Saturday, December 1, 2012

ಅಮೇರಿಕಾ ಅನುಭವ-೩












ಲಂಪಟನಿಗೆ ಲಲನೆಯರೇ  ಕಲಿಸಿದ ಪಾಠ    


ಒಂದು ಹೆಣ್ಣು ಒಂದು ಗಂಡು ಹೇಗೋ ಏನೋ ಸೇರಿ ಕೊಂಡು ಒಂದಾಗಿ  ನಡೆಸುವ ಸಂಸಾರವೆ ಜೀವನದ ಸಾರ ಎನ್ನುವರು. ಆದರೆ ಬಹು ಪತ್ನಿತ್ವ  ಅನಾದಿ ಕಾಲದಲ್ಲಿ ಇತ್ತಲ್ಲ  ಎನ್ನುವ ಜನರೂ ಈಗ ಬದಲಾದ ಕಾಲದಲ್ಲಿ   ’ಹೆಂಡತಿಯೊಬ್ಬಳು ಮನೆಯಲ್ಲಿದ್ದರೆ  ನಾನು ಒಬ್ಬ ಶಿಪಾಯಿ,  ಹೆಂಡತಿಯೊಬ್ಬಳು ಜತೆಯಲ್ಲಿದ್ದರೆ ನನಗದೆ ಕೋಟಿ ರೂಪಾಯಿ”  ಎಂಬ  ಕವಿ ಮಾತನ್ನು ಹೆಚ್ಚು ಕಡಿಮೆ  ಒಪ್ಪಿಕೊಂಡಿದ್ದಾರೆ. ಮುಕ್ತ ಲೈಂಗಿಕ ಸ್ವಾತಂತ್ರ್ಯವಿರುವ ಅಮೇರಿಕಾದಲ್ಲೂ  ಈ ಭಾವನೆ ಒಂದಲ್ಲ ಒಂದು ರೀತಿಯಲ್ಲಿ ಆಗಾಗ ವ್ಯಕ್ತವಾಗುತ್ತಿರುತ್ತದೆ.  ಹೆಣ್ಣೇ ನಿನ್ನ ಇನ್ನೊಂದು   ಹೆಸರೇ ಅಸೂಯೆ , ಎಂಬ ಇಂಗ್ಲಿಷ್‌ ನಾಟಕ ಪಿತಾಮಹ ಷೇಕ್‌ಸ್ಪಿಯರ್‌ನ   ಮಾತು ಕಾಲಾತೀತ  ಹಾಗೂ ದೇಶಾತೀತ ವಾದ ಸರ್ವಕಾಲಿಕ ಸತ್ಯ    ಇದು ಮತ್ತೊಮ್ಮೆ ಅಮೇರಿಕದಲ್ಲಿ ಬಹು ಗಂಭೀರರೂಪದಲ್ಲಿ ಪ್ರಯೋಗವಾಗಿದೆ.
