Monday, May 20, 2013

ಆರರಿಂದ ಅರವತ್ತು-ಸರಣಿ-ಮರೆಯಲಾಗದ ಮರಿ.


ಮರೆಯಲಾಗದ  ಮರಿಸ್ವಾಮಿ                                                
ಕೋಲಾರ ಜಿಲ್ಲೆಯಲ್ಲಿ ನಾಲ್ಕುವರ್ಷ ಕೆಲಸ ಮಾಡಿದೆ.ಅಲ್ಲಿ ನನ್ನ ಷಡ್ಡಕ ಇಂಜನಿಯರು. ಮನೆಕಟ್ಟುವುದು ಅವರ ಹವ್ಯಾಸ.ಮೊದಲು ೨೦x೩೦ ರ ನಿವೇಶನದಲ್ಲಿ ಚಿಕ್ಕ ಚೊಕ್ಕ ಮನೆ ಕಟ್ಟಸಿದ.ನಂತರ. ಅದರ ಮೇಲೆ  ಮಹಡಿ.  ಕಾಸು ಕೈ ಸೇರಿದಂತೆ ದೊಡ್ಡ ಮನೆ ಅವಶ್ಯವೆನಿಸಿತು. ಸರಿ ಕಟ್ಟಲು ಮೊದಲು ಮಾಡಿದ .  ಹಣದ ಅಡಚಣೆಯಾಯಿತು ಎಂದು, ಆಗ ಕೈಸಾಲ ಪಡೆದ. ನಂತರ ಅದನ್ನು ಹಿಂತಿರುಗಿಸದೆ , ಹೇಗೂ ನಿಮಗೆ ಮನೆ ಇಲ್ಲ. ನಿವೃತ್ತರಾದ ಮೇಲೆ ಎಲ್ಲಿಗೆ ಹೋಗುತ್ತೀರಿ. ನಿಮ್ಮದು ಅಂತ ಒಂದು ಗೂಡು ಇರಲಿ ನನ್ನ ಮನೆ ಕೊಡುವೆ . ಉಳಿದ ಹಣ ಆದಾಗ ಕೊಡಿ ಎಂದು ಒತ್ತಾಯ ಮಾಡಿದ.  ಅದಕ್ಕೆ ಹೆಂಡತಿಯ ಒತ್ತಾಸೆ ಬೇರೆ. ಮೂವತ್ತು ವರ್ಷ ಸರಕಾರಿ ಸೇವೆ ಮಾಡಿದರೂ ನನ್ನ ಮನೆ , ಜಾಗ ಅಂತ ಏನೂ ಇರಲಿಲ್ಲ.ಮೂವತ್ತು ವರ್ಷದ ಹಿಂದೆ ಹುಟ್ಟೂರು ಬಿಟ್ಟವನು ನಮ್ಮ ಊರು ಬಿಟ್ಟ ಮೇಲೆ ಎಲ್ಲ ಊರು ನಮ್ಮವೆ. . ಶೆಟ್ಟಿ ಇಳಿದಲ್ಲಿ ಪಟ್ಟಣ ಎನ್ನುವಂತೆ ,ಯಾವ ಊರಾದರೇನು ವರ್ಗ ವಾದೊಡನೆ ಗುಡುಗುಂಟಿ ಜೋಗೇರರಂತೆ ಸಮಾನು ಸರಂಜಾಮು ಹೆಂಡತಿ ಮಕ್ಕಳ ಸಮೇತ ಸಮೇತ ಹೊಸ ಊರಲ್ಲಿ ನೌಕರಿಗೆ ಹಾಜರಾಗುತ್ತಿದ್ದೆ. ಮಡದಿಯೂ ಸಹಾ” “ಕಂತೆಗೆ ಬೊಂತೆ. ಅಲ್ಲಿದೆ ನಮ್ಮ ಮನೆ ಇಲ್ಲಿ ಬಂದೆ ಸುಮ್ಮನೆ ಎಂದುಕೊಂಡು ಹಾಯಾಗಿದ್ದರು.