Friday, February 15, 2013

ಅಮೇರಿಕಾ ಅನುಭವ


ಎಲ್ಲೀಸ್ ದ್ವೀಪ                                                                                                             
ಅಮೇರಿಕಾದ ಅತ್ಯಂತ ಪುರಾತನ ವೀಸಾ ಕೇಂದ್ರ  ಎಲ್ಲೀಸ್‌ ದ್ವೀಪ.   ಕಳೆದ ಶತಮಾನದ ತನಕ ಯೂರೋಪಿನಿಂದ  ಅಮೇರಿಕಾಗೆ ಬರುವವರಿಗೆ  ಇದ್ದ ಏಕೈಕ ಹೆಬ್ಬಾಗಿಲು.ಆರ್ಥಿಕ ಅವಕಾಶ ,ಧಾರ್ಮಿಕ ಸ್ವಾತಂತ್ರ್ಯ ನೀಡುವ  ಕನಸಿಸನನಾಡಿಗೆ ತೆರೆದ ಬಾಗಿಲು .  ಅಖಂಡ ೬೨ ವರ್ಷಗಳ ಕಾಲ.ಎಲ್ಲೀಸ್‌ ಐಲ್ಯಾಂಡ  ಅಮೇರಿಕಾದ ಮಹಾ ದ್ವಾರವಾಗಿತ್ತು.ನ್ಯೂಯಾರ್ಕ ನಿಂದ ಕೆಲವೇ ಮೈಲು ದೂರದಲ್ಲಿರುವ, ಹಡ್ಸನ್ ನದಿಯ ನಡುವೆ  ಇರುವ  ಇದು ಒಂದು ಪುಟ್ಟ   ದ್ವೀಪ.  ಅಟ್ಲಾಂಟಿಕ್ ಸಾಗರದಿಂದ ನೌಕೆಗಳು ನೇರ   ಬರಬಹುದಾದ  ಪುಟ್ಟ ದ್ವೀಪವು ೧೨ ಮಿಲಿಯನ್ ವಲಸಿಗರನ್ನು ಒಳಬಿಟ್ಟಿದೆ. ಅದರ ವಿಸ್ತೀರ್ಣ ಮೊದಲು ಕೇವಲ ೩೩.೩ ಎಕರೆ.  ಅಲ್ಲಿ ಇರುವುದು ಕೆಲವೇ  ಕೆಲವು ಸರ್ಕಾರಿ ಕಟ್ಟಡಗಳು . ಖಾಸಗಿ  ಜನರ ಮನೆಗಳು  ಅಲ್ಲಿ ಇಲ್ಲವೆ ಇಲ್ಲ. ವಲಸೆ ಕಚೇರಿ,ವಲಸಿಗರ ಅನುಕೂಲಕ್ಕಾಗಿ   ವಸತಿಗೃಹ, ಪಾಕಶಾಲೆ, ವೈದ್ಯಕೀಯ ಪರೀಕ್ಷೆಗಾಗಿ ಉನ್ನತ ದರ್ಜೆಯ ಆಸ್ಪತ್ರೆ ಅಲ್ಲಿರುವ  ಮುಖ್ಯ ಕಟ್ಟಡಗಳು.
ಸ್ಯಾಮ್ಯುಯಲ್ ಎಲೀಸ ಎಂಬ ಹೆಸರಿನ ವ್ಯಕ್ತಿ  ಸಾಗರಕ್ಕಿಂತ ಕೆಲವೇ ಅಡಿ ಮೆಲಿದ್ದ ಮರಳು ಮಿಶ್ರಿತವಾದ ನೆಲದ ಈ ಜಾಗವನ್ನು ೧೭೭೦ರಲ್ಲಿ ಕೊಂಡು ಕೊಂಡ.. ಅದರಿಂದ ಇದಕ್ಕೆ ಅವನ ಹೆಸರೆ ಇಟ್ಟರು.ಡಚ್ ಮತ್ತು ಇಂಗ್ಲಿಷರ ವಸಹಾತುಗಳ ಕಾಲದಲ್ಲಿ ಇದಕ್ಕೆ ಓಯಿಸ್ಟರ್ ದ್ವೀಪ ಎಂಬ ಹೆಸರಿತ್ತು.ಅದಕ್ಕೂ ಮೊದಲು ಅಮೇರಿಕಾದ ಮೂಲ ನಿವಾಸಿಗಳು ಅದನ್ನುಕೊಯಿಷ್ಕ ಅಥವಾ ಗಲ್ ದ್ವೀಪ ಎನ್ನುತ್ತಿದ್ದರು. ಅಮೇರಿಕಾದ ಸ್ವಾತಂತ್ರ್ಯಯುದ್ಧದ ಸಮಯದಲ್ಲಿ    ೧೭೯೪-೧೮೦೦ ರ ಅವಧಿಯಲ್ಲಿ  ಬ್ರಿಟಿಷ್ ನೌಕಾಪಡೆ ಎಡೆ ತಡೆಯಿಲ್ಲದೆ ಈ ಮಾರ್ಗವಾಗಿ ನ್ಯೂಯಾರ್ಕ ತೀರ ಸೇರುತ್ತಿದ್ದವು. ಇದರ ಮಹತ್ವ ಅರಿತ ಫೆಡರಲ್ ಸರ್ಕಾರವು  ಆಯಕಟ್ಟಿನ ಈ ದ್ವೀಪವನ್ನು ಖರೀದಿಸಿ ಕೋಟೆ ಕೊತ್ತಲ ಕಟ್ಟಿಸಿ ಸಾಗರತೀರವನ್ನು ಭದ್ರಪಡಿಸಿತು .ಆವಾಗಲೇ ಕ್ಲಿಂಟನ್ ಕೋಟೆ,ಬ್ಯಾಟರಿ ಪಾರ್ಕ,ಕ್ಯಾಸಲ್ ವಿಲಿಯಂ ಮೊದಲಾದವು ನಿರ್ಮಿತವಾದವು.
