Sunday, December 30, 2012

ಅಮೇರಿಕಾ ಅನುಭವ-8



ಹಣವಂತ ಹಂಡತಿ ಬೇಕು
 ಜಾಹಿರಾತಿನ ಮಹಿಮೆ ಜಗತ್ತಿನಲ್ಲಿ ಅರಿಯದವರಿಲ್ಲ. ಮಾರುಕಟ್ಟೆಯಲ್ಲಿ ಉತ್ಪನ್ನವನ್ನು ಮಾರಲು ಜಾಹಿರಾತಿಗಾಗಿ ಅದರ ಉತ್ಪಾದನಾವೆಚ್ಚದ ಅರ್ಧಕ್ಕಿಂತ ಹೆಚ್ಚು ಖರ್ಚು ಮಾಡುವವರಿದ್ದಾರೆ. ಜಾಹಿರಾತಿನ ಸಹಾಯದಿಂದ ಕೊಳ್ಳುವವರಿದ್ದರೆ ಏನು ಬೇಕಾದರೂ ಮಾರಲುಸಿದ್ಧ. ಎಫೆಲ್‌ ಟವರ್‌ ಮಾರಿದ ಕುಖ್ಯಾತನ ಕಥೆ ಎಲ್ಲರಿಗೂ ಗೊತ್ತಿರಬಹುದು.ಪತ್ರಿಕೆ, ಟಿವಿ ಸಿನಿಮಾ ಮಾದ್ಯಮಗಳು ಬಂದ ಮೇಲಂತೂ ಜಾಹಿರಾತಿನ ವೈವಿಧ್ಯವನ್ನು ವರ್ಣಿಸುವುದು ಅಸದಳ. ಆದರೆ ನ್ಯೂಯಾರ್ಕನಲ್ಲಿ ಒಂದು ವಿಚಿತ್ರ ಜಾಹಿರಾತು ನೋಡಿದೆ. ಅದು ಕಾಸು ಖರ್ಚಿಲ್ಲದ ವಿಧಾನ.. ಮಾಲು ಹೇಗಿದೆ ಎಂದು ಚಿಂತೆ ಮಾಡಬೇಕಿಲ್ಲ. ಕಣ್ಣೆದುರೆ ಕಾಣುವುದು. ಯಾವ ಅನುಮಾನವಿದ್ದರೂ ಅಲ್ಲಿಯೆ ಪರಿಹಾರ. ಆದರೆ ಅದು  ಮಾರಾಟ ತಂತ್ರವಲ್ಲ ತನಗೆ ಬೇಕಾದ್ದನ್ನು ಪಡೆಯುವ ಮಂತ್ರ.
ಇಲ್ಲೊಬ್ಬ  ೫೬ ವರ್ಷದ ವ್ಯಕ್ತಿಗೆ ಮದುವೆಯ ಅಗತ್ಯಬಿದ್ದಿದೆ. ಅರ್ಧ ವಯಸ್ಸುಕಳೆದ ಮೇಲೆ ಸಂಗಾತಿಯಂದಿಗೆ  ನೆಮ್ಮದಿಯ ಜೀವನ ಕಳೆಯಬಯಸಿರುವ..ಹದಿಹರೆಯದಲ್ಲಿ ಮಜವಾಗಿ ಜೀವನ ಕಳೆದ. ಮೈ ಮುರಿಯೆ ವಾರದವರೆಗೆ ದುಡಿದ. ವಾರಾಂತ್ಯದಲ್ಲಿ ಮೋಜು ಉಡಾಯಿಸಿದ.ಈಗಲೂ ಅದೋ ಇದೂ ಕೆಲಸ ಮಾಡಿ ಸಂಪಾದನೆ ಮಾಡುವನು. ಆದರೆ ಮಧ್ಯ ವಯಸ್ಸು ಮುಟ್ಟಿದ ಮೇಲೆ ಒಂಟಿತನ ಕಾಡಿದೆ.  ತಾನೊಬ್ಬನೆ ಬದುಕಲು ತೊಂದರೆ ಏನಿಲ್ಲ. ನೆಮ್ಮದಿ ಬೇಕೆನಿಸಿದೆ. ಸಂಗಾತಿ ಬೇಕು ನೆಮ್ಮದಿಯ ಬದುಕು ಬೇಕು ಅದಕ್ಕೆ ಅಗತ್ಯವಾದಷ್ಟು ಆದಾಯ ಇಲ್ಲ ಅದಕ್ಕೆ ಅವನು ಸೂಕ್ತ ಜತೆ ಸಿಕ್ಕರೆ ಮಾತ್ರ ಮದುವೆಯಾಗಲು ನಿರ್ಧರಿಸಿದ. ಅದಕ್ಕೇನು ಮಾಡುವುದು ? . ಯಾವುದಾದರೂ ಪತ್ರಿಕೆಯಲ್ಲಿ ಜಾಹಿರಾತು ಕೊಡಬಹುದು. ಅದು ತುಸು ಖರ್ಚಿನ ಬಾಬ್ತು.  