Sunday, April 20, 2014

ಬಹುಮುಖ ಪ್ರತಿಭೆಯ ಡಾ.ಕೃಷ್ಣಾನಂದ ಕಾಮತ


ಪರಿಸರ ಪ್ರೇಮಿ-ಸಾಹಿತಿ-ಕೀಟ ವಿಜ್ಞಾನಿ-ಛಾಯಾಗ್ರಾಹಕ-ಅನನ್ಯ ಪ್ರವಾಸಿ-ಸರಳತೆಯ ಸಾಕಾರ  -  ಡಾ. ಕೃಷ್ಣಾನಂದಕಾಮತ



ಡಾ. ಕೃಷ್ಣಾನಂದ ಕಾಮತ ಪ್ರಶಸ್ತಿ ವಿಜೇತೆ ಸಾಹಿತಿ ನೇಮಿಚಂದ್ರ , ಪತಿ ಕೀರ್ತಿ,ಡಾ. ಜೋತ್ಸ್ನಾ ಕಾಮತ   ಮತ್ತು ಮಲ್ಲಿಕಾ

ಸಾವಯವ ಕೃಷಿ ಪ್ರಯೋಗಶಾಲೆಯಾದ ಪುಣ್ಯ ಭೂಮಿಯಲ್ಲಿ ಡಾ. ಕೃಷ್ಣಾನಂದಕಾಮತ ಅವರ ಸ್ಮರಾರ್ಣಾರ್ಥದ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿದ್ದು ಅನೇಕರಿಗೆ ಎತ್ತಣ ಮಾಮರ, ಎತ್ತಣ ಕೋಗಿಲೆ ಎತ್ತಣಿಂದ ಎತ್ತ ಸಂಬಂಧವಯ್ಯಾ ಎನಿಸಿರುವುದು ಸಹಜ.   ಆದರೆ ಒಳ ಹೊಕ್ಕು ನೋಡಿದರೆ ಎರಡು ಸಂಘಟನೆಗಳಿಗೂ ಸಾವಯವ ಸಂಬಂಧವಿರುವುದು ಗೊತ್ತಾಗುವುದು. ಇದಕ್ಕೆ ಕಾಮತ್‌ ಎಂಬ ಹೆಸರೇ ಸಾಂಕೇತಿಕವಾಗಿದೆ. ಅದು ಅವರ ಮನೆತನದ ಹೆಸರು. ಕಾಮತ್‌ ಎಂಬುದನ್ನು ಘಟ್ಟದ ಕೆಳಗೆ ಕಮ್ತಿ ಎನ್ನುತ್ತಾರೆ. ಅಂದರೆ ಅದರ ಅರ್ಥ ಕೃಷಿಕರು ಎಂದು. ಇದೇ ಅರ್ಥ ಕನ್ನಡ ನಾಡಿನ ಉತ್ತರ ಕರ್ನಾಟಕದಲ್ಲೂ ಪ್ರಚಲಿತ. ಕಮತ ಇಟ್ಟವರು ಎಂದರೆ ಕೃಷಿಕರು ಎಂದೇ ಬಳಕೆಯಲ್ಲಿದೆ.  ಅಂದರೆ ಕೃಷಿ ಕಾಮತ್‌  ಕುಟುಂಬದ ಮೂಲ ಕಸಬು.  ನಂತರ ವ್ಯಾಪಾರ,  ಉದ್ಯಮ, ಶಿಕ್ಷಣ ಸಾಹಿತ್ಯ ರಂಗದಲ್ಲೂ ಮಿಂಚಿದರು ಹೋಟೆಲ್‌ ಉದ್ಯಮದಲ್ಲೂ ದೊಡ್ಡ ಹೆಸರು. ಅಲ್ಲದೆ  ಕೄಇ ಎಂದರೆ ಪರಿಶ್ರಮ ಎಂಬ ಅರ್ಥವೂ ಇದೆ. ಹಾಗಾಗಿ  ಕೃಷಿ ಹಿನ್ನೆಲೆಯಲ್ಲಿರುವ ಹೆಸರಿನ ಪ್ರಶಸ್ತಿಯನ್ನು ಮಾದರಿ ಕೃಷಿ ಕ್ಷೇತ್ರದಲ್ಲಿ ನೀಡುವುದು ಬಹುಸೂಕ್ತವಾಗಿರುವುದು. ಅದರ ಜೊತೆಗೆ  ಪ್ರಶಸ್ತಿ ಪಡೆಯುತ್ತಿರುವ  ನೇಮಿಚಂದ್ರ ಅವರೂ ವೈಜ್ಞಾನಿಕ, ವಿಚಾರಪರ ಬರಹಕ್ಕೆ ಹೆಸರಾದವರು.  ಕೃಷಿ ವಿಜ್ಞಾನ ಎಲ್ಲ ವಿಜ್ಞಾನಗಳ ತಾಯಿ.  ಕಾರಣ ಅನ್ನ ದೇವರಿಗಿಂತ ಇನ್ನು ದೇವರು ಇಲ್ಲ ಎಂಬ ಮಾತನ್ನು ಎಲ್ಲರೂ ಬಲ್ಲರು.  ಇದರ ಜೊತೆ ಜೊತೆಗೆ ಪ್ರಬಲವಾದ ಮೂರನೆಯ ಕಾರಣವೂ ಇದೆ. ಪುಣ್ಯಭೂಮಿಯ ಚಾಲಕ ಶಕ್ತಿಯಾದ ಡಾ. ವಿಜಯ ಅಂಗಡಿಯವರು ಆಕಾಶವಾಣಿಯಲ್ಲಿ ಕೃಷಿರಂಗದ ಮೂಲಕ ಕರ್ನಾಟಕದಾದ್ಯಂತ ಹೆಸರಾದವರು.  ಅವರು ದನಿ ವಿಶೇಷವಾಗಿ ಹಾಸನ ,ಕೊಡುಗು ಹಾಗೂ ಚಿಕ್ಕಮಗಳೂರು ಜಿಲ್ಲೆಯ ರೈತರಿಗೆ ದೈನಂದಿನ ಕೃಷಿ ಮಾರ್ಗದರ್ಶಿ. ಈ ದಿಶೆಯಲ್ಲಿ ಆಕಾಶವಾಣಿಯ ಪಾತ್ರವೂ ಬಹು ಹಿರಿದು. ಈ ಪ್ರಶಸ್ತಿಯ ಮೂಲಪ್ರೇರಣೆಯಾದ ಡಾ.ಜ್ಯೋತ್ಸ್ನಾ ಕಾಮತ್‌ ಆಕಾಶವಾಣಿಯ ಹಿರಿಯ ಹುದ್ದೆಯಲ್ಲಿ ಇದ್ದು ಕೃಷಿಯೂ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳ ರೂವಾರಿಗಳು.  ವಿಶೇಷವೆಂದರೆ ವಿಜಯಅಂಗಡಿ ಅವರ ನೇಮಕಾತಿ ಸಮಿತಿಯಧ್ಯಕ್ಷರಾಗಿದ್ದು ಪ್ರತಿಭೆಯನ್ನು ಗುರುತಿಸಿದವರು.  ಹೀಗಾಗಿ ಪುಣ್ಯ ಭೂಮಿ ಕೃಷಿ, ಸಾಹಿತ್ಯ ಮತ್ತು ಸಂವಹನ ಗಳ ತ್ರಿವೇಣಿ ಸಂಗಮವಾಗಿದೆ.
