Thursday, December 27, 2012

ಹೀನ ಸುಳಿ ಏನು ಮಾಡಿದರೂ ಹೋಗದು



ಮಂಡ್ಯ  ಜಿಲ್ಲೆಯಲ್ಲಿ ವರ್ಗವಾದ ಒಂದೆ  ವರ್ಷದಲ್ಲೆ ನಾನು ಪ್ರಭಾರೆ ಪ್ರಿನ್ಸಿಪಾಲನಾಗ ಬೇಕಾಯಿತು. ಆ ಹುದ್ದೆ ನನಗೆ ಹೊಸದೇನೂ ಅಲ್ಲ . 1981  ರಿಂದಲೆ ಅನೇಕ ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದೆಎಲ್ಲರೂ ಜತೆಯವರೆ ಆದ್ದರಿಂದ ಕೆಲಸ ಸುಗಮವಾಗಿ ಸಾಗಿತ್ತು. ಅವರೆಲ್ಲ ನಾನು ನೀತಿ ನಿಯಮ ಪಾಲನೆಯಲ್ಲಿ ಬಿಗಿ ಎಂದು ಬಲ್ಲವರಾಗಿದ್ದರು ಹಾಗಾಗಿ ತೊಂದರೆ ಏನೂ ಅಗಲಿಲ್ಲ. ಆ ವರ್ಷ ತಾಲೂಕು ಮಟ್ಟದ ಕ್ರಿಡಾಕೂಟವನ್ನು ಭಾರತಿನಗರದಲ್ಲಿ ನಡೆಸಲು ಇಲಾಖೆ ತೀರ್ಮಾನಿಸಿತ್ತು. ಮೊದಲಲ್ಲಿ ಜಿಲಾ ಮಟ್ಟದಲ್ಲಿ ಒಂದೆ ಕಡೆ ಎಲ್ಲರಿಗೂ ಕ್ರೀಡಾ ಕೂಟ ನಡೆಸುತಿದ್ದರು. ಅದು ನಮ್ಮ ಕಾಲದಲ್ಲಿ. ಆಗ ಹೈಸ್ಕೂಲುಗಳ ಸಂಖ್ಯೆ ಕಡಿಮೆ ಇತ್ತು . ಆದರೆ ಈಗ ಊರಿಗೊಂದು ಹೈಸ್ಕೂಲುಗಳಾದ್ದರಿಂದ ಮೊದಲು ತಾಲೂಕು ಮಟ್ಟದಲ್ಲಿ ನಡೆಸಿ ಅದರಲ್ಲಿ ಗೆದ್ದವರಿಗೆ ಮಾತ್ರ ಜಿಲ್ಲಾ  ಮಟ್ಟದಲ್ಲಿ  ಭಾಗವಹಿಸಲು ಅವಕಾಶ ನೀಡುವರು.
 ನಮ್ಮದು ಸಹ ಶಿಕ್ಷಣ ಶಾಲೆ . ಆದ್ದರಿಂದ ಬಾಲಕರ ಮತ್ತು ಬಾಲಕಿಯರ ಎರಡೂ ತಂಡಗಳನ್ನು ಕಳುಹಿಸಬೇಕಿತ್ತು. ನಮ್ಮಲ್ಲಿನ  ಮಕ್ಕಳು ಹಳ್ಳಿಗಾಡಿನವರಾದ್ದರಿಂದ  ಗಟ್ಟಿಮುಟ್ಟಾಗಿದ್ದರು. ನಮ್ಮಲ್ಲಿ ಒಳ್ಳೆಯ ಆಟದ ಮೈದಾನ ಇತ್ತು ಕ್ರೀಡಾ ಸಾಮಗ್ರಿಗಳೂ ಇದ್ದವು. ಆದರೆ ಒಂದೆ ಒಂದು ಕೊರತೆ. ಎಂದರೆ ದೈಹಿಕ ಶಿಕ್ಷಕರು ಇರಲಿಲ್ಲ. ಅದರಿಂದ ಆಟದ ಅವಧಿಯಲ್ಲಿ ಮಕ್ಕಳಿಗೆ ಕ್ರೀಡಾಸಾಮಗ್ರಿ ಕೊಟ್ಟರೆ ತಾವೆ ಆಡಿಕೊಳ್ಳುತಿದ್ದರು ಜತೆಗೆ ಆ ಅವಧಿಯಲ್ಲಿ ಬಿಡುವಿರುವ ಸಹ ಶಿಕ್ಷಕರೂ ಅವರಿಗೆ  ಮಾರ್ಗದರ್ಶನ ನೀಡುವರು. ನಮ್ಮಲಿನ ಶಿಕ್ಷಕೆರೆಲ್ಲ ಯುವಕರು. ಎಲ್ಲರೂ ಗುತ್ತಿಗೆ ಆಧಾರದ ಮೇಲೆ ನೇಮಕವಾದವರು. ಅವರಿಗೆ ನಿಗದಿತ ಮೊತ್ತವನ್ನು ಸಂಭಾವನೆಯಾಗಿ ಕೊಡುವರು. ಬೇರೆ ಯಾವುದೆ ಸೌಲಭ್ಯವಿರಲಿಲ್ಲ. ಆದರೆ ಅದೆ ತಾನೆ ಕಾಲೇಜಿನಿಂದ ಹೊರಬಂದವರು ಉತ್ಸಾಹದಿಂದ ಕೆಲಸ ಮಾಡುತಿದ್ದರು. ಕೆಲವುರು ಅಲ್ಲಿಯೆ ರೂಮು ಮಾಡಿಕೊಂಡು ಇದ್ದರು. ವಾರಕೊಮ್ಮೆ ತಮ್ಮೂರಿಗೆ ಹೋಗಿ ಬರುವರು.