Monday, January 7, 2013

ಸಮಸ್ಯೆಯ ಮಡಿಲಲ್ಲೇ ಸಾಮರಸ್ಯ .



ಬಳ್ಳಾರಿ ಜಿಲ್ಲೆಯ ಕಾಲೇಜು ಒಂದರಲ್ಲಿ ಧಾರ್ಮಿಕ  ಆಚರಣೆ ಮತ್ತು ಸಾಮಾಜಿಕ ನೆಡವಳಿಕೆಗಳ ನಡುವಿನ ತಾಕಲಾಟದಿಂದ ಆಗವ ವಿಚಿತ್ರ ಘಟನೆಯೊಂದು ಅನುಭವಕ್ಕೆ ಬಂದಿತು. ಅಲ್ಲಿ ಪ್ರಾಂಶುಪಾಲರು ತುಂಬ ಸಜ್ಜನರು. ಧರ್ಮ ಭೀರು.ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರು.  ಯಾವುದೆ ಬೇಧವಿಲ್ಲದೆ ಎಲ್ಲರೊಂದಿಗೆ ಬೆರೆಯುವರು. ಉಗಾದಿ, ಮಹಾರ್ನವಮಿ ಬಂದರಂತೂ ಎಲ್ಲರ ಸಂಭ್ರಮದಲ್ಲಿ ಭಾಗಿಯಾಗುವರು.  ಹೀಗಾಗಿ ಅವರು ಸಹೋದ್ಯೋಗಿಗಳಲ್ಲಿ ಬಹು ಜನಪ್ರಿಯರಾಗಿದ್ದರು.ಅವರ  ಹಬ್ಬಗಳಲ್ಲಂತೂ ಎಲ್ಲರಿಗೂ ಆಮಂತ್ರಣ. ಅದರಲ್ಲೂ ರಂಜಾನ್‌ ತಿಂಗಳಲ್ಲಿ ಅವರದು ರೋಜಾ . ಕಟ್ಟುಪವಾಸ. ಸಂಜೆ ಊಟ. ಉಪನ್ಯಾಸಕರೆಲ್ಲರಿಗೂ ಆಮಂತ್ರಣ. ಚಿತ್ರಮಯವಾಗಿರುವ ಗೇಣೆತ್ತರ ಲೋಟಗಳಲ್ಲಿ ಸುರುಕುಂಬ  ಸುರಿದಿದ್ದೇ ಸುರಿದದ್ದು. ಮೊದಲು ನಮಗೆ ಅದೇನೋ ಎಂದು ಅನುಮಾನ ಕಾಡಿದರೂ ಅದು ನಮ್ಮ ಶ್ಯಾವಿಗೆ ಪಾಯಸದ ಇನ್ನೊಂದು ರೂಪ ಎಂದು ರುಚಿ ನೋಡಿದ ಮೇಲೆ ಗೊತ್ತಾಯಿತು. ಇನ್ನು ಅದರ ಜತೆ ಚುಂಗೈ. ಅದು ಒಂದು ರೀತಿಯ ತುಪ್ಪದಲ್ಲಿ ಮಾಡಿದ ಡಿಜೈನ್‌ ಚಪಾತಿ.ಅದರ ಮೇಲೆ ಬೀಸಿದ ಸಕ್ಕರೆ ಮತ್ತು ತುಪ್ಪ ಹಾಕಿಕೊಂಡು ತಿನ್ನಬೇಕು.