ನಾನು ಇಂಗ್ಲಿಷ್ ಉಪನ್ಯಾಸಕನಾಗಿದ್ದರೂ  ಹಳ್ಳಿಗಳಲ್ಲೆ ಸುತ್ತಿದರಿಂದ ಮಕ್ಕಳಿಗೆ ಸರಕಾರಿ ಶಾಲೆ. ಕನ್ನಡ ಮಾಧ್ಯಮದಲ್ಲೆ ಓದು. ಯಾವದೆ ಚಿಂತೆ ಇಲ್ಲದೆ ಕೋಶ ಓದುತ್ತಾ ದೇಶ ಸುತ್ತಿದೆ. ಆದರೆ ವಿಧಿ ಲೀಲೆ ಕೊಟ್ಟ. ಹಣ ಕೈ ಬಿಟ್ಟರೆ ಹೇಗೆ? ಎಂದು ಕೊಂಡು  ಇನ್ನಷ್ಟು ಹಣ ಕೊಟ್ಟ  ಪರಿಣಾಮವಾಗಿ ಆ ಪುಟ್ಟ ಮಹಡಿ ಮನೆ ಅಯಾಚಿತವಾಗಿ ನನಗೆ ಬಂದಿತು. ಮನೆ ಕಟ್ಟುವಾಗಿನ ಯಾವುದೆ ಕಟು ಅನುಭವ ನನಗಾಗಲೆ ಇಲ್ಲ. ಅಲ್ಲಿಂದ ವರ್ಗ ವಾದಾಗ ಒಂದು ಮನೆ ನನಗೆ ಇಟ್ಟು ಕೊಂಡು ಇನ್ನೊಂದನ್ನು ಬಾಡಿಗೆಗೆ ನೀಡಿದೆ.ಇದು ಹದಿನೈದು ವರ್ಷದ ಹಿಂದಿನ ಮಾತು. ಇಂದಿನ ನಿವೇಶನದ ಬೆಲೆಗೆ ಅಂದು ಪುಟ್ಟ ಮನೆಯೆ ಬಂದಿತು.
 ನಾನೋ ಕುವೆಂಪು ಅವರ,  ಓ ನನ್ನ ಚೇತನ,  ಆಗು  ನೀ  ಅನಿಕೇತನ,  ಮನೆಯನೆಂದು ಕಟ್ಟದಿರು , ಕೊನೆಯನೆಂದು ಮುಟ್ಟದಿರು ,  ಎಂಬ ಮಾತನ್ನು ಅಕ್ಷರಶಃ  ಆನುಸರಿಸಿಸಿದವನು.  ಆದರೂ ಮನೆ ಅಂತ ಒಂದು ನನ್ನ ಪಾಲಿಗೆ ಬಂದಿತು.ನಿವೃತ್ತನಾದ ಮೇಲೆ ಅಲ್ಲಿ  ಹೋಗಿ ನೆಲಸಿದೆ. ಆದರೆ ಅಲ್ಲಿರಲು ಬಿಡಬೇಕಲ್ಲ ಮಕ್ಕಳು. ಒಬ್ಬೊಬ್ಬರು ಒಂದಕಡೆ.  ಮಕ್ಕಳಿಗಿಂತ ಹೆಚ್ಚಾಗಿ ಮೊಮ್ಮಕ್ಕಳಿಗಾಗಿ ನಾವು ಹೋಗಲೆ ಬೇಕಾಯಿತು. ಆ ಮನೆಯಲ್ಲಿ ನಾವೂ ಇದ್ದದ್ದೆ  ಕಡಿಮೆ.ಅಮೇರಿಕಾಗೆ ಹೋದರಂತು ಅಲ್ಲೆ  ಆರು ತಿಂಗಳ ವಾಸ. ಅದಕ್ಕೆ ಈ ಹಿಂದೆ ನನ್ನ ಜತೆ ಕೆಲಸಮಾಡಿದ್ದ  ಗುಮಾಸ್ತರಿಗೆ ಮನೆ ಉಸ್ತುವಾರಿ ವಹಿಸಿ ನಾವು ಊರು ಸುತ್ತುತ್ತಿದ್ದೆವು. 
ಮೊನ್ನೆ ನನಗೆ ಅವರಿಂದ ಫೋನು ಬಂದಿತು “ ಸಾರ್ ಈಗ ಗ್ಯಾಸ ಕಂಪನಿಯವರು ಹೊಸ ನಿಯಮ ಮಾಡಿದ್ದಾರೆ.  ಆರು ತಿಂಗಳು ಬಳಸದೆ ಇದ್ದರೆ ರದ್ದು ಮಾಡುತ್ತಾರೆ.  ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗಿದೆ.  ಅಮೇರಿಕಾದಿಂದ ಬಂದ ನಂತರವೂ ನೀವು ಇತ್ತಕಡೆ ಬರಲೇ ಇಲ್ಲ ಎಂದರು.