ಅಮೇರಿಕಾಗೆ ಬರುವ ವಲಸಿಗರನ್ನು೧೮೨೦ ಕ್ಕೆ ಮೊದಲು ಆಯಾರಾಜ್ಯಗಳೇ ನಿಯಂತ್ರಿಸುತ್ತಿದ್ದವು.ಇಂಗ್ಲೆಂಡ, ಐರಲೇಂಡ ಮತ್ತು ಇನ್ನಿತರ ಯುರೋಪಿನ ದೇಶಗಳಿಂದ ಬರುವವರ ಸಂಖ್ಯೆ ೧೮ನೇ ಶತಮಾನದ ಕೊನೆಯಲ್ಲಿ ತುಂಬ ಹೆಚ್ಚಾಯಿತು. ರಾಜ್ಯಗಳು ವಲಸೆಗಾರರ ನಿಯಂತ್ರಣ ಮಾಡುವಲ್ಲಿ ವಿಫಲವಾದವು. ಯುರೋಪಿನ ಕಳ್ಳ ಕಾಕರಿಗೆ, ಕ್ರಿಮಿನಲ್ ಗಳಿಗೆ ಕುಖ್ಯಾತರಿಗೆ ಅಮೇರಿಕಾ ಸುರಕ್ಷಿತ ಸ್ವರ್ಗವಾಯಿತು. ಅಮೇರಿಕಾದ ಕಾನೂನು  ಸುವ್ಯವಸ್ಥೆಗೆ ಭಂಗ ಬರಹತ್ತಿತು.  ಇದರಿಂದ ಎಚ್ಚೆತ್ತ ಫೆಡರಲ್ ಸರ್ಕಾರವು ವಲಸೆಗಾರರು ಅಮೇರಿಕಾವನ್ನು ಪ್ರವೇಶಿಸುವ ಎಲ್ಲ ಮಾರ್ಗಗಳನ್ನು ಮುಚ್ಚಿ  ಏಕಮೇವ ಜಲಮಾರ್ಗಕ್ಕೆ ಅವಕಾಶ ನೀಡಿತು. ಅಂದರೆ ಯಾರೇ ಅಮೇರಿಕಾಕ್ಕೆ ಬಂದರೂ  ಬರುವ ಮೊದಲೆ ತಪಾಸಣೆಗೆ ಒಳಗಾಗಬೇಕಾಯಿತು. ಅಲ್ಲಿ ಅನುಮತಿ ದೊರೆತರೆ ಮಾತ್ರ ಪ್ರವೇಶ. ಎಲೀಸ ಐಲೇಂಡ ೧೮೯೨ರ ಜನವರಿಯಿಂದ  ಅಮೇರಿಕಾದ ಅಧಿಕೃತ ಪ್ರವೇಶ  ದ್ವಾರವಾಯಿತು. ಅಪರಾಧದ ಹಿನ್ನೆಲೆ ಇರುವವರನ್ನು ವಾಪಸ್ಸು ಕಳುಹಿಸುತ್ತಿದ್ದರು. ಆರೋಗ್ಯಕ್ಕೂ ಅತ್ಯಂತ ಪ್ರಾಮುಖ್ಯತೆ ಇತ್ತು. ಬಹು ಕಠಿನವಾದ ಆರೋಗ್ಯ ತಪಾಸಣೆ ಆಗತಿತ್ತು. ತುಸು ಅನುಮಾನ ಬಂದರೂ ಅವರನ್ನು ಒಂದು ನಿರ್ಧಿಷ್ಟ ಅವಧಿಯವರೆಗೆ ಪ್ರತ್ಯೇಕ ವಾಗಿ ಇಡುತ್ತಿದ್ದರು.