Saturday, July 27, 2013

ಆರರಿಂದ ಅರವತ್ತು- ನೀರಿಗಿಂತ ಸಾರೆ ಮುಖ್ಯೆ

ನೀರಿಗಿಂತ ಸಾರೆ ಮುಖ್ಯ(ಕಾರವಾರ)                                 
ನೀರು ಜೀವ ಜಲ.ಮಾನವನ ಮೂಲಭೂತ ಅಗತ್ಯಗಳಲ್ಲಿ ಒಂದು. ಪಂಚಭೂತಗಳಲ್ಲಿ ಇದು ಪ್ರಮುಖವಾದುದೂ ಅಹುದು.ಅದನ್ನು ದೇವರು ಎಂದೂ ಪರಿಗಣಿಸುವವರು ಇರುವರು. ಆದರೆ ದಿನ ನಿತ್ಯದ ಊಟಕ್ಕೆ ಮಾತ್ರ ಬರಿ ನೀರು ಸಾಲದು ಅದಕ್ಕೆ ಸಾರೆ ಬೇಕು. ಎರಡರ ನಡುವೆ ಆಯ್ಕೆ ಮಾಡಿಕೊಳ್ಳಲು ಹೇಳಿರೆ ಬಹುತೇಕರು ಸಾರೆ  ಸರಿ ಎನ್ನುವರು. ಅನೇಕ ಬಾರಿ ಸಾರು ನೀರಿನ ಮೇಲೆ  ಮೇಲುಗೈ ಸಾಧಿಸುವುದು. ಇದು ಸಹಜವೂ ಹೌದು.  .ಅದನ್ನು ಒತ್ತಿ ಹೇಳುವ ಅಗತ್ಯ ನನಗೆ ಕಾರವಾರದಲ್ಲಿನ ಅನುಭವದಿಂದ ಬಂದಿತು. ಸತ್ಯ, ನಿಷ್ಠೆ ವೃತ್ತಿ ಧರ್ಮ ಇವೆಲ್ಲವಕ್ಕೂ ಗೌರವ ಕೊಡಬೇಕಾದುದು ಅಗತ್ಯ. ಆದರೆ ಜಾತಿ, ಬಂಧುತ್ವ ಮತ್ತು ಲಾಭದ ಪ್ರಶ್ನೆ ಬಂದಾಗ ಎಲ್ಲವೂ ಗೌಣ. ಸಾರಿನ ರುಚಿಯ ಮುಂದೆ ಅದರಲ್ಲೂ ಮೀನಿನ ಸಾರಿನ ರುಚಿಯ ಮುಂದೆ ನೀರಿನ ನೆನಪು ಯಾರಿಗೆ ಬೇಕು. ಅದೆ ಗತಿ ತತ್ವ ಮತ್ತು ನಿಷ್ಠೆಗಳಿಗೆ             
ನಾನು ಕಾರವಾರದ ಹತ್ತಿರ ದ ಕಾಲೇಜಿಗೆ ವರ್ಗವಾಗಿ ಹೋದೆ. ಅಲ್ಲಿಯೇ ಮಗನೂ ದಿನಪತ್ರಿಕೆಯೊಂದರ ಜಿಲ್ಲಾಪ್ರತಿನಿಧಿ ಆಗ ಕಾರವಾರದಲ್ಲಿ ಯುವ ಪರ್ತಕರ್ತರ ತಂಡವೆ ಇತ್ತು. ಅವರೆಲ್ಲರಿಗೂ ನಾನು ಅಪ್ಪಾಜಿ. ಅಲ್ಲಿನ ಸ್ಥಳೀಯ ದಿನಪತ್ರಿಕೆಯ ಮಾಲಕ ಮತ್ತು ಸಂಪಾದಕ ಬಹು ಕಷ್ಟ ಪಟ್ಟು  ಮೇಲೆ ಬಂದವನು. ಕರಾವಳಿಯಲ್ಲಿ ಆ ಪತ್ರಿಕೆ ತನ್ನ ನಿರ್ಭೀತ ನಿಲುವಿನಿಂದ ಹೊಸ ಅಲೆಯನ್ನೆ ಹುಟ್ಟುಹಾಕಿತ್ತು.. ಅದರ  ಸಂಸ್ಥಾಪಕ   ಸಂಪಾದಕನಿಗೆ ನಾನು ಬಂದ ಹೊಸದರಲ್ಲಿ ನಡೆದ ಎಲ್ಲ ಘಟನೆಗಳ ಮಾಹಿತಿ ಇತ್ತು. ಉಪನಿರ್ದೇಶಕರ  ರಿಯಾಯತಿ ಅನುಕೂಲ ಪಡೆಯದ ನನ್ನ ಬಗೆಗೆ ವಿಭಿನ್ನ ರಾದರು ಎಂಬ ಗೌರವ ವ್ಯಕ್ತ ಪಡಿಸಿದ. ಅವನ ಶ್ರೀ ಮತಿಯೂ ಶಿಕ್ಷಕಳೆ. ಅವಳಿಗೆ ಆಗಾಗ ನಿನ್ನ ಶಾಲೆಗೂ ಇಂಥಹವರು ಬಂದರೆ ಗೊತ್ತಾಗುವುದು ಎಂದು ಛೇಡಿಸುವನು.ಅವರ ಪತ್ರಿಕೆಯ ಸಂಪಾದಕನಂತೂ ಬಹಳ ಬೇಕಾದವರು. ಸಜ್ಜನನಾದ ವ್ಯಕ್ತಿ.
