Sunday, January 20, 2013

ಅಮೇರಿಕಾದ ಅನುಭವ-9


ಸ್ನಾನದ ಸುಖ
ದೀರ್ಘ ವಾರಾಂತ್ಯ ಬಂದರೆ ಮನೆಯಲ್ಲಿದ್ದರೆ ಮಹಾಪಾಪ ಎಂದೆ ಅಮೇರಿಕನ ಲೆಕ್ಕ. ಶುಕ್ರವಾರ ಅಥವಾ ಸೋಮವಾರ ರಜೆ ಬಂದರೆ ಶನಿವಾರ , ಭಾನುವಾರ ಸೇರಿಸಿ ಮೂರುದಿನದ ರಜೆ ದೀರ್ಘವಾರಾಂತ್ಯ. ಮಜಾನೋ ಮಜ. ಈ ಸಲದ ವಾರಂತ್ಯಕ್ಕೆ   " ಸ್ಪ್ರಿಂಗ್‌  ಸ್ಪಾ  ಮಿನರಲ್‌ "   ರೆಸಾರ್ಟಗೆ ಹೋಗುವ ಯೋಜನೆ ತಿಳಿಸಿದಾಗ ನಾನು ಹಿಂದೆ ಮುಂದೆ ನೋಡಿದೆ.ಕನ್ನಡಿಗನಾದ ನನಗೆ ನಮ್ಮ ರಾಜಕಾರಣಿಗಳ ರೆಸಾರ್ಟ ವಾಸದ , ಸಹವಾಸದ ಮತ್ತು ಸಾಹಸದ ಸುದ್ದಿ ಓದಿ ಓದಿ  ಒಂದು ರೀತಿಯ ಅಲರ್ಜಿ ಬಂದಂತಾಗಿತ್ತು. 
ಅಮ್ಮ!  ದಿನಕ್ಕೆ ಐದು ನೂರು  ಡಾಲರ್‌ ಬಾಡಿಗೆ ತೆತ್ತು ಅಲ್ಲಿಗೆ ಹೋಗುವುದು ಏಕೆ ಲಕ್ಷಣವಾಗಿ ಮನೆಯಲ್ಲೆ ಮಲಗಿ ವಿಶ್ರಾಂತಿ ಪಡೆಯಬಹುದಲ್ಲ, ಎಂಬ ನನ್ನ ಮಾತಿಗೆ ಮಾನ್ಯತೆ ಬರಲಿಲ್ಲ.
 ಜೀವನದಲ್ಲಿ ಹಣವೆ ಎಲ್ಲ ಅಲ್ಲ. ನಾವೂ ಹಾಗೆಲ್ಲ ದೂಬ ದಿಂಡಿ ಮಾಡುವುದಿಲ್ಲ. ಏನೋ ನೀವೂ ಬಂದಿರುವಿರಿ, ನಿಮಗೆ ತೋರಿಸುವ ನೆಪದಲ್ಲಿ ನಾವೂ ನೋಡುವೆವು , ಮರು ಮಾತನಾಡದೆ ಬನ್ನಿ ಎಂದರು
ಅಲ್ಲದೆ ಆಗಿಂದ ಆಗಲೆ ಹೋಗಿ ನನಗೆ ಈಜು  ಉಡುಗೆ ತಂದರು. ಯಾಕೆ ಅಲ್ಲಿ ಅಟ್ಯಾಚ್ಡ ಬಾತು ರೂಂ ಇರುವುದಲ್ಲ . ಈಜು  ಉಡುಗೆ ಯಾಕೆ  ? ಆ ಚಳಿಯಲ್ಲಿ ನನಗೆ  ಈ ಜಾಡಲು ಆಗದು , ಎಂದು ಪ್ರತಿಭಟಿಸಿದರೂ ಕಿವಿಗೆ ಹಾಕಿಕೊಳ್ಳಲಿಲ್ಲ.
