Thursday, May 16, 2013

ಆರರಿಂದ ಅರವತ್ತು ಸರಣಿ.-ಸಾವು ಗೆದ್ದ ಶ್ಯಾಮ್ಯುಯಲ್


ಸಾವು ಗೆದ್ದ ಶ್ಯಾಮ್ಯುಯಲ್
ಶ್ಯಾಮ್ಯುಯಲ್ ನಮ್ಮಲ್ಲಿ ಹೈಸ್ಕೂಲು ವಿಭಾಗದಲ್ಲಿನ ಕ್ರಾಫ್ಟ ಮಾಸ್ಟರ್‌. ಆಗಲೆ ಐವತ್ತರ ಮೇಲೆ ವಯಸ್ಸು.ತೋಟಗಾರಿಕೆ ಅವರ ಬೋಧನಾ ವಿಷಯ.ನಮ್ಮಲ್ಲಿನ ವಿಶೇಷ ಶಿಕ್ಷರೆಂದರೆ ಕ್ರಾಫ್ಟ್‌  , ಡ್ರಿಲ್‌ ಮತ್ತು ಹಿಂದಿ ಶಿಕ್ಷಕರು. ಮೊದಲಿನ ಎರಡು ವಿಷಯಗಳಿಗೆ ಪರೀಕ್ಷೆ ಇಲ್ಲ. ಹಿಂದಿ ಆಟ  ಕುಂಟು ಲೆಕ್ಕಕ್ಕೆ ಇಲ್ಲ. ಹೀಗಾಗಿ ಮಕ್ಕಳು ಅವನ್ನು ಗಂಭೀರವಾಗಿ ತೆಗೆದುಕೊಳ್ಳುವುದೂ ಇಲ್ಲ. ಶಿಕ್ಷಕರೂ ಕೂಡಾ ಅಷ್ಟಕಷ್ಟೆ. ಎಸ್‌ಎಸ್‌ಎಲ್ ಸಿ ಮಕ್ಕಳಿಗಂತೂ ಎರಡನೆ ಅವಧಿಯಲ್ಲಿನ  ಕ್ರಾಫ್ಟ ಪಿರಿಯೆಡ್‌ ಲೆಕ್ಕ ಇಂಗ್ಲಿಷ್‌ಗೆ ವಿಷಯದ ವಿಶೇಷ ತರಗತಿಗೆ ಮೀಸಲು. ಹಾಗಾಗಿ ಅವರು ಜಾಲಿ ಬರ್ಡ್ಸ .     ಸಾಧಾರಣವಾಗಿ ಶಾಲಾ ಆವರಣದ ಶಚಿತ್ವ ಮತ್ತು ಶಿಸ್ತಿನ ಉಸ್ತುವಾರಿ ಅವರ ಹೊಣೆ.ನಮ್ಮ ಮಾಷ್ಟರು ಅಂತೂ ಹಸು. ಏನೆ ಹೇಳಿದರೂ ಇಲ್ಲ ಎನ್ನುವ ಮಾತೆ ಇಲ್ಲ. ಆಯಿತು ಸಾರ್ ಎನ್ನುವರು. ಆದರೆ ಹೇಗೆ ಮಾಡುವರು , ಯಾವಾಗ ಕೆಲಸ ಮುಗಿಸುವರು ಅದು ಅವರಿಗೆ ಮಾತ್ರ ಗೊತ್ತು. ಅಲ್ಲದೆ ಅವರದು ಇನ್ನೊಂದು ಗುಣ. ಯಾವುದೆ ಕಾರಣಕ್ಕೂ ಮೂರು ಮಾರು ದೂರ ನಿಂತೆ ಮಾತನಾಡುವರು. ಮೊದಲು ಅದು ಅವರ ವಿನಯದ ಲಕ್ಷಣ ಎಂದುಕೊಂಡಿದ್ದೆ. ನಂತರ ತಿಳಿಯಿತು ಅವರು ಸದಾ  ಸೇವಿಸುವ ದ್ರವದ ವಾಸನೆ ಎದುರಿನವರಿಗೆ ಗೊತ್ತಾಗಬಾರದೆಂದು ಮುನ್ನೆಚ್ಚರಿಕೆ.ಆದರೆ ಮನುಷ್ಯ ಹೆಚ್ಚು ಮಾತನಾಡುತ್ತಿರಲಿಲ್ಲ. ತಾನಾಯಿತು ತನ್ನ ಪಾಡಾಯಿತು. ಅದೂ ಅಲ್ಲದೆ ಇದು ಇಂದು ನಿನ್ನೆಯದಲ್ಲ ಹತ್ತಾರು ವರ್ಷದಿಂದ ನಡೆದು ಬಂದ ರೂಢಿ.  ನಾನೂ ಹೇಳಿದ ಕೆಲಸ ಮಾಡುವರಲ್ಲ ಸಾಕು ಎಂದು ಕಂಡು ಸುಮ್ಮನಾದೆ.
