Tuesday, June 25, 2013

ಕುವೆಂಪು ಅವರ -ಮಲೆಯಲ್ಲಿ ಮದುಮಗಳು

ಮಲೆಯಲ್ಲಿ ಮದುಮಗಳು-ನಾಟಕ

ಕುವೆಂಪುವವರ   “ಮಲೆಗಳಲ್ಲಿ ಮದುಮಗಳು”  ಒಂದು . ಬೃಹತ್‌ ಕಾದಂಬರಿ ಅದರ ವ್ಯಾಪ್ತಿ ಬಹು ಹಿರಿದು. ಕಾದಂಬರಿಯ ಮೊದಲಲ್ಲೇ ಅದರ ಆಶಯ ವ್ಯಕ್ತವಾಗಿದೆ.   “ .ಇಲ್ಲಿ ಯಾರೂ ಮುಖ್ಯರಲ್ಲ , ಯಾರೂ ಅಮುಖ್ಯರಲ್ಲ, ಮೊದಲಿಲ್ಲ , ತುದಿಇಲ್ಲ   ,ಅವಸರವು ಸಾವಧಾನದ ಬೆನ್ನೇರಿದೆ, ಎಲ್ಲಕ್ಕೂ ಇದೆ ಅರ್ಥ, ಯಾವುದೂ ಅಲ್ಲ ವ್ಯರ್ಥ, ನೀರೆಲ್ಲ ವೂ ತೀರ್ಥ “ ಎಂಬ   ಆಶಯವು ಸಾವಕಾಶವಾಗಿ  ಕಾದಂಬರಿಯ ಉದ್ದಕ್ಕೂ ಬಿಚ್ಚಿಕೊಳ್ಳುತ್ತಾ ಹೋಗುವುದು..
 ಮಲೆಗೆ ಮನುಷ್ಯರಷ್ಟೆ ಪ್ರಾಮುಖ್ಯತೆ ಇದೆ.. ಅಥವ ತುಸು ಹೆಚ್ಚೇ ಇದೆ. ಮಳೆ. ಗಾಳಿ,ಮಲೆ , ನೀರು . ಇಂಬಳ. ಹಂದಿ , ಚಿರತೆ,ನೀರು ನಾಯಿ ಎಲ್ಲವೂ .ಎಲ್ಲವೂ ಪಾತ್ರಗಳೇ.. ಶೀರ್ಷಿಕೆಯಲ್ಲಿ ಮದುಮಗಳು  ಎಂದಿರುವುದರಿಂದ ಸಹಜವಾಗಿ  ಮದುಮಗಳಾಗಿರುವ ಚಿನ್ನಮ್ಮ ಮತ್ತು ಅವಳ ಪ್ರಿಯಕರ ಮುಕುಂದೆಗೌಡರ  ಕಥೆ ಮಾತ್ರ  ಎಂದುಕೊಂಡರೆ ಕಥೆಯ ಆತ್ಮವೇ ಕಳೆದು ಹೋಗುವುದು. ಮದುಮಗಳಿಗಿಂತ ಮೊದಲು ಬರುವುದು ಮಲೆ, ಅಲ್ಲಿನ ಪ್ರಾಣಿ ,ಪಕ್ಷಿಗಳು, ರೀತಿರಿವಾಜುಗಳ ಅಲ್ಲಿರುವ ಸಾಮಾಜಿಕ ವೈವಿದ್ಯತೆ,  ವೈರುಧ್ಯ . ಪ್ರೇಮ . ಕಾಮ, ದ್ವೇಷ , ಅಸೂಯೆ, ಬಡತನ ಸಿರಿತನ ,ಊಳಿಗಮಾನ್ಯ ಸಂಸ್ಕೃತಿ ಮತ್ತು ಜೀತದಾಳುಗಳ ಜೀವನ ಚಿತ್ರಣ..