Monday, July 15, 2013

ಆರರಿಂದ ಅರವತ್ತು -ಸರಣಿ- ನಡೆದಂತೆ ನುಡಿ

ನಿಯಮ ಎಲ್ಲ್ರರಿಗೂ ಒಂದೆ
ನಾನು ಕೆಲಸವನ್ನು ನಿಯತ್ತಿನಿಂದ ಮಾಡುವುದು ಅದರಲ್ಲೂ ಪರೀಕ್ಷೆಗಳನ್ನು ಶಿಸ್ತಿನಿಂದ ನಡೆಸುವುದು ಅನೇಕರಿಗೆ ಅಪಹಾಸ್ಯದ ವಸ್ತುವಾಗಿತ್ತು, ಓಹೋ! ಊರಲ್ಲಿ ಬೇರೆ ಯಾರಿಗೂ ಇಲ್ಲದ ರೂಲ್ಸ ಇವರೊಬ್ಬರಿಗೆ, ಒಣ ನಿಷ್ಠುರ ಕಟ್ಟಿಕೊಳ್ಳುವರು. ಇವರಿಗೆ ರಾಷ್ಟ್ರ ಪ್ರಶಸ್ತಿ ಕೊಡುವರು. ನಾಳೆ ಏನಾದರೂ ಹೆಚ್ಚು ಕಡಿಮೆಯಾದರೆ ಇಲಾಖೆ ಇವರ ಸಹಾಯಕ್ಕೆ ಬರುವುದೇ?  ಮುಂತಾದ ಮಾತುಗಳು ಹಿಂದೆ ಮುಂದೆ ಆಡುವವರು ಇದ್ದರು. ಆದರೆ ನಾನು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ನನ್ನ ಕರ್ತವ್ಯ ನಾನು ಮಾಡುತಿದ್ದೆ. ಆದರೆ ನನ್ನ ಕೆಲಸಕ್ಕೆ ಗೌರವ ಪ್ರಶಸ್ತಿಗಳು ಬಾರದಿದ್ದರೂ ಇಲಾಖೆಯ ಅಭಿಮಾನ ದೊರಕಿತ್ತು.ನನಗೆ ಹೃದಯಾಘಾತವಾದಾಗ ಜಯದೇವ ಅಸ್ಪತ್ರೆಯಲ್ಲಿ ಶಸ್ತ್ರ ಕ್ರಿಯೆಗೆ ಒಳಗಾಗಿದ್ದೆ. ಸುಮಾರು ೧ಲಕ್ಷದವರೆಗೆ ಖರ್ಚಾಯಿತು. ಮಗ ಅದೆ ತಾನೆ ಕೆಲಸಕ್ಕೆ ಸೇರಿದ್ದ. ಆದರೂ ಹೇಗೋ ನಿಭಾಯಿಸಿದೆವು, ಆ ಸಮಯದಲ್ಲಿ ಇಲಾಖೆಯ ಔದಾರ್ಯ ಮನ ಮುಟ್ಟಿತು. ನನಗೆ ಆಸ್ಪತ್ರೆಗೆ ಫೋನು ಮಾಡಿ ಆರೋಗ್ಯವಿಚಾರಿಸಿದರು ಜತೆಗೆ ನನ್ನ ಮಗ ಕಾರವಾರದಲ್ಲಿ ಕೆಲಸ ಮಾಡುತಿದ್ದುದರಿಂದ ಈ ಸಮಯದಲ್ಲಿ ಅವನ ಜತೆಗೆ ಇರುವುದು ಸೂಕ್ತವೆಂದು ನಗರದ ಕಾರವಾರದ ಹತ್ತಿರವೆ ಇರುವ ಹೈವೇನಲ್ಲೆ ಇದ್ದ ಕಾಲೇಜಿಗೆ ವರ್ಗ ಮಾಡಿ ಅದೇಶವನ್ನು ಅಸ್ಪತ್ರೆಗೆ ಕಳುಹಿಸಿದರು.ನಿರ್ದೇಶಕರೆ ವೈಯುಕ್ತಿಕ ಆಸಕ್ತಿ ತೆಗೆದು ಕೊಂಡುದುದರಿಂದ ಇದು ಸಾಧ್ಯವಾಯಿತು ಒಳ್ಳೆಯ ಕೆಲಸಗಾರನಿಗೆ ಆಪತ್ತಿನಲ್ಲಿ ಆಗ ಬೇಕೆಂಬ ಅವರ ಸಹೃದಯತೆಯೆ ಅದಕ್ಕೆ ಕಾರಣ.. ಒಂದು ವರ್ಗಾವಣೆ ಬೇಕೆಂದರೆ ವಿಧಾನ ಸೌಧದ ಕಂಬ ಕಂಬ ಸುತ್ತಬೇಕಾದ, ಹಣ ವನ್ನು ನೀರಿನಂತೆ ಚೆಲ್ಲ ಬೇಕಾದ ವ್ಯವಸ್ಥೆಯಲ್ಲಿ ಮಲಗಿದಲ್ಲಿಯೆ  ಆದೇಶದ ಪ್ರತಿ ಬರುವುದೆಂದರೆ ಸಂಬಂಧಿಸಿದವರ ವಿಶ್ವಾಸವೆ ಕಾರಣ. ಅದರ ಜೊತೆಗೆ ವೈದ್ಯಕೀಯ ವೆಚ್ಚದ ಬಿಲ್ಲನ್ನು  ಮಂಜೂರು ಮಾಡಲು ಜಿಲ್ಲಾ ಮಟ್ಟದಲ್ಲಿ ತುಸು ಮಿಜಿಮಿಜಿ ಮಾಡಿದಾಗ ವಿಷಯ ತಿಳಿದು ಅವರ ಮೂಲಕ  ಕಳುಹಿಸುವ ಬದಲು ನೇರವಾಗಿ ಇಲಾಖೆಗೆ ಸಲ್ಲಿಸಲು ತಿಳಿಸದರು. ಜತೆಗೆ ಮೂರೆ ದಿನದಲ್ಲಿ ನನಗೆ ಹಣ ದೊರೆಯುವ ವ್ಯವಸ್ಥೆಯಾಯಿತು.  ಮನೆಯವರೆಲ್ಲಾ ಸದಾ ನನ್ನ ನಿಯತ್ತಿನ ಕೆಲಸದಿಂದ ಆಗೀಗ ತೊಂದರೆಗೆ ಒಳಗಾದವರೆ. ಎಲ್ಲರಂತೆ ನೀವೂ ಇರಿ ಎಂದು ಅವರೇನೂ ಹೇಳಿರಲಿಲ್ಲ. ಆದರೆ ಆಗೀಗ ಭಾವನೆ ಬಂದಿರಬಹುದು. ಆದರೆ ಆಪತ್ತಿನಲ್ಲಿ ಆದ ಸಹಾಯದಿಂದ ಅವರಿಗೂ ಒಳ್ಳೆತನಕ್ಕೆ , ಪ್ರಾಮಾಣಿಕ ಕೆಲಸಕ್ಕೆ ಬೆಲೆ ಇದೆ ಎಂದು ಮತ್ತೊಮ್ಮೆ ಖಚಿತವಾಯಿತು.  ಆದ್ದರಿಂದ ಆಸ್ಪತ್ರೆಯಿಂದ ಬಿಡುಗಡೆಯಾದ ಮೇಲೆ ಮನೆಗೆ ಹೋದ ನಾನು ವಿಶ್ರಾಂತಿಯ ಅವಧಿ ಮುಗಿತ  ತಕ್ಷಣವೆ ಸೀದಾ ಹೊಸ ಜಾಗದಲ್ಲಿ ವರದಿ ಮಾಡುವಂತಾಯಿತು. ಕೆಜಿಎಫ್‌ ಕಾಲೆಜು ಬಿಡುವುದೆಂದರೆ ನನಗೂ ಬೇಸರ.ಸಹೋದ್ಯೋಗಿಗಳ  ಸಹಕಾರ ಮತ್ತು ವಿದ್ಯಾರ್ಥಿಗಳ ಮಮತೆ ನಾನು ಮರೆಯುವಹಾಗಿರಲಿಲ್ಲ. ಕೆಲವರಂತೂ ನಾವು ನಿಮ್ಮ ಮಗನಂತೆ ನೋಡಿಕೊಳ್ಳುತ್ತೇವೆ. ಅಲ್ಲಿ ಒಬ್ಬ ಮಗನಿದ್ದರೆ ಇಲ್ಲಿ ನಾವು ಹಲವರಿದ್ದೇವೆ ಇಲ್ಲಿಯೆ ಇದ್ದು ಬಿಡಿ ಎಂದು ಗೋಗರೆದರು ಆದರೆ ಅದೇಶ ಬಂದಿತ್ತು  . ಈಗ ಹೋದರೂ ಮನೆ ತೆಗೆಯುವುದಿಲ್ಲ. ಹೇಗಿದ್ದರೂ ಸ್ವಂತ ಮನೆ ಇದೆ, ನಿವೃತ್ತನಾದ ಮೇಲೆ ಇಲ್ಲಿಯೆ ಬಂದು ನೆಲಸುವೆ ಎಂದು ಸಮಾಧಾನ ಮಾಡಿದೆ.ಭಾರವಾದ ಹೃದಯದಿಂದ ವಿದಾಯ ಹೇಳ ಬೇಕಾಯಿತು. ತಾಲೂಕಿನ ಚುಟುಕ ಸಾಹಿತ್ಯ ಪರಿಷತ್‌ನ ಬೀಳ್ಕೊಡಿಗೆ ಸಮಾರಂಭ ಕಣ್ಣಲ್ಲಿ ನೀರುತಂದಿತು. ಒಂದೆ ಊರಿನವರಲ್ಲ, ಒಂದೆ ಜಿಲ್ಲೆಯವರಲ್ಲ. ಹೋಗಲಿ ಒಂದೆ ಇಲಾಖೆಯವರೂ ಅಲ್ಲ . ಅವರಲ್ಲಿ ಬಹುಪಾಲು ಬಿ.ಇ.ಎಮ್‌.ಎಲ್‌ ಅಧಿಕಾರಿಗಳು. ಕನ್ನಡದ ಕೆಲಸಕ್ಕಾಗಿ ಜತೆಯಾದವರು. ನಾಲಕ್ಕುವರ್ಷದಲ್ಲಿ ನಲುಮೆಯ ಒಡನಾಡಿಗಳಾಗಿದ್ದರು
