Thursday, February 7, 2013

ಕವನ



  ಮನದ ಅಂಗಳದಿ ಭಾವದಾ ಗಿಡ ಗಂಟಿ
ಕಾಲಿಡಲು ತಾವಿಲ್ಲ ಬರಿ ಮುಳ್ಳುಕಂಟಿ
ನಡುವೆ ನಳ ನಳಿಸುವ ಒಂದೆ ಹೂವು
 ಮೂಡಿ ಬರೆ ಅದೇ ಕವನ

ಏರುತಿರೆ ಗಿರಿಶಿಖರ
 ನೆರಳಿಲ್ಲ , ನೀರಿಲ್ಲ
ಇಲ್ಲ ಮರ ಮಣ್ಣು
 ಬಿಳಿ ಬಿಟ್ಟು ಬೇರೆಏನು ಕಾಣದು ಕಣ್ಣು
ಬಿಡುವ ಉಸಿರೂ ಕೂಡಾ ನುಣ್ಣನೆ ಹಿಮಮಣಿ
ಮೂಳೆ ಮುಟ್ಟುವ ಚಳಿಯಲಿ
ಉಕ್ಕುವಾ  ಬಿಸಿ  ನೀರ ಬುಗ್ಗೆ ಕವನ

ಮೇಲೆ ಧಗಧಗಿಸುವ ಭಾನು
ಜ್ವರವೇರಿರುವ ಭೂಮಿ
ಕಣ್ಣೋಟ ಹರಿವವರೆಗ ಮರಳೇ ಮರಳು
ನಡುವೆ ಕಜ್ಜೂರದ ನೆರಳು
ತುಸುವೆ ಸಿಹಿ ನೀರ ಒರತೆ
ಅದುವೆ ಕವಿತೆ

 ಹೊರಗೆ ವಾಹನ ಮೈಕುಗಳ ಭರಾಟೆ
ಮನೆಯಲಿ ರೇದಿಯೋ,ಟಿವಿ , ಮಕ್ಕಳ ಗಲಾಟೆ
ಕಿವಿಗಾಗಬಹುದ ತೂತು
ಎನುವಾಗ ಕೇಳುವ
ಇನಿಯಳ ಪಿಸು ಮಾತೆ
ಕವಿತೆ.

ತಾಯ ಮಡಿಲಿನ ಹಸುಳೆ
ಮೂಡದಿಹ ಹಾಲುಹಲ್ಲು,
ಜಾರುತಿರೆ ಜೊಲ್ಲು
ಅರೆ ಬಿರಿದ ಅಧರ
 ಹೂವಿನ ಎಸಳು
ಪಶು, ಪಕ್ಷಿ, ಜಡ ಚೇತನ,
ತನ್ನವರು ಅನ್ಯರು  ಎನದೆ
ಖುಷಿಯಿಂದ ಮಗು
 ತೂರಿಬಿಡುವ ನಗು
ಒಂದು ಸುಂದರ ಕವನ.

No comments:

Post a Comment