Wednesday, May 14, 2014

ಅಮೇರಿಕಾದ ಅನುಭವಗಳು-1






ಅಮೇರಿಕಾದಲ್ಲಿ ಚಾರಣ

ಕಾರಿನ ನಾಡಾದ ಅಮೆರಿಕಾದಲ್ಲಿ ಕಾಲಿಗೆ ಕೆಲಸ ಕಡಿಮೆ. ಕಾಲು ಏಕೆ ಬೇಕೆಂದರೆ ಕಾಲು ಚೀಲ ಹಾಕಿಕೊಳ್ಳಲು, ಟ್ರೆಡ್ ಮಿಲ್ ಮೇಲೆ ನಡೆಯಲು, ಬೇಸಗೆಯಲ್ಲಿ ಸ್ಕೇಟ್ ಮಾಡಲು, ಅಥವಾ ಬರ್ಫದ ಬೆಟ್ಟಗಳಲ್ಲಿ ಸ್ಕೀಯಿಂಗ ಮಾಡಲು, ಡಾನ್ಸ್ ಮಾಡಲು.... ದೈನಂದಿನ ಜೀವನದಲ್ಲಿ ನಡಿಗೆಗೆ ಅವುಗಳ ಉಪಯೋಗ ಕಡಿಮೆಯೆಂದೇ ಹೇಳಬೇಕು. ವೀಲ್ ಛೇರೋ ಅಥವಾ ಅಂಥಾ ಇನ್ಯಾವ ಯಂತ್ರವೋ ಬಳಸುವುದು ಅಷ್ಟು ಸೌಕರ್ಯಕರ ಅಲ್ಲ ಎಂಬ ಕಾರಣಕ್ಕಾಗಿ ಮಾತ್ರ ಆಗೀಗ ಕಾಲು ಬಳಸುತ್ತಾರೆ. ಅನೇಕರ ಪಾಲಿಗೆ ಅದು ಎಕ್ಸರ್ ಸೈಜ್ ಮಾಡಲು ಇರುವ ಮತ್ತೊಂದು ಅಂಗ ಅಷ್ಟೇ.
ಟ್ರೆಡ್ ಮಿಲ್ ಮೇಲೆ ನಡೆದರೆ, ಬೆವರೇನೋ ಬರುತ್ತದೆ. ಆದರೆ ಮನಸಿಗೆ ಮುದ ಸಿಗದು. ಬರೀ ಯಂತ್ರದೊಡನೆ ಸ್ಪರ್ಧೆ. ವರುಷದ ಎಂಟು ತಿಂಗಳು ಕೊರೆವ ಚಳಿ. ಅಂಗಿ ಮೇಲೆ ಅಂಗಿ ಚಳಿರಾಯನ ತಂಗಿ ಎಂದು ಹಾಡುತ್ತಾಆರಾರು ವರಸೆ ಬಟ್ಟೆ ಹಾಕಿದರೂ ಗಡ ಗಡ ನಡುಗು. ಚಂದ್ರಯಾನ ಮಾಡುವ ಗಗನಯಾತ್ರಿಗಳು ನಾವೇ ಎಂಬ ಭ್ರಮೆ ತರಿಸುವ ಉಡುಪು. ಕಾರಿನಲ್ಲಿ ಕಾಲಿಡುವುದಕ್ಕೂ ಕಷ್ಟಪಡಬೇಕು. ಎ.ಸಿ ಮನೆಯಿಂದ ಎ.ಸಿ ಕಾರಿಗೆ ಹೋಗುವುದೇ ಹರ ಸಾಹಸ. ಬೇಸಿಗೆ ಬಂತೆಂದರೆ ಮೈ ಮೇಲಿನ ಬಟ್ಟೆ ಗಳು ಬಹುತೇಕ ಮಟಾಮಾಯ. ಅತಿ ಉಳಿತಾಯ. ಚಡ್ಡಿ ಮೇಲೊಂದು ಬನೀನು. ಗಂಡಸರಿಗೆ ಬನೀನಿನ ಮುಲಾಜೂ ಇಲ್ಲ ಬರಿ ಮೈ. ಸೈಕಲ್ ಸವಾರರ ಸಡಗರ ಹೇಳತೀರದು.  ತಡವಾದರೆ ಕೈತಪ್ಪಿತೇನೋ ಎಂಬಂತೆ ಓಡುವ ಜಾಗರ್ಸ್. ಗಾಲಿ ಚಡಾವುಗಳ ಮೇಲೆ ಜಾರುತ್ತಾ ಜಗವೆಲ್ಲಾ ನಮ್ಮದೇ ಎಂಬ ಜಂಬದಿಂದ ಬಳಕುತ್ತಾ ಬಾಗುತ್ತ ಹೋಗುವ ಹದಿ ಹರೆಯದವರ ಚಮತ್ಕಾರಕ ಚಲನೆ ನೋಡಲು ಕಣ್ಣೆರಡು ಸಾಲವು. ಬೇಸಗೆಯಲ್ಲಿ ಸೂರ್ಯನಿಗೂ ಹುಮ್ಮಸ್ಸು. ಬೆಳಗ್ಗೆ ಐದಕ್ಕೆ ಹಾಜರು. ರಾತ್ರಿ ಎಂಟಾದರೂ ಮುಳುಗಲು ಮಿಜಿ ಮಿಜಿ. ಶುಕ್ರವಾರದ ಸಂಜೆ ಎಲ್ಲೆಲ್ಲೂ ಕಾರುಗಳದೆ ಕಾರುಬಾರು. ಬೆನ್ನಿಗೆ ಸೈಕಲ್ ಗಳನ್ನೂ ಬಿಗಿದುಕೊಂಡು, ಮೇಲೆ ಬೋಟುಗಳನ್ನು ಹೇರಿಕೊಂಡುಒಳಗೆ ನಾಯಿಕೂಡಿಸಿಕೊಂಡು ಬೆಟ್ಟದ ಬದಿಗೋ, ಕಡಲ ತಡಿಗೋ, ಕಾಡಿನ ನಡುವೆಯೋ ರಜೆಕಳೆಯಲು, ಮಜ ಮಾಡಲು ಧಾವಿಸಲು ಎಲ್ಲರ ಧಾವಂತ. ಪರಿಣಾಮ ಒಂದು ಕಾರಿನ ಹಿಂಬದಿ ಮೂಸುವ ಇನ್ನೊಂದು ಕಾರು. ಕರಿ ಟಾರಿನ ರಸ್ತೆಯಲ್ಲಿ ಬಹು ಬಣ್ಣದ ಗೆರೆ ಎಳೆದಂತೆ ಕಾರುಗಳ ಸಾಲು ಸಾಲು.  ಸಂಚಾರವೆಲ್ಲ ಅಸ್ತವ್ಯಸ್ತ. ಮೂರು ಗಂಟೆಯ ಹಾದಿಗೆ ಆರು ತಾಸು ಆಗುವುದು ಸಹಜ.
ವಾರಾಂತ್ಯ  ಎಂದರೆ ಎಲ್ಲಿಲ್ಲದ ಪ್ರಧಾನ್ಯ. ವಾರಪೂರ್ತಿ ಕೆಲಸ. ಕಾಯಕವೇ ಕೈಲಾಸ ಎಂಬ ಅಣ್ಣನ ಮಾತು ಇಲ್ಲಿ ನೂರಕ್ಕೆ ನೂರು ನಿಜ. ಐದು ದಿನ ದುಡಿತ. ಕಾರಣ ಇಲ್ಲಿ ತಿಂಗಳ ಸಂಬಳ ಇಲ್ಲ. ಗಂಟೆಗಳಲ್ಲಿ ಲೆಕ್ಕ. ದಿನಕ್ಕೆ ಎಂಟು ಗಂಟೆ. ವಾರಕ್ಕೆ ನಲವತ್ತು ತಾಸು. ತುಸು ತಡವಾದರೂ ಕಾಸಿಗೆ ಖೋತಾ. ಹಾಗಾಗಿ ಹಬ್ಬ, ಹುಣ್ಣಿಮೆ, ತಿಥಿ, ಮಿತಿ, ಸಂಭ್ರಮ, ಸಡಗರ ಹೋಗುವುದು, ಬರುವುದು, ಮೋಜು, ಮಜಾ ಎಲ್ಲವೂ ವಾರಾಂತ್ಯದಲ್ಲಿ. ನಾಮಕರಣ, ಹುಟ್ಟುಹಬ್ಬ, ಪೂಜೆ-ಪುನಸ್ಕಾರ, ಮದುವೆಮುಂಜಿ, ಆರತಕ್ಷತೆ, ಅಷ್ಟೇ ಏಕೆ ಆರಾಧನೆಗೆ, ಹಬ್ಬಕ್ಕೆ ರಾಯರು, ಗಣಪತಿ ಬರಬೇಕೆಂದರೂ, ವಾರಾಂತ್ಯಕ್ಕಾಗಿ ಕಾಯಲೇಬೇಕು. ಜನ ಸೇರುವ ಯಾವುದೇ ಕಾರ್ಯಕ್ರಮವೂ ವಾರಾಂತ್ಯದಲ್ಲೇ ಆಗಬೇಕು. ಇಲ್ಲವಾದರೆ ಮನೆಯವರು ಮಾತ್ರ ಹಾಜರಿ ಹಾಕುವರು. ಅದೂ ರಜೆ ಸಿಕ್ಕರೆ.
ಶುಕ್ರವಾರ ಇಲ್ಲವೇ ಸೋಮವಾರ ರಜೆ ಬಂದರೆ ಖುಷಿಯೋ ಖುಷಿ. ಮೂರು ದಿನ ರಜೆ ದೀರ್ಘ ವಾರಾಂತ್ಯ ಬೇಸಿಗೆಯಾದರೆ ಮುಗಿಯಿತು ಮನೆಯಲ್ಲಿದ್ದವರೇ ಪಾಪಿಗಳು. ನಮ್ಮವರ ಪಾಡೇನೂ ಭಿನ್ನವಲ್ಲ. ಜುಲೈನಲ್ಲಿ ಶುಕ್ರವಾರ ರಜೆ ಬಂತು. ನಡೆವ ಕಾಲಿಗೆ ಕಡಿತ ಶುರು. ಮೂರು ದಿನದ ಚಾರಣಕ್ಕೆ ಯೋಜನೆ. ಮೂರು ಕುಟುಂಬಗಳ ೧೦ ಜನ. ಅದರಲ್ಲಿ ಒಂದು ವರುಷದ ಕೂಸು, ಮತ್ತೊಂದು ಮೂರುವರ್ಷದ ಮಗು,    ಕ್ಯಾಟ್ಸ್ ಕಿಲ್ ಪರ್ವತದ ತಪ್ಪಲಿನ ಫೋನಿಸಿಯಾದಲ್ಲಿ ಎರಡು ರಾತ್ರಿ ಕಳೆಯಲು ಯೋಜನೆ. ಮೂರು ದಿನದ ಚಾರಣಕ್ಕೆ ಹದಿಮೂರು ದಿನದ ತಯಾರಿ. ಮೊದಲು ಟೆಂಟ್ ಖರೀದಿ. ಸದಸ್ಯರ ಸಂಖ್ಯೆಗೆ ಅನುಸಾರ. ನಾವು ಆರು ಜನ ಮಲಗಬಹುದಾದ ಟೆಂಟ್ ಕೊಂಡೆವು. ನಂತರ ನಿದ್ರಾಚೀಲಗಳು, ಪವನ ತಲ್ಪ, ಕೈ, ಕಾಲು, ಕುತ್ತಿಗೆಗೆ ಕವಚಗಳು, ಸಿದ್ದ ಆಹಾರ, ಹಾಸಿಗೆ, ಹೊದಿಕೆ, ನೀರು, ಹಣ್ಣಿನ ರಸ, ಬ್ರೆಡ್, ಬಿಸಕತ್ತು, ತರ ತರದ ಉಪಹಾರ. ತಯಾರಿ ನೋಡಿದರೆ ಶಾಶ್ವತವಾಗಿ ಅಲ್ಲೇ ನೆಲಸುವ ಹಾಗೆ ತೋರಿತು. ಒಟ್ಟಿನಲ್ಲಿ ನಲವತ್ತೆಂಟೋ- ಅರವತ್ತೆಂಟೋ ಸಾಮಗ್ರಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದರು. ಪಟ್ಟಿಯನ್ನು ಪದೇ ಪದೇ, ಪರಿಷ್ಕರಿಸಲಾಯಿತು. ಅದನ್ನು ಮತ್ತೆ ಮತ್ತೆ ಓದಿ, ವಿವರಿಸಿ, ಖಚಿತ ಪಡಿಸಿಕೊಳ್ಳಲಾಯಿತು. ಈ ಸಿದ್ಧತೆಯನ್ನು ನೋಡಿದ ಮೇಲೆ ನನಗಂತೂ ನಗೆಯೂ, ಆತಂಕವೂ ಒಟ್ಟೊಟ್ಟಿಗೆ ಬಂದವು. ನೆನಸಿಕೊಂಡಾಗ ಧುತ್ತೆಂದು ಪ್ರತ್ಯಕ್ಷನಾಗಿ, ಟ್ರೆಕ್ಕಿಂಗ್ ಓಗಾಣಾ ನಡೀರೀ ಸಾ... ಎಂದು ಯಾವ ಸಿದ್ಧತೆಯೂ ಇಲ್ಲದೇ, ಕರೆದೊಯ್ಯುತ್ತಿದ್ದ ದುರ್ಗದ ಪೇಂಟರ್ ನಾಗರಾಜನೆಲ್ಲಿ, ಇವರೆಲ್ಲಿ ಎಂಬ ಹೋಲಿಕೆ ಬೇಡವೆಂದರೂ ಬಂತು. ಸಿಕ್ಕಾಪಟ್ಟೆ ಉಡಾಫೆ, ಹುಂಬತನದಂತೆ ಕಂಡರೂ, ಆ ಪೂರ್ವಸಿದ್ಥತೆಯಿಲ್ಲದ, ಅಪೂರ್ವ ಚಾರಣಗಳು ನಿಜಕ್ಕೂ ರೋಚಕವಾಗಿದ್ದವು. ಅಲ್ಲಿ ಆ ಗಳಿಗೆಯಲ್ಲಿ ಹೃದಯಶಸ್ತ್ರ ಚಿಕಿತ್ಸೆ ಒಳಗಾದ, ಅರವತ್ತರ ಅಂಚು ದಾಟಿರುವ ಉತ್ಸುಕನಿಗೆ ದುರ್ಗದ ಬೆಟ್ಟ-ಗುಡ್ಡಗಳಲ್ಲಿ, ಕೊಡಚಾದ್ರಿಯ ಶಿಖರಗಳಲ್ಲಿ, ಸಕಲೇಶಪುರದ ಹಳಿಗಳಲ್ಲಿ, ಶರವಾತಿಯ ಕಣಿವೆಗಳಲ್ಲಿ ಆಸರೆಯಾಗಿದ್ದು ಸಂತಸ ನೀಡಿದ್ದು, ಆ ಉತ್ಸಾಹ, ಆ ಹುಂಬತನ, ಅಡಿಕೆ ಗುರುವಿನ ಕೊಳಲು, ದ್ವಾರಕೀಶ-ಗುರು ಅವರ ಪ್ರಾಕ್ಟಿಕಲ್ ಜೋಕುಗಳ ಜುಗಲ್ ಬಂದಿ.
ಕ್ಯಾಟ್ಸ ಕಿಲ್‌ ಪರ್ವತಗಳು
ಹೊರಡಲು ಇನ್ನು ಎರಡೇ ದಿನ ಎನ್ನುವಾಗ ಧುತ್ತೆಂದು ಬಂದಿತು ಆತಂಕ. ಮಧ್ಯರಾತ್ರಿಯಲ್ಲಿ ಮೊದಲಾಯಿತು ಹಲ್ಲು ನೋವು. ಎಲ್ಲ ನೋವಿಗಿಂತ ಹಲ್ಲು ನೋವು ಹಿರಿದು. ಇದರ ಮುಂದೆ ಬೇರೆಲ್ಲ ಗೌಣ. ಬಿಸಿನೀರಲ್ಲಿ ಬಾಯಿ ಮುಕ್ಕಳಿಸುವುದು, ಹೊರಗೆ ತಂಪಿನ ಲೇಪನ, ನೋವು ನಿವಾರಕ ಯಾವುದೂ ಪರಿಣಾಮ ಬೀರಲಿಲ್ಲ. ಅಮೆರಿಕಾ ವಿಮಾನ ಹತ್ತುವಾಗಲೇ ಎಲ್ಲ ತಪಾಸಣೆ ಆಗಿತ್ತು. ಹಲ್ಲಿನದು ಮಾತ್ರ ಹಾಗೆ ಉಳಿದಿತ್ತು. ಅನಿವಾರ್ಯವಾಗಿ ವೈದ್ಯರ ಹತ್ತಿರ ಹೋಗಲೇ ಬೇಕಾಯಿತು. ಯಾವುದೇ ಔಷಧಿ ಬೇಕೆಂದರು ವೈದ್ಯರ ಚೀಟಿ ಬೇಕೇ ಬೇಕು. ಪ್ರವಾಸಿ ವಿಮೆ ಇದ್ದಿದ್ದು ನಿಜ. ಆದರೆ ಅದರಲ್ಲಿ ದಂತಚಿಕೆತ್ಸೆಗೆ ಅವಕಾಶ ಇಲ್ಲ. ದಂತ ಚಿಕಿತ್ಸೆಗೆ ಇಲ್ಲಿ ಆನೆ ದಂತದ ಬೆಲೆ. ಸುಮ್ಮನೆ ನೋಡಲು ನೂರು ಡಾಲರು. ಗೂಗಲ್ ಗೆ ಹೋಗಿ ಹುಡುಕಿದಾಗ ಕೇಯಿಂಗ್ಟನ್ ಸದಸ್ಯರಾದರೆ ಭಾರೀ ಸೋಡಿಯಲ್ಲಿ ತಪಾಸಣೆ ಇರುವುದು ಕಂಡಿತು. ಸರಿ ತರಾತುರಿಯಲ್ಲಿ ಸದಸ್ಯನಾಗಿ  ನೋಂದಾಯಿಸಲಾಯಿತು. ಸಾಧಾರಣವಾಗಿ ಅದರ ಸದಸ್ಯ ವೈದ್ಯರು ೩೦%-೪೦% ರಿಯಾಯತಿ ದರದಲ್ಲಿ ಚಿಕಿತ್ಸೆ ನೀಡುವುದಾಗಿ ತಿಳಿಯಿತು. ಹತ್ತಿರದ ಹಲ್ಲಾಸ್ಪತ್ರೆಗೆ ಹೋದಾಗ, ದೇಸಿ ಡಾಕ್ಟರೇ ಇರುವುದು ತಿಳಿಯಿತು. ತಪಾಸಣೆಯಲ್ಲಿ ತಿಳಿಯಿತು ಹಲ್ಲಿನ ಬುಡವೇ  ಭದ್ರವಿಲ್ಲ ಎಂದು. ನಂಜಾಗಿದೆಕೀಳಸಲೇಬೇಕು ಮೊದಲು ನೋವು ಕಡಿಮೆಯಾಗಬೇಕು ಎಂದರು ವೈದ್ಯರು. ಆಕೆ ಆಂಧ್ರದ ಹುಡುಗಿ ಅಂಕಲ್ ಸದ್ಯ ನಾನು ಔಷಧಿ ಬರೆದುಕೊಡುವೆ. ನಂತರ ಬನ್ನಿ,ಎಂದಾಗ ಅರ್ಧ ನೋವು ಕಡಿಮೆಯಾದಂತೆ ಎನ್ನಿಸಿತು. ತೊಂದರೆ ಆದರೆ ನನ್ನನ್ನು ಸಂಪರ್ಕಿಸಿ ಎಂದಾಗಲಂತೂ ಭಾರತೀಯನಾದುದಕ್ಕೆ ಎದೆ ಉಬ್ಬಿತು. ಪ್ರಬಲ ನಂಜುನಿವಾರಕ ನೀಡಿದರು. ಜತೆಗೆ ಪಾರ್ಶ್ವ ಪರಿಣಾಮದ ಬಗ್ಗೆ ಎಚ್ಚರಿಕೆ ನೀಡಲು ಮರೆಯಲಿಲ್ಲ. ಅತಿಸಾರ ಆಗಬಹುದು, ಹಾಗೇನಾದರು ಆದರೆ ತಕ್ಷಣ ಸಂಪರ್ಕಿಸಿ ಎಂದೂ ತಿಳಿಸಿದರು. ನಾನು ಮೊದಲೇ ಮಿತಾಹಾರಿ. ದಿನಕ್ಕೊಂದು ಸಲ ಹೋದರೇ ಹೆಚ್ಚು, ಹಾಗಾಗಿ ಕೊಂಚ ನೆಮ್ಮದಿ ಹೇಳಿಕೊಂಡೆ. 15 ದಿನದ ನಂತರ ತಜ್ಞರನ್ನು ನೋಡಲು ತಿಳಿಸಿದರು. ಸದ್ಯಕ್ಕೆ ಐವತ್ತು ಡಾಲರೊಳಗೆ ಮುಗಿಯಿತು. ಗುಳಿಗೆ ಸಿಗುವಾಗ ಸಂಜೆ. ಗುರುವಾರ ರಾತ್ರಿಯಿಂದ ೭ ದಿನದ ಕೋರ್ಸ್ ಮೊದಲಾಯಿತು. ಬೆಳಗಿನ ಹೊತ್ತಿಗೆ ನೋವೇ ಇಲ್ಲ. ಮುಂಜಾನೆಯೇ ಕಾರಿನಲ್ಲಿ ಹೊರೆಟೆವು. ನಾಲಕ್ಕು ತಾಸಿನ ಹಾದಿ. ಮಧ್ಯಾನ್ಹದ ಊಟದ ಸಮಯಕ್ಕೆ ಮುಟ್ಟಬಹುದು. ನ್ಯೂಯಾರ್ಕ್ ರಾಜ್ಯದಲ್ಲಿದೆ ಚಾರಣ ತಾಣ. ರೂಟ್ -1 ಗೆ ಬರುವುದೇ ತಡ.
ರಸ್ತೆಯಲ್ಲಿ ಇರುವೆ ಸಾಲಿನಂತೆ ಕಾರುಗಳು. ಆಮೆ ವೇಗದಲ್ಲಿ ಚಲನೆ. ನಡುವೆ ಸಂಚಾರ ನಿಯಂತ್ರಣದ ಕೆಂಪು ದೀಪ. ತಂದ ತಿಂಡಿ ತಿನ್ನುತ್ತ , ನೀರು ಕುಡಿಯುತ್ತಾ, ಸಂಗೀತ ಲೋಲರಾದೆವು. ತುಸು ಸಮಯದಲ್ಲೇ ಹಲ್ಲುನೋವಿನ ಗುಳಿಗೆಯ ಅಡ್ಡ ಪರಿಣಾಮದ ಅನುಭವಕ್ಕೆ ಬಂದಿತು. ಹೊಟ್ಟೆ ಗುಡು ಗುಡು ಎನ್ನತೊಡಗಿತು. ಒತ್ತಡ ಹೆಚ್ಚತೊಡಗಿತು. ಕಾರು ನೋಡಿದರೆ ನಡುರಸ್ತೆಯಲ್ಲಿ. ಹಿಂದೆ ಮುಂದೆ. ನೂರಾರು ವಾಹನಗಳು. ಹಿಂದೆ ತಿರುಗಿ ಮನೆಗೆ ಹೋಗುವ ಮಾತು ದೂರುಳಿಯಿತು. ಮಧ್ಯದಲ್ಲಿ ನಿಲ್ಲಿಸುವ ಹಾಗೂ ಇಲ್ಲ. ಕೊನೆಗೆ ಬಾಗಿಲು ತೆರೆಯುವ ಹಾಗೂ ಇಲ್ಲ.. ಆಧುನಿಕತೆ ಬಗ್ಗೆ ಕವನವೊಂದರಲ್ಲಿ ಕವಿಯೊಬ್ಬ ಹೇಳಿದ ಮಾತು ಅನುಭವಕ್ಕೆ ಬಂತು. ಕಾರಿನಲ್ಲಿ ಹೋಗುವವರನ್ನು ಬೋನಿನಲ್ಲಿನ ಪ್ರಾಣಿಗಳು ಎಂದಿದ್ದ. ಹತ್ತಾರು ವರುಷದ ಹಿಂದೆ ಬರೆದ ಕವಿವಾಣಿ ಸತ್ಯಸ್ಯ ಸತ್ಯ. ನಾಗರಿಕತೆಯ ನಾಡಲ್ಲಿ ಬೇಕಾದಾಗ ಕಾರಿನಿಂದ ಹೊರಬರಲೂ ಆಗದ ಅಸಹಾಯಕರು ನಾವು. ಪಕ್ಕದಲ್ಲೇ ಇದ್ದ ಮೊಮ್ಮಗನನ್ನು ನೋಡಿ ಅಸೂಯೆಯಾಯಿತು. ಅವನು ಸದಾ ಹಗ್ಗಿ ಧಾರಿ.  ಅವನು ಯಾವಾಗ ಬೇಕಾದರೂ ವಿಸರ್ಜನೆ  ಮಾಡಬಹುದು.  ಹಗ್ಗಿ ಬಿಚ್ಚಿದಾಗ ಮಾತ್ರ ಬಯಲು. ಧಾರಣ ಶಕ್ತಿಗಾಗಿ ಧ್ಯಾನ ಮಾಡಿದೆ. ನನಗೆ ದೇಶ ಭಕ್ತಿ ಉಕ್ಕಿತು. ನಮ್ಮಲ್ಲಿ ಉಣ್ಣಲು ಕೊರತೆ ಇರಬಹುದು, ಉಡಲು ಕಡಿಮೆ ಇರಬಹುದು. ಆದರೆ ನಮ್ಮಲ್ಲಿನ ಅಪರಿಮಿತ ವಿಸರ್ಜನ ಸ್ವಾತಂತ್ರ್ಯ ಪ್ರಪಂಚದಲ್ಲಿ ಎಲ್ಲೂ ಇಲ್ಲ ಎಂಬ ಸತ್ಯದ ಸಾಕ್ಷಾತ್ಕಾರವಾಯಿತು. ಬಯಲು, ಬೆಟ್ಟ, ಗಿಡದ ಬುಡ, ರಸ್ತೆಯ ಬದಿ, ಪೊದೆಯ ಮರೆ  ಸಾಕು ದೇಹಭಾದೆ ತೀರಿಸಲು. ಯಾರೋ ಇಲ್ಲದಿದ್ದರೆ ಸರಿ, ಇದ್ದರೇನಂತೆ ನಾವೇ ಕಣ್ಣು ಮುಚ್ಚಿದರಾಯಿತು. ನಿಮಿಷದಲ್ಲಿ ಹಗುರ. ಸ್ವದೇಶದಲ್ಲಿ ಉಪವಾಸವಿದ್ದರೂ ಸರಿ ಪರ ದೇಶದ   ಪರಿಸ್ಥಿತಿ ಪ್ರಾಣಸಂಕಟ ಎನಿಸಿತು. ಒಂದು ಗಂಟೆಯಾದ ಮೇಲೆ ಸಂಚಾರ ಸುಲಭವಾಯಿತು. ರಸ್ತೆ ಪಕ್ಕದಲ್ಲಿ ಗಿಡ ಮರಗಳು ಸಣ್ಣಪುಟ್ಟ ಬೆಟ್ಟಗಳು. ಆದರೆ ಪ್ರಕೃತಿ ಸೊಬಗು ಸವಿಯುವ ಸೌಭಾಗ್ಯ ನಮಗಿಲ್ಲ. ೬೫ ಮೈಲು ವೇಗದಲ್ಲಿ ಗಾಡಿ ಓಡಿಸಬೇಕು. ಮನಬಂದಲ್ಲಿ ನಿಲ್ಲಿಸಿದರೆ ದೊಡ್ಡ ಮೊತ್ತದ ದಂಡ. ಚಾಲನ ಪತ್ರದ ರದ್ದತಿ ಆಗಲೂಬಹುದು.  ಭಾರತದಲ್ಲಿ ಪ್ರವಾಸ ಹೊರಟಾಗ ನೀರು ಕಂಡಲ್ಲಿ ಸ್ನಾನ, ನೆರಳು ಕಂಡಲ್ಲಿ ಊಟ ಮಾಡುವ ನೆನಪು ನುಗ್ಗಿ ಬಂದಿತು. ಇಲ್ಲಿನ ರಸ್ತೆಗಳದೇ ಒಂದು ವಿಶೇಷ ಎಲ್ಲವೂ ಜೋಡಿ ರಸ್ತೆ ಗಳು.
ವಾಹನಗಳು ಓಡುತ್ತಲೇ ಇರಬೇಕು. ಹತ್ತು ಇಪ್ಪತ್ತು ಮೈಲು ಹೋದರೆ ಸೇವಾ ಕ್ಷೇತ್ರ ಸಿಗುತ್ತದೆ. ಅಲ್ಲಿ ಎಲ್ಲ ವ್ಯವಸ್ಥೆ ಇದೆ. ಅದೊಂದು ವಾಣಿಜ್ಯ ಸಂಕೀರ್ಣ. ತಿನ್ನಲು, ಕುಡಿಯಲು, ದೇಹಬಾಧೆ ತೀರಿಸಲು, ಮಕ್ಕಳಿಗೆ, ಮಹಿಳೆಯರಿಗೆ ಸಾಕಷ್ಟು ಅನುಕೂಲ ಇವೆ. ಪ್ರಥಮ ಚಿಕೆತ್ಸೆಗೂ ಅವಕಾಶ. ನನಗಂತೂ ಸಗ್ಗವೇ ಧರೆಗಿಳಿದಂತಹ ಭಾವನೆ. ಒಂದೆರಡು ಸಲ ವಿಶ್ರಾಂತಿ ಕೋಣೆಗೆ ಭೇಟಿ ನೀಡಿದ ಮೇಲೆ ಮನಸು ನಿರಾಳ. ದೇಹ ಹಗುರ. ನಮ್ಮಲ್ಲಿನ ಸಂಡಾಸಕ್ಕೆ ಇಲ್ಲಿ ರೆಸ್ಟ್ ರೂಂ ಎಂದು ಯಾಕೆ ಕರೆಯುತ್ತಾರೆ ಎಂಬುದು ಈಗ ಅರ್ಥವಾಯಿತು. ಇಲ್ಲಿನ ವಿಶೇಷ ಎಂದರೆ ಪಯಣಿಗರಿಗೆ ಬಾಧಿಸಬಹುದಾದ ತಲೆನೋವು, ಮೈಕೈ ನೋವು, ಭೇದಿ ಮೊದಲಾದ ಸಣ್ಣಪುಟ್ಟ ರೋಗಗಳಿಗೆ ಗುಳಿಗೆಗಳನ್ನು ಮಾರುವ ಯಂತ್ರಗಳ ಮೂಲಕ ಕಾಸು ಹಾಕಿ ಪಡೆಯಬಹುದು. ನಾನು ಮಾಡಿದ ಮೊದಲ ಕೆಲಸ ನನ್ನ ವೈದ್ಯರನ್ನು ಸಂಪರ್ಕಿಸುವ ಪ್ರಯತ್ನ ಯಶ ಕಾಣಲಿಲ್ಲ. ಕಾರಣ ಅವರೂ ಸಹಾ ರಜೆಯ ಮಜಾ ತೆಗದುಕೊಳ್ಳಲು ಎಲ್ಲೋ ಹೋಗಿದ್ದರು. ಮಾಡುವುದೇನು, ಯಂತ್ರದ ಮೂಲಕ ವಿರೆಚನ ನಿಲ್ಲಿಸಲು ಮಾತ್ರೆ ಪಡೆದಾಯಿತು. ಮನೆ ಬಿಟ್ಟು ನಾಲಕ್ಕು ತಾಸಾಗಿತ್ತು ಮಗುವೂ ಹಸಿದಿತ್ತು. ನಾವು ಕೂತು ಕೂತು ದಣಿದಿದ್ದೆವು. ಉಪಹಾರ, ವಿಶ್ರಾಂತಿ ಆಯಿತು. ಇಲ್ಲಿನ ಉಪಹಾರದ ಬಗೆ ಬಣ್ಣನೆಗೆ ನಿಲಕದ್ದು. ಸಸ್ಯಾಹಾರ, ಮಾಂಸಾಹಾರವಂತೂ  ಸರೇ ಸರಿ... ಎಲ್ಲ ಬಗೆಯಾ ಪಥ್ಯದ ತಿಂಡಿ ತೀರ್ಥ. ಸಕ್ಕರೆ ಇಲ್ಲದ್ದು, ಕೊಬ್ಬಿಲ್ಲದ್ದು, ಶೂನ್ಯ ಕೆಲೊರಿ, ಕಡಿಮೆ ಸೋಡಿಯಂ ಇರುವುದು, ಹೆಚ್ಚು ಪೊಟಾಸಿಯಂ ಇರವುದು, ಇತರೆ ಲವಣಸಹಿತ, ರಹಿತ, ಕರಿಯದ, ಬರಿ ಹುರಿದ, ಧಾನ್ಯದ, ಬೀಜದ ಬಗೆ ಬಗೆಯ ತಿನಿಸುಗಳು. ಇಲ್ಲಿ ಬಾಯಿ ಕಟ್ಟುವ ಮಾತೆ ಇಲ್ಲ. ಬಾಯಿ ಚಪ್ಪರಿಸುವ ತಿನಿಸೇ ಎಲ್ಲ.
ಅಲ್ಲಿ ಮಕ್ಕಳ ಡಯಾಪರ್ ಬದಲಾಯಿಸಲೂ ವಿಶೇಷವಾದ ಜಾಗ. ಪಯಣಿಗರ ಆರಾಮಿಗೆ ಆವರು ನೀಡುವ ಆದ್ಯತೆ ಮೆಚ್ಚುಗೆ ಮೂಡಿಸುವುದು. ಮಗುವಿನ ಆರೈಕೆ ತಾಯಿಯ ಹೊಣೆ ಎನ್ನುವವರು ಇಲ್ಲಿ ನೋಡಿ ಕಲಿಯಬೇಕು. ತಂದೆಯದು ಇಲ್ಲಿ ಹೆಚ್ಚಿನ ಹೊಣೆ. ಅದರಲ್ಲೂ ಡಯಾಪರ್ ಬದಲಾಯಿಸುವುದಂತೂ ಬಹುಪಾಲು ತಂದೆಯರೆ. ಅದಕ್ಕೆ ಅವರಿಗೆ ಮೊದಲೇ ತರಬೇತಿಯೂ ಆಗಿರುತ್ತದೆ!  ಇಲ್ಲಿ  ನನ್ನ ದೇಶ ನೆನೆಸುವ ಯೋಗ ಬಂದಿತು. ಒಂದು ಯುವ ಜೋಡಿ. ಇನ್ನೂ ಇಪ್ಪತ್ತರ ಆಸುಪಾಸಿನವರು. ಅವರಿಗೆ ಅವಳಿ ಜವಳಿ. ಬಹುಶಃ ೬-೮ ತಿಂಗಳ  ವಯಸ್ಸಿರಬೇಕು. ಬಹು ಮುದ್ದಾಗಿವೆ. ಎರಡು ಸೀಟ್ ಇರುವ ಸ್ತ್ರೋಲ್ಲರ್ ನಲ್ಲಿ ಮಕ್ಕಳು ಇವೆ. ಯುವಕ ಮಕ್ಕಳ ತಳ್ಳು ಗಾಡಿಯನ್ನು ರಸ್ತೆ ಬದಿಯ ಫುಟ್ ಪಾಥ್ ನಲ್ಲಿ ನಿಲ್ಲಿಸಿದ. ಒಂದು ಮಗುವನ್ನು ಅಲ್ಲಿ ಮಲಗಿಸಿ  ಶೌಚ ಕವಚ ಬದಲಿಸತೊಡಗಿದ. ಹೆಂಡತಿ ಇನ್ನೊಂದು ಮಗುವಿನ ಹತ್ತಿರವಿದ್ದಳು. ನಂತರ ಇನ್ನೊಂದರ ಸರದಿ. ನನಗಂತೂ ಬಹು ಖುಷಿ ಆಯಿತು. ನನ್ನ ನಾಡಿನಲ್ಲಿ ರಸ್ತೆ ಯ ಪಕ್ಕದಲ್ಲೇ ಶೌಚಕ್ಕೆ ಕೂಡುವ ಮಕ್ಕಳನ್ನು ನೋಡಿದ್ದೇ. ಆದರೆ ಇಲ್ಲಿ ಇದು ಕನನಸಲ್ಲೂ ಸಾಧ್ಯ ಇಲ್ಲ. ಕೊನೆಗೆ ಹಸುಗೂಸಿಗಾದರು ರಸ್ತೆಯಲ್ಲಿಯೇ  ಆ ಅವಕಾಶ ಇದೆ ಎಂದರೆ, ಮಕ್ಕಳು ಕಾಲ ದೇಶಗಳನ್ನೂ ಮೀರಿದವರು ಎಂಬ ನಂಬಿಕೆ ಸತ್ಯವಾಯಿತು.
ನಾವು ಕ್ಯಾಟ್ಸ್ ಕಿಲ್ ಬೆಟ್ಟದ ಬುಡದ ಊರು ತಲುಪಿದಾಗೆ ಆಗಲೇ ಸಂಜೆ ಐದು. ನಾಲಕ್ಕು ತಾಸಿನ ಪಯಣ ಎಂಟು ತಾಸು ಮೀರಿತ್ತು -ಥೇಟು ಕರ್ನಾಟಕದಂತೆ. ನಮ್ಮ ಸಹ ಚಾರಣಿಗರು ಹಿಂದಿನ ದಿನವೇ ಬಂದು ಟೆಂಟ್ ಹಾಕಿದ್ದರು. ಹಾಗಾಗಿ ನಮಗೆ ತುಸು ಆರಾಮ್ ಎನಿಸಿತು.  ನಾವು ಟೆಂಟ್ ಹಾಕಿದ ಜಾಗ ನೋಡಿದರೆ ಸಂತೆಯಿಂದ ಜಾತ್ರೆಗೆ ಬಂದಂತಾಗಿತ್ತು.  ಕ್ಯಾಂಪ್ ನಲ್ಲಿ ನೂರಾರು ವಾಹನಗಳು. ಮರಗಿಡಗಳ ನಡುವೆ ಬಯಲಿದ್ದಲ್ಲೆಲ್ಲ ಬಣ್ಣ ಬಣ್ಣದ ಟೆಂಟ್ ಗಳು. ಮರಗಳಿಗೆ ಗುರುತಿಸಲು ಸಂಕೇತಕ್ಷರಗಳು. ಪ್ರತಿ ಗುಂಪಿಗೂ ಮರದ ಬೆಂಚು  ಮೇಜುಗಳು. ಅಲ್ಲಿಯೇ ಬೆಂಕಿಹಾಕಲು ಲೋಹದ ದೊಡ್ಡ ಅಗ್ಗಿಷ್ಟಿಕೆ. ಪಕ್ಕದಲ್ಲೇ ಕಾರು ನಿಲ್ಲಿಸಲು ಜಾಗ. ಆದರೆ ಮಳೆ ಬಂದದ್ದರಿಂದ ಕೆಸರು, ಕೊಚ್ಚೆ. ಇಲ್ಲೂ ತಲೆಗಂದಾಯ ಉಂಟು. ಜಾತ್ರೆಯಲ್ಲಿ ಹಾಕುತ್ತಾರಲ್ಲ ನೆಲಗಂದಾಯ ಹಾಗೆ. ಬಹಳ ಹೆಚ್ಚೇನಿಲ್ಲ, ವಸತಿ ಗೃಹಕ್ಕಿಂತ ೪-೫ ಡಾಲರ್ ಕಡಿಮೆ ಅಷ್ಟೇ. ಅಂದರೆ ಸುಮಾರು ೪೦ ಡಾಲರುಗಳು ೨ ದಿನಕ್ಕೆ. ಆವರು ಕೊಡುವ ಏಕಮಾತ್ರ ಸೌಲಭ್ಯ ರೆಸ್ಟ್ ರೂಂ. ಅದು ಟಾಯ್ಲೆಟ್ ಪೇಪರ್ ರಹಿತ. ಹೋದ ಕೂಡಲೇ ರೆಸ್ಟ್ ರೂಮಿಗೆ ಹೋದರೆ, ಶುಚಿ ಮಾಡಿಕೊಳ್ಳಲು ಏನೂ ಏನೂ ಇಲ್ಲ. ಕೇಳಿದರೆ ನಮ್ಮದು ನಾವೇ ಒಯ್ಯಬೇಕು. ನಮ್ಮ ಊರಿನಂತೆ ತಂಬಿಗೆ ಹಿಡಿದು ಹೋಗುವ ಬದಲು ಪೇಪರ್ ಸುರಳಿ ಹಿಡಿದು ಹೋಗಬೇಕು. ಹತ್ತಿರದಲ್ಲೆ ಹಳ್ಳವೋ, ಝರಿಯೋ ಹರಿಯುತ್ತಿದೆ. ಆದರೆ ಆ ಕಾರ್ಯಕ್ಕೆ ಉಪಯೋಗಿಸುವ ಹಾಗಿಲ್ಲ ಎಂದು ಸುಮ್ಮನಾಗಬೇಕಾಯಿತು. ಜನಮರುಳೋ, ಜಾತ್ರೆ ಮರುಳೋ. ಬಂದದ್ದಾಯಿತು ಗುಂಪಿನೊಡನೆ ಗೋವಿಂದ ಎಂದು ಕೇಳಿದಷ್ಟು ಕೊಟ್ಟು ತೆಪ್ಪಗಾದೆವು.
ನಾವು ತಂಗಿದ ಜಾಗದ ಹೆಸರು ಕರಿ ಕರಡಿ ಶಿಬಿರ... ಹೆಸರು ಅನ್ವರ್ಥವಾಗಿದೆ ಎಂದರೆ ಅವರು, ರಾತ್ರಿ ಕರಡಿಗಳು ಬರುತ್ತವೆ, ಯಾರೂ ಆಹಾರ ಪದಾರ್ಥ ರಾತ್ರಿ ಹೊರಗಿಡಬಾರದು ಎಂದಾಗ ನಕ್ಕು ಸುಮ್ಮನಾದೆವು. ಜಾಂಬುವಂತ ತಿಂಡಿ ಕದಿಯಲು ಬರುವನೇ ಎಂದು ಹಾಸ್ಯ ಮಾಡಿದೆವು.
ಫೋನಿಷಿಯಾ ಗ್ರಾಮ
ಕ್ಯಾಟ್ಸ್ ಕಿಲ್ ಪರ್ವತ ಪಂಕ್ತಿ ಕಡಿದಾದ ಬೆಟ್ಟಗಳಿಗೆ, ದಟ್ಟವಾದ ಕಾಡಿಗೆ ಹೆಸರಾದುದು. ನ್ಯೂಯಾರ್ಕ್ ನಗರದ ಅತಿ ಸಿರಿವಂತರೆಲ್ಲರ ಬೇಸಗೆ ಧಾಮಗಳು ಇಲ್ಲಿವೆ. ದಶಕಗಳವರೆಗೆ ನಿದ್ದೆ ಮಾಡಿ ಎದ್ದ 'ರಿಪ್ ವ್ಯಾನ್ ವಿಂಕಲ್ ' ಕಥೆ ಇಲ್ಲಿಯೇ ನಡೆದದ್ದಂತೆ.


 (ಸುಮಾರು ಆರು ವರ್ಷಗಳ ಹಿಂದೆ ಅಮೇರಕಾಗೆ ಮೊದಲ ಭೇಟಿನೀಡಿದಾಗಿನ ಅನುಭವಗಳು- ಕೆಂಡ ಸಂಪಿಗೆಯಲ್ಲಿ ಪ್ರಕಟವಾಗಿದ್ದವು)


Tuesday, May 6, 2014

ಮುಪ್ಪು ತಪ್ಪಿಸಿ ಕೊಳುವನೆ ಮಾನವ ?




                              ಇಲಿ  ಆಯಿತೆ ಯಯಾತಿ !

ಅನಾದಿ ಕಾಲದಿಂದಲೂ ಮಾನವನ ಮಹದಾಶೆ ಅಜರಾಮರನಾಗುವುದು. ಅಂದರೆ ಮುಪ್ಪು, ಸಾವನ್ನು ಗೆಲ್ಲುವುದು. ಈ ದಿಶೆಯಲ್ಲಿ ಪ್ರಯತ್ನ ನಡೆಸಿದವರು ಹಲವರು. ಭಾರತೀಯರ ಪರಂಪರೆಯಲ್ಲಿ ಚಿರಂಜೀವಿಗಳಿರುವರು. ಆದರೆ ಅವರೂ ಮುಪ್ಪನ್ನು ಜಯಿಸಲಿಲ್ಲ.  ಶಿಬಿ ಮತ್ತು ತ್ರಿಶಂಕು ಸಶರೀರವಾಗಿ ಸ್ವರ್ಗಕ್ಕೆ ಹೋಗಲು ಪ್ರಯತ್ನಿಸಿದರು. ಕಾರಣ ಅದು ಮುಪ್ಪು ಸಾವಿಲ್ಲದವರ ಲೋಕ. ಅವರು ವಿಫಲರಾದ ಕಥೆ ಎಲ್ಲರಿಗೂ ಗೊತ್ತು. ಆದ್ದರಿಂದ ಕೀರ್ತಿ ಅಜರಾಮರವೇ ಹೊರತು ದೇಹ ಅಲ್ಲ ಎಂಬ ಮಾತು  ಚಾಲತಿಯಲ್ಲಿದ
 ದೇಹಕ್ಕೆ ಕಾಲನ ಮಹಿಮೆಯಿಂದ ಮುಪ್ಪು ತಪ್ಪಿದ್ದಲ್ಲ. ಆದರೆ ಯಯಾತಿ ತನಗೆ ಬಂದ  ಶಾಪದ ಫಲವಾದ  ಮುಪ್ಪನ್ನು ಮಗನಿಗೆ ಒಪ್ಪಿಸಿ ಮತ್ತೆ ಯೌವನ ಅನುಭವಿಸಿದ  ಕಥೆ ಇದೆ.  ಈಗ ಆ ಕಥೆ ಸತ್ಯವಾಗಬಹುದಾದ ಸಂಭವ ಇದೆ. ಇಲಿಯ ಮೇಲೆ ಮಾಡಿದ  ವೈಜ್ಞಾನಿಕ ಸಂಶೋಧನೆಗಳಿಂದ  ಕಂಡು ಬಂದಿರುವುದು ಏನೆಂದರೆ ಮುದಿಇಲಿಯ ಮೆದುಳಿಗೆ  ಯುವರಕ್ತ ಪೂರಣದಿಂದಅದು ಯೌವನದ ಗುಣ ಲಕ್ಷಣ ಪಡೆದಿದೆ.
ಸ್ಟಾನ್‌ಫೋರ್ಡ ವಿಶ್ವ ವಿದ್ಯಾಲಯದ ಜೀವಶಾಸ್ತ್ರವಿಭಾಗದ ಸಂಶೋಧಕರು ಈ ದಿಶೆಯಲ್ಲಿ ಆಶಾ ಕಿರಣ ಮೂಡಿಸಿರುವರು. ಮಾನವನಿಗೆ ಅನ್ವಯವಾಗುವ ಎಲ್ಲ ಜೈವಿಕ ಸಂಶೋಧನೆಗಳ ಮೊದಲ ಪ್ರಯೋಗ  ಇಲಿಗಳ ಮೇಲೆ. ಅಲ್ಲಿ ಯಶಸ್ವಿಯಾದರೆ ಮಾನವನ ಮೇಲೆ ಪ್ರಯೋಗಿಸಲಾಗುವುದು.  ಮುಪ್ಪಿನ ಲಕ್ಷಣಗಳನ್ನು ತಪ್ಪಿಸಬಹುದಾದ ಔಷಧಿಯ ಸಂಶೋಧನೆಗೆ ಇಲಿಗಳನ್ನು ಈಗ ಒಳ ಪಡಿಸಲಾಗಿದೆ.
ವಯಸ್ಸಾದ ಇಲಿಯ ಮೆದುಳಿಗೆ  ಹರಯದ ಇಲಿಯ ರಕ್ತ ಹರಿಸಿದರೆ ಅದು ನವಚೇತನ ಪಡೆದಿದೆ.  ಅದು  ಚುರುಕಾದದು ಮಾತ್ರ  ಅಲ್ಲದೇ ಚಟುವಟಿಕೆ  ಅಧಿಕವಾಗಿದೆ.  ರಕ್ತಪೂರಣದ ಪರಿಣಾಮವಾಗಿ ಮುದಿ ಇಲಿಯ  ಜ್ಞಾಪಕಶಕ್ತಿ ಮತ್ತು  ಧಾರಣಶಕ್ತಿ ಮತ್ತು ಕಲಿಕಾಸಾಮರ್ಥ್ಯಗಳಲ್ಲಿ ಗಣನಿಯ ಸುಧಾರಣೆಯಾಯಿತು.
ಯೌವನಕ್ಕೆ ಕಾರಣ  ರಕ್ತದಲ್ಲಿನ   ಸ್ಟೆಮ್ ಜೀವಕೋಶಗಳು ಮತ್ತು ಮೆದುಳಿನ ಜೀವ ಕೋಶಗಳು. ಅವುಗಳನ್ನು  ನ್ಯುರಾನ್‌ ಎನ್ನುವರು. ಅವುಗಳ ಸಂಖ್ಯೆ ಸಾಮಾನ್ಯವಾಗಿ ವಯಸ್ಸಾದಂತೆ ರಕ್ತದಲ್ಲಿ ಕಡಿಮೆಯಾಗುತ್ತವೆ.. ಅವುಗಳ ಸಂಖ್ಯೆಯ  ಹೆಚ್ಚಳವು  ಯೌವನಕ್ಕೆ ಕಾರಣ. ಮೆದುಳಿನಲ್ಲಿನ ಆರೋಗ್ಯಪೂರ್ಣ ರಕ್ತನಾಳ ಮತ್ತು ರಕ್ತ ಪ್ರವಾಹವೇ ಯೌವನದ  ಮೂಲವಾಗಿದೆ.
ಈ ಸಂಶೋಧನೆಯಲ್ಲಿ ಒಂದು ವಯಸ್ಸಾದ ಇಲಿ ಮತ್ತು ಇನ್ನೊಂದು ಹರೆಯದ ಇಲಿಗಳನ್ನು ಒಟ್ಟಿಗೆ ಸಂಶೋಧನೆಗೆ ಒಳಪಡಿಸಲಾಯಿತು. ಅವುಗಳ ರಕ್ತನಾಳಗಳನ್ನು ಪರಸ್ಪರ ಶಸ್ತ್ರ ಕ್ರಿಯೆಯ ಮೂಲಕ ಸಂಪರ್ಕಿಸಲಾಯಿತು. ಅವುಗಳ ರಕ್ತ ಪರಿಚಲನೆಯು ಸಯಾಮಿ ಅವಳಿಗಳಂತೆ ಒಂದೇಆಗಿ ಮಾರ್ಪಾಡಾಯಿತು. ಇದರಿಂದ ಯುವಇಲಿಯ ರಕ್ತ ಮುದಿಇಲಿಯಲ್ಲಿ ಹರಿಯತೊಡಗಿತು. ಆಗ ಮುದಿ ಇಲಿಯಲ್ಲಿ  ಗಣನೀಯ ಬದಾಲಾವಣೆ ಕಂಡುಬಂದಿತು. ಅದು ಯುವಇಲಿಯ ಗುಣಲಕ್ಷಣ  ತೋರಲಾರಂಭಿಸಿತು. ಸಾಮಾನ್ಯ ರಕ್ತ ಪರಿಚಲನೆಯ ಪರಿಣಾಮ ಎರಡೂ ಇಲಿಗಳ ಮೇಲೂ ಕಂಡು ಬಂದಿತು. ಮುದಿ ಇಲಿಗೆ ಯೌವನ ಪ್ರಾಪ್ತಿಯಾದರೆ ಹರೆಯದ ಇಲಿಗೆ ತುಸು ವಯಸ್ಸಾದ ಲಕ್ಷಣ ಕಂಡು ಬರತೊಡಗಿತು.
  ರಕ್ತ ಪೂರಣದ ಲಾಭ ಪಡೆದ ಮೆದುಳಿನ ಪ್ರಥಮ ಭಾಗವೆಂದರೆ ಹಿಪ್ಪೊಕಾಂಪಸ್‌. ಅದು ನೆನಪಿನ ಸಂಗ್ರಹದ ತಾಣ  .ಅದು ಶಿಥಿಲವಾಗುವದರಿಂದ ಮರಗುಳಿತನ ಬರುವುದು. ಅದೇ  ವೃದ್ಧಾಪ್ಯದ ರೋಗವಾದ  ಅಲಜೈಮರ್‌.
ಸ್ಟಾನ್‌ಫೋರ್ಡ ವಿಶ್ವ ವಿದ್ಯಾಲಯದ ತಂಡವು ತಮ್ಮಸಂಶೋಧನೆಯ ಅಂಗವಾಗಿ  ಇನ್ನೂ ಸರಳ ವಿಧಾನವನ್ನು ಅಳವಡಿಸಿಕೊಂಡಿತು. “ಯುವಇಲಿಯ ರಕ್ತದಲ್ಲಿನ ಪ್ಲಾಸ್ಮಾವನ್ನು ಮುದಿಇಲಿಗೆ ಪೂರಣ ಮಾಡಿದಾಗ ಅದರಲ್ಲಿ ಕಲಿಕೆ ಮತ್ತು ಜ್ಞಾಪಕ ಶಕ್ತಿಯಸುಧಾರಣೆ ಅಧಿಕವಾದ್ದು ಕಂಡು ಬಂದಿತು” ಎನ್ನುತ್ತಾರೆ  ಅಲ್ಲಿನ ಹಿರಿಯ ಸಂಶೋಧಕ ಟೋನಿ ವೈಸ್‌ಕೊರೆ.
.ಹಾರ್ವಡ್‌ನ ಸಂಶೋಧಕರು ಕತ್ತಲಲ್ಲಿ ಸಂಚರಿಸುವ ಪ್ರಾಣಿಗಳಇನ್ನೊಂದು ಅತಿ ಮುಖ್ಯ ಗುಣವಾದ ವಾಸನೆ ಗ್ರಹಿಕೆ  ಕಾರಣವಾದ  ಮೆದುಳಿನ ಭಾಗದಮೇಲೆ ಗಮನ ಕೇಂದ್ರೀಕರಿಸಿದರು.ವಾಸನೆ ಗ್ರಹಿಕೆಗೆ  ಕಾರಣವಾದುದು  ಜಿಡಿಎಫ್‌11, ಎನ್ನುವ  ಪ್ರೋಟಿನ್‌.
ಡಾ.ವೇಜರ್‌ ಪ್ರಬಂಧದ ಪ್ರಕಾರ  ಈ ಪ್ರೋಟೀನ್‌ಗೂ ವಯಸ್ಸಾದ ಇಲಿಗಳ  ಶಕ್ತಿ , ಸಹನಶೀಲತೆ ಮತ್ತು ,ನಿರೋಧತೆ ಸಂಬಂಧವಿದೆ. ವಯಸ್ಸಾದ ಪ್ರಾಣಿಗಳಲ್ಲಿ ಈ ಪ್ರೋಟೀನ್‌ ಮಟ್ಟ ಹೆಚ್ಚಿಸಿದರೆ ಆಗ ಮೆದುಳು ಆರೋಗ್ಯಪೂರ್ಣವಾಗಿ ಕಾರ್ಯಶೀಲತೆ ಮೊದಲಿನಂತಾಗುವುದು, ಅದರಿಂದ ಸ್ನಾಯುಗಳು ಮತ್ತು ಹೃದಯ ಬಲವಾಗುವವು
ಹಾರ್ವರ್ಡ್‌ ಯುನಿವರ್ಸಿಟಿಯಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ  ಮುದಿಇಲಿಗೆ ಯುವ ಇಲಿಯ ರಕ್ತದಲ್ಲಿನ  ಅಧಿಕಮಟ್ಟದ ಪ್ರೊಟೀನ್‌ ಒದಗಿಸಿದರೆ ಅದರ ಬುದ್ದಿ ಮತ್ತು ದೈಹಿಕ ಚಟುವಟಿಕೆ ಅಧಿಕವಾಗುವುದು ಕಂಡು ಬಂದಿದೆ. ಅಂದರೆ ಪ್ರೋಟೀನ್‌ ಇಂಜೆಕ್ಷನ್‌ನಿಂದ ಹೃದಯದ ಮೇಲಿನ ವೃದ್ದಾಪ್ಯದ  ಪರಿಣಾಮ ನಿವಾರಣೆಸಾಧ್ಯ.
ಸ್ಟಾನ್‌ಪೋರ್ಡ,ಯುನಿವರ್ಸಿಟಿ, ಕ್ಯಾಲಿಫೋರ್ನಿಯಾ ಯುನಿವರ್ಸಿಟಿ ಸಂಶೋಧನಾ ತಂಡಗಳು ಮಾನವನ ವೃದ್ಧಾಪ್ಯದ ರೋಗಗಳನ್ನು ತಡೆಗಟ್ಟುವ ಕುರಿತ ಸಂಶೋಧನೆಯ ಫಲವಾಗಿ ವಯಸ್ಸಾಗುವದರಿಂದ ಆಗುವ ಬದಲಾವಣೆಗಳನ್ನು ಮೆದುಳಿಗೆ ರಕ್ತ ಪೂರಣ ಮತ್ತು ಪ್ರೋಟೀನ್‌ ಇಂಜೆಕ್ಷನ್‌ನಿಂದ  ಪೂರ್ವಸ್ಥಿತಿಗೆ  ಹಿಂದಿರುಗುವಂತೆ ಮಾಡಬಹುದು.
ಈ ಪರಿಣಾಮಗಳು ಮಾನವರಿಗೆ ಹೇಗೆ ಅನ್ವಯವಾಗುವದು ಎಂಬುದು ಈಗ ಪ್ರಮುಖ ಪ್ರಶ್ನೆ. ಅನೇಕ  ಇಲಿಗಳ ಮೇಲೆ ಯಶಸ್ವಿಯಾದ ಪ್ರಯೋಗಗಳು ಮಾನವರಮೇಲೆ ಯಶಸ್ವಿಯಾಗಲಿಲ್ಲ.  ಈ ಪ್ರಯೋಗ ಮಾನವರಿಗೂ ಅನ್ವಯವಾಗುದೆಂಬುದು ಖಚಿತವಾಗಬೇಕು. ಅದಕ್ಕೆ ಇನ್ನೂ ಮೂರುನಾಲ್ಕು ವರ್ಷದ ವ್ಯಾಪಕ ಪ್ರಯೋಗ ಮತ್ತು ಪರೀಕ್ಷೆ ಅಗತ್ಯ.
ಆದರೆ ರಕ್ತದಲ್ಲಿನ ಕೆಲಅಂಶಗಳೂ ವೃದ್ಧಾಪ್ಯಕ್ಕೆ  ಕಾರಣ. ಅವುಗಳನ್ನು ಕಡಿಮೆ ಮಾಡಿ ಮತ್ತು,ವಯಸ್ಸಾಗುವುದನ್ನು ತಡಮಾಡುವ , ತಡೆಯುವ ಮತ್ತು  ಪೂರ್ವಸ್ಥಿತಿಗೆ ತರುವುದರಿಂದ  ಆರೋಗ್ಯ ಸುಧಾರಿಸುತ್ತದೆ.
ವೃದ್ದಾಪ್ಯದ ರೋಗಗಳಲ್ಲಿ ಕ್ಯಾನ್ಸರ್‌ಮತ್ತು ಹೃದಯ ಬೇನೆಗಳು ಪ್ರಮುಖ.   ವಯಸ್ಸಾಗುವ ಪ್ರಕ್ರಿಯೆಯ ತಡೆಯಿಂದ ಈ ರೋಗಗಳಿಗೆ ಉತ್ತಮ ಚಿಕಿತ್ಸೆ ದೊರೆತು ಜೀವಾವಧಿ ಅಧಿಕವಾಗುವುದು
ವಯಸ್ಸಾಗುವುದರಿಂದ ಅಂಗಗಳ ಕಾರ್ಯವೈಫಲ್ಯವಾಗುವುದು. ಅವರ ಆರೋಗ್ಯವನ್ನು ಪೂರ್ವಸ್ಥಿತಿಗೆ ತರುವಂತಾದರೆ ಮತ್ತೆ ಸ್ಥಗಿತವಾದ ಅಂಗಗಳು ತಮ್ಮ ಕಾರ್ಯಾರಂಭಮಾಡುತ್ತವೆ.
ಈಗ ಎದುರಿಸಬೇಕಾದ ಪ್ರಶ್ನೆ ಎಂದರೆ ಮಾನವರಲ್ಲಿ ವಯಸ್ಸಾಗುವುದರ ಪರಿಣಾಮ ತಡೆಗಟ್ಟಲು ಸಾಧ್ಯವೇ ?  ಅದರಿಂದ ಅವರ ಜೀವಿತಾವಧಿ ಅಧಿಕವಾಗುವದೇ?, ಅದರೆ ಪರಿಣಾಮ ಏನಾಗಬಹುದು ಎಂಬುದು ಬಹು ಸಂಕೀರ್ಣವಾದ ವಿಷಯವಾಗಿದೆ.
·        Scientific inputs by  Ron Winslow ( Wall street Journal)





Monday, May 5, 2014

ಕುದುರೆಸಹಾಯದಿಂದ ರೋಗ ಪರಿಹಾರ

         ಹಿಪ್ಪೋ ಥೆರಪಿ

ಕುದುರೆಗಳು ಅಮೇರಿಕಾದ ಜನಜೀವನದಲ್ಲಿ ಶತಮಾನಗಳಿಂದಲೂ ಹಾಸುಹೊಕ್ಕಾಗಿವೆ. ಮೊಟ್ಟ ಮೊದಲ ಸಾರಿಗೆ ಸಾಧನವೇ ಕುದುರೆಯಾಗಿತ್ತು. ಕೃಷಿಯಲ್ಲೂ ಅದರ ಬಳಕೆ ವ್ಯಾಪಕವಾಗಿತ್ತು ಪಶುಪಾಲನೆಯಲ್ಲಂತೂ ಅದರ ಪಾತ್ರ ಬಹು ಹಿರಿದು. ಕೌ ಬಾಯ್‌ ಎಂದರೆ ಸದಾ ಕುದುರೆಯ ಮೇಲೆ ಇರುವ ದನಗಾಹಿ. ಯಾಂತ್ರೀಕರಣ,ರೈಲು ಮತ್ತು ಆಟೊಮೊಬೈಲ್‌ಗಳ ಆಗಮನದಿಂದ ಕ್ರ ಣ ಅವುಗಳು ಹಿನ್ನೆಲೆಗೆ ಸರಿದವು.  ಪಶುಗಳ ಸಾಕಣೆ ಕೇಂದ್ರಗಳಳಲ್ಲಿ ನೂರಾರು ಎಕರೆ ವಿಸ್ತೀರ್ಣದ ರಾಂಚ್‌ಗಳಲ್ಲಿ ಕುದರೆ ಸವಾರರೇ ಪಶುಪಾಲನೆಯ ಕೆಲಸನಿಯಂತ್ರಿಸುತಿದ್ದರು.  

ಆಧುನೀಕರಣದಿಂದ  ಮೊದಲಿನ ಕುದುರೆಗಳಿಗೆ ಪ್ರಾಮುಖ್ಯತೆ ಉಳಿಯದಿದ್ದರೂ ಈಗ ಕುದುರೆಗಳನ್ನು  ಇನ್ನೊಂದು ರೂಪದಲ್ಲಿ ಬಳಕೆ ಮಾಡಲಾಗುತ್ತಿದೆ.ಒಂದು ದೈಹಿಕ ಮತ್ತು ಮಾನಸಿಕ ವಿಶೇಷ ಸವಾಲು ಎದುರಿಸುತ್ತಿರುವ ಮಕ್ಕಳ ಯುವಕರಆರೋಗ್ಯ ಸುಧಾರಣೆಗೆ  ಸಾಧನವಾಗಿವೆ.

ಕುದುರೆಗಳ ಸಹಾಯದಿದ ದೈಹಿಕ ನ್ಯೂನತೆಯನ್ನು  ಪರಿಹರಿಸುವ ಈ ವಿಧಾನವನ್ನು ಹಿಪ್ಪೋ ಥೆರಪಿ ಎನ್ನುವರು.ಬಹುಶಃ ಇದು ಫಿಜಿಯೋ ಥೆರಪಿಯ ಮುಂದುವರಿದ ಭಾಗ ಎನ್ನಬಹುದು.ಫಿಜಿಯೋ ಥೇರಪಿಯಲ್ಲಿ ದೈಹಿಕ ಸಮತೋಲನ ಸಾಧಿಸಲು ಪ್ರಯತ್ನಿಸಿದರೆ  ಹಿಪ್ಪೋ ಥೆರಪಿಯಲ್ಲಿ ಬಹುಮುಖಿ ಚಿಕಿತ್ಸೆಯನ್ನು ಕೊಡಲಾಗುವುದು. ಈ ಚಿಕಿತ್ಸೆಯಲ್ಲಿ ಕುದುರೆ ಸವಾರಿಯೇ ಪ್ರಮುಖ ಅಂಶವಲ್ಲ. ಅಶ್ವ ಪರಿಣಿತರ ಜೊತೆಗೆ ವೈದ್ಯಕೀಯ ಪರಿಣಿತರೂ ಇರುತ್ತಾರೆ. ಅಲ್ಲದೇ ಈ ಚಿಕಿತ್ಸೆ ನೀಡುವ ಮೊದಲು ಸದ್ರಿ ರೋಗಿಯ ಕುರಿತಾದ ಪೂರ್ಣ ಆರೋಗ್ಯ ತಪಾಸಣೆ ವರದಿ ಅತ್ಯಗತ್ಯ. ನಿರ್ಧಿಷ್ಟ ದೈಹಿಕಸವಾಲುಗಳು ಸಬಲೀಕರಣವಾಗಬೇಕಾದ ಅಂಗಗಳನ್ನು ಗುರುತಿಸಿ ಅದರಂತೆ  ವೈ ಯುಕ್ತಿಕವಾಗಿ ಚಿಕಿತ್ಸಾ ಕ್ರಮವನ್ನು ರೂಪಿಸುತ್ತಾರೆ.ಅಂದರೆ ವ್ಯಕ್ತಿಯಿಂದ ವ್ಯಕ್ತಿಗೆ ಚಿಕಿತ್ಸಾ ವಿವರ ಬೇರೆಯಾಗಿರುತ್ತಾರೆ. ಈ ಕೆಲಸವನ್ನು ತರಬೇತಿಪಡೆದ ಸೂಕ್ತ ವ್ಯಕ್ತಿಗಳು ಮಾತ್ರ ಮಾಡಬಹುದಾಗಿದೆ.

ಇದು ನಿವಾಸಿ ಚಿಕಿತ್ಸೆ. ನಿಗದಿತ ದಿನಗಳಲ್ಲಿ ಬಹಳ ಕಾಲ ಚಿಕಿತ್ಸೆ ಪಡೆಯ ಬೇಕಾಗುತ್ತದೆ.ಹಲವಾರು ದಿನ ಇರಬೇಕಾಗಬಹುದು. ಇಲ್ಲವೆ ನಿಯಮಿತವಾಗಿ ಬರಬೇಕಾಗುತ್ತದೆ. ವಿವಿಧ ದೈಹಿಕ ನ್ಯೂನತೆ ಮತ್ತು ಮಾನಸಿಕ ವಿಕಲತೆಗಳಿಗೆ ಅನುಗುಣವಾಗಿವಿಭಿನ್ನ ಕುದುರೆಗಳೇ ಇರುತ್ತವೆ.ಇದೊಂದು ರೀತಿಯಲ್ಲಿ ಕುದುರೆ ಸವಾರಿ ಆರೋಗ್ಯಕ್ಕೆ ರಹದಾರಿ ಎಂಬ ಸೂತ್ರವನ್ನು ಅನುಸರಿಸುತ್ತದೆ.

ಹಾರ್ಸಪ್ಲೇ ತೆರಪಿಟಿಕ್ ಕೇಂದ್ರಗಳು ಅಂತರಾಷ್ಟ್ರೀಯ ವೃತ್ತಿಪರ ಥೆರಪೆಟಿಕ್‌ ಹಾರ್ಸ ಮೆನ್‌ಷಿಪ್‌ ನ ಅಂಗ ಸಂಸ್ಥೆ(ಪಾಥ್‌ ಇಂಟರ್‌ನೇಷನಲ್‌)
ಸೆರಬ್ರಲ್‌ಪಾಲ್ಸಿ,ಮಾನಸಿಕ ಮತ್ತು ಕಲಿಕಾ ಅಸಮತೋಲನ,ಆಟಿಜಂ, ಖಿನ್ನತೆ.ಕೀಳರಿಮೆ,ನರವ್ಯೂಹ  , ಮೆದುಳುಹಾನಿ,ಶ್ರಾವ್ಯ.ನರ ಮತ್ತು ಸ್ನಾ ಯು ದೌರ್ಬಲ್ಯ ಹಾಗೂ ದೃಷ್ಟಿ ಸಮಸ್ಯಗಳಿಗೆ ಪರಿಹಾರ  ಕೊಡಲಾಗುವುದು. ಇದರಿಂದ ದೈಹಿಕ ಸಮತೋಲನ,ಸಾಮರ್ಥ್ಯ ಹೆಚ್ಚಳ ಮತ್ತು ಆತ್ಮವಿಶ್ವಾಸ ಸುಧಾರಿಸ ಬಹುದು. ವ್ಯಕ್ತಿಯದೈಹಿಕ ಮತ್ತು ಮಾನಸಿಕ ವಿಕಲತೆಯ ಸಮಸ್ಯೆಗೆ ಚಿಕಿತ್ಸೆ ಕೊಡುವರು.

ಕಲಿಕಾ ಸಾಮರ್ಥ್ಯದ ಕೊರತೆ,ಮೆದುಳುಹಾನಿ, ಸೆರಬ್ರಲ್‌ ಪಲಸಿ.ಏಕಾಗ್ರತೆ ಕೊರತೆ ಬುದ್ದಿ ಮಾಂದ್ಯ, ಮಲ್ಟಿಪಲ್‌ಸ್ಕಿಲಾರಸಿಸ್‌ ಮೊದಲಾದ ಸಮಸ್ಯೆಗಳಿಂದ ನರಳುವವರಿಗೆ ಕುದುರೆಆಟ (HorsePlay) ಮೂಲಕ ಚಿಕಿತ್ಸೆಕೊಡಲಾಗುವುದು.

ಕುದುರೆಯ ನಡಿಗೆಯ ಮಾನವರಂತೆ ಇರುವುದರಿಂದ ಚಲನೆಯ ಸಮಸ್ಯೆಇರುವವರ ಪ್ರಮುಖ ಅಂಗಗಳ ಸ್ನಾಯುಗಳು ಬಲಗೊಳ್ಳುತ್ತವೆ.ದೈಹಿಕ ಮಿತಿಯನ್ನು ಪರಿಗಣಿಸಿ ಪ್ರತಿ ಯೊಬ್ಬರಿಗೂ ಕಾರ್ಯಕ್ರಮವನ್ನು ರೂಪಿಸಲಾಗುತ್ತದೆ. ಸ್ವಯಂ ಸೇವಕರು ಅಗತ್ಯ. ಜೊತೆಗೆ ಕುದುರೆಗಳ ನಿರ್ವಹಣಾ ವ್ಯವಸ್ಥೆಯ ವೆಚ್ಚವನ್ನು ಕೊಡುಗೆಯಿಂದ ಭರಿಸಲಾಗುವುದು. ಸ್ಥಳೀಯ ಉದ್ಯಮಿಗಳು ಧಾರಾಳವಾಗಿ ಸಹಾಯ ಮಾಡುವರು.
ಅಮೇರಿಕಾದ್ಯಂತ ವಿಲಚೇತನರ ಪುನಶ್ಚೇತನ ಕ್ಕಾಗಿ ಇಂಥಹ ೭೦೦ ಕೇಂದ್ರಗಳಿವೆ.ಅದರಲ್ಲಿ ಸೇರಲು ಕಾದಿರುವವರ ದೊಡ್ಡ ಪಟ್ಟಿಯೇ ಇರುತ್ತದೆ. ಸರಿಯಾಗಿ ಚಲಿಸಲಾಗದ ಮಗುವ ೧೦೦೦ಪೌಂಡ್‌ತೂಕದ ಕುದುರೆಯ ಮೇಲೆ ಕುಳಿತು ಚಲಿಸುವಾಗ ಬೆನ್ನು, ಹೊಟ್ಟೆ,ಸೊಂಟದ ಮೂಳೆಗಳಿಗೆ ಕುದುರೆಯ ದೇಹದ ಸ್ನಾಯುಗಳಿಗೆ ಈ ಚಲನೆ ವಿಶೇಷವ್ಯಾಯಾಮ ನೀಡುತ್ತದೆ. ವಿಶೇಷವಾಗಿ ದೇಹದ ಸೊಂಟದ ಕೆಳಗಿನ ಭಾಗದ ಸ್ನಾಯುಗಳು ಸಶಕ್ತವಾಗುತ್ತವೆ.  ಅದಕ್ಕಿಂತಲೂ ಮಿಗಿಲಾಗಿ ನಡೆಯಲಾಗದ ದೈನಂದಿನ ಕಾರ್ಯ ನಿರ್ವಹಿಸಲಾಗದ ಮಗು ಕುದರೆಯ ಮೇಲೆ ಕುಳಿತು ಠೀವಿಯಿಂದ ಸವಾರಿ ಮಾಡುತ್ತಾ ಹೆತ್ತವರ ಕಡಗೆ ನಗು ಬೀರುವುದು ನೋವಿನ ಕತ್ತಲಲ್ಲಿರುವ ಕುಟುಂಬದಲ್ಲಿ ಭರವಸೆಯ ಆಶಾ ಕಿರಣವಾಗಿದೆ. 
ಬರಬರುತ್ತಾ ಕುದುರೆಯ ಮೆಲೆ ಕುಳಿತಮಕ್ಕಳು ವಿವಧ ಭಂಗಿಯಲ್ಲಿ ಸವಾರಿ ಮಾಡಲು.,ಕಡಿವಾಣನ್ನುಒಂದೆ ಕೈನಿಂದ ಹಿಡಿದು. ಕಡಿವಾಣ ಬಿಟ್ಟು ಬರಿಮಾತಿನ ಮೂಲಕವೆ ಕುದುರೆಯ ಚಲನೆಯನ್ನು ನಿಯಂತ್ರಿಸುವ ಹಂತ ತಲುಪುವರು. ಜೊತೆಗೆ ಫಿಜಿಯೋ ಥೆರಪಿಷ್ಟರು ಕುದುರೆಯ ಮೆಲೆ ಕುಳಿತಿರುವಂತೆಯೇ ಅವರಿಗೆ ವಿವಿಧ ಅಂಗಸಾಧನೆ  ಹೇಳಿಕೊಡುವರು. ಕುದುರೆಯ ಮೇಲೆ ಅಗತ್ಯಕ್ಕೆ ಅನುಗುಣವಾಗಿ ವಿವಿಧ ಬಂಗಿಗಳಲ್ಲಿ ಕುಳಿತು, ಮಲಗಿ. ನಿಂತು ಸವಾರಿ ಮಾಡಿಸಲಾಗುವುದು.  ಇದರಿಂದ  ಸರ್ವಾಂಗೀಣ ಸಬಲೀಕರಣಕ್ಕೆ ನೆರವು ದೊರೆಯುವುದು. ದೈಹಿಕಸವಾಲು ಎದುರಿಸುವ ಮಕ್ಕಳು ಸಾಮಾನ್ಯ ಮಕ್ಕಳಂತೆಯೇ ಕಾರ್ಯ ನಿರ್ವಹಣೆಯ ಸಾಮರ್ಥ್ಯ ಮತ್ತು ಆತ್ಮ ವಿಶ್ವಾಸ ಪಡೆಯುವರು.
ದೈಹಿಕ ಸವಾಲು ಎದುರಿಸುವ ಮಕ್ಕಳಿಗೆ ಮತ್ತು ನೊಂದಹೆತ್ತವರ ಕಣ್ಣಿರು ಒರೆಸುವ ಮಾನವೀಯ ಪ್ರಯತ್ನವಾಗಿದೆ.ಪ್ರತಿ ತರಬೇತಿಯ ಅವಧಿಗೂ ೩೦-೪೦ ಡಾಲರ್‌ಶುಲ್ಕವಿದೆ. ಆದರೆ ಹಣ ಇಲ್ಲವೆಂದವರನ್ನೂ ಅಗತ್ಯ ಬಿದ್ದರೆ ಸ್ಕಾಲರ್‌ಷಿಪ್‌ ನೀಡಿ ನಾಮಮಾತ್ರ ಶುಲ್ಕ ಪಡೆದು ತರಬೇತಿನೀಡುವರು. ಈ ಸೇವಾಕಾರ್ಯದಲ್ಲಿ ಅನೇಕರು ಬಿಡುವು ದೊರೆತಾಗಲೆಲ್ಲ ಸ್ವಯಂ ಸೇವಕರಾಗಿ ಭಾಗವಹಿಸಿ ಸಾರ್ಥಕ ಭಾವ ಪಡೆಯುವರು.
ಹಿಪ್ಪೋ ಥೆರಪಿ ದೈಹಿಕಸಮಸ್ಯೆ ನಿವಾರಣೆಗೆ ಅಧಿಕ ಒತ್ತು ಕೊಟ್ಟರೆ ಇಕಿಯಿನೊ ಥೆರಪಿ ಕುಂಠಿತ ಮಾನಸಿಕ ಬೆಳವಣಿಗೆ,ಬುದ್ದಿಮಾಂದ್ಯ,ಹಿಂಜರಿಕೆ,ಆತ್ಮವಿಶ್ವಾಸದ ಕೊರತೆ, ಚಂಚಲತೆ,  ಏಕಾಗ್ರತೆ ಕೊರತೆ, ಶೀಘ್ರಕೋಪ. ಖಿನ್ನತೆ, ವ್ಯಥೆ, ಕೀಳರಿಮೆಗಳ ನಿವಾರಣೆಗೆ ಸಹಕಾರಿಯಾಗಿದೆ.ಇಲ್ಲಿ ಬರಿ ಕುದುರೆ ಸವಾರಿಗೆ ಮಾತ್ರ ಆದ್ಯತೆ ಇಲ್ಲ. ಕುದುರೆಯೊಂದಿಗಿನ ವ್ಯಕ್ತಿಯಸ್ಪಂದನವೂ ಮುಖ್ಯವಾಗಿದೆ.

ಕುದುರೆಯ ಆರೈಕೆಯ ವಿವಿಧ ಕೆಲಸಗಳನ್ನು ಕೈ ಮುಟ್ಟಿ ಮಾಡುವುದರ ಜೊತೆಗೆ ಅದರ ನಿಯಂತ್ರಣವನ್ನು ಕಲಿಯ ಬೇಕಾಗುವುದು. ಕುದುರೆಯೊಂದಿಗೆ ಸಹಜವಾಗಿ ಸಂವಹನ ನಡೆಸಲು ಶಕ್ತನಾದರೆ ಸಾಮಾಜಿಕ ಸಮಸ್ಯೆಗಳ ನಿರ್ವಹಣೆಯ ಶಕ್ತಿ ತನಗೆ ತಾನೆ ಬರುವುದು. ಮಾನವನ ಅನೇಕ ಮಾನಸಿಕ ಸಮಸ್ಯೆಗಳಿಗೆ ಒಂಟಿತನವೇ ಕಾರಣ.ಇನ್ನೊಂದು ಜೀವಿಯೊಂದಿಗಿನ ಹತ್ತಿರದ ಒಡನಾಟ ನೆಮ್ಮದಿ ನೀಡುವುದು. ಇದೂ ಪ್ರಕೃತಿ ಚಿಕಿತ್ಸೆಯಂತೆಯೇ ಮನಸ್ಸು, ದೇಹ, ಮತ್ತು ಭಾವಗಳ ಶುದ್ಧೀಕರಣಕ್ಕೆ ಸಾಧನವಾಗುತ್ತದೆ
     ಈಚಿಕಿತ್ಸೆಯಿಂದ ಆತ್ಮವಿಶ್ವಾಸ,ಜೀವನಪ್ರೀತಿ, ದೃಢನಿರ್ಧಾರ,ಸಹಜೀವನ,ಸಂವಹನ,ಸಾಮಾಜಿಕ ಹೊಂದಾಣಿಕೆ, ನಾಯಕತ್ವ, ಕ್ರೀಡಾ ಮನೋಭಾವ ಅಧಿಕವಾಗಿ ಉತ್ತಮ ಸಮಾಜ ಜೀವಿಯಾಗಲು ಅನುವಾಗುತ್ತದೆ.


Sunday, May 4, 2014

ತಾನೂ ಬದುಕಿ ಸಹಜೀವಿಗಳ ನೆಮ್ಮದಿಗೆ ಕಾರಣವಾಗಿರುವ ಜೀವಿ.!

                               ಕಲಾವಿದ ಕುದುರೆ.


ಕಲೆ ಎಂಬುದ ಮಾನವನ ಸೊತ್ತು ಮಾತ್ರವಲ್ಲ. ಪ್ರಾಣಿಪಕ್ಷಿಗಳಲ್ಲೂ  ಅದು ಅಡಗಿರಬಹುದು. ಅದನ್ನು ಕಂಡು ಗುರುತಿಸುವ ಅದಕ್ಕೆ ಸೂಕ್ತ ಅವಕಾಶ ಕೊಡುವ ಮನಸಿದ್ದರೆ ಕಲಾಕೃತಿ ಲೋಕದ ಕಣ್ಣಿಗೆ ಕಾಣ ಬಹುದು. ನಾವು ಕುದುರೆಯ ಶಕ್ತಿಯ ಕುರಿತು ಸಾಕಷ್ಟು ಕೇಳಿ ಬಲ್ಲೆವು. ಅದಕ್ಕೇ ತಾನೇ ಮೋಟಾರಿನ ಶಕ್ತಿಯನ್ನುಗುರುತಿಸುವ ಮತ್ತು   ಅಳೆಯುವ ಮಾಪನವನ್ನು ಆಶ್ವ ಶಕ್ತಿ ಎಂದೇ ಹೆಸರಿಸಲಾಗಿದೆ.ಇನ್ನು ಕುದುರೆಯ ಸ್ವಾಮಿಭಕ್ತಿಯಂತೂ ದಂತಕತೆ. ರಾಣಾ ಪ್ರತಾಪನ ಕುದುರೆಯ ಕಥೆ ಕೇಳದವರು ಬಹಳ ವಿರಳ. ಸಂಗೀತಕ್ಕೆ ಕುಣಿಯುವ ಕುದುರೆಗಳೂ ಇವೆ. ಅವುಗಳನ್ನು ನಾವೆಲ್ಲರೂ ಸರ್ಕಸ್‌ನಲ್ಲಿ   ನೋಡಿ ಬಲ್ಲೆವು 
ವರ್ಣ ಚಿತ್ರಗಾರರಿಗಂತೂ ಕುದರೆ ಎಂದರೆ ಎಲ್ಲಿಲ್ಲದ ಅಭಿಮಾನ ನಮ್ಮ ಎಫ್ ಎಂ. ಹುಸೇನ್‌ ಅವರಿಂದ ಹಿಡಿದು ಜಗತ್ತಿನ   ಖ್ಯಾತ  ಕಲಾಕಾರರಿಗೆ ಕುದುರೆ ಚಿತ್ರ ಬಿಡಿಸುವುದು ಅತಿ ಆಸಕ್ತಿಯ ವಿಷಯ. ಆದರೆ ಅಮೇರಿಕಾದಲ್ಲಿ  ಮೂರುನಾಲ್ಕು   ಕುದುರೆಗಳು ಕಲಾಕೃತಿ ರಚಿಸಿ ಅಚ್ಚರಿಮೂಡಿಸಿವೆ.


ಆ ಎಲ್ಲ ಕಲಾಕಾರ ಕುದುರೆಗಳಲ್ಲೂ  ಮೆಟ್ರೋಮಿಟಿಯರ್ ಎಂಬ ಕುದುರೆಯದು ಒಂದು  ವಿಚಿತ್ರ ಕಥೆ..  ಕೆಲಸಕ್ಕೆ ಬಾರದ್ದು ಎಂದು ಪರಿಗಣಿಸಿ ಸಾವಿನ ಬಾಗಿಲಲ್ಲಿ ಇದ್ದ  ಕುದುರೆ, ತಾನೂ ಬದುಕಿದ್ದಲ್ಲದೆ ತನ್ನಂಥಹ  ಸಾವನ್ನಪ್ಪ ಬೇಕಾದ ಅನೇಕ ರೇಸ್‌ ಕುದುರೆಗಳಿಗೆ ಜೀವದಾನ ಮಾಡುತ್ತಿದೆ. . ಅದು ಮೊದಲು ಹೆಸರಾಂತ ರೇಸ್‌ ಕುದುರೆ. ಸುಮಾರು ಎರಡುವರ್ಷ  ಪ್ರಮುಖ ರೇಸ್‌ಗಳಲ್ಲಿ ಭಾಗವಹಿಸಿ ಒಡೆಯರಿಗೆ ಮಿಲಿಯನ್‌ ಗಟ್ಟಲೆ ಹಣ ಬಾಚಿಕೊಟ್ಟಿತ್ತು. ಬಂಗಾರದ ಲದ್ದಿ ಹಾಕುವ ಕುದುರೆ ಅಂದ  ಮೇಲೆ ಕೇಳ ಬೇಕೆ.? ಅದಕ್ಕೆ ಆಗ ರಾಜೋಪಚಾರ.ವಿಮಾನದಲ್ಲಿ ಪ್ರಯಾಣ. ಅದಕ್ಕಾಗಿಯೇ ಹವಾನಿಯಂತ್ರಿತ ವಿಶೇಷ ವಾಹನ.ನೋಡಿಕೊಳ್ಳಲು ನೌಕರರು.ವಿಶೇಷ ಆಹಾರ. ಅದರ ಆರೋಗ್ಯ ಕಾಪಾಡಲು ಒಬ್ಬ ತಜ್ಞ ಪಶುವೈದ್ಯರು.
ಅದರ ಮಾಲಿಕರು  ಹತ್ತು ಜನರು ಇರುವ ಒಂದು ಕಂಪನಿ.  ಅದರ ಆಗಿನ  ಮಾರುಕಟ್ಟೆಯ ಮೌಲ್ಯ  ಮಿಲಿಯನ್‌ ಗಟ್ಟಲೆಡಾಲರ್‌. ನಿರ್ವಹಣಾ ವೆಚ್ಚವೇ ಲಕ್ಷಾಂತರ ಡಾಲರ್‌.  ಅದಕ್ಕೆ ಮೊಣಕಾಲಿನ ತೊಂದರೆ ಬಂದಿತು.ಎರಡು ಸಲ ಶಸ್ತ್ರ ಚಿಕಿತ್ಸೆಯಾದರೂ ಗೆಲವಿನ ಓಟ ಸಾಗಿಸಿತ್ತು .ಆದರೆ ಮೂರನೆ ಮತ್ತೆ ಸಮಸ್ಯೆಎದುರಾಯಿತು  ಆದು ರೇಸಿನಲ್ಲಿ  ಓಡಲು ಅನರ್ಹವಾಯಿತು.  ರೇಸ್‌ ಒಂದು ಹಣ ಗಳಿಸುವ ದಂಧೆ. ಅಲ್ಲಿ ಓಡುವ ಕುದುರೆಗೆ ಬೆಲೆ. ಸಾಧಾರಣವಾಗಿ ಗಾಯಗೊಂಡ ರೇಸ್‌ ಕುದರೆಗಳಿಗೆ ದಯಾ ಮರಣವೇ ಗತಿ.ಅದರ ನಿರ್ವಹಣೆ ಹೊರೆ ಎನಿಸಿದಾಗ ಮಾಂಸಕ್ಕಾಗಿ ಮಾರಾಟ ಮಾಡಲು ಯೋಜನೆ ಹಾಕಿದ್ದರು. ಅದು ಜಂಟಿ ಮಾಲಕತ್ವ ದಲ್ಲಿದ್ದ ಕುದುರೆ.

 ಅದರ ಮಾಲಿಕರಲ್ಲಿ ಒಬ್ಬ, ಚಿತ್ರಕಲಾವಿದ  ರೆನ್‌.  ಒಂದೆರಡುಬಾರಿ ಚಿತ್ರಕ್ಕೆ  ಮಾದರಿಯಾಗೂ ಬಳಸಿದ್ದ.  ಅವನಿಗೆ ಅದರ ಮೇಲೆ ಬಹಳ ಮಮತೆ.  ತಾನೆ ಅದನ್ನು ಸಾಕುವುದಾಗಿ ಕೊಂಡುಹೋದ. ತನ್ನ ವಾಸದ ಮನೆಯ ಹತ್ತಿರವೇ ಲಾಯ ನಿರ್ಮಿಸಿದ.ಅದು ಸ್ವಭಾವತಃ ತುಸು ತುಂಟು ಕುದುರೆ. ಅವನ ಚಿತ್ರ ಬಿಡಿಸುವ ಸ್ಟುಡಿಯೋ ಸಹಾಪಕ್ಕದಲ್ಲಿಯೇ ಇತ್ತು  .ಒಂದು ದಿನ  ಚಿತ್ರ ಬಿಡಿಸಲು ಸಿದ್ಧಮಾಡಿಕೊಂಡಿದ್ದ ಕಲಾವಿದ  ಏನೋ ಕೆಲಸಕ್ಕೆ  ಸಿದ್ಧ ಮಾಡಿಕೊಂಡು ಪಕರಣಗಳನ್ನು ಹಾಗೆಯೇ ಬಿಟ್ಟು  ಹೊರಕ್ಕೆ ಹೋದ. ಬಂದು ನೋಡಿದಾಗ ಕುದುರೆ ಬಾಯಲ್ಲಿ ಬ್ರಷ್‌ ಹಿಡಿದು ಆಕಡೆ ಈ ಕಡೆ ತಲೆ ಆಡಿಸುತ್ತಿದೆ.  ಅವನಿಗೆ ಅಚ್ಚರಿ ಆಯಿತು ಅದರ  ಬಾಯಲ್ಲಿ ಬಣ್ಣದಲ್ಲಿ  ಅದ್ದಿದ ಬ್ರಷ್‌   ಇಟ್ಟು  ಕ್ಯಾನವಾಸ್‌ ಮುಂದೆ ನಿಲ್ಲಿಸಿದ. ಅದು ಲಕ್ಷಣವಾಗಿ  ಬ್ರಷ್‌ ಅನ್ನು ಮೇಲೆ,ಕೆಳಗೆ, ಅತ್ತಿತ್ತ ಆಡಿಸ ತೊಡಗಿತು.ನೋಡ ನೋಡುತ್ತಾ ಒಂದು ಅಮೂರ್ತ ವರ್ಣ ಚಿತ್ರ ಮೂಡಿತು ..ಅದರ ಚಿಕಿತ್ಸೆಗೆ ಮತ್ತು ನಿರ್ವಹಣೆಗೆ ಹಣ ಹೊಂದಿಸಲು  ಹೆಣಗಾಡುತಿದ್ದ.ರೆನ್‌ನಿಗೆ ಅಸಹಾಯಕ ಕುದುರೆಯ ಹೊಸ ಸಾಧ್ಯತೆಗೊತ್ತಾಯಿತು.
 ಒಂದು ದಿನ  ಅವನಿಗೆ ಕುದುರೆ ತನ್ನ ಆಹಾರ ತಾನೇ ಗಳಿಸ ಬಲ್ಲದು ಎಂದು ಹೊಳೆಯಿತು ಅದು  ರಚಿಸಿದ  ಚಿತ್ರಗಳನ್ನು ತನ್ನ ಚಿತ್ರಗಳ ಜೊತೆ ಸೇರಿಸಿ ಪ್ರದರ್ಶನ ಏರ್ಪಡಿಸಿದ.   ಕುದುರೆ ರಚಿಸಿದ  ಚಿತ್ರ ನೋಡುಗರ  ಮೆಚ್ಚಿಗೆ ಗಳಿಸಿತು. ರೇಸ್‌ ಕುದುರೆ ಈಗ  ಕುದುರೆ ಕಲಾವಿದ  ಎಂದೇ ಹೆಸರಾಯಿತು. ರೆನ್‌ ಅದನ್ನು ಸಹಕಲಾವಿದ ಎಂದೇ ಪರಿಗಣಿಸಿದ.
 ಅದು ದಿನವೂ ಚಿತ್ರ ಬಿಡಿಸದು. ಮೂರುನಾಲ್ಕು ದಿನಕ್ಕೊಮ್ಮೆ  ಒಂದೊಂದು ಗಂಟೆ ಅದಕ್ಕೆ ಚಿತ್ರ ರಚನೆ ಮಾಡಲು ಅವ್ಯವಸ್ಥೆ ಮಾಡುತಿದ್ದ. ಬಣ್ಣದ ಆಯ್ಕೆ ಅವನದೇ ಆಗಿತು. ಮೆಟ್ರೊ  ಬಹಳ ಖಯಾಲಿ  ಕಲಾವಿದ. ಒಂದೊಂದು ಸಲ ಚಿತ್ರ ರಚಿಸತ್ತಲೇ ಇರಲಿಲ್ಲ. ಆದರೆ ಖುಷಿ ಬಂದಾಗ ಎಡೆ ಬಿಡದೆ ಕುಂಚ ಆಡಿಸುತಿತ್ತು. ನಾಲ್ಕು ದಿನಕ್ಕೆ ಒಂದು ಕೃತಿ ಪೂರ್ಣವಾಗುತಿತ್ತು. ಹೀಗೆ ಅದು  ನಾಲ್ಕು ಚಿತ್ರ ರಚನೆ ಮಾಡಿದರೆ ಒಂದಂತೂ ಅದ್ಭುತವಾಗಿ ಮೂಡಿ ಬರುತಿತ್ತು.ಅವಕ್ಕೆ ಬೇಡಿಕೆಯೂ ಚೆನ್ನಾಗಿಯೇ ಇತ್ತು.೫೦೦-೧೦೦೦ ಡಾಲರ್‌ ಬೆಲೆ ಬರುತಿತ್ತು. ಮಾಧ್ಯಮದವರ ಗಮನಕ್ಕೆ ಬಂದಾಗ ಅದು ಸೆಲಿಬ್ರಿಟಿ ಕಲಾಕಾರನಾಯಿತು.


.ಅಷ್ಟೇ ಅಲ್ಲ   ಅಲ್ಲಿನ ಸ್ಥಳೀಯ ಉದ್ಯಮಿಯೊಬ್ಬರು ಅದು ರಚಿಸಿದ ಚಿತ್ರಗಳ ಪ್ರಿಂಟ್‌    . ಇರುವ ತಲೆದಿಂಬು, ನ್ಯಾಪ್‌ಕಿನ್‌, ವಾಲ್‌ ಹ್ಯಾಂಗಿಂಗ್‌, ಕೈಚೀಲ  ಮತ್ತು  ಟವೆಲ್‌ಗಳನ್ನು ಉತ್ಪಾದಿಸಿ ಮಾರಾಟಮಾಡಲು ಮುಂದಾದರು. ಇದರಿಂದ ಅನಿರೀಕ್ಷೀತವಾಗಿ ಹಣ ಬರತೊಡಗಿತು. ಅವನಿಗೆ  ಅಸೂಯೆ ಆಗಲಿಲ್ಲ ಅನುಪಯುಕ್ತವೆನಿಸಿದ್ದ ಕುದರೆ ಅದಾಯ ತರತೊಡಗಿತು.ಅದರಿಂದ ಮಾಲಿಕ ರೆನ್‌ ಖುಷಿಯಾದ.ಕುದುರೆಯ ಖರ್ಚುವೆಚ್ಚ ಕಳೆದ ಮೇಲೂ ಹಣ ಉಳಿತಾವಾಗುತಿತ್ತು. ರೆನ್‌  ಅದನ್ನು ಸದುಪಯೋಗ ಮಾಡಲು ನಿರ್ಧರಿಸಿದ.   ದಯಾಮರಣಕ್ಕೆ ಶರಣಾಗುತಿದ್ದ ನಿಸ್ಸಾಹಯಕ. ಮಾಜಿ ರೇಸ್‌ ಕುದುರೆಗಳ ಅರೈಕೆಯನ್ನು  ದತ್ತು ಪಡೆದು ನಿರ್ವಹಿಸಲು ಪ್ರತಿಷ್ಠಾನ  ಸ್ಥಾಪಿಸಿದ.  ಹೀಗೆ ಒಂದು ಕಾಲದಲ್ಲಿ ರೇಸ್‌ ವಲಯದಲ್ಲಿ ಹೆಸರು ಮಾಡಿದ  ಮೆಟ್ರೋ  ತನ್ನ ಓಟದಿಂದ ರೇಸ್‌ಪ್ರಿಯರ ಕಣ್ಮಮಣಿಯಾಗಿದ್ದರೆ ನಂತರ  ತಾನು ರಚಿಸಿದ ಚಿತ್ರಗಳಿಂದ ನೋಡುಗರ ಮನಸೆಳೆಯಿತು. ತನ್ನಂತೆ ನೊಂದ ಸಹ ಜೀವಿಗಳ ನೆಮ್ಮದಿಗೂ ಕಾರಣವಾಗಿದೆ.

(  ಮಾಹಿತಿ ಸಾಧಾರ ಮತ್ತು ಚಿತ್ರಗಳುಅಂತರ್‌ಜಾಲತಾಣಗಳು)






Thursday, May 1, 2014

ತಂದೆ ತಿಳಿಯದ- ಮೂವರು ಮಾತೆಯರ ಕಂದ

ಲಿಂಗ ಎಂಬುದು ಈಗ ವ್ಯಾಕರಣದಲ್ಲಿ ಮಾತ್ರ  ! 
ಜೇನು ಹುಳಕುರಿತು ಅಧ್ಯಯನ ಮಾಡುವಾಗ ತಿಳಿಯಿತು   ಜೇನು ಗೂಡಿನಲ್ಲಿ ಮೂರು ರೀತಿಯ ಹುಳುಗಳು ಇರುತ್ತವೆ. ರಾಣಿ ಜೇನುಹುಳು,ಗಂಡು ಜೇನುಹುಳು ಮತ್ತು ಕೆಲಸಗಾರ ಜೇನುಹುಳುಗಳು ಎಂದು. ಅವು ತಾವು ಮಾಡುವ ಕೆಲಸಕ್ಕೆ ಅನುಗುಣವಾಗಿ ತುಸು ಮಾರ್ಪಾಟು ಹೊಂದಿರುತ್ತವೆ..ಈಗಲೂ ತುಂಬಿದ ಸಂಸಾರವನ್ನು ಜೇನುಗೂಡಿನಂಥಹ ಸಂಸಾರ ಎನ್ನುವ ಹೇಳಿಕೆ ಕೊಡುವ ವಾಡಿಕೆ ಇದೆ. ಆದರೆ ಮಾನವ ಸಮಾಜದಲ್ಲೂ ಇದೇರೀತಿಯ ವರ್ಗೀಕರಣ ಇನ್ನೊಂದು ರೂಪದಲ್ಲಿ ಬರಬಹುದು ಎಂದು ನಿನ್ನೆ ಅಮೇರಿಕಾದಲ್ಲಿ ಪತ್ರಿಕೆಯೊಂದರಲ್ಲಿನ ಸುದ್ದಿಯ ತುಣಕನ್ನು ಓದಿದಾಗ ಅನಿಸಿತು.
ಸುದ್ದಿ ಬಹಳ ಸರಳವಾದುದು. ಸಲಿಂಗ ವಿವಾಹ ಕುರಿತಾದದ್ದು.ಈಗ ನಾಲ್ಕುವರ್ಷದ ಹಿಂದೆ ನಾನು ಅಮೇರಿಕಾಕ್ಕೆ ಬಂದಾಗಲೇ ಅಧ್ಯಕ್ಷ ಬರಾಕ್‌ಒಬಾಮ ಸಲಿಂಗವಿವಾಹ ಕಾನೂನು ಬದ್ದ ಎಂದು ಘೋಷಣೆಮಾಡಿ ಆಧುನಿಕರ ಪ್ರೀತಿಗೆ ಪಾತ್ರರಾಗಿದ್ದರು. ನಂತರ ಅನೇಕ ರಾಷ್ಟ್ರಗಳು ಅದೇಹಾದಿ ಹಿಡಿದು ಕಾನೂನು ರಚನೆ ಮಾಡಿ ಸಲಿಂಗ ಪ್ರೇಮಿಗಳೂ ಸಾಮಾನ್ಯರಂತೆ ಸಂಸಾರ ಮಾಡುವ ಅವಕಾಶ ದೊರಕಿಸಿದವು. ಅಂದರೆ ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಯನ್ನು, ಒಬ್ಬ ಪುರುಷ ಇನ್ನೊಬ್ಬಪುರುಷನನ್ನೂ ಮದುವೆಯಾಗಿ ಸಂಸಾರ ಹೂಡಲು ಕಾನೂನಿನ ಸಮಾಜದ  ಸಮ್ಮತಿ ದೊರೆಯಿತು.
ಆದರೆ ನಿನ್ನೆ ಬಂದ ಸುದ್ದಿ  ಮಾನವನ ಮನಸ್ಸು ಕಾನೂನಿಗಿಂತ ವೇಗ ಕೆಲಸಮಾಡುವುದು ಎಂಬುದನ್ನು ಸಿದ್ಧ ಮಾಡಿತು. ತಂತ್ರಜ್ಞಾನದ ಅಧ್ಯಯನಕ್ಕೆ ಹೆಸರಾದ ರಾಜ್ಯ ಒಂದರಲ್ಲಿ ಒಂದು ಸಲಿಂಗವಿವಾಹ ಜರುಗಿದೆ. ಅದು ಇತ್ತೀಚೆಗೆ ವಿಶೇಷವೇನೂ ಅಲ್ಲ. ಆದರೆ ದಂಪತಿಗಳು ಎಂದರೆ ಇಬ್ಬರು ಎಂಬ ಮಾತು ಹುಸಿಯಾಗಿದೆ. ಚರ್ಚಿನಲ್ಲಿ ಶಪಥ ತೆಗದುಕೊಂಡಾಗ ಅಲ್ಲಿ ಇಬ್ಬರು ಇರಲಿಲ್ಲ ಮೂವರು ಇದ್ದರು. ಮೂವರೂ ಮಹಿಳೆಯರೇ. ಕೇಟ್‌ ಎಂಬ ನಲವತ್ತು ವರ್ಷದ ಮಹಿಳೆಯು ಲಿನ್‌ ಎಂಬ ೨೭ ವರ್ಷದ ಮಹಿಳೆಯನ್ನು ವಿಧಿಬದ್ಧವಾಗಿ ಮೂರುವರ್ಷದ ಹಿಂದೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದರು. ಈಗ ಈ ಇಬ್ಬರೂ ಇನ್ನೊಬ್ಬ ೨೪ ವರ್ಷದ ಯುವತಿ ಜೇನ್‌ಳನ್ನು  ಜೀವನ ಸಂಗಾತಿಯನ್ನಾಗಿ ಸ್ವೀಕರಿಸಿದ್ದಾರೆ.
.ಮದುವೆ ಚರ್ಚಿನಲ್ಲಿ ನಡೆಯಿತು.ಆಗ ಮೊದಲೇ ದಂಪತಿಗಳಾಗಿದ್ದ ಇಬ್ಬರೂ ವೈವಾಹಿಕ ಶ್ವೇತಉಡುಪು ಧರಿಸಿ ಅಲಂಕೃತರಾಗಿ ಬಂದದ್ದರು.. ಅವರಿಬ್ಬರನ್ನು ಅವರ ತಂದೆ ತಾಯಿ ವೇದಿಕೆಗೆ ಕರೆತಂದರು. ಕೆಲವೇಕ್ಷಣಗಳಲ್ಲಿ ಇನ್ನೊಬ್ಬ ಮದುವೆಮಗಳು ಶ್ವೇತ ಗೌನ್‌ಧಾರಿಯಾಗಿ   ತನ್ನ ಸಖಿಯೊಂದಿಗೆ ಪ್ರತ್ಯಕ್ಷಳಾದಳು. ಮೊದಲಿನ ಇಬ್ಬರೂ ಅವಳನ್ನು ಚುಂಬಿಸಿ ಸ್ವಾಗತಿಸಿದರು. ಮೂವರೂ ಉಂಗುರ ಬದಲಾಯಿಸಿ ಕೊಂಡರು. ಪಾದ್ರಿ ಬೋಧಿಸಿದ ದಾಂಪತ್ಯದ ಶಫಥ ಸ್ವೀಕರಿಸಿದರು.ಅದಕ್ಕೆ ಚರ್ಚಿನಲ್ಲಿ ನೆರೆದಿದ್ದ ಬಂಧುಗಳೂ ಮತ್ತು ಸ್ನೇಹಿತರು ಸಾಕ್ಷಿಗಳಾಗಿ ಚಪ್ಪಾಳೆ ತಟ್ಟಿ ಅನುಮೋದನೆ ಸೂಚಿಸಿದರು.ಮೂವರು ಮಹಿಳೆಯರ ಮದುವೆ ಎಂಬ ಹೊಸ ದಾಖಲೆ ಬರೆದರು.
ನಮ್ಮಲ್ಲಿಯೂ ಇಬ್ಬರ ಹೆಂಡಿರ ಮುದ್ದಿನ ಗಂಡನ ಮೂವರ ಸಂಸಾರ  ಇಲ್ಲದಿಲ್ಲ. ಆದರೆ ಮೂವರೂ ಮಹಿಳೆಯರೇ ಆದ್ದರಿಂದ ಇಲ್ಲಿ  ತುಸು ಗಲಿಬಿಲಿ. ಅವರಲ್ಲಿ ಕೆಸದ ನಿರ್ವಹಣೆಯನ್ನು ಬಹಳ ಸರಳವಾಗಿ ಹಂಚಿಕೊಂಡಿದ್ದಾರೆ.   ಕೇಟ್‌ ಈ ಕುಟುಂಬದ ಬ್ರೆಡ್‌ ವಿನ್ನರ್‌. ಹಣದ ಹೊಣೆ ಅವಳದು. ಅಂದರೆ ರಕ್ಕೆ೪೦ಗಂಟೆ ಕೆಲಸ ಮಾಡಿ ಹಣ ಗಳಿಸುವಳು. ಕಾಂಪ್ಯೂಟರ್‌ ಇಂಜನಿಯರ್‌ ವೃತ್ತಿ. ಗಳಿಕೆ ಸಾಕಷ್ಟಿದೆ. ಮೂವರ ಸಂಸಾರ ಭಾರ ಹೊರಬಹುದು. ೨೭ವರ್ಷದ ಮಹಿಳೆ ಲಿನ್‌ ಅಡುಗೆ ಮಾಡುವಳು. ೨೪ ವರ್ಷ ಜೇನ್‌ಳದು ಉಳಿದೆಲ್ಲ ಕೆಲಸಗಳ ನಿರ್ವಹಣೆ.  ಅಂದರೆ ಜೇನು ಹುಳುಗಳಂತೆ ಕೆಲಸದ ಹಂಚಿಕೆ ಮಾಡಿಕೊಂಡಿರುವರು. ಮೂವರೂ ಒಟ್ಟಿಗೆ ಒಂದೆ ಹಾಸಿಗೆಯಲ್ಲಿ ಮಲಗುತ್ತಾರೆ. ಬೇಸಿಗೆಯಲ್ಲಿ ತುಸು ಶೆಖೆಯಾಗುವುದು ಎಂದವರ ಹೇಳಿಕೆ.  ಸಂಸಾರಿಕ ಎಲ್ಲ ಕಾರ್ಯಕ್ರಮಗಳನ್ನೂ ಮೂವರು ಒಟ್ಟಿಗೆ ಮಾಡುವರು,  ಕೆಲವುಸಲ ಇಬ್ಬರಿಬ್ಬರು ನಿರ್ವಹಿಸುವರು. ಸಾಮಾನ್ಯ ಕೌಟುಂಬಿಕ ತೀರ್ಮಾನಗಳನ್ನು ಒಟ್ಟಿಗೇ ತೆಗೆದುಕೊಳ್ಳುವರು. ಜೊತೆಗೆ ಇಬ್ಬಿಬ್ಬರು ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡು ಹೊಂದಾಣಿಕೆ ಕಾಪಾಡಿಕೊಳ್ಳುವರು.
ಈಗ ೨೭ ವರ್ಷದ  ಮಹಿಳೆ ಗರ್ಭಿಣಿ. !. ಅಚ್ಚರಿ ಬೇಡ.ಪುರುಷ ಸಂಪರ್ಕವಿಲ್ಲದೆ ವಂಶಾಭಿವೃದ್ಧಿ ಸಾಧ್ಯ.  ಮೂವರ ಒಪ್ಪಿಗೆಯ ಮೇಲೆ  ಅಪರಿಚಿತ ವ್ಯಕ್ತಿಯ ವೀರ್ಯದಾನ ಪಡೆದು  ಮಗು ಪಡೆಯುಲಾಗುತ್ತಿದೆ. ಜನಿಸುವ ಮಗುವಿಗೆ, ಮೂವರೂ ಹೊಣೆಗಾರರು..ಹುಟ್ಟುವ ಮಗುವಿಗೆ ತಾಯಂದಿರು ಮೂವರು ತಂದೆ ಅನಾಮಿಕ. ಮೂವರು ತಾಯಂದಿರ ಪರಿಕಲ್ಪನೆ ಭಾರತದಲ್ಲೂ ಇದೆ. ಹೆತ್ತ ತಾಯಿ, ಮಲತಾಯಿ ಮತ್ತು ಸಾಕುತಾಯಿ  ಎಂದು.  ಮುಂದೆ ಮಗುವಿಗೆ ತೊಂದರೆ ಆಗಬಾರದೆಂದು  ಮೂವರ ಆಸ್ತಿಯನ್ನು ಕಾನೂನಿನ ಪ್ರಕಾರ ವಿತರಣೆ ಮಾಡಲು ವಕೀಲರು ವ್ಯವಸ್ಥೆ ಮಾಡುತಿದ್ದಾರೆ. ಜನಿಸಲಿರುವ ಮಗುವಿಗೆ ಕಾತುರದಿಂದ ಕಾಯುತಿದ್ದಾರೆ ಮೂವರು ತಾಯಂದಿರು.
ಈಗಿರುವ ಕಾನೂನಿ ಪ್ರಕಾರ ಯಾವುದೇ ಲಿಂಗದವರಾಗಿರಲಿ ಇಬ್ಬರು ವ್ಯಕ್ತಿಗಳ ಮದುವೆ ನ್ಯಾಯ ಸಮ್ಮತ. ಆದರೆ ಈ ಮೂವರು ನಾವು ಕಾನೂನಿಗಾಗಿ ಮದುವೆಯಾಗಿಲ್ಲ. ಪ್ರೀತಿಗಾಗಿ ಮದುವೆಯಾಗಿರವೆವು. ನಮಗೆ ಯಾವುದರ ಹಂಗೂ ಇಲ್ಲ. ಎನ್ನುವರು. .  ಇದು ನಿಜಕ್ಕೂ ಒಪ್ಪತಕ್ಕ ಮಾತು .ಬೇರೆಯಾರೂ ಈ ಕುರಿತು ತಲೆ ಕೆಡಿಸಿಕೊಂಡಿಲ್ಲ .ಕಾರಣ ಅನ್ಯರ ಬದುಕಿನ ಬಗ್ಗೆ ಇಲ್ಲಿ ಕುತೂಹಲ ಕಡಿಮೆ. ಇತರರಿಗೆ ತೊಂದರೆಯಾಗದಂತೆ ವೈಯುಕ್ತಿಕ ಬದುಕು ರೂಪಿಸಿಕೊಳ್ಳುವ ಹಕ್ಕು ಎಲ್ಲರಿಗೂ ಇದೆ. ಅಲ್ಲಿನ ಸ್ಥಳೀಯ ಅಧಿಕಾರಿಗಳೂ ಈ ಪ್ರೇಮ ಪಕ್ಷಿಗಳ ತಂಟೆಗೆ ಹೋಗಿಲ್ಲ. ಅವರಾಗಿ ಬಂದು ಕಾನೂನು ಪ್ರಕಾರ ನಾವು ಮೂವರೂ ದಂಪತಿಗಳು ಎಂಬ ಅಧಿಕೃತ ಪ್ರಮಾಣ ಪತ್ರಕ್ಕೆ  ಬೇಡಿಕೆ ಸಲ್ಲಿಸಿದಾಗ ಪರಿಶೀಲನೆ ಮಾಡಬಹುದು ಎಂದವರ ವಾದ. . ಈಗ ಅದರ ಗೊಡವೆ ಬೇಡ ಎಂದು ಕಂಡರೂ ಕಾಣದಂತೆ ಕುಳಿತಿದ್ದಾರೆ. ಇಲ್ಲಿನದು ಮುಕ್ತ ಸಮಾಜ. ಯಾರಿಗೂ ಇನ್ನೊಬ್ಬರ ಗೊಡವೆ ಬೇಡ. ಈ ಕುರಿತು ನ್ಯಾ ನಿರ್ಣಯ ಸಲ್ಲ.ಸರಿ ತಪ್ಪು ಹೇಳಲು ನಾವು ಯಾರು?. ಬಹುಪತ್ನಿತ್ವ, ಬಹುಪತಿತ್ವ, ಸಲಿಂಗ ವಿವಾಹದಂತೆ ಇದೂ.ಒಂದು
 ತಂದೆ ಒಬ್ಬನೇ ಆಗಿರದಿರಬಹುದು      , ಆದರೆ ತಾಯಿ ಮಾತ್ರ ಒಬ್ಬಳೇ ಎಂಬುದು ನಂಬಿಕೆ. ಅದಕ್ಕೆ ಪೌರಾಣಿಕ ಆಧಾರಗಳೂ ಇವೆ. ಧರ್ಮರಾಯನು ಯಮನ ಮಗನೂ ಹೌದು , ಪಾಂಡು ಪುತ್ರನೂ ಹೌದು. ಅವನಿಗೆ ಇಬ್ಬರು ಪಿತೃಗಳು. ಅದನ್ನು ಸಮಾಜ ಒಪ್ಪಿತ್ತು. ದರ್ಮಸಮ್ಮತವೂ ಆಗಿತ್ತು. ಆದರೆ ತಾಯಿ ಮಾತ್ರ ಒಬ್ಬಳೇ ಅವಳು ಕಂತಿದೇವಿ.
 “.ಮಾತೃತ್ವ ಖಚಿತ, ಪಿತೃತ್ವ ಕತಿಥ”   ಎಂಬ ಮಾತಿದೆ. ಅದು ನಿಜವೇ . ತಾಯಿ ಹೇಳಿದರೆ ತಾನೆ ತಂದೆ ಯಾರೆಂದು ಗೊತ್ತಾಗುವುದು  ಆದರೆ ಅದು ಮುಂದುವರಿದು   “ತಾಯಂದಿರ ಸಹಿತ, ತಂದೆರಹಿತ“  ಪರಿಕಲ್ಪನೆ ಮೂರ್ತವಾಗುವ ಕಾಲ ಸನ್ನಿಹಿತವಾಗಿದೆ ಎನ್ನಿಸುವುದು.
 ಒಂದು ಸಮಾಜಕ್ಕೆ ಅಸಹಜ ಎನಿಸಿದ್ದು ಇನ್ನೊಂದಕ್ಕೆ ಸರ್ವಸಮ್ಮತ ಆಚರಣೆ.   ಇಲ್ಲಿ ಏಕೆ ಹೀಗೆ ಎಂದಾಗ ಅನಿವಾಸಿಯೊಬ್ಬರ ವಿವರಣೆ ತುಸುತೃಪ್ತಿಕರವಾಗಿತ್ತು. ಇದು ವಲಸೆಗಾರರ ದೇಶ. ಇಲ್ಲಿನ ಸಮಾಜಕ್ಕೆ ಶತಶತಮಾನಗಳ ಪರಂಪರೆಇಲ್ಲ. ಬಹುರಾಷ್ಟ್ರೀಯತೆ, ಬಹುಸಂಸ್ಕೃತಿ ವಿಭಿನ್ನನಂಬಿಕೆ  ಮತ್ತು ಸಾಮಾಜಿಕ ಆಚರಣೆಗಳು ಇಲ್ಲಿನ ವಿಶೇಷತೆ.  ಹೊಸದನ್ನು ಅರಿಯುವ ಕುತೂಹಲ ಅಳವಿಡಿಸುವ ಹಂಬಲ,.ಸ್ವಾನುಭವಕ್ಕೆ ಆದ್ಯತೆ.ಮೇಲಾಗಿ.ಇಲ್ಲಿ  ಅಮಿತ ಮುಕ್ತತೆ.  ಕಟ್ಟುಪಾಡು ಕಡಿಮೆ  .ಅನ್ವೇಷಿಸಿ ಅನುಭವಿಸುವ ಆಸೆ.ಅದರ ಪರಿಣಾಮ ಹೊಸದೆನಾದರೂ ಆದರೆ ಅದು ಮೊದಲಾಗುವುದು ಅಮೇರಿಕಾದಲ್ಲಿ.
.ಇದೆಲ್ಲವನ್ನೂ ಗಮನಸಿದಾಗ  “ಮಾನವ ಜಾತಿ  ಒಂದೆ ವಲ ”  ಎಂಬ ಆದಿಕವಿಯ ಮಾತಿಗೆ   ಹೊಸ ಅರ್ಥ ಸ್ಪುರಿಸುತ್ತದೆ. ನಿಜ ಮಾವರೆಲ್ಲ  ಒಂದೇ ಜಾತಿಮತ ಅಷ್ಟೇ ಏಕೆ ? ಗಂಡು ಹೆಣ್ಣೂ ಎಂಬ ಬೇಧವೂ ಇಲ್ಲ.  ಈ ರೀತಿಯ ಬೆಳವಣಿಗೆ ಆಗಬಹುದೆಂಬ ಮುಂದಾಲೋಚನೆ ನಮ್ಮ ಪುರಾತನರಿಗೆ ಇದ್ದಿತ್ತೇ, ಮಹಾಭಾರತದಲ್ಲಿಯೇ ಶಿಖಂಡಿ ಮತ್ತು ಬೃಹನ್ನಳೆಯ ಪ್ರಕರಣಗಳು ಇವೆ  .ಗಂಡು ಹೆಣ್ಣಾಗುವುದು, ಹೆಣ್ಣು ಗಂಡಾಗುವ ಅನೇಕ ನಿದರ್ಶನಗಳು ಪುರಾಣಗಳಲ್ಲಿ ಬರುತ್ತವೆ   ಸಮದ್ರ ಮಂಥನ ಮಾಡಿದಾಗ ಬಂದ ಅಮೃತ ಹಂಚಲು   ಮಹಾವಿಷ್ಣುವು  ಮೋಹಿನಿಯ ರೂಪ ತಳೆದದ್ದು,  ಅವಳ ಸೌಂದರ್ಯಕ್ಕೆ ಶಿವನು ಮರುಳಾದ  ಕಥೆ ಗೊತ್ತಿರುವದೇ ಆಗಿದೆ. ಅಂದರೆ ಲಿಂಗಪರಿವರ್ತನೆಯ ಸುಳಿವು ಇದಾಗಿರುವಂತೆ ತೋರುವುದು.
ಅದರಲ್ಲೂ ವೈಯಾಕರಣಿಗಳು ಈ ಕುರಿತು ಮುನ್ಸೂಚನೆ ಕೊಟ್ಟಿರುವರೇಎಂಬ ಯೋಚನೆ ಬಂದಿದೆ. ಲಿಂಗ ಬೇಧವು ಒಂದೊಂದು ಸಮುದಾಯದಲ್ಲಿ ಒಂದೊಂದು ರೀತಿಇದೆ.  .ಹಿಂದಿಯ  ಭಾಷೆಯಲ್ಲಿ  ಎರಡೇ ಲಿಂಗಗಳು.ಸ್ತ್ರೀ ಲಿಂಗ ಮತ್ತು ಪುಲ್ಲಿಂಗ. ಅಲ್ಲಿ ವಂಶಾಭಿವೃದ್ಧಿಗೂ ಲಿಂಗಕ್ಕೂ ಸಂಬಂಧವೇ ಇಲ್ಲ.. ಪ್ರತಿಯೊಂದು ಪದಕ್ಕೂ ಅದು ಕೊನೆಯಾಗುವ ಸ್ವರದ  ಆಧರಿಸಿ ಲಿಂಗನಿರ್ಣಯ ಮಾಡುವರು. ,’ಅ ಕಾರಂತವಾದ ಪದ ಪುಲ್ಲಿಂಗ  ಇ ಕಾರಾಂತ ಪದ ಸ್ತ್ರೀ ಲಿಂಗ ಅದಕ್ಕೇ .(ಕೈ ) ’ ಹಾತ್‌” ಪುಲ್ಲಿಂಗ.   (ಬೆರಳು)’ಅಂಗುಲಿ” ಸ್ತ್ರೀ ಲಿಂಗ. (ಉಗುರು) ’ನಖ”  ಪುಲ್ಲಿಂಗ. ಮಹಿಳೆಯ ’ ಸ್ತನ”;  ಪುಲ್ಲಿಂಗ.  ಇದೇ ತರ್ಕ ಮುಂದುವರಿಸಿ  ( ಮಹಿಳೆ)  ಔರತ್‌ ಪುಲ್ಲಿಂಗ, ( ಮನುಷ್ಯ) ಆದಮಿ ಸ್ತ್ರೀ ಲಿಂಗ. ಎನ್ನಲಾಗದು. ಕೆಲ ವಿನಾಯತಿಗಳೂ ಇವೆ.
 ಕನ್ನಡದಲ್ಲಿ ಮೂರು ಲಿಂಗಗಳು. ಸ್ತ್ರೀಲಿಂಗ, ಪುಲ್ಲಿಂಗ ಮತ್ತು ನಪುಂಸಕ ಲಿಂಗ.
  ಸುಪ್ರೀಂ ಕೋರ್ಟು ಸಹಾ ಇತ್ತೀಚಿನ ತೀರ್ಪಿನಲ್ಲಿ  ನಮ್ಮಂತೆಯೇ  ಮೂರು ರೀತಿಯ ಲಿಂಗವಿಂಗಡಣೆ ಇರಬೇಕೆಂದು ಹೇಳಿದೆ. ಎಂದು  ನಾವು ಬೆನ್ನು ತಟ್ಟಿಕೊಳ್ಳಬಹುದು. ಆದರೆ ತುಸುವೇ ವ್ಯತ್ಯಾಸವಿದೆ.
 ಆದರೆ  ಇಂಗ್ಲಿಷ್‌ನಲ್ಲಿ ನಾಲ್ಕು ಲಿಂಗ ವಿಬೇಧಗಳು  ಇವೆ: ಸ್ತ್ರೀ ಲಿಂಗ, ಪುಲ್ಲಿಂಗ, ನಪುಂಸಕ ಲಿಂಗ ಮತ್ತು ಉಭಯ ಲಿಂಗ..
ಹಿಂದೆ ನಾನು ಎಲ್ಲೋ  ಐದು ರೀತಿಯ ಲಿಂಗ ಬೇಧ ಓದಿದ ನೆನಪು. ಸ್ತ್ರೀ ಲಿಂಗ, ಪುಲ್ಲಿಂಗ, ನಪುಂಸಕ ಲಿಂಗ, ಪುಂ-ಸ್ತ್ರೀ ಲಿಂಗ ಮತ್ತು ಸ್ತ್ರೀ-ಪುಂಲಿಂಗ ಎಂದು.ಅಂದರೆ ಹುಟ್ಟಿನಿಂದ ಗಂಡು ನಂತರ ಹೆಣ್ಣು ಮತ್ತು ಹುಟ್ಟಿನಿಂದ ಹೆಣ್ಣು ನಂತರ ಗಂಡು ಎಂಬ ಎರಡು ಉಪ ವಿಭಜನೆ.ಇದು ಹೆಚ್ಚು ವೈಜ್ಞಾನಿಕ ವಿಭಜನೆ ಎನಿಸುವುದು .
ಇದು  ಇತ್ತೀಚಿನ ಲಿಂಗ ಪರಿವರ್ತನೆಯ ಸುಳಿವಾಗಿರಬಹುದೇ ಎನಿಸುವುದು, ಇದಕ್ಕೂ  ಇಂದಿನ ಪರಿಕಲ್ಪನೆ ಯಾದ LGBT ಗೂ ಏನಾದರೂ ಸಂಬಂಧವಿದೆಯಾ ಎಂಬುದು ಸಂಶೋಧನಾರ್ಹ ಸಂಗತಿ.   ಬಹಶಃ ವ್ಯಕ್ತಿ ನಿರ್ವಹಿಸುವ  ಕಾರ್ಯಕ್ಕೆ ಅನುಗುಣವಾಗಿ ಲಿಂಗ ನಿರ್ಧಾರಿತವಾಗುತ್ತಿರಬಹುದು ಎನಿಸಿದೆ.

ಇದು ಸಸ್ಯಗಳಲ್ಲು ಮತ್ತು ಪ್ರಾಣಿಗಳಲ್ಲೂ  ಕಂಡು ಬರುವ ವಿಶೇಷವಾಗಿದೆ. ಅನೇಕ ಸಸ್ಯಗಳು ಏಕಲಿಂಗಿಗಳು .ಕೆಲವು ದ್ವಿಲಿಂಗಿ.ಗಳು ಇನ್ನೂ  ಕೆಲವು ನಪುಂಸಕಲಿಂಗಿಗಳು. ಅವುಗಳಿಂದ ವಂಶಾಭಿವೃದ್ಧಿ ಆಗದು.ಕಸಿ ಮಾಡುವುದರಿಂದ ಇನ್ನೊಂದು ಬೆಳೆಯುವುದು. ಪ್ರಾಣಿಗಳಲ್ಲೂ ಕ್ಲೌನಿಂಗ್‌ನಿಂದ ವಂಶಾಭಿವೃದ್ಧಿ ಸಾಧ್ಯ. ಅಂದರೆ ಲಿಂಗ ಎನ್ನುವದು ಮಾನವ ನಿರ್ಮಿತವೇ. ಅದು ಭೌತಿಕ ಆಕಾರವನ್ನು ಮಾತ್ರ ಅವಲಂಬಿಸದೆ ಇನ್ನು ವಿಭಿನ್ನ ಅಂಶಗಳನ್ನು ಅವಲಂಬಿಸಿದೆಯೇ ಎನ್ನುವುದು ಚಿಂತನೆ   ವಿಷಯ.