.ಆರೋಗ್ಯ ತುಸು ಸುಧಾರಿಸಿದ ಮೇಲೆ ನಾನು ಉತ್ತರ ಕನ್ನಡದ ಕಾಲೇಜಿಗೆ ಸೇರಲು ಹೊರಟೆ.ಅಲ್ಲಿನ ವಾತಾವರಣದ ಪರಿಚಯ ಹಾದಿಯಲ್ಲೆ ಆಯಿತು. ಎಲ್ಲ ಕಡೆ ದಟ್ಟ ಹಸಿರು . ಶಿವಮೊಗ್ಗ ದಾಟಿದರೆ ಗೇರು ಸೊಪ್ಪೆಯಿಂದ ಹೊನ್ನಾವರದ ವರೆಗ ಅಲ್ಲಲ್ಲಿ ಮಿಂಚಿ ಮಾಯವಾಗುವ ಜಲಪಾತಗಳು, ನಂತರ ಕರಾವಳಿಯಲ್ಲಿ ರಸ್ತೆಗೆ ಸಮಾಂತರವಾಗಿ ಭೋರ್ಗರೆವ ಸಮುದ್ರ ಕಾರಿನಲ್ಲಿ ಹೋಗುವಾಗ ಕಣ್ಣು ಮುಚ್ಚಿದರೆ ಸುಂದರದೃಶ್ಯ ಕಾಣದಾಗುವುದು ಎಂಬ ಕಾತರದಿಂದ ಹಾದಿಯುದ್ದಕ್ಕೂ ಬಿಟ್ಟ ಕಣ್ಣು ಬಿಟ್ಟಂತೆ ಪ್ರಕೃತಿಸೌಂದರ್ಯ ನೊಡುತ್ತಾ ಕುಳಿತೆ. ಹಾದಿಯಲ್ಲೆ ಮಳೆ ಅಂಕೋಲೆಯಿಂದ ಜಿಟಿಜಿಟಿ ಮಳೆ ಪ್ರಾರಂಭವಾಯಿತು.ಇನ್ನೂ ಹತ್ತು ಕಿಲೋ ಮೀಟರ್‌ ದೂರದಲ್ಲೆ ಮಗರಾಯ ಕಾದು ನಿಂತಿದ್ದ. ಅಲ್ಲಿ ಹೆಸರಾದ ಉಧ್ಭವ ಗಣಪತಿ ದೇಗುಲ.ಬೃಹತ್ ಬಂಡೆಉ ಮೇಲೆ ಒಡಮೂಡಿದ್ದು ಬಹು ಪ್ರಸಿದ್ಧಿ. ಅದರ ಮುಂದೆಯೆ ಮಗ ಬಂದು ನಿಂತಿದ್ದ. .ಅವನನ್ನು ನೋಡಿ ಇಳಿದಾಗ ಗುಲಾಬಿ ಹೂ ನೀಡಿ ಕಾರವಾರಕ್ಕೆ ಸ್ವಾಗತ , ಎಂದ.  ಆ ನಡೆ ಬಹಳ ಖುಷಿ ತಂದಿತು. ಆ ಹೂವಿನ ಬೆಲೆ ಬರಿ ಒಂದು ರೂಪಾಯಿ ಇರಬಹುದು. ಆದರೆ ಅದು ನೀಡುವ ಸಂತೋಷ , ಅದರ ಹಿಂದಿರುವ ಆತ್ಮೀಯತೆ ಆಳ ಅಳೆಯಲು ಆಗದು.ಅಲ್ಲಿರುವ ದೇವರ ದರ್ಶ ನ  ಮಾಡಿಕೊಂಡು ತುಸುವೆ ಮುಂದೆ ಇರುವ ಕಾಲೇಜಿಗೂ ಭೇಟಿ ನೀಡಿದೆವು. ಅದು ಚಿಕ್ಕದಾದ ಆದರೆ ಚೊಕ್ಕವಾಗಿದ್ದ ಕಾಲೇಜು. ಅಲ್ಲಿ ಅಂಕೋಲೆಯವರೊಬ್ಬರು  ಪ್ರಾಂಶುಪಾಲರಾಗಿದ್ದರು. ಅವರಿಗೆ ಹತ್ತಿರದಲ್ಲೆ ಇದ್ದ ಇನ್ನೊಂದು ಕಾಲೇಜಿಗೆ ವರ್ಗ ಮಾಡಿ  ನನಗೆ ಕಾರವಾರದಿಂದ ದಿನಾ ಓಡಾಡಲು ಅನುಕೂಲವಾಗಲಿ ಎಂದು ಆ ಸ್ಥಳ ನೀಡಿದ್ದರು. ನಾನು ಬರುವ ಮಾಹಿತಿ ಅವರಿಗೆ ಗೊತ್ತಿತ್ತು . ಮತ್ತು ಉಪನಿರ್ದೇಶಕರೆ ಇಲಾಖೆಯವರು ಒಬ್ಬ ಅನುಭವಿ ವ್ಯಕ್ತಿಯನ್ನು ಇಲ್ಲಿಎ ಕಳುಹಿಸಿರುವರು ಎಂದು ತಿಳಿಸಿದ್ದರು, ನನ್ನ ವಿವರ ಅವರಿಗೆ ನಾನು ಬರುವದಕ್ಕಿಂತ  ಮೊದಲೆ ಅಲ್ಲಿ ತಿಳಿದಿತ್ತು.
