Thursday, April 24, 2014

ಕಪ್ಪು ಜನರ ಕರಾಳ ಕಥನ-12 years slave





   ಕಪ್ಪುಜನರ ಕರಾಳ ಕಥನ

ಇತಿಹಾಸದ ತುಸು ಪರಿಚಯವಿರುವವರಿಗೆ ಮಹಾತ್ಮ ಗಾಂಧಿಯವರಿಗೆ ದಕ್ಷಿಣ ಆಫ್ರಿಕಾದಲ್ಲಿ  ಇದ್ದ ವರ್ಣ ಬೇಧ ನೀತಿಯ ಪರಿಣಾಮವಾಗಿ ಆದ ಕಟು ಅನುಭವ ಅದನ್ನು ಅವರು ಎದುರಿಸಲು  ಸತ್ಯಾಗ್ರಹ ರೂಪಿಸಿದ ಬಗೆ ಗೊತ್ತೇ ಇರುವುದು. ಆದರೆ ಆ ಸಮಸ್ಯೆ ಆಫ್ರಿಕಾದಲ್ಲಿ ಮಾತ್ರವಲ್ಲ  ಒಂದು ಕಾಲದಲ್ಲಿ ಅಮೇರಿಕಾ ದೇಶದಲ್ಲು ಇತ್ತು, ಅದಕ್ಕಿಂತ ಘೋರವಾಗಿತು. ಕಪ್ಪು  ಗುಲಾಮರು ಪ್ರಾಣಿಗಳಿಗಿಂತ ಕೀಳು.ಎರಡು ಶತಮಾನಗಳ ಹಿಂದಿನ ಅಮಾನವೀಯ  ಆಚರಣೆಯನ್ನು ಅನಾವರಣ ಗೊಳಿಸುವ ಚಲನಚಿತ್ರವನ್ನು  ನೋಡಿದೆ.ಅದಕ್ಕೆ ಈ ಬಾರಿ ಅಸ್ಕರ್‌ಪ್ರಶಸ್ತಿಯೂ ಬಂದಿದೆ. ಹದಿನೆಂಟನೆಯ ಶತಮಾನದಲ್ಲಿ ಅಮೇರಿಕಾದ ದಕ್ಷಿಣ ಪ್ರಾಂತ್ಯಗಳಲ್ಲಿದ್ದ ಕಪ್ಪುಜನರ ಕರಾಳ ಜೀವನದ ಕಥನ 
ಈ ಸಿನೆಮಾದ ವಸ್ತು. 12 years slave.   ಎಂಬ ಹೆಸರೇ ಹೇಳುತ್ತದೆ ಅದರ ಹೂರಣವನ್ನು.
ಆತ್ಮ ಕಥೆ

