Sunday, May 25, 2014

ಅಮೇರಿಕಾ ಅನುಭವ-5

 ಶ್ವಾನ ಯಾರು ನಿನಗೆ ಸಮಾನ    
ಎಚ್. ಶೇಷಗಿರಿರಾವ್

ಶ್ವಾನ- ನಾನ, ನೀನ?
ಬೀದಿ ನಾಯಿಗಳನ್ನು ನೋಡಬೇಕೆಂದು ಕಣ್ಣಲ್ಲಿ ಕಣ್ಣಿಟ್ಟು ಹುಡುಕಿದರೂ ದೊರೆಯುವುದು ದುರ್ಲಭ ಅಮೇರಿಕಾದಲ್ಲಿ. ಅಷ್ಟೆ ಏಕೆ ನಾಯಿಗಳಿವೆ ಎಚ್ಚರಿಕೆ ಎಂಬ ಫಲಕ ಯಾವ ಮನೆಯ ಮುಂದೆಯೂ ಕಾಣುವುದು ಕಷ್ಟ. ಅಂದರೆ ಅಮೇರಿಕಾ ನಾಯಿಗಳಿಲ್ಲದ ನಾಡು ಎಂದು ಅಂದು ಕೊಳ್ಳಬಾರದು. ಅಲ್ಲಿ ೭೭.೫ ಮಿಲಿಯನ್ ನಾಯಿಗಳಿವೆ. ಸರಿ ಸುಮಾರು ಶೇಕಡಾ ನಲವತ್ತು ಕುಟುಂಬಗಳಲ್ಲಿ ಶ್ವಾನವೂ ಸಹ ಅವಿಭಾಜ್ಯ ಅಂಗ. ಸುಮಾರು .೯% ಸಂಸಾರಗಳಲ್ಲಿ ಎರಡು ನಾಯಿಗಳು ಉಂಟು. ಆ ದೇಶದ ಅತಿ ಮುದ್ದಿನ ಪ್ರಾಣಿಗಳಲ್ಲಿ ನಾಯಿಯದು ಪ್ರಥಮ ಸ್ಥಾನ. ನಂತರದ ಸ್ಥಾನ ಬೆಕ್ಕಿನದು. ಹತ್ತನೆಯ ಸ್ಥಾನ ಹಾವಿನದು. ನಾಯಿ ಅಲ್ಲಿಯ ಮೂಲ ನಿವಾಸಿಗಳ ಸಂಗಾತಿಯಾಗಿತ್ತು. ಆದರೆ ಬೆಕ್ಕು  ವಲಸಿಗ. ನೂರಾರು ವರ್ಷಗಳ ಹಿಂದೆ ವಲಸಿಗರನ್ನು ಸಾಗಿಸುವ ನೌಕೆಗಗಳಲ್ಲಿ ಇಲಿ, ಹೆಗ್ಗಣಗಳು ಹೆಚ್ಚಾಗಿ, ಇದ್ದ ಬದ್ದ ಆಹಾರವನ್ನೆಲ್ಲ ಮೂಷಿಕ ಸೇನೆ ಮುಗಿಸಿದಾಗ ಬೆಕ್ಕನ್ನೂ ಹಡಗಿನಲ್ಲಿ ಖಾಯಂ ಪಯಣಿಗನಾಗಿ ಪರಿಗಣಿಸಿದರು. ಮೂಲನಿವಾಸಿಗಳ ದೊರೆಯೊಬ್ಬ ತನ್ನ ರಾಜ್ಯದಲ್ಲಿನ ಇಲಿಗಳ ಹಾವಳಿ ತಡೆಗಟ್ಟಿದವರಿಗೆ ತನ್ನ ಮಗಳನ್ನೇ ಕೊಟ್ಟು ಮದುವೆ ಮಾಡಿ ಅರ್ಧ ರಾಜ್ಯ ಕೊಡುವುದಾಗಿ ಘೋಷಿಸಿದಾಗ ಯುರೋಪಿನ ನಾವಿಕನಿಬ್ಬ ತನ್ನ ಜತೆ ಇದ್ದ ಬೆಕ್ಕಿನ ಸಮೇತ ಬಂದು ಅಲ್ಲಿ ನೆಲಸಿ ರಾಜನಾದ ಕತೆ ಇದೆ. ಬೊಮ್ಮನಹಳ್ಳಿಯ ಕಿಂದರಿಜೋಗಿ ಕವನಕ್ಕೆ ಸ್ಫೂರ್ತಿ ದೊರೆತದ್ದೂ ಇಂತಹ ಘಟನೆಯೇ ಇದ್ದೀತು. ಅಂತೂ ಮಾರ್ಜಾಲ ಜಾತಿಯ ಪ್ರಾಣಿಗಳು ಅಮೇರಿಕಾದ ಮೂಲದವಲ್ಲ. ಅದಕ್ಕೆ ಬೆಕ್ಕಿನ ಅಣ್ಣಂದಿರಾದ ಹುಲಿ, ಸಿಂಹ, ಚಿರತೆ ಅಮೇರಿಕಾದಲ್ಲಿ ಇಲ್ಲ. ಈಗ ಇಲಿಗಳನ್ನು ಹಿಡಿಯುವ ಕೆಲಸವಿಲ್ಲದಿದ್ದರೂ ಹವಾನಿಯಂತ್ರಿತ ಮನೆಯಲ್ಲಿ ಮುದ್ದಿನ ಮುದ್ದೆಯಾಗಿದೆ ಬೆಕ್ಕು.
ಇಲ್ಲಿನ ಅತಿ ಮುದ್ದಿನ ಪ್ರಾಣಿಗಳಲ್ಲಿ ಹತ್ತನೆಯದು ಹಾವು. ಅದನ್ನು ಸಾಕುವವರೂ ಇದ್ದಾರೆ. ಫ್ಲೀ ಮಾರ್ಕೆಟ್ಟಿಗೆ ಹೋದಾಗ ಗಾಜಿನ ಚೌಕಾಕಾರದ ಜಾಡಿಗಳಲ್ಲಿ ಹರಿದಾಡುವ ಹಾವುಗಳನ್ನು ನೋಡಿದೆ. ಅವು ಮಾರಾಟಕ್ಕೆ ಇವೆ ಎಂಬುದನ್ನು ಕೇಳಿ ಗಾಬರಿಯಾದೆ. ಅವು ವಿಷದ ಹಾವುಗಳಲ್ಲ. ಅವುಗಳಿಂದ ಜೀವ ಹಾನಿಯ ಭಯವಿಲ್ಲ. ಅವುಗಳಿಗೂ  ಬೇಡಿಕೆ ಇದೆ ಎಂದಾಗ ನಮ್ಮ ಹಾವಾಡಿಗರ ನೆನಪಾಯಿತು. ಆದರೆ ಇವರು ಸಾಕುವುದು ಪ್ರೀತಿಗಾಗಿ. ಅದಕ್ಕೆ ನಿತ್ಯ ಬೇಕಾದ ಆಹಾರವೂ ಅಂದರೆ ಹುಳ, ಹುಪ್ಪಡಿ. ಕಪ್ಪೆ ಇತ್ಯಾದಿಗಳು ಅಲ್ಲಿಯೇ ಮಾರಾಟವಾಗುತ್ತವೆ.
ನಾಯಿಗಿಂತ ಕಡೆ ಎಂದು ಹೀನಾಯವಾಗಿ ಮಾತನಾಡುವವರು ಇಲ್ಲಿ ಬಂದು ನೋಡಬೇಕು. ಶ್ವಾನದಂತೆ ಶ್ರೇಷ್ಠ ಎಂದು ಅವರೇ ಹೇಳಬೇಕಾಗುತ್ತದೆ. ಒಂದು ರೀತಿಯಲ್ಲಿ ಜನರಿಗಿಂತ ಅವುಗಳ ಜಬರು ಬಹು ಜೋರು. ಮಾನವ ಮಗು, ಶಿಕ್ಷಣ ಮತ್ತು ಶ್ವಾನದ ನಡುವೆ ಒಂದನ್ನು ಆಯ್ಕೆ ಮಾಡಲು ಹೇಳಿದರೆ ಬಹಳ ಜನ ನಾಯಿಗೆ ಆದ್ಯತೆ ನೀಡುವ ಸಂಭವ ಹೆಚ್ಚಂತೆ. ಅವುಗಳನ್ನು ಸಾಕುವುದು ಎಂದರೆ ಒಂದು ಹೆಮ್ಮೆಯ ಸಂಗತಿ. ಅವುಗಳಿಗೆ ವಿಶೇಷ ವಾಸದ ಮನೆ. ಅಲ್ಲಿ ಹಿತವಾದ ವಾತಾನುಕೂಲ. ಹವಾಮಾನಕ್ಕೆ ಅನುಗುಣವಾದ ಹಾಸಿಗೆ  ಹೊದಿಕೆ, ಹೊತ್ತು ಹೊತ್ತಿಗೆ ನಿಗದಿತ ಆಹಾರ, ಆಗಾಗ ವೈದ್ಯಕೀಯ ತಪಾಸಣೆ, ಸಕ್ರಮವಾದ ಔಷಧ ಉಪಚಾರ ಒದಗಿಸಲೇಬೇಕು. ತುಸು ಹೆಚ್ಚು ಕಡಿಮೆ ಮಾಡಿದರೂ ಸ್ಥಳೀಯ ಸಂಘಟನೆಗಳು ಮಧ್ಯ ಪ್ರವೇಶಿಸುತ್ತವೆ.