ಕಾಲೇಜಿಗೆ ಭೇಟಿ ನೀಡಿ ನಂತರ ಗಿಡ ಮರಗಳ ಮಧ್ಯ ಪರ್ಣ ಕುಠೀರದಂತಿರುವ ಮನೆ ಹೋದೆವು.   ಅಲ್ಲಿನ ಸಸ್ಯರಾಶಿ ಜಲಸಮೃದ್ಧಿ  ಕಣ್ಣು ಮನಸ್ಸುಎರಡನ್ನೂ ತುಂಬಿದವು
ಮಾರನೆ ದಿನ ಕಾರವಾರದಿಂದ ಆರು ಕಿಲೋಮೀಟರ್‌ ದೂರದಲ್ಲಿನ ಕಾಲೇಜಿಗೆ ಹೋದೆ. ಕಾಲೆಜಿ ಹೈಸ್ಕೂಲು ಸೆರಿ ಮೂರುನೂರು ವಿದ್ಯಾಥಿಗಳು.ಪಿಯುಸಿಯಲ್ಲಿ ಒಟ್ಟು ನೂರು ಮಕ್ಕಳು. ಅದರಲ್ಲಿ ವಾಣಿಜ್ಯ ವಿಬಾಗದಲ್ಲಿ ಬೆರಳೆಣಿಕೆಯ ವಿದ್ಯಾರ್ಥಿಗಳು.೧೨ ಜನ ಶಿಕ್ಷಕರು ಆರು ಜನ ಉಪನ್ನಾಸಕರು ಇದ್ದರು. ಅದೇಕೋ ಅವರಲ್ಲಿ ಮಹಿಳೆಯರೇ ಬಹಳ.ಹೈಸ್ಕೂಲಿನಲ್ಲಿ ಒಬ್ಬರು ಕಾಲೇಜಿನಲ್ಲಿ ನಾಲಕ್ಕು ಜನ ಪುರುಷ ಉದ್ಯೋಗಿಗಳು ಇದ್ದರು.  ಡ್ರಿಲ್‌ ಮಾಷ್ಟರ್‌ ಬಿಟ್ಟು  ಎಲ್ಲ ಹುದ್ದೆಗಗಳೂ ತುಂಬಿದ್ದವು. ಜಿಲ್ಲಾ ಕೇಂದ್ರಕ್ಕೆ ಹತ್ತಿರವಾದ್ದರಿಂದ ಎಲ್ಲರೂ ನಿತ್ಯ ಪ್ರಯಾಣಿಕರು. ಬಹುತೇಕಜನ ಅಲ್ಲಿಯವರೆ. ಅವರ ವಾಸ ಕಾರವಾರ ಇಲ್ಲವೆ ಹತ್ತಿರದ ಅಂಕೋಲೆಯಲ್ಲಿ.ಕಾಲೇಜು ಸುಸಜ್ಜಿತವಾಗಿತ್ತು. ಒಳ್ಳೆಯ ಕಟ್ಟಡ, ಸಾಕಷ್ಟು ಆಟದ ಮೈದಾನ, ಕಾಂಪ್ಯೂಟರ್‌ ಕಲಿಕೆಯ ವ್ಯವಸ್ಥೆ ಎಲ್ಲಕ್ಕಿಂತಲೂ ಪೂರ್ಣ ಪ್ರಮಾದಲ್ಲಿ ಸಿಬ್ಬಂದಿ ಇದ್ದುದರಿಂದ ಪಾಠ ಪ್ರವಚನ ಸುಗಮವಾಗಿ ಸಾಗಿತ್ತು. ಇಲ್ಲಿನ ಸಿಬ್ಬಂದಿಗೂ ನನಗೆ ಮೇಜರ್‌ ಆಪರೇಷನ್‌ ಆಗಿದೆ ಅದಕ್ಕೆಂದೆ ಇಲಾಖೆಯು ಇಲ್ಲಿಗೆ ನನಗೆ ವರ್ಗ ಮಾಡಿರುವರು ಎಂಬ ಮಾಹಿತಿ ಇತ್ತು . ಅದು ಹೇಗೆ ಗೊತ್ತಾಯಿತೋ ನಾನು ಅರಿಯೆ,ಅಲ್ಲಿನ ಹಿರಿಯ ಸಹಾಯಕರು ನಾನು ಹೆಚ್ಚು ಶ್ರಮ ತೆಗೆದುಕೊಳ್ಳ ಬಾರದೆಂದೂ,ಸಾವಕಾಶವಾಗಿ ಬಂದು ಬೇಗ ಹೋದರೂ ಸರಿ ಎಲ್ಲ ತಾವು ನೋಡಿಕೊಳ್ಳುವುದಾಗಿ ತಿಳಿಸಿದರು. ಅಲ್ಲದ ನನಗೆ ಪ್ರಯೋಗಾಲಯದಲ್ಲಿ ಹಾಸಿಗೆ ಹಾಸಿ ವಿಶ್ರಾಂತಿ ತೆದುಕೊಳ್ಳಲು ವ್ಯವಸ್ಥೆ ಮಾಡಬಯಸಿದರು, ಅವರ ಕಳಕಳಿಗೆ ನಾನು ಅಭಿನಂದಿಸಿದೆ.