Saturday, January 26, 2013

ಆರರಿಂದ ಅರವತ್ತು -ಸರಣಿ


 ತೊಗೋಬೇಕು ಅಂದ್ರೂ ದಮ್ ಬೇಕು!
ನಾನು ಪ್ರಿನ್ಸಿಪಾಲನಾದ ಹೊಸತು. ಅದೋ ದೊಡ್ಡ ಕಾಲೇಜು, ಸಮಸ್ಯೆಯ ಸಾಗರ. ಲೋಕ ಕುಖ್ಯಾತ. ಇಲಾಖೆಯವರೇ  ಕೈ ಚೆಲ್ಲಿ ಕುಳಿತಿದ್ದರು. ಜತೆ ಕೆಲಸಗಾರರಿಂದ ಕೆಲಸ ತೆಗೆಯಬೇಕೆಂದರೆ ಅವರ ಕಾನೂನು ಬದ್ದ ಸವಲತ್ತುಗಳನಮ್ನೂ ತಡಮಾಡದೇ ನೀಡಬೇಕೆಂಬುದರಲ್ಲಿ  ನನಗೆ ನಂಬಿಕೆ. ಎಂಥ ಸ್ಥಿತಿವಂತನಾದರೂ ನೌಕರಿಗೆ ಬಂದನೆಂದರೆ ಅವರು ಬರುವುದು ಅದರಿಂದ ಬರುವ ಆದಾಯಕ್ಕಾಗಿಯೇ. ಹಾಗಾಗಿ ಮೊದಲು ಆರ್ಥಿಕ ಸೌಲಭ್ಯ ನೀಡಿದರೆ ಏನೇ ಕೆಲಸ ಹೇಳಿದರೂ ಅವರೂ ಉತ್ಸಾಹದಿಂದ ಕೆಲಸ ಮಾಡುವರು ಎಂಬುದು ನನ್ನ ಅನುಭವ.
ಒಂದು ದಿನ ಮುಂಜಾನೆಯ ವಾಕ್ ಮುಗಿಸಿ ಮನೆಗೆ ಬಂದಾಗ ಆಗಲೇ 7.30. ಇನ್ನೇನು ಸ್ನಾನ ಕ್ಕಿಳಿಯಬೇಕು. ಆಗ ಬಾಗಿಲಲ್ಲಿ ಕಂಡವರು ನಮ್ಮ ಗಣಿತ ಶಾಸ್ತ್ರದ ಉಪನ್ಯಾಸಕ. ಅವರು ನಮ್ಮ ತವರು ಜಿಲ್ಲೆಯವರು.ಹರಪನ ಹಳ್ಳಿ ಅವರ ಊರು.ಅವರನ್ನು ಕಂಡು ಖುಷಿಯಾಯಿತು. ಮನೆಯವರಿಗೆ ತಿಂಡಿ ತರಲು ತಿಳಿಸಿದೆ. ಅವರು ಸಂಕೋಚದಿಂದ ಇರುವಂತೆ ಕಂಡಿತು.

ಏನ್ ಸ್ವಾಮಿ, ಇಷ್ಟು ಬೇಗ ಬಂದಿದ್ದೀರಿ. ಏನು ವಿಷಯ ಎಂದೆ. ಅವರು ಅತ್ತಿತ್ತ ನೋಡುತ್ತ ಕಾಗದದಲ್ಲಿ ಸುತ್ತಿದ್ದ ಒಂದು ಪುಡಿಕೆ ನೀಡಲು ಬಂದರು.
ಏನದು?  ಎಂದೆ.
 ದುಡ್ಡು ಸಾರ್, ಎಂಟು ಸಾವಿರ ಇದೆ ,ಎಂದರು
ಯಾವ  ದುಡ್ಡು  ? ಏಕೆ ತಂದಿರಿ  ?ಎಂದೆ .ಗಾಬರಿಯಿಂದ.
ಸಾರ್ ,ನಾನು ಮತ್ತು ಕೆಮಿಷ್ಟ್ರಿ ಉಪನ್ಯಾಸಕರು ಅರೆಕಾಲಿಕ ಉಪನ್ಯಾಸಕರಾಗಿ 3 ವರ್ಷದಿಂದ ಕೆಲಸ ಮಾಡುತ್ತಿದ್ದೇವೆ.     ಈಗ ನಮಗೂ ಪೂರ್ಣ ವೇತನ ನೀಡಬೇಕು ಎಂದು ಸರ್ಕಾರಿ ಆದೇಶ ಬಂದಿದೆ. ಎಂದರು.
ಹೌದು, ನಾನು ನೋಡಿದ್ದೇನೆ. ಎರಡು ದಿನ ಆಯಿತು. ಇಬ್ಬರಿಗೂ ತಲಾ ಸುಮಾರು 80ಸಾವಿರ  ವೇತನ ಬಾಕಿ ಬರಬಹುದು. ಬಿಲ್ ಮಾಡಿಸಿದರೆ ಎಷ್ಟು ಬರುವುದೋ ಎನ್ನುವುದು ಖಚಿತವಾಗಿ ಗೋತ್ತಾಗುವುದು, ಎಂದೆ.
ಅದಕ್ಕೆ ನಾವಿಬ್ಬರು ಸೇರಿ ನಿಮಗೆ ಇದನ್ನು ಕೊಢುತ್ತಿದ್ದೇವೆ, ಎಂದರು
ಬೇಡ, ನನಗ್ಯಾಕೆ ನೀವು ಹಣ ಕೊಡಬೇಕು.?
ಇಲ್ಲ ಸಾರ್ ನಮಗೆ ಉಪಕಾರ ಮಾಡಿ, ತೆಗೆದುಕೊಳ್ಳಿ. ಹಿಂದಿನವರೆಲ್ಲ ಯಾವುದೇ ಬಾಕಿ ಬಿಲ್ಲಿಗೆ ಶೇ.10 ತೆಗೆದುಕೊಳ್ಳುತ್ತಿದ್ದರು. ನಾನು ನಿಮ್ಮ ಕಡೆಯವನು. ಶೇ.5 ಕೊಡುತ್ತಿದ್ದೇವೆ ದಯಮಾಡಿ ತೆಗೆದುಕೊಳ್ಳಿ, ಎಂದು ಗೋಗರೆದರು.
ನನಗೆ ಈ ಲೆಕ್ಕಾಚಾರದ ತಲೆ ಬುಡ ಅರ್ಥವಾಗಲಿಲ್ಲ. ಬಹುಶಃ ಅವರು ನನಗೆ   ನೀಡಿದ ಮಾಮೂಲು ಕಡಿಮೆ ಎನ್ನುತ್ತಿರುವೆ ,ಎಂದು ತಿಳಿದು ಅವರು ವಿವರಣೆ ನೀಡಿರಬೇಕು.
ಹೇಗಾದರೂ ಮಾಡಿ ಬಿಲ್ಲು ಮಾಡಿಸಿ ಸಾರ್ ,ಇನ್ನೂ ಎರಡು ಸಾವಿರ ನಂತರ ಕೊಡುತ್ತೇವೆ. ಗುಮಾಸ್ತರನ್ನು ಆಗಲೆ ಒಪ್ಪಿಸಿದ್ದೇವೆ.ಖಜಾನೆಯಲ್ಲಿ ಬಿಲ್ ಪಾಸ್ ಮಾಡಿಸುವುದು ನಮ್ಮ ಹೊಣೆ, ಎಂದರು
ಇದೆಲ್ಲಾ ಏನೂ ಬೇಡ. ನಾನು ನನ್ನ ಕೆಲಸ ಮಾಡಲು ಯಾವುದೇ ಹಣದ ಅವಶ್ಯಕತೆಯಿಲ್ಲ. ಮೊದಲು ಹಣವನ್ನ ಬ್ಯಾಗಿನಲ್ಲಿ ಇಟ್ಟುಕೊಳ್ಳಿ .ತಿಂಡಿ ತಿನ್ನುವ ಹೊತ್ತು. ತಿಂಡಿ ತಿನ್ನಿ . ಒಟ್ಟಿಗೆ ಕಾಲೇಜಿ ಹೋಗೋಣ ,ಎಂದೆ.
ಬೇಡ ಸಾರ್ , ತಿಂಡಿ ಬೇಡ. ನಮಗೆ ಬೇಗ ಬಿಲ್ಲು ಮಾಡಿಸಿಕೊಟ್ಟರೆ  ಅದೆ ದೊಡ್ಡದು. ಈ ಹಣ ಪ್ರೀತಿಯಿಂದ ಕೊಡುತ್ತಿದ್ದೇವೆ. ನೀವೇನೂ ಕೇಳಿಲ್ಲ. ಪದ್ಧತಿ ಪ್ರಕಾರ ಕೊಡದಿದ್ದರೆ ನಮಗೆ ಮುಜುಗರವಾಗುತ್ತದೆ, ಇದು ಸಾಮಾನ್ಯ ,ಎನ್ನುತ್ತಾ ನೋಟಿನ ಕಂತೆಯನ್ನು ಮೇಜಿನ ಮೇಲಿಟ್ಟರು.
ಏನು ಕೆಲಸ ಮಾಡುತ್ತಿದ್ದೀರಿ. ಮೊದಲು ನಿಮ್ಮ ಹಣ ನೀವು ತೆಗೆದುಕೊಳ್ಳಿ, ಎಂದು ದನಿಯೇರಿಸಿದೆ.
ಅವರು ಗಾಬರಿಗೊಂಡು ಹಣವನ್ನು ಹಿಂದೆ ಪಡೆಯದೇ , ಇಲ್ಲ ಸಾರ್ ಹೇಗಾದರೂ ಮಾಡಿ, ಕಾಲೇಜಿನಲ್ಲಿ ಕಾಣುತ್ತೇನೆ ಎಂದು ಓಟ ಕಿತ್ತರು. ಅವರನ್ನು ಕರೆದು ತರಲು ಎಂದು ನಮ್ಮ ಹುಡುಗರನ್ನು ಕಳಿಹಿಸುವಷ್ಟರಲ್ಲಿ ಕಣ್ಮರೆಯಾದರು.
ನನಗೆ ಇದೇನೆಂದು ಹೊಳೆಯಲಿಲ್ಲ. ಅಷ್ಟರಲ್ಲಿ ನನ್ನ ಏರಿದ ದನಿ ಕೇಳಿ ಹೆಂಡತಿ ಹೊರ ಬಂದು ,ಏನು ಯಾರ ಮೇಲೆ ರೇಗುತ್ತಿದ್ದೀರಿ ?ಎಂದಳು.
ಪಿಯುಸಿ ಓದುವ ಮಗಳು, ಕಾಲೇಜು ರಂಗನಾದ ಮಗ ಬಂದು ನಿಂತರು. ಅವರಿಗೆ ಆ ನೋಟಿನ  ಕಟ್ಟುನ್ನು ತೋರಿಸಿದೆ. ಬಯಸದೇ ಬಂದಿದ್ದಾಳೆ ಭಾಗ್ಯಲಕ್ಷ್ಮಿ ಎಂದೆ.
ಈಗ ಏನು ಮಾಡುತ್ತೀರಿ ?ಎಂದಳು ನನ್ನ ಮನೆಯಾಕೆ.
ಏನು ಮಾಡುವುದೇ ಗೊತ್ತಾಗುತ್ತಿಲ್ಲ. ನಮಗೆ ದೊಡ್ಡ ಮೊತ್ತ ಎನಿಸುವ ಹಣ ಕೈ ಸೇರಿದೆ. ನಾನಂತೂ ಕೇಳಿಲ್ಲ. ಅದಾಗೇ ಸಿಕ್ಕಿದೆ. ನಿಮಗೆ ಏನು ಬೇಕೋ ಅದನ್ನು ಕೊಡಿಸಬಹುದು. ಏನಂತೀರಿ ? ಎಂದು ಮರು ಪ್ರಶ್ನೆ ಹಾಕಿದೆ.
“ ಅನ್ಯಾಯದ ಹಣ ನಮಗೆ ಬೇಕಿಲ್ಲ. ಈ ವರೆಗೆ ಕೈ ಶುದ್ಧವಾಗಿ ಇಟ್ಟುಕೊಂಡವರು ಈಗ ಯಾರೋ ಕೊಟ್ಟರೆಂದು ಕೈ ಏಕೆ ಹೊಲಸು ಮಾಡಿಕೊ ಳ್ಳುವಿರಿ ?.  ಅಲ್ಲದೇ, ನಮಗೆ ಇಂಥ ಹಣದಿಂದ ಏನನ್ನೂ ತೆಗೆದು ಕೊಳ್ಳುವ ಮನಸ್ಸಿಲ್ಲ “  ಎಂದಳು ಮನೆಯಾಕೆ. ನೀವೇನಂತೀರಿ ಎಂದು ಮಕ್ಕಳ ಮುಖ ನೋಡಿದೆ.
ಈಗ ನಮಗೆ ಇರುವುದೇ ಸಾಕು ಹೆಚ್ಚಿನದು ಬೇಕಿಲ್ಲ. ಇಂಥದಕ್ಕೆಲ್ಲ ಆಸೆಪಡುವುದಿಲ್ಲ ಎಂದು ಒಕ್ಕೊರಲಿನಿಂದ ಹೇಳಿದರು.
ನನ್ನ ಗುರಿಯನ್ನೇ ತಮ್ಮದಾಗಿಸಿಕೊಂಡ ಕುಟುಂಬದವರನ್ನು  ಆನಂದದಿಂದ ಕಣ್ತುಂಬಿ ನೋಡಿದೆ.
ವಿದ್ಯ ,ಬುದ್ಧಿ, ಎಲ್ಲ ಇದ್ದರೂ, ಸಂಸ್ಕಾರವಂತರಾದವರೂ ಹಣಕ್ಕೆ ಬಾಯಿ ಬಿಡುವ ಹೆಂಗಸರೆ ಬಹಳ, ಉಡುಗೆ-ತೋಡುಗೆಗೆ ಹಂಬಲಿಸುವ ಹುಡುಗರೆ  ಹೆಚ್ಚಾಗಿರುವಾಗ, ಇವರೆಲ್ಲ ನನ್ನ ಹಣಕ್ಕೆ ಮನಸೋಲದೆ ಇರುವುದನ್ನು ನೋಡಿ ಸಂತೋಷವಾಯಿತು..
ಅದೇ ದಿನ ಕಾಲೇಜಿನಲ್ಲಿ ಶಿಕ್ಷಕರ ಸಭೆ ಕರೆದೆ. ಬೆಳಿಗ್ಗೆ ಮನೆಯಲ್ಲಿ ನಡೆದ ಘಟನೆ ವಿವರಿಸಿದೆ, ಮೇಜಿನ ಮೇಲೆ ಹಣದ ಕಂತೆಇಟ್ಟು ಅದನ್ನು ತೆಗೆದುಕೊಳ್ಳುವಂತೆ ಸಂಬಂಧಿಸಿದವರಿಗೆ ತಿಳಿಸಿದೆ. ಕರ್ತವ್ಯ ನಿರ್ವಹಣೆಯ ಮಾಡುವಾಗ ಲಾಭ-ನಷ್ಟ, ಕೋಪ-ತಾಪಗಳು ಅಡ್ಡ ಬರುವುದಿಲ್ಲ. ಎಲ್ಲರಿಗೂ ನಿಯಮಾನುಸಾರ ಬರಬೇಕಾದ್ದು ನಿಗದಿತ ಸಮಯದಲ್ಲಿ ದೊರಕುವುದು. ಯಾರೂ ಇನ್ನು ಮೇಲೆ ಈ ರೀತಿ ನನ್ನೊಡನೆ ವರ್ತಿಸಬಾರದು ಎಂದು ತಿಳಿಸಿದೆ.
ಎಲ್ಲರೂ ಮೌನವಾಗಿ ತಲೆಯಾಡಿಸಿದರು.  ನಂತರ ನನಗೆ ಮಾಹಿತಿ ಬಂತು, ಹಲವರು ಹೀಗೆ ಹಣ ಕೊಡಬಾರದಿತ್ತು. ಅವರ ಬದಲಿ ಬೆಲೆಬಾಳುವ ಉಡುಗೊರೆ ನೀಡಿದ್ದರೆ ಸರಿಯಾಗುತ್ತಿದ್ದು ಎಂದು ಸಲಹೆ ನೀಡಿದರಂತೆ . ಕೆಲವರು  ಮಾತ್ರ ಇವರಿಗೆ ಧೈರ್ಯವಿಲ್ಲ. ದುಡ್ಡು ಮಾಡಲು ದಮ್ಮಿಲ್ಲ ಎಂದು ಆಡಿಕೊಂಡರು.
ನಿಜ, ನನಗೆ ಇಂಥ  ಕೆಲಸ ಮಾಡಲು ಬೇಕಾದ ದಮ್ಮು ಎಂದೆಂದಿಗೂ ಬರುವುದು ಬೇಡ,ಎಂದು ಕೊಂಡೆ.