ನಮ್ಮ ಮನೆಯಲ್ಲಿ ಬಂದು ಅದರ ವರ್ಣನೆ ಮಾಡಿದ ಮೇಲೆ ನಮ್ಮಮನೆಯಾಕೆಗೂ ಕುತೂಹಲ ಕಾಡಿತು.ಅವಳೆ ಪ್ರಿನ್ಸಿಪಾಲರ ಮನೆಗೆ ಹೋಗಿ ವಿಚಾರಿಸಿದಳು.ಪ್ರಿನ್ಸಿಪಾಲರ ಹೆಂಡತಿಗೆ ಸಂತೋಷ ವಾಯಿತು.   ನಮ್ಮ ಚಪಾತಿಯಂತೆಯೆ ಗೋದಿ ಹಿಟ್ಟಿನಿಂದ ಮಾಡುವುದು. ಆದರೆ ಅದನ್ನು ಬಳಪದ ಕಲ್ಲಿನ ವಿವಿಧ ವಿನ್ಯಾಸ ಹೊಂದಿದ ಹಂಚಿನ ಮೇಲೆ ಮಾಡಿರುವರು. ಹಿಟ್ಟನ್ನು ಅದರ ಮೇಲೆ ಲಟ್ಟಿಸಿದಾಗ ಹಾಳೆಯ ಮೇಲೆ ಚಿತ್ತಾರ ಮೂಡುವುದು.  ಎಂದು ಪಾಕ ವಿಧಾನವನ್ನು ಹೇಳಿ ಕೊಟ್ಟರು . ಅಷ್ಟೆ ಅಲ್ಲ ಕೆಲವು ಸಮಯದ ನಂತರ ಚುಂಗೈ ಮಣೆಯನ್ನು ಕಾಣಿಕೆಯಾಗೂ ನೀಡಿದರು
ಅವರ ಧಾರ್ಮಿಕ ನಿಷ್ಟೆ ಮಾತ್ರ ಮೆಚ್ಚುವಂತಹದು.ಆಚರಣೆಯಲ್ಲಿ ತುಸುವೂ  ವಿನಾಯತಿ ಇಲ್ಲ. ತಿನ್ನುವ ಮಾತು ಹಾಗಿರಲಿ , ನೀರನ್ನೂ ಕುಡಿಯುವುದಿಲ್ಲ . ಉಗಳನ್ನೂ ನುಂಗದ ನಿಯಮ ಪರತೆ ಅವರದು. ಆದರೆ ಕಾಲೇಜಿನ ಕೆಲಸದಲ್ಲಿ ಯಾವುದೆ ಹೊಂದಾಣಿಕೆ ಮಾಡಿಕೊಳ್ಳದೆ ನಗು ನಗುತ್ತಾ ಇರುತಿದ್ದರು.ಆದರೆ ಯಾವುದೆ ಸಂತೋಷ ಕೂಟವಾದರೂ ಬಂದು ಕೂಡುತಿದ್ದರೆ ಹೊರತು ಏನನ್ನೂ ತಿನ್ನುತ್ತಿರಲಿಲ್ಲ.
ನಮ್ಮ ಕಾಲೇಜಿನಲ್ಲಿ  ಗಣಪತಿ ಉತ್ಸವವನ್ನು ಬಹಳ ವಿಜೃಂಭಣೆಯಿಂದ ಪ್ರತಿವರ್ಷವೂ ಆಚರಿಸುವ ಪದ್ದತಿ .ಮಕ್ಕಳೆ ಚಂದಾಹಾಕಿ ಪೂಜೆ ಮಾಡಿ ಪ್ರಸಾದ ವಿತರಣೆಯಾಗುತಿತ್ತು. ಮೂರುದಿನದ ನಂತರ ಗಣಪತಿ ವಿಸರ್ಜನೆ.ಎಲ್ಲರಿಗೂ ಉಪಹಾರ.
