Thursday, October 23, 2014

ಆಟೋ ರಾಜನ ಸದ್ದಿಲ್ಲದ ಸೇವೆ



 ರಾತ್ರಿ ಹನ್ನೊಂದರ ಸಮಯ  ಕೆಂಪೇಗೌಡ ನಗರದಲ್ಲಿನ ತುಂಬು ಗರ್ಭಿಣಿ ಯುವತಿಗೆ ಹೆರಿಗೆ ನೋವು ಪ್ರಾರಂಭವಾಯಿತು. ಆಸ್ಪತ್ರೆಗೆ ಫೋನುಮಾಡಿ ಆಂಬ್ಯಲೆನ್ಸ ಕಳುಹಿಸಲು ಕೇಳಿದರೆ ಪ್ರತಿಕ್ರಿಯೆ ಇಲ್ಲ.  ಮತ್ತೆ ಮತ್ತೆ ಫೋನು ಮಾಡಿದರೆ  ಡ್ರೈವರ್ ಇಲ್ಲ ಎಂಬ ಉತ್ತರ. ಬೇರೆ ಕಡೆ ಮಾಡಿದರೂ ಪ್ರತಿಕ್ರಿಯೆ ಇಲ್ಲ.ಅಪರಾತ್ರಿ ಹೊತ್ತಿನಲ್ಲಿ ಟ್ಯಾಕ್ಸಿಯೂ ಸಿಗದು.  ಆಗ ಆಸ್ಪತ್ರೆಯಲ್ಲಿನ ನರ್ಸ .” ಆಟೋರಾಜನಿಗೆ ಫೋನು ಮಾಡಿ’ ಎಂದು ಹೇಳಿ ಅವನ ದೂರವಾಣಿ ಸಂಖ್ಯೆ ನೀಡಿದರು . ಕರೆ ಮಾಡಿದ ಐದು ನಿಮಿಷದಲ್ಲಿಯೇ ಮನೆ ಮುಂದೆ ಆಟೋ ಹಾಜರು. ತುಂಬು ಗರ್ಭಿಣಿಗೆ ತುಸುವೂ ತೊಂದರೆ ಯಾಗದಂತೆ ಆಸ್ಪತ್ರೆ ತಲುಪಿಸಿಸದ. ಎಷ್ಟು ಚಾರ್ಜ ಎಂದರೆ ಏನೂ ಕೊಡ ಬೇಡಿ. ಗರ್ಭಿಣಿಯರಿಗೆ  ಉಚಿತ ಸೇವೆ  ಎಂದ.

ಈ ರೀತಿ ಗರ್ಭಿಣಿಯರಿಗೆ,  ವೃದ್ಧರಾದ ರೋಗಿಗಳಿಗೆ  ಮತ್ತು ಅಫಘಾತಕ್ಕೆ ಈಡಾಗಿರುವವರಿಗೆ ಈ ಉಚಿತ ಸೇವೆ ಸಲ್ಲಿಸುತ್ತಿರವವನು ಯಾವುದೇ ಸೇವಾ ಸಂಸ್ಥೆಗೆ ಸೇರದವರಲ್ಲ. ನಮ್ಮ ನಿಮ್ಮಂತೆ ಸಾಧಾರಣ ವ್ಯಕ್ತಿ.ಹೆಸರಿನ ಹಂಬಲವಿಲ್ಲದ, ಹಣದ ಆಮಿಷವಿಲ್ಲದ ಶ್ರೀಸಾಮಾನ್ಯ. ದಿನದ  ದುಡಿಮೆಯಿಂದ ಹೊಟ್ಟೆ ಹೊರೆಯುವ ಆಟೋ ಚಾಲಕ. ಆಕಾಶ ನೋಡಲು ನೂಕು ನುಗ್ಗಲು ಏಕೆ ಎಂಬ ಮಾತಿನಂತೆ  ತನ್ನ ಪರಿಮಿತಿಯಲ್ಲಿಯೇ ಸಮಾಜ ಸೇವೆ ಸಲ್ಲಿಸುತ್ತಿರುವ  ಅನನ್ಯ ಆಟೋಚಾಲಕ ರಾಜುವಿನ  ಈ ಸೇವೆ ಕಳೆದ ೧೫ ವರ್ಷಗಳಿಂದ ತಡೆಯಿಲ್ಲದೇ ಸಾಗಿದೆ.