Tuesday, January 22, 2013

ಅಮೇರಿಕಾ ಅನುಭವ-10


                                                                     ಸ್ವಾತಂತ್ರ್ಯ  ಪ್ರತಿಮೆ
                                                                                       
  ಅಮೇರಿಕಾ ಎಂದೊಡನೆ ನೆನನಪು ಬರುವುದು, ಸ್ವಾತಂತ್ರ್ಯ ತಂದು ಕೊಟ್ಟ ಜಾರ್ಜ ವಾಷಿಂಗ್ಟನ್ , ಗುಲಾಮಗಿರಿ ನಿವಾರಿಸಿ ಸರ್ವರಿಗೂ ಸಮಾನತೆ ನೀಡಿದ ಅಬ್ರಾಹಂ ಲಿಂಕನ್ ಮತ್ತು  ಅಮೇರಿಕನರ ಆಶಯದ ಪ್ರತೀಕವಾದ ಸ್ವಾತಂತ್ರ್ಯ ಪ್ರತಿಮೆ. ನ್ಯೂಯಾರ್ಕ ಮತ್ತು ನ್ಯೂಜರ್ಸಿ ರಾಜ್ಯಗಳ ಮಧ್ಯದ ಹಡ್ಸನ್ ನದಿ ನೀರ ನಡುವೆ ಇರುವ ಪುಟ್ಟ ಲಿಬರ್ಟಿ ದ್ವೀಪದಲ್ಲಿ ಮುಗಿಲೆತ್ತರಕ್ಕೆ ಸ್ವಾತಂತ್ರ್ಯ ಜ್ಯೋತಿಯನ್ನು ಎತ್ತಿ ಹಿಡಿದಿರುವ ಅಮೆರಿಕಾದ ಹೆಮ್ಮೆಯ ಹೆಗ್ಗುರುತಾಗಿರುವುದೆ  ಸ್ವಾತಂತ್ರ್ಯ ಮಹಿಳೆ .  ಕಡಲ ಮಾರ್ಗವಾಗಿ ಬರುವವರಿಗೆಲ್ಲ ದಾರಿ ತೋರುವಂತಿರುವ, ಮಂಕು ಕವಿದ ಮನದಲ್ಲಿ ಬೆಳಕು ಮುಡಿಸುವ ,ಹೊಸ ಬಾಳಿನ ಆಶೆ ಚಿಗುರಿಸುವ ಈ ಪ್ರತಿಮೆ ನಾವಿಕರ ಬಾಯಲ್ಲಿ    “ಲೇಡಿ ಲಿಬರ್ಟಿ “  ಅಥವ  ಸ್ವಾತಂತ್ರ್ಯ ಮಹಿಳೆ.


 ಅಮೇರಿಕಾದ ಸ್ವಾತಂತ್ರ್ಯ ಯುದ್ಧವು ಯುರೋಪಿನಲ್ಲಿನ ಪ್ರಜಾಪ್ರಭುತ್ವ ವಾದಿಗಳಲ್ಲಿ ರೋಮಾಂಚನ ಮೂಡಿಸಿತು. ಅದರಲ್ಲೂ ಲೂಯಿಗಳ ರಾಜಾಡಳಿತವನ್ನು ಕಿತ್ತೆಸೆಯಲು ರಕ್ತ ಕ್ರಾಂತಿಯನ್ನೆ ಮಾಡಿದ ಫ್ರಾನ್ಸನಲ್ಲಿ ಮಿಂಚಿನ ಸಂಚಾರವಾಯಯಿತು.ಅವರ ನೈತಿಕ ಬೆಬಲವೂ ದೊರಕಿತು ಅಮೇರಿಕಾದ ಸ್ವಾತಂತ್ರ ಯುದ್ಧಕ್ಕೆ .  ಮೊದಲು ಮಿಲಿಯನ್ ಗಟ್ಟಲೆ ಹಣ ನೀಡಿ ಶಸ್ತ್ರಾಸ್ರ ಕೊಳ್ಳಲು ಸಹಾಯ ಮಾಡಿದರು. ಆದರೆ ಕೊನೆ ಹಂತದಲ್ಲಿ ದಕ್ಷಿಣದ ಯಾರ್ಕ ಟೌನ್ ನಲ್ಲಿ  ಸೇನಾ ಕಾರ್ಯಚರಣೆಯಲ್ಲಿ ನೇರವಾಗಿ ಫ್ರಂಚ ಸೇನೆ ಭಾಗವಹಿಸಿ ಲಾರ್ಡ ಕಾರ್ನ ವಾಲಿಸ್ ಸೋಲೊಪ್ಪಿ ವಾಪಸ್ಸು  ಹೋಗುವಂತೆ ಮಾಡಿತು. ಅವರ ಜತೆ ಸ್ಪೇನಿನ ನೌಕಪಡೆಯು ಇಂಗ್ಲಿ ಷ್ ನೌಕಾ ದಾಳಿಯನ್ನು ತಡೆಯಿತು. ಇದರಂದ ಅಮೇರಿಕನರ ಹೋರಾಟ  ಯಶಗಳಿಸಿತು. ಈ ರೀತಿಯಲ್ಲಿ ಸ್ವಾತಂತ್ರ್ಯಕ್ಕೆ ಸಹಾನುಭೂತಿ ತೋರಿದ ಫ್ರೆಂಚರಿಂದಲೆ ಸ್ವಾತಂತ್ರ  ಪ್ರತಿಮೆಯ ಸ್ಥಾಪನೆಗೆ ಚಾಲನೆ ದೊರೆಯಿತು
ಸ್ವಾತಂತ್ರ್ಯ ಪ್ರತಿಮೆಯ ಪ್ರಸ್ತಾವನೆ ಪ್ರಾರಂಭವವಾದದ್ದು ಪ್ಯಾರಿಸ್ಸಿನ ಲ್ಲಿ.  ಅಲ್ಲಿ ೧೮೬೫ ರಲ್ಲಿ  ನೆಡೆದ ಒಂದು ಭೋಜನ ಕೂಟದಲ್ಲಿ  ಲೇಖಕರು, ವಿದ್ವಾಂಸರು , ದೇಶ ಭಕ್ತರು  ಸೇರಿದ್ದರು. ಎಡ್ವರ್ಡ ಡಿ ಲಬ್ಯೊಲಯಾ ನ ಮುಂದಾಳುತನದಲ್ಲಿ  ಅಮೇರಿಕಾ ಸ್ವಾತಂತ್ರ್ಯದ ಶತಮಾನೊತ್ಸವದ ನೆನಪಿಗಾಗಿ ಕೊಡುಗೆ ನೀಡಲು ಯೊಚಿಸಲಾಯಿತು. ಅಮೇರಿಕಾ ಸ್ವಾತಂತ್ರ್ಯ ವನ್ನು ಸತತವಾಗಿ ನೂರು ವರ್ಷ ಅನುಭವಿಸಿರುವುದು   ಫ್ರೆಂಚರಿಗೆ ಹೆಮ್ಮೆಯ ವಿಷಯವಾಗಿತ್ತು.   ಅವರಿಗೂ ಮೊದಲೆ  ಫ್ರಾನ್ಸ  ಸ್ವಾತಂತ್ರ್ಯ ಪಡೆದಿದ್ದರೂ  ಅಲ್ಲಿ ಪ್ರಜಾ ಪ್ರಭುತ್ವ ಮತ್ತು  ಸರ್ವಧಿಕಾರ ಗಳ  ನಡುವೆ ಕಣ್ಣು ಮುಚ್ಚಾಲೆ ಸಾಗಿತ್ತು.   ಆಗ ಸರ್ವಾಧಿಕಾರಿ ೩ ನೇ ನೆಪೋಲಿಯನ್  ಅಳಿಕೆ.  ಆದರೂ ಮೂರನೆ  ಸಲ ಪ್ರಜಾಪ್ರಭುತ್ವ  ಪಡೆಯಲು   ಅವರ ಪ್ರಯತ್ನ  ಎಡಬಿಡದೆ ಸಾಗಿತ್ತು. ಸ್ವಾತಂತ್ರ್ಯದ ಕಿಡಿಯನ್ನು ಜನರ ಮನದಲ್ಲಿ ಹತ್ತಿಸಲು ಇದೂ ಒಂದು  ಅವರ ಒಳ ಉದ್ದೇಶ ವಾಗಿತ್ತು.   ಅದೆ ತಾನೆ ನಿರ್ಮಾಣವಾದ ಪ್ಯಾರಿಸ್ ನಲ್ಲಿನ ಜಗತ್ತಿನ ದೊಡ್ಡ ಲೋಹದ ಗೋಪುರ ವಾದ ಎಫೆಲ್ ಟವರ್ ಜಗದ ಗಮನ ಸೆಳೆದಿತ್ತು . ಅದರಂತೆಯೇ ಲೋಕ ವಿಖ್ಯಾತವಾದ ಕೊಡುಗೆಯನ್ನು  ಅಮೇರಿಕಾ ದೇಶಕ್ಕೆ ನೀಡಲು ನಿರ್ಧಾರವಾಯಿತು. ಅದರ ಫಲವೇ  ಜಗದ್ ವಿಖ್ಯಾತ ಸ್ವಾತಂತ್ರ್ಯಪ್ರತಿಮೆ. ಅದು   ಲೋಹದ ಪ್ರತಿಮೆ  . ಆದರೆ ಅವರ ಯೋಜನೆಗೆ ಮೂರ್ತರೂಪ ಬಂದಿದ್ದು ೧೮೭೧ರಲ್ಲಿ  ಅದೂ ೩ನೇ ನೆಪೋಲಿನ್  ನಿಧನಾನಂತರ.
ಫ್ರೆಡರಿಕ್ ಅಗಷ್ಟೆ ಬಾರತೊಲ್ಡಿ ಇದರ ಶಿಲ್ಪಿ. ಅವರು  151  ಅಡಿ ಎತ್ತರದ ಕಂಚಿನಪ್ರತಿಮೆಯನ್ನ  ಸ್ಥಾಪಿಸಲು ಯೋಜನೆ ಹಾಕಿದ. ಅದರ ಒಟ್ಟು ಎತ್ತರ   305 ಅಡಿಗಳು.ವಿಶ್ವದಲ್ಲೆ ಅತಿ ಎತ್ತರದ ಆಕೃತಿಗಳಲ್ಲಿ ಇದು ಒಂದು. ಇದಕ್ಕೂ ಎತ್ತರದ ಪ್ರತಿಮೆಗಳು ಅಗ ಇದ್ದವು .ಆದರೆ  ಅವು ಕಲ್ಲಿನ ಪ್ರತಿಮೆಗಳು.  ಲೋಹದ ಈ ರಿತಿಯ ಬೃಹತ್ ಪ್ರತಿಮೆ ಇಲ್ಲವೆ ಇಲ್ಲ ಎನ್ನಬಹುದು.  ಎಂಟನೆ ಶತಮಾನದಲ್ಲಿನ  ಚೀನಾದಲ್ಲಿನ ಕಲ್ಲಿನ ಲೇಷನ್ ಬುದ್ಧವಿಗ್ರಹದ ಎತ್ತರ ೨೨೦ ಅಡಿ ಎತ್ತರ . ಅಫ್ಘನಿಸ್ಥಾನದಲ್ಲಿದ್ದ ಒಮಿಯಾನ್ ಬುದ್ಧ ವಿಗ್ರಹದ ಎತ್ತರ ೧೭೫ ಅಡಿ,ಅದು ಇತ್ತೀಚೆಗಷ್ಟೆ  ತಾಲಿಬಾನ ಉಗ್ರರಿಂದ ರಿಂದ ನಾಶವಾಯಿತು.  