 ಕಾಲೇಜು ಆವರಣವನ್ನು ಹಸಿರು ಮಯಮಾಡುವುದು ನನ್ನ ಹವ್ಯಾಸಗಳಲ್ಲಿ ಒಂದು . ಅದಕ್ಕಾಗಿ ಹೆಚ್ಚಿನ ಅನುದಾನ ಇರುವುದಿಲ್ಲ. ಆದರೆ ನಾನೆ ಅವರಿಗೆ ಲಾಲ್ ಬಾಗಿನಿಂದ ನರ್ಸರಿಯಲ್ಲಿ ಸಸಿಗಳನ್ನು ತರಿಸಿಕೊಟ್ಟೆ. ನಮ್ಮ ಸಸ್ಯ ಶಾಸ್ತ್ರದ ಉಪನ್ಯಾಸಕರಾದ ರಾಜು ಹೇಗಿದ್ದರೂ ಬೆಂಗಳೂರಿನಿಂದ ನಿತ್ಯ ಬರುವರು. ಅವರಿಗೆ ಆ ಕೆಲಸ ನೀಡಲಾಯಿತು.  ಶಿವಾನಂದ  ಇಂಗ್ಲಿಷ್‌ ಉಪನ್ಯಾಸಕರು ಹಳ್ಳಿಯ ಹಿನ್ನೆಲೆಯವರು. ಕಬ್ಬು ಕಡಿದು ಕೂಲಿಮಾಡಿ ಓದಿದವರು. ಅವರಿಗೆ ಮರಗಿಡ ಎಂದರೆ ಬಹು ಪ್ರಿತಿ . ಅವರನ್ನು ಎನ್‌ಎಸ್‌ಎಸ್‌ ಅಧಿಕಾರಿಯನ್ನಾಗಿ ಮಾಡಿ ಶಾಲಾ ವನದ ಹೊಣೆ ಹೊರಸಿದೆ. ಜತೆಗೆ ನಮ್ಮ ಮಾಷ್ಟರ್‌ ಇದ್ದೆ ಇದ್ದರು. ಬರಿ ಹಣ ಇದ್ದರೆ ಮಾತ್ರ ಹಸಿರು ಬೆಳೆಸುವುದು ಸುಳ್ಳು ಮಾತು ಅದಕ್ಕೆ ಪರಿಸರದ ಪ್ರೀತಿ ಅಗತ್ಯ. ಮಕ್ಕಳಿಗೆ ಸ್ಪೂರ್ತಿ ಮೂಡಿಸಲು  ಪ್ರತಿ ತರಗತಿಯಮಕ್ಕಳೂ ಐದು ಕುಂಡಗಳಲ್ಲಿ ಅಲಂಕಾರಿಕ ಸಸ್ಯಗಳನ್ನು ಬೆಳೆಸ ಬೇಕು. ಅವನ್ನು ತರಗತಿಯ ಮುಂದೆ ಇಟ್ಟು ನಿತ್ಯ ನೀರುಣಿಸಿ ಕಾಪಾಡಬೇಕು. ವಾರ್ಷಿಕೋತ್ಸವದ ಸಮಯದಲ್ಲಿ ಉತ್ತಮವಾದವಕ್ಕೆ  ಮೂರು ಬಹುಮಾನ ನೀಡಲಾಗುವುದು ಎಂದು ತರಗತಿಗೆ ಹೋಗಿ ತಿಳಿಸಲಾಯಿತು. ಅದರ ಮೇಲ್ವಿಚಾರಣೆಯನ್ನು ತರಗತಿಯ ಶಿಕ್ಷಕರಿಗೆ ವಹಿಸಲಾಯಿತು.ಮಕ್ಕಳು  ವಂತಿಗೆ ಹಾಕಿಕೊಂಡು ಪಾಟುಗಳನ್ನು  ತಂದು ಎಲ್ಲೆಲ್ಲಿಂದಲೋ ಅಲಂಕಾರಿಕ ಸಸಿ ತಂದು ನೆಟ್ಟರು. ಬಹು ಖುಷಿಯಿಂದ ಬೆಳಸಿದರು. ಮೂರೆ ತಿಂಗಳಲ್ಲಿ ಕಾಲೇಜಿನಲ್ಲಿ ಹಸಿರು ಮೂಡಿತು. ಅಷ್ಟೆ ಅಲ್ಲ ಬಣ್ಣದ ಹೂಗಳು ನಗ ಹತ್ತಿದವು.