ಆಕಾಶ ನೋಡಲು ನೂಕುನುಗ್ಗಲು ಏಕೆ ಎಂಬ ಮಾತಿದೆ. ಸಮಾಜಸೇವೆ ಮಾಡಲು ಹಿರಿಯ ಹುದ್ದೆ ಬೇಕಿಲ್ಲ. ಸಂಘ ಸಂಸ್ಥೆಗಳ ಅಗತ್ಯವಿಲ್ಲ ಮನವೊಂದಿದ್ದರೆ ಸಾಕು. ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ ರಾಜಾ.
ಆಟೋ ಎಂದರೆ ಕೆರೆದಲ್ಲಿಗೆ ಬಾರದೇ, ಅವರು ಹೋಗುವಲ್ಲಿಗೆ ಪ್ರಯಾಣಿಕರನ್ನು ಹತ್ತಿಸಿ ಕೊಳ್ಳುವವರು ಹಲವರಾದರೆ, ಮೀಟರ್‌ಜಂಪ್‌ಆಗುವ ದೂರಿಗೆ ಕಾರಣ ಕೆಲವರು. ಒಂದಕ್ಕೆ ಎರಡು ಪಟ್ಟು ಹಣ ಕೇಳುವವರು  ಇಲ್ಲದಿಲ್ಲ. ನಯ ವಿನಯವಿಲ್ಲದ ನಡೆ ನುಡಿಯಂತೂ ಸರ್ವೇ ಸಾಮಾನ್ಯ.ಹೊಸಬರಾದರೆ ಸುಲಿಗೆಗಂತೂ ಕೊನೆಯಿಲ್ಲ. ನಸುಕಿನಲ್ಲಿ ಬೆಂಗಳೂರಿನ ರೈಲು ನಿಲ್ದಾಣದಿಂದ ಪಕ್ಕದಲ್ಲಿರುವ ತೋಟದಪ್ಪನ ಛತ್ರಕ್ಕೆ ಹೋಗಲು ಊರೆಲ್ಲ ಸುತ್ತಿಸಿ ನೂರಾರು ರೂಪಾಯಿ ಕಿತ್ತ ಘಟನೆಯಂತೂ ಹಿಂದೆ ಬಹು ಪ್ರಚಲಿತವಿದ್ದ ಜೋಕು.ಕಾರ್ಮುಗಿಲ ನಡುವೆ ಕೋಲ್ಮಿಂಚು, ಹಿಮಾವೃತ ಬೆಟ್ಟದಲ್ಲಿ ಬಿಸಿ ನೀರ ಬುಗ್ಗೆ ಇರುವಾಗ ದೂರುಗಳ ಸಂತೆಯಲ್ಲಿ ನೆರವಿನ ಹಸ್ತ ನೀಡುವ ವ್ಯಕ್ತಿ ಇರುವುದೇಅಸಹಜವಲ್ಲ.ಕಾಂಕ್ರೀಟ್‌ಕಾಡಿನಲ್ಲಿ ಅರಳಿರುವ ಸುಮಧುರ ಪುಷ್ಪ ಮಾನವತೆಯ ಸಂಕೇತ.ಅದೇ ಜೀವನವನ್ನು ಸಹನೀಯವಾಗಿಸುವುದು.
