Thursday, January 10, 2013

ಸಾಮರಸ್ಯದ ಸ್ವಾರಸ್ಯ








               ಗಣಪತಿ ಪೂಜೆ 






ನಾನು ಪ್ರಾಂಶುಪಾಲನಾಗಿ ಹೊಸ ಕಾಲೇಜಿನಲ್ಲಿ ಅಧಿಕಾರ ವಹಿಸಿಕೊಂಡ ಹೊಸದು. ಅಲ್ಲಿ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ.ವಾಗಿದೆ. ಪ್ರತಿ ತರಗತಿಯಲ್ಲಿ ನಾಲಕ್ಕು ಐದು ಜನ ಇದ್ದರು. ನಾನು ಹೋದ ತಿಂಗಳೊಪ್ಪತ್ತಿನಲ್ಲೆ ಗಣೇಶನ ಹಬ್ಬ ಬಂದಿತು.ಆ ಕಾಲೇಜಿನಲ್ಲೂ ಗಣಪತಿ ಉತ್ಸವದ ಆಚರಣೆಯ ಪದ್ದತಿ ಇತ್ತು. ಅದು ವಿದ್ಯಾರ್ಥಿ ಸಂಘದ ಚಟುವಟಿಕೆಯ ಒಂದು ಭಾಗವಾಗಿತ್ತು   ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ವಿದ್ಯಾರ್ಥಿ ಸಂಘದ ವಂತಿಗೆ ಜತೆಗೆ ವಿದ್ಯಾರ್ಥಿಗಳೂ ಚಂದಾ ಹಾಕಿ ಮೂರು ದಿನದ ಉತ್ಸವ ಮಾಡುವುದು ಎಂದು ತೀರ್ಮಾನವಾಯಿತು. ಹಬ್ಬ ಹತ್ತಿರ  ಬಂದಿತು .ಆದರೆ ವಂತಿಗೆ ಹಣ ಪೂರ್ಣವಾಗಿ ಸಂಗ್ರಹ ವಾಗಿರಲಿಲ್ಲ.  ಹಲವು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಇದು ನಮ್ಮ ಹಬ್ಬವಲ್ಲ ಆದುದರಿಂದ ನಾವು ಏಕೆ ವಂತಿಗೆ ಕೊಡಬೇಕು ಎಂದು ತಕರಾರು ತೆಗೆದಿದ್ದರು. ಅದನ್ನುನೋಡಿ ಇತರ ಕೆಲವರು ಅವರು ಕೊಡದಿದ್ದ ಮೇಲೆ ನಾವೂ ಕೊಡುವುದಿಲ್ಲ ಎಂದು ತಗಾದೆ ಮಾಡಿದ್ದರು.. ಇಗಾಗಿ ಹಣ ಸಂಗ್ರಹ ನೆನಗುದಿಗೆ ಬಿದ್ದಿತ್ತು. ವಿಚಾರಿಸಿದಾಗ ಅನೇಕ ವಿದ್ಯಾರ್ಥಿಗಳು ಅವರು ಕೊಡದಿದ್ದರೆ ಬೇಡ ನಾವೆ ಹೆಚ್ಚುವರಿಯಾಗಿ ಕೊಟ್ಟು ಮೊದಲಿಗಿಂತ ಜೋರಾಗಿ ಆಚರಿಸೋಣ ಎಂಬ ಹುಮ್ಮಸ್ಸಿನಲ್ಲಿದ್ದರು. ಆದರೆ ಈ ವಿಷಯ ನನ್ನ ಗಮನಕ್ಕೆ ಬಂದಾಗ ಈ ರೀತಿಯ ಯೋಚನೆ ಸರಿಯಲ್ಲ ಎನಿಸಿತು. ಇದರಿಂದ ಕಾಲೇಜಿನ ಒಗ್ಗಟ್ಟು ಮಾಯವಾಗಿ ಬಿಕ್ಕಟ್ಟು ಮೂಡುವ ಸಂಭವ ಇದೆ ಎನಿಸಿತು.