Thursday, May 23, 2013

ಆರರಿಂದ ಅರವತ್ತು- ಸರಣಿ ( ಮರಿಯಲಾಗದ ಮರಿ)

ಮರೆಯಲಾರದ ಮರಿಸ್ವಾಮಿ ( ಮುಂದುವರಿ ದಭಾಗ)

ಮರಿಸ್ವಾಮಿಯವರದು  ಬಹು ವರ್ಣರಂಜಿತ ವ್ಯಕ್ತಿತ್ವ.  ಅವರ ತಂದೆ ಅವರ ಊರಿನಲ್ಲಿಯ ಸರಕಾರಿ ಶಾಲೆಯಲ್ಲಿ ನಾಲ್ಕನೆ ದರ್ಜೆ ನೌಕರರು.  ಕಿತ್ತು ತಿನ್ನುವ ಬಡತನ ಆದರೂ ಮಗ ಬಹು ಜಾಣ. ತುಂಬ ಬಡತನದಲ್ಲಿ ಬೆಳೆದವರು. ಕಷ್ಟ ಜೀವಿ. ಹೇಗೋ ಎಂ. ಎ ಮುಗಿಸಿದರು, ಅದೂ ಪ್ರಥಮ ವರ್ಗದಲ್ಲಿ . ನಂತರ ತಮ್ಮದೆ ಊರಿನಲ್ಲಿ ಉಪನ್ಯಾಸಕರಾಗಿ ನೌಕರಿ ಪಡೆದರು. ಉತ್ತಮ ಶಿಕ್ಷಕರು ಎಂಬ ಹೆಸರು ಗಳಿಸಿದರು.  ಗಟ್ಟಿ ಮುಟ್ಟಾದ ಶರೀರ. ಉತ್ತಮ ಕ್ರೀಡಾ ಪಟು. ಆಟ ಪಾಠಗಳೆರಡರಲ್ಲೂ ಎತ್ತಿದ ಕೈ. ವಾಲಿಬಾಲ್ನಲ್ಲಂತೂ ಸಾಕಷ್ಡು ಪ್ರೌಢಿಮೆ. ಹೀಗಾಗಿ ಹಳೆಯ ಗೆಳೆಯರ ಜೊತೆಗೂಡಿ ಊರಿನಲ್ಲಿ ಉತ್ತಮ ತಂಡ ಕಟ್ಟಿದರು. ಜತೆಗೆ ಕಾಲೇಜು ಮಕ್ಕಳಿಗೂ ತರಬೇತಿ ನೀಡಿದರು. ಕಟ್ಟು ಮಸ್ತಾದ , ಕಡೆದ ವಿಗ್ರಹದ ತರಹದ ದೇಹ,ಆಟೋಟಗಳಲ್ಲಿ ಮುಂದಾಳು, ಜತೆ ನಯವಿನಯ ಉಳಿಸಿಕೊಂಡಿದ್ದರು. ಹೀಗಾಗಿ ಊರಿನಲ್ಲಿಯೂ ತುಂಬ ಜನಪ್ರಿಯ.ಓದಿದ ಶಾಲೆಯಲ್ಲಿಯೇ ಕೆಲಸ. ಬಹು ಬೇಗ ಹೆಸರು ಬಂದಿತು. ಚಿಕ್ಕದಾಗಿ ವ್ಯವಹಾರಕ್ಕಿಳಿದರು.ಮೊದಲು ಫೈನಾನ್ಸ ಕಂಪನಿ. ಸವಿ ಮಾತು. ನಯವಾದ ನಡತೆ. ಬೇಗ ವ್ಯವಹಾರ ಕೈ ಹಿಡಿಯಿತು. ನಂತರ ಕೇಬಲ್ ವ್ಯವಹಾರಕ್ಕೆ ಕೈ ಹಾಕಿದರು. ಜನ ಬೆಂಬಲ ಇದ್ದೇ ಇತ್ತು. ಹಾಗಾಗಿ ಅಲ್ಲೂ ಭದ್ರವಾಗಿ ತಳ ಊರಿದರು.
ನಂತರ ಎಲೆಕ್ಟ್ರಾನಿಕ್ ಅಂಗಡಿ ತೆರದರು. ರೇಡಿಯೋ, ಟಿ ವಿ , ಫ್ರಿಝ್ ಅದೂ ಕಂತಿನ ಮೇಲೆ ಕೊಡುವ ಯೋಜನೆ ಹಾಕಿದರು.  ಹಣದ ಹೊಳೆ ಹರಿಯಿತು. ಬಂದ ಎಲ್ಲ ಅಧಿಕಾರಿಗಳ ಜೊತೆ ಬಾಂಧವ್ಯ ಬೆಳಸಿದರು. ವಿದ್ಯಾವಂತ, ವಿನಯ ಶೀಲ ಮೇಲೆ ಧಾರಾಳಿ.  ಸರಿ ಇನ್ನೇನು ಬೇಕು.  ಬಂದ ಅಧಿಕಾರಿಗಳೆಲ್ಲ ಬಂಧುಗಳೆ. ಜಿಲ್ಲಾ ಮಟ್ಟದ ಇಲಾಖಾ ಮುಖ್ಯಸ್ಥರನ್ನು ಹಿಡಿದು ಅವರ ಆಧೀನ  ನೌಕರರು ಇವರಿಂದ ಟಿವಿ. ಕೊಂಡರೆ ಅವರ ಸಂಬಳದಲ್ಲಿ ಪ್ರತಿ ತಿಂಗಳೂ ಹಿಡಿದು ಕೊಡುವ ಅವಕಾಶ ಕೊಡಲು ಕಚೇರಿ ಮುಖ್ಯಸ್ಥರಿಗೆ ಆದೇಶಗಳು ಹೋದವು.  