 “ ಹೌದು  . ನಿಮ್ಮ ಮಾತು ನಿಜ “ ನಾನು ಒಪ್ಪಿದೆ. ಅದು ನಮಗೆ ಒಂದು ರೀತಿಯ ಹಾಲಿಡೆ ಹೋಂ ಆಗಿದೆ. ಮೊಮ್ಮಕ್ಕಳಿಗೆ ರಜೆ ಇದ್ದಾಗ ವಾರದ ಮಟ್ಟಿಗೆ ಅಲ್ಲಿ ಎಲ್ಲರೂ ಸೇರುತ್ತಿದ್ದೆವು.. ನಾವೂ ಅಲ್ಲೆ ಸದಾ ಇರುವುದು ಆಗದ ಮಾತು , ಇದ್ದ ಮಾತು ಅವರಿಗೆ ಹೋಗಿ ತಿಳಿಸಿ  “ ಎಂದೆ
ವಿಚಾರಿಸಿದ ನಂತರ ಮಾಹಿತಿ ಬಂತು , “ ನೀವೆ ಖುದ್ದಾಗಿ ಬರ ಬೇಕಂತೆ , ಸಾರ್”
 ನಾವು ಅಲ್ಲಿ ಹೆಚ್ಚು ಹೋಗುವುದಿಲ್ಲ , ನಿಜ. ಆದರೆ ಹೋದಾಗಲಾದರೂ ಗ್ಯಾಸ್  ಬೇಕಲ್ಲ. ಅನಿವಾರ್ಯವಾಗಿ ಹೊರಟೆ.
 ಆ ಊರು ತಲುಪಿದಾಗ ಸರಿಯಾಗಿ ಕಚೇರಿಯ ಸಮಯ. ನನ್ನ ಗೆಳೆಯರು ಕಾಲೇಜಿನಲ್ಲಿ ಗುಮಾಸ್ತರು. ಅವರ ಮನೆಗೆ ಹೋದೆ.ಅವರ ಶ್ರೀಮತಿ , ಸಾರ್,  ಈಗತಾನೆ ಹೋದರು , ಫೋನು ಮಾಡುತ್ತೇನೆ ಎಂದರು. ಅವರು ತಮ್ಮ ಪ್ರಿನ್ಸಿಪಾಲರ ಅನುಮತಿ ಪಡೆದು ಅರ್ಧಗಂಟೆಯಲ್ಲಿ ಬರುವುದಾಗಿ ತಿಳಿಸಿದರು.ಅಲ್ಲಿಯ ತನಕ ಏನು ಮಾಡುವುದು, ಅಮ್ಮಾ ನಾನು ನಮ್ಮ ಮನೆಕಡೆ ಹೋಗಿಬರುವೆ , ಅಂದು ಹೊರಟೆ.
 ನಮ್ಮ ಮನೆಯಲ್ಲಿದ್ದ ಬಾಡಿಗೆದಾರರ  ಮನೆ ಬಾಗಿಲಿಗೆ ಬೀಗ ಹಾಕಿತ್ತು.  ಮೇಲಿರುವ ನಮ್ಮ ಮನೆಯ ಬೀಗ ತೆಗೆದು ಒಳಹೋದೆ. ಮನೆ ಸ್ವಚ್ಛವಾಗಿತ್ತು . ಹತ್ತಿರದಲ್ಲಿ ಇರುವ ನಮ್ಮ ನಾದಿನ ಆಗಾಗ ಬಂದು ಶುಚಿ ಮಾಡಿ ಹೋಗುವಳು.ನಾವಿರುವ ಚೆನ್ನೈ ಮತ್ತು ಬೆಂಗಳೂರಿನ ಮನೆಗಳು  ಬಾಡಿಗೆಯವಾದರೂ ವಿಶಾಲವಾಗಿವೆ. ಆದರೂ ಇಲ್ಲಿನ ಚಿಕ್ಕ ಮನೆಗೆ ಬಂದಾಗ ಏನೋ ಒಂದು ಥರ ನೆಮ್ಮದಿ ಎನಿಸುವುದು.ಪುಟ್ಟ ಪಟ್ಟಣದ ಈ ಚಿಕ್ಕ ಮನೆಯ ಕೊಡುವ ಖುಷಿಯೇ ಬೇರೆ.  ಆರಾಮಾಗಿ ಮಂಚದ ಮೇಲೆ ಅಡ್ಡಾದೆ. ತುಸು ಮಂಪರು ಬಂದಿರಬಹುದು.  ಯಾರೋ  ಬಾಗಿಲುತಟ್ಟಿದ ಹಾಗಾಯಿತು. ಎದ್ದು ಹೋಗಿ ಬಾಗಿಲು ತೆರದೆ.  ಹೊಸಬರು ನಿಂತಿದ್ದರು. “ನಮಸ್ಕಾರ ಸಾರ್”  ಎಂದರು.
