Wednesday, May 21, 2014

ಅಮೇರಿಕಾ ಅನುಭವ-3

ಅಪ್ಪಾಜಿ ಚಾರಣ ಕಥನ-3 : ಕರಡಿ ಮರವ ಏರಿತು   
ಎಚ್. ಶೇಷಗಿರಿರಾವ್

ಮರ ಏರಿದ ಕರಡಿ
ಕಾರಿನ ಕರಗ ನೋಡಿ ಊರಲ್ಲಿ ಸುತ್ತ ಹೊರಟೆವು.  ನಮ್ಮ ಶಿಬಿರ ಇರುವದು ಪುಟಾಣಿ ಊರಲ್ಲಿ.  ಫಿನಿಶಿಯಾ ಎಂಬ ಪುರಾತನ ನಾಗರಿಕತೆಯ ಹೆಸರು. ಇಲ್ಲಿ ಬಂದ ಬಗೆ ನಮಗೆ ತಿಳಿಯದು.  ಬೆಟ್ಟದ ಬುಡದಲ್ಲಿ, ನದಿಯ ತಟದಲ್ಲಿ ಕಾಡಿನ ನಡುವೆ ಇರುವ ಸುಂದರ ಗ್ರಾಮ. ಊರಿಗೆ ಒಂದೇ ಒಂದು ಮುಖ್ಯ ರಸ್ತೆ. ಎರಡು ಬದಿಯಲ್ಲಿ  ಕಟ್ಟಿಗೆ ಮನೆಗಳು. ಪ್ರವಾಸಿಗರ ಅಗತ್ಯ ಪೂರೈಸುವ ಸರ್ವ ವಸ್ತು  ಭಂಡಾರ, ಹೋಟೆಲ್, ಮೋಟೆಲ್, ವಸತಿ ಗೃಹಗಳು. ಊರು ಭಿತ್ತಿ ಚಿತ್ರದಂತೆ ಬಹು ಸುಂದರ. ಇದು ಸದ ಪ್ರವಾಸಿಗರ ನೆಚ್ಚಿನ ತಾಣ. ಬೇಸಗೆಯಲ್ಲಿ ಜನ ಜಾತ್ರೆ. ಚಾರಣಿಗರು, ಬೆಟ್ಟ  ಏರುವವರು, ಸಾಹಸ ಕ್ರೀಡೆಗಾಗಿ ಕಾರಿನಲ್ಲಿ, ಬಸ್ಸಿನಲ್ಲಿ  ಸೈಕಲ್ ಸವಾರರಾಗಿ ವಾರಾಂತ್ಯದಲಿ ಮುಕುರುವರು. ಚಳಿಗಾಲದಲ್ಲೂ ಸಹಾ ತೆರಪಿಲ್ಲ.  ಸ್ಕೀಯಿಂಗ್ ಗೂ ಇದು ಹೇಳಿ ಮಾಡಿಸಿದ ಜಾಗ.  ಆಗ ಮರಗಳೆಲ್ಲ ಬೋಳು ಬೋಳು.  ಅವುಗಳ ನಡುವೆ ಬೆಟ್ಟಗಳ ಇಳಿಜಾರಿನಲ್ಲಿ ಕಾಲಿಗೆ ಹಲಗೆ ಕಟ್ಟಿಕೊಂಡು, ಹಿಮಾವೃತ ಬೆಟ್ಟಗಳನ್ನೂ ದಾಟುವ ಸಾಹಸಿಗರ  ಸ್ವರ್ಗ ಇದು. ಸಕ್ಕರೆ ಬೆಟ್ಟದ ಮೇಲಿನ ಕರಿ ಇರುವೆಗಳ ರೀತಿ ಕಾಣುತ್ತಾರೆ. ವಿಶೇಷ ಉಡುಪು ಧರಿಸಿದ ಆ ಜನ. ಊರಿನ ಪ್ರಮುಖ ಭಾಗದಲ್ಲಿ ದೊಡ್ಡ ಫಲಕ ಅಲ್ಲಿರುವ ಚಾರಣದ ದಾರಿಗಳ ವಿವರ. ಅವುಗಳ ಅಂತರ, ಎತ್ತರ, ಪ್ರಯಾಸದ  ಮಟ್ಟ ಎಂದರೆ, ಸುಲಭ, ಸಾಧಾರಣ, ಕಷ್ಟ, ಕಡು ಕಷ್ಟ, ಇತ್ಯಾದಿ. ಎಷ್ಟು ದೂರ ಕಾರಲ್ಲಿ ಹೋಗಬಹುದು, ಹೆಂಗಸರು, ಮಕ್ಕಳು, ಹಿರಿಯರು ಹೋಗಬಹುದೆ, ಅಲ್ಲಿ ದೊರಕಬಹುದಾದ ಸೌಲಭ್ಯ, ಬೇಕಾಗುವ ಸಮಯ ಅಗತ್ಯವಾದ ಪೂರ್ವ ತಯಾರಿ, ಎಲ್ಲ ನಮೂದಿತವಾಗಿದ್ದವು.