ಇವರು ಈ ಹಬ್ಬ ತಮ್ಮದು ಎಂದು ಅವರನ್ನು ಬಿಟ್ಟು ತಾವೆ ಚಂದಾಹಾಕಿ ಆಚರಿದರೆ ನಾಳೆ ಅವರೂ  ಸಹಾ ನಮ್ಮಷ್ಟಕ್ಕೆ ನಾವೆ ನಮ್ಮ ಹಬ್ಬವನ್ನು ಆಚರಿಸುವೆವು ಎನ್ನಲು ಅವಕಾಶವಿತ್ತು. ಈ ಸಮಾರಂಭವು ವಿದ್ಯಾರ್ಥಿಗಳೆಲ್ಲರದು ಎಂಬ ಭಾವನೆಗೆ ಬಲವಾದ ಪೆಟ್ಟು ಕೊಡುತಿತ್ತು. ಇದರಿಂದ ಇಲ್ಲದ ಸಮಸ್ಯೆಯನ್ನು ನಾವೆ ಹುಟ್ಟಿಹಾಕಿದ ಹಾಗಾಗುತಿತ್ತು..  ಸರಕಾರಿ ಸಂಸ್ಥೆಯಲ್ಲಿ ಯಾವುದೆ ಒಂದು ಧರ್ಮಕ್ಕೆ ಸೀಮಿತವಾದ ಸಮಾರಂಭ ಆಚರಿಸಬಾರದು. ಹಾಗೆಂದು ಇದ್ದ ಸಂಪ್ರದಾಯ ಬಿಡಬಾರದು. . ನನಗೆ ಆ ತಕ್ಷಣ ಏನೂ ಹೊಳೆಯಲಿಲ್ಲ. ಆ ಸಮಸ್ಯೆಯು ಗುಂಗಿ ಹುಳ ದಂತೆ ರಾತ್ರಿಯೆಲ್ಲಾ ನನ್ನ ತಲೆಯಲ್ಲು ಗುಂಯ್‌ ಗುಡುತಿತ್ತು. ಕೊನೆಗೆ ಒಂದು ತೀರ್ಮಾನಕ್ಕೆ ಬಂದೆ . ಏನೆ ಆಚರಣೆ ಇರಲಿ ಅದು ಸಾರ್ವತ್ರಿಕ ವಾಗಿರಬೇಕು. ಅಂದಾಗ ಮಾತ್ರ ಅದು ಐಕ್ಯತೆಯ ಸಂಕೇತವಾಗುವುದು. ಮಾರನೆಯ ದಿನ ಎಲ್ಲ ಮಕ್ಕಳ ಸಭೆ ಕರೆಯಲಾಯಿತು.ಅಲ್ಲಿ ಈ ಆಚರಣೆಯ ವಿಧಾನ ಕುರಿತ ವಿಷಯ ವಿವರಿಸಲಾಯಿತು.ಇದು ಇಂದು ನಿನ್ನೆಯದಲ್ಲ. ಅನೇಕ ವರ್ಷಗಳಿಂದ ನಡೆದು ಬಂದ ಆಚರಣೆ.ಇದು ಸ್ವಾತಂತ್ರ್ಯ ಪೂರ್ವದಲ್ಲಿ ಲೋಕಮಾನ್ಯ ತಿಲಕರಿಂದ  ಇದು ಪ್ರಾರಂಭವಾಯಿತು. ಜನ ಮನದಲ್ಲಿನ ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸಲು ಇದು ಸಾಧನವಾಯಿತು.ಭಾರತೀಯರ ಐಕ್ಯತೆಯ  ಸಂಕೇತ ವಾಯಿತು. ಆದ್ದರಿಂದ ಇದನ್ನು ಒಂದು ಧರ್ಮಕ್ಕೆ ಸೀಮಿತ ಗೊಳಿಸುವುದು ಸಲ್ಲದು ಎಂದು ಎಲ್ಲರಿಗೂ ಮನದಟ್ಟು ಅಗುವಂತೆ ವಿವರಿಸಿದೆ. ಇನ್ನು ಆಚರಣೆಯ ವಿಧಾನ , ಹೆಚ್ಚು ಹಣ ವೆಚ್ಚಮಾಡಿ ವೈಭವದಿಂದ ಮಾಡಬೇಕೆಂದೇನೂ ಇಲ್ಲ. ಸರಳವಾಗಿ ಆಚರಿಬಹುದು ಎಂದು ಸೂಚಿಸಿದೆ. ಆದರೆ ಬಹುತೇಕ ವಿದ್ಯಾರ್ಥಿಗಳಿಂದ ಆಚರಣೆ ಅದ್ಧೂರಿಯಾಗಿರಬೇಕು ಎಂಬ ಬೇಡಿಕೆ ಬಂತು. ಹಾಗಿದ್ದರೆ ನಾನು ಚಂದಾ ಸಂಗ್ರಹಕ್ಕೆ ಅನುಮತಿಸಿದೆ. ಆದರೆ ಕಡ್ಡಾಯ ಮಾಡ ಬಾರದು. ಯಾರೂ ಧಾರ್ಮಿಕ ಕಾರಣದ ಮೇಲೆ ಚಂದಾ ನಿರಾಕರಿಸಬಾರದು ಆರ್ಥಿಕವಾಗಿ ತೊಂದರೆ ಇದ್ದರೆ  ನಾಮಕಾವಾಸ್ತೆ ಕೈಲಾದುದನ್ನು ಕೊಡಲಿ. ಆದರೆ ಇಲ್ಲ ಎನ್ನಬಾರದು, ಎಂದು ಮನವರಿಕೆ ಮಾಡಲಾಯಿತು.