ಶಸ್ತ್ರ ಕ್ರಿಯೆ ಆಗಿದ್ದರೂ ನಾನು ದೈನಂದಿನ ಕೆಲಸ ಮಾಡಲು ಶಕ್ತ. ವೈದ್ಯರು ಏನೆ ಕೆಲಸ ಮಾಡಲು ಅಭ್ಯಂತರವಿಲ್ಲ ಎಂದೆ ತಿಳಿಸಿದ್ದಾರೆ. ಅಲ್ಲದೆ ನನ್ನ ಕರ್ತವ್ಯ ವನ್ನು ಸರಿಯಾಗಿ ನಿರ್ವಹಿಸಲು ತೊಂದರೆ ಯಾದರೆ ನಾನೆ ರಜೆ ತೆಗೆದುಕೊಳ್ಳುತ್ತಿದ್ದೆ. ಇನ್ನು ಇರುವ ಮೂರು ವರ್ಷವೆ ನನಗೆ ಕೆಲಸ ಮಾಡಲು ಅವಕಾಶ. ನಿವೃತ್ತಿಯಾದ ನಂತರ ವಿಶ್ರಾಂತಿ ಇದ್ದೆ ಇದೆ. ಆದ್ದರಿಂದ ಹೆಚ್ಚಿನ ಸೌಲಭ್ಯದ ಆಗತ್ಯವಿಲ್ಲ. ಎಂದು ತಿಳಿಸಿದೆ.ಕಾಲೇಜಿನಲ್ಲಿ ಪೂರ್ಣಹೊಣೆ ವಹಿಸಿಕೊಂಡೆ. ಅಲ್ಲಿನವರ ಹೆಂಗರಳು. ಶಿಸ್ತುಬದ್ದ ನಡವಳಕೆ ಸದಾ ಸಮಸ್ಯೆಯ ಸುಳಿಯಲ್ಲೆಯೆ ಕೆಲಸ ಮಾಡಿದ ನನಗೆ ಬಿರುಬೇಸಿಗೆಯಲ್ಲಿ ತಂಗಾಳಿ ತೀಡಿದಂತೆ ಅನಿಸಿತು.
ಎರಡು ದಿನ ಬಿಟ್ಟು  ಕಾರವಾರದ ಉಪನಿರ್ದೇಶಕರ ಕಚೇರಿಗೆ ಹೋಗಿ ಅವರನ್ನು ಭೇಟಿ ಮಾಡಿದೆ. ಅವರು ದಕ್ಷಿಣ ಕನ್ನಡದ ಮೂಲದವರು. ಅವರಿಗೆ ನಿರ್ದೇಶಕರಿಂದ ನನ್ನ ಕುರಿತು ಮಾಹಿತಿ ಇತ್ತು. ನನ್ನನ್ನು ಬಹಳ ಆದರದಿಂದ ಸ್ವಾಗತಿಸಿದರು. ಮೇಲಾಗಿ ಪತ್ರಕರ್ತನಾಗಿದ್ದ ನನ್ನ ಮಗನು ಅವರಿಗೆ ಚಿರ ಪರಿಚಿತ,ನನಗೆ ಹೃದಯಶಸ್ತ್ರ ಕ್ರಿಯೆಯಾಗಿರುವುದರಿಂದ ಖುದ್ದು ನಿರ್ದೇಶಕರೆ ಆಸಕ್ತಿ ವಹಿಸಿ ಇಲ್ಲಿಗೆ  ಹಾಕಿರುವುದುನ್ನು ಅವರು ಅರಿತಿದ್ದರು
ಕಾಲೇಜು ಚಿಕ್ಕದು. ದೊಡ್ಡ ದೊಡ್ಡ ಕಾಲೇಜುಗಳನ್ನೆ ನಿಭಾಯಿಸಿ ಬಂದ ನಿಮಗೆ ಇದು ಬಹಳ ಸರಳ ಕೆಲಸ. ಕಾಲೇಜಿಗೆ ವಾರಕ್ಕೊಮ್ಮೆ ಹೋದರೂ ಸರಿ. ಉಳಿದ ದಿನ ನೀವು ಇಲ್ಲಿಯೆ ಬಂದು ನನಗೆ ಕಚೇರಿ ಕೆಲಸದಲ್ಲಿ ಸಹಾಯ ಮಾಡಬಹುದು, ಅದರಿಂದ ನಿಮಗೆ ಹೊತ್ತು ಹೊತ್ತಿಗೆ ಬಿಸಿ ಊಟವೂ ಸಿಗುವುದು. ಬಸ್ಸಿನಲ್ಲಿ ಹೋಗಿ ಬರುವ ಶ್ರಮ ಇರುವುದಿಲ್ಲ. ಎಂದು ಸಲಹೆ ನೀಡಿದರು.
