Thursday, July 10, 2014

ಬಾದಾಮಿಗೆ ಬೇಕು ಜೇನುಗೂಡು !


ಜೇನುನೊಣ ಕೊಡುವುದು ಕೈತುಂಬ ಹಣ!
     ಅಮೇರಿಕಾದ ಪಶ್ಚಿಮಭಾಗದಲ್ಲಿ  ಅದರಲ್ಲೂ ಕ್ಯಾಲಿಫೋರ್ನಿಯಾದಲ್ಲಿ ಜನವರಿ ತಿಂಗಳಿಂದ  ಎಲ್ಲೆಲ್ಲೂ ಜೇನುಹುಳುಗಳ ಗುಂಜಾರವ. ಜೇನುಹುಳ ಬೇಕಿವೆ ಬಾಡಿಗೆಗೆ!.  ಎಂಬ ಜಾಹಿರಾತು  ಸ್ಥಳೀಯ ಪತ್ರಿಕೆಗಳಲ್ಲಿ. ಮನೆ ಬಾಡಿಗೆ ನಮಗೆಲ್ಲ ಗೊತ್ತು. ಕಾರು, ಸೈಕಲ್‌ ಕೊನೆಗೆ ಜನರೂ ಬಾಡಿಗೆ ದೊರಕುತ್ತಾರೆ. ಅದರಲ್ಲೂ ಫಲವತ್ತಾದ ಮಹಿಳೆಯರಿಗೆ ಸಲಿಂಗ ವಿವಾಹ ಕಾನೂನು ಬದ್ಧವಾದ ಈ ನಾಡಿನಲ್ಲಿ ಮಗು ಪಡೆಯಲು ಬಾಡಿಗೆ ತಾಯಂದಿರಿಗೂ  ಬೇಡಿಕೆ ಇದೆ. ಆದರೆ ಬೇಕಿದೆ ಜೇನುನೊಣಗಳು ಎಂಬ ಜಾಹಿರಾತನ್ನು ಈ ಪ್ರಾಂತ್ಯಗಳ ಸ್ಥಳೀಯ ಪತ್ರಿಕೆಗಳಲ್ಲಿ ನೋಡಿ   ಅಬ್ಬಾ ಜೇನುತುಪ್ಪಕ್ಕೆ ಅಷ್ಟು ಬೇಡಿಕೆಯೇ ಎಂದು ಹುಬ್ಬು ಏರಿಸಬಹುದು. ನಿಜ!   ಬಹಳ ಬೇಡಿಕೆ ಇದೆ .  ಆದರೆ  ಜೇನುತುಪ್ಪಕ್ಕೆ ಅಲ್ಲ , ಜೇನುಹುಳುಗಳಿಗೆ.  ಅವರಿಗೆ ಜೇನುನೊಣಗಳು ಬೇಕೇ ಬೇಕು. ಒಂದು ಎರಡು ಜೇನು ಪೆಟ್ಟಿಗೆಗಳಲ್ಲ. ಜೇನುಹುಳುಗಳಿಂದ ಗಿಜಗುಡುವ ಲಕ್ಷ ಲಕ್ಷ ಜೇನು ಪೆಟ್ಟಿಗೆಗಳು ಬೇಕು   . ಔಷಧಿಗಾಗಿ ಎಂದು ಭಾವಿಸಿದ್ದರೆ ಅದೂ ತಪ್ಪು.ಅವು ಬೇಕಾಗಿರುವುದು ತೋಟಗಾರರಿಗೆ. ಅದೂ ಒಂದೆರಡು ತಿಂಗಳ ಮಟ್ಟಿಗೆ. ನಿಗದಿತ ಅಳತೆಯ ಜೇನು ಪೆಟ್ಟಿಗೆ ಯನ್ನು ಒದಗಿಸಿ  ಅವರ ತೋಟದಲ್ಲಿ  ಇಟ್ಟರೆ ಸರಿ,  ಹೂವಿಂದ ಹೂವಿಗೆ ಹಾರಾಡಿದರೆ ಜೇನು ನೊಣ ನಿಮ್ಮ ಕೈನಲ್ಲಿ ಝಣ ಝಣ ಹಣ.  ಈಗ ಒಂದು ಜೇನುಪೆಟ್ಟಿಗೆಯ ಬೆಲೆ ಅಜಮಾಸು ನೂರು ಡಾಲರು ಮುಟ್ಟಿದೆ. ಅಂದರೆ ಅಂದಾಜು ಒಂದು ಜೇನು ನೊಣದ ಒಂದು ತಿಂಗಳ ಬಾಡಿಗೆ  ೨ ಸೆಂಟ್ಸ್‌  ಅಂದರೆ ಅಂದಾಜು ೧೨ ರೂಪಾಯಿ.