ಜಾರ್ಜವಾಷಿಂಗ್ಟನ್ ಅಮೇರಿಕಾ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರೆ  ಅಬ್ರಾಹಂಲಿಂಕನ್‌ ಅಮೇರಿಕಾದ ಎಲ್ಲ ಜನರಿಗೂ ಸ್ವಾತಂತ್ರ್ಯ ಮತ್ತು ಸಮಾನತೆ ತಂದುಕೊಟ್ಟು ರಾಷ್ಟ್ರ ಪಿತನಾದ. ಸ್ವಾತಂತ್ರ್ಯ ಎಂಬುದು ಚರ್ಮದ ಬಣ್ಣ  ಆಧಾರಿತವಲ್ಲ ಎಲ್ಲ ಮಾನವರಿಗೂ ಆಜನ್ಮ ಸಿದ್ಧ ಹಕ್ಕು ಎಂಬ ಕಾನೂನು ಜಾರಿಗೆ ತರಲು ಹೋರಾಟವನ್ನೇ ಮಾಡಿದ್ದ. ಅಮೆರಿಕಾದ ದೊಡ್ಡ ರಾಷ್ಟ್ರ. ಸುಮಾರು ಐವತ್ತು ರಾಜ್ಯಗಳಿವೆ. ಉತ್ತರ ಭಾಗದ ರಾಜ್ಯಗಳು ಕೈಗಾರಿಕೆ, ವಾಣಿಜ್ಯ ವ್ಯಾಪಾರಗಳಿಗೆ ಹೆಸರಾದರೆ ದಕ್ಷಿಣದ ರಾಜ್ಯಗಳು ಕೃಷಿಗೆ ಹೆಸರುವಾಸಿ. ಅಲ್ಲಿರುವವರೆಲ್ಲ ಭೂ ಮಾಲಿಕರು. ಕಬ್ಬು ಹತ್ತಿ ,ಬಾಳೆ  ಇತ್ಯಾದಿ ಅಲ್ಲಿನ ಮುಖ್ಯಬೆಳೆ..ಅವರ   ಹಿಡುವಳಿ ಹತ್ತು ಇಪ್ಪತ್ತು ಎಕರೆ ಅಲ್ಲ. ನೂರಾರು ಎಕರೆ.ಅಲ್ಲಿ ಕೆಲಸ ಮಾಡಲು ಬಳಸುತಿದ್ದು ದನಗಳನ್ನಲ್ಲ ಜನರನ್ನು. ನಮ್ಮಲ್ಲಿ ಎಂಟೆತ್ತಿನ ಕಮತ ಇದ್ದವರು ದೊಡ್ಡ ರೈತರು ಎಂದುಕೊಂಡ ಕಾಲ ಒಂದಿತ್ತು. ಅದರಂತೆ ಅಲ್ಲಿಯೂ ಹತ್ತು  ಗುಲಾಮರು ಇರುವವರು, ನೂರು ಗುಲಾಮರಿರುವವರು ಎಂದು ಭೂಮಾಲಿಕರನ್ನು ವರ್ಗೀಕರಿಸಿ ಗೌರವಿಸಲಾಗುತಿತ್ತು. ಆಫ್ರಿಕಾದಿಂದ ಸಾಗಿಸಿಕೊಂಡು ಬಂದ ಕಪ್ಪುಜನರನ್ನು ದನದ ಸಂತೆಯಲ್ಲಿ ಮಾರುವಂತೆ ಹರಾಜು ಹಾಕುವರು.   ಜನರನ್ನು ಮಾರುವ ದಂಧೆ ಅಂದು ಬಹು ಜನಪ್ರಿಯ.ಕೊಂಡವರ ಆಸ್ತಿ ಈ ಜನ. ನಮ್ಮಲ್ಲಿ ಪಶು ಸಂಪತ್ತಿದ್ದಂತೆ ಅಲ್ಲಿ ಗುಲಾಮರು.ಅವರ ಜೀವನವೂ ಪಶುಪ್ರಾಣಿಗಳಿಗಿಂತ ಮೇಲಲ್ಲ.ಈ ಹಿನ್ನೆಲೆ ಇರುವ ಒಂದು ಚಿತ್ರ ನನ್ನ ಮನ ಕಲಕಿತು.ಮನರಂಜನೆಯ ಸಾಧನವೆಂದು ಜನಪ್ರಿಯವಾಗಿರುವ ಮಾದ್ಯಮವು ಜನಪರವಾದ, ಮಾನವೀಯ ಮೌಲ್ಯಗಳ ಅನಾವರಣದ ಸಾಧನವಾದಾಗ ಶ್ರೇಷ್ಟ ಕಲಾಕೃತಿಯಾಗುವುದು ಎಂಬುದಕ್ಕೆ ಈ ಸಿನೆಮಾ ಸಾಕ್ಷಿ.
ಅಪಹರಣದ ಮುಂಚಿನ ಸುಖ ಸಂಸಾರಿ ಸಾಲೊಮನ್‌