ಇಲ್ಲವಾದರೆ ಸುದ್ಧಿ ಮಾದ್ಯಮಗಳ ಮೂಲಕ ತನ್ನ ಇರಾದೆ ತಿಳಿಸಬಹುದು.ಅದೂ ಬೇಡ ಎಂದರೆ ಸಂಗಾತಿಗಳನ್ನು ಒಂದು ಗೂಡಿಸುವ ಮೆಟ್ರಿಮೊನಿ.ಕಾಲಮ್‌ಗಳಲ್ಲಿ ಅಥವ ಸಂಘಟನೆಗಳಲ್ಲಿ ನೋಂದಾವಣಿ ಮಾಡಬಹುದು. ಭಾರತದಲ್ಲಿನಂತೆ ಇಲ್ಲೂ  ವಧೂ ವರ ಹುಡುಕುವ ಅನೇಕ ಸಂಘ ಸಂಸ್ಥೆಗಳಿವೆ.ಇನ್ನೂ ಕೆಲವರು ತಮ್ಮ ಬಂಧು ಬಳಗ , ಗೆಳೆಯ ಗೆಳತಿಯರ ಮೂಲಕವೂ ಸಂಗಾತಿಯನ್ನು ಹುಡುಕುವರು. ಆದರೆ ಈ ವ್ಯಕ್ತಿ ಒಂದು ವಿಭಿನ್ನ ಹಾದಿ ಹಿಡಿದ.
ತನ್ನ ಹೃದಯದ ಅನಿಸಿಕೆಯ ರಹಸ್ಯವನ್ನು ತನ್ನ ಎದೆಯ ಮೇಲೆ ಬೆನ್ನ ಮೇಲೆ ಬಹಿರಂಗ ಪಡಿಸಿದ., ಈ ವ್ಯಕ್ತಿಯ ನ್ಯೂಯಾರ್ಕಗೆ ಹತ್ತಿರದಲ್ಲೆ ಒಂದೆ ಗಂಟೆ ಯಲ್ಲಿ ತಲುಪಬಹದಾದ ನ್ಯೂ ಜರ್ಸಿಯ ಪಟ್ಟಣದಲ್ಲಿರುವ ಎರಡು ಬೆಡ್ ರೂಮಿನ ಮನೆಯಲ್ಲಿ   ಅವನ ವಾಸ.ಅವನ ಹೆಸರು ರಾಬರ್ಟ ಡಾರ್ಲಿಂಗ್‌.ಅವನಿಗೆ ಈಗ  ಡಾರ್ಲಿಂಗ್‌ ಎಂದು ಕರೆಯುವ ಶಾಶ್ವತ ಸಂಗಾತಿ ಜೊತೆಗೆ ಇರಬೇಕೆನಿಸಿದೆ.ಅದಕ್ಕೆ, ತನ್ನ ಶಾಶ್ವತ ಸ್ವೀಟ್‌ ಹಾರ್ಟ ಅನ್ನು  ಹುಡುಕಲು ಮುಂದಾದ. ಆದರೆ ಅವನು ಬಹು ವ್ಯವಹಾರಸ್ಥ. ಬರಿ ಹೆಣ್ಣು ಮಾತ್ರ ದೊರೆತರೆ ಸಾಲದು. ಏಕೆಂದರೆ ನೆಮ್ಮದಿಯ ಜೀವನ ನಡೆಸಲು ಹೊನ್ನೂ ಬೇಕಲ್ಲ. ಅದಕ್ಕೆ ಹಣವಂತ ಹೆಂಡತಿಯೆ ಬೇಕು ಎಂದೇ ಅವನ ಬೇಡಿಕೆ. ವಿನೈಲ್‌ ಹಾಳೆಯ ಮೇಲೆ ತನ್ನ ಹೆಸರು, ವಯಸ್ಸು, ಒಂಟಿ, ಮದುವೆಯಾಗಿಲ್ಲ, ಮಕ್ಕಳೂ ಇಲ್ಲ( ಅಮೇರಿಕಾದಲ್ಲಿ  ಮಕ್ಕಳಾಗಲು