 ಅಷ್ಟರಲ್ಲಿ ಒಂದು ದನಿ ಬಂದಿತು. ನಾವೂ ಪೂಜೆ ಮಾಡಬಹುದೆ ?  ಕೇಳಿದವನು ದಲಿತವರ್ಗದವ. ನಾನು ಖಂಡಿತ ಎಂದೆ. ನಾವು ಗಣೇಶನ ಪೂಜೆಗೆ ಹೊರಗಿನಿಂದ ಬ್ರಾಹ್ಮಣರನ್ನೋ, ಅಯ್ಯನವರನ್ನು ಕರೆಸುವುದು ಬೇಡ. ವಿಗ್ರಹಕ್ಕೆ ಜನಿವಾರ, ಲಿಂಗಧಾರಣೆಯ ಹಂಗಿಲ್ಲ. ನಮಗೆ ಮಂತ್ರ ಸಹಿತ ಪೂಜೆ ಎಂದೇನೂ ಇಲ್ಲ. ಯಾರಾದರೂ ವಿದ್ಯಾರ್ಥಿ ಶುಚಿಯಾಗಿ ಬಂದು ಪೂಜೆ ಮಾಡಬಹುದು. ಅವನಿಗೆ ಯಾರು ಬೇಕಾದರೂ ಇಬ್ಬರು ಮೂವರು ಸಹಾಯ ಮಾಡಲಿ. ಅದನ್ನು ಮಕ್ಕಳೆ ನಿರ್ಧರಿಸಲಿ,  ಎಂದೆ.  ಸಾಧ್ಯವಾದರೆ ಅಲ್ಪ ಸಂಖ್ಯಾತ ಮತ್ತು ದಲಿತ ಮಕ್ಕಳೂ ಪೂಜಾ ತಂಡದಲ್ಲಿರಲಿ, ಎಂದು ತಿಳಿಸಿದೆ.
 ಆಗಾ ನಮ್ಮ ಸಹ ಶಿಕ್ಷಕರೊಬ್ಬರು , ಅದೆಲ್ಲಾ ಬೇಡ ಸಾರ್‌, ಅಲ್ಪ ಸಂಖ್ಯಾತರು ಮೂರ್ತಿ ಪೂಜೆ ಮಾಡುವುದು ಅವರ ಧರ್ಮದ ಪ್ರಕಾರ ನಿಷಿದ್ಧ,  ಹಾಗೇನಾದರೂ ಮಾಡಿಸಿದರೆ ಅವರ ಜನಾಂಗದಿಂದ ಆಕ್ಷೇಪಣೆ  ಬರಬಹುದು, ಎಂದು ಕೊಕ್ಕೆ ಹಾಕಿದರು.