ಇದು ೧೮೪೦ರಲ್ಲಿ ನ್ಯೂಯರ್ಕನಿಂದ ಅಪಹರಣವಾಗಿ  ಹನ್ನೆರಡುವರ್ಷ ದಾಸ್ಯದ ನೊಗ ಹೊತ್ತ ಸ್ವತಂತ್ರ ಕಪ್ಪು ನಾಗರೀಕ  ಸಾಲೊಮನ್  ಮುರ್ತಪ್‌ನ ಆತ್ಮ ಕಥೆ  ಆಧಾರಿತ ಚಿತ್ರ.ಅಂದಿನ ಕಾಲದ ಸಮಾಜದ ನೈಜ ಚಿತ್ರಣ ಕೊಡುವಲ್ಲಿ ಚಿತ್ರ ನಿರ್ದೇಶಕ  ಯಶಸ್ವಿಯಾಗಿರುವನು ಎಂದು ವಿರ್ಮರ್ಶಕರ ಒಕ್ಕೊರಲಿನ ಅಭಿಪ್ರಾಯ. ಮಾರ್ಥಸ್ ನ್ಯೂಯಾರ್ಕ್ ನಿವಾಸಿಯಾದ ಪೀಟೀಲು ನುಡಿಸುವ ಕಲಾವಿದ. ಹೆಂಡತಿ ಮತ್ತು ಇಬ್ಬರು ಮಕ್ಕಳ ಸುಖಿ ಸಂಸಾರ. ಹೆಸರೂ ಮತ್ತು ಹಣ ತಕ್ಕ ಮಟ್ಟಿಗೆ ಇರುವ ಸಂತೃಪ್ತ ಜೀವನ  ನಡೆಸುವ ಸ್ವತಂತ್ರ ನಾಗರೀಕ..ಒಮ್ಮೆ  ಕುಟುಂಬ  ಬೇರೊಂದು ಊರಿಗೆ ಹೋಗುವುದು ಆಗ ವಾಷಿಂಗ್‌ಟನ್‌ನಿಂದ ಬಂದ ಇಬ್ಬರು ಸಂಗೀತ ಕಚೇರಿಗೆ ಆಮಂತ್ರಣ ಕೊಡುವರು. ಒಳ್ಳೆಯ ಸಂಭಾವನೆ.  ಸರಿ ಎಂದು  ಹೊರಟ. ಕಚೇರಿಯೂ ಆಯಿತು. ಕೈ ತುಂಬ ಹಣವೂ ಬಂದಿತು.ಅಂದು ಸಂಜೆ ಅವನಗೌರವಾರ್ಥ ಔತಣ ಕೂಟ ನಡೆಸಿದರು.ಖುಷಿಯಾಗಿ  ಮದ್ಯ ಸೇವಿಸಿದ. ಮಾರನೆದಿನ ಎದ್ದಾಗ ಇದ್ದುದು ಸರಪಳಿಯಿಂದ ಬಂಧಿತನಾಗಿ ಕತ್ತಲ ಕೋಣೆಯಲ್ಲಿ.  ಮಾನವ ವ್ಯಾಸಾಗಣಿಕೆ ಮಾಡುವ ದಲ್ಲಾಳಿಗಳ ಸಂಚಿಗೆ ಬಲಿಯಾಗಿದ್ದ. ಅವನ ಅಳಲು ಕೇಳುವವರಿಲ್ಲ.ನಾನು ಸ್ವತಂತ್ರನಾಗರೀಕ ಎನ್ನವದನ್ನು ಸಾಧಿಸಲು  ದಾಖಲೆ ಇಲ್ಲ.ಕರಿಯ ಎಂದು ಕಣ್ಣಿಗೆ ಕಾಣುವುದು.ಲುಜಿಯಾನರಾಜ್ಯದ ಯಾವುದೇ ಕಾನೂನು ಅವನ ರಕ್ಷಣೆಗ ಬರಲಿಲ್ಲ.. ಅಪರಿಚಿತ ಜಾಗ.ಓಡಿ ಬಂದ ಗುಲಾಮ ಎಂದು ಆಪಾದನೆ. ಅಲ್ಲಿಂದ
ಗುಲಾಮಗಿರಿಯ ಜಾಲದಲ್ಲಿ

 ಶುರುವಾಗುವುದು ಅವನ ಗುಲಾಮಗಿರಿಯ ಜೀವನ.ವಿದ್ಯ, ಹಣ , ಹೆಸರು ಅಂತಸ್ತು ಇರುವ ಸಾಲೊಮನ್‌ ನರ್ಥೋಪ್‌ ಹೆಸರೆ ಬದಲು . ಈಗ ಅವನು ಪ್ಯಾಟನ್‌.ಆ  ಹೆಸರು ಕರೆದಾಗ ಓ ಗೊಡದಿದ್ದರೆ ಮೈಮುರಿಯೆ ಹೊಡೆತ ಕೆಲಸಕ್ಕಾಗಿಯೇ ಇರುವ ಎರಡುಕಾಲಿನ ಪ್ರಾಣಿ. ವಿದ್ಯ ಬುದ್ದಿ ಬೇಕಿಲ್ಲ ಪ್ರಾಣ ಉಳಿಸಕೊಳ್ಳಲು ಅನಕ್ಷರಸ್ತನಂತೆ ನಟಿಸ ಬೇಕು.
 I don’t want to  survive but I want to live  ಎಂಬ ಅವನ ಅಳಲು ವೈಯುಕ್ತಿಕ ವಾಗದೇ ಜನಾಂಗದ ಆಕ್ರಂದನವಾಗುವುದು.
ಪ್ರಾಣಿಯಂತೆ ಮಾರಾಟ  ಮಾಡುವರು. ಮಾರುವ ಮುನ್ನ ದನಗಳ ಮೈ ತೊಳೆಯುವಂತೆ  ಇವರಿಗೂ ಮೈ ತೊಳೆದುಕೊಳ್ಳಲು  ಅವಕಾಶ. ಗಿರಾಕಿಗಳನ್ನು ಆಕರ್ಷಿಸಲು ಇದೊಂದು ತಂತ್ರ. ಬಯಲಿನಲ್ಲಿ ಗಂಡು, ಹೆಣ್ಣು ,ಯುವಕರು ಮಕ್ಕಳು ಎಲ್ಲರೂ ಮೈತೊಳೆದುಕೊಳ್ಳ ಬೇಕು.  ಅದೂ ಬರಿ ಮೈನಲ್ಲಿ.  ನಿರ್ದೇಶಕರ ಕೌಶಲ್ಯ ಎದ್ದುಕಾಣುವುದು  ಈ ದೃಶ್ಯದಲ್ಲಿ ಬತ್ತಲೆ ಮಾನವ ದೇಹಗಳು ತೆರೆಯ ಮೇಲೆ ಕಾ ಣುತಿದ್ದರೂ ನೋಡುಗರಿಗೆ ಮೈ ಕೈ ತುಂಬಿಕೊಂಡ ಪ್ರಾಣಿಗಳಂತೆ ಭಾಸವಾಗುವುದು.ಅಷ್ಟು ಕರಣಾಜನಕವಾಗಿದೆ  ಈ  ದೃಶ್ಯ.
ಮಾನವ ಮಾರುಕಟ್ಟೆಯಂತೂ ಯಾವುದೋ ದನದ ಸಂತೆ ಇರಬಹುದು ಎನಿಸುವುದು. ಹಲ್ಲು ಹಿಡಿದು ನೋಡುವುದು. ಎದೆ ತಟ್ಟಿ ತೋರಿಸುವುದು,ಹತ್ತರ ಹುಡುಗನನ್ನು ನಿಂತಲೇ ಓಡುವಂತೆ ಮಾಡಿ He will be a  strong beast in a few years ಎಂಬ ಉದ್ಗಾರ ನಮ್ಮನ್ನು ಗುಲಾಮಗಿರಿಯ ಕಾಲಕ್ಕೆ  ಕರೆದೊಯ್ಯುವುದು.
ಸಾಲೊಮನ್‌ ಕೊಂಡ ಮಾಲಿಕ ತುಸು ಉದಾರಿ ಆದರೆ ವ್ಯವಸ್ಥೆ ಒಂದು ಭಾಗ.ಹಾದಿಯಲ್ಲಿ ಜೊತೆಗೆಇದ್ದವ ಹೇಳುವನು. ನೀನು  ಇರುವುದು ಮೈ ಮುರಿಯೆ ಕೆಲಸ ಮಾಡಲು ವಿದ್ಯ ಬುದ್ದಿ ಪ್ರದರ್ಶನಕ್ಕಲ್ಲ ಹೊಸದನ್ನು ತೋರಿಸಿದರೆ ಪ್ರತಿ ಸಲಕ್ಕೂ  ದೊರೆವ ಬಹುಮಾನ  ಎಂದರೆ  ನೂರು ಚಾಟಿ ಏಟು.
ಕೊಳ್ಳುವ ಮುನ್ನ ದಂತ ಪರೀಕ್ಷೆ