ನಮ್ಮಕಾಲೇಜಿನಲ್ಲಿ ಇರುವ ಬಹುತೇಕರು ಮೊದಲೆ ತಿಳಿಸಿದಂತೆ ಒಂದೆ ಜನಾಂಗಕ್ಕೆ ಸೇರಿದವರು. ಅದರಲ್ಲೂ   ಅವರು ಜಿಲ್ಲೆಯಲ್ಲಿ ಅಲ್ಪ ಸಂಖ್ಯಾತರಾದರೂ ಅಂಕೋಲ ಮತ್ತು ಕಾರವಾರ  ತಾಲೂಕಗಳಲ್ಲಿ ಪ್ರಬಲರು.ಬಹುತೇಕರು ಸುಶಿಕ್ಷಿತರು ಮತ್ತು ಸರಕಾರಿ ನೌಕರಿಯಲ್ಲಿರುವವರು. ಜತೆಗೆ ಹಿಂದೆ ಅವರು ಕಾದಾಡುವ ಕಲಿಗಳಾಗಿದ್ದರು ಎಂಬ ಪ್ರತೀತಿ. ಅದಕ್ಕೆ ತಕ್ಕಂತೆ ಈಗಲೂ ಮುನ್ನುಗ್ಗುವ ಸ್ವಭಾವ.. ತುಸು ದುಡುಕಿನವರಾದರೂ  ಅವರಲ್ಲಿ  ಒಗ್ಗಟ್ಟು ಬಹಳ.
ಕಾಲೇಜಿನಲ್ಲಿ ಹರತಾಳವಾದ ಮೇಲೆ ನಾನು ಪಾಠ ಮತ್ತು ಪ್ರವಚನಗಳ ಬಗ್ಗೆ ಕಾಳಜಿ ವಹಿಸಿದೆ.  ಪರಿಶೀಲನೆ ಮಾಡಿದಾಗ  ಒಬ್ಬಿಬ್ಬ ಉಪನ್ಯಾಸಕರು ಹಾಜರಿ ಸರಿಯಾಗಿ ಹಾಕುತಿಲ್ಲದಿರುವುದು ಕಂಡುಬಂದಿತು. ಇಂಗ್ಲಿಷ್ಉಪನ್ಯಾಸಕರಂತೂ ತಿಂಗಳು ಗಟ್ಟಲೆ ವಿದ್ಯಾರ್ಥಿಗಳ ಹಾಜರಿ ಹಾಕಿರಲಿಲ್ಲ. ಮಕ್ಕಳಿಗೆ ಪೂರ್ಣ ಸ್ವಾತಂತ್ರ ಕೊಟ್ಟಿದ್ದರು. ಅದರ ಪರಿಣಾಮವೆ ಅವರ ಅಪಾರ ಜನಪ್ರಿಯತೆ.. ಅವರಿಗೆ ಇನ್ನು ಮೇಲಾದರೂ ದಾಖಲೆಗಳನ್ನು ಸೂಕ್ತವಾಗಿ ನಿರ್ವಹಿಸಲು ಸೂಚಿಸಲಾಯಿತು. ಎಲ್ಲ ಶಿಕ್ಷಕರ ಸಭೆ ಕರೆದು ಪಾಠ ಪ್ರವಚನದ ದಾಖಲೆಗಳು ಮತ್ತು ಸಂಸ್ಥೆಯ ಶಾಂತಿ ಮತ್ತು ಸುವ್ಯವಸ್ಥೆಯ ಬಗ್ಗೆ ಸೂಕ್ತ ತಿಳುವಳಿಕೆ ನೀಡಿ ಈ ಮೊದಲು ನಡೆದ ಘಟನೆಯ ಪುನರಾವರ್ತನೆ ಯಾಗದಿರಲು ಕ್ರಮತೆಗೆದುಕೊಳ್ಳ ಲಾಯಿತು. ಇದಾದ ಒಂದೆ ವಾರದಲ್ಲಿ ಉಪನಿರ್ದೇಶಕರು ಭೇಟಿ ನೀಡಿದರು. ಅವರಿಗೆ ದಾಖಲೆಗಳ ಪರಿಶೀಲನೆಯಿಂದ ಸತ್ಯ ಸಂಗತಿ ಗೊತ್ತಾಯಿತು. ಎಲ್ಲರಿಗೂ ಅಶಿಸ್ತಿಗೆ ಕಾರಣರಾದರೆ ಇಲಾಖೆಯ ಕ್ರಮಕ್ಕೆ ಗುರಿಯಾಗಬಹುದೆಂದು ಎಚ್ಚರಿಸಿದರು. ಅವರು ಕಾರವಾರಕ್ಕೆ ಹೋದ ಮೇಲೆ ಅಲ್ಲಿದ್ದ ಪತ್ರಕರ್ತರು ಕಾಲೇಜಿನಲ್ಲಾದ ಘಟನೆಯ ಬಗ್ಗೆ ಕೇಳಿದಾಗ ಅವರು ತಾವು ನೀಡಿದ ಭೇಟಿಯ ವರದಿಕೊಟ್ಟಾಗ ಮಾರನೆ ದಿನ ಪತ್ರಿಕೆಯಲ್ಲಿ ಉಪನ್ಯಾಸಕರೆ ಹೇಗೆ ಪ್ರಚೋದನೆ ನೀಡಿದರು ವಿದ್ಯಾರ್ಥಿಗಳ ಅಶಿಸ್ತಿಗೆ ಕಾರಣರಾದರು ಎಂದು ಅರ್ಥ ಬರುವ ವರದಿ ಪ್ರಕಟವಾಯಿತು.ಅದರ ಬಿಸಿ ವಿಶೇಷವಾಗಿ ಪುರುಷ ಉಪನ್ಯಾಸಕರ ಮೇಲಾಯಿತು. ಅವರನ್ನು ಪರಿಚಿತರೆಲ್ಲ ನೀವು ಕಾಲೇಜಿಗೆ ಹೋಗುವುದು ಪಾಠ ಮಾಡಲೋ ಇಲ್ಲವೆ  ಗಲಭೆ ಮಾಡಿಸಲೋ ಎಂದು ವಿಚಾರಿಸಿದಾಗ ತಲೆ ತಗ್ಗಿಸುವಂತಾಯಿತು.. ಅಂತೂ ಇಂತೂ ಶೈಕ್ಷಣಿಕ ವರ್ಷ ಮುಗಿಯುತ್ತ ಬಂದಿತು.ಪರೀಕ್ಷೆಯಲ್ಲಿ ಕೆಲವರು  ಚದುರಂಗ ಅಡುವುದು ಕಂಡುಬಂದಿತು. ಅದು ಕೂಡದು ಕೊಟ್ಟಡಿ ಮೇಲ್ವಿಚಾರಣೆ ಯನ್ನು ಗಂಭಿರವಾಗಿ ಪರಿಗಣಿಸಲು ತೀಳಿಸಿದೆ. ಆದೆ ಸಮಯದಲ್ಲಿ ಪರೀಕ್ಷೆ ನಡೆಯುವಾಗಲೆ ಉಪನ್ಯಾಸಕರೊಬ್ಬರು ಉಪಹಾರದ ವ್ಯವಸ್ಥೆ ಮಾಡಿದರು. ಪರೀಕ್ಷಾ ಸಮಯ ಮುಗಿದ ಮೇಲೆ ಮಾಡಬಹುದೆಂಬ ಸಲಹೆ ತಳ್ಳಿಹಾಕಿ ನಮ್ಮ ಮಕ್ಕಳು ನಕಲು ಮಾಡುವುದಿಲ್ಲ  ಅಲ್ಲದೆ ಇದು ಪಬ್ಲಿಕ್‌ ಪರೀಕ್ಷೆಯಲ್ಲ ಎಂದು ಉಡಾಫೆಯ ಮಾತು ಕೇಳಿಬಂತು. ಎಲ್ಲರೂ ಒಟ್ಟಿಗೆ ಕುಳಿತು ತಿನ್ನ ಬೇಡಿ ಎಂದು ಸೂಚಿಸಿ ನನ್ನ ಅಸಂತೋಷ ಸೂಚಿಸಲು ನಾನು ಭಾಗಿಯಾಗಲಿಲ್ಲ.. ಬಹುಶಃ ಇದೆ ಅವರ ಅಸಮಧಾನ ಹೆಚ್ಚಲು ಕಾರಣವಾಯಿತು. ಆ ಸಮಯದಲ್ಲಿನಾನು ತುಸು ತಾಳ್ಮೆಯಿಂದ ವರ್ತಿಸಿದ್ದರೆ ವಿಷಯ ದೀರ್ಘಕ್ಕೆ ಹೋಗುತ್ತಿರಲಿಲ್ಲ.
