Thursday, June 13, 2013

ಆರರಿಂದ ಅರವತ್ತು ಸರಣಿ- ಶಾಲೆಯಲ್ಲಿ ಸಕಾಲ

ಬಟವಾಡೆ, ವಾರಕ್ಕೋ ? ತಿಂಗಳಿಗೋ ?
ಬಂಗಾರದ ನಾಡಿನ  ಕಾಲೇಜಿಗೆ  ಬಂದ ದಿನವೆ  ಎದುರಾದ ಸಮಸ್ಯೆಯನ್ನು ಬಗೆ ಹರಿಸಲು ಒಂದುವಾರ ಬೇಕಾಯಿತು.ಅಲ್ಲಿ ಕಾಂಪ್ಯೂಟರ್‌   ಜತೆ ಎಲೆಕ್ಟ್ರಿಕಲ್‌, ಆಟೋ ಮೊಬೈಲ್‌  ಕೋರ್ಸುಗಳಿದ್ದವು.ಕಾಂಪ್ಯೂಟರ್‌ ಕೋರ್ಸಿಗೆ ಬಹಳ ಬೇಡಿಕೆ ಆದರೆ ಉಳಿದೆಲ್ಲವಕ್ಕೂ ಅಂಥಹ ಬೇಡಿಕೆ ಇರಲಿಲ್ಲ. ಆದರೂ ಎಲ್ಲವನ್ನು ಮೀಸಲಾತಿಯಂತೆಯೆ ಮಾಡಲು ಸೂಚಿಸಿದೆ. ಕೊನೆಯ ದಿನಾಂಕದ ವರೆಗೆ ಕಾದು ಕಾಯ್ದಿರಿಸಿದ ಸೀಟುಗಳನ್ನು ಭರ್ತಿ ಮಾಡಲಾಯಿತು.
ನಮ್ಮದು ಆ ಭಾಗದಲ್ಲೆ ಹಳೆಯ ಸಂಸ್ಥೆ.ಹಳೆಯ ಜಿಲ್ಲಾ ಬೋರ್ಡು ಸ್ಕೂಲು. ಹಳೆಯ ತಲೆಮಾರಿನ ಖ್ಯಾತನಾಮರೆಲ್ಲ ಅಲ್ಲಿನ ಮಾಜಿ  ವಿದ್ಯಾರ್ಥಿಗಳು. ಎಂ. ವಿ. ಕೃಷ್ಣಪ್ಪನವರೂ  ಓದಿದ್ದು ಇಲ್ಲಿಯೆ ಎಂದು ಹೆಮ್ಮೆಯಿಂದ ಹೇಳಿ ಕೊಳ್ಳುತಿದ್ದರು. ಎಲ್ಲ ಪ್ರತಿಭಾವಂತರ ಸಂಗಮವಾಗಿದ್ದ ಶಾಲೆ ಇತ್ತೀಚಗೆ ಹೆಚ್ಚಾದ ಖಾಸಗಿ ಶಾಲೆಗಳಿಂದಾಗಿ ಬರಿ ಬಡವರ, ಹಳ್ಳಿಮಕ್ಕಳ ಮತ್ತು ಹಿಂದುಳಿದವರ ಮಕ್ಕಳ ಶಾಲೆ  ಎಂದೆ ಕರೆಯಲಾಗುತಿತ್ತು. ಆದರೆ ಅಲ್ಲಿನ ಮಾಜಿ ವಿದ್ಯಾರ್ಥಿಗಳ ಸಂಖ್ಯೆ ಬಹು ದೊಡ್ಡದು. ಅದನ್ನು ನಾನು ಹೋದ ವಾರದೊಳಗೆ ಗಮಿನಿಸಿದೆ. ಸದಾ ಜನ ಜಂಗುಳಿ, ಜಾತಿ ಪ್ರಮಾಣ ಪತ್ರ, ಜನ್ಮ ದಿನಾಂಕ , ನಕಲು ವರ್ಗಾವಣೆ ಪತ್ರ, ನಡತೆ ಪ್ರಮಾಣ ಪತ್ರ  ಯಾವುದೂ ಇಲ್ಲದಿದ್ದರೆ ನಿಜಪ್ರತಿ ಧೃಡೀಕರಣ ಕ್ಕೆ ಸಹಿ ಹೀಗೆ ಬೆಳಗಿನಿಂದ ಸಂಜೆಯ ತನಕ ಬಿಡುವಿಲ್ಲದೆ ಜನ ಬರುವುರು. ನಮ್ಮ ಗುಮಾಸ್ತರು ತಡವಿಲ್ಲದೆ ಅವರ ಕೆಲಸ ಮಾಡಿ ನನ್ನ ಸಹಿಗೆ ತರುವರು.