ಸಹಜವಾಗಿ ನೌಕರರಿಗೆ ಸುಲಭ ಕಂತಿನ ಮೇಲೆ ಐಷರಾಮಿ ವಸ್ತುಗಳು ದೊರೆತವು. ಅಧಿಕ್ಕಾಗಿ ತನ್ನ ಆಧೀನ ನೌಕರರ ಜೀವನ ಮಟ್ಟ ಉತ್ತಮ ಪಡಿಸಿದ ತೃಪ್ತಿ. ಇವರಿಗೆ ವ್ಯಾಪಾರ ಅಭಿವೃದ್ಧಿ.  ಯಾರು ಯಾರಿಗೆ ಏನೇನು ಸಲ್ಲಬೇಕೋ ಅದು ಸಲ್ಲುತಲಿತ್ತು.  . ಸರ್ವರೂ ಸುಖಿಗಳು. ಇದರಿಂದ ಇನ್ನೂ ಹೆಚ್ಚನ ಅನುಕೂಲ ಪಡೆದವರು ಇದ್ದರು. ಅವರ ಬಳಿ ಈಗಾಗಲೆ ಟಿ..ವಿ ಇದ್ದರೂ ಸಾಲ ಕ್ಕೆ ಗೆ ಸಿಗುವುದೆಂಬ ಒಂದೆ ಕಾರಣಕ್ಕೆ ಕೊಳ್ಳುತ್ತಿದ್ದರು.  ನಂತರ ಅವರು ವಸ್ತುವಿನ ಬದಲಾಗಿ ನಗದು ಕೊಡುವಂತೆ ಮನವಿ ಮಾಡಿಕೊಳ್ಳುತ್ತಿದ್ದರು. ಮಾನವಿಯತೆ ಆಧಾರದ  ಮೇಲೆ ಅರ್ಹರಿಗೆ ಸಹಾಯ ಮಾಡಿ ಇಲಾಖೆಯಿಂದ ಮರು ]ವಸೂಲಿಯನ್ನು ಮಾಢಿಕೊಳ್ಳುತ್ತಿದ್ದರು.  ಯಥಾರೀತಿ ಇವರು ಹೇಳಿದ ಬೆಲೆಗೆ ಅವರು ಮಾರುತ್ತಿದ್ದರು.ಲಾಭ ದ್ವಿಗುಣವಾಗುತ್ತಿತ್ತು.  ಸಾಮ , ದಾನ , ಭೇದ ಹೀಗೆ ಚಾಣಕ್ಯನು ಅರ್ಥ ಶಾಸ್ತ್ರದಲ್ಲಿ ಹೇಳಿದ ಎಲ್ಲ ಉಪಾಯಗಳ ಬಳಕೆಯಾಗಿ ವ್ಯವಹಾರ ಬಹು ಚೆನ್ನಾಗಿ ಕುದುರಿತು. ಹಣ ಹೆಚ್ಚಾದಂತೆ ಉದಾರತೆಯೂ ಹೆಚ್ಚಿತು. ಊರಿನಲ್ಲಿ ಯಾವುದೆ ಸಾರ್ವಜನಿಕ ಕಾರ್ಯ ಕ್ರಮವಾದರೂ ಉದಾರವಾದ ವಂತಿಕೆ. ತಮ್ಮ  ಪ್ರೀತಿಯ ಆಟಕ್ಕೆ ಸುಸಜ್ಜಿತ ಮೈದಾನ. ಆಟಗಾರರಿಗೆ ಸಮವಸ್ತ್ರ, ಬೇರೆ ಊರಿಗೆ ಪಂದ್ಯಾಟಗಳಿಗೆ ಹೋದಾಗ ಉಚಿತ ಊಟ, ತಿಂಡಿ ,ಪ್ರಯಾಣ. ತಮ್ಮ ಊರಿನಲ್ಲೆ ರಾಜ್ಯ ಮಟ್ಟದ ಪಂದ್ಯಾಟಗಳ ಸಂಘಟನೆ, ಆದಕ್ಕೆ  ಅದ್ಧೂರಿಯ ವ್ಯವಸ್ಥೆ, ಜನ ನಾಯಕರಿಗೆ, ಉನ್ನತ ಅಧೀಕಾರಿಗಳಿಗೆ ಆಲ್ಲಿ ವೇದಿಕೆ. ಅವರಿಗೆ ಸರ್ವೋಪಚಾರ . ಇದರಿಂದ ಇವರು ಮರಿಯಾಗಿದ್ದವರು ಮರಿಸ್ವಾಂಯ್ಯನವರು ಆದರು.ಅಧಿಕಾರಿಗಳೂ ಮತ್ತು ಶಾಸಕರ ವಿಶೇಷ ಪ್ರೀತಿಗೆ ಪಾತರ್ರಾದರು. ಇವೆಲೆದರನಡುವೆ ಕಾಲೇಜಿಗೆ ಹೋಗಿ ಪಾಠಮಡಲು ಪುರುಸೊತ್ತು ಎಲ್ಲಿ.ವಿದ್ಯಾರ್ಥಿಗಳ ಪ್ರೀತಿ ಹೆಗೋ ಗಳಿಸಿದರೂ ಒಳಗೊಳಗೆ ಅಪಸ್ವರ ಪ್ರಾರಂಭವಾಯಿತು. ಮೊದಲೆ ದೊಡ್ಡ  ಕಾಲೇಜು. ಒಂದೆ ವಿಷಯದಲ್ಲಿ ಇಬ್ಬರು ಮೂವರು ಉಪನ್ಯಾಸಕರು. ಇತರರಿಗೆ ಅಸೂಯೆ.