ಅವುಗಳಿಗೆ ಕಾರಿನಲ್ಲಿ ವಿಶೇಷ ಸೀಟು. ಅಲ್ಲದೆ ಬೆಲ್ಟನ್ನು ಕಡ್ಡಾಯವಾಗಿ ಕಟ್ಟಲೇಬೆಕು. ವಾ, ಅವು ಕುಳಿತು ಹೊಗುವ ಠೀವಿ ನೋಡಬೇಕು. ಅವೇ ಮಾಲಿಕರು ಯಜಮಾನ ಬರಿ ಕಾರಿನ ಚಾಲಕ ಯಜಮಾಯ ಎನ್ನುವ ಹಾಗಿರುತ್ತವೆ.
ಬೆಳಗಿನ ವಾಯುವಿಹಾರಕ್ಕೆ ಹೊರಟಾಗ ತರ ತರದ ಜಾತಿಯ ನಾಯಿ ಹಿಡಿದ ಜನ ಸಿಗುತ್ತಿದ್ದರು. ಎಲ್ಲರ ಕೈನಲ್ಲೂ ಒಂದೊಂದು ಪ್ಲಾಸ್ಟಿಕ್ ಚೀಲ ಇದ್ದೇ ಇರುತಿತ್ತು. ನನಗೆ ಇವೇನು ಕೂಳುಬಾಕ ನಾಯಿಗಳು, ಮನೆಯಲ್ಲಿ ತಿನ್ನುವುದಲ್ಲದೆ ಹೊರಗೆ ಬಂದಾಗಲೂ ಹೊಟ್ಟೆಗೆ ಹಾಕಿಕೊಳ್ಳಬೇಕೆ? ಎಂದುಕೊಂಡೆ. ನಂತರ ತಿಳಿಯಿತು. ಅದು ಅವುಗಳ ಆಹಾರವಲ್ಲ. ಅವು ರಸ್ತೆಯಲ್ಲಿ ಮಲ ವಿಸರ್ಜನೆ ಮಾಡಿದರೆ ತಡ ಮಾಡದೆ ಅದನ್ನು ಸಂಗ್ರಹಿಸಿ ಮನೆಗೆ ಒಯ್ಯಬೇಕು. ಎಲ್ಲಿ ಅಂದರೆ ಅಲ್ಲಿ ಗಲೀಜು ಮಾಡುವ ಹಾಗಿಲ್ಲ. ಅಲ್ಲಲ್ಲಿ ಫಲಕದ ಮೇಲೆ ನಾಯಿಯ ಚಿತ್ರ ಕಂಡಿತು. ಅದನ್ನು ಜನರಿಗೆ ಎಚ್ಚರಿಕೆ ನೀಡಲು ಹಾಕಿದ್ದಾರೆ. ನಾಯಿ ಎಲ್ಲೆಂದರೆ ಅಲ್ಲಿ ಗಲೀಜು ಮಾಡಿದರೆ ಮಾಲಿಕ ದಂಡ ತೆರಬೇಕು. ಮುನ್ನೆಚ್ಚರಿಕೆಯ ಕ್ರಮವಾಗಿ ಎಲ್ಲರ ಕೈನಲ್ಲೂ ಪ್ಲಾಸ್ಟಿಕ್ ಚೀಲ. ಮನೆಯಲ್ಲಿ ಅವಕ್ಕೆ ಶೌಚ ಕವಚ ತೊಡಿಸಿದ್ದರೂ ಅಚ್ಚರಿಯಿಲ್ಲ.
ಹೋದ ಹೊಸದರಲ್ಲಿ ನಾನು ಸತೀ ಸಮೇತನಾಗಿ ಹತ್ತಿರವಿದ್ದ ವಾಲ್ ಮಾರ್ಟಿಗೆ ಹೋಗಿದ್ದೆ. ಅಲ್ಲಿ ಅನೇಕ ವಿಭಾಗಗಳು. ಒಂದು ಕಡೆ ಪುಟ್ಟ ಪುಟ್ಟ ಅಂಗಿ ಲಂಗ ಸರ, ಹಾರ, ಮೇಜು ಕುರ್ಚಿ, ಹಾಸಿಗೆ ಹೊದಿಕೆಗಳ ಸಾಲು ಸಾಲು ಕಂಡಿತು. ನನ್ನ ಹಂಡತಿಗೆ ತುಂಬ ಖುಷಿ. ಅವು ಆಟದ ಬೊಂಬೆಯ ಉಡುಗೆ ತೊಡುಗೆಗಳು ಆಟದ ಸಾಮಾನುಗಳು. ಎಷ್ಟು ಚೆನ್ನಾಗಿವೆ, ಚಿಕ್ಕ ಮಕ್ಕಳಿಗೂ ಹಾಕಬಹುದು ನಮ್ಮ ಇನಿಗೆ ತೊಗಳ್ಳೋಣ ಎಂದು ಹೊಗಳಿಯೇ ಹೊಗಳಿದಳು. ಮನೆಯಲ್ಲೂ ಮಗಳ ಮುಂದೆ ಹೇಳಿದಳು. ಮುಂದಿನ ಸಲ ಮಗಳೊಂದಿಗೆ ಹೋದಾಗ ಅವನ್ನು ನೋಡಿ ಮಗಳಿಗೆ ನಗುವೋ ನಗು. ಅವು ನಾಯಿಯ ಉಡುಪು ತೊಡಪುಗಳು. ಪ್ರತಿ ಮಾಲ್ ನಲ್ಲೂ ಮುದ್ದು ಪ್ರಾಣಿಗಳ ವಸ್ತು ವಿಭಾಗ ಪ್ರತ್ಯೇಕ ವಿಭಾಗವಿರುತ್ತದೆ. ನಂತರ ಪೆಟ್ ಮಾರ್ಟಿಗೆ ಹೋದಾಗ ತಿಳಿಯಿತು ಶ್ವಾನ ಸಂಪದದ ಸೊಗಸು. ಆದು ಸಂಪೂರ್ಣ ಮುದ್ದಿಗಾಗಿ ಸಾಕಿದ ಪ್ರಾಣಿಗಳ ವಸ್ತುಭಂಡಾರ. ಅಲ್ಲಿ ಸಾಕಿದ ಮುದ್ದು ಪ್ರಾಣಿ ಪಕ್ಷಿಗಳಿಗೆ ಬೇಕಾದ್ದೆಲ್ಲ ದೊರಕುವುದು. ಅದರಲ್ಲೂ ನಾಯಿ ಬೆಕ್ಕುಗಳದೆ ಮೇಲುಗೈ. ಕುರ್ಚಿ, ಮಂಚ, ಹಾಸಿಗೆ ಹೊದಿಕೆ, ಸೋಫಾ, ಸ್ನಾನದ ತೊಟ್ಟಿ, ಪೇಷ್ಟು, ಬ್ರಷು, ಸೋಪು. ಶ್ಯಾಂಪು, ತರಹ ತರಹದ ಬೆಲ್ಟು, ಬಗೆ ಬಗೆಯ ಆಹಾರ, ಕಡಿಯಲು ಎಲುಬಿನ ತುಂಡುಗಳು, ಅಲಂಕಾರ ಸಾಮಗ್ರಿಗಳು ಅವುಗಳ ಬಗೆಗಿನ, ಮಾಹಿತಿ, ತರಬೇತಿಗಳ ಪುಸ್ತಕ ಹಾಗು  ಸೀಡಿ.  ವೈಭೋಗದ ಜೀವನಕ್ಕೆ ಬೇಕಾದ ಎಲ್ಲ ಒಂದೆ ಸೂರಿ ನಡಿಯಲ್ಲಿದ್ದವು. ಇಂತಹ ಜೀವನ ನಡೆಸುವ ಆ ಪ್ರಾಣಿಗೆ ನಾಯಿ ಎಂದು ಕರೆಯುವುದು ಹೇಗೆ ಎಂದು ನನಗೆ ಜೀವ ಹುರಿ ಹುರಿ ಅನಿಸಿತು.