ಜಪಾನನಲ್ಲಿನ ಟೋಕಿಯೋಗೆ ೫೦ ಕಿಮೀಟರ್ ದಲ್ಲಿರುವ ಉಷಿಕೋ ಅಮಿದಾ ಬುದ್ದ ನ ವಿಗ್ರಹ  ೧೦೦ ಮೀಟರ್ ಎತ್ತರವಿದೆ . ಅದರ ಪೀಠವು ಸೇರಿದರೆ೩೯೬ ಅಡಿಯಾಗುವುದು.
ಇತ್ತೀಚೆಗೆ ಅನೇಕ ವಿಗ್ರಹಗಳು ಎತ್ತರ ಎತ್ತರಕ್ಕೆ ನಿರ್ಮಿತವಾಗುತ್ತಿವೆ. ಅಷ್ಟೆ ಏಕೆ ನಮ್ಮ ದೇಶದಲ್ಲಿಯೂ ನಿರ್ಮಿತವಾಗುತ್ತಿರುವ ೫೦೦ ಅಡಿ ಮೈತ್ರೇಯಿ ಬುದ್ಧನವಿಗ್ರಹವು ಪ್ರಪಂಚದಲ್ಲೆ ಅತಿ ಎತ್ತರದ  ವಿಗ್ರಹವಾಗಲಿದೆ.                ಎಷ್ಟೆ ಎತ್ತರದ ವಿಗ್ರಹವಾದರೂ ,ಯಾವದೂ ಸ್ವಾತಂತ್ರ್ಯ ಪ್ರತಿಮೆಗೆ ಹೋಲಿಕೆಯಾಗಲಾರವು. ಇಲ್ಲಿ ಗಣನೆಗೆ ಬರುವುದು ಬರಿ ಗಾತ್ರವಲ್ಲ ಅಥವ ಎತ್ತರವಲ್ಲ. ಬೇರೆಲ್ಲಾ   ಪ್ರತಿಮೆಗಳು ರಚಿತವಾಗಿರುವುದು. ಧಾರ್ಮಿಕ ಕಾರಣ ಗಳಿಗಾಗಿ. ಅದರಲ್ಲೂ ವಿಶೇಷವಾಗಿ ಏಷಿಯಾಖಂಡದಲ್ಲಿ ಬುದ್ಧನ ಪ್ರತಿಮೆಯದೆ  ಮೇಲುಗೈ.  ಜಪಾನು, ಚೀನಾ , ಇಂಡೋನೇಷಿಯಾ, ಬರ್ಮ ಮತ್ತು ಶ್ರೀಲಂಕಾದಲ್ಲಿ ಬುದ್ಧನ  ಗೃಹತ್ ಪ್ರತಿಮೆಗಳು ಸಾವಿರಾರು ವರ್ಷದಷ್ಟು ಹಳೆಯವು ಇವೆ. ಈಗಲೂ ನಿರ್ಮಾಣ ವಾಗುತ್ತಿವೆ. ಆದರೆ  ಸ್ವಾತಂತ್ರ್ಯ ಪ್ರತಿಮೆಯದೆ ಒಂದು ವಿಶೇಷ. ಅದಕ್ಕೆ ಜಾತಿ ಧರ್ಮದ ಗಳ ಸೋಂಕಿಲ್ಲ. ಅಲ್ಲದೆ ಒಂದು ಖಂಡದಲ್ಲಿ ನಿರ್ಮಿತವಾಗಿ ಇನ್ನೊಂದು  ಖಂಡಕ್ಕೆ ಸಾಗಣಿಕೆಯಾಗಿ ಸ್ಥಾಪನೆಯಾಗಿರುವುದು ಇದರ ಹೆಗ್ಗಳಿಕೆ. ಅದೂ ಒಂದು ರಾಷ್ಟ್ರದ ಜನರಿಂದ ಮತ್ತೊಂದು ರಾಷ್ಟ್ರದ ಜನರಿಗೆ  ಸ್ವಾತಂತ್ರ್ಯ ಶತಮಾನೋತ್ಸವದ ನೆನಪಿನ ಕಾಣಿಕೆ.   ಅದಕ್ಕೆಂದೆ   ಅಂದು  , ಇಂದು  ಮತ್ತು ಮುಂದೆಯೂ ಇದರ ಆಕರ್ಷಣೆ  ಅದಮ್ಯವಾದದು.
            ಈ ಉದ್ಧೇಶಕ್ಕಾಗಿ ಪ್ರಾಂಕೊ ಅಮೇರಿಕನ್  ಸಮಿತಿಯನ್ನು ರಚಿಸಲಾಯಿತು. ಮೊದಲ ಹೆಜ್ಜೆಯಾಗಿ ಪ್ರಖ್ಯಾತ ಶಿಲ್ಪಿ           ಫ್ರೆಡ್ರಿಕ್ ಆಗಷ್ಟೆ ಬಾರ್ತೋಲ್ಡಿ ಯನ್ನು   ಅಮೇರಿಕಕ್ಕೆ ಕಳುಹಿಸಲಾಯಿತು. ಅವನು  ಮೊದಲು ಸೈನ್ಯದಲ್ಲಿ ಕಮ್ಯಾಂಡರ್ ಆಗಿ ಸೇವೆ ಸಲ್ಲಸಿದ್ದ. ನಂತರ ಬೃಹತ್ ಪ್ರತಿಮೆಗಳ ಶಿಲ್ಪಿಯಾಗಿ ಹೆಸರು ಮಾಡಿದ. ಆಗ ನಿಯೋ ಕ್ಲಾಸಿಕಲ್ ಶೈಲಿ ಪ್ರಚಾರದಲ್ಲಿತ್ತು. ಗ್ರೀಕೊ ರೋಮನ್ ಶೈಲಿಯಲ್ಲಿ  ದೊಡ್ಡ ದೊಡ್ಡ ಪ್ರತಿಮೆಗಳ ನಿರ್ಮಾಣ   ಆಗ ಜನಪ್ರಿಯವಾಗಿತ್ತು. ಅಮೇರಿಕಾಕ್ಕೆ ಹೊರಟಾಗ  ಅವನೊಂದಿಗೆ ಅವನ ಕೆಲ  ಕಲಾಕೃತಿಗಳೂ ಇದ್ದವು. ನ್ಯೂಯಾರ್ಕ್ ನಲ್ಲಿನ   ಕಲಾವಿದರು, ಲೇಖಕರು, ರಾಜಕಾರಣಿಗಳ ಜೊತೆ ಸಮಾಲೋಚನೆ ಮಾಡಿದ. ಶತಮಾನೋತ್ಸವದ ನೆನಪಿಗೆ ಸ್ವತಂತ್ರ್ಯ ಪ್ರತಿಮೆ ಸ್ಥಾಪಿಸುವ ಯೋಜನೆ ಎಲ್ಲರ ಮನ ಸೆಳೆಯಿತು. ಈ ಕೆಲಸವನ್ನು ಎರಡೂ ದೇಶದ ಜನರು ಜಂಟಿಯಾಗಿ ಮಾಡಬೇಕೆಂಬ ಸಲಹೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಫೆಂಚರು ಪ್ರತಿಮೆಯ ನಿರ್ಮಾಣದ ವೆಚ್ಚ ವನ್ನು, ಅದರ ಪೀಠ ನಿರ್ಮಾಣದ ಖರ್ಚನ್ನು  ಅಮೇರಿಕನ್ನರು ನೀಡಬೇಕೆಂದು   ತೀರ್ಮಾನವಾಯಿತು.  ಬೃಹತ್ ಪ್ರತಿಮೆಯನ್ನು ಫ್ರಾನ್ಸಿನಲ್ಲಿ ನಿರ್ಮಿಸಿ ಅದನ್ನು ಬಿಡಿ ಬಿಡಿಯಾಗಿಸಿ  ಅಮೆರಿಕಾಗೆ ಸಾಗಿಸಿ ಅಲ್ಲಿ ಜೋಡಣೆ ಮಾಡಬೇಕೆಂದು ನಿರ್ಧಾರವಾಯಿತು. ಈರೀತಿಯಾಗ. ಪ್ರತಿಮೆಯನ್ನು ನ್ಯೂಯಾರ್ಕ ನಗರ  ಮತ್ತು
           ನ್ಯೂಜರ್ಸಿ  ತೀರದ ನಡುವೆ  ೧.೫ ಮೈಲು ದೂರದಲ್ಲಿ ನ  ಅಟ್ಲಾಂಟಿಕ್ ಸಾಗರವನ್ನುಸೇರುವ  ಹಡ್ಸನ್ ನದಿ  ಖಾರಿಯಲ್ಲಿ          ೧೨ ಎಕರೆ  ವಿಸ್ತಾರವಾಗಿರುವ ಬೆಡ್ ಲೋ ದ್ವೀಪದ ಮೇಲೆ ಪೂರ್ವಾ ಭಿಮುಖವಾಗಿ ಸ್ಥಾಪಿಸಲು ಸ್ಥಳ ನಿಗದಿ ಮಾಡಿದರು.  ಆ     ಸ್ಥಳ ಅಮೇರಿಕಾದ ಹೆಬ್ಬಾಗಿಲು.   ಸಾಗರದ ಮೂಲಕ ಅಷ್ಟೆ ಏಕೆ ಅಮೇರಿಕಾಕ್ಕೆ ಬರುವ ಎಲ್ಲರಿಗೂ ಎಲ್ಲ ಸಂಕಲೆಗಳಿಂದ , ಸಂಕಷ್ಟಗಳಿಂದ ವಿಮೋಚನೆ ನೀಡುವ   ಆಶಾದಾಯಕ  ಬದುಕಿನ ಭರವಸೆ ನೀಡುವ  ಪ್ರತಿಮೆ ಅದಾಗಲಿತ್ತು.   
 ಫ್ರಾ ನ್ಸಿಗೆ ಬಂದೊಡನೆ  ನಿಧಿ ಸಂಗ್ರಹದ ಕೆಲಸ ಕೈಗೆತ್ತಿಕೊಳ್ಳಲಾಯಿತು. ಪ್ರತಿಮೆಯ ಅಂದಾಜು ವೆಚ್ಚ ೧ ಮಿಲಿಯನ್ ಡಾಲರು. ಜನರು ಸ್ವಾತಂತ್ರ ಪ್ರಿಯರಾದರೂ ಹಣ ಸಂಗ್ರಹ ಸುಲಭವಾಗಲಿಲ್ಲ.  .ಆದರೆ ಶಿಲ್ಪದ  ಚಿಕ್ಕ ಪ್ರತಿಕೃತಿಗಳನ್ನು ಮಣ್ಣಿನಲ್ಲಿ ತಯಾರಿಸಿ ಅವುಗಳಿಗೆ ಸಂಖ್ಯೆ ನೀಡಿ ಮಾರಾಟ ಮಾಡಿ ಹಣ ಸಂಗ್ರಹಿಸಲಾಯಿತು. ಆದರೂ ಕೊರತೆ ಎದುರಾಯಿತು.ಆಗ ಲಾಟರಿ ಯೋಜನೆ ಹೊಳೆಯಿತು . ಬಾ ರ್ತೋಲ್ಡಿ ಯ  ಎರಡು ಕಲಾಕೃತಿಗಳೂ  ಸೇರಿದಂತೆ  ಆಕರ್ಷಕ ಬಹುಮಾನ ವಿರುವ ಲಾಟರಿ ಯೋಜನೆಯನ್ನು ಘೋಷಿಸಲಾಯಿತು. ಅದು ಜನರ ಮನ ಗೆದ್ದಿತು. ಅಗತ್ಯ ನಿಧಿ ಸಂಗ್ರಹ ವಾದೊಡನೆ   ೧೮೭೫ರಲ್ಲಿ  ಬರೋಬ್ಬರಿ ಅಂದುಕೊಂಡ ಹತ್ತು ವರ್ಷಗಳ ನಂತರ ಪ್ರತಿಮೆಯ ಕೆಲಸ ಪ್ರಾರಂಭ ವಾಯಿತು. ಮೊದಲು ಸ್ವತಂತ್ರ್ಯ ಪ್ರತಿಮೆಯ ಎರಡು  ಮಾದರಿಗಳನ್ನು ತಯಾರಿಸಲಾಯಿತು. ಈಗ ಅವು ಪ್ಯಾರಿಸ್ ನಗರದಲ್ಲಿ  ಜನಾಕಾರ್ಷಣೆಯ ತಾಣಗಳಾಗಿವೆ. ಪ್ರತಿಮೆ ಪೂರ್ಣವಾಗಲೂ  ಹತ್ತುವರ್ಷಗಳೆ  . ಬೇಕಾಯಿತು   ೧೮೮೫ ರಲ್ಲಿ ಅಮೇರಿಕಾ   ಪಯಣಕ್ಕೆ ಸಿದ್ಧವಾಯಿತು. ಸ್ಟೀಲ್ ಮತ್ತು ತಾಮ್ರದ ಈ ಪ್ರತಿಮೆಯ ತೂಕ ೨೨೫ ಟನ್ ಗಳು. ೧೫೧ ಅಡಿ ಎತ್ತರದ ಪ್ರತಿಮೆ , ಪೀಠದ ಮೇಲೆ ನಿಂತಾಗ  ಒಟ್ಟು ಎತ್ತರ ೩೦೫ ಅಡಿ. ಅದು ಗಾಳಿ , ಮಳೆ ,ನೈಸರ್ಗಿಕ ವಿಕೋಪಗಳನ್ನು ಎದುರಿಸಿ ನೂರಾರುವರ್ಷ ನಿಲ್ಲಬೇಕು  ಅದಕ್ಕಾಗಿ   ಈ ಪ್ರತಿಮೆ ಯ ನಿರ್ಮಾಣದಲ್ಲಿನ್ನು ಎಫೆಲ್ ಟವರ್ ನಿರ್ಮಾತೃ ಅಲೆಗ್ಜಾಂಡರ್ ಗುಸ್ತೋವ್ ಎಫೆಲ್ ನ  ಸಹಾಯ ಪಡೆಯಲಾಯತು. ಸ್ಟೀಲಿನ  ನಾಲಕ್ಕು ಬಲವಾದ ಉಕ್ಕಿನ ಕಂಭಗಳ ಮೇಲೆ  ಅಸ್ಥಿ ಪಂಜರದ ಚೌಕಟ್ಟು ನಿರ್ಮಿಸಲಾಯಿತು. ಅದರ ಮೇಲೆ  ೨.೫ ಮಿ. ಮೀ . ದಪ್ಪದ ತಾಮ್ರದ ತಗಡಿನ ಹೊದಿಕೆ ಹಾಕಲಾಗಿದೆ. ಮಹಿಳೆಯನ್ನು ಶಿಲ್ಪಿಯ ಮಡದಿಯ ಮಾದರಿಯನ್ನಾಗಿಸಿ ಮಾಡಿದೆ ಎನ್ನಲಾಗಿದೆ. ಇದು ತುಸು ಆಫ್ರಿಕನ್ ಛಾಯೆ ಯನ್ನೂ ಹೋದಿದೆ , ಮೂಲತಃ ಸುಯೇಜ್ ಕಾಲುವೆಯ ದಡದಲ್ಲಿ ಈಜಿಪ್ಟನಲ್ಲಿ ಸ್ಥಾಪಿಸಲು ತಯಾರಿಸಲಾಗಿತ್ತು ಎಂಬ ಮಾತೂ ಚಾಲತಿಯಲ್ಲಿದೆ. ಪ್ರತಿಮೆಯ ಎತ್ತರ ೧೫೧ ಅಡಿ  ಎತ್ತರದ ಬಲಗೈನಲ್ಲಿ ಪಂಜಿನ ಮಾದರಿಯ ದೀಪವನ್ನು  ಎತ್ತಿಹಿಡಿದು ಪೂರ್ವಾಭಿಮುಖವಾಗಿ ನಿಂತಿದೆ ಎಡಗೈನಲ್ಲಿ ಪುಸ್ತಕವಿದೆ.  ಅದರ ಮೇಲೆ. ಜೂನ್ ೪ .೧೭೭೬ ಎಂಬ ಬರಹ ಇದೆ . ಅದು ಅಮೇರಿಕಾ ಸ್ವತಂತ್ರವಾದ ದಿನ. ತಲೆಯ ಮೇಲಿನ ಕಿರೀಟದಲ್ಲಿ ಏಳು ಕಿರಣ ಗಳಿವೆ . ಅವು ಜಗತ್ತಿ ಏಳು ಭೂ ಖಂಡಗಳನ್ನು ಪ್ರತಿನಿಧಿಸುತ್ತವೆ,  ಬೆಳಕಿನ ಸಪ್ತವರ್ಣಗಳ ಸಂಕೇತವೂ ಆಗಿರಬಹುದು. ಸಪ್ತ ಸಾಗರಗಳ ಪ್ರತೀಕವೂ ಅಹುದು.ಅವುಗಳ ನಡುವಿನ ಅವಕಾಶವು ದೊಡ್ಡ ಕಿಟಕಿಗಿಂತ ವಿಸ್ತಾರ. ಅದರ ಉಡುಗೆ ರೋಮನ್ ಉಡುಪನ್ನು ಹೋಲುತ್ತದೆ ಅದು ಧರಿಸಿರುವಂತೆ ಉಡುಪು ತಯಾರಿಸಲು  ೪೦೦೦ ಗಜ ಬಟ್ಟೆಬೇಕಾಗಬಹುದು. ಅದರ ಕೆಳಗೆ ಇರುವ ಮುರಿದ ಸರಪಳಿಯು ಗುಲಾಮಗಿರಿಯ ನಿರ್ಮೂಲನದ ಸಂಕೇತ.  ಪ್ರತಿಮೆಯನ್ನು ೩೫೦ ತುಂಡುಗಳಾಗಿ ಮಾಡಿ ಸುಮಾರು ೨೦೦ ಕಟ್ಟಿಗೆ ಪೆಟ್ಟಿಗೆಗಳಲ್ಲಿ ಅಮೇರಿಕಾಕ್ಕೆ ಸಾಗಿಸಲಾಯಿತು. ನಂತರ ಪ್ರತಿಮೆಯನ್ನು ಜೋಡಿಸಲಾಯಿತು.