ಅದರ ಫಲ ವಾಗಿ ದೂರುಗಳು ಹೊಗತೊಡಗಿದವು. ಮರಿಸ್ವಾಮಿ ವ್ಯವಹಾರೆ ಕುಶಲಿ. ಯಾಕೆ . ಇಲ್ಲದ ಉಸಾಬರಿ, ಇದ್ದೂರಿನ ಉದ್ಧಾರಕ್ಕೆ ಹೋಗಿ ಅಪವಾದ ಬೇಡ ಎನಿಸಿ ,  ಹತ್ತಿರದಲ್ಲೆ ಇದ್ದ ಚಿಕ್ಕ ಕಾಲೇಜಿಗೆ ತಾವಾಗಿಯೆ ವರ್ಗ ಮಾಡಿಸಿಕೊಂಡರು ಅಲ್ಲಿ ತಮ್ಮ ಧಾರಾಳತನದಿಂದ ಎಲ್ಲರ ಮನ ಮೆಚ್ಚಿಸಿದರು ವಿದ್ಯಾರ್ಥಿ ಗಳಿಗೆ ತೊಂದರೆಯಾಗ ಬಾರದೆಂದ ತಾವೆ ಹಣ ಕೊಟ್ಟು ಇನ್ನೊಬ್ಬರನ್ನು ಪಾಠ ಮಾಡಲು ವ್ಯವಸ್ಥೆ ಮಾಡಿದರು. ಅದಕ್ಕೆ ಎಲ್ಲರ ಮೌನ ಸಮ್ಮತಿ  ಇತ್ತು. ಪ್ರಿನ್ಸಿಪಾಲರು ಪರ ಊರಿನವರು. ಬಲವದ್‌ ವಿರೋಧ ಏಕೆ?. ಹೇಗಿದ್ದರೂ ಯಾರಿಗೂ ತೊಂದರೆಯಾಗುತ್ತಿಲ್ಲ ಎಂದು ಗಮನ ಹರಿಸಲಿಲ್ಲ. ಇವರೂ ಪಾಪ , ಪೂರ್ತಿ ಹೋಗದೆ ಇರುತ್ತಿರಲಿಲ್ಲ. ಯಾವಾಗಲಾದರೂ ಹೊದಾಗ ತುಸು ಹೊತ್ತು ಇದ್ದು ತರಗತಿಗೂ ಹೋಗಿ ಮಕ್ಕಳ ಪ್ರಗತಿಯ ಬಗ್ಗೆ ವಿಚಾರಿಸಿ ಸ್ವಲ್ಪ ಹೊತ್ತು ಪಾಠವನ್ನೂ ಮಾಡಿ ಬರುತ್ತಿದ್ದರು. ಅವರ ವಿಷಯದಲ್ಲಿ ಫಲಿತಾಂಶವೂ ಚೆನ್ನಾಗಿಯೇ ಬರುತ್ತಿಇತ್ತು. ಇದು ಅನೇಕ ವರ್ಷದಿಂದ ನಡೆದು ಬಂದ ಪದ್ದತಿ.ಎಲ್ಲರೂ ಬಲ್ಲ ರಹಸ್ಯ.
ಯಾವಾಗ ನಮ್ಮ ಕಾಲೇಜಿನಲ್ಲಿ ವಾರದಲ್ಲಿ ಮೂರುದಿನ ಪಾಠ ಮಾಡಬೇಕೆಂದು ನಿಯೋಜನೆಯಾಯಿತೋ ಎಲ್ಲರ ಕಣ್ಣು ನನ್ನ ಕಡೆ ತಿರುಗಿದವು. ಅವರು ನಿಯೋಜನೆ ಆದೇಶವನ್ನು ರದ್ದು ಮಾಡಿಸಲು ಪ್ರಯತ್ನಿಸಿದರು. ಫಲಕಾರಿಯಾಗಲಿಲ್ಲ. ಕೊನೆಗೆ ಬಂದು ನಮ್ಮಕಾಲೇಜಿನಲ್ಲಿ ವರದಿ ಮಾಡಿಕೊಂಡರು.
ಅಂದು ನನ್ನ ಛೇಂಬರಿಗೆ ಬಂದು ,” ಸಾರ್ ನಾನು ನಿಮ್ಮ ಕಾಲೇಜಿಗೆ ವಾರಕ್ಕೆ ಮೂರು  ದಿನ ಪಾಠ ಮಾಡಬೇಕಿದೆ.ನನ್ನ ವಿಷಯ ನಿಮಗೂ ಗೊತ್ತು. ಆ ಕಾಲೇಜಿನಲ್ಲಿ ಮಾಡಿದ ವ್ಯವಸ್ಥೆಯನ್ನೆ ಇಲ್ಲಿಯೂ ಮಾಡುವೆ.ನನಗೆ ಎಷ್ಟು  ಹಣ ಖರ್ಚಾದರೂ  ಚಿಂತೆ ಇಲ್ಲ  , ಯಾವಾಗಲಾದರು ಒಮ್ಮೆಬಂದು ಸಹಿ ಮಾಡುವೆ ಅವಕಾಶ ಕೊಡಿ “ ಎಂದು ವಿನಂತಿಸಿದರು.  ನಾನು ಬದಲಿ ವ್ಯವಸ್ತೆಗೆ ಒಪ್ಪಿಕೊಳ್ಳಲಿಲ್ಲ. ನಂತರ ಇತರ ಎಲ್ಲ ಉಪನ್ಯಾಸಕರೂ ಬಂದು ಅವರ ಪರವಾಗಿ ವಿನಂತಿ ಮಾಡಿಕೊಂಡರು.
. “ ಸಾರ್ ಅವರೂ ಎಷ್ಟೋ ವರ್ಷಗಳಿಂದ ಪಾಠವನ್ನೆ ಮಾಡುವುದಿಲ್ಲ. ಅದು ಇಲಾಖೆಗೂ ಗೊತ್ತು, ಶಾಸಕರೂ ಅವರ ಸ್ನೇಹಿತರು, ಹೇಗಿದ್ದರೂ ಬೋಧನೆಗೆ ತಂದರೆಯಾಗದಂತೆ ವ್ಯವಸ್ಥೆ ಮಾಡುವರು. ನಾವೂ ಕಮಕ್ ಕಮಕ್ ಎನ್ನವುದಿಲ್ಲ.’