ಒಂದು ಬಾರಿ ನನ್ನ ಅಳಿಯನ ಬಂಧುವಿನ ಮನೆಗೆ ಸಮಾರಂಭ ಒಂದಕ್ಕೆ ಹೋಗಿದ್ದೆವು. ಅವರದು ತುಂಬ ದೊಡ್ಡದಾದ ಮನೆ. ಅವರ ಮನೆಯಲ್ಲಿ ಒಂದು ಮುದ್ದಾದ ನಾಯಿಮರಿ ಇದ್ದಿತು. ಎಲ್ಲ ಕಡೆ ಬಿಡು ಬೀಸಾಗಿ ಓಡಾಡುತಿತ್ತು. ಆದರೆ ದೇವರ ಮನೆ, ಅಡುಗೆ ಮನೆ ಮತ್ತು ಡೈನಿಂಗ್ ಹಾಲಿನ ಬಾಗಿಲವರೆಗೆ ಬಂದರೂ ಒಳಗೆ ಬರುತ್ತಿರಲಿಲ್ಲ. ಕುಂಯಿ, ಕುಂಯಿ ಎನ್ನುತ್ತಾ ಹಿಂದಕ್ಕೆ ಹೋಗುತಿತ್ತು. ಅದಕ್ಕೆ ನೀಡಿದ ತರಬೇತಿ ನೋಡಿ ನನಗೆ ಬಹಳ ಮೆಚ್ಚಿಗೆ ಆಯಿತು. ಎಂತಹ ನಾಗರಿಕ ನಾಯಿಮರಿ ಎಂದುಕೊಂಡೆ.
ಸಂಜೆ ಹಾಗೆಯೇ ಕಾಲಾಡಿಸಿಕೊಂಡು ಬರಲು ಹೊರ ಸಂಚಾರಕ್ಕೆ ಹೊರಟೆ. ಅದು ತುಂಬ ಸಿರಿವಂತರ ಬಡಾವಣೆ. ಎಲ್ಲ ಮೂರು ನಾಲಕ್ಕು ಗರಾಜು ಇರುವ ಮಹಲುಗಳು. ಅರ್ಧ ಮುಕ್ಕಾಲು ಎಕರೆ ಹುಲ್ಲು ಹಾಸಿನ ಮಧ್ಯದ ಮನೆಗಳು. ಅಲ್ಲಿಯೇ ಮಕ್ಕಳಿಗೆ ಆಟವಾಡಲು ಜಾರುಬಂಡಿ, ಉಯ್ಯಾಲೆ, ಬಾಸ್ಕೆಟ್ ಬಾಲ್ ಅಂಕಣ, ಇನ್ನಿತರ ಪರಿಕರಗಳು. ನಮ್ಮ ನಗರದ ಬಡಾವಣೆಗೆ ಇಂತಹ ಒಂದು ಸೌಲಭ್ಯ ಇದ್ದರೆ ಸಂಜೆಯಲ್ಲಿ ಮುಕುರುವ ಮಕ್ಕಳ ನೆನಪಾಯಿತು. ತಂದೆ ತಾಯಿಗಳಿಗೆ ಮಕ್ಕಳ ಬಗೆಗಿನ ಕಾಳಜಿ, ಕಳಕಳಿ ತೃಪ್ತಿ ತಂದಿತು. ಇಲ್ಲಿನ ವಿಶೇಷ ಎಂದರೆ ಆರತಿಗೊಂದು, ಕೀರುತಿಗೊಂದು, ನಾವಿಬ್ಬರು ನಮಗಿಬ್ಬರು ಎಂಬ ಮಾತೆ ಇಲ್ಲ. ಮಕ್ಕಳಿರಲವ್ವ ಮನೆ ತುಂಬ ಎನ್ನುವ ನಂಬಿಕೆ ಅವರದು. ಅಲ್ಲದೆ ಸರ್ಕಾರದ ಸೌಲಭ್ಯವೂ ಸಿಕ್ಕುವುದು. ಅದಕ್ಕೆ ಅಲ್ಲಿ ಎಲ್ಲ ಅನುಕೂಲ ಮಾಡಿಕೊಡುವರು ಮಕ್ಕಳ ಆಟ ಪಾಠಕ್ಕೆ. ಹೀಗೆ ಯೋಚಿಸುತ್ತಾ ಮುಂದೆ ಸಾಗುತ್ತಿರುವಾಗ ಮನೆಯೊಂದರಿಂದ ದೈತ್ಯ ದೇಹದ ನಾಯಿ ಬೊಗಳುತ್ತಾ ನನ್ನತ್ತ  ಧಾವಿಸಿತು. ಅಯ್ಯೋ ಇನ್ನೇನು ಗತಿ ಎಂದು ಕಂಗಾಲಾದೆ. ನಾಯಿಯಿಂದ ಕಡಿಸಿಕೊಳ್ಳಲು ನ್ಯೂಜರ್ಸಿಗೆ ಬರಬೇಕಿತ್ತೆ? ಎನಿಸಿತು.
ನಾನು ಸಾಧಾರಣವಾಗಿ ನಾಯಿಗೆ ಅಂಜುವವನಲ್ಲ. ಬೆಳ್ಳಂ ಬೆಳಗ್ಗೆ ವಾಕಿಂಗ್ ಹೋಗುವಾಗ ಅನೇಕರು ಕೈನಲ್ಲಿ ಕೋಲು ಹಿಡಿದಿರುತ್ತಾರೆ ಅದನ್ನು ಕೋಲು ಎನ್ನುವುದಕ್ಕಿಂತ ಶ್ವಾನದಂಡ ಎನ್ನಬಹುದು. ಬಹುತೇಕರು ನಿವೃತ್ತ ಹಿರಿಯ ಅಧಿಕಾರಿಗಳು. ಅದನ್ನು ರಾಜದಂಡವೇನೋ ಎಂಬ ಗತ್ತಿನಿಂದ ಹಿಡಿದು ಬರುತ್ತಾರೆ. ಆದರೆ ಅದು ನಾಯಿ ಹೊಡೆವ ಕೋಲು. ನಮ್ಮಲ್ಲಿ ಹಿಂಡು ಹಿಂಡು ನಾಯಿಗಳನ್ನು ನೋಡಿದ್ದೇನೆ. ಹಚಾ ಹಚಾ ಎನ್ನುತ್ತಾ ಕೈ ಎತ್ತಿದರಾಯಿತು ಬಾಲ ಮುದುರಿಕೊಂಡು ಕಾಲು ಕೀಳುತ್ತವೆ. ಇಲ್ಲವೆ ಕೆಳಗೆ ಬಗ್ಗಿ ಕಲ್ಲು ತೆಗೆದುಕೊಂಡರಂತೂ ಮುಗಿಯಿತು. ತಮ್ಮದಾರಿ ತಾವು ಹಿಡಿಯುತ್ತವೆ. ಆದರೆ ಇದು ಅಮೇರಿಕಾದ ನಾಯಿ. ನನ್ನ ಹಚಾ ಹುಚಾ ಅದಕ್ಕೆ ತಿಳಿಯಬೇಕಲ್ಲ. ಮೇಲಾಗಿ ಅದನ್ನು ಹೆದರಿಸಬೇಕೆಂದರೆ ಅಲ್ಲಿ ಕಲ್ಲು ಎಲ್ಲಿಂದ ತರಲಿ.  