ಇಲ್ಲಿನದು ಕ್ರೌರ್ಯ, ಹಿಂಸೆಯ ವೈಭವೀಕರಣ ಇಲ್ಲ,ಇದು ಕಜನಸಾಮಾನ್ಯರ ಚಿತ್ರವಾದರೂ ಇಲ್ಲಿ ಅವರೂ ಚಿಂತನೆಗೆ ಹಚ್ಚುವ  ಸರಕು. ಆಕಾಲದ ಸಂಸ್ಕೃತಿ, ಆಚಾರ, ವಿಚಾರ, ನೆಲ, ಜಲ, ಜನಜೀವನವನ್ನು ಚಿತ್ರದ ಹೊರಾಂಗಣ ದೃಶ್ಯಗಳು ಉಡುಗೆ ತೊಡುಗೆ ಎರಡು ಶತಮಾನ ದ ಹಿಂದಿನ ಚಿತ್ರ ಕಣ್ಣಿಗೆ ಕಟ್ಟುವವು.ನಾಯಕನಾಗಿ  ಚಿವೆಟೆಲ್‌ಎಜಿಫೊರ್ನದು ಮನ ಮುಟ್ಟುವ ಅಬಿನಯ.ನೋವು, ತುಮುಲ,ಪ್ರತಿಬಟನೆ ,ಕರುಣೆ ಅಸಾಹಯಕತೆ ಎಲ್ಲ ಭಾವಗಳನ್ನು  ಕಣ್ಣಲ್ಲೇ ವ್ಯಕ್ತಪಡಿಸುವ ಪ್ರಬುದ್ದತೆ ಇದೆ.ಕಾರಣ ಗುಲಾಮರು ಬಾಯಿತೆರೆಯುವುದು ತಿನ್ನಲು ಮಾತ್ರ ಎಮಬುದು ಆಗಿನ ಕಟ್ಟುಪಾಡು.ಅದನ್ನು ಪಾಲಿಸದಿದ್ದರೆ ಚಡಿ  ಏಟು.ಮೊದಲ ಯಜಮಾನ ಕರುಣಾಮಯಿಯಾದರೂ ಸಮಾಜದ ಎದುರು ನಿಸ್ಸಾಹಯ.ತನ್ನ ಜಾಣತನದಿಂದ ಆದಾಯ ಹೆಚ್ಚಿಸಿದುದ   ಬಿಳಿ ಮೇಲ್ವಿಚಾರಕನ ಅಸಹನೆಗೆ ಕಾರಣವಾಗುವುದು. ನೀನು ನಿಗ್ಗರ್‌ ಇಂಜನಿಯರ್‌ ಆಗ ಬೇಡ ಎಂದು ಹಿಯಾಳಿಸುವನು. ತಪ್ಪು ಸೂಚನೆ ನೀಡಿ ಕೆಲಸ ಸರಿಯಾಗಿಲ್ಲ ಎಂದು ದಂಡಿಸುವನು,ಪ್ರತಿಭಟಿದಾಗ ಹಲ್ಲೆ ಮಾಡುವನು ತಡೆದರೆ ಮರಕ್ಕೆ ನೇಣು ಹಾಕಲು ಯತ್ನಿಸುವನು.ಕರುಣಾಳು ಯಜಮಾನನೂ ಅಸಹಯಕ. ಇವನ ಪ್ರಾಣ ಉಳಿಸಿ ಇನ್ನೊಬ್ಬನಿಗೆ ಮಾರುವನು.