ಇದಕ್ಕೆಲ್ಲ ಕಾರಣ ಕ್ಯಾಲಿಫೋರ್ನಿಯಾ ಪ್ರದೇಶದಲ್ಲಿರುವ ಲಕ್ಷಾಂತರ ಎಕರೆ ಬಾದಾಮಿ ತೋಟಗಳು. ಬಾದಾಮಿ ಬೆಳೆಯು ಸಮೃದ್ಧವಾಗಲು ಹೂಗಳು ಅರಳಿದ ಸಮಯದಲ್ಲಿ ಪರಾಗಸ್ಪರ್ಶದ ಪ್ರಮಾಣ ಅಧಿಕವಾದಷ್ಟೂ ಬಂಪರ್‌ಬೆಳೆ. ಮತ್ತು ಬಾದಾಮಿ ಹೂಗಳ ಪರಾಗ ಸ್ಪರ್ಶವಾಗುವುದು 90%  ಗೂ ಹೆಚ್ಚು   ಜೇನುಹುಳುಗಳಿಂದಲೇ.ವಿಶ್ವದ  ಬಾದಾಮಿ ಉತ್ಪಾದನೆಯಲ್ಲಿ ಅಮೇರಿಕಾದ್ದೇ ಸಿಂಹಪಾಲು.  ದಿನದಿಂದ ದಿನಕ್ಕೆ ಬಾದಾಮಿಯ ಬೇಡಿಕೆ ಏರುತ್ತಿರುವಾಗ ಉತ್ಪಾದನೆಯಾಗುತ್ತಿರುವ ಬಾದಾಮಿಯ ಮಾರುಕಟ್ಟೆಯ ಅಗತ್ಯ ಪುರೈಸಲು ಹೆಣ ಗಾಡುತ್ತಿದೆ. ಕಳೆದ ಶತಮಾನದಲ್ಲಿ ಅಮೇರಿಕಾದಲ್ಲಿ ಅದರಲ್ಲೂ ಕ್ಯಾಲಿಫೋರ್ನಿಯಾದಲ್ಲಿ  ಗೋಲ್ಡ್‌ರಷ್‌ ಎಂಬ ಗಳಿಕೆಯ ಕಾಲ ಬಂದಿತ್ತು ಆಗತಾನೆ ಪತ್ತೆಯಾದ ಬಂಗಾರದ ಗಣಿಗಳಲ್ಲಿ  ದುಡಿದು ರಾತ್ರೋರಾತ್ರಿ ಶ್ರೀಮಂತರಾಗಲು ರಾಷ್ಟ್ರದ ಎಲ್ಲ ಕಡೆಯಿಂದ ಜನ ಅಲ್ಲಿಗೆ ಧಾವಿಸಿದ್ದರು.ಆಗ ಯಾವುದೇ ನಿಯಂತ್ರಣವಿರಲಿಲ್ಲ. ಸಿಕ್ಕವರಿಗೆ ಸೀರುಂಡೆ. ಒಂದು ರೀತಿಯಲ್ಲಿ ಈಗ ಅದೇ ಪರಿಸ್ಥಿತಿ. ಆದರೆ ಬಾದಾಮಿ ಗಿಡಬೆಳೆಯಬೇಕು. ಅದರ ಹೂಗಳ ಪರಾಗಸ್ಪರ್ಶಕ್ಕಾಗಿ ಜೇನುಹುಳ ಸಾಕ ಬೇಕು. ಅದಕ್ಕೇ ಈ ಪಾಟಿ ಜೇನುಹುಳಕ್ಕೆ ಬೇಡಿಕೆ.