ದೇವರೇ ದಿಕ್ಕು ಎಂದು ನಿಂತು ಬಿಟ್ಟೆ. ನಾಯಿಗಳು ಮತ್ತು ಸಮಸ್ಯೆಗಳು ಒಂದೆ ರೀತಿ. ಕಾಲೂರಿ ನಿಂತು ಎದುರಿಸಿದರೆ ಹೆದರಿ ದೂರ ಹೋಗುತ್ತವೆ. ಬೆನ್ನು ತೋರಿದರೆ ಬೆಂಬಿಡದೆ ಕಾಡುತ್ತವೆ. ನಾಯಿಗಳದು ಇನ್ನೊಂದು ಗುಣ. ನಾವು ಓಡಿದರೆ ಮಾತ್ರ ಅವುಗಳ ಜೋರು ಬಹಳ. ಬಹುಶ: ತನ್ನ ಪೂರ್ವಿಕರು ಬೇಟೆ ಆಡಿ ಬದುಕುತ್ತಿದ್ದಾಗಿನ ಗುಣ ಜಾಗೃತವಾಗಿರಬಹುದು. ಚಲಿಸುವ ಯಾವುದನ್ನು ಕಂಡರೂ ಸರಿ ಅವುಗಳ ವೇಗ, ರಭಸ ದ್ವಿಗುಣವಾಗುವುದು. ಸೈಕಲ್ ಮತ್ತು ಬೈಕ್ ಸವಾರರಿಗೆ ರಾತ್ರಿಯಲ್ಲಿ ಈ ಅನುಭವ ಬಹು ಕಟು. ಸೀಳು ನಾಯಿಗಳಂತೆ ಗುಂಪಾಗಿ ಬೊಗಳುತ್ತಾ ಬೈಕ್ ಅನ್ನು ಹಿಂಬಾಲಿಸದಾಗ ಅವರ ಗತಿ ಗಂಗಮ್ಮ. ವಿಶೇಷವಾಗಿ ಅಪರಾತ್ರಿಯಲ್ಲಿ ಬರುವ ಬಿಪಿಒ ನೌಕರರು ಬಹುತೇಕ ಬೈಕಲ್ಲಿ ಬರುವುದಕ್ಕೆ ಹಿಂದೆ ಮುಂದೆ ನೋಡಲು ಇದೆ ಕಾರಣ. ಇನ್ನೇನು ಅದು ನನ್ನ ಮೇಲೆ ನೆಗೆಯಬಹುದು ಎಂದುಕೊಂಡು ಕಣ್ಣು ಮುಚ್ಚಿ ನಿಂತೆ. ಇದುವರೆಗೆ ಕೆಲಸ, ಹೆಂಡತಿ, ಮಕ್ಕಳು, ಸಂಸಾರ ಎಂಬ ಪಡಿಪಾಟಿಲಿನಲ್ಲಿ ಸಮಾಜಕ್ಕೆ ಯಾವ ಸೇವೆಯನ್ನು ಮಾಡಲಿಲ್ಲ. ಸತ್ತ ಮೇಲಾದರೂ ಅನ್ಯರಿಗೆ ತುಸು ಅನುಕೂಲವಾಗಲಿ ಎಂದು ಲಯನ್ಸ್ ಕ್ಲಬ್ಬಿಗೆ ನೇತ್ರದಾನ ಮಾಡಿದ್ದೆ. ವೈದ್ಯಕೀಯ ಸಂಶೋಧನೆಗೆ ಕಿರು ಸಹಾಯವಾಗಲಿ ಎಂದು ಸೆಂಟ್ ಜಾನ್ ಆಸ್ಪತ್ರೆಗೆ ದೇಹ ದಾನ ಮಾಡಿದ್ದೆ. ಆದರೆ ಈಗ ಪರದೇಶದಲ್ಲಿ ನಾನು ಹಾದಿಯ ಹೆಣ. ನಾಯಿಯ ಬಾಯಲ್ಲಿ ಶರೀರ ಚೂರು ಚೂರು. ಏನೂ ಮಾಡುವ ಹಾಗಿಲ್ಲ. ದೇವರೇ ಗತಿ ಎಂದು ಕಾಯತ್ತಿದ್ದೆ. ಆದರೆ ಏನೂ ಆಗಲಿಲ್ಲ. 
ನಾಯಿ ರಸ್ತೆಯಿಂದ ೧೦ ಅಡಿ ದೂರದಲ್ಲಿ ಯಾರೋ ಸರಪಳಿ ಹಿಡಿದು ತಡೆದಂತೆ ಹಿಂಗಾಲುಗಳ ಮೇಲೆ ನಿಂತು ಭೀಕರವಾಗಿ ಬೊಗಳತೊಡಗಿತು. ಮುನ್ನುಗಲು ಶತಪ್ರಯತ್ನ ಮಾಡುತ್ತಿದೆ .ಆದರೆ ಕಾಣದ ಕೈ ಅದನ್ನು ತಡೆದಿದೆ. ಅದು ಏನೇ ಎಗರಾಡಿದರೂ ಒಂದು ಇಂಚು ಮುಂದೆ ಬರಲಾಗಲಿಲ್ಲ. ನಾನು ನಿರಾಳವಾಗಿ ಮುನ್ನೆಡೆದೆ. ಅದೂ ಹಿಂಬಾಲಿಸಿತು. ಆದರೆ ಅಂತರ ಮಾತ್ರ ಅಷ್ಟೆ ಇತ್ತು. ಯಾರೋ ಗೆರೆ ಎಳೆದಂತೆ ಇತ್ತು. ಅದನ್ನು ದಾಟಲಾಗದೆ ಅದು ಪಡಿಪಾಟಲು ಪಡುತ್ತಿದೆ. ಇದು ಲಕ್ಷ್ಮಣ ರೇಖೆಗಿಂತಲೂ ಬಲವಾದದ್ದು ಎನಿಸಿತು. ಬದುಕಿದೆಯಾ ಬಡಜೀವವೆ ಎಂದುಕೊಂಡು ಮನೆಯ ಹಾದಿ ಹಿಡಿದೆ. ಬರಸಿಡಿಲಿನಂತೆ ಎರಗಿದ್ದು ಬರಿ ಗುಡುಗಿನಂತೆ ಗಡಿಬಿಡಿ ಮಾಡಿಹೋಯಿತು. ಮನೆಗೆ ಮರಳಿದ ಮೇಲೆ ರಾತ್ರಿ, ನನ್ನ ಮಗಳಿಗೆ ಇದೇನಮ್ಮ ನಿಮ್ಮ ದೇಶದಲ್ಲೂ ಮಾಟ ಮಂತ್ರ ಇದೆಯಾ. ಅಂತಹ ಭೀಕರ ಪ್ರಾಣಿ ಹಾರುವಷ್ಟು ಹತ್ತಿರ ಬಂದರೂ ನನ್ನನ್ನು ಮುಟ್ಟಲಾಗದೆ ಎಗರಾಡುತ್ತಿತ್ತಲ್ಲ ಏನು ವಿಚಿತ್ರ ಎಂದೆ.