ಫ್ರಾನ್ಸ ನ ಜನ ಮಿಲಿಯನ್ ಗಟ್ಟಲೆ ನಿಧಿಸಂಗ್ರಹಿಸಿ ಪ್ರತಿಮೆ ತಯಾರಿಸ ಕಳುಹಿಸಿಲು ಸಿದ್ಧವಾದರೂ.  ಅದನ್ನು ಸ್ಥಾಪಿಸಲು ಅಮೇರಿಕಾದಲ್ಲಿ ಹೆಣಗಾಡಿದರು. ಆ ಬೃಹತ್ ಪ್ರತಿಮೆ ನಿಲ್ಲಿಸಲು ದೃಢವಾದ ಪೀಠ ನಿರ್ಮಾಣವಾಗಬೇಕಿತ್ತು. ನಕ್ಷೆಯ ಪ್ರಕಾರ ಪೀಠದ ಎತ್ತರ  ಪ್ರತಿಮೆಗಿಂತ ಹೆಚ್ಚಾಗಿರಲೇ ಬೇಕಿತ್ತು ಅದು ೧೫೪ ಅಡಿ ಇರಬೇಕೆಂದು ನಿರ್ಧಾರವಾಗಿತ್ತು. ಹನ್ನೊಂದು ಮೂಲೆಯ  ನಕ್ಷತ್ರಾಕಾರದ ಪೀಠದ ವಿನ್ಯಾಸ ಸಿದ್ಧವಾಗಿತ್ತು.  ಕಾಂಕ್ರೀಟ್  ರಚನೆಯ ತೂಕ ಸರಿ ಸುಮಾರು  ೨೭೦೦೦ ಟನ್  ಅಗುತ್ತಿತ್ತು.ಅಂಥಹ ಮಜಭೂತಾದ ಕಾಂಕ್ರೀಟು  ರಚನೆಗೆ ಹಣ ಹೊಂದಿಸಲು ಅಮೆರಿಕಾದ್ಯಂತ ಪ್ರಚಾರ ಮೊದಲಾಯಿತು. ಪೀಠದ ವಿನ್ಯಾಸ ಮಾಡಲು  ಹೆಸರಾಂತ ಶಿಲ್ಪಿ ರಿಚರ್ಡ ಮೋರಿಸ್ ನನ್ನು ನೇಮಿಸಲಾಯಿತು. ಅಂದಾಜು ವೆಚ್ಚ ಒಂದು ಮಿಲಿಯನ್ ಡಾಲರಾಗುವುದೆಂದು ಲೆಕ್ಕಹಾಕಲಾಯಿತು. ನಿಧಿಸಂಗ್ರಹಕ್ಕಾಗಿ  ಸ್ವಾತಂತ್ರ್ಯ ಪ್ರತಿಮೆಯ  ಜ್ಯೋತಿ ಹಿಡಿದ ಕೈಯನ್ನು ಮಾತ್ರ ಅಮೇರಿಕಾಕ್ಕೆ ಬಹಳ ಮುಂಚೆಯೇ  ಕಳುಹಿಸಲಾಗಿತ್ತು . ಅದರ ಎತ್ತರ ೩೦ ಅಡಿಗಳು. ಕಬ್ಬಿಣದ ಏಣಿಯ ಮೂಲಕ ಹತ್ತಿ  ಜ್ಯೋತಿಯ ಸುತ್ತಲೂ ಇರುವ ವರಾಂಡದಲ್ಲಿ  ಸಂದರ್ಶಕರು ಓಡಾಡಬಹುದಿತ್ತು. ಅದಕ್ಕೆ  ೫೦ ಸೆಂಟ್ಸ  ಪ್ರವೇಶ  ಶುಲ್ಕವನ್ನು ನಿಗದಿ ಪಡಿಸಲಾಯಿತು. ಅದನ್ನು ಅಮೇರಿಕಾದ ಎಲ್ಲ ಪ್ರಮುಖ ನಗರಗಳಲ್ಲಿ ಪ್ರದರ್ಶನ ಮಾಡಿ ಹಣ ಸಂಗ್ರಹಿಸಲಾಯಿತು. ಆದರೆ ಸಂಗ್ರಹವಾದ ನಿಧಿ ಯಾವುದಕ್ಕೂ ಸಾಲದು. ರಾವಣನ ಹೊಟ್ಟೆಗೆ ಮೂರುಕಾಸಿನ ಮಜ್ಜಿಗೆಯಂತೆ.
       ಫ್ರಾನ್ಸಿನಲ್ಲಿ ಪ್ರತಿಮೆ ಏನೋ ಸಿದ್ಧವಾಯಿತು  ಆದರೆ ಅಮೇರಿಕಾದಲ್ಲಿ ಅದನ್ನು ಸ್ಥಾಪಿಸಲು ಅಗತ್ಯವಾದ ಪೀಠವೆ ಸಿದ್ಧವಾಗಿರಲಿಲ್ಲ. ಫ್ರಾನ್ಸನವರು ಪ್ರತಿಮೆ ನಿಡಿದ್ದಾರೆ  ಅದರ ಸ್ಥಾಪನೆಗೆ ನಾವೇಕೆ ಹಣ ನೀಡ ಬೇಕು  ಎಂದು ಕೆಲವರ ವಾದ. ಅದನ್ನು ನ್ಯೂಯಾರ್ಕ ನಗರದಲ್ಲಿ ಸ್ಥಾಪಿಸುವರು.ಅಲ್ಲಿನವರೆ  ಹಣ ನೀಡಲಿ ಎಂದು ಬೇರೆ ರಾಜ್ಯಗಳವರು ವಾದಿಸಿದರು. ಪ್ರತಿಮೆ ತಯಾರಿಸಲೇ ೧ ಮಿಲಿಯನ್ ಡಾಲರ್  ವೆಚ್ಚವಾಗಿದೆ   ಅದರ ಪೀಠ ನಿರ್ಮಾಣಕ್ಕೆ  ೧ ಮಿಲಿಯನ್ ಡಾಲರು  ಖರ್ಚು ಮಾಡುವುದು ಮೂರ್ಖ ತನ ಎಂದು ಹೀಯಾಳಿಸಲಾಯಿತು . ಅದಕ್ಕಾಗಿ ಅನುದಾನ ನೀಡುವ ಪ್ರಸ್ತಾವನೆಯನ್ನು ಅಮೇರಿಕಾ ಕಾಂಗ್ರೆಸ್ ತಿರಸ್ಕರಿಸಿತು.  ಬೇಡಿಕೆಯನ್ನು  ಅರ್ಧಕ್ಕೆ ಇಳಿಸಿದರೂ ನ್ಯೂಯಾರ್ಕ ರಾಜ್ಯವಾಗಲೀ ಅಥವ ನ್ಯೂಯಾರ್ಕನಗರಸಭೆಯಾಗಲಿ  ೫೦೦೦೦ ಡಾಲರು  ಹಣ ಕೊಡಲು ಒಪ್ಪಲಿಲ್ಲ. ಫಿಲೆಡೆಲ್ಫಿಯಾ ಮತ್ತು ಇತರ ನಗರಗಳು ಹಣ ಕೊಡಲು ಮುಂದಾದವು. ಆದರೆ ಅವರು  ಪ್ರತಿಮೆಯನ್ನು ತಮ್ಮಲ್ಲಿ ಯೇ  ಸ್ಥಾಪನೆ ಮಾಡಬೇಕೆಂದು ಶರತ್ತು  ಹಾಕಿದರು. ಅದಕ್ಕೆ ಫ್ರಂಚರು ಒಪ್ಪಲು ಸಿದ್ಧವಾಗಲಿಲ್ಲ. ಹಾಗಾಗಿ  ಸ್ವಾತಂತ್ರ  ಪ್ರತಿಮೆ ಸಿದ್ಧ ವಾಗಿ ವರ್ಷ ಕಳೆದರೂ ಅಮೇರಿಕಾದಲ್ಲಿ ಅದನ್ನು ಸ್ಥಾಪಿಸುವ ಪೀಠದ ರಚನೆ ನೆನೆಗುದಿಗೆ   ಬಿದ್ದು ಪ್ರತಿಮೆ ಫ್ರಾನ್ಸಿನಲ್ಲಿಯೇ ಉಳಿಯುವುದೇನೊ ಅನಿಸಿತು.ಇನ್ನೇನು ಸ್ವಾತಂತ್ರ್ಯ ಪ್ರತಿಮೆಯ ವಿಷಯ  ಕೈ ಬಿಟ್ಟಂತೆಯೇ  ಎಂದು ಎಲ್ಲರೂ ಅಂದು ಕೊಂಡರು .  ಆಗ  ಹಂಗೆರಿ ಮೂಲದ ಜೋಸೆಫ್ ಪುಲ್ಟಿಜರ್ ನಿಧಿ ಸಂಗ್ರಹಣೆಗೆ ಮುಂದೆ ಬಂದ. ಅವನು ವರ್ಲ್ದ ಎಂಬ ಪತ್ರಿಕೆಯ ಪ್ರಕಾಶಕ, ಹತ್ತು  ಸಾವಿರ ಪ್ರಸಾರವಿದ್ದ ನ್ಯೂಯಾರ್ಕನ ಪತ್ರಿಕೆ ಅದು. ಅವನು ನಿಧಿ  ಸಂಗ್ರಹಕ್ಕೆ ಚಳುವಳಿಯನ್ನೆ ಪ್ರಾರಂಭಿಸಿದ. ಅವನು ಒಂದೆ  ಕಲ್ಲಿನಲ್ಲಿ  ಮೂರು ಹಕ್ಕಿ ಹೊಡೆಯಲು ಹೊಂಚುಹಾಕಿದ. ಮೊದಲನೆಯದಾಗಿ ಸ್ವಾತಂತ್ರ್ಯ ಪ್ರತಿಮ ಯ ಸ್ಥಾಪನೆ, ಎರಡನೆಯದಾಗಿ ತನ್ನ ಪತ್ರಿಕಾ ಪ್ರಸಾರದ ಹೆಚ್ಚಳ , ಮೂರನೆಯದಾಗಿ ನಿರಾಸಕ್ತಿ ತೋರಿದ ನ್ಯೂಯಾರ್ಕನ ನವ ಕುಬೇರರಿಗೆ ಪಾಠ ಕಲಿಸುವುದಾಗಿತ್ತು. ಪ್ರತಿ ದಿನ ಪತ್ರಿಕೆಯಲ್ಲಿ ಪ್ರಚಾರಾಂಧೋಳನ ಪ್ರಾರಂಭಿಸಿದ. ಮೊದಲು ಇದು ಮಿಲಿಯನರುಗಳ,  ಕೋಟ್ಯಧೀಶರ  ಕೊಡುಗೆ ಅಲ್ಲ,  ಫ್ರಾನ್ಸಿನ ಸಾಮಾನ್ಯ ಪ್ರಜೆಯಿಂದ  ಅಮೇರಿಕಾದ ಜನಸಾಮಾನ್ಯರಿಗೆ ಕಾಣಿಕೆ. ಹೀಗೆ  ಸಂದ ಗೌರವ ಉಳಿಸಿಕೊಳ್ಳುವುದು  ಅಮೇರಿಕಾದ ಜನರ ಕರ್ತವ್ಯ . ಅದಕ್ಕಾಗಿ ಶ್ರೀಮಂತರನ್ನು ಬೇಡ ಬೇಕಿಲ್ಲ. ಯಾರು ಬೇಕಾದರೂ ಎಷ್ಡು  ಕಡಿಮೆಯಾದರೂ   ಕೊಡುಗೆ ನೀಡಬಹುದು , ಸೆಂಟ, ಡೈಮ್ , ಕ್ವಾರ್ಟರು, ಡಾಲರು ಯಾವದೂ ಚಿಕ್ಕದಲ್ಲ. ಎಂದು ಪ್ರಚಾರ ಮಾಡಿದ. ಅಷ್ಟೆಅಲ್ಲ  ಪ್ರತಿದಿನ ದಾನಿಗಳ ಹೆಸರನ್ನು ಎಷ್ಟೆ ಕೊಟ್ಟಿರಲಿ ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದ. ಬಹಶಃ ಪ್ರಪಂಚದಲ್ಲೆ ಸಾರ್ವಜನಿಕ ಕಾರ್ಯಕ್ಕಾಗಿ ನಿಧಿ ಸಂಗ್ರಹಿಸಲು ಭಿನ್ನ ಬೇಧವಿಲ್ಲದೆ ಜನಸಾಮಾನ್ಯರ ಹೆಸರನ್ನು ಪತ್ರಿಕೆಯಲ್ಲಿ ಪ್ರಕಟಿಸಿದ ಮೊದಲ ಪ್ರಯತ್ನ ಅದಾಗಿತ್ತು. ಈಗ ಬರ,  ಭೂಕಂಪ, ನರೆ ಹಾವಳಿ ಯಾದಾಗ ಅನೇಕರು ನಿಧಿ ಸಂಗ್ರಹಮಾಡಲು ಅದೇ ಪ್ರೇರಣೆ  ಎನ್ನಬಹುದು. ಪುಲಿಟ್ಜರನ ಈ ಉಪಾಯ ಜನರ ಮನ ಗೆದ್ದಿತು. ದೇಶದ ಅಭಿಮಾನದ ಪ್ರಶ್ನೆ ಬಂದಾ ಗ  ಜನೆ ಎಚ್ಚೆತ್ತರು. ಮಹಾನ್ ಕೆಲಸದಲ್ಲಿ ತಮ್ಮದೂ ಕಿರು ಕಾಣಿಕೆ ಇರಲಿ ಎಂದು ನಿಧಿ ಸಂಗ್ರಹ ದಲ್ಲಿ ಭಾಗವಹಿಸಿದರು.ಮೇಲಾಗಿ ಸ್ವಾತಂತ್ರ್ಯದ  ಸಂಕೇತ ಎಂಬ ಅಭಿಯಾನ  ಕಪ್ಪು ಅಮೇರಿಕನರ ಮನ ಮುಟ್ಟಿತು. ಕೂಲಿಕಾರರು ,ಕಾರ್ಮಿಕರು, ವಿದ್ಯಾರ್ಥಿಗಳು , ಮಕ್ಕಳು ,ಮುದುಕರು ಕೈಲಾದಷ್ಟು ಕೊಡುಗೆ ನೀಡಿ  ಕೃತಾರ್ಥರಾದರು. ಹನಿ ಹನಿ ಕೂಡಿ ಹಳ್ಳವಾಯಿತು . ಹಳ್ಳ ಹೊಳೆಯಾಯಿತು . ವಿಶೇಷ ಎಂದರೆ ೧.೨ಮಿಲಿಯನ್ ಡಾಲರು ನಿಧಿ  ಸಂಗ್ರಹವಾಯಿತು. ಅದನ್ನು ನೀಡಿದವರು ೧.೨೫ ಮಿಲಿಯನ್ ದಾನಿಗಳು . ಅಂದರೆ ಪ್ರತಿಯೊಬ್ಬರೂ ೮೫ ಸೆಂಟ್ಸ ನೀಡಿದಂತಾಗಿತ್ತು. ಜನಸಾಮಾನ್ಯರ ಮನ ಮುಟ್ಟಿ ಮಿಲಿಯನ್ ಗಟ್ಟಲೆ ಜನರನ್ನು ಈ ಕೆಲಸದಲ್ಲಿ ತೊಡಗಿಸಿದ ಕೀರ್ತಿ ಅವನದಾಯಿತು.  ಹೀಗೆ ನಿಧಿ ಸಂಗ್ರಹ ಏರಿದಂತೆಲ್ಲ ಗೆಲ್ಲುವ ಕುದರೆ ಬಾಲ ಹಿಡಿಯಲು ಬಂದವರು ಬಹಳ. ಆದರೆ ಅವರಿಗೆ ಅವಕಾಶ ಕೊಡಲಿಲ್ಲ. ಒಂದು ಔಷಧಿ ಕಂಪನಿಯು ಸ್ವಾತಂತ್ರ್ಯ ಪ್ರತಿಮೆಯ ಕೆಳಗೆ ಪೀಠದ ಮೇಲೆ ತನ್ನ ವಿರೇಚನದ  ಔಷಧಿಯ ಹೆಸರು ಹಾಕಿದರೆ ೨೫ ಸಾವಿರಡಾಲರು ಕೊಡುಗೆ ನೀಡಲು ಮುಂದೆ ಬಂದಿತು. ಸ್ವಾತಂತ್ರ್ಯ ದೇವಿಯು ವಿರೇಚನ ಔಷಧಿಯ ಸಹಾಯದಿಂದ ನಿರ್ಮಿಸಿದ ಪೀಠದ ಮೇಲೆ ನಿಲ್ಲುವುದು ಎಂಥಹ ವಿಪರ್ಯಾಸ ! ಆದರೆ ಆ  ಕೊಡುಗೆಯನ್ನು ನಿರಾಕರಿಸಲಾಯಿತು. ಇದರಿಂದ ಪುಲಿಟ್ಜರ ಖ್ಯಾತಿಯ ಶಿಖರವೇರಿದ. ಅವನ ಪತ್ರಿಕೆ ಎಲ್ಲರ   ಕೈನಲ್ಲಿ ಬರತೋಡಗಿತು . ಜನಸಾಮಾನ್ಯರು ತಾವು ಭಾಗಿಗಳಾದ ಕೆಲಸದ ಪ್ರಗತಿ ಅರಿಯಲು ಪತ್ರಿಕೆಯನ್ನು ನಿತ್ಯವೂ ಓದತೊಡಗಿದರು.. ಅದರ ಪ್ರಸಾರ ಹತ್ತು ಹಲವು ಪಟ್ಟು ಹೆಚ್ಚಾಯಿತು. ಆ ದಿನಗಳಲ್ಲಿ ಯಾರ ಬಾಯಲ್ಲೂ ಪ್ರತಿಮೆ ಯ ಮಾತು, ಯಾರ ಕೈನಲ್ಲೂ ನ್ಯೂಯಾರ್ಕ ವರ್ಲ್ದ   ಪತ್ರಿಕೆ.   ಹೀಗೆ ಪತ್ರಿಕಾ ಪ್ರಪಂಚದಲ್ಲಿ ಪುಲಿಟ್ಜಜರ್‌ ಅಜರಾಮರನಾದ. ಈಗಲೂ ಪತ್ರಿಕಾ ರಂಗದಲ್ಲಿನ ಉತ್ಕೃಷ್ಟ ಸಾಧನೆಗೆ ಸಲ್ಲುವ ಪ್ರಶಸ್ತಿ ಎಂದರೆ ಪುಲಿಟ್ಜರ್ ಪ್ರಶಸ್ತಿ. ಅದು ಪತ್ರಿಕಾ ಪ್ರಪಂಚದ ನೋಬೆಲ್ ಪ್ರಶಸ್ತಿ ಎನ್ನುವ ಮಟ್ಟಿಗೆ ಪ್ರಖ್ಯಾತವಾಗಿದೆ. ಹಾಗಾಗಿ ೧೮೮೪ ರ ಹೊತ್ತಿಗೆ ಪಶ್ಛಿಮ ಗೋಲಾರ್ಧದಲ್ಲಿ ಅವನ ಪತ್ರಿಕೆ  ಮನೆ ಮಾತಾಯಿತು. ಅತ್ಯಂತ ಹೆಚ್ಚಿನ ಪ್ರಸಾರದ ಪತ್ರಿಕೆಯಾಯಿತು. 

