Sunday, October 26, 2014

ಬಿಸಿಲ ನಾಡಿನಲ್ಲಿ ಹೊಸ ಶಿಕ್ಷಣದ ಹರಿಕಾರ - ಜೀವನ ರೆಡ್ಡಿ




ಕಲಬುರ್ಗಿಯ ಗ್ರಾಮೀಣ ನೆಲದಲ್ಲಿ ಶಿಕ್ಷಣ ಪುಷ್ಪ ಅರಳಿಸುತ್ತಿರುವ ಸಾಧಕ- ಜೀವನ ರೆಡ್ಡಿ





ಹೈದ್ರಾಬಾದ ಕರ್ನಾಟಕವೆಂದರೆ ಹಿಂದುಳಿದ ಪ್ರದೇಶ ಎಂಬುದು ಸಾರ್ವತ್ರಿಕ ಭಾವನೆ ಬಹುಮಟ್ಟಿಗೆ ಸತ್ಯ. ಅದಕ್ಕೆಂದೇ ಅದಕ್ಕೀಗ ವಿಶೇಷ ಸ್ಥಾನಮಾನ ಸಿಕ್ಕಿದೆ.ಮೂರು ದಶಕಗಳ ಹಿಂದೆ ಕಲುಬುರ್ಗಿ ಜಿಲ್ಲೆಯ ಕಮಲಾಪುರದಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡುವಾಗ ದಿನಪತ್ರಿಕೆ ಪಡೆಯಲು ಸಂಜೆ ತನಕ ಕಾಯ್ದ ಅನುಭವ ಇನ್ನೂ ಹಸಿಯಾಗಿದೆ.ಇಂಗ್ಲಿಷ್‌ ಅಂತೂ ನಿಜಕ್ಕೂ ಅಲ್ಲಿ ವಿದೇಶಿಭಾಷೆ.ಸಾಧಾರಣವಾಗಿ ಎಸ್‌.ಎಸ್‌.ಎಲ್‌.ಸಿ ಮತ್ತು ಪಿಯುಸಿ ಫಲಿತಾಂಶ ಪಟ್ಟಿಯಲ್ಲಿ ಆ ಪ್ರದೇಶದ ಜಿಲ್ಲೆಗಳು ಕೊನೆಯ ಸ್ಥಾನಕ್ಕೆ ಪೈಪೋಟಿ ಮಾಡಿದ್ದೆ ಹೆಚ್ಚು. ಅಲ್ಲಿಗೆ ಹಳೆ ಮೈಸೂರುಪ್ರದೇಶದಿಂದ ವರ್ಗವಾದವರು ಅದನ್ನೊಂದು ವನವಾಸವೆಂದ ಭಾವಿಸಿ ಅಲ್ಲಿಂದ ಹೋಗಲು ಇನ್ನಿಲ್ಲದ ಪ್ರಯತ್ನ ಮಾಡುವರು ಇಲ್ಲಿನ ಜನರ ಪ್ರೀತಿ ವಿಶ್ವಾಸ, ಸಹೃದಯತೆ ಎಲ್ಲಿಯೂ ಕಾಣದ್ದು ಆದರೆ ಇಲ್ಲಿನ ಶಿಕ್ಷಣದ ಗುಣ ಮಟ್ಟ ಬಹಳ ಕಡಿಮೆ..
ಮೂರು ದಶಕಗಳ ನಂತರ ಕಾರ್ಯಾಗಾರ ಒಂದಕ್ಕೆ ಸಂಪನ್ಮೂಲವ್ಯಕ್ತಿಯಾಗಿ ಗುಲಬರ್ಗ ವಿಶ್ವ ವಿದ್ಯಾಲಯಕ್ಕೆ ಹೋದಾಗ  ರಸ್ತೆಗಳು ಕಟ್ಟಡಗಳು ಭವ್ಯವಾಗಿದ್ದರೂ ಶಿಕ್ಷಣಗುಣಮಟ್ಟ ಎಂದಿನಂತೇ ಎಂದು ಕಂಡು ಬಂದಿತು. ಕಮಲಾಪುರದಲ್ಲಿ ಸಹೋದ್ಯೋಗಿಯಾಗಿದವರು ನನ್ನ ಬರವನ್ನು ಅರಿತು ತಮ್ಮ ಮನೆಗೆ ಬಂದೇ ತೀರಬೇಕೆಂದು ಒತ್ತಾಯ ಮಾಡಿದರು. ಇದ್ದಲ್ಲಿಗೇ ಕಾರು ಮಗಳೊಡನೆ ಕಳುಹಿಸಿ ಕೆಲ ಗಂಟೆಯ ಮಟ್ಟಿಗಾದರೂ ಬಂದು ಹೋಗಿ ಎಂದರು. ಅವರ ಪ್ರೀತಿಗೆ ಕಟ್ಟು ಬಿದ್ದು



