Friday, October 5, 2012


ಪ್ರೊ. ಲಿಂಗಯ್ಯ ಅವರ ಬದುಕು  ಮತ್ತು ಬರಹ ಕುರಿತಾದ ವಿಚಾರ ಸಂಕಿರಣ


ಪ್ರೊ. ಲಿಂಗಯ್ಯ ಅವರ ಬದುಕು  ಮತ್ತು ಬರಹ ಕುರಿತಾದ ವಿಚಾರ ಸಂಕಿರಣವು  ದಿನಾಂಕ  ಬೆಂಗಳೂರಿನಲ್ಲಿ  ಅಕ್ಟೋಬರ್‌-೨೦೧೨ ರಂದು ಬಿ ಎಂ. ಪ್ರತಿಷ್ಠಾನದಲ್ಲಿ ನಡೆಯಿತು
ಬೆಳಗಿನ ಗೋಷ್ಠಿಯಲ್ಲಿ ಡಾ. ಜಯ ಚಂದ್ರ, ಅರು ಪ್ರೊ. ಲಿಂಗಯ್ಯನವರ ಜೀವನದ ಬಗ್ಗೆ ಮಾತನಾಡಿದರು. ಅವರ ನಿರ್ಲಿಪ್ತತೆ, ಅಧ್ಯನ ಶೀಲತೆ ಮತ್ತು  ದುಡಿಮೆಯ ತಿಳಿಸಿದರು  ಶ್ರೀ ಎಚ್‌. ಶೇಷಗಿರಿರಾವ್‌,  ಕನ್ಮನಡವೆ ಎನ್ತ್ತುನುಸಿರು ಎಂದು ಅವರು ಬದುಕಿದ ವಿಧಾನ ವಿವರಿಸಿದರು  ಪ್ರೊ. ಅಶ್ವತ್ಥನಾರಾಯಣ ಅವರ ವಚನಗಳಕುರಿತು ಮಾತನಾಡಿದರುತಮ್ಮಪ್ರಬಂಧ ಮಂಡಿಸಿದರು
ಅಧ್ಯಕ್ಷತೆಯನ್ನು ಡಾ. ಚಕ್ಕರೆ ಶಿವ ಶಂಕರ್‌ ವಹಿಸಿದ್ದರು.


ಮಧ್ಯಾಹ್ನದ ಗೋಷ್ಠಿಯಲ್ಲಿ ಡಾ. ಬೈರಮಂಗಲ ರಾಮೇಗೌಡ, ಡಾ. ಸುರೇಶ್‌ ಪಾಟೀಲ್‌ ಮತ್ತು ಡಾ. ಕೊ.ವೆಂ ರಾಮಕೃಷ್ಣೇ ಗೌಡ ಭಾಗ ವಹಿದರು. ಡಾ. ವಿಜಯಾ ಸುಬ್ಬರಾಜ್‌ ಅಧ್ಯಕ್ಷತೆವಹಿಸಿದ್ದರು
                    ಪ್ರಾಸ್ತಾವಿಕ ನುಡಿಯನ್ನ್ನ ಪ್ರತಿಷ್ಠಾನದ ಅಧ್ಯಕ್ಷರಾದ  ಪ್ರೊ.. ಎಂ ಎಚ್‌ ಕೃಷ್ಣಯ್ಯ ಆಡಿದರು.

ಸಮಾರೋಪ ಭಾಷಣ ಶ್ರೀ. ರಾಮಣ್ಣ ಕೋಡಿ ಹೊಸ ಹಳ್ಳಿ ಮಾಡಿದರು. ಅಧ್ಯಕ್ಷತೆಯನ್ನು ಡಾ. ಪಿ.ವಿ ನಾರಾಯಣ .ವಹಿಸಿದ್ದರು.

Tuesday, October 2, 2012

ಕರ್ನಾಟಕ ಇತಿಹಾಸ ಅಕಾದಮಿಯ 26ನೆಸಮ್ಮೇಳನ, ಶೃಂಗೇರಿ




             ಕರ್ನಾಟಕ ಇತಿಹಾಸ ಅಕಾದಮಿಯ 26ನೆ   ವಾರ್ಷಿಕ ಸಮ್ಮೇಳನವು ,  ಸೆಪ್ಟಂಬರ್‌ ೨೨, ೨೩ ಮತ್ತು ೨೪ ರಂದು ಮೂರುದಿನ ಶ್ರೀಮದ್‌ಶಂಕರಾಚಾರ್ಯರ ದಕ್ಷಿಣಾಮ್ನಯ ಪೀಠದ  ಸಹಯೋಗದಲ್ಲಿ ಶೃಂಗೇರಿಯಲ್ಲಿ ಜರುಗಿತು.                   ಡಾ. ಎಸ್‌ವಿ ವೆಂಕಟೇಶಯ್ಯನವರು ಸಮ್ಮೇಳನದ  ಸರ್ವಾಧ್ಯಕ್ಷರಾಗಿ ಮೂರುದಿನದ  ಕಾರ್ಯಕ್ರಮ ನಡೆಸಿ ಕೊಟ್ಟರು         .ಶ್ರೀ ಡಿ.ಎಚ್‌.ಶಂಕರ ಮೂರ್ತಿ,  ಕರ್ನಾಟಕ ವಿಧಾನ ಪರಿಷತ್‌ ಸಭಾಪತಿಗಳು,  ಶೃಂಗೇರಿ ಮಠದ ಆಡಳಿತಾಧಿಕಾರಿಗಳಾದ ಪದ್ಮಶ್ರೀ ಗೌರಿಶಂಕರ ಅವರು, ಅಕಾದಮಿಯ ಅಧ್ಯಕ್ಷರಾದ ಡಾ. ದೇವರ ಕೊಂಡಾ ರೆಡ್ಡಿ,” ಇತಿಹಾಸ ಸಂಸ್ಕೃತಿ” ಪ್ರಶಸ್ತಿಯ ವಿಜೇತರಾದ ಪ್ರೊ. ಲಕ್ಷ್ಮಣ ತೆಲಗಾವಿ ಮತ್ತು ಗೋಪಾಲ್ ರಾವ್‌ ಪ್ರಶಸ್ತಿ ಪಡೆದ ಡಾ. ಸೀತರಾಮರಾವ್‌ಜಾಗಿರ್‌ದಾರ  ಮತ್ತು, ನಿಕಟ ಪೂರ್ವ ಸರ್ವಾದ್ಯಕ್ಷರಾದ ಎಚ್‌ಎಸ್ ಗೋಪಾಲರಾವ್‌ , ಅನೇಕ ಹಿರಿಯ ಇತಿಹಾಸ ತಜ್ಞರು ಮತ್ತು , ಅಕಾದಮಿಯ ಪದಾಧಿಕಾರಿಗಳು  ವೇದಿಕೆಯ ಮೇಲಿದ್ದರು.


BKA_4419.JPG
          ಕರ್ನಾಟಕ ರಾಜ್ಯ ವಿಧಾನ ಪರಿಷತ್‌ ಸಭಾಪತಿಗಳಿಂದ ಸಮ್ಮೇಳನದ  ಉದ್ಘಾಟನೆ
      

 ಈ ಕಾರ್ಯಕ್ರಮದ ವಿಭಿನ್ನತೆ ಎಂದರೆ ಸಮಯಕ್ಕೆ ಸರಿಯಾಗಿ ಆದ ಉದ್ಘಾಟನೆ. ಕರ್ನಾಟಕದ ಮೂಲೆ ಮೂಲೆಮೂಲೆಗಳಿಂದ ಬಂದ ಪ್ರತಿನಿಧಿಗಳಿಗೆ ಉತ್ತಮ ವಸತಿ ಸೌಕರ್ಯ ದೊರಕಿತು ಸುಮಾರು ಅರವತ್ತೈದು ಸುಸಜ್ಜಿತ ಕೊಟ್ಟಡಿಗಳನ್ನು ಕೊಡಲಾಗಿತ್ತು. ಬೆಳಗ್ಗೆ ಎಂಟುವರೆಗ ಸರಿಯಾಗಿ ಬೆಳಗಿನ ಉಪಹಾರ.ಸಹ ಪ್ರಾಯೋಜಕರಾದ ಶ್ರೀ ಮಠದಿಂದ ಏರ್ಪಾಡಾಗಿತ್ತು ಹಾಗಾಗಿ ರಾತ್ರಿ ಪ್ರಯಾಣ ಮಾಡಿ ದಣಿದು ಬಂದವರು ಬಿಸಿ ನೀರ ಸ್ನಾನ ಮಾಡಿ ಗಡದ್ದು ತಿಂಡಿ  ತಿಂದು ಕಾರ್ಯಕ್ರಮ  ನಡೆವ ವೇದಿಕೆಗೆ ಬಂದು ನೊಂದಾವಣೆ ಮಾಡಿಕೊಳ್ಳಲು ಸರತಿಗಾಗಿ ಕಾದಿದ್ದರು..ಅದೃಷ್ಟ ಎಂದರೆ ಅತಿಥಿಗಳಿಗಾಗಿ ಕಾಯುವ ಗೋಜಿರಲಿಲ್ಲ. ಸಮ್ಹೇಮೇಳನದ ಸ್ಳಳ ದೇವಸ್ಥಾನದ ಆವರಣದಲ್ಲಿನ ಸಭಾಂಗಣ  . ಎಲ್ಲರೂ ಪಾದರಕ್ಷೆಗಳನ್ನು ಅದರ ಜೊತೆ ತಮ್ಮ ದುಶ್ಚಟಗಳನ್ನು ಆವರಣದ ಹೊರಗೆ ಬಿಟ್ಟು ಶ್ರದ್ಧೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

BKA_4442.JPG
             ಶ್ರೀ ಮಠದ ಆಡಳಿತಾಧಿಕಾರಿಗಳಾದ ಪದ್ಮ ಶ್ರೀ ಗೌರಿಶಂಕರ  ಅವರು 


ಕಾರ್ಯಕ್ರಮದ ಲ್ಲಿ ಶ್ರೀಗೌರಿ ಶಂಕರ ಅವರು ಸಮ್ಮೇಳನದ ಸಹಯೋಗ  ತಮ್ಮಸೌಭಾಗ್ಯ ಎಂದು ತಿಳಿಸಿದರು. ಮಠ ಒಂದು ಶ್ರದ್ಧಾಕೇಂದ್ರ. ಇಲ್ಲಿ ಇತಿಹಾಸ ಮತ್ತು ಪರಂಪರೆಗಳ ಸಮ್ಮಿಳನವಾಗಿದೆ. ಆದ್ದರಿಂದ ಇತಿಹಾಸ ಸಮ್ಮೇಳನ ನಡೆಸುವಲ್ಲಿ ಕೈ ಜೋಡಿಸಲು ತಮಗೆ ಅತೀವ ಆನಂದ , ಎಂದುಹೇಳಿದರು. ಅಲ್ಲದೆ ಈ ಕೆಲಸ ಮಾಡಲೆಂದೆ ತಾವಿರುವುದು. ಇಂಥಹ ಸಹಕಾರ ಭವಿಷ್ಯದಲ್ಲಿಯೂ ನೀಡಲು ಸಿದ್ಧ ಎಂದರು.



                              ಸಮ್ಮೇಳನ ಉದ್ದೇಶಿಸಿ ಶ್ರೀ ಡಿಎಚ್‌ಶಂಕರ ಮೂರ್ತಿ ಅವರ ಭಾಷಣ 

ಸಮ್ಮೇಳನವನ್ನು ಉದ್ಘಾಟಿಸುತ್ತಾ ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್‌.ಶಂಕರಮೂರ್ತಿಯವರು ಸುದೀರ್ಘವಾಗಿ ಪರಂಪರೆಯನ್ನು ಉಳಿಸಿಕೊಳ್ಳುವ ಅಗತ್ಯದ ಬಗೆಗೆ ಮಾತನಾಡಿದರು. ಯುವಜನರ ಜಾಗೃತಿಗೆ ಇತಿಹಾಸದ ಅಧ್ಯಯನದ ಅಗತ್ಯವನ್ನು ಒತ್ತಿ ಹೇಳಿದರು.ಸರಿಯಾದ ಇತಿಹಾಸದ ರಚನೆಯ ಪ್ರಾಮುಖ್ಯತೆ ತಿಳಿಸಿದರು ಇದೆ ಸಮಯದಲ್ಲಿ  ಇತಿಹಾಸ ತಜ್ಞರರಾದ  ಡಾ. ಲಕ್ಷ್ಮಣ ತೆಲಗಾವಿ ಯವರಿಗೆ  “ “ಇತಿಹಾಸ ಸಂಸ್ಕೃತಿ ಶ್ರೀ”  ಪ್ರಶಸ್ತಿ ಪ್ರದಾನ ಮಾಡಿ ಜೊತೆಗೆ ಒಂದುಲಕ್ಷ ರೂಪಾಯಿ ನಗದು ನೀಡಲಾಯಿತು. ಈ ಪ್ರಶಸ್ತಿಯ  ಪ್ರಾಯೋಜಕರಾದ ಲಕ್ಷ್ಮಿ ಪ್ರಿಂಟರ್ಸನ ಶ್ರೀಅಶೋಕಕುಮಾರ್‌ ಅವರು ತಮ್ಮ ಬಿ.ಆರ್‌.ಆರ್‌ ಟ್ರಸ್ಟ ವತಿಯಿಂದ  ಬಹುಶಃ ದೇಶದಲ್ಲಿಯೆ ಅತಿ ಹೆಚ್ಚು ಮೌಲ್ಯಯುತವಾದ ಈ  ಇತಿಹಾಸ ಪ್ರಶಸ್ತಿಯನ್ನು ಪ್ರತಿವರ್ಷ ಕರ್ನಾಟಕ ಇತಿಹಾಸ ಅಕಾದಮಿಯ ಮೂಲಕ ನೀಡುವುದಾಗಿ ಘೋಷಿಸಿದರು.

ಇದೆ ಸಮಯದಲ್ಲಿ  ಡಾ. ಬಾ.ರಾ. ಗೋಪಾಲ್ ಶಾಸನ ದತ್ತಿ ಪ್ರಶಸ್ತಿಯನ್ನು ಡಾ. ಸೀತಾರಂ ಜಾಗಿರದಾರ ಅವರಿಗೆ ಪ್ರದಾನ ಮಾಡಲಾಯಿತು..ಮತ್ತು ೨೬ನೆ ವಾರ್ಷಿಕ “ಇತಿಹಾಸದರ್ಶಿನಿ” ಗ್ರಂಥವನ್ನೂ ಬಿಡುಗಡೆ ಮಾಡಲಾಯಿತು.

BKA_4468.JPG
      ಸಮ್ಮೇಳನದ  ಸರ್ವಾದ್ಯಕ್ಷರಾದ ಡಾ. ಎಸ್‌ವಿ. ವೆಂಕಟೇಶಯ್ಯನವಿಗೆ ಸನ್ಮಾನ. 

     ಈ ಸಮ್ಮೇಳನದ ಸರ್ವಾದ್ಯಕ್ಷರಾದ ಡಾ. ಎಸ್‌ವಿ. ವೆಂಕಟೇಶಯ್ಯನವರು ತಮ್ಮ ೩೩ ವರ್ಷದ ಸುದೀರ್ಘ ಮತ್ತು ಸಾರ್ಥಕ ಕಾರ್ಯದಿಂದ ಪ್ರಾಚೀನ ಸ್ಮಾರಕಗಳ ರಕ್ಷಣೆ, ಉತ್ಖನನ ಮತ್ತು ಪ್ರಾಚ್ಯವಸ್ತು ಇಲಾಖೆಯ ಮೂಲಕ ಮಾಡಿದ  ಕೆಲಸದ ವಿವರ ನೀಡಿದರು.. ಪುರಾತತ್ವ ಇಲಾಖೆಯ ಕಾರ್ಯವೈಖರಿ, ಪರಂಪರೆಯ  ಸ್ಮಾರಕಗಳ ಸಂರಕ್ಷಣೆಗೆ ಇಲಾಖೆಯ  ಕಳಕಳಿ ಮತ್ತು ಕಾಳಜಿ  ಕುರಿತು ಮಾಹಿತಿ ನೀಡಿದರು.. ಇತಿಹಾಸ ಅಕಾದಮಿಯ ಅಧ್ಯಕ್ಷರಾದ  ಡಾ. ದೇವರ ಕೊಂಡಾರೆಡ್ಡಿಯವರು ಸಮ್ಮೇಳನದ ಹಿನ್ನೆಲೆ . ಅದರ ಯಶಸ್ಸಿಗೆ ಕೈ ಜೋಡಿಸಿದವರ ವಿವರ ನೀಡಿ ಎಲ್ಲರನ್ನೂ ಸ್ವಾಗತಿಸಿದರು.ಸರಿ ಸುಮಾರು ಮೂರು ನೂರು ಪ್ರತಿನಿಧಿಗಳು ಭಾಗವಹಿಸಿದ್ದರು ಅದರಲ್ಲಿ ಮಹಿಳೆಯರ ಸಂಖ್ಯೆಯೂ ಗಣನೀಯವಾಗಿತ್ತು ಇತಿಹಾಸ ಮತ್ತು ಸಾಹಿತ್ಯ ರಂಗದಲ್ಲಿನವರು ಜೊತೆಜೊತೆಗೆ ಸಮಾಜದ ವಿವಿಧ ರಂಗದಲ್ಲಿನ ಇಯಿಹಾಸಾಕ್ತರು ಭಾಗವಹಿಸಿದ್ದು ವಿಶೇಷವಾಗಿತ್ತು. . ಅರವತ್ತು-ಎಪ್ಪತ್ತು ವಯೋಮಾನದ ಹಿರಿಯ ತಲೆಗಳೊಡನೆ ಅವರ ಮರ್ಗದರ್ಶನ ಪಡೆಯಲು,  ಸಂವಾದ ನಡೆಸಲು . ಸಂಪ್ರಬಂಧ ಮಂಡಿಸಲು  ಹೆಚ್ಚಿನ ಸಂಖ್ಯೆಯ ಯುವ ಜನರು ಭಾವಹಿಸಿದುದು ಭವಿಷ್ಯದ ಭರವಸೆಯ ಸಂಕೇತವಾಗಿತ್ತು..ಅಂದಾಜು ೧೪೦ಕ್ಕೂಹೆಚ್ಚು ಮಂದಿ ತಮ್ಮ ಸಂಪ್ರಬಂಧ ಮಂಡಿಸಲು ನೊಂದಾಯಿಸಿ ಕೊಂಡಿದ್ದರು ಅದಕ್ಕಾಗಿ ಮುಖ್ಯ ವೇದಿಕೆಯ ಜೊತೆಗೆ ಸಮಾಂತರವಾಗಿ ಕಾರ್ಯಕ್ರಮ ನಡೆಸಲು ಇನ್ನೊಂದು ವೇದಿಕೆಯನ್ನು ಸಿದ್ಧ ಮಾಡಲಾಗಿತ್ತು. ಅಲ್ಲಿ ಪವರ್‌ ಪಾಯಿಂಟ್‌ ಪ್ರಾತ್ಯಕ್ಷಿಕೆ ಕೊಡಲು ಸೂಕ್ತ ವ್ಯವಸ್ಥೆ ಮಾಡಿದುದು ಸಂಪ್ರಬಂಧಗಳನ್ನು ಪರಿಣಾಮಕಾರಿಯಾಗಿ ಚಿತ್ರ ಸಮೇತ ಮಂಡಿಸಲು ಅನುಕೂಲವಾಗಿತ್ತು..ಉದ್ಘಾಟನೆಯ ನಂತರ ಗೋಷ್ಠಿಗಳು  ಪ್ರಾಂಭವಾದವು. ಪ್ರತಿ ಗೋಷ್ಠಿಗೂ ತಜ್ಞರೊಬ್ಬರು ಅಧ್ಯಕ್ಷರು ಜೊತೆಗೆ ಒಬ್ಬ ನಿರೂಪಕರು . ಹೆಚ್ಚಿನ ಸಂಖ್ಯೆಯ ಪ್ರಬಂಧಗಳ ಮಂಡನೆ ಆಗಬೇಕಾದುದರಿಂದ ಪ್ರತಿ  ಪ್ರಬಂಧ ಮಂಡನೆಗೆ  ೮-೧೦ ನಿಮಿಷ ಕಾಲಾವಧಿ ನಿಗದಿ ಮಾಡಲಾಗಿತ್ತು ಜೊತೆಗೆ  ೨-೩ ಪ್ರಶ್ನೆಗಳಿಗೂ ಅವಕಾಶವಿತ್ತು. ಆಯ್ದ ಗೋಷ್ಠಿಗಳ ವಿವರವನ್ನು ಒಂದೊಂದಾಗಿ ಬ್ಲಾಗ್‌ನಲ್ಲಿ ಮುಂಬರುವ ದಿನಗಳಲ್ಲಿ ನಿರೀಕ್ಷಿಸಿ.



