Friday, April 25, 2014

ನೇಮಿಚಂದ್ರ-ಡಾ.ಕೃಷ್ಣಾನಂದ ಪ್ರಶಸ್ತಿಯ ಗೌರವ


              ವಿಜ್ಞಾನ - ಸಾಹಿತ್ಯ  ಸಂಗಮ, ನೇಮಿಚಂದ್ರ ಅವರಿಗೆ 
                    ಡಾ. ಕೃಷ್ಣಾನಂದಕಾಮತ ಪ್ರಶಸ್ತಿಪ್ರದಾನ

ಕನ್ನಡದ ಲೇಖಕಿಯರಲ್ಲಿ  ನೇಮಿಚಂದ್ರ ಅವರಿಗೆ ವಿಶಿಷ್ಟ ಸ್ಥಾನವಿದೆ.  ಅವರುವಿಜ್ಞಾನಿ, ಲೇಖಕಿ,ದಣಿವರಿಯದ ಪ್ರವಾಸಿ. ಮಹಿಳೆಯರು, ಮಕ್ಕಳು ಮತ್ತು ದಮನಿತರ ಸ್ಥಿತಗತಿಗೆ ಮಿಡಿಯುವ ಮನಉಳ್ಳವರು. ಅವರ ವಿಶೇಷ  ಸಾಧನೆಗಾಗಿ  ಈ ಸಾಲಿನ  ೨೦೧೪ ನೆಯ ಸಾಲಿನ ಡಾ.ಕೃಷ್ಣಾನಂದಕಾಮತ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಯನ್ನು ಏಪ್ರಿಲ್ ೨ ರಂದು ಹಾಸನದ ಸಾವಯವ ಕೃಷಿಯ ಪ್ರಯೋಗಶಾಲೆ ಎನಿಸಿರುವ ಪುಣ್ಯ ಭೂಮಿಯಲ್ಲಿ ಡಾ.ಜೋತ್ಸ್ನಾ ಕಾಮತರ ಸಮ್ಮುಖದಲ್ಲಿ ಪ್ರದಾನ  ಮಾಡಲಾಯಿತು. ಈವರೆಗೆ ಇಪ್ಪತೈದು ಕೃತಿಗಳ ಕಾಣಿಕೆ ನೀಡಿರುವ ಇವರಿಂದ ಕನ್ನಡ ಸಾರಸ್ವತ ಲೋಕಕ್ಕೆ ಇನ್ನೂ ಹೆಚ್ಚಿನ ಕೊಡುಗೆ ಸಲ್ಲಲಿದೆ.
 ಅವರನ್ನು ಕುರಿತು ಖ್ಯಾತ ಛಾಯಾಚಿತ್ರಗ್ರಾಹಕ  ,ಯುವಸಾಹಿತಿ ಮತ್ತು ಕಳೆದ ವರ್ಷ  ಈ ಪ್ರಶಸ್ತಿ ಪಡೆದ ಶ್ರೀ. ಡಿ.ಜಿ ಮಲ್ಲಿಕಾರ್ಜುನ  ನೀಡಿದ ಉಪನ್ಯಾಸ  ಈ ಕೆಳಗೆ ನೀಡಿದೆ.
                 - ಎಚ್‌.ಶೇಷಗಿರಿರಾವ್‌
                     ನೇಮಿಚಂದ್ರ ಅವರನ್ನು ಕುರಿತು  ಒಂದೇ ಪದದಲ್ಲಿ ಹೇಳಬೇಕೆಂದರೆ `ಸ್ಫೂರ್ತಿಯ ಸೆಲೆ'.
ಅವರ ಮಾತುಗಳಲ್ಲಿ ಹೇಳುವುದಾದರೆ, `ನಮ್ಮ ಕನಸುಗಳಿಗೆ ದೊಡ್ಡ ಶಕ್ತಿಯಿದೆ. ಕನಸು ಕಂಡರೆ ಸಾಕು, ಹಾರಲು ರೆಕ್ಕೆ ಮೊಳೆಯುತ್ತವೆ. ಕನಸುಗಳು ನಮ್ಮನ್ನು ಕೊಂಡೊಯ್ಯುತ್ತವೆ ಸಪ್ತ ಸಮುದ್ರದಾಚೆಗೆ, ಹಿಮಾಲಯದೆತ್ತರಕ್ಕೆ, ಕೆಲವೊಮ್ಮೆ ಕನಸುಗಳು ನಮ್ಮನ್ನು ಕೊಂಡೊಯ್ಯಬಲ್ಲವು, ಕಲ್ಪನಾರಂತೆ ಅಂತರಿಕ್ಷಕ್ಕೂ...'