 ನಿಜ ನಾವಿರುವುದು ಸಾರ್ವಜನಿಕರ ಅನುಕೂಲಕ್ಕಾಗಿ . ಆದರೆ ನಮ್ಮ ನಿಯಮಿತ ಕೆಲಸಕ್ಕೆ ತೊಂದರೆಯಾದರೆ ಗತಿ ಏನು ಶೈಕ್ಷಣಿಕ ಕಾರ್ಯಗಳಿಗೆ ಬಿಡುವು ಬೇಕಲ್ಲ. ಸುತ್ತಲಿನ ಶಿಸ್ತು ಮತ್ತು ಶಾಂತಿಯ ವ್ಯಸಸ್ಥೆ ಗಮನಿಸಬೇಕಲ್ಲ .ಪ್ರಾಂಶುಪಾಲರೆಂದರೆ  ಬರಿ ಸಹಿ ಮಾಡುತ್ತಾ ಛೇಂಬರ್‌ಲ್ಲಿ ಕುಳತುಬಿಡವುದರಲ್ಲಿ ನನಗೆ ನಂಬಿಕೆಯಿಲ್ಲ. ಪ್ರತಿ ತರಗತಿಗೂ ಹೋಘಗಬೇಕು . ಸಾಧ್ಯವಾದಷ್ಟು ಮಕ್ಕಳ ಸಂಪರ್ಕ ಇರಬೇಕು  ಎನ್ನುವವನು ನಾನು. ಆದರೆ ನನಗೆ ಬಿಡುವೆ ಸಿಗದು.  ಕಾಲೇಜು ವಿಭಾಗ ಮತ್ತು  ಹೈಸ್ಕೂಲುವಿಭಾಗದಲ್ಲಿ ಹಿರಿಯ ಸಹಾಯಕರು ಇರುವರು ನಿಜ.  ಎಲ್ಲ ಅವರಿಗೆ ಹೇಳಿ ಸುಮ್ಮನೆ ಕೂಡುವ ಜಾಯಮಾನ ನನ್ನದಲ್ಲ. ಯಾವುದಾರೂ ತರಗತಿಯಲ್ಲಿ ಗಲಾಟೆಯಗುತಿದ್ದರೆ ಹಿರಿಯ ಸಹಾಯಕರನ್ನು ಕರೆದು , ಏನ್ರಿ ಅದು ಗಲಾಟೆ ? ಎಂದು ಕೇಳುವವರು ಬಹಳ. ಆದರೆ ನಾನು ನೆರವಾಗಿ ತರಗತಿಗೆ ಹೋಗುತಿದ್ದೆ.  ಇದರಿಂದ ಎರಡು ಅನುಕೂಲ. ಮೊದಲನೆಯದಾಗಿ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಎಂದರೆ ದೂರದ ಗುಮ್ಮ ಎಂಬ ಭಾವನೆ ಬರುವುದಿಲ್ಲ. ಅವರ ಯಾವುದೆ ಸಮಸ್ಯೆ ಇದ್ದರೆ ಸ್ಥಳದಲ್ಲೆ ಪರಿಹಾರ ಕೊಡಬಹುದು. ಎರಡನೆಯದಾಗಿ ಖಾಲಿ ಇದ್ದ ತರಗತಿಗೆ ನಾನು ಹೋಗುವುದರಿಂದ  ಆ ತರಗತಿಗೆ ಹೋಗ ಬೇಕಾದ ಶಿಕ್ಷಕರು  ಜಾಗೃತರಾಗುವರು.  