Monday, October 1, 2012

ಐತಿಹ್ಯ ಮತ್ತು ಇತಿಹಾಸ





ಇತ್ತೀಚೆಗೆ ಶೃಂಗೇರಿಯಲ್ಲಿ ನಡೆದ ಕರ್ನಾಟಕ ಇತಿಹಾಸ ಸಮ್ಮೇಳನದಲ್ಲಿ ಐತಿಹ್ಯದ ವಿಷಯ ವ್ಯಾಪಕ ಚರ್ಚೆಗೆ ಒಳಗಾಯಿತು.ಒಬ್ಬ ಪ್ರತಿನಿಧಿ “ ಶಾಸನ ಆಧಾರಿತ ಐತಿಹ್ಯಗಳು “  ಎಂಬ ಸಂಪ್ರಬಂಧ ಮಂಡಿಸಿದರು. ಆಗ ಗಂಭೀರ ಚರ್ಚೆಯಾಗಿ ಪ್ರಬಂಧದ ಶೀರ್ಷಿಕೆಯನ್ನೆ ಬದಲಾಯಿಸಲು ಸಲಹೆ ಮಾಡಲಾಯಿತು. ಕಾರಣ ಐತಿಹ್ಯವನ್ನು ಇತಿಹಾಸಕ್ಕೆ ಏಕ ಮೇವ ಆಧಾರವಾಗಿ ಪರಿಗಣಿಸುವ ಹಾಗಿಲ್ಲ. ಅದು ಇತಿಹಾಸವಲ್ಲ. ಅದುಬರಿ ಬಾಯಿ ಮಾತಿನಿಂದ ಪ್ರಚಲಿತವಾದ ವಿಚಾರ.. ಅದಕ್ಕೆ ಖಚಿತವಾದ ಶಾಸನ, ಲಿಖಿತ ಹಾಗೂ ನಾಣ್ಯದ ಆಧಾರವಿದ್ದರೆ ಅದನ್ನು ಐತಿಹ್ಯ ಎನ್ನಲಾಗದು ಎಂದು ಇತಿಹಾಸ ತಜ್ಞರು ಅಭಿಪ್ರಾಯ ವ್ಯಕ್ತ ಪಡಿಸಿದರು..ಐತಿಹ್ಯವು ಸತ್ಯವಾಗಿರಬಹುದು ಇಲ್ಲವೆ ಕಪೋಲ ಕಲ್ಪಿತವಾಗಿ ಒಬ್ಬರಿಂದ ಒಬ್ಬರಿಗೆ ಹರಡುವಾಗ ಉತ್ಪ್ರೇಕ್ಷೆಗಳಿಂದ ಕೂಡಿದ ಮಾಹಿತಿಯಾಗಬಶೃಂಗೇರಿ    ಪಟ್ಟಣದ ಮಧ್ಯದಲ್ಲಿರುವ ಮಲ್ಲಿಕಾರ್ಜುನ ಬೆಟ್ಟಕ್ಕೆ ಭೇಟಿ ನೀಡಿದೆ. ಅದು ಅಂಥಹ ದೊಡ್ಡ ಬೆಟ್ಟವೇನೂ ಅಲ್ಲ. ಬರಿ ನೂರಕ್ಕೂ ತುಸು ಹೆಚ್ಚಿನ ಸಂಖ್ಯೆಯ ಮೆಟ್ಟಿಲುಗಳು . ಬೆಟ್ಟದ ಮೇಲೆ ಸುಂದರ ಈಶ್ವರ ದೇವಾಲಯ.  ಪೂಜೆ ನಡೆಯುತ್ತಿರುವಾಗ ಒಬ್ಬ  ವಯೋ ವೃದ್ಧರು ದೇವರ ಮುಂದೆ ನಿಂತು,  “ಸ್ವಾಮಿ ನಿನ್ನೆ ಕಿಗ್ಗಕ್ಕೆ ಹೋಗಿ ಬಂದೆ ಅಲ್ಲಿ ನಿನ್ನ ಮಗ ಸೊಸೆ  ಕ್ಷೇಮವಾಗಿದ್ದಾರೆ” ಎನ್ನುತ್ತಾ ಕೈ ಮುಗಿದು ನಮಸ್ಕಾರ ಹಾಕಿದ್ದು ನನಗೆ ಕುತೂಹಲ ಮೂಡಿಸಿತು. ಅವರು ದೇವಸ್ಥಾನದ ಹೊರಗೆ ಬರುವವರೆಗೆ ಕಾದು ನಂತರ ಮಾತನಾಡಿಸಿದೆ.
ಸ್ವಾಮಿ  ಅದೇನು ಮಗ, ಸೊಸೆ ಚೆನ್ನಾಗಿದ್ದಾರೆ . ಎಂದು ದೇವರಲ್ಲಿ ನಿವೇದನೆ ಮಾಡಿದಿರಲ್ಲ? ಯಾರ ಮಗ ?  ಯಾರ   ಸೊಸೆ. ಅದಕ್ಕೂ ಕಿಗ್ಗಕ್ಕೂ ಏನು ಸಂಬಂಧ ದಯಮಾಡಿ ತಿಳಿಸುವಿರಾ? ಎಂದು ವಿನಂತಿ ಮಾಡಿಕೊಂಡೆ.
ಅವರು ನೀವು ಈ ಭಾಗದವರಲ್ಲವೋ?  ಎಂದು ಪ್ರಶ್ನಿಸಿದರು. ಅಲ್ಲ , ಎಂದೆ.  ಯಾವ ಊರು?  ಎಂಧಾಗ ನಾನು ಹಂಪೆಯ ಹತ್ತಿರದವನು ಎಂದೆ.
ಕಿಗ್ಗದ ಋಷ್ಯ ಶೃಂಗೇಶ್ವರ

 ಅದಕ್ಕೆ ನಿಮಗೆ ಇಲ್ಲಿನ ಸ್ಥಳದ ಮಹತ್ವ ಗೊತ್ತಿಲ್ಲ. ಇದು ಇಲ್ಲಿನ  ಐತಿಹ್ಯ. ಈ ಬೆಟ್ಟ  ವಿಭಾಂಡಕ ಮುನಿಯ ವಾಸ ಸ್ಥಳವಾಗಿತ್ತು. ಅವರು ನಿತ್ಯ ಬೆಟ್ಟದಿಂದ ಇಳಿದು ತುಂಗೆಯಲ್ಲಿ ಸ್ನಾನ ಮಾಡಿ ಮತ್ತೆ ಇಲ್ಲಿ ಬಂದು ತಪಸ್ಸು ಮಾಡುತಿದ್ದರು. ಒಂದು ದಿನ ಅವರ ರೇತಸ್ಸು ನೀರಿನಲ್ಲಿ ವಿಸರ್ಜನೆಯಾದಾಗ  ಅಲ್ಲೊಂದು ಹೆಣ್ಣು ಜಿಂಕೆ ನೀರಿನ ಜೊತೆ ಅದನ್ನು ಕುಡಿಯಿತು. ಅದರ ಫಲವಾಗಿ ಅದು ಒಂದು ಗಂಡು ಮಗುವಿಗೆ ಜನ್ಮ ನೀಡಿತು. ಆ ಮಗುವಿನ ತಲೆಯಲ್ಲೆ ಒಂದು ಪುಟ್ಟ ಕೋಡಿತ್ತು. ಅದರಿಂದ ಅವನನ್ನು ಋಷ್ಯ ಶೃಂಗ ಎಂದು ಕರೆದರು. ಅವನು ಮಹಾಮುಗ್ದ. ಸದಾ ಜಪ,ತಪದಲ್ಲಿ ಮಗ್ನನಾದ ಜ್ಞಾನಿ . ಲೋಕಾಚಾರವನ್ನೆ ಅರಿಯದೆ ತನ್ನ ಪಾಡಿಗೆ ತಾನು ತಪಸ್ಸು ಮಾಡಿಕೊಂಡು ಇಲ್ಲಿಗೆ ಇಪ್ಪತೆಂಟು ಮೈಲುದೂರದ ಕಿಗ್ಗದಲ್ಲಿ  ನೆಮ್ಮದಿಯಿಂದ ಇದ್ದ. ಆ ಸಮಯದಲ್ಲಿ ರೋಮಪಾದನೆಂಬ ಅರಸನ ರಾಜ್ಯದಲ್ಲಿ ಭೀಕರ ಬರ ಕಾಣಿಸಿ ಕೊಂಡಿತು. ಮಳೆಯೆ ಇಲ್ಲದಾಯಿತು. ಏನು ಮಾಡ ಬೇಕೆಂದು ತೋಚದೆ ಪ್ರಾಜ್ಞರನ್ನು  ವಿಚಾರಿಸಿದಾಗ  ಋಷ್ಯ ಶೃಂಗ ಮುನಿ  ಆ ನಾಡಿನಲ್ಲಿ ಕಾಲಿಟ್ಟರೆ ಮಳೆ ಬರುವುದೆಂದು ನುಡಿದರು. ಅದಕ್ಕೆ ಅವನು ರಾಜಕುಮಾರಿಯಾದ ತನ್ನ ಮಗಳನ್ನೆ ಅವರನ್ನು ಕರೆತರಲು ನೇಮಿಸಿದ. ಅವಳು ಅವರನ್ನೆ ಮದುವೆಯೂ ಆದಳು. ಅವರಿಬ್ಬರೂ ಕಿಗ್ಗದ ಪ್ರದೇಶದಲ್ಲಿ ಸಂಸಾರ ನಡೆಸಿದರು. ಅದಕ್ಕೆ ಅಲ್ಲಿರುವ ಲಿಂಗದ ಮೇಲೆ ಶೃಂಗವಿದೆ. ಇಲ್ಲಿಯೇ ವಿಂಭಾಂಡಕ ಮುನಿ ಐಕ್ಯವಾದರು. ಅವರೆ ಪೂಜಿಸಿದ ಲಿಂಗವೆ ಮಲಪರಿಹಾರಕ ಕೇಶ್ವರ ಎಂದು ಪ್ರಸಿದ್ಧಿ ಪಡೆದಿದೆ. ಆದ್ದರಿಂದ ಮೊದಲು ಕಿಗ್ಗಕ್ಕೆ ಹೋಗಿ ದರ್ಶನ ಪಡೆದು ನಂತರ ಇಲ್ಲಿ ಬಂದು ಅವರ ಕುಶಲ ಸಮಾಚಾರ ಅರುಹಿದರೆ, ಸಂಪ್ರೀತನಾಗಿ ಕೇಳಿದ ವರ ನೀಡುವರೆಂಬ ಪ್ರತೀತಿ  ಇದೆ. ಎಂದು ವಿವರಿಸಿದರು ಮಾನವ ಸಂಬಂಧಗಳು ಹೇಗೆ ಪೌರಾಣಿಕ ಐತಿಹ್ಯವಾದ ಬಗೆ ನನಗೆ ಎಂದು ಅಚ್ಚರಿಯಾಯಿತು.. ಅವರ ಹೇಳಿದ ಕಥೆ ನನಗೆ ಚಿಂತನೆಗೆ ಆಹಾರವಾಯಿತು.

ಮಲ್ಲಿಕಾರ್ಜುನ ಬೆಟ್ಟ

ನಮ್ಮ ಪುರಾಣ ಇತಿಹಾಸಗಳೆಲ್ಲ ವಿಭಿನ್ನ ಸಂತಾನ ಪ್ರಾಪ್ತಿಯ ವಿಧಾನ ಕುರಿತಾದ ವಿವರಗಳಿಂದ ಕೂಡಿವೆ. ರಾಮಾಯಣದಲ್ಲಿ ರಾಮ,ಲಕ್ಷ್ಮಣ, ಭರತ ಮತ್ತು ಶತೃಜ್ಞರು ಯಾಗದ ಫಲವಾಗಿ ದೊರೆತ ಪ್ರಸಾದ ಸೇವನೆಯಿಂದ ಜನಿಸಿದರು, ಕರ್ಣ ಕುಂತಿದೇವಿಗೆ ಕಿವಿಯಿಂದ ಸೂರ್ಯನ ವರಪ್ರಸಾದದಿಂದ ಜನಿಸಿದವ,. ಪಾಂಡವರು ಐವರು ದೇವರ ವರ ಸಂಜಾತರು, ಕೌರವರು ಪಾತವಾದ  ಭ್ರೂಣವನ್ನು ತುಪ್ಪ ತುಂಬಿದ ಕೊಡದಲ್ಲಿ ಅವಧಿ ಪೂರ್ಣವಾಗುವವರೆಗೆ ಇರಿಸಿದ  ನಂತರ ಜನನವಾದವರು, ದ್ರೋಣರು ಕುಂಭ ಸಂಭವರು, ದ್ರೌಪತಿ ಅಗ್ನಿಸಂಜಾತೆ.ಹೀಗೆ ಹುಡುಕುತ್ತಾ ಹೋದರೆ  ನೈಸರ್ಗಿಕವಲ್ಲದ ಹುಟ್ಟಿನ ವಿವರ ಸಾಕಷ್ಟು ಸಿಗುತ್ತದೆ. ಇದೆಲ್ಲ ಅನೇಕ ಜಿಜ್ಞಾಸೆಗೆ ಕಾರಣವಾಗಿದೆ. ಇದು ಬರಿ ಸಾಂಕೇತಿಕವಾಗಿದೆಯೋ  ಅಥವ ಒಂದು ರೀತಿಯಲ್ಲಿ ಇಂದಿನ ಪ್ರನಾಳ ಶಿಶು, ಕ್ಲೌನಿಂಗ್‌ ಮತ್ತು ಇತ್ತೀಚೆಗೆ  ಲಂಡನ್ನನಲ್ಲಿ ಭಾರತೀಯ ಸಂಜಾತೆ ವೈದ್ಯೆಯೊಬ್ಬಳು ವೀರ್ಯದ ಸಹಾಯವಿಲ್ಲದೆ ಮಗುವಿನ ಜನನಸಾಧ್ಯತೆ ಇದೆ, ಎಂದು ಸಿದ್ಧ ಮಾಡಿರುವುದು  ಈ ಮೊದಲೆ ಇದ್ದ ಜ್ಞಾನದ ಮುಂದುವರಿಕೆಯಾಗಿ ಇರಬಹುದೆ? ಎಂಬಅನುಮಾನ ಹುಟ್ಟಿಸುತ್ತದೆ.

