ ಮಾತ್ರ ಬಯಲು. ಧಾರಣ ಶಕ್ತಿಗಾಗಿ ಧ್ಯಾನ ಮಾಡಿದೆ. ನನಗೆ ದೇಶ ಭಕ್ತಿ ಉಕ್ಕಿತು. ನಮ್ಮಲ್ಲಿ ಉಣ್ಣಲು ಕೊರತೆ ಇರಬಹುದು, ಉಡಲು ಕಡಿಮೆ ಇರಬಹುದು. ಆದರೆ ನಮ್ಮಲ್ಲಿನ ಅಪರಿಮಿತ ವಿಸರ್ಜನ ಸ್ವಾತಂತ್ರ್ಯ ಪ್ರಪಂಚದಲ್ಲಿ ಎಲ್ಲೂ ಇಲ್ಲ ಎಂಬ ಸತ್ಯದ ಸಾಕ್ಷಾತ್ಕಾರವಾಯಿತು. ಬಯಲು, ಬೆಟ್ಟ, ಗಿಡದ ಬುಡ, ರಸ್ತೆಯ ಬದಿ, ಪೊದೆಯ ಮರೆ ಸಾಕು ದೇಹಭಾದೆ ತೀರಿಸಲು. ಯಾರೋ ಇಲ್ಲದಿದ್ದರೆ ಸರಿ, ಇದ್ದರೇನಂತೆ ನಾವೇ ಕಣ್ಣು ಮುಚ್ಚಿದರಾಯಿತು. ನಿಮಿಷದಲ್ಲಿ ಹಗುರ. ಸ್ವದೇಶದಲ್ಲಿ ಉಪವಾಸವಿದ್ದರೂ ಸರಿ ಪರ ದೇಶದ ಈ ಪರಿಸ್ಥಿತಿ ಪ್ರಾಣಸಂಕಟ ಎನಿಸಿತು. ಒಂದು ಗಂಟೆಯಾದ ಮೇಲೆ ಸಂಚಾರ ಸುಲಭವಾಯಿತು. ರಸ್ತೆ ಪಕ್ಕದಲ್ಲಿ ಗಿಡ ಮರಗಳು ಸಣ್ಣಪುಟ್ಟ ಬೆಟ್ಟಗಳು. ಆದರೆ ಪ್ರಕೃತಿ ಸೊಬಗು ಸವಿಯುವ ಸೌಭಾಗ್ಯ ನಮಗಿಲ್ಲ. ೬೫ ಮೈಲು ವೇಗದಲ್ಲಿ ಗಾಡಿ ಓಡಿಸಬೇಕು. ಮನಬಂದಲ್ಲಿ ನಿಲ್ಲಿಸಿದರೆ ದೊಡ್ಡ ಮೊತ್ತದ ದಂಡ. ಚಾಲನ ಪತ್ರದ ರದ್ದತಿ ಆಗಲೂಬಹುದು. ಭಾರತದಲ್ಲಿ ಪ್ರವಾಸ ಹೊರಟಾಗ ನೀರು ಕಂಡಲ್ಲಿ ಸ್ನಾನ, ನೆರಳು ಕಂಡಲ್ಲಿ ಊಟ ಮಾಡುವ ನೆನಪು ನುಗ್ಗಿ ಬಂದಿತು. ಇಲ್ಲಿನ ರಸ್ತೆಗಳದೇ ಒಂದು ವಿಶೇಷ ಎಲ್ಲವೂ ಜೋಡಿ ರಸ್ತೆ ಗಳು.