ಹೀಗೆ ಮಲೆನಾಡಿನ ವಿಶ್ವರೂಪ ದರ್ಶನ ಮಾಡಿಸುವ ಕಥೆಯನ್ನು ದೃಶ್ಯರೂಪದಲ್ಲಿ ಸರೆ ಹಿಡಿಯುವುದು ಮುಷ್ಠಿಯಲ್ಲಿ ಸೃಷ್ಠಿಯನ್ನು ಹಿಡಿದಿಡುವ  ಪ್ರಯತ್ನವಾಗಿದೆ.ಸುಮಾರು ಏಳುನೂರು ಕ್ಕೂ ಹೆಚ್ಚು ಪುಟಗಳಿಗೂ ಹೆಚ್ಚಿರುವ  ಕಾದಂಬರಿಯನ್ನು ಅಂದಾಜು ಒಂಬತ್ತು ಗಂಟೆಯ  ಅವಧಿಯೊಳಗೆ ನಾಟಕ ಮಾಡುವುದು ಒಂದು 

ಮಹಾತ್ವಾಂಕಾಕ್ಷೆಯ ಯೊಜನೆಯೇ ಸರಿ. ಆದರೆ ಖ್ಯಾತ ರಂಗ ನಿರ್ದೇಶಕ ಸಿ . ಬಸವಲಿಂಗಯ್ಯ ತಮ್ಮ ಪ್ರಯತ್ನದಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಹತ್ತಿರ ಹತ್ತಿರ ೭೫ ಕಲಾವಿದರನ್ನು ಬಳಸಿಕೊಂಡು  ನಾಲ್ಕು ರಂಗಮಂಟಪಗಳಲ್ಲಿ ಮಲೆ ನಾಡಿನ ಸೊಬಗನ್ನು ಅನಾವರಣ ಗೊಳಿಸಿರುವರು ಕೆರೆ, ಕಾಡು,ಹುಲಿನೆತ್ತಿ ಮತ್ತು ಮನೆಯೊಳಗಣ ದೃಶ್ಯಾವಳಿಗಳ ಹಿನ್ನೆಲೆ ಒದಗಿಸಿರುವರು.ಈ ಮೊದಲು ಮೈಸೂರಿನಲ್ಲಿ ರಂಗಾಯಣಕಲಾವಿದರನ್ನು ಬಳಸಿಕೊಂಡು ಯಶಸ್ವಿಯಾಗಿದ್ದ ಪ್ರಯೋಗವನ್ನು ಬಹುತೇಕ ಹೊಸಬರ ನ್ನೆ ಬಳಸಿಕೊಂಡು ಅದು ಬಹಳ ಕಡಿಮೆ ಸಮಯದಲ್ಲಿ ನಾಟಕ ಸಿದ್ಧವಾಗಿದೆ
ಇಲ್ಲಿ ಕಥೆಯು ಮೂರು ಜೋಡಿಗಳ ಸುತ್ತ ಹೆಣೆಯಲಾಗಿದೆ. ಮೂರು ಸಮಾಜದ ವಿಭಿನ್ನಸ್ಥರಕ್ಕೆ  ಸೇರಿದವರು , ಭೂಮಾಲಿಕರಾದ ಹಗಡೆ, ಕಾರ್ಮಿಕರಾದ ಶೂಧ್ರರು ಮತ್ತು ಜೀತದಾಳಗಿರುವ ಹೊಲೆಯರು. ಆದರೆ ಸಾರ್ವತ್ರಿಕವಾದ ಪ್ರೇಮಪಯಣದಲ್ಲಿ ಈ ಎಲ್ಲ ವಿಭಿನ್ನತೆಗಳು ಮಾಯವಾಗಿ ಪರಸ್ಪರ ಸಹಕರಿಸುವ ಒತ್ತಾಸೆ ಕೊಡುವರು.