ನಾನು ಅವರ ಎಲ್ಲ ಮಾತನ್ನೂ ಸಾವಧಾನವಾಗಿ ಆಲಿಸಿದೆ
ನಾನು ಸಂಧಿಗ್ದದಲ್ಲಿ ಬಿದ್ದೆ. ಅವನು ಬಹಳ .ಬಹಳ ಛಾತಿವಂತ ಮನುಷ್ಯ. ಶಾಸಕರ ಹೆಗಲ ಮೇಲೆ ಕೈ ಹಾಕುವ ಸಲಿಗೆ ಇದೆ.ಅದಿಕಾರಿಗಳೂ ಅವನ ಋಣ ಲ್ಲಿರುವವರೆ. ಆದರೆ ನಾನು ಈವರೆಗೆ ಪಾಲಿಸಿ ಕೋಡು ಬಂದ ತತ್ವಕ್ಕೆ ತಿಲಾಂಜಲಿ ಬಿಡಬೇಕಾಗಿತ್ತು ಅವನಲ್ಲಿನ  ಒಂದು ಸದ್ಗುಣ ಯಾವತ್ತು. ಯಾವದೆ ಕಾರಣಕ್ಕೂ ಕೆಟ್ಟ ಹೆಸರು ಮತ್ತು ಅಪನಂದೆಗೆ ಗುರಿಯಾಗಲು ಸಿದ್ಧರಿದ್ದಿಲ್ಲ. ಇಲಾಖೆ ಮತ್ತು ಸಮಾಜದಲ್ಲಿ ಗಣ್ಯ ಎನಿಸಿಕೊಂಡಿದ್ದ.
ಸಾರ್ವಜನಿಕರಲ್ಲಿ ಮತ್ತು ಇಲಾಖೆ ಯಲ್ಲಿ ನನಗೆ ತುಂಬ ಕರ್ತವ್ಯ ನಿಷ್ಠೆ ಮತ್ತು ಪ್ರಮಾಣಿಕತೆಯ ಬಗ್ಗೆ   ಹೆಸರಿತ್ತು.   ಸಾರ್ವಜಕನಿಕರು, ವಿದ್ಯಾರ್ಥಿಗಳಲ್ಲಿ ಗೌರವ ಇತ್ತು. ಈಗ ಎಲ್ಲರೂ ಇಬ್ಬರಲ್ಲೂ ಅಗಬಹುದಾದ ಸಂಘರ್ಷ ಹೇಗಿರಬುದು  ಎಂದು ಕಾತುರರಾಗಿದ್ದರು.ನನ್ನ ಆತ್ಮೀಯರಿಗೂ ಏನಾಗುವದೋ ಎಂಬ ಆತಂಕ.
 ಕೆಲವು ಸಮಯದ ನಂತರ ನಾನು ಅವರೊಬ್ಬರನ್ನೆ ಕರೆಸಿ ಮಾತ ನಾಡಿದೆ. ನಿಮಗೆ ನಮ್ಮ ಕಾಲೇಜಿಗೆ ನಿಯೋಜನೆಯಾಗಿದೆ. ಇಲ್ಲಿ ಬಂದು ವಾರದಲ್ಲಿ ಮೂರು ದಿನ  ಪಾಠ ಮಾಡಲೆ ಬೇಕು.. ನೀವು ಆ ಕಾಲೇಜಿನಲ್ಲಿ ಏನು ಮಾಡುವಿರಿ ಎಂಬುದು ನನಗೆ ಸಂಬಂಧಿಸಿದ ವಿಷಯವಲ್ಲ. ಆದರೆ ಇಲ್ಲಿ ನೀವು ನಿತ್ಯವೂ ಬರಲೇ ಬೇಕು. ಬಂದರೆ ಮಾತ್ರ ಹಾಜರಿ. ಇಲ್ಲವಾದರೆ ಗೈರುಹಾಜರಿ ಎಂದು ನಾನು ವರದಿ ಮಾಡುವೆ. ಆದರೆ ನಿಮಗಾಗಿ ಒಂದು ವಿಶೇಷ ಸೌಲಭ್ಯವನ್ನು ಕೊಡುವೆ. ಅದು ಕಾನೂನು ಬಾಹಿರವಲ್ಲ. ಆದರೆ ಕಾನೂನೇತೆತರ ಸೌಲಭ್ಯ. ನಿಮಗೆ ಇಲ್ಲಿ ಬಂದಾಗ ಕಾಲೇಜು ಅವಧಿ ಮುಗಿಯುವ ತನಕ ಕಾಲೇಜಿನಲ್ಲಿಯೇ ಇರಬೇಕು ಎಂದು ಕಡ್ಡಾಯ ಮಾಡುವುದಿಲ್ಲ. ನೀವು ಬಂದು ನಿಮ್ಮ ಪಾಠ ಮುಗಿಸಿಕೊಂಡು ಹೋಗಬಹುದ ಎಂದೆ. ಹೇಗಿದ್ದರೂ ಅವರು ಕಾರಿನಲ್ಲೆ ಕಾಲೇಜಿಗೆ ಬರುತಿದ್ದರು.  ನೀವು ಹೇಗೆ ಮಾಡುವಿರೋ ಗೊತ್ತಿಲ್ಲ . ನನಗೆ ವಿದ್ಯಾರ್ಥಿಗಳಿಂದ ಮತ್ತು ನಿಮ್ಮ  ಸಹೊದ್ಯೋಗಿಗಳಿಂದ ದೂರು ಬರಬಾರದು: ಎಂದು ಶಾಂತವಾಗಿ ಹೇಳಿದೆ.