ಅವರಲ್ಲಿ ಬೆಟ್ಟೆಗೌಡ ಮತ್ತು ನಾಗರಾಜ ಎನ್ನುವ ಯುವಕರು ಮಕ್ಕಳಿಗೆ ಶಾಲೆಬಿಟ್ಟ ಮೇಲೆ ತರಬೇತಿ ನೀಡುವ ಹೊಣೆ ವಹಿಸಿಕೊಂಡರು.ಕುರುಡನಿಗೆ ಬೇಕಾದದ್ದು ಕಣ್ಣು ಯಾವ ದೇವರಿಗೆ ಕೈ ಮುಗಿದರೆ ತಾನೆ ಏನು. ? ಒಟ್ಟಿನಲ್ಲಿ ಮಕ್ಕಳಿಗೆ ಸಹಾಯವಾಗಬೇಕು ಮತ್ತು ಶಾಲೆಗೆ ಹೆಸರು ಬರಬೇಕು. ಅದರಿಂದ ಕ್ರೀಡಾಚುವಟಿಕೆಯ ಜವಾಬ್ದಾರಿ ಅವರಿಗೆ ಪೂರ್ಣ ವಾಗಿ ವಹಿಸಲಾಗಿತ್ತು. ನಮ್ಮ  ಕಾಲೇಜು ಇರುವುದು ಗೌಡರ ಪ್ರದೇಶದಲ್ಲಿ. ಅಲ್ಲಿ ಅವರದೆ ರಾಜ್ಯ. ನಮ್ಮ ಬೆಟ್ಟೆಗೌಡನು ಸಹಾ ಊರಿನ ಯಾವುದೊ  ಒಬ್ಬ  ಕುಲಬಾಂಧವನ ಮನೆಯ ಕೋಣೆಯಲ್ಲೆ ಉಳಿದು ಅಲ್ಲಿಯೆ ಊಟವನ್ನು ಮಾಡುತಿದ್ದರು. ಎಲ್ಲರೂ ಬಾಂಧವರಾದ್ದರಿಂದ ಅವರು ಬಹಳ ಸುಲಭ ವಾಗಿ ಮಕ್ಕಳನ್ನು ನಿಯಂತ್ರಿಸುವರು. ಮತ್ತು ಅವರು ಉತ್ತಮ ಗಣಿತದ ಶಿಕ್ಷಕರು. ಹಾಗಾಗಿ ನಾನು ನಿಶ್ಚಿಂತೆಯಿಂದ ಕ್ರೀಡಾ ತರಬೇತಿಯ ಹೊಣೆ ಅವರಿಗೆ ಕೊಟ್ಟೆ. ಅವರು ಅದನ್ನು ಖುಷಿ ಖುಷಿ ಯಿಂದಲೆ ಮಾಡುತಿದ್ದರು.
ಕ್ರೀಡಾ ತರಬೇತಿ ಬಲು ಜೋರಿನಿಂದಲೆ ಸಾಗಿತ್ತು. ಕೆಲವರು ತರಬೇತಿ ಸಮಯದಲ್ಲಿ ಅವರು ತುಸು ಎಲ್ಲೆ ಮೀರಿ ವರ್ತಿಸುವರು ಎಂದು ಒಬ್ಬಿಬ್ಬರು ಸೂಚ್ಯವಾಗಿ ಹೇಳಿದರು. ಮೊದಲೆ ಯುವಕರು, ಆಟದ ಉತ್ಸಾವ. ಅದರಲ್ಲೂ ಎಲ್ಲ ತಮ್ಮವರೆ ಎನ್ನುವ ಆತ್ಮ ವಿಶ್ವಾಸ.ಅದರಿಂದ ಒರಟಾಗಿ ಮಾತನಾಡಿರಬಹುದು ಎಂದು ಕೊಂಡೆ. ಅಲ್ಲದ ಯಾವುದೆ ಆಧಾರವಿಲ್ಲದೆ  ಅವರಿವರ ಮಾತಿಗೆ ಕಿವಿಗೊಟ್ಟರೆ ಸುಮ್ಮನೆ ಇಲ್ಲದ ಗುಲ್ಲಾಗುವುದು.  ಅದರೂ ತುಸು ಎಚ್ಚರಿಕೆಯೀಂದ ಇರಬೇಕು ಎಂದು ಕೊಂಡೆ. ಅವರ ಬಗ್ಗೆ ಮಾತನಾಡಿದವರೂ ಖಚಿತವಾಗಿ ಏನನ್ನು ಹೇಳಲು ಸಿದ್ದರಿರಲಿಲ್ಲ.