 ಮಹಿಳಾ ವಿಜ್ಞಾನಿಗಳು, ವೈಮಾನಿಕರು ಹಾಗೂ ಸಾಧಕಿಯರ ಬದುಕು ಇಂದಿನ ಎಳೆಯರಿಗೆ ಸ್ಫೂರ್ತಿಯ ಸೆಲೆಯಾಗಲೆಂದು ಅವರ ಬಗೆಗಿನ ಮಾಹಿತಿಗಾಗಿ ದೇಶವಿದೇಶಗಳನ್ನು ಸುತ್ತಿದ್ದಾರೆ.
 ನನಗೆ ಇವರು ಮೊದಲು ಪರಿಚಯವಾದದ್ದು ಉದಯವಾಣಿಯಲ್ಲಿ ಪ್ರತಿ ಭಾನುವಾರ ಬರುತ್ತಿದ್ದ ಇವರ ಅಂಕಣ `ಬದುಕು ಬದಲಿಸಬಹುದು' ಮೂಲಕ. ಈ ಅಂಕಣ ನನ್ನದೂ ಸೇರಿದಂತೆ ಅನೇಕರ ಬದುಕನ್ನು ಬದಲಿಸಿದೆ. ಇವರ ಅಂಕಣ ಓದಿ ಪ್ರಭಾವಿತನಾಗಿ ಇವರಿಗೆ ಪತ್ರ ಬರೆದಿದ್ದೆ, ಹಾಗೆಯೇ ಉತ್ತರವನ್ನೂ ಪಡೆದಿದ್ದೆ. ನಂತರ ಡಾ.ಕಾಮತರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಇವರಿಂದ ಹಸ್ತಾಕ್ಷರವನ್ನೂ ಪಡೆದಿದ್ದೆ.
 'ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್'ನಲ್ಲಿ ವಿಮಾನ ಸಂಶೋಧನೆ ಮತ್ತು ವಿನ್ಯಾಸ ವಿಭಾಗದಲ್ಲಿ
ಅಡಿಶನಲ್ ಜೆನರಲ್ ಮ್ಯಾನೇಜರ್ ಆಗಿರುವ ಇವರು ಬೆಳಿಗ್ಗೆ 6.30ಕ್ಕೆ ಕೆಲಸಕ್ಕಾಗಿ ಹೊರಟರೆ ಬರುವುದು ರಾತ್ರಿಯೇ. ಮನೆ, ಸಂಸಾರ ಸಾಗಿಸುವಷ್ಟರಲ್ಲಿ ಸಮಯವೇ ಇರುವುದಿಲ್ಲವೆನ್ನುವ ಎಲ್ಲರೂ ಇವರನ್ನೊಮ್ಮೆ ನೋಡಿದರೂ ಸಾಕು ಸ್ಫೂರ್ತಿ ಪಡೆಯುವುದು ಗ್ಯಾರಂಟಿ. ಸಾಹಿತ್ಯ, ಪ್ರವಾಸ. ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ, `ಅಚಲಾ' ಮಹಿಳಾ ಅಧ್ಯಯನ ಮಾಸಪತ್ರಿಕೆಯ ಸಂಪಾದಕೀಯ ಮಂಡಲಿಯ ಸದಸ್ಯೆಯಾಗಿ, ಜಾಗೃತಿ ಮಹಿಳಾ ಅಧ್ಯಯನ ಕೇಂದ್ರ, `ನೆರವು' ಹಿತರಕ್ಷಣಾ ವೇದಿಕೆಗಳ ನಿಕಟ ಸಂಪರ್ಕ ಮತ್ತು ಒಡನಾಟವಿಟ್ಟುಕೊಂಡು. ವಿಜ್ಞಾನ, ಸಾಹಿತ್ಯ, ಮಹಿಳಾ ಅಧ್ಯಯನ ಕುರಿತಂತೆ ಹಲವಾರು  ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಆಗಾಗ ಬರೆಯುತ್ತಾ, ನೊಂದ ಮಹಿಳೆಯರಿಗೆ ಸಾಂತ್ವನವನ್ನೂ ಹೇಳುತ್ತಾ ಇವರು ಸಮಯವನ್ನು ಹೊಂದಿಸಿಕೊಳ್ಳುವ ಪರಿಯೇ ಅಚ್ಚರಿ ಮತ್ತು ಅದುವೇ ನಮಗೆಲ್ಲರಿಗೂ ಸ್ಫೂರ್ತಿದಾಯಕ.