ಡಾ.ಕೃಷ್ಣಾನಂದ ಕಾಮತ


ಈಗ ನಾನು ಕೃಷ್ಣಾನಂದರ ಸಂಕ್ಷಿಪ್ತ ಪರಿಚಯಕ್ಕೆ  ಪ್ರಯತ್ನಿಸುವೆ. ಕೃಷ್ಣಾನಂದರು ನನಗೆ ಸುಮಾರು ಮೂವತ್ತು ವರ್ಷಗಳಿಂದ ಪರಿಚಿತರು . ನನ್ನ ಮದುವೆಯ ದಿನದಿಂದ ಅವರ ಪರಿಚಯವಾಯಿತು. ಅಂದರೆ ಅವರು ನನ್ನ ಮದುವೆಗೆ ಬಂದಿದ್ದರು ಎಮದಲ್ಲ. ಆ ಸಮಯದಲ್ಲಿ ಧಾರವಾಡದಿಂದ ಬಂದ ಗೆಳೆಯರೊಬ್ಬರು ಅದೇ ಪ್ರಕಟವಾದ  ಕೃಷ್ಣಾನಂದ ಕಾಮತ ಅವರ ನಾನೂ ಅಮೇರಿಕಾಗೆ ಹೋಗಿದ್ದೆ  ಪುಸ್ತಕ ನೀಡಿದ್ದರು.  ಅಂದು ಪ್ರಾರಂಭವಾದ  ಸಂಬಂಧ ಹಾಗೆಯೇ ಮುಂದುವರಿದು, ಅದು ನನ್ನ ಮಗನಿಗೂ ಹರಡಿತು.  ಅವರ ಸಾಹಿತ್ಯದ ಕಟ್ಟಾ ಅಭಿಮಾನಗಳಾದೆವು.  ನನಗೆ ಏಕೆ ಯಾರೇ ಒಬ್ಬ ಗಂಭೀರ ಸಾಹಿತ್ಯ ಅಭ್ಯಾಸಿಗೆ ಅವರ ಪ್ರವಾಸ ಕಥನಗಳು ಪ್ರವಾಸಿ ಸಾಹಿತ್ಯದ ಮೈಲುಗಲ್ಲುಗಳು. ಕರ್ನಾಟಕದ ಕಡಲ ತೀರದ ಪುಟ್ಟ ಪಟ್ಟಣ ಹೊನ್ನಾವರದ ವ್ಯಾಪಾರಿ ಕುಟುಂಬದಲ್ಲಿ ೧೯೩೪ ರಲ್ಲಿ ಜನಿಸಿದ ಕೃಷ್ಣಾನಂದರು, ಮೂಲತಃ ವಿಜ್ಞಾನದ ವಿದ್ಯಾರ್ಥಿ.  ಅದರಲ್ಲೂ ಜೀವಶಾಸ್ತ್ರ ವೆಂದರೆ ಅವರಿಗೆ ಜೀವ. ಅದರಲ್ಲಿ ಧಾರವಾಡದಲ್ಲಿ ಪದವಿ ಪಡೆದರು.  ಸ್ನಾತಕೋತ್ತರ ಪದವಿಯ ಮೊದಲ ತಂಡವೂ ಅವರದೇ. ನಂತರ ಉನ್ನತ ಶಿಕ್ಷಣಕ್ಕಾಗಿ ಅಮೇರಿಕಾಕ್ಕೆ ತೆರಳಿದರು. ಸಿರಾಕ್ಯುಸ್‌ ಸ್ಟೇಟ್‌ ಯೂನಿವರ್ಸಿಟಿಯಲ್ಲಿ ಅರಣ್ಯ ಮತ್ತು ಪರಿಸರ ವಿಷ  ಅಧ್ಯಯನ ಮಾಡಿದರು.  ಅದು ತುಂಬ ಕಠಿಣ ವಿಷಯ. ಇವರ ಜೊತೆಯಲ್ಲಿಯೇ ಸೇರಿದ್ದ ಇನ್ನೊಬ್ಬ ಧಾರವಾಡದ ಸಹಪಾಠಿ ಎರಡೇ ವಾರದಲ್ಲಿ ಹೊರಬಂದ.  ಸುಮಾರು ೧೦ ಜನ ಅಮೇರಿಕಾದ ವಿದ್ಯಾರ್ಥಿಗಳೇ ಒಂದು ಸೆಮಿಸ್ಟರ್‌ ಮುಗಿಸದೆ ಕೈ ಬಿಟ್ಟರು.  ಭಾರತದಲ್ಲಿ ಹೆಸರಾಂತ ಜಿಮ್‌  ಕಾರ್ಬೆಟ್‌ ಅಲ್ಲಿ ನಾಲ್ಕುವರ್ಷ ಅಧ್ಯಯನ ಮಾಡಿದರೂ ಡಾಕ್ಟರೇಟ್‌ ಪಡೆಯಲಾಗಲಿಲ್ಲ.  ಇಂಥಹ ಆದುನಿಕ ಮತ್ತು ಕ್ಲಿಷ್ಟ ವಿಷಯದಲ್ಲಿ ಕಾಮತರು ಶ್ರದ್ಧೆಯಿಂದ ಅಧ್ಯಯನ ಮಾಡಿ, ಪರಿಸರ ಮತ್ತು ಅರಣ್ಯಶಾಸ್ತ್ರದಲ್ಲಿ( ಎಂಟಮಾಲಜಿ) ಪರಿಣತೆ ಪಡೆದುರು.  ಪ್ರಸಿದ್ಧ ರಾಕ್‌ ಫೆಲ್ಲರ್ ಮತ್ತು ಫೋರ್ಡ ಫೌಂಡೇಷನ್ ವಿದ್ಯಾರ್ಥಿ ವೇತನ ಪಡೆದ ಪ್ರತಿಭಾನ್ವಿತರಾದ ಅವರು ಶಿಕ್ಷಣ ಮುಗಿದ ಮೇಲೆ ಅಮೇರಿಕಾದ ೨೨ ರಾಜ್ಯಗಳ ಪರಿಸರ ಮತ್ತು ಕಾದಿಟ್ಟ ಕಾಡುಗಳ ಅಧ್ಯಯನ ನಡೆಸಿದರು.  ಬಹುತೇಕ ರಾಜ್ಯಗಳಿಗೆ ಬಸ್ಸಿನಲ್ಲೇ ಪ್ರಯಾಣ ಮಾಡಿದರು. ಇವರ ಅಧ್ಯಯನದ ಮಹತ್ವವನ್ನು ಮನಗಂಡ ಅಮೇರಿಕಾ ಸರಕಾರವೇ ಅವರ ಪ್ರವಾಸಕ್ಕೆ ಪ್ರಾಯೋಜಿಸಿತ್ತು. ಅಷ್ಟೆಲ್ಲ ಅಧ್ಯಯನ ನಡಸಿದವರಿಗೆ ಅಮೇರಿಕಾದಲ್ಲಿ ಅವರಿಗೆ ವಿಫುಲ ಅವಕಾಶ.  