 ಪ್ರಿನ್ಸಿಪಾಲರು ತಾವು ರೋಜಾ  ಇರುವುದರಿಂದ ಏನನ್ನೂ ಸೇವಿಸುವುದಿಲ್ಲ. ಸೂರ್ಯ ಮುಳಗುವ ತನಕ ಬಾಯಲ್ಲಿ ನೀರನ್ನೂ ಹಾಕದೆ ಇರುವುದು ತಮ್ಮ ವ್ರತ ಎಂದು ಮೊದಲೆ ತಿಳಿಸಿದ್ದರು. ಆದರೆ ನೀವೆಲ್ಲ ಏನೆಲ್ಲ ಮಾಡ ಬೇಕೋ ಅದನ್ನು  ಎಲ್ಲವನ್ನೂ ಸಂಪ್ರದಾಯ ಬದ್ದ ವಾಗಿ ಮಾಡಿ ನಾನು ಮೊದಲಿನಿಂದ ಕೊನೆಯ ತನಕ  ಇದ್ದು ಭಾಗವಹಿಸುವೆ ಎಂದು ಆಶ್ವಾಸನೆ ನೀಡಿದರು. ಆದರೆ ಊಟ ತಂಡಿ ಸೇವಿಸುವುದಿಲ್ಲ . ಅಷ್ಟೆ ಏಕೆ ಕಾಫಿ ಟೀ , ನೀರು ಸಹಾ ಕುಡಿಯುವುದಿಲ್ಲ , ಕಾರಣ ರೋಜಾದಲ್ಲಿರುವೆ ಎಂದರ, ನಾವು ಖಷಿಯಿಂದ ಒಪ್ಪಿದೆವು. ಅವರು ಅನುಮತಿಕೊಟ್ಟಿದ್ದು ಮಾತ್ರವಲ್ಲ ಸ್ವತಃ ಭಾಗವಹಿಸುತ್ತಿರುವುದು ನಮಗೆ ಖುಷಿ ತಂದಿತು ನಾವು ಅವರಿಗೆ ಪ್ರಸಾದವೆಂದು ಕಾಯಿ ಹಣ್ಣು ನೀಡುವುದಾಗಿಯೂ ಅವರು ಅದನ್ನು ಸ್ವೀಕರಿಸ ಬೇಕೆಂದು ಕೋರಿದೆವು. ಅವರು ಪ್ರಸಾದವನ್ನುಸಂತೋಷವಾಗಿ ಮನೆಗೆ ತೆಗೆದುಕೊಂಡು ಹೋಗಿ ರಾತ್ರಿ ಉಪವಾಸ ಮುಗಿದ ಮೇಲೆ ಖಂಡಿತವಾಗಿ ಸಂಸಾರ ಸಮೇತ  ಹಣ್ಣುಗಳನ್ನು ತಿನ್ನುವುದಾಗಿ ತಿಳಿಸಿದರು. ನಮಗೆಲ್ಲರಿಗೂ ಬಹಳ ಸಂತೋಷವಾಯಿತು.
 ಗಣೇಶನ ಚತುರ್ಥಿಯ ದಿನ ಬೆಳಗ್ಗೆ ಒಂಬತ್ತಕ್ಕೆ ಹಾಜರಾದ್ದರು.ಮಕ್ಕಳು , ಸಿಬ್ಬಂದಿ ಸೇರಿದರು. ಅಂದು ಹುಡುಗಿಯರ ಸಡಗರ ಹೇಳ ತೀರದು ಎಲ್ಲರೂ ಹೊಸ ಬಟ್ಟೆ , ರೆಷ್ಮೆ ಸೀರೆ ಧರಿಸಿ ಬಂದ ಹುಡುಗಿಯರಂತೂ ಯಾರೂ ಹೊರಗಿನ ಮಹಿಳೆಯರು  ಬಂದಿರುವರು  ಎಂದು ನಾವು  ತಿರುಗಿ ನೋಡುವಷ್ಟು ಅಲಂಕಾರ ಮಾಡಿಕೊಂಡು ಬಂದಿದ್ದರು.. ಪೂಜೆ ಪ್ರಾರಂಭವಾಯಿತು.