ರಾಬರ್ಟ್  ನಲವತ್ತೈದರ ಕಟ್ಟು ಮಸ್ತಾದ ಗಂಡಸು.ಜೂಲಿ ಅವನ ನಲ್ವತ್ತೆರಡರ  ಮಜಭೂತಾದ ಹೆಂಡತಿ .  ಅವನಿಗೆ  ಇದು  ಮೂರನೇ ಮದುವೆ. ಇವಳಿಗೆ  ಇವನು  ಎರಡನೆ  ಗಂಡ. ಇದು ಇಲ್ಲಿನ ಒಪ್ಪಿತ ವಿಧಾನ.ಇವರದು ಹೇಳಿ ಕೇಳಿ ಆಧುನಿಕ ಜೋಡಿ.'ನನ್ನ ಮಕ್ಕಳು, ನಿನ್ನ ಮಕ್ಕಳು  ಮತ್ತು  ನಮ್ಮ ಮಕ್ಕಳ  ನಡುವೆ ವಿವಾದ ಇರಬಾರದು' ಎಂಬ ಮುನ್ನೆಚರಿಕೆ ತೆಗೆದುಕೊಂಡೆ ಪ್ರೀತಿಸಿ ಮದುವೆಯಾದವರು.ಈ ಮದುವೆಯಿಂದಲೂ  ಒಂದು ಮಗುವೂ ಇದೆ. ಒಟ್ಟು ನಾಲಕ್ಕು ಮಕ್ಕಳು.ಆರು ವರ್ಷವಾದರೂ  ತಂಟೆ ತಕರಾರಿಲ್ಲದೆ ಜೀವನ ಸಾಗಿದೆ.ಇವರದು ದುಡಿಯುವ ಜೋಡಿ. ಅವನೊಂದು  ಕಡೆ ಕೆಲಸ ಮಾಡುವನು. ಇವಳೊಂದು ಕಡೆ ಕೆಲಸ  ಮಾಡುವಳು. ಎರಡು ಆದಾಯ. ಎರಡು ಕಾರು. ಮನೆ ಮಾತ್ರ ಒಂದೇ. ವಾರದ ಉದ್ದಕ್ಕೂ ದುಡಿಮೆಯ ಗಡಿಬಿಡಿಯಾದರೂ ವಾರಾಂತ್ಯಕ್ಕಂತೂ  ಒಟ್ಟಿಗೆ ಸೇರುತ್ತಾರೆ.  ಯಾವುದಕ್ಕೂ ಅತಿ ಅವಲಂಬನೆ ಇಲ್ಲದ ಅನುಕೂಲದ  ದಾಂಪತ್ಯ.
 
ಗಂಡ  ಹಲವು ಹೆಣ್ಣಿನ ಸಂಗ ಮಾಡಿದವ.  ಚಪಲ ಚೆನ್ನಿಗ ರಾಯ.ಮೂರನೇ ಮದುವೆಯಾದರೂ ಆಗಲೇ ಮದುವೆಯಾದ ಆರು ವರ್ಷಕ್ಕೆ ಸಂಗಾತಿ ಹಳಬಳೆಂದು ಅನಿಸಿದೆ. ಹೊಸ ಅನುಭವಕ್ಕೆ  ಮನಸ್ಸು ಹಾತೊರೆಯುತ್ತಿದೆ.ಸಪ್ತವಾರ್ಷಿಕ ತೀಟೆ ತಲೆ ಎತ್ತುವುದು ಎಂಬ ಮಾತಿದೆ.  ಆದರೆ ಇವನಿಗೆ ಆರನೇ ವರ್ಷಕ್ಕೆ ಮನದಲ್ಲಿ ತುಡಿತ ಮೊದಲಾಗಿದೆ.ಹೊಸತನಕ್ಕೆ ಮನ ಹಂಬಲಿಸಿದೆ.