ಆನಂತರವೂ ತೃಪ್ತಿಕರವಾಗಿಲ್ಲದಿದ್ದರೆ ಅವರನ್ನು ಹಿಂತಿರುಗಿಸಿ ಬಂದಲ್ಲಿಗೆ ಕಳುಹಿಸುತ್ತಿದ್ದರು. ಅವರನ್ನು ವಾಪಸ್ಸು ಕರೆದೊಯ್ಯುವುದು  ಕಂಪೆನಿಯ ಹೊಣೆಯಾಗಿತ್ತು. ಅನೇಕ ಸಲ  ಗಂಡನಿಲ್ಲದೆ ಹೆಂಡತಿ, ಹೆಂಡತಿಯಿಲ್ಲದೆ ಗಂಡ , ಅಪ್ಪ ಅಮ್ಮ ಇಲ್ಲದೆ ಮಕ್ಕಳು ,ಮಗುವನ್ನುಬಿಟ್ಟು ತಾಯಿ ತಂದೆಯರಿಗೆ ಮಾತ್ರ ಪ್ರವೇಶದ ಅವಕಾಶ ಸಿಗತ್ತಿತ್ತು.  ಆಗ ಆ ಕುಟುಂಬದವರ ರೋಧನ ಮುಗಿಲು ಮುಟ್ಟುತ್ತಿತ್ತು. ಕುಟುಂಬದಲ್ಲಿನ  ಒಬ್ಬರನ್ನು ಆರೋಗ್ಯ ಕಾರಣಕ್ಕಾಗಿ ಪ್ರತ್ಯೇಕವಾಗಿ ಯಾರ ಸಂಪರ್ಕಕ್ಕೂ ಬರದಂತೆ ಇರಿಸಿದಾಗ ಆಗುವ ಅನಾಹುತೆ   ಕಲ್ಪನೆನಿಲುಕಲಾರದು..ತಾಯಿಗೆ ಅನಮತಿ ಸಿಕ್ಕು ಮಗುವಿಗೆ ಅನುಮತಿ ದೊರಯದಾದಾಗ ಇರುವಂತಿಲ್ಲ ವಾಪಸು ಹೋಗು ವಂತಿಲ್ಲ.   ಆದ್ದರಿಂದ ದನ್ನು ಕಣ್ಣೀರಿನ ದ್ವೀಪ ಎಂದೂ ಕರೆಯುತ್ತಿದ್ದರು. ಆನಿ ಮೂರ್ ಎಂಬ ೧೫  ವರ್ಷದ ಐರಿಷ್ ಯುವತಿ ಮತ್ತು  ಅವಳ ಇಬ್ಬರು ಸೋದರರು  ಇಲ್ಲಿ ದಾಖಲಾದ ಮೊಟ್ಟ ಮೊದಲ ವಲಸಿಗರು.ಆಗಿನಿಂದ ೬೨ ವರ್ಷದ ವರೆಗೆ   ೧೨ ಮಿಲಿಯನ್ ವಲಸಿಗರು ಇಲ್ಲಿಂದ ಪ್ರವೇಶ  ಪಡೆದಿದ್ದಾರೆ. ಇದನ್ನು ೧೯೫೪ ರಲ್ಲಿ  ಮುಚ್ಚಲಾಯಿತು.   ಅಮೆರಿಕಾ ಪ್ರವೆಶಿಸುವವರಿಗೆ ಪ್ರತ್ಯೇಕ  ವ್ಯವಸ್ಥೆ ಮಾಡಲಾಯಿತು.. ಈಗ ಜಲ ಮಾರ್ಗದಲ್ಲಿ ಬರುವವರ ಸಂಖ್ಯೆ ಬಹುವಿರಳವಾಯಿತು. .ವಾಯುಮಾರ್ಗವೇ ಜನಪ್ರಿಯ ವಾಗತೊಡಗಿತು. ಸಾಕಷ್ಟು ದುರಸ್ತಿಯ ನಂತರ ೧೯೯೦ ರಲ್ಲಿ ಎಲೀಸ್ ಐಲ್ಯಾಂಡನ್ನು ಸಂದರ್ಶಕರಿಗೆ  ತೆರೆಯಲಾಯಿತು.