ಅವರ ಈ ಉದಾರತೆಗೆ  ಮತ್ತು ಕಳಕಳಿಗೆ ನಾನು ವಂದಿಸಿದೆ. ಮೊದಲು ಕಾಲೇಜಿಗೆ ಹೋಗಿ ಅಲ್ಲಿನ ಪರಿಸರ ಅರಿತು ನಿರ್ಧಾರತೆಗೆದು ಕೊಳ್ಳುವುದಾಗಿ ತಿಳಿಸಿದೆ,
ಅವರೇನೋ ಉದಾರತೆಯಿಂದ ನನಗೆ ರಿಯಾಯಿತಿ ಕೊಡಲು ಮುಂದಾಗಿದ್ದರು. ಆದರೆ ಕಾಲೇಜಿಗೆ ಯಾವಾಗಲಾದರೂ ಒಮ್ಮೆ ಹೋಗಿ ಸಹಿ ಮಾಡಿ ಬರುವ ವಿಚಾರ ನನಗೆ ಹಿಡಿಸಲಿಲ್ಲ. ನಾನು ಮೂಲತಃ ಪ್ರಾಂಶುಪಾಲ. ಸಂಬಳ ಪಡೆಯುವುದುಕಾಲೇಜಿನಲ್ಲಿ. ನನಗೆ ಅನುಕೂಲ ಎಂದು ಅಲ್ಲಿಗೆ ಹೋಗದೆ ಉಪನಿರ್ದೇಶಕರ ಕಚೇರಿಯಲ್ಲೆ ಕಾರ್ಯ ಮಾಡುವುದಕ್ಕೆ ಮನ ಒಪ್ಪಲಿಲ್ಲ.ಇದು ಬರಿ ಬಾಯಿ ಮಾತಿನ ಸೂಚನೆ. ನನ್ನನ್ನು ನಿಯೋಜನೆ ಮಾಡಿಕೊಂಡರೆ ಅದು ಬೇರೆ ಮಾತು.ಆದರೆ ಯಾರೂ ಕೇಳುವುದಿಲ್ಲ ಎಂದು ಕಾಲೇಜಿಗೆ ಬಾರದೆ ಇರುವುದು ನನ್ನ ಮನಸ್ಸಿಗೆ ಒಗ್ಗದ ಮಾತಾಗಿತ್ತು.ಪ್ರಿನ್ಸಿಪಾಲರು ಕಾಲೇಜಿಗೆ ಸರಿಯಾಗಿ ಬರುತ್ತಿಲ್ಲ ಎಂದು ಜನರ ಬಾಯಿಗೆ ಬೀಳುವುದು ಮನಃ ಸಾಕ್ಷಿಗೆ ವಿರುದ್ಧವಾಗುವುದು.  ವಿನಯವಾಗಿ ಉಪನಿರ್ದೇಶಕರಿಗೆ ನನ್ನ ಅಭಿಪ್ರಾಯ ತಿಳಿಸಿದೆ. ನಾನು ಇರುವಾಗ ನಿಮಗೆ ಏಕೆ ಇಲ್ಲದ ಚಿಂತೆ. ಎಲ್ಲದಕ್ಕೂ ನಾನು ಉತ್ತರ ಕೊಡುವೆ, ವೃಥಾ ಏಕೆ  ಕಷ್ಟ ಪಡುವಿರಿ? ಎಂದರು.ನಾನು ಮುಗುಳ್ ನಕ್ಕು ಸುಮ್ಮನಾದೆ.ಕಾಲೇಜಿಗೆ ಹೋಗಿ ಮಕ್ಕಳೊಂದಿಗೆ ಇರುವುದು ನನಗೆ  ಎಂದೂ ಕಷ್ಟದ ಕೆಲಸ ಎನಿಸಿರಲಿಲ್ಲ.
ಇದುವರೆಗೂ ನಾನು ಕೆಲಸ ಮಾಡಿದ ಕಾಲೇಜಿಗಿಂತ ಇದು ಭಿನ್ನವಾಗಿತ್ತು.ಎಲ್ಲರೂ ತಮ್ಮ ಕೆಲಸ ಮಾಡಿ ಕೊಂಡು ಹೋಗುತಿದ್ದರು ಮಹಿಳೆಯರೆ ಇದ್ದುದರಿಂದ ಹೈಸ್ಕೂಲು ವಿಭಾಗವಂತೂತಲೆ ನೋವೆ ಇರಲಿಲ್ಲ. ಕಾಲೇಜುವಿಭಾಗದಲ್ಲಿ ಇಂಗ್ಲಿಷ್‌ ಭಾಷೆಯೊಂದನ್ನು ಬಿಟ್ಟರೆ ಬಹುತೇಕ ಅತ್ಯುತ್ತಮ ಫಲಿತಾಂಶ ಬರುತಿತ್ತು. ಗ್ರಾಮಾಂತರ ಪ್ರದೇಶ. ಕನ್ನಡ ಮಾಧ್ಯಮ.ವಾದ್ದರಿಂದ  ಪಿಯುಸಿಯಲ್ಲಿ ಮಕ್ಕಳ ಇಂಗ್ಲಿಷ್‌ ಜ್ಞಾನ ಸುಧಾರಿಸಬೇಕಿತ್ತು. ಅದಕ್ಕೆ ನಾನೆ ವಿಶೇಷ ತರಗತಿಗಳನ್ನು ತೆದುಕೊಂಡು ಸುಧಾರಿಸಬಯಸಿದೆ.ಅಲ್ಲಿ ಎಲ್ಲ ಸರಿ ಇದ್ದರೂ ಒಂದುವಿಷಯ ಮಾತ್ರ ನನಗೆ ಕುಟುಕುತಿತ್ತು. ಎಲ್ಲರೂ  ಕಾರವಾರದಿಂದ ಬರುವವರೆ. ಬಸ್ಸು ತಡವಾದರೆ ಅನಿವಾರ್ಯ ವಾಗಿ ಅಶಿಸ್ತಿಗೆ ಅವಕಾಶವಿತ್ತು.ಬಸ್ಸುಗಳೇನೋ ಅರ್ಧ ಗಂಟೆಗೆ ಒಂದರಂತೆ ಇದ್ದವು. ಆದರೂ ಒಬ್ಬಿಬ್ಬರಾದರೂ ಬರುವುದು ತಡವಾಗುತಿತ್ತು. ಆ ಸಮಯದಲ್ಲಿ ಮೂಛೆ ಬಂದವರು ಮಕ್ಕಳನ್ನು ನಿಯಂತ್ರಿಸುವರು.ನಾನು ಸದಾ ಮುಂಚೆ ಬಂದು ಕೊನೆಗೆ ಹೋಗುವ ಅಭ್ಯಾಸ ಬೆಳಸಿಕೊಂಡಿರುವವನು. ಹಾಗಾಗಿ ಇದೊಂದು ವಿಷಯ ನನ್ನ ಮನಸ್ಸು ಕೊರೆಯುತಿತ್ತು.