ಮಧ್ಯಾಹ್ನದ ಮೇಲೆ ಹೊರಟೆ.ಸಂಜೆ ನಾಲ್ಕರ ಹೊತ್ತಿಗೆ ಕಮಲಾಪುರ ತಲುಪಿದ್ದಾಯಿತು.ಚಿಕ್ಕ ಗ್ರಾಮವಾಗಿದ್ದ  ಊರು ಪುಟ್ಟ ಪಟ್ಟಣವಾಗಿ ಬದಲಾಗಿತ್ತು. ಜನಸಂಖ್ಯೆ ದ್ವಿಗುಣವಾಗಿತ್ತು. ಕಾರಣ ಕಾರಂಜ ಯೋಜನೆಯಲ್ಲಿ ಮುಳುಗಡೆಯಾಗಿದ್ದ ಎರಡು ಹಳ್ಳಿಗಳಜನರಿಗೂ ಇಲ್ಲಿ ಪುನರ್‌ವಸತಿ ಕಲ್ಪಿಸಲಾಗಿತ್ತು. ನಾನು ಹಿಂದೆ ಇದ್ದಾಗ ಇದ್ದುದು ಒಂದೇ ಪದವಿಪೂರ್ವ ಕಾಲೇಜಿಗೆ ಸೇರಿಕೊಂಡಿದ್ದ ಪ್ರೌಢಶಾಲೆ. ಈಗ ನೋಡಿದರೆ ನಾಲ್ಕುಪ್ರೌಢಶಾಲೆಗಳು ತಲೆ ಎತ್ತಿದ್ದವು.ಆ ಮಾತು ಈ ಮಾತು ಆಡುತ್ತಾ ಜೀವನ ರೆಡ್ಡಿಯವರದೂ ಒಂದು ಪ್ರೌಢ ಶಾಲೆ ಇದೆ ಎಂದು ತಿಳಿಯಿತು. ಕಾರು ಮನೆಯ ಮುಂದೆಬಂದು ನಿಂತಾಗ  ತಲೆ ಎತ್ತಿ ನೋಡಿದರೆ ವಾಡೆಯಂತಹ ಅವರ ಮನೆಯೇ ಮಟಾ ಮಾಯ.ಆ ಜಾಗದಲ್ಲಿ ಪ್ರೌಢಶಾಲೆಯ ಫಲಕ ಹೊತ್ತ ಮೂರು ಮಹಡಿಯ ಭವ್ಯ ಕಟ್ಟಡ.