ಎಲ್ಲೀಸ್ ಐಲ್ಯಾಂಡ,  ಇಂದಿನ ಅಮೇರಿಕನರ  ವಂಶಜರ ಮೂಲಬೇರು  ಮೂಡಿದ  ತಾಣ.  ಅಮೇರಿಕಾದಲ್ಲಿನ ಶೇಕಡಾ ೪೦  ರಷ್ಟು ಜನರ ಪೂರ್ವಜರು  ಇಲ್ಲಿಂದಲೇ ಪ್ರವೇಶ ಪಡೆದಿದ್ದಾರೆ. ಅಲ್ಲಿನ ಜನರಿಗೆ ವಂಶವೃಕ್ಷ ಅರಿಯುವ ಹಂಬಲ ಬಹಳ. ಅಮೇರಿಕಾಗೆ ವಲಸೆ ಬಂದವರ ಅಧಿಕೃತ ವಿವರ  ಇಲ್ಲಿ ಸಿಗುತ್ತವೆ, ಅನೇಕ ಜನ ನೂರಿನ್ನೂರು ವರ್ಷಗಳ ಎರಡು ಮೂರು ತಲೆಮಾರಿನ ಹಿಂದಿನ ತಮ್ಮ ಮುತ್ತಜ್ಜ ಎಲ್ಲಿಂದ ಬಂದರು,  ಯುರೋಪಿನ ಯಾವ ಭಾಗದಿಂದ ಬಂದರು ಎಂಬುದನ್ನು ಇಲ್ಲಿ ಬಂದು ತಿಳಿದು ಕೊಂಡು  ತಮ್ಮ ಮೂಲ ಬೇರನ್ನು ಅರಸಿ  ಅಲ್ಲಿಗೆ ಹೋಗುವುದೂ  ಉಂಟು.ಹಿಂದೆ ನಮ್ಮಲ್ಲಿಯೂ ವಂಶ ವೃಕ್ಷದ ಬಗ್ಗೆ ಅತೀವ ಕಾಳಜಿಇತ್ತು  ಹೆಳವರು   (ಹಳಬರು)  ಎಂಬ ಒಂದು ಸಮುದಾಯ ಇತ್ತು. ಇವರು ಆಯಗಾರರು. ಒಂದೊಂದು ವಂಶಕ್ಕೆ ಒಬ್ಬರು ಇರುತ್ತಿದ್ದರು ಇವರ ಕೆಲಸ ವಂಶ ಪಾರ್ಯಂಪರೆಯಾಗಿ  ತಲಾಂತರದಿಂದ ಮುಂದುವರೆಯುತ್ತಿತ್ತು.  ಊರಿನಲ್ಲಿನ ಎಲ್ಲ ಪ್ರಮುಖ  ಕುಟುಂಬಗಳ ದಾಖಲೆ  ಅವರಲ್ಲಿ ಇರುತ್ತಿತ್ತು  ವರ್ಷಕೊಮ್ಮೆ  ವಂಶದ ಮೂಲ ಮನೆಗೆ ಬಂದು ಅಲ್ಲಿ ಆಗಿರುವ  ಹುಟ್ಟು , ಸಾವು, ಮದುವೆ,ಮದುವೆಯಾಗಿ ಹೋದ ಹೆಣ್ಣು ಮಕ್ಕಳು ಮತ್ತು ಅವರ ಒಂದು ತಲೆಮಾರಿನ ಮಕ್ಕಳು , ಮನೆಗೆ ಬಂದ ಸೊಸೆ, ಅವರಿಗೆ ಆದ ಮಕ್ಕಳ ಹೆಸರು ಎಲ್ಲವನ್ನೂ ಅವರ ಕಡತದಲ್ಲಿ ದಾಖಲಿಸಿ . ಇಡುತ್ತಿದ್ದರು  ಕುಟುಂಬದ  ಕುಡಿಗಳು ವಲಸೆಹೋದರೆ ಅದನ್ನೂ ದಾಖಲಿಸಿ  ಆ ಊರಿಗೆ ಹೋಗಿ ಅವರ ಬೆಳವಣಿಗೆ  ವಿವರ ಸಂಗ್ರಹಿಸುತ್ತಿದ್ದರು.  ಅದಕ್ಕಾಗಿ ಅವರಿಗೆ ವರ್ಷಕ್ಕೆ ಇಷ್ಟು ದವಸ ಧಾನ್ಯ, ಹೊಸ ಬಟ್ಟೆ ,ಚಿಕ್ಕ ಪುಟ್ಟ ಕಾಣಿಕೆ ಸಂದಾಯವಾಗುತಿತ್ತು. ಇಬ್ಬರ ನಡುವಿನ ಬಾಂಧವ್ಯ ಮಧುರ ವಾಗಿರಿತ್ತಿತ್ತು. ನಾನು ಹೇಳುತ್ತಿರುವದು ಐವತ್ತು ಅರವತ್ತು ವರ್ಷದ ಹಿಂದಿನ ಮಾತು.ಇತಿಹಾಸದ ಅಧಿಕೃತ  ಮಾಹಿತಿಯ ಮೂಲವಾಗಬಹುದಾಗಿದ್ದ   ಈ ಪದ್ದತಿ ಬದಲಾದ ಕಾಲದಲ್ಲಿ ಕ್ರಮೇಣ ಕಣ್ಮರೆಯಾಗಿದೆ.ಪರಮಾಣು ಕುಟುಂಬ ವ್ಯವಸ್ಥೆ ತಲೆಎತ್ತಿದ ಮೇಲೆ,  ಮುತ್ತಾತನ ಮಾತು ಹಾಗಿರಲಿ ತಂದೆ ತಾಯಿಯರನ್ನೇ ವರ್ಷಗಳಾದರೂ  ನೋಡಲು ಬಾರದಿರುವ , ಇದ್ದ ಊರಿನಲ್ಲಿಯೇ ಮುದಿ ತಾಯಿ ತಂದೆಯರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವ ಈಗಿನರ ಕಾಲದಲ್ಲಿ ವಂಶವೃಕ್ಷವನ್ನು ಅರಿಯುವ ಆಸಕ್ತಿ ಯಾರಿಗಿದೆ ? ಹೀಗಾಗಿ   ಹೆಳವರ ಕುಲ ಕಸಬು ಹಾಳಾಗಿ ಹೋಯಿತು.