 ಕ್ರೀಡಾ ಸ್ಪರ್ಧೆಯು ಮೂರುದಿನ ನಡೆಯುವುದೆಂದು ವೇಳಾ ಪಟ್ಟಿ ಬಂದಿತು. ಹಾಗೆ ನೋಡಿದರೆ ಅ ಸ್ಥಳ  ನಮ್ಮ ಕಾಲೇಜಿಗೆ ಅತಿ ದೂರವೇನೂ ಇರಲಿಲ್ಲ. ಬಸ್‌ನಲ್ಲಿ  ಒಂದು ಗಂಟೆಯ ಹಾದಿ ಮಾತ್ರ. ಆದರೆ ಬಸ್ಸಿನ ಅನುಕೂಲ ಚೆನ್ನಾಗಿರಲಿಲ್ಲ.ಆದ್ದರಿಂದ ಇಲ್ಲಿಂದ ಓಡಾಡುವ ಸಾಧ್ಯತೆ ಇರಲಿಲ್ಲ. ಅದಕ್ಕೂ ಮಿಗಿಲಾಗಿ ಹಿಂದಿನ ವರ್ಷವೆಲ್ಲ ಅಲ್ಲಿಯೇ ರಾತ್ರಿ ತಂಗುತಿದ್ದರು. ಮೇಲಾಗಿ ಅಲ್ಲಿ ವಸತಿ ವ್ಯವಸ್ಥೆಯೂ ಚೆನ್ನಾಗಿತ್ತು.ನಮ್ಮ ಮನೆಯೂ ಕೂಡಾ  ಕ್ರೀಡಾ  ಕೂಟ ನಡೆವ  ಕಾಲೇಜಿಗೆ ಅತಿ ಸಮೀಪದಲ್ಲೆ ಇತ್ತು.ಹಾಗಾಗಿ ಹುಡುಗರ ಮತ್ತು ಹುಡುಗಿಯರ ಎರಡೂ ತಂಡಗಳನ್ನೂ ಕಳುಹಿಸುಲು ವ್ಯವಸ್ಥೆಯಾಯಿತು ಮತ್ತು ಬೆಟ್ಟೆಗೌಡ ನಾಯಕರಾಗಿ ಎಲ್ಲರನ್ನೂ ನೋಡಿಕೊಳ್ಳ ಬೇಕಿತ್ತು. ಆಟಗಾರರ ಪ್ರವಾಸ ಭತ್ಯ ಮತ್ತು ದಿನ ಭತ್ಯವನ್ನು ಅವರಿಗೆ ನೀಡಲಾಯಿತು.ನಮ್ಮಲ್ಲಿನ ಶಿಕ್ಷಕಿಬ್ಬರೂ ಅವರ ಜತೆ ಹೋಗಬೇಕು ಎಂದಾಗ ಅವರು ದಿನವೆಲ್ಲ ಅಲ್ಲಿರುವುದಾಗಿಯೂ ರಾತ್ರಿ ಮನೆಗೆ ಹೋಗಲೇ ಬೇಕೆಂದು ತಿಳಿಸಿದರು. ಅದಕ್ಕಾಗಿ ಇನ್ನೊಬ್ಬ ಶಿಕ್ಷಕರನ್ನೂ ನಿಯೋಜಿಸಲಾಯಿತು. ಅಲ್ಲದೆ  ಯಾವ ಮಕ್ಕಳ ಅಟವು ಮುಗಿಯುವುದೋ ಅವರನ್ನು ಅದೆ ದಿನ ವಾಪಸ್ಸು ಕಳುಹಿಸಬೇಕು ಅದರಲ್ಲೂ ಹುಡುಗಿಯರನ್ನು ಅವರಿಗಾಗಿ ಇರುವ ಪ್ರತ್ಯೇಕ ವಸತಿಯ ಸ್ಥಳದಲ್ಲೇ ಬಿಡಬೇಕೆಂದೂ ಸೂಚನೆ ನೀಡಲಾಯಿತು.ಅವರನ್ನು ಬೆಳಗ್ಗೆ ಹೊತ್ತಿಗೆ ಮುಂಚೆಯ ಭಾರತೀ ನಗರಕ್ಕೆ ಕಳುಹಿಸಲಾಯಿತು. ನಾನು ಯಥಾರೀತಿ ಕಾಲೇಜಿಗೆ ಬಂದೆ. ಅಲ್ಲಿನ ಕೆಲಸ ಮುಗಿಸಿ ಸಂಜೆ  ಮನೆಗೆ ಹಿತಿರುಗಿದೆ. ಆಗಲೆ ಆರು ಗಂಟೆಯ  ಮೇಲಾಗಿತ್ತು ನಮ್ಮ  ಹುಡುಗರು  ಹೇಗಿದ್ದಾರೆಂದು ಅರಿಯಲು  ಆಟದ ಮೈದಾನದ ಹತ್ತಿರ ಹೋದೆ.
ನಮ್ಮಹುಡುಗರು ತಂಡದ ಆಟದಲ್ಲಿ ಗೆದ್ದಿದ್ದರು.. ಹುಡುಗಿಯರು ಸೋತಿದ್ದರು.ಅಟೋಟಗಳ ಸ್ಪರ್ಧೆ ಕೊನೆಯ ದಿನ ಇತ್ತು.ನನಗೆ ಆ ದಿನ ಆಟ ಮುಗಿದವರು ಮೊದಲೆ ತಿಳಿಸಿದ ಪ್ರಕಾರ ಊರಿಗೆ ವಾಪಸ್ಸು ಏಕೆ ಹೋಗಲಿಲ್ಲ ಎಂದು ಗೊತ್ತಾಗಲಿಲ್ಲ.  ಹುಡುಗಿಯರನ್ನೆ ಕೇಳಿದಾಗ ಅವರು ಹೆದರುತ್ತಾ,” ಬೆಟ್ಟಯ್ಯಸರ್‌ ಅವರು ಈ ದಿನ ಊರಿಗೆ ಹೋಗುವುದು ಬೇಡ.ಎಲ್ಲ ಹುಡುಗಿಯರನ್ನು ಸಿನೆಮಾಕ್ಕೆ ಕರೆದು ಕೊಂಡು ಹೋಗುವುದಾಗಿ ತಿಳಿಸಿರುವರು. ರಾತ್ರಿ ಇಲ್ಲಿಯೆ ತಂಗಬೇಕಾಉ. ಆದರೆ ಇಲಾಖೆ ನೀಡಿದ ಪ್ರತ್ಯೇಕ ರೂಮಿಗೆ ಹೋಗದೆ ತಾವು ಬೇರೆ  ಕಡೆ ಮಾಡುವ ರೂಮಿಗೆ ಬರಬೇಕು “  ಎಂದು ಒತ್ತಾಯ ಮಾಡಿದ್ದರು.