ಜೀವನರೆಡ್ಡಿಯವರು  ಕಮಲಾಪುರದಲ್ಲಿಯೇ ಹುಟ್ಟಿ ಬೆಳದವರು.ತಂದೆರಾಮಚಂದ್ರಾರೆಡ್ಡಿ ಶಿಕ್ಷಣ ಇಲಾಖೆಯಲ್ಲಿ ಉದ್ಯೋಗಿ. ಸಮಾಜಮುಖಿ.ಸಂಸಾರಕ್ಕಿಂತ ಸಮಾಜದಲ್ಲೇ ಅಸಕ್ತಿ ಅಧಿಕ.  ತಾಯಿ ಚಂದ್ರಮ್ಮನವರದೇ ಇತ್ತೀಚಿನವರೆಗೆ ಕೃಷಿ ಉಸ್ತುವಾರಿ. ಎರಡೇ ಮಕ್ಕಳು. ಒಂದು ಗಂಡು ಒಂದು ಹೆಣ್ಣು.. ಮಗನ   ಪ್ರಾಥಮಿಕ ಶಿಕ್ಷಣವೂ ಅಲ್ಲಿಯೇ ಆಗಿತ್ತು ಪದವಿಯನ್ನು ಕಲಬುರ್ಗಿಯಲ್ಲಿ ಪಡೆದು ನಂತರ ಬಿ.ಎಡ್ ಮುಗಿಸಿ ಹುಟ್ಟೂರಿನ ಪ್ರೌಢಶಾಲೆಯಲ್ಲಿಯೇ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.ನಂತರ ಶಿಕ್ಷಣದಲ್ಲಿ  ಸ್ನಾತಕೋತ್ತರ ಪದವಿ .ವೃತ್ತಿಯ ಕೊನೆಯ ಹಂತದಲ್ಲಿ ಡಯಟ್‌ನಲ್ಲಿ ಕೆಲಸ ಮಾಡಿ , ನಿವೃತ್ತರಾದನಂತರ ಖಾಸಗಿ ಬಿ.ಎಡ್‌  ಕಾಲೇಜಿನಲ್ಲಿ ಮುಖ್ಯಸ್ಥರಾಗಿ ಸೇವೆ ಮಾಡುತ್ತಾ ಹುಟ್ಟೂರಿನ ಲ್ಲಿ ಶಿಕ್ಷಣ ಮಟ್ಟ ಸುಧಾರಿಸಲೆಂದು  ರಾಮಕೃಷ್ಣ ಗ್ರಾಮೀಣ ಅಭಿವೃದ್ಧಿ ಟ್ರಸ್ಟ ಅಡಿಯಲ್ಲಿ .ಶಿಶುವಿಹಾರ ಪ್ರಾರಂಭಿಸಿದ್ದು ಗೊತ್ತಿತ್ತು. ಆದರೆ ಅವರ ಮನೆಯ ಜಾಗದಲ್ಲೇ ಭವ್ಯ ಕಟ್ಟಡನಿರ್ಮಿಸಿ ೪೦೦ ಜನ ವಿದ್ಯಾರ್ಥಿಗಳಿಗೆ ಜ್ಞಾನ ದಾನ ನೀಡುತ್ತಿರುವುದು ನನಗಂತೂ ಸುದ್ದಿಯಾಗಿತ್ತು