 ಆದರೆ ಅಮೇರಿಕಾದಲ್ಲಿ ವಲಸೆ ಬಂದ ತಮ್ಮ ಪೂರ್ವಜರ ವಿವರ ತೀಳಿಯುವ ಆಸಕ್ತಿ ಮತ್ತು ಪ್ರಯತ್ನ ಈಗ ಮರುಕಳಿಸಿದೆ. ಅದಕ್ಕೆ ಪೂರಕವಾಗಿದೆ ಎಲೀಸ್  ಐಲ್ಯಾಂಡನಲ್ಲಿನ ವಸ್ತು ಸಂಗ್ರಹಾಲಯ. ಅಮೇರಿಕದಲ್ಲಿನ ಒಟ್ಟು ಜನ ಸಂಖ್ಯೆಯ ಶೇಕಡಾ ನಲವತ್ತು ಜನರ ಪೂರ್ವಜರು ಈ ಬಾಗಿಲನ್ನು ದಾಟಿಯೇ ಹೋಗಿದ್ದಾರೆ.  ಸುಮಾರು ೧೨ ಮಿಲಿಯನ್ ಜನರ ಜಾತಕ ಇಲ್ಲಿದೆ. ಅವರೆಲ್ಲರ ದಾಖಲೆ ಇಲ್ಲಿ ಭದ್ರವಾಗಿದೆ. ಅವರು ಯಾವಾಗ ಬಂದರು, ಎಲ್ಲಿಂದ ಬಂದರು, ಎಲ್ಲಿಗೆ ಹೋದರು, ಬರುವ ಮುನ್ನ ಏನು ಮಾಡುತ್ತಿದ್ದರು  ಎಂಬ ಎಲ್ಲ ಮಾಹಿತಿಗಳು ಇಲ್ಲಿ ದೊರೆಯುತ್ತವೆ.
ಅಮೇರಿಕಾದ ಮೂಲನಿವಾಸಿಗಳು ರೆಡ್ ಇಂಡಿಯನ್ಸ ಎಂದು ಕರೆಯಲಾಗುತ್ತದೆ. ಯುರೋಪಿಯನ್ನರು ಕಾಲಿಡುವ ಮೊದಲು ಅವರು ಚಿಕ್ಕ ಪುಟ್ಟ ಹಳ್ಳಿಗಳಲ್ಲಿ ತಮ್ಮದೆ ಆದ ಸಾಮಾಜಿಕ ವ್ಯವಸ್ಥೆಯನ್ನು ಹೊಂದಿ ಬಾಳುತ್ತಿದ್ದರು.   ಕೊಲಂಬಸನ ಅನ್ವೇಷಣೆಯಿಂದ ಮೊದಲಾಯಿತು ಅವರ ಏಳರ ಶನಿಕಾಟ. ಸ್ಪೇನಿನವರ ಜೊತೆ ಡಚ್ಚರ ಪ್ರವೇಶವಾಯಿತು.. ಫ್ರೆಂಚರು, ನಂತರ ಇಂಗ್ಲಿಷರು ಬಂದರು..ಬರುವಾಗ ಇಲ್ಲದ ಎಲ್ಲ ಕಾಳಜಿ ಬಂದು ನೆಲಸಿದ ಮೇಲೆ ಮೊದಲಾಯಿತು. ಆರೋಗ್ಯ ಮತ್ತು ಕಾನೂನಿನ ಸುವ್ಯಸ್ಥೆ ಗಾಗಿ ವಲಸೆ  ನಿಯಂತ್ರಣ ಅಗತ್ಯ ಎನಿಸಿತು.ಮೊದಮೊದಲು ಬಂದವರಿಗೆಲ್ಲ ಸ್ವಾಗತವಿತ್ತು.  ಯಾವಾಗ ಯುರೋಪಿನಲ್ಲಿ ಅಪರಾಧ  ಮಾಡಿ ತಲೆಮರಸಿಕೊಳ್ಳಲು ಅಮೇರಿಕಾಕ್ಕೆ ಬರುವುದು ಶುರುವಾಯಿತೋ ಆಗ ಎಲ್ಲರನ್ನು ಒಳ  ಬಿಡುವುದಕ್ಕೆ ಹಿಂದು ಮುಂದು ನೋಡಬೇಕಾಯಿತು ಅದರಿಂದ ಬರುವವರ ಹಿನ್ನೆಲೆಯ ಪರೀಶಿಲನೆ ಅಗತ್ಯವಾಯಿತು.