 ಕಾರಣ ಅಲ್ಲಿನ ನಿಯಮದ ಪ್ರಕಾರ ಹೇಗೆಂದರೆ ಹಾಗೆ ಈಜುಕೊಳದ ನೀರಿಗೆ ಇಳಿಯುವ ಹಾಗಿಲ್ಲ. ಹೊರಗೆ ಯಾವ ಉಡುಪಾದರೂ ನಡೆಯುವುದು. ಆದರೆ ಈಜು ಕೊಳಕ್ಕೆ ವಿಶೇಷ ಕಟ್ಟಳೆಗಳು.ನೆಲದ ಕಾನೂನೂ ನೀರಲ್ಲಿ ಅನ್ವಯವಾಗದು. ನಾವು ಹುಡುಗರಿದ್ದಾಗ ಚಡ್ಡಿ , ಲಂಗೋಟಿ ಕೆಲವು ಸಲ ಏನೂ ಇಲ್ಲದೆ ನೀರಿಗೆ ಹಾರರುತಿದ್ದುದು ನೆನಪಿಗೆ ಬಂತು.  .ಪರದೇಶ ಪ್ರಾಣ ಸಂಕಟ. ಹೇಳಿದಂತೆ ಕೇಳ ಬೇಕಲ್ಲ. ಊಟ ನಮ್ಮ ಇಚ್ಛೆ ಆದರೆ ಉಡುಪು ಪರರ ಇಚ್ಛೆ ಎಂಬ ಮಾತಿನ ನೆನಪು ಬಂದಿತು... ಇಲ್ಲಿ ಅನೇಕ ನಗ್ನ ಬೀಚುಗಳಿವೆ . ಅಲ್ಲಿ ಉಡುಗೆ ತೊಟ್ಟವರಿಗೆ ಪ್ರವೇಶ ಇಲ್ಲವಂತೆ .  ನನ್ನ ಪೂರ್ವಾಜಿತ ಪುಣ್ಯ ಅಂಥಲ್ಲಿಗೆ ಹೋಗ ಬೇಕಾಗಿ ಬರಲಿಲ್ಲ. ಆದರೆ ನನಗೆ ಅರ್ಥವಾಗದ ವಿಷಯ ಒಂದೆ. ಇಲ್ಲಿಯೂ . ಪ್ರತಿ ಸಮುದಾಯಕ್ಕೂ  ಈಜು ಕೊಳಗಳ ಇರುವುದು. ಉಚಿತವಾಗಿ  ಮನ ದಣಿಯೆ ಈಜಾಡಬಹುದು  ಹಾಗಿರುವಾಗ ಸಾವಿರಗಟ್ಟಲೆ ಕೊಟ್ಟು ರಿಸಾರ್ಟಿಗೆ ಹೋಗಿ ಅಲ್ಲಿ ಗಂಟೆಗಟ್ಟಲೆ ಈಜಾಡುವುದರಲ್ಲಿ ಯಾವ ಪುರುಷಾರ್ಥವಿದೆ ಎಂಬುದು ನನ್ನ ತಲೆಗೆ ಹೋಗಲೆ ಇಲ್ಲ.
ನಾವು ಅಲ್ಲಿಗೆ ತಲುಪಿದಾಗ ಮಧ್ಯರಾತ್ರಿಯಾಗಿತ್ತು . ಕೋಣೆಗೆ ಹೋಗಿ ನಿದ್ದೆಗೆ ಶರಣಾದೆವು. ಬೆಳಗ್ಗೆ ಎದ್ದು ಮುಖ ತೊಳೆದು  ಕಿಟಕಿಯ ಪರದೆ ಸರಿಸಿದಾಗ ಗೊತ್ತಾಯಿತು ಅದು ಪರ್ವ ತ ಪ್ರದೇಶ ಎಂದು. ನಮ್ಮ ನ್ಯೂ ಜರ್ಸಿರಾಜ್ಯದಲ್ಲಿ ಈ ರೀತಿಯ  ಹಿಲ್‌ ಸ್ಟೇಷನ್‌ ಇರಬಹುದು ಎಂಬ ಕಲ್ಪನೆಯೆ ನನಗೆ ಇರಲಿಲ್ಲ. ಎಲ್ಲಿ ನೋಡಿದರೂ ಪರ್ವತ ಪಂಕ್ತಿ. ಅವೂ ದಟ್ಟ ಮರಗಳಿಂದ ಹಚ್ಚ ಹಸಿರು ಮಯ. ಬೆಟ್ಟದ ತಪ್ಪಲಲ್ಲಿ ರೆಸಾರ್ಟ ಕಟ್ಟಿದ್ದರು. ಅಲ್ಲಿಗೆ ಹೋಗಲು ಏರಿ ಇಳಿದು ಹೋಗ ಬೇಕಿತ್ತು. ಬೆಳಗಿನ ತಿಂಡಿ ಅಲ್ಲಿಯೆ ಇದ್ದ ರೆಸ್ಟುರಾದಲ್ಲಿ ಆಯಿತು.ಅಲ್ಲಿ ತಿನ್ನಲು ಸಮಯ ವ್ಯರ್ಥವಾಗಬಾರದೆಂದು  ಭಫೆ ಪದ್ದತಿ ಇತ್ತು.  ಅದರಲ್ಲಿ  ಹತ್ತಾರು ಬಗೆಯ ತಿನಿಸುಗಳು ಇದ್ದವು . ಆದರೆ ನಮಗೆ ಆಗದವು. ಕೊನೆಗೆ ಟೇಬಲ್ಲಿಗೆ ಹೋಗಿ ಕುಳಿತಾಗ ಮೆನು ಕಾರ್ಡು ಕೈಗೆ ಬಂದಿತು. ಅದರಲ್ಲಿ ಸಸ್ಯಾಹಾರಿ ತಿಂಡಿ ಹುಡುಕುವುದು ನ್ಯೂಯಾರ್ಕಿನಲ್ಲಿ ಸೀರೆಯುಟ್ಟ ಮಹಿಳೆಯನ್ನು ಅರಸಿದಂತಾಯಿತು. ಕೊನೆಗೆ ಬ್ರೆಡ್‌ ಟೋಸ್ಟ್‌ ಹೇಳಿದೆವು. ಮಾಂಸ , ಮೀನು ಇಲ್ಲದವು ಕೆಲ ತಿನಿಸು ಇದ್ದರೂ  ಮೊಟ್ಟೆ ಇಲ್ಲದವನ್ನೂ ಮಾಡಲು ಅವರಿಗೆ ಬರುವುದೆ ಇಲ್ಲ ಎನಿಸಿತು.  ಅರ್ಧ ಗಂಟೆಯನಂತರ ಬಂದ ಬ್ರೆಡ್‌ ತುಂಡು  ತಿಂದು  ಹೊರಟೆವು.
