Wednesday, February 27, 2013

ಆರರಿಂದ ಅರವತ್ತು- ಶಿಕ್ಷಣ ಯಾನ


ಸೆಕೆಂಡ್‌ ಹ್ಯಾಂಡ್‌ ಬುಕ್‌ ಬ್ಯಾಂಕ್‌ .
ಕಾಲೇಜಿಗೆ ಬಂದು ಒಂದು ವಾರದವರೆಗೆ ತರಗತಿಗಳಿಗೆ ಹೋಗಲು ಆಗಿರಲಿಲ್ಲ. ಎರಡನೆ ವಾರದಲ್ಲಿ ನನ್ನ ಹಳೆಯ ಅಭ್ಯಾಸದಂತೆ ಪ್ರಾರ್ಥನೆಯಾದ ಮೇಲೆ  ಒಂದು ಸುತ್ತು ಎಲ್ಲ ತರಗತಿಗಳ ಮುಂದೆ ಹೋಗಿ ಬರುವುದು ನನ್ನ ರೂಢಿ. ಮುಂದುವರಿಸಿದೆ. ಹಾಗೆ ಹೋದಾಗ ಖಾಲಿ ಇರುವ  ತರಗತಿಗೆ ಸೀದಾ ಹೋಗುವೆ. ಯಾವಾಗಲೂ ಹೋದೊಡನೆ ಆ ಅವಧಿಯಲ್ಲಿ ಯಾವ ವಿಷಯವಿದೆ ಎಂದು ಕೇಳಿ  ಅಲ್ಲಿ ನಡೆಯುತಿದ್ದ ಪಾಠ ಮುಂದುವರಿಸುತಿದ್ದೆ. ಸುಮಾರು ೨೫ ವರ್ಷ ಅನುಭವದಿಂದ ಯಾವುದೆ ತರಗತಿಗೆ ಯಾವುದೆ ವಿಷಯವಾದರೂ ನಿರಾಳವಾಗಿ ಪಾಠ ಮಾಡಬಹುದಾಗಿತ್ತು. ಅದರಿಂದ ಒಂದು ಅನುಕೂಲವನ್ನು ನಾನು ಕಂಡುಕೊಂಡಿದ್ದೆ. ಬಹುತೇಕ ಪ್ರಾಂಶುಪಾಲರು  ಯಾವುದೆ ತರಗತಿಯಲ್ಲಿ ಗಲಾಟೆಯಾದರೆ ಹಿರಿಯ ಸಹಾಯಕರನ್ನು ಕರೆದು ,ಏನ್ರಿ, ಅದು ನೋಡಿ ಎನ್ನುವರು”  ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ.ಕೆಲವರಂತೂ ಬಿಲು ಬೆಲ್ಲಿನ ಅಧಿಕಾರಿಗಳು.ನಾನು ಅವಕಾಶವಿದ್ದಾಗಲೆಲ್ಲ ತರಗತಿಗೆ ಹೋಗುತಿದ್ದುದರಿಂದ  ವಿದ್ಯಾರ್ಥಿಗಳೊಡನೆ ನಂಪರ್ಕ ಹೆಚ್ಚುತಿತ್ತು. ಪಾಠ ಪ್ರವಚನಗಳು ಹೇಗೆ ಸಾಗಿವೆ ಎಂಬ ಮಾಹಿತಿ ನಿಖರವಾಗಿ ಸಿಗುತಿತ್ತು. ಅಲ್ಲದೆ ಯಾವುದೆ ಶಿಕ್ಷಕರು ತರಗತಿಗೆ ತಡವಾಗಿ ಹೋಗುವುದು ತಪ್ಪಿತು.ನಾನು ತರಗತಿಗೆ ಹೋಗಿರುವನೆಂಬ ಮಾಹಿತಿ ತಲುಪುತ್ತಲೆ ಅವರು ಓಡೋಡಿ ತರಗತಿಗೆ ಬರುತಿದ್ದರು. ಅವರುಬಂದ ತಕ್ಷಣ ನಾನು ಏನೂ ಮಾತನಾಡದೆ ಅವರಿಗೆ ಅವಕಾಶನೀಡಿ   ಹೊರಬರುತಿದ್ದೆ.