ಈ ಉರಿನಲ್ಲಿ ಎಲ್ಲಿಯೂ ಮೊಬೈಲ್ ಸಂಕೇತ ದೊರಕದು. ಏನಿದ್ದರೂ ಸ್ಥಿರ ದೂರವಾಣಿಯಿಂದ ಮಾತ್ರ ಸಂಪರ್ಕ.  ಹೀಗೆ ನಮಗೆ ಆ ದಿನ ಎಲ್ಲಿ ಹೀಗಿರಬಹುದು ಎನ್ನುವ ಸ್ಥೂಲ ಕಲ್ಪನೆ ಸಿಕ್ಕಿತು. ಆಗಲೇ ಗಂಟೆ ಎಂಟೂವರೆ. ಮಲಗಿದ್ದವರೆಲ್ಲರನ್ನು ಹೊರಡಿಸಬೇಕೆಂದು ಮನೆ ಕಡೆ ಮುಖ ಮಾಡಿದೆವು.
ನಮ್ಮ ಶಿಬಿರದ ಪ್ರವೇಶ ದ್ವಾರದ ಹತ್ತಿರ ಆಗಲೇ ಜನ ಜಂಗುಳಿ. ರಸ್ತೆಯ ಆಚೆ ಬದಿಯಲ್ಲಿ ನಿಂತು ಏನನ್ನೋ ನೋಡುತ್ತಿದ್ದಾರೆ. ಎಲ್ಲರ ದೃಷ್ಟಿ ದೂರದ ಮರದ ಮೇಲೆ. ಸಮವಸ್ತ್ರಧಾರಿ ಮಹಿಳೆಯೋಬ್ಬಳು  ರಸ್ತೆಯಲ್ಲಿನ ವಾಹನಗಳ ಒಡಾಟ ನಿಲ್ಲಿಸಿ, ಜನರನ್ನು ನಿಯಂತ್ರಿಸುತ್ತಿದ್ದಾಳೆ. ಆಗಲೇ ಅಗ್ನಿಶಾಮಕ ವಾಹನದಲ್ಲಿ ಬಂದ ಇಬ್ಬರು ಆ ಮರದ ಸುತ್ತ ನೂರು ಅಡಿಯವರೆಗೆ ಯಾರು ಹೋಗದಂತೆ ಸೂಚನೆ ಇರುವ ಬಣ್ಣದ ತಡೆ ಟೇಪನ್ನು ಕಟ್ಟಿದರು. ಏನಾಗಿದೆ ಎಂಡು ನಮಗೆ ಅಚ್ಚರಿ. ಕೇಳಿದಾಗ ತಿಳಿಯಿತು. ಹಿಂದಿನ ರಾತ್ರಿ ಕರಡಿಗಳ ಗುಂಪು ನಮ್ಮ ಶಿಬಿರಕ್ಕೆ ಭೇಟಿ ನೀಡಿದ್ದವು. ಅವುಗಳ ಪೈಕಿ ಒಂದು ದೊಡ್ಡ ಹೆಣ್ಣು  ಕರಡಿ ಎರಡು ಮರಿಗಳೊಂದಿಗೆ ಮರವೇರಿ ಕುಳಿತಿದೆ. ಕರಡಿ ಬೆಟ್ಟಕೆ ಹೋಯಿತು ಎಂದು ಶಿಶು ಗೀತೆ ಕೇಳಿದ್ದ ನಾವು ಬೆಟ್ಟದಿಂದ ಇಳಿದು, ಬಯಲಲ್ಲಿ ತಿಂಡಿ ತಿಂದು, ಮರವೇರಿ ಕುಳಿತ ಕರಡಿಗಳನ್ನು ನೋಡಿದ್ದು ಇದೆ ಮೊದಲು.
ಚಿತ್ರದುರ್ಗದಲ್ಲಿ ಬೆಟ್ಟ ಇಳಿದು ಬರುವ ಕರಡಿ ದರ್ಶನ ಆಗೀಗ ಆಗುತಿತ್ತು.  ಜನ ಕೊಡುವ ಬ್ರೆಡ್ಡು, ಶೇಂಗಾ ಪಡೆಯಲು ಸಂಜೆಯ ಕಾಲಕ್ಕೆ ಸರಿಯಾಗಿ ಹಾಜರಾಗುತ್ತಿದ್ದ, ಅದಕ್ಕೆ ಜಂಬೂ ಎಂದು ಹೆಸರಿಟ್ಟಿದ್ದರು. ಒಂದು ಬಾರಿಯಂತೂ, ದುರ್ಗದ ಬೆಟ್ಟ ಗುಡ್ಡಗಳಲ್ಲಿ ಮಿನಿ ಚಾರಣಕ್ಕೆ ಹೋಗಿದ್ದ ನಮ್ಮಿಂದಲೂ ಏನೋ ನಿರೀಕ್ಷಿಸಿ, ಬೆನ್ನು ಹತ್ತಿ ಬಂತು.  