ಹೆಸರು, ಹಣ , ಹುದ್ದೆ ಕೈ ಮಾಡಿ ಕರೆದರೂ ಉತ್ಕಟ ದೇಶಾಭಿಮಾನಿಯಾದ ಅವರು ಭಾರತದ ಏಳಿಗೆಗೆ ತಮ್ಮ ಜ್ಞಾನ ಮೀಸಲಿಡಲು ನಿರ್ಧರಿಸಿ ಮರಳಿ ಸ್ವದೇಶಕ್ಕೆ ವಾಪಸ್ಸಾದರು.  ಪಾರಂಪರಿಕ ಕೃಷಿವಿಧಾನದಿಂದ ಕೃಷಿ ಉತ್ಪಾದನೆ ಕಡಿಮೆ ಇದ್ದಿತು. ಕ್ರಿಮಿಕೀಟ ರೋಗಗಳ ಹಾವಳಿಯಿಂದ ರೈತರು ಕಂಗಾಲಾಗಿದ್ದರು.  ಅದು ಅವರ ಸ್ವಂತ ಅನುಭವವೂ ಆಗಿತ್ತು. ಅದೆಲ್ಲಕ್ಕೂ ಸೂಕ್ತ ಪರಿಹಾರ ವೈಜ್ಞಾನಿಕ ಸಂಶೋಧನೆಯೇ ಆಗಿತ್ತು. ಆದರೆ ನಮ್ಮದೇಶದ ದುರ್ದೈವ ಅವರಿಗೆ ಸೂಕ್ತ ಉದ್ಯೋಗವೇ ದೊರಕಲಿಲ್ಲ.  ಕೆಲವೇ ವರ್ಷ ರಾಜಾಸ್ಥಾನದಲ್ಲಿ ಕೀಟ ವಿಜ್ಞಾನಿಯಾಗಿ ನಂತರ ಪ್ಲಾಸಿಯಲ್ಲಿ ಕಬ್ಬಿನ ಕೀಟಗಳ ಕುರಿತ ಅಧ್ಯಯನದಲ್ಲಿ ಸಕ್ರಿಯವಾಗಿದ್ದರೂ ಸೂಕ್ತ ಅವಕಾಶ ದೊರಕದೆ  ಹೋಯಿತು.   ಮರಳಿ ತೌರುರಾಜ್ಯಕ್ಕೆ ಬಂದರು.  ಕೀಟ ವಿಜ್ಞಾನಿಯ ಗಮನ ಫೊಟೋಗ್ರಫಿ, ಸಾಹಿತ್ಯ ಮತ್ತು ಪ್ರವಾಸದತ್ತ ತಿರುಗಿತು.  ಅರಣ್ಯ ಮತ್ತು ಕೃಷಿ ರಂಗಕ್ಕ ಆದ ನಷ್ಟ ಇನ್ನು ಹಲವು ರಂಗಗಳಿಗೆ ವರದಾನವಾಯಿತು.ಅದಕ್ಕೆ ತಕ್ಕಂತೆಮಡದಿ ದೊರೆತಳು. 
ಡಾ.ಜೋತ್ಸ್ನಾ  ಕಾಮತ



ಜ್ಯೋತ್ಸ್ನಾಕಾಮತ್ ಇತಿಹಾಸ ಸಂಶೋಧಕಿ ಸಾಹಿತಿ ಅದೆಲ್ಲಕ್ಕೂ ಮಿಗಿಲಾಗಿ ಆಕಾಶವಾಣಿಯಲ್ಲಿ ವರಿಷ್ಠ ಅಧಿಕಾರಣಿ. ಪತ್ನಿಯಿಂದ ಉತ್ತೇಜನ ಪಡೆದು ಸಾಹಿತ್ಯ ರಚನೆಗೆ ಮುಂದಾದರು.  ಹೆಂಡತಿಯ ಒತ್ತಾಸೆಯಿಂದ ತಮ್ಮ ಅಮೆರಿಕಾದ ಅನುಭವವನ್ನು ಪುಸ್ತಕ ರೂಪದಲ್ಲಿ ಹೊರತಂದರು. ಅದನ್ನು ಧಾರವಾಡದ ಮನೋಹರ ಗ್ರಂಥ ಮಾಲೆ ಪ್ರಕಟಿಸಿತು. ಅವರ ಪ್ರಥಮ ಕೃತಿಯಿಂದಲೇ ಹೆಸರು ಬಂದಿತು.

  ಪ್ರವಾಸ ಸಾಹಿತ್ಯದಲ್ಲಿ ಅದೊಂದು ಮೈಲಿಗಲ್ಲಾಯಿತು. ಪದವಿ ತರಗತಿಗಳಿಗೆ ಪಠ್ಯ ಪುಸ್ತವಾಗುವಷ್ಟು ಗಟ್ಟಿಯಾಗಿತ್ತು ಅವರ ಸಾಹಿತ್ಯ.   ರಾಜಸ್ತಾನದ ಜೊಬೆನೇರ್‌ ಮತ್ತು ಬಂಗಾಲದ ಪ್ಲಾಸಿ  ಅವರ ವೃತ್ತಿ ಜೀವನಕ್ಕೆ ತೃಪ್ತಿ ಕೊಡದಿದ್ದರೂ ಅವರ ಪ್ರವೃತ್ತಿಯಾದ ಸಾಹಿತ್ಯ  ಮತ್ತು ಛಾಯಾಗ್ರಹಣಕ್ಕೆ ವಿಶೇಷ ಅನುವು ಕೊಟ್ಟಿತ್ತು.  ಆ ಅನುಭವದ ಫಲವೇ ಮತ್ತೆರಡು ಪ್ರವಾಸ ಕಥನಗಳು.ಅವು ಬರಿ ಪ್ರವಾಸ ಸಾಹಿತ್ಯವಾಗದೇ ಸಾಂಸ್ಕೃತಿಕ, ಸಾಮಾಜಿಕ ಮತ್ತು ಜನಾಂಗೀಯಅಧ್ಯನದ ವಿವಧ ಮಜಲುಗಳನ್ನು ಹೊಂದಿದ್ದು ಹೊಸ ಆಯಾಮವನ್ನೇ ತೆರೆದವು. ಅವರಿಗೆ ಇದರಿಂದ ಸರಸ್ವತಿ ಕೃಪೆಯಾದರೂ ಲಕ್ಷ್ಮೀ ಪ್ರಸನ್ನಳಾಗಲಿಲ್ಲ. ಇದ್ದ ಕೆಲಸವನ್ನೂ ಬಿಟ್ಟು ಬೆಂಗಳೂರಿಗೆ ಬಂದರು.