ರಾಜಾ ಹುಟ್ಟಿದ್ದ ಚೆನ್ನಪಟ್ಟಣದ ಹತ್ತಿರದ ಹಳ್ಳಿಯಲ್ಲಾದರೂ ಬೆಳೆದದ್ದೂ ಬೆಂಗಳೂರಿನಲ್ಲಿ.ತಂದೆ ನಿಂಗಯ್ಯ  ಕೃಷಿಕ. ತಾಯಿ ಲಕ್ಷ್ಮಮ್ಮ ಬೆಂಗಳೂರು ಡೈರಿಯಲ್ಲಿ  ಕೆಲಸ.ನರ್ಸ. ರಾಜಾ  ಓದಿದ್ದು ಬರಿ ಏಳನೆತರಗತಿವರೆಗೆ. ಇಂಗ್ಲಿಷ್‌ ಅವನ ಪಾಲಿಗೆ ಕಬ್ಬಿಣದ ಕಡಲೆ. ತಂದೆಗೆ ಹಳ್ಳಿಗೆ  ಮಗ ಬಂದು ಕೃಷಿಕೆಲಸದಲ್ಲಿ ಸಹಾಯ ಮಾಡಲೆಂಬ ಆಶೆ.  ಆದರೆ ಬೆಂಗಳೂರು ಬಿಡಲು ಮನಸ್ಸಿಲ್ಲ. ಹಾಗೂ ಹೀಗೂ ಮಾಡಿ ಹದಿನೆಂಟನೆಯ ವಯಸ್ಸಿಗೆ ಆಟೋ ಕೊಂಡು ಕಾಲಮೇಲೆ ನಿಲ್ಲುವ ಪ್ರಯತ್ನ ಸಾಗಿತು. ಅತ್ತೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ. ಅತ್ತೆಯ  ಜೊತೆ ಆಗಾಗ ಅಸ್ಪತ್ರೆಗೆ ಹೋಗುತಿದ್ದಾಗ ಗಮನಿಸಿದ್ದ ಒಂದು ಅಂಶ ಮನ ತಟ್ಟಿತ್ತು.ಬಡವರಾದ ಹೆಣ್ಣು ಮಕ್ಕಳು , ವಯಸ್ಸಾದ ರೋಗಿಗಳು ಆಸ್ಪತ್ರೆಗೆ  ಬರಲು ಅಲ್ಲಿಂದ ಮನೆಗೆ ಹೋಗಲು ಪಡುವ  ಪಡಿಪಾಟಲು ಮನ ತಟ್ಟಿತು. ಅಟೋ ಚಾಲನೆಗೆ ಇಳಿದಾಗ ಕೈಲಾದ ಸೇವೆ ಸಲ್ಲಿಸ ಬೇಕೆಂಬ ಆಶೆ ಕುಡಿಯೊಡೆಯಿತು. ಆದು ಕ್ಷಣಿಕ ಅನಿಸಿಕೆಯಾಗದೇ ಸತತ ಸ್ಪಂದಿಸುವ  ನಿರ್ಧಾರವಾಯಿತು. ಬೆಂಗಳೂರು ಬಂದ್‌ಆಗಿದ್ದಾಗ ಆಸ್ಪತ್ರೆ ಮುಂದೆ ಫಲಕ ಹಾಕಿ ಸೇವೆಗೆ ಹುರುಪಿನಿಂದ  ನಿಂದ ಸಿದ್ದವಾದ. ಯುವ ಆಟೋ ಚಾಲಕ.pa (...)
. ಈ ಸೇವೆಗೆ  ಪುಟ ಕೊಟ್ಟುದು ಸಹಾಯ ಪಡೆದವರು ಮುಖದಲ್ಲಿ ಮೂಡುತಿದ್ದ ನೆಮ್ಮದಿಯ ಮುಗುಳ್ನಗೆ.ಮನದಾಳದಿಂದ ಸಲ್ಲಿಸುತಿದ್ದ ಅಭಿನಂದನೆ.
ನೋವಿಗೆ ಸ್ಪಂದಿಸಲು ಇಟ್ಟ ಪುಟ್ಟ ಹೆಜ್ಜೆ  ದಿಟ್ಟತನ ತಂದಿತು. ವಿಶೇಷವಾಗಿ ಬಂದ್‌,ಹರತಾಳ ಮೊದಲಾದ ಸಾರ್ವತ್ರಿಕ ಪ್ರತಿಭಟನೆಯ ಸಮಯದಲ್ಲಿ, ಚಳುವಳಿಗಳ ಸಂದರ್ಭದಲ್ಲಿ ಜನ ಸಾಮಾನ್ಯರಿಗೆ ಆಗುವ ತೊಂದರೆಗೆ ಪರಿಹಾರ ನೀಡಬೇಕೆಂಬ ಹಂಬಲದ ಫಲ. ಸರ್ಕಾರಿ ಆಸ್ಪತ್ರೆಗಳ ಮುಂದೆ ಹಾಕಿದ ಫಲಕ. ಮುಷ್ಕರದ ಸಮಯದಲ್ಲಿ ಸಾಮೂಹಿಕ ಸಮಸ್ಯೆಯ ಮುಂದೆ ವೈಯುಕ್ತಿಕ ನೋವು ನಗಣ್ಯ. ಆದರೆ ಸಂಬಂಧಿಸಿದವರಿಗೆ ಅದು ಭರಿಸಲಾರದ ನಷ್ಟ ತೊಂದೊಡ್ಡುವುದು.ಅಕಸ್ಮಾತ್ ಯಾರಾದರೂ ಸಹಾಯ ಮಾಡ ಬಯಸಿದರೂ ಸಂಘಟನೆಯ ಕೆಂಗಣ್ಣಿಗೆ ಗುರಿಯಾಗಿ ಹಲ್ಲೆಗೆ ಒಳಗಾಗುವರು. ಕಣ್ಣುತಪ್ಪಿಸಿ ಗಾಡಿ ಓಡಿಸಿದರೂ ಸಾಮಾನ್ಯರ ಕೈಗೆಟುಕದಷ್ಟು ದುಬಾರಿಯ ಬೇಡಿಕೆ. ಅನಿವಾರ್ಯ ಪರಿಸ್ಥಿತಿಯ ದುರ್ಬಳಕೆ. ಗಾಳಿ ಬಂದಾಗ ತೂರಿಕೊಳ್ಳುವ ದುರ್ಬುದ್ದಿ. ಸಹಜವಾಗಿ ಇದು ಇತರರ ಕಣ್ಣು ಕೆಂಪಾಗಿಸುವುದು. ಆದರೆ ಆಟೋ ರಾಜನ ಗಾಡಿಗೆ ಮಾತ್ರ  ವಿನಾಯ್ತಿ.