ಎಲ್ಲರೂ ಹೂವು ಮಂತ್ರಾಕ್ಷತೆ ಹಾಕಿದರು.ನಂತರ ಮಂಗಳಾರತಿ  ಬಂದಿತು.ಪೂಜೆ ಮಾಡಿದ ಹುಡುಗನಿಗೆ ಖುಷಿಯೋ ಖುಷಿ.ಮಂಗಳಾರತಿ ತಟ್ಟೆಯಲ್ಲಿ ದಕ್ಷಿಣೆ ಅವನದು. ನಮ್ಮ ಪ್ರಾಂಶುಪಾಲರೂ ಐದು ರೂಪಾಯಿ  ದಕ್ಷಿಣೆ ಹಾಕಿದರು. ನಂತರ ಅವನು ಎಲ್ಲರಿಗೂ ತೀರ್ಥ ಕೊಡಲು ಬಂದ. ಮೊದಲ ಗೌರವ ಕಾಲೇಜು ಮುಖ್ಯಸ್ಥರದು. ಅವನು ಬಂದ ಕೂಡಲೆ ಅವರು ಎಲ್ಲರಂತೆ ಕೈ ಒಡ್ಡಿದರು. ಅವನು ತೀರ್ಥ ನೀಡಿದ. ಅವರು ಭಕ್ತಿಯಿಂದ ಎರಡೂ ಕಣ್ಣಿಗೆ ಒತ್ತಿಕೊಂಡು ಕುಡಿದರು. ಅವನು ನಮಗೆ ಒಬ್ಬಿಬ್ಬರಿಗೆ ತೀರ್ಥ ಕೊಟ್ಟಿಬಹುದು. ಪ್ರಾಂಶುಪಾಲರು ಧಡಕ್ಕನೆ ಎದ್ದು ಬಾಗಿಲ ಕಡೆ ಧಾವಿಸಿದರು ಅವರು ಬೆಚ್ಚಿ ಬಿದ್ದು ಹೊರಗೆ ಧಾವಿಸಿದ್ದು ಕಂಡು ನಮಗೆ ಗಾಬರಿಯಾಯಿತು.   ಹೊರಗೆ ಬಂದು ನೋಡಿದರೆ ಅವರು ವಾಂತಿ ಮಾಡಿಕೊಳ್ಳುತಿದ್ದಾರೆ. ಥೂ ಥೂ ಎಂದು ಒಂದೆ ಸಮನೆ ಉಗುಳುತಿದ್ದಾರೆ.ನಮಗೆ ಏನೂ ತೋಚಲಿಲ್ಲ. ಬಹುಶಃ ತೀರ್ಥದ ದೋಷದಿಂದ ಅವರಿಗೆ ಹೀಗೆ ವಾಂತಿಯಾಗಿದೆ ಎಂದು ಕೊಂಡೆವು.
ವೈದ್ಯರ ಹತ್ತಿರ ಹೋಗುವುದು ಒಳ್ಳೆಯದು ಇಲ್ಲವಾದರೆ ಅವರನ್ನೆ ಕರಸಿದರೂ ಸರಿ, ಎಂದು ಜವಾನನ್ನು ಕೂಗಿದೆವು. ಆದರೆ ಅವರು ಕೈ ಸನ್ನೆ ಬಾಯಿ ಸನ್ನೆ ಮಾಡಿ ಬೇಡ ,ಬೇಡ  ಎಂದು ಸೂಚಿಸಿದರು. ನಾವು ಸುತ್ತ ಮುತ್ತ ನೋಡಿದೆವು. ಹತ್ತಾರು ಜನ ತೀರ್ಥ ಕುಡಿದಿದ್ದರೂ ಯಾರಿಗೂ  ಏನೂ ಆಗಿರಲಿಲ್ಲ. ಎಲ್ಲರೂ ಧನ್ಯತಾ  ಭಾವದಿಂದ ನೆಮ್ಮದಿಯಾಗಿದ್ದರು. . ಆದ್ದರಿಂದ ಅಂತಹ ಅಪಾಯವಿಲ್ಲ ಎನಿಸಿತು. ಹತ್ತು ನಿಮಿಷದ ತರುವಾಯ ಸಾಹೇಬರು  ಸಹಜ ಸ್ಥಿತಿಗೆ ಬಂದರು.  