ಆಗ ಅವಳು ಹೇಳಿದಳು ಮಾಟ ಮಂತ್ರ ಯಾವುದು ಇಲ್ಲ. ಇದು ತಂತ್ರಜ್ಙಾನದ ಕೊಡುಗೆ. ಸಾಕು ಪ್ರಾಣಿಗಳನ್ನು ಕಂಡಹಾಗೆ ಬಿಡಲಾಗುವುದಿಲ್ಲ. ಏನಾದರು ಅಪಾಯ ಮಾಡಿದರೆ ಕಂಡಾಬಟ್ಟೆ ದಂಡ ತೆರಬೇಕಾಗುತ್ತದೆ. ಅದಕ್ಕೆ ಎಲೆಕ್ಟ್ರಾನಿಕ್ ಬೇಲಿ ಅಳವಡಿಸಿರುತ್ತಾರೆ. ಅವುಗಳ ಕೊರಳಿಗೆ ಒಂದು ವಿಶೇಷ ಕಾಲರ್ ಕಟ್ಟಿರುವರು. ನಿಗದಿತ ತಾಣಕ್ಕೆ ಬಂದೊಡನೆ ಹಗುರವಾದ ವಿದ್ಯುತ್ ಷಾಕ್ ತಗುಲಿ ಅವು ಹಿಂದೆ ಹೋಗುವಂತೆ ಮಾಡುತ್ತದೆ ಎಂದಳು. ಬಯಲು ಪ್ರದೇಶದಲ್ಲಿ ಬೇಲಿಯಂತೆ ಇದ್ದರೆ, ಮನೆಯೊಳಗೆ ಪ್ರಾಣಿಗಳಿಗೆ ಎಲ್ಲೆಲ್ಲಿ ಪ್ರವೇಶ ನಿಷಿದ್ಧವೋ ಅಲ್ಲಿ ಎಲೆಕ್ಟ್ರಾನಿಕ್ ತಡೆ ನಿರ್ಮಿಸಿರುವರು. ಆ ಪ್ರದೇಶದಲ್ಲಿ ಅವು ಬಂದರೆ ಷಾಕ್ ಹೊಡೆಯವುದು. ಅಲ್ಲಿಗೆ ಅವು ಬರುವುದೆ ಇಲ್ಲ, ಎಂದು ವಿವರಣೆ ನೀಡಿದಳು. ನಾವು ಆ ದಿನ ಸಮಾರಂಭಕ್ಕೆ ಹೋಗಿದ್ದ ಮನೆಯ ಮುದ್ದಾದ ನಾಯಿಯ ನಾಗರಿಕ ನಡೆಯ ಹಿಂದಿನ ಗುಟ್ಟು ಗೊತ್ತಾಯಿತು. ಅದನ್ನು ನಿಗದಿತ ಜಾಗದಲ್ಲಿ ಬರದಂತೆ ಎಲೆಕ್ತ್ರಾನಿಕ್ ತಡೆಹಾಕಿದ್ದರು. ನನಗೆ ಎಲೆಕ್ಟಿಕ್ ಬೇಲಿಯ ಬಗ್ಗೆ ಗೊತ್ತಿತ್ತು. ತಮ್ಮ ಬೆಳೆಯನ್ನು ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಕಬ್ಬಿಣದ ತಂತಿಬೇಲಿ ಎಳೆದು ಅನಧಿಕೃತವಾಗಿ ವಿದ್ಯುತ್ ಹರಿಸುತ್ತಿದ್ದರು. ಒಮ್ಮೊಮ್ಮೆ ಅರಿಯದ ಜನ ಅಪಾಯಕ್ಕೆ ಬಲಿಯಾಗಿದ್ದುದು ಇದೆ. ಚಿಕ್ಕ ಪುಟ್ಟ ಪ್ರಾಣಿಗಳು ಬಿಡಿ, ಒಂದೊಂದು ಸಲ ಆನೆ ಸಹ ಪ್ರಾಣ ತೆತ್ತಿದ್ದೂ ಓದಿದ್ದೆ. ಆದರೆ ಈ ಅದೃಶ್ಯ ಬೇಲಿ ನನಗೆ ಗೊತ್ತೇ ಇರಲಿಲ್ಲ. ಅಂತೂ ಕಣ್ಣಿಗೆ ಕಾಣಿಸದಿದ್ದರೂ ಅದು ನನ್ನನ್ನು ಕಾಪಾಡಿತು.
ನ್ಯೂಯಾರ್ಕಿನಲ್ಲಿ  ನಾನು ಯುಎನ್ ಒ ನೋಡಲು ಹೋದಾಗ ಹಾದಿಯಲ್ಲಿ ಒಂದು ವೀಶೇಷ ನೋಡಿದೆ. ಅದುವೆ ಶ್ವಾನೋದ್ಯಾನ. ಹೆಸರು ನೋಡಿ ಮಾನವನಾದ ನಾನು ಒಳಗೆ ಹೋಗಬೇಕೋ, ಬೇಡವೋ ಎಂದು ಒಂದು ಕ್ಷಣ ಗಲಿಬಿಲಿಗೆ ಒಳಗಾದೆ. ಆದರೆ ಅಲ್ಲಿ ನಾಯಿಗಳ ಜತೆ ಅವನ್ನು ಹಿಡಿದ ಜನರೂ ಇದ್ದರು. ಅದು ಎಲ್ಲ ಉದ್ಯಾನವನದಂತೆ ಇದ್ದಿತು. ಆದರೆ ಅದರಲ್ಲಿ ಒಂದು ವಿಶೇಷ ರಚನೆ ಇತ್ತು. ಆ ಒಂದು ಭಾಗದಲ್ಲಿ ಭದ್ರವಾದ ಕಬ್ಬಿಣದ ಜಾಲರಿಯಿಂದ ಆವೃತವಾದ ವಿಶಾಲವಾದ ಬಯಲು ಇತ್ತು. ಅಲ್ಲಿ ಜನರಿಗೆ ಪ್ರವೇಶ ಇಲ್ಲ. ಶ್ವಾನಗಳನ್ನು ಸರಪಳಿ ಕಳಚಿ ಒಳಗೆ ಬಿಡಬಹುದಿತ್ತು. ಅಲ್ಲಿ ಅವು ಮನಬಂದಂತೆ ಹಾರಿ ನೆಗೆದು ಓಡಿ ಆಡಬಹುದಾಗಿತ್ತು. ಅವುಗಳ ಮಾಲಿಕರು ಜಾಲರಿಯ ಹೊರಗೆ ನಿಂತು ಸೂಚನೆ ನೀಡಿ ನಿಯಂತ್ರಿಸಬಹುದಿತ್ತು. ಸದಾ ಸರಪಳಿಯಲ್ಲಿ ಸಿಕ್ಕು ಸುತ್ತುತ್ತಿದ್ದ ಪ್ರಾಣಿಗೆ ಬಿಡುಗಡೆ ನೀಡಿ ಬಯಲಿಗೆ ಬಿಡಲು ಅವಕಾಶ ಈ ವಿಶೇಷ ಉದ್ಯಾನವನ.
ಅಮೇರಿಕಾದ ಸಮಾಜದಲ್ಲಿ ಶ್ವಾನಗಳಿಗೆ ಬಹು ಆದರಣೀಯ ಸ್ಥಾನವಿದೆ. ಅದಕ್ಕೆ ಕಾರಣ ಅವುಗಳ ನಿಷ್ಠೆ, ನಿರ್ವ್ಯಾಜ್ಯ ಪ್ರೀತಿ. ಎಲ್ಲ ಸಾಕು ಪ್ರಾಣಿಗಳಲ್ಲಿ ಮಾನವನ ಅತ್ಯುತ್ತಮ ಸಂಗಾತಿ ಅದು. ಬೇಟೆಯಾಡುವಲ್ಲಿ ಅದರ ಕೊಡುಗೆ ಹಿರಿದು. ಮನೆಯ ಮತ್ತು ಮಾಲಿಕನ ರಕ್ಷಣೆಗೆ ಅದು ಸದಾ ಬದ್ಧ. ಅಲ್ಲಿನ ಮುಕ್ತ ಸಮಾಜದಲ್ಲಿ ಒಂಟಿತನ ಕಾಡುವುದು ಸಹಜ. ಅದು ಏಕಾಂಗಿ ಮಹಿಳೆಯರಿಗೆ ಉತ್ತಮ ಜತೆಗಾರ. ನಂಬುಗೆಯ ಬಂಟ,ರಕ್ಷಕ, ಭಾವನಾತ್ಮಕ ತೃಪ್ತಿ ನೀಡುವ ಸಂಗಾತಿ. ಗಂಡನಿಗಿಂತ ನಾಯಿಯೇ ಉತ್ತಮ, ಹೇಳಿದ್ದನ್ನೆಲ್ಲ ಕೇಳಿಸಿಕೊಳ್ಳುತ್ತದೆ ಎನ್ನುವ ಮಹಿಳೆಯರು ಇದ್ದಾರೆ.
ಯುದ್ಧ ಮತ್ತು ಶಾಂತಿ ಸಮಯದಲ್ಲೂ ಅದು ಉಪಯುಕ್ತ. ಸಿನೆಮಾ ನಟಿಯರಿಗಂತೂ ಅದು ಬಹಿರ್ ಪ್ರಾಣ. ಅವರು ಇವರು ಏಕೆ ಅಮೇರಿಕಾದ ಅಧ್ಯಕ್ಷರಿಗೂ ಅತಿ ಪ್ರೀತಿಯ ಸಂಗಾತಿ. ಅಮೇರಿಕಾ ಮೊದಲ ಅಧ್ಯಕ್ಷರಿಂದ ಹಿಡಿದು ಇಂದಿನವರೆಗೆ ಎಲ್ಲರೂ ಶ್ವಾನವನ್ನು ಶ್ವೇತಭವನದಲ್ಲಿ ಜತೆಗೆ ಇಟ್ಟು ಕೊಂಡವರೆ. ರಾಷ್ಟ್ರಪಿತ ಜಾರ್ಜ್ ವಾಷಿಂಗ್ಟನ್ ಜತೆ ಶ್ವೇತಭವನದಲ್ಲಿ ಹತ್ತು ನಾಯಿಗಳಿದ್ದವು. ತನ್ನೆಲ್ಲ ಕೆಲಸ ಕಾರ್ಯಗಳ ನಡುವೆ ಅವುಗಳ ಜತೆ ತುಸು ಸಮಯ ಕಳೆದರೆ ಅವರ ಮನಸ್ಸಿಗೆ ನೆಮ್ಮದಿ.