ಇದಕ್ಕೆ ಕಾರಣ ಕ್ಯಾಲಿಫೋರ್ನಿಯಾದಲ್ಲಿನ ಬಾದಾಮಿ ತೋಟಗಳು  ಆ ಹಂಗಾಮಿನಲ್ಲಿ ಹೂವು ಬಿಡುತ್ತವೆ. ಮತ್ತು ಬಾದಾಮಿಯ ಹೂಗಳು ಫಲಭರಿತವಾಗ ಬೇಕಾದರೆ ನಡೆಯುವ ಪರಾಗಸ್ಪರ್ಶದ ಕಾರ್ಯವನ್ನು ೯೦% ಜೇನು ಹುಳುಗಳೇ ನಿರ್ವಹಿಸುತ್ತವೆ.
ಕ್ಯಾಲಿಫೋರ್ನಿಯಾದಲ್ಲಿ  ವಿಶ್ವದಲ್ಲಿನ 82% ಬಾದಾಮಿ ಉತ್ಪಾದನೆಯಾಗುತ್ತದೆ. ಅಲ್ಲಿ ಸುಮಾರು 800,000  ಎಕರೆ ಬೂಮಿಯಲ್ಲಿ ಬಾದಾಮಿ ಬೆಳೆಯಲಾಗುತ್ತಿದೆ.ಕ್ಯಾಲಿಫೋರ್ನಿಯಾದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಹರಡಿರುವ 400 ಮೈಲುಉದ್ದದ ಪಟ್ಟಿಯಲ್ಲಿ  ಎಲ್ಲಿನೋಡಿದರೂ ಬರೀ ಬಾದಾಮಿಯ ಮರಗಳ ತೋಟ. ಅದೂ ಚಿಕ್ಕಪುಟ್ಟ ಹಿಡುವಳಿಗಳು ಅಲ್ಲ.  ತೋಟದ ಸರಾಸರಿ ವಿಸ್ತೀರ್ಣವೇ ಸುಮಾರು  97 ಎಕರೆ. ನೂರಾರು ಅದಕ್ಕೂ ಬೃಹತ್‌ ತೋಟಗಳೂಇವೆ. ಅವುಗಳ ವಿಸ್ತಿರ್ಣ 500   ಎಕರೆಯಷ್ಟು. ಅಲ್ಲಿ ಎಲ್ಲ ಯಾಂತ್ರೀಕೃತ ಕೃಷಿ. ಕೆಲವು ಕಡೆ ಕಾಂಪ್ಯೂಟರೀಕೃತ ಕೆಲಸಗಳು ಸರ್ವೇ ಸಾಮಾನ್ಯ. ಎಲ್ಲ ಕಡೆ ಹನಿನೀರಾವರಿ ಅಳವಡಿಸಲಾಗಿರುತ್ತದೆ. ಪರಿಣಾಮ ಆಧುನಿಕ ಯಂತ್ರೋಪಕರಣಗಳ ಬಳಕೆ ಅಧಿಕವಾಗಿರುವುದು.ಗೊಬ್ಬರ ಮತ್ತು ಕೀಟನಾಶಕಗಳನ್ನು ಹಾಕಲು ಹೆಲಿಕಾಪ್ಟರ್‌  ಬಳಸುತ್ತಾರೆ.
 ಈ ತೋಟಗಳ ನಿರ್ವಹಣೆಯಲ್ಲಿ ಕ್ಯಾಲಿಫೋರ್ನಿಯಾದಲ್ಲಿ  ಬಾದಾಮಿ ಮಂಡಳಿಯದು ಮಹತ್ವದ ಪಾತ್ರವಿದೆ. ಜಮೀನಿನ ಮಣ್ಣು ಪರೀಕ್ಷೆಯಿಂದ ಹಿಡಿದು ಬೀಜ , ಗೊಬ್ಬರ , ಇಳುವರಿ, ಸಂಗ್ರಹಣೆ, ಸಾಗಣಿಕೆ ಮತ್ತು ಮಾರಾಟದ ವರೆಗ ಎಲ್ಲದರಲ್ಲೂ ಮಾರ್ಗದರ್ಶನ ನೀಡುತ್ತದೆ. ಅದು ಮಣ್ಣು ಪರೀಕ್ಷೆಯಿಂದ ಹಿಡಿದು ಬೀಜ ಗೊಬ್ಬರ, ಬಿತ್ತನೆ ಇಳುವರಿ , ಸಂಗ್ರಹಣೆ ಮಾರಾಟ, ಎಲ್ಲದರಲ್ಲೂ ಸಂಶೋಧನೆಯ ಫಲಿತಾಂಶಗಳ ಪ್ರಕಾರ ರೈತರಿಗೆ  ಉಪಯುಕ್ತವಾದ ಮಾಹಿತಿ ನೀಡುತ್ತದೆ,
ಎಲ್ಲಕ್ಕಿಂತ ಹೆಚ್ಚಾಗಿ ಹೊಸ ಹೊಸ ತಳಿಗಳ ಸಂಶೋಧನೆಗೆ ವಿಶೇಷ ಪ್ರಯೋಗಾಲಯಗಳೂ ನಿರತವಾಗಿವೆ.