ವಿವಾಹ ಬಾಹಿರ ಸಂಬಂಧಗಳ ಬಗ್ಗೆ ಅಮೇರಿಕಾ ಅಷ್ಟೇನೂ ನಿಷ್ಠೂರವಲ್ಲದ ಸಮಾಜ. ಶ್ರೀ ರಾಮಚಂದ್ರನಂತೆ ಗಂಡ ,  ಸತಿ ಸಾವಿತ್ರಿಯಂತೆ ಹೆಂಡತಿ  ಇರಬೇಕೆಂಬ ಕಟ್ಟು ನಿಟ್ಟು  ಇಲ್ಲ. ಆದರೆ ಸಂಸಾರದಲ್ಲಿನ ಸಾಮರಸ್ಯ ಕಾಪಾಡಲು ಮತ್ತು ಹೊಂದಾಣಿಕೆಯ ದೃಷ್ಟಿಯಿಂದ ಹೊರ ಚಾಳಿಗೆ ಅವಕಾಶ ಕೊಡುವುದಿಲ್ಲ. ಆದರೂ ಕದ್ದು ಮುಚ್ಚಿ ಹೆಂಡತಿ ಊರಲ್ಲಿ ಇಲ್ಲದಾಗ, ತಾನು ಹೊರ ಪ್ರವಾಸಕ್ಕೆ ಹೋದಾಗ ಬೇಲಿ ಹಾರಿ ಅನ್ಯರ    ಹೊಲದಲ್ಲಿನ ಮೇವು ಮೆದ್ದದು ಉಂಟು.ಜೂಲಿಗೆ ಅನುಮಾನ ಬಂದಿಲ್ಲ ಎಂತಲ್ಲ. ಆದರೆ ಇದೊಂದು ಸಂಚಾರಿ ಭಾವ ಎಂದು ಕೊಂಡು ನೆಮ್ಮದಿಯಿಂದ ಇದ್ದಾಳೆ.ರಾಬರ್ಟನಿಗೆ ಅವಳ ಮೌನದಿಂದ ಹುಮ್ಮಸು ಹೆಚ್ಚಾಗಿದೆ. ಮನೆಗೆ ಬರುತ್ತಿದ್ದ ಹೆಂಡತಿಯ ಗೆಳತಿಯರಿಗೆ ಬಲೆ ಬೀಸ ಬಯಸಿದ್ದಾನೆ. ಪಕ್ಕದ ಮನೆ ಪಾರ್ವತಮ್ಮನ ಅಡುಗೆ ಬಹಳ ರುಚಿ. ಎನ್ನುವ ಹಾಗೆ ಅವನಿಗೆ ಹೆಂಡತಿಯ ಗೆಳತಿಯರೆಲ್ಲ ಅಪ್ಸರೆಯರೆ ಎನಿಸಿದೆ.ಮೊದ ಮೊದಲು  ಹುಡುಗಾಟ ಎಂದು ಅವರೂ  ಸುಮ್ಮನಾಗಿದ್ದಾರೆ.  ಒಬ್ಬಳಲ್ಲ, ಇಬ್ಬರಲ್ಲ  ಮೂವರು ಗೆಳತಿಯರಿಗೂ ಇದೆ ಅನುಭವ  ಆಗಿದೆ . ಆ ಗೆಳೆತಿಯರದು  ಇಂದು ನಿನ್ನೆಯ ಪರಿಚಯ ಅಲ್ಲ. ಶಾಲಾ  ದಿನಗಳಿಂದಲೂ  ಗೆಳತಿಯರು.ಅವರ ನುಡುವೆ  ಗುಟ್ಟು ಎಂಬುದು ಗೊತ್ತೇ  ಇಲ್ಲದ ವಿಷಯ. ಅವರು ಒಟ್ಟಾಗಿ ಕುಳಿತಾಗ ಆಮಾತು ಈ ಮಾತು ಆಡುತ್ತಾ ಈ ವಿಷಯ ಬಂದಿದೆ. ಎಲ್ಲರದೂ ಅದೆ ಅನುಭವ ಆಗಿದೆ. ಗೆಳತಿಯ ಗಂಡನ ಉದ್ದೇಶ ಅವರಿಗೆ ಅರ್ಥವಾಗಿದೆ. ಏನಾದರು ಮಾಡಿ ಗೆಳತಿಗೆ ಆಗಬಹುದಾದ  ಅನ್ಯಾಯ   ತಡೆಗಟ್ಟಲು ಮನಸು ಮಾಡಿದ್ದಾರೆ. ಒಬ್ಬಳು ಅವನಿಗೆ ಅನಿವಾರ್ಯವಾಗಿ   ಒಲಿದಂತೆ ನಟಿಸಿದ್ದಾಳೆ.