ಒಂದು ಕ್ಷಣ ಅವರ ಮಾತು ನಿಜ ಎನಿಸಿತು. ಇದು ಇಲ್ಲದ ಸಮಸ್ಯೆಗೆ ಕಾರಣವಾಗಬಹುದು ಎನಿಸಿತು.ಆದರೆ ನನಗೆ ನಮ್ಮ ಊರಲ್ಲಿ ಆಚರಿಸುವ ಮೊಹರಂ ಹಬ್ಬದ ನೆನಪು ಬಂದಿತು. ಆ ಸಮಯದಲ್ಲಿ ಪಂಜಾಗಳಿಗೆ ಬಣ್ಣದ ಬಟ್ಟೆ ತೊಡಿಸಿ ಒಂಬತ್ತು  ದಿನ  ಅಹೋರಾತ್ರಿ ಪೂಜಿಸುವ ಪರಿಪಾಠ ಕಣ್ಣ ಮುಂದೆ  ಬಂದಿತು.ಕೆಲವು ಕಡೆ ಅದನ್ನು ಪೀರಲ ದೇವರು ಎಂದರೆ ಇನ್ನೂ ಕೆಲವು ಕಡೆ ಬಾಬಯ್ಯನ ಹಬ್ಬ ಎನ್ನುವರು.  ಈ ಹಬ್ಬವನ್ನು ಮುಸ್ಲಿಮರ ಜತೆ ಹಿಂದೂಗಳೂ ಆಚರಿಸುವರು. ಕೆಲವು ಗ್ರಾಮಾಂತರ  ಪ್ರದೇಶಗಳಲ್ಲಿ ಹಿಂದೂಗಳ ಸಂಖ್ಯೆಯೆ ಅಧಿಕ.  ಹೆಣ್ಣು ,  ಪಿಂಛಾದಿಂದ  ಮಗುವಿ ಮೈ ಸವರಿದರೆ ರೋಗ  ನಿವಾರಣೆಯಾಗುವುದು ಎಂಬುದು  ನಂಬಿಕೆ. ಐದನೆ ದಿನ ಏಳನೆ ದಿನ ದೇವರನ್ನು ಹೊತ್ತವರು ಮೆರವಣಿಗೆಯಲ್ಲಿ ಊರ ಸಂಚಾರಕ್ಕೆ ಹೊರಡುವುರು.ಆಗ ಅದರ ಪಾದದ ಮೇಲೆ ತುಂಬಿದ ಕೊಡದ ನೀರು ಹಾಕಿ ಅದನ್ನತಮ್ಮ ಮೈಮೇಲೆ ಸಿಡಿಸಿಕೊಳ್ಳುವರು.ಅದರ ಲೋಭಾನದ ಹೊಗೆ ಹಾಕಿಸಿಕೊಂಡರೆ ಅನಿಷ್ಟ ಪರಿಹಾರವಾಗುವುದು ಎಂದು ಬಲವಾಗಿ ನಂಬಿರುವರು. ಅಷ್ಟೆ ಅಲ ಆ ದೇವರುಗಳು ಹಳ್ಳಿಯಲ್ಲಿನ ದುರುಗಮ್ಮ , ಗಾಳೆಮ್ಮನ ಗುಡಿಗೆ ಬಂದು ತಮ್ಮ ತಂಗಿಯನ್ನು ನೋಡಿಕೊಂಡು ಹೋಗಬೇಂಬ ವಾಡಿಕೆ ಇದೆ.  ಊರಲ್ಲೆ ಎರಡು ಕಡೆ ಇಟ್ಟಿದ್ದರೆ , ಇಲ್ಲವೆ ಹತ್ತಿರದಲ್ಲೆ ಇರುವ ಊರಿಗೆ ಹೋಗಿ ತಮ್ಮ ಭಾಯಿಯನ್ನು ಭೇಟಿಯಾಗುವರು.ಅದನ್ನು ಅಲಾಯಿ ಬಿಲಾಯಿ ಕೊಡುವುದು ಎನ್ನುವರು. ಅಲ್ಲದೆ ದೇವರ ಮಂದೆ ತೆಗೆದ ಆಲಾಯಿ ಕುಣಿಯಲ್ಲಿ ಬೆಂಕಿಹಾಕಿ ಸುತ್ತಲೂ ರಾತ್ರಿ ಬಹು ಹೊತ್ತಿನ ತನಕ ಕುಣಿಯುವರು.