 ಅದನ್ನು ನನಗೆ ಬಿಡಿ,ಸಾರ್ ಎಂದರು. ಎಲ್ಲ ಉಪನ್ಯಾಸಕರೂ ನನ್ನ ಆತ್ಮೀಯರೆ. ವ್ಯವಸ್ಥೆ ಮಾಡುವೆ  ಎಂದರು. ಮಾರನೆ ದಿನ ಎಲ್ಲ ಉಪನ್ಯಾಕರೂ ಬಂದು, ಸಾರ್ ನೀವು ಮರಿಯವರಿಗೆ ರಿಯಾಯಿತಿ ಕೊಡಿ . ನಾವೆಲ್ಲರೂ ಹೊಂದಿಕೊಂಡು ಹೋಗುತ್ತೇವೆ. ಎಂದರು. ನಂತರ ಅವರು ತರಗತಿಗೆ ದಿನವೂ ಬರಲು ಶುರು ಮಾಡಿದರು. ಅಷ್ಟೆ ಅಲ್ಲ ಇತರರು ಅವರು ಯಾವಾಗ ಬಂದರೂ ತಮ್ಮ ತರಗತಿಯನ್ನು ಬಿಟ್ಟುಕೊಟ್ಟು  ನಂತರ ತಾವು  ಅವರ ತರಗತಿ ತೆಗೆದು ಕೊಳ್ಳುತ್ತಿದ್ದರು. ಅವರ ಈ ಸಹಕಾರದಿಂದ ಅವರು ವಾರದಲ್ಲಿ ಮೂರುದಿನ  ಕಾರಿನಲ್ಲೆ ಬಂದು ಎರಡು ತಾಸು ಪಾಠ ಮುಗಿಸಿ ಹಾಜರಿ ಹಾಕಿ ಹೊರಡುತ್ತಿದ್ದರು.ಕೆಲ  ದಿನಗಳ ತರುವಾಯ ತರಗತಿಗೆ ಹೋಗಿ ವಿದ್ಯಾರ್ಥಿಗಳನ್ನು ಪಾಠ ಹೇಗೆ ಸಾಗಿದೆ ಎಂದು ವಿಚಾರಸಿದೆ.ಅವರು ಒಳ್ಳೆಯ ಅಭಿಪ್ರಾಯ ಕೊಟ್ಟರು.  ಯಾವುದೇ ಸಮಸ್ಯೆಇರಲಿಲ್ಲ. ಆದರೂ ಅವರು ವಾರಕ್ಕೆ  ಪ್ರತಿ ತರಗತಿಗೆ ನಾಲಕ್ಕು ಅವಧಿಯ ಬದಲು ಮೂರೆ ಅವಧಿಗೆ ಪಾಠ ಮಾಡುತ್ತಿದ್ದರು. ಉಳಿದ ಒಂದು ಅವಧಿಯಲ್ಲಿ ಬೇರೆ ಯಾರೋ ಹೆಚ್ಚುವರಿಯಾಗಿ ತೆಗದು ಕೊಳ್ಳುತಿದ್ದರು. ಅದನ್ನು ನಾನು  ಕೆದಕಲು ಹೋಗಲಿಲ್ಲ.
ಅಂತೂ ಅವರು ನಮ್ಮ ಕಾಲೇಜಿನಲ್ಲಿ ವಾರಕ್ಕೆ ಮೂರುದಿನ ತಪ್ಪದೆ ಹಾಜರಾಗುತ್ತಿದ್ದರು. ಪಾಠ ಮುಗಿಸಿದ ತಕ್ಷಣ ಹೊರಡತಿದ್ದರು. ಅರು ತಿಂಗಳ ಕಾಲ ಅಂತೂ ಅವರಿಂದ ಪಾಠ ನೆಡೆಯಿತು ತಂಗಳ ನಂತರ ವಿದ್ಯಾರ್ಥಿಗಳನ್ನು ಅವರ ಬೋಧನೆಯ  ಬಗ್ಗೆ ವಿಚಾರಿಸಿದೆ. ಎಲ್ಲರೂ ಒಕ್ಕೊರಳಿನೀಂದ ತುಂಬ ಉತ್ತಮವಾಗಿ ಪಾಠಗಳು ಸಾಗಿವೆ. ನಮಗೆ ಈ ವಿಷಯದ ಬಗ್ಗೆ ಯಾವುದೆ  ಸಮಸ್ಯೆ  ಇಲ್ಲ ಎಂದು ತುಂಬು ಆತ್ಮ ವಿಶ್ವಾಸ ವ್ಯಕ್ತ ಪಡಿಸಿದರು. ನನಗೆ ಬೇಕಾದದ್ದಾರೂ ಏನು. ಅವರು ಬರುತ್ತಿದ್ದಾರೆ. ಪಾಠ ಮಾಡುತ್ತಿದ್ದಾರೆ .ಅಷ್ಟು ಸಾಕು ಎಂದು ಸುಮ್ಮನಾದೆ. ವರ್ಷದ ಕೊನೆ ಬಂದಿತು. ಅವರ ನಿಯೋಜನೆಯ ಅವಧಿ ಮುಗಿಯಿತು. ಯಾವುದೆ ಕಿರಿಕಿರಿ ಇಲ್ಲದೆ ಅವರು ಸ್ವಸ್ಥಾನಕ್ಕೆ ಮರಳಿದರು.