 ನಾಟಕ ಶುರುವಾಗುವುದೇ ಗುತ್ತಿಯಿಂದ , ಗುತ್ತಿ ಪ್ರಕೃತಿಯ ಕೈಗೂಸು. ಅವನಿಗು ನಾಯಿ ಹುಲಿಯನಿಗೂ ಅವಿನಾವಭಾವ ಸಂಬಂಧ.ಅದಕ್ಕೆ ಅವನನ್ನು ನಾಯಿ ಗುತ್ತಿ ಎದೇ ಕರೆಯುವರು.ಅವನು ತನ್ನ ಮವನ ಮಗಳು ತಿಮ್ಮಿಯನ್ನು ಹಾರಿಸಿ ಕೊಂಡು ಹೋಗುವ ಪ್ರಯತ್ನದಿಂದ ನಾಟಕ ಮೊದಲಾಗುವುದು ಮಧ್ಯದಲ್ಲಿ ಮುಕುಂದೇಗೌಡ ಮತ್ತು ಚಿನ್ನಮ್ಮರ ಪ್ರೇಮ ಪ್ರಸಂಗ.ಅದು ಫಲಪ್ರದವಾಗಲು ಸಹಾಯ ಮಾಡುವುದು ಇನ್ನೊಂದು ಜೊಡಿ ಐತ ಮತ್ತು ಪಿಂಚಲು. ಈ ಮೂರು ಜೋಡಿಗಳು ಓಂದಾಗುವದರೊಂದಿಗೆ ಕಥೆ ಮುಗಿಯುವುದು.
ಇನ್ನು ಮವನಲ್ಲಿರುವ ಮೃಗ ವಾಂಛೆಯ ಚಿತ್ರಣಕ್ಕೆ ಸಹಾಯ ನೀಡುವವರು ಕಾವೇರಿ ಮತ್ತು ನಾಗಕ್ಕ., ಕಾವೇರಿಯ ತಾಯಿ ಅಂತಕ್ಕನಿಸ್ಸಾಹಾಯಕಳು. ಯಾವುದೇ ಆಸರೆ ಇಲ್ಲ ಅದೇ ಮಾತು ಅತ್ತೆ ಸೊಸೆಯರಾದ ನಾಗಮ್ಮ,ನಾಗಕ್ಕರಿಘೂ ಅನ್ವಯವಾಗುವುದು. ಅವರು  ತಮ್ಮಿಬ್ಬರ ಜೀವನ ಸಾಗಿಸಲು ಇಬ್ಬರು ಯುವತಿಯರನ್ನು ಬಳಸಿಕೊಳ್ಳುವರು.. ಕೊನೆಗೆ ಕಾವೇರಿಯಪ್ರಾಣಕ್ಕೆ ಕುತ್ತು ಬರುವುದು. ಕುಂಟ ವೆಂಕಟಪ್ಪನಿಗೆ ಸೊಸೆಯನ್ನು ಒಪ್ಪಿಸುವ ದುಸ್ಸಾಹಸದಲ್ಲಿ ಅತ್ತೇಯೇ ತುತ್ತಾಗುವ ವಿಪರ್ಯಾಸವಂತೂ ವಿಡಂಬನೆಯ ಪರಮಾವಧಿಯಾಗಿದೆ.


ಉಳ್ಳವರ ಶೋಷಣೆಗೆ ಸಾಧನವಾಗಿರುವ ಹೊನ್ನಾಳಿ ಸಾಬರು, ಸುಧಾರಣೆಯ ಹೆಸರಲ್ಲಿ ಜನರ ಮೌಢ್ಯವನ್ನು ಬಳಸಿಕೊಂಡು ಮತಾಂತರಕ್ಕೆ ಯತ್ನಿಸುವ. ಪಾದ್ರಿ ಜೀವರತ್ನಂ, ಅವರು ನೀಡುವ ಕಾಸಿನ ಆಸೆಗೆ ಕುಣಿಯುವ ಸೆರಿಗಾರ ವೆಂಕಪ್ಪಯ್ಯ, ದೇವಯ್ಯ, ದುರಾಸೆಯ ತಿಮ್ಮಪ್ಪ ಕಥೆಯ ಓಟವನ್ನು ಹೆಚ್ಚಿಸಿ,  ಕುತೂಹಲ ಮೂಡಿಸುವ ಮತ್ತು  ಕೆಲವುಸಲ ನಗೆ ಉಕ್ಕಿಸುವಲ್ಲಿ ಯಶಸ್ವಿಯಾಗುವರು..