 ಸ್ಪೇನ್‌  ಬಾದಾಮಿ ಉತ್ಪಾದನೆಯಲ್ಲಿ   ವಿಶ್ವದಲ್ಲಿಎರಡನೆಯ ಸ್ಥಾನದಲ್ಲಿದೆ.  ಅದರ ಪಾಲು ೧೭%. ಅಲ್ಲಿ ಅಮೇರಿಕಾಕ್ಕಿಂತ ಮೂರುಪಟ್ಟು  ಕೃಷಿಭೂಮಿಯಲ್ಲಿ ಬಾದಾಮಿ ಬೆಳೆಯುತ್ತಾರೆ. ಸ್ಪೇನನಲ್ಲಿ ಚಿಕ್ಕ ಹಿಡುವಳಿದಾರು.ಮಳೆಆಧಾರಿತ ಬೇಸಾಯ ಮತ್ತು ಮಾನವ ಶಕ್ತಿ ಆಧಾರಿತ ಕೃಷಿ ಕಾರ್ಯ ನಿರ್ವಹಣೆ. ಮತ್ತು ಸಾಂಪ್ರದಾಯಿಕ ಪದ್ದತಿಯ ಕೃಷಿ. ಅದರಿಂದ ಇಳುವರಿ ಕಡಿಮೆ.ಯುರೋಪು ಹಾಗು ಇತರೆ ದೇಶಗಳು ಅಲ್ಪ ಸ್ವಲ್ಪ ಬಾದಾಮಿ ಬೆಳೆ ಮಾಡುತ್ತವೆ..
ಸ್ಪೇನ್‌ ಮತ್ತು  ಯುರೋಪು ಬಾದಾಮಿ ಬೀಜಗಳ ದೊಡ್ಡಗ್ರಾಹಕರು. ಚೀನಾ  ಮತ್ತು ಹಾಂಕಾಂಗ್‌ಗೆ   ೬೪೨ ಮಿಲಿಯನ್‌ ಡಾಲರ್‌ ಮತ್ತು  ಭಾರತಕ್ಕೆ  ೩೧೨ಮಿಲಿಯನ್‌ ಇಡೀ ಬದಾಮಿ ರಫ್ತಾಗುತ್ತವೆ. ಅಲ್ಲಿ ಕಡಿಮೆ ಕೂಲಿ ಇರುವುದರಿಂದ ಅವರು ಕಚ್ಚಾ ಬಾದಾಮಿಯ ಸಿಪ್ಪೆ ತೆಗೆದು ಅದರಿಂದ ವಿವಿಧ ಉತ್ಪನ್ನಗಳನ್ನುತಯಾರಿಸುವರು  ಮೌಲ್ಯವರ್ಧಿತ ಉತ್ಪನ್ನಗಳ ರಫ್ತಿನಿಂದ ಉತ್ತಮಲಾಭ ದೊರೆಯುತ್ತದೆ. ಅದಕ್ಕೆ ಸ್ಥಳಿಯ ಬೇಡಿಕೆಯೂ ಹೆಚ್ಚು. ಇದು ಸೌಂದರ್ಯವರ್ಧಕಗಳಲ್ಲಿ ಮತ್ತು ಔಷಧಿಗ ವಲಯದಲ್ಲೂ ಬೇಡಿಕೆ ಹೆಚ್ಚಿದೆ..ಬಾದಾಮಿಯಂತೂ ಬಹು ಬೇಡಿಕೆಯ ಡ್ರೈ ಫ್ರೂಟ್‌. ಅದು ವೈಭವೋಪೇತ ಆಹಾರದಲ್ಲಿನ ವಿಭಾಜ್ಯ ಅಂಗ. ಅದರ ಔಷಧಿಯ ಗುಣವೂ  ಬೇಡಿಕೆ ಹೆಚ್ಚಲು ಕಾರಣ. ವಿವಿಧ ಖಾದ್ಯ ತಯಾರಿಕೆಯಲ್ಲಿ ಅದರ ಬಳಕೆ ಮಾಡಿದರೆ  ರುಚಿಯ ಮೌಲ್ಯ ಹೆಚ್ಚುವುದು. ಆಹಾರ ಮತ್ತು ಪಾನೀಯ ಗಳಲ್ಲಿ ಬಾದಾಮಿಯ ಅಂಶ ಆರೋಗ್ಯ ವರ್ಧಕ ಮತ್ತು ಪುಷ್ಟಿದಾಯಕ . ಈ ಎಲ್ಲ ಗುಣಗಳಿಂದ ಅದಕ್ಕೆ ವಿಶ್ವಾದ್ಯಂತ ಬೇಡಿಕೆ  ಇದೆ..