Saturday, January 26, 2013

ಆರರಿಂದ ಅರವತ್ತು -ಸರಣಿ


 ತೊಗೋಬೇಕು ಅಂದ್ರೂ ದಮ್ ಬೇಕು!
ನಾನು ಪ್ರಿನ್ಸಿಪಾಲನಾದ ಹೊಸತು. ಅದೋ ದೊಡ್ಡ ಕಾಲೇಜು, ಸಮಸ್ಯೆಯ ಸಾಗರ. ಲೋಕ ಕುಖ್ಯಾತ. ಇಲಾಖೆಯವರೇ  ಕೈ ಚೆಲ್ಲಿ ಕುಳಿತಿದ್ದರು. ಜತೆ ಕೆಲಸಗಾರರಿಂದ ಕೆಲಸ ತೆಗೆಯಬೇಕೆಂದರೆ ಅವರ ಕಾನೂನು ಬದ್ದ ಸವಲತ್ತುಗಳನಮ್ನೂ ತಡಮಾಡದೇ ನೀಡಬೇಕೆಂಬುದರಲ್ಲಿ  ನನಗೆ ನಂಬಿಕೆ. ಎಂಥ ಸ್ಥಿತಿವಂತನಾದರೂ ನೌಕರಿಗೆ ಬಂದನೆಂದರೆ ಅವರು ಬರುವುದು ಅದರಿಂದ ಬರುವ ಆದಾಯಕ್ಕಾಗಿಯೇ. ಹಾಗಾಗಿ ಮೊದಲು ಆರ್ಥಿಕ ಸೌಲಭ್ಯ ನೀಡಿದರೆ ಏನೇ ಕೆಲಸ ಹೇಳಿದರೂ ಅವರೂ ಉತ್ಸಾಹದಿಂದ ಕೆಲಸ ಮಾಡುವರು ಎಂಬುದು ನನ್ನ ಅನುಭವ.
ಒಂದು ದಿನ ಮುಂಜಾನೆಯ ವಾಕ್ ಮುಗಿಸಿ ಮನೆಗೆ ಬಂದಾಗ ಆಗಲೇ 7.30. ಇನ್ನೇನು ಸ್ನಾನ ಕ್ಕಿಳಿಯಬೇಕು. ಆಗ ಬಾಗಿಲಲ್ಲಿ ಕಂಡವರು ನಮ್ಮ ಗಣಿತ ಶಾಸ್ತ್ರದ ಉಪನ್ಯಾಸಕ. ಅವರು ನಮ್ಮ ತವರು ಜಿಲ್ಲೆಯವರು.ಹರಪನ ಹಳ್ಳಿ ಅವರ ಊರು.ಅವರನ್ನು ಕಂಡು ಖುಷಿಯಾಯಿತು. ಮನೆಯವರಿಗೆ ತಿಂಡಿ ತರಲು ತಿಳಿಸಿದೆ. ಅವರು ಸಂಕೋಚದಿಂದ ಇರುವಂತೆ ಕಂಡಿತು.

ಏನ್ ಸ್ವಾಮಿ, ಇಷ್ಟು ಬೇಗ ಬಂದಿದ್ದೀರಿ. ಏನು ವಿಷಯ ಎಂದೆ. ಅವರು ಅತ್ತಿತ್ತ ನೋಡುತ್ತ ಕಾಗದದಲ್ಲಿ ಸುತ್ತಿದ್ದ ಒಂದು ಪುಡಿಕೆ ನೀಡಲು ಬಂದರು.
ಏನದು?  ಎಂದೆ.
 ದುಡ್ಡು ಸಾರ್, ಎಂಟು ಸಾವಿರ ಇದೆ ,ಎಂದರು
ಯಾವ  ದುಡ್ಡು  ? ಏಕೆ ತಂದಿರಿ  ?ಎಂದೆ .ಗಾಬರಿಯಿಂದ.
ಸಾರ್ ,ನಾನು ಮತ್ತು ಕೆಮಿಷ್ಟ್ರಿ ಉಪನ್ಯಾಸಕರು ಅರೆಕಾಲಿಕ ಉಪನ್ಯಾಸಕರಾಗಿ 3 ವರ್ಷದಿಂದ ಕೆಲಸ ಮಾಡುತ್ತಿದ್ದೇವೆ.     ಈಗ ನಮಗೂ ಪೂರ್ಣ ವೇತನ ನೀಡಬೇಕು ಎಂದು ಸರ್ಕಾರಿ ಆದೇಶ ಬಂದಿದೆ. ಎಂದರು.