“ನಮಸ್ಕಾರ ಯಾರು ಬೇಕು ?” ಎಂದೆ
 “ ನೀವೆ ಬೇಕು,ನಮ್ಮ ಸಾಹೇಬರು ಕರೆದು ತರಲು ಕಾರು ಕಳಿಸಿದ್ದಾರೆ “ ಎಂದ .
 ಕೆಳಗೆ ನೋಡಿದ . ಮನೆಯ ಮುಂದೆ ಬೂದು ಬಣ್ಣದ ಅಲ್ಟೋ ಕಾರು ನಿಂತಿತ್ತು.
ನನಗೆ ತಲೆ ಬುಡ ಗೊತ್ತಾಗಲಿಲ್ಲ. ನಾನು ನಿವೃತ್ತನಾಗಿ ಹತ್ತು ವರ್ಷವಾಯಿತು. ಯಾರಪ್ಪ ಈ ಸಾಹೆಬರು ಎಂದುಕೊಂಡೆ.
” ’ಯಾರ್ರಿ ,  ನಿಮ್ಮ ಯಜಮಾನರು ?ನನಗೆ ಯಾರೂ ಗೊತ್ತಿಲ್ಲವಲ್ಲ. ನನ್ನನ್ನು  ಕಾಣುವ ಅಗತ್ಯ ಯಾರಿಗೂ ಇಲ್ಲ. ನೀವು ಪರಪಾಟಾಗಿ  ಇಲ್ಲಿಗೆ ಬಂದಿರುವರಿ.ವೆ . ನಿಮಗೆ ಬೇಕಾದ ವ್ಯಕ್ತಿ ನಾನಲ್ಲ. ಎಂದೆ.
ಸರ್, ನೀವು ಮಾಜಿ ಪ್ರಿನ್ಸಿ ಪಾಲು ತಾನೆ. ನಮ್ಮ ಪ್ರಿನ್ಸಿಪಾಲರು ನಿಮ್ಮನ್ನು ಕರೆದು ಕಂಡು ಬಾ ಎಂದಿದ್ದಾರೆ “ ಎಂದ .
ಆಗ ಝಗ್ಗನೆ ತಲೆಯಲ್ಲಿ  ದೀಪ ಹೊತ್ತಿತು. ನಮ್ಮ ಗೆಳೆಯ ಗುಮಾಸ್ತರಾಗಿದ್ದ ಕಾಲೇಜಿನಿಂದ ಬಂದಿದ್ದಿತು ಕರೆ.
 ಮನೆಗೆ ಕೀಲಿ ಹಾಕಿ ಕಾರು ಏರಿದೆ.  ಕಾರು ಕಾಲೇಜಿನ ಮುಂದೆ ನಿಂತಿತು. ನಾನು ಕೆಲಸ ಮಾಡಿದ ಕಾಲದಲ್ಲೂ ಅ ಕಾಲೇಜು ಅದು ಇದ್ದಿತು. ಅಲ್ಲಿಗೆ ನಾನು ಆಗಾಗ ಭೇಟಿ ನೀಡಿದ್ದೆ.