ಮದುವೆಯಾಗಿರಲೇ ಬೇಕೆಂಬ ಕಡ್ಡಾಯವೇನೂ ಇಲ್ಲ) ತನ್ನ ಹವ್ಯಾಸ, ದೂರವಾಣಿ ಸಂಖ್ಯೆ , ವಿಳಾಸ,   ಎಲ್ಲವನ್ನೂ ಸ್ಪಷ್ಟವಾಗಿ ಬರೆದ. ಮೇಲೆ ದಪ್ಪ ಅಕ್ಷರದಲ್ಲಿ ಹೇ! ಹುಡುಗಿಯರೆ ಎಂದು ಸಂಬೋಧನೆ ಅವನು ನ್ಯೂಜರ್ಸಿಯ ಬ್ರಾಡಲೆ ಟೌನ್‌ ನಿವಾಸಿ, ಎರಡು ಬೆಡ್‌ರೂಮ್‌ ಸ್ವಂತ ಮನೆಯಿದೆ. ಈವರೆಗೆ ಕೆಲಸದಲ್ಲಿದ್ದ. ಈಗ ನಿರುದ್ಯೋಗಿ. ಈಗ ಕೈಗೆ ಕೆಲಸ ಮನೆಗೆ ಸಂಗಾತಿ ಅರಸಿ ಹೊರಟಿರುವ. ನ್ಯೂ ಯಾರ್ಕನಲ್ಲೂ ಮೆಟ್ರಿಮೋನಿಯಲ್‌ಬ್ಯೂರೋಗಳಿಗೆ ಬರವಿಲ್ಲ. ಆದರೆ ಇವನು ಅಲ್ಲಿ ನೊಂದಾಯಿಸಲು ಸಿದ್ದನಿಲ್ಲ. ಅವರ ಪ್ರಕಾರ ಈ ರೀತಿಎದೆಗೆ ಬೋರ್ಡು ತಗುಲಿಸಿ ಕೊಂಡುತಿರುಗಿದರೆ ಜೊತೆಗಾತಿಸಿಗುವ ಸಂಭವ ಕಡಿಮೆ. ಇನ್ನುಹಣವಂತ ಮಹಈಳೆಯಂತೂ ಹತ್ತಿರ ಸುಳಿಯುವುದಿಲ್ಲ.  ಅವರು ತಮಗೆ ಸರಿ ಸಮಾನ ಸಾಮಾಜಿಕ ಸ್ಥಾನದಲ್ಲಿರುವವರನ್ನೇ ಬಯಸುವರು.ಅಲ್ಲದೆ ಆಗಲೆ ಅವನ ವಯಸ್ಸು ನಲವತ್ತರ ಮೇಲಿದೆ. ಅವನು ತನ್ನ ಹುಡುಕುವ ವಿಧಾನ ಬದಲಿಸಿದರೆ ಸಂಗಾತಿ ಸಿಗಬಹುದು ಎಂದುಕೊಂಡ.ಅದಕ್ಕೆ ವಿನೂತನ ವಾದ ಜಾಹಿರಾತಿಗೆ ಮೊರೆಹೋದ.
“ನನಗೆ ಹಣವಂತ ಹೆಂಡತಿಯ ಅಗತ್ಯವಿದೆ  . ಅತಿ ಶ್ರೀಮಂತಳಾಗಿಲ್ಲದಿದ್ದರೂ ಪರವಾಇಲ್ಲ ಇಬ್ಬರ ಸುಖಜೀವನಕ್ಕೆ ಸಾಕಾಗುವಷ್ಟು ದುಡಿಮೆ ಇದ್ದರೂ ಪರಿಗಣಿಸಲಾಗುವುದು, ಎಂಬ ಕೊಸರು ಬೇರೆ. ಅಮೇರಿಕಾದ ಅದರಲ್ಲೂ ನ್ಯೂಯಾರ್ಕನ ಲೆಕ್ಕದಲ್ಲಿ ಅವನ ನಿರೀಕ್ಷೆ ಅತಿಯಾಗಿ ಇರಲಿಲ್ಲ. ಒಂದೂವರೆ ಲಕ್ಷ ಡಾಲರು ಸಂಪತ್ತು ಇದ್ದರೆ ಸಾಕು”  ಎಂದು ತಿಳಿಸಿದ್ದ.ತನ್ನ ಸಂಪರ್ಕ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳನ್ನೂ ನಮೂದಿದ.
