Monday, April 15, 2013

ಗಾನ ಗಾರುಡಿಗ-ಪಿಬಿ ಎಸ್


                             ಹೊಟೇಲ ಸಂತೆಯಲ್ಲೊಬ್ಬ ಸಂಗೀತ ಸಂತ


ಹೆಸರಿಗೆ ಪ್ರತಿವಾದಿ ಭಯಂಕರ. ವ್ಯಕ್ತಿತ್ವ ಮಾತ್ರ ತದ್ವಿರುದ್ಧ.  ಎಲ್ಲರೂ ಬೇಕು –ಗೊತ್ತಿರಲಿ, ಗೊತ್ತಿಲ್ಲದಿರಲಿ.  ಪ್ರತಿವಾದಿ ಭಯಂಕರ ಶ್ರೀನಿವಾಸರನ್ನು (ಪಿ.ಬಿ. ಶ್ರೀನಿವಾಸ) ಬಲು ಹತ್ತಿರದಿಂದ ಕಾಣುವ ಭಾಗ್ಯ ನನ್ನದಾಗಿತ್ತು.  ಅವರು ಚೆನ್ನೈನಲ್ಲಿದ್ದಾರೆಂದರೆ, ಅವರಿಲ್ಲದೇ, ಮೈಲಾಪುರದ ನ್ಯೂ ವುಡ್ ಲ್ಯಾಂಡಿನಲ್ಲಿ ಸಂಜೆಯೇ ಆಗುತ್ತಿರಲಿಲ್ಲ. ಸಂಜೆ ನಾಲ್ಕೂವರೆಗೆ ಬಂದರೆಂದರೆ, ರಾತ್ರಿ ಎಂಟು- ಎಂಟೂವರೆಗೆ ಅವರ ನ್ಯೂ ವುಡ್ ಲ್ಯಾಂಡ್ ಹೋಟೇಲೇ ಅವರ ಅಡ್ಡೆ.
ಅವರ ಮೊದಲ ಭೇಟಿ ಇನ್ನೂ ನೆನಪಿದೆ.  ಯಾವ ವಿಚಾರಕ್ಕೋ ಗೆಳಯರ ಗುಂಪಿನೊಂದಿಗೆ, ನ್ಯೂ ವುಡ್ ಲ್ಯಾಂಡ್ ಹೋಟೆಲಿಗೆ ಹೋಗಿದ್ದಾಗ, ಬಾಗಿಲ ಬದಿಯಲ್ಲಿನ ದೊಡ್ಡ ಟೇಬಲ್ಲೊಂದರ ಮುಂದೆ ಮೈಸೂರು ಪೇಟ, ಹಣೆಯ ಮೇಲೆ ಉದ್ದನೆಯ ಕೆಂಪು ತಿಲಕ ಧರಿಸಿದ್ದ ಯಜಮಾನರು ಕುಳಿತಿದ್ದರು. ಮುಂದೆ ಒಂದು ಕಂತೆ ಕಡತ. ದಪ್ಪನೆಯ ಕನ್ನಡಕ, ಜೇಬಿನಲ್ಲಿ ಆರು ಬಣ್ಣದ ಪೆನ್ನುಗಳು. ಆಗೀಗ ಅವರ ಗುನುಗು, ದೊಡ್ಡ ಪ್ರಮಾಣದ ಹಮ್ಮಿಂಗ್ ಆಗಿ ಒಂದು ರೀತಿಯ ಮೋಜು ತರಿಸುತ್ತಿತ್ತು.  ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದ ಅವರ ಧ್ಯಾನಕ್ಕೆ ಭಂಗ ತರಲು ಯಾರೊಬ್ಬರೂ ಬಯಸಿರಲಿಲ್ಲ –ಹೊಟೇಲಿನವರು ಬಿಡಿ, ಹೊಟೇಲಿಗೆ ಬಂದು ಹೋಗುವವರೂ. ಹೊಟೇಲಿನ ಆ ಗೋಜಲು, ಅವರ ಧ್ಯಾನಕ್ಕೂ ಭಂಗ ತರಲಿಲ್ಲ. ಅಷ್ಟರಲ್ಲಿ ತುಂಟ ಹುಡುಗನೊಬ್ಬ ಅವರೊಂದಿಗೆ ಇವರಾರೋ ವಿಚಿತ್ರ ಗಿರಾಕಿ ಎಂಬಂತೆ ನೋಟ ಎಸೆಯುವುದಕ್ಕೂ ಮುನ್ನವೇ, ಅವರಾರು ಗೊತ್ತಾ ಎಂದು ಮಾಣಿಯೊಬ್ಬ ಬಂದು ತಿಳಿ ಹೇಳಿದ. ಅಷ್ಟರಲ್ಲಿ ತಿಂಡಿ ತಿಂದು ಹೊರಟಿದ್ದ ಒಂದು ಗುಂಪು ಅವರನ್ನು ಗುರುತಿಸಿ ಬಿಟ್ಟಿತ್ತು.  ಅವರಿಗೆ ಸಂತೋಷವಾಗಿತ್ತು.  ಯಾರೋ ಒಬ್ಬರು ಉಭಯಕುಶಲೋಪರಿ ಶುರುವಿಟ್ಟು. ಆಹಾ.. ತಮ್ಮ ಹಾಡು... ಎಂದರು.  ಅಷ್ಟು ಸಾಕಾಗಿತ್ತು ಸ್ವರ ಸಾಮ್ರಾಟನಿಗೆ ಇಡೀ ಹಾಡನ್ನೇ ಪ್ರಸ್ತುತ ಪಡಿಸಲು.  ಕನ್ನಡದಿಂದ ಶುರುವಾಗಿ, ತಮಿಳು, ತೆಲುಗು, ಮಲೆಯಾಳ  ಭಾಷೆಗಳ ಹಾಡುಗಳ ಮಿನಿ ಮೆರವಣಿಗೆಯನ್ನೇ ಹೊರಡಿಸಿಬಿಟ್ಟರು.  ಬೇಂದ್ರೆ, ಕಣ್ಣದಾಸನ್, ವೇಟೂರಿ, ಉದಯಶಂಕರ್ ಎಲ್ಲರೂ ಬಂದು ಬಿಟ್ಟರು. ಜೊತೆಗೆ ಎಂಟೋ ಹತ್ತು ಭಾಷೆಗಳಲ್ಲಿ ತಾವು ಬರೆದ ಶಾಯಿರಿಗಳು, ಪದ್ಯಗಳನ್ನೂ ಓದಿ ಕೇಳಿಸಿದರು.   ಎಲ್ಲರೂ ಖುಷ್.  ಇಂಥ ಹಲವು ಸಂಜೆಗಳನ್ನು ಕಳೆಯಲೆಂದೇ ವುಡ್ ಲ್ಯಾಂಡಿಗೆ ಹೋಗುತ್ತಿದ್ದವರಲ್ಲಿ ನಾನೂ ಒಬ್ಬ.  ಚಿಕ್ಕವರಿರಲಿ, ದೊಡ್ಡವರಿರಲಿ, ತಾನು ಗೊತ್ತಿರಲಿ, ಗೊತ್ತಿಲ್ಲದವರಿರಲಿ, ಎಲ್ಲರನ್ನೂ ಏಕ ಪ್ರಕಾರವಾಗಿ ಗೌರವದಿಂದ ಕಾಣುತ್ತಿದ್ದರು.
ಮೊದಲು, ಈಚಿನ ಕೆಲ ವರ್ಷಗಳ ವರೆಗೂ ಅಮೆರಿಕನ್ ದೂತಾವಾಸದೆದುರಿನ ಡ್ರೈವ್ ಇನ್ ವುಡ್ ಲ್ಯಾಂಡ್ಸ್ ಹೊಟೇಲೇ, ಅವರ ದೈನಂದಿನ ಚಟುವಟಿಕೆಯ ಭಾಗವಿತ್ತು.  