 ನೇಮಿಚಂದ್ರ ಅವರು ಕನ್ನಡದ ವೈಶಿಷ್ಟ್ಯಪೂರ್ಣ ಕತೆಗಾರ್ತಿ. ಸಣ್ಣಕತೆ, ಕಾದಂಬರಿ ಹಾಗೂ ವಿಚಾರಪೂರ್ಣ ಲೇಖನಗಳ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾಗಿದ್ದಾರೆ. ವಿಜ್ಞಾನದ ವಸ್ತಗಳನ್ನು ಒಳಗೊಂಡ ಅವರ ಕಥಾ ಹರಹು ಕನ್ನಡ ಸಾಹಿತ್ಯ ಲೋಕಕ್ಕೇ ಒಂದು ಮೆರುಗು ತಂದಿದೆ. 
ಅವರ `ಯಾದ್ ವಶೇಮ್' ಕಾದಂಬರಿ ಅಪಾರವಾದ ಜನಪ್ರಿಯತೆ ಗಳಿಸಿಕೊಂಡಿದೆ. ಈ ಕಾದಂಬರಿಯ ಕಥಾ ವಸ್ತುವನ್ನು ರೂಪಿಸುವಾಗ ಅದರ ಹಿನ್ನಲೆಯನ್ನು ಅತ್ಯಂತ ಸನಿಹದಲ್ಲಿ ಅನುಭವಿಸಿ ಬರೆಯುವುದಕ್ಕಾಗಿ ಅವರು ನಡೆಸಿದ ತಿರುಗಾಟ ಮತ್ತು ಅಭಿವ್ಯಕ್ತಿಸಿರುವ ರೀತಿ ಅಚ್ಚರಿ ಹುಟ್ಟಿಸುವಂತದ್ದು. ಮಹಾಯುದ್ಧ ಕಾಲದ ಹಿನ್ನಲೆಯನ್ನು ಇಟ್ಟುಕೊಂಡು ಚಿತ್ರಿತವಾಗಿರುವ ಈ ಕಥೆಯಲ್ಲಿನ ಹುಡುಗಿ ಅಂದಿನ ನಾಜಿ ರಕ್ಕಸರ ಕೈಯಿಂದ ತಪ್ಪಿಸಿಕೊಂಡು ನಮ್ಮ ಹಳೆಯ ಬೆಂಗಳೂರಿನಲ್ಲಿ ಬೆಳೆಯುತ್ತಾಳೆ. ತನ್ನ ಕಳೆದುಹೋದ ಕುಟುಂಬವನ್ನು ಅರಸುತ್ತ ಹೊರಟ ಈ ಹುಡುಗಿ ಜರ್ಮನಿ, ಅಮೆರಿಕವನ್ನು ಸುತ್ತಿ, ಕಡೆಗೆ ಯುದ್ಧಗ್ರಸ್ಥವಾದ ಇಸ್ರೇಲ್ - ಪ್ಯಾಲೆಸ್ಟೇನಿನ ವಾತಾವರಣದಲ್ಲಿ ಬಂದಿಳಿಯುವುದು ಚಿಂತನಪೂರ್ಣ. ಅವರು ತಮ್ಮ `ಯಾದ್ ವಶೇಮ್' ಕಾದಂಬರಿಗಾಗಿ ಜರ್ಮನಿಯ ನಾಜಿ ಕ್ಯಾಂಪ್, ಆನ್‍ಫ್ರಾಂಕ್ ಅವಿತಿದ್ದ ಗುಪ್ತಗೃಹವಿರುವ ಆಮ್‍ಸ್ಟರ್‍ಡ್ಯಾಮ್, ವಾಷಿಂಗ್ಟನ್‍ನ ಹೊಲೋಕಾಸ್ಟ್ ಮ್ಯೂಸಿಯಂ, ಇಸ್ರೇಲ್‍ನ ಜೆರೂಸಲೆಂಗೆ ಭೇಟಿ ನೀಡಿದ್ದಾರೆ. ಈ ಕಾದಂಬರಿಗಾಗಿ ಅವರ ತಿರುಗಾಟ, ಅಧ್ಯಯನ ಸುಮಾರು ಹನ್ನೆರಡು ವರ್ಷಕಾಲ ನಡೆದಿತ್ತು.