ಹೊಸ ವರ್ಷದ ತರಗತಿಪ್ರಾರಂಭ ವಾದವು. ಯಾಕೋ ಎಲ್ಲ ಸರಿಯಾಗಿಲ್ಲ ಎನಿಸಿತು. ಒಂದೆ ವಾರದಲ್ಲಿ ಇಂಗ್ಲಿಷ್  ಉಪನ್ಯಾಸಕರೊಗೆ  ಅವರಿಗೆ ಹತ್ತಿರವಿದ್ದ ನಗರದ ಕಾಲೇಜಿಗೆ ಪೂರ್ಣವಾಗಿ ನಿಯೋಜನೆಯಾಯಿತು..ಅವರಿಗೆ ಸಂಬಳ ಇಲ್ಲಿ ಕೆಲಸ ಅಲ್ಲಿ.ಉಪನಿರ್ದೇಶಕರನ್ನು ಸಂಪರ್ಕಿಸಿದಾಗ ಹೇಗಿದ್ದರೂ ಅವರು ಅಶಿಸ್ತಿಗೆ ಪ್ರಚೋದನೆ ಕೊಡುವವರು. ಅಲ್ಲದೆ ರಾಜಕೀಯ ಪ್ರಭಾವ ಬಂದಿದೆ. ಅಲ್ಲಿ ಉಪನ್ಯಾಸಕರ ಕೊರತೆ ಇದೆ. . ಹೇಗಿದ್ದರೂ ನಿಮ್ಮವಿಷಯ ಇಂಗ್ಲಿಷ್‌. ನೀವೆ ಪಾಠ ಮಾಡಿ ಎಂದರು.ಅವರನ್ನು ಬಿಡುಗಡೆ ಮಾಡಿ. ಅಲ್ಲಿ ಹೋಗಿ ವರದಿ ಮಾಡಿಕೊಳ್ಳಲಿ ಎಂದು ತಿಳಿಸಿದರು
 ನಾನು ಇದರಿಂದ ತೊಂರೆಯಾಗುವುದು  ದಯಮಾಡಿ ನಿಯೋಜನೆ ರದ್ದು ಮಾಡಿ ಎಂದು ಮನವಿ ಮಾಡಿದೆ..
ಆದೇಶವನ್ನು ಕಳುಹಿಸಿರುವೆ. ಮರು ಮಾತನಾಡದೆ  ಅದನ್ನು ಪಾಲಿಸಿ. ಇಲ್ಲವಾದರೆ ಕ್ರಮತೆಗೆದುಕೊಳ್ಳ ಬೇಕಾಗುವುದು. ಎಂದು ತುಸು ಗಡುಸಾಗಿಯೆ ಹೇಳಿ ಫೋನು  ಕಟ್‌ ಮಾಡಿದರು.
.ನಿಜ ನಾನು ಪಾಠ ಮಾಡುತಿದ್ದೆ. ಆಧರೆ ನಾನು ಅದೆ ತಾನೆ ಶಸ್ತ್ರ ಕ್ರಿಯೆಯಯಿಂದ ಚೇತರಿಸಿಕೊಂಡಿದ್ದೆ.ನನ್ನ ಆರೋಗ್ಯವೂ ಅಷ್ಟು ಚೆನ್ನಾಗಿರಲಿಲ್ಲ.   ಅಲ್ಲದೆ ಉಪನ್ಯಾಸಕರಿಗೆ ಪಾಠ ಕಲಿಸುವ ಹೆಸರಲ್ಲಿ ಅನುಕೂಲ ಮಾಡಿಕೊಟ್ಟದ್ದರು. ಇದರ ಹಿಂದಿನ ಕಾಣದ ಕೈನ ಕೆಲಸ ಗೊತ್ತಾಯಿತು. ಇದಲ್ಲದೆ ಸದಾ ನಯವಾಗಿ ಮಾತನಾಡುವ ಅವರು ಒರಟಾಗಿ ವರ್ತಿಸಿದುದರು ಹಿಂದೆ ಏನೋ ಕಾರಣವಿದೆ ಎನ್ನಿಸಿತು. ನಾನು ಅವರೊಂದಿಗೆ ಹೆಚ್ಚು ವಾದಿಸಲು ಹೋಗಲಿಲ್ಲ. ಆದರೆ ಬೆದರಿಕೆಗೆ ಜಗ್ಗುವ ಜಾಯಮಾನ  ನನ್ನದಲ್ಲ.