ಈ ಎಲ್ಲ ವಿವರಗಳನ್ನು ಬಣ್ಣ ಬಣ್ಣ ದ ಅಕ್ಷರಗಳಲ್ಲಿ ಬರೆದ ಪ್ಳಾಸ್ಟಿಕ್‌ ಬೋರ್ಡನ್ನು ತನ್ನ ಎದೆ ಮತ್ತು ಬೆನ್ನ ಮೇಲೆ ಹಾಕಿಕೊಂಡು ನ್ಯೂಯಾರ್ಕನಲ್ಲಿ ವಾರಾಂತ್ಯದ ಎರಡು ದಿನ ,ಮೆಟ್ರೊಮ್ಯೂಜಿಯಂ, ಕೊಲಂಬಸ್‌ ಸರ್ಕಲ್, ವಾಲ್‌ಸ್ಟ್ರೀಟ್‌ , ಪಬ್ಲಿಕ್‌ಲೈಬ್ರರಿ ಹಾಗೂ ಇತರ ಜನ ನಿಬಿಡ ಪ್ರದೇಶಗಳಲ್ಲಿ ಸುತ್ತಾಡುತ್ತ ಇರುವನು. ಕಳೆದ ಹತ್ತು ವರ್ಷದಿಂದ ಇದೆ ವಿಧಾನ ಅನುಸರಿಸಿದರೂ ಅವನಿಗೆ ಇನ್ನೂ ಕಂಕಣ ಬಲ ಕೂಡಿ ಬಂದಿಲ್ಲ. ಹುಡುಗೆಯ ಅಂದದ ಬಗ್ಗೆ ಅವನ ಆಸೆ ಅತಿಯಾಗಿಲ್ಲ. ಅಲ್ಲಿ ಜಾತಿ ಮತದ ಗೋಜು ಇಲ್ಲವೆ ಇಲ್ಲ. ಅಪ್ಪ ಅಮ್ಮ ಕೌಟುಂಬಿಕ ಹಿನ್ನೆಲೆ ಯಾರಿಗೂ ಬೇಡ. ಸಾಮಾಜಿಕ ಭದ್ರತೆ ಸಂಖ್ಯೆ ಇದ್ದರೆ ಸಾಕು. ಪೋಲಿಸರಲ್ಲಿ ಅವರ ಜಾತಕ ಇರಬಾರದು..  ಹುಡುಗಿಗೆ ತನ್ನ ವಯಸ್ಸಿನ ಈಚೆ ಆಚೆ ಐದುವರ್ಷ ಇದ್ದರೂ ಸರಿ,. ಆದರೆ ಸದಾ ನಗುತ್ತಿರುವನಗಿಸುವ ಮತ್ತು ಸಂಗೀತ ಕೇಳುತ್ತಾ ಮೈಮರೆವ ಭಾವ ಜೀವಿಯೆ ಆಗ ಬೇಕೆಂದು ಅವನ ಬಯಕೆ.
ಅವನ ಪ್ರಯತ್ನಕ್ಕೆ ಪ್ರತಿಕ್ರಿಯೆ ಇಲ್ಲ ಅಂತ ಏನೂ ಇಲ್ಲ. ಅನೇಕ ಆಧುನಿಕ ಮಹಿಳೆಯರು ಇವನ ಹೃದಯದಲ್ಲಿನ ಗುಟ್ಟನ್ನು ಅವನ ಎದೆಯ ಮೇಲೆಯೇ ಬರೆದುಕೊಂಡಿರುವುದನ್ನು  ನೋಡಿ ಮೆಚ್ಚಿದ್ದಾರೆ. ಕೆಲವರು ಅವನ ಜೊತೆ ಫೋಟೋ ಸಹಾ ತೆಗೆಸಿಕೊಂಡಿದ್ದಾರೆ. ಅವನ ಸಧೃಡ ಮೈಕಟ್ಟು , ತಲೆತುಂಬ ಇರುವ ಕೆಂಚು ಕೂದಲು ಸುಕ್ಕು ಇಲ್ಲದ  ಮುಖ ಮೆಚ್ಚಿದವರು ಇದ್ದಾರೆ ಆದರೆ ಅವನಿಗೆ  ಎಲ್ಲ ಶರತ್ತುಗಳನ್ನೂ ಪೂರೈಸಬಲ್ಲ ಮಹಿಳೆ ಮಾತ್ರ ಸಿಕ್ಕಿಲ್ಲ. ಒಂದು ಸಾರಿ ಹೇಳಿ ಮಾಡಿಸಿದಂಥಹ ಹೆಣ್ಣು ಇದೆ ಎಂದು ಯಾರೋ ಒಬ್ಬರು ಸಂಪರ್ಕಿಸಿದರು. ಇಬ್ಬರೂ ಭೇಟಿಯಾದರು.