ಛಾಯಾಗ್ರಾಹಣ ತರಬೇತಿ ಪಡೆದು  ಮೊದಲು ಮಾಡಿದ್ದಲ್ಲ.   ಅದು ಹವ್ಯಾಸ ಮಾತ್ರ.  ಅದೇ ಜೀವನಾಧಾರವಾಯಿತು. ಪ್ರವೃತ್ತಿಯಾಗಿ ಮಾಡುತಿದ್ದುದು ವೃತ್ತಿಯಾಯಿತು, ಎಲ್ಲ ಸ್ವಅಧ್ಯಯನದ ಫಲ.  ಅದೂ ವೈಜ್ಞಾನಿಕ ಛಾಯಾಗ್ರಾಹಕರಾಗಿ ಬೆಂಗಳುರಿನಲ್ಲಿ   “Scientific Photo Laboratory” ತೆರೆದರು.  ಅವರ ಕೆಲಸ ಟಾಟಾ ಇನಸ್ಟಿಟೂಟ್‌, ರಾಮನ್‌ ಇನಸ್ಟಿಟ್ಟ್ಯೂಟ್ ಮತ್ತು ಡೈರಿ ಸಂಶೋಧನಾಕೇಂದ್ರ , ಕೃಷಿ ಸಂಶೋಧನಾ ಕೇಂದ್ರ ಇತ್ಯಾದಿ ಹಲವಾರು ಸಂಶೋಧನಾ ಸಂಸ್ಥೆಗಳ  ವಿಜ್ಞಾನಿಗಳಿಗೆ ಅತಿ ಸೂಕ್ಷ್ಮ ಛಾಯಾಗ್ರಹಣಕ್ಕೆ ನೆರವಾದರು.   ವಿಜ್ಞಾನಿಯಾಗಿ ಅವರ
ಜ್ಞಾನ ಬಳಕೆಯಾಗದಿದ್ದರೂ ವೈಜ್ಞಾನಿಕ ಸಂಶೋಧನೆಗೆ ಅವರು ಅನಿವಾರ್ಯವಾದರು.
 ಅವರು ಮೂಲತಃ ವಿಜ್ಞಾನಿ,  ಒಂದು  ವಿಷಯದಲ್ಲಿನ  ಪ್ರಾವಿಣ್ಯ ಇನ್ನೊಂದರಲ್ಲಿ ಪ್ರತಿಫಲಿಸುವುದ ಸಹಜ. ಎಲ್ಲಕ್ಕಿಂತ ಮಿಗಿಲಾಗಿ ಅವರ ತನ್ಮಯತೆ ಮತ್ತು ಕಾರ್ಯತತ್ಪರತೆ ಅವರನ್ನು ವೈಜ್ಞಾನಿಕ ಛಾಯಾಗ್ರಹಣದಲ್ಲಿ ಸಿದ್ಧ ಹಸ್ತರನ್ನಾಗಿಸಿತು.  ಛಾಯಾಗ್ರಹಣ ಅವರಿಗೆ ಹೊಟ್ಟೆ  ಹೊರೆಯುವ ಕೆಲಸ ವಾಗಿರಲಿಲ್ಲ. ಜೀವನಪ್ರೀತಿಯ ವಿಷಯವಾಗಿತ್ತು. ಅವರಲ್ಲಿ ವಿಜ್ಞಾನ ಮತ್ತು ಕಲೆ ಮೇಳೈಸಿತು. ಅದರಿಂದ ಅವರಿಗೆ ಹತ್ತಿರವಾದವರು ಅನೇಕರು. ಡಾ. ಶೇಷಶಾಸ್ತ್ರಿ,  ಡಾ.ಸೋಮಶೇಖರ, ಮಲ್ಲಿಕಾರ್ಜುನ್‌  ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುವುದು. ಅವರಿಗೆ ಛಾಯಾಗ್ರಹಣ ಹಣಗಳಿಸುವ ಸಾಧನವಾಗಿರದೆ  ಕಲಾರಾಧನೆಯಾಗಿತ್ತು. ಎಷ್ಟೋ ಕಲಿಕಾಸಕ್ತರಿಗೆ ಫೊಟೋಗ್ರಫಿಯ ಒಳಗುಟ್ಟು ಹೇಳುವದರ ಜೊತೆಗೆ ಫಿಲ್ಮಗಳನ್ನು ಪುಕ್ಕಟೆಯಾಗಿ ಕೊಟ್ಟು ಪ್ರೋತ್ಸಾಹಿಸಿದ್ದೂ ಉಂಟು. ಕೃಷ್ಣಾನಂದ ಕಾಮತರು  ಕುಂಚಕೆಲೆ, ರೇಖಾಚಿತ್ರಗಳಲ್ಲಿ ಸಿದ್ಧ ಹಸ್ತರು . ಸರಳ ಜೀವಿ, ಎಲೆಯ ಮರೆಯ ಕಾಯಿ, ಮನೆಯಲ್ಲಿ  ಟಿ.ವಿ ಇಲ್ಲ. ಫ್ರಿಜ್‌ ಇಲ್ಲ,  ಕೆಲಸದವರು ಇಲ್ಲ.  ಹೆಂಡತಿ ಡಾ.ಜ್ಯೋತ್ಸನಾಕಾಮತ್‌ ಅತ್ಯುನ್ನತ ಹುದ್ದೆಯಲ್ಲಿ ಇದ್ದರೂ ಮನೆಗೆಲಸ ಮಾಡಿಯೇ ಕಚೇರಿಗೆ ಹೋಗುವರು. ಕಾರಣ ಎಲ್ಲ ಕೆಲಸಗಳಲ್ಲೂ ಕೃಷ್ಣಾನಂದರ ಸಹಾಯ ಹಸ್ತ. ಮೇಲು ಕೀಳು ಎಂಬ ಮಾತೇ ಇಲ್ಲ. ಡಿಗ್ನಿಟಿ ಅಫ್‌ ಲೇಬರ್ ಎನ್ನುವುದು ಅವರಿಗೆ ರಕ್ತ ಗತ. ಬಸವಣ್ಣನವರ ಕಾಯಕವೇ ಕೈಲಾಸ  ಎಂಬ ಮಾತು ಅವರಲ್ಲಿ ನೂರಕ್ಕೆ ಇನ್ನೂರರಷ್ಟು. ಅವರ ಪರಿಸರ ಪ್ರೇಮ ಜೊತೆಗೆ   ಛಾಯಾಗ್ರಹಣ ಪ್ರವಾಸಕ್ಕೆ ಇನ್ನಷ್ಟೂ ಒತ್ತಾಸೆ ನೀಡಿತು. ಅದರ ಫಲವಾಗಿ ಲಕ್ಷಾಂತರ ಅಪರೂಪದ ಫೋಟೋಗಳನ್ನು ತೆಗೆದರು. ಸುಮಾರು ಇಪ್ಪತ್ತು ಕೃತಿ ರಚನೆ ಮಾಡಿದರು. ಪ್ರಾಣಿ, ಪಕ್ಷಿ, ಜನ, ವನ. ಶಿಲ್ಪ ಎಲ್ಲದರಲ್ಲೂ ಅಷ್ಟೇ ಆಸಕ್ತಿ.. 