ಇನ್ನು ಸ್ಥಳ ಪುರಾಣಗಳನ್ನು ಗಮನಿಸಿದರೆ ಅವೂ ಕುತೂಹಲ ಹುಟ್ಟಿಸುತ್ತವೆ. ಶೃಂಗೇರಿಯಲ್ಲಿ ಶಂಕರರು ಶಾರದಾಪೀಠ ಸ್ಥಾಪನೆ ಮಾಡಲು ಇರುವ ಐತಿಹ್ಯ ಆಸಕ್ತಿದಾಯಕವಾಗಿದೆ. ಅವರು ಉತ್ತರ ಭಾರತದಿಂದ ಬಂದು ತುಂಗೆಯ ತಟದಲ್ಲಿ ತಪಸ್ಸು ಮಾಡುತಿದ್ದಾಗ ನದಿಯ ದಡದಲ್ಲಿ ತುಂಬುಗರ್ಭಿಣಿಯಾದ ಕಪ್ಪೆಗೆ ಹಾವು ಹೆಡೆಬಿಚ್ಚಿ ಬೆರಳು ನೀಡುವುದನ್ನು ನೋಡಿದರಂತೆ. ಅದರ ಶಿಲ್ಪವೂ ಅಲ್ಲಿ ಇದೆ. ಇಲ್ಲಿ ಆಜನ್ಮ ಶತೃವಿಗೂ ಕಷ್ಟಕಾಲದಲ್ಲಿ  ರಕ್ಷಣೆ  ನೀಡುವ ಗುಣಕ್ಕೆ  ಕಾರಣ ಈ ಸ್ಥಳದ ಮಹಿಮೆ ಅದಕ್ಕೆ ಶಂಕರಾಚಾರ್ಯರು ಇಲ್ಲಿಯೆ ಮಠ ಸ್ಥಾಪಿಸಿದರು ಎಂಬ ಕಥೆ ಇದೆ.. ಇದು ಪೌರಾಣಿಕ ಐತಿಹ್ಯ. ಬಾಯಿಂದ ಬಾಯಿಗೆ ಹರಿದು ಈಗ ನಂಬಿಕೆಯ ರೂಪ ಪಡೆದಿದೆ.
 ಇದೆರೀತಿಯಲ್ಲಿ ನಮ್ಮ ಹಂಪೆಯಹತ್ತಿರ ಹಕ್ಕ ಬುಕ್ಕರು ಬೇಟೆಗೆ ಹೋದಾಗ  ಬೇಟೆ ನಾಯಿಗಳಿಗೆ ಅಂಜಿ ಓಡುತಿದ್ದ ಮೊಲವೊಂದು ತುಸು ದೂರ ಹೋದ ನಂತರ ತಿರುಗಿನಿಂತು ನಾಯಿಗಳನ್ನು ಎದುರಿಸಿ ಕಾದಾಡಲು ಮೊದಲು ಮಾಡಿತಂತೆ. ಈ ಅಚ್ಚರಿಯನ್ನು ಕಂಡ ಅವರು ಹಕ್ಕ ಬುಕ್ಕರು ತಮ್ಮ ಗುರುಗಳಾದ ವಿದ್ಯಾರಣ್ಯರಿಗೆ ತಿಳಿಸಿದರು. . ಈ ವಿಚಿತ್ರಕ್ಕೆ  ಕಾರಣ ಅದು ಭೂಮಿಯ ಗುಣ ಇದು ವೀರಭೂಮಿ.  ಇಲ್ಲಿನ ಅತಿಮೃದು ಸ್ವಭಾವದವರೂ ಸಮಯ ಬಂದರೆ ದೃಢತೆಯಿಂದ ಕಾದಾಡಬಲ್ಲರು . ಇದೆ ವಿಜಯ ನಗರ ಸಾಮ್ರಾಜ್ಯ  ಸ್ಥಾಪನೆಗೆ ಸೂಕ್ತ ಸ್ಥಳ ಎಂದು ಅಲ್ಲಿಯೆ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮಾಡಿಸಿದರು  ಎಂಬ ಐತಿಹ್ಯವೂ ಪ್ರಚಲಿತವಿದೆ.
          ಅದೆ ರೀತಿ ವನವಾಸದ ಸಮಯದಲ್ಲಿ  ರಾಮಲಕ್ಮಣ ಸೀತೆಯರು ಹೋಗುತಿದ್ದಾಗ  ರಾಮನು ತಮ್ಮ ಲಕ್ಮಣನಿಗೆ , ತಮ್ಮಾ ಲಕ್ಷ್ಮಣಾ , ಬಾಯಾರಿಕೆಯಾಗಿದೆ,  ನೀರು ತಾ, ಎಂದರೆ ವಿನಯ ಮೂರ್ತಿಯಾದ ಲಕ್ಷ್ಮಣನು , ಬೇಕಾದರೆ ನೀನೆ ಹೋಗಿ ಕುಡಿ ಎಂದು ಬಿಮ್ಮನೆ ಕುಳಿತಿದ್ದನು. ಅಣ್ಣನ  ಮೇಲಿನ ಪ್ರೀತಿ ,ಗೌರವದಿಂದ ಮಡದಿಯನ್ನು ತೊರೆದು ಕಾಡಿಗೆ ನೆರಳಿನಂತೆ ಹಿಂಬಾಲಿಸಿರುವ ಲಕ್ಷ್ಮಣನ ಈ ನಡೆ ರಾಮನಿಗೂ ಅರೆ ಕ್ಷಣ ಅಚ್ಚರಿ ಮೂಡಿಸಿತು. ಮರು ಮಾತನಾಡದೆ ಅಲ್ಲಿಂದ ತುಸು ದೂರ ಹೋದರು. ನಂತರ ಲಕ್ಷ್ನಣನು ಅಣ್ಣಾ !, ನಿನಗೆ ಆಯಾಸವಾದಂತಿದೆ. ತುಸು ವಿಶ್ರಮಿಸು, ನೀರು ತರುವೆ, ಎಂದು ವಿನಯದಿಂದ ಹೇಳಿದಾಗ. ರಾಮನು ಮುಗಳ್ನಕ್ಕನಂತೆ. ಅವನಿಗೆ ಆಗಲೆ ತಿಳಿದಿತ್ತು ತಮ್ಮನ ಪೆಡಸಿನ ಮಾತಿಗೆ ಕಾರಣ ಆ  ಸ್ಳಳದ ಪ್ರಭಾವ ಎಂದು.ಇದು ಪೌರಾಣಿಕ ಐತಿಹ್ಯ.
 ಈ  ಎಲ್ಲ ನನಗೆ ಚಿಂತನೆಗೆ ಹಚ್ಚಿತು. ಶೃಂಗೇರಿಯಿದ್ದ ಸ್ಥಳದಲ್ಲಿ ಮಾನವ ಮತ್ತು ಪಶುಪಕ್ಷಿಗಳು ಸಾಮರಸ್ಯದಿಂದ ಬಾಳುತಿದ್ದವು.  ಮಾನವ ಶಿಶುವನ್ನು ಒಂದು ಜಿಂಕೆಯ  ತಾಯಿಯೋಪಾದಿಯಲ್ಲಿ ನೋಡಿಕೊಂಡಿರುವುದೆ ಈ ಋಷ್ಯ ಶೃಂಗರ  ಕಥೆಯ ಉಗಮಕ್ಕೆ ಕಾರಣವಾಗಿರಬಹುದೆ? ಎನಿಸಿತು.ಆದರೆ ಈಗ ಮಲ್ಲಿಕಾರ್ಜುನ ಬೆಟ್ಟವನ್ನು ಸಂಸ್ಕೃತಿ ಕರಣ ಮಾಡಿ ಮಲನಿವಾರಿಕೀಶ್ವರ  ಎಂದು ಹೆಸರಿಸಿರುವುದು  ಈ ಮಾತಿಗೆ ಪುಷ್ಟಿ ಕೊಡುವುದು.
ಇನ್ನುಹಾವುಕಪ್ಪೆಯ ರಕ್ಷಣೆಗೆ ಧಾವಿಸಿರುವುದು ಸಹಾ ನೆಲ ಮತ್ತು ನೀರಿನ ಗುಣವೆ ಆಗಿರಬಹುದು.. ಆದು ಈಗಲೂ ಅಲ್ಲಿನ ಜನರ ಸುಸಂಸ್ಕೃತ ನಡವಳಿಕೆ ಕಂಡಾಗ  ಅದು ಸಹಜವೇನೋ ಅನಿಸಿದೆ.
ಈ ರೀತಿಯ ಐತಿಹ್ಯಗಳು ಎಲ್ಲ ಪುಣ್ಯಕ್ಷೇತ್ರಗಳಲ್ಲೂ ಕೇಳಿ ಬರುತ್ತವೆ. ತಿರುಪತಿಯಲ್ಲಿ ಮೊದಲು ವರಾಹ ಸ್ವಾಮಿದರ್ಶನ ಮಾಡಿದರೆ ಮಾತ್ರ ಫಲ ಪ್ರಾಪ್ತಿ , ಎನ್ನುವ ನಂಬಿಕೆ, ಧರ್ಮಸ್ಥಳದಲ್ಲಿ ಅಪ್ಪಣ್ಣನನ ದರ್ಶನ. ಮಂತ್ರಾಲಯದಲ್ಲಿ ಮಂಚಾಲಮ್ಮನ ದರ್ಶನ ಮಾಡಿಕೊಳ್ಳದಿದ್ದರೆ ಫಲ ಪ್ರಾಪ್ತಿಯಾಗದು ಎನ್ನುವ ಸಂಪ್ರದಾಯ ಆಸ್ಥಳದ  ಮೂಲನಿವಾಸಿಗಳಿಗೂ ಆದ್ಯತೆ ನೀಡ ಬೇಕು ಎನ್ನುವ ಆಶಯದ ಪ್ರತೀಕ ಇರಬಹುದೆ ಎನಿಸಿತು.
ಹಂಪೆಯಲ್ಲಿ ವಿರೂಫಕ್ಷೇಶ್ವರನ ದರ್ಶನ ಮಾಡಿದ ಮೇಲೆ ಚಂಡಿಕೇಶ್ವರನಿಗೆ ಚಪಾಳೆ ಹೊಡೆದು ಕೈ ಮುಗಿದು, ಬಟ್ಟೆಯದಾರದ ತುಂಡನ್ನು ಕಿತ್ತಿ ಏರಿಸುವುದ ಸಹಾ ಇದೇ ರೀತಿಯ ಆಚರಣೆ ಗಮನಿಸಿದ್ದೆ. ಬಹುತೇಕ ಪ್ರಸಿದ್ಧ ಶಿವಾಲಯಗಳ ಆಸು ಪಾಸಿನಲ್ಲಿ ಚಂಡಿಕೇಶ್ವರನ ಚಿಕ್ಕ ಗುಡಿ ಇದ್ದೆ ಇರುವುದು ಗಮನಕ್ಕೆ ಬಂದಿತು. ಶಿವನು ಲಿಂಗಾಕಾರ ದಲ್ಲಿರುವುದರಿಂದ ಮತ್ತು  ಧ್ಯಾನ ಮಗ್ನ ನಾಗಿರುವುದರಿಂದ ಭಕ್ತರು ಬಂದಿರುವುದನ್ನು ಗಮನಿಸಿರುವುದಿಲ್ಲ ಅದಕ್ಕೆ ಚಂಡಿಕೇಶ್ವರನ ಹತ್ತಿರ ವರದಿ ಮಾಡಿಕೊಂಡರೆ ಅವನು ತಿಳಿಸುವನು ಎಂಬ ಐತಿಹ್ಯ..
ಸೊಂಡೂರಿನ ಕುಮಾರಸ್ವಾಮಿಯ ಕುರಿತಾದ ಐತಿಹ್ಯವಿದೆ ಒಂದಿದೆ.ಕುಮಾರಸ್ವಾಮಿಯದರ್ಶನಕ್ಕೆ ಇತ್ತೀಚಿನ ಮಹಿಳೆಯರಿಗೆ ಅವಕಾಶವೆ ಇರಲಿಲ್ಲ.ಅದಕ್ಕೆ ಕಾರಣ ಪಾರ್ವತಿಯ ಮಗನಿಗೆ ಮದುವೆ ಮಾಡಲು  ಕನ್ಯಾಕುಮಾರಿಯನ್ನು ಆಯ್ಕೆ ಮಾಡಿ ಬಂದು ಮಗನಿಗೆ ಅವಳ ಸೌಂದರ್ಯವನ್ನು ಅತಿಶಯವಾಗಿ ವರ್ಣಿಸಿದಳು.. ಕುಮಾರನು ಕುತೂಹಲದಿಂದ ಅವಳು ಯಾರ ಹಾಗಿದ್ದಾಳೆ ? ಎಂದು ಕೇಳಿದ. ಅದಕ್ಕೆ ಉತ್ಸಾಹದ ಭರದಲ್ಲಿ ತಾಯಿ ಅವಳು  ಖೂಬೆ ಖೂಬು ನನ್ನ ಹಾಗೆ ಇದ್ದಾಳೆ. ಅತಿಲಾವಣ್ಯ ವತಿ ಎಂದು ತುಸು ಗರ್ವದಿಂದಲೆ ಹೇಳಿದಳು. ಅದಕ್ಕೆ ಕಾರ್ತಿಕೇಯನು ಆ ಹುಡುಗಿ ನಿನ್ನ ಹಾಗಿದ್ದರೆ ತಾಯಿಯ ಸಮಾನ , ಮದುವೆ ಯಾಗಲಾರೆ ಎಂದು ನಿರಾಕರಿಸಿದ.ಕುಪಿತಳಾದ ಪಾರ್ವತಿ ಎಲ್ಲ ಹೆಣ್ಣುಗಳಲ್ಲೂ ನನ್ನ ಅಂಶ ಇದ್ದೆ ಇರುವುದು ಎಂದಾಗ ನಾನು ಮದುವೆಯನ್ನೆ ಆಗುವುದಿಲ್ಲ ಎಂದು ನಿರ್ಧಾರ ಮಾಡಿದ. ಅಷ್ಟೆ ಅಲ್ಲ ಹೆಣ್ಣಿನ ದರ್ಶನವೆ ಬೇಡ ಎಂದು ನಿರ್ಧರಿಸಿದ. ಅದಕ್ಕೆ ಮಹಿಳೆಯರಿಗೆ ಕುಮಾರ ಸ್ವಾಮಿಯ ದರ್ಶನ ನಿಷೇಧವಿತ್ತು ಜೊತೆಗೆ ಹೆಂಗಸರು ನೋಡಿದರೆ ರಕ್ತ ಕಾರಿ ಸಾಯುವರು ಎಂಬ ನಂಬಿಕೆಯನ್ನೂ ಹಬ್ಬಿಸಿದರು. ಪರಿಣಾಮವಾಗಿ ಶತಮಾನಗಳವರೆಗೆ ಅದನ್ನು ಪಾಲಿಸಲಾಯಿತು. ಆದರೆ ಕೆಲವೆ ವರ್ಷಗಳ ಹಿಂದೆ ವಿಚಾರವಂತ ಮಹಿಳೆಯರು ಚಳುವಳಿ ಮಾಡಿ ದೇವರ ದರ್ಶನ ಪಡೆದರು.ನಂಬಿಕೆ ಬರಿ ಮಿಥ್ಯ ಎಂದು ಸಿದ್ಧ ಮಾಡಿದರು. ಇಂದಿಗೂ ಆ ಮಹಿಳೆಯರು ಆರಾಮಾಗಿ ಇದ್ದಾರೆ. ಅವರ ಪ್ರಯತ್ನದ ಫಲವಾಗಿ ಈಗ ಎಲ್ಲ ಮಹಿಳೆಯರಿಗೂ ದರ್ಶನದ ಅವಕಾಶ ಲಭಿಸಿದೆ.
ಸೊಂಡೂರಿನ ಹೆಸರಾಂತ ಭಸ್ಮದ ಬಗೆಗೂ ಒಂದು ಐತಿಹ್ಯವಿದೆ. ಅದರ ಪ್ರಕಾರ ಅಲ್ಲಿ ದೊರೆವ ಭಸ್ಮ ಪರ್ವತಿಯ ಹಾಲು.  ಕುಮಾರಸ್ವಾಮಿ ಮದುವೆಯಾಗಲು ನಿರಾಕರಿಸಿದಾಗ, ಪಾರ್ವತಿಯು ಮಗನಾಗಿ ತಾಯಿಯ ಮಾತು ಮೀರುವೆಯಾದರೆ ನಾನು ಹಾಲುಕುಡಿಸಿ ನಿನ್ನನ್ನು ಬೆಳಸಿದ್ದು ವ್ಯರ್ಥವಾಯಿತು ಎಂದು ಹಲುಬಿದಳು. ಮನನೊಂದ ಕುಮಾರಸ್ವಾಮಿ ,ನನಗೆ ಹಾಲಿನ ಹಂಗೂ ಬೇಡ ಎಂದು ಕುಡಿದ ಹಾಲನ್ನೆಲ್ಲ ಕಕ್ಕಿ ಕೊಂಡ. ಅದೆ ಹಳ್ಳವಾಗಿ ಹರಿದು ಭಸ್ಮದ ಗುಡ್ಡ ವಾಯಿತು. ಕೊನೆಕೊನೆಗೆ ಹಾಲಿನ ಜೊತೆ ರಕ್ತ ಬರಲುಶುರುವಾದಾಗ ತಾಯಿ ಅವನನ್ನು ಕಾಡಿ ಬೇಡಿ ವಾಂತಿ ಮಾಡಿಕೊಳ್ಳದಂತೆ ತಡೆದಳಂತೆ. ಅದಕ್ಕೆ ಕೆಲಭಾಗದಲ್ಲಿ ಭಸ್ಮದ ಜೊತೆ ಕೆಂಪುಗೆರೆಗಳೂ ಕಾಣುತ್ತವೆ. ಸಂಡೂರಿನ ನಿರ್ಧಿಷ್ಟ ಭಾಗದಲ್ಲಿ ವರ್ಷಕೊಮ್ಮೆಮಾತ್ರ ನಿಗದಿತ ಪ್ರದೇಶದಲ್ಲಿ  ಅಗೆದರೆ ಭಸ್ಮ ದೊರೆಯುವುದು. ಅದನ್ನು ಸಂಗ್ರಹಿಸಿದು ಮತ್ತೆ ಆಭಾಗವನ್ನು ಮಣ್ಣನಿಂದ ಮುಚ್ಚುವರು . ಮುಂದಿನ ವರ್ಷದ ತನಕ ಅದನ್ನು ತೆರೆಯುವುದೆ ಇಲ್ಲ ಎಂಬ ಪ್ರತೀತಿ ಇದೆ.ಭಸ್ಮವು ಅಲ್ಯಮ್ಯುನಿಯಂನ ಅದಿರು , ಅದರಲ್ಲಿ ಮೆಂಗನೀಸ್‌ ಅಂಶವಿದ್ದರೆ ಕೆಂಪುಕಾಣುತ್ತದೆ ಎಂಬುದ ವೈಜ್ಞಾನಿಕ ಸತ್ಯ.
ಅದೂ ಅಲ್ಲದೆ ಕುಮಾರಸ್ವಾಮಿಯು ತನ್ನ ದರ್ಶನಕ್ಕೆ ಬರುವವರಿಗೆ ಅವರಷ್ಟೆ ಎತ್ತರವಿರುವಂತೆ ಗೋಚರಿಸುತ್ತಾನೆ. ಚಿಕ್ಕವರಿಗೆ ಚಿಕ್ಕವನಾಗಿ ಪ್ರೌಢರಿಗೆ ಪ್ರೌಢನಾಗಿ ಕಾಣುವನು ಎಂದು ಹೇಳುವರು ಅವನ ಎತ್ತರವನ್ನುನಿಖರವಾಗಿ ಅಳೆಯುವುದು ಕಷ್ಟದ ಕೆಲಸವೇನಲ್ಲ. ಆದರೆ ಜನರ ನಂಬಿಕೆಗೆ.ಭಂಗ ತರುವ ಅಗತ್ಯ ಕಾಣುತ್ತಿಲ್ಲ.
ಕುಮಾರಸ್ವಾಮಿಯಿಂದ  ತಿರಸ್ಕೃತಳಾದ ಕನ್ಯಾಕುಮಾರಿಯೂ ಮದುವೆಯಾಗದೆ ಹಾಗೆ ಚಿರಕನ್ಯಯಾಗಿ ಉಳಿದಳು, ಎನ್ನುವರು.

           ಹಂಪೆಯ ವಿಜಯ ವಿಠಲದೇವಸ್ಥಾನದಲ್ಲಿ ಕಲ್ಲು ತೇರು ಇದೆ. ಮತ್ತು ಅಲ್ಲಿ ಒಂದು ಕಲ್ಲಿನ ಹುಂಜವೂ ಹಿಂಎ ಇತ್ತಂತೆ. ಈಗ ಅದನ್ನು ಯಾರೋ ಅಪಹರಿಸಿದ್ದಾರೆ. ಕಲ್ಲು ಕೋಳಿ ಕೂಗಿದಾಗ ಕಲ್ಲುತೇರು ಚಲಿಸಿದಾಗ ಪ್ರಪಂಚದಲ್ಲಿ ಪ್ರಳಯವಾಗುವುದು ಎಂಬ ಮಾತನ್ನು ಹಳಬರು ನಂಬುತಿದ್ದರು
ಆಂಧ್ರ ಪ್ರದೇಶದ ಮಂಗಳಗಿರಿಯಲ್ಲಿ ಪಾನಕದ ನರಸಿಂಹನ ಐತಿಹ್ಯವು ಇಂದಿಗೂ ಜ್ವಲಂತವಾಗಿದೆ. ಅಲ್ಲಿ ಮೇಲುನೋಟಕ್ಕೆ ಕಂಡುಬರುವ ಹಾಗೆ ಭಕ್ತರು, ಬಾಯಿತೆರೆದು ಕೊಂಡಿರುವ ಲಕ್ಷ್ಮಿ ನರಸಿಂಹ ದೇವನಿಗೆ ಅರ್ಪಿಸಿದ ಪಾನಕನ್ನು ಅದರ ಪ್ರಮಾಣ ಎಷ್ಟೆ ಇರಲಿ ಅರ್ದ ಭಾಗವನ್ನು ಮಾತ್ರ ನರಸಿಂಹನು ಸ್ವೀಕರಿಸುವನು ಉಳಿದ  ಅರ್ಧವನ್ನು ತನ್ನ ಕಟವಾಯಿಯಿಂದ ಹೊರ ಹಾಕುವನು . ಒಂದು ಲೋಟ ಪಾನಕ ಅರ್ಪಿಸಿದರೆ, ಅರ್ಧ ಲೋಟ ಮಾತ್ರ ದೇವನು ಸ್ವೀಕಾರ ಮಾಡುವನು . ಒಂದು ಕೊಡ ಪಾನಕ ನೀಡಿದರೆ ಅರ್ಧಕೊಡ ಪಾನಕ ಕುಡಿದು ಬಿಡುವನು.ಇದನ್ನು ವೈಜ್ಞಾನಿಕ  ಪರಿಶಿಲನೆಗೆ ಒಳಪಡಿಸುವುದು ಕಷ್ಟಸಾಧ್ಯ. ಆದರೆ ಈ ಐತಿಹ್ಯವನ್ನು ಆಸ್ತಿಕರು ಇಂದಿಗೂ ನಂಬಿರುವರು.. ಅದಕ್ಕೆ ಭಂಗತರುವ ಕೆಲಸ ಸಲ್ಲ. ಧರ್ಮದ ಅಡಿಪಾಯವೆ ನಂಬಿಕೆ. ಈ ರೀತಿಯ ಐತಿಹ್ಯಗಳು ಈಗಲೂ ಸ್ವೀಕಾರಾರ್ಹವಾಗಿವೆ. ಮತ್ತು ಆಚರಣೆಯ ಅಂಗವಾಗಿ ಹೋಗಿವೆ.ಅವು ಜೀವ ವಿರೋಧಿ ಅಲ್ಲದಿದ್ದರೆ ಅವುಗಳನ್ನು ಪ್ರಶ್ನಿಸಿ  ಅವರ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳವ ಅಗತ್ಯವೂ ಇಲ್ಲ  ಜನ ಮಾನಸದಲ್ಲಿ ಐತಿಹ್ಯಕ್ಕೆ ಅದರದೆ ಆದ ಸ್ಥಾನವಿದೆ. ಆದರೆ ಅದನ್ನೆ ಇತಿಹಾಸ ಎಂದು ಬಿಂಬಿಸ ಬೇಕಿಲ್ಲ.