 ಹೋಗುವ ಹಾದಿಯಲ್ಲೆ ಮೊದಲ ಮಹಡಿಯಲ್ಲಿ ಮತ್ತು ನೆಲ ಮಹಡಿಯಲ್ಲಿ ಈಜುಕೊಳ ಕಾಣಿಸಿತು ಸರಿ ನಾವೂ  ಗುಂಪಿನೊಡನೆ ಗೋವಿಂದ ಎಂದುಕೊಂಡು ಹೋಗಲು ಸಿದ್ಧ ವಾದೆವು. ಆದರೆ ಈಜು ಕೊಳಕ್ಕೆ ಹಾಗೆಯೆ ಹೋಗುವ ಹಾಗಿಲ್ಲ. ಅಲ್ಲಿರುವ ವಿಶೇಷ ವಿಭಾಗಕ್ಕೆ ಹೋದರೆ ನಮ್ಮ ವಿವರ ತೆಗೆದುಕೊಱಡು ಕೈಗೆ ಗುರುತಿನ ಪ್ಲಾಸ್ಟಿಕ್‌ ಬಣ್ಣದ ಕಂಕಣ ಕಟ್ಟಿದರು.ತಿರುಪತಿ ವೆಂಕಟೇಶನ ದರ್ಶನಕ್ಕೆ ಕಟ್ಟುವರಲ್ಲ ಹಾಗೆ. ಅದನ್ನುಧರಿಸಿದವರಿಗೆ ಮಾತ್ರ ಆವರಣದಲ್ಲಿ ಪ್ರವೇಶ.. ಅದರ ಜೊತೆ ಗೆ ಪ್ರತಿಯೊಬ್ಬರಿಗೂ  ಬಿಳಿಯ ಎರಡು ಟರ್ಕಿ ಟವೆಲ್‌ಗಳು. ಒಂದು ದೊಡ್ಡದು ಒಂದು ಚಿಕ್ಕದು.ಎರಡು ಏಕೆ ಎಂಬ ಅನುಮಾನ ಮೂಡಿದಾಗ ಒಂದು ಮೈ ಒರಸಿಕೊಳ್ಳಲು ಇಒನ್ನೊಂದು ತಲೆ ಒರಸಿಕೊಳ್ಳಲು ಎಂದು ತಿಳಿಯಿತು.ಒಂದೆ ಟವಲ್‌ನಲ್ಲಿ ಮನೆ ಮಂದಿಯೆಲ್ಲ ಮೈ ಒರಸಿಕೊಳ್ಳುವ ರೂಢಿ ಇದ್ದ ನನಗೆ ಇವರ ರೀತಿ ಕಣ್ಣು ಬಾಯಿ ಬಿಡುವಂತಾಯಿತು. ಎಷ್ಟಾದರೂ  ದಿನಕ್ಕೆ ಐದು ನೂರು ಡಾಲರು  ಪೀಕಿದ್ದೇವಲ್ಲ ಅದಕ್ಕೆ ಈ ವೈಭೋಗ.ಎನಿಸಿತು ಸರಿ ಎಂದು ಹೊರಟರೆ ಮತ್ತೆ ಅಡ್ಡಿ. ಈಜುಡುಗೆ ಇಲ್ಲದೆ ನೀರಿಗೆ ಇಳಿಯುವಂತಿಲ್ಲ. ನಮ್ಮ ಕೋಣೆಗೆ ಹೋಗಿ ಅವನ್ನು ಧರಿಸಿ  ಈಜುಕೊಳಕ್ಕೆ ಬಂದೆವು.