ವಿನಾಶದ ಅಂಚಿನಲ್ಲದ್ದ ತಮ್ಮ ಭಾಗದ  ಗ್ಕಾರಾಮೀಣ ಚಿತ್ರ ಕಲೆಯ  ಉಳುವಿಗೆ ಬಹಳ ಪ್ರಯತ್ನ ನಡೆಸಿದರು . ಅವರ ಕಾವಿ ಕಲೆ ಉತ್ತಮ ಕಲಾ ಕೃತಿ.
ಹೊರ ನೋಟಕ್ಕೆ ಕಟ್ಟಾಮೊಟಾ ದೇಹ. ಅಮೇರಿಕಾ ಬಿಟ್ಟ ಮೇಲೆ ಸೂಟು ಬೂಟು ಇಲ್ಲ, ಸಾದಾ ಅಂಗಿ ಪ್ಯಾಂಟು. ಮನೆಯಲ್ಲಿ ಮೊಣಕಾಲಿ ವರೆಗೆ ಬರುವ ಪಟ್ಟಾ ಪಟ್ಟಿಮೊಣ ಕಾಲಿನ ವರೆಗಿನಇ ಚಲ್ಲಣ ಮತ್ತು ಬನಿಯನ್‌ಧಾರಿ. ಒಂದು ರೀತಿಯಲ್ಲಿ ಅವರು ಇಂದಿನ ಫ್ಯಾಷನ್‌ ಪ್ರವರ್ತಕರು ಎನ್ನಬಹುದು. ಈಗ ಹುಡುಗ ಮುದುಕ ಎನ್ನದೆ, ಗಂಡು ಹೆಣ್ಣಿನ ಬೇಧವಿಲ್ಲದೆ   ಧರಿಸುವ ಬರ್ಮುಡಾದ ಮೂಲ ರೂಪವೇ ಅದಾಗಿತ್ತು ಎನ್ನಬಹುದು. ಅದಕ್ಕೆ ಕಾರಣ ಹುಡುಕುವುದು ಸರಳ. ಮಂಡ್ಯ ಜಿಲ್ಲೆಗೆ ಹೋದರೆ ಹಸಿರು ಗದ್ದೆಯಲ್ಲಿ ಚಡ್ಡಿಧಾರಿ ರೈತರು  ಕೆಲಸ ಮಾಡುವುದು ಹಿಂದೆ  ಸಾಮಾನ್ಯ ದೃಶ್ಯವಾಗಿತ್ತು . ಹೊರಗೆ ಹೋಗುವಾಗ ಮಾತ್ರ ಹೆಗಲ ಮೇಲೆ ಟವಲ್‌. ಅದಕ್ಕೆ ಎಷ್ಟೋ ಜನ ಎಚ್‌.ಎಂ. ಟಿ. ಎನ್ನುತಿದ್ದರು. ಆದರೆ ರೈತಾಪಿ ಕೆಲಸಕ್ಕೆ ಆ ಉಡುಪು ಎಷ್ಟು ಸಹಕಾರಿ ಎಂಬುದು ಕೆಲಸ ಮಾಡುವವರಿಗೇ ಗೊತ್ತು ಹುಟ್ಟಾ ಕೆಲಸಗಾರರಾದ, ಸದಾ ಕಾರ್ಯತತ್ಪರರಾದ ಕಾಮತರದು ಮನೆಯಲ್ಲಿ ಅದೇ ಉಡುಪಾಗಿತ್ತು. ಎಷ್ಟೋ ಸಲ ಹೊಸಬರು ಬಂದಾಗ ಸೀದಾ ಅಡುಗೆ ಮನೆಗೆ ಹೋಗಿ ಕಾಫಿ ಕಪ್ಪು  ತರುವ ಇವರನ್ನು ನೋಡಿದವರು ಕೆಲಸದವರು ಎಂದುಕೊಂಡು ದ್ದೂಉಂಟು. ಎಲ್ಲದ್ದಕ್ಕೂ ಡಾ. ಕಾಮತ್‌ ಎಂದರೆ ಮುಗಳ್‌ ನಗುವೇ ಉತ್ತರವಾಗಿದ್ದಿತು. ಈ ಸರಳತೆ ಬಹಳ ವಿರಳ. ಇದು ನನ್ನ ಗುರುಗಳಾದ ಎಚ್‌. ನರಸಿಂಹಯ್ಯನವರಲ್ಲೂ ಇದ್ದಿತು. ಮಗನ ಸೀಟಿಗೋಸ್ಕರ ಕಾರಿನಲ್ಲಿ ಬಂದ ಜಬರದಸ್ತಿನ ವ್ಯಕ್ತಿಯೊಬ್ಬ ಕಚೇರಿಯ ಹೊರಗೆ ನಿಂತಿದ್ದ ಬಿಳಿಯ ಖಾದಿಲುಂಗಿ ಜುಬ್ಬ ಧಾರಿಯಾದ ಇವರನ್ನು ನೋಡಿ ಎಲ್ಲಯ್ಯಾ ನಿಮ್ಮ ಪ್ರಿನ್ಸಿಪಾಲರು ಎಂದಾಗ, ಅವರು ಹತ್ತೂವರೆಗೆ ಸರಿಯಾಗಿ ತಮ್ಮ ಚೇಂಬರಿನಲ್ಲಿ ಇರುವರು ಎಂದು ವಿಯದಿಂದ ಉತ್ತರಿಸಿದರು .ಸರಿ ಹನ್ನೊಂದಕ್ಕೆ ಬರುವೆ ಹೇಳು ಎಂದು  ಆ ವ್ಯಕ್ತಿ  ಹೋದರು.  ಮತ್ತೆ ಬಂದು ನೋಡಿದಾಗ ಕುರ್ಚಿಯಲ್ಲಿ ಕುಳಿತವರನ್ನು ನೋಡಿ ದಂಗು. ಏನು ಜವಾನ  ಎಂದುಕೊಂಡವ ಕುರ್ಚಿಯಲ್ಲಿ ಕುಳಿತಿರು!. ಬಂದವರು ನಾಚಿ ಕ್ಷಮೆ ಕೇಳಿದರಂತೆ. ಇವರದೂ ಅದೇ ಗುಣ. ಒಂದುಸಲ ಮಾಧ್ಯಮದವರು ಬಂದು ನಾವು ಡಾ. ಕಾಮತ ಅವರ ಸಂದರ್ಶನ ಮಾಡಬೇಕು ಎಂದಾಗ, ನೀವು ತಪ್ಪು ವಿಳಾಸಕ್ಕೆ ಬಂದಿರುವಿರಿ ಡಾ. ಸೂರ್ಯನಾಥ ಕಾಮತ್‌ ನಾನಲ್ಲ ಅವರ ವಿಳಾಸ ಬೇರೆ ಇದೆ.  ಕೊಡುವೆ ಎಂದರು. ಇಲ್ಲ ಸಾರ್‌ ನಮಗೆ ಬೇಕಿರುವುದು ಡಾ. ಕೃಷ್‌ನಂದ ಕಾಮತ್‌ ಎಂದಾಗ ಓ ! ಹಾಗೋ , ಹಾಗಾದರೆ ಬನ್ನಿ ನಾನೇ ಕೃಷ್ಣಾನಂದ ಕಾಮತ್‌ , ಎಂದಾಗ ಕಣ್ಣು ಬಿಡುವ ಸರದಿ ಆ ವರದಿಗಾರರದಾಗಿತ್ತು.