ಈ ವರೆಗಿನ ೩೪ ಜನ ಅಧ್ಯಕ್ಷರಲ್ಲಿ ಶ್ವಾನವನ್ನು ಹೊಂದಿರದೆ ಇದ್ದವರೆಂದರೆ ವಿಶ್ವಸಂಸ್ಥೆಗೂ ಮೊದಲು ಜಗತ್ತಿನ ಶಾಂತಿಗಾಗಿ ಲೀಗ್ ಆಫ್ ನೇಷನ್ಸ್ ಸ್ಥಾಪಿಸಿದ ವುಡ್ರೋ ವಿಲ್ಸನ್. ಆದರೆ ಶ್ವೇತಭವನದಲ್ಲಿ ಅವರೆ ಮೊದಲಬಾರಿಗೆ ನಾಯಿ ಒಂದಕ್ಕೆ ಸನ್ಮಾನ ಮಾಡಿದರು. ಸ್ಟಫಿ ಎಂಬ ನಾಯಿಯು ಪ್ರಥಮ ಮಹಾಯುದ್ಧದಲ್ಲಿ ತೋರಿದ ಅಪ್ರತಿಮ ಸಾಹಸಕ್ಕಾಗಿ ಅದನ್ನು ಗೌರವಿಸಿ ಹಸ್ತಲಾಘವ ನೀಡಲಾಯಿತು.
ಅಮೇರಿಕಾದಲ್ಲಿ ವರ್ಣವಿಭೇದ ನೀತಿಗೆ ಮಂಗಳ ಹಾಡಿದ  ಅಬ್ರಾಹಂ ಲಿಂಕನ್ ಜತೆ ಎರಡು ನಾಯಿಗಳು ಇದ್ದವು. ಫಿಡೋ ಎಂಬುದು ಅವರ ಅತಿ ಮುದ್ದಿನ ನಾಯಿ. ಅದು ಸಹ ತನ್ನ ಯಜಮಾನನಂತೆ ದುರಂತಮಯ ಅಂತ್ಯ ಕಂಡಿತು. ಅದನ್ನು ಕುಡುಕನೊಬ್ಬ ಚೂರಿಯಿಂದ ಇರಿದು ಕೊಂದ.
ರಾಷ್ಟ್ರೀಯ, ಅಂತಾರಾಷ್ತ್ರೀಯ ತೀರ್ಮಾನಗಳಿಗೆ ಸಾಕ್ಷೀಭೂತವಾದ ನಾಯಿಯೂ ಇದೆ. ವಾರೆನ್ ಹಾರ್ಡಿಂಜರು ೧೯೨೧ರಲ್ಲಿ ಅಮೇರಿಕಾದ ಅಧ್ಯಕ್ಷರಾಗಿದ್ದರು. ಅವರು ತಮ್ಮ ಪ್ರಾಣಿ ಮಿತ್ರನನ್ನು ಅರೆಗಳಿಗೆ ಅಗಲಿ ಇರುತ್ತಿರಲಿಲ್ಲ, ಅದರ ಹೆಸರು ಲೇಡಿ ಬಾಯ್.. ಅವರ ಮಂತ್ರಿ ಮಂಡಳದ ಸಭೆಯಲ್ಲೂ ಅದು ಇರಬೇಕಿತ್ತು. ಅದಕ್ಕಾಗಿ ವಿಶೇಷ ಕುರ್ಚಿಯ ವ್ಯವಸ್ಥೆ ಮಾಡಲಾಗಿತ್ತು.
ಪ್ರಥಮ ಮಹಾಯುದ್ಧದ ಸಮಯದಲ್ಲಿ ಯುದ್ಧ ನಿಧಿಯ ಸಂಗ್ರಹಣೆಗೆ ಚಾಲನೆ ನೀಡಿದ ಕೀರ್ತಿ ನಾಯಿಯದು. ಅಂದಿನ ಅಧ್ಯಕ್ಷರಾದ ರೂಸ್ ವೆಲ್ಟರ ಮುದ್ದಿನ ನಾಯಿ ಡೆಲ್ಲಾ. ಅದು ಯುದ್ಧ ನಿಧಿಗೆ ಮೊದಲ ಕಾಣಿಕೆಯಾಗಿ ಒಂದು ಡಾಲರ್ ನೀಡಿತು. ಅದರಿಂದ ದೇಶಕ್ಕೆ ದೇಶವೇ ಪುಳಕಗೊಂಡಿತು. ಅದರಿಂದ ಸ್ಪೂರ್ತಿಗೊಂಡ ಜನ ಒಂದಾಗಿ ನಿಂತು ಧಾರಾಳವಾಗಿ ಕೊಡುಗೆ ನೀಡಿ ನಿಧಿ ಸಂಗ್ರಹಣೆಗೆ ನೆರವಾದರು. ಅದು ಅಮೇರಿಕಾದಲ್ಲಿ ಪ್ರಥಮ ಬಾರಿಗೆ ತೆಗೆದ 'ಶ್ವೇತ ಭವನದಲ್ಲಿ ಶ್ವಾನದ ಒಂದು ದಿನ' ಎಂಬ ಸಾಕ್ಷ್ಯಚಿತ್ರದ ಕೇಂದ್ರಬಿಂದುವಾಗಿತ್ತು.
ಮೊದಲ ಮಹಾಯುದ್ಧದ ಕ್ಲಿಷ್ಟ ಸಮಯದಲ್ಲಿ ಅಮೇರಿಕಾವನ್ನು ಮುನ್ನೆಡೆಸಿದ ಹ್ಯಾರಿ ಟ್ರೂಮನರಿಗೆ ನಾಯಿಗಳಲ್ಲಿ ಅಪಾರ ವಿಶ್ವಾಸ. ವಾಷಿಂಗಟನ್ನಿನಲ್ಲಿ ನಿನಗೆ ನಿಜವಾದ ಗೆಳೆಯ ಬೇಕೆಂದರೆ ಒಂದು ನಾಯಿಯನ್ನು ಸಾಕು ಎನ್ನುತ್ತಿದ್ದರು. ಮಕ್ಕಳು ಮತ್ತು ನಾಯಿಗಳು ರಾಷ್ಟ್ರಕ್ಕೆ ವಾಲ್ ಸ್ಟ್ರೀಟ್ ಮತ್ತು ರೈಲು ರೋಡ್ ಗಳಷ್ಟೆ ಪ್ರಾಮುಖ್ಯ ಎಂದು ಭಾವಿಸಿದ್ದರು.
ಜಾನ್ ಎಫ್. ಕೆನಡಿ ಅಧ್ಯಕ್ಷಪದ ಗ್ರಹಣ ಮಾಡಿ ಶ್ವೇತಭವನಕ್ಕೆ ಮೊದಲ ಬಾರಿಗೆ ಕಾಲಿಟ್ಟಾಗ ಅವರ ಮುದ್ದಿನ ನಾಯಿ ಸಹ ಸ್ವಾಗತಿಸಿತು. ಅವರಲ್ಲಿ ಗಗನಯಾತ್ರೆ ಮಾಡಿದ ಶ್ವಾನ ಸ್ಟ್ರೆಟಾದ ವಂಶದ ಕುಡಿ ಪುಷಿಂಕಾ ಅವರಲ್ಲಿ ಇದ್ದಿತು. ಅದನ್ನು ರಷ್ಯಾದ ಅಧ್ಯಕ್ಷ ಕೃಶ್ನೇವ್ ಕಾಣಿಕೆಯಾಗಿ ನೀಡಿದ್ದರು.
ಅಧ್ಯಕ್ಷ ಲಿಂಡನ್ ಜಾನಸನ್ ರಿಗೆ ದಿನವೂ ಅವರ ಮುದ್ದಿನ ಮರಿಯು, ಅವರು ಶ್ವೇತಭವನದಿಂದ ಹೊರಡುವಾಗ, ಹಿಂದಿರುಗಿದಾಗ ಎದುರಿಗೆ ಇರಲೇಬೇಕಿತ್ತು.