 ಪೀಠವು ಸಿದ್ಧವಾದೊಡನೆ ಪ್ರತಿಮೆಯನ್ನು ೩೫೦ ತುಂಡು ಗಾಳಗಿಸಿ   ೨೦೦ ಪೆಟ್ಟಿಗೆಗಳಲ್ಲಿ ಸಾಗರದ ಮೂಲಕ ಅಮೇರಿಕಾಕ್ಕೆ ತರಲಾಯಿತು ಅದರ ಮರು ಜೋಡಣೆಯಾದ ಮೇಲೆ ಅದ್ಧೂರಿಯಾಗಿ ಅಧ್ಯಕ್ಷ  ಗ್ರೋವರ್ ಕ್ಲೀವ್ ಲ್ಯಾಂಡ್ ೧೮೮೬ ರಕ್ಟೋಬರ್ ೨೮ ರಂದು  ಸ್ವಾತಂತ್ರ್ಯ ಪ್ರತಿಮೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ವರೆಗೆ ಪ್ರತಿಮೆ  ಎಂದರೆ ಮೂಗು ಮುರಿಯುತ್ತಿದ್ದ ನ್ಯೂಯಾರ್ಕನ ಸಿರಿವಂತರು  ಕಾರ್ಯ ಕ್ರಮದ ವೇದಿಕೆಯ ಮೇಲೆ ಕುಳಿತು ಕೊಳ್ಳಲು ಹರಸಾಹಸ ನೆಡಸಿದರು. ಆದರೆ  ಅವಕಾಶಸಿಗಲಿಲ್ಲ.ಅದು ಅಮೇರಿಕದ ಪ್ರಜೆಗಳೆಲ್ಲರ ಹೆಮ್ಮೆಯ ಕುರುಹಾವಾಗಿತ್ತು. ಅಷ್ಟೇ ಏಕೆ ಅದು ಜಗತ್ತಿಗೆ ಸ್ಯಾತಂತ್ರ್ಯ ಮತ್ತು ಅವಕಾಶಗಳ ಸಂಕೇತ ವಾಯಿತು.ಅದರಿಂದ ಮಿಲಿಯನ್ ಗಟ್ಟಲೆ ಹೊಸ ಬಾಳು ಬಯಸಿ ಅಮೆರಿಕ  ಪ್ರವೇಶಿಸಿದ ಜನ  ನೂರಾರು ವರ್ಷದವರೆಗೆ ಭವ್ಯ ಸ್ವಾಗತವನ್ನು ಪಡೆದರು. ಕೆಲವೆ ವರ್ಷಗಳಲ್ಲಿ ಅದನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲಾಯಿತು. ನಂತರ ಅದು ವಿಶ್ವ ಪರಂಪರೆಯ ಸ್ಮಾರಕವೂ ಅಗಿದೆ. ಈಗ ಜಗತ್ತಿನಾದ್ಯಂತ ಪ್ರತಿಮೆ  ಎಂದರೆ ಸ್ವಾತಂತ್ರ್ಯ ಎನ್ನುವಷ್ಟು ತದ್ಯಾತ್ಮವಾಗಿದೆ.
ಈ ಪ್ರತಿಮೆಯು ಮಿಲಿಯನ್ ಜನರಿಗೆ ಅವರ ಮನೆಯಿಂದಲೇ ಕಾಣುವ ಹಾಗೆ  ಸ್ಥಾಪಿತ ವಾಗಿದೆ. ದಿನವೂ ಹತ್ತು ಮಿಲಿಯನ್ ಜನ ನಿತ್ಯ ಅದರತ್ತ ಕಣ್ಣು ಹಾಯಿಸತ್ತಾರೆ. ಅಮೇರಿಕಾದ ಪ್ರವಾಸಿ ತಾಣಗಳಲ್ಲಿ ಅದರದೆ ಪ್ರಪ್ರಥಮ ಸ್ಥಾನ.
 ಅವರಿವರೇಕೆ. ಒಂದು ಕಾಲದಲ್ಲಿ ಅಮೇರಿಕದ ಕಡು ವಿರೋಧಿಯಾಗಿದ್ದ ಚೀನದಲ್ಲೆ  ೧೯೮೯ರಲ್ಲಿ ವಿದ್ಯಾರ್ಥಿಗಳು  ಟಾಯನಮಿನ್  ಚೌಕದಲ್ಲಿ  ಸ್ವಾತಂತ್ರ್ಯಕ್ಕಾಗಿ ಚಳುವಳಿ ನಡೆಸಿ ನೂರಾರು ಸಂಖ್ಯೆಯಲ್ಲಿ ಗುಂಡಿನ ದಾಳಿಗೆ ಬಲಿಯಾದಾಗ ,ಅವರ ಸ್ಪೂರ್ತಿಯ ಸೆಲೆ ಅಲ್ಲಿ ಅವರು ಸ್ಥಾಪಿಸಿದ್ದ  ಈ ಪ್ರತಿಮೆಯ ಮಾದರಿಯ ಮೂರ್ತಿ.   
ಅಮೇರಿಕಾದಲ್ಲಿ ಸ್ವತಂತ್ರ್ಯ ಪ್ರತಿಮೆ ಜನಜೀವನದಲ್ಲಿ ಹಾಸು ಹೊಕ್ಕಾಗಿದೆ. ಅದು ನಿಂತಿರುವ ದ್ವೀಪವನ್ನು ಈಗ ಲಿಬರ್ಟಿ ದ್ವೀಪ ಎಂದು ಹೆಸರಿಸಲಾಗಿದೆ. . ಅಲ್ಲಿನದು ಲಿಬರ್ಟಿ ಪಾರ್ಕ.  ಲಿಬರ್ಟಿ ಸ್ವಾತಂತ್ರ್ಯ ಪ್ರತಿಮೆ ಈಗ ರಾಷ್ಟ್ರ ಲಾಂಛನದಷ್ಟೆ ಪ್ರಖ್ಯಾತ.  ಅದರ ಸ್ಮರಣಾರ್ಥ  ಅಂಚೆ ಚೀಟಿಗಳು, ನಾಣ್ಯಗಳು , ಕರೆನ್ಸಿ ನೋಟುಗಳು ಹೊರಬಂದಿವೆ. ಅಚ್ಚರಿ ಎಂದರೆ ಕೆನಡಾ ದೇಶದ ೧೦ ಮಿಲಿಯನ್ ಡಾಲರು ಬ್ಯಾಕ್  ಬಿಲ್ಲಿನಲ್ಲಿ ಈ ಪ್ರತಿಮೆ ಇದೆ. ಆದರೆ ಅದು ಸಾಮಾನ್ಯ  ಚಲಾವಣೆಗಾಗಿಅಲ್ಲ. ಇದು ವರ್ಷದ ಮುನ್ನೂರ ಅರವತ್ತೈದು ದಿನವೂ ಪ್ರವಾಸಿಗಳಿಗೆ ಮುಕ್ತ. ಇದನ್ನು ಎರಡು ಸಾರಿ ಮಾತ್ರ ಮುಚ್ಚಲಾಗಿತ್ತು ೧೯೮೪ ರಲ್ಲಿ ಗಾಳಿಮಳೆಗಳ ದಾಳಿಗೆ ಸಿಲುಕಿ ಶಿಥಿಲವಾಗಿತ್ತು. ಆಮ್ಲದ ಮಳೆಯ ಪರಿಣಾಮವಾಗಿ ತಾಮ್ರದ ತಗಡಿನ ಹೊದಿಕೆ ಬಣ್ಣಗೆಟ್ಟಿತ್ತು. ಅದನ್ನುಮಿಲಿಯನ್ ಗಟ್ಟಲೆ ಹಣ ವೆಚ್ಚಮಾಡಿ ವಿಶ್ವದ ಹೆಸರಾಂತ ಪರಿಣಿತರು ಪ್ರತಿಮೆಯ ಪುನರುತ್ಥಾನ ಮಾಡಿದರು.ನೆಲದಿಂದ ಪೀಠದ ಮೇಲಿನವರೆಗೆ ಲಿಫ್ಟ್ ಅಳವಡಿಸಲಾಯಿತು. ಅಲ್ಲಿಂದ ೩೫೪ ಮೆಟ್ಟಿಲು  ಏರಿದರೆ ಪ್ರತಿಮೆಯ ಶಿರೋ ಭಾಗ ಸೇರಬಹದು.
ಅದನ್ನು ರಕ್ಷಣಾ ದೃಷ್ಟಿಯಿಂದ ಪುನ: ೯/೧೧ ಭಯೊತ್ಪಾದಕರ ದಾಳಿಯನಂತರ ಪ್ರವೇಶ ನಿರ್ಭಂಧಿಸಲಾಯಿತು.ಎರಡು ವರ್ಷದ ನಂತರ ಮತ್ತೆ ಮುಕ್ತವಾಯಿತು. ಆದರೆ ಇತ್ತೀಚಿವರೆಗೆ ಶಿರೋಭಾಗಕ್ಕೆ ಹೋಗಲು ಅನುಮತಿ ಇರಲಿಲ್ಲ. ಇತ್ತೀಚೆಗೆ ಅದೂ ಸಹಾ ಸಂದರ್ಶಕರಿಗೆ ಮುಕ್ತವಾಗಿದೆ. ಆದರೆ ಆರು ತಿಂಗಳು ಮುಂಗಡವಾಗಿ ಅನುಮತಿ ಪಡೆಯ ಬೇಕಾಗುವುದು.
ನ್ಯೂಯಾರ್ಕ ಡೌನ್‌ ಟೌನ್‌ನಲ್ಲಿ  ಕಡಲ ತಡಿಯ ಬ್ಯಾಟರಿ ಪಾರ್ಕನಲ್ಲಿ  ಟಿಕೆಟ್‌ ಪಡೆದು ನೌಕೆ ಹತ್ತಿ  ಸ್ವಾತಂತ್ರ್ಯ ಪ್ರತಿಮೆ ನೋಡಲು ಹೋಗಬಹುದು. ಅರ ಜೊತೆಯಲ್ಲಿಯೇ ಎಲ್ಲೀಸ್‌ ದ್ವೀಪವನ್ನು ಸಂದರ್ಶಿಸಬಹುದು. ನ್ಯೂ ಝರ್ಶೀ ಯಿಂದ ಬರಲು ಅವಕಾಶವಿದೆ.ಅಲ್ಲಿಗೆ ಹೋದವರು ಸ್ವಾತಂತ್ರ್ಯ ಪ್ರತಿಮೆಯಂತೆ ಉಡುಗೆ ಧರಿಸಿ , ಮೈಗೆಲ್ಲ ಪೇಂಟ್‌ ಬಳಿದು ಕೊಂಡು ಮಿನಿ  ಪ್ರತಿಮೆಯಂತಿರುವವರ ಜತೆ ಫೋಟೋ ತೆಗೆಸಿ ಕೊಂಡಾಗಲೇ ಯಾತ್ರೆ ಪೂರ್ಣವಾದಂತೆ.ಪ್ರತಿಮೆಯ ಕಾಲಡಿ ಕಡಿದು ಬಿದ್ದಿರುವ  ಬಿಡುಗಡೆಯ ಬೇಡಿ ನೋಡಿದರೆ ರೋಮಾಂಚನ ವಾಗುವುದು.