ಹುಟ್ಟುತ್ತಾ ಲಕ್ಷ್ಮೀ ಪುತ್ರ. ಆದರ ಜೀವನದುದ್ದಕ್ಕೂ ಸರಸ್ವತಿಯ ಆರಾಧನೆ. ಮಲ್ಲೇಶ್ವರದಲ್ಲಿ ೧೮ ನೆಯ ಕ್ರಾಸಿನಲ್ಲಿನ ಮನೆ. ಅಲ್ಲಿಂದ ತಮ್ಮ ಸೈಂಟಿಫಿಕ್‌ ಪೋಟೊ ಲ್ಯಾಬ್‌ಗೆ ಸೈಕಲ್‌ ಮೇಲೆ ಇಲ್ಲವೇ ಕಾಲುನಡಗೆಯಲ್ಲಿಯೇ ಹೋಗುವರು, ಅವರದು ಮನ ಮೆಚ್ಚಿದ ಸಂಗಾತಿಯ ಜೊತೆ ಮದುವೆ. ಆದರೆ ಜೊತೆಗಿದ್ದು ಬಹಳ ಕಡಿಮೆ.  ಅಖಿಲಭಾರತೀಯ ಸೇವೆಯಲ್ಲಿದ್ದ ಮಡದಿಯ ವೃತ್ತಿಗೆ ಅನಾನುಕೂಲವಾಗ ಬಾರದೆಂದು ಆಗೀಗ ಬಂದೊದಗುವ  ವಿರಹವನ್ನು ಸಹಿಸಿದರು. ಆದರೆ ಅವರ ಪ್ರೀತಿಯ ಒರತೆ ಅದರಿಂದ ಇನ್ನೂ ಹೆಚ್ಚಿತು. ಅವರದು ಪತ್ರ ದಾಂಪತ್ಯ ಎಂದೂ ಹಾಸ್ಯ ಮಾಡಿಕೊಳ್ಳುತಿದ್ದರು. ಅವರ ಸತತ ತಮ್ಮ ಮಡದಿಗೆ ಬರೆದ ಪ್ರೇಮ ಪತ್ರಗಳೇ ಒಂದು ಉತ್ತಮ ಸಾಹಿತ್ಯ ಕೃತಿಯಾಗಿ ಹೊರಬಂದಿದೆ.   ಅದು ಅವರ ಜೀವನ ದೃಷ್ಟಿ ಮತ್ತು ಸಂಸಾರಸಾರದ ಪ್ರತೀಕವಾಗಿದೆ.  ಅವರ ಸಾಹಿತ್ಯವು ಬರೀ ಪ್ರವಾಸಕಥನಕ್ಕೆ ಸೀಮಿತವಾಗದೇ ಪರಿಸರ ನಿಳಜಿಯ ಪ್ರತಿಬಿಂಬವಾಯಿತು. ಸಸ್ಯ ಪ್ರಪಂಚ,ಪ್ರಾಣಿ ಪ್ರಪಂಚ , ಕುರಿತ  ಬರವಣಿಗೆಯೂ ಬಹಳ ಚೇತೋಹಾರಿ. ಕಾಗೆಯ ಕಾಯಕ, ಇರುವೆಯ ಇರವು, ಕೀಟ ಪ್ರಪಂಚ. ಮರುಪಯಣ ನಾಶವಾಗುತ್ತಿರುವ ಪರಿಸರದ ಕುರಿತಾದ ಚಿಂತನೆಗಳಾದರೆ 
ಗ್ರಾಮೀಣ ಕಾವಿ ಕಲೆ

   
ಕಾವಿಯ ಕಲೆ ಅಳಿದು ಹೋಗುತ್ತಿರುವ ವಿಶೇಷ ಕಲಾಪ್ರಕಾರದ ಪರಿಚಯ ಮಾಡಿಸುತ್ತದೆ. ಅವರದು ಬಹು ಮುಖ ಪ್ರತಿಭೆ. ತಮ್ಮ ಪುಸ್ತಕಗಳಿಗೆ ತಾವೇ ಛಾಯಾ ಚಿತ್ರ, ರೇಖಾ ಚಿತ್ರ ರಚಿಸುತಿದ್ದರು. ಅದರಂದಾಗಿ ಅವರ ಕೃತಿಗಳು ಸಾಹಿತ್ಯ, ವಿಜ್ಞಾನ ಮತ್ತು ಕಲೆಯ ಸಂಗಮ.ಬುದ್ದಿಗೆ, ಭಾವಕ್ಕೆ ಮನಸಿಗೆ ಮುದ ಕೊಡುವವು.