ಸಾಲೊಮನ್‌ನ ಯಜಮಾನರು ಪಳೆಯುಳಿಕೆಯಾದ ಊಳಿಗಮಾನ್ಯ ಪದ್ದತಿಯ ವಿಕೃತ ವ್ಯಕ್ತಿಗಳು. ಮೊದಲನೆಯ ಮಾಲಿಕ  ಫೋರ್ಡ ಉತ್ತಮ ಎನಿಸಿದರು ವ್ಯವಸ್ಥೆಯ ಅಡಿಯಾಳುಎರಡನೆಯ ಯಜಮಾನ ಎಪ್ಸಸ ಅಂತೂ ಹಿಂಸಾಪ್ರಿಯ. ಸಂಪ್ರದಾಯವಾದಿ, ಮಹಾಧೂರ್ತ. ತನ್ನಕ್ರೌರ್ಯಕ್ಕೆ ಧರ್ಮದ  ಹೊದಿಕೆ ಹಾಕುವವ. ಬೈಬಲ್‌ ಬಳಸಿ ಭಯ ಹುಟ್ಟಿಸುವವ. ಅವನಿಗೆ ಗುಲಾಮರು ಚಲಿಸುವ ಅಸ್ತಿ. ಅವರು ಮಾಡು ಕೆಲಸದ ಮೌಲ್ಯದ ಕಡೆ ಗಮನ. ಹತ್ತಿ ಹೊಲದಲ್ಲಿ ಹೆಚ್ಚು ಹತ್ತಿ ಬಿಡಿಸುವ –ಅವನಿಗೆ ಬೇಕು ಅವಳು ಹತ್ತಿತೋಟದ ರಾಣಿ ಎಂದು ಹೊಗಳುವನು.ಜೊತೆಗೆ ಅವನ ಹಿಂಸಾರತಿಗೂ ಅವಳು ಬಲಿ .ಅವನ ಮೃಗದಾಹಕ್ಕೆ ತಣಿವು ನೀಡುವ ದೃಶ್ಯದ ಚಿತ್ರೀಕರನ ನಿರ್ದೇಶಕರಸೂಕ್ಷ್ಮತೆ ಮತ್ತು ಸಮಯಮದ ಪ್ರತೀಕ.ಅಲ್ಲಿ ಕಾಣುವುದ ಅವರ ದೇಹದ ಮೇಲುಭಾಗದ ಚಲನೆಮಾತ್ರ. ಅವನ ಹಿಂಸಾ ವಾಂಛೆ, ಅವಳ ಜಿಗುಪ್ಸೆ,ನೋವು ಸಂಕಟ  ಬಹಳಚೆನ್ನಾಗಿ ವ್ಯಕ್ತವಾಗುತ್ತವೆ. 
ಅಂಗಲಾಚುವ ಗುಲಾಮಳು
ಸಾಮಾನ್ಯ  ಜನಪ್ರಿಯಚಿತ್ರಗಳಾದರೆ ಈ ಸಂದರ್ಭದ ಬಳಸಿ ಬಾಯಿಚೆಪ್ಪರಿಸುವಂತೆ ಮಾಡುತಿದ್ದರು .ಯಜಮಾನನಿಗೆ ಅತಿಪ್ರಿಯಳಾದ ಅವಳು ಶುಚಿಯಾಗಿರಲು ಸೋಪು  ತಂದುದು ಅವನ ಸಿಟ್ಟಿಗೆ ಕಾರಣ ವಾಗುವುದು ಅವಳನ್ನು ಬೆತ್ತಲೆ ಮಾಡಿ ಮರಕ್ಕ ಕಟ್ಟಿ ಮೈ ಮಾಂಸ ಹೊರ ಬರುವವರೆಗೆ ಚಾವಟಿ ಏಟಿನ ಶಿಕ್ಷೆವಿಧಿಸುವನು.ದೃಶ್ಯ ಭೀಭತ್ಸವಾದರೂ ಅಶ್ಲೀಲೆತೆಯ ಸೋಂಕುಇಲ್ಲ.ಅದೇ  ಚಿತ್ರದ ಹಿರಿಮೆ
ಚಿತ್ರದಲ್ಲಿನ ಘಟನಾವಳಿಗಳು ಗುಲಾಮರ ದುರಂತದ  ಬದುಕನ್ನು ಕಟ್ಟಿಕೊಡುತ್ತಾ ನೋಡುಗನನ್ನು ಬೆಚ್ಚಿ ಬೀಳಿಸುತ್ತದೆ.ಈ ಚಿತ್ರದಲ್ಲಿನ ಪ್ರತಿಯೊಂದು ಘಟನೆಯೂ ಅಂದಿನ ಸಮಾಜದಲ್ಲಿನ ಗುಲಾಮಗಿರಿಯ  ನಗ್ನ ಪ್ರದರ್ಶನ ಮಾಡುವುದು.ಮಾತು ಕಡಿಮೆ . ನೋಟ ಹೆಚ್ಚು. ಆಡಿದ ಮಾತುಭಾವ ಭರಿತ  .ಅದರಿಂದಲೇ ಕಪ್ಪುಜನರ ಬವಣೆಯ ಕುರಿತಾದ ಚಿತ್ರಗಳಲ್ಲಿ ಇದೂ ಪ್ರಮುಖ ಎನ್ನಬಹುದು.
 ತಾವು ಪಶುಗಳಿಗಿಂತ ಮೇಲು ಮಟ್ಟದಲ್ಲಿವೆವು ಎಂದುಕೊಂಡರೆ  ಶಿಕ್ಷೆ  ತಪ್ಪಿದ್ದಲ್ಲ. ಪ್ರತಿಯೊಬ್ಬರ ಕೊರಳಲ್ಲೂ ಯಜಮಾನನ ಹೆಸರಿರುವ ಲೋಹದ ಪಟ್ಟಿ. ಅದಿಲ್ಲದೆ ಇದ್ದರೆ ಓಡಿಬಂದ ಗುಲಾಮನೆಂಬ ಹಣೆ ಪಟ್ಟಿ . ತಕ್ಷಣವೇ ಯಾವುದೇ ವಿಚಾರಣೆ ಇಲ್ಲದೆ ಶೀಕ್ಷೆ. ಪ್ರತಿಭಟನೆಯ ಸೊಲ್ಲು ಕೇಳಿಬಂದರೆ ಮರಕ್ಕೆ ನೇಣು ಹಾಕುವ ದೃಶ್ಯ ಭೀಭತ್ಸ. , ಸತ್ತವನನ್ನು ಮಣ್ಣು ಮಾಡುವಾಗ  “ He is better off, better than us” ಎನ್ನುವ ಮಾತು ಚಿತ್ರದ ಶ್ರೇಷ್ಟತೆಯ ಸಂಕೇತ.
ಮಾತಾಡಿದರೆ ನೇಣು