ಹರಟೆ ಹೊಡೆಯುತ್ತಾ ಶಿಕ್ಷಕರ ಕೋಣೆಯಲ್ಲಿ ಮೈ ಮರೆತು ಕೂಡುವ ಅಬ್ಯಾಸಕ್ಕೆ ತಡೆಯುಂಟಾಗುವುದು. ಅಲ್ಲದೆ ನಾನು ಮೂಲತಃ ಶಿಕ್ಷಕನದ್ದರಿಂದ ಯಾವುದೆ ವಿಷಯವಿರಲಿ ಏನು ಪಾಠ ವಾಗಿದೆ ಎಂದು ಕೇಳಿ , ಹಿಂದಿನ ದಿನ ಬಿಟ್ಟಲ್ಲಿಂದ ಮುಂದುವರೆಸುವ  ನನ್ನ  ಅಭ್ಯಾಸ ಮಕ್ಕಳಲ್ಲಿ ಅಚ್ಚರಿ ಮತ್ತು ಮೆಚ್ಚುಗೆ ಮೂಡಿಸುವುದು. ಸಂಬಂಧಿಸಿ ಶಿಕ್ಷಕರು ಎಚ್ಚರಗೊಳ್ಳುವರು.ನಾನು ಹಾಗೆ ತರಗತಿಗೆ ಹೋದ ಕೆಲವೆ ನಿಮಿಷಗಳಲ್ಲಿ ಶಿಕ್ಷಕರು ಎಲ್ಲಿದ್ದರೂ ಓಡಿ ಬರುವರು. ಅವರು ಬಂದು ಬಾಗಿಲ್ಲಿ ನಿಂತಾಗ ನಾನು ಏನೂ ಮಾತನಾಡದೆ.ಮುಗಳ್   ನಗುತ್ತಾ  ಪಾಠ ನಿಲ್ಲಿಸಿ ಹೊರಬರುತಿದ್ದೆ. ಅದರಿಂದ ಅವರು  ಮುಂದೆ ಎಂದೂ ತರಗತಿಗೆ ತಡವಾಗಿ ಹೋಗುತ್ತಿರಲಿಲ್ಲ ಎಂಬುದು ನನ್ನ ಅನುಭವ.
 ಇದರಿಂದ ಇನ್ನೂ ಒಂದು ಅನುಕೂಲವಿತ್ತು. ಯಾವ ತರಗತಿಯಲ್ಲಿ ಎಷ್ಟು ಪಾಠವಾಗಿದೆ , , ವಿದ್ಯಾರ್ಥಿಗಳಿಗೆ ಏನು ತೊಂದರೆ ಇದೆ ಎಂಬುದನ್ನು ನೇರವಾಗಿ ಅವರಿಂದಲೆ ಅರಿಯಬಹುದಿತ್ತು. ಇದರಿಂದ ಶಿಕ್ಷಕರ ಮೇಲೆ ಒಂದು ರೀತಿಯ ನಿಯಂತ್ರಣ ತಾನೆ ತಾನಾಗಿ ಬರುವುದು. ಅಲ್ಲದೆ ವಿದ್ಯಾರ್ಥಿಗಳಾಗಲಿ ಅವರ ಪೋಷಕರಾಗಲಿ ಆ ಪಾಠ ಆಗಿಲ್ಲ. ಈ  ಕೆಲಸ ಮಾಡಿಸಿಲ್ಲ ಎಂದು ದೂರುವ  ಅವಕಾಶವೆ ಇರಲಿಲ್ಲ.