ಶಾಲೆಗೆ ಅಂಟಿಕೊಂಡಂತೆ ಇರುವ ಮನೆಯಲ್ಲಿ  ತೊಂಭತ್ತನಾಲ್ಕರ  ಪ್ರಾಯದ ತಾಯಿಯೊಡನೆ ವಾಸ.. ಹಾಗೆ ನೋಡಿದರೆ  ಅವರದೇನೂ ಅಭಾವ ವೈರಾಗ್ಯವಲ್ಲ. ಕೊಟ್ಟು ಹುಟ್ಟಿದವರು. ಅರವತ್ತು  ಎಕರೆ ವತನದಾರರು. ಎತ್ತು ,ಎಮ್ಮೆ ದನ ಕರು ಆಳು ಕಾಳು ಹೊಂದಿದ ಸ್ವಯಂ ಕೃಷಿದಾರರು. ಇಚ್ಛೆಯರಿತು ನಡೆವ ಹೆಂಡತಿ ಶಕುಂತಲಬಾಯಿ  ಅಥವ ಶಕ್ಕಮ್ಮ  ನಾಲ್ಕು ಹೆಣ್ಣು ಒಂದು ಗಂಡಿನ ತುಂಬು ಕುಟುಂಬ. ಮಕ್ಕಳಿಗೆಲ್ಲ ಉತ್ತಮ ಶಿಕ್ಷಣ ದೊರೆತಿದೆ..ಎಲ್ಲರೂ ಉದ್ಯೋಗಸ್ಥರು, ಕಲಬುರ್ಗಿಯಲ್ಲಿ ಮನೆಮಾರು ಮಾಡಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿರುವರು. ಇದ್ದೊಬ್ಬ ಮಗ ಅಮೇರಿಕಾದಲ್ಲಿ. ಇಳಿವಯಸ್ಸಿನಲ್ಲಿ ದುಡಿವ ದರ್ದಿಲ್ಲ. ಇವರೂ ಅವರ ಜೊತೆ ಸುಖವಾಗಿ ಇರಬಹುದಿತ್ತು ಆದರೆ. ಐದೂ ಮಕ್ಕಳ ನೆಮ್ಮದಿಯ ಜೀವನದ ದಾರಿ ತೋರಿದ ನಂತರ ಈಗ ನಾನೂರು ಮಕ್ಕಳಿಗೆ ಮಾರ್ಗದರ್ಶನ ಮಾಡಲು ಹಳ್ಳಿಯಲ್ಲಿಯೇ ನೆಲಸಿರುವರು. ಮಕ್ಕಳ ಮೊಮ್ಯಮಕ್ಕಳ ಆರೈಕೆಗೆಂದು ಹೆಂಡತಿ ಓಡಾಡಿದರೂ ಇವರಿಗೆ ಕಾಯಕವೇ   ಕೈಲಾಸ . ಎಪ್ಪತ್ತರ ಹರೆಯದಲ್ಲೂ ಕೃಷಿ ಕೆಲಸ ಕೈಬಿಟ್ಟಿಲ್ಲ. ಶಿಕ್ಷಣ ಕ್ಷೇತ್ರದಲ್ಲಿನ ತಮ್ಮ ಅಪಾರ ಅನುಭವದ ಫಲವನ್ನು ತಮ್ಮೂರಿನ ಮಕ್ಕಳಿಗೆ ಹಂಚಲು ಕಂಕಣ ಬದ್ದರಾಗಿರುವರು. ನಗರದಲ್ಲಿ ಶಾಲೆ ತೆಗೆದಿದ್ದರೆ ಬರುತಿದ್ದ ಆದಾಯ ಊಹಿಸಲು ಆಗದು. ಶಿಕ್ಷಣ ಸಂಸ್ಥೆ ಎಂಬುದು  ಈಗ ಒಂದು ವಾಣಿಜ್ಯೋದ್ಯಮ. ಕೋಟಿ ಕೋಟಿ ದುಡಿಮೆಗೆ ದಾರಿ. ಆದರೆ ಇವರು ಗ್ರಾಮೋದ್ಧಾರದೆಡೆಗೆ ಮನ ಮಾಡಿರುವರು. ಅದಕ್ಕೆ ಅತಿ ಕಡಿಮೆ ಶುಲ್ಕದಲ್ಲಿ ಉತ್ತಮ ಗುಣ ಮಟ್ಟದ  ಶಿಕ್ಷಣ ನೀಡುವ ಕನಸು ನೆನಸುಮಾಡಲು. ತಮ್ಮದೇ ಮನೆಕೆಡವಿಸಿ  ಅಲ್ಲಿಯೇ ತಮ್ಮೆಲ್ಲ ದುಡಿಮೆ, ಜಮೀನಿನ ಆದಾಯ ಕ್ರೋಢೀಕರಿಸಿ ಭವ್ಯ ಕಟ್ಟಡ ನಿರ್ಮಾಣ ಯೋಜಿಸಿದರು.  ಅದರ  ಫಲ  ಸುಮಾರು ಕೋಟಿ ರೂಪಾಯಿ ಮೌಲ್ಯ ಸುಸಜ್ಜಿತ  ಕಟ್ಟಡ. ಅದಕ್ಕೆ ವಿದೇಶದಲ್ಲಿರುವ ಮಗನೂ ಕೈ ಗೂಡಿಸಿದ.