ತಪ್ಪಿಸಿಕೊಳ್ಳಲು, ಬಂಡೆಯೊಂದನ್ನು ಹತ್ತಿ ಕೂರಬೇಕಾಗಿ ಬಂದಿತ್ತು.  ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ, ಅದು ನಮ್ಮನ್ನು ನಿರೀಕ್ಷಿಸುತ್ತ, ಕೆಳಗೆ ಕಾವಲು ಕೂತಿತ್ತು.ಅಪ್ಪಾಜಿ ದಂಪತಿ
ಆದರೆ, ರಸ್ತೆ ಬದಿಯ ಎತ್ತರದ ಮರವನ್ನು ಮರಿಗಳ ಸಮೇತ ಏರಿ ಕುಳಿತದ್ದನ್ನು ನೋಡಿದ್ದು ಇದೆ ಮೊದಲು. ಅದಕ್ಕೆ ಗಾಬರಿಯಾಗದಿರಲೆಂದು ಸಂಚಾರದ ದಿಕ್ಕನ್ನೇ ಬದಲಿಸಲಾಗಿತ್ತು. ಬೆಟ್ಟದಲ್ಲಿ ಕರಡಿ ಇವೆ ಎಂದು ಕೇಳಿದ್ದ ನಮಗೆ ಅವು ನಮ್ಮ ಭೇಟಿಗೆ ಬಂದಿದ್ದವು ಎಂದಾಗ ಹೊರಗೆ ಸಂತೋಷ ತೋರಿಸಿದರೂ, ಮನದಲ್ಲಿ ಭೀತಿ ಮನೆ ಮಾಡಿತ್ತು. ಆದರೆ ಇದು ಪ್ರವಾಸಿಗಳಿಗೆ ಅನಿರೀಕ್ಷಿತ ಬೋನಸ್. ಎಲ್ಲರೂ ಕೆಮರ ಕ್ಲಿಕ್ ಮಾಡುವವರೆ. ಟೆಲಿ ಲೆನ್ಸ್ ಇದ್ದವರಿಗೆ ಖುಷಿಯೋ ಖುಷಿ. ಇಲ್ಲದವರು ಕ್ಲೋಸ್ ಅಪ್ ಚಿತ್ರಕ್ಕಾಗೇ ಕುಳಿತೂ- ನಿಂತೂ, ಮರವೇರಿ ಸರ್ಕಸ್ಸು ಮಾಡಿ ಉತ್ತಮ ಚಿತ್ರ ಪಡೆವ ಪ್ರಯತ್ನಪಟ್ಟರು.
ನಮ್ಮ ತಂಬೂಗೆ ಬಂದಾಗ ಬೆಳಗಿನಜಾವದ ಜಾಂಬವ ಸೈನ್ಯದ ದಾಂಧಲೆಯ ಪರಿಚಯವಾಯಿತು. ನಡುರಾತ್ರಿ ಮೀರಿ, ಕುಡಿದು ಕುಪ್ಪಳಿಸಿದ ಜನ ತಿಂಡಿ ತೀರ್ಥಗಳನ್ನೂ ಬಯಲಲ್ಲೇ ಮೇಜಿನ ಮೇಲೆ ಬಿಟ್ಟಿದ್ದರು. ಅವು ಕರಡಿ ಪಡೆಯ ಪಾಲಿಗಿದ್ದವು. ತಿಂದದ್ದಕ್ಕಿಂತ ಚೆಲ್ಲಾಪಿಲ್ಲಿಯಾದದ್ದೇ ಹೆಚ್ಚು. ಕರಿ ಕರಡಿ ಶಿಬಿರ ಎಂಬ ಹೆಸರಿಗೆ ನ್ಯಾಯ ಒದಗಿಸಲು ಕರಡಿಗಳೆ ದರ್ಶನ ನೀಡಿದ್ದವು ಅಥವಾ ಪ್ರವಾಸಿಗಳಲ್ಲಿ ರೋಮಾಚಂನ ಹುಟ್ಟಿಸಲು ಮಾಡಿದ ಮಾರ್ಕೆಟಿಂಗ್ ಟ್ರಿಕ್ಕಾ..? ಇರಲಾರದು ಎಂದೇ ಅಂದುಕೊಂಡೆವು.
ಗೆ




No comments:

Post a Comment