ಹುಡುಗಿಯ ಕನಸಲ್ಲಿ ನಡೆದ ಸಂಗತಿ


ಈ ಮೊದಲು ಹಳ್ಳಿ ಶಾಲೆಯಲ್ಲಿ ಶಿಕ್ಷಕನಾಗುವುದೆ ಒಂದು ಶಿಕ್ಷೆ ಎಂಬ ಭಾವನೆ ಬಲವಾಗಿತ್ತು. ಈಗಲೂ ಅದು ಬದಲಾಗಿಲ್ಲ. ಯಾವುದೆ ಶೈಕ್ಷಣಿಕ ಹಿನ್ನೆಲೆ ಇಲ್ಲದ ಮಕ್ಕಳಿಗೆ ಕಲಿಸುವುದೆಂದರೆ ಬಹಳ ಕಠಿಣ ಕೆಲಸ ಎನ್ನುತ್ತಿದ್ದವರು ಅನೇಕ. ಅದರಲ್ಲೂ ಶಿಕ್ಷಣ ಪಡೆಯುವ ಮಕ್ಕಳು ಮೊದಲ ಪೀಳಿಗೆಯವರಾದರೆ ತೀರಿತು ಹೇಳಿ ಕೊಡುವುದರಲ್ಲಿ ಕುರಿ ಕೋಣ ಬೀಳುವುದು. ಅವರಿಗೆ ಆಸಕ್ತಿ ಮೂಡಿಸುವಲ್ಲಿ ಸಾಕು ಬೇಕಾಗುತ್ತದೆ. ಜತೆಗೆ ಅಲ್ಲಿರಲು ಮೂಲ ಸೌಲಭ್ಯ ಇಲ್ಲ. ಯಾರದಾದರೂ ಮನೆಯ ಒಪ್ಪಾರದಲ್ಲಿ ಇರುವ ಕೋಣೆಯಲ್ಲೆ ವಸತಿ. ಇದ್ದ ಒಂದು ತಟ್ಟಿಯ ಹೋಟೆಲ್ ನಲ್ಲಿ ಊಟ ತಿಂಡಿ. ಅದಕ್ಕೆಂದೆ ಬಹುತೇಕ ನೌಕರರು ಜಂಗಮರು. ಜಾತಿಯಿಂದ ಅಲ್ಲ. ತಮ್ಮ ನಿತ್ಯದ ಓಡಾಟದಿಂದ. ಅದಕ್ಕಾಗಿ ನಗರವಾಸಿಗಳಾಗಲು ಇನ್ನಿಲ್ಲದ ಪ್ರಯತ್ನ ಮಾಡುವರು. ಹಳ್ಳಿಯಲ್ಲೆ ಕೆಲಸ ಮಾಡಿದರೂ ಹತ್ತಿರದ ಪಟ್ಟಣದಲ್ಲೆ ವಾಸ. ನಿತ್ಯ ಓಡಾಟ. ಒಳಗೆ ಕಿಕ್ಕಿರಿಯುವಂತೆ ಜನ ತುಂಬಿಸಿಕೊಂಡು ಬರುವ ಬಸ್ಸಿನ ಪ್ರಾಣ ಬಹುದುಸ್ತರ. ಅದಕ್ಕೆ ಸೈಕಲ್‌ ಸವಾರಿ ಮಾಡಿಕೊಂಡು ಬರುವವರೆ ಹೆಚ್ಚು. ಆದ್ದರಿಂದಲೆ ಏನೋ ನೌಕರಿದಾರರು ಮದುವೆಯಾದರೆ ಅವರಿಗೆ ಕೊಡುತಿದ್ದ ಕಾಣಿಕೆ ಎಂದರೆ ಲಕಲಕ ಹೊಳೆವ ಹರಕ್ಯುಲಸ್‌ ಬೈಸಿಕಲ್ಲು ಮತ್ತು ಮುಂಗೈಗೆ ಕಟ್ಟಿಕೊಳ್ಳಲು ಫೆವರ್‌ಲುಬಾ ವಾಚು. ಬರುವ ಬಹುಶಃ ಅಳಿಯ ವಾಚು ನೋಡಿಕೊಂಡು ಬೇಗ ಮನೆಗೆ ಬರಲಿ ಎಂಬುದು ಹೆಣ್ಣು ಕೊಟ್ಟ ಮಾವನ ಒಳ ಉದ್ದೇಶವೂ ಇರಬಹುದು. ಜತೆಗೆ ಸರ್ಜ ಬಟ್ಟೆ ಸೂಟು. ಮದುವೆಯಲ್ಲಿ ತೆಗೆಯುತಿದ್ದ ಒಂದೆರಡು ಫೋಟೋಗೆ ಹಾಕಿದ್ದು ಬಿಟ್ಟರೆ ಬಿರು ಬೇಸಿಗೆಯ ಬಳ್ಳಾರಿ ಜಿಲ್ಲೆಯಲ್ಲಿ ಅದನ್ನು ಧರಿಸುವ ಬಗೆ ಹೇಗೆ? ಆದರೂ ಮದುವೆಗೆ ಸೂಟು ಇರದಿದ್ದರೆ ಹೇಗೆ? ಅದಕ್ಕೆ ವರ್ಷಕ್ಕೊಂದೆರಡು ಸಲ ಸಮಾರಂಭಗಳಲ್ಲಿ ಪೆಟ್ಟಿಗೆಯಿಂದ ಅದಕ್ಕೆ ಹೊರ ಬರುವ ಯೋಗ. ಉಳಿದ ಸಮಯದಲ್ಲಿ ಡಂಬಾರು ಗುಳಿಗೆ ಹಾಕಿ ಮಡಿಚಿ ಇಡಲಾಗುತಿತ್ತು.
ಯಾರು ಏನೆ ಅನ್ನಲಿ ಹಳ್ಳಿಯ ಮಕ್ಕಳಿಗೆ ಕಲಿಸುವುದರಲ್ಲೂ ಒಂದು ರೀತಿಯ ಖುಷಿ ಇದೆ. ಅವರಲ್ಲಿ ಥಳಕು ಬಳುಕು ಇಲ್ಲ. ಮೇಷ್ಟ್ರೆ ಅವರಿಗೆ ಎಲ್ಲ. ಅಪ್ಪ ಅವ್ವನ ಮಾತೂ ಲೆಕ್ಕಕ್ಕಿಲ್ಲ. ಅಷ್ಟು ನಂಬಿಗೆ ವಿಶ್ವಾಸ. ಮೊದಲನೆಯದಾಗಿ ಶಿಕ್ಷಕ ಎಂದರೆ ಅಲ್ಲಿ ಅವರ ಪಾಲಿನ ಸರ್ವಜ್ಞ. ಎಲ್ಲ ಬಲ್ಲವ. ಅವರು ಹೇಳಿದ್ದೆ ವೇದವಾಕ್ಯ. ಅದಕ್ಕೆ ಅಲ್ಲಿ ಮೈ ಎಲ್ಲ ಕಣ್ಣಾಗಿರಬೇಕಾದ ಅವಶ್ಯಕತೆ. ಶಾಲೆಯಲ್ಲಿ ಮಾತ್ರವಲ್ಲ ಹೊರಗೂ ಅವನನ್ನು ಗಮನಿಸುವವರು ನೂರಾರು ಜನ. ಯಾರು ಹೇಗೆ ಬೇಕಾದರೂ ಇರಲಿ ಅಭ್ಯಂತರ ಇಲ್ಲ. ಆದರೆ ಪಾಠ ಹೇಳುವ ಮೇಷ್ಟ್ರು ಮಾತ್ರ ಮಾದರಿಯಾಗಿರಬೇಕೆಂದು ಸಮಾಜದ ನಿರೀಕ್ಷೆ.
ಅದಕ್ಕೆ ಹಳ್ಳಿ ಕಡೆ ಒಂದು ಆಡು ಮಾತಿನ ಗಾದೆ ಬೇರೆ ಇದೆ. `ಗುರು ನಿಂತು ಒಂದಾ ಮಾಡಿದರೆ, ಶಿಷ್ಯ ಓಡಾಡುತ್ತಾ ಮಾಡುತ್ತಾನೆನಲವತ್ತು ವರ್ಷದ ಹಿಂದೆ ನಾನು ಶಿಕ್ಷಕ ವೃತ್ತಿಗೆ ಕಾಲಿಟ್ಟಾಗ ಇದ್ದ ಪರಿಸ್ಥಿತಿ ಅದು.
ನಾನು ಓದುವಾಗಲಂತೂ, ಅಂದರೆ ಅರವತ್ತು ವರ್ಷದ ಹಿಂದಿನ ಮಾತು. ಶಿಕ್ಷಕರ ಬಗೆಗಿನ ಜನರ ನಂಬುಗೆ ಅನೇಕ ಬಾರಿ ಹಾಸ್ಯಕ್ಕೆ ವಸ್ತುವಾದದ್ದೂ ಇದೆ. ಆಗಿನ್ನೂ ವಿದ್ಯುತ್ ದೀಪ ಇರಲಿಲ್ಲ. ಊರ ನಡುವೆ ಪೆಟ್ರೋಮ್ಯಾಕ್ಸ್ ಹತ್ತಿಸಿ ಅಲ್ಲಿರುವ ಕಬ್ಬಿಣದ ಕಂಬಕ್ಕೆ ತೂಗು ಹಾಕುತ್ತಿದ್ದರು. ಓಣಿಗೊಂದರಂತೆ ಸೀಮೆಎಣ್ಣೆಯ ದೀಪವನ್ನು ಕಟ್ಟಿಗೆಯ ಕಂಬಕ್ಕೆ ಕೂಡಿಸಿದ ಗಾಜಿನ ಪೆಟ್ಟಿಗೆಯಲ್ಲಿ ಇಡುತ್ತಿದ್ದರು. ಊರಿಗೆ ಅವು ಎಂಟೋ ಹತ್ತೋ ಇದ್ದರೆ ಹೆಚ್ಚು. ಸಂಜೆ ಆರಕ್ಕೆ ಕೈನಲ್ಲಿ ಸೀಮೆಎಣ್ಣೆ ಡಬ್ಬ ಹಿಡಿದು ಪ್ರತಿ ದೀಪದ ಕಂಬದಲ್ಲಿನ ದೀಪಕ್ಕೆ ಎಣ್ಣೆ ತುಂಬಿ ಬತ್ತಿ ಸರಿ ಮಾಡಿ ದೀಪ ಅಂಟಿಸುತ್ತಿದ್ದ ನರೇರು ಬರಮಪ್ಪ ನೇಮಕವಾಗಿದ್ದ. ಆ ದೀಪಗಳೂ ರಾತ್ರಿ ೯ ರವರೆಗೆ ಮಿಣಕ್‌ ಮಿಣಕ್‌ ಉರಿದು ನಂತರ ನಂದಿಹೋಗುತ್ತಿದ್ದವು. ಆಗ ಬರ ಹೋಗುವವರು ಯಾರೂ ಇರತ್ತಿರಲಿಲ್ಲ. ಇನ್ನು ಬೆಳದಿಂಗಳ ಕಾಲದಲ್ಲಿ ಅವನ್ನು ಅಂಟಿಸಿ ಚಂದ್ರನಿಗೆ ಅಪಮಾನ ಮಾಡುತ್ತಿರಲಿಲ್ಲ.
ಗ್ರಾಮಗಳಲ್ಲಿ ಕಕ್ಕಸಿನ ಕಲ್ಪನೆಯೇ ಇರಲಿಲ್ಲ. ಗಂಡಸರೆಲ್ಲಾ ಹೊಲದ ಕಡೆ ಹೋಗಿ ಗೊಬ್ಬರ ಹಾಕಿ ಬಂದರೆ ಹೆಂಗಸರು ಊರ ವಾರೆಯ ಬಯಲಲ್ಲಿ ಹೊಗುತ್ತಿದ್ದರು. ಹೋಗುವಾಗ, `ಯಕ್ಕಾ ಬರ್ತಿಏನಬೆ, ಚಂಬಗಿ ತಗಂಡು ಹೋಗಾನಎನ್ನುತ್ತಿದ್ದರು. ಅಗತ್ಯವಿರಲಿ ಬಿಡಲಿ ಹೋಗುವುದನ್ನು ತಪ್ಪಿಸುತ್ತಿರಲಿಲ್ಲ. ನಡೆಯಲು ಬಂದ ಹೊಸ ಸೊಸೆಗಂತೂ ಅದು ಒಂದು ರೀತಿಯ ವಿರಾಮ ಸಮಯ. ಕಷ್ಟ ಸುಖ ಹೇಳಿಕೊಳ್ಳಲು ಅದು ಒಳ್ಳೆಯ ಅವಕಾಶವಾಗಿತ್ತು. ಅವರು ಹೋಗುವುದು ಹೆಚ್ಚಾಗಿ ಹೊತ್ತು ಕಂತಿದ ಮೇಲೆ. ರಾತ್ರಿಯಾದರಂತೂ ಊರಿಗೆ ಬರುವ ದಾರಿಯ ಎರಡು ಕಡೆ ತಂಬಿಗೆ ಇಟ್ಟುಕೊಂಡು ಕುಳಿತಿರುವುದು ಸಾಮಾನ್ಯವಾಗಿರುತ್ತಿತ್ತು. ಇನ್ನೂ ಹಾಗೆ ಕುಳಿತಿರುವವರು ಯಾರಾದರೂ ಗಂಡಸರು ಆ ದಾರಿಯಲ್ಲಿ ಬಂದರೆ ತುದಿಯಲ್ಲಿದ್ದವರು ಸೂಚನೆ ನೀಡುವರು. ಆಗ ಎಲ್ಲರೂ ಎದ್ದು ನಿಲ್ಲುತ್ತಿದ್ದರು. ಒಂದು ರೀತಿಯಲ್ಲಿ ಗಾರ್ಡ್ ಆಫ್‌ ಆನರ್‌ ನೀಡುವವರ ಹಾಗೆ. ಒಂದು ಸಲ ಊರಿಗೆ ಹೊಸದಾಗಿ ಬಂದ ಹೆಂಗಸೊಬ್ಬಳು ಹಾಗೆ ಕುಳಿತಿರುವಾಗ, ಯಾರೋ ಬಂದದನ್ನು ನೋಡಿ ಯಕ್ಕಾ ಯಾರೋ ಗಂಡಸು ಬತ್ತಾ ಅವ್ರೆ ಎಂದು ಧಡಕ್ಕನೆ ಎದ್ದು ನಿಂತಾಗ, ಪಕ್ಕದವಳು, ಅಯ್ಯೋ, ಅದು ನಮ್ಮ ಸಾಲಿ ಮೇಷ್ಟ್ರು, ಕುಂದ್ರು ಎಂದಳಂತೆ. ಆಗ ಶಾಲಾ ಶಿಕ್ಷಕ ಅಷ್ಟು ನಿರುಪದ್ರವಿ ಪ್ರಾಣಿ ಎಂಬ ಪ್ರತೀತಿ ಇತ್ತು.
ಇನ್ನು ಹದಿಹರೆಯದ ಹುಡುಗರಿಗೆ ಹೊರಕಡಿಗೆ ಹೋಗುವುದು ಎಂದರೆ ಪಿಕ್ನಿಕ್‌ ಇದ್ದಂತೆ. ನಾಲ್ಕಾರು ಜನ ಒಟ್ಟಿಗೆ ಸೇರಿ ಎರಡೋ, ಮೂರೂ ತಂಬಿಗೆ ನೀರಿನ ಸಮೇತ ಬಯಲಿಗೆ ಹೋಗುವರು. ಅಲ್ಲಿಯೆ ಮಾತು ಕಥೆ ಜತೆಗೆ ಚೇಷ್ಟೆ. ಒಂದುಸಲ ನೆನಪಿದೆ, ಎಲ್ಲರದೂ ಮುಗಿಯಿತು. ಕೊನೆಗೆ ನೀರು ಬಳಸುವ ಸರದಿ ನನ್ನದು. ಕೈ ಜಾರಿ ತಂಬಿಗೆ ನೆಲಕ್ಕೆ ಬಿದ್ದಿತು. ಎಲ್ಲ ನೀರು ಚೆಲ್ಲಿ ಹೋಯಿತು. ಚಣ್ಣ ಬಿಚ್ಚಿಕೊಂಡು ಮನೆಗೆ ಹೋಗಲು ನಾಚಿಕೆ. ಸರಿ ಅತ್ತಿತ್ತ ನೋಡಿದೆ. ಅಲ್ಲಿಯೆ ಕಾದದ ತುಂಡುಗಳು ಹಾರಾಡುತಿದ್ದವು. ಅವನ್ನೆ ಬಳಸಿ ಶುಚಿ ಕಾರ್ಯ ಮುಗಿಸಲಾಯಿತು. ಎಲ್ಲರೂ ಬಾಯ್ತುಂಬ ನಕ್ಕರು. ಅಂತೂ ಕೆಲಸ ಮುಗಿದಿತ್ತು.
ಆ ಅನುಭವದ ಲಾಭ ಐವತ್ತು ವರ್ಷದ ಮೇಲೆ ಉಪಯೋಗಕ್ಕೆ ಬಂತು. ಅಮೇರಿಕಾಕ್ಕೆ ಮೊದಲ ಸಲ ವಿಮಾನ ಯಾನ. ೨೪ ಗಂಟೆಗಳ ಪಯಣ. ಕಕ್ಕಸಿಗೆ ಹೋದಾಗ ಅಲ್ಲಿ ನೀರಿನ ಸುಳಿವಿಲ್ಲ. ಮೊದಲು ಕಕ್ಕಾಬಿಕ್ಕಿಯಾದೆ. ನಂತರ ಅಲ್ಲಿಯೆ ಸುರುಳಿಸುರಳಿಯಾಗಿದ್ದ ಟಿಸ್ಯೂ ಕಾಗದ ಕಂಡಿತು. ತಕ್ಷಣ ಹಳೆಯದು ನೆನಪಾಗಿ ಸಮಸ್ಯೆ ಪರಿಹರಿಸಿಕೊಂಡೆ. ಇಂದು ಹಳ್ಳಿಗಳು ಹಾಗಿಲ್ಲ. ಅದು ಬೇರೆ ಮಾತು. ಬೀದಿ ದೀಪಳನ್ನು ಹೊತ್ತ ಕಂಬಗಳು ಹಗಲಲ್ಲಂತೂ ಎಲ್ಲ ಕಡೆ ಎದ್ದು ಕಾಣುತ್ತವೆ. ರಾತ್ರಿ ಕರೆಂಟ್ ಇದ್ದರೆ ಮಿಣಕ್‌ ಮಿಣಕ್‌ ಎನ್ನುತ್ತಿರುತ್ತವೆ. ಹಳ್ಳಿ ಹಳ್ಳಿಗೂ ಹೈಸ್ಕೂಲುಗಳೂ ತಲೆ ಎತ್ತಿವೆ. ಅದರಂತೆ ಸ್ಥಿತಿಗತಿಗಳೂ ಬಹಳ ಬದಲಾಗಿವೆ.