ಎಲ್ಲಕ್ಕಿಂತ ಮನಮುಟ್ಟುವುದು ಅವರು ಗ್ರಾಮೀಣ ಬಡ ಮಕ್ಕಳಿಗೆ ಒದಗಿಸಿರುವ ಸೌಲಭ್ಯ. ಸುಸಜ್ಜಿತ ಕಟ್ಟಡ, ಪೀಠೋಪಕರಣ ಮತ್ತು ಪಾಠೋಪಕರಣ, ಶಾಲೆಯ ಒಂದೊಂದು ಅಂಗುಲ ಜಾಗೆಯೂ ಮಾಹಿತಿಯ ಕಣಜ. ಹುಡುಗಿಯರಿಗೆ ಪ್ರತ್ಯೇಕ ಶೌಚಾಲಯಗಳು,ಶುದ್ಧೀಕರಿಸಿದ ಕುಡಿಯುವ ನೀರು .ಮುಖ್ಯವಾಗಿ ಆಧುನಿಕ ತಂತ್ರಜ್ಞಾನದ ಮೂಲಕ ಮಕ್ಕಳಿಗೆ ಬೋಧನೆ. ಮಾಡುವ ಸ್ಮಾರ್ಟ ತರಗತಿಗಳು. ಅಂದರೆ ನಗರದ ಪ್ರತಿಷ್ಠಿತ ಶಾಲೆಗಳಲ್ಲೂ  ವಿರಳವಾದ ದೃಶ್ಯ ಮಾದ್ಯಮದ ಮೂಲಕ ಕಲಿಸುವ  ಬೋಧನಾಕ್ರಮ. ಸುಮಾರು ನಾಲ್ಕು  ಲಕ್ಷ ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನದ ಅಳವಡಿಕೆ.ಕಾಂಪ್ಯೂಟರ್‌ ಸಹಾಯಿತ ಶಿಕ್ಷಣ.

 ಅಲ್ಲಿನ ತರಗತಿಯಲ್ಲಿನಿಂತಾಗ ಒಂದು ಕ್ಷಣ ಹಿಂದುಳಿದ ಹಳ್ಳಿಯಲ್ಲಿರುವೆನೋ ಅಥವಾ ಬೆಂಗಳೂರಿನ ಪ್ರತಿಷ್ಠಿತ ಲಕ್ಷ ಲಕ್ಷ ಶುಲ್ಕ ಪಡೆವ ಪ್ರತಿಷ್ಠಿತ ಶಾಲೆಯಲ್ಲಿರುವೆನೋ ಎಂಬ ಅನುಮಾನ ಬಂದಿತು. ಇನ್ನು ಅಲ್ಲಿರುವ ಸುಮಾರು ಇಪ್ಪತ್ತು ಸಿಬ್ಬಂದಿ.ಹಣಕ್ಕಾಗಿ ದುಡಿಯದೇ ತಮ್ಮ ಊರಿನ ಸೇವೆ ಎಂದೇ ಬಂದಿರುವವರು.ಮನೆಯ ಕೆಲಸ ಎಂದು ಮನ ಮುಟ್ಟಿ ದುಡಿಯುತಿದ್ದಾರೆ.ವೇತನ ಕಡಿಮೆ.ಬಹುತೇಕ ಗೃಹಿಣಿಯರೇ ಶಿಕ್ಷಕಿಯರು. ತಮ್ಮೂರಿನ ಮಕ್ಕಳಿಗೇ ಉತ್ತಮ ಶಿಕ್ನ ದೊರೆಯುವದೆಂಬ ತೃಪ್ತಿ ಅವರದು ಹಾಗಾಗಿ ಅಪೇಕ್ಷೆಯೂ ಅಧಿಕವಿಲ್ಲ.ಗ್ರಾಮೀಣ ಮಟ್ಟದಲ್ಲಿ ಗುಣಾತ್ಮಕ ಶಿಕ್ಷಣ, ಹೆಣ್ಣು ಮಕ್ಕಳ, ಬಡವರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ.ಮಕ್ಕಳ ಸರ್ವಾಗೀಣ ಬೆಳವಣಿಗೆಗೆ,ಅವರಲ್ಲಿ ಐಕ್ಯತೆ ಮತ್ತು ರಾಷ್ಟ್ರೀಯತೆ ಭಾವನೆ ಬೆಳೆಸಲು ಸಂಸ್ಥೆಯ ಅಧ್ಯಕ್ಷರು ಆಯೋಜಿಸುವ  ವಿವಿಧ ಕಾರ್ಯಕ್ರಮಗಳಲ್ಲಿ  ಸಕ್ರಿಯರಾಗಿರುವರು.
ಎಪ್ಪತ್ತರ ಹತ್ತಿರವಿರುವ ರೆಡ್ಡಿಯವರದು ದಿನನಿತ್ಯ ಒಂದೂವರೆ ಗಂಟ ಯೋಗಾಭ್ಯಾಸದಿಂ ಸದೃಢವಾದ ದೇಹ. ತಮ್ಮಾರೋಗ್ಯದ ರಹಸ್ಯವನ್ನು ಎಲ್ಲರೊಂದಿಗೆ ಹಂಚಿಕೊಂಡು ಸಶಕ್ತ ಸಮಾಜ ನಿರ್ಮಾಣದಲ್ಲಿ ಅವರಿಗೆ ಅತೀವ ಆಸಕ್ತಿ. ವಿದ್ಯಾರ್ಥಿಗಳಿಗೂ ಯೋಗಾಭ್ಯಾಸವನ್ನು ಸ್ವತಃ ಮಾಡಿಸುವರು
ಯೋಗ ಶಿಕ್ಷಣ