ಅವನಿಗೆ ಸಾಮ್ರಾಜ್ಯ ಗೆದ್ದಷ್ಟು ಸಂಭ್ರಮ. ಹತ್ತಿರದ ಮೋಟೆಲ್ ಒಂದರಲ್ಲಿ ಸೇರಲು ಸಮಯ ನಿಗದಿಯಾಗಿದೆ. ಇಬ್ಬರೂ ನಿಗದಿತ ಸಮಯಕ್ಕೆ ಮೊಟೆಲ್‌ನ ಕೋಣೆ ಸೇರಿದ್ದಾರೆ. ಅವನು ವಿಜಯೋತ್ಸಾಹದಿಂದ ಸರಸ ಸಲ್ಲಾಪ ಶುರು ಮಾಡಿದ್ದಾನೆ. ಪ್ರೇಮಿಗಳಿಗೆ ಯಾವ ಹಂಗು ಯಾಕೆ ಬೇಕು. ಮೈ ಮೇಲಿನ ಬಟ್ಟೆಗಳ ತೊಂದರೆ ನಿವಾರಿಸಿ ನಗು ನಗುತ್ತ ಖುಷಿಯಲ್ಲಿರುವಾಗ, ಬಾಗಿಲನ್ನು ದಡ್  ದಡ್ ಬಡಿದ ಸದ್ದು. ಅವನು ಗಾಬರಿಯಾಗಿದ್ದಾನೆ.  ನಿದ್ದೆ ಹೋದವನಂತೆ  ನಟಿಸುತ್ತಾ ಹೊದಿಕೆ ಹೊದೆದು ಹಾಸಿಗೆಯಲ್ಲಿ ಒರಗಿದ್ದಾನೆ. ಅವಳು  ಗಂಭೀರವಾಗಿ ಬಾಗಿಲು ತೆಗೆದಾಗ ಇನ್ನಿಬ್ಬರು ಸುಂದರಾಂಗಿಯರು ಒಳಗೇ   ಬಂದಿದ್ದಾರೆ.  ಅವನಿಗೆಗಾಬರಿ ಯಾಗಿದೆ. ಇದೇನು ಒಬ್ಬರು ಬದಲು ಮೂವರು ಬಂದಿದ್ದಾರಲ್ಲ ಎಂದು  ದಿಗ್ಮೂಢನಾಗಿದ್ದಾನೆ. ಅವರಾದರೋ  ಹುಟ್ಟು ಉಡುಗೆಯಲ್ಲಿ ಇದ್ದ  ಅವನನ್ನು  ಸುತ್ತುವರೆದು ಯಾರು ಬೇಕು ಯಾರು ಬೇಕು ಎಂದು ಕಿಚಾಯಿಸಿದ್ದಾರೆ.  ಅಷ್ಟರಲ್ಲಿ ಹೆಂಡತಿಯದೂ ಪ್ರವೇಶವಾಗಿದೆ.ಎಲ್ಲರೂ ಸೇರಿ ಅವನ ಮೈ ಮೆತ್ತಗೆ ಮಾಡಿದ್ದಾರೆ.  ಯಾರನ್ನಾದರು  ಆರಿಸಿಕೋ. ಜೀವನ  ಸಂಗಾತಿಯಾಗಲು ತುದಿಗಾಲಲ್ಲಿ ನಿಂತಿದ್ದೇವೆ. ನಿನ್ನಂತಹ ಗಂಡು ಇನ್ನೊಬ್ಬರಿಲ್ಲ  ಎಂದೆಲ್ಲ ಹಿಯಾಳಿಸಿದ್ದಾರೆ. ಪೆಚ್ಚಾಗಿದ್ದ ಅವನನ್ನು ಆ ಸ್ಥಿತಿಯಲ್ಲಿಯೇ ಮಂಚಕ್ಕೆ ಬಿಗಿದು, ಬಾಯಿಗೆ,  ಗುಪ್ತಾಂಗಕ್ಕೆ ಪ್ಲಾಸ್ಟರ್ ಅಂಟಿಸಿ   ಜಾಗ ಖಾಲಿ ಮಾಡಿದ್ದಾರೆ