 ಕಾರಿನಿಂದ ಇಳಿದು ಕಾಲೇಜಿನ ಒಳಗೆ ಹೋದೆ.ಅದು ಸರಕಾರಿ  ಕಾಲೇಜು. ಸುತ್ತಲೂ ಮರ ಗಿಡ.  ಪರಿಸರ ಹಸಿರು ಮಯ. ಧೂಳು, ಕಸ ತುಸುವೂ ಇರಲಿಲ್ಲ.  ಹೊಸದಾಗಿ ಸುಣ್ಣ ಬಣ್ಣ ಮಾಡಿಸದಂತಿತ್ತು.  ಅವರ ಕಚೇರಿಗೆ ಹೋದೆ. ಯಾವದೋ ಕಾರ್ಪೊರೇಟ್ ಆಫೀಸಿಗೆ ಹೋದಂತೆ ಎನಿಸಿತು. ಸರಕಾರಿ ಕಚೇರಿಯೇ ಎಂಬ ಅನುಮಾನ ಮೂಡಿತು.ನೂನು ಹೋದೊಡನೆ ಪ್ರಿನ್ಸಿಪಾಲರು ಧಡಕ್ಕನೆ ಎದ್ದುನಿಂತು ಸ್ವಾಗತಿಸಿದರು. ಅವರು ಬೇರೆ  ಯಾರೂ ಅಲ್ಲ . ಹದಿನೈದುವರ್ಷದ  ಹಿಂದೆ ನನ್ನ ಜೊತೆ  ಕೆಲಸ  ಕೆಲಸ ಮಾಡಿದ ರಾಜ್ಯಶಾಸ್ಟ್ರ ಉಪನ್ಯಾಸಕ  ಮರಿಸ್ವಾಮಿ
 ಅವರು ಬಹಳ ಆದರದಿಂದ ಸ್ವಾಗತಿಸಿ ಸಾರ್, ಕುಳಿತು ಕೊಳ್ಳಿ ಎಂದು ತಮ್ಮ ಆಸನ ತೋರಿಸಿದರು.ನನಗೆ ಕಕಮಕ ಆಯಿತು. ನಾನು ಪ್ರಿನ್ಸಿಪಾಲನಾಗಿದ್ದಾಗ  ಬೇರೆ ಯಾರು ನನ್ನ  ಕುರ್ಚಿಯಲ್ಲಿ ಕುಳಿತು ಕೊಳ್ಳಲು ಅವಕಾಶವಿರಲಿಲ್ಲ. ಒಂದು ಊರಲ್ಲಿ ಶಾಸಕರೊಬ್ಬರಿಗೆ  ನನ್ನ ಕುರ್ಚಿಯಲ್ಲಿ ಕೂಡಿಸಲಿಲ್ಲ ಎಂದು ಅಸಮಾಧಾನವಾಗಿ ಕೊನೆಗೆ ಅಲ್ಲಿಂದ ನನ್ನ ವರ್ಗಾವಣೆಯಾಗಿತ್ತು. ಅದು ನನಗೆ ನೆನಪಿಗೆ ಬಂದಿತು.
 ಮುಗುಳುನಗುತ್ತಾ ನಯವಾಗಿ ಹೇಳಿದೆ.”ಅದುನಿಮ್ಮ ಸ್ಥಾನ . ನಾನು ಅಲ್ಲಿ ಕುಳಿತುಕೊಳ್ಳಬಾರದು “
 “ಇಲ್ಲ ಸಾರ್, ನೀವು ಕುಳಿತರೆ ಅದಕ್ಕೆ ಬೆಲೆ ಬರುತ್ತದೆ.” ಬಹು  ವಿನೀತರಾಗಿ ಕೋರಿದರು.
 ನಾನು ಬೇಡ ಎಂದು ಅವರ ಎದುರಿನ ಕುರ್ಚಿಯಲ್ಲಿ ಕುಳಿತೆ.ಅವರು ನಿಂತೆ ಇದ್ದರು.
ದಯಮಾಡಿ ಕುಳಿತುಕೊಳ್ಳಿ ,ಎಂದೆ.