ನಾನು ಕೆಲಸ ಮಾಡಿದ್ದು ನಾಲ್ಕು ದಶಕಗಳ ಹಿಂದೆ. ಅದರಲ್ಲೂ ನಾನು ಗಣಿತದ ಮಾಸ್ತರನಾಗಿ. ನಾನು ಶಿಸ್ತಿನ ಶಿಪಾಯಿ ಎಂದು ಎಲ್ಲರಿಗೂ ಗೊತ್ತು. ಒಂದು ದಿನ ಹತ್ತನೆ ತರಗತಿಯಲ್ಲಿ ರೇಖಾ ಗಣಿತದ ಪಾಠ. ನಾನು ಕಪ್ಪುಹಲಗೆಯ ಮೇಲೆ ಚಿತ್ರ ಬಿಡಿಸುವಲ್ಲಿ ತಲ್ಲೀನ. ಅಷ್ಟರಲ್ಲಿ ಹುಡುಗಿಯರ ಗುಂಪಿನಲ್ಲಿ ಗುಸು ಗುಸು ಪಿಸ ಪಿಸ ಮಾತು ಕೇಳಿಸಿತು. ಹುಬ್ಬು ಗಂಟು ಹಾಕಿ ಅವರ ಕಡೆ ತಿರುಗಿದೆ. ಆಗ ಹುಡುಗರೂ ಹುಡುಗಿಯರೂ ಒಟ್ಟಿಗೆ ಕಲಿಯುತ್ತಿದ್ದ ಕಾಲ. ಹುಡುಗಿಯರ ಸಂಖ್ಯೆ ಹೆಚ್ಚಿಲ್ಲ. ತರಗತಿಯಲ್ಲಿ ಎಂಟು ಹತ್ತು ಮಾತ್ರ. ಆದರೆ ಹುಡುಗಿಯರು ಮಾತ್ರ ಶಾಲೆಗೆ ತಪ್ಪದೆ ಬರುತ್ತಿದ್ದರು. ಅದೂ ಹತ್ತೂವರೆ ಗಂಟೆಯ ತರಗತಿಗೆ ಹತ್ತು ಗಂಟೆಗೆ ಬಂದು ಕೂಡುತಿದ್ದರು. ಅದಕ್ಕೆ ಕಾರಣ ಅವರಿಗೆ ಕಲಿಯುವುದರ ಮೇಲಿನ ಆಸಕ್ತಿ. ಜತೆಗೆ ಮನೆಗೆಲಸ ತಪ್ಪಿಸಿಕೊಳ್ಳಲು ಬೇಗ ಬರುವುರು. ಮನೆಯಲ್ಲಿದ್ದರೆ ಕಸ ಗುಡಿಸು, ಪಾತ್ರೆ ತೊಳೆ, ಕೊನೆಗೆ ತಮ್ಮತಂಗಿಯರಂತೂ ಇದ್ದೆ ಇರುತಿದ್ದರು. ಆಗಿನ್ನೂ ಹೊಟ್ಟೆಯಲ್ಲೊಂದು, ಕೈನಲ್ಲೊಂದು ಮತ್ತು ಕೊಂಕುಳಲ್ಲಿ ಒಂದು ಮಗುವಿರುವ  ಕಾಲ. ಸರ್ಕಾರದ ಕುಟುಂಬ ಯೋಜನೆಯ ಘೋಷಣೆಯೆ ಎರಡು ಬೇಕು ಮೂರು ಸಾಕು ಎಂದಿತ್ತು. ಆದರೆ ಅದು ಗೋಡೆಗಳ ಮೇಲೆ ಬರಹದಲ್ಲಿ ಮಾತ್ರ.
ಹಿರಿಯ ತಲೆಗಳಂತೂ `ಯಾರಾದರೂ ನಿನ್ನ ಆಸ್ತಿ ಎಷ್ಟು? ಬಂಗಾರ ಎಷ್ಟಿದೆ?’ ಎಂದು ಕೇಳುತ್ತಾರೆಯೆ, ಅವರು ಕಂಡ ಕೂಡಲೆ ಕೇಳುವುದು ಮಕ್ಕಳೆಷ್ಟು? ಎಂದು. ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ. ಎಂದು ಬಲವಾಗಿ ನಂಬಿದ್ದರು. ಅಷ್ಟೆ ಅಲ್ಲ ದಂಪತಿಗಳು ನಮಸ್ಕರಿಸಿದರೆ `ಅಷ್ಟ ಪುತ್ರ ಪ್ರಾಪ್ತಿ ರಸ್ತುಎಂದು ಹರಸುತಿದ್ದರು. ಧನಲಕ್ಷ್ಮಿ, ಧಾನ್ಯಲಕ್ಷ್ಮಿ ಇಲ್ಲದಿದ್ದರೂ ಸಂತಾನಲಕ್ಷ್ಮಿಯ ಕೃಪಾಕಟಾಕ್ಷ ಯಥೇಚ್ಛವಾಗಿರುತಿತ್ತು. ಆದರೆ ಶಿಶು ಮರಣದ ಪ್ರಮಾಣವೂ ಅಧಿಕವಾದ್ದರಿಂದ ಅರ್ಧಕರ್ಧ ಬದುಕುಳಿದರೆ ಅದೆ ದೊಡ್ಡದು. ತಾಯಿಯ ಹೊಟ್ಟೆ ತಣ್ಣಗಿದೆ ಎನ್ನುತಿದ್ದರು. ಹಾಗಾಗಿ ಮನೆಯಲ್ಲಿ ಹಿರಿಯ ಮಗಳಾಗಿದ್ದರೆ ಕೆಲಸದ ಹೊರೆ ಬಹಳ. ಕೊನೆಗೆ ಏನಿಲ್ಲವೆಂದರೂ ಚಿಕ್ಕ ಮಗುವಿನ ತೊಟ್ಟಿಲು ತೂಗುವ ಕೆಲಸವಾದರೂ ಇದ್ದೆ ಇರುತಿತ್ತು. ಅದಕ್ಕೆಂದೆ ಹುಡುಗಿಯರು ಶಾಲೆಗೆ ಮುಂಚಿತವಾಗಿಯೆ ಬರುತಿದ್ದರು. ತರಗತಿಯಲ್ಲಿ ಅವರ ಸಂಖ್ಯೆ ಮೂವತ್ತಕ್ಕೂ ಮಿಕ್ಕಿರುತಿತ್ತು. ಹುಡುಗಿಯರನ್ನು ಪ್ರತ್ಯೇಕವಾಗಿ ಕೂಡಿಸಲಾಗುತ್ತಿತ್ತು. ಮಾತನ್ನೂ ಆಡುವಂತಿರಲಿಲ್ಲ. ಯಾರಾದರೂ ಹುಡುಗ ಹುಡುಗಿಯ ಜತೆ ಮಾತನಾಡಿದರೆ ಅದು ದೊಡ್ಡ ಸುದ್ದಿ. ಅದು ಏಕೋ ಏನೋ, ಹುಡುಗಿಯರಿಗಿಂತ ಹುಡುಗರೆ ಮಾತನಾಡಿಸಲು ನಾಚಿಕೆ ಪಡುತಿದ್ದರು. ಆದರೂ ಗಂಡು ಹುಡುಗರು ನೇತ್ರಾನಂದ ಮಾತ್ರ ಕಳೆದುಕೊಳ್ಳುತ್ತಿರಲಿಲ್ಲ.
ಗಣಿತ ತರಗತಿ ನಡೆಯುತಿತ್ತು. ಅದೂ ಭೂಮಿತಿ ಪಾಠ. ಬೋರ್ಡಿನ ಮೇಲೆ ಚಿತ್ರ ಹಾಕಲು ಅತ್ತ ತಿರುಗಿದೆ. ಹುಡುಗಿಯರ ಗುಂಪಿನಿಂದ ಕಿಲಕಿಲ ನಗುವಿನ ಸದ್ದು ಕೇಳಿಸಿತು. ನಾನು ಅವರತ್ತ ತಿರುಗಿ ದುರುಗುಟ್ಟಿ ನೋಡಿದೆ. ಅವರ ಮುಸು ಮುಸಿ  ನಗು ನಿಲ್ಲಲಿಲ್ಲ. ಪಾಠದ ಕಡೆ ಗಮನ ಕೊಡದೆ ಏಕೆ ನಗುತ್ತಿದ್ದೀರಿ, ಇಲ್ಲೇನು ಕೋತಿ ಕುಣಿಯುತ್ತಿದೆಯೇ? ಎಂದು ಗದರಿದೆ. ಎಲ್ಲರೂ ಗಪ್ಪಾದರೂ ಮಧ್ಯದ ಬೆಂಚಿನವವರ ಕಿಸಿ ಕಿಸಿ ನಗು ಕಡಿಮೆಯಾಗಲಿಲ್ಲ. ನೀವೆಲ್ಲ ಎದ್ದು ನಿಂತುಕೊಳ್ಳಿ, ಎಂದು ಗದರಿದೆ. ಎಲ್ಲರೂ ಎದ್ದು ನಿಂತರು. ತಲೆ ತಗ್ಗಿಸಿದ್ದರೂ ಮುಖದಲ್ಲಿನ ಮುಗುಳನಗೆ ಎದ್ದು ಕಾಣುತಿತ್ತು. ಏನಾಗಿದೆ ನಿಮಗೆ? ಯಾಕೆ ನಗುತ್ತಿದ್ದೀರಿ? ಎಂದೆ. ಅವರೆಲ್ಲ ಶಾಂತಳ ಕಡೆಗೆ ನೋಡಿದರು. ಶಾಂತ ತರಗತಿಯಲ್ಲಿ ಅಂತಹ ಜಾಣೆ ಅಲ್ಲ. ಅವಳ ತಂದೆ ಸ್ಥಿತಿವಂತರು. ಅವಳು ನೀಟಾಗಿ ಉಡುಪು ಧರಿಸಿ ಶಾಲೆಗೆ ಬರುತ್ತಿದ್ದಳು. ಅಂತಹ ಗಲಾಟೆಯ ಹುಡುಗಿಯಲ್ಲ. ಕಷ್ಟಪಟ್ಟು ಓದುತಿದ್ದಳು.
ಏನು ಶಾಂತ ಏನದು ಯಾಕೆ ಎಲ್ಲರೂ ನಿನ್ನ ಕಡೆ ನೋಡಿ ನಗುತ್ತಿದ್ದಾರೆ? ಪಾಠ ಮಾಡುವಾಗ ನಿನ್ನದು ಏನಿದು? ಗದರಿದೆ. ಅವಳು ತಗ್ಗಿಸಿದ ತಲೆ ಎತ್ತಲಿಲ್ಲ. ಉತ್ತರ ಕೊಡಲಿಲ್ಲ. ಆದರೆ ಅವಳು ನಗುತ್ತಿರಲಿಲ್ಲ.
ಪಕ್ಕದ ಹುಡುಗಿಯನ್ನು ಕೇಳಿದೆ. ಏನು, ಏಕೆ ನಗುತ್ತಿರುವಿರಿ. ಅವಳು ಮುಸಿ ಮುಸಿ ನಗುತ್ತಾ ಸಾರ್‌, ನಿನ್ನೆ ರಾತ್ರಿ ಬಿದ್ದ ಕನಸನ್ನು ಶಾಂತ ಹೇಳುತಿದ್ದಳು. ಅವಳ  ಕನಸಿನಲ್ಲಿ ನೀವು ಬಂದಿದ್ದಿರಂತೆ. ಅವಳ ಮಾತು ಕೇಳಿ ತರಗತಿಯಲ್ಲಿ ಎಲ್ಲರೂ ಗೊಳ್ಳನೆ ನಕ್ಕರು. ನಾನು ಒಂದು ಕ್ಷಣ ದಿಗ್ಮೂಢನಾದೆ. ನನಗಿನ್ನೂ ಇಪ್ಪತೆರಡರ ಹರೆಯ. ಮದುವೆಯಾಗಿರಲಿಲ್ಲ. ನನ್ನ ಕನಸಲ್ಲಿ ಬರುವವರ ಸಂಖ್ಯೆಯೂ ಕಡಿಮೆ ಇರಲಿಲ್ಲ. ಕನಸು ಕಾಣಲು ಕಾಸು ಕೊಡಬೇಕಿಲ್ಲವಲ್ಲ. ಸುಪ್ತ ಮನಸ್ಸಿನ ಆಶೆಗಳು ಸ್ವಪ್ನರೂಪದಲ್ಲಿ ಕಾಣಿಸಿಕೊಳ್ಳುವುದು ವಯೋ ಸಹಜಕ್ರಿಯೆ. ಆದರೆ ಆ ಭಾವನೆ ನಡೆಯಲ್ಲಿ, ನುಡಿಯಲ್ಲಿ ನುಸಳಬಾರದೆಂಬ ವಿವೇಚನೆ ರಕ್ತಗತವಾಗಿತ್ತು. ಅದಕ್ಕೆಂದೆ ವಿದ್ಯಾರ್ಥಿಗಳ ಜತೆ ಸೂಕ್ತ ಅಂತರ ಕಾದುಕೊಂಡಿದ್ದೆ. ಅದರಲ್ಲೂ ವಿದ್ಯಾರ್ಥಿನಿಯರ ಜತೆ ಸಲಿಗೆಯಂತೂ ಇರಲೇ ಇಲ್ಲ. ಪಾಠದ ವಿಷಯ ಬಿಟ್ಟು ಬೇರೆ ಮಾತನ್ನೂ ಆಡುತ್ತಿರಲಿಲ್ಲ.
ಅವರ ಮಾತು ಕೇಳಿ ನನಗೆ ಗಾಬರಿಯಾಯಿತು. ಇದೇನಪ್ಪಾ ಫಜೀತಿ ಎನಿಸಿತು. ಕನಸಲ್ಲಿ ಏನಾಯಿತು ಎಂದು ಕೇಳಿದರೆ ಒಂದು ಸಮಸ್ಯೆ, ಕೇಳದೆ ಇದ್ದರೆ ಕೆಟ್ಟ ಕುತೂಹಲ ತಣಿಯುವ ಬಗೆ ಹೇಗೆ? ಹುಡುಗಿಯ ಕನಸಿನಲ್ಲಿ ಏನು ನಡೆಯಿತು ಎಂದು ನನಗೆ ಗೊತ್ತಾಗದಿದ್ದರೂ ಎಲ್ಲರಿಗೂ ಹೇಳಿಯೆ ಹೇಳಿರುತಿದ್ದಳು. ಸುದ್ದಿ ಊರೆಲ್ಲ ಹರಡುತಿತ್ತು. ಜತೆಗೆ ಒಂದಕ್ಕೆ ಹತ್ತು ಊಹಾಪೋಹಗಳು. ನಾನೇನೂ ಸುರ ಸುಂದರಾಂಗನೆಂಬ ಭ್ರಮೆ ಇರಲಿಲ್ಲ. ಆದರೂ ನನ್ನ ಬಗ್ಗೆ ಹುಡುಗಿಯರೂ ಕನಸು ಕಾಣುವರೆಂದರೆ ಸಾಮಾನ್ಯ ಮಾತೆ? ಅದೂ ಚಂದದ ಹುಡುಗಿಯರ ಕನಸಲ್ಲೂ ನಾನು ಹೋಗುವೆನೆಂದರೆ ಹೆಮ್ಮೆಯ ಸಂಗತಿ ಎನಿಸಿತು. ಒಂದು ಕ್ಷಣ ಎದೆಯುಬ್ಬಿತು. ಆದರೆ ಮರುಗಳಿಗೆಯಲ್ಲೆ ವೃತ್ತಿ ಸಂಹಿತೆ ನೆನಪಾಯಿತು. ಇಂತಹ ಯೋಚನೆಗಳಿಗೆ ಎಡೆಕೊಡಬಾರದು. ಕುಡಿಯಲ್ಲೆ ಚಿವುಟಿ ಹಾಕಲು ನಿರ್ಧರಿಸಿದೆ. ಬಂದದ್ದನ್ನು ಎದುರಿಸಲೆಬೇಕಿತ್ತು. ಅದಕ್ಕೊಂದು ಕೊನೆ ಮುಟ್ಟಿಸಬೇಕಿತ್ತು. ಆದದ್ದಾಗಲಿ ಎಂದು ನೇರವಾಗಿ ಅವಳನ್ನೆ ನೊಡುತ್ತಾ ಕೇಳಿದೆ.
ಹೌದೇನಮ್ಮಾ ನಾನು ನಿನ್ನ ಕನಸಿನಲ್ಲಿ ಬಂದಿದ್ದೆ, ಎಂದು ಇವರಿಗೆಲ್ಲ ಹೇಳಿದೆಯಾ? ಹೌದು ಎಂದು ತಲೆಯಾಡಿಸಿದಳು. ಇನ್ನು ಹಿಂಜರಿಕೆಯ ಮಾತೆ ಇಲ್ಲ. ಅನಿವಾರ್ಯವಾಗಿ ಕೇಳಲೇಬೇಕಾಯಿತು. ಎದೆ ಗಟ್ಟಿ ಮಾಡಿಕೊಂಡು ಕೇಳಿದೆ. ಕನಸಿನಲ್ಲಿ ಏನು ನಡೆಯಿತಮ್ಮಾ? `ಸಾರ್, ನೀವು ಹೋಮ್‌ವರ್ಕ್ ಕೊಟ್ಟಿದ್ದಿರಿ. ನಾನು ಲೆಕ್ಕ ಮಾಡಿರಲಿಲ್ಲ ಅಂತ ಜೋರಾಗಿ ಹೊಡೆದಿರಿ. ನಾನು ಬೆಚ್ಚಿಬಿದ್ದು ಎಚ್ಚತ್ತೆ...ನಾಚುತ್ತಾ ಹೇಳಿದಳು. ಆದರೆ ನೀನು ಹೋಮ್‌ ವರ್ಕ್ ತೋರಿಸಿದೆಯಲ್ಲಾ, ಕೇಳಿದೆ. ಕನಸು ಬಿದ್ದ ಮೇಲೆ ಎದ್ದು ಮಾಡಿದೆ. ಎಂದಳು.
ತರಗತಿಯಲ್ಲಿ ಗೊಳ್ಳೆಂದು ನಗೆ ಬುಗ್ಗೆ ಉಕ್ಕಿತು. ಅವಳ ಉತ್ತರದಿಂದ ನನ್ನ ಆವೇಗ, ಆತಂಕ ದೂರವಾಯಿತು. ನನ್ನ ಭ್ರಮಾಲೋಕದ ಬಲೂನು ಠುಸ್‌ ಎಂದಿತು. ಮನಸ್ಸು ನಿರಾಳವಾಯಿತು. ನಿನಗೆ ಕನಸಿನಲ್ಲಿ ಹೊಡೆದನೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ತರಗತಿಯಲ್ಲಿ ಪಾಠಕ್ಕೆ ತೊಂದರೆ ಮಾಡಿದರೆ ಖಂಡಿತವಾಗಿಯೂ ಈಗ ಏಟು ಬೀಳುತ್ತವೆ, ಎಂದು ಬೋರ್ಡಿನ ಕಡೆ ಚಿತ್ರ ಬರೆಯಲು ತಿರುಗಿದೆ.

