Friday, August 2, 2013

ಆರರಿಂದ ಅರವತ್ತು .ನಿವೃತ್ತಿಯ ಅಂಚಿನಲ್ಲಿ

  ಕಾಲೇಜು ದಿನಾಚರಣೆ   ಅಂದರೆ ಕೇಳುವ ಹಾಗೆ ಇಲ್ಲ! 

ನಿವೃತ್ತನಾಗಲು ೧೦ ತಿಂಗಳು ಇರುವಾಗ ಬೆಂಗಳೂರು ಗ್ರಾಮಾಂತರದ ಸ್ವತಂತ್ರ ಪದವಿ ಪೂರ್ವ ಕಾಲೇಜಿಗೆ ವರ್ಗ ವಾಯಿತು. ಅದು ಬಹುದೊಡ್ಡ ಕಾಲೇಜು. ಅಲ್ಲಿ ೧೫೦೦ಕ್ಕು ಮಿಕ್ಕಿ ವಿದ್ಯಾರ್ಥಿಗಳು.ಹೆಚ್ಚಿನವರು  ಹಳ್ಳಿಗರು. ಅವರಲ್ಲಿ ಧಾಡಸಿತನ ಧಾರಾಳ. ಮುಗ್ದರು. ಆದರೆ ಬಹು ಬೇಗ ಇತರರ ಪ್ರಭಾವಕ್ಕೆ ಒಳಗಾಗುವರು.ನಾನು ಹೋದಕೂಡಲೆ ಗಮನಕ್ಕೆ ಬಂದಿದ್ದು ಪ್ರಾಂಶುಪಾಲರ ಹೆಸರಿನಲ್ಲಿನ ಸುಮಾರು ಎರಡು ಲಕ್ಷಕ್ಕೂ ಹೆಚ್ಚಿ ಹಣ. ದಾಖಲೆ ನೋಡಲಾಗಿ ಪ್ರತಿವರ್ಷ ಕಾಲೇಜು ಅಭಿವೃದ್ಧಿ ಶುಲ್ಕ ಎಂದು ತಲಾ ನೂರು ರೂಪಾಯಿ ಮತ್ತು ವಿದ್ಯಾರ್ಥಿ ಸಂಘಕ್ಕೆ ಅರವತ್ತು ರೂಪಾಯಿ ವಸೂಲಾಗುತಿತ್ತು. ಅಂದರೆ ಯಾವುದನ್ನೂ ನಗದು ಪುಸ್ತಕಕ್ಕೆ ತೆಗೆದು ಕೊಂಡಿಲ್ಲ ಹಾಗೂ ವೆಚ್ಚದ ಲೆಕ್ಕಪತ್ರ ಇಲ್ಲ. ಶಾಲಾಭಿವೃದ್ಧಿ ಸಮಿತಿ ಹಣ ೧.೫ ಲಕ್ಷ ಮತ್ತು ವಿದ್ಯಾರ್ಥಿ ಸಂಘದ ಹಣ ೭೫ ಸಾವಿರ. ಹಿಂದಿನವರು ಹಣ ಖರ್ಚು ಮಾಡಿದ್ದರಂತೆ. ಅವರ ವಿವೇಚನೆಗೆ ಅನುಸಾರ.
ನಾನು ಮಾಡಿದ ಮೊದಲ ಕೆಲಸವೆಂದರೆ ಸರಕಾರೇತರ ನಗದು ಪುಸ್ತಕದಲ್ಲಿ ಹಣ ನಮೂದಿಸಿದ್ದು. ನಂತರ   ಶಾಲಾಭಿವೃದ್ಧಿ ಸಮಿತಿಯ ಸಭೆ ಕರೆದು ವಿಷಯ ತಿಳಿಸಿ ಕಾಲೇಜು ಅಭಿವೃದ್ಧಿಯ ಮೊತ್ತವನ್ನು ಪ್ರಾಂಶುಪಾಲರು ಮತ್ತು ಅಭಿವೃದ್ಧಿ ಸಮಿತಿಯ ಅಧ್ಯಕ್ಷರ ಹೆಸರಲ್ಲಿ ಜಂಟಿಖಾತೆಯಲ್ಲಿ  ಬ್ಯಾಂಕಿನಲ್ಲಿ  ಇಡಲಾಯಿತು. ಕಾಲೇಜಿಗೆ ಅಗತ್ಯ ವಾದ ಬಾಬ್ತಿಗೆ ಸಿಬ್ಬಂದಿ ಮತ್ತು ಅಭಿವೃದ್ಧಿ ಸಮಿತಿಯ ಸಲಹೆ ಪಡೆದು ವೆಚ್ಚಮಾಡಲು ತೀರ್ಮಾನವಾಯಿತು. ಇದರಿಂದ ನಮ್ಮಕೆಲ ಉಪನ್ಯಾಸಕರಿಗೆ ಮತ್ತು  ಲಿಪಿಕ ನೌಕರರಿಗೆ ತುಸು ಅಸಮಾಧಾನ ವಾಯಿತು. ಇದುವರೆಗೂ ಪ್ರಾಂಶುಪಾಲರಿಗೆ ಇದ್ದ ಪೂರ್ಣ ಅಧಿಕಾರವನ್ನು ಸಾರ್ವ ಜನಿಕರೊಂದಿಗೆ ಹಂಚಿಕೊಂಡಾಗಿದೆ.. ಹಿಂದಿನವರ ವಿಧಾನವೆ ಸರಿಯಾಗಿತ್ತು. ಎಂದು ವಾದಿಸಿದರು.