ಬಹತೇಕ ಅವರೆಲ್ಲ ಹಿಂದುಗಳೆ. ಒಂಬತ್ತನೆ ದಿನ ರಾತ್ರಿ ಖತಲ್‌ ರಾತ್ರಿ. ಅದೂ ಕತ್ತಲ ರಾತ್ರಿ ಎಂದೆ ಪ್ರಸಿದ್ಧಿ. ಅಂದು ರಾತ್ರಿ  ಇಡೀ   ಅವುಗಳ ಓಡಾಟ. ಆಗಿನ  ಜನ ಜಂಗುಳಿ ಹೇಳ ತೀರದು. ಅಂದು ಬೆಂಕಿ ತುಳಿಯುವುದೂ ಇದೆ. ಹತ್ತನೆಯ ದಿನ ದೇವರು ಸಾಯುವ ದಿನ. ಅಂದು ಸಂಜೆ  ಎಲ್ಲರೂ ಮೆರವಣಿಗೆಯಲ್ಲಿ ನೀರಿನ ತಟಾಕಕ್ಕೆ ಹೋಗಿ ದೇವರಬಟ್ಟೆ ತೆಗೆದು  ಪೆಟ್ಟಿಗೆಯಲ್ಲಿಟ್ಟು ಕಂಡು ಶೋಕ ಗೀತೆ ಹಾಡುತ್ತಾ ಮೂಲ ಸ್ಥಾನಕ್ಕೆ ಬರುವರು. ಮತ್ತೆ ಮುಂದಿನ ವರ್ಷದವರೆಗೆ ಅವನ್ನು ಮಸೀದೆಯಲ್ಲಿ ಭದ್ರವಾಗ ನೇತು ಹಾಕುವರು. ಅಲ್ಲಿಗೆ ಮೊಹರಂ ಮುಕ್ತಾಯ. ಈ ಆಚರಣೆ ಅಲ್ಪ ಸ್ವಲ್ಪ ವ್ಯತ್ಯಾಸದೊಂದಿಗೆ ಎಲ್ಲ ಕಡೆ ಇದೆ.ದೇವರಿಗೂ ಮಾನವರಂತೆ ಅಕ್ಕ, ತಮ್ಮ, ಸಂಬಂಧ ಕಲ್ಪಿಸಿ, ಕೊನೆಗೆ ಸಾವೂ  ಇದೆ ಎಂದು ನಂಬುವ ಜನಪದದ ರೀತಿ ಬಹು ವಿಸ್ಮಯಕಾರಿ. ಅದೂ ಎಲ್ಲ ಜಾತಿ ಧರ್ಮದ ಕಟ್ಟು ಮೀರಿದ ಆಚರಣೆಯಾಗಿದೆ.ಈ ವಿಷಯವನ್ನು ನಮ್ಮ ಶಿಕ್ಷಕರ ಸಭೆಯಲ್ಲಿ ಚರ್ಚಿಸಿದೆ. ಎಲ್ಲರೂ ಈ ರೀತಿ ಆರಣೆ ಇರುವುದು ನಿಜ ಎಂದು ಒಪ್ಪಿಕೊಂಡರು. ಆದರೆ ಮೊದಲಿನ ಜೋರು ಇಲ್ಲ ಎಂದರು ಹಾಗಿರುವಾಗ ಗಣಪತಿಯೂ ಒಂದು ಸಾಂಕೇತಿಕ ಉತ್ಸವವಾಗಬೇಕು.ಅದನ್ನು ಯಾವುದೆ ಧರ್ಮಕ್ಕೆ ಸೀಮಿತ ಗೊಳಿಸಬಾರದು ಇದು ಪರಂಪರೆಯ ಒಂದು ಭಾಗ. ಶಾಲೆಯಲ್ಲಿನ ಆಚರಣೆ ಸಮಾಜಕ್ಕೆ ಮಾದರಿಯಾಗಬೇಕು. ಇದು ಜಾತಿ ಮತಗಳ ಸೋಂಕಿನಿಂದ ದೂರವಿರಬೇಕು  ಎಂದು ಅವರಿಗೆಲ್ಲ ಮನದಟ್ಟು ಮಾಡಿದೆ. ಆಕ್ಷೇಪಣೆ ಮಾಡಿದವರೂ  ತಲೆ ದೂಗಿದರು.