ಈ ಪರಿಶೀಲನೆಯಲ್ಲಿಯೂ ಬಡವಬಲ್ಲಿದ ಎಂಬ ಬೇಧ ಭಾವ ತಲೆತೂರಿಸಿತು. ಸಾಧಾರಣವಾಗಿ ನೌಕೆಯಲ್ಲಿ ಮೊದಲ ಮತ್ತು ಎರಡನೆ ದರ್ಜೆಯಲ್ಲಿ ಬರುವ  ಪ್ರಯಾಣಿಕರಿಗೆ ಯಾವುದೆ ಅಡೆತಡೆ ಇರಲಿಲ್ಲ. ಅವರ ಅಂದಾಜಿನಂತೆ  ಪ್ರಯಾಣಕ್ಕಾಗಿ ಅಷ್ಟು ಹಣ ಕೊಡಬಲ್ಲವರು,ಹೊಸ ದೇಶಕ್ಕೆ ಹೊರೆಯಾಗಲಾರರು. ಅವರಿಂದ ಯಾವುದೆ ಸಮಸ್ಯೆ ಬರುವುದಿಲ್ಲ ಎಂಬ ಭಾವನೆ ಬಲವಾಗಿತ್ತು
ಹೀಗಾಗಿ ಬಡವರು ಮಾತ್ರ ಅವರ ಗುರಿಯಾಗಿದ್ದರು. ವೈದಕೀಯ ಕಾರಣವಿದ್ದರೆ ಮಾತ್ರ ಯಾರೆ ಇರಲಿ ತಡೆ ಹಿಡಿಯಲಾಗುತಿತ್ತು.
ಮೂರನೆ ದರ್ಜೆಯ ಪ್ರಯಾಣಿಕರು ಮಾತ್ರ ತೀವ್ರ ತಪಾಸಣೆಗೆ ಒಳಗಾಗಬೇಕಿತ್ತು. ಅವರು ಗಂಟೆ ಗಟ್ಟಲೆ ಕಾಯಬೇಕಿತ್ತು. ಕೆಲವು ಸಲ ದಿನ ಗಟ್ಟಲೇಯೂ ಇರಬೇಕಿತ್ತು
ಬೇರೆ ಬೇರೆ ಹಡಗುಗಳುಲ್ಲಿ ಬಂದವರನ್ನು ಫೆರ್ರಿಗಳಲ್ಲಿ ದಡಕ್ಕೆ ಕರೆತರಲಾಗುತಿತತ್ತು. ಹಡಗು ಬಂದರಿನಿಂದ ದೂರದಲ್ಲೇ ಲಂಗರು ಹಾಕಬೇಕಿತ್ತು. ಯಾರಾದರೂ ಹಡಗಿನಿಂದ ಧುಮುಕಿ ಈಜಿ ದಡಕ್ಕೆ ಬಾರಬಾರದಿರಲು ಈ ಮುನ್ನೆಚ್ಚರಿಕೆ. ಕ್ರಮ.
ಎಲೀಸ್ದ್ವೀದ ಉತ್ತರ ಭಾಗದಲ್ಲಿ ವಲಸಿಗರು ಕಾಯುತ್ತ ಕುಳಿತಿರಲು ದೊಡ್ಡ  ಹಾಲು, ಅವರಿಗೆ ಆಹಾರ ತಯಾರಿಸಲು ಪಾಕಶಾಲೆ, ಸ್ನಾನ ಗೃಹ, ಬೇಕರಿ ಇದ್ದವು. ಅವರಿಗೆ ಮಲಗಲು ತಾಣ, ಸರಕು ಸಾಮಗ್ರಿಗಳನ್ನು ಇಡಲು ಸಾಕಷ್ಟು ಜಾಗ, ಮಕ್ಕಳಿಗೆ ಆಟ ಆಡಲು ವಿಶಾಲವಾದ  ಕ್ರೀಡಾ ಮೈದಾನವಿದೆ.