 ಈಜು ಕೊಳದಲ್ಲೂ ಎರಡು ವಿಭಾಗ . ಒಂದು ಹೊರಾಂಗಣ ಈಜುಗೊಳ ಇನ್ನೊಂದು ಒಳಾಂಗಣ ಈಜು ಕೊಳ. ಹೊರಾಂಗಣ ಈಜುಗೊಳ ಬಹು ದೊಡ್ಡದಾಗಿತ್ತು. ಅಲ್ಲಿ ಹತ್ತು ಹತ್ತು ಅಡಿಗೆ  ಅಲ್ಲಿನ ನೀರಿನ ಮಟ್ಟ ನಮೂದಾಗಿತ್ತು. ನಾಲಕ್ಕು ಅಡಿಯಿಂದ ಈಜುಗೊಳದ ಆಳ ಹೆಚ್ಚಾಗಿತ್ತಾ ಹೋಗಿತ್ತು. ಅಲ್ಲಿ ದಂಡೆಯ ಮೇಲೆ ಅನೇಕ ಕಡೆ ಡೈವ್‌ ಮಾಡಬಾರದು ಎಂದು ದಪ್ಪ ಅಕ್ಷರದಲ್ಲಿ ಬರೆದಿದ್ದರು.ಈಜುಗೊಳದ ದಂಡೆಯ ಮೇಲೆ ಒಂದು ಎತ್ತರದ ಅಟ್ಟಣಿಗೆ. ಅದರ ಮೇಲೆ ಒಬ್ಬ ಮಹಿಳೆ . ಅದನ್ನು ಲೈರ್ಫ ಗಾರ್ಡ ಟವರ್‌ ಅನ್ನುವರು. ಅವಳು ಸದಾ ಸನ್ನದ್ಧ ಸ್ಥಿತಿಯಲ್ಲಿ ಈಜುಗಾರರನ್ನು ಗಮಿನಿಸುತ್ತಾ ಕೂರುವಳು. ಯಾವುದೆ ವ್ಯಕ್ತಿ ಕಕ್ಕಾಬಿಕ್ಕಿಯಾದರೆ ಎಂದರೆ ಸಹಾಯಕ್ಕೆ ಧಾವಿಸುವಳು. ಇಲ್ಲಿ  ಈಜು ಬಂದವರೆ ನೀರಿಗೆ ಇಳಿಯ  ಬೇಕೆಂದಿಲ್ಲ. ತೇಲಿಸುವ ಜಾಕೆಟ್‌ ತೊಟ್ಟ ಯಾರಾದರೂ  ಸರಿ. ಅಲ್ಲಿ ಮುಳುಗುವ ಭಯ ಇಲ್ಲ.
ನಾವು ಈಜು ಬೆಂಡು ಅಂದರೆ ನುಗ್ಗೆ ಬೆಂಡು, ಗಾಳಿ ತುಂಬಿದ ಕಾರಿನ ಟ್ಯೂಬು ಶೀಮೆ ಎನ್ಣೆಯ ಖಾಲಡಬ್ಬ ಕಟ್ಟಿಕೊಂಡು ಈಜು ಕಲಿಯುತಿದ್ದ ನೆನಪು ಬಂದಿತು . ಆದರೆ ಇಲ್ಲಿ ಅನೇಕ ರೀತಿಯ ತೇಲುವ ಸಾಧನಗಳು.ಉದ್ದನೆಯ ಫೋಮ್‌ಗಳು, ಮಕ್ಕಳಿಗೆ ಭುಜ ಕೀರ್ತಿಯತರಹದ ಗಾಳಿ ತುಂಬಿದ ಚೀಲಗಳು, ಎರಡೂ ತೋಳಿಗೆ ಕಟ್ಟಕೊಂಡರೆ ಸಾಕು ತಮ್ಮಷ್ಟಕ್ಕೆತಾವೆ ತೇಲುವರು ಇನ್ನು ಸ್ವಿಮಿಂಗ್‌ ಜಾಕೇಟುಗಳು.ಎರಡು ಮೂರುವರ್ಷದ ಮಕ್ಕಳೂ ನೀರಲ್ಲಿ ಸುಲಭವಾಗಿ ಮಾನವ ಮುಖದ ಬಾತು ಮರಿಗಳಂತೆ ತೇಲುತ್ತಾ ಆಟವಾಡುತಿದ್ದರು. ಈಜುತ್ತಾ ಹೋಗಿ ಜಲಪಾತದ ಕೆಳಗೆ ನಿಲ್ಲುವ ವ್ಯವಸ್ಥೆಯೂ ಇತ್ತು ಅಲ್ಲಿ ನೀರು ಬರಿ ಐದು ಅಡಿ ಆಳ. ದಭ ದಭ ಬೀಳುವ ನೀರಿಗೆ ತಲೆಯೊಡ್ಡುವ ಸುಖ ಅನುಭವಿಸಿಯೆ ತಿಳಿದುಕೊಳ್ಳ ಬೇಕು. ಈ ಸುಖ ನಾನು ಕೈಗಲ್‌ ಜಲಪಾತದಲ್ಲಿ  ಮತ್ತು ಕೊಡಗಿನ ಕೆಲವು  ಜಲಪಾತಗಳಲ್ಲಿ ಪಡೆದ  ಅನುಭವ ಮರುಕಳಿಸುವಂತೆ ಮಾಡಿತು.