ಹೊಡೀರಿ ಸಾರ್ ತಿರುಗಿ ತಿರುಗಿ

ನಾನು ಸಿನೆಮಾದ ಹಾಡಿನ ಕುರಿತು ಹೇಳ ಹೊರಟಿಲ್ಲ. ವೃತ್ತಿಜೀವನದ ಮೊದಲಲ್ಲಿ ಆಚರಿಸಿದ ಶಿಕ್ಷಕರ ದಿನಾಚರಣೆಯೊಂದರ ನೆನಪು ದಾಖಲಿಸಿರುವೆ. ಡಾ. ಸರ್ವಪಲ್ಲಿ ರಾಧಾಕೃಷ್ಣ ನಮ್ಮ ದೇಶದ ಹೆಮ್ಮೆಯ ವ್ಯಕ್ತಿಗಳಲ್ಲಿ ಒಬ್ಬರು. ಶಿಕ್ಷಕರಾಗಿ ವೃತ್ತಿಜೀವನ ಪ್ರಾರಂಭಿಸಿ ತಮ್ಮ ಅಧ್ಯಯನ, ಅಧ್ಯಾಪನಗಳಿಂದ ಹಂತ ಹಂತವಾಗಿ ಮೇಲೇರಿ ರಾಷ್ಟ್ರದ ಪ್ರಥಮಪ್ರಜೆಯಾದವರು. ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸುತ್ತಿರುವುದು `ಆಚಾರ್ಯ ದೇವೋಭವಎಂಬ ಭಾರತೀಯರ ನಂಬುಗೆಗೆ ಇಂಬುಕೊಡುವ ನಡೆ. ನಾನು ಕೆಲಸಕ್ಕೆ ಸೇರಿದ ಹೊಸತರಲ್ಲಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸುವ ಯೋಜನೆ ಹಾಕಿದರು. ಕಾರ್ಯಕ್ರಮದ ಅಂಗವಾಗಿ ಕ್ರೀಡಾಸ್ಪರ್ಧೆ ಏರ್ಪಡಿಸಲಾಗಿತ್ತು.
ನಮ್ಮ ಭಾಗದಲ್ಲಿ ಶಿಕ್ಷಕರಾದ ಕೂಡಲೆ ಹೊರಾಂಗಣದ ಆಟಗಳಿಗೆ ತಿಲಾಂಜಲಿ. ಬೆರಳೆಣಿಕೆಯಷ್ಟು ಜನ ಬ್ಯಾಟಮಿಂಟನ್‌ ಆಡುತ್ತಿದ್ದೆವು. ಆದರೆ ಬಹುಪಾಲು ಜನರು ಒಳಾಂಗಣ ಆಟಕ್ಕೆ ಹೆಸರುವಾಸಿ. ಶಿಕ್ಷಕರಾಗಿ ಕೆಲಸಕ್ಕೆ ಸೇರಿದಾಗಲೆ ಆಟದ ದೀಕ್ಷೆಯಾಗುತ್ತಿತ್ತು. ಮೊದಲ ತಿಂಗಳ ಸಂಬಳ ಬಂದ ನಂತರ ಸಂತೋಷ ಕೂಟ ನೀಡಲು ಒತ್ತಾಯ ಬರುತ್ತಿತ್ತು. ಮನೆಯ ಔತಣ ಬಯಸುತ್ತಿರಲಿಲ್ಲ. ಹೋಟೆಲಿನ ತಿಂಡಿ ಬೇಡವೆನಿಸುತಿತ್ತು. ರುಚಿಯ ಮಾತಲ್ಲ. ಮುಖ್ಯವಾದ ಕಾರಣ ಔತಣದ ಹೆಸರಲ್ಲಿ ದಿನಪೂರ್ತಿ ಹೊರಗೆ ಖುಷಿಯಾಗಿ ಕಾಲ ಕಳೆಯುವ ಹಂಬಲ. ಅದಕ್ಕೆಂದೆ ಶಾಲೆಯ ಎಲ್ಲರೂ ರಜೆಯ ದಿನ ಹತ್ತಿರದ ಯಾವುದಾದರೂ ಜಾಗಕ್ಕೆ ಬೆಳಗ್ಗೆಯೇ ಹೋಗಿ ಸಂಜೆಗೆ ಹಿಂತಿರುಗುತ್ತಿದ್ದೆವು. ಜತೆಯಲ್ಲಿ ಅಡುಗೆ ಪಾತ್ರೆಗಳು ಒಂದು ತಿಂಡಿ ಮತ್ತು ಊಟಕ್ಕೆ ಬೇಕಾದ ಸಕಲ ಸಾಮಗ್ರಿಗಳನ್ನು ಒಯ್ಯುತ್ತಿದ್ದರು. ಹೇಳಿ ಕೇಳಿ ನಾವಿದ್ದ ಊರು ಮಹಾನ್‌ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಸ್ಥಳದ ಒಂದು ಭಾಗ. ಹತ್ತಿರದಲ್ಲೆ ಹರಿಯುತ್ತಿದ್ದ ನದಿ. ಪುರಂದರ ಮಂಟಪ, ಮಾಲ್ಯವಂತ, ಶಂಭುನಾಥ, ನರಹರಿ ತೀರ್ಥ, ರಘುನಂದನ ತೀರ್ಥ ಬುಕ್ಕಸಾಗರದ ನಾಗಪ್ಪ, ಹೇಮಗಿರಿ ಹನುಮಪ್ಪ ಒಂದೆ ಎರಡೆ. ಹೋದ ತಕ್ಷಣ  ಮಂಡಾಳು ಡಾಣಿ ಮತ್ತು ಹಿಟ್ಟು ಹಚ್ಚಿದ ಮೆಣಸಿನಕಾಯಿ ಉಪಾಹಾರ. ನಂತರ ಕನಾತ ಹಾಸಿದರೆ ಮುಗಿಯಿತು ಅಡುಗೆ ಮುಗಿಯುವವರೆಗೆ ಆಟ. ಅಡುಗೆಗೆ ಭಟ್ಟರ ಜತೆ. ಜವಾನರು ಸಹಾಯ ಮಾಡುತ್ತಿದ್ದರು.
ಆಟದಲ್ಲಿ ಹಿರಿಯ ಕಿರಿಯ ಎಂಬ ಭೇದಭಾವ ಇರುತ್ತಿರಲಿಲ್ಲ. ನಿವೃತ್ತಿ ಅಂಚನ್ನು ತಲುಪಿದ ಮುಖ್ಯೋಪಾಧ್ಯಾಯರಿಂದ ಹಿಡಿದು ಕಳೆದ ತಿಂಗಳು ಕೆಲಸಕ್ಕೆ ವರದಿ ಮಾಡಿಕೊಂಡ ಹೊಸ ಹುಡುಗನ ತನಕ ಎಲ್ಲರದು ಒಂದು ಕೈ ಇರುತಿತ್ತು ಆಟದಲ್ಲಿ. ಮಾಸ್ತರು, ಗುಮಾಸ್ತ ಎಂಬ ವ್ಯತ್ಯಾಸವೆ ಇಲ್ಲ. ಆಟ ಬರದಿದ್ದವರು ಮಾತ್ರ ಆಟಗಾರರ ಹಿಂದೆ ಕುಳಿತು ಕಲಿಕೆಯ ಪ್ರಕ್ರಿಯೆಯಲ್ಲಿ ಮಗ್ನರಾಗಿರುವರು. ೨೮, ಅಂದರ್‌ ಬಾಹರ್‌, ಕತ್ತೆ ಆಟ ಹೀಗೆ ಹಲವು ವಿಧ ಇದ್ದರೂ ಸಾಮಾನ್ಯವಾಗಿ ಎಲ್ಲರೂ ರಮ್ಮಿ ಆಡುವವರೆ.
ಆದರೆ ಬಾಜಿ ಹಣ ಮಾತ್ರ ವಿಭಿನ್ನ. ಡ್ರಾಪಿಗೆ ಒಂದು, ಐದು, ಹತ್ತು ರೂಪಾಯಿ ಇತ್ಯಾದಿ. ದಿನವೆಲ್ಲ ಆಡಿದರೂ ಬಂದರೆ ಹತ್ತು ಹೋದರೆ ಇಪ್ಪತ್ತು ಎಂದು ಮಿತಿ ಹಾಕಿಕೊಂಡವರು ಅನೇಕ.  ಅದು ತಲುಪಿದ ತಕ್ಷಣ ಆಟ ಬಿಟ್ಟು ಏಳುತ್ತಿದ್ದರು. ಗೆದ್ದವರು ಎದ್ದರೆ ಆಟ ಮುಂದುವರಿಸಲು ಒತ್ತಾಯ ಇರುತಿತ್ತು. ಹಣ ಖಾಲಿಯಾದರೆ ಕೈಸಾಲ ಕೊಡುವವರೂ ಇದ್ದರು. ಅಲ್ಲಿ ಬಹಳ ನಿಯತ್ತು. ಇಸ್ಪೇಟ್‌ ಸಾಲ ಮಾತ್ರ ತಪ್ಪದೆ ತೀರಿಸುತ್ತಿದ್ದರು. ಅಡುಗೆ ಮುಗಿದು ಅದರ  ಘಮ ಘಮ ವಾಸನೆ ಮೂಗಿಗೆ ಬಡಿಯುತ್ತಿದ್ದಂತೆ ಇಸ್ಪೀಟು ಎಲೆ ಬಿಟ್ಟು ಊಟದ ಎಲೆ ಮುಂದೆ ಬರುತ್ತಿದರು. ಸಾವಧಾನವಾಗಿ ಊಟ ಮಾಡಿ ಮತ್ತೆ ಸಂಜೆ ತನಕ ಆಟವಾಡಿ ಮನೆಯ ಕಡೆ ಮುಖ ಮಾಡುತ್ತಿದ್ದರು. ಮೊದಲಲ್ಲಿ ನನಗೆ ಇಸ್ಪೇಟಿನ ೧ ರಿಂದ ೧೦ ಸಂಖ್ಯೆ ಬಿಟ್ಟು ಬೇರೇನೂ ತಿಳಿಯುತ್ತಿರಲಿಲ್ಲ. ಎಕ್ಕಾ, ನೈಲಾ ಎಂದಾಗ ಕಣ್ಣು ಕಣ್ಣು ಬಿಡುತ್ತಿದ್ದೆ. ನನ್ನನ್ನು ಎಳಸು ಎಂದು ಎಲ್ಲರೂ ಹಾಸ್ಯ ಮಾಡುತಿದ್ದರು. ಹತ್ತು ರೂಪಾಯಿ ಹೋಯಿತು, ಇಪ್ಪತ್ತು ರೂಪಾಯಿ ಸೋತೆ ಎಂದು ಹಲುಬಿದಾಗ ಹಾಗೆಲ್ಲ ಹೇಳಬಾರದು. ಅದು ನಷ್ಟವಲ್ಲ. ಹತ್ತು ರೂಪಾಯಿ ಅನುಭವ, ಇಪ್ಪತ್ತು ರೂಪಾಯಿ ಅನುಭವ ಬಂದಿದೆ ಎಂದು ತಿಳಿ ಹೇಳುತ್ತಿದ್ದರು. ಅದು ಏಕೋ ಆ ಕಾಲದಲ್ಲಿ ಕಾರ್ಡ್ಸ ಕಲ್ಚರ್ ಸಮಾಜದಲ್ಲಿ ಸರ್ವವ್ಯಾಪಿಯಾಗಿತ್ತು. ಬಹುಶಃ ಸಾಕಷ್ಟು ಸವಡು ಮತ್ತು ಬೇರೆ ಹವ್ಯಾಸ ಇಲ್ಲದೆ ಇರುವುದೆ ಕಾರಣವಿರಬಹುದು. ಊರ ಹಿರಿಯರೆ ಅದರಲ್ಲಿ ಸಕ್ರಿಯವಾಗಿ ಭಾಗಿಗಳಾಗಿದ್ದೂ ಉಂಟು. ಮದುವೆ ಮುಂಜಿ ಮೊದಲಾದ ಮಾರಂಭಗಳಲ್ಲಿ ಒಂದು ಪ್ರತ್ಯೇಕ ಕೋಣೆಯಲ್ಲಿ ಕುಳಿತು ಆಡುವವರು. ಮದುಮಕ್ಕಳಿಗೆ ಅಕ್ಷತೆ ಹಾಕಲೂ ಮಿಜಿ ಮಿಜಿ ಮಾಡುತ್ತಿದ್ದರು. ಇನ್ನು ದೀಪಾವಳಿ ಬಂದರಂತೂ ಮುಗಿಯಿತು. ಲಕ್ಷ್ಮಿ ಪೂಜೆಯ ರಾತ್ರಿ ಪ್ರಾರಂಭವಾದ ಆಟ ಬೆಳಗಾಗುವವರೆಗೂ ಎಡೆ ಬಿಡದೆ ಸಾಗುತಿತ್ತು. ಅದೂ ಅಂಗಡಿಯಲ್ಲಿ ಕೂಡಿಸಿ ಪೂಜೆ ಸಲ್ಲಿಸಿದ ಲಕ್ಷ್ಮಿಯ ಎದುರು. ಆ ದಿನ ಜಾಗರಣೆ ಮಾಡಬೇಕು. ಅಂದು ಗೆದ್ದರೆ ವರ್ಷ ಪೂರ್ತಿ ಲಾಭ ಎನ್ನುವ ನಂಬಿಕೆ ಬೇರೆ. ಹಿರಿಯರ ಹೆದರಿಕೆ ಇಲ್ಲದೆ ಕಾನೂನಿನ ಕಾಟವಿಲ್ಲದೆ ಡಾಣಾ ಡಂಗುರವಾಗಿ ಜೂಜಾಟ ಸಾಗುತಿತ್ತು. ಅಂಗಡಿ ಹಜಾರದಲ್ಲಿ ಮಾತ್ರವಲ್ಲ ಬೀದಿ ದೀಪದ ಕೆಳಗೂ ಆಡುವವರಿಗೆ ಕಡಿಮೆ ಇರಲಿಲ್ಲ.
ನನಗೆ ಆ ವಿದ್ಯೆ ಯಾಕೋ ಕರಗತವಾಗಲಿಲ್ಲ. ನೂರಾರು ಪುಟದ ಪುಸ್ತಕವನ್ನು ಒಂದೆ ಸಲ ಓದಿ ಮುಗಿಸುವ ನನಗೆ ಆ ೧೩ ಪುಟಗಳನ್ನು ಪೂರ್ಣ ಅರಿಯುವುದು ಹತ್ತು ವರ್ಷ ಶ್ರಮಿಸಿದರೂ ಸಾಧ್ಯವಾಗಲಿಲ್ಲ. ಪ್ರಾಂಶುಪಾಲನಾದ ಮೇಲೆ ಸೈದ್ಧಾಂತಿಕ ಕಾರಣ ನೀಡಿ  ಸಮಯ ಮತ್ತು ಹಣದ ಅಪವ್ಯಯ ತಪ್ಪಿಸಿಕೊಂಡೆ.
ಜೂಜಾಡುವುದ ಮನುಷ್ಯನ ಮೂಲಪ್ರವೃತ್ತಿಯಲ್ಲಿ ಒಂದು ಎನ್ನಬಹುದು. ಇದರಿಂದ ಕಷ್ಟ ನಷ್ಟ ಅನುಭವಿಸಿದವರು ಕಣ್ಣೆದುರೆ ಇದ್ದರೂ ಸಾಲ ಮಾಡಿ ಆಟವಾಡುವರು. ಗೆದ್ದರೆ ಅದೃಷ್ಟವಿದೆ ಎಂದು, ಸೋತವರು ಕಳೆದುಕೊಂಡಲ್ಲಿ ಹುಡುಕಬೇಕು ಎಂದೂ ಆಟ ಮುಂದುವರಿಸುವರು. ಒಂದೆ ಆಟ ಎಂದು ಕುಳಿತವರು ಗಂಟೆಗಟ್ಟಲೆ ಆಡುವರು. ಕೊನೆ ಆಟ ಎಂಬುದೆ ಇರದು. ತಿಂಗಳ ವೇತನದ ಪಾಸ್‌ ಪುಸ್ತಕ ಅಡ ಇಟ್ಟು ಸಾಲ ಪಡೆವವರೂ ಇದ್ದರು. ಸಾಧುಪ್ರಾಣಿ ಎನಿಸಿದ್ದ ಗೆಳೆಯನೊಬ್ಬ ಇದರಿಂದಲೆ ಮನೆ ಮಾರಿಕೊಂಡ. ಆದರೆ ಅದು ಏಕೋ ಈ ಆಟಕ್ಕೆ ಸಾಮಾಜಿಕ ಕಳಂಕ ಅಷ್ಟಾಗಿ ಅಂಟಿರಲಿಲ್ಲ. ಹೆಚ್ಚಿನ ಮೊತ್ತದ ಪಣ ಇಟ್ಟು ಆಡುವವನನ್ನು ಬಹಳ ಧೈರ್ಯವಂತ ಎಂದು ಮೆಚ್ಚುವವರೂ ಇದ್ದರು. ಅವರಿಗೆಲ್ಲ ಧರ್ಮರಾಯ, ನಳ ಮಹರಾಜರೆ ಆದರ್ಶ.
ಈಗ ನೆನಸಿಕೊಂಡರೆ ನಾಚಿಕೆ ಎನಿಸುವುದು. ಅಪ್ಪ ಅಮ್ಮಂದಿರ ಎದುರೆ, ಅತ್ತೆ ಮಾವನ ಮನೆಯಲ್ಲಿಯೇ ಎಗ್ಗಿಲ್ಲದೆ ಇಸ್ಪೀಟು ಅಡುತ್ತಿದ್ದೆವಲ್ಲ, ಎಂದು.
ಈ ಆಟ ವಿಶ್ವವ್ಯಾಪಿ. ಅಮೇರಿಕಾದಲ್ಲಿ ಲಾಸ್‌ವೆಗಾಸ್‌ನಲ್ಲಿನ ಕೆಜಿನೋಗಳು ಬಹು ಪ್ರಸಿದ್ದಿ. ಅದರ ಮಿನಿರೂಪವಾದ ಅಟ್ಲಾಂಟಿಕ್‌ ಸಿಟಿಗೆ ಹೋಗಿದ್ದೆವು. ಅದೂ ಕ್ಯಾಜಿನೋಗಳಿಗೆ ಪ್ರಖ್ಯಾತ. ಕಳೆದ ಸಲ ಚಂಡಮಾರುತ ಅಪ್ಪಳಿಸಿದಾಗ ಸಾಗರದ ಅಲೆಯ ಹೊಡೆತಕ್ಕೆ ನಲುಗಿದ ನಗರದಲ್ಲಿ ಮೂರು ದಿನ ಎಲ್ಲ ಬಂದ್‌. ದಿನ ಒಂದಕ್ಕೆ  ಬಿಲಿಯನ್‌ಗೂ ಹೆಚ್ಚು ನಷ್ಟ ಎಂದರೆ ಜೂಜಿನ ಮೋಜಿನ ಜನಪ್ರಿಯತೆ ತಿಳಿಯುವುದು. ಅಲ್ಲಿ ಹೋದಾಗ ಅಲ್ಲಿ ಕಾರ್ಡ ಗೇಮ್ಸನ ವಿಶ್ವರೂಪ ಕಂಡೆ. ಗಂಡು ಹೆಣ್ಣು ಭೇದವಿಲ್ಲದೆ ಆಡುವರು. ನನಗೂ ಅದೃಷ್ಟ ಪರೀಕ್ಷೆ ಮಾಡಿ ಎಂದು ಒತ್ತಾಯ ಮಾಡಿದರು. ಏಕೋ ಮನಸ್ಸುಬರಲಿಲ್ಲ.