ಹಣ ಸಾರ್ವ ಜನಿಕರಾದ್ದರಿಂದ ಹೊಣೆಯೂ ಅವರದೆ. ಅಲ್ಲದೆ ನಾವು  ಅವರು ಹೇಳಿದಂತೆ ವೆಚ್ಚ ಮಾಡುವುದಿಲ್ಲ. ಅವರಿಗೆ ತಿಳಿಸಿ ನಾವು ಖರ್ಚು ಮಾಡುವೆವು. ಅದರಿಂದ ದುರ್ಬಳಕೆಗೆ ಅವಕಾಶವಿಲ್ಲ. ಎಂದು ಸಮಜಾಯಿಷಿ ಹೇಳಿ ಸುಮ್ಮನಾಗಿಸಿದೆ. ಅಭಿವೃದ್ಧಿ ಸಮಿತಿಯವರಂತೂ ಈ ಪಾರದರ್ಶಕತೆಯನ್ನು ಮನಸಾರೆ ಮೆಚ್ಚಿದರು. ಅಗತ್ಯವಾದರೆ ತಾವೂ ಸಹಾಯ ಹಸ್ತ ನೀಡುವುದಾಗಿ ಭರವಸೆ ನೀಡಿದರು.
ಕೆಲವೆಎರಡೆ ತಿಂಗಳಲ್ಲೆ ಕಾಲೇಜು ದಿನಾ ಆಚರಣೆ ಬಂದಿತು. ಪ್ರತಿ ಹುಡಗರೂ ಪ್ರವೇಶ ಸಮಯದಲ್ಲೆ ಅದಕ್ಕೆ ಶುಲ್ಕ ನೀಡಿರುತಿದ್ದರು. ಲಕ್ಷದ ಮೇಲೆ ಸಂಗ್ರಹವಾದ ಮೊತ್ತವನ್ನು ಒಂದೆ ದಿನ ದಲ್ಲಿ ಚಿಂದಿ ಉಡಾಯಿಸುತಿದ್ದರು.ಅಲ್ಲಿ ಚುನಾಯಿತ ಪ್ರತಿನಿಧಿಗಳು ಇರಲಿಲ್ಲ. ಆದರೆ ತರಗತಿಯ ಪ್ರತಿನಿಧಿಗಳ ಸಭೆ ಕರೆದು ಕಾರ್ಯಕ್ರಮ ನಿಗದಿ ಮಾಡುವರು.ಅಲ್ಲಿನ ಪದ್ದತಿ ಅರಿಯಲು ಹಿಂದಿನ ವರ್ಷದ ಕಡತ ತರಿಸಿ ನೋಡಿದೆ.ಪ್ರತಿವರ್ಷ ಐದು ಸಮಿತಿ ಮಾಡುವರು. ಅದಕ್ಕೆ ಒಬ್ಬ ಉಪನ್ಯಾಸಕರ ಹಿರಿತನದಲ್ಲಿ ಐದುಜನ ವಿದ್ಯಾರ್ಥಿಪ್ರತಿನಿಧಿಗಳಿರುವರು.  ಹಣವನ್ನು ಸಮಿತಿಗಳಿಗೆ ಹಂಚಿಕೆ ಮಾಡಲಾಗುವುದು. ಅದನ್ನು ಅವರು ಬಳಸಿಕೊಂಡು ನಿಗದಿತ ಹೊಣೆ ನಿರ್ವಹಿಸ ಬೇಕಿತ್ತು ಅಯಾ ಸಮಿತಿಯದೆ ಎಲ್ಲ ಹೊಣೆ. ಅವನರನು ಯಾರೂ ಪ್ರಶ್ನಿಸುವಹಾಗಿರಲಿಲ್ಲ.  ನನಗೆ ಈ ರೀತಿಯ ಸಂಪೂರ್ಣ ಸ್ವಾತಂತ್ರ್ಯ  ಸರಿಕಾಣಲಿಲ್ಲ. ಸಾಮೂಹಿಕ ಹೊಣೆ ಗಾರಿಕೆ ಇರಬೇಕು ಜತೆಗೆ ಮಾಡಿದ ಖರ್ಚಿಗೆ ಉತ್ತರದಾಯಿತ್ವ ಇರಬೇಕೆನ್ನುವುದು ನನ್ನ ನಂಬಿಕೆ.ವಿದ್ಯಾರ್ಥಿಗಳ ಹಣ ಅವರು ಹೇಗೆ ಬೇಕಾದರೂ ಖರ್ಚುಮಾಡಲಿ ಎನ್ನುವುದು ಬೆಜವಾಬ್ದಾರಿ ಎನಿಸಿತು. ಅಲ್ಲದೆ ಸಾವಿರಾರು ಜನರ ಹಣ ವನ್ನು ಐದಾರು ಜನರು ಮನ ಬಂದತೆ ತೀರ್ಮಾನ ತೆಗೆದುಕೊಂಡು ಮಾಡುವ ವೆಚ್ಚ ಉಚಿತ ಎನಿಸಲಿಲ್ಲ.
ಎಲ್ಲ ತರಗತಿಗಳ ಪ್ರತಿನಿಧಿಗಳನ್ನು ಸಭೆ ಸೆರಿಸಲಾಯಿತು. ಪ್ರತಿತರಗತಿಗೆ ಒಬ್ಬವಿದ್ಯಾಥಿ ಮತ್ತು ಒಬ್ಬ ವಿದ್ಯಾರ್ಥಿನಿಯರನ್ನು ಅವ್ಹಾನಿಸಲಾತು ಆಹಾರ, ಕ್ರೀಡೆ, ಮನರಂಜನೆ , ರಂಗ ಮಂಟಪ  ಮತ್ತು ಸ್ವಾಗತ ಸಮಿತಿಗಳನ್ನು ಹಿಂದಿನಂತೆಯೆ ರಚಿಸಲಾಯಿತು. ಆದರೆ ಅವರೆಲ್ಲರೂ ಏನು ಮಾಡ ಬೇಕೆನ್ನುವುದನ್ನು ಸರ್ವ ಸಭೆಯಲ್ಲಿ ನಿರ್ಧರಿಸಿದೆವು. ಎಲ್ಲಕ್ಕಿಂತ ಹೆಚ್ಚಾಗಿ ಪ್ರಂಶುಪಾಲರು ಮತ್ತು ಹಿರಿಯ ಇಬ್ಬರು ಉಪನ್ಯಾಸಕರ ಸಮಿತಿಯು ಮೇಲ್ವಿಚಾರಣೆ ನಡೆಸಬೇಕು ಹಾಗೂ ಎಲ್ಲ ಯೋಜನೆಗಳೂ ಅವರಿಂದ ಮಂಜೂರಾತಿ ಪಡೆಯಬೇಕು ಕೊನೆಯಲ್ಲಿ ಲೆಕ್ಕ ಪತ್ರಗಳನ್ನು ಪರಿಶೀಲಿಸ ಬೇಕೆಂದು ನಿರ್ಧರಿಸಲಾಯಿತು.ಸುಮಾರು ಮೂರು ಗಂಟೆಗಳಕಾಲ ನಡೆದ ಸಭೆಯಲ್ಲಿ ಮುಖ್ಯವಾಗಿ ರಂಗ ಮಂಟಪದ ವೆಚ್ಚ ಅತಿ ಎನಿಸಿತು. ಸುಮಾರು ಮೂವತ್ತು ಸಾವಿರ ರೂಪಾಯಿ ಅದಕ್ಕೆ ಖರ್ಚು ಹಾಕಿದ್ದರು. ಏಕೆ ಅಷ್ಟು ಖರ್ಚು ಎಂದಾಗ ಕಾಲೇಜಿನ ಮುಂದೆಯೆ ಷಾಮಿಯಾನ ರಂಗ ಮಂಟಪ ಮತ್ತು ಮತ್ತು ಕುರ್ಚಿಗಳಿಗಾಗಿ ಅಷ್ಟು ಹಣ ಬೇಕೆ ಬೇಕು ಎಂದರು.
ನನಗೆ ಅದು ವ್ಯರ್ಥವಾದ ಖರ್ಚು ಎನಿಸಿತು. ಕಾಲೇಜಿನ ಹತ್ತಿರದಲ್ಲೆ ಒಂದು ಆಧುನಿಕ ಕಲ್ಯಾಣ ಮಂಟಪವಿದೆ. ಅದರ ಮಾಲಕರು ನಮ್ಮ ಭಿವೃದ್ಧಿಸಮಿತಿಯ ಸದಸ್ಯರು. ಅಲ್ಲಿ ಎಲ್ಲ ಸೌಕರ್ಯವಿದೆ. ಅಲ್ಲೆ ಯೇ ಏಕೆ ನಮ್ಮ ಕಾಲೇಜು ದಿನಾಚರಣೆ ಮಾಡ ಬಾರದು ಎಂಬ ಯೋಚನೆ ಬಂತು.ಹಿರಿಯ ಉಪನ್ಯಾಸಕರಜೊತೆ ಹೋಗಿ ಅವರನ್ನು ಸಂಪರ್ಕಿಸಿದೆವು. ಖಾಲಿ ಇರುವ ದಿನ ಉಚಿತ ವಾಗಿ ಕೊಡುವುದಾಗಿ ತಿಳಿಸಿದರು.ವಿದ್ಯುತ್ ಮತ್ತು ಶುಚಿ ಮಾಡುವ ವೆಚ್ಚ ನೀಡ ಬೇಕೆಂದು ತಿಳಿಸಿದರು. ಇದರಿಂದ ನಮಗೆ ಕನಿಷ್ಟ ೨೫೦೦೦ ರೂಪಾಯಿ ಉಳಿತಾಯವಾಯಿತು.