ತುಸು ಹೊತ್ತು ಯೋಚನೆ ಮಾಡಿದೆ. ಈ ಅನ್ಯಾಯಕ್ಕೆ ಮಣಿವ ಮಾತೆ ಇರಲಿಲ್ಲ. ಆದರೆ ಏನಾಗ ಬಹುದು. ರಜಾಮಂಜೂರು ಮಾಡಲಕ್ಕಿಲ್ಲ. ವೇತನ ಕೊಡದೆ ಇರಬಹುದು. ಅದಕ್ಕೆ ಸಿದ್ಧ ನಾದರೆ ಮುಗಿಯಿತು. ಅದಕ್ಕಿಂತ ಹೆಚ್ಚು ಏನಾಗಬಹುದು. ಆದರೆ ವಿದ್ಯಾರ್ಥಿಗಳಿಗೆ ನಾನು ಇದ್ಧ ಅನ್ಯಾಯವಾದರೂ ಸಹಿಸಿಕೊಂಡಿರುವುದು ಸ್ವಾಭಿಮಾನಕ್ಕೆ ಧಕ್ಕೆ ತರುವುದು. ಏನಾದರಾಗಲಿ ಧೈರ್ಯವಾಗಿ ಎದುರಿಸಬೇಕು ಎಂದು ನಿರ್ಧರಿಸಿದೆ.  ತಕ್ಷಣ    ಅಲ್ಲಿನ ಸರಕಾರಿ ಆಸ್ಪತ್ರೆಗೆ  ಹೋಗಿ ವೈದ್ಯರಿಂದ ನನ್ನ ಆರೋಗ್ಯ ಪರೀಕ್ಷಿಸಿಕೊಂಡೆ ನನಗೆ ವಿಶ್ರಾಂತಿ ಅಗತ್ಯವಿದೆ ಎಂದು ಪ್ರಮಾಣ ಪತ್ರ ಪಡೆದೆ. ಹೇಗಿದ್ದರೂ  ನನ್ನ ಖಾತೆಯಲ್ಲಿ ಸಾಕಷ್ಟು ರಜೆ ಇದ್ದವು.  ಒಂದು ವರ್ಷದಲ್ಲಿ ನಿವೃತ್ತಿ ಇತ್ತು.ಸದ್ಯಕ್ಕೆ ಮೂರುತಿಂಗಳ ರಜೆ ಅರ್ಜಿಯನ್ನು ಉಪನಿರ್ದೇಶಕರಿಗೆ ಕಳುಹಿಸಿದೆ. ಎರಡೆ ತಾಸಿನಲ್ಲೆ ಅವರಿಂದ ದೂರವಾಣಿ ಕರೆ ಬಂದಿತು. ತಕ್ಷಣವೆ ಅವರಲ್ಲಿಗೆ ಹೋಗಿ ಕಾಣಲು ಸೂಚಿಸಿದರು.ಅಂದು ಮಧ್ಯಾಹವೆ ಕಾಲೇಜಿನಿಂದ ಅವರ ಕಚೇರಿಗೆ ಹೋದೆ.. ಅವರು ಮುಖ ಕೆಂಪು ಮಾಡಿಕೊಂಡು ಕೂತಿದ್ದರು. ಏನು ಪ್ರಿನ್ಸಿಪಾಲರೆ ರಜೆಗೆ  ಅರ್ಜಿ ಹಾಕಿದ್ದೀರಿ, ಎಂದು ಗಡುಸಾಗಿ ಕೇಳಿದರು .
 ಹೌದು ಸಾರ್‌ ನನಗೆ ತೃಪ್ತಿಕರವಾಗಿ  ಎರಡು ತರಗತಿಗಳಿಗೆ ಪಾಠ ಮಾಡಿ ಕಾಲೇಜಿನ ಕೆಲಸ ನಿರ್ವಹಿಸಲು ಆಗದು. ಅದಕ್ಕೆ ಅನಾರೋಗ್ಯವಿದೆ. ಅದಕ್ಕೆ ರಜೆ ಹಾಕಿರುವೆ. ಎಂದೆ.
 ನೀವು ರಜೆ ಅರ್ಜಿ ಕೊಟ್ಟಾಕ್ಷಣ  ಆಗದು  ನಾನು ರಜೆ ಮಂಜೂರು ಮಾಡುವುದಿಲ್ಲ , ಎಂದು ಹೇಳಿದರು. ಅದು ನಿಮಗೆ ಬಿಟ್ಟದ್ದು. ಅಗತ್ಯ ಬಿದ್ದರೆ  ನಿರ್ದೇಶಕರನ್ನು ಸಂಪರ್ಕಿಸುವೆ, .ಏನೆ ಆದರೂ ಕಾಟಾಚಾರಕ್ಕೆ ಕೆಲಸ ಮಾಡುವುದು ನನಗೆ ಆಗದು .ಎಂದೆ.
ಅವರು ಪ್ರಿನ್ಸಿಪಾಲರೆ ನೀವು ಅನುಭವಸ್ಥರು ನನಗಿರುವ ಒತ್ತಡ ಅರ್ಥ ಮಾಡಿಕೊಳ್ಳಿ. ಅವರಿಗೆ ಸ್ಥಳೀಯ ಶಾಸಕರ ಬೆಂಬಲವಿದೆ.ನನ್ನ ಕೈ ಕಟ್ಟಿ ಹಾಕಿರುವುರು. ಅವರನ್ನು ಬಿಡುಗಡೆ ಮಾಡಲೆ ಬೇಕು  ನೀವೆ ಹೇಗಾದರೂ ಈ ಕಗ್ಗಂಟು ಬಿಡಿಸಿ ಎಂದರು.
 ನಾನು ತುಸು ಯೋಚನೆಗೆ ಈಡಾದೆ. ನಾನು ರಜಾ ಹಾಕಿದ ಮೇಲೆ ನೀವೆ  ಬಿಡುಗಡೆ ಮಾಡಿಸಬಹುದು. ಎಂದೆ.