ಅಲ್ಲದೆ ಇನ್ನು ಮೂರುದಿನ ಅವರು ಹೇಳಿದಂತೆ ಎಲ್ಲರೂ ಕೇಳ ಬೇಕು. ಇಲ್ಲದಿದ್ದರೆ ಅವರಿಗೆ ಗತಿ ಕಾಣಿಸುವುದಾಗಿ ಬೆದರಿಸಿದ್ದರು. ಅದರಿಂದ ಹುಡುಗಿಯರು ಗಾಬರಿಯಾಗಿದ್ದರು.   ನನ್ನನ್ನು ನೋಡಿದೊಡನೆ ಅಳ ತೊಡಗಿದರು. ಈ ಮೊದಲು ಅವರು ಅಸಭ್ಯವಾಗಿ ನಡೆದುಕೊಂಡಿದ್ದರು . ಆದರೆ ಪ್ರಾಂಶುಪಾಲರಿಗೆ ಹೇಳಿದರೆ ಫೇಲು ಮಾಡುವುದಾಗಿ ಹೆದರಿಸಿದ್ದರಂತೆ.
ಈಗ ಅವರ ವರ್ತನೆ ಎಲ್ಲೆ ಮೀರಿದ್ದರಿಂದ ಹುಡುಗಿಯರು ಗಾಬರಿಯಾಗಿದ್ದರು. ಹುಡುಗಿಯರಿಗೆ ಸಮಾಧಾನ ಮಾಡಿದೆ. ಶಿಕ್ಷಕರಿಗೆ ಬರ ಹೇಳಲಾಯಿತು.. ಅವರು ಬಂದುನನ್ನನ್ನು ಕಾಣಲು ತಯಾರಿರಲಿಲ್ಲ.  ಇನ್ನೇನು ಮಾಡುವುದು  ನನ್ನ ಮನೆಗೆ  ಹುಡುಗಿಯರನ್ನು ಕರೆದೊಯ್ದೆ. ಮತ್ತೊಮ್ಮೆ ಬಂದು ಕಾಣವಂತೆ ಅವರಿಗೆ ಮಾಹಿತಿ ಕಳುಹಿಸಿದೆ.ಅವರು ಬರಲಿಲ್ಲ. ಅವರ ಪ್ರತಿಕ್ರಿಯೆ ತಿಳಿಸಲು ಹುಡುಗ ಹಿಂದೆ ಮುಂದೆ ನೋಡಿದ. ಬಹಶಃ ಅವನಿಗೂ ಇದ್ದ ವಿಷಯ ಹೇಳಲು ಹೆದರಿಕೆ.ಸುಮಾರು ಹದಿನೈದು ಜನ ಹುಡುಗಿಯರನ್ನು ಅವರಪಾಡಿಗೆ ಅವರನ್ನು  ಬಿಡಲು ಮನ ಬಾರದಾಯಿತು. ಅವರನ್ನು ನಮ್ಮ ಮನೆಗೆ ಕೆದುಕೊಂಡು ಹೋದೆ. ಅಲ್ಲಿಯೆ ಅವರಿಗೆ ಊಟ ಹಾಕಿಸಿ . ಮಲಗಲು ವ್ಯವಸ್ಥೆ ಮಾಡಿದೆ.ಅಷ್ಟರಲ್ಲಿ ಒಬ್ಬ ಹುಡುಗ ಬಂದು ಬೆಟ್ಟಯ್ಯ ಮಾಷ್ಟ್ರು ಬರ ಹೇಳಿದ್ದಾರೆ ಎಲ್ಲ ಹುಡುಗಿಯರೂ ಬರಬೇಕೆಂದು ಕರೆದ.ಆದರೆ ಅವರು ಭಯದಿಂದ ನಡುಗತೊಡಗಿದ್ದರು.ಅವರು ಮೈದಾನದಲ್ಲಿ ಮುಂದೆ ನಿಂತು ಕೂಗಾಡುತ್ತಿರುವುದಾಗಿ ತಿಳಿಯಿತು . ತಾವು ಕರೆದುಕೊಂಡ ಬಂದ  ಹುಡುಗಿಯರ ಬಗ್ಗೆ ಮಾತನಾಡಲು ಯಾರಿಗೂ ಅಧಿಕಾರವಿಲ್ಲ ಎಂಬುದು ಅವರ ವಾದ. ಅವರು ಏನಾದರೂ ಮಾತನಾಡಲಿ ಹುಡುಗಿಯರನ್ನು ಅವರಲ್ಲಿಗೆ ಕಳುಹಿಸುವುದು ಆಗದ ಮಾತು ಎಂದು ನಿರ್ಧರಿಸಿದೆ. ಅದರಂತೆ ಅವರಿಗೆ ಮಾಹಿತಿ ಕಳುಹಿಸಲಾಯಿತು. ಪಾಪದ ಹುಡುಗಿಯರು ಇರುವ ಒಂದು ಹಾಲಿನಲ್ಲೆ  ಹೇಗೋ ಹೊಂದಾಣಿಕೆ ಮಾಡಿಕೊಂಡು ಮಲಗಿದರು. ಬೆಳಗ್ಗೆ ಎದ್ದು ಅವರ ದೈನಂದಿನ ಕೆಲಸ ಮುಗಿದ ಮೇಲೆ ಹೋಟಲಿನಿಂದ ತಿಂಡಿ ತರಿಸಿ ಕೊಟ್ಟು ನನ್ನ ಜತೆಯಲ್ಲಿಯೇ ಕಾಲೇಜಿಗೆ ಕರೆದು ಕೊಂಡು ಹೋದೆ. ಅ ದಿನ ಎಲ್ಲರೂ ಮನೆಯಲ್ಲಿ ವಿಶ್ರಾಂತಿ ಪಡೆಯಲು ಅವರಿಗೆ ತಿಳಿಸಲಾಯಿತು.