ಮತ್ತೆ ಸಭೆಕರೆದು ಎಲ್ಲರಿಗೂ ವಿಷಯತಿಳಿಸಿ ಕಲ್ಯಾಣ ಮಂಟಪದಲ್ಲಿಯೆ ನಡೆಸಲು ತೀರ್ಮಾನಿಸಲಾಯಿತು.. ನಂತರ ಅತಿಥಿಗಳ ಪ್ರಶ್ನೆ ಬಂದಿತು. ವಿದ್ಯಾರ್ಥಿಗಳು ಸಿನಿಮಾ ನಟರೊಬ್ಬರನ್ನುಮತ್ತು ಮಿಮಿಕ್ರಿ ದಯಾನಂದರನ್ನು  ಕರೆಸಲು ಬಯಸಿದರು. ನಾನು ಜೊತೆಗೆ ಸಾಹಿತಿಯೊಬ್ಬರನ್ನೂ ಕರೆಸಲು ಸಲಹೆ ಮಾಡಿದೆ. ಅದಕ್ಕೆ ಎಲ್ಲರೂ ಒಪ್ಪಿದರು..ಆತಿಥಿಗಳಿಗಾಗಿ ೧೦೦೦ರೂವೆಚ್ಚ ಮಾಡಲು ನಿರ್ಧರಿಸಲಾಯಿತು. ಆ ಹೊಣೆಯನ್ನು ಸಂಬಂಧಿಸಿದ ಸಮಿತಿಗೆ ಒಪ್ಪಿಸಿದೆವು. ಮೂರುದಿನದಲ್ಲಿ ಅವರು ಬಂದ ಹಾದಿಗೆ ಸುಂಕವಿಲ್ಲ ವೆಂದು ಬಂದರು.ಅವರ ಪ್ರಕಾರ ಅತಿಥಿಯಾಗಿ ಬರಲುಶುಲ್ಕ ಬಯಸಿದ್ದರು ಜೊತೆಗೆ ಮಿಮಿಕ್ರಿ ಕಾರ್ಯಕ್ರಮಕ್ಕೆ ಒಂದು ತಂಡವೆ ಬರುವುದಾಗಿಯೂ ಅವರ ಗೌರವ ಸಂಭಾವನೆ ಮತ್ತು ಪ್ರಯಾಣ ವೆಚ್ಚ ನಾವು ನಿಗದಿ ಪಡಿಸಿದ ಹಣಕ್ಕಿಂತ ಎರಡು ಪಟ್ಟು ಆಗುತಿತ್ತು.ಅಂದರೆ ನಮ್ಮಲ್ಲಿರುವ ಹಣದ ಅರ್ಧಕ್ಕೂ ಹೆಚ್ಚು ಭಾಗ ಅತಿಥಿಗಳಿಗೆ ಮೀಸಲಿಡಬೇಕಾಯಿತು.ಈ ರೀತಿಯವೆಚ್ಚ ವ್ಯರ್ಥವೆಂದು ಅವರಿಗೆ ಮನವರಿಕೆ ಮಾಡಿ ಖ್ಯಾತ ಜನಪದಗಾಯಕರೊಬ್ಬರನ್ನು ಹಾಗೂ ಸಾಹಿತಿಗಳೊಬ್ಬರನ್ನೂ ಅತೀಥಿಗಳಾಗಿ ಕರೆಯಲು ತೀರ್ಮಾನಿಸಿದೆವು.ಅದರಂತೆ ಬಿ.ಆರ್‌. ಲಕ್ಷ್ಮಣರಾವ್ ಮತ್ತು ಪಿಚ್ಚಳ್ಳಿ ಶ್ರೀನಿವಾಸ ಅವರು  ಬರಲು ಒಪ್ಪಿಕೊಂಡರು.ದಿನಾಂಕವನ್ನು ನಿಗದಿ ಪಡಿಸಿ ಆಮಂತ್ರಣ ಪತ್ರಿಕೆ ಮುದ್ರಣಕ್ಕೆ ನೀಡಲಾಯಿತು.