ಸ್ಯಾಮ್ಯಯಲ್‌ ತಮ್ಮ ರಾಜ್ಯದಲ್ಲಿ ಅತಿಕ್ರಮಣ ವಾಗಿದೆ ಎಂದು ತುಸು ಕಸವಿಸಿ ಗೊಂಡರು  ಇತರೆ ಸಹೋದ್ಯೋಗಿಗಳು , ನೋಡಿ ನಿನ್ನ ಸೇವಾ ಅವಧಿಯಲ್ಲಿ ಇಷ್ಟು  ಬೆಳೆಸಿದ್ದೀರಾ ಅಂದರೆ  ಇದಕ್ಕೆಲ್ಲಾ ತಾಂತ್ರಿಕ ಸಲಹೆ ನೀಡಿದ್ದು ಯಾರು? ಎಂದು ಕೇಳಿ ನೆಮ್ಮದಿ ಪಡೆಯುವರು. ಆದರೆ ಆಸಕ್ತಿ ಮಾತ್ರ ಅಷ್ಟಕಷ್ಟೆ. ಅದೆ ರೀತಿ ಹೊರಗಿನ  ಆವರಣದಲ್ಲೂ ನೂರಾರು ಮರಗಳನ್ನು ನೆಡಲಾಯಿತು. ಆವರಣದ ಗೇಟಿಗೆ ಮೊದಲಬಾರಿಗೆ ಬಲವಾದ ಬೀಗ ಹಾಕಲಾಯಿತು.ದನಗಳ ದಾಳಿ ತಪ್ಪಿಸಲು.ಒಂದು ವಿಕೆಟ್‌ ಗೇಟ್‌ ನಿರ್ಮಿಸಿ ಜನರು ಮಾತ್ರ ಬರಲು  ಅವಕಾಶ ನೀಡಲಾಯಿತು.
ಶ್ಯಾಮ್ಯುಯಲ್‌ ಅವರ ಇನ್ನೊಂದು ಚಾಳಿ ತಡವಾಗಿ ಬರುವುದು ಮತ್ತು ಬೇಗ ಹೋಗುವುದು ಮತ್ತು ಪದೇ ಪದೇ ರಜ ಹಾಕುವುದು. ಕಾರಣ ವಿಚಾರಿಸಿದಾಗ ಅವರು ಅರೆಕಾಲಿಕ ವೈದ್ಯರೂ ಅಹುದು, ಹಳ್ಳಿಗಳ ಮೇಲೆ ಹೋಗುವರು , ಅಲ್ಲದೆ ಅವರ ಮನೆಗ ಸುತ್ತಲ ಹಳ್ಳಿಗಳ ರೋಗಿಗಳು ಬರುವುದರಿಂದ ಸಮಯ ಸಿಕ್ಕದು , ಎಂದು ತಿಳಿಯಿತು. ಅವರನ್ನು ಕರೆಸಿ ಅವರು ಸರಕಾರಿ ನೌಕರರು ಮೊದಲು ಕೆಲಸಕ್ಕೆ ಆದ್ಯತೆ. ಇನ್ನುಳಿದವಕ್ಕೆ ನಂತರ.. ಸತತ ಗೈರು ಹಾಜರಿಯನ್ನು ಸಹಿಸಲಾಗುವುದಿಲ್ಲ ಎಂಬ ಎಚ್ಚರಿಕೆ ಅವರನ್ನು ತುಸು ಹಾದಿಗೆ ತಂದಿತು.
 ಒಂದು ಸಲ ಎರಡು ದಿನವಾದರೂ ಆಸಾಮಿ  ಪತ್ತೆ ಇಲ್ಲ. ಅವರ ಊರಿನಿಂದ ಬರುತ್ತಲಿದ್ದವರನ್ನು ಕೇಳಿದಾಗ ಅವರು ಅಪಘಾತವಾಗಿ ನರ್ಸಿಂಗ್ ಹೋಮಿನಲ್ಲಿ ದಾಖಲಾಗಿದ್ದಾರೆ ,ಎಂದರು.
 ಪಾಪ ಹೇಗಾಯಿತು ? ಯಾವಾಗ ಆಯಿತು? ಎಂಬ ಪ್ರಶ್ನೆಗೆ ಮುಗುಳುನಗೆ ಉತ್ತರವಾಗಿತ್ತು.ಒಬ್ಬ ವ್ಯಕ್ತಿ ಅಪಾಯದ ಅಂಚಿನಲ್ಲಿದ್ದಾಗ ಇವರು ನಗುವರಲ್ಲ ಎಂದು ಬೇಸರವಾಯಿತು. ಅವರು ಹೇಳಿದರು.