ಇದರಿಂದ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಮೇಲೆ ನಿಯಂತ್ರಣ ತಾನೆ ತಾನಾಗಿ ಸಿದ್ದಿಸಿತು. ಒಂದು ಸಲ ತರಗತಿಯೊಂದರಲ್ಲಿ ಕನ್ನಡದ ಪಾಠ ಮಾಡಬೇಕಿತ್ತು. ಎಲ್ಲರಿಗೂ ಪಠ್ಯ ಪುಸ್ತಕ ತೆರೆಯಲು ಹೇಳಿದೆ. ಬಹುತೇಕ ಜನರಲ್ಲಿ ಪಠ್ಯ ಪುಸ್ತಕ ಇಲ್ಲ. ಭಾಷೆ  ಮತ್ತು ಗಣಿತ ಬೋಧನೆಗೆ ಪಠ್ಯ ಪುಸ್ತಕ ಕಡ್ಡಾಯವಾಗಿ ಇರಲೆಬೇಕು.  ಅವರಿಗೆ ತರಗತಿಗೆ ತಪ್ಪದೆ ಪುಸ್ತಕ ತರಲು ತಿಳಿಸಿದೆ. ನಂತರ ತಿಳಿಯಿತು. ಎಲ್ಲ ತರಗತಿಗಳಲ್ಲೂ ಇದೆ ಪರಿಸ್ಥಿತಿ. ಕಾರಣ ಅವರ ಬಡತನ. ನಮ್ಮ ಲ್ಲಿಗೆ ಬರುವವರೆಲ್ಲ ಬಹುತೇಕ ಗ್ರಾಮಾಂತರದ , ಬಡ ಮತ್ತು ದಲಿತ ಮಕ್ಕಳು. ಹೀಗಾಗಿ ಅವರ  ತೊಂದರೆ ನೈಜವಾಗಿತ್ತು. ಕಾಲೇಜು ವಿಭಾಗದಲ್ಲಿ ಅಷ್ಟೇನೂ ತೊಂದರೆ ಇರಲಿಲ್ಲ. ಕಾಲೇಜು ಗ್ರಂಥಾಲಯದಲ್ಲಿ ಎಲ್ಲ ವಿಷಯಗಳ ಪುಸ್ತಕಗಳು ಲಭ್ಯ ವಿದ್ದವು. ಆದರೆ ಅಲ್ಲೂ ಭಾಷಾ ವಿಷಯದ ಪಠ್ಯ ಪುಸ್ತಕಗಳು ವಿರಳ. ಕಾರಣ ಭಾಷಾ ವಿಷಯದ ಪಠ್ಯ ಪುಸ್ತಕಗಳು ಮೂರು ನಾಲಕ್ಕುವರ್ಷಕೊಮ್ಮೆ ಬದಲಾಗುತಿದ್ದವು.ಏನದರೂ ಅನುಕೂಲ ಮಾಡಿಕೊಡಲು ಮನಸ್ಸಾಯಿತು. ಸದ್ಯಕ್ಕಂತೂ ಏನೂ ಮಾಡುವ ಹಾಗಿರಲಿಲ್ಲ. ಆದ್ದರಿಂದ ಹೇಗಾದರೂ ಮಾಡಿ ಭಾಷಾ ಪುಸ್ತಕಗಳನ್ನಾದರೂ ತರಲೆ ಬೇಕೆಂದು ಒತ್ತಾಯ ಮಾಡಲಾಯಿತು.ನಮ್ಮಲ್ಲಿ ಒಂದೊಂದು ತರಗತಿಗೆ ಮೂರು ವಿಭಾಗಗಳಿದ್ದುರಿಂದ ಕೊನೆಗೆ ಆ ಆವಧಿಯಲ್ಲಿ ಎರವಲನ್ನಾದರೂ ಪಡೆಯಬೇಕೆಂದು ತಿಳಿಸಲಾಯಿತು.
ಕಾಲೇಜಿನ ಆವರಣದಲ್ಲಿ ಸುತ್ತಾಡುವುದರಿಂದ ಸಮಸ್ಯೆಗಳ ಪರಿಚಯವಾಗಿ ಸ್ಥಳದಲ್ಲೆ ಪರಿಹಾರ ನೀಡಬಹುದಿತ್ತು. ಹಾಗೆ ಓಡಾಡುವಾಗ ಅಗೊಮ್ಮೆ ಈಗೊಮ್ಮೆ  ಬೋಧಕರ ಕೊಟ್ಟಡಿಯಲ್ಲಿ ಕುಳಿತು ಕೊಳ್ಳುವುದು  ನನ್ನ ಹವ್ಯಾಸ. ಅದರಿಂದ ನಮ್ಮ ನಡುವಿನ ಅಂತರ ಕಡಿಮೆಯಾಗುವುದು. ವಿಶ್ವಾಸ ಬೆಳೆಯುವುದು. ಅವರ  ಸಮಸ್ಯೆಗಳಿಗೆ ಸ್ಪಂದಿಸಲು ಸುಲಭ ವಾಗುವುದು.ಜೊತೆಗೆ ಅವರಿಂದ ಪೂರ್ಣ ಸಹಕಾರವೂ ದೊರೆಯುವುದು.