ಇದರಿಂದ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ತನ್ನಿಂದ ತಾನೆ ಸಿಗುತಿತ್ತು. ಆದರೆ ಈ ಕಾಲೇಜಿನಲ್ಲಿ  ವಾರಗಳಾದರೂ  ಅದಕ್ಕೆ ಅವಕಾಶವೆ ಸಿಗಲಿಲ್ಲ.ಹೋದ ಮೂರುದಿನದ ನಂತರ ಸಿಬ್ಬಂದಿಯ ಸಭೆಯಲ್ಲಿ ನನ್ನ ಕಾರ್ಯವಿಧಾನವನ್ನು ವಿವರಿಸಿ ಅವರೆಲ್ಲರ ಸಹಕಾರ ಕೋರಿದೆ.  ಜನ ಜಂಗುಲಿಯ ವಿಷಯ ಬಂದಾಗ ಕೆಲವರ ಮುಖದಲ್ಲಿ ನಗೆ ಮೂಡಿತು. ನನಗೆ ಅದೇನೆಂದು ಅರ್ಥ ವಾಗಲಿಲ್ಲ
ಶನಿವಾರದ ದಿನ ಸಂಬಂಧಿಸಿದ ಗುಮಾಸ್ತರನ್ನು ಕರೆದು ಹೇಳಿದೆ. ಈ ರೀತಿ ಸಾರ್ವಜನಿಕರು ಯಾವಾಗ ಬಂದರೆ ಆಗ ಅವರ ದಾಖಲೆ ಸಿದ್ಧ ಪಡಿಸಿ ನನ್ನ  ಸಹಿಗಾಗಿ ತರುವುದು  ಬೇಡ. ಎಲ್ಲರಿಗೂ  ಒಂದು ಸಮಯ ನಿಗದಿಪಡಿಸಿ. ಆ ಸಮಯದಲ್ಲಿ ದಾಖಲೆ ನೀಡಿ. ನಾನೂ ಸಹ ಅಗತ್ಯವಾದ ದಾಖಲೆಗಳಿಗೆ ಒಟ್ಟಿಗೆ ಸಹಿ ಮಾಡುವೆ, ಎಂದೆ.
ಅದಕ್ಕೆ ಸಾರ್‌, ನೀವು ಅನುಮಾನ ಪಡಬೇಡಿ. ನಾವು ಲೆಕ್ಕ ಇಟ್ಟಿದ್ದೇವೆ. ತಿಂಗಳ ಕೊನೆಯಲ್ಲಿ ಬಟವಾಡೆ ಮಾಡುವೆವು. ಎಂದರು  ನನಗೆ ಏನೊಂದೂ ಅರ್ಥ ವಾಗಲಿಲ್ಲ. ಅವರ ಮುಖ ಮಿಕಿ ಮಕಮಿಕಿ ನೋಡಿದೆ.
ನೀವು  ಹೇಗೆ ಹೇಳಿದರೆ ಹಾಗೆ ಸಾರ್. ವಾರಕೊಮ್ಮೆ ಬಟವಾಡೆ ಮಾಡಲು  ಇಲ್ಲವೇ ತಿಂಗಳಿಗೊಮ್ಮೆ ಲೆಕ್ಕ ಕೊಡಲೂ ನಾವು ಸಿದ್ದ ಎಂದರು.
 ಅದೇನು ನೀವು ಹೇಳುವ ವಾರಕೊಮ್ಮೆ ಕೊಡುವ ಲೆಕ್ಕ ? ನಾನು ಹುಬ್ಬು ಏರಿಸಿ ಕೇಳಿದೆ.