ಪೆಟ್ಟು ಬಿದ್ದದ್ದು ಅಫಘಾತದಲ್ಲಿ ಅಲ್ಲ . ಅವರು ರಾತ್ರಿ ಹೆಚ್ಚು ಕುಡಿದು ಯಾರ ಕೈನಲ್ಲೋ ಹೊಡೆಸಿಕೊಂಡು ಆಸ್ಪತ್ರೆ ಸೇರಿದ್ದರು.
ಮಾಡಿದ್ದು ಉಣ್ಣೋ ಮಾರಾಯ, ವಿದ್ಯಾವಂತನಾದವನೂ ಈ ರೀತಿ ಮಾಡಿದರೆ ಏನು ಹೇಳುವುದು.
 ಎರಡು ದಿನ ಆದ ಮೇಲೆ ನಾನೂ ಇನ್ನೊಬ್ಬ ಉಪನ್ಯಾಸಕರ ಜೊತೆ ಅವರನ್ನು ನೋಡಲು ಹೋದೆ. ಅವರ ತಲೆಗೆ ಮೈ ಕೈಗೆ ಪೆಟ್ಟಾಗಿತ್ತು. ಹೆಚ್ಚು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ.ಅದು ಅವರುತಮ್ಮ ಬಳಿ ಬಂದ ರೋಗಿಗಳಿಗೆ ಕಾಯಿಲೆ ತೀವ್ರವಾದರೆ ಕಳುಹಿಸುವ ಆಸ್ಪತ್ರೆ.  ಮುಲಾಜಿಗೆ ಅವರನ್ನು ದಾಖಲು ಮಾಡಿಕೊಂಡಿದ್ದರು. ಅಲ್ಲಿ ಸೌಕರ್ಯ, ಸೌಲಭ್ಯ ಇರಲಿಲ್ಲ. ಅವರಿಗೆ ಇನ್ನೂ ಉತ್ತಮ ಚಿಕಿತ್ಸೆಯ ಅಗತ್ಯವಿದೆ ಎನಿಸಿತು. ಅದನ್ನು ಅವರ ಮನೆಯವರಿಗೆ ಹೇಳಿ ಬಂದೆವು. ಎರಡು ದಿನ ಕಳೆಯಿತು. ಆಗ ಸುದ್ಧಿ ಬಂದಿತು. ಆ ನರ್ಸಿಂಗ್‌ ಹೋಂ ನವರು ಅವರನ್ನು ಚಿಕಿತ್ಸೆ ಮಾಡುವುದು ಆಗದು ಎಂದು ಡಿಸ್‌ಛಾರ್ಜ  ಮಾಡಿದ್ದರು. ಅವರನ್ನ ಮನೆಯಲ್ಲಿ ಹಾಕಿಕೊಂಡು ಮುಂದಿನದಕ್ಕೆ ಕಾಯುತ್ತಿದ್ದರು. ಅವರು ಕೋಮಾದಲ್ಲಿದ್ದಾರೆ. ಹೆಂಡತಿ ಅವಿದ್ಯಾವಂತೆ, ಮಕ್ಕಳು ನಿರುದ್ಯೋಗಿಗಗಳು, ನಂಟರು ಯಾರೂ ಹತ್ತಿರ ಸುಳಿದಿಲ್ಲ. ಅಂತಿಮ ಕ್ಷಣಕ್ಕಾಗಿ ಕಾಯುತ್ತಿರುವರು ಎಂದರು..
ಸರಕಾರಿ ನೌಕರನೊಬ್ಬನಿಗೆ ಈ ಸ್ಥಿತಿ ಬರಬಾರದು,ಯಾಕೆ ಹೀಗೆ ? ಎನಿಸಿತು ಸಿಬ್ಬಂದಿಯ ಸಭೆ ಕರೆದು ಶ್ಯಾಮ್ಯುಯಲ್ ಸಾವು ಬದುಕಿನ ಹೋರಾಟದಲ್ಲಿದ್ದಾರೆ ಅವರಿಗೆ ತಜ್ಞರಿಂದ ಚಿಕಿತ್ಸೆ ಕೊಡಿಸಬಹುದು. ನಿಮಾನ್ಹಸ್‌ ಗೆ ಹೋದರೆ ಬದುಕುವ ಅವಕಾಶವಿದೆ ಏಕೆ ಹೋಗುತ್ತಿಲ್ಲ? ಎಂದೆ.