ಆಗ ನಾನು ಇರುವುದಿಲ್ಲ. ಇಂಗ್ಲಿಷ್‌ ಪಾಠ ಮಾಡಲು ಇರುವವರನ್ನು ಬೇರೆ ಕಡೆ ಕಳುಹಿಸಿದರೆ ಜನ ಗಲಾಟೆ ಮಾಡುವರು.ಅದನ್ನು ಸಮರ್ಥಿಸಿಕೊಳ್ಳಲು ಆಗುವುದಿಲ್ಲ. ಎಂದರು
ಸಾರ್  ಹಾಗಿದ್ದರೆ ಒಂದು ಪರಿಹಾರವಿದೆ. ಸದರಿ ಉಪನ್ಯಾಸಕರನ್ನು ವಾರದಲ್ಲಿ ಮೂರುದಿನ ಮಾತ್ರ ನಿಯೋಜನೆ ಮಾಡಿ ಆದೇಶ ಹೊರಡಿಸಿ. ಇಲ್ಲಿ ಮೂರುದಿನ ಪಾಠ ಮಾಡಲಿ. ಇನ್ನುಳಿದ ದಿನ ಹೇಗೋ ಒಂದು ವ್ಯವಸ್ಥೆ ಮಾಡಬಹುದು. ಅದಕ್ಕೆ ನೀವು ಒಪ್ಪಿದರೆ ರಜೆಯ ಮೇಲೆ ಹೋಗದೆ ಕೆಲಸ ನಿರ್ವಹಿಸುವೆ.ಅವರ ಮಾತಿಗೂ ಬೆಲೆ ಕೊಟ್ಟ ಹಾಗಾಗುವುದು. ಜತೆಗೆ ಇಲ್ಲಿನ  ವಿದ್ಯಾರ್ಥಿಗಳಿಗೆ ತೊಂದರೆಯೂ ಆಗದು ಎಂದೆ.
ಅವರು ತುಸು ಯೋಚಿಸಿ  ಗುಮಾಸ್ತರನ್ನು ಕರೆದು ಮಾರ್ಪಡಿಸಿದ ಆದೇಶವನ್ನು ಹೊರಡಿಸಿ ಪ್ರತಿಯನ್ನುನನ್ನ  ಕೈನಲ್ಲಿ ಯೆ ಕೊಟ್ಟು  ಆ ಉಪನ್ಯಾಸಕರನ್ನು ಬಿಡುಗಡೆ ಮಾಡಲು ತಿಳಿಸಿದರು. ನನ್ನ ರಜಾ ಅರ್ಜಿ ವಾಪಸ್ಸು ಕೊಟ್ಟರು.
ಮರುದಿನ ಬಂದು ಮರು ಅದೇಶದ ಮೇರೆಗ ವಾರದಲ್ಲಿ ಮೂರುದಿನ  ಮಾತ್ರ ಅವರ ಊರಿನ ಹತ್ತಿರವೆ ಇರುವ ಕಾಲೇಜಿನಲ್ಲಿ ಕೆಲಸ ಮಾಡಿ . ಇಲ್ಲಿ ಇರುವ ಮೂರುದಿನದಲ್ಲೆ ಪಾಠಪ್ರವಚನಗಳನ್ನು ಕ್ರಮವಾಗಿ ಮಾಡಿ ಮುಗಿಸಲು ಅವರಿಗೆ ಸೂಚನೆ ನೀಡಿ ಬಿಡುಗಡೆ ಮಾಡಿದೆ.. ಅವರಿಗೆ ಇದರಿಂದ  ವಾರಪೂರ್ತಿ ೧೬ ತಾಸುಗಳ ಕೆಲಸದ ಹೊರೆ ಬಿದ್ದಿತು. ಮೊದಲು ಇಲ್ಲಿ ಮಾತ್ರ ವಾರಕ್ಕೆ ಎಂಟು ಗಂಟೆ ಕೆಲಸ ಮಾಡಿ ಆರಾಮಾಗಿದ್ದ ಅವರು ನನಗೆ ಪಾಠ ಕಲಿಸಲು ಹೋಗಿ ಹೆಚ್ಚಿನ  ಪರಿಶ್ರಮ ಪಡಬೇಕಾಯಿತು.