ಎಮ್ಮಾ ಲಜರೇಸ್ ಬರೆದು ೧೮೮೩ ಅರ್ಪಿಸಿದ ಕವ್ಯಾಂಜಲಿಯು  ಪ್ರತಿಮೆಯ ಸಂಕೇತದ ಸಾರವಾಗಿದೆ.     ” ನ್ಯೂ ಕೊಲಾಸ್ಸಸ್” ಎಂಬ ಸಾನೆಟ್ಟನ್ನು ಈಗ ಪ್ರತಿಮೆಯ ಪೀಠದಲ್ಲಿ ಕೆತ್ತಲಾಗಿದೆ ಅದರ ಕೊನೆಯ ಐದು ಸಾಲುಗಳು ಹೀಗಿವೆ.
ನಿನ್ನ ಪುರಾತನ ಭೂಮಿ , ಭವ್ಯ ಪರಂಪರೆ ನಿನಗಿರಲಿ
ನಿನ್ನಲ್ಲಿನ ದಣಿದವರ, ಬಡವರ  ನನ್ನಲ್ಲಿಗೆ ಕಳುಹು ,
ಸಂದಣಿಯಲಿ ಸ್ವಾತಂತ್ರ್ಯದ ಉಸಿರಿಗೆ ಕಸಿವಿಸಿ ಪಡುವವರ
ಜನರಿಂದ  ಬಿರಿದ ನಿನ್ನ ತೀರದಿ  ನೊಂದವರ
ಬಿರುಗಾಳಿಗೆ ಬಲಿಯಾಗಿ ನೆಲೆಯಿಲ್ಲದವರ ಕಳುಹು
ನಾ ತೋರುವೆ ದಾರಿ ದೀಪ ಬಂಗಾರದ ಬಾಗಿಲೆಡೆಗೆ