 ನನ್ನ ಹೃದಯಕ್ಕೆ ತಟ್ಟಿದ ಮತ್ತೊಂದು ಸಂಗತಿಯೆಂದರೆ ಈ `ಯಾದ್ ವಶೇಮ್' ಕಾದಂಬರಿಯನ್ನು ನೇಮಿಚಂದ್ರ ಅವರು ತಮ್ಮ ತಾಯಿಗೆ ಅರ್ಪಿಸಿದ್ದು. `ಬಯಲು ಸೀಮೆಯ ಹಳ್ಳಿಗಾಡಿನ ಅನಕ್ಷರಸ್ಥ ಹೆಣ್ಣುಮಕ್ಕಳ ಅನುಭವಗಳನ್ನು, ದಂತಕಥೆಗಳನ್ನು ಹಂಚಿಕೊಂಡ, ಯಾರನ್ನು ಕಂಡರೂ ತಟ್ಟನೆ ಮರುಗುವ ಈ ಕತೆಯ ತಾಯಿ ಹೃದಯದ `ಗುಂಡಮ್ಮ'ನಂತಹ ವಿಶಾಲ ಮನಸ್ಸಿನ ನನ್ನಮ್ಮನಿಗೆ... ಪ್ರೀತಿಯಿಂದ ಅರ್ಪಣೆ' ಎಂದು ಬರೆದಿದ್ದಲ್ಲದೆ, ಈ ಪುಸ್ತಕ ಬಿಡುಗಡೆಯ ಸಮಯದಲ್ಲಿ ವೇದಿಕೆಯಿಂದ ಇಳಿದು ಬಂದು ಮುಂದಿನ ಸಾಲಿನಲ್ಲಿ ಕುಳಿತಿದ್ದ ತಮ್ಮ ತಾಯಿಯನ್ನು ಅವರು ಸನ್ಮಾನಿಸಿದ್ದರು.
  ನೇಮಿಚಂದ್ರರ ವೈಜ್ಞಾನಿಕ ಬರಹಗಳಲ್ಲಿ ಜೀವನ ಚರಿತ್ರೆಗಳು ವಿಶೇಷವೆನಿಸುತ್ತವೆ. `ಮೇರಿ ಕ್ಯೂರಿ', ವೆಲ್ಲೂರು ಆಸ್ಪತ್ರೆಯ ಸಂಸ್ಥಾಪಕರಾದ `ಡಾ. ಈಡಾ ಸೋಫಿಯಾ ಸ್ಕಡರ್', `ಥಾಮಸ್ ಆಲ್ವ ಎಡಿಸನ್', `ನೊಬೆಲ್ ವಿಜೇತ ಮಹಿಳೆಯರು', `ಮಹಿಳಾ ವಿಜ್ಞಾನಿಗಳು' ಜನಪ್ರಿಯವೆನಿಸಿವೆ.