ಅರ್ಧ ವಾರ್ಷಿಕ ಪರೀಕ್ಷೆ ಮುಗಿದ ನಂತರ ಎಸ್‌ಎ ಎಲ್ ಸಿ ಮಕ್ಕಳ ಸಾಧನೆಯ ಪರಿಶೀಲನೆಗ ಸಭೆ ಕರೆಯಲಾಯಿತು. ಹುಡುಗರ ಸಾದನೆಗಳು ಅಷ್ಟು ಉತ್ತೇಜನಕರವಾಗಿರಲಿಲ್ಲ. ಅದರಲ್ಲೂ ಗಣಿತ ಮತ್ತು ಇಂಗ್ಲಿಷ್‌ವಿಷಯಗಳಲ್ಲಿ ಬಹಳ  ಕಳಪೆಯಾಗಿತ್ತು. ಆದ್ದರಿಂದ ಪ್ರಗತಿ ಪತ್ರವನ್ನು ನೀಡಿದ ಮೇಲೆ ಒಂದು ದಿನಾಂಕವನ್ನು ನಿಗದಿ ಪಡಿಸಿ ಅಂದು ಎಲ್ಲ ಮಕ್ಕಳು ತಮ್ಮ ಪೋಷಕರನ್ನು ಕರೆತರುವಂತೆ ತಿಳಿಸಲು ಕ್ಲಾಸ್‌ ಟೀಚರ್‌ಗೆ ಸೂಚಿಸಲಾಯಿತು. ಒಂದೊಂದು ತರಗತಿಗೆ ಬೇರೆ ಬೇರೆ ಸಮಯ ನಿಗದಿ  ಮಾಡಿದರು.ಎಸ್‌ಎಸ್ ಎಲ್‌ಸಿ ಮಕ್ಕಳ ಪೋಷಕರನ್ನು ಭೇಟಿಮಾಡಲೇ ಬೇಕಿತ್ತು. ಸಭೆಯಯ ದಿನದಂದೂ ಸಮಯಕ್ಕೆ ಸರಿಯಾಗಿ ನಾಲಕ್ಕಾರು ಜನ ಮಾತ್ರ ಬಂದಿದ್ದರು ಅವರೆಲ್ಲರೂ ಸ್ಥಳಿಯರೆ.
ನಮ್ಮ ಹಿರಿಯಸಹಾಯಕರನ್ನು ಕೇಳಿದರೆ , ಅವರು ಇಲ್ಲಿ   ಹೀಗೆಯೆ  ಸರ್‌ , ಯಾರು ಬರುವುದಿಲ್ಲ . ಅದಕ್ಕೆ ಸಭೆ ನಡೆಸುವುದೇ ಇಲ್ಲ. ಎಂದರು. ಹೀಗಾದರೆ ಹೇಗೆ ?  ಅವರ ಸಹಕರವಿಲ್ಲದೆ ಪಲಿತಾಂಶ ಬರುವುದುಷ್ಟ ಎಂದೆ. ಅದಕ್ಕೆ ಉತ್ತರವೆ ಇಲ್ಲ.
ನಾನು ಮಕ್ಕಳನ್ನೆ ಕೇಳಿದೆ. ’ ನಿಮ್ಮ ತಂದೆಗೆ ನೀವು ಸಭೆಯ ಸುದ್ದಿ ತಿಳಿಸಲಿಲ್ಲವೆ?
. ಅದಕ್ಕೆ ಎಲ್ಲರು ತಿಳಿಸಿದ್ದೇವೆ ಎಂದು ಒಕ್ಕೊರಲಿಂದ ಉತ್ತರಿಸಿದರು
ಹಾಗಿದ್ದರೆ ಯಾಕೆ ಬರಲಿಲ್ಲ ? ಎಂದರೆ
ಅನುಕೂಲವಿಲ್ಲ ಎನ್ನುವುದೆ ಅವರ ಉತ್ತರವಾಗಿತ್ತು. ಅದೇನು ಅಂತಹ ಅನಾನುಕೂಲ, ಎಂದು ಗದರಿದಾಗ ,ಬಂದರೆ ಒಂದು ದಿನದ ಕೂಲಿ ಹೊಗುವುದು ಎಂಬ ಉತ್ತರ ಕೇಳಿ ದಂಗಾದೆ.
ನಾನು ಅದರ್ಶ ಲೋಕದಿಂದ ವಾಸ್ತವಲೋಕಕ್ಕೆ ಬಂದೆ. ನಿಜ ಅವರು ಹೇಳುವುದು ಸತ್ಯವಾಗಿತ್ತು.