 ಸಾಲೊಮನ್‌ ಒಡೆಯನ ಆಣತಿಯಂತೆ ಪಿಟೀಲುನುಡಿಸುವುದು  ಸಂಗೀತಕ್ಕೆ ತಕ್ಕಂತೆ ನರ್ತಿಸಲು ಗುಲಾಮರನ್ನುಒತ್ತಾಯಿಸುವುದು ಸೋತ ಮುಖ , ಸತ್ತ ಮನಸಿನ ಅವರು ಜೀವ ಶವದಂತೆ ನರ್ತಿಸುವುದುಮೊದಲಾದ ದೃಶ್ಯಗಳು   ನೂರು ಮಾತು ಹೇಳಲಾಗದನ್ನು ಸಾರುತ್ತವೆ. ಒಡೆಯನ ಹಿಂಸೆ ತಾಳಲಾರದೆ ತನಗೆ ದಯಾಮರಣ ನಿಡೆಂದು ಬೇಡಿದ.  ಯುವತಿ ಪ್ಯಾಟ್ಸಿಗೆ  ಬುದ್ದಿ ಹೇಳಿ ಸಮಾಧಾನ ಮಾಡಿದ ಸಲೊಮನ್‌ ಅವಳನ್ನು ಬೆತ್ತಲೆ ಮರಕ್ಕೆ ಕಟ್ಟಿ ಚಾವಟಿಯಿಂದ ಒಡೆಯನ ಆಜ್ಞೆಯಂತೆ ಬೆನ್ನು ಕಿತ್ತು ಬರುವಂತೆ ಹೊಡೆಯುವುದು ನೊಡುಗರ ಕರಳು ಕಿತ್ತು ಬರುವಂತೆ ಮಾಡುವುದು.  ಆಗ ಅವನು ತನ್ನ ಪ್ರೀತಿಯ ಪಿಟೀಲು ಮುರಿಯುವುದು ಬಹಳ ಅರ್ಥ ಗರ್ಭೀತ.
ಇನ್ನು ಚಿತ್ರದ ಕೊನೆಯಂತೂ ನಮ್ಮನ್ನು ಸೀಟಿನ ತುಟ್ಟ ತುದಿಗೆ ಕೂರುವಂತೆ ಮಾಡುವುದು.ಕೆನಡಿಯನ್‌ ಬಿಳಿಯನೊಬ್ಬನ ಅನುಕಂಪದಿಂದ ನ್ಯೂಯಾರ್ಕನಲ್ಲಿರುವ ಸಾಲೊಮನ್‌ನ ಗೆಳೆಯರಿಗೆ ವಿಷಯ ತಿಳಿದು ಅವರು ಸೂಕ್ತ ದಾಖಲೆಗಳೊಂದಿಗೆ ಬಂದು ಗುಲಾಮಗಿರಿಯಿಂದ ಮುಕ್ತನ್ನಾಗಿಸುವರು. ಹನ್ನೆರಡು ವರ್ಷಧ ನಂತರ ಮತ್ತೆ ತನ್ನ ಕುಟುಂಬದವರನ್ನು ನೋಡಲು ಮನೆಗೆ ಬಂದು ಬಾಗಿಲು ತೆಗದಾಗ,  ಹೆಚ್ಚು ಕಡಿಮೆ ಮೊದಲಿನ ಹಾಗೆ ಇದ್ದ ಮಡದಿ. ಬೆಳೆದ ಮಕ್ಕಳು ಜೊತೆಯಲ್ಲಿ ಒಬ್ಬ ಪ್ರೌಢ ವಯಸ್ಕ ಕೈನಲ್ಲಿ ಒಂದು ಹಸುಗೂಸು. ಸಾಲೊಮನನ್‌ನ ಸಂತಸದ ಆ ಕ್ಷಣ  ಆತಂಕದಲ್ಲಿ ಮುಳುಗಿಸುವುದು.  ಒಂದು ಹೀಗೆ ಸುಖಿಕುಟುಂಬದ ನಡುವೆ  ತಾನು ಬಂದುದು ಸರಿಯಲ್ಲ ಅನಿಸುವುದು.  ಇಳಿದನಿಯಲ್ಲ I apologize for my appearance   ಎಂದು ಕ್ಷಮೆ ಬೇಡುವನು. ಮಗಳು ಬಂದು ಅಪ್ಪಿಕೊಂಡಾಗ ಕಣ್ಣಿನಲ್ಲಿ ನೀರಧಾರೆ. ಅವಳು ಮಗುವನ್ನು ಅವನ ಕೈಗೆ ಕೊಟ್ಟು ನಿಮ್ಮ ಮೊಮ್ಮಗು ಅದರ ಹೆಸರೂ ಸಾಲೊಮನ್‌ ಎಂದಾಗ ನಾಯಕನ ಭ್ರಮೆ ಹರಿಯುವುದು. ನೊಡುಗರಿಗೂ ನಿರಾತಂಕವಾಗುವುದು.ಆದರದಿಂದ ಮಡದಿಯನ್ನು ಅಪ್ಪಿಕೊಳ್ಳುವನು.
ಚಿತ್ರ ನಿರ್ದೇಶಕ ಸ್ಟೀವ್‌ಮೆಕ್ವಿನ್. ಈಗಾಲೇ Hunger  ಮತ್ತು Shame ಎಂಬ ಎರಡು ಸಂವೇದನಾಶೀಲ ಚಿತ್ರಗಳಿಂದ ಹೆಸರು ಮಾಡಿರುವನು. ಇದು ಅವನ ಅತ್ಯತ್ತಮ ಚಿತ್ರ.  ನಟರೂ ಒಬ್ಬರಿಗಿಂತ ಒಬ್ಬರು ಚೆನ್ನಾಗಿ ನಟಿಸಿರುವರು ಪ್ಲಾಸಿ ಪಾತ್ರಧಾರಿಣಿಗೆ ಅತ್ಯತ್ತಮ ಸಹನಟಿ ಅಸ್ಕರ್‌ ಪ್ರಶಸ್ತಿ ಬಂದಿದೆ.ಚಿತ್ರಣ ಬಹಳ ಅದ್ಭುತ.ನಮ್ಮನ್ನು ಹದಿನೆಂಟನೆಯ ಶತಮಾನದ ಕಬ್ಬುಮತ್ತು ಹತ್ತಿ ಹೊಲಗಳಿಗೆ ಕರೆದೊಯ್ಯುವುವು.ಸಂಭಾಷಣೆ ನಿಖರ.ಪ್ರತಿಯೊಂದು ಪದವೂ ಅರ್ಥ ಗರ್ಭಿತ.ಕಪ್ಪುಜನರ ಬವಣೆಯ ಕುರಿತಾದ ಚಲನ ಚಿತ್ರಗಳಲ್ಲಿ ಇದಕ್ಕೊಂದು ಸ್ಥಾನವಿದೆ. ಆಲ್‌ ಟೈಮ್‌ಕ್ಲಾ ಸಿಕ್‌ ಎನ್ನಬಹುದು
ಇಲ್ಲಿ  ಮೆಲೊಡ್ರಾಮಾಇಲ್ಲ. ಉದ್ದುದ್ದನೆಯ ಭಾಷಣ ಇಲ್ಲ . ನಾಯಕ ಸಿನೆಮಾ ಭಾಷೆಯಲ್ಲಿ ನಂತೆ ಧೀರೋದ್ದಾತನಲ್ಲ. ಸಂದರ್ಭಕ್ಕೆ ಬಲಿಯಾದ ಸಾಮಾನ್ಯ ಮನುಷ್ಯ  ಸಾಲೊಮನ್‌ .ನಾರ್ಥಪ್‌ ನಾಯಕನೂ ಅಲ್ಲ. ಎಡ್ವನ್‌ಎಪ್ಸ್‌ ಕ್ರೂರಿ, ಲೋಲುಪ ಎನಿಸಿದರೂ ಖಳನೂ ಅಲ್ಲ . ಎಲ್ಲ ಅಂದಿನ ಸಾಮಾಜಿಕ ಪರಿಸ್ಥಿತಿಯ ಪ್ರತೀಕಗಳು.ಅಂದಿನ ಆಚರಣೆ ,ರೀತಿ  ನೀತಿಯ ಕೈಗೊಂಬೆಗಳು.