 ತಮ್ಮ ಕೃತಿಗಳಿಗಾಗಿ ಇವರು ಅನೇಕ ಸ್ಥಳಗಳನ್ನು ಹುಡುಕಿಕೊಂಡು ಹೋಗಿದ್ದಾರೆ. ಮೇರಿ ಕ್ಯೂರಿಯ ಪ್ರಯೋಗಶಾಲೆ, ಬ್ರಾಂಟೆಯ ಮೂರ್, ಪ್ರಥಮ ಸ್ತ್ರೀವಾದಿ ಲೇಖಕಿ ಆಫ್ರಾಳ ಹಳ್ಳಿ, 19ನೇ ಶತಮಾನದ ಖಗೋಳ ಶಾಸ್ತ್ರಜ್ಞೆ ಕ್ಯಾರೊಲಿನ್ ಹರ್ಷಲ್‍ಳ ಸ್ಥಳ, ವಡ್ರ್ಸ್‍ವರ್ತ್‍ನ ನೆಲ, ಕೀಟ್ಸ್‍ನ ಹ್ಯಾಂಪ್‍ಸ್ಟೆಡ್‍ಹೀತ್, ಫ್ಲಾರೆನ್ಸ್ ನೈಟಿಂಗೇಲಳ ಆಸ್ಪತ್ರೆ, ಕುಸಿದ ಬರ್ಲಿನ್ ಗೋಡೆ, ಐನ್‍ಸ್ಟೈನ್‍ನ ತಾಣ, ಡಕಾವ್‍ನ ನಾಜಿ ಕ್ಯಾಂಪ್...
ಹೀಗೆ ಕನಸುಗಳ ಬೆನ್ನು ಹತ್ತಿ ಹೋಗಿ ಬಂದು ಸಾಹಿತ್ಯದ ಮೂಲಕ ಉಣಬಡಿಸಿದ್ದಾರೆ.


 ಇವರ `ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು' ಕೃತಿ ಸಾಮಾಜಿಕ ಚಿಂತನೆಯನ್ನು ಪ್ರತಿನಿಧಿಸಿದರೆ, `ನನ್ನ ಕಥೆ, ನಮ್ಮ ಕಥೆ' ಎಂಬುದು ಮಹಿಳೆಯೊಬ್ಬಳು ಮನೆಯಲ್ಲಿನ ದೌರ್ಜನ್ಯದ ವಿರುದ್ಧ ಬಂಡೇಳುವ ಕಥೆಯೊಂದರ ಅನುವಾದವಾಗಿದೆ. ಹೇಮಲತಾ ಮಹಿಷಿ ಅವರೊಡನೆ ಇವರು ನಿರೂಪಿಸಿರುವ `ನ್ಯಾಯಕ್ಕಾಗಿ ಕಾದ ಭಾಂವ್ರಿ ದೇವಿ ಕಥೆ' ನಮ್ಮನ್ನು ಅಲುಗಿಸುವಂತದ್ದು.
 ಸ್ವಾತಂತ್ರ ಪೂರ್ವದ ಕನ್ನಡದ ಮಹಾನ್ ಕವಯಿತ್ರಿ `ಬೆಳೆಗೆರೆ ಜಾನಕಮ್ಮ', `ನೋವಿಗದ್ದಿದ ಕುಂಚ' ಎಂಬ ಮಹಾನ್ ಡಚ್ ಕಲಾವಿದ ವ್ಯಾನ್ ಗೋನ ಅವರ ಜೀವನ ಚರಿತ್ರೆ ಇವೆಲ್ಲಾ ನೇಮಿಚಂದ್ರ ಅವರ ವಿಶಾಲ ಆಸಕ್ತಿಗಳನ್ನು ತೋರುತ್ತವೆ.
  ನೇಮಿಚಂದ್ರರ ವಿಚಾರ ಪೂರ್ಣ ಲೇಖನಗಳಾದ `ಸಾಹಿತ್ಯ ಮತ್ತು ವಿಜ್ಞಾನ', `ಬದುಕು ಬದಲಿಸಬಹುದು', `ದುಡಿವ ಹಾದಿಯಲ್ಲಿ ಜೊತೆಯಾಗಿ', `ಮಹಿಳಾ ಅಧ್ಯಯನ', `ನಿಮ್ಮ ಮನೆಗೊಂದು ಕಂಪ್ಯೂಟರ್, `ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೋಟರ್ಸ್' , `ಮಹಿಳಾ ಲೋಕ' (ಸಂಪಾದಿತ) ಇವೆಲ್ಲಾ ಇವರ ಚಿಂತನಪೂರ್ಣ ಬರಹಗಳ ವಿಶಾಲತೆ, ಆಳ, ಬದುಕಿನ ಕುರಿತಾದ ವಿಶಾಲ ದೃಷ್ಟಿಗಳನ್ನು ಅಭಿವ್ಯಕ್ತಿಸುತ್ತವೆ.