ಅಲ್ಲಿಂದ ಒಳಾಂಗಣದ ಈಜು ಕೊಳಕ್ಕೆ ಹೋಗಲು ನೀರಿನಲ್ಲಿಯೆ ದ್ವಾರವಿದ್ದಿತು.  ಅಲ್ಲಿ ಹೋದಾಗ ಇನ್ನೊಂದು ಗಮನಕ್ಕೆ ಬಂದಿತು  ಪಕ್ಕದಲ್ಲೆ ಬುಳ ಬುಳನೆ ಮೇಲೇ ಚಿಮ್ಮುವ ನೀರಿನ ಬುಗ್ಗೆಗಳಿದ್ದವು. ಅಲ್ಲಿ  ಅನೇಕರು ಕಂಠ ಮಟ ನೀರಿನಲ್ಲಿ ಕುಳಿತು ಧ್ಯಾನ ಮಗ್ನರಾದಂತೆ ಕಂಡುಬಂದರು.  ನೋಡಿದರೆ ಅದು ಬಿಸಿ ನೀರಿನ ಕೊಳ. ಅಲ್ಲಿರುವವು ಬಿಸಿ ನೀರನ ಬುಗ್ಗೆಗಳು.  ಬದ್ರಿ ಕೇದಾರಕ್ಕೆ ಹೊದರೆ ಅಲ್ಲಿ ಬಿಸಿನೀರಿನ ಬುಗ್ಗೆಗಳಿವೆ. ಅದರಲ್ಲಿ ಅಕ್ಕಿ ಯನ್ನು ಬಟ್ಟೆಯಲ್ಲಿ ಕಟ್ಟಿ ಐದು ನಿಮಿಷ ಹಿಡಿದರೆ ಅನ್ನ ವಾಗುವುದು ಎಂಬ ಐತಿಹ್ಯ ಕೇಳಿದ್ದೆ. ನನಗಂತೂ ಅಲ್ಲಿಗೆ ಹೋಗಲಾಗಿಲ್ಲ. ಒಂದು ಕ್ಷಣ ಇಲ್ಲಿಯೂ ಹಾಗೆಯೇ ಇರಬಹುದೇನೋ ಎನಿಸಿತು. ಆದರೆ ಅಲ್ಲಿ ಕುಳಿತವರನ್ನ  ನೊಡಿದರೆ ನೀರು ಅಷ್ಟು ಬಿಸಿ ಇರಲಾರದು ಎನಿಸಿತು. ಮಗಳು ಬೇಡ ಬೇಡ ಎಂದರೂ ಇಳಿದೆ. ಯಾಕಾದರೂ ಇರಲಿ ಎಂದು ಮೊದಲು ಮೂರು ಬೆರಳು ಆ ಕೊಳದಲ್ಲಿ ಮುಳುಗಿಸಿದೆ. ನೀರು ಹದವಾಗಿ ಬಿಸಿಯಾಗಿತ್ತು. ನಾನು ಆ ಬಿಸಿ ನೀರಿನ ಭಕ್ತರ ಜತೆ ಸೇರಿದೆ. ಅಲ್ಲಿ ಒಂದು ಫಲಕ ಬೇರೆ ಹಾಕಿದ್ದರು. ಹನ್ನೆರಡು ವರ್ಷದ ಒಳಗಿನವರಿಗೆ ಪ್ರವೇಶ ಇಲ್ಲ. ಹೃದಯ ಬೇನೆ ಮತ್ತು ಏರು ರಕ್ತದ ಒತ್ತಡ ಇರುವವರಿಗೆ ನಿಷೇಧ ಎಂದಿತ್ತು. ನನಗೆ ಆಗಲೆ  ಹತ್ತು ವರ್ಷದ ಹಿಂದೆಯೆ  ಬೈ ಪಾಸ್‌ ಆಗಿದ್ದರಿಂದ ಏನೂ ಸಮಸ್ಯೆಇಲ್ಲ ಎಂದು ಇಳಿದೆ. ಅಮೆರಿಕಾದಲ್ಲಿ ಟಬ್‌ ಸ್ನಾನ ಸಾಮಾನ್ಯ. ಅಲ್ಲದೆ ಹದವಾಗಿ ಬಿಸಿ ಇರುವ ನೀರು ತುಂಬಿಸಿ ಅದರಲ್ಲಿ ಹಾಯಾಗಿ ಒರಗಿದರೆ ಮೈ ಕೈ ನೋವು ಮಾಯ.ಅದರ ಜೊತೆಗೆ ಮನಸಿಗೂ ಉಲ್ಲಾಸ ತಿಂಗಳಿಗೊಮ್ಮೆ ನಾನೂ ಆ ಸುಖ ಅನುಭವಿಸುತಿದ್ದೆ. . ಆದರೆ  ಇಲ್ಲಿನ ಅನುಭವವೆ ಅನನ್ಯ. ಆ ಕೊಳದ ಅಂಚಿನಲ್ಲಿ  ಬಿಸಿ ನೀರಲ್ಲಿ ಕುಳಿತುಕೊಳ್ಳಲು ಆಸನಗಳಿದ್ದವು ಕೆಳಗಿನಿಂದ ಬಿಸಿ ನೀರ  ಬುಗ್ಗೆ ಬರಲು ಅವಕಾಶ  ಮಾಡಿದ್ದರು .