.ಅವನು ಗಂಟೆ ಗಟ್ಟಲೆ ಒದ್ದಾಡಿ ಬಾಯಿಗೆ ಅಂಟಿಸಿದ್ದ ಪ್ಲಾಸ್ಟರ್ ಅಗಿದು ನುಂಗಿ ಸಹಾಯಕ್ಕಾಗಿ ಕೂಗಿದ್ದಾನೆ. ಮೋಟೆಲ್ ಸಿಬ್ಬಂದಿ ಅವನ ಕಿರುಚಾಟ  ಕೇಳಿ ಬಂದು ಅವನನ್ನು  ಬಂಧನದಿಂದ ಬಿಡುಗಡೆ ಮಾಡಿದ್ದಾರೆ.ಈಗ ಪೊಲೀಸರು   ಕ್ರಮಕ್ಕೆ ಮುಂದಾಗಿದ್ದಾರೆ.  ಮಹಿಳೆಯರ ಮೇಲೆ ಲೈಂಗಿಕ ಹಿಂಸೆಯ ಆರೋಪ ಹೊರಸಿ ಮೊಕದ್ದಮೆ ಹೂಡಲಾಗಿದೆ.ಇದು ಅವನ ಮೋಹದ ಮಬ್ಬೋ, ಅವಳ  ಮನದಲ್ಲಿ ಹಸಿರು ಕಣ್ಣಿನ ಹಾವು ಹೆಡೆ ಎತ್ತಿದ  ಪರಿಣಾಮವೋ, ಗೆಳತಿಯರ ಕಾಳಜಿಯ ಕಳಕಳಿಯೋ  ತಿಳಿಯದು.ಆದರೆ ಎಲ್ಲರೂ ಕಾನೂನಿನ ಕೈಗೆ ಸಿಲುಕಿ ಕಷ್ಟಕ್ಕೆ ಸಿಕ್ಕಿಹಾಕಿಕೊಂಡಿರಿವುದು ಸತ್ಯ. ಮುಕ್ತ ಕಾಮದ ಸಮಾಜದಲ್ಲಿ  ಈ ರೀತಿಯ ಪತಿ ಪ್ರೇಮದ ಅಭಿವ್ಯಕ್ತಿಯ ಫಲವಾಗಿ ಎಲ್ಲರು ನ್ಯಾಯಾಲಯ ಅಲೆಯುತ್ತಿದ್ದಾರೆ
ಇದು ನಮ್ಮ ಮಹಾಭಾರತದ .ಕೀಚಕನ ಕಥೆಯನ್ನು  ತುಸು ಮಟ್ಟಿಗೆ  ನೆನಪಿಸುತ್ತದೆ. ಒಂದೆ ವ್ಯತ್ಯಾಸ. ಅಲ್ಲಿ ಕೀಚಕ ದ್ರೌಪದಿ ಒಬ್ಬಳನ್ನೆ ಬಯಸಿದ. ಅವಳ ಪತಿಗಳಲ್ಲಿ  ಒಬ್ಬನಿಂದ  ಹತನಾದ. ಆದರೆ ಈ ಆಧುನಿಕ ಹೆಣ್ಣುಬಾಕ ಹಲವಾರು ಹೆಂಗಳೆಯರ ಜತೆ ಸಂಗ ಬೆಳಸ ಬಯಸಿದ.ಅವನಿಗೆ ಶಿಕ್ಷಿಸಿದವರು ಬೇರೆ ಯಾವ ಗಂಡಸೂ ಅಲ್ಲ. ಅವನು ಬಯಸಿದ ಮಹಿಳೆಯರೆ ಅವನಿಗೆ ಮುಳುವಾದರು. ಒಂದು ರೀತಿಯಲ್ಲಿ ಮಹಿಳೆಯು ಅಬಲೆಯಲ್ಲ ಸಬಲೆ ಯಾಗಿದ್ದಾಳೆ ಎಂಬುದರ ಸಂಕೇತ ಇದು ಎನ್ನಬಹುದು


(ಅಮೇರಿಕಾ ಪತ್ರಿಕೆಯೊಂದರಿಂದ ಎಳೆ ಪಡೆದಿದೆ )

No comments:

Post a Comment