ಬೇರೆಲ್ಲ  ಆಟೋಗಳು ಟ್ಯಾಕ್ಸಿಗಳು ಪೂರ್ಣ ವಿಶ್ರಾಂತಿ ಪಡೆಯುವಾಗ ಚಾಲಕರು ತಮ್ಮ ಕುಟುಂಬದವರೊಡನೆ ಸಮಯ ಕಳೆಯುತ್ತಿರುವಾಗ , ಆಟೋ ರಾಜನ ಮೊಬೈಲ್‌ಗೆ ಕರೆಯ ಮೇಲೆ ಕರೆ. ಅತ್ಯವಸರವಿರುವರಿಗ ಆದ್ಯತೆ. ಹುಟ್ಟು ಸಾವಿನ ಹೊಸ್ತಿಲಲ್ಲಿರುವವರ ನೆರವಿಗೆ ಆಟೋ ಓಡುವುದು. ಒಂದುಆಸ್ಪತ್ರೆಯಿಂದ ಇನ್ನೊಂದುಕಡೆ ತಡವಿಲ್ಲದೆ ಹೊರಡುವನು. ಹಾಗೆಂದು ಯಾರೂ ಬಿಟ್ಟಿ ಸೇವೆ ಪಡೆಯುವುದಿಲ್ಲ. ಸಾದ್ಯವಿರುವಷ್ಟು ಹಣ ಕೊಟ್ಟೇ ಕೊಡುವರು.
ಇನ್ನು ಆಟೋ ರಾಜನ ಗಾಡಿ ಗುರುತಿಸುವುದು ಬಹು ಸುಲಭ. ಅದೊಂದು ಕನ್ನಡದ ತೇರು. ಆಟೋದ ಹೊರ ಮತ್ತು ಒಳ ಮೈನಲ್ಲಿ ಇರುವ ಎಲ್ಲ ಜಾಗದಲ್ಲೂ  ಜೀವನ ಪ್ರೀತಿ, ಸಮಾಜ ಮುಖಿ ಮತ್ತು, ಕನ್ನಡ ಪ್ರೇಮಕ್ಕೆ  ಉತ್ತೇಜನ  ನೀಡುವ ಬರಹಗಳು. ಕನ್ನಡದ ಹಿರಿಯ ಸಾಧಕರ ಚಿತ್ರಗಳು.ಜೊತೆಗೆ ಕನ್ನಡದ ಪತ್ರಿಕೆಗಳು ಓದಲು ಲಭ್ಯ. ಆಟೋದಲ್ಲಿ ಕುಳಿತಾಗ ಹೊತ್ತು ಹೋಗುವುದೇ ಗೊತ್ತಾಗುವುದಿಲ್ಲ. ಅಲ್ಲಿರುವುದನ್ನು ಓದಿ ಮುಗಿಸಲು ಸಮಯ ಸಾಲದು. ಆಟೋ ಹತ್ತುವಾಗ ಎಂಥಹ ಧಾವಂತ ಇದ್ದರೂ ಇಳಿಯುವಾಗ ಮನಸ್ಸು ನಿರಾಳವಾಗುವುದು.