ಅವರ ಏಕ ಮಾತ್ರ ಪುತ್ರ ವಿಕಾಸ ಕಾಮತ, ಅಮೇರಿಕಾ ವಾಸಿ. ಸೊಸೆ ಕಾಂಪ್ಯೂಟರ್‌ ಇಂಜನಿಯರ್‌.  ಕೋರಿಯನ್‌ ಮಹಿಳೆ ಗಣಿತಜ್ಞೆ.   ನಾಲ್ಕು ಜನರ ನಡುವೆ ಮೂರು ಡಾಕ್ಟರೇಟ್‌ಗಳು, ಐದು ಸ್ನಾತಕೋತ್ತರ ಪದವಿಗಳು.  ಹೆಂಡತಿ  ಆಕಾಶವಾಣಿಯ ಡೈರೆಕ್ಟರ್‌ . ಆದರೆ ಇವರು ಆಕಾಶವಾಣಿಯ ಕಡೆ ತಲೆ ಹಾಕುತ್ತಿರಲಿಲ್ಲ.ಸರಳ ಸಂತೃಪ್ತ ಜೀವನ.  ನಿರಾಸೆಯ ನೆರಳೂ ಇಲ್ಲದೆ, ಹತಾಶೆಯ ಕುರುಹೂ ಇಲ್ಲದೇ ಸದಾ ಕಾರ್ಯಪ್ರವೃತ್ತ.  ಹಣ ಗಳಿಕೆ ಹಪಾಹಪಿ ಇಲ್ಲ.  ಅವರಿಂದ ಉಚಿತ ಕೆಲಸ ಮಾಡಿಸಿಕೊಂಡವರೂ ಅನೇಕ.  ಅಮೆರಿಕಾದಿಂದ ಬಂದ ನಂತರ ಆಧುನಿಕತೆಗೆ ಐಷಾರಾಮಿಗೆ ಮರುಳಾಗದೇ ಜೀವನ ಸಾಗಿಸಿದರು.  ಸೈಕಲ್ಲೇ  ಅವರ ವಾಹನ... ಕಾರುಇಲ್ಲ.  ತಮ್ಮ ಲ್ಯಾಬಿಗೆ ನಡೆದೇ ಹೋಗುವರು.  ಟಿವಿ ಇಲ್ಲ.ಕಾಂಪ್ಯೂಟರ್‌ ಇಲ್ಲ, ಮನೆಯಲ್ಲಿ  ಫ್ರಿಜ್‌ ಇಲ್ಲ. ಮನೆಯಲ್ಲಿರುವ ಒಂದೇ ಆಧುನಿಕ ಸಲಕರಣೆ ಎಂದರೆ ರೇಡಿಯೋ. ಕಾರಣ ಮಡದಿಯ ವೃತ್ತಿ.
ಅವರು ತೆಗೆದ ಸುಮಾರು ೧.೫೦ ಲಕ್ಷ ಛಾಯಾಚಿತ್ರಗಳಲ್ಲಿ ಬಹಳಷ್ಟು ಬೆಳಕು ಕಾಣ ಬೇಕಿದೆ. ಆಗಿನ್ನು ಡಿಜಿಟಲ್‌ ಯುಗ ಬಂದಿರಲಿಲ್ಲ.ಅವರು ಮಾಡಿದ ವೆಚ್ಚ, ಪಟ್ಟ ಶ್ರಮ ಊಹಾತೀತ.  ಅವರ  ಸಮಕಾಲೀನ ಸಾಹಿತಿಗಳು , ಸಾಧಕರು, ಮತ್ತು ಸುಂದರ ಬದುಕಿನ, ಸಹಜ ಜೀವನದ ದಾಖಲೆ ಅವರ ಛಾಯಾ ಚಿತ್ರಗಳಲ್ಲಿ ಮೂಡಿ ಬಂದಿವೆ. ಅವರ ಆಪ್ರತಿಭೆ ತುಸು ಮಟ್ಟಿಗೆ ಹೊರ ಜಗತ್ತಿಗೆ ಕಂಡು ಬರಲು ಕಾರಣ ಅವರ ಮಗ ವಿಕಾಸನ ಪ್ರಯತ್ನ. ತೊಂಬತ್ತರ ದಶಕದಲ್ಲೇ ಅವರ ಕಾಮತ್‌ ಪಾಟ್‌ ಪುರಿಅಂತರ್‌ಜಾಲ ತಾಣ. ತಂತ್ರಜ್ಞಾನದ ಹೊಣೆ ಮಗ ಸೊಸೆಯರದಾದರೆ ಅದಕ್ಕೆ ಹೂರಣ ತುಂಬುವುದು  ಕಾಮತ ದಂಪತಿಗಳ ಕೆಲಸ.  ಲೇಖನ, ಛಾಯಾಚಿತ್ರ, ರೇಖಾ ಚಿತ್ರ ಎಲ್ಲವನ್ನೂ ಇಲ್ಲಿಯೇ ಸಿದ್ದ ಮಾಡಿ ಅಂಚೆಯ ಮೂಲಕ ಕಳುಹಿಸುವರು.ಇನ್ನು ಅದರ ವ್ಯಾಪ್ತಿ ಅಸೀಮ ಇತಿಹಾಸ,ಸಾಹಿತ್ಯ, ಕಲೆ, ವಿಜ್ಞಾನ, ಸಂಸ್ಕೃತಿ, ಭಾರತೀಯ ಜೀವನದ ಎಲ್ಲ ಮಜಲುಗಳಿಗೂ ಅದರಲ್ಲಿ ಅವಕಾಶ.  ಒಂದು  ರೀತಿಯಲ್ಲಿ ಅದು  ಬೆರಳ ತುದಿಯಲ್ಲಿನ ವಿಶ್ವಕೋಶ. ಪರಿಣಾಮ ವಿಶ್ವದ ಅಂತರ್‌ಜಾಲ ತಾಣದಲ್ಲಿ ಅದಕ್ಕೆ ಹಿರಿಯ ಹೆಸರು.  ದಿನ ಒಂದಕ್ಕೆ ಲಕ್ಷಾಂತರ  ಓದುಗರ ಭೇಟಿ.  ಕಾರ್ಪೊರೇಟ್‌ ಸಂಸ್ಥೆಯೊಂದು ಮಾಡಬಹುದಾಗಿದ್ದ ಬೃಹತ್‌ ಕಾರ್ಯವನ್ನು ಒಂದು ಕುಟುಂಬದ ನಾಲ್ವರಿಂದಲೇ ನಿರ್ವಹಣೆ.  ಅದೊಂದು ವಿಶ್ವದಾಖಲೆಯೇ ಸರಿ.  ಹೀಗಾಗಿ ಸಾವಿರಾರು ನಿಖರ ಲೇಖನಗಳು ಅದೂ ಚಿತ್ರ ಸಹಿತ.  