ನಾವು ಕುಡಿಯುವ ಬಾದಾಮಿಹಾಲು, ತಿನ್ನುವ ಖಾರ ಹಚ್ಚಿ ಹುರಿದ ಬಾದಾಮಿ, ಸಿಹಿತಿಂಡಿಯಲ್ಲಿ ಹಾಕುವ ಬಾದಾಮಿ ಚೂರುಗಳನ್ನು  ತಿನ್ನುವಾಗ ಅದು ಅಮೇರಿಕಾದಿಂದ ಬಂದಿರುವುದು ಎಂಬ ಅರಿವು ಬಹುತೇಕ ನಮಗಿರುವದೇಇಲ್ಲ. ಅಮೇರಿಕಾದ ಏಕಸ್ವಾಮ್ಯತೆ ಅಷ್ಟರಮಟ್ಟಿಗಿದೆ ಬಾದಾಮಿ ಬೆಳೆಯಲ್ಲಿ
 ಅಮೇರಿಕಾದ ಕ್ಯಾಲಿಫೋರ್ನಿಯಾ ರಾಜ್ಯ.ಈ ವರ್ಷ ಜೇನುಹುಳಿಗಳಿಗೆ ಬೇಡಿಕೆ ಹೆಚ್ಚಾಗಲು ಮುಖ್ಯಕಾರಣ ಬಾದಾಮಿ ಬೆಳೆಯ ಭೂಪ್ರದೇಶವನ್ನು ಒಂದೂವರೆ ಪಟ್ಟು ಹೆಚ್ಚಿಸಿರುವುದು. ಎರಡನೆಯದಾಗಿ ಜೇನುಹುಳಗಳ ಸಂಖ್ಯೆಯು ಕಡಿಮೆಯಾಗಿರುವುದು. ಮಂಜು ಮುಸುಕಿದ ವಾತಾವರಣ, ಅತಿಯಾದ ಚಳಿ, ಅಕಾಲ ಮಳೆ ಹೆಚ್ಚಿನಪ್ರಮಾಣದ ಜೇನುನೊಣಗಳ ಸಾವಿಗೆ ಕಾರಣ ವಾಗಿವೆ. ಅಲ್ಲದೆ ಈ ಹಿಂದೆ ಆಷ್ಟ್ರೇಲಿಯಾದಿಂದ ಆಮದು ಮಾಡಿಕೊಳ್ಳುತಿದ್ದ ಜೇನು ಹುಳುಗಳು ಸೋಂಕು ರೋಗ ಹರಡುವ ಶಂಕೆಯಿಂದ  ಅವುಗಳ ಆಮದನ್ನು ನಿಷೇಧಿಸಲಾಗಿದೆ. ಇದರ ಪರಿಣಾಮ ಅಮೇರಿಕಾದ ಬಹುತೇಕ ಎಲ್ಲ ರಾಜ್ಯಗಳಿಂದಲೂ ಜೇನು ಸಾಕಣೆದಾರರು ಇಲ್ಲಿಗೆ ತಮ್ಮ ಜೇನುಗೂಡುಗಳನ್ನು ತರುತಿದ್ದಾರೆ. ಈಗ ಜೇನು ಹುಳಗಳದೇ ಒಂದು ಬೃಹತ್‌  ಜಾತ್ರೆ ಅಲ್ಲಿ ಸೇರಲಿದೆ..