“ಇಲ್ಲ ,ಸಾರ್, ತಾವು ದೊಡ್ಡವರು, ತಮ್ಮ ಎದುರಿಗೆ ನಾನು ಕುಳಿತು ಕೊಳ್ಳಲಾರೆ “ ಎಂದರು
.” ನಾನು ವಯಸ್ಸಿನಲ್ಲಿ ಹಿರಿಯ ನಿಜ. ಆದರೆ ನೀವು ಈಗ ಹಿರಿಯ  ಸರ್ಕಾರಿ ಅಧಿಕಾರಿಗಳು. ಇಲ್ಲಿನ ಮುಖ್ಯಸ್ಥರು. ನಿಮ್ಮ ಸ್ಥಾನದಲ್ಲಿ ಕುಳಿತರೆ, ಅದು ನನಗೆ  ಅಗೌರವ ತೋರಿದಂತಲ್ಲ.ಅದರಿಂದ ನನಗೆ ಹೆಮ್ಮೆ . ನಮ್ಮ ಕಿರಿಯ ಸಹೋದ್ಯೋಗಿ ಹಿರಿಯ ಸ್ಥಾನ ಅಲಂಕರಿಸಿರುವದನ್ನು  ನೋಡಿದ ತೃಪ್ತಿ ನನಗಾಗುವುದು, ಇಷ್ಟು ಮಾತ್ರ ಅಲ್ಲ. ನೀವು ಇನ್ನೂ ಉನ್ನತ ಸ್ಥಾನ ಕ್ಕೆ  ಏರಬೇಕು. ನಿಮಗಿರುವ ಹಿನ್ನೆಲೆ , ನಿಮ್ಮಸಾಧನೆ ಸಾಮಾನ್ಯವಲ್ಲ  ಎಂದಾದರು ಒಂದು ದಿನ, ನೀವು ಶಾಸಕರಾದರೂ  ಅಚ್ಚರಿಯಿಲ್ಲ.  ನನಗಂತೂ ಬಹು ಸಂತೋಷವಾಗುವುದು´ ಎಂದೆ. ಅವರು ಮುಜುಗರ ಪಡುತ್ತಾ ಕುರ್ಚಿಯಲ್ಲಿ ಕುಳಿತರು..
 ಅಷ್ಟರಲ್ಲಿ ನನ್ನ ಗೆಳೆಯರಾದ ಗುಮಾಸ್ತರು ಒಳ ಬಂದು, “ ನಮಸ್ಕಾರ ಸಾರ್, ತಪ್ಪು ತಿಳಿಯ ಬೇಡಿ” ಎಂದರು.
“ಏನ್ರಿ ಇದೆಲ್ಲ “ ಎಂದೆ.
“ ಸಾರ್ , ಅರ್ಧ ಗಂಟೆ ಹೊರಗೆ ಹೋಗಲು ಅನುಮತಿ ಕೊಡಿ,  ಎಂದು ಕೇಳಿದೆ.
 ಏಕೆ, ಎಂದು ಕೇಳಿದರು.
”ನಮ್ಮ ಹಳೆಯ ಪ್ರಿನ್ಸಿಪಾಲರು ಬಂದಿದ್ದಾರೆ ಅವರನ್ನು ಮಾತನಾಡಿಸಿ ಬರುವೆ”  ಎಂದಾಗ
“ ನೀವೊಬ್ಬರೆ ಮಾತನಾಡಿಸಿದರೆ ಸಾಕಾ, ಅವರು ಪಾದಧೂಳಿ ನಮ್ಮಕಾಲೇಜಿಗೂ ಬೀಳಲಿ,  ಎಲ್ಲರಿಗೂ ಒಳ್ಳೆಯದಾಗುವುದು ,     ಕಾರು ಕಳುಹಿಸುವೆ,  ಎಂದರು, ನಿಮಗೆ ತೊಂದರೆ ಯಾಯಿತೇನೋ ?” ಎಂದು ಹಲುಬಿದರು.
ನನ್ನ ನೆನಪು ಹದಿನೈದು ವರ್ಷದ ಹಿಂದೆ ಹೋಯಿತು. ನಾನು ಅಲ್ಲಿನ ಕಾಲೇಜಿಗೆ ಪ್ರಿನ್ಸಿಪಾಲನಾಗಿ ಹೋದಾಗ ಅಲ್ಲಿ ಅನೇಕ ಉಪನ್ಯಾಸಕ ಹುದ್ದೆಗಳು   ಖಾಲಿ ಇದ್ದವು.ಮಕ್ಕಳಿಗೆ ಪಾಠ ಪ್ರವಚನದ ತೊಂದರೆ  ಬಹಳವಾಗಿತ್ತು.  ಖಾಲಿ ಹುದ್ದೆ ತುಂಬಲು ಸರ್ಕಾರಕ್ಕೆ ಹಲವು ಹದಿನೆಂಟು ತೊಂದರೆಗಳು.