ಅದೇ ಸಾರ್‌ ನೀವು ಸಹಿ ಮಾಡುವಿರಲ್ಲ. ಅದಕ್ಕೆ ನೇರವಾಗಿ ನೀವೆ ಕೇಳಿ ಹಣ ಪಡೆಯುವುದು ನಿಮ್ಮಘನತೆಗೆ ಸರಿಯಲ್ಲ. ಹಾಗಾಗಿ ನಿಮ್ಮ ಪರವಾಗಿ ನಾವೇ  ಹಣ ಪಡೆಯುವೆವು. ಅದನ್ನು ಪೈ  ಟು ಪೈ ಲೆಕ್ಕ ಇಟ್ಟು ನಿಮಗೆ ಒಪ್ಪಿಸುವೆವು. ಅದರಲ್ಲಿ ನೀವು ಕೊಟ್ಟಷ್ಟನ್ನು   ತೆಗದುಕೊಳ್ಳುತ್ತೇವೆ.
 ಈಗ ನನ್ನ ತಲೆಯಲ್ಲಿ ಬೆಳಕು ಝಗ್‌ ಎಂದಿತು. ಅವರು ಈ ವಗೆ ಮಾತನಾಡುತ್ತಿರುವುದು ಲಂಚದ ವಿಚಾರ ಎಂದು., ಅದಕ್ಕೇ ಸಹಿ ಮಾಡುವ ಗೋಜಲಿನ ಬಗ್ಗೆ ನಾನು ಶಿಕ್ಷಕರ ಸಭೆಯಲ್ಲಿ ಹೇಳಿದಾಗ ಕೆಲವರು ನಕ್ಕಿದ್ದು.
ನನ್ನ ಕುತೂಹಲ ಕೆರಳಿತು. ಯಾವುದಕ್ಕೆ ಎಷ್ಟೆಷ್ಟು ತೆಗೆದು ಕೊಳ್ಳುವಿರಿ ? ಎಂದು ಕೇಳಿದೆ
ಇಷ್ಟೆ ಬೇಕೂ ಎಂದು ಗೆರೆ ಕೊರೆದು ತೆದುಕೊಳ್ಳುವುದಿಲ್ಲ.  ಕೆಲಸವಾದರೆ ಅವರೆ ಸಂತೋಷದಿಂದ ಕೊಡುವರು. ನಾವು ಮಾತ್ರ ಅದನ್ನು ಲೆಕ್ಕ ಇಟ್ಟು ತಮಗೆ ಒಪ್ಪಿಸುವೆವು.
ಅವರ ಮಾತುನನಗೆ ತಲೆ ಚಿಟ್ಟು ಹಿಡಿಸಿತು.
 ಇದುವರೆಗೆ ಏನು ಮಾಡಿದಿರೋ ಅದು ನನಗೆ ಸಂಬಂಧಿಸದು. ಆದರೆ ಇನ್ನು ಮೇಲೆ ಇವಕ್ಕೆಲ್ಲ ಅವಕಾಶವಿಲ್ಲ . ನೀವು ತೆಗೆದುಕೊಳ್ಳುವುದೂ ಬೇಡ. ನನಗೆ ಲೆಕ್ಕ ಒಪ್ಪಿಸುವದೂ ಬೇಡ.
ನಿಯಮಬದ್ದವಾಗಿ ಸಾರ್ವಜನಿಕರು ಕೇಳಿದ ದಾಖಲೆಯನ್ನು ಕೊಡಲೇ  ಬೇಕು. ಅದು ನಮ್ಮ ಕರ್ತವ್ಯ . ನಾವು ಸರಕಾರಿ ಸೇವಕರು. ಸರ್ಕಾರದ ಕೆಲಸಕ್ಕಾಗಿ ಬಂದರೆ ನಿಯಮದ ಪ್ರಕಾರ ಮಾಡುವುದು ನಮ್ಮ ಧರ್ಮ. ಇನ್ನುಮೇಲೆ ಸಂಗ್ರಹ ಮತ್ತು ಬಟವಾಡೆ ಪದ್ದತಿ ಬೇಡ ಎಂದು ಖಡಾಖಂಡಿತವಾಗಿ ತಿಳಿಸಿದೆ.