ದಕ್ಷಿಣ ಭಾಗದಲ್ಲಿನ ೨೯ ಕಟ್ಟಡಗಳು ಆಸ್ಪತ್ರೆಯ ಸಂಕೀರ್ಣವಾಗಿದೆ. ಸೋಂಕು ರೋಗ ಪೀಡಿತರು,ಮನ ಸ್ವಾಸ್ಥ್ಯ ವಿಲ್ಲದವರು, ಅನಾರೋಗ್ಯ ಪೀಡಿತರಿಗೆ ಇಲ್ಲಿ ಬೇರೆ ಬೇರೆ ಇಡಲಾಗುತ್ತಿತ್ತು. ಸಾಧಾರಣ ರೋಗಗಳಾದರೆ ಚಿಕಿತ್ಸೆ ನೀಡಿ ಗುಣವಾದ ಮೇಲೆ ಅವರಿಗೆ ದೇಶದಲ್ಲಿ ಪ್ರವೇಶ ನೀಡಲಾಗುತಿತ್ತು. ಗರ್ಭಿಣಿ ಮಹಿಳೆಯರಿಗೆ ಬೇರೆ ವಸತಿ ನಿಲಯ ಇತ್ತು. ಅಲ್ಲಿ ಒಟ್ಟು ೩೫೫ ಮಕ್ಕಳು ಜನಿಸಿವೆ. ಮಗು  ಆರೋಗ್ಯವಾಗಿದ್ದರೆ ಮಾತ್ರ ಹೊಸ ದೇಶಕ್ಕೆ ಪ್ರವೇಶ ಪಡೆಯಬಹುದಿತ್ತು  ಇಲ್ಲವಾದರೆ ತಾಯಿ ಮಗುವಿನ ಸ್ಥಿತಿ ಕರುಣಾಜನಕ .ಕುಟುಂಬ ಒಂದು ವಲಸೆ ಬಂದಾಗ ಅಕಸ್ಮಾತ ಸದಸ್ಯರೊಬ್ಬರು ಅನಾರೋಗ್ಯಪೀಡಿತರಾದಾರೆ ಅವರೊಬ್ಬರನ್ನೆ ತಿಂಗಳು ಗಟ್ಟಲೆ ಇಲ್ಲಿ ಬಿಟ್ಟು ಉಳಿದವರು ಹೋಗುವ ಹಾಗೂ ಇಲ್ಲ. ಅಲ್ಲಿಯೇ ಇರುವಹಾಗೂ ಇಲ್ಲ.ಹೊಸ ದೇಶ. ಗುರತು ಪರಿಚಯದವರಿಲ್ಲ. ಕೈಯಲ್ಲಿ ಹಣವಿಲ್ಲ. ದುಡಿದು ತಿನ್ನಬೇಕು. ಈ ಸಂದಿಗ್ಧಕ್ಕೆ ಒಳಗಾದ ಕುಟುಂಬಗಳು ಅನೇಕ.

ಈ ಎಲ್ಲ ಗೋಳಿನ ಕಾರಣ ಬಂದವರಿಗೆಲ್ಲ ಬಾಗಿಲು ತೆರೆವ ನೀತಿಗೆ ಅಲ್ಲಿನ ಮೂಲನಿವಾಸಿಗಳ ವಿರೋಧ. ರಾಜ ಕಾರಣಿಗಳೂ ಅದನ್ನು ಅನುಮೋದಿಸಿದರು.  ಅದಕ್ಕೆ.  ಕಾರಣ ಈಗಾಗಲೇ ಬಂದು ನೆಲಸಿರುವವವರ ಹಿತಾಸಕ್ತಿಗೆ ಧಕ್ಕೆ ಯಾಗುವ ಪ್ರಮಾಣದಲ್ಲಿ ಯುರೋಪಿಯನ್ನರಲ್ಲದೆ ಇತರರು ಬರತೊಡಗಿದರು. ಅದರಲ್ಲೂ ಏಷಿಯನ್ನರೂ ವಿಶೇಷವಾಗಿ ಚೀನಿಯರ ಪ್ರವೇಶ ನಿಯಂತ್ರಣಕ್ಕೆ ಒತ್ತಡ ಬಂದಿತು.ಅಲ್ಲಿ ನೆಲಸಿರುವ ವಿವಿಧ ಜನಾಂಗಗಳ ವೈವಿಧ್ಯೆತೆ ಕಾಪಾಡಲು ಶೇಕಾಡಾವಾರು ಪ್ರವೇಶವನ್ನು ನೀಡ ಬೇಕೆಂದು ೧೯೨೧ ರಿಂದ ೧೯೨೪ ರವರೆಗೆ ನಿರ್ಬಂಧ ಹೇರಲಾಗಿತ್ತು.  ಪುರಾತನ ವಲಸಿಗರ  ಸಂಖ್ಯೆಗೆ ಅನುಗುಣವಾಗಿ ಹೊಸ ವಲಸಿಗರ ಪ್ರವೇಶವನ್ನು ನಿಗದಿ ಪಡಿಸಿ ಸಮತೋಲನವನ್ನು ಸಾಧಿಸಲಾಯಿತು. .