ಈಗ ಅದೇಕೋ ಶಿಕ್ಷಕರಲ್ಲಿ ಅದರ ಹಾವಳಿ ಕಡಿಮೆಯಾಗಿದೆ. ನಗರಗಳಲ್ಲಿ ಪ್ರತಿಷ್ಠಿತ ಕ್ಲಬ್‌ಗಳಲ್ಲಿ ಬ್ರೀಫ್‌ ಕೇಸ್‌ ತುಂಬ ಹಣ ತಂದು ಆಡುವರಂತೆ. ಆದರೆ ಇದು ವಿರಳ. ಕಾರಣ ಸಮಯದ ಅಭಾವ ಮತ್ತು ಮನರಂಜನೆ ಮಾಧ್ಯಮಗಳ ಬಾಹುಳ್ಯ. ಎಲ್ಲಕ್ಕೂ ಮಿಗಿಲಾಗಿ ಈಗ ಸಾಮಾಜಿಕ ಸಭ್ಯತೆಯಾಗಿ ಗಂಡು ಹೆಣ್ಣು ಎನ್ನದೆ ಕುಡಿತವು ಒಪ್ಪಿತವಾಗಿರುವುದು ನೋಡಿದರೆ ಕಾಲದಿಂದ ಕಾಲಕ್ಕೆ ಬದಲಾಗುವ ಮೌಲ್ಯಗಳ ಬಗ್ಗೆ  ಬೆರಗು ಮೂಡುತ್ತದೆ. 
ಶಿಕ್ಷಕರ ದಿನಾಚರಣೆಯನ್ನು ತುಸು ಹೊಸ ಬಗೆಯಲ್ಲಿ ಮಾಡಬೇಕೆಂದು ಯೋಜಿಸಲಾಯಿತು. ಆ ದಿನ ಎಲ್ಲ ಶಿಕ್ಷಕರಿಗೆ ಆಟೋಟಗಳ ಸ್ಪರ್ಧೆಯ ಮಾತು ಬಂತು. ಆಟೋಟಗಳ ವಿಭಾಗಕ್ಕೆ ಬಂದರೆ, ನಮ್ಮ ದೈಹಿಕ ಶಿಕ್ಷಣ ಶಿಕ್ಷಕರು ಎಲ್ಲ ಬಹುಮಾನ ಬಾಚಿ ಬಿಡುವರು. ಅಲ್ಲದೆ ಐವತ್ತು ವರ್ಷದವರು ಇಪ್ಪತ್ತೈದರ ಯುವಕನ ಜತೆ ಆಡಲು ಸಾಧ್ಯವೇ ಎಂಬ ಪ್ರಶ್ನೆ ಬಂದಿತು. ಇನ್ನು ನಮ್ಮಲ್ಲಿದ್ದ ಇಬ್ಬರು ಮಹಿಳೆಯರಿಗೂ ಸಮಾನ ಅವಕಾಶ ನೀಡಬೇಕು. ಇವೆಲ್ಲ ಷರತ್ತು ಪೂರೈಸುವ ಆಟ ಯಾವುದು ಎಂಬ ಚಿಂತನೆ ಮೊದಲಾಯಿತು. ಅಳೆದೂ, ಸುರಿದು ಕೊನೆಗೆ ವಯಸ್ಸು ಮತ್ತು ಲಿಂಗದ ಹಂಗಿಲ್ಲದ ಮೂರು ಆಟಗಳನ್ನು ನಿಗದಿಯಾದವು. ಸಂಗೀತ ಕುರ್ಚಿ, ಕತ್ತೆ ಬಾಲ ಗುರುತಿಸುವುದು ಮತ್ತು ಮಡಿಕೆ ಒಡೆಯುವ ಸ್ಪರ್ಧೆ.
ಸಂಗೀತ ಕುರ್ಚಿ ಸಾಂಗವಾಗಿ ಸಾಗಿತು. ಭಾಗವಹಿಸುವವರಿಗಿಂತ ಒಂದು ಕುರ್ಚಿ ಕಡಿಮೆ ಇರುವುದು, ಸಂಗೀತ ನಿಂತರೆ ಮುಂದಿರುವ ಕುರ್ಚಿಯಲ್ಲಿ ಕುಳಿತುಕೊಳ್ಳಬೇಕು. ಯಾವುದೆ ಕಾರಣಕ್ಕೂ ಹಿಂದೆ ಹೋಗುವ ಹಾಗಿಲ್ಲ. ಅಲ್ಲಿ ನಮ್ಮ ಕ್ರಾಫ್ಟ್ ಮೇಷ್ಟ್ರು ಹೆಡ್ ಮೇಷ್ಟ್ರನ್ನು ಸೋಲಿಸಿ ಕೊನೆಗೂ ಕುರ್ಚಿಯಲ್ಲಿ ಕುಳಿತು ಗೆದ್ದರು.  
ಕತ್ತೆಗೆ ಬಾಲ ಬರೆಯುವ ಸ್ಪರ್ಧೆ ಬಹಳ ನಗು ಹುಟ್ಟಿಸಿತು. ಕಣ್ಣಿಗೆ ಬಟ್ಟೆ ಕಟ್ಟಿ ಕೈನಲ್ಲಿ ಬಣ್ಣದ ಸೀಮೆಸುಣ್ಣ ಕೈಗೆ ಕೊಟ್ಟು ಕಳಿಸುವರು. ಅಲ್ಲಿ ನಿಲ್ಲಿಸಿರುವ ಕಪ್ಪುಹಲಗೆಯ ಮೇಲೆ ಕತ್ತೆಯ ಚಿತ್ರ ಬರೆದಿರುವರು. ಬಾಲ ಮಾತ್ರ ಇರುವುದಿಲ್ಲ. ಬಾಲವನ್ನು ಸರಿಯಾದ ಜಾಗದಲ್ಲಿ ಬರೆದವರೆ ಬಹುಮಾನಿತರಾಗುವರು.
ಮೊದಲ ಸರದಿ ನಮ್ಮ ಮುಖ್ಯೋಪಾಧ್ಯಾಯರದು ಅವರು ಬಹಳ ಲೆಕ್ಕಾಚಾರದವರು. ಸರಸರನೆ ನಡೆದು ಸರಿಯಾಗಿ ಬೋರ್ಡಿನ ಅಂಚಿನಲ್ಲಿರುವ ಮಧ್ಯ ಭಾಗದಲ್ಲಿ ಬಾಲ ಬಿಡಿಸಿದರು. ಎಲ್ಲರೂ ಘೊಳ್ಳನೆ ನಕ್ಕರು. ಅವರು ಕಣ್ಣಿಗೆ ಕಟ್ಟಿದ ಬಟ್ಟೆ ಬಿಚ್ಚಿ ನೋಡಿದಾಗ ಅವರಿಗೂ ನಗೆ ತಡೆಯಲಾಗಲಿಲ್ಲ. ಅವರ ಅಂದಾಜು ಸರಿಯಾಗೆ ಇತ್ತು. ಆದರೆ ಎಡಬಲ ವ್ಯತ್ಯಾಸವಾಗಿತ್ತು ಅಷ್ಟೆ. ಕತ್ತೆಯ ಬಾಲವನ್ನು ಅದರ ಬಾಯಿಗೆ ಜೋಡಿಸಿದ್ದರು. ಮುಂದಿನ ಸರದಿ ವಿಜ್ಞಾನದ ಶಿಕ್ಷಕರದು. ಅವರು ನಿದಾನವಾಗಿ ಹೆಜ್ಜೆ ಇಡುತ್ತಾ ಸಾಗಿ ಬಾಲ ಬಿಡಿಸಿದರು. ಅವರು ಕಣ್ಣು ಬಿಚ್ಚಿ ನೋಡಿದಾಗ ಕತ್ತೆಗೆ ನಾಲಕ್ಕು ಕಾಲಿನ ಬದಲು ಐದು ಕಾಲು ಮೂಡಿತ್ತು. ಮೇಡಮ್ಮ ಅವರ ಸರದಿ ಬಂದಿತು. ಬೇಡ ಬೇಡ ಎನ್ನತ್ತಾ ಕಣ್ಣು ಕಟ್ಟಿಸಿಕೊಂಡರು. ಹೆಜ್ಜೆಯ ಮೆಲೆ ಹೆಜ್ಜೆ ಇಡುತ್ತಾಹೋಗಿ ಬಾಲ ಬಿಡಿಸಿದರು. ಅವರು ಸರಿಯಾಗಿ ಕತ್ತೆಯ ಬೆನ್ನ ಮಧ್ಯದಲ್ಲಿ ಬಾಲ ಮೂಡಿಸಿದ್ದರು. ಯಾರೂ ಸರಿಯಾಗಿ ಬಾಲ ಬರೆಯಲೇ ಇಲ್ಲ. ಕೊನೆಗೆ ಕತ್ತೆಯ ಹಿಂಭಾಗದ ಹತ್ತಿರ ಬರೆದವರನ್ನೆ ವಿಜಯಿ ಎಂದು ಘೋಷಿಸಲಾಯಿತು.
ಮಡಿಕೆ ಒಡೆಯುವ ಸ್ಪರ್ಧೆ ಮಾತ್ರ ಮಕ್ಕಳಲ್ಲೂ ಬಹಳ ಕುತೂಹಲ ಹುಟ್ಟಿಸಿತು. ನಿತ್ಯ ತಮ್ಮ ಮೇಲೆ ಬೆತ್ತ ಪ್ರಯೋಗಿಸುವ ಗುರುಗಳ ಗುರಿ ಹೇಗಿದೆ ಎಂದು ನೋಡುವ ಕುತೂಹಲ. ಆಟ ಬಹಳ ಸರಳ. ಒಂದು ವೃತ್ತವನ್ನು ಬರೆದು ಅದರ ನಡುವೆ ಮಡಕೆಯನ್ನು ಇಡುವರು. ಮಣ್ಣಿನ ಮಡಕೆ ಇಲ್ಲದಿದ್ರೆ ಬಕೆಟ್‌ ಅದರೂ ಸರಿ. ಅಲ್ಲಿಂದ ಹತ್ತು ಮೀಟರ್‌ ದೂರದಲ್ಲಿ ಕಣ್ಣೆಗೆ ಬಟ್ಟೆ ಕಟ್ಟಿ ಕೈನಲ್ಲಿ ಕೋಲು ಕೊಟ್ಟು ಬಿಡುವರು. ಅವರು ಹೋಗಿ ವೃತ್ತದ ಮಧ್ಯದ ಮಡಕೆಗೆ ಹೊಡೆಯಬೇಕು ಪ್ರತಿಯೊಬ್ಬರಿಗೂ ಮೂರು ಬಾರಿ ಕೋಲು ಬೀಸಲು ಅವಕಾಶ. ಇದು ಮಕ್ಕಳಿಗೆ ಬಹು ಖುಷಿ ಕೊಡುವ ಆಟ. ತಮ್ಮ ಮೇಷ್ಟ್ರು ಗೊತ್ತು ಗುರಿ ಇಲ್ಲದೆ ಕೋಲು ಬೀಸುವುದು ನೋಡಿ ನಕ್ಕಿದ್ದೆ ನಕ್ಕಿದ್ದು.
ಅಲ್ಲಿ ತಮ್ಮ ನೆಚ್ಚಿನ ಗುರುಗಳಿಗೆ ಸಲಹೆ ನಿಡುವವರೂ ಇರುವರು. ಹಾಗೆ ಮಾಡದಿರಲು ಸೂಚನೆ ಇದ್ದರೂ ಗುಂಪಿನಲ್ಲಿದ್ದಾಗ ಅವರನ್ನು ಹಿಡಿಯುವವರು ಯಾರು? ಮುಂದೆ ಹೋಗಿ... ಹಿಂದೆ ತಿರುಗಿ... ಎಡಕ್ಕೆ ಹೋಗಿ... ಹೊಡೆಯಿರಿ ಎಂದು ಎಲ್ಲರೂ ಅರಚುವವರೆ. ಕಣ್ಣು ಕಟ್ಟಿಕೊಂಡು ಕೋಲು ಹಿಡಿದು ಹೊರಟವರು ಕಕ್ಕಾಬಿಕ್ಕಿ. ಕೊನೆಗೆ ಪಟಾ ಪಟಾ ನೆಲಕ್ಕೆ  ಹೊಡೆದು ಬರುವರು. ಎಲ್ಲರೂ ನಕ್ಕಿದ್ದೆ ನಕ್ಕಿದ್ದು. ನಮ್ಮ ಶಾಲೆಯ ಕನ್ನಡ ಮೇಷ್ಟ್ರಿಗೆ ಇನ್ನೊಂದು ಹೆಸರು ಪುಣ್ಯಕೋಟಿ ಎಂದು. ಅದೂ ಹಿಂದೆ ಬಂದರೆ ಒದೆಯಲಾರದ, ಮುಂದೆ ಬಂದರೆ ಹಾಯಲಾರದ ಸಾಧು ಹಸು. ಮಕ್ಕಳಿಗೆ ಹೊಡೆಯುವ ಮಾತು ಇರಲಿ ಬೈಯ್ಯುವುದೂ ಕಡಿಮೆ. ಅದಕ್ಕೆ ಅವರ ತರಗತಿಯಲ್ಲಿ ಗದ್ದಲವೋ ಗದ್ದಲ. ಎಷ್ಟೋ ಸಲ ಪಕ್ಕದಲ್ಲಿ ಪಾಠ ಮಾಡುತ್ತಿದ್ದವರು ಗಲಾಟೆ ತಡೆಯಲಾರದೆ ಹೋಗಿ ಮಕ್ಕಳನ್ನು ಗದರಿಸಿ ಸುಮ್ಮನಾಗಿಸುತ್ತಿದ್ದರು.
ಆದರೆ ಅವರು ತುಂಬ ಒಳ್ಳೆಯ ಶಿಕ್ಷಕರು. ಪಾಠ ಮಾಡುತ್ತಿದ್ದರೆ ಹೊರಗೆ ಹೋಗುತಿದ್ದವರೂ ನಿಂತು ಕೇಳಬೇಕು. ಅದರಿಂದ ಮಕ್ಕಳಿಗೆ ಅವರ ಮೇಲೆ ತುಸು ಹೆಚ್ಚಿನ ಪ್ರೀತಿ. ನಿತ್ಯ ಬೆತ್ತ ಬೀಸಲು ವಿಫಲರಾದ ಅವರು ಹೇಗೆ ಹೊಡೆಯುವರು ಎಂದು ಎಲ್ಲರ ಕುತೂಹಲ. ಆಟದಲ್ಲಿ ಎಂದೂ ಹೊಡೆಯದ ಅವರು ಇಲ್ಲಾದರೂ ಗೆಲ್ಲ ಬೇಕೆಂಬುದು ಅಲ್ಲಿರುವ ಎಲ್ಲ ವಿದ್ಯಾರ್ಥಿಗಳ ಅವ್ಯಕ್ತ ಆಶೆ. ಅದರಲ್ಲೂ ತುಂಟಾಟದಲ್ಲಿ ಮುಂದಾಗಿದ್ದ ಎಸ್ಪಿಎಲ್‌ ಮೌಲಾ ಸಾಬ್‌ ಅಂತೂ ಯಾರು ಹೇಳಿದರು ಕೇಳದೆ ಅವರನ್ನೆ ಹಿಂಬಾಲಿಸಿ, ಹೀಗೆ ಹೋಗಿ, ಹಾಗೆ ಹೋಗಿ ಎಂದು ಸೂಚನೆ ನೀಡತೊಡಗಿದ. ಅವರು ಕೋಲು ಮೇಲಿತ್ತಿ ಹಿಡಿದು ಮುಂದೆ ಮುಂದೆ ನಡೆದರು. ಆ ಗಡಿಗೆಯನ್ನೂ ದಾಟಿ ಮುಂದೆ ಹೊರಟರು. ಅವರ ಹಿಂದೆ ಇದ್ದ ಅವನಿಗೆ ನಿರಾಶೆಯಾಯಿತು. ಅಯ್ಯೋ ನಮ್ಮ ಗುರುಗಳೂ ಸೋತು ಹೋಗುವರಲ್ಲಾ ಎಂದು ಮರ ಮರ ಮರುಗಿದ. `ಹೊಡೆಯಿರಿ ಸಾರ್ ಹೊಡೆಯಿರಿ, ತಿರುಗಿ ಹೊಡೆಯಿರಿ. ಮುಂದೆ ಹೋಗಬೇಡಿಎಂದು ಕೂಗಿದ.
ಅವರು ಒಂದು ಕ್ಷಣ ನಿಂತರು. ತಟ್ಟನೆ ಹಿಂದಿರುಗಿ ಎತ್ತಿ ಬಾರಿಸಿದರು. ಅದು ಸೀದಾ ಹಿಂದೆ ಇದ್ದ ಹುಡುಗನ ತಲೆಗೆ ಏಟು ಬಿದ್ದಿತು. ಅವನು ಕುಸಿದು ಬಿದ್ದ. ಎಲ್ಲರಿಗೂ ಗಾಬರಿ. ದೇವರ ದಯೆ ಅವನಿಗೆ ಹೆಚ್ಚು ಪೆಟ್ಟಾಗಿರಲಿಲ್ಲ. ತಕ್ಷಣ ಅವನಿಗೆ ನಮ್ಮ ಡ್ರಿಲ್‌ ಮಾಸ್ಟರ್‌ ಪ್ರಥಮ ಚಿಕಿತ್ಸೆ ಕೊಟ್ಟರು. ಆದರೂ ಅವರ ಪೆಟ್ಟು ಮಡಕೆಯ ಹತ್ತಿರವೇ ಬಿದ್ದದ್ದರಿಂದ ಮಡಕೆ ಒಡೆಯದಿದ್ದರೂ ಹುಡುಗನ ತಲೆಗೆ ಹೊಡೆದರೂ ಬಹುಮಾನ ಪಡೆದರು. ಅವರಿಗೆ ಬಹುಮಾನ ಪಡೆಯುವಾಗ ಯಾರಿಗೂ ಬೀಳದಷ್ಟು ಚಪ್ಪಾಳೆ. ಅದರಲ್ಲೂ ತಲೆಗೆ ಪಟ್ಟಿ ಕಟ್ಟಿಕೊಂಡು ಮುಂದೆಯೇ ಕುಳಿತಿದ್ದ ಮೌಲಾ ಸಾಬ್‌ ಖುಷಿಯಿಂದ ಕೇಕೆ ಹಾಕುತ್ತಾ ಎಲ್ಲರಿಗಿಂತ ಜೋರಾಗಿ ಚಪ್ಪಾಳೆ ತಟ್ಟುತ್ತಾ ಇದ್ದ.