ಅಂತರ್‌ಜಾಲ ತಾಣದಲ್ಲಿ ಲಭ್ಯ. ಇದರಲ್ಲಿ ಕಾಮತರ ಇಪ್ಪತ್ತೈದು ಸಾವಿರ ಛಾಯಾ ಚಿತ್ರಗಳು ಮೂಡಿ ಬಂದಿವೆ. ಆದರೆ  ೧೯೯೬ ರಲ್ಲಿಯೇ ಕಾಂಪ್ಯೂಟರ್‌ ಇಂಜನಿಯರ್‌ ಆದ ಮಗನ ಒತ್ತಾಸೆಯಿಂದ ಕಾಮತ್‌.ಕಾಮ್‌ (http://www.kamat.com/)  ಅಂತರ್‌ಜಾಲತಾಣದಲ್ಲಿ ಭಾರತದ ಬಗ್ಗೆ , ಸಾಹಿತ್ಯ ಸಂಸ್ಕೃತಿ, ಸಾಮಾಜಿಕ ವ್ಯವಸ್ಥೆ ವ್ಯಕ್ತಿ ಚಿತ್ರ ಅದರಲ್ಲಿ ಏನುಂಟು ಏನಿಲ್ಲ.  ಕೆಲವೇ ವರ್ಷಗಳಲ್ಲಿ ಲಕ್ಷಾಂತರ ಓದುಗರನ್ನು ಪಡೆದ ಹಿರಿಮೆ. ಆದರೆ ಹಣದ ಅವರಿಗೆ ಮೋಹ ಇಲ್ಲ. ಅವು ಜಾಹೀರಾತಿನಿಂದ ಲಕ್ಷಾಂತರ ರೂಪಾಯಿ ಆದಾಯ ಬರವಂತಿದ್ದರೂ  ಬೇಡ ಎಂಬ ದೃಢ ನಿಲವು. ನಿನ್ನೆ ಮೊನ್ನೆ ಕಣ್ಣು ತೆಗೆದ ಅಂತರ್‌ಜಾಲತಾಣಗಳ ಮೌಲ್ಯ ಗಳಿಗೆ ಮಿಲಿಯನ್‌ ಗಟ್ಟಲೆ ಡಾಲರ್‌ ಲೆಕ್ಕದಲ್ಲಿ ಇರುವಾಗ ಕಾಮತ್‌ರ ತತ್ವ ಬದ್ಧತೆ ಯ ಅರಿವು ನಮಗಾಗುತ್ತದೆ.  ಅಷ್ಟು ಮಾತ್ರವಲ್ಲ ಬಹಳ ಸಮಯದ ವರಗೆ ಅದಕ್ಕೆ ಅಗತ್ಯವಾದ ಲೇಖನಗಳನ್ನು ಟೈಪ್‌ಮಾಡಿ ಪೂರಕ ಫೋಟೋಗಳನ್ನು  ಜೊತೆ ಅಂಚಯ ಮೂಲಕ ಕಳುಹಿಸುತಿದ್ದರು. ಅವರ  ಈ ನಡೆಗೆ  ಆತ್ಮೀಯರು ಹೆಣ್ಣುಕೊಟ್ಟ ಮಾವನ ಮೇಲೆ ಎಷ್ಟು ಪ್ರೀತಿ. ಅವರ ಮಾವ ಗೋವಿಂದರಾವ್‌ ಬುರಡೆಯವರು ಅಂಚೆಇಲಾಖೆಯಲ್ಲಿ ಉದ್ಯೋಗಿ.  ಅವರು ನಿವೃತ್ತರಾದರೂ ಅವರ ಇಲಾಖೆಮೇಲೆ ಅಳಿಯನಿಗೆ ಎಷ್ಟು ಮಮಕಾರ ಎಂದು ಹಾಸ್ಯ ಮಾಡಿದ್ದೂ ಉಂಟು.


ಕಾಮತರ ಸಂಭಾವನಾ ಗ್ರಂಥ " ಕಮ್ಮಟಿಗ’. ಅವರಜೀವನದ ವಿವಧ ಮಜಲುಗಳ ಪ್ರತೀಕವಾಗಿದೆ
ಕಾಮತರು ತಮ್ಮೆಲ್ಲ ಕಾರ್ಯಗಳನ್ನು ಸಮರ್ಥವಾಗಿ ನಿರ್ವಹಿಸುತ್ತಾ ಇರುವಾಗಲೇ೨೦೦೨ ರಲ್ಲಿ ಹೃದಯಾಘಾತದಿಂದ ಕಾಲವಶರಾದರು. ಅವರ ನೆನಪಿನಲ್ಲಿ ಹೊನ್ನಾವರದಲ್ಲಿ ಸ್ಥಾಪಿತವಾದ ಪ್ರತಿಷ್ಠಾನವು ಸಾಹಿತ್ಯ, ಪರಿಸರ, ಪ್ರವಾಸ ,ಛಾಯಾಗ್ರಹಣ ರಂಗದಲ್ಲಿನ  ಸಾಧಕರಿಗೆ  ಪ್ರಶಸ್ತಿ ನೀಡಿ ಗೌರವಿಸುವುದು. ಮೊಲನೆಯ ಪ್ರಶಸ್ತಿಯು  ನಿರಂಜನ ವಾನಳ್ಳಿ ಪಡೆದರು. ಎರಡನೆಯದು ಹೆಸರಾಂತ ಯುವ ಛಾಯಾಗ್ರಾಹಕ ಬಿ. ಜಿ. ಮಲ್ಲಿಕಾರ್ಜುನರಿಗೆ ದೊರೆಯಿತು. ಈ ವರ್ಷದ ಮೂರನೆಯ ಡಾ.ಕೃಷ್ಣಾನಂದಕಾಮತ  ಪ್ರಶಸ್ತಿಯನ್ನು ವಿಜ್ಞಾನಿ, ಸಾಹಿತಿ, ತೆರಪಿರದ ಪ್ರವಾಸಿ ನೇಮಿಚಂದ್ರ ಪಡೆದಿರುವರು. ಡಾ.ಕೃಷ್ಣಾನಂದರ ಸಾಹಿತ್ಯ, ಪರಿಸರ ಪ್ರೇಮ, ವಿಜ್ಞಾನ, ಛಾಯಾಗ್ರಹಣ, ಚಿತ್ರಕಲೆ ಮತ್ತು ಜೀವನ ಪ್ರೀತಿಯ ಪರಂಪರೆಯು ಹೀಗೆ ಮುಂದುವರಿಯುತ್ತಿರುವುದು ಸಂತಸದ ವಿಷಯ


  (     ಚಿತ್ರಕೃಪೆ  ಕಾಮತ್‌ಪಾಟ್‌ಪುರಿ   ಮತ್ತು ಡಿ್. ಜಿ. ಮಲ್ಲಿಕಾರ್ಜುನ     )                                                          





No comments:

Post a Comment