ಅಷ್ಟು ಹೊತ್ತಿಗೆ ನನ್ಮ ಮಗನಿಗೆ ಬೆಂಗಳುರಿಗೆ ವರ್ಗ ವಾಗಿತ್ತು. ನಾನೊಬ್ಬನೆ ಕರವಾರದಲ್ಲಿದ್ದೆ.  ದೀರ್ಘವಾದ ವಾರಾಂತ್ಯದಲ್ಲಿ ಬೆಂಗಳೂರಿಗೆ ಭೇಟಿಕೊಟ್ಟಿದ್ದೆ. ಜತೆಯಲ್ಲೆ ಕರಾವಳಿ ಪತ್ರಿಕೆಯ ಸಂಪಾದಕೃಉ ಬಂದಿದ್ದರು. ಮುಂಜಾನೆ ತಿಂಡಿತಿನ್ನುತ್ತಾ ಕುಳಿತಾಗ ಕಾರವಾರದಿಂದ ಫೋನು ಬಂದಿತು . ಅಂದು ಬೆಳಗಿನ ಪತ್ರಿಕೆಯಲ್ಲಿ ನನ್ನ ಬಗ್ಗೆ ಸತ್ಯದೂರವಾದ ಆಪಾದನೆಗಳಿಂದ ಕೂಡಿದ ವರದಿ ಪ್ರಕಟವಾಗಿತ್ತು. ನನಗೆ ಆಶ್ಚರ್ಯ, ಸಂಪಾದಕರು ಜತೆಯಲ್ಲೆ ಇದ್ದಾರೆ..” ಪ್ರಿನ್ಸಿಪಲ್ದ ಪ್ರಿನ್ಸಿಪಾಲರ ಕಾರ್ಯ ವೈಖರಿ “ ಎಂಬ ಶೀರ್ಷಿಕೆಯ ಅಡಿಯಲ್ಲಿ ಅನೇಕ ಆರೋಪಗಳನ್ನು ಹೊರಿಸಲಾಗಿತ್ತು. ಪಕ್ಕದಲ್ಲೆ ಕುಳಿತಿದ್ದ ಸಂಪಾದಕರಿಗೆ ಅಚ್ಚರಿ. ಹಿಂದಿನ ದಿನ ಬೆಂಗಳೂರಿಗೆ ಹೊರಟಾಗ ಇದರ ವಾಸನೆಯೆ ಅವರಿಗೆ ಇರಲಿಲ್ಲ. ಮಾಲಕ ಮತ್ತು ಕಾರ್ಯನಿರ್ವಾಹ ಸಂಪಾದಕರು ಅವರ ಗೈರು ಹಾಜರಿಯಲ್ಲಿ ಮತ್ತು ನಾನು ಊರಲ್ಲಿಇಲ್ಲದಾಗ ಮಾನ ಹಾನಿಕರ ವರದಿ ಪ್ರಕಟಿಸಿದ್ದರು.
ತಕ್ಷಣ ಕಾರವಾರಕ್ಕೆ  ವಾಪಸ್ಸುಹೊರಟೆ. ಅಲ್ಲಿ ಪತ್ರಿಕೆ ನೋಡಿದೆ. ಮುಖ್ಯವಾಗಿ ಕೆಲವು ಉಪನ್ಯಾಸಕರಿಗೆ ಕಿರುಕುಳ ಕುರಿತು ಬರೆಯಲಾಗಿತ್ತು ಜತೆಯಲ್ಲಿ ಅಲ್ಲಿ ಹೊಸದಾಗಿ ವರ್ಗ ವಾಗಿ ಬಂದ ಅನ್ಯ ಜಿಲ್ಲೆಯ ಶಿಕ್ಷಕಿಯರೊಂದಿಗೆ ಸಂಬಂಧ ಹೊಂದಿರುವದರಿಂದ ಅವರಿಗೆ ಹೆಚ್ಚಿನ ಸೌಲಭ್ಯ ನೀಡಿರುವುದಾಗಿ ತಿಳಿಸಿದ್ದರು. ಮುಗುಮ್ಮಾಗಿ ಹಣಕಾಸಿನ ದುರ್ಬಳಕೆಯ ಆರೋಪ ಮಾಡಲಾಗಿತ್ತು.
 ಅದೆ ದಿನ ಉಪನಿರ್ದೇಶಕರ ಕಚೇರಿಗೆ ಹೋದೆ. ಅವರು ಇದರಿಂದ ತುಸು ವಿಚಲಿತರಾದಂತೆ ಕಂಡಿತು. ಅವರ ವಿರುದ್ಧವೂ ಬರೆಯಲಾಗಿತ್ತಂತೆ. ನಾನೆ ಬಂದು ತಪಾಸಣೆ ಮಾಡಿರುವೆ. ಎಲ್ಲ ಸರಿಯಾಗೆ ಇದೆ. ಏನೂ ಆರೋಪ ಮಾಡಲಾಗದಿರುವಾಗ ಚಾರಿತ್ರ್ಯ ವಧೆ ಮಾಡುವರು. ನಾನು ಸತ್ಯ ಸಂಗತಿಯನ್ನು ಸರಕಾರಕ್ಕೆ ವರದಿ ಮಾಡುವೆ. ನೀವು ಚಿಂತಿಸಬೇಡಿ , ಎಂದು ಧೈರ್ಯ ಹೇಳಿದರು.ನಿಮ್ಮಲ್ಲಿರುವ ಒಂದುವರ್ಗದ ಉಪನ್ಯಾಸಕರ ಕುಲಬಾಂಧವರದು ಈ ಪತ್ರಿಕೆ . ಅವರ ಹಿತಾಸಕ್ತಿ ಕಾಪಾಡುವ  ಪ್ರಯತ್ನವೆ ಇದು. ಇದುವರೆಗ ನಿಮ್ಮ  ಅಭಿಮಾನಿಯಾಗಿದ್ದ ವ್ಯಕ್ತಿ ಈಗ ಧ್ವನಿ ಬದಲಾಯಿಸಲು ಕಾರಣ ಅವರ ಜಾತಿ ಬಾಂಧವರ ಒತ್ತಡವೆ ಆಗಿದೆ. ನೀವು ಅವರ ಮೇಲೆ ಮಾನ ಹಾನಿ ಮೊಕದ್ದಮೆ ಹೂಡಿ .ಹಾಗೆಯೆ ಬಿಡಬಾರದು ಎಂದು ಸಲಹೆ ನೀಡಿದರು . ನಾನ ಅದನ್ನು ಪರಿಶೀಲಿಸಿದೆ. ನಾನು ಮೊಕದ್ದಮೆ ಹೂಡಿದರೆ ಅದು ಅವರಿಗೆ ಹೊಸದೇನು ಅಲ್ಲ.  ಈ ತರಹೆಯ ಹತ್ತಾರು ಈಗಾಗಲೆ ಇವೆ. ಅವುಗಳ ಜೊತೆ ಇದೂ ಒಂದು. ಮೇಲಾಗಿ ಸ್ಥಳೀಯ. .ನಾಲ್ಕಾರುವರ್ಷ ಕೋರ್ಟಿಗೆ ಅಲೆದಾಡಿ ನಂತರ ಕ್ಷಮೆ ಕೇಳುವನು.ಅಲ್ಲಿಗೆ ಪ್ರಕರಣ ಮುಕ್ತಾಯವಾಗುವುದು. ಸುಮ್ಮನೆ ನನ್ನ ಸಮಯ  ಹಾಳುಆಗುವುದು. ಆದರೆ ನಾನು ಅನವಶ್ಯಕವಾಗಿ ಇಲ್ಲದ ಪ್ರಾಮುಖ್ಯತೆಯನ್ನು ಕೊಟ್ಟಹಾಗಾಗುವುದು. ಆಹಾಳು. ಅದರಿಂದ  ಅದನ್ನು ನಿರ್ಲಕ್ಷಿಸಲು ನಿರ್ಧರಿಸಿದೆ.ನನ್ನ ಕೆಲಸವನ್ನೂ ನಾನು ಎಂದಿನಂತೆಯೆ ನಿರ್ವಹಿಸಲು ಮುಂದಾದೆ.
 ಆದರೆ ಒಂದು ಅನುಕೂಲವಾಯಿತು ಅಭಿವೃದ್ಧಿ ಸಮಿತಿಯರು ಬೆಂಬಲಕ್ಕೆ ನಿಂತರು. ನಿರ್ಧಿಷ್ಟ ಕೋಮಿನರ ವಿರುದ್ಧ ಉಳಿದವರು ಒಂದಾಗಿ ಬಂದು ಬೆಂಬಲ ಸೂಚಿಸಿದರು. ಅವರಲ್ಲೂ  ಕೆಲವರು ಏನೂ ಅರಿಯದ ಮಳ್ಳಿಯ ತರಹ ಸಾರ್‌ ಹೀಗೆ ಬರೆಯಬರದಿತ್ತು ಎಂದು ಸಹಾನುಭೂತಿ ಸೂಚಿಸಿದರು.

 ನಾನು ಅವರ ಪತ್ರಿಕೆ ಅವರ ಮರ್ಜಿ. ಅದನ್ನು ಬೇಡ ಎನ್ನಲು ನಾವು ಯಾರು. ಸ್ವಾತಂತ್ರ್ಯವಿದೆ. ಓದುವವರಿಗೆ ನಿಜ ಗೊತ್ತೆ ಇದೆ. ಚಿಂತೆ ಮಾಡುವ ಅಗತ್ಯವೆ ಇಲ್ಲ ಎಂದೆ. ಬಹು ದಪ್ಪ ಚರ್ಮದ ಆಸಾಮಿ ಎಂದುಕೊಂಡರು. ಅದರ ಪರಿಣಾಮ ಏನೂ ಆಗಲಿಲ್ಲ. ಆದರೆ ಒಂದು ಮಾತ್ರ ಖಚಿತವಾಯಿತು. ಸತ್ಯ ,ಧರ್ಮ,  ತತ್ವ ಮಾತಿಗೆ ಮಾತ್ರ. ದಿನ ನಿತ್ಯದ ಬದುಕಿಗೆ ಜಾತಿ, ಪಂಗಡ , ಹಿತಾಸಕ್ತಿಯೆ ಅಗತ್ಯ. ಅದಕ್ಕೆ ಅಲ್ಲವೆ   ನೀರಿಗಿಂತ ಸಾರು ರುಚಿಯಾಗಿರುವುದು.

No comments:

Post a Comment