ಈ ಬಾರಿ ವಿದ್ಯಾರ್ಥೀಗಳಿಗೆ ಉಪಹಾರದ ಬದಲು ಊಟವನ್ನ ನೀಡಲು ಜತೆಗೆ ಐಸ್‌ಕ್ರೀಮ್‌ ಕೊಡಬಹುದು ಎನಿಸಿತು. ಹೇಗಿದ್ದರೂ ಹಣ ಇತ್ತು. ಅಲ್ಲದೆ ವಿವಿಧ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಉತ್ತಮವಾದ ಬಹುಮಾನಕೊಡಲೂ ಸಾಧ್ಯವಿತ್ತು. ಅದಕ್ಕಾಗಿ ಸಿಟಿ ಮಾರುಕಟ್ಟೆಯಲ್ಲಿನ ಸಗಟು ವ್ಯಾಪಾರಿಗಳ ಹತ್ತಿರ ಖರೀದಿಗೆ ಹೋದೆವು.ಮೊದಲು ಸಂಬಂಧಿಸಿದ ಉಪನ್ಯಾಸಕರು ಒಬ್ಬರೆ ಈ ಕಾರ್ಯ ನಿರ್ವಹಿಸುತಿದ್ದರು. ಆದರೆ ಈಸಲ ಇಂಗ್ಲಿಷ್‌ ಉಪನ್ಯಾಸಕರು , ಸಮಿತಿಯ ಸದಸ್ಯರು ಜತೆಗೆ ನಾನೂ ಸೇರಿ ಎಲ್ಲ ಕಡೆ ಜಾಲಾಡಿ ಕಣ್ಣಿಗೆ ಕಾಣುವಂತಿರುವ ಫಲಕಗಳನ್ನು ಕರಂಡಗಳನ್ನೂ ಬಹುಮಾನವಾಗಿ ಕೊಡಲು ಆರಿಸಿದೆವು. ಅದನ್ನು ಕಂಡ ನಮ್ಮ ಸಿಬ್ಬಂದಿ ಈ ವರೆಗೆ ಇಂಥಹ ಬಹುಮಾನ ನೀಡಲೆ ಇಲ್ಲ ಎಂದು ಬೆರಗಾದರು.
ಅತ್ಯತ್ತಮ ಉಪಹಾರ ಮತ್ತು ಬಹುಮಾನ ನೀಡಿದರೂ ಇತರೆ ಎಲ್ಲ ಖರ್ಚು ಕಳೆದರೂ ೨೦-೨೫ ಸಾವಿರ ಉಳಿತಾಯವಾಗುವದೆಂಬ ಅಂದಾಜು ಇತ್ತು ಕಾರ್ಯ ಕ್ರಮ .ಇನ್ನೂ ಒಂದು ವಾರವಿತ್ತು. ಒಂದುದಿನ ಕಾಲೇಜು ಪ್ರಾರಂಭ ವಾಗುತ್ತಲೆ ವಿದ್ಯಾರ್ಥಿಗಳ ಗುಂಪು ಗೂಡಿ ಘೋಷಣೆ ಕೂಗತೊಡಗಿದರು. ಹೋಗಿ ನೋಡಲಾಗಿ ಅವರು ಕಾಲೇಜು ದಿನಾಚರಣೆಯ ವ್ಯವಸ್ಥೆಯ ಬಗ್ಗೆ ಅಸಮಾಧಾನ ಗೊಂಡಿದ್ದರು.
ಕಾಲೇಜು ದಿನಾಚರಣೆಯನ್ನು ಹಿಂದಿನಂತೆ ಕಾಲೇಜಿನಲ್ಲೆ ಪೆಂಡಾಲು ಹಾಕಿ ಮಾಡ ಬೇಕು ,ಕಲ್ಯಾಣ ಮಂಟಪದಲ್ಲಿ ಮಾಡಿದರೆ ಅವಮಾನ, ಎಂದು ವಾದಿಸಿದರು.ಅವರ ಬೇಡಿಕೆಯನ್ನು ಪರಿಶೀಲಿಸಲು ಪ್ರತಿನಿಧಿಗಳ ಮತ್ತು ಉಪನ್ಯಾಸಕರ ಸಭೆ ಸೇರಿತು.