ಅವರು ತಮ್ಮ ಚಟದಿಂದಾಗಿ ಸಾಲ ಸೋಲ ಹೆಚ್ಚು ಮಾಡಿದ್ದಾರೆ. ಯಾರಿಗೂ ವಾಪಸ್ಸು ಕೊಟ್ಟಲ್ಲ. ಮೇಲಾಗಿ ಸಹವಾಸ ಸರಿಯಿಲ್ಲ. ಮನೆಯವರು ರೋಸಿ ಹೋಗಿದ್ದಾರೆ. ಅವರಿಗೆ ಯಾರೂ ಸಹಾಯಮಾಡುವವರಿಲ್ಲ. ಹೇಗಿದ್ದರೂ ಸಾಯುವರು, , ಸುಮ್ಮನೆ ಬೆಂಗಳೂರಿಗೆ ಸೇರಿಸುವದರಿಂದ  ದುಡ್ಡ ದಂಡ , ಮೇಲಾಗಿ ಅವರಲ್ಲಿ ದುಡ್ಡೂ  ಇಲ್ಲ . ಕಾರಣ ಕೊಟ್ಟರು.
ಪರಿಸ್ಥಿತಿ ನೊಡಿ ಪಿಚ್‌ ಎನಿಸಿತು. ನಾನು ಎಲ್ಲರನ್ನೂ ಉದ್ದೇಶಿಸಿ ಹೇಳಿದೆ. ಅವನು ನಮ್ಮ ಸಹೋದ್ಯೋಗಿ ಏನಾದರೂ ಮಾಢಲೆ ಬೇಕಲ್ಲ?
 ಯಾರೂ ಮಾತನಡಲಿಲ್ಲ  ಒಬ್ಬಿಬ್ಬರು,ಈ ವರೆಗ ನಾವುಕೊಟ್ಟಿದ್ದನ್ನೆ ವಾಪಸ್ಸು ಕೊಟ್ಟಿಲ್ಲ. ಅವನಾಗಿ ಮಾಡಿಕೊಂಡದ್ದು. ಅನುಭವಿಸಲಿ, ಎಂದರು
ಇನ್ನು ಸುಮ್ಮನಿರುವುದ ತರವಲ್ಲ , ಆಧಿಕಾರಿಯಾಗಿಅಲ್ಲದಿದ್ದರೂ ಒಬ್ಬಮನುಷ್ಯನಾಗಿ ಮಾಡಲೇ ಬೇಕಾದ  ಸಮಯ ಎಂದು ಅವರಿಗೆಲ್ಲ ಹೇಳಿದೆ.
ಅವನು ಎಂಥವನು ಎನ್ನುವುದ ಈಗ ಲೆಕ್ಕಕಿಲ್ಲ. ಒಬ್ಬವ್ಯಕ್ತಿ ಸಾವಿ ಅಂಚಿನಲ್ಲಿದ್ದಾನೆ.  ಏನು ಕೊಟ್ಟರೂ ಜೀವ ಹೋದ ಮೇಲೆ ಬರಲುಸಾಧ್ಯವಿಲ್ಲ. ನಾವೆಲ್ಲ ಸೇರಿ ಅವನಿಗೆ ಹೆಚ್ಚಿ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡ ಬೇಕು,
ಚಿಕಿತ್ಸೆಗೆ ೪೦-೫೦ ಸಾವಿರ ರೂಪಾಯಿ ಬೇಕು. ಎಲ್ಲಿಂದ ತರುವುದು ನಾವು ಏನು ಮಾಡಲು ಸಾಧ್ಯ . ಆಗಲೆ ಅವನಿಗೆ ಕೊಟ್ಟು ಕೈ ಸುಟ್ಟು ಕೊಂಡದ್ದೇವೆ.. ಸರಿಯಾಗಿ ಇದ್ದಾಗಲೆ ಕೊಡದವ ಈಗ ಕೊಡುವನೆ. ದೇವರು ಇಟ್ಟಹಾಗೆ ಆಗುವುದು , ಎಂದು ಕೈ ಚೆಲ್ಲಿದರು.
ಆದರೆ ನನಗೆ ಏನಾದರೂ ಪರಿಹಾರ ಹುಡುಕಲೇ ಬೇಕು . ಅವನ ಜೀವ ಉಳಿಸಲು ಕೊನೆಯಪ್ರಯತ್ನ ಮಾಡಬೇಕು ಎನಿಸಿತು.