ಅದು ನನ್ನ ಅನುಭವಕ್ಕೂ ಬಂದಿತ್ತು ಅನೇಕ ಸಲ ಮಾರುಕಟ್ಟೆಗೆ ಹೋದಾಗ ಅಲ್ಲಿ ಸೊಪ್ಪು ,ಕೊತ್ತಂಬರಿ ,ಕರಿಬೆವು, ನಿಂಬೆ ಹಣ್ಣು ಮಾರುವ ಹುಡುಗರು “ನಮಸ್ತೆ ಸಾರ್‌”  ಎನ್ನುತ್ತಿರುವ ಚಿತ್ರ ಕಣ್ಣೆದರು ಬಂತು. ಅನೇಕ ಹಳ್ಳಿ ಹುಡುಗರು ಶಾಲೆಗೆ ಬರುವಾಗ ತಮ್ಮಲ್ಲಿ ಬೆಳೆದುದನ್ನ ತಂದು  ಬೆಳಗ್ಗೆ ಮಾರುಕಟ್ಟೆಯಲ್ಲಿ ತಾವೆ ಮಾರಾಟ ಮಾಡಿ ನಂತರ ಶಾಲೆಗೆ ಬರುತಿದ್ದರು.ಉಳಿದರೆ ಸಂಜೆ  ಮಾರಿ ಮನೆಗೆ ಹೋಗುತಿದ್ದರು. ಅದರಂತೆ ಗರಾಜುಗಳಲ್ಲಿ, ಅಚಾರಿಗಳಲ್ಲಿ, ಬಡಗಿಗಳಲ್ಲಿ ಕೆಲಸ ಮಾಡುವವರು ನಮ್ಮಲ್ಲಿದ್ದರು. ಅದು  ಒಂದು ವಿಧದಲ್ಲಿ ಹೆಮ್ಮೆಯ ವಿಷಯವಾಗಿತ್ತು.. ದುಡಿಮೆಯ ಗೌರವ ಅರಿತಿರುವರಲ್ಲ  ಅದೆ ದೊಡ್ಡ ದು ಎಂದುಕೊಂಡಿದ್ದೆ.. ಅದರೆ ಎಸ್‌ಎಸ್ ಎಲ್‌ ಸಿ ಪರೀಕ್ಷೆ ಎದುರಿಸಬೇಕಾದವರ ತಂದೆ ತಾಯಂದಿರು ತುಸುವೂ ಗಮನ ಹರಿಸದಿರುವುದು ಸರಿಯಲ್ಲ ಎನಿಸಿತು.
ನಿಜ ಆ ಮಕ್ಕಳಿಗೆ ಸಮಯದ ಅಭಾವದಿಂದ ಸರಿಯಾಗಿ ಅಂಕಗಳನ್ನು ಪಡೆದಿಲ್ಲ. ಅದರಿಂದ ಇನ್ನು  ಮೇಲಾದರೂ  ಕಷ್ಟಪಟ್ಟು ಮನೆಯಲ್ಲಿ ಓದಿದರೆ ಊತ್ತಮ ಫಲಿತಾಂಶ ಬರಲು ಸಾಧ್ಯ. ಅದಕ್ಕಾದರೂ ಅವರ ತಂದೆ ತಾಯಂದಿರನ್ನು ಭೇಟಿ ಮಾಡಲೇ ಬೇಕೆನಿಸಿತು, ನಾನು ಬಹಳ ಯೋಚಿಸಿ ಒಂದು ನಿರ್ಧಾರಕ್ಕೆ ಬಂದೆ. ಅವರಿಗೂ ತೊಂದರೆಯಾಗಬಾರದು. ಆದರೆ ಅವರಿಗೆ ನಾವು ಅಭ್ಯಾಸದ ಅಗತ್ಯವನ್ನು ಮನವರಿಕೆ ಮಾಡಿಕೊಡಲೆ ಬೇಕು. ಅದಕ್ಕಾಗಿ ನಾನುನ ಎಲ್ಲ ಮಕ್ಕಳಿಗೂ ಅವರ ತಂದೆ ತಾಯಿಯರಲ್ಲಿ ಯಾರನ್ನಾದರೂ ಮುಂದಿನ ವಾರದಲ್ಲಿ  ಅವರಿಗೆ ಅನುಕೂಲವಾದ ದಿನ. ಬಿಡುವಾದ  ಸಮಯದಲ್ಲಿ ಬಂದು ಕಾಣಲು ತಿಳಿಸಲಾಯಿತು.ಸಂಜೆಯ ಮೇಲೆ ಬಂದರೂ ಸರಿ.  ಹೇಗಿದ್ದರೂ ನನ್ನ ಮನೆ ಕಾಲೆಜಿನ ಪಕ್ಕದಲ್ಲೆ ಇದೆ. ಅಲ್ಲಿಗೆ ಬರಲಿ ಎಂದು  ಹೇಳಿದೆ.