ಇದು ಬಹಳ ಸಂಧಿಗ್ದ ಸಂದರ್ಭ. ಸಾವಿರಾರು ಜನರನ್ನು ಎದುರುಹಾಕಿಕೊಂಡು ಕಾರ್ಯಕ್ರಮ ಮಾಡಲಾಗದು. ಆದರೆ ಇಗಾಗಲೇ ಆಮಂತ್ರಣ ಪತ್ರಿಕೆ ಮುದ್ರಣವಾಗಿದೆ. ಹಿರಿಯ ಉಪನ್ಯಾಸಕರ ಸಲಹೆ ಕೇಳಿದೆ. ಎಲ್ಲರ ಗಮನಕ್ಕೆ ತಂದು ತೀರ್ಮಾನವಾದ ಮೇಲೂ ಕೊನೆ ಗಳಿಗೆಯಲ್ಲಿ ಏಕೆ ವಿರೋಧ ಎಂದು ಅರ್ಥವಾಗಲಿಲ್ಲ. ಇದು ಒಂದಿಬ್ಬರು ಉಪನ್ಯಾಸಕರ ಕೈ ಚಳಕ ಎಂದು ಗೊತ್ತಾಯಿತು.ಅವರು ಹುಡುಗರಿಗೆ ನಿಮ್ಮ ಹಣ , ನೀವು ಮನ ಬಂದಂತೆ ಖರ್ಚು ಮಾಡಬುದು. ಅದನ್ನು ಬೇಡ ಎನ್ನಲು ಇವರು ಯಾರು? ನೀವು ಸುಮ್ಮನೆ ಇದ್ದರೆ ದಬ್ಬಾಳಿಕೆ ಹೆಚ್ಚಾಗುವುದು. ಈಗ ಪ್ರತಿಭಟಿಸಿ. ಎಂದು ಪ್ರಚೋದನೆ ಮಾಡಿದ್ದರು.ಹಣ ಹೇಗೂ ಇದೆ ಯಾಕೆ ಖರ್ಚು ಮಾಡ ಬಾರದು? ಎಂದು ಅವರ ವಾದ.ಈಗಾಗಲೆ ತಹಬದಿಗೆ ಬರುತ್ತಿರುವ ಕಾಲೇಜಿನ ಮಕ್ಕಳನ್ನು ದಾರಿ ತಪ್ಪಿಸುವ ಹುನ್ನಾರ ಇದಾಗಿತ್ತು.
ಸಭೆ ಸೇರಿತು. ವಿಷಯ ಏನೆಂದು ಕೇಳಿದದಾಗ ಒಂದಿಬ್ಬರು ವಿದ್ಯಾರ್ಥಿಗಳು ಎದ್ದು ನಿಂತು ಸಮಾರಂಭ ಕಾಲೇಜಿನ ಆವರಣದಲ್ಲಿ ಆಗಬೇಕು. ಎಂದರು. ಅವರ ಮಾತನೆಲ್ಲ ಸಾವಧಾನದಿಂದ ಲಿಸಿದೆ. ನಂತರ ಹಿಂದಿನ ಸಭೆಯ ನಡವಳಿಗಳನ್ನು ಓದಲು ಹಿರಿಯ ಉಪನ್ಯಾಸಕರಿಗೆ ಹೇಳಿದೆ. ಅದರಲ್ಲಿ ಸ್ಪಷ್ಟವಾಗಿ ಕಾಲೇಜು ದಿನಾಚರಣೆ ಸಮಾರಂಭವನ್ನು ಕಲ್ಯಾಣ ಮಂಟಪದಲ್ಲಿ ಮಾಡ ಬೇಕೆಂದು ದಾಖಲಾಗಿತ್ತು.
ಅದಕ್ಕೆ ಹಾಜರಿದ್ದ ಎಲ್ಲರ ಸಹಿ ಇತ್ತು. ಈಗ ಪ್ರತಿಭಟಿಸುತಿದ್ದವರೂ ಸಹಿ ಮಾಡಿದ್ದರು. ಆಗ ಎಲ್ಲರೂ ಒಪ್ಪಿ ಕೊನೆ ಕ್ಷಣದಲ್ಲಿ ಬದಲಾಯಿಸಲು ಕಾರಣ ಏನು?ಇದರಿಂದ ಅನುಕೂಲವಾಗಿದೆಯೆ ವಿನಃ ತೊಂದರೆ ಯಾಗಿಲ್ಲ.ಮತ್ತೆ ಯಾಕೆ ಪ್ರತಿರೋಧ ಎಂದು, ಎಂದುಕೇಳಿದೆ. ಎಲ್ಲರೂ ಸುಮ್ಮನೆ ಕುಳಿತು. ಕೊನೆಗ ಒಬ್ಬರು ಎದ್ದುನಿಂತು ನಿಜ ನಾವು ಒಪ್ಪಿ ಸಹಿ ಮಾಡಿದೆವು. ಆದರೆ ಈಗ ಬಹಳ ವಿದ್ಯಾರ್ಥಿಗಳಿಗೆ ಇದು ಸಮ್ಮತವಿಲ್ಲ , ಆದ್ದರಿಂದ ಕಾರ್ಯಕ್ರಮದ ಸ್ಥಳ ಬದಲಾಯಿಸಿ, ಹೆಚ್ಚಿಗೆ ವೆಚ್ಚವಾರೂ ಸರಿ ನಾವು ಭರಿಸಲು ಸಿದ್ಧ ಎಂದರು.