ನೋಡಿ ಅವರು ಎಂಥಹವರು ಎಂಬುದು ಮುಖ್ಯವಲ್ಲ. ಇದು ಜೀವದ , ಬದುಕಿನ ಪ್ರಶ್ನೆ . ನಾವಲ್ಲದೆ ಯಾರು ಸಹಾಯ ಮಾಡುವರು? ಅವರಿಗೆ ಕೊಟ್ಟ ಹಣ ಮರಳಿಸುವ ಹೊಣೆ ನನ್ನದು. ನಾನು ಐದು ಸಾವಿರ ಕೊಡುವೆ. ನೀವೆಲ್ಲರೂ ಕೊಡಿ. ಹೇಗಿದ್ದರೂ ಮೆಡಿಕಲ್‌ ರಿಇಂಬರ್ಸ ಮೆಂಟ್‌ ನಾನೆ ಮಾಡಬೇಕು. ಆಗ ನಾನು ಕೊಡುವೆ . ಅಕಸ್ಮಾತ್‌ ಗುಣ ವಾಗದಿದ್ದರೆ ಸರಕಾರದ ಸೌಲಭ್ಯಗಳು ಅವನ ಮನೆಯವರಿಗೆ ಬರುವವು. ಅದನ್ನು ನಾನೆ ಡ್ರಾ ಮಾಡಿ ಕೊಡಬೇಕು. ಅದರಲ್ಲಿ ಎಲ್ಲರ ಹಣ ವಾಪಸ್ಸು ಮಾಡಿಸುವೆ. ಈ ಬಗ್ಗೆ ಅವರ ಕುಟುಂಬದ ಒಪ್ಪಿಗೆ ಪಡೆಯುವೆ., ಎಂದೆ .ನಿಮ್ಮಹಣ ಕ್ಕೆ ನಾನು ಗ್ಯಾರಂಟಿ ಕೊಡುವೆ,ದಯಮಾಡಿ ಸಹಕರಿಸಿ, ವಿನಂತಿಸಿದೆ.
ಎಲ್ಲರೂ ಮುಖ  ಮುಖ ನೋಡಿಕೊಂಡರು ಹೊಸದಾಗಿ ಬಂದಿರುವ ನಾನೆ ಸಹಾಯ ಮಾಡಲು ಸಿದ್ಧನಾದಾಗ ಹತ್ತಾರು ವರ್ಷ ಜತೆಯಲ್ಲಿ ಕೆಲಸ ಮಾಡಿದ ಅವರಿಗೂ ಮನಕರಗಿತು. ಅಲ್ಲಿಯೇ ಸುಮಾರು ನಲವತ್ತು ಸಾವಿರ ಹನ ಸಂಗ್ರಹವಾಯಿತು.ಆದರೆ ಅವರ ಮನೆಯಲ್ಲಿ ಜವಾಬ್ದಾರಿ ಹೊರುವವರು ಯಾರೂ ಇರಲಿಲ್ಲ. ನಮ್ಮ ಶಾಲೆಯ  ಹಿರಿಯ ಸಹಾಯಕ ಅಬ್ದುಲ್‌ ಕರೀಂ ಅದೇ ಊರಿನವರು. ಅವರಿಗೆ ಬೇಂಗಳೂರಿನಲ್ಲಿ ನಿಮಾನ್ಹನ್ಸ ಆಸ್ಪತ್ರೆಯಲ್ಲಿ ಪರಿಚಿತರಿದ್ದರು. ಅವರಿಗೆ ಆಸ್ಪತ್ರೆಗೆ  ಸೇರಿಸುವ ಮತ್ತು ಹಣವನ್ನು ಔಷಧಿ ಉಪಚಾರಕ್ಕಾಗಿ ಮಾತ್ರ ಬಳಸುವಂತೆ ತಿಳಿಸಲಾಯಿತು. .
ತಕ್ಷಣ ಶ್ಯಾಮ್ಯುಯಲ್‌ ಅವರ  ಅವರ ಹೆಂಡತಿಯನ್ನು ಕರೆಸಿ ವಿಷಯ ತಿಳಿಸಿದಾಗ ಅವರು  ಎರಡು ಮಾತಿಲ್ಲದೆ ಒಪ್ಪಿ ಕೈ ಮುಗಿದರು.
ನಮ್ಮ ಹಿರಿಯ ಸಹಾಯಕರಿಗೆ ಆ ಆಸ್ಪತ್ರೆಯಲ್ಲಿ ಪರಿಚಿತರಿದ್ದರು. ಅವರಿಗೆ ಆಸ್ಪತ್ರೆ ಸೇರಿಸುವ ಹೊಣೆ ವಹಿಸಲಾಯಿತು. ಜತೆಗೆ ಎರಡುದಿನ ಬೆಂಗಳೂರಿನಲ್ಲಿದ್ದ ಕಚೇರಿಯ ಕೆಲಸವನ್ನೂ ಮಾಡಿಕೊಂಡು ಬರಲು ತಿಳಿಸಲಾಯಿತು. ಆ ಅವಧಿಯನ್ನು ಅನ್ಯ ಕರ್ತವ್ಯ ಎಂದು ಪರಿಗಣಿಸುವುದಾಗಿ ತಿಳಿಸಿದೆವು.