ಎಲ್ಲ ವರ್ಗಗಳ ಪಾತ್ರಗಳು ರಂಗದ ಮೇಲೆ ಬರುತ್ತವೆ. ಆಶೆಬುರುಕ ಬ್ರಾಹ್ಮಣ, ದರ್ಪದ ಭೂಮಾಲಿಕರು, ಶ್ರಮಿಕರಾದ ಬಿಲ್ಲವರು, ಜೀತಮಾಡುವ ಹೊಲೆಯರು, ಸಾಲವಸೂಲಿಗೆ ಭೂಮಾಲಿಕರ ದಾಳಗಳಾಗಿ “ ಹೊನ್ನಾಳಿ ಹೊಡತ “  ನೀಡಿ ನಡುಕ ಹುಟ್ಟಿಸುವ ಕಠಿನ ಹೃದಯಿ ಸಾಬರು,ನಯವಂಚಕರಾದ ಕಿಲಿಸ್ತಾನರು’ರಂಗದ ಮೇಲೆ ರಂಜಿಸುವರು.
ಇನ್ನು ಸ್ತ್ರೀ ಪಾತ್ರಗಳಲ್ಲಿ ನಾಯಕನ ಪ್ರೇಮ ಸಂದೇಶದ ವಾಹಕಿಯಾದ ಪಿಂಚಲು. ತನ್ನ ಚಿನಕುರುಳಿ ಮಾತಿನಿಂದ ರಸಿಕ ದಾಂಪತ್ಯ ಜೀವನದ ಸೆಳಕುಗಳಿಂದ ರಂಗಸ್ಥಳದಲ್ಲಿ ಮಿಂಚುವಳು.
ನಾಟಕದಲ್ಲಿ ನಿಸರ್ಗದ ಪಾತ್ರ ಬಹಳ ಹಿರಿದು .ಅದನ್ನು  ಬಿಂಬಿಸಲು ಬೆಟ್ಟ, ಕೆರೆ ,ಕಾಡು ಗಳನ್ನು ಬಳಸಲಾಗಿದೆ. ಹುಲಿಕಲ್ಲಿನ ಪಾತ್ರ ಬಹಳ   ಪ್ರಮುಖವಾಗಿದೆ. ರಂಗಸಜ್ಜಿಕೆಯಲ್ಲಿ  ಅದನ್ನು ಬಿಂಬಿಸುವಲ್ಲಿ ಯಶ ದೊರಕಿದೆ... ಹುಲಿಯ, ಇಂಬಳ, ಏಡಿ ಹಿಡಿಯುವುದು, ಹಂದಿ ಬೇಟೆ, ಚಿರತೆಯೊಡನೆ ಹೊರಾಟ  ಕಪ್ಪೆಗಳು, ಕ್ರಿಮಿಕೀಟಗಳ ಧ್ವನಿ ಸೂಕ್ತ ಹಿನ್ನೆಲೆ ಒದಗಿಸಿ ತಕ್ಕ ಮಟ್ಟಿಗೆ ಮಲೆಯ ಅನುಭವ ಕೊಡುತ್ತವೆ.