ನಾನು ಅಂದುಕೊಂಡದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲೆ ತಂದೆ ತಾಯಯರು ಬಂದರು.ಬಹುಶಃ ಯಾವಾಗಲಾದರೂ ಬರಲಿ ಎಂಬ ನನ್ನ ಮಾತು ಅವರ ಮನ ತಟ್ಟಿರಬೇಕು. ಆದರೆ ಬಂದವರಿಗೆ ನಾನೂ ಬಗೆ ಬಗೆಯಲ್ಲಿ ಹೇಳಿದರೂ ಅವರದು ಒಂದೆ ರಾಗ. ಅವರಲ್ಲಿ ಬಹುತೇಕ ಜನರ ಮನೆ ಮಾತು ತೆಲುಗು
“ಮಾಕೇಮಿ ತೆಲುಸ್ತುಂದಿ ಸಾಮಿ? ಮೀರೆ ಏಮೈನಾ ಚೇಯಂಡಿ.”
 ಸರಿಯಪ್ಪಾ , ನಾವೂ ವಿಶೇಷ ಗಮನ ಹರಿಸುತ್ತೇವೆ. ಮನೆಯಲ್ಲಿ ನೀವು  ರಾತ್ರಿ ಮೂರು ತಾಸು ಬೆಳಗ್ಗೆ ಬೇಗನೆ ಎಬ್ಬಿಸಿ ಎರಡು ತಾಸಾದರೂ ಓದಿಸಿ, ಎಂದು ಒತ್ತಾಯ ಮಾಡಿದೆ.
ಮಾ ಇಂಟ್ಲೊ ಕರೆಂಟ್ ಎಕ್ಕಡುಂಟುಂದಿ ಸಾರು,  ಎಂಬದೆ ಹೆಚ್ಚು ಕಡಿಮೆ  ಎಲ್ಲರ ಮಾತಿನ ಸಾರ.
ಅದೂ ನಿಜ ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್‌ ಇರುವುದೆ ಇಲ್ಲ. ಬಂದರೂ ಫಕ್ ಅಂತ ಯಾವಾಗ ಹೋಗುವುದೋ ಹೇಳಲಾಗುವುದಿಲ್ಲ.
ನಾನು ಅವರಿಗೆ ಹೊಣೆ ಹೊರಿಸಲು ಕರಸಿದರೆ ಪುನಃ ಚೆಂಡು ನನ್ನ ಅಂಗಳಕ್ಕೆ ಬಂತು. ಆಯಿತು ನಾನು ಈವಿಷಯದಲ್ಲಿ ಏನಾದರೂ ಮಾಡಲು ಸಾಧ್ಯವಾ ಯೋಚಿಸುವೆ. ಆದರೆ ನೀವು ತುಸು ಗಮನಕೊಡಿ ಎಂದು ವಿನಂತಿಸಿದೆ.
ಹಿರಿಯ ಸಹಾಯಕರೊಡನೆ ಚರ್ಚಿಸಿದೆ. ನಮ್ಮಲ್ಲಿನ ಪಿಯುಸಿ. ವಿದ್ಯಾರ್ಥಿಗಳದು ಇದೆ ಸಮಸ್ಯೆ . ಕೊನೆಗೆ ಅಗತ್ಯವಿದ್ದ ಮಕ್ಕಳಿಗೆ ಕಾಲೇಜಿನಲ್ಲಿಯೆ ರಾತ್ರಿ ಅಭ್ಯಾಸ  ಮಾಡಲು ಅನುಕೂಲ ಮಾಡಿಕೋಡಲು ನಿರ್ಧಾರವಾಯಿತು.ಎಸ್ ಎಸ್ ಎಲ್‌ ಸಿ ಮಕ್ಕಳಿಗೆ ಮಾತ್ರ ಗಣಿತ, ಇಂಗ್ಲಿಷ್‌ ಮತ್ತು  ವಿಜ್ಞಾನ ವಿಷಯದಲ್ಲಿ ಶಾಲೆ  ಮುಗಿದ  ನಂತರ ಒಂದು ಗಂಟೆ ವಿಶೇಷ ಬೋಧನೆ ಮಾಡಬೇಕೆಂದು ನಿರ್ಧರಿಸಲಾಯಿತು.