 ಪಂದ್ಯಾವಳಿ ಮುಗಿದ ಮಾರನೆಯ ದಿನ ಬೆಟ್ಟಯ್ಯ ಕಾಲೇಜಿಗೆ ಬಂದವರೆ ಕಚೇರಿಗೆ ಬಂದು ಕೂಗಾಡಲು ಶುರು ಮಾಡಿದರು.ಅವರ ಗೌರವಕ್ಕೆ ಕುಂದು  ಬಂದಿರುವುದಾಗಿ ಕೋಪಗೊಂಡಿದ್ದರು. ಅವರ ಕೆಲಸದಲ್ಲಿ ಕೈ ಹಾಕಿ ಮಧ್ಯದಲ್ಲೆ ಮಕ್ಕಳನ್ನು ಕರೆತರಲು ನನಗೆ ಯಾವ ಅಧಿಕಾರವಿದೆ. ಒಂದು ಸಲ ಜವಾಬ್ದಾರಿ ಕೊಟ್ಟ ಮೇಲೆ  ಮುಗಿಯಿತು ಮೂರುದಿನ ಯಾರೂ ಮಾತನಾಡಬಾರದು  ಎಂಬುದ ಅವರ ವಾದ.
ಇತರ ಶಿಕ್ಷಕರು ಅವರನ್ನು ಸಮಾಧಾನ ಮಾಡಲು ಬಹಳ ಪ್ರಯತ್ನಿಸಿದರು ಆದರೆ  ಸಮಾಧಾನವಾಗಲೆ ಇಲ್ಲ.ಯಾವುದೋ ಊರಿನಿಂದ ಬಂದವನಿಗೆ ಇಷ್ಟು ಅಹಂಕಾರವಿರುವಾಗ ಅದೆ ಜಿಲ್ಲೆಯವರಾದ ತಾವು ಸುಮ್ಮನಿರುವುದು ಸಾಧ್ಯವೆ ?
 ಒಂದೆ ಸಮನೆ ಅವರ ಕಿರುಚಾಟ ನಡೆದೆ ಇತ್ತು.ಮಕ್ಕಳು ಗಂಪು ಗೂಡಿದರು. ಎಲ್ಲರಿಗೂ ಬಿಟ್ಟಿ ಮನರಂಜನೆ.
 ಇತರರು ಮೂಕ ಪ್ರೇಕ್ಷಕರಾಗಿ ಮಿಕಿ ಮಿಕಿ ನೋಡುತ್ತಾ ನಿಂತರು. ಅವರದು ಒಂದೆ ಮೂಲ ಪ್ರಶ್ನೆ. ತಾವು ಏನೋ ಮಾಡುವರೆಂದು ಅನುಮಾನದಿಂದ ತಮ್ಮ ವಶದಲ್ಲಿದ್ದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ತಮ್ಮ ಮನೆಯಲ್ಲಿ ಒಂದು ರಾತ್ರಿಯೆಲ್ಲ ಮಲಗಿಸಿ ಕೊಂಡರಲ್ಲಾ ಪ್ರಿನ್ಸಿಪಾಲರೂ ಮತ್ತು ಕಾಲೇಜಿಗೆ ಹೋಗುವ ಅವರ ಮಗನೂ ಗಂಡಸರು ತಾನೆ . ಅವರು ಮಾಡಿದರೆ ಕೆಲಸ ಸರಿ , ನಾನು  ಅದನ್ನೆ ಮಾಡಿದರೆ  ತಪ್ಪಾ?. ಎಂಬುದು ಅವರ ವಾದ. ಅದೂ ಅಲ್ಲದೆ ಪ್ರಿನ್ಸಿಪಾಲರು ಬರಿ ಪ್ರಭಾರಿ ಅಧಿಕಾರಿ. “ತೀನ್ ದಿನ  ಕಾ ಸುಲ್ತಾನ್ “
ಯಾವುದೆ ಒಂದು ಇತ್ಯರ್ಥ ವಾಗುವ ವರಗೆ ತಾವು ಸುಮ್ಮನಿರುವುದಿಲ್ಲ ಎಂದು ಶಿಕ್ಷಕರೆದರು ಸಮರ್ಥಿಸಿಕೊಂಡರು.ಇನ್ನು ಅಸಭ್ಯ ಮತ್ತು ಅವಾಚ್ಯ ಪದಗಳ ಬಳಕೆಯಂತೂ ತಡೆಯಿಲ್ಲದೆ ಸಾಗಿತ್ತು.
ಇದ್ದುದರಲ್ಲೆ ಜವಾನರು ಸಮಾಧಾನ ಮಾಡಲು ಪ್ರಯತ್ನಿಸಿದರು. ನೀವು ಜಾತಿ ತಪ್ಪಿ ಹುಟ್ಟಿರುವಿರಿ. ಇದು ನನಗಾದ ಅವಮಾನವಲ್ಲ ನಮ್ಮವರಿಗೆಲ್ಲ ಆದ ಅವಮಾನ ಎಂದು ಸಮಸ್ಯೆಯನ್ನು ಸಾರ್ವತ್ರೀಕರಣ ಗೊಳಿಸಲು ಯತ್ನಿಸಿದರು
 ಎಲ್ಲ ಮಕ್ಕಳನ್ನೂ ತಮ್ಮ ತಮ್ಮ ತರಗತಿಗಳಿಗೆ ಹೋಗುವಂತೆ ತಿಳಿಸಿದೆ. ಶಿಕ್ಷಕರನ್ನೂ ಪಾಠ ಪ್ರವಚನದಲ್ಲಿ ತೊಡಗುವಂತೆ ವಿನಂತಿಸಲಾಯಿತು. ಅವರೆಲ್ಲ ಹೋದ ಮೇಲೂ ಇವರ ಜೋರು ಒಂದು ತಾಸಿನ ತನಕ ಹಾಗೆಯೆ ಸಾಗಿತು.