ಆ ವರ್ಷ ಗಣೇಶನ ಉತ್ಸವ ಚೆನ್ನಾಗಿಯೆ ನಡೆಯಿತು.ಎಲ್ಲ ಮಕ್ಕಳೂ ಉತ್ಸಾಹದಿಂದ ಭಾಗವಹಿಸಿದರು  ತಳಿರು ತೋರಣ ಕಟ್ಟುವಲ್ಲಿ , ಮಂಟಪ ಅಲಂಕಾರ ಮಾಡುವ  ಕೆಲಸದಲ್ಲಿ, ಬಣ್ಣದ ಕಾಗದ ಕತ್ತರಿಸಿ ಅಂಟಿಸುವಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಿದರು. ಫುಜೆಯ ದಿನ ಬಂದಿತು. ಅಂದು ಪೂಜೆಗೆ ಒಬ್ಬರ ಬದಲು ಮೂವರು ತಂಡವನ್ನು   ಪೂಜೆ ಮಾಡಲು  ನಿಯೋಜಿತವಾಯಿತು. ಪೂಜಾ ವಿಧಾನವನ್ನು ತಿಳಿದವನಿ ಜತೆ ಅಲ್ಪಸಂಖ್ಯಾತ ಮತ್ತು ದಲಿತ ವಿದ್ಯಾರ್ಥಿಇರುವ ತಂಡ  ಪೂಜೆ ಮಾಡಿತು. ಒಬ್ಬನು ಶ್ಲೋಕ ಹೇಳಿದರೆ ಇನ್ನೊಬ್ಬನು ಹೂ ಏರಿಸಿದ. ಮತ್ತೊಬ್ಬನು ಗಂಟೆಬಾರಿಸಿ  ಮಂಗಳಾರತಿ ಎತ್ತಿದ. ತೀರ್ಥ ಪ್ರಸಾದ ವಿತರಣೆಯೊಂದಿಗೆ ಉತ್ಸವವು ಯಾವುದೆ ಅಡೆ ತಡೆಯಿಲ್ಲದೆ ಸಾಂಗವಾಗಿ ಮುಗಿಯಿತು.
 ಗಣೇಶನ ವಿಸರ್ಜನೆಯನ್ನು  ಐದನೆ ದಿನ  ಏಳನೆ  ದಿನ  ಮಾಡುವುದು  ವಾಡಿಕೆ.ಅದರಿಂದ ಅಷ್ಟೂ ದಿನ ಪಾಠ ಪ್ರವಚನಕ್ಕೆ ತೊಂದರೆ. ಅದರಿಂದ ಅವದಿಯನ್ನು ಮೂರೆ  ದಿನಕ್ಕೆ ಇಳಿಸಲಾಯಿತು. ಪೂಜಾ ಸಮಯದಲ್ಲಿ ಬಿಡುವಿರುವ ತರಗತಿಯಮಕ್ಕಳು ಮಾತ್ರ ಇದ್ದರೆ ಸಾಕೆಂದು ವಿಧಿಸಲಾಯಿತು. ಜೊತೆಗ ವಿರಾಮವಿರುವ ಶಿಕ್ಷಕರು ಕೂಡಾ ಭಾಗವಹಿಸುವರು. ಮೂರನೆಯ ದಿನ ಮಾತ್ರ ಮಧ್ಯಾಹ್ನ ಎಲ್ಲರಿಗೂ ಪಾಠ ಇಲ್ಲ.   ಎಲ್ಲರೂ ಸೇರಿ ಅದ್ಧೂರಿಯಿಂದ ಮೆರವಣಿಗೆಯಲ್ಲಿ ಗಣೇಶನನ್ನು ಹತ್ತಿರದ ಕೆರೆಗೆ ಕೊಂಡೊಯ್ಯಲಾಯಿತು. ಶಾಲೆಯ ಡ್ರಮ್‌ ಸೆಟ್‌, ತತ್ತೂರಿ ಧ್ವನಿಯಜತೆಗೆ ನೂರಾರು ಕಂಠದಿಂದ ಹೊರಟ ಗಣಪತಿ ಬಪ್ಪಾ ಮೋರಯ್ಯಾ, ಮುಂದಿನ ವರ್ಷಕ್ಕೆ ಬಾರಯ್ಯಾ ಎಂಬ ಘೋಷಣೆ ನಿನದಿಸುತಿತ್ತು. ವಿಸರ್ಜನೆಯ ನಂತರ ಚರುಪು ಹಂಚಿ ಕಾಲೇಜಿಗೆ ವಾಪಸ್ಸಾದೆವು
ಸಮಸ್ಯೆ ಯಾಗಬಹುದಿದ್ದ ವಿಷಯ ಸಾಮರಸ್ಯಕ್ಕೆ ಕಾರಣವಾಯಿತು.   . 


No comments:

Post a Comment