ಎಲ್ಲ ಅಂದುಕೊಂಡಂತೆ ಇತ್ತು. ಮದುವೆಗೆ ದಿನ ನಿರ್ಧರಿಸುವದು ಮಾತ್ರ ಬಾಕಿ.ಆಗ ಗೊತ್ತಾಯಿತು  ಅಮೇರಿಕಾದ ನಾಗರೀಕಳು ಅಲ್ಲ. ಅವಳಿಗೆ ಗ್ರೀನ್‌ ಕಾರ್ಡು ಬೇಕೆಂದು ಇವನನ್ನು ಮದುವೆಯಾಗಲು ಸಿದ್ಧಳಾಗಿದ್ದಳು. ಆದರೆ ರಾಬರ್ಟ ಒಂದೆ ಮಾತಿನಲ್ಲಿ ಒಲ್ಲೆ ಎಂದ . ಅವಳು ಪ್ರೀತಿಯ , ನೆಮ್ಮದಿಯ ಸಂಸಾರಕ್ಕಾಗಿ ಮದುವೆಯಾಗ ಬೇಕೇ ಹೊರತೂ ಅವನಿಂದ ಗ್ರೀನ್‌ ಕಾರ್ಡು ಪಡೆಯುವ ಆಮಿಷಕ್ಕೆ ಒಳಗಾಗಿ ಮದುವೆಗೆ ಸಿದ್ಧವಾಗಬಾರದು ಎಂಬುದು ಅವನ ಸಿದ್ಧಾಂತ. ಅದರಿಂದ ಇಬ್ಬರಿಗೂ ನೆಮ್ಮದಿ ಇರದು. ಹಾಗಾಗಿ ಅವಳ  ಜತೆ  ಮದುವೆಯಾಗುವುದು ಅವನಿಗೆ ಒಪ್ಪಿಗೆಯಾಗಲಿಲ್ಲ. ಬೇಡ ಎಂದು ನಿರಾಕರಿಸಿದ.ಇದಲ್ಲದೆ ಇನ್ನೂ ಒಂದೆರಡು ಪ್ರಸ್ತಾಪಗಳು ಬಂದವು ಆದರೆ ಅವು  ಸಲಿಂಗ ವಿವಾಹದ ಪ್ರಸ್ತಾವನೆಗಳು.. ಅವನು ಅದರ ಕಟ್ಟಾ ವಿರೋಧಿ.ಮದುವೆಯಾಗದಿದ್ದರೂ ಚಿಂತೆ ಇಲ್ಲ ಆ ಸಂಬಂಧಗಳು ಬೇಡವೆ ಬೇಡ  ಎಂದ.
 ನ್ಯೂಯಾರ್ಕನಲ್ಲಿರುವ ಮೆಟ್ರಿಮೋನಿಯಲ್‌ ಸಂಘಟನೆಗಳು ಅವನಿಗೆ ಯಶ ಸಿಗುವುದು ಕಷ್ಟ ಎಂದು ಭಾವಿಸಿವೆ, ಅವನಿಗೆ ಜೊತೆ ಹುಡುಕುವುದು ಸಾಧ್ಯವಿದೆ. ಆದರೆ ಹಣವಂತ ಹೆಂಡತಿ ಕಷ್ಟ. ಅವರು ತಮ್ಮ ಸರಿ ಸಮಾನರಾದವರನ್ನೆ ಆಯ್ದು ಕೊಳ್ಳುವರು ವನು ಈಗಲೂ  ವಾರದ ಐದು ದಿನ ಕೆಲಸ ಮಾಡುವನು ರಜಾಂತ್ಯದಲ್ಲಿ ಶಾಶ್ವತ ಸಂಗಾತಿಯ ಸುಳಿವಿಗಾಗಿ  ಇನ್ನೂ  ಹುಡುಕುತ್ತಲೆ ಇದ್ದಾನೆ. ಸಿಗುವ ತನಕ ಸುಮ್ಮನಾಗುವುದಿಲ್ಲ ಎಂಬದು ಅವನ ಛಲ ಕೆಲಸ ಮತ್ತು ಕಾಮಿನ ಇಬ್ಬರನ್ನೂ ಅವನು ಹುಡುಕುತ್ತಲೆ ಇದ್ದಾನೆ . ನಿಮಗೇನಾದರೂ ಅಂತಹ ಹುಡುಗಿ ಗೊತ್ತಿದ್ದರೆ ತಿಳಿಸುವಿರಿತಾನೆ?

Your browser may not support display of this image. 

No comments:

Post a Comment