              
                                            

                                       

Sunday, January 20, 2013

ಅಮೇರಿಕಾದ ಅನುಭವ-9


ಸ್ನಾನದ ಸುಖ
ದೀರ್ಘ ವಾರಾಂತ್ಯ ಬಂದರೆ ಮನೆಯಲ್ಲಿದ್ದರೆ ಮಹಾಪಾಪ ಎಂದೆ ಅಮೇರಿಕನ ಲೆಕ್ಕ. ಶುಕ್ರವಾರ ಅಥವಾ ಸೋಮವಾರ ರಜೆ ಬಂದರೆ ಶನಿವಾರ , ಭಾನುವಾರ ಸೇರಿಸಿ ಮೂರುದಿನದ ರಜೆ ದೀರ್ಘವಾರಾಂತ್ಯ. ಮಜಾನೋ ಮಜ. ಈ ಸಲದ ವಾರಂತ್ಯಕ್ಕೆ   " ಸ್ಪ್ರಿಂಗ್‌  ಸ್ಪಾ  ಮಿನರಲ್‌ "   ರೆಸಾರ್ಟಗೆ ಹೋಗುವ ಯೋಜನೆ ತಿಳಿಸಿದಾಗ ನಾನು ಹಿಂದೆ ಮುಂದೆ ನೋಡಿದೆ.ಕನ್ನಡಿಗನಾದ ನನಗೆ ನಮ್ಮ ರಾಜಕಾರಣಿಗಳ ರೆಸಾರ್ಟ ವಾಸದ , ಸಹವಾಸದ ಮತ್ತು ಸಾಹಸದ ಸುದ್ದಿ ಓದಿ ಓದಿ  ಒಂದು ರೀತಿಯ ಅಲರ್ಜಿ ಬಂದಂತಾಗಿತ್ತು. 
ಅಮ್ಮ!  ದಿನಕ್ಕೆ ಐದು ನೂರು  ಡಾಲರ್‌ ಬಾಡಿಗೆ ತೆತ್ತು ಅಲ್ಲಿಗೆ ಹೋಗುವುದು ಏಕೆ ಲಕ್ಷಣವಾಗಿ ಮನೆಯಲ್ಲೆ ಮಲಗಿ ವಿಶ್ರಾಂತಿ ಪಡೆಯಬಹುದಲ್ಲ, ಎಂಬ ನನ್ನ ಮಾತಿಗೆ ಮಾನ್ಯತೆ ಬರಲಿಲ್ಲ.
 ಜೀವನದಲ್ಲಿ ಹಣವೆ ಎಲ್ಲ ಅಲ್ಲ. ನಾವೂ ಹಾಗೆಲ್ಲ ದೂಬ ದಿಂಡಿ ಮಾಡುವುದಿಲ್ಲ. ಏನೋ ನೀವೂ ಬಂದಿರುವಿರಿ, ನಿಮಗೆ ತೋರಿಸುವ ನೆಪದಲ್ಲಿ ನಾವೂ ನೋಡುವೆವು , ಮರು ಮಾತನಾಡದೆ ಬನ್ನಿ ಎಂದರು
ಅಲ್ಲದೆ ಆಗಿಂದ ಆಗಲೆ ಹೋಗಿ ನನಗೆ ಈಜು  ಉಡುಗೆ ತಂದರು. ಯಾಕೆ ಅಲ್ಲಿ ಅಟ್ಯಾಚ್ಡ ಬಾತು ರೂಂ ಇರುವುದಲ್ಲ . ಈಜು  ಉಡುಗೆ ಯಾಕೆ  ? ಆ ಚಳಿಯಲ್ಲಿ ನನಗೆ  ಈ ಜಾಡಲು ಆಗದು , ಎಂದು ಪ್ರತಿಭಟಿಸಿದರೂ ಕಿವಿಗೆ ಹಾಕಿಕೊಳ್ಳಲಿಲ್ಲ.
 ಕಾರಣ ಅಲ್ಲಿನ ನಿಯಮದ ಪ್ರಕಾರ ಹೇಗೆಂದರೆ ಹಾಗೆ ಈಜುಕೊಳದ ನೀರಿಗೆ ಇಳಿಯುವ ಹಾಗಿಲ್ಲ. ಹೊರಗೆ ಯಾವ ಉಡುಪಾದರೂ ನಡೆಯುವುದು. ಆದರೆ ಈಜು ಕೊಳಕ್ಕೆ ವಿಶೇಷ ಕಟ್ಟಳೆಗಳು.ನೆಲದ ಕಾನೂನೂ ನೀರಲ್ಲಿ ಅನ್ವಯವಾಗದು. ನಾವು ಹುಡುಗರಿದ್ದಾಗ ಚಡ್ಡಿ , ಲಂಗೋಟಿ ಕೆಲವು ಸಲ ಏನೂ ಇಲ್ಲದೆ ನೀರಿಗೆ ಹಾರರುತಿದ್ದುದು ನೆನಪಿಗೆ ಬಂತು.  .ಪರದೇಶ ಪ್ರಾಣ ಸಂಕಟ. ಹೇಳಿದಂತೆ ಕೇಳ ಬೇಕಲ್ಲ. ಊಟ ನಮ್ಮ ಇಚ್ಛೆ ಆದರೆ ಉಡುಪು ಪರರ ಇಚ್ಛೆ ಎಂಬ ಮಾತಿನ ನೆನಪು ಬಂದಿತು... ಇಲ್ಲಿ ಅನೇಕ ನಗ್ನ ಬೀಚುಗಳಿವೆ . ಅಲ್ಲಿ ಉಡುಗೆ ತೊಟ್ಟವರಿಗೆ ಪ್ರವೇಶ ಇಲ್ಲವಂತೆ .  ನನ್ನ ಪೂರ್ವಾಜಿತ ಪುಣ್ಯ ಅಂಥಲ್ಲಿಗೆ ಹೋಗ ಬೇಕಾಗಿ ಬರಲಿಲ್ಲ. ಆದರೆ ನನಗೆ ಅರ್ಥವಾಗದ ವಿಷಯ ಒಂದೆ. ಇಲ್ಲಿಯೂ . ಪ್ರತಿ ಸಮುದಾಯಕ್ಕೂ  ಈಜು ಕೊಳಗಳ ಇರುವುದು. ಉಚಿತವಾಗಿ  ಮನ ದಣಿಯೆ ಈಜಾಡಬಹುದು  ಹಾಗಿರುವಾಗ ಸಾವಿರಗಟ್ಟಲೆ ಕೊಟ್ಟು ರಿಸಾರ್ಟಿಗೆ ಹೋಗಿ ಅಲ್ಲಿ ಗಂಟೆಗಟ್ಟಲೆ ಈಜಾಡುವುದರಲ್ಲಿ ಯಾವ ಪುರುಷಾರ್ಥವಿದೆ ಎಂಬುದು ನನ್ನ ತಲೆಗೆ ಹೋಗಲೆ ಇಲ್ಲ.
ನಾವು ಅಲ್ಲಿಗೆ ತಲುಪಿದಾಗ ಮಧ್ಯರಾತ್ರಿಯಾಗಿತ್ತು . ಕೋಣೆಗೆ ಹೋಗಿ ನಿದ್ದೆಗೆ ಶರಣಾದೆವು. ಬೆಳಗ್ಗೆ ಎದ್ದು ಮುಖ ತೊಳೆದು  ಕಿಟಕಿಯ ಪರದೆ ಸರಿಸಿದಾಗ ಗೊತ್ತಾಯಿತು ಅದು ಪರ್ವ ತ ಪ್ರದೇಶ ಎಂದು. ನಮ್ಮ ನ್ಯೂ ಜರ್ಸಿರಾಜ್ಯದಲ್ಲಿ ಈ ರೀತಿಯ  ಹಿಲ್‌ ಸ್ಟೇಷನ್‌ ಇರಬಹುದು ಎಂಬ ಕಲ್ಪನೆಯೆ ನನಗೆ ಇರಲಿಲ್ಲ. ಎಲ್ಲಿ ನೋಡಿದರೂ ಪರ್ವತ ಪಂಕ್ತಿ. ಅವೂ ದಟ್ಟ ಮರಗಳಿಂದ ಹಚ್ಚ ಹಸಿರು ಮಯ. ಬೆಟ್ಟದ ತಪ್ಪಲಲ್ಲಿ ರೆಸಾರ್ಟ ಕಟ್ಟಿದ್ದರು. ಅಲ್ಲಿಗೆ ಹೋಗಲು ಏರಿ ಇಳಿದು ಹೋಗ ಬೇಕಿತ್ತು. ಬೆಳಗಿನ ತಿಂಡಿ ಅಲ್ಲಿಯೆ ಇದ್ದ ರೆಸ್ಟುರಾದಲ್ಲಿ ಆಯಿತು.ಅಲ್ಲಿ ತಿನ್ನಲು ಸಮಯ ವ್ಯರ್ಥವಾಗಬಾರದೆಂದು  ಭಫೆ ಪದ್ದತಿ ಇತ್ತು.  ಅದರಲ್ಲಿ  ಹತ್ತಾರು ಬಗೆಯ ತಿನಿಸುಗಳು ಇದ್ದವು . ಆದರೆ ನಮಗೆ ಆಗದವು. ಕೊನೆಗೆ ಟೇಬಲ್ಲಿಗೆ ಹೋಗಿ ಕುಳಿತಾಗ ಮೆನು ಕಾರ್ಡು ಕೈಗೆ ಬಂದಿತು. ಅದರಲ್ಲಿ ಸಸ್ಯಾಹಾರಿ ತಿಂಡಿ ಹುಡುಕುವುದು ನ್ಯೂಯಾರ್ಕಿನಲ್ಲಿ ಸೀರೆಯುಟ್ಟ ಮಹಿಳೆಯನ್ನು ಅರಸಿದಂತಾಯಿತು. ಕೊನೆಗೆ ಬ್ರೆಡ್‌ ಟೋಸ್ಟ್‌ ಹೇಳಿದೆವು. ಮಾಂಸ , ಮೀನು ಇಲ್ಲದವು ಕೆಲ ತಿನಿಸು ಇದ್ದರೂ  ಮೊಟ್ಟೆ ಇಲ್ಲದವನ್ನೂ ಮಾಡಲು ಅವರಿಗೆ ಬರುವುದೆ ಇಲ್ಲ ಎನಿಸಿತು.  ಅರ್ಧ ಗಂಟೆಯನಂತರ ಬಂದ ಬ್ರೆಡ್‌ ತುಂಡು  ತಿಂದು  ಹೊರಟೆವು.
 ಹೋಗುವ ಹಾದಿಯಲ್ಲೆ ಮೊದಲ ಮಹಡಿಯಲ್ಲಿ ಮತ್ತು ನೆಲ ಮಹಡಿಯಲ್ಲಿ ಈಜುಕೊಳ ಕಾಣಿಸಿತು ಸರಿ ನಾವೂ  ಗುಂಪಿನೊಡನೆ ಗೋವಿಂದ ಎಂದುಕೊಂಡು ಹೋಗಲು ಸಿದ್ಧ ವಾದೆವು. ಆದರೆ ಈಜು ಕೊಳಕ್ಕೆ ಹಾಗೆಯೆ ಹೋಗುವ ಹಾಗಿಲ್ಲ. ಅಲ್ಲಿರುವ ವಿಶೇಷ ವಿಭಾಗಕ್ಕೆ ಹೋದರೆ ನಮ್ಮ ವಿವರ ತೆಗೆದುಕೊಱಡು ಕೈಗೆ ಗುರುತಿನ ಪ್ಲಾಸ್ಟಿಕ್‌ ಬಣ್ಣದ ಕಂಕಣ ಕಟ್ಟಿದರು.ತಿರುಪತಿ ವೆಂಕಟೇಶನ ದರ್ಶನಕ್ಕೆ ಕಟ್ಟುವರಲ್ಲ ಹಾಗೆ. ಅದನ್ನುಧರಿಸಿದವರಿಗೆ ಮಾತ್ರ ಆವರಣದಲ್ಲಿ ಪ್ರವೇಶ.. ಅದರ ಜೊತೆ ಗೆ ಪ್ರತಿಯೊಬ್ಬರಿಗೂ  ಬಿಳಿಯ ಎರಡು ಟರ್ಕಿ ಟವೆಲ್‌ಗಳು. ಒಂದು ದೊಡ್ಡದು ಒಂದು ಚಿಕ್ಕದು.ಎರಡು ಏಕೆ ಎಂಬ ಅನುಮಾನ ಮೂಡಿದಾಗ ಒಂದು ಮೈ ಒರಸಿಕೊಳ್ಳಲು ಇಒನ್ನೊಂದು ತಲೆ ಒರಸಿಕೊಳ್ಳಲು ಎಂದು ತಿಳಿಯಿತು.ಒಂದೆ ಟವಲ್‌ನಲ್ಲಿ ಮನೆ ಮಂದಿಯೆಲ್ಲ ಮೈ ಒರಸಿಕೊಳ್ಳುವ ರೂಢಿ ಇದ್ದ ನನಗೆ ಇವರ ರೀತಿ ಕಣ್ಣು ಬಾಯಿ ಬಿಡುವಂತಾಯಿತು. ಎಷ್ಟಾದರೂ  ದಿನಕ್ಕೆ ಐದು ನೂರು ಡಾಲರು  ಪೀಕಿದ್ದೇವಲ್ಲ ಅದಕ್ಕೆ ಈ ವೈಭೋಗ.ಎನಿಸಿತು ಸರಿ ಎಂದು ಹೊರಟರೆ ಮತ್ತೆ ಅಡ್ಡಿ. ಈಜುಡುಗೆ ಇಲ್ಲದೆ ನೀರಿಗೆ ಇಳಿಯುವಂತಿಲ್ಲ. ನಮ್ಮ ಕೋಣೆಗೆ ಹೋಗಿ ಅವನ್ನು ಧರಿಸಿ  ಈಜುಕೊಳಕ್ಕೆ ಬಂದೆವು.
 ಈಜು ಕೊಳದಲ್ಲೂ ಎರಡು ವಿಭಾಗ . ಒಂದು ಹೊರಾಂಗಣ ಈಜುಗೊಳ ಇನ್ನೊಂದು ಒಳಾಂಗಣ ಈಜು ಕೊಳ. ಹೊರಾಂಗಣ ಈಜುಗೊಳ ಬಹು ದೊಡ್ಡದಾಗಿತ್ತು. ಅಲ್ಲಿ ಹತ್ತು ಹತ್ತು ಅಡಿಗೆ  ಅಲ್ಲಿನ ನೀರಿನ ಮಟ್ಟ ನಮೂದಾಗಿತ್ತು. ನಾಲಕ್ಕು ಅಡಿಯಿಂದ ಈಜುಗೊಳದ ಆಳ ಹೆಚ್ಚಾಗಿತ್ತಾ ಹೋಗಿತ್ತು. ಅಲ್ಲಿ ದಂಡೆಯ ಮೇಲೆ ಅನೇಕ ಕಡೆ ಡೈವ್‌ ಮಾಡಬಾರದು ಎಂದು ದಪ್ಪ ಅಕ್ಷರದಲ್ಲಿ ಬರೆದಿದ್ದರು.ಈಜುಗೊಳದ ದಂಡೆಯ ಮೇಲೆ ಒಂದು ಎತ್ತರದ ಅಟ್ಟಣಿಗೆ. ಅದರ ಮೇಲೆ ಒಬ್ಬ ಮಹಿಳೆ . ಅದನ್ನು ಲೈರ್ಫ ಗಾರ್ಡ ಟವರ್‌ ಅನ್ನುವರು. ಅವಳು ಸದಾ ಸನ್ನದ್ಧ ಸ್ಥಿತಿಯಲ್ಲಿ ಈಜುಗಾರರನ್ನು ಗಮಿನಿಸುತ್ತಾ ಕೂರುವಳು. ಯಾವುದೆ ವ್ಯಕ್ತಿ ಕಕ್ಕಾಬಿಕ್ಕಿಯಾದರೆ ಎಂದರೆ ಸಹಾಯಕ್ಕೆ ಧಾವಿಸುವಳು. ಇಲ್ಲಿ  ಈಜು ಬಂದವರೆ ನೀರಿಗೆ ಇಳಿಯ  ಬೇಕೆಂದಿಲ್ಲ. ತೇಲಿಸುವ ಜಾಕೆಟ್‌ ತೊಟ್ಟ ಯಾರಾದರೂ  ಸರಿ. ಅಲ್ಲಿ ಮುಳುಗುವ ಭಯ ಇಲ್ಲ.
ನಾವು ಈಜು ಬೆಂಡು ಅಂದರೆ ನುಗ್ಗೆ ಬೆಂಡು, ಗಾಳಿ ತುಂಬಿದ ಕಾರಿನ ಟ್ಯೂಬು ಶೀಮೆ ಎನ್ಣೆಯ ಖಾಲಡಬ್ಬ ಕಟ್ಟಿಕೊಂಡು ಈಜು ಕಲಿಯುತಿದ್ದ ನೆನಪು ಬಂದಿತು . ಆದರೆ ಇಲ್ಲಿ ಅನೇಕ ರೀತಿಯ ತೇಲುವ ಸಾಧನಗಳು.ಉದ್ದನೆಯ ಫೋಮ್‌ಗಳು, ಮಕ್ಕಳಿಗೆ ಭುಜ ಕೀರ್ತಿಯತರಹದ ಗಾಳಿ ತುಂಬಿದ ಚೀಲಗಳು, ಎರಡೂ ತೋಳಿಗೆ ಕಟ್ಟಕೊಂಡರೆ ಸಾಕು ತಮ್ಮಷ್ಟಕ್ಕೆತಾವೆ ತೇಲುವರು ಇನ್ನು ಸ್ವಿಮಿಂಗ್‌ ಜಾಕೇಟುಗಳು.ಎರಡು ಮೂರುವರ್ಷದ ಮಕ್ಕಳೂ ನೀರಲ್ಲಿ ಸುಲಭವಾಗಿ ಮಾನವ ಮುಖದ ಬಾತು ಮರಿಗಳಂತೆ ತೇಲುತ್ತಾ ಆಟವಾಡುತಿದ್ದರು. ಈಜುತ್ತಾ ಹೋಗಿ ಜಲಪಾತದ ಕೆಳಗೆ ನಿಲ್ಲುವ ವ್ಯವಸ್ಥೆಯೂ ಇತ್ತು ಅಲ್ಲಿ ನೀರು ಬರಿ ಐದು ಅಡಿ ಆಳ. ದಭ ದಭ ಬೀಳುವ ನೀರಿಗೆ ತಲೆಯೊಡ್ಡುವ ಸುಖ ಅನುಭವಿಸಿಯೆ ತಿಳಿದುಕೊಳ್ಳ ಬೇಕು. ಈ ಸುಖ ನಾನು ಕೈಗಲ್‌ ಜಲಪಾತದಲ್ಲಿ  ಮತ್ತು ಕೊಡಗಿನ ಕೆಲವು  ಜಲಪಾತಗಳಲ್ಲಿ ಪಡೆದ  ಅನುಭವ ಮರುಕಳಿಸುವಂತೆ ಮಾಡಿತು.