ನಂತರ ತಿಳಿಯಿತು. ಅವರು ರೊಜಾದಲ್ಲಿದ್ದಾರೆ. ಏನನ್ನೂ ಸೇವಿಸಬಾರದು.  ಆದರೆ ಅದನ್ನು ಮರೆತು ಪೂಜೆಯನಂತರ ತೀರ್ಥವನ್ನು ಕುಡಿದಿದ್ದಾರೆ.  ನಂತರ ನೆನಪಾಗಿದೆ. ತಾವು ರಂಜಾನ್‌ ಉಪವಾಸ ವ್ರತದಲ್ಲಿರುವುದು.ಕಟ್ಟಾಧಾರ್ಮಿಕರಾದ ಅವರು ಸಹಜವಾಗಿ ಗಾಬರಿಯಾಗಿರುವರು. ಅದಕ್ಕೆ ತಕ್ಷಣ ಸೇವಿಸಿದ್ದನ್ನೆಲ್ಲ ಹೊರ ಹಾಕಲು ಪ್ರಯತ್ನಿಸಿದ್ದಾರೆ. ಅದು ನಮಗೆ ಗಾಬರಿ ಉಂಟು ಮಾಡಿದೆ. ಅವರ ಸಂಪ್ರದಾಯದ ಪ್ರಕಾರ ಉಗಳನ್ನೂ ನುಂಗಬಾರದು. ಆದರೆ ಅವರು ಒಂದು ಚಮಚ ನೀರನ್ನೆ ಕುಡಿದಿರುವುರು.  ಅವರು ಅಂದು ಸಂಜೆಯ ತನಕ ಉಗುಳುವುದನ್ನು ಮುಂದುವರಿಸಿದ್ದರು.  ನಮಗೆ ಅವರ ಧಾರ್ಮಿಕ ಭಾವನೆ ಮತ್ತು ಆಚರಣೆಯಲ್ಲಿನ  ಶ್ರದ್ಧೆ ಕಂಡು ಸೋಜಿಗ ವಾಯಿತು. ಅವರ ನಿಷ್ಠೆಗೆ ಸಲಾಂ   ಎಂದೆವು ಎಂದೆವು.ಸಮಾಜದಲ್ಲಿ ಎಲ್ಲ ಆಚರಣೆಗಳನ್ನೂ ಡಂಭಾಚಾರಕ್ಕೆ , ತೋರಿಕೆಗೆ ಮಾಡುವ ಜನರೆ ಹೆಚ್ಚು. ಮೂರ್ತಿ ಪೂಜೆ ಅವರ ನಂಬಿಕೆಗೆ ವಿರುದ್ಧವಾದರೂ ತಾವೂ ಭಾಗವಹಿಸಿ ತಮ್ಮ ಸಾಮಾಜಿಕ ಹೊಣೆಯನ್ನು ನಿರ್ವಹಿಸಿರುವುರ ಜತೆಗೆ ತಮ್ಮ ವೈಯುಕ್ತಿಕ ಆಚರಣೆಯನ್ನೂ ಪಾಲಸಿರುವರು.  ಈ ಅವರ ಪರಧರ್ಮ ಸಹಿಷ್ಣುತೆ ನಮ್ಮೆಲ್ಲರ ಮೆಚ್ಚಿಗೆಗೆ ಪಾತ್ರ ವಾಯಿತು.ಅದೆ ತಾನೆ ನಮ್ಮ ಭಾರತದ ಐಕ್ಯತೆಯನ್ನು, ಜ್ಯಾತ್ಯಾತೀತೆಯನ್ನು ಕಾಪಾಡುತ್ತಿರುವ ಮಂತ್ರ.

No comments:

Post a Comment