ಪರಿಸ್ಥಿತಿ ಕೈ ಮೀರಿದೆ ಎನಿಸಿತು. ಸಭೆಯಲ್ಲಿ ಸರ್ವರೂ ತೀರ್ಮಾನೆ ತೆಗೆದುಕೊಂಡ ಮೇಲೆ ಅದರಂತೆ ನಡೆಯಬೇಕಾದುದು ನ್ಯಾಯಸಮ್ಮತ. ಅಲ್ಲದೆ ಈಗಾಗಲೆ ಆಮಂತ್ರಣ ಪ[ತ್ರಿಕೆ ಮುದ್ರಿತವಾಗಿದೆ. ಕೆಲವರಿಗೆ ಹಂಚಿಯೂ ಆಗಿದೆ. ಈಗ ಸಕಾರಣವಿಲ್ಲದೆ ಬದಲಾವಣೆ ತರುವುದು ಶೋಭೆಯಲ್ಲ. ಅದು ಪ್ರಾಂಶುಪಾಲರ ದಕ್ಷತೆಯ ಬಗ್ಗೆ ಶಂಕೆ ಮೂಡಿಸುವುದು.  ಆದರೆ ಇದು ಪ್ರಜಾಪ್ರಭುತ್ವ . ಬಹುಮತಕ್ಕೆ ಮನ್ನಣೆ ಸಿಗಬೇಕು.ನೀವೆಲ್ಲ ಒಂದು ಕೆಲಸ ಮಾಡಿ. ನಮ್ಮ ಗೆಳೆಯರಿಗೆ ಹೇಳಿ.ಅವರ ಮಾತಿನಂತೆ ಕಾರ್ಯಕ್ರಮದ ಸ್ಥಳ ಬದಲಾಗ ಬೇಕಾದರೆ  ಹೊಸ ಆಮಂತ್ರಣ ಪತ್ರಿಕೆ ಮಾಡಿಸಬೇಕು.
ಅದಕ್ಕೇನು ಸಾರ್‌ ಮಾಡಿಸಿದರಾಯಿತು ಎಂದು, ಖುಷಿಯಿಂದ ಒಬ್ಬಿಬ್ಬ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹೇಳಿದರು..
ಅದಕ್ಕೆ ನನ್ನದೇನೂ ಅಭ್ಯಂತರವಿಲ್ಲ. ಬರಿ ಸ್ಥಳ ಮಾತ್ರ ಬದಲಾಯಿಸಿದರೆ ಆಗದು. . ಅದರಲ್ಲಿ ಪ್ರಾಂಶುಪಾಲರ ಹೆಸರೂ ಇರಬಾರದು. ನಾನು ಈ ವರೆಗೆ ಎಂದೂ ಕೊಟ್ಟ ಮಾತಿಗೆ ತಪ್ಪಿ ನಡೆಯುವವನಲ್ಲ. ಆದರೆ ಈಗ ನಿಮ್ಮೆಲ್ಲರ ಒತ್ತಾಯಕ್ಕೆ ಸರ್ವಸಮ್ಮತವಾದ ತೀರ್ಮಾನ ಬದಲಾಯಿಸ ಬೇಕಾಗಿದೆ..ಅದರಂತೆ ಮಾಡೋಣ. ಆದರೆ ನಾನು ಇದರಲ್ಲಿ ಭಾಗಿಯಾಗುವುದಿಲ್ಲ. ನನಗೆ ಹೇಗೂ ನಿವೃತ್ತನಾಗಲು ಇನ್ನು ನಾಲಕ್ಕೆ ತಿಂಗಳಿದೆ. ರಜೆಯ ಮೇಲೆ ಹೋಗುವೆ. ಮತ್ತೆ ಕಾಲೇಜಿಗೆ ಬರುವುದಿಲ್ಲ. ಹಿರಿಯ ಉಪನ್ಯಾಸಕರ ನೇತೃತ್ವದಲ್ಲಿ ಹೇಗೆ ಬೇಕಾದರೂ ನಡೆಸಿ ನನಗೆ ಒಪ್ಪಿಗೆಇದೆ.. ವಿದ್ಯಾರ್ಥಿಗಳ ಸಂತೋಷ ಮುಖ್ಯ. . ಈ ವಿಷಯವನ್ನು ನಿಮ್ಮ ಗೆಳೆಯರಿಗೆ ಹೇಳಿ ನಿಮ್ಮ ಅಭಿಪ್ರಾಯ ತಿಳಿಸಿದರೆ ನನಗೆ ಇಂದೆ ಕೆಲಸದ ಕೊನೆಯ ದಿನ.’ ಇಷ್ಟು ಹೇಳಿ ನಾನು ಸುಮ್ಮನೆ ಕುಳಿತೆ
ಸಭೆಯಲ್ಲಿ ಎಲ್ಲರೂ ಗರ ಬಡಿದಂತೆ ಕುಳಿತಿದ್ದರು.ನಂತರ ತರಗತಿಯ ಉಪನ್ಯಾಸಕರನ್ನು ಕುರಿತು ಹೇಳಿದೆ. ನೀವು ತರಗತಿಯ ಪ್ರತಿನಿಧಿಯ ಜತೆ ಹೋಗಿ ಮಕ್ಕಳಿಗೆ ವಿಷಯ ತಿಳಿಸಿ. ಇದಕ್ಕಾಗಿ ಹರತಾಳ , ಚಳುವಳಿ ಅಗತ್ಯವಿಲ್ಲ.ಅವರ ಮಾತೆ ಗೆಲ್ಲಲಿ. ದಯವಿಟ್ಟು ಅರ್ಧಗಂಟೆಯಲ್ಲಿ ಈ ಕೆಲಸ ಮುಗಿಸಿ, ಎಂದೆ.