ಅವುಗಳ ಮೇಲೆಯೆ ಕುಳಿತಾಗ  ದಂಡೆಯ  ಅಂಚನ್ನು ಹಿಡಿದುಕೊಳ್ಳದಿದ್ದರೆ ತುಸು ಎತ್ತಿಹಾಕಿದ ಅನುಭವ  ಆಗುತಿತ್ತು. ಹದವಾಗಿ ಮೈಗೆ ಬಿಸಿನೀರು ಬಡಿಯುತಿದ್ದರೆ ಮನೆಯಲ್ಲಿ ಬೆನ್ನು ನೋವು ಆದಾಗ ಹೆಂಡತಿ ಅಮೃತಾಂಜನ ಹಚ್ಚಿ ಮೈ ನೀವುತಿದ್ದ ಅನುಭವ ಬಂದಿತು. ಮೊದ ಮೊದಲಲ್ಲಿ  ಮೈ ಕೈ ನೋವು ಇಲ್ಲದಿದ್ದರು ಬೇಕೆಂದೆ ನೀವಿಸಿಕೊಳ್ಳುತಿದ್ದೆ. ಆಮೇಲೆ ನನ್ನ ಚಾಲು ಗೊತ್ತಾದಮೇಲೆ  ಆ ಸೇವೆ ಖೋತಾ ಆಯಿತು. ಇಲ್ಲಿ ಅದು ನೆನಪಾಯಿತು. ಕಾರಣ ಬಿಸಿನೀರಿಗೆ ತುಸುವೆ ಅಮೃತಾಂಜನದ ತರಹೆಯ ವಾಸನೆ ಇತ್ತು ಸಾಧಾರಣಈಜುಕೊಳ
ದಲ್ಲಿ ಕ್ಲೋರಿನ್‌  ವಾಸನೆಗೆ ಮೂಗಿಗೆ ಘಾಟು ಹಿಡಿಯುವುದು ಇಲ್ಲಿನ ಪರಿಮಳಕ್ಕೆ  ಮೂಗಿನ ಹೊಳ್ಳೆ ಅರಳಿತು..
        ಅಲ್ಲಿಂದ ಅನೇಕರು ನೇರವಾಗಿ ಎದಿರೆ ಇದ್ದ ಗಾಜಿನ ಬಾಗಿಲು ತೆರೆದು ಒಳಗೆ ಹೋಗುವುದು ಕಾಣಿಸಿತು. ಒಬ್ಬಿಬ್ಬರು ಹೊರಬಂದಾಗ ಮೈ ಮುಖ ಕೆಂಪಾದಂತೆ ಕಾಣಿಸಿತು. ಅಲ್ಲಿನ ಜನರ ಮೈ ಬಣ್ಣ ಮೊದಲೆ ಬಿಳಿ ಇನ್ನು ಅದಕ್ಕೆಕೆಂಪುಸೇರಿದರೆ ಹೇಗಿರಬಹುದು ಎಂಬುದ ಊಹೆಗೆ ಬಿಟ್ಟ ವಿಷಯ. . ಹತ್ತಿರ ಹೋಗಿ ನೋಡಿದೆ. ಅದು ಸ್ಟೀಮ್‌ಛೇಂಬರ್‌. ಉಗಿ ಸ್ನಾನದ ಕೋಣೆ. ಇಷ್ಟೆಲ್ಲ ಆದ ಮೇಲೆ ಅದನ್ನೊಂದು ಯಾಕೆ ಬಾಕಿ ಬಿಡಬೇಕು ಎಂದು ಒಳ ನುಗ್ಗಿದೆ. ಬಾಗಿಲುತೆರೆದು ಒಳಗೆ ಹೋದರೆ ಎಲ್ಲ ಮಬ್ಬು ಮಬ್ಬು. ಚಳಿಗಾದ ಮುಂಜಾವಿನಲ್ಲಿ ಹೊರಹೋದಾಗ ಇಬ್ಬನಿಯಲ್ಲಿ ಎದರಿಗೆ ಇರುವುದು ಏನೂ ಕಾಣಿಸದು ಇಲ್ಲಿಯೂ ಅದೆ ರೀತಿ. ಆದರೆ ಒಂದೆ ವ್ಯತ್ಯಾಸ. ಇಲ್ಲಿ ಗಡಗಡ ನಡುಗಿಸುವ ಚಳಿಇಲ್ಲ. ಆದರೆ ಮೈ ಬಿಸಿ  ಮಾಡುವ ಹಬೆ. ಹಾಗಂತ  ಮೈ ಸುಡವಷ್ಟು ಬಿಸಿಯೂ ಇರಲಿಲ್ಲ. ಶೀತವಾದಾಗ  ಕುದಿಯುವ ನೀರಿಗೆ ವಿಕ್ಸ ಹಾಕಿ ತಲೆಯ ಮೇಲೆ ಹೊದಿಕೆ ಹೊದ್ದು ಮುಖ ಒಡ್ಡಿದಾಗ ಆಗುವ ಅನುಭವ. ಆದರೆಇಲ್ಲಿ  ಬರಿ ಮುಖಕ್ಕೆ ಮಾತ್ರವಲ್ಲ ಮೈಗೆ  ಎಲ್ಲ. ನಾನೂ ತಡವರಿಸುತ್ತಾ ಅಲ್ಲಿ ಇದ್ದ ಮೆಟ್ಟಲು ಹತ್ತಿ ಕುಳಿತೆ.. ಸಾವಕಾಶವಾಗಿ ಕಣ್ಣು ಅಲ್ಲಿ ವಾತಾವರಣಕ್ಕೆ ಹೊಂದಿಕೊಂಡಿತು. ಅಲ್ಲಿ ನಾನೊಬ್ಬನೆ ಇರಲಿಲ್ಲ, ಆದು ಒಂದು ಕಿರಿದಾದ ಕೋಣೆ. ಗೋಡೆಗೆ ಅಂಟಿಕೊಂಡತೆ ನಾಲಕ್ಕ ಹಂತದ ಮೆಟ್ಟಿಲುಗಳು. ಅದರಮೇಲೆ ಕೆಲವರು ಕುಳಿತಿದ್ದರು.