ಗುತ್ತಿ ನಾಯಿಯ ಇಂಬಳ ಕೀಳುವುದು,ಪಾದ್ರಿ ಬೀಸಕಲ್ಲು ಸವಾರಿಯ ತರಬೇತಿ ನೀಡುವುದು, ಐಗಳ ಶಾಲೆಯಲ್ಲಿ ಮಕ್ಕಳ ಕಲಿಕೆ, ಪಿಂಚಲು ಮತ್ತು ಚಿನ್ನಮ್ಮ ದಾಂಪತ್ಯಜೀವನದ ಬಗ್ಗೆ ಚರ್ಚಿಸುವುದು, ಪಾದ್ರಿಯ ಮಾತು, ಕೊನೆಯಲ್ಲಿ ಧರ್ಮಾಂತಾಂತರ ಮಾಡುವ ಸನ್ನಿವೇಶ , ಹೊನ್ನಾಳಿ ಸಾಬರ ಕುದುರೆ ಕುಣಿತ, ನಗೆ ಉಕ್ಕಿಸುವಲ್ಲಿ ಯಶಸ್ವಿಯಾಗುವವು..
ಕಾವೇರಿಯ ದುರಂತ, ಹುಲಿಯನ ಸಾವು ಸುಬ್ಬಯ್ಯ ಹೆಗಡೆಯ  ಕಾಣೆಯಾದ ಮಗನ ಹುಡುಕಾಟ,, ವೆಂಕಟಪ್ಪನಾಯಕನ ವಿಪ್ರಲಂಭ ಶೃಂಗಾರ, ತಾಯಿ ಸತ್ತಾಗಿನ ಧರ್ಮುವಿನ ರೋಧನ ಮನ ಮುಟ್ಟುವಂತೆ ಮೂಡಿಬಂದಿವೆ.
ಇನ್ನು ನಟನೆಯ ವಿಷಯದಲ್ಲಿ ಎದ್ದು ಕಾಣುವುದು ಮಾನವ ಪಾತ್ರವಲ್ಲ. ಅದು ನಾಯಿ ಹುಲಿಯ.ನಂತರದ ಸ್ಥಾನ  ಗುತ್ತಿ , ಪಿಂಚಲು , ಐತ, ವೆಂಕಟಪ್ಪನಾಯಕ ಮತ್ತು  ಸುಬ್ಬಯ್ಯ ಹೆಗಡೆಯವರದು. ಉಳಿದ ಪಾತ್ರಗಳು ಪರವಾಇಲ್ಲ ಎನ್ನಬಹುದು. ಅದಕ್ಕೆ ಕಾರಣವೂ ಇದೆ ಆರೆಂಟುಜನರನ್ನು ಬಿಟ್ಟರೆ ಉಳಿದೆಲ್ಲರೂ ಹೊಸಬರೇ. ಅವರಿಗೆ ಕಡಿಮೆ ಅವಧಿಯಲ್ಲಿ ತರಬೇತಿ ನೀಡಿ ಒಂದಲ್ಲ ನಾಲ್ಕು ರಂಗಸ್ಥಳಗಳಲ್ಲಿ ಚಲನ ವಲನ ನಿರ್ವಹಿಸಲು ಕಲಿಸುವುದು ಸರಳವಾದ ಕೆಲಸವಲ್ಲ.  ಆ ಹಿನ್ನೆಲೆಯಲ್ಲಿ ನಿರ್ಧೇಶಕರ ಯಶಸ್ವಿಯಾಗಿರುವರು ಎನ್ನ ಬಹುದು.