ಈಗಿನ ಅಧ್ಯಕ್ಷ ಬರಾಕ್ ಒಬಾಮರು ಅಧಿಕಾರ ಸ್ವೀಕರಿಸುತ್ತಿದ್ದಂತೆ ಅವರಿಗೆ, ಅವರ ಕುಮಾರಿಯರಿಗೆ ಸರಿ ಹೊಂದುವ ಶ್ವಾನಕ್ಕಾಗಿ ದೊಡ್ಡ ಹುಡುಕಾಟವೇ ನಡೆಯಿತು. ಎಲ್ಲ ಪತ್ರಿಕೆಗಳಲ್ಲಿ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಅದೇ ಸುದ್ದಿ ರಾರಾಜಿಸಿತು. ಸಾಕಷ್ಟು ಸಂಶೋಧನೆ ನಡೆಸಿ, ನಾಯಿಗಳ ಜಾತಕ ಜಾಲಾಡಿಸಿ ಕೊನೆಗೆ 'ಬೋ' ಎಂಬುದನ್ನು ಆಯ್ಕೆ ಮಾಡಲಾಯಿತು.
ಸಿನೆಮಾ ನಟಿಯರ, ಸಿರಿವಂತರ ಶ್ವಾನಪ್ರೇಮ ಬಹುರಂಜನೀಯ. ಅನೇಕರು ತಮ್ಮ ಪ್ರೀತಿಯ ನಾಯಿಗಾಗಿ ಏನೆಲ್ಲ ಮಾಡಿದ್ದಾರೆ ಗೊತ್ತೆ...  ಎಲ್ಲಾ ಎಂಬ ಒಬ್ಬ ಅಮೇರಿಕಾದ ಶ್ರೀಮಂತ ಮಹಿಳೆ ೭೫ ಮಿಲಿಯನ್ ಡಾಲರ್ ಬೆಲೆಯ ಎಲ್ಲ ಆಸ್ತಿಯನ್ನು ತನ್ನ ನಾಯಿ ಟೋಬೊ ಹೆಸರಿಗೆ ಬರೆದಳು. ಅದು ಆ ಹಣ ಏನು ಮಾಡಿತು ಎಂಬುದು ಬೇರೆ ವಿಷಯ. ಆದರೆ ಜಗತ್ತಿನ ಅತ್ಯಂತ ಶ್ರೀಮಂತ ನಾಯಿ ಎಂದು ವಿಶ್ವ ವಿಖ್ಯಾತವಾಯಿತು. ಶ್ವಾನಗಳು ಶಾಂತಿ ಮತ್ತು ಸಮರದ ಸಮಯದಲ್ಲೂ ಅಪಾರ ಸೇವೆ ಸಲ್ಲಿಸಿವೆ. ಅವು ತಮ್ಮ ವಿಶೇಷ ಗ್ರಹಣ ಶಕ್ತಿಯಿಂದಾಗಿ ಅಪರಾಧ ಪತ್ತೆಗೆ ಸಹಾಯ ಮಾಡುತ್ತವೆ. ಉಗ್ರವಾದಿಗಳ ಅಟ್ಟಹಾಸದ ಈ ದಿನಗಳಲ್ಲಿ ಬಾಂಬು, ಸ್ಪೋಟಕಗಳ ಪತ್ತೆಯಲ್ಲಿ ಅವುಗಳ ಪಾತ್ರ ಹಿರಿದು. ಮಾದಕ ವಸ್ತುಗಳ ಕಳ್ಳ ಸಾಗಣಿಕೆ ಪತ್ತೆಗೆ ಅವುಗಳ ನೆರವು ಬೇಕೆ ಬೇಕು. ವಿಶ್ವ ವಾಣಿಜ್ಯ ಕೇಂದ್ರವನ್ನು ಭಯೋತ್ಪಾದಕರು ೨೦೦೧ರ ೯/೧೧ ನಲ್ಲಿ ಉಡಾಯಿಸಿದಾಗ ೩೦೦ ಪೋಲೀಸ್ ನಾಯಿಗಳನ್ನು ಅವಶೇಷಗಳ ಅಡಿಯಿಂದ ಜನರನ್ನು ಉಳಿಸಲು ಬಳಸಲಾಯಿತು. ಆ ಕೆಲಸದಲ್ಲಿ ಪ್ರಾಣ ತೆತ್ತ  ಶ್ವಾನದ ಸ್ಮಾರಕ ನಿರ್ಮಿಸಿದೆ.
ಅದೇ ಸಂದರ್ಭದಲ್ಲಿ ರೆವಾ ಮತ್ತು ಸಾಲ್ಟಿ ಎಂಬ ಎರಡು ನಾಯಿಗಳು ಕುರುಡನಾದ ತಮ್ಮ ಯಜಮಾನನ್ನು ೭೧ನೇ ಮಹಡಿಯಿಂದ ಸುರಕ್ಷಿತವಾಗಿ ಕೆಳಗೆ ಕರೆದುತಂದು ಪ್ರಾಣ ಕಾಪಾಡಿದವು. ಆ ಬೆಂಕಿ, ಹೊಗೆ, ಅಪಾಯದ ನಡುವೆಯೂ ಅವುಗಳು ತೋರಿದ ನಿಷ್ಠೆ ಅವಿಸ್ಮರಣೀಯ.
ಖಗೋಳ ವಿಜ್ಞಾನದ ಮುನ್ನೆಡೆಯಲ್ಲಿ ನಾಯಿಯ ಕೊಡುಗೆ ಅಪಾರ. ಲೋಕ ವಿಖ್ಯಾತವಾದ ಹಿಜ್ ಮಾಸ್ಟರ್ಸ್ ವಾಯ್ಸ್ ಗ್ರಾಮಫೋನ್ ಕಂಪೆನಿಯ ಲೋಗೋದಲ್ಲಿರುವ ನಾಯಿ ನಿಪ್ಪರ್ ಅಜರಾಮರವಾಗಿದೆ.
ವಿಶೇಷವಾಗಿ ಚಳಿಗಾಲದಲ್ಲಿ ಹಿಮಾವೃತವಾದ ಬೆಟ್ಟಗುಡ್ಡಗಳಲ್ಲಿ ಹಾದಿ ತಪ್ಪಿಸಿಕೊಂಡವರನ್ನು ಸಂರಕ್ಷಿಸುವಲ್ಲಿ ಶ್ವಾನಗಳು ಬಹು ಉಪಯುಕ್ತ.
ಮಾನವ ಕುಲಂ ಒಂದೆ ವಲಂ, ಎಂದಿರುವುದು ಶ್ವಾನಗಳ ವಿಷಯದಲ್ಲಿ ಅನ್ವಯಿಸದು ನಾಯಿಯ ತಳಿಗಳು ನೂರಾರು. ಅವುಗಳ ವೈವಿಧ್ಯವೂ ಬಹಳ. ಅತಿ ಚಿಕ್ಕ ನಾಯಿಯ ಉದ್ದ ಕೇವಲ ೬ ಅಂಗುಲ. ಫ್ಲಾರಿಡಾದಲ್ಲಿರುವ ಅದರ ಹೆಸರು 'ಹೆವೆನ್ ಸೆಂಟ್ ಬ್ರಾಂಡಿ' ಅದನ್ನು ಅಂಗೈ ಮೇಲೆ ನಿಲ್ಲಿಸಿಕೊಳ್ಳಬಹುದು.
ಅತಿ ದೊಡ್ಡ ನಾಯಿಯರ ಹೆಸರು ಹರ್ಕ್ಯುಲೆಸ್. ಅದರ ತೂಕ ೨೮೨ ಪೌಂಡುಗಳು. ಅದರ ವಾಸ ಮೆಸುಚೆಸಟ್ಸ್ ರಾಜ್ಯದಲ್ಲಿ. ಆ ದೈತ್ಯ ದೇಹಿಯ ಪಾದಗಳೇ ಸಾಫ್ಟ್ ಬಾಲಿನ ಗಾತ್ರ ಹೊಂದಿವೆ. ನೋಡಲು ಭೀಕರ. ಆದರೆ ಅದು ಅತಿ ಸಾಧು. ಮಗುವಿನೊಂದಿಗೆ ಮಗುವಾಗಿರುವುದು. ಅದಕ್ಕಾಗಿ ಮಕ್ಕಳ ಹಬ್ಬದಂದು. ವಿಶೇಷ ಅತಿಥಿಯಾಗಿ ಅದಕ್ಕೆ ಬಹು ಬೇಡಿಕೆ. ಶುಲ್ಕ ನೀಡಿದರೆ ಅದರ ಜತೆ ಛಾಯಾಚಿತ್ರತೆಗಿಸಿಕೊಳ್ಳಬಹುದು. ಅದಕ್ಕೆ ಮಕ್ಕಳು ಸಾಲುಗಟ್ಟಿ ನಿಲ್ಲುತ್ತಾರೆ. ಧೈರ್ಯಶಾಲಿ ಯುವಕ ಯುವತಿಯರು ಮುಖಕ್ಕೆ ಪೀನಟ್ ಬಟರ್ ಸವರಿಕೊಂಡರೆ ಅದು ಬಾಯಿ ಚಪ್ಪರಿಸುತ್ತಾ ನೆಕ್ಕುತ್ತದೆ. ಹೀಗೆ ವಿಶ್ವದಾಖಲೆ ವೀರನಿಗೆ ಆದಾಯದ ಜತೆ ಜತೆಗೆ ಪ್ರಚಾರ  ದೊರಕುವುದು.