ಒಬ್ಬನಂತೂ ಅನಾಮತ್ತು ಟವಲ್‌ ಹಾಸಿಕೊಂಡು ಮಲಗಿಯೆ ಬಿಟ್ಟಿದ್ದ. ಒಬ್ಬಮಹಿಳೆ ತಲೆಯ ಮೇಲೆ ಟವಲ್‌ ಹಾಕಿಕೊಂಡು ದಿವ್ಯ ಧ್ಯಾನದಲ್ಲಿರುವಂತೆ ಕಣ್ಮುಚ್ಚಿ ಕುಳಿತಿದ್ದಳು. ಇನ್ನೂ ಒಬ್ಬ ಎಡೆ ಬಿಡದೆ ಮೈ ಕೈ ಸವರಿ ಕೊಳ್ಳುತಿದ್ದ. ಎರಡು ನಿಮಿಷದಲ್ಲಿ ಹಬೆ ತುಸು ಕಡಿಮೆಯಾಗಿದೆ ಎನ್ನಿಸುವುದರಲ್ಲೆ ನನ್ನ ಕಾಲಬುಡದಲ್ಲೆ ಭುಸ್ಸನೆ ಉಗಿ ಹೊರಹೊಮ್ಮತೊಡಗಿತು. ಆದರೆ ಒಂದೆ ಅಚ್ಚರಿ. ನನಗೆ ಗೊತ್ತಿದ್ದಂತೆ ನೀರು ೧೦೦ಡಿಗ್ರಿಗೆ ಉಗಿಯಾಗುವುದು. ಅಂದರೆ ಆ  ಉಗಿ ಸುಟ್ಟ ಗಾಯ ಮಾಡುವುದು.ಎಷ್ಟೊ ಸಲ ನಮ್ಮ ಅಮ್ಮ ಅನ್ನದ ಪಾತ್ರೆಯ ಮೇಲಿನ ಮುಚ್ಚಳ ತೆಗೆದು ಬಂದ ಹಬೆಯಿಂದ ಕೈ ಸುಟ್ಟಿದೆ ಎನ್ನುವುದನ್ನು ಕೇಳಿದ್ದೆ.  ಆದರೆ  ಇಲ್ಲಿ  ಹಾಗಾಗಲಿಲ್ಲ, ಕಾರಣ ಇದು ಒಣ ಹಬೆ. ಹಬೆಯ ಉಷ್ಣತೆಯನ್ನು ನಿಯಂತ್ರಿಸಿ  ಬಿಡುವರು.ಬಿಸಿ ಬಿಸಿ ಅನಿಸುತಿತ್ತೆ ವಿನಃ ಮೈ ಸುಡುತ್ತಿರಲಿಲ್ಲ. ಅಷ್ಟರಲ್ಲಿ  ಒಬ್ಬ ಎದ್ದು ಮೇಲೆ ಇದ್ದ ಸ್ವಿಚ್‌ ಒತ್ತಿದ ಮತ್ತೆ ಉಗಿಬಂದಿತು ಇಲ್ಲಿ ಬಹುಶಃ ಕಾಂಪ್ಯೂಟರ್‌ ಚಾಲಿತ ನಿಯಂತ್ರಣ ವ್ಯವಸ್ಥೆ ಇರಬೇಕು. ಎಲ್ಲ ತನ್ನಿಂದ ತಾನೆ ಆಗುತಿತ್ತು.. ಹದಿನೈದು ನಿಮಿಷ ಒಳಗೆ ಇರಬಹುದು. ನನಗೆ ಸಾಕು ಎನಿಸಿತು.ಹೊರಬಂದೆ. ಮೈ ಕೈ ನೋಡಿಕೊಂಡರೆ  ಅಹಾ  ನಾನೂ ಕಪ್ಪೇನಲ್ಲ. ತಿಳಿಗೆಂಪು!  ಎಂಬ ಭಾವನೆ ಬಂದಿತು. ಈಗ ಇದು ನಮ್ಮ ದೇಶದಲ್ಲೂ ಲಭ್ಯವಿದೆ. ಇದನ್ನು ಸವೊನಾ ಎನ್ನುವರು. ರೆಸಾರ್ಟಗಳಲ್ಲಿ , ಸ್ಪಾಗಳಲ್ಲಿ ಸುಮಾರು ಇದೇ ಮಾದರಿಯ ವ್ಯವಸ್ಥೆ ಇದೆ. ನಿಸರ್ಗ ಚಕಿತ್ಸಾ ಶಿಬಿರಗಳಲ್ಲಿ  ಹಬೆ ಸ್ನಾನ ಸಾಮಾನ್ಯ.ಇದನ್ನು ಜಲ ಚಿಕಿತ್ಸೆಯ ಭಾಗವಾಗಿ ಬಳಸುವರು.   