ಕಾರಣ ನಮ್ಮಲ್ಲಿ ಮಹಿಳಾ ಶಿಕ್ಷಕರೆ ಹೆಚ್ಚು. ಅವರು  ಸಂಜೆ   ಪಾಠ ಮಾಡಿ ಹೋದರೆ ಸರಿ ಪುರುಷ ಶಿಕ್ಷಕರು ಸರದಿಯಮೆಲೆ ರಾತ್ರಿ ಹತ್ತರ ವರೆಗೆ ಮೆಲ್ವಿಚಾರಣೆ ನಡೆಸ  ಬೇಕೆಂದು ಯೋಜಿಸಲಾಯಿತು. ಹೇಗಿದ್ದರೂ ರಾತ್ರಿ  ಕಾವಲುಗಾರ ನಮ್ಮಲ್ಲಿ ಇದ್ದ. ನಂತರ ಅವನು  ನೋಡಿಕೊಳ್ಳ ಬೇಕಿತ್ತು. ನಾಲಕ್ಕು ಕೋಣೆಗಳನ್ನು ಅವರಿಗೆ ಬಿಟ್ಟುಕೊಡಲಾಯಿತು.  ಲೈಟುಗಳ ವ್ಯವಸ್ಥೆ ಇದ್ದೆ ಇದ್ದಿತು. ನೀರಿನ ತೊಂದರೆಯೂ ಇರಲಿಲ್ಲ.. ಕಾಲೇಜುವಿಭಾಗದಲ್ಲಿ  ಮನೆ ಹತ್ತಿರವಿದ್ದ  ಮತ್ತು ಮದುವೆಯಾಗದ ಉಪನ್ಯಾಸಕರು ನಿಗಾವಹಿಸಲು ಒಪ್ಪಿದರು. ನಮ್ಮ ಆಂಗ್ಲ ಉಪನ್ಯಾಸಕರಾದ ಬೆಕ್ಕೇರಿಯವರು ತಾವೂ ರಾತ್ರಿ ಅಲ್ಲಿಯೇ ಮಲಗುವುದಾಗಿ ಮುಂದೆ ಬಂದರು. ಅವರು ಹಳ್ಳಿಯಿಂದ ಬಂದವರು. ವಿದ್ಯಾರ್ಥಿಗಳ ಬಗ್ಗೆ ಕಳಕಳಿ ಹೆಚ್ಚು. ಮೇಲಾಗಿ ಅವರ ಮನೆಯವರೂ ಹೆರಿಗೆಗಾಗಿ ತವರಿಗೆ ಹೋಗಿದ್ದರು.
ವಸತಿ ಸಮಸ್ಯೆ ಪರಿಹಾರವಾಯಿತು. ಇನ್ನು ಊಟದ ವಿಷಯ. ಕಾಲೇಜು ಮಕ್ಕಳಿಗೆ ಅದು ಸಮಸ್ಯೆ ಯಾಗಲಿಲ್ಲ. ಅವರಿಗೆ ಸಂಜೆ ಮೂರುಗಂಟೆಗೆ ಕಾಲೇಜು ಮುಗಿಯುವುದರಿಂದ ಊರಿಗೆ ಹೋಗಿ ಊಟ ಮುಗಿಸಿ ಬೇಕಾದರೆ ಬುತ್ತಿ ಕಟ್ಟಿಕೊಂಡು ಸಂಜೆಯವೇಳೆಗೆ ಬರುವರು. ಆದರೆ ಹೈಸ್ಕೂಲು ಹುಡುಗರು ಸಂಜೆ ಆರೂವರೆಯವರೆಗೆ ವಿಶೇಷ ತರಗತಿಗ ಹಾಜರಾಗಬೇಕಿತ್ತು. ಊರಿಗೆ ಹೋಗಿ ಬರುವುದರಲ್ಲಿ ಕತ್ತಲಾಗುತಿತ್ತು . ಅದಕ್ಕೆ  ಅವರ ಊರಿನಲ್ಲಿ ಕಾಲೇಜು ವಿದ್ಯಾರ್ಥಿ ಇದ್ದರೆ ಅವನೊಂದಿಗೆ ಊಟ ಕಳುಹಿಸುವರು. ಇಲ್ಲದೆ ಇದ್ದರೆ, ಊರಿನಲ್ಲಿ ಇಬ್ಬರಿಗಿಂತ ಹೆಚ್ಚು ಮಕ್ಕಳು ರಾತ್ರಿ ಇಲ್ಲೆ ಇರುವಾಗ ಅವರ ಪೋಷಕರಲ್ಲಿ ಒಬ್ಬರು ಎಲ್ಲರ ಬುತ್ತಿ ತರುವರು.. ಹಾಗೂ ಯಾರೂ ಇಲ್ಲವಾದರೆ ಅವರ ಮನೆಯವರೆ ಸೈಕಲ್‌ ಮೇಲೆ ಬಂದು ಕೊಟ್ಟು ಹೋಗುವಂತೆ ವ್ಯವಸ್ಥೆ ಮಾಡಲಾಯಿತು.