ಒಂದು ದಿನ ನನಗೂ ಮನೆ ಬಿಡುವುದು ತಡವಾಯಿತು. ಮಗನೆ ಬಂದು ಬೈಕನಲ್ಲಿ ಬಸ್‌ ನಿಲ್ದಾಣಕ್ಕೆ  ಬಿಟ್ಟರೂ ಬಸ್ಸು ಮಿಸ್ಸಾಗಿತ್ತು . ಮುಂದೆ ಹತ್ತೆ ನಿಮಷಕ್ಕೆ ಬಸ್ಸು  ಇತ್ತು . ಬೈಕನಲ್ಲೇ  ಕಾಲೇಜಿನ ತನಕ ಡ್ರಾಪು ತೆದುಕೊಂಡರೂ ತಡವಾಗುತಿತ್ತು. ಸರಿ ಏನು ಮಡುವುದೆಂದು ತಿಳಿಯದೆ ಬಂದ ಬಸ್ಸನ್ನು ಹತ್ತಿ ಕುಳಿತೆ. ಕಾಲೇಜಿಗೆ ಬರುವಾಗ ಆದರೂ ೩೦ ನಿಮಿಷ ತಡವಾಯಿತು. ನಾನು ಮೂಬಾಗಿಲಿನಿಂದ ಇಳಿದರೆ ಹಿಂಬಾಗಿಲಿನಿಂದ  ಆರು ಜನ  ಶಿಕ್ಷಕರು ಬಸ್ಸಿನಿಂದ ದುಬ ದುಬನೆ  ಇಳಿದರು.. ನಾನು ಛೇಂಬರಿನಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ ಅವರು ಗಡಿಬಿಡಿಯಲ್ಲಿ ಸ್ಟಾಫ್ ರೂಮಿಗೆ ಹೋಗಿ ಅಲ್ಲಿ ತಮ್ಮ ಬ್ಯಾಗುಗಳನ್ನು ಇಟ್ಟು ತುಸು ಸುಧಾರಿಸಿಕೊಂಡು ತಮ್ಮ ತರಗತಿಗಳಿಗೆ ತೆರಳಿದರು.
ಪಿರಿಯಡ್‌ ಮುಗಿಸಿಕೊಂಡು ಅವರೆಲ್ಲ ಹಾಜರಿ ಪುಸ್ತಕದಲ್ಲಿ ಸಹಿ ಮಾಡಲು ಬಂದರು. ನಾನು ತುಸು ಗೊಂದಲಕ್ಕೆ ಒಳಗಾಗಿದ್ದೆ. ನನಗೆ ಗೊತ್ತಿರುವಂತೆ ಮೊದಲಿನ ಬಸ್ಸು ಸಿಗದೆ ಇನ್ನೊಂದು ಬಸ್ಸು ಹಿಡಿದು ಬರುವುದರಿಂದ ತಡವಾಗಿತ್ತು. ಯಾರೂ ಉದ್ದೇಶ ಪೂರ್ವಕವಾಗಿ ತರಗತಿಗೆ ಚಕ್ಕರ್‌ ಹೊಡೆದಿರಲಿಲ್ಲ. ಅಲ್ಲದೆ ನಾನೂ ತಡವಾಗೆ ಅವರ ಜೊತೆಗೆ ಬಂದಿದ್ದೆ.  ಇದೇ ದೆ ಮುಂದುವರಿದರೆ ಶಿಸ್ತಿಗೆ ಭಂಗಬರಬಹುದು.ಯೋಚನೆ ಮಾಡಿ ಒಂದು ಕ್ರಮತೆಗೆದು ಕೊಂಡೆ. ಮೊದಲು ನಾನೆ ಅರ್ಧ ದಿನ ರಜೆ ಯನ್ನು ಹಾಜರಿಯಲ್ಲಿ ನನ್ನ ಹೆಸರಿನ ಮುಂದೆ ಗುರುತು ಮಾಡಿದೆ. ಇಬ್ಬರು ಶಿಕ್ಷಕಿಯರು ಸಂಕೋಚ ದಿಂದ ಮೇಜಿನ ಮುಂದೆ ಬಂದು ನಿಂತರು.ಹಾಜರಿ ಪುಸ್ತಕ ತೆಗೆದು ನೋಡಿದರು, ನಾನೆ ಅರ್ಧ ದಿನ ರಜೆ ಹಾಕಿಕೊಂಡಿರುವುದು ಅವರಿಗೆ ಅಚ್ಚರಿಯಾಯಿತು.ತಾವು ಸಹಿ ಮಾಡದೆ ನನ್ನಮುಖ ನೋಡಿದರು.