.

ಸ್ಮಾರಕ ಫಲಕ


ಗುಲಾಮಗಿರಿ  ಮತ್ತು ವರ್ಣ ಬೇಧನೀತಿಯ ಕ್ರೌರ್ಯ ದಕ್ಷಿಣ ಪ್ರಾಂತ್ಯದ ಹಚ್ಚ ಹಸಿರಿನ ಪ್ರಾಕೃತಿಕ  ಹಿನ್ನೆಲೆಯ ಸುಂದರ ಪರಸರದಲ್ಲಿ ಎದ್ದು ಕಾಣುತ್ತದೆ.  ವ್ಯಕ್ತಿಯೊಬ್ಬನ ನೋವು, ಸಂಕಟ ಸಾರ್ವತ್ರಿಕವಾಗುವಂತೆ ಮಾಡಿರುವುದೇ ಈ ಚಿತ್ರದ ಸಾಧನೆಯಾಗಿದೆ.  ಚಿತ್ರ ನೋಡಿದ ಮೇಲೆ ಯಾವ ಪಾತ್ರವೂ ನೆನಪಿನಲ್ಲಿ ಉಳಿಯುವುದಿಲ್ಲ.ಆದರೆ ಒಟ್ಟುಪರಿಣಾಮ ಹಲವು ಕಾಲ ಕಾಡುವುದು  ಖಂಡಿತ


(ಚಿತ್ರ ಋಣ ಅಂತರ್‌ಜಾಲ)






No comments:

Post a Comment