ಹೌದು, ನಾನು ನೋಡಿದ್ದೇನೆ. ಎರಡು ದಿನ ಆಯಿತು. ಇಬ್ಬರಿಗೂ ತಲಾ ಸುಮಾರು 80ಸಾವಿರ  ವೇತನ ಬಾಕಿ ಬರಬಹುದು. ಬಿಲ್ ಮಾಡಿಸಿದರೆ ಎಷ್ಟು ಬರುವುದೋ ಎನ್ನುವುದು ಖಚಿತವಾಗಿ ಗೋತ್ತಾಗುವುದು, ಎಂದೆ.
ಅದಕ್ಕೆ ನಾವಿಬ್ಬರು ಸೇರಿ ನಿಮಗೆ ಇದನ್ನು ಕೊಢುತ್ತಿದ್ದೇವೆ, ಎಂದರು
ಬೇಡ, ನನಗ್ಯಾಕೆ ನೀವು ಹಣ ಕೊಡಬೇಕು.?
ಇಲ್ಲ ಸಾರ್ ನಮಗೆ ಉಪಕಾರ ಮಾಡಿ, ತೆಗೆದುಕೊಳ್ಳಿ. ಹಿಂದಿನವರೆಲ್ಲ ಯಾವುದೇ ಬಾಕಿ ಬಿಲ್ಲಿಗೆ ಶೇ.10 ತೆಗೆದುಕೊಳ್ಳುತ್ತಿದ್ದರು. ನಾನು ನಿಮ್ಮ ಕಡೆಯವನು. ಶೇ.5 ಕೊಡುತ್ತಿದ್ದೇವೆ ದಯಮಾಡಿ ತೆಗೆದುಕೊಳ್ಳಿ, ಎಂದು ಗೋಗರೆದರು.
ನನಗೆ ಈ ಲೆಕ್ಕಾಚಾರದ ತಲೆ ಬುಡ ಅರ್ಥವಾಗಲಿಲ್ಲ. ಬಹುಶಃ ಅವರು ನನಗೆ   ನೀಡಿದ ಮಾಮೂಲು ಕಡಿಮೆ ಎನ್ನುತ್ತಿರುವೆ ,ಎಂದು ತಿಳಿದು ಅವರು ವಿವರಣೆ ನೀಡಿರಬೇಕು.
ಹೇಗಾದರೂ ಮಾಡಿ ಬಿಲ್ಲು ಮಾಡಿಸಿ ಸಾರ್ ,ಇನ್ನೂ ಎರಡು ಸಾವಿರ ನಂತರ ಕೊಡುತ್ತೇವೆ. ಗುಮಾಸ್ತರನ್ನು ಆಗಲೆ ಒಪ್ಪಿಸಿದ್ದೇವೆ.ಖಜಾನೆಯಲ್ಲಿ ಬಿಲ್ ಪಾಸ್ ಮಾಡಿಸುವುದು ನಮ್ಮ ಹೊಣೆ, ಎಂದರು
ಇದೆಲ್ಲಾ ಏನೂ ಬೇಡ. ನಾನು ನನ್ನ ಕೆಲಸ ಮಾಡಲು ಯಾವುದೇ ಹಣದ ಅವಶ್ಯಕತೆಯಿಲ್ಲ. ಮೊದಲು ಹಣವನ್ನ ಬ್ಯಾಗಿನಲ್ಲಿ ಇಟ್ಟುಕೊಳ್ಳಿ .ತಿಂಡಿ ತಿನ್ನುವ ಹೊತ್ತು. ತಿಂಡಿ ತಿನ್ನಿ . ಒಟ್ಟಿಗೆ ಕಾಲೇಜಿ ಹೋಗೋಣ ,ಎಂದೆ.