 ಮುಂದಿನ ವಾರ ಗಮನಿಸಿದರೆ ಅವರು ಬರ ಬೇಡವೆಂದರೂ ಜನ ಬರುತ್ತಲೆ ಇದ್ದರು. ಆದರೆ ಈಗ ಕಚೇರಿಯ ಹೊರಗೆ ಅವರನ್ನು ಕರೆದು ಭೇಟಿಯಾಗಲು ಮೊದಲು  ಮಾಡಿದರು. ನಮ್ಮ ಶಿಕ್ಷಕರೊಬ್ಬರು , ಸಾರ್‌, ನೀವು  ಹಣ ಬೇಡ ಎಂದಿರಿ ಎಂಬುದು  ನಮಗೆ ಸಂತೊಷವಾಯಿತು. ಅದರಿಂದ ನಿಮಗೆ ನಷ್ಟವಾಯತೆ ವಿನಃ ಜನರಿಗೆ ಅನುಕೂಲವಾಗಿಲ್ಲ. ಈಗ ನಿಮ್ಮ ಮತ್ತು ಅವರ ಪಾಲು ಎರಡನ್ನೂ ಅವರೇ  ತೆಗೆದು ಕೊಳ್ಳುವರು. ಅಲ್ಲದೆ ಈ ಪ್ರಾಂಶುಪಾಲರು ಬಹು ಸ್ಟ್ರಿಕ್ಟ್‌ ಎಂದು ಹೆದರಿಸಿ ಇನ್ನೂ ಹೆಚ್ಚು ವಸೂಲಿ ಮಾಡಲಾಗುತ್ತಿದೆ.
ನನಗೆ ಏನೂ ಮಾಡಲು ತೋಚಲಿಲ್ಲ.. ಹೇಗಾದರೂ ಮಾಡಿ ಇದನ್ನು ತಡೆಯಲೇ ಬೇಕಿತ್ತು.  ಅವರನ್ನು ಕೇಳಿದರೆ ಇಲ್ಲ ಸಾರ್‌, ನಾವು ಹಣವನ್ನು ಮುಟ್ಟುತ್ತಲೆ ಇಲ್ಲ ಎಂದು ವಾದಿಸಿದರು.
ಅದಕ್ಕೆ ಕೊನಗೆ ಒಂದು ಪರಿಹಾರ ದೊರಕಿತು. ಅವರು ಕೊಡುವರೋ ಬಿಡುವರೋ ಅದು ಬೇರೆ ಮಾತು. ಪರಸ್ಪರ ಸಂಪರ್ಕಕ್ಕೆ ಬಂದರೆ ತಾನೆ ಈ ಎಲ್ಲ ವ್ಯವಹಾರ. ಅದಕ್ಕೆ ನಾನು ಒಂದು ದಾಖಲೆ ನಿರ್ವಹಿಸಲು ತೀರ್ಮಾನಿಸಿದೆ. ಯಾವುದೆ ದಾಖಲೆಯನ್ನು ತಕ್ಷಣ ಕೊಡುವ ಪದ್ದತಿ ನಿಲ್ಲಿಸಿದೆ. ಬಂದವರು ಅರ್ಜಿ ಸಲ್ಲಿಸಿ ಆ ಪುಸ್ತಕದಲ್ಲಿ ದಿನಾಂಕ ವಿಷಯ ನಮೂದಿಸ ಬೇಕು ಅವರ ಬೇಡಿದ ದಾಖಲೆಗೆ ಅನುಗುಣವಾಗಿ ಒಂದು ದಿನದಿಂದ ಮೂರುದಿನ ದೊಳಗೆ ಅದನ್ನು ನೀಡಲಾಗುವುದು. ಅದನ್ನು ಅವರು ನಿಗದಿತ ಸಮಯದಲ್ಲಿ ನನ್ನ ಸಮ್ಮುಖದಲ್ಲೆ ಪಡೆಯುವಂತೆ ಸೂಚನೆ ನೀಡಲಾಯಿತು.  