 ಡಿಸೆಂಬರ್‌ ಒಂದರಿಂದ  ತರಗತಿಗಳು ಶುರುವಾದವು. ಒಂದು ದೊಡ್ಡ ಅನುಕೂಲವೆಂದರೆ ನಮ್ಮ ಮನೆ ಹತ್ತಿರದಲ್ಲೆ ನತ್ತು. ಹಾಗಾಗಿ ನಾನು ಸಂಜೆ ಅಲ್ಲೆ  ಕಾಲ  ಕಳೆಯುತಿದ್ದೆ. ಹಲವು ಉಪನ್ಯಾಸಕರೂ ಜೊತೆ ಕೊಡುತಿದ್ದರು.  ಉಳಿದಂತೆ ಎಲ್ಲರೂ ಸಮಯಕ್ಕೆ ಸರಿಯಾಗಿ ಬಂದು ಪಾಠ ಮಾಡಿ ಹೋಗುತಿದ್ದರು, ರಾತ್ರಿಯ ವೇಳೆ ಊಟವಾದ ನಂತರ ನಾನು ಹವಾ ಸೇವನೆಗೆಂದು ಕಾಲೇಜು ಕಡೆ ಬರುತಿದ್ದೆ. ನನ್ನ ಹೆಂಡತಿಯೂ ಕೆಲಸ ಮುಗಿಸಿ ಜೊತೆ ಕೊಡುತಿದ್ದಳು. ನಾವಿಬ್ಬರೂ ಒಟ್ಟಿಗೆ ಬರುವುದು ಅಲ್ಲಿ ಒಳ್ಳೆಯ ಪರಿಣಾಮ ಬೀರಿತು. ಹತ್ತು ಗಂಟೆಯವರೆಗೆ  ಅಲ್ಲಿಯೆ ಇರುತಿದ್ದೆವು.ಹಾಗಾಗಿ ಯಾವುದೆ ಗಲಭೆ ಗಲಾಟೆ ಇಲ್ಲದೆ ರಾತ್ರಿ ಶಾಲೆ ಸುಗಮವಾಗ ಸಾಗಿತು. ಸರ್ಕಾರಿ ಶಾಲೆಯಲ್ಲಿ ಈ ರೀತಿ ವಿಶೇಷ ವ್ಯವಸ್ಥೆ ಮಾಡಿರುವುದು ಜನರ ಗಮನ ಸೆಳೆಯಿತು. ಅನೇಕರ ಮೆಚ್ಚುಗೆಗೆ ಪಾತ್ರವಾಯಿತು.
ಫಲಿತಾಂಶ ಬಂದಾಗ ಪವಾಡವೇನೂ ಆಗಿರಲಿಲ್ಲ. ಎಸ್ ಎಸ್ ಎಲ್‌ಸಿಯಲ್ಲಿ 10%   ಹೆಚ್ಚು ಫಲಿತಾಂಶ ಬಂದಿತು ಪಿಯುಸಿಯಲ್ಲಿ ಅದು 15% ಹೆಚ್ಚಾಯಿತು. ಆದರೆ ಬಂದವರೆಲ್ಲಾ ಉತ್ತಮ ಅಂಕಗಳಿಸಿದ್ದರು. ಈಗ ಇಲಾಖೆಯೆ ಶಿಕ್ಷಣ ಮಟ್ಟ ಸುಧಾರಿಸಲು ವಿಶೇಷ ತರಬೇತಿ ನಡೆಸಲೇಬೇಕೆಂದು ಆದೇಶ  ಮಾಡಿದೆ. ಅದನ್ನು ಗುಣುಗುತ್ತಾ ಜಾರಿಗೂ ತರಲಾಗಿದೆ.
ನಮ್ಮಲ್ಲಿ ವಿಶೇಷ ವ್ಯವಸ್ಥೆಯು ಮಾತ್ರ  ಹಿತಕರವಾದ ದೂರಗಾಮಿ ಪರಿಣಾಮ  ಬೀರಿತು. ವಿದ್ಯರ್ಥಿಗಳ ,ಸಿಬ್ಬಂದಿಯ ಮತ್ತು ನನ್ನ  ನಡುವಿನ  ಬಾಂಧವ್ಯ  ಸುಮಧುರವಾಯಿತು.. ಸಂಸ್ಥೆಯಲ್ಲಿ ಅಶಿಸ್ತಿನ ಮಾತೆ ಇರಲಿಲ್ಲ ಇದರಲ್ಲಿ ಭಾಗಿಗಳಾದ ಮಕ್ಕಳು ಮತ್ತು ಶಿಕ್ಷಕರು ಒಂದೂವರೆ ದಶಕದ ನಂತರವೂ ಖುಷಿಯಿಂದ ಆ ಅನುಭವವನ್ನು ನೆನಸಿಕೊಳ್ಳುವರು.