 ತಮ್ಮ ಊರಿಗೆ ಕಾಲೇಜು ತರುವುದು ತಮ್ಮ ದೊಡ್ಡ ಸಾಧನೆ ಎಂದು ಕೊಂಡ ಜನಪ್ರತಿನಿಧಿಗಳು ಅನುಕೂಲ ಇದೆಯೋ ಇಲ್ಲವೋ ನೋಡದೆ , ಅವರಿಗಿಂತ ನಾವೇನು ಕಡಿಮೆ , ಎಂದು ಚಿಕ್ಕ ಪುಟ್ಟ ಪಟ್ಟಣಗಳಿಗೂ ಕಾಲೇಜು ಮಂಜೂರಿ ಮಾಡಿಸಿಕೊಂಡರು ಬಂದರು. ಅಲ್ಲಿಗೆ ಅವರ ಹೊಣೆ ಮುಗಿಯಿತು.ಅಲ್ಲೆ ಇದ್ದ ಹೈಸ್ಕೂಲುಗಳನ್ನು ಮೇಲದರ್ಜೆಗೆ ಏರಿಸಿದರೆ ಆಯಿತು.ಪ್ರಿನ್ಸಿಪಾಲರಿದ್ದರೆ , ಉಪನ್ಯಾಸಕರಿಲ್ಲ. ಉಪನ್ಯಾಸಕರಿದ್ದರೆ ಗುಮಾಸ್ತರಿಲ್ಲ.  ಕಟ್ಟಡದ ಕಥೆ ಹೇಳುವ ಹಾಗೆ ಇಲ್ಲ, ಇದ್ದದ್ದರಲ್ಲೆ ಪಾಳಿಯ ಮೇಲೆ ಕೆಲಸ. ಮೊದಲು  ಗುತ್ತಿಗೆಯ ಮೇಲೆ ಉಪನ್ಯಾಸಕರನ್ನು ನೇಮಿಸಿಕೊಂಡರು. ನಿಗದಿತ ಮೊತ್ತದ ವೇತನ ನೀಡಲಾಗಿತ್ತು. ನಂತರ ಅವರು ಸುಪ್ರೀಮ್ ಕೋರ್ಟಿಗೆ ಹೋದರು. ಪೂರ್ಣ ವೇತನ ನೀಡಲೇ ಬೇಕೆಂಬ ಆದೇಶವಾಯಿತು .ಕೈ ಸುಟ್ಟುಗೊಂಡ ಸರ್ಕಾರ ಅವರಿಗೆ ಹಣ ನೀಡಿ ಕೈ ತೊಳೆದದು ಕೊಂಡಿತು.ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಇಲ್ಲ . ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳಿಗೆ ಖೋತಾ ಆಯಿತು.ನಂತರ.ಹೈಸ್ಕೂಲಿನ ಅರ್ಹ ಶಿಕ್ಷಕರಿಗೆ  ಆರ್ಟಿಕಲ್ ೩೨ ಮೇಲೆ ನೇಮಕವಾಯಿತು.  ಅದೇ ಸಂಬಳಕ್ಕೆ ದೂರದ  ಊರಿನ ಕಾಲೇಜಿನಲ್ಲಿ ಕೆಲಸ. ನೆಲಸಿದ್ದ ಊರು, ಹೆಂಡತಿ ಮಕ್ಕಳನ್ನು ಬಿಟ್ಟು ದೂರದ ಊರಿಗೆ ಹೋಗಲು ಬಹಳ ಜನ ಬಯಸಲಿಲ್ಲ.  ಹತ್ತಿರವಿದ್ದವರು  ಮಾತ್ರ ಬಂದರು . ದೂರ ವಿದ್ದವರು ಬರಲಿಲ್ಲ.   ಅಲ್ಲದೆ ಇಂಗ್ಲಿಷ್,, ಅರ್ಥಶಾಸ್ತ್ರ ಮತ್ತು ವಿಜ್ಞಾನ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ  ಪಡೆದ ಹೈಸ್ಕೂಲು ಶಿಕ್ಷಕರು ವಿರಳ.. ಹೀಗಾಗಿ ಪ್ರಿನ್ಸಿಪಾಲರಿಗೆ ಫಜೀತಿ. ಸರ್ಕಾರ ಸಿಬ್ಬಂದಿ ಕೊಡಲ್ಲ. ವಿದ್ಯಾರ್ಥಿಗಳು ಪೋಷಕರು ಬಿಡಲ್ಲ.. ಅದಕ್ಕೆ ಕಂಡು ಕೊಂಡ ಸುಲಭ ಉಪಾಯ ನಿಯೋಜನೆ.   ಹೇಗಿದ್ದರೂ ಉಪನ್ಯಾಸಕರಿಗೆ ಪೂರ್ತಿ ಕೆಲಸದ ಅವಧಿ ಅಂದರೆ ವಾರಕ್ಕೆ ೧೬ ತಾಸು ಬಹುತೇಕ  ಕಾಲಿಜಿನಲ್ಲಿಅಷ್ಟು ಕೆಸದ ಹೊರೆ  ಇರಲೇ ಇಲ್ಲ.ಗ್ರಾಮಾಂತರೆದ  ಕಾಲೇಜುಗಳಲ್ಲಿ ಎರಡೆ ತರಗತಿಗಳು . ಅಂದರೆ ಉಪನ್ಯಾಸಕರಿಗೆ ೮  ಗಂಟೆಯ ಕೆಲಸದ ಹೊರೆ. ಹಾಗಾಗಿ ಅವರು ಒಂದು ವಿಧದದಲ್ಲಿ ರಾಜರು . ಕೆಲಸ ಕಡಿಮೆ .  ವೇತನ ಸಮಾನ. ಅದಕ್ಕೆ   ಇಲಾಖೆ ಯೋಜನೆಯೊಂದನ್ನು ರೂಪಿಸಿತು.  ಕಡಿಮೆ ಕೆಲಸದ ಅವಧಿ ಇರುವ ಕಾಲೇಜಿನ ಉಪನ್ಯಾಸಕರನ್ನು ಹತ್ತಿರದ ಕಾಲೇಜಿನಲ್ಲಿ ಮೂರು ದಿನ ಕೆಲಸ ಮಾಡಲು ಹೆಚ್ಚುವರಿ ಭತ್ಯ ನೀಡಿ ನಿಯೋಜನೆ ಮಾಡುವುದು.ಹಣ ಕಾಸಿನ ಸೌಲಭ್ಯ ನೀಡಿದ್ದರಿಂದ ಉಪನ್ಯಾಸಕರೂ ಗೊಣಗಲಿಲ್ಲ.
 ಪ್ರತಿ ವರ್ಷದ ಪ್ರಾರಂಭದಲ್ಲೆ ಜಿಲ್ಲಾ ಉಪನಿರ್ದೇಶಕರು ಎಲ್ಲ ಕಾಲೇಜುಗಳ ಉಪನ್ಯಾಸಕರ ಸಭೇ ಕರೆದು ಅಲ್ಲಿಯೇ ಅಗತ್ಯಕ್ಕೆ ಅನುಗುಣವಾಗಿ ನಿಯೋಜನೆ ಮಾಡುತ್ತಿದ್ದರು. ಆದಷ್ಟು ಹತ್ತಿರದ ಕಾಲೇಜಿಗೆ ಕೊಡುತ್ತಿದ್ದರು.ಹಾಗಾಗಿ ಹೆಚ್ಚಿನ ಸಮಸ್ಯೆ ಇರಲಿಲ್ಲ.
 ನಾನು ಕೆಲಸ ಮಾಡುತ್ತಿದ್ದ ಊರಿನಲ್ಲಿಯೇ ಎರಡು ಕಾಲೇಜು ಇದ್ದವು. ಒಂದರಲ್ಲಿ ಮರಿಸ್ವಾಮಿ ರಾಜ್ಯ ಶಾಸ್ತ್ರ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು . ನಮ್ಮ ಕಾಲೇಜಿನಲ್ಲಿನ  ಹುದ್ದೆ ಖಾಲಿ ಇತ್ತು. ಹಾಗಾಗಿ ಅವರನ್ನು ಒಂದು ವರ್ಷದ ಮಟ್ಟಿಗೆ ನಮ್ಮ ಕಾಲೇಜಿಗೆ ವಾರಕ್ಕೆ ಮೂರುದಿನ ಕೆಲಸ ಮಾಡಲು ನಿಯೋಜಿಸಲಾಯಿತು.
                                                                                                                                                                                        -ಮುಂದುವರಿಯುವುದು

No comments:

Post a Comment