ಇನ್ನು ನಾಟಕೀಕರಣಕ್ಕೆ ಬಂದರೆ ಇಷ್ಟು ಬೃಹತ್ತಾದ ಕಥೆಯನ್ನು ಒಂದು ಸೂತ್ರದಲ್ಲಿ ಅಸಹಜವಾಗದಂತೆ ಅಳವಡಿಸುವುದು ಬಹಳ ಕಠಿನ ಕೆಲಸ, ಅದಕ್ಕಾಗಿಯೇ ಒಂದುವಿಶೇಷ  ತಂತ್ರವನ್ನು ಬಳಸಿದ್ದಾರೆ. ಕಾದಂಬರಿಯಲ್ಲಿ ಗೊಸಾಯಿಗಳ ಕುರಿತಾದ ಸೂಚನೆಳು ಇವೆ.ಅದನ್ನು ನಾಟಕದಲ್ಲಿ   ನಿರೂಪಕರಾಗಿ ಬಳಕೆ  ಮಾಡಿದೆ.  ಪ್ರಾರಂಭದಲ್ಲಿ ಜೋಗಪ್ಪಗಳು, ನಂತರ ಗೊಸಾಯಿಗಳು, ಸುಡುಗಾಡು ಸಿದ್ದರು ಮತ್ತು ಹೆಳವರು ಕಥೆಯ ಕೊಂಡಿ ಬೆಸೆಯುವಲ್ಲಿ ಯಶಗಳಿಸಿದ್ದಾರೆ.ಆರಂಭದಲ್ಲಿ ಬರುವ ಸುಡುಗಾಡುಸಿದ್ದರು ಮತ್ತು ಗೋಸಾಯಿಗಳು ಹೊರನಿಂತು  ಕಥೆ ನಿರೂಪಿಸಿದರೆ . ಹೆಳವರು ವಂಶಾವಳಿಯ ನಿರೂಪಕರಾಗಿ ಕಥೆಯೊಡನೆ ಒಂದಾಗುವರು ಸುಡಗಾಡುಬಸಿದ್ದರಂತೂ ಜರಗುತ್ತಿರುವ ದುರಂತ ನಾಟಕದ ಸಾಕ್ಷಿಪ್ರಜ್ಞೆಯಾಗುವರು.
ಇನ್ನು ರಂಗಸಜ್ಜಿಕೆ ಬಹುತೇಕ ನಾಟಕದ ನೆಡೆಗೆ ಪೂರಕವಾಗಿದೆ. ಸಂಗೀತವು ಕಾಡಿನ ದನಿಗಳನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಪದೇ ಪದೇ ಹೇಳುವಂತೆ ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ. ನೆಳಲು ಬೆಳಕಿನ ಹೊಂದಾಣಿಕೆ ಸಾಕಷ್ಟು ಚೆನ್ನಾಗಿದೆ. ಸಾಧ್ಯವಾದರೆ ಮಳೆಯ ಪರಿಣಾಮ ತೋರಿಸಬಹುದಿತ್ತು. ಮಲೆ ನಾಡಿನಲ್ಲಿ ಮಳೆಯದು ಬಹು ಮುಖ್ಯ ಪಾತ್ರ. ಕನಿಷ್ಠ ಧ್ವನಿಯ ಮೂಲಕವಾದರು ತೋರಿಸಿದ್ದರೆ ಇನ್ನು ಹೆಚ್ಚು ಪರಿಣಾಮಕಾರಿಯಾಗಬಹುದಿತ್ತು  ಬಹಶಃ ಆಧುನಿಕ ತಂತ್ರಜ್ಞಾನದ ಬಳಕೆ ಮಾಡಿ ಧ್ವನಿ ಮತ್ತು ಬೆಳಕಿನ ಪರಿಣಾಮಗಳನ್ನು ಇನ್ನೂ ಉತ್ತಮವಾಗಿ ಮೂಡಿಸ ಬಹುದಾಗಿತ್ತು ಎನಿಸುವುದು ಸಹಜ. 