ವಾಹನಗಳು ಓಡುತ್ತಲೇ ಇರಬೇಕು. ಹತ್ತು ಇಪ್ಪತ್ತು ಮೈಲು ಹೋದರೆ ಸೇವಾ ಕ್ಷೇತ್ರ ಸಿಗುತ್ತದೆ. ಅಲ್ಲಿ ಎಲ್ಲ ವ್ಯವಸ್ಥೆ ಇದೆ. ಅದೊಂದು ವಾಣಿಜ್ಯ ಸಂಕೀರ್ಣ. ತಿನ್ನಲು, ಕುಡಿಯಲು, ದೇಹಬಾಧೆ ತೀರಿಸಲು, ಮಕ್ಕಳಿಗೆ, ಮಹಿಳೆಯರಿಗೆ ಸಾಕಷ್ಟು ಅನುಕೂಲ ಇವೆ. ಪ್ರಥಮ ಚಿಕೆತ್ಸೆಗೂ ಅವಕಾಶ. ನನಗಂತೂ ಸಗ್ಗವೇ ಧರೆಗಿಳಿದಂತಹ ಭಾವನೆ. ಒಂದೆರಡು ಸಲ ವಿಶ್ರಾಂತಿ ಕೋಣೆಗೆ ಭೇಟಿ ನೀಡಿದ ಮೇಲೆ ಮನಸು ನಿರಾಳ. ದೇಹ ಹಗುರ. ನಮ್ಮಲ್ಲಿನ ಸಂಡಾಸಕ್ಕೆ ಇಲ್ಲಿ ರೆಸ್ಟ್ ರೂಂ ಎಂದು ಯಾಕೆ ಕರೆಯುತ್ತಾರೆ ಎಂಬುದು ಈಗ ಅರ್ಥವಾಯಿತು. ಇಲ್ಲಿನ ವಿಶೇಷ ಎಂದರೆ ಪಯಣಿಗರಿಗೆ ಬಾಧಿಸಬಹುದಾದ ತಲೆನೋವು, ಮೈಕೈ ನೋವು, ಭೇದಿ ಮೊದಲಾದ ಸಣ್ಣಪುಟ್ಟ ರೋಗಗಳಿಗೆ ಗುಳಿಗೆಗಳನ್ನು ಮಾರುವ ಯಂತ್ರಗಳ ಮೂಲಕ ಕಾಸು ಹಾಕಿ ಪಡೆಯಬಹುದು. ನಾನು ಮಾಡಿದ ಮೊದಲ ಕೆಲಸ ನನ್ನ ವೈದ್ಯರನ್ನು ಸಂಪರ್ಕಿಸುವ ಪ್ರಯತ್ನ ಯಶ ಕಾಣಲಿಲ್ಲ. ಕಾರಣ ಅವರೂ ಸಹಾ ರಜೆಯ ಮಜಾ ತೆಗದುಕೊಳ್ಳಲು ಎಲ್ಲೋ ಹೋಗಿದ್ದರು. ಮಾಡುವುದೇನು, ಯಂತ್ರದ ಮೂಲಕ ವಿರೆಚನ ನಿಲ್ಲಿಸಲು ಮಾತ್ರೆ ಪಡೆದಾಯಿತು. ಮನೆ ಬಿಟ್ಟು ನಾಲಕ್ಕು ತಾಸಾಗಿತ್ತು ಮಗುವೂ ಹಸಿದಿತ್ತು. ನಾವು ಕೂತು ಕೂತು ದಣಿದಿದ್ದೆವು. ಉಪಹಾರ, ವಿಶ್ರಾಂತಿ ಆಯಿತು. ಇಲ್ಲಿನ ಉಪಹಾರದ ಬಗೆ ಬಣ್ಣನೆಗೆ ನಿಲಕದ್ದು. ಸಸ್ಯಾಹಾರ, ಮಾಂಸಾಹಾರವಂತೂ ಸರೇ ಸರಿ... ಎಲ್ಲ ಬಗೆಯಾ ಪಥ್ಯದ ತಿಂಡಿ ತೀರ್ಥ. ಸಕ್ಕರೆ ಇಲ್ಲದ್ದು, ಕೊಬ್ಬಿಲ್ಲದ್ದು, ಶೂನ್ಯ ಕೆಲೊರಿ, ಕಡಿಮೆ ಸೋಡಿಯಂ ಇರುವುದು, ಹೆಚ್ಚು ಪೊಟಾಸಿಯಂ ಇರವುದು, ಇತರೆ ಲವಣಸಹಿತ, ರಹಿತ, ಕರಿಯದ, ಬರಿ ಹುರಿದ, ಧಾನ್ಯದ, ಬೀಜದ ಬಗೆ ಬಗೆಯ ತಿನಿಸುಗಳು. ಇಲ್ಲಿ ಬಾಯಿ ಕಟ್ಟುವ ಮಾತೆ ಇಲ್ಲ. ಬಾಯಿ ಚಪ್ಪರಿಸುವ ತಿನಿಸೇ ಎಲ್ಲ.