ನಾನು ಏನೂ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ. ಮಾತನಾಡಿದರೆ ಕೈ ಕೈ ಮಿಲಾಯಿಸುವ ಸಂಭವವೂ ಇತ್ತು.
 ನಂತರ ಹಿರಿಯ ಸಹಾಯಕರನ್ನು ಕರೆದು ಸಲಹೆ ಕೇಳಿದೆ.
ಅವರು ಗಾಬರಿ ಗೊಂಡಿದ್ದರು.  “ಈ ಮನುಷ್ಯ ಒರಟ. ಸ್ಥಳಿಯ. ಪ್ರಬಲ  ಕೋಮಿಗೆ ಸೇರಿದವನು. ಯಾವುದಕ್ಕೂ ಹೇಸದವನು.ನೀವೋ ದೂರದಿಂದ ಬಂದಿದ್ದೀರಿ.ನಿಮ್ಮ ಬೆಂಬಲಕ್ಕೆ ಯಾರೂ ಬರುವುದಿಲ್ಲ. ಸುಮ್ಮನೆ ಇದ್ದುಬಿಡಿ. ಏನಾದರೂ ಒದರಿಕೊಳ್ಳಲಿ . ಕೊನೆಗೆ ತಾನೆ ಸುಮ್ಮನಾಗುವನು. . ಏನೂ ಆಗಿಲ್ಲ ಎನ್ನುವಂತೆ ಇದ್ದರೆ ತನ್ನಿಂದ ತಾನೆ  ಸರಿಯಾಗುವುದು’ ,ತಮ್ಮಲ್ಲಿನ ಹೆದರಿಕೆಯನ್ನು ನನಗೂ ಹರಡವಂತೆ ಹೇಳಿದರು.
ನಾನು ಮಧ್ಯಾಹ್ನದ ತನಕ ಯೋಚಿಸಿದೆ. ಅಷ್ಟರಲ್ಲಿ ಅವರು ಜಾಗ ಖಾಲಿ ಮಾಡಿದ್ದರು ಮಹಿಳಾ ಸಿಬ್ಬಂದಿಯಂತೂ ಕಂಗಾಲಾಗಿದ್ದರು.
 ಇದು ನನಗಾದ ಅವಮಾನವೆಂದು ಕೊಳ್ಳಲಿಲ್ಲ. ಇದು ಸಂಸ್ಥೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹೊಣೆ ನನ್ನದಾಗಿತ್ತು. ಅಲ್ಲದೆ ಆ ಹೆಣ್ಣು ಮಕ್ಕಳು ತಮಗಾದ ಕಿರುಕಳವನ್ನು ಹೇಳಿಕೊಂಡು ಕಣ್ಣೀರು ಹಾಕಿದ್ದರು. ಈಗ ಅವರ ದುರ್ವತನೆಯನ್ನು ಕಡೆಗಣಿಸಿದರೆ, ಅವರ ದುಸ್ಸಾಹಸಕ್ಕೆ ಪುಟಸಿಗುತಿತ್ತು.ಒಂದು ಮಾತಂತೂ ನಿಜ. ಅವರು ದುಡುಕಿ ನನ್ನ ಮೇಲೆ ಹಲ್ಲೆ ಮಾಡಿದರೂ ಯಾರೂ ರಕ್ಷಣೆಗೆ ಬರುತ್ತಿರಲಿಲ್ಲ.
ಕೊನೆಗೆ ಒಂದು ತೀರ್ಮಾನಕ್ಕೆ ಬಂದೆ. ನಡೆದ ಘಟನೆಯನ್ನು ಅಧಿಕೃತವಾಗಿ  ಎಲ್ಲ ಸಿಬ್ಬಂದಿಯ ಸಭೆಯಲ್ಲಿ ಚರ್ಚಿಸಿ ಅವರ ಸಲಹೆಯಂತೆ ಮುಂದುವರಿಯಲು ತೀರ್ಮಾನಿಸಿ ಶಿಕ್ಷಕರ ಸಭೆಯನ್ನು ಕರೆಯಲಾಯಿತು.
 ಸಭೆ ಸೇರಿತು. ಎಲ್ಲರೂ ಬಂದು ಕುಳಿತರು ಆ ವ್ಯಕ್ತಿ ಸುತ್ತೋಲೆ ನೋಡಿದ್ದರೂ ಸಭೆಗೆ ಬರಲಿಲ್ಲ. ಸಭೆಯಲ್ಲಿ ಶ್ಮಶಾನ ಮೌನ.ನಾನು ವಿವರಿಸುವ ಅಗತ್ಯವೆ ಇರಲಿಲ್ಲ. ಎಲ್ಲರೂ ಪ್ರತ್ಯಕ್ಷ ದರ್ಶಿಗಳಾಗಿದ್ದರು. ಆದರೆ ಯಾರೂ ನಡೆದ ಘಟನೆಯನ್ನು ಖಂಡಿಸಲು ಅದು ಸರಿಯಲ್ಲ ಎಂದು ಹೇಳುವ ಧೈರ್ಯ ತೋರಲಿಲ್ಲ. ಸುಮ್ಮನೆ ತಲೆ ತಗ್ಗಿಸಿಕುಳಿತಿದ್ದರು.