 ಅವರು ಕೊಟ್ಟ ಮಾತಿನಂತೆ ಮಕ್ಕಳಿಗೆ ಉತ್ತಮವಾಗಿ ಬೋಧಿಸಿದ್ದರು. ಫಲಿತಾಂಶವೂ ಚೆನ್ನಾಗಿಯೆ ಬಂದಿತು. ಆದರೆ ನಮ್ಮ ಜಿಲ್ಲೆಯಲ್ಲಿ ಗುಲ್ಲೋ ಗುಲ್ಲು. ಮರಿಸ್ವಾಮಿ ಆವರಿಂದ  ಪಾಠ ಮಾಡಿಸಿದ ಪ್ರಿನ್ಸಿಪಾಲರು  ಇತ್ತೀಚಿನ ವರ್ಷಗಳಲ್ಲಿ    ಇವರೊಬ್ಬರೆ ಎಂಬ ಮಾತು ಎಲ್ಲ ಕಡೆ ಹರಡಿತು. ಅದು ಹೊಗಳಿಕೆಯೋ , ಟೀಕೆಯೋ ಎಂದು ತಲೆ ಕೆಡಿಸಿಕೊಳ್ಳಲು ನನಗಂತೂ  ಅವಧಾನವಿರಲಿಲ್ಲ.ನಂತರ ನನಗೂ ವರ್ಗವಾಯಿತು. ನಿವೃತ್ತಿಯೂ ಆಯಿತು. ಆ ಊರನ್ನೂ ಬಿಟ್ಟೆ.ಅವರು ಇತ್ತೀಚೆಗ ಭೂವ್ಯವಹಾರ ಮಾಡಿ  ಕೋಟಿಗಟ್ಟಲೆ ಸಂಪಾದಿಸುತ್ತಿರುವರು , ಬೆಂಗಳೂರಲ್ಲಿ ಲೇ ಔಟು ಮಾಡಿಸಿದ್ದಾರೆ ಎಂಬ ಸುದ್ದಿ ಆಗಾಗ ಬರುತ್ತಿತ್ತು. ನನಗೆ ಇಷ್ಟೆಲ್ಲ ಇದ್ದರೂ ಅವರಿಗೆ ಸರ್ಕಾರಿ ಚಾಕರಿಯ ಮೋಹದ ಹಿಂದಿನ ಮರ್ಮ ಅರ್ಥ ವೇ ಅಗುತ್ತಿಲ್ಲ. ಅವರಿಗೆ ನಂತರ ಪ್ರಾಂಶುಪಾಲರಾಗಿ ಬಡ್ತಿಯೂ ದೊರೆಯಿತು. ಅವರು ಕೆಲಸ ಮಾಡುತ್ತಿರುವ ಕಾಲೇಜಿನಲ್ಲೆ ಹುದ್ದೆ ದೊರೆಯಿತು.
                           ಅವರಿಗಿದ್ದ ಪ್ರಭಾವ, ಅವರ ಧಾರಾಳತನ ಮತ್ತು ಊರಲ್ಲಿ ಅವರಿಗಿರುವ ಸ್ಥಾನ, ಮಾನ  ಕಾಲೇಜಿನ ಏಳಿಗೆಗೆ ಸಾದನವಾಯಿತು. ಅವರಿಗೆ ಈಗ ಪಾಠ ಮಾಡುವ ರಗಳೆ ಇರಲಿಲ್ಲ. ಖಾಲಿ ಇದ್ದ ಎಲ್ಲ ಹುದ್ದೆಗಳನ್ನೂ ಭರ್ತಿ ಮಾಡಿಸಿದರು. ಶಾಲೆಗೆ ಎಲ್ಲ ಮೂಲ ಭೂತ ಸೌಕರ್ಯಗಳನ್ನ್ನು ಅನುದಾನ ಬರಲಿ ಬಿಡಲಿ ತಮ್ಮ ಹಣ ಕೈಯಿಂದ ಹಾಕಿ ಒದಗಿಸಿದರು. ಸಿಬ್ಬಂದಿಯವರೂ ಸಹಾ ಅವರು ಬಂದರೋ . ಇಲ್ಲವೋ ಎಂಬುದನ್ನೂ ಪರಿಗಣಿಸದೆ ತಮ್ಮ ಕರ್ತವ್ಯವನ್ನು ಕಮಕ್ ಕಿಮಕ್ ಎನ್ನದೆ ಮನ ಮುಟ್ಟಿ ಮಾಡುತ್ತಿದ್ದರು. ಯಾರಾದರೂ ಬಾಲ ಬಿಚ್ಚಿದರೆ ಅವರಿಗೆ ದೂರದ ಊರಿಗೆ ವರ್ಗಾವಣೆ ಯಾಗುವುದು ಖಚಿತ ವಾಗಿತ್ತು.  ಮರಿಸ್ವಾಮಿ ವಾರಕ್ಕೆ ಒಂದುಸಲ ಕಾಲೇಜಿಗೆ ಭೇಟಿ ನೀಡಿ ಅರ್ದ ಗಂಟೆ ಇದ್ದು  ಸಹಿ ಮಾಡಿ ಹೊರಡುತ್ತಿದ್ದರು. ಕಾಲೇಜಿನ ಯಾವ ಕೆಲಸವಿದ್ದರೂ ಕೋಲಾರದಲ್ಲಾಗಲಿ , ಬೆಂಗಳೂರಲ್ಲಾಗಲಿ ಫೋನು ಮೂಲಕವೋ ಇಲ್ಲವೆ ಖುದ್ದಾಗಿಯೋ ಹೋಗಿ ಮಾಡಿಸುತ್ತಿದ್ದರು.