ಮುಂಜಾನೆಯಿಂದ ಮುಸ್ಸಂಜೆಯವರೆಗೂ ಅವರು ಅಲ್ಲಿಯೇ. ಬಂದವರೊಂದಿಗೆ, ನಿರಂತರ ಮಾತಾಡುತ್ತ, ಕಾಫಿ ಕುಡಿಯುತ್ತ, ಹಾಡಿನಿಂದ ಹಾಡಿಗೆ ಜಿಗಿಯುತ್ತ, ತಮ್ಮ ವೃತ್ತಿ ಸಂಬಂಧಿ ಭೇಟಿ ನಡೆಸುತ್ತಿದ್ದರು. ದಟ್ಟವಾದ ಕಾಡಿನ ನಡುವೆಯಿದ್ದಂತೆ ತೋರುತ್ತಿದ್ದ ಆ ಹೊಟೇಲನ್ನು ಅಲ್ಲಿಂದ ತೆರವುಗೊಳಿಸಿದ ಮೇಲೆ, ನ್ಯೂ ವುಡ್ ಲ್ಯಾಂಡ್ಸ್ ಹೊಟೇಲಿಗೆ ಸ್ಥಳಾಂತರಗೊಂಡರು. ತಮ್ಮ ಹಳೆಯ ಹಾಡನ್ನು, ವೃತ್ತಿ ಜೀವನದ ಸಂಧ್ಯೆಯಲ್ಲಿ ತಮ್ಮ ಉಚ್ಛ್ರಾಯ ದಿನಗಳನ್ನು ಮೆಲುಕು ಹಾಕಲು ಅವರು ಅಡ್ಡಾ ಆಗಿ ರೂಪುಗೊಂಡಿದ್ದು ಮೈಲಾಪುರದ ನ್ಯೂ ವುಡ್ ಲ್ಯಾಂಡ್ ಹೊಟೇಲು. ಅಲ್ಲಿಯೇ ಅವರು ತಮ್ಮ ಅಭಿಮಾನಿಗಳನ್ನು, ಗೆಳೆಯರನ್ನು, ವೃತ್ತಿಬಾಂಧವರನ್ನು ಭೇಟಿ ಮಾಡುತ್ತಿದ್ದರು.
ಅವರ ಕಡೆಯ ದಿನವನ್ನೂ ಅವರು ಅಲ್ಲಿಯೇ ಕಳೆದರು.  ಎಂದಿನಂತೆ ಬಂದಿದ್ದ ಶ್ರೀನಿವಾಸರು, ಒಂದಿಷ್ಟು ತಿಂಡಿ ತಿಂದರು, ಯಾಕೋ ಎಂದಿನಂತೆ ಗೆಲುವಾಗಿರಲಿಲ್ಲ.  ಒಂದಿಷ್ಟು ವಾಂತಿಯಾಯಿತು. ಅಸ್ವಸ್ಥರಾದರು.  ಕೂಡಲೇ ಅವರ ಮನೆಗೆ ಸುದ್ದಿ ಮುಟ್ಟಿಸಲಾಯಿತು ಎಂದು ಹೊಟೇಲಿನ ಮೂಲಗಳು ಹೇಳಿದವು. ಮುಂದಿನದು ಇತಿಹಾಸ.  ಸಾವಿರ ಸಾವಿರ ಹಾಡುಗಳನ್ನು ಹಾಡಿದ ಅವರಿಗೆ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎಂಬ ಕವನ ಬಲು ಇಷ್ಟದ್ದಾಗಿತ್ತು.  ಯುಗಾದಿಯಂತೆ (ಸೌರಮಾನ –ತಮಿಳು ಪಂಚಾಂಗದ ಪ್ರಕಾರ) ನೆನಪಿನ ನಕ್ಷತ್ರವಾದ ಪ್ರತಿವಾದಿ ಭಯಂಕರ ಶ್ರೀನಿವಾಸ ಅವರು ವಿಪರ್ಯಾಸ.
***

No comments:

Post a Comment