ಇದರಿಂದ ಅಲ್ಲಿನ ಹಳೆಯ ವಲಸಿಗರ ಎಲ್ಲ ದಾಖಲೆಗಳಿಂದ  ಅವರ ವಿವರವನ್ನು ಪಡೆದು  ಮೂಲ ಬೇರು ಎಲ್ಲಿದೆ ಎನ್ನುವುದನ್ನು ಪರಿಶಿಲಸಿ ಅನುಮತಿ ನೀಡುವ ಪದ್ದತಿ ಪ್ರಾರಂಭಿಸಿದರು.ಅದನ್ನೇ ಇಂದಿನ ವಿಸಾ  ಪದ್ದತಿಯ ತಾಯಿ ಬೇರು ಎನ್ನಬಹುದು.ಆಗಲೂ ವೈದ್ಯಕೀಯ ಪರೀಕ್ಷೆಯ ಅಗತ್ಯವಿರುವವರನ್ನು  ಮಾತ್ರ ಇಲ್ಲಿಗೆ ಕಳುಹಿಸುತ್ತಿದ್ದರು

ಕ್ರಮೇಣ ಇಲ್ಲಿನ ಕಾರ್ಯ ಭಾರ ಕಡಿಮೆ ಆಯಿತು.  ಆದರೂ ಕಡಲ ಪಡೆಯ ತರಬೇತಿ  ಮತ್ತು ಅನಧಿಕೃತವಾಗಿ ಬರಲೆತ್ನಸಿದ ನಾವಿಕರನ್ನು ನಿರ್ಬಂಧದಲ್ಲಿಡಲು ಈ ದ್ವೀಪವನ್ನು ಉಪಯೋಗಿಸುತ್ತಿದ್ದರು. ಇಲ್ಲಿನ ಕೊನೆಯ ಸೆರೆಯಾಳು ನಾರ್ವೆಯ ನಾವಿಕ. ಅವನು ೧೯೫೪ರಲ್ಲಿ ಬಿಡುಗಡೆಯಾದನಂತರ ಇದನ್ನು ಮುಚ್ಚಲಾಯಿತು.
ಇದನ್ನು  ಎರಡು ವರ್ಷದ ನಂತರ ದುರಸ್ತಿ ಮಾಡಿದರು.  ನಂತರ  ಸ್ವಾತಂತ್ರ್ಯ ಪ್ರತಿಮೆಯ ರಾಷ್ಟ್ರೀಯ ಸ್ಮಾರಕದ ಒಂದು ಭಾಗ ಎಂದು, ೧೯೫೬ ರಲ್ಲಿ ಅಮೇರಿಕಾದ ಅಧ್ಯಕ್ಷರಾದ ಲಿಂಡನ್  ಬಿ.ಜಾನಸನ್ ರು ಘೋಷಿಸಿದರು .ಅಲ್ಲಿ ವಲಸೆಗಾರರ ವಸ್ತು ಸಂಗ್ರಹಾಲಯ ಪ್ರಾರಂಭವಾಯಿತು. ಅಮೇರಿಕಾದ ಮೂಲ ವಲಸೆಗಾರರ ಮಾಹಿತಿ, ಅವಾಗಿನ ಜನ ಜೀವನ,ಮನೆ, ಪಾತ್ರೆ ಪಡಗ,ಅಯುಧಗಳು, ಉಪಕರಣಗಳು ಪತ್ರಿಕೆಯ ತಣಕುಗಳು, ಛಾಯಾಚಿತ್ರಗಳು ಕಣ್ಣಿಗೆ ಕಟ್ಟುವಂತೆ ಇವೆ.  ಅಲ್ಲದೆ ತಮ್ಮ ವಂಶದ ಮೂಲಪುರುಷರ ಹೆಸರು, ಛಾಯಾಚಿತ್ರಗಳನ್ನು ಒಳಗೊಂಡ ದತ್ತಾಂಶ ಅವರಲ್ಲಿದೆ. ಬೇಕಾದರೆ ನಮ್ಮವಲಸಿಗಾಗಿದ್ದ ಮೂಲ ಪುರಷರ ಸರ್ವ ಮಾಹಿತಿಯು ಅಲ್ಲಿ ಸಿಗುವುದು. ಹೆಸರು ಮತ್ತು ಅವರ ಭಾವ ಚಿತ್ರವನ್ನು ಅಲ್ಲಿನ ಫಲಕದಲ್ಲಿ ಪ್ರದರ್ಶನಕ್ಕೆ ಅವಕಾಶವಿದೆ ಸಹಸ್ರಾರು ಜನ ಹೆಮ್ಮೆಯಿಂದ ತಮ್ಮ ಮೂಲ ಪುರಷರನ್ನು ಅಲ್ಲಿ ಕಾಣತ್ತಾರೆ.



No comments:

Post a Comment