 ಈ ಎಲ್ಲ ಬೆಳವಣಿಗೆಯನ್ನು ಅರಿತ ಅವರ ಊರಿನವರೊಬ್ಬರು ಉಚಿತವಾಗಿ ಕಾರಿ ಕೊಡಲು ಒಪ್ಪಿದರು. ಅರೆ ಪ್ರಜ್ಙಾವಸ್ಥೆಯಲ್ಲಿದ್ದ ಅವರನ್ನು ಬೆಂಗಳೂರಿಗೆ ಸಾಗಿಸಲಾಯಿತು.
 ಕರೀಂ ಸಾಹೇಬರು ದಿನವೂ ದೂರವಾಣಿಯ ಮೂಲಕ ಅಲ್ಲಿನ ಬೆಳವಣಿಗೆ ತಿಳಿಸಿದರು. ಎಲ್ಲ ವ್ಯವಸ್ಥೆಯನ್ನು ಮಾಡಿ ಮೂರು ದಿನಗಳಲ್ಲಿ ಹಿಂತಿರುಗಿದರು. ಅವರಿಗೆ ಪ್ರಜ್ಞೆ  ಬಂದಿತ್ತು ಗುಣ ಮುಖರಾಗುತಿದ್ದರು.
ಇಪ್ಪತ್ತು ದಿನದ ನಂತರ ಶ್ಯಾಮ್ಯುಯಲ್‌ ಹೆಂಡತಿಯೊಡನೆ ಕಾಲೇಜಿಗೆಬಂದರು.ತುಂಬ ಇಳಿದು ಹೋಗಿದ್ದರು.
ಈಗ ಕಾಲೇಜಿಗೆ ಯಾಕೆ ಬಂದಿರಿ . ವಿಶ್ರಾಂತಿ ತೆಗೆದುಕೊಳ್ಳಬೇಕು ಮನೆಗ ಹೋಗಿ , ಎಲ್ಲರದೂ ಒಕ್ಕೊರಳಿನ ಒತ್ತಾಯ.
ಅವರು ಕಣ್ತುಂಬಾ ನೀರು ತಂದುಕೊಂಡು ಕೈ ಮುಗಿದು ಮನೆಗೆ ಮರಳಿದರು.
 ತಿಂಗಳೊಪ್ಪತ್ತಿನಲ್ಲಿ ಪೂರ್ಣ ಗುಣ ಮುಖರಾದರು. ಕಾಲೇಜಿಗೂ ಹಾಜರಾಗ ತೊಡಗಿದರು. ಅವರಿಗೆ ಹೆಚ್ಚು ಶ್ರಮ ಮಾಡಿಕೊಳ್ಳದೆ ಅರಾಮಾಗಿ ಇರಲು ವ್ಯವಸ್ಥೆ ಮಾಡಲಾಯಿತು. ನಮ್ಮ ಗುಮಾಸ್ತರನ್ನು ಖುದ್ದಾಗಿ ಕಳುಹಿಸಿ ಅವರ ವೈದ್ಯಕೀಯ ವೆಚ್ಚದ ಬಿಲ್ಲು ಮಾಡಿಸಲಾಯಿತು. ಹಣವೂ ಬಂದಿತು. ಅದು ಬಂದ ತಕ್ಷಣ  ಅವರು ಎಲ್ಲ ಹಣವನ್ನು ನನ್ನಮೇಜಿನ ಮೇಲೆ ಇರಿಸಿ ದಯಮಾಡಿ ಎಲ್ಲರೀಗೂ ಅವರವರ  ಬಾಕಿಯನ್ನು ವಾಪಸ್ಸು ಮಾಡಲು ತಿಳಿಸಿದರು. ನಾನು ನಮ್ಮ  ಗುಮಾಸ್ತರನ್ನು ಕರೆದು ಅವರಲ್ಲಿದ್ದ ದಾಖಲೆಯ ಪ್ರಕಾರ ಹಣ ಹಿಂತಿರುಗಿಸಲು ತಿಳಿಸಿದೆ. ಸಂಜೆ ಗೆ ನಮ್ಮ ಗುಮಾಸ್ತರು ಬಂದರು.
 ಸಾರ್‌, ಯಾರೂ ಹಣ ಪಡೆಯಲು ಒಪ್ಪತ್ತಿಲ್ಲ. ಅವರಿಗೆ ವಾಪಸ್ಸು ಮಾಡುವುದು  ಬೇಡ ವಂತೆ, ಎಂದರು. ಎಲ್ಲರನ್ನೂ ನನ್ನ ಛೇಂಬರಿಗೆದೆ.
  ಕರೆಸಿ ಯಾಕೆ ಹೀಗೆ? , ಹಣ ಬಂದಿದೆ. ಏನೂ ತೊಂದರೆಇಲ್ಲ ವಾಪಸ್ಸು ಪಡೆಯಿರಿ.