ಜೀವನರೆಡ್ಡಿಯವರ ಸಾಧನೆಯನ್ನು ಗುರ್ತಿಸಿ ರಾಷ್ಟ್ರೀಯಾ ಸಮ್ಮಾನ ಪುರಸ್ಕಾರ ವನ್ನು  2013 ರಲ್ಲಿ ದೆಹಲಿಯಲ್ಲಿಯ  Individual Achievement for Economic and social Development   ಸಂಸ್ಥೆಯು  ದಿನಾಂಕ 17-02-2013 ರಂದು  ರಾಷ್ಟ್ರೀಯಾ ಸಮ್ಮಾನ ಪುರಸ್ಕಾರ್ ನೀಡಿ ಗೌರವಿಸಿದೆ.. ಸದಾ ಕ್ರಿಯಾಶೀಲರಾದ ಇವರು ಪ್ರತಿಯೊಂದು ಮಗುವಿನ    ವೈಯುಕ್ತಿಕ ವೈಶಿಷ್ಟ್ಯವನ್ನು ಪರಿಗಣಿಸಿ ಆ ಮಗುವಿನ ಸಮಸ್ಯೆ ಪರಿಹರಿಸಲು ಕಾಳಜಿ ವಹಿಸುವರು.ಇವರ ಪ್ರಯತ್ನ ಗಮನಿಸಿ ಬೆಂಗಳೂರಿನ ಬಿ.ಎಂ ಶ್ರೀ ಸ್ಮಾರಕ ಪ್ರತಿಷ್ಠಾನವು ಗ್ರಂಥಾಲಯಕ್ಕೆ  ಸುಮಾರು ೨೦೦ ಪುಸ್ತಕಗಳನ್ನು ಕೊಡಮಾಡಿದೆ.




ಎಚ್‌.ಶೇಷಗಿರಿರಾವ್,
ನಿರ್ದೇಶಕರು, ಹಸ್ತಪ್ರತಿ ಸಂರಕ್ಷಣೆ ಮತ್ತು ಅಧ್ಯಯನ ಅಭಿಯಾನ ಬೆಂಗಳೂರು
ಚರದೂರವಾಣಿ- ೯೪೪೮೪೪೨೩೨೩










1 comment:

  1. Congratulations for both you! Appaaji, it is very nice of you to introduce the services of your friend.

    Regards,
    Bharath

    ReplyDelete