ಡಾ.ಜೋತ್ಸನಾ ಕಾಮತರೊಂದಿಗೆ ನೇಮಿಚಂದ್ರ 
 `ಒಂದು ಕನಸಿನ ಪಯಣ', `ಪೆರುವಿನ ಪವಿತ್ರ ಕಣಿವೆಯಲ್ಲಿ' ಕೃತಿಗಳು ನೇಮಿಚಂದ್ರ ಅವರ ಪ್ರಸಿದ್ಧ ಪ್ರವಾಸ ಕಥನಗಳಾಗಿವೆ. ಇವರು ತಮ್ಮ `ಪೆರುವಿನ ಪವಿತ್ರ ಕಣಿವೆಯಲ್ಲಿ' ಕೃತಿಯನ್ನು ಅರ್ಪಿಸಿರುವುದು ಡಾ.ಕೃಷ್ಣಾನಂದ ಕಾಮತರಿಗೆ. `ನನ್ನ ಪ್ರಥಮ ಪ್ರವಾಸ ಕಥನ `ಒಂದು ಕನಸಿನ ಪಯಣ' ವನ್ನು ಅತ್ಯಂತ ಪ್ರೀತಿಯಿಂದ ಬಿಡುಗಡೆ ಮಾಡಿ, ಪೆರುವಿನ ಪ್ರವಾಸ ಮಾಡಿ ಮುಗಿಸಿ ಬಂದಾಗ ನನ್ನ ಅನುಭವವನ್ನು ಉತ್ಸಾಹದಿಂದ ಹಂಚಿಕೊಂಡು, ಪುಸ್ತಕ ಹೊರಬರುವ ಮೊದಲೇ ಕಣ್ಮರೆಯಾದ ಪ್ರವಾಸ ಪ್ರಿಯ ಡಾ.ಕೃಷ್ಣಾನಂದ ಕಾಮತರಿಗೆ ಪ್ರೀತಿಯಿಂದ ಅರ್ಪಣೆ' ಎಂದಿದ್ದಾರೆ.
 ಇಬ್ಬರೇ ಮಹಿಳೆಯರು ದಕ್ಷಿಣ ಅಮೆರಿಕೆಯಲ್ಲಿರುವ ಪೆರು, ಬ್ರೆಜಿಲ್ ದೇಶಗಳನ್ನು ಸುತ್ತಾಡಿ ಭಾಷೆಯ ಸಮಸ್ಯೆಯನ್ನು ಕೈ ಬಾಯಿ ಸನ್ನೆಗಳ ಮೂಲಕ ನಿಭಾಯಿಸಿಕೊಂಡು, ಅದೇ ರೀತಿ ಆಹಾರದ ಸಮಸ್ಯೆಯನ್ನೂ ಬಗೆಹರಿಸಿಕೊಂಡು, ನಮ್ಮ ಜನರಂತೆಯೇ ಆದರಿಸುವ, ಪ್ರೀತಿಸುವ, ಸ್ನೇಹಭಾವ ತೋರಿಸುವ ಜನರನ್ನು ಭೇಟಿ ಮಾಡಿದ ಅನುಭವಗಳನ್ನು `ಪೆರುವಿನ ಪವಿತ್ರ ಕಣಿವೆಯಲ್ಲಿ' ಕೃತಿಯಲ್ಲಿ ಇವರು ಸ್ವಾರಸ್ಯಕರವಾಗಿ ವರ್ಣಿಸಿದ್ದಾರೆ.