ಊರಿಗೆ ಉಪಕಾರಿ ಮನೆಗೆ ಮಾರಿ ಎಂಬ ಅಪವಾದ ಸಾಮಾನ್ಯವಾಗಿ ಎಲ್ಲ ಸಮಾಜ ಸೇವಕರಿಗೂ ತಪ್ಪಿದ್ದಲ್ಲ. ಆದರೆ ಆಟೋರಾಜನದು ಎರಡು ಹೆಣ್ಣು ಮತ್ತು ಒಂದು ಗಂಡು ಮಕ್ಕಳಿರುವ  ಸುಖಿ ಸಂಸಾರ. ಗಂಡನ ಸಮಾಜ ಸೇವೆಯ ನಡೆ ಅರ್ಥ ಮಾಡಿಕೊಂಡಿರುವ ಹೆಂಡತಿ. ತಂದೆಯ ಶ್ರಮಜೀವಿಯಾದರೂ ನಾಲ್ಕು ಜನರಿಗೆ ಬೇಕಾದವನೆಂಬ ಹೆಮ್ಮೆ ಮಕ್ಕಳದು ತಾನು ಓದಲಾಗದಿದ್ದರೂ ಮೂವರೂ ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸುತ್ತಿರುವನು. ಹಿರಿಯ ಮಗಳು ಎಮ ಕಾಂ. ಮಧ್ಯದ ಮಗಳು ಬಿ.ಕಾಂ ಮತ್ತು ಕೊನೆಯ ಮಗ ಪಿಯುಸಿ ಯಲ್ಲಿ ಓದುತ್ತಿರುವನು.ವಿಶೇಷವೆಂದರೆ ಆಟೋರಾಜನ ಒಳ್ಳೆಯತನ ಗುರುತಿಸಿ ವಿದ್ಯಾಸಂಸ್ಥೆಗಳವರು  ಹೆಚ್ಚಿನ ಡೊನೇಷನ್‌ ಇಲ್ಲದೆ ಶಿಕ್ಷಣಕ್ಕೆ ಅವಕಾಶ ನೀಡಿರುವುದನ್ನು ಕೃತಜ್ಞತೆಯಿಂದ ನೆನಸುವನು ಆಟೋ ರಾಜಾ. ಇಷ್ಟೇ ಅಲ್ಲ ಬಡವಾಣೆಯಿಂದ ಹಿಡಿದು ಬೆಂಗಳೂರು ನಗರ ಪಾಲಿಕೆಯ ವರೆಗೆ ಸೇವೆ ಗುರುತಿಸಿ ಪ್ರಶಸ್ತಿ ನೀಡಿ ಸೇವೆಯನ್ನು ಗೌರವಿಸಿರುವರು. ರಾಜ್ಯೋತ್ಸವ ಪ್ರಶಸ್ತಿಯೂ ಸಂದಿದೆ.  ಅದಕ್ಕು ಮಿಗಿಲಾಇ ಪೋಲೀಸ್‌ ಇಲಾಖೆಯೂ ಸಾರ್ಥಕ ಸೇವೆಯನ್ನು ಗುರುತಿಸಿದೆ. ಎಲ್ಲಿಯೇ ಅಪಘಾತವಾಗಿಯಾವುದೇ ವಾಹನ ಸಿಗದಿದ್ದರೆ ಆಟೋ ರಾಜನಿಗೆ ಕರೆ ಮಾಡುವರು.  ಈ ಆಟೋಗೆ ಆಂಬ್ಯುಲೆನ್ಸಗಿರುವ  ವಿಶೇಷ ಸೌಲಭ್ಯ ನೀಡಿರುವರು. ಈವರೆಗೆ ಒಂದೇ ಒಂದು ಸಂಚಾರಿ ನಿಯಮ ಉಲ್ಲಂಘನೆಯ ಕೇಸೂ  ಇಲ್ಲ. ಆರಕ್ಷಕರಿಂದ ಯಾವುದೇ ಕಿರಿ ಕಿರಿ ಇಲ್ಲ.