ಅಲ್ಲಿ ಮಕ್ಕಳ ಡಯಾಪರ್ ಬದಲಾಯಿಸಲೂ ವಿಶೇಷವಾದ ಜಾಗ. ಪಯಣಿಗರ ಆರಾಮಿಗೆ ಆವರು ನೀಡುವ ಆದ್ಯತೆ ಮೆಚ್ಚುಗೆ ಮೂಡಿಸುವುದು. ಮಗುವಿನ ಆರೈಕೆ ತಾಯಿಯ ಹೊಣೆ ಎನ್ನುವವರು ಇಲ್ಲಿ ನೋಡಿ ಕಲಿಯಬೇಕು. ತಂದೆಯದು ಇಲ್ಲಿ ಹೆಚ್ಚಿನ ಹೊಣೆ. ಅದರಲ್ಲೂ ಡಯಾಪರ್ ಬದಲಾಯಿಸುವುದಂತೂ ಬಹುಪಾಲು ತಂದೆಯರೆ. ಅದಕ್ಕೆ ಅವರಿಗೆ ಮೊದಲೇ ತರಬೇತಿಯೂ ಆಗಿರುತ್ತದೆ! ಇಲ್ಲಿ ನನ್ನ ದೇಶ ನೆನೆಸುವ ಯೋಗ ಬಂದಿತು. ಒಂದು ಯುವ ಜೋಡಿ. ಇನ್ನೂ ಇಪ್ಪತ್ತರ ಆಸುಪಾಸಿನವರು. ಅವರಿಗೆ ಅವಳಿ ಜವಳಿ. ಬಹುಶಃ ೬-೮ ತಿಂಗಳ ವಯಸ್ಸಿರಬೇಕು. ಬಹು ಮುದ್ದಾಗಿವೆ. ಎರಡು ಸೀಟ್ ಇರುವ ಸ್ತ್ರೋಲ್ಲರ್ ನಲ್ಲಿ ಮಕ್ಕಳು ಇವೆ. ಯುವಕ ಮಕ್ಕಳ ತಳ್ಳು ಗಾಡಿಯನ್ನು ರಸ್ತೆ ಬದಿಯ ಫುಟ್ ಪಾಥ್ ನಲ್ಲಿ ನಿಲ್ಲಿಸಿದ. ಒಂದು ಮಗುವನ್ನು ಅಲ್ಲಿ ಮಲಗಿಸಿ ಶೌಚ ಕವಚ ಬದಲಿಸತೊಡಗಿದ. ಹೆಂಡತಿ ಇನ್ನೊಂದು ಮಗುವಿನ ಹತ್ತಿರವಿದ್ದಳು. ನಂತರ ಇನ್ನೊಂದರ ಸರದಿ. ನನಗಂತೂ ಬಹು ಖುಷಿ ಆಯಿತು. ನನ್ನ ನಾಡಿನಲ್ಲಿ ರಸ್ತೆ ಯ ಪಕ್ಕದಲ್ಲೇ ಶೌಚಕ್ಕೆ ಕೂಡುವ ಮಕ್ಕಳನ್ನು ನೋಡಿದ್ದೇ. ಆದರೆ ಇಲ್ಲಿ ಇದು ಕನನಸಲ್ಲೂ ಸಾಧ್ಯ ಇಲ್ಲ. ಕೊನೆಗೆ ಹಸುಗೂಸಿಗಾದರು ರಸ್ತೆಯಲ್ಲಿಯೇ ಆ ಅವಕಾಶ ಇದೆ ಎಂದರೆ, ಮಕ್ಕಳು ಕಾಲ ದೇಶಗಳನ್ನೂ ಮೀರಿದವರು ಎಂಬ ನಂಬಿಕೆ ಸತ್ಯವಾಯಿತು.
ನಾವು ಕ್ಯಾಟ್ಸ್ ಕಿಲ್ ಬೆಟ್ಟದ ಬುಡದ ಊರು ತಲುಪಿದಾಗೆ ಆಗಲೇ ಸಂಜೆ ಐದು. ನಾಲಕ್ಕು ತಾಸಿನ ಪಯಣ ಎಂಟು ತಾಸು ಮೀರಿತ್ತು -ಥೇಟು ಕರ್ನಾಟಕದಂತೆ. ನಮ್ಮ ಸಹ ಚಾರಣಿಗರು ಹಿಂದಿನ ದಿನವೇ ಬಂದು ಟೆಂಟ್ ಹಾಕಿದ್ದರು. ಹಾಗಾಗಿ ನಮಗೆ ತುಸು ಆರಾಮ್ ಎನಿಸಿತು. ನಾವು ಟೆಂಟ್ ಹಾಕಿದ ಜಾಗ ನೋಡಿದರೆ ಸಂತೆಯಿಂದ ಜಾತ್ರೆಗೆ ಬಂದಂತಾಗಿತ್ತು. ಕ್ಯಾಂಪ್ ನಲ್ಲಿ ನೂರಾರು