ಅಲ್ಲಿಂದ ಮತ್ತೆ ಪಕ್ಕದಲ್ಲೆ ಇದ್ದ ತಣ್ಣಿರಿನ ಕೊಳಕ್ಕೆ ಇಳಿದೆ. ಅಲ್ಲಿನ ಗೋಡೆ ಗಾಜಿನದು.  ಪಕ್ಕದ  ಕೊಳದಲ್ಲಿ ಈಜುತಿದ್ದವರು ಕಾಣುತಿದ್ದರು, ಅನೇಕ ಚಲನ ಚಿತ್ರಗಲ್ಲಿ ನೀರಿನ ಒಳಗೆ ಈಜುತಿದ್ದವರನ್ನು ತೋರಿಸುತಿದ್ದಾಗ ಕ್ಯಾಮರವನ್ನೂ  ನೀರಿನ ಒಳಗೆ ಒಯ್ದು ಚಿತ್ರೀಕರಿಸುವರು ಎಂದುಕೊಂಡಿದ್ದ ನನ್ನ ಅನಿಸಿಕೆ ಹುಸಿ  ಎನಿಸಿತು. ಗಾಜಿನ ಗೋಡಯಿರುವ ಈಜುಕೊಳದಲ್ಲಿ  ಇರುವವವರನ್ನು ಸುಲಭ ವಾಗಿ ಚಿತ್ರಿಸಬಹುದು. ಶೈಲೇಶ್‌ಗೆ  ಅಲ್ಲಿ ಹೋಗಿ ಈಜಲು ಕೇಳಿಕೊಂಡೆ. ಅವರ ಚಲನೆಯ ಚಿತ್ರ ಕ್ಲಿಕ್‌ ಮಾಡಿದೆ. ಆಗ ತಿಳಿಯಿತು ನೀರಿನಲ್ಲಿನ ಸಾಹಸ ದೃಶ್ಯಗಳ ಒಳಗುಟ್ಟು.
ಜಲಕ್ರೀಡೆ ನಿಜಕ್ಕೂ ಖುಷಿಕೊಟ್ಟಿತು. ಮೂರುವರ್ಷದ  ಅದೈತನು ಎಗ್ಗಿಲ್ಲದೆ ನೀರಾಟವಾಡಿದ. ಅವನಿಗಂತೂ ಪಕ್ಕದಲ್ಲೆ ಇದ್ದ ವಿವಧ ಅಳತೆಯ ಕಾರಂಜಿಗಳ್ಲಿ ಚಿಮ್ಮುವ ನೀರಿನಲ್ಲಿ ಹಾರುವುದು ಕುಣಿಯುವುದು ಬಹಳ ಹಿಡಿಸಿತು ಎರಡುತಾಸಾದರೂ ನೀರು ಬಿಟ್ಟು ಹೊರಬರಲು ಸಿದ್ದನಿಲ್ಲ. ನಿಜ ಈಗ ನಮ್ಮಲ್ಲೂ ವಾಟರ್‌ ಪಾರ್ಕಗಳ ಬಂದಿವೆ . ಎಲ್ಲ ಸೌಲಭ್ಯಗಳೂ ಲಭ್ಯವಿವೆ.ಆದರೆ ವಿಶ್ರಾಂತಿಗೆಂದು  ಹೋದರೆ ಈಷ್ಟೆಲ್ಲ ಮನರಂಜನೆ ಸಿಗುವುದೆ ಎಂಬದು ನಾನರಿಯೆ. ಕಾರಣ ನಾನು ಈವರೆಗ ಭಾರತದಲ್ಲಿ ಯಾವುದೆ ರೆಸಾರ್ಟಿಗೆ ಹೋಗಿಲ್ಲ.ನನ್ನಂತೆ ಇರುವವರಿಗಾಗಿ  ಮಾತ್ರ ಹಲವು ಹಂತದ  ಸ್ನಾನದ ಸುಖವನ್ನು ಲೇಖನ ರೂಪದಲ್ಲಿ ಇಳಿಸಿರುವೆ.ಅವರಿಗೆ 

No comments:

Post a Comment