ಇವರ ಸೇವೆಯ ಫಲವಾಗಿ ಇವರ ಅಟೋ  ಅನೇಕ ಅನುಕೂಲಸ್ಥರಿಗೆ  ಅಚ್ಚು ಮೆಚ್ಚು. ಹಲವರು ಹೆಚ್ಚಿನ ಹಣ  ಅಥವ ಅಮೂಲ್ಯ ವಸ್ತುಗಳನ್ನು ಕೊಂಡಯ್ಯುವಾಗ ಪೋನು ಮಾಡಿ ಕರೆಸಿಕೊಳ್ಳುವರು. ಕೈ ತುಂಬ ಹಣ ನೀಡುವರು.ಇತರರೂ ಅಷ್ಟೇ ವಿಷಯ ತಿಳಿದ ಮೇಲೆ ಮೀಟರ್‌ಗಿಂತ ಅಧಿಕ ಹಣ ನೀಡಿ ಸೇವೆಗೆ ತಮ್ಮ ಕಿರು ಕಾಣಿಕೆಯೂ ಇರಲಿ ಎನ್ನುವರು.ಸಮಾಜ ಸೇವೆ ಎಂದರೆ ಸಾಮಾನ್ಯವಾಗಿ ಮೂಗು ಮುರಿಯುವ ಕಾಲೇಜು ಹುಡುಗರೂ ಆಟೋ ರಾಜನನ್ನು ನಕಂಡರೆ ಆಸಕ್ತಿಯಿಂದ ಮುತ್ತುವರು
ಈ ಸೇವಾ ಪ್ರವೃತ್ತಿಯನ್ನು ಭಾಷಾ ಬೇಧವಿಲ್ಲದೇ ಎಲ್ಲ ಪತ್ರಿಕೆಯವರೂ ಪ್ರಚಾರ ನೀಡಿರುವರು. ಜನಪ್ರತಿನಿಧಿಗಳೂ ಕೂಡಾ ಯಾವುದೇ ಸಂಕೋಚವಿಲ್ಲದೆ ಹೆಗಲ ಮೇಲೆ ಕೈ ಹಾಕಿ ಫೊಟೋ ತೆಗೆಸಿಕೊಂಡು ಸಂಭ್ರಮಿಸಿರುವರು. ನೂರಾರು ಪ್ರಶಸ್ತಿ, ಪುರಸ್ಕಾರ, ಪಡೆದರೂ ಕೂಡಾ ತಲೆ ತಿರುಗಿಲ್ಲ. ಬೆಳಗ್ಗೆ ಯಥಾ ರೀತಿ ಕಾಖಿ ಸಮವಸ್ತ್ರ ಧರಿಸಿಕೆಲಸಕ್ಕೆ ಹಾಜರು. ತೊಂದರೆಯಲ್ಲಿರುವ ಯಾವುದೇ ಪ್ರಯಾಣಿಕರಿದ್ದರೂ ಹಿಂದೆ ಮುಂದೆ ನೋಡದೇ ಧಾವಿಸಿ ವೈದ್ಯಕೀಯ ಸೌಲಭ್ಯ ದೊರಕಿಸುವ ತವಕ. ಅದಕ್ಕೆಂದೇ ಕೆಂಪೆಗೌಡ ಬಡಾವಣೆಯ ಸರ್ಕಾರಿ ಹೆರಿಗೆ ಅಸ್ಪತ್ರೆಯಲ್ಲಿ ಇವರ ಸೇವೆ ಕುರಿತ ಫಲಕ ಪ್ರದರ್ಶಿತವಾಗಿದೆ. ಸಾಮಾನ್ಯವಾಗಿ ಎಲ್ಲ ಸಂಚಾರಿ ಪೋಲೀಸರಿಗೆ ಇವರು ಚಿರಪರಿಚಿತರು. ಹನುಮಂತನಗರ ಬಡಾವಣೆಯಲ್ಲಿ ಪುಟ್ಟ ಮನೆಯಲ್ಲಿ ನೆಮ್ಮದಿಯ ಜೀವನ ನಡೆಸುತ್ತಿರುವ ಅಟೋ ರಾಜ ವಿರಳಾತಿವಿರಳ ಸಮಾಜ ಸೇವಕರಲ್ಲಿ ಒಬ್ಬರು. ನೋವಿನಲ್ಲಿದ್ದಾಗ ನೆರವಿಗೆ ಧಾವಿಸಿ ಪ್ರಾಣ ಉಳಿಸಿದ ಉಪಕಾರಿಯ ನೆನಪಿಗೆ ಹಲವರು ಹುಟ್ಟಿದ ತಮ್ಮ ಮಗುವಿಗೆ ’ರಾಜ” ಎಂದು ಹೆಸರಿಟ್ಟು ತಮ್ಮ ಕೃತಜ್ಞತೆ ಸಲ್ಲಿಸಿರುವರು. ಈ ಸಜೀವ ಸ್ಮಾರಕಗಳೇ ಸಾರ್ಥಕ ಸೇವೆಗೆ ಸಂದ ನೆನಪಿನ ಕಾಣಿಕೆಗಳು!”












No comments:

Post a Comment