ಶ್ವಾನಗಳಲ್ಲಿ ಅನೇಕ ತಳಿಗಳಿವೆ. ಫ್ರೆಂಚ್ ಮ್ಯಾಸ್ಟಿಫ್ ಗೆ ಅಪಾರ ಬೇಡಿಕೆ. ೭೫೦ರಿಂದ ೧೦೦೦ ಡಾಲರ್ ವರೆಗೆ ಅದರ ಬೆಲೆ.
ಅಮೇರಿಕಾದ ಒಂದೊಂದು ರಾಜ್ಯದಲ್ಲಿ ಒಂದೊಂದು ತಳಿಯ ನಾಯಿಗಳು ಬೇಡಿಕೆ ಪಡೆದಿವೆ. ಮುದ್ದು, ಮುಚ್ಚಟೆಗಾದರೆ ಆಟಿಕೆ ನಾಯಿಗಳಿಗೆ ಬೇಡಿಕೆ. ಪೂಡಲ್, ಚಿಹೋಹ ಆಕಾರದಲ್ಲಿ ಚಿಕ್ಕವು. ಖರ್ಚು ಕಡಿಮೆ. ಮಹಿಳೆಯರು, ನಗರವಾಸಿಗಳು ಅವನ್ನು ಸಾಕುವರು. ಲ್ಯಾಬ್ರಡಾರ್, ಬುಲ್ ಡಾಗ್, ಜರ್ಮನ್ ಷೆಪರ್ಡ್, ಯಾರ್ಕಷೈರ್ ರಿಟ್ರೈವರ್ ರಕ್ಷಣೆಗೆ, ಕಾವಲಿಗೆ, ಸಾಂಗತ್ಯಕ್ಕೆ ಅನುಕೂಲ.
ಬೆಕ್ಕಿಗೆ ಜ್ವರ, ನಾಯಿಗೆ ನೆಗಡಿ ಬಂದಿದೆ ಎನ್ನುವುದು ನಂಬುವ ಮಾತಲ್ಲ ಎಂದು ನಮ್ಮಲ್ಲಿ ವಾಡಿಕೆಯ ಮಾತು. ಆದರೆ ಅಲ್ಲಿ ಮುದ್ದು ಪ್ರಾಣಿಗಳ ಆರೋಗ್ಯವೂ ಅತಿ ಕಾಳಜಿಯ ವಿಷಯ. ಶ್ವಾನಗಳ ಆರೋಗ್ಯ ರಕ್ಷಣೆಗೆ ಪರಿಣಿತ ವೈದ್ಯಕೀಯ ಸೌಲಭ್ಯ ದೊರಕುವುದು. ಮರಿಗಳಿಗೆ ನಿರೋಧಕ ಚುಚ್ಚು ಮದ್ದು, ಸ್ಪ್ರೇಗಳು ಹಾಗು ಗಾಯಗಳಿಗೆ ಅಗತ್ಯ ಔಷಧಿಗಳು, ಪ್ರೌಢ ಶ್ವಾನಕ್ಕೆ ದಂತ ಚಿಕಿತ್ಸೆ, ವಾಂತಿ ವಿರೇಚನ, ಶ್ವಾಶ ಸಂಬಂಧಿ ಸಮಸ್ಯೆಗೆ, ಮುದಿಯಾದಾಗ ಬರುವ ಕಿಡ್ನಿ, ಥೈರಾಯಿಡ್, ಮಧುಮೇಹ, ಕ್ಯಾನ್ಸರ್ ಗಳಿಗೆ ಒಳರೋಗಿಯಾಗಿ ಚಿಕಿತ್ಸೆ ಪಡೆಯಬಹುದು. ಎಲ್ಲದಕ್ಕೂ ವಿಮಾ ಸೌಲಭ್ಯವಿದೆ.
ನಾಯಿಗಳಿಗೆ ವಿಶೇಷ ತರಬೇತಿ ನೀಡುವ ಸಂಸ್ಥೆಗಳಿವೆ. ಅವುಗಳು ಯರ್ರಾಬಿರ್ರಿಯಾಗಿ ವರ್ತಿಸಿದರೆ ಅವುಗಳಿಗೆ ಬಿಹೇವಿಯರಲ್ ತೆರಪಿ ಕೊಡಿಸಬೇಕು. ಅವುಗಳ ಸ್ವಾಸ್ಥ್ಯ ನೋಡಿಕೊಳ್ಳಲು ಕಮ್ಯುನಿಟಿ ಕಮಿಟಿಗಳಿವೆ. ಅವು ಪ್ರಾಣಿಗಳು ಕ್ರೌರ್ಯಕ್ಕೆ ಗುರಿಯಾಗದಂತೆ ಸೂಕ್ತ ಎಚ್ಚರಿಕೆ ವಹಿಸುತ್ತವೆ.
ಅಲ್ಲಿ ಬೀದಿಯಲ್ಲಿ ನಾಯಿ ಇರಲು ಸಾಧ್ಯವೇ ಇಲ್ಲ. ಏಕೆಂದರೆ ತಿನ್ನಲು ಬೀದಿಯಲ್ಲಿ ಏನೂ ಸಿಕ್ಕುವುದಿಲ್ಲ. ಬಹಳ ರಾಜ್ಯಗಳಲ್ಲಿ ನಾಯಿ ಸಾಕ ಬೇಕೆಂದರೆ ನೋಂದಾವಣೆ ಕಡ್ಡಾಯ. ಅಕಸ್ಮಾತ್ ದೂರದ ಜಾಗಕ್ಕೆ ವಲಸೆ ಹೋದರೆ ಸಾಕಲಾರದ ಅನಿವಾರ್ಯ ಪರಿಸ್ಥಿತಿ ಬಂದರೆ ಮಾಹಿತಿ ನೀಡಿದರೆ ಅವನ್ನು ಸರಕಾರಿ ಆಶ್ರಯಕ್ಕೆ ತೆಗೆದುಕೊಳ್ಳುವರು ಇಷ್ಟೆಲ್ಲಾ ಕ್ರಮ ತೆಗೆದುಕೊಂಡರೂ ಪ್ರತಿ ವರ್ಷ ೪ ಮಿಲಿಯನ್ ಮುದ್ದು ಪ್ರಾಣಿಗಳು ಆಶ್ರಯ ಕಳೆದುಕೊಳ್ಳುತ್ತವೆ. ಅವುಗಳಲ್ಲಿ ಹೆಚ್ಚಿನವು ಶ್ವಾನಗಳು. ಅವುಗಳಿಗಾಗಿ ರಾಷ್ಟ್ರದಲ್ಲಿ ೧೦೦೦ ಆಶ್ರಯ ತಾಣಗಳಿವೆ. ಅಲ್ಲಿ ಅವುಗಳ ಪೋಷಣೆ ಮಾಡಲಾಗುವದು. ಗುಣವಾಗದ ರೋಗ. ವಾಸಿಯಾಗದ ಗಾಯದಿಂದ ನರಳುವ, ಸಾಮಾನ್ಯ ಜೀವನ ನಡೆಸಲಾಗದವಕ್ಕೆ ಶಾಶ್ವತ ಶಾಂತಿ ನೀಡಲಾಗುವುದು.
ಅಮೇರಿಕಾದಲ್ಲಿ ಶ್ವಾನಗಳು ಗೌರವಾನ್ವಿತ ನಾಗರಿಕರಂತೆ ಬದುಕು ಸಾಗಿಸುವವು. ಆಗ ನನಗೆ ಅನಿಸಿತು, ಶ್ವಾನ ನಿನ್ನ ಮಹಿಮೆ ಎನಿತು ಬಣ್ಣಿಸಲಿ ನಿನಗೆ ಯಾರು ಸಮಾನ ಎಂದು ಹೇಳಬೇಕೆನಿಸಿತು.
(ಚಿತ್ರಗಳು: ಸಂಗ್ರಹದಿಂದ)

No comments:

Post a Comment