ಇಲ್ಲ ಸಾರ್ ಏನೋ ಆಗ ಹಾಗೆ ಅಂದಿದ್ದವು. ಆದರೆ ಅವರ ಪ್ರಾಣ ಉಳಿಯಿತಲ್ಲ ಅದೆ ನಮಗೆ ದೊಡ್ಡದು. ಹಣ ಬೇಡ. ಅದನ್ನು ಅವರು ತಮ್ಮ ಆರೈಕೆಗೆ ಬಳಸಲಿ, ಎಂದರು
ಶ್ಯಾಮ್ಯುಯಲ್ ಕರೆಸಿದೆ. ಅವರ ಜತೆ ಹಂಡತಿಯೂ ಇದ್ದರು. ವಿಷಯ ತಿಳಿಸಿದೆ. ಅವರು ಅಳ ತೊಡಗಿದರು. ಹೇಗಾದರೂ ಮಾಡಿ ವಾಪಸ್ಸು ಕೊಡಿಸಿ, ಹೊತ್ತಿನಲ್ಲಿ ಕೊಟ್ಟು ಉಪಕಾರ ಮಾಡಿರುವುರು . ಜೀವ ಉಳಿಸಿರುವರು,ಎನ್ನುತ್ತಾ ಬಿಕ್ಕತೊಡಗಿದರು,
ಅವರು ಬೇಡ ಎನ್ನುತ್ತಿದ್ದಾರೆ , ಇವರು ಕೊಡುವೆ ಎನ್ನುತಿದ್ದಾರೆ , ನನಗೆ ಏನೂ ಮಾಡಲು ತೋಚಲಿಲ್ಲ.
ತುಸು ಹೊತ್ತಿನ ನಂತರ ಹೇಳಿದೆ. ನಾನು ಒಂದು ಮಾತು ಹೇಳುವೆ. ನೀವೆಲ್ಲರೂ ಕೇಳ ಬೇಕು. ಏನಂತಿರಾ ?
ಆಯ್ತು ಸಾರ್‌ ನೀವೆ ತೀರ್ಮಾನ ಮಾಡಿ. ಅದರಂತೆ ನಡೆದುಕೊಳ್ಳುವೆವು.
ಸರಿ , ಕೊಡದಿದ್ದರೆ  ಶ್ಯಾಮ್ಯುಯಲ್‌ ಗೆ ಸಂಕೋಚ. ನಿಮಗೆ ಪಡೆಯಲು ಮನಸ್ಸಿಲ್ಲ. ಅದಕ್ಕೆ ಒಂದು ಕೆಲಸ ಮಾಡೋಣ. ಎಲ್ಲರೂ ತಾವು ಕೊಟ್ಟ ಹಣದಲ್ಲಿ ಅರ್ಧ ಮಾತ್ರ ಹಿಂದೆ ಪಡೆಯಲಿ. ಇನ್ನುಳಿದ ಇಪ್ಪತ್ತು ಸಾವಿರವನ್ನು ಸ್ಯಾಮ್ಯುಯಲ್‌ ಆರೈಕೆಗೆ ಬಳಸಲಿ. ಎಲ್ಲರೂ ತೃಪ್ತಿಯಿಂದ ತಲೆ ಯಾಡಿಸಿದರು.
ಶ್ಯಾಮ್ಯುಯಲ್‌ ಹೊಸ ಮನುಷ್ಯನೆ ಆದ.  ಈ ವಿಷಯ ತಮ್ಮಚರ್ಚಿ ನಲ್ಲೂ ತಿಳಿದರಂತೆ. ನನಗೆ ಹಾರ್ಟ ಆಪರೇಷನ್‌ ಆದಾಗ ನಿತ್ಯವೂ  ಅಸ್ಪತ್ರೆಗೆ ನೋಡಲು ಬಿಡದಿದ್ದರೂ  ಭೇಟಿ ಕೊಡುತಿದ್ದರಂತೆ. ಅಲ್ಲದೆ ಚರ್ಚಿನಲ್ಲೂ ನನ್ನ ಆರೋಗ್ಯಕ್ಕಾಗಿ ವಿಶೇಷ  ಸಾಮೂಹಿಕ ಪ್ರಾರ್ಥನೆ ಮಾಡಿಸಿದರಂತೆ..ಕಾಲನ ಪಿಸಿಕೊಂಡ ಶ್ಯಾಮ್ಯುಯಲ್‌ನಂತರ ನಿವೃತ್ತರಾಗುವ ವರೆಗೂ ನೆಮ್ಮದಿಯ ಜೀವನ  ನಡೆಸಿದರು.

No comments:

Post a Comment