ಸತ್ಯ ಕೇಳಿದ್ದಕ್ಕೆ ಸಚೇಲ ಸ್ನಾನ


ಕೆಲಸಕ್ಕೆ ಸೇರಿದ ಎರಡೆ ವರ್ಷಕ್ಕೆ ಬಿಎಡ್‌ ತರಬೇತಿಗೆ ನಿಯೋಜನೆಯಾಯಿತು. ತರಬೇತಿ ಪಡೆದ ಶಿಕ್ಷಕರ ಕೊರತೆ ಇರುವುದರಿಂದ ಆಗ ಸರ್ಕಾರದ ಖರ್ಚಿನಲ್ಲೆ ವೇತನ ನೀಡಿ ಒಂದು ವರ್ಷದ ತರಬೇತಿಗೆ ಕಳುಹಿಸುತಿದ್ದರು. ಬಳ್ಳಾರಿಯ ಕೊಟ್ಟೂರೇಶ್ವರ ಶಿಕ್ಷಣ ಕಾಲೇಜು ಆಗ ಬಹಳ ಹೆಸರು ವಾಸಿ. ಅಲ್ಲಿನ ಪ್ರಿನ್ಸಿಪಾಲ ಗಂಗಪ್ಪನವರ ನೇತೃತ್ವದಲ್ಲಿ ಅದು ವಿಶ್ವವಿದ್ಯಾಲಯದಲ್ಲೆ ಮೊದಲ ಹತ್ತು ಸ್ಥಾನಗಳಲ್ಲಿ ಅರ್ಧಕರ್ಧ ಪಡೆಯುತಿತ್ತು. ಬಿಎಡ್‌ನ ಪಾಠ ಪ್ರವಚನ ಬಹು ಬಿಗಿಯಾಗಿತ್ತು. ಬೆಳಗ್ಗೆ ಹತ್ತು ಗಂಟೆಯಿಂದ ತರತಿಯಲ್ಲಿ ಪಾಠ ಕೇಳಿ ಮಧ್ಯಾಹ್ನದ ಮೇಲೆ ನಾವೆ ಹೈಸ್ಕೂಲಿನಲ್ಲಿ ಪಾಠಬೋಧನೆಯ ಅಭ್ಯಾಸ ಮಾಡಬೇಕಿತ್ತು. ನಮ್ಮಲ್ಲಿ ಬಹುತೇಕ ಅದೆ ಪದವಿ ಪಡೆದವರು ಟೀಚಿಂಗ್‌ ಪ್ರಾಕ್ಟೀಸ್ ಎಂದರೆ ನಮ್ಮ ಗೆಳೆಯರಿಗೆ ಅನೇಕರಿಗೆ ಹಿಂಜರಿಕೆ. ಹೊಸ ವಾತಾವರಣ ನಗರದ ಮಕ್ಕಳು. ಪಾಠ ಮಾಡುವುದೆಂದರೆ ಕೈಕಾಲು ನಡುಕ. ಕೆಲವರು ಬೋರ್ಡಿನ ಕಡೆ ತಿರುಗಿ ಬರೆಯಲು ಶುರು ಮಾಡಿದರೆ ವಿದ್ಯಾರ್ಥಿಗಳ ಕಡೆ ತಿರುಗುತ್ತಲೆ ಇರಲಿಲ್ಲ. ಇನ್ನೂ ಕೆಲವರು ಉರುಹಚ್ಚಿಕೊಂಡು ಬಂದು ಎತ್ತು ಉಚ್ಚೆ ಹೊಯದಂತೆ ಬಿಟ್ಟೂಬಿಡದೆ ಎಲ್ಲವನ್ನೂ ಒಪ್ಪಿಸುತಿದ್ದರು. ಪ್ರಶ್ನೆ ಕೇಳುವ ರೀತಿಯಂತೂ ದೇವರಿಗೆ ಪ್ರೀತಿ. ಮೊದ ಮೊದಲು ಅಭಾಸಗಳಾದರೂ ಸುಮಾರು ಮೂರು ತಿಂಗಳ ಕಾಲ ಪ್ರಾಧ್ಯಾಪಕರ ಮಾರ್ಗದರ್ಶನ ಮತ್ತು ಸಹಪಾಠಿಗಳ ಟೀಕೆ ಟಿಪ್ಪಣಿಗಳಿಂದ ಉತ್ತಮ ಶಿಕ್ಷಕರಾಗಿ ರೂಪುಗೊಳ್ಳುತಿದ್ದರು. ಅದಕ್ಕೆಂದೆ ಮೊದಲು ಪಾಠ ಟಿಪ್ಪಣಿ ಬರೆಯಬೇಕು. ಅದನ್ನು ಅನುಮೋದನೆ ಪಡೆದು ಅದಕ್ಕೆ ಅಗತ್ಯವಾದ ಪಾಠೋಪಕರಣದ ಸಮೇತ ತರಗತಿಗೆ ಹೋಗಬೇಕು.
ಅದೆಲ್ಲದರ ಜತೆ ಪಾಠ ಮಾಡುವಾಗ ಪ್ರಾಧ್ಯಾಪಕರು ಮತ್ತು ಸಹಪಾಠಿಗಳು ಗಮನಿಸುವರು. ಅವರಿಗೆ ಅಂಕ ನೀಡುವರು. ಅದು ಅಂತರ್‌ಮೌಲ್ಯಮಾಪನಕ್ಕೆ ಸೇರುತಿತ್ತು, ತುಸು ಚುರುಕಾಗಿರುವ ಸಹಪಾಠಿಗಳಿಗೆ ಪಾಠದ ಚರ್ಚೆಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಸದೆ ಇರಲು ಕಾಫಿ ತಿಂಡಿ ಆಮಿಷವೂ ಇರುತಿತ್ತು. ಆ ಅವಧಿಯಲ್ಲಿ ಮೀನಾಕ್ಷಿ ಭವನದ ದೋಸೆ ಸಂಜೆ ಖಾಯಂ. ಪ್ರತಿಫಲವಾಗಿ ಪಾಠದ ಟೀಕೆಯನ್ನು ಪ್ರಾಧ್ಯಾಪಕರು ಹೋದ ನಂತರ ಮಾತ್ರ ತಿಳಿಸಲು ಕೋರುತಿದ್ದರು.
ವಿಶೇಷವಾಗಿ ಪಾಠ ಪ್ರಾರಂಭ ಮಾಡುವಾಗ ಅಂದಿನ ವಿಷಯವನ್ನು ಮಕ್ಕಳ ಬಾಯಿಂದಲೆ ಹೊರಡಿಸಬೇಕು ಎಂಬುದು ವಾಡಿಕೆ. ಅದೆ ಬಹು ತಲೆನೋವಿನ ಕೆಲಸ. ವಿದ್ಯಾರ್ಥಿಗಳಿಗೂ ಗೊತ್ತು ನಾವು ತರಬೇತಿಗೆ ಬಂದವರು ಎಂದು. ಅದಕ್ಕೆ ಉತ್ತರ ಗೊತ್ತಿದ್ದರೂ ಹೇಳುತ್ತಿರಲಿಲ್ಲ. ಕೆಲವರು ಅಸಂಬದ್ಧ ಉತ್ತರ ಕೊಡುತಿದ್ದರು. ತರಗತಿಯ ನಿರ್ವಹಣೆಗೂ ಅಂಕಗಳು ಇದ್ದವು. ಕೆಲವು ಕಿಲಾಡಿಗಳು ವಿದ್ಯಾರ್ಥಿಗಳಿಗೆ ಮೊದಲೆ ಚಾಕಲೇಟು ಕೊಟ್ಟು ಸರಿ ಮಾಡಿಕೊಂಡಿರುವರು. ಅದರ ಪರಿಣಾಮ ಪ್ರಶ್ನೆ ಕೇಳುವ ಮೊದಲೆ ಉತ್ತರ ಬರುತಿತ್ತು. ಇನ್ನು ಪೀಠಿಕೆಯಂತೂ ಅನೇಕ ಸಲ ನಗು ಉಕ್ಕಿಸುತಿತ್ತು. ಪಾಠ ಪ್ರಾರಂಭಿಸುವಾಗ, ``ತಿಳಿದಿರುವುದರಿಂದ ತಿಳಿಯದಿರುವುದರ ಕಡೆ ಹೋಗಬೇಕು, ಸಾಮಾನ್ಯದಿಂದ ನಿರ್ದಿಷ್ಟದ ಕಡೆಗೆ ಸಾಗಬೇಕು’’ ಎಂಬುದು ಬೋಧನೆಯ ಮೂಲತತ್ವ. ಮಗುವಿಗೆ ತಿಳಿದಿರುವದನ್ನು ಆಧಾರವಾಗಿಟ್ಟುಕೊಂಡು ಅದರ ಮೇಲೆ ಹೊಸದನ್ನು ಕಲಿಸಬೇಕು. ಆದರೆ ನಮ್ಮ ಗೆಳೆಯರ ಕಸರತ್ತು ಅತಿರೇಕಕ್ಕೆ ಹೋಗುತಿತ್ತು. ತಿರುಳಿಗಿಂತ ಸಿಪ್ಪೆಗೆ ಪ್ರಾಧಾನ್ಯ ಸಿಗುತಿತ್ತು.
ವಿಜ್ಞಾನದ ಪಾಠವನ್ನು ಗೆಳೆಯ ಬಹು ಧೈರ್ಯದಿಂದ ಪ್ರಾರಂಭಿಸಿದ.
ನಿಮಗೆಲ್ಲ ರಾಮಾಯಣ ಗೊತ್ತಾ?
ಗೊತ್ತು ಸಾರ್‌ ಒಟ್ಟಿಗೆ ಉತ್ತರಿಸಿದರು ಮಕ್ಕಳು.
ರಾಮನ ಹೆಂಡತಿಯ ಹೆಸರು ಏನು?
ಸೀತೆ.
ಸೀತೆಯ ತಂದೆಯ ಹೆಸರು ಏನು?
ಜನಕ.
ಗುಡ್‌ ವೆರಿ ಗುಡ್‌, ಗಾಳಿಯಲ್ಲಿ ಜನಕ ಎಂದು ಕೊನೆಯಾಗುವ ಅನಿಲವಿದೆ ಹೇಳಿ.
ಆಮ್ಲಜನಕ.
ಸಾರಜನಕ.
ಮತ್ತೊಂದು ಅನಿಲ ನೀರಿನ ಹುಟ್ಟಿಗೆ ಕಾರಣವಾದದ್ದು.
ನೀರು ಜನಕ. ನೀನು ಹೇಳಿದ್ದು ಸರಿ ಆದರೆ ಅದು ನೀರು ಜನಕ ಅಲ್ಲ, ಜಲ ಜನಕ ಅದರ ತಯಾರಿಕೆ ಮತ್ತು ಗುಣ ಲಕ್ಷಣಗಳ ಬಗ್ಗೆ ಈದಿನ ತಿಳಿಯೋಣ.
ಪುರಾಣದ ಜನಕನನ್ನು ವಿಜ್ಞಾನಕ್ಕೆ ತಳಕು ಹಾಕಿದ್ದ.
ಇನ್ನೊಬ್ಬ ಗೆಳೆಯ ಮಕ್ಕಳಿಗೆ ಇಷ್ಟವಾದ ಪ್ರಶ್ನೆಗಳನ್ನೆ ಕೇಳಿದ.
ನಿಮಗೆ ಯಾವ ತಿಂಡಿ ಇಷ್ಟ?
ಇಡ್ಲಿ, ಪೂರಿ, ದೋಸೆ ಹೀಗೆ ಪಟ ಪಟ ಉತ್ತರ ಬಂದವು,
ದೋಸೆಗಳಲ್ಲಿ ಅನೇಕ ವಿಧ ಇವೆ ಹೇಳುವಿರಾ?
ರವಾದೋಸೆ, ಖಾಲಿ ದೋಸೆ, ಮಸಾಲೆ ದೋಸೆ, ಬೆಣ್ಣೆದೋಸೆ ಹೀಗೆ ಉತ್ತರಗಳು ಪೈಪೋಟಿಯ ಮೇಲೆ ಬಂದವು?
ನಮ್ಮ ರಾಜ್ಯದಲ್ಲಿ ಬೆಣ್ಣೆ ದೋಸೆಗೆ ಒಂದು ನಗರ ಪ್ರಖ್ಯಾತಿಯಾಗಿದೆ ಅದು ಯಾವುದು?
ದಾವಣಗೆರೆ.
ಅದರ ಪಕ್ಕದಲ್ಲೆ ಒಂದು ದೊಡ್ಡ ಊರಿದೆ ಅದರ ಹೆಸರು ಹೇಳಿ.
ಹರಿಹರ.
ವೆರಿ ಗುಡ್‌.
ಬೋರ್ಡಿನ ಕಡೆ ತಿರುಗಿ ಹರಿಹರ’’ ಎಂದು ಶೀರ್ಷಿಕೆ ಬರೆದ.
ನಮಗೆಲ್ಲ ಅಚ್ಚರಿ. ಕನ್ನಡ ತರಗತಿಯಲ್ಲಿ ಭೂಗೋಲದ ಬಗ್ಗೆ ಪಾಠ ಮಾಡುತ್ತಿರುವನಲ್ಲ, ಎಂದು.
ಮಂದಹಾಸ ಬೀರುತ್ತಾ ವಿದ್ಯಾರ್ಥಿಗಳಿಗೆ ಹೇಳಿದ.
ಈ ದಿವಸ ನಾವು ಹರಿಹರ ಕವಿಯ ರಗಳೆಯೊಂದನ್ನು ಕಲಿಯೋಣ.
ಆದಿಕವಿಯ ಹೆಸರು ಹೊರಡಿಸಿದ ಒಬ್ಬ ಅಭ್ಯರ್ಥಿಯ ಪ್ರಯತ್ನ ಈಗಲೂ ನಗು ತರಿಸುವುದು.
ಶಾಲೆಗೆ ದೂರದಿಂದ ಬರುವ ವಿದ್ಯಾರ್ಥಿಗಳು ಹೇಗೆ ಬರುತ್ತಾರೆ.
ಸೈಕಲ್‌ ಮೇಲೆ, ಉತ್ತರಿಸಿದರು ಮಕ್ಕಳು.
ಸೈಕಲ್‌ ಚಕ್ರಕ್ಕೆ ಗಾಳಿ ಹೋದರೆ ಏನು ಮಾಡುವಿರಿ?
ಗಾಳಿ ತುಂಬಿಸುವೆವು.
ಗಾಳಿ ತುಂಬಲು ಏನು ಬಳಸುವಿರಿ?
ಪಂಪು ಬಳಸುತ್ತೇವೆ.
ಇನ್ನೊಂದು ಸಲ ಹೇಳಿ.
ಪಂಪು, ಒಟ್ಟಿಗೆ ಉತ್ತರ ಬಂತು.
ಕಪ್ಪು ಹಲಗೆಯ ಮೇಲೆ ಪಂಪುಎಂದು ಬರೆದು ಕೊಂಬು ಅಳಿಸಿದ.
ಇದನ್ನು ಓದಿ.
ಪಂಪ, ಎಂದರು.
ಈದಿನ ಆದಿಕವಿ ಪಂಪ ನ ಬಗ್ಗೆ ತಿಳಿದುಕೊಳ್ಳೋಣ.
ಈಗ ನೆನಸಿಕೊಂಡರೆ ಅಸಂಬದ್ಧ ಎನಿಸುವುದು, ಸಾಧಾರಣವಾಗಿ ಬೋಧನೆಯು ಬಹು ಸುಲಭ ಎಂಬ ಭಾವನೆ ಬಹಳ ಜನಕ್ಕಿದೆ. ಯಾರು ಬೇಕಾದರೂ ಪಾಠ ಮಾಡಬಹುದು ಎನ್ನುವವರೂ ಇದ್ದಾರೆ. ವೃತ್ತಿಯನ್ನು ಕೀಳಾಗಿ ಕಾಣುವ ಒಂದು ನಾಣ್ಣುಡಿಯೆ ಚಾಲತಿಯಲ್ಲಿದೆ, “ಸ್ಟೇಷನ್‌ ಮಾಸ್ಟರಿಗೆ ನಿದ್ದಿ ಇಲ್ಲ, ಸ್ಕೂಲು ಮಾಸ್ಟರ್‌ಗೆ ಬುದ್ಧಿ ಇಲ್ಲಅದು ತಪ್ಪು ಕಲ್ಪನೆ. ಮಕ್ಕಳು ಮಾಹಿತಿ ತಂಬುವ ಗೋಣಿಚೀಲ ಅಲ್ಲ. ನಿಜವಾದ ಶಿಕ್ಷಣ ಎಂದರೆ ಬರಿ ಮೂರು  Rಗಳನ್ನು (Reading, writing ಮತ್ತು  Arithmetic)  ಕಲಿಸುವುದು ಮಾತ್ರ ಅಲ್ಲ. ಅವರಿಗೆ ಇನ್ನೊಂದು ಅತಿ ಮುಖ್ಯವಾಗಿ ಬೇಕು ಅದೆ reference skill. ಅಂದರೆ ಪರಾಮರ್ಶನ ಕೌಶಲ್ಯ. ತಮಗೆ ಬೇಕಾದುದನ್ನು ಅರಿತು ಹುಡುಕುವ ಕಲೆ. ಶಿಕ್ಷಕ ಅದನ್ನು ಕಲಿಸಬೇಕು. ತರಬೇತಿಯಲ್ಲಿ ಅದರ ಪರಿಚಯ ನಮಗಾಯಿತು. ಪದವಿಯಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದವರು ಉತ್ತಮ ಶಿಕ್ಷಕರಾಗುವರು ಎಂದು ಹೇಳುವ ಹಾಗಿಲ್ಲ. ವಿದ್ಯಾರ್ಥಿಗಳ ಮಟ್ಟಕ್ಕೆ ಇಳಿದು ಅವರನ್ನು ಕ್ರಮೇಣ ತನ್ನ ಮಟ್ಟಕ್ಕೆ ಏರಿಸಬಲ್ಲವನೆ ಉತ್ತಮ ಶಿಕ್ಷಕ. ಅದು ಇಲ್ಲ, ಇದು ಇಲ್ಲ ಎಂದು ದೂರುತ್ತಾ ಕೂಡುವುದಕ್ಕಿಂತ ಇರುವುದರಲ್ಲೆ ಸಾಧನೆ ಮಾಡುವ ಮನವಿರಬೇಕು. ವಿದ್ಯಾರ್ಥಿಗಳನ್ನು ದಡ್ಡರು ಎಂದು ಹೀಗಳೆದರೆ ಉಪಯೊಗವಿಲ್ಲ, ಜಾಣ ಮಕ್ಕಳಿಗೆ ಕಲಿಯಲು ಶಿಕ್ಷಕನ ಸಹಾಯಕ ಹೆಚ್ಚು ಬೇಕಿಲ್ಲ. ರೋಗ ಹೆಚ್ಚಿರುವಲ್ಲಿ ವೈದ್ಯನ ಅಗತ್ಯವಿರುವುದು, ಕತ್ತಲಿದ್ದಲ್ಲಿ ಬೆಳಕಿನ ಅವಶ್ಯಕತೆ ಇರುವುದು, ಕಲಿಕೆಯಲ್ಲಿ ಹಿಂದುಳಿದವರನ್ನು ಮುಂದೆ ತರುವವನೆ ನಿಜವಾದ ಶಿಕ್ಷಕ. ವಿಷಯ ಪರಿಣಿತಿ, ಸಹೃದಯತೆ, ಪೂರ್ವಸಿದ್ಧತೆ ಮತ್ತು ಪರಿಶ್ರಮವೆ ಬೋಧನೆಯ ಆಧಾರಸ್ತಂಭಗಳು ಎಂದು ತರಬೇತಿಯಲ್ಲಿ ಕಲಿತೆವು. ಕಂಬಳಿಹುಳುಗಳನ್ನು ಬಣ್ಣ ಬಣ್ದ ಚಿಟ್ಟೆಯಾಗಿಸುವ ಪ್ರಕ್ರಿಯೆ ಶಿಕ್ಷಕ ತರಬೇತಿ.
ಬೋಧನೆಯಲ್ಲಿ ಪ್ರಸಂಗಾವಧಾನ ಅತಿ ಮುಖ್ಯ ಎಂಬುದು ನನಗೂ ಅನುಭವವಾಯಿತು.
ಪ್ರಾಕ್ಟಿಕಲ್‌ ಪರೀಕ್ಷೆಗೆ ನಾನು ಭೂಮಿತಿಯನ್ನು ಆಯ್ದುಕೊಂಡಿದ್ದೆ. ತಯಾರಿ ಜೋರಾಗಿಯೆ ಇತ್ತು.
ತರಗತಿಯಲ್ಲಿ ತ್ರಿಭುಜಗಳ ಕುರಿತು ಪೀಠಿಕೆ ಹಾಕಿ ರಚನೆಗೆ ಮುಂದಾದೆ. ಮೇಜಿನ ಮೇಲಿದ್ದ ಜಾಮಿಟ್ರಿ ಬಾಕ್ಸು ತೆರೆದು ಸ್ಕೇಲು ಹುಡುಕಿದೆ. ದುರದೃಷ್ಟವಶಾತ್‌ ಸ್ಕೇಲು ಕಾಣೆಯಾಗಿತ್ತು. ಹತ್ತು ಸೆಕೆಂಡ್‌ ಸುಮ್ಮನೆ ನಿಂತೆ. ನಂತರ ವಿದ್ಯಾರ್ಥಿಗಳ ಕಡೆ ನೋಡಿದೆ. ಎಲ್ಲರಲ್ಲೂ ಜಾಮಿಟ್ರಿ ಬಾಕ್ಸ್ ಇರಲಿಲ್ಲ.
ಸ್ಕೇಲು ಇಲ್ಲದ ಹುಡುಗನ ಕಡೆ ನೋಡಿ ಮೂರು ಸೆಂಟಿಮೀಟರ್‌ ಉದ್ದದ ರೇಖೆಯನ್ನು ಎಳೆ ಎಂದೆ. ಅವನು ಸ್ಕೇಲು ಇಲ್ಲ ಎಂದ. ಸ್ಕೇಲು ಇಲ್ಲದೆ ಇದ್ದರೂ ಎಳಯಬಹುದು, ಎಂದೆ. ಎಲ್ಲರೂ ಅಚ್ಚರಿಯಿಂದ ನೋಡಿದರು. ನಾನು ಮೇಜಿನ ಮೇಲಿದ್ದ ಸೆಟ್‌ಸ್ಕೊಯರ್‌ ತೆಗೆದುಕೊಂಡು ಇದರಲ್ಲೂ ಅಳತೆಪಟ್ಟಿ ಇದೆ. ಇದನ್ನೆ ಬಳಸಿ ಗೆರೆ ಎಳೆ ಎಂದೆ. ಯಾವ ರೀತಿ ಎಳೆಯಬೇಕು ಎಂದು ತೋರಿಸಿದೆ. ಜಾಮಿಟ್ರಿ ಬಾಕ್ಸ್ ತಾರದೆ ಇದ್ದವರು ಪಕ್ಕದವರಿಂದ ಸೆಟ್‌ಸ್ಕೊಯರ್‌ ಪಡೆದು ಗೆರೆ ಎಳೆದರು. ಪಾಠ ಯಶಸ್ವಿಯಾಯಿತು.
ಹೊರಗೆ ಬಂದ ಮೇಲೆ ಬಾಹ್ಯ ಪರೀಕ್ಷಕರು ಬಂದು ಕೈ ಕುಲುಕಿದರು. ನಿಮ್ಮ ಹತ್ತಿರ ಅಳತೆ ಪಟ್ಟಿ ಇಲ್ಲದೆ ಇರುವುದು ನಮಗೂ ಗೊತ್ತಾಯಿತು. ಆದರೆ ಕೊರತೆಯನ್ನೆ ನೀವು ಮಕ್ಕಳಿಗೆ ಬೋಧನಾ ಅಂಶವಾಗಿ ಬಳಸಿಕೊಂಡಿರಿ ಎಂದು ಮೆಚ್ಚುಗೆ ಸೂಚಿಸಿದರು.
ನಮ್ಮ ಕಾಲೇಜಿಗೆ ಮೊದಲ ಐದು Rankಗಳು ಬಂದವು. ನನಗೆ ಮೂರನೆ Rank ಒಂದೆ ಅಂಕದಿಂದ ತಪ್ಪಿತು. ನನಗೂ ಗಾಂಧೀಜಿಗೂ ಒಂದು ವಿಷಯದಲ್ಲಿ ಸಾಮ್ಯತೆ ಇದೆ ಎಂದು ಸಮರ್ಥಿಸಿಕೊಳ್ಳುತಿದ್ದ ಕೈಬರಹ ಅದಕ್ಕೆ ಕಾರಣವಾಗಿತ್ತು.
ಅಲ್ಲಿ ವಿದ್ಯಾರ್ಥಿಗೆ ಸತ್ಯ ಹೇಳಲು ಒತ್ತಾಯ ಮಾಡಿ ಪೇಚಿಗೆ ಒಳಗಾದ ಸಂಗತಿ ನನಗೆ ಈಗಲೂ ನಗೆತರಿಸುವುದು. ನನ್ನ ಜೊತೆ ನಮ್ಮ ಹಳ್ಳಿಯ ಹುಡುಗನೊಬ್ಬ ಇದ್ದ. ಬಹಳ ಮುಗ್ದ. ಎಸ್‌ಎಸ್‌ಎಲ್ಸಿ ಫೇಲಾಗಿದ್ದ. ಪಾಠ ಹೇಳಿಸಿಕೊಂಡು ನಿಮ್ಮ ಜೊತೆ ಇರಲಿ ಊರಲ್ಲಿ ಇದ್ದರೆ ಹೊಲದ ಕೆಲಸ ಹಚ್ಚುವರು ಹೇಳಿಕೊಡಲು ನೀವೂ ಇರುವುದಿಲ್ಲ ಎಂದು ಕೇಳಿಕೊಂಡರು. ಸರಿ ಮೂರುತಿಂಗಳು ಇದ್ದು ಅಭ್ಯಾಸ ಮಾಡಲಿ ಎಂದು ಒಪ್ಪಿದೆ. ನನಗೆ ಪಾಠ ಬೋಧನೆಗೆ ವಾರ್ಡಲಾ ಹೈಸ್ಕೂಲಿಗೆ ಹಾಕಿದರು. ಅದಕ್ಕಾಗಿ ಅದೆ ಬೀದಿಯಲ್ಲಿ  ರೂಮು ಬಾಡಿಗೆಗೆ ಪಡೆದೆವು. ಅದು ಹಳೆಯ ಕಾಲದ ಮಣ್ಣಿನ ಮಾಳಿಗೆಯ ಮನೆ. ಮಾಳಿಗೆಯ ಮೇಲೆ ಒಂದು ಹಾಲು. ಮುಂದೆ ಇರುವ ಜಾಗದಲ್ಲಿ ಹೂವಿನ ಕುಂಡಗಳನ್ನಿಟ್ಟಿದ್ದರು. ಅವಕ್ಕೆ ನೀರು ಹಾಕಬೇಕು. ಆದರೆ ನೀರು ಕೆಳಗೆ ಚೆಲ್ಲಬಾರದು ಎಂಬ ಶರತ್ತು, ಕಾರಣ. ನಮ್ಮ ಕೋಣೆಯ ಮುಂದಿನ ಅಂಕಣದ ನೀರು ಹೋಗುವ ಹರನಾಳಿಗೆ ಸೀದಾ ಕೆಳಗಿನ ಮನೆಯ ಕಟ್ಟೆಯ ಮೇಲೆ ಇತ್ತು. ಅಲ್ಲಿ ಸಂಜೆ ಅವರು ಕುಳಿತುಕೊಳ್ಳುವರು. ಅದಕ್ಕೆ ಹರನಾಳಿಗೆಯ ನೀರು ಕಟ್ಟೆಯ ಮೇಲೆ ಬೀಳಬಾರದು ಎಂದು ಅವರ ಎಚ್ಚರಿಕೆ. ನಾವೂ ನೀರು ಬೀಳದಂತೆ ಹುಷಾರಾಗಿದ್ದೆವು.
ಒಂದು ದಿನ ಸಂಜೆ ರೂಮಿಗೆ ಬಂದೆವು. ನಾವು ಮೆಟ್ಟಿಲು ಏರಬೇಕು. ಮನೆ ಮಾಲಕ ಗುತ್ತಿ ಕ್ರಿಷ್ಣಾಚಾರ್‌ ನಮ್ಮನ್ನು ತಡೆದು ನಿಲ್ಲಿಸಿದರು.
ನಿಮಗೆ ರೂಮುಕೊಟ್ಟರೆ ಯಾರು ಯಾರನ್ನೋ ಸೇರಿಸಿರುವಿರಿ. ಅವರು, ಮಾಡುವ ಕೆಲಸಕ್ಕೆ ಯಾರು ಜವಾಬ್ದಾರರು?
ಅವರು ಕೋಪದಿಂದ ಕೇಳಿದರು.
ಮೊದಲೆ ಕರ್ಮಠ ಬ್ರಾಹ್ಮಣ. ಮಾಂಸ, ಮದ್ಯ ಬಳಸಬಾರದು, ಗಲಾಟೆಯಾಗಬಾರದು. ಬೇರೆಯವರನ್ನು ಸೇರಿಸಬಾರದು ಹೀಗೆ ಅನೇಕ ಶರತ್ತುಗಳನ್ನು ವಿಧಿಸಿದ್ದರು. ಈಗ ಯಾವ ಶರತ್ತು ಉಲ್ಲಂಘನೆಯಾಗಿದೆಯೋ, ಎಂದು ಗಾಬರಿಯಾದೆ.
ಏನಾಯಿತು ಆಚಾರ್ಯರೆ, ಯಾಕೆ ಅಷ್ಟು ಕೋಪ, ಎಂದೆವು.
ನಾನು ಮೇಲಿನಿಂದ ನೀರು ಹಾಕಬಾರದು ಎಂದು ಹೇಳಿರಲಿಲ್ಲವೆ?
ಹೌದು ಎಂದು ತಲೆಯಾಡಿಸಿದೆ.
ಸಂಜೆ ನಾನು ಕಟ್ಟೆಯ ಮೇಲೆ ಕೂತಿದ್ದೆ. ಸೀದಾ ತಲೆಯ ಮೇಲೆ ನೀರು ಬಿತ್ತು?
ನನಗೆ ಖಚಿತವಾಯಿತು. ಇದು ನಮ್ಮ ಹುಡುಗನ ಕೆಲಸ. ಅವನು ಮುಂದಿನ ಅಂಕಣದಲ್ಲಿ ನೀರು ಚೆಲ್ಲಿರುವ. ಅದು ಹರನಾಳಿಗೆಯ ಮೂಲಕ ಕೆಳಗೆ ಬಿದ್ದಿದೆ.
ಆಯ್ತು ಆಚಾರರೆ, ಹುಡುಗನನ್ನು ವಿಚಾರಿಸುವೆ. ಅವನಿಗೆ ಬುದ್ಧಿ ಹೇಳುವೆ ದಯವಿಟ್ಟು ಈ ಸಲ ಕ್ಷಮಿಸಿರಿ ಎಂದೆ.
ಹೀಗೆ ಬೇರೆ ಹುಡುಗರನ್ನು ಬಿಟ್ಟುಕೊಂಡಿರುವುದರಿಂದಲೆ ಸಮಸ್ಯೆಯಾಗಿದೆ, ನಾನೆ ಬಂದು ಅವನಿಗೆ ಹೇಳುವೆ, ಎಂದರು.
ಮೇಲೆ ಹೋದಾಗ ಬಾಗಿಲು ಹಾಕಿತ್ತು. ಮನೆ ಮುಂದಿನ ಅಂಗಳದಲ್ಲೂ ನೀರು ಚೆಲ್ಲಿದ ಗುರುತು ಇರಲಿಲ್ಲ.
ಹಾಗಿದ್ದಾಗ ಆಚಾರರೆ ಏನೋ ತಪ್ಪು ತಿಳಿದುಕೊಂಡಿರುವರು ಎಂದುಕೊಂಡೆ. ಆದರೆ ಯಾವುದಕ್ಕೂ ಒಂದು ಮಾತು ಆ ಹುಡುಗನನ್ನು ವಿಚಾರಿಸಿದರೆ ಸರಿ ಎನಿಸಿತು.
ಬಾಗಿಲು ತೆಗೆದ ಮೇಲೆ ಕೇಳಿದೆ.
ಹೇಮಪ್ಪ, ನೀನು ಮೇಲಿನಿಂದ ನೀರು ಚೆಲ್ಲಬಾರದು ಎಂದು ಹೇಳಿದ್ದೆನಲ್ಲ, ಯಾಕೆ ಇವರ ಮೇಲೆ ನೀರು ಹಾಕಿದೆ?
ಇಲ್ಲ ಸಾರ್‌ ನಾನು ನೀರು ಹಾಕಿಯೆ ಇಲ್ಲ, ಅವನು ಉತ್ತರಿಸಿದ.
ಆಚಾರರಿಗೆ ಮೈ ಎಲ್ಲ ಉರಿಯಿತು. ಏನೂ, ನಾನು ಸುಳ್ಳು ಹೇಳುತ್ತೇನಾ? ನೋಡು ಮೈ ಮೇಲಿನ ಪಂಜೆ ಸಹಾ ಒದ್ದೆಯಾಗಿದೆ? ಮಾಡುವುದೆಲ್ಲ ಮಾಡಿ ಸುಳ್ಳು ಹೇಳುತ್ತಿರುವೆ.
ನಿಜ ಅವರ ಮೈ ಮೇಲೆ ಹೊದ್ದ ಪಂಚೆ ಹಸಿಯಾಗಿತ್ತು.
ನನಗೂ ಕೋಪ ಬಂತು. ತಪ್ಪು ಮಾಡಿದ್ದಲ್ಲದೆ ಸುಳ್ಳು ಬೇರೆ ಹೇಳುತ್ತೀಯಾ? ಕಣ್ಣು ಕೆಂಪಗೆ ಮಾಡಿ ಗದರಿದೆ.
ಇಲ್ಲ ಸಾರ್‌, ನಾನಂತೂ ಸುಳ್ಳು ಹೇಳುತ್ತಿಲ್ಲ. ದೇವರ ಸತ್ಯವಾಗಿಯೂ ನೀರು ಹಾಕಿಲ್ಲ, ಎಂದು ಅಳುದನಿಯಲ್ಲಿ ಹೇಳಿದ.
ಲೇ ಹೇಮಗಾ, ಯಜಮಾನರ ಬಟ್ಟೆ ಒದ್ದೆಯಾಗಿದೆ. ನೀನು ಮೇಲಿನಿಂದ ನೀರು ಹಾಕದಿದ್ದರೆ ಅಕಾಲ ಮಳೆ ಬಂತಾ ಎಂದು ಗದರಿದೆ.
ನಮ್ಮ ಅವ್ವನ ಆಣೆಗೂ ನಾನು ನೀರು ಹಾಕಿಲ್ಲ ಸಾರ್‌.
ಹಾಗಿದ್ದರೆ ಹರ ನಾಳಿಗೆಯಲ್ಲಿ ಗಂಗೆ ಉದ್ಭವವಾಯಿತಾ? ಸತ್ಯ ಹೇಳು. ಒತ್ತಾಯ ಮಾಡಿದೆ.
ನೀರು ಹಾಕಿಲ್ಲ ಆದರೆ ಹರನಾಳಿಗೆಯಲ್ಲಿ ಒಂದಾ ಮಾಡಿದೆ.
ಆಚಾರ್ರು ಹಣೆ ಹಣೆ ಬಡಿದುಕೊಂಡರು. ನೀರು ಎಂದುಕೊಂಡು ಗದರಿದ ಅವರಿಗೆ ಆಘಾತವಾಗಿತ್ತು. ಅಲ್ಲಿಂದಲೆ ಮನೆಯವರಿಗೆ ಕೂಗಿದರು. ನೀರಿನ ಹಂಡೆಗೆ ಉರಿಹಾಕು. ರಂಡೆಗಂಡ ಮೂತ್ರಾಭಿಷೇಕ ಮಾಡಿಸಿದ್ದಾನೆ, ಎರಕೊಳ್ಳಬೇಕು.
ಸತ್ಯ ಕೇಳಿದ ಅವರಿಗೆ ಸಚೇಲ ಸ್ನಾನ. ಹೇಳಿಸಿದ ನಾನು ಮನೆ ಖಾಲಿ ಮಾಡಿದೆ ಎಂದು ಹೇಳಬೇಕಿಲ್ಲ ತಾನೆ.