ಬೇಡ ಸಾರ್ , ತಿಂಡಿ ಬೇಡ. ನಮಗೆ ಬೇಗ ಬಿಲ್ಲು ಮಾಡಿಸಿಕೊಟ್ಟರೆ  ಅದೆ ದೊಡ್ಡದು. ಈ ಹಣ ಪ್ರೀತಿಯಿಂದ ಕೊಡುತ್ತಿದ್ದೇವೆ. ನೀವೇನೂ ಕೇಳಿಲ್ಲ. ಪದ್ಧತಿ ಪ್ರಕಾರ ಕೊಡದಿದ್ದರೆ ನಮಗೆ ಮುಜುಗರವಾಗುತ್ತದೆ, ಇದು ಸಾಮಾನ್ಯ ,ಎನ್ನುತ್ತಾ ನೋಟಿನ ಕಂತೆಯನ್ನು ಮೇಜಿನ ಮೇಲಿಟ್ಟರು.
ಏನು ಕೆಲಸ ಮಾಡುತ್ತಿದ್ದೀರಿ. ಮೊದಲು ನಿಮ್ಮ ಹಣ ನೀವು ತೆಗೆದುಕೊಳ್ಳಿ, ಎಂದು ದನಿಯೇರಿಸಿದೆ.
ಅವರು ಗಾಬರಿಗೊಂಡು ಹಣವನ್ನು ಹಿಂದೆ ಪಡೆಯದೇ , ಇಲ್ಲ ಸಾರ್ ಹೇಗಾದರೂ ಮಾಡಿ, ಕಾಲೇಜಿನಲ್ಲಿ ಕಾಣುತ್ತೇನೆ ಎಂದು ಓಟ ಕಿತ್ತರು. ಅವರನ್ನು ಕರೆದು ತರಲು ಎಂದು ನಮ್ಮ ಹುಡುಗರನ್ನು ಕಳಿಹಿಸುವಷ್ಟರಲ್ಲಿ ಕಣ್ಮರೆಯಾದರು.
ನನಗೆ ಇದೇನೆಂದು ಹೊಳೆಯಲಿಲ್ಲ. ಅಷ್ಟರಲ್ಲಿ ನನ್ನ ಏರಿದ ದನಿ ಕೇಳಿ ಹೆಂಡತಿ ಹೊರ ಬಂದು ,ಏನು ಯಾರ ಮೇಲೆ ರೇಗುತ್ತಿದ್ದೀರಿ ?ಎಂದಳು.
ಪಿಯುಸಿ ಓದುವ ಮಗಳು, ಕಾಲೇಜು ರಂಗನಾದ ಮಗ ಬಂದು ನಿಂತರು. ಅವರಿಗೆ ಆ ನೋಟಿನ  ಕಟ್ಟುನ್ನು ತೋರಿಸಿದೆ. ಬಯಸದೇ ಬಂದಿದ್ದಾಳೆ ಭಾಗ್ಯಲಕ್ಷ್ಮಿ ಎಂದೆ.
ಈಗ ಏನು ಮಾಡುತ್ತೀರಿ ?ಎಂದಳು ನನ್ನ ಮನೆಯಾಕೆ.
ಏನು ಮಾಡುವುದೇ ಗೊತ್ತಾಗುತ್ತಿಲ್ಲ. ನಮಗೆ ದೊಡ್ಡ ಮೊತ್ತ ಎನಿಸುವ ಹಣ ಕೈ ಸೇರಿದೆ. ನಾನಂತೂ ಕೇಳಿಲ್ಲ. ಅದಾಗೇ ಸಿಕ್ಕಿದೆ. ನಿಮಗೆ ಏನು ಬೇಕೋ ಅದನ್ನು ಕೊಡಿಸಬಹುದು. ಏನಂತೀರಿ ? ಎಂದು ಮರು ಪ್ರಶ್ನೆ ಹಾಕಿದೆ.
“ ಅನ್ಯಾಯದ ಹಣ ನಮಗೆ ಬೇಕಿಲ್ಲ. ಈ ವರೆಗೆ ಕೈ ಶುದ್ಧವಾಗಿ ಇಟ್ಟುಕೊಂಡವರು ಈಗ ಯಾರೋ ಕೊಟ್ಟರೆಂದು ಕೈ ಏಕೆ ಹೊಲಸು ಮಾಡಿಕೊ ಳ್ಳುವಿರಿ ?.  ಅಲ್ಲದೇ, ನಮಗೆ ಇಂಥ ಹಣದಿಂದ ಏನನ್ನೂ ತೆಗೆದು ಕೊಳ್ಳುವ ಮನಸ್ಸಿಲ್ಲ “  ಎಂದಳು ಮನೆಯಾಕೆ. ನೀವೇನಂತೀರಿ ಎಂದು ಮಕ್ಕಳ ಮುಖ ನೋಡಿದೆ.