ಅಲ್ಲಿಂದ ಒಳಾಂಗಣದ ಈಜು ಕೊಳಕ್ಕೆ ಹೋಗಲು ನೀರಿನಲ್ಲಿಯೆ ದ್ವಾರವಿದ್ದಿತು.  ಅಲ್ಲಿ ಹೋದಾಗ ಇನ್ನೊಂದು ಗಮನಕ್ಕೆ ಬಂದಿತು  ಪಕ್ಕದಲ್ಲೆ ಬುಳ ಬುಳನೆ ಮೇಲೇ ಚಿಮ್ಮುವ ನೀರಿನ ಬುಗ್ಗೆಗಳಿದ್ದವು. ಅಲ್ಲಿ  ಅನೇಕರು ಕಂಠ ಮಟ ನೀರಿನಲ್ಲಿ ಕುಳಿತು ಧ್ಯಾನ ಮಗ್ನರಾದಂತೆ ಕಂಡುಬಂದರು.  ನೋಡಿದರೆ ಅದು ಬಿಸಿ ನೀರಿನ ಕೊಳ. ಅಲ್ಲಿರುವವು ಬಿಸಿ ನೀರನ ಬುಗ್ಗೆಗಳು.  ಬದ್ರಿ ಕೇದಾರಕ್ಕೆ ಹೊದರೆ ಅಲ್ಲಿ ಬಿಸಿನೀರಿನ ಬುಗ್ಗೆಗಳಿವೆ. ಅದರಲ್ಲಿ ಅಕ್ಕಿ ಯನ್ನು ಬಟ್ಟೆಯಲ್ಲಿ ಕಟ್ಟಿ ಐದು ನಿಮಿಷ ಹಿಡಿದರೆ ಅನ್ನ ವಾಗುವುದು ಎಂಬ ಐತಿಹ್ಯ ಕೇಳಿದ್ದೆ. ನನಗಂತೂ ಅಲ್ಲಿಗೆ ಹೋಗಲಾಗಿಲ್ಲ. ಒಂದು ಕ್ಷಣ ಇಲ್ಲಿಯೂ ಹಾಗೆಯೇ ಇರಬಹುದೇನೋ ಎನಿಸಿತು. ಆದರೆ ಅಲ್ಲಿ ಕುಳಿತವರನ್ನ  ನೊಡಿದರೆ ನೀರು ಅಷ್ಟು ಬಿಸಿ ಇರಲಾರದು ಎನಿಸಿತು. ಮಗಳು ಬೇಡ ಬೇಡ ಎಂದರೂ ಇಳಿದೆ. ಯಾಕಾದರೂ ಇರಲಿ ಎಂದು ಮೊದಲು ಮೂರು ಬೆರಳು ಆ ಕೊಳದಲ್ಲಿ ಮುಳುಗಿಸಿದೆ. ನೀರು ಹದವಾಗಿ ಬಿಸಿಯಾಗಿತ್ತು. ನಾನು ಆ ಬಿಸಿ ನೀರಿನ ಭಕ್ತರ ಜತೆ ಸೇರಿದೆ. ಅಲ್ಲಿ ಒಂದು ಫಲಕ ಬೇರೆ ಹಾಕಿದ್ದರು. ಹನ್ನೆರಡು ವರ್ಷದ ಒಳಗಿನವರಿಗೆ ಪ್ರವೇಶ ಇಲ್ಲ. ಹೃದಯ ಬೇನೆ ಮತ್ತು ಏರು ರಕ್ತದ ಒತ್ತಡ ಇರುವವರಿಗೆ ನಿಷೇಧ ಎಂದಿತ್ತು. ನನಗೆ ಆಗಲೆ  ಹತ್ತು ವರ್ಷದ ಹಿಂದೆಯೆ  ಬೈ ಪಾಸ್‌ ಆಗಿದ್ದರಿಂದ ಏನೂ ಸಮಸ್ಯೆಇಲ್ಲ ಎಂದು ಇಳಿದೆ. ಅಮೆರಿಕಾದಲ್ಲಿ ಟಬ್‌ ಸ್ನಾನ ಸಾಮಾನ್ಯ. ಅಲ್ಲದೆ ಹದವಾಗಿ ಬಿಸಿ ಇರುವ ನೀರು ತುಂಬಿಸಿ ಅದರಲ್ಲಿ ಹಾಯಾಗಿ ಒರಗಿದರೆ ಮೈ ಕೈ ನೋವು ಮಾಯ.ಅದರ ಜೊತೆಗೆ ಮನಸಿಗೂ ಉಲ್ಲಾಸ ತಿಂಗಳಿಗೊಮ್ಮೆ ನಾನೂ ಆ ಸುಖ ಅನುಭವಿಸುತಿದ್ದೆ. . ಆದರೆ  ಇಲ್ಲಿನ ಅನುಭವವೆ ಅನನ್ಯ. ಆ ಕೊಳದ ಅಂಚಿನಲ್ಲಿ  ಬಿಸಿ ನೀರಲ್ಲಿ ಕುಳಿತುಕೊಳ್ಳಲು ಆಸನಗಳಿದ್ದವು ಕೆಳಗಿನಿಂದ ಬಿಸಿ ನೀರ  ಬುಗ್ಗೆ ಬರಲು ಅವಕಾಶ  ಮಾಡಿದ್ದರು .ಅವುಗಳ ಮೇಲೆಯೆ ಕುಳಿತಾಗ  ದಂಡೆಯ  ಅಂಚನ್ನು ಹಿಡಿದುಕೊಳ್ಳದಿದ್ದರೆ ತುಸು ಎತ್ತಿಹಾಕಿದ ಅನುಭವ  ಆಗುತಿತ್ತು. ಹದವಾಗಿ ಮೈಗೆ ಬಿಸಿನೀರು ಬಡಿಯುತಿದ್ದರೆ ಮನೆಯಲ್ಲಿ ಬೆನ್ನು ನೋವು ಆದಾಗ ಹೆಂಡತಿ ಅಮೃತಾಂಜನ ಹಚ್ಚಿ ಮೈ ನೀವುತಿದ್ದ ಅನುಭವ ಬಂದಿತು. ಮೊದ ಮೊದಲಲ್ಲಿ  ಮೈ ಕೈ ನೋವು ಇಲ್ಲದಿದ್ದರು ಬೇಕೆಂದೆ ನೀವಿಸಿಕೊಳ್ಳುತಿದ್ದೆ. ಆಮೇಲೆ ನನ್ನ ಚಾಲು ಗೊತ್ತಾದಮೇಲೆ  ಆ ಸೇವೆ ಖೋತಾ ಆಯಿತು. ಇಲ್ಲಿ ಅದು ನೆನಪಾಯಿತು. ಕಾರಣ ಬಿಸಿನೀರಿಗೆ ತುಸುವೆ ಅಮೃತಾಂಜನದ ತರಹೆಯ ವಾಸನೆ ಇತ್ತು ಸಾಧಾರಣಈಜುಕೊಳ
ದಲ್ಲಿ ಕ್ಲೋರಿನ್‌  ವಾಸನೆಗೆ ಮೂಗಿಗೆ ಘಾಟು ಹಿಡಿಯುವುದು ಇಲ್ಲಿನ ಪರಿಮಳಕ್ಕೆ  ಮೂಗಿನ ಹೊಳ್ಳೆ ಅರಳಿತು..
        ಅಲ್ಲಿಂದ ಅನೇಕರು ನೇರವಾಗಿ ಎದಿರೆ ಇದ್ದ ಗಾಜಿನ ಬಾಗಿಲು ತೆರೆದು ಒಳಗೆ ಹೋಗುವುದು ಕಾಣಿಸಿತು. ಒಬ್ಬಿಬ್ಬರು ಹೊರಬಂದಾಗ ಮೈ ಮುಖ ಕೆಂಪಾದಂತೆ ಕಾಣಿಸಿತು. ಅಲ್ಲಿನ ಜನರ ಮೈ ಬಣ್ಣ ಮೊದಲೆ ಬಿಳಿ ಇನ್ನು ಅದಕ್ಕೆಕೆಂಪುಸೇರಿದರೆ ಹೇಗಿರಬಹುದು ಎಂಬುದ ಊಹೆಗೆ ಬಿಟ್ಟ ವಿಷಯ. . ಹತ್ತಿರ ಹೋಗಿ ನೋಡಿದೆ. ಅದು ಸ್ಟೀಮ್‌ಛೇಂಬರ್‌. ಉಗಿ ಸ್ನಾನದ ಕೋಣೆ. ಇಷ್ಟೆಲ್ಲ ಆದ ಮೇಲೆ ಅದನ್ನೊಂದು ಯಾಕೆ ಬಾಕಿ ಬಿಡಬೇಕು ಎಂದು ಒಳ ನುಗ್ಗಿದೆ. ಬಾಗಿಲುತೆರೆದು ಒಳಗೆ ಹೋದರೆ ಎಲ್ಲ ಮಬ್ಬು ಮಬ್ಬು. ಚಳಿಗಾದ ಮುಂಜಾವಿನಲ್ಲಿ ಹೊರಹೋದಾಗ ಇಬ್ಬನಿಯಲ್ಲಿ ಎದರಿಗೆ ಇರುವುದು ಏನೂ ಕಾಣಿಸದು ಇಲ್ಲಿಯೂ ಅದೆ ರೀತಿ. ಆದರೆ ಒಂದೆ ವ್ಯತ್ಯಾಸ. ಇಲ್ಲಿ ಗಡಗಡ ನಡುಗಿಸುವ ಚಳಿಇಲ್ಲ. ಆದರೆ ಮೈ ಬಿಸಿ  ಮಾಡುವ ಹಬೆ. ಹಾಗಂತ  ಮೈ ಸುಡವಷ್ಟು ಬಿಸಿಯೂ ಇರಲಿಲ್ಲ. ಶೀತವಾದಾಗ  ಕುದಿಯುವ ನೀರಿಗೆ ವಿಕ್ಸ ಹಾಕಿ ತಲೆಯ ಮೇಲೆ ಹೊದಿಕೆ ಹೊದ್ದು ಮುಖ ಒಡ್ಡಿದಾಗ ಆಗುವ ಅನುಭವ. ಆದರೆಇಲ್ಲಿ  ಬರಿ ಮುಖಕ್ಕೆ ಮಾತ್ರವಲ್ಲ ಮೈಗೆ  ಎಲ್ಲ. ನಾನೂ ತಡವರಿಸುತ್ತಾ ಅಲ್ಲಿ ಇದ್ದ ಮೆಟ್ಟಲು ಹತ್ತಿ ಕುಳಿತೆ.. ಸಾವಕಾಶವಾಗಿ ಕಣ್ಣು ಅಲ್ಲಿ ವಾತಾವರಣಕ್ಕೆ ಹೊಂದಿಕೊಂಡಿತು. ಅಲ್ಲಿ ನಾನೊಬ್ಬನೆ ಇರಲಿಲ್ಲ, ಆದು ಒಂದು ಕಿರಿದಾದ ಕೋಣೆ. ಗೋಡೆಗೆ ಅಂಟಿಕೊಂಡತೆ ನಾಲಕ್ಕ ಹಂತದ ಮೆಟ್ಟಿಲುಗಳು. ಅದರಮೇಲೆ ಕೆಲವರು ಕುಳಿತಿದ್ದರು.ಒಬ್ಬನಂತೂ ಅನಾಮತ್ತು ಟವಲ್‌ ಹಾಸಿಕೊಂಡು ಮಲಗಿಯೆ ಬಿಟ್ಟಿದ್ದ. ಒಬ್ಬಮಹಿಳೆ ತಲೆಯ ಮೇಲೆ ಟವಲ್‌ ಹಾಕಿಕೊಂಡು ದಿವ್ಯ ಧ್ಯಾನದಲ್ಲಿರುವಂತೆ ಕಣ್ಮುಚ್ಚಿ ಕುಳಿತಿದ್ದಳು. ಇನ್ನೂ ಒಬ್ಬ ಎಡೆ ಬಿಡದೆ ಮೈ ಕೈ ಸವರಿ ಕೊಳ್ಳುತಿದ್ದ. ಎರಡು ನಿಮಿಷದಲ್ಲಿ ಹಬೆ ತುಸು ಕಡಿಮೆಯಾಗಿದೆ ಎನ್ನಿಸುವುದರಲ್ಲೆ ನನ್ನ ಕಾಲಬುಡದಲ್ಲೆ ಭುಸ್ಸನೆ ಉಗಿ ಹೊರಹೊಮ್ಮತೊಡಗಿತು. ಆದರೆ ಒಂದೆ ಅಚ್ಚರಿ. ನನಗೆ ಗೊತ್ತಿದ್ದಂತೆ ನೀರು ೧೦೦ಡಿಗ್ರಿಗೆ ಉಗಿಯಾಗುವುದು. ಅಂದರೆ ಆ  ಉಗಿ ಸುಟ್ಟ ಗಾಯ ಮಾಡುವುದು.ಎಷ್ಟೊ ಸಲ ನಮ್ಮ ಅಮ್ಮ ಅನ್ನದ ಪಾತ್ರೆಯ ಮೇಲಿನ ಮುಚ್ಚಳ ತೆಗೆದು ಬಂದ ಹಬೆಯಿಂದ ಕೈ ಸುಟ್ಟಿದೆ ಎನ್ನುವುದನ್ನು ಕೇಳಿದ್ದೆ.  ಆದರೆ  ಇಲ್ಲಿ  ಹಾಗಾಗಲಿಲ್ಲ, ಕಾರಣ ಇದು ಒಣ ಹಬೆ. ಹಬೆಯ ಉಷ್ಣತೆಯನ್ನು ನಿಯಂತ್ರಿಸಿ  ಬಿಡುವರು.ಬಿಸಿ ಬಿಸಿ ಅನಿಸುತಿತ್ತೆ ವಿನಃ ಮೈ ಸುಡುತ್ತಿರಲಿಲ್ಲ. ಅಷ್ಟರಲ್ಲಿ  ಒಬ್ಬ ಎದ್ದು ಮೇಲೆ ಇದ್ದ ಸ್ವಿಚ್‌ ಒತ್ತಿದ ಮತ್ತೆ ಉಗಿಬಂದಿತು ಇಲ್ಲಿ ಬಹುಶಃ ಕಾಂಪ್ಯೂಟರ್‌ ಚಾಲಿತ ನಿಯಂತ್ರಣ ವ್ಯವಸ್ಥೆ ಇರಬೇಕು. ಎಲ್ಲ ತನ್ನಿಂದ ತಾನೆ ಆಗುತಿತ್ತು.. ಹದಿನೈದು ನಿಮಿಷ ಒಳಗೆ ಇರಬಹುದು. ನನಗೆ ಸಾಕು ಎನಿಸಿತು.ಹೊರಬಂದೆ. ಮೈ ಕೈ ನೋಡಿಕೊಂಡರೆ  ಅಹಾ  ನಾನೂ ಕಪ್ಪೇನಲ್ಲ. ತಿಳಿಗೆಂಪು!  ಎಂಬ ಭಾವನೆ ಬಂದಿತು. ಈಗ ಇದು ನಮ್ಮ ದೇಶದಲ್ಲೂ ಲಭ್ಯವಿದೆ. ಇದನ್ನು ಸವೊನಾ ಎನ್ನುವರು. ರೆಸಾರ್ಟಗಳಲ್ಲಿ , ಸ್ಪಾಗಳಲ್ಲಿ ಸುಮಾರು ಇದೇ ಮಾದರಿಯ ವ್ಯವಸ್ಥೆ ಇದೆ. ನಿಸರ್ಗ ಚಕಿತ್ಸಾ ಶಿಬಿರಗಳಲ್ಲಿ  ಹಬೆ ಸ್ನಾನ ಸಾಮಾನ್ಯ.ಇದನ್ನು ಜಲ ಚಿಕಿತ್ಸೆಯ ಭಾಗವಾಗಿ ಬಳಸುವರು.   
ಅಲ್ಲಿಂದ ಮತ್ತೆ ಪಕ್ಕದಲ್ಲೆ ಇದ್ದ ತಣ್ಣಿರಿನ ಕೊಳಕ್ಕೆ ಇಳಿದೆ. ಅಲ್ಲಿನ ಗೋಡೆ ಗಾಜಿನದು.  ಪಕ್ಕದ  ಕೊಳದಲ್ಲಿ ಈಜುತಿದ್ದವರು ಕಾಣುತಿದ್ದರು, ಅನೇಕ ಚಲನ ಚಿತ್ರಗಲ್ಲಿ ನೀರಿನ ಒಳಗೆ ಈಜುತಿದ್ದವರನ್ನು ತೋರಿಸುತಿದ್ದಾಗ ಕ್ಯಾಮರವನ್ನೂ  ನೀರಿನ ಒಳಗೆ ಒಯ್ದು ಚಿತ್ರೀಕರಿಸುವರು ಎಂದುಕೊಂಡಿದ್ದ ನನ್ನ ಅನಿಸಿಕೆ ಹುಸಿ  ಎನಿಸಿತು. ಗಾಜಿನ ಗೋಡಯಿರುವ ಈಜುಕೊಳದಲ್ಲಿ  ಇರುವವವರನ್ನು ಸುಲಭ ವಾಗಿ ಚಿತ್ರಿಸಬಹುದು. ಶೈಲೇಶ್‌ಗೆ  ಅಲ್ಲಿ ಹೋಗಿ ಈಜಲು ಕೇಳಿಕೊಂಡೆ. ಅವರ ಚಲನೆಯ ಚಿತ್ರ ಕ್ಲಿಕ್‌ ಮಾಡಿದೆ. ಆಗ ತಿಳಿಯಿತು ನೀರಿನಲ್ಲಿನ ಸಾಹಸ ದೃಶ್ಯಗಳ ಒಳಗುಟ್ಟು.
ಜಲಕ್ರೀಡೆ ನಿಜಕ್ಕೂ ಖುಷಿಕೊಟ್ಟಿತು. ಮೂರುವರ್ಷದ  ಅದೈತನು ಎಗ್ಗಿಲ್ಲದೆ ನೀರಾಟವಾಡಿದ. ಅವನಿಗಂತೂ ಪಕ್ಕದಲ್ಲೆ ಇದ್ದ ವಿವಧ ಅಳತೆಯ ಕಾರಂಜಿಗಳ್ಲಿ ಚಿಮ್ಮುವ ನೀರಿನಲ್ಲಿ ಹಾರುವುದು ಕುಣಿಯುವುದು ಬಹಳ ಹಿಡಿಸಿತು ಎರಡುತಾಸಾದರೂ ನೀರು ಬಿಟ್ಟು ಹೊರಬರಲು ಸಿದ್ದನಿಲ್ಲ. ನಿಜ ಈಗ ನಮ್ಮಲ್ಲೂ ವಾಟರ್‌ ಪಾರ್ಕಗಳ ಬಂದಿವೆ . ಎಲ್ಲ ಸೌಲಭ್ಯಗಳೂ ಲಭ್ಯವಿವೆ.ಆದರೆ ವಿಶ್ರಾಂತಿಗೆಂದು  ಹೋದರೆ ಈಷ್ಟೆಲ್ಲ ಮನರಂಜನೆ ಸಿಗುವುದೆ ಎಂಬದು ನಾನರಿಯೆ. ಕಾರಣ ನಾನು ಈವರೆಗ ಭಾರತದಲ್ಲಿ ಯಾವುದೆ ರೆಸಾರ್ಟಿಗೆ ಹೋಗಿಲ್ಲ.ನನ್ನಂತೆ ಇರುವವರಿಗಾಗಿ  ಮಾತ್ರ ಹಲವು ಹಂತದ  ಸ್ನಾನದ ಸುಖವನ್ನು ಲೇಖನ ರೂಪದಲ್ಲಿ ಇಳಿಸಿರುವೆ.ಅವರಿಗೆ