.ಅದಕ್ಕೂ ಮಿಗಿಲಾಗಿ ಪಠ್ಯ  ಪುಸ್ತಕ ಕೊಳ್ಳಲಾಗದವರಿಗೆ ಸಹಾಯ ಮಾಡುವ ನನ್ನ ಬಯಕೆ ಈಡೇರಿತು.  ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಾ ನಾನು ಎಲ್ಲರಿಗೆ ಪರೀಕ್ಷೆಯಾದ ಮೇಲೆ ತಮ್ಮ ಪಠ್ಯ ಪುಸ್ತಗಳನ್ನುಶಾಲೆಗ ನೀಡಲು ತಿಳಿಸಿದೆ. ಅಕಸ್ಮಾತ್‌ ಅಗತ್ಯ ಬಿದ್ದರೆ ಹಿಂತಿರುಗಿಸುವುದಾಗಿ ತಿಳಿಸಿದೆ. ಎಸ್‌ ಎಸ್‌ ಎಲ್‌ ಸಿ ಮತ್ತು ಪಿಯುಸಿ ಯ ಮಕ್ಕಳು ಸಹಕರಿಸಲು ಒಪ್ಪಿದರು. ಇದೆ ಮಾತನ್ನು  ಉಳಿದ ತರಗತಿಯ ಮಕ್ಕಳಿಗೂ ತಿಳಿಸಲಾಯತು. ಎಲ್ಲರೂ ಪರೀಕ್ಷೆ ಮುಗಿದ ನಂತರ  ಕೊಡಬೇಕೆಂದು ಅವರ ಸೋದರರಿದ್ದರೆ ಅವರಿಗೆ ಕೊಡುವುದಾಗಿಯೂ ಮತ್ತು ನಮ್ಮಲ್ಲೆ ಓದುವ ಮಕ್ಕಳಿಗೆ ಅದ್ಯತೆಯ ಮೇಲೆ ಮುಂದಿನ ತರಗತಿಯ ಪುಸ್ತಕ ನೀಡುವುದಾಗಿಯೂ ಹೇಳಲಾಯಿತು ಪುಸ್ತಗಳ . ಸಂಗ್ರಹವನ್ನು   ಅಯಾ  ಕ್ಲಾಸ್‌ ಟೀಚರುಗಳು ಮಾಡಿದರು . ಸರಿಸುಮಾರು 75% ವಿದ್ಯಾಥಿಗಳು  ನಮ್ಮ ಯೋಜನೆಗೆ ಸ್ಪಂದಿಸಿದ್ದರು. ಮುಂದಿನ ವರ್ಷ ಕಾಲೇಜು ಪ್ರಾರಂಭವಾದ ಮೊದಲ ವಾರದಲ್ಲೆ ಮೊದಲು ಬಂದವರಿಗೆ ಮೊದಲ ಆದ್ಯತೆಯ ಮೇಲೆ ಉಚಿತವಾಗಿ ಪುಸ್ತಕ ಕೊಡುವುದಾಗಿ  ಸೂಚನಾಫಲಕದಲ್ಲಿ ಪ್ರಕಟಿಸಲಾಯಿತು.ಸೆಕೆಂಡ್‌ ಹ್ಯಾಂಡ್‌ ಬುಕ್‌ ಬ್ಯಾಂಕ್‌ ನಮ್ಮಲಿ ತಲೆ ಎತ್ತಿತು.  ಇದು ಅಂಥಹ ಮಹಾನ್‌ ಸಾಧನೆ  ಏನೂ ಅಲ್ಲ. ಪ್ರವೇಶಕ್ಕಾಗಿಯೆ ಸಾವಿರಾರು ರೂಪಾಯಿ ವಂತಿಗೆ ನೀಡುವವರಿಗಂತೂ  ಉಚಿತ ಪಠ್ಯ ಪುಸ್ತಕ  ಎಂದರೆ ನಗು ಬರಬಹುದು. ಆದರೆ ಅಲ್ಲಿನ ಪರಿಸ್ಥಿತಿಯಲ್ಲಿ ಅದೆ ಒಂದು ಪ್ರಮುಖ ಹೆಜ್ಜೆ ಯಾಗಿತ್ತು. ಈಗ ಅ ಸಮಸ್ಯೆಯೇ  ಇಲ್ಲ. ಸರ್ಕಾರವೆ ಉಚಿತವಾಗಿ ಪಠ್ಯ  ಪುಸ್ತಕಗಳ ಸರಬರಾಜು ಮಾಡುವುದು. ಆದರೆ  ಬಡ ಮಕ್ಕಳಿಗೆ ತಮ್ಮಿಂದ  ತುಸುವಾದರೂ ಸಹಾಯವಾಗಲಿ ಎಂದು ಸ್ಪಂದಿಸಿದ ವಿದ್ಯಾರ್ಥಿಗಳ ಗುಣವೇ ಅವರಿಗೆ ನೀಡಿದ  ಶಿಕ್ಷಣ ಸಾರ್ಥಕವಾಯಿತೆಂದು ತೋರಿಸುವುದು...







No comments:

Post a Comment