ವೈಜ್ಞಾನಿಕವಾಗಿ ಜೇನು ಹುಳ ಸಾಕಣೆ ಮಾಡುವುದರಲ್ಲಿ ತರಬೇತಿ ಕೊಡಲು ಸಂಸ್ಥೆಗಳು ತಲೆ ಎತ್ತಿವೆ ತೋಟಗಾರರು ಮತ್ತು ಜೇನುಗೂಡು ಸರಬರಾಜು ಮಾಡುವವರ ಸಂಪರ್ಕ ಸಾಧಿಸುವ ಸಂಸ್ಥೆಗಳು  ಉತ್ತಮ ವ್ಯವಹಾರ ಮಾಡುತ್ತಿವೆ. ಇದೂ ಅಲ್ಲದೆ ಅನೇಕ ಜೇನುಹುಳು ಸಾಕಣೆದಾರರು ತೋಟಗಾರರೊಂದಿಗೆ ಒಂದು ರೀತಿಯಲ್ಲಿ ವಿಶ್ವಾಸ ಬೆಳಸಿಕೊಂಡು ಪ್ರತಿವರ್ಷ ತಪ್ಪದೇ ಅಲ್ಲಿಗೇ ತಮ್ಮ ಜೇನುಪೆಟ್ಟಿಗೆಗಳನ್ನು ತರುತ್ತಾರೆ.ಜೇನುಹುಳು ಸಾಕಣೆಗೆ ಅಗತ್ಯವಾದ ಉಪಕರಣಗಳು, ಆಹಾರ, ಔಷಧಿ ಮತ್ತು ರಾಣಿ ಜೇನುಗಳನ್ನು ಒದಗಿಸುವ ಕಂಪನಿಗಳೂ ಇವೆ. ಇವುಗಳೆಲ್ಲದರ ಜೊತೆ ಜೇನು ಪೆಟ್ಟಿಗೆ ಗಳನ್ನು ಸುಗಮವಾಗಿ ಸಾಗಿಸುವ  ಉದ್ಯಮವೂ ದೊಡ್ಡದಾಗಿಯೇ ಬೆಳೆದಿದೆ. ಅದಕ್ಕಾಗಿ ವಿಶೇಷ ವಾಹನಗಳನ್ನೇ ಬಳಸಲಾಗುತ್ತದೆ.  ಜೇನು ಹುಳುಗಳಿಗೆ ಇಷ್ಟೊಂದು ಬೇಡಿಕೆ ಇದ್ದು ಅದಕ್ಕಾಗಿ ಉತ್ತಮ ಬೆಲೆ ಕೊಡುತ್ತಿರುವಾಗ ಅವುಗಳ ಗುಣ ಮಟ್ಟದ ಕುರಿತು ಖಾತ್ರಿ ಬೇಡುವುದು ಸಹಜ. ಹಾಗಾಗಿ ಒಂದು ನಿಗದಿತ ಅಳತೆಯ ಪೆಟ್ಟಿಗೆಯಲ್ಲಿ ಇರಬೆಕಾದ ಜೇನುಹುಳಗಳ ಸಂಖ್ಯೆಯನ್ನೂ  ನಿರ್ವಹಿಸುವರು. ಅಕಸ್ಮಾತ್‌ ಕಡಿಮೆ ಇದ್ದರೆ ಬೇರೊಂದು ಕಡೆಯಿಂದ ತಂದು ಸರಿದೂಗಿಸುತ್ತಾರೆ.
ಜೇನಿಗಿಂತ ಸಿಹಿ ಬೇರೆ ಇಲ್ಲ   ನಿಜ,   ಆದರೆ ಜೇನುಹುಳುಗಳ ಹಾರಾಟಕ್ಕಿಂತ  ಹೆಚ್ಚಿನ ಖುಷಿ   ರೈತರಿಗೆ ಬೇರೆ ಇಲ್ಲ..ಅವುಗಳ ಹಾರಾಟ ಅಧಿಕವಾದಷ್ಟೂ ಬಾದಾಮಿ ಫಸಲು ಹೆಚ್ಚುವುದು . ಬೆಳೆಗಾರನ ಮುಖದಲ್ಲಿ ನಗು ಮೊಳಗುವುದು.


No comments:

Post a Comment