ನಿಜ ,ನೀವು  ಉದ್ದೇಶ ಪೂರ್ವಕವಾಗಿ ತಡವಾಗಿಬಂದಿಲ್ಲ. ಆದರೆ ಮಕ್ಕಳಿಗಂತೂ ತೊಂದರೆಯಾಗಿದೆ. ನಾನೂ ತಡವಾಗಿ ಬಂದಿರುವೆ. ಸಮಯಪ್ರಜ್ಞೆ ಇದ್ದರೆ ಅರ್ಧ ಗಂಟೆ ಮೊದಲೆ ಮನೆ ಬಿಟ್ಟು ಮುಂಚಿನ ಬಸ್ಸಿಗೆ ಬರಬೇಕಾಗಿತ್ತು. ಅದರಿಂದ ಬಸ್ಸು ಇರಲಿಲ್ಲ ಎಂದು ಹೇಳುವುದು ಪರಿಹಾರವಲ್ಲ. ನಾನೂ ರಜೆ ಹಾಕಿಕೊಂಡಿರುವೆ  ನೀವೂ ಅರ್ಧ ದಿನದ ರಜೆ ಚೀಟಿ  ಕೊಡಿ. ಬೇಕಾದರೆ ನೀವು ಪಾಠ ಮಾಡದೆ ವಿಶ್ರಾಂತಿ ತೆಗದುಕೊಳ್ಳಿ. ನನ್ನ ಅಭ್ಯಂತರವಿಲ್ಲ ಮಧ್ಯಾಹ್ನದಿಂದ ತರಗತಿಗೆ ಹೋಗಬಹುದು. ನಿಮ್ಮ ತರಗತಿಗಳಿಗೆ ಗೈರು ಹಾಜರಿ ವ್ಯವಸ್ಥೆ ಮಾಡುವೆ. ಆದರೆ ಬಸ್ಸಿನಕಾರಣದಿಂದ ತಡವಾದರೆ ವಿನಾಯತಿ ಕೊಡಲಾಗುವುದಿಲ್ಲ.ಏನಾದರೂ ವ್ಯವಸ್ಥೆ ಮಾಡಿಕೊಂಡು ಸಮಯಕ್ಕೆ ಸರಿಯಾಗಿ ಬರಬೇಕಾದುದು ನಮ್ಮಕರ್ತವ್ಯ.  ಎಂದೆ’
ಅವರು ಎರಡು ಮಾತಿಲ್ಲದೆ ವಾಪಸ್ಸು ಹೋದರು. ಐದು ನಿಮಿಷ ಬಿಟ್ಟು ಹಿರಿಯ ಸಹಾಯಕರನ್ನ ಕರೆದು ಆರೂ ಜನರ ತರಗಿತಗಳಿಗೆ ಗೈರುಹಾಜರಿ ವ್ಯವಸ್ಥೆ  ಮಾಡಲು ಹೇಳಿದೆ. ಅವರು ಅಗತ್ಯವಿಲ್ಲ ಸಾರ್‌, ಅವರು ರಜೆ ಚೀಟಿ ಕೊಟ್ಟರೂ ತರಗತಿಗೆ ಹೋಗಲು ಸಿದ್ಧರಿದ್ದಾರೆ. ಎಂದರು
ಅದೆ ಕೊನೆ . ಯಾರೂ ತಡವಾಗಿ ಬರಲಿಲ್ಲ. ಹಾಗೇನದರೂ ಅದರೆ ಫೋನು ಮಾಡಿ ಅರ್ಧ ದಿನ ರಜೆ ಹಾಕಲು ಮನವಿ ಮಾಡುತಿದ್ದರು
ನಾನು ಅಂದುಕಂಡಂತೆ ಯಾವುದೆ ಅಸಮಧಾನ ದುಸುಮುಸು ಕಾಣಲಿಲ್ಲ. ಪ್ರಿನ್ಸಿಪಾಲರೆ ರಜ ಹಾಕಿಕೊಂಡಿರುವಾಗ ನಾವು ಮಾತನಾಡಲು ಬರುವುದೆ, ಇನ್ನು ಮೇಲೆ ಮನೆಯನ್ನು ಅರ್ಧ ಗಂಟೆ ಮೊದಲೆ ಬಿಟ್ಟರೆ ಆಯಿತು. ಅವರ ಮಾತಿನಲ್ಲು ಅರ್ಥವಿದೆ.  ಎಂದು ಅವರವರೆ ಮಾತನಾಡಿಕೊಂಡರೆಂಬ ಮಾಹಿತಿ ಬಂತು. ಯಾವುದೆ ಭಿನ್ನಾಭಿಪ್ರಾಯಕ್ಕೂ ಎಡೆ ಗೊಡದೆ ದೊಡ್ಡ ಸಮಸ್ಯೆ ಪರಿಹಾರವಾಯಿತು.


No comments:

Post a Comment