ವರ್ಷಕ್ಕ ಎರಡು ಸಾರಿ ಅದ್ಧೂರಿಯ ಕಾರ್ಯಕ್ರಮಗಳು. ಮಕ್ಕಳಿಗೆ ಉಚಿತ ಪುಸ್ತಕ . ಪ್ರವಾಸ, ಎಲ್ಲದಕ್ಕೂಉತ್ತೇಜನ ನೀಡುತ್ತಿದ್ದರು. ಅವರು ಸಂಬಳವನ್ನೂ ಪ್ರತಿ ತಿಂಗಳೂ ತೆಗೆದು ಕೊಳ್ಳುತ್ತಿರಲಿಲ್ಲ. ಆರು ತಿಂಗಳಿಗೋ, ವರ್ಷಕ್ಕೋ ಒಂದೆಸಲ  ಹಣ ಪಡೆಯುತ್ತಾರಂತೆ .ಅಷ್ಟೆ  ಅಲ್ಲ ಸಿಬ್ಬಂದಿಯಲ್ಲಿ ಯಾರಿಗೆ ಯಾವುದೆ ತೊಂದರೆ ಯಾದರೆ , ಸಮಸ್ಯೆಯಾದರೆ ಅದನ್ನು ಪರಿಹರಿಸುತ್ತಿ ದ್ದರು.ಹೀಗಾಗಿ ಅವರ ಬಗ್ಗೆ ಎಲ್ಲರಿಗೂ ಭಯ , ಭಕ್ತಿ. ಶಾಲಾ ಆವರಣದಲ್ಲಿ ಉತ್ತಮ ತೋಟ ಮಾಡಿಸಿದರು. ಯಾರಾದರು ಯಾವುದೆ ಒಳ್ಳೆಯ ಸಲಹೆ ನೀಡಿದರೂ ಅವರಿಗೆಅದನ್ನು ಅನುಷ್ಠಾನ ಮಾಡಲು ಅನುಮತಿ ಜತೆಗೆ ಅಗತ್ಯ ಸಹಾಯ ಲಭಿಸುತ್ತಿತ್ತು. ಅದರಿಂದ  ಅವರ ಕಾಲೇಜು  ಎಲ್ಲ ಕಾಲೇಜುಗಳ ಮಧ್ಯ ಎದ್ದು ಕಾಣವ ಹಾಗೆ ಆಗಿತ್ತು. ಉತ್ತಮ ಫಲಿತಾಂಶವೂ ಬರುತ್ತಿತ್ತು. ಇಲಾಖೆಯ ಅಧಿಕಾರಿಗಳೂ , ಸ್ಥಳಿಯ ಶಾಶಕರು ಭೇಟಿ ನೀಡಿ, ಬೆನ್ನು ತಟ್ಟಿ ಹೋಗುತ್ತಿದ್ದರು.ಇದೆಲ್ಲ ಮಾಡಿದವರು ಕಾಲೇಜಿಗೆ ಸರಿಯಾಗಿ ಬಾರದ ಮರಿಸ್ವಾಮಿ. ಈ ವಿಷಯ ನನ್ನ ಕಿವಿಗೆ  ಅಲ್ಪ ಸ್ವಲ್ಪ ಬಿದ್ದಿತ್ತು.ಅಲ್ಲಿನ  ವ್ಯವಸ್ಥೆನೋಡಿ ಬಾಯಿಕಟ್ಟಿತು.ಅವರು ತಮ್ಮ ಸಿಬ್ಬಂದಿಯನ್ನೆಲ್ಲ ಕರೆಸಿ ನನಗೆ ಪರಿಚಯ ಮಾಡಿಸಿದರು.
 ಅವರಿಗೆಲ್ಲ ಹೇಳಿದರು,” ನನ್ನಿಂದ ಆರು  ತಿಂಗಳು ತಪ್ಪದೆ ಪಾಠ ಮಾಡಿಸಿದವರು ನನ್ನ ಸೇವೆಯಲ್ಲಿ ಇವರೊಬ್ಬರೆ. ಅವರಿಂದ ನಾನು ಬಹಳ ಕಲಿತೆ. ಅದಕ್ಕೆ ನನಗೆ ಅವರೆಂದರೆ ಬಹಳ ಗೌರವ ಎಂದರು”
. ನಾನು ಆ ಸಮಯದಲ್ಲಿ ಕಠಿನವಾಗಿ ನಡಸಿಕೊಂಡಿದ್ದೆ, ಬೇಸರವನ್ನೂ ಉಂಟು ಮಾಡಿದ್ದೆ. ಸಹಜವಾಗಿ ಅಸಮಾಧಾನವಿರಬಹುದು ಎಂದು ಕೊಂಡಿದ್ದೆ. ಆದರೆ ಅದರ ಬಗ್ಗೆ  ನಾನು   ಹೆಚ್ಚು ಯೋಚನೆಯನ್ನು ಮಾಡಿರಲೇ ಇಲ್ಲ.ಅವರಲ್ಲಿ ಮೂರು ಮಂದಿ  ನನ್ನ ಹಿಂದಿನ ಸಹೋದ್ಯೋಗಿಗಳು ಇದ್ದರು. ಅವರೆಲ್ಲ ಬಂದು
“ಸಾರ್, ನಾವು ನಿಮ್ಮನ್ನು ಸದಾ ನೆನಸುತ್ತಿದ್ದೇವೆ.ನಿಮ್ಮ ಉತ್ತೇಜನದಿಂದ ಸ್ನಾತಕೋತ್ತರ ಪದವಿ ಪಡೆದೆವು. ಈಗ ಉಪನ್ಯಾಸಕರಾಗಿ ಬಡ್ತಿ ಬಂದಿದೆ. ಸದಾ ನಿಮ್ಮ ವಿಷಯ ಮಾತನಾಡುತ್ತಿರುತ್ತೇವೆ. ನಿಮ್ಮ ಕಾಲವೆ ಕಾಲ. ಅದು ಮರಳಿ ಬಾರದು” ಎಂದು ಸಂತಸ ವ್ಯಕ್ತಪಡಿಸಿದರು .
 ಅವರು ಆತ್ಮೀಯತೆಯಿಂದ ಎಲ್ಲವನ್ನೂ ತೋರಿಸಿ ಕೊನೆಗೆ ಒಂದು ಚಿಕ್ಕ ಕಾಣಿಕೆಯನ್ನೂ ಕೊಟ್ಟರು.
  “ ಅದೇನು ? ಇದೆಲ್ಲ ಬೇಡ”   ಎಂದೆ..