 ನಾನೂ ಅವರಿಂದ ಏನನ್ನೂ ನಿರೀಕ್ಷಿಸುವಂತಿರಲಿಲ್ಲ. ಆದ್ದರಿಂದ ಹೆಚ್ಚು ಮಾತನಾಡಲಿಲ್ಲ ಆದರೆ ಈ ದಿನ ನೆಡೆದ ಘಟನೆಯನ್ನು ವಿವರವನ್ನು ಅದನ್ನು ಚರ್ಚಿಸಲು ಕರೆದ ಸಭೆಗೂ ಅವರು ಬಂದಿಲ್ಲ ಎಂಬುದನ್ನು ದಾಖಲು ಮಾಡಲಾಯಿತು. ಮಕ್ಕಳ ಏಳಿಗೆಗೆ ಮಾರಕವಾಗುವ ಈ  ಘಟನೆಯನ್ನು ಖಂಡಿಸಲಾಯಿತು.ಸಭಾ  ನಢೆವಳಿಯ ಪುಸ್ತಕವನ್ನು ಭದ್ರವಾಗಿಟ್ಟುಕೊಂಡು ಹಿರಿಯ ಸಹಾಯಕರೊಡನೆ ಅಂದು ಸಂಜೆ ಭಾರತಿ ನಗರದ ಆರಕ್ಷಕ ಠಾಣೆಗೆ ಹೋಗಿ ದೂರು ನೀಡಲಾಯಿತು. ಅಲ್ಲಿ ವೈಯುಕ್ತಿಕ ವಾಗಿ ಏನನ್ನೂ ನಮೂದಿಸದೆ ಶಾಂತಿ ಭಂಗವಾಗದಂತೆ ಕ್ರಮ  ತೆಗೆದುಕೊಳ್ಳಲು  ಕೋರಲಾಯಿತು.
 ಮಾರನೆ ದಿನವೂ ಆ ವ್ಯಕ್ತಿ ಗುರ್‌ ಎನ್ನತ್ತಲೆ  ಇದ್ದ. ಕೈಕಾಲು ಮುರಿಯುವ ಮಾತು ಸಿಬ್ಬಂದಿಯ ಎದುರು ಸಾಗಿತ್ತು. ನಾನು ಮಧ್ಯಾಹ್ನದ ಮೇಲೆಗೆ ವಿವರವಾದ ವರದಿಯನ್ನು ಸಿದ್ಧಮಾಡಿ ಉಪನಿರ್ದೇಶಕರು ಮತ್ತು ಸಹ ನಿರ್ದೇಶಕರಿಗೆ ರವಾನಿಸಿದೆ
 ಬೆಟ್ಟಯ್ಯನವರು ತಮ್ಮ  ವಾಗ್ದಾಳಿ ಕಡಿಮೆ ಮಾಡಿದ್ದರು ಅವರ ಯಾವುದೆ ಮಾತಿಗೂ ಪ್ರತಿಪ್ತಿಕ್ರಿಯೆ ನೀಡದಿರುವುದು ಅವರಿಗೆ ನಿರಾಸೆ ಉಂಟುಮಾಡಿತ್ತು.. ಅದೃಷ್ಟಕ್ಕೆ ಬೇರೆ ಯಾವ ಸಹೋದ್ಯೋಗಿಯೂ ಅವರಿಗೆ ಒತ್ತಾಸೆ ನೀಡಲಿಲ್ಲ.  ಮೂರೆ ದಿನದಲ್ಲಿ ಎಲ್ಲ ತಣ್ಣಗಾಯಿತು . ಬಹಶಃ ಆರಕ್ಷಕರು ಅವರನ್ನು ಕರೆದು ಎಚ್ಚರಿಸಿರಬಹುದು. ಒಂದೆ ವಾರದಲ್ಲಿ ಸಹ ನಿರ್ದೇಶಕರಿಂದ ಅವರಿಗೆ ವಿವರಣೆ ಕೇಳಿ  ನೋಟೀಸು  ಬಂದಾಗ ಅವರು ಮೆತ್ತಗಾದರು. ನಮ್ಮ ಕಾಲೇಜನ್ನು ತಂದವರಾದ , ಜಿಲ್ಲಾ ಪಂಚಾಯತ್‌ ಸದಸ್ಯರ ಬಂಗಲೆ ನಮ್ಮ ಕಾಲೇಜಿನ ಪಕ್ಕದಲ್ಲೆ ಇತ್ತು.ಅವರು ಬಹು ಪ್ರಭಾವಶಾಲಿ.. ಮೇಲಾಗಿ ಅವರ ಹೆಂಡತಿಯ ತಮ್ಮ ಮಂತ್ರಿಗಳು. ಆ ಭಾಗದಲ್ಲಿ ಅವರ ಮಾತೆ ವೇದ ವಾಕ್ಯ. ಹಿಂದಿನವರೆಲ್ಲ ಪ್ರತಿಯೊಂದಕ್ಕೂ ಅವರಲ್ಲಿಗೆ ಹೋಗುವರು. ಅವರು ನೀಡಿದ ತೀರ್ಮಾನವೆ  ಅಂತಿಮ. ನಾನು ಈ ಸಮಸ್ಯೆಯನ್ನು ಅವರ  ಗಮನಕ್ಕೆ ತರಲೆಇಲ್ಲ.ಮತ್ತು ಅವರಿಂದ ಯಾವ ಸಹಾಯವನ್ನು ಬಯಸಲಿಲ್ಲ ಇದು ನನಗೆ ವೈಯುಕ್ತಿಕ ಸಮಸ್ಯೆ ಎನಿಸಲಿಲ್ಲ. ಇದು ಸಂಸ್ಥೆಯ ಸಮಸ್ಯೆ ಅದಕ್ಕೆ ನಾನೆ ಸೂಕ್ತ  ಪರಿಹಾರ ಕಂಡುಕೊಳ್ಳ ಬೇಕು ಎಂದು ನನ್ನ ನಿಲುವು.  ಹೊರಗಿನವರ  ಹಸ್ತಕ್ಷೇಪದ ಅಗತ್ಯ ಇರಲಿಲ್ಲ. ಮೇಲಾಗಿ ಅವರು ನನ್ನ ಕೆಲಸದ ಬಗ್ಗ ಮೆಚ್ಚುಗೆ ಹೊಂದಿದ್ದರು. ಅಲ್ಲದ ಈಗಾಗಲೆ ಮುಂಬಡ್ತಿ ಯ ಅಂಚಿನಲ್ಲಿರುವ ನನ್ನನ್ನೆ ಇದೆ  ಕಾಲೇಜಿಗೆ ಹಾಕಬೇಕೆಂದು ಮಂತ್ರಿಗಳಿಂದ ಮಿನಿಟ್ಸ್ ಹಾಕಿಸಿದ್ದರಂತೆ. ನನಗೆ ಯಾವದೆ ನಿರ್ಧಿಷ್ಟ  ಜಾಗದ  ಬಯಕೆ ಇರಲಿಲ್ಲ. ಊರು ಬಿಟ್ಟು ಆರು ನೂರು ಮೈಲು ಬಂದವನಿಗೆ ಯಾವ  ಊರಾದರೇನು. ಎಲ್ಲ ಊರು ನಮ್ಮವೆ.