ಈ ವಿಷಯವನ್ನು ಸೂಚನಾ ಫಲಕದಲ್ಲೂ ಪ್ರದರ್ಶಿಸಲಾಯಿತು. ಅದನ್ನು ಓದದೆ ಬಂದವರಿಗೆ ಅಗತ್ಯ ಮಾಹಿತಿ ನೀಡಲು ಬಾಗಿಲಲ್ಲೆ ಕುಳಿತಿರುವ ಜವಾನರಿಗೆ ತಿಳಿಸಲಾಯಿತು. ಟ್ರೂ ಕಾಪಿಗಳ ದೃಢೀಕರಣಕ್ಕೆ ಸಮಯ ನಿಗದಿಪಡಿಸಿ ಆ ಆವಧಿಯಲ್ಲಿ ಬಂದವರಿಗೆ ಮತ್ರ ಅವಕಾಶ ನೀಡಲಾಯಿತು. ಅದೂ ಅಲ್ಲದೆ ನಮ್ಮಲ್ಲಿ ಏಳೆಂಟು ಜನ ಉಪನ್ಯಾಸಕರೂ ಪತ್ರಾಂಕಿತ ಅಧಿಕಾರಿಗಳಾದ್ದರಿಂದ ಅವರಿಗೆ ಸೀಲು ಮಾಡಿಸಿಕೊಂಡು ತಮ್ಮ ದೈನಂದಿನ ಕೆಲಸಕಕ್ಕೆ ತೊಂದರೆಯಾಗದಂತೆ ದೃಢಿಕರಣ ಮಾಡಿಕೊಡಲು ತಿಳಿಸಲಾಯಿತು. ಮೊದ ಮೊದಲು ಗೊತ್ತಿಲ್ಲದೆ ನನ್ನ ಹತ್ತಿರ ಬಂದವರಿಗೆ  ಉಪನ್ಯಾಸಕರ  ಕೊಟ್ಟಡಿಗೆ ಕಳುಹಿಸಲಾಗುತಿತ್ತು. ಅವರು ಒಂದು ರೀತಿಯಲ್ಲಿ ತಮಗೆ ದೊರೆತ ಪ್ರಾಧಾನ್ಯಕ್ಕೆ ಖುಷಿಯಿಂದ ಸ್ಪಂದಿಸಿದರು ಸಿಕ್ಕೆ ಹಾಕಿ ಅದರ ಮೆಲೆ ಹಸಿರು ಇಂಕಿನ ಸಹಿ  ಮಾಡುವುದು ಒಂದು ಗೌರವ ಎನಿಸಿತು. ಕೆಲವರು ಮನೆಗೆ ಹೋಗಿ  ಮನವಿ ಮಾಡಿಕೊಂಡರೆ ಅಲ್ಲಿಯೂ ಸಹಿ ಮಾಡ ತೊಡಗಿದರು. ಮೊದಲಲ್ಲಿ ತೊಂದರೆಯಾಯಿತೆಂದು ಗೊಣಗಿದ ಸಾರ್ವ ಜನಿಕರು ಹೊಸ ವ್ಯವಸ್ಥೆಯಿಂದ ತೃಪ್ತರಾದರು.
 ನಮ್ಮ ಲಿಪಿಕ ನೌಕರರು ತುಸು ಅಸಮಧಾನ ಗೊಂಡರು. ನಮ್ಮ ಮೇಲೆ ನಿಮಗೆ ಅಪನಂಬಿಕೆಯೇ ಎಂದು ನನ್ನನ್ನು ನೆರವಾಗಿ ಕೇಳಿದರು.ಅತಿ ತುರ್ತು ಕೆಲಸವರುವುದು. ನಮಗೆ ಅತಿ ಪರಿಚಿತರು ಎಂದು ಬರುವರು . ಅವರಿಗೆ ಏನೆಂದು ಉತ್ತರ ಕೊಡುವುದು ಎಂಬುದು ಅವರ ಅಳಲು. ಅದಕ್ಕೆ ನಾನು ಒಂದು ಅವಕಾಸ ನೀಡಿದೆ. ಅ ರೀತಿಯ ವಿಶೇಷ ಸಂದರ್ಭದಲ್ಲಿ  ನಿಯಮಕ್ಕೆ ವಿನಾಯತಿ ಇದೆ. ಅವರು ನನ್ನನ್ನು ಭೇಟಿಯಾಗಿ ವಿಷಯತಿಳಿಸಿದರೆ ಅವರ ವಿವರಣೆ  ತೃಪ್ತಿ ಕರವಾಗಿದ್ದರೆ ತಕ್ಷಣವೆ ಸಹಿ  ಮಾಡಿಸಿ ಕೊಡುವ ವ್ಯವಸ್ಥೆ ಮಾಡಬಹುದೆಂದು ಸಮಾಧಾನ ಮಾಡಿದೆ..