ಬಯಲು ರಂಗಮಂದಿರದ ಪ್ರಯೋಗ ನಮಗೆ ಹೊಸದೇನೂ ಅಲ್ಲ ನಮ್ಮಲ್ಲಿ ಹಿಂದೆ ಬಯಲಾಟ, ಯಕ್ಷಗಾನಗಳು ರಾತ್ರಿ ಇಡೀ ಜರಗುತಿದ್ದವು ಚಾಪೆ, ಕಂಬಳಿ , ಹೊರಸು ಸಮೇತ ಹೊಗಿ ಬೆಳಗಾಗುವ ತನಕ ನೋಡುವವರೂ  ಇದ್ದರು ಗಡದ್ದು ನಿದ್ರೆ ಮಾಡುವವರೂ ಇಲ್ಲದಿರಲಿಲ್ಲ. ರವೀಂದ್ರ ಕಲಾಕ್ಷೇತ್ರದಲ್ಲೂ ಹಲವು ದಶಕಗಳ ಹಿಂದೆಯೇ ಸಂಸ  ಬಯಲುರಂಗ ಮಂದಿರ ರೂಪಗೊಂಡು ಅನೇಕ ನಾಟಕಕಗಳ  ಯಶಸ್ಸಿ ಪ್ರಯೋಗ ಕಂಡವು. ಆದರೆ ಇಲ್ಲಿನ ವಿಶೇಷವೆಂದರ ಇಲ್ಲಿರುವ ರಂಗ ಮಂಟಪ ಒಂದಲ್ಲ , ನಾಲಕ್ಕು. ಅದು ದೂರ ದೂರದಲ್ಲಿ.  ಸುಮಾರು ನೂರರಷ್ಟು ನಟರು ಮತ್ತು ರಂಗಕರ್ಮಿಗಳ 
ಸಕ್ರಿಯಪಾಲುಗೊಳ್ಳುವಿಕೆ. ಮೂರನೆಯದಾಗಿ ಮೂರು ಮಧ್ಯಂತರಗಳೊಂದಿಗೆ ರಾತ್ರಿ ಪೂರ್ತಿ ನಾಟಕ. ಒಂದು ರೀತಿಯಲ್ಲಿ ಶಿವರಾತ್ರಿ ಜಾಗರಣೆಯ ನೆನಪು ತಂದಿತು.ಕೃತಿಯ ಸಂಕೀರ್ಣತೆ ಮತ್ತು ವ್ಯಾಪ್ತಿಯನ್ನು ಪರಿಗಣಿಸಿದರೆ ರಂಗಪ್ರಯೋಗವು ಒಂದು ಸಾಹಸವೇ ಸರಿ. ಮಲೆನಾಡಿನ ಪರಿಸರ ಸೃಷ್ಠಿಸುವಲ್ಲಿ  ಪ್ರಯೋಗ  ಯಶಸ್ವಿಯಾಗಿದೆ. . ಇಂಥಹ ಪ್ರಯೊಗಗಳು  ಸ್ವಾಗಾತಾರ್ಹ, ಕಾರಣ ಜನರೂ ಪ್ರಭಾವಿತರಾಗಿರುವರು. ಅದೂ ನಾಗರ  ಭಾವಿಯಲ್ಲಿ ನಡೆದರೂ ಟಿಕೆಟ್‌ಗಳು ಬಿಸಿದೋಸೆಯಂತೆ ಖರ್ಚಾಗಿ ಅನೇಕ ಆಸಕ್ತರು ನಿರಾಶರಾಗಿ ನಿಂತು ನೋಡವೆವು ಎಂದು ಮನವಿ ಮಾಡಿಕೊಳ್ಳುತಿದ್ದು ಕಂಡು ಬಂದಿರುವುದು ಅದರ ಜನಪ್ರಿಯತೆಯ ದ್ಯೋತ್ಯಕ.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಈ ಪ್ರಯತ್ನ ಅಭಿನಂದನೀಯ. ಆದರೆ ಇದು ಪ್ರಾಂರಂಭ ಮಾತ್ರ.. ಕೊನೆಯಾಗಬಾರದು ಎಂಬುದು ನೋಡುಗರ ಆಶಯ ಸಿನೆಮಾ , ಟಿವಿ ಮತ್ತು ಅಂತರ್‌ಜಾಲ ಯುಗದಲ್ಲೂ ಜನ ನಾಟಕ ನೋಡಲು ಮುಕುರಿದ್ದರು  ಈ ಕುರಿತು ಸಂಘ ಸಂಸ್ಥೆಗಳು, ರಂಗಾಸಕ್ತರೂ ಮತ್ತು ರಂಗಕರ್ಮಿಗಳು.ಚಿಂತನೆ ನಡೆಸಲಿ

No comments:

Post a Comment