 ಅಮೆರಿಕದ ಕೊಳ್ಳುಬಾಕತನ, ಪ್ರತಿ ಕ್ಷಣವನ್ನೂ ಹಣವಾಗಿ ಬದಲಿಸುವ ಬದುಕಿನ ಪರಿ, ಬಡ ಪೆರು ದೇಶದ ಹೃದಯವಂತ ಜನ, ಕಾಗೆಗಳನ್ನೆಲ್ಲಾ ಕೊಲ್ಲುತ್ತಾ ಸ್ವಚ್ಛತೆಗಾಗಿ ಶ್ರಮಿಸುವ ಹಾಗೂ ಪ್ರತಿಯೊಂದಕ್ಕೂ ದಂಡ ವಿಧಿಸುತ್ತಾ ಫೈನ್ ಸಿಟಿಯೆಂದೇ ಪ್ರಸಿದ್ಧವಾದ ಸಿಂಗಾಪೂರಿನ ನಗಲು ಕೂಡ ಒದ್ದಾಡುವ ಜನ, ನಿರ್ಮಲ ಸ್ವಚ್ಛ ನಗುವಿನಿಂದ ಆತ್ಮೀಯವಾಗಿ ಕಾಣುವ ಬಡ ರಾಷ್ಟ್ರ ಕಾಂಬೋಡಿಯಾದ ಜನ ... ಹೀಗೆ ಅವರು ತಿರುಗಾಟದಲ್ಲಿ ಕಂಡ ಮಾನವೀಯ ಮೌಲ್ಯಗಳನ್ನು ದಾಖಲಿಸಿದ್ದಾರೆ.


ಪ್ರಶಸ್ತಿ ಗೌರವಗಳು:

ನೇಮಿಚಂದ್ರ ಅವರ 'ಬೆಳಕಿನೊಂದು ಕಿರಣ ಮೇರಿ ಕ್ಯೂರಿ', 'ಪೆರುವಿನ ಪವಿತ್ರ ಕಣಿವೆಯಲ್ಲಿ' ಮತ್ತು 'ಯಾದ್ ವಶೇಮ್' ಪುಸ್ತಕಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಲಭಿಸಿದೆ. 'ಸಾಹಿತ್ಯ ಮತ್ತು ವಿಜ್ಞಾನ' ಹಾಗೂ 'ಒಂದು ಕನಸಿನ ಪಯಣ' ಪುಸ್ತಕಗಳಿಗೆ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, `ಯಾದ್ ವಶೇಮ್' ಕೃತಿಗೆ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಪ್ರತಿಷ್ಠಾನದ 2009 `ಅಕ್ಕ' ಪ್ರಶಸ್ತಿ, ಮತ್ತೆ ಬರೆದ ಕಥೆಗಳು ಕಥಾಸಂಕಲನಕ್ಕೆ ಆರ್ಯಭಟ ಪ್ರಶಸ್ತಿ, 'ಬದುಕು ಬದಲಿಸಬಹುದು' ಪುಸ್ತಕಕ್ಕೆ ಶಿವಮೊಗ್ಗದ 'ಕರ್ನಾಟಕ ಸಂಘ'ದ ಡಾ.ಹಾ.ಮಾ.ನಾಯಕ ಪ್ರಶಸ್ತಿ, 'ಪೆರುವಿನ ಪವಿತ್ರ ಕಣಿವೆಯಲ್ಲಿ' ಪುಸ್ತಕಕ್ಕೆ ಶಿವರಾಮ ಕಾರಂತ ಪುರಸ್ಕಾರ,
ವಿಜ್ಞಾನ, ಸಾಹಿತ್ಯ, ಮಹಿಳಾ ಅಧ್ಯಯನವನ್ನು ಕುರಿತಂತೆ ಮಂಗಳೂರಿನ 'ಸಂದೇಶ ಪ್ರಶಸ್ತಿ' ಹಾಗೂ ಗದಗದ 'ಕಲಾಚೇತನ' ಪ್ರಶಸ್ತಿ. ಕಥಾಸಾಹಿತ್ಯಕ್ಕೆ 'ಇಂದಿರಾತನಯ' ಪ್ರಶಸ್ತಿ ಲಭಿಸಿದೆ.
ಈಗ ದೊರೆತಿರುವ ಡಾ. ಕೃಷ್ಣಾನಂದ ಪ್ರಶಸ್ತಿ ಅವರ ಮುಡಿಗೆಏರಿದ ಇನ್ನೊಂದು ಗರಿ
                                       ********
                     (   ಚಿತ್ರ ಕೃಪೆ  ಅಂತರ್‌ಜಾಲ ತಾಣ)
.
























No comments:

Post a Comment