“ ಇಲ್ಲ , ಸಾರ್ ನಮ್ಮ ಪ್ರೀತಿಗೆ ಕೊಡುವೆವು, ನಿಮಗೆ ತಕ್ಕದ್ದನ್ನೆ ಕೊಟ್ಟಿರುವೆವು ಮನೆಗೆ ಹೋಗಿ ನೋಡಿ ,“  ಎಲ್ಲರೂ ಒಕ್ಕೊರಳಿನಿಂದ ವಿನಂತಿಸಿದರು
. “ನಾನು ನಿಮ್ಮಂತೆ ಇಲ್ಲ . ನಿಜ. ಕಾಲೇಜಿಗೆ ಸರಿಯಾಗಿ ಬರಲಾಗುತ್ತಿಲ್ಲ. ಆದರೆ ನೀವು ಮಕ್ಕಳ ಏಳಿಗೆಗೆ ಮಾಡುತ್ತಿದ್ದ ಕೆಲಸವನ್ನು  ನಾನೂ ಮೆಚ್ಚಿದ್ದೆ. ಈಗ  ಅದನ್ನೆ ನನ್ನದೇ ಆದ ರೀತಿಯಲ್ಲಿ  ಅನುಕರಿಸುತ್ತಿದ್ದೇನೆ.  ಎಲ್ಲ ದೂರ ನಿಯಂತ್ರಣದಿಂದಲೆ ಸುಗಮವಾಗಿ ಸಾಗಿದೆ. ನಾನು ನಿಯಮಾನಸಾರ ಅಕ್ಷರಶಃ ನಡೆಯುತ್ತಿಲ್ಲ. ಆದರೆ ನಿಮ್ಮ ಉದ್ದೇಶಗಳನ್ನು ಸಾಕಾರಗೊಳಿಸಿದ್ದೇನೆ. ಅದಕ್ಕೆ ನಿಮ್ಮ ಆಶೀರ್ವಾದ ಪಡೆಯಲು ಕರೆಸಿದೆ, ” ಎಂದು ತಲೆ ಬಾಗಿದರು.

ನನಗೆ ಏನು ಹೇಳ ಬೇಕೋ ತಿಳಿಯಲಿಲ್ಲ. ನಮ್ಮಲ್ಲಿ ಸಪ್ತಾಹಿಕ, ಪಾಕ್ಷಿಕ , ಮಾಸಿಕ ಪ್ರಿನ್ಸಿಪಾಲರು ಆಗಲೂ ಇದ್ದರು. ಈಗಲೂ ಇದ್ದಾರೆ. . ಸಂಬಳದ ಸಮಯಕ್ಕೆ ಬಂದು ಬಿಲ್ಲಿಗೆ ಸಹಿ ಮಾಡಿ ಬಂದಿರುವ ಅನುದಾನವನ್ನೆಲ್ಲ ಬಾಚಿಕೊಂಡು ಹೊರಡುವರು.
ನಾನು ಪ್ರಿನ್ಸಿಪಾಲ, ನನ್ನನ್ನು ಕೇಳುವುದಕ್ಕೆ ನೀವು ಯಾರು? ಎಂದು ದಬಾಯಿಸಿ , ಕೊನೆಗೆ  ಅಪನಿಂದೆಗೆ, ಅಮಾನತ್ತಿಗೆ ಒಳಗಾದವರು ಬಹಳ.
ಆದರೆ ಇಲ್ಲಿನ ಪರಿಸ್ಥಿತಿ ಬೇರೆ. ಬೆಳಗಿನಿಂದ ಸಂಜೆಯ ತನಕ ಮೂಗಿಗೆ ಕವಡೆ ಹಚ್ಚಿಕೊಂಡು ದುಡಿದರೂ ಅಂದು ಕೊಂಡ ಕೆಲಸವನ್ನು ಮಾಡಲಾಗದೆ ಕೆಟ್ಟ ಹೆಸರು ಪಡೆದು   ನೊಂದುಕೊಂಡ  ಸಜ್ಜನರನ್ನು  ಹಲವರನ್ನು ಕಂಡಿರುವೆ. ಬಾರದಿದ್ದರೂ ಬೆಸ್ಟ್ ಪ್ರಿನ್ಸಿಪಾಲರು ಎನಿಸಿ ಕೊಂಡದನ್ನು ನೋಡಿದ್ದು ಇದೆ ಮೊದಲು. ಆಗ ಅಂದು ಕೊಂಡೆ.  ಎ.ಜಿ ಗಾರ್ಡಿನರನ ” ನಾಯಿಯ ಪಾಡು”  ಪ್ರಬಂಧದಲ್ಲಿ ಹೇಳಿದಂತೆ ನಿಯಮಗಳನ್ನು ಅಕ್ಷರಸಃ ಪಾಲಿಸುವರು ಅನೇಕ ಜನರಿದ್ದಾರೆ. ಆದರೆ ಆಶಯ ನೆರವೇರದೆ ವಿರುದ್ಧ ಪರಿಣಾಮವಾಗುವುದು.ಸಾಧನೆಯಷ್ಟೆ ಸಾಧನಾ ವಿಧಾನವು ಮುಖ್ಯ. ಎಂಬ  ನಂಬಿಕೆ ನಮ್ಮಲ್ಲಿದೆ. ಆದರೆ “End justifies the means “ ಎನ್ನುವದರ ಸಾಕ್ಷಾತ್ಕಾರ ವಾಗಿದೆ ಇವರ ವಿಷಯದಲ್ಲಿ . ಅವರು ಬರುವುದೆ ಆಗೀಗ. ಅದರೆ ಎಲ್ಲ ಕಾಲೇಜಿನಲ್ಲಿ ಸರಿಯಾಗಿದೆ. ಯಾವದು ಸರಿ? ಯಾವದು ತಪ್ಪು ? ಎಂಬ ಜಿಜ್ಞಾಸೆ ನನ್ನಲ್ಲಿ ಹುಟ್ಟಿಕೊಂಡಿದೆ. ಅದಿನ್ನೂ ಪರಿಹಾರವಾಗಬೇಕಿದೆ. ಮನೆಗೆ ಹೋಗಿ ಅವರು ಕೊಟ್ಟ, ಕಾಣಿಕೆ ನೋಡಿದೆ. ಅದು ಒಂದು ಪುಟ್ಟ ಭಗವದ್ಗೀತೆ. ನೋಡಿ ಮುಖದಲ್ಲಿ ಮುಗಳ್ನಗು ಮೂಡಿತು.

No comments:

Post a Comment