ಈಗ ನಮಗೆ ಇರುವುದೇ ಸಾಕು ಹೆಚ್ಚಿನದು ಬೇಕಿಲ್ಲ. ಇಂಥದಕ್ಕೆಲ್ಲ ಆಸೆಪಡುವುದಿಲ್ಲ ಎಂದು ಒಕ್ಕೊರಲಿನಿಂದ ಹೇಳಿದರು.
ನನ್ನ ಗುರಿಯನ್ನೇ ತಮ್ಮದಾಗಿಸಿಕೊಂಡ ಕುಟುಂಬದವರನ್ನು  ಆನಂದದಿಂದ ಕಣ್ತುಂಬಿ ನೋಡಿದೆ.
ವಿದ್ಯ ,ಬುದ್ಧಿ, ಎಲ್ಲ ಇದ್ದರೂ, ಸಂಸ್ಕಾರವಂತರಾದವರೂ ಹಣಕ್ಕೆ ಬಾಯಿ ಬಿಡುವ ಹೆಂಗಸರೆ ಬಹಳ, ಉಡುಗೆ-ತೋಡುಗೆಗೆ ಹಂಬಲಿಸುವ ಹುಡುಗರೆ  ಹೆಚ್ಚಾಗಿರುವಾಗ, ಇವರೆಲ್ಲ ನನ್ನ ಹಣಕ್ಕೆ ಮನಸೋಲದೆ ಇರುವುದನ್ನು ನೋಡಿ ಸಂತೋಷವಾಯಿತು..
ಅದೇ ದಿನ ಕಾಲೇಜಿನಲ್ಲಿ ಶಿಕ್ಷಕರ ಸಭೆ ಕರೆದೆ. ಬೆಳಿಗ್ಗೆ ಮನೆಯಲ್ಲಿ ನಡೆದ ಘಟನೆ ವಿವರಿಸಿದೆ, ಮೇಜಿನ ಮೇಲೆ ಹಣದ ಕಂತೆಇಟ್ಟು ಅದನ್ನು ತೆಗೆದುಕೊಳ್ಳುವಂತೆ ಸಂಬಂಧಿಸಿದವರಿಗೆ ತಿಳಿಸಿದೆ. ಕರ್ತವ್ಯ ನಿರ್ವಹಣೆಯ ಮಾಡುವಾಗ ಲಾಭ-ನಷ್ಟ, ಕೋಪ-ತಾಪಗಳು ಅಡ್ಡ ಬರುವುದಿಲ್ಲ. ಎಲ್ಲರಿಗೂ ನಿಯಮಾನುಸಾರ ಬರಬೇಕಾದ್ದು ನಿಗದಿತ ಸಮಯದಲ್ಲಿ ದೊರಕುವುದು. ಯಾರೂ ಇನ್ನು ಮೇಲೆ ಈ ರೀತಿ ನನ್ನೊಡನೆ ವರ್ತಿಸಬಾರದು ಎಂದು ತಿಳಿಸಿದೆ.
ಎಲ್ಲರೂ ಮೌನವಾಗಿ ತಲೆಯಾಡಿಸಿದರು.  ನಂತರ ನನಗೆ ಮಾಹಿತಿ ಬಂತು, ಹಲವರು ಹೀಗೆ ಹಣ ಕೊಡಬಾರದಿತ್ತು. ಅವರ ಬದಲಿ ಬೆಲೆಬಾಳುವ ಉಡುಗೊರೆ ನೀಡಿದ್ದರೆ ಸರಿಯಾಗುತ್ತಿದ್ದು ಎಂದು ಸಲಹೆ ನೀಡಿದರಂತೆ . ಕೆಲವರು  ಮಾತ್ರ ಇವರಿಗೆ ಧೈರ್ಯವಿಲ್ಲ. ದುಡ್ಡು ಮಾಡಲು ದಮ್ಮಿಲ್ಲ ಎಂದು ಆಡಿಕೊಂಡರು.
ನಿಜ, ನನಗೆ ಇಂಥ  ಕೆಲಸ ಮಾಡಲು ಬೇಕಾದ ದಮ್ಮು ಎಂದೆಂದಿಗೂ ಬರುವುದು ಬೇಡ,ಎಂದು ಕೊಂಡೆ.

No comments:

Post a Comment