 ಬಹಶಃ ಆ ವ್ಯಕ್ತಿ ಯ ಅದೃಷ್ಟ ಗಟ್ಟಿಇರಬಹುದು. ನನಗೆ ಮುಂಬಡ್ತಿಯ ಆದೇಶ ಬಂದಿತು . ನನ್ನನ್ನು ಅದೆ ತಾಲೂಕು ಕೇಂದ್ರದ ದೊಡ್ಡ  ಕಾಲೇಜಿಗೆ  ನೇಮಿಸಿದ್ದರು. ಅದು ಮೈಸೂರಿಗೆ ನಿತ್ಯ ಓಡಾಡ ಬಹುದಾದ  ಸ್ಥಳ. ಬಹು ಬೇಡಿಕೆ ಇರುವ ಜಾಗ. ಆದರೆ ಒಂದು ವಿಶೇಷ ಕಾರಣಕ್ಕೆ ನನಗೆ ನೀಡಿದ್ದರು. ಅದು ಸಮಸ್ಯೆಯಸಾಗರ.  ನೀರಲ್ಲಿ ಮುಳುಗಿದವನಿಗೆ ಚಳಿಏನು ಮಳೆಏನು ಎಂದು ಹೊರಡಲುಸಿದ್ದನಾದೆ. ಒಂದು ದಿನ ಸಂಜೆ ಸದರಿ ವ್ಯಕ್ತಿಯು ಜಿಲ್ಲಾ ಪಂಚಾಯತ್‌ ಸದಸ್ಯರೊಂದಿಗೆ ನಮ್ಮ ಮನೆಯ ಹತ್ತಿರ ಬಂದರು.ಆ ನಾಯಕರು  ಅವರ ಕಾಲೇಜಿನಲ್ಲಿಯೆ  ನನಗೆ ಸಿಗದಕ್ಕೆ ವಿಷಾದಿಸಿದರು. ಹಾಗೆಯೆ ಹೋಗುವ ಮುಂದೆ  ಆ ವ್ಯಕ್ತಿಗೆ ಮುಂದೆ ತೊಂಯೊಂದರೆಯಾಗದಂತೆ ನೋಡಿಕೊಳ್ಳ ಬೇಕೆಂದು ವಿನಂತಿಸಿದರು.ಮಾತೆತ್ತಿದರೆ ಗುಡುಗುವ  ಅವರು ಮೃದುವಾಗಿ ಮಾತನಾಡಿರುವುದು ಅದೆ ಮೊದಲ ಸಲ . ನನಗೂ ಹೋಗು ವಾಗಲೂ ಹಠ ಬೇಡ ಎನಿಸಿತು. ಪೋಲೀಸರಿಗೆ ಇದನ್ನು ಕೈ ಬಿಡುವಂತೆ ಅವರೆ ಹೇಳಲು ತಿಳಿಸಿದೆ. ಇನ್ನು ಇಲಾಖೆಯಯಲ್ಲಿ ಈ ವಿಷಯವನ್ನು ನಾನು ಮುಂದುವರಿಸುವುದಿಲ್ಲ ಎಂದು ಭರವಸೆ ಕೊಟ್ಟೆ. ಅವರು ಗುತ್ತಿಗೆ ನೌಕರರಾದುದರಿಂದ ವಿಚಾರಣೆ ನಡೆದರೆ ಕಷ್ಟವಾಗತಿತ್ತು ಅವರ ಮೇಲಿನ ಅಶಿಸ್ತಿನ ಆರೋಪ ಸಾಬೀತಾಗುತಿತ್ತು.  ಹೊಸ ಹೊಣೆ ಹೊರಲು ಹೊರಟಿರುವ ನನಗೆ ಹಳೆಯ ಕೊಳೆ ಏಕೆ ಎಂದು ಕೊಂಡುಅವರ ಮಾತಿಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಆದರೆ ಈ ವಿಷಯದ ಎಲ್ಲ ದಾಖಲೆಗಳನ್ನು ಹೋಗುವಾಗ ನನ್ನ ವಶಕ್ಕೆ ತೆಗೆದು ಕೊಂಡೆ.
ಅಂತೂ ಎಲ್ಲವೂ ಸುಖಾಂತ್ಯವಾಯಿತು. ಮೂರು ನಾಲಕ್ಕು ವರ್ಷ ವಾಗಿರಬಹುದು ನಂತರ ಆ ವ್ಯಕ್ತಿಯ ಹೆಸರು ಪತ್ರಿಕೆಯಲ್ಲಿ ಬಂದಿತು . ಬೇರೊಂದು ಶಾಲೆಯಲ್ಲಿ  ಇದೆ ಅರೋಪದ ಮೇಲೆ ಅಮಾನತ್ತಾಗಿದ್ದರು   “ಹೀನ ಸುಳಿ ಏನು ಮಾಡಿದರೂ  ಹೋಗದು”  ಎಂಬ ಗಾದೆ ನೆನಪಿಗೆ ಬಂದಿತು




No comments:

Post a Comment