ವಾಹನಗಳು. ಮರಗಿಡಗಳ ನಡುವೆ ಬಯಲಿದ್ದಲ್ಲೆಲ್ಲ ಬಣ್ಣ ಬಣ್ಣದ ಟೆಂಟ್ ಗಳು. ಮರಗಳಿಗೆ ಗುರುತಿಸಲು ಸಂಕೇತಕ್ಷರಗಳು. ಪ್ರತಿ ಗುಂಪಿಗೂ ಮರದ ಬೆಂಚು ಮೇಜುಗಳು. ಅಲ್ಲಿಯೇ ಬೆಂಕಿಹಾಕಲು ಲೋಹದ ದೊಡ್ಡ ಅಗ್ಗಿಷ್ಟಿಕೆ. ಪಕ್ಕದಲ್ಲೇ ಕಾರು ನಿಲ್ಲಿಸಲು ಜಾಗ. ಆದರೆ ಮಳೆ ಬಂದದ್ದರಿಂದ ಕೆಸರು, ಕೊಚ್ಚೆ. ಇಲ್ಲೂ ತಲೆಗಂದಾಯ ಉಂಟು. ಜಾತ್ರೆಯಲ್ಲಿ ಹಾಕುತ್ತಾರಲ್ಲ ನೆಲಗಂದಾಯ ಹಾಗೆ. ಬಹಳ ಹೆಚ್ಚೇನಿಲ್ಲ, ವಸತಿ ಗೃಹಕ್ಕಿಂತ ೪-೫ ಡಾಲರ್ ಕಡಿಮೆ ಅಷ್ಟೇ. ಅಂದರೆ ಸುಮಾರು ೪೦ ಡಾಲರುಗಳು ೨ ದಿನಕ್ಕೆ. ಆವರು ಕೊಡುವ ಏಕಮಾತ್ರ ಸೌಲಭ್ಯ ರೆಸ್ಟ್ ರೂಂ. ಅದು ಟಾಯ್ಲೆಟ್ ಪೇಪರ್ ರಹಿತ. ಹೋದ ಕೂಡಲೇ ರೆಸ್ಟ್ ರೂಮಿಗೆ ಹೋದರೆ, ಶುಚಿ ಮಾಡಿಕೊಳ್ಳಲು ಏನೂ ಏನೂ ಇಲ್ಲ. ಕೇಳಿದರೆ ನಮ್ಮದು ನಾವೇ ಒಯ್ಯಬೇಕು. ನಮ್ಮ ಊರಿನಂತೆ ತಂಬಿಗೆ ಹಿಡಿದು ಹೋಗುವ ಬದಲು ಪೇಪರ್ ಸುರಳಿ ಹಿಡಿದು ಹೋಗಬೇಕು. ಹತ್ತಿರದಲ್ಲೆ ಹಳ್ಳವೋ, ಝರಿಯೋ ಹರಿಯುತ್ತಿದೆ. ಆದರೆ ಆ ಕಾರ್ಯಕ್ಕೆ ಉಪಯೋಗಿಸುವ ಹಾಗಿಲ್ಲ ಎಂದು ಸುಮ್ಮನಾಗಬೇಕಾಯಿತು. ಜನಮರುಳೋ, ಜಾತ್ರೆ ಮರುಳೋ. ಬಂದದ್ದಾಯಿತು ಗುಂಪಿನೊಡನೆ ಗೋವಿಂದ ಎಂದು ಕೇಳಿದಷ್ಟು ಕೊಟ್ಟು ತೆಪ್ಪಗಾದೆವು.
ನಾವು ತಂಗಿದ ಜಾಗದ ಹೆಸರು ಕರಿ ಕರಡಿ ಶಿಬಿರ... ಹೆಸರು ಅನ್ವರ್ಥವಾಗಿದೆ ಎಂದರೆ ಅವರು, ರಾತ್ರಿ ಕರಡಿಗಳು ಬರುತ್ತವೆ, ಯಾರೂ ಆಹಾರ ಪದಾರ್ಥ ರಾತ್ರಿ ಹೊರಗಿಡಬಾರದು ಎಂದಾಗ ನಕ್ಕು ಸುಮ್ಮನಾದೆವು. ಜಾಂಬುವಂತ ತಿಂಡಿ ಕದಿಯಲು ಬರುವನೇ ಎಂದು ಹಾಸ್ಯ ಮಾಡಿದೆವು.
![]() |
ಫೋನಿಷಿಯಾ ಗ್ರಾಮ |
(ಸುಮಾರು ಆರು ವರ್ಷಗಳ ಹಿಂದೆ ಅಮೇರಕಾಗೆ ಮೊದಲ ಭೇಟಿನೀಡಿದಾಗಿನ ಅನುಭವಗಳು- ಕೆಂಡ ಸಂಪಿಗೆಯಲ್ಲಿ ಪ್ರಕಟವಾಗಿದ್ದವು)
No comments:
Post a Comment