 ಆದರೂ  ಒಬ್ಬಿಬ್ಬರು ಬಂದು ಅವರನ್ನು ಕಾಣುವದು ನೆಡೆದೆ ಇತ್ತು. ನಾನು ಮಾತ್ರ ಪುಸ್ತಕದಲ್ಲಿ ನಮೂದಾದ ಅರ್ಜಿಗಳಿಗೆ ಸಂಬಂಧಿಸಿದ ದಾಖಲೆಗೆ ಮಾತ್ರ ಸಹಿ ಮಾಡಿ ಅಲ್ಲಿ ಕೊಡುವ ದಿನಾಂಕದೊಳಗೆ  ಅವರಿಗೆ ತಲುಪಲು ತೋಂದರೆ ಯಾಗದಂತೆ ಎಚ್ಚರಿಕೆಯನ್ನು ಮುಂದುವರಿಸಿದೆ.  .ಇನ್ನು ಕೆಲವರು ನನ್ನ ಎದುರಲ್ಲೆ ದಾಖಲೆ ಪಡೆದರೂ  ಗುಮಾಸ್ತರನ್ನು ಹೊರೆಗ ಕರೆದು ಮಾತ ನಾಡುವುದು ಗಮನಕ್ಕೆ ಬಂದಿತು. ಅವರು ಬರಿ ಮಾತನಾಡಿದರೋ ಇಲ್ಲವೆ ಇನ್ನೇನಾಯಿತೋ ಎಂದು ನಾನು ಕೆದಕಲು ಹೋಗಲಿಲ್ಲ.ಕಚೇರಿಯಲ್ಲಿ ಸದಾ ತುಂಬಿ  ಕೊಂಡಿರುತಿದ್ದ ಜನಜಂಗುಳಿ ಕಡಿಮೆಯಾಯಿತು. ಹೊಸದರಲ್ಲಿ ತುಸು ಗುನಗುನು ಎಂದರೂ ಬರಬರುತ್ತಾ  ಹೊಸ ಪದ್ದತಿಗೆ ಎಲ್ಲರೂ ಹೊಂದಿಕೊಂಡರು.ಕೈಲಾದ ಮಟ್ಟಿಗೆ ಬದಲಾವಣೆ ತಂದ ತೃಪ್ತಿ ನನಗಾಯಿತು. ಕ್ರಮೇಣ ಬಹಳ ಜನ ಈ ಹೊಸ ವಿಧಾನವನ್ನುಮೆಚ್ಚಿಕೊಂಡರು. ನನಗೂ ಶೈಕ್ಷಣಿಕ ಚಟುವಟಿಕೆಗಳ ಕಡೆಗೆ ಗಮನ ಹರಿಸಲು ಸಾಕಷ್ಟು ಸಮಯ ದೊರಕಿತು.ಇದಾದ ಸುಮಾರು ೧೫ ವರ್ಷದ ನಂತರ ಸರ್ಕಾರ ತಂದ ಸಕಾಲ ಯೋಜನೆ  ನನಗೆ ಆ ದಿನಗಳ ನೆನಪು ತಂದಿತು



No comments:

Post a Comment