ಯಾರೂ ತಗ್ಗಿಸಿದ ತಲೆ ಎತ್ತಲಿಲ್ಲ. ಜೋರಾಗಿ ಮಾತನಾಡುತಿದ್ದ ವಿದ್ಯಾರ್ಥಿ ನಾಯಕರಿಗೆ ಹೇಳಿದೆ. ನಿಮ್ಮ ಬೇಡಿಕೆ ನೆರವೇರಿದೆ. ಹೋಗಿ ಎಲ್ಲರಿಗೂ ತಿಳಿಸಿ., ಎಂದೆ.
ಬೇಡ , ಸಾರ್‌. ನೀವಿಲ್ಲದೆ ನಾವು ಸಮಾರಂಭ ಮಾಡುವುದಿಲ್ಲ. ರಜೆ ಹಾಕ ಬೇಡಿ.ಮೊದಲಿನಂತೆಯೆ ಕಾರ್ಯಕ್ರಮ ನಡೆಯಲಿ. ಯಾರೂ ಪ್ರತಿಭಟಿಸುವುದಿಲ್ಲ. ಅದರ ಹೊಣೆ ನಮಗಿರಲಿ.ಯಾರೋ ಹೇಳಿದ ಮಾತು ಕೇಳಿ ಹೀಗಾಯಿತು. ದಯವಿಟ್ಟು ಕ್ಷಮಿಸಿ, ಎಂದು ತಲೆ ತಗ್ಗಿಸಿ ನುಡಿದರು.
ಇದು ನಿಮ್ಮ ಅಭಿಪ್ರಾಯ, ಎಲ್ಲರೂ ಏನೆನ್ನುವರು? ಎಂದೆ.
“  ಮೊದಲಿನಂತೆಯೆ ಕಾರ್ಯಕ್ರಮ ನಡೆಯಲಿ ’ ಎಂದು ಎಲ್ಲರೂ ಒಕ್ಕೊರಲಲ್ಲಿ ಹೇಳಿದರು. ಅದಕ್ಕೆ ಉಪನ್ಯಾಸಕರೂ ದನಿ ಸೇರಿಸಿದ್ದರು.
ಕಾರ್ಯಕ್ರಮ ಅತಿ ಯಶಸ್ವಿಯಾಯಿತು.ಸಮಾರಂಭದಲ್ಲಿ ಮಾತನಾಡಿದ ಶಾಸಕರು ಪ್ರಾಂಶುಪಾಲರು ಬಹುಗಟ್ಟಿ. ತಮ್ಮ ಮಾತೆ ನಡೆಸಿದರು  ಎಂದರು. ಇದೆಲ್ಲವೂ ಅವರ ಗಮನಕ್ಕೆ ಬಂದಿರುವುದು ಸ್ಪಷ್ಟವಾಗಿತ್ತು. ಅದು ಹೊಗಳಿಕೆಯೋ, ತೆಗಳಿಕೆಯೋ ತಿಳಿಯಲಿಲ್ಲ.ಇಷ್ಟೆಲ್ಲ  ಅದ್ಧೂರಿಯಾಗಿ ನಡೆದರೂ ಇನ್ನೂ ಇಪ್ಪತೈದು ಸಾವಿರ ರೂಪಾಯಿ ಉಳಿತಾಯವಾಗಿತ್ತು . ಅದೆ ಹಣದಿಂದ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿಗಾಗಿ ಆಕ್ವಾಗಾರ್ಡ ಹಾಕಿಸಿ ಶುದ್ಧವಾದ ನೀರು ಸದಾ ನಾಲಕ್ಕು ಶುದ್ಧೀಕರಿಸಿದ ನಲ್ಲಿಗಳಲ್ಲಿ ಬರುವಂತೆ ವ್ಯವಸ